ಮೂಲ: [ಇಂಗ್ಲೀಷ] ಸಿಲ್ವಿಯಾ ಪ್ಲಾತ್
ಕನ್ನಡಕ್ಕೆ : ನಾಗರೇಖಾ ಗಾಂವಕರ
ಕಣ್ಣುಗಳ ಮುಚ್ಚಿದೆ, ಜಗತ್ತೇ ಸತ್ತಂತೆ ಬಿದ್ದಿತು.
ರೆಪ್ಪೆಗಳ ತೆರೆದೆ, ಎಲ್ಲವೂ ಮತ್ತೆ ಮರುಹುಟ್ಟು ಪಡೆಯಿತು.
ನನಗನ್ನಿಸುತ್ತಿದೆ ತಲೆಯೊಳಗೆ ನಿನ್ನನ್ನೆ ತುಂಬಿಕೊಂಡಿರುವೆನೇನೋ ನಾನು..
ನೀಲಿ ಬಿಳಿ ಬಣ್ಣ ಹೊತ್ತು ಚುಕ್ಕಿಗಳು ವಾಲ್ಟ್ಸ್ ನೃತ್ಯಕ್ಕೆ ಹೋಗುತ್ತವೆ
ಗಾಡಾಂಧಕಾರವೂ ಓಡೋಡಿ ಬರುತ್ತದೆ
ಕಣ್ಣುಗಳ ಮುಚ್ಚಿದೆ, ಜಗತ್ತು ಸತ್ತಂತೆ ಬಿದ್ದಿತು,
ಹಾಸಿಗೆಯಲ್ಲಿ ನೀನು ನನ್ನ ಸಮ್ಮೋಹಿಸಿದಂತೆ
ಉನ್ಮತ್ತ ರಾಗವ ಹಾಡಿದಂತೆ, ಕೆರಳಿ ಮುದ್ದಿಸಿದಂತೆ ನಾನು ಕನಸು ಕಂಡೆ
ನನಗನ್ನಿಸುತ್ತಿದೆ ತಲೆಯೊಳಗೆ ನಿನ್ನನ್ನೆ ತುಂಬಿಕೊಂಡಿರುವೆನೇನೋ ನಾನು.
ಆಕಾಶದಿಂದ ಆ ದೇವರು ಕೆಳಜಿಗಿಯುತ್ತಲೇ ನರಕದ ಬೆಂಕಿಯೂ ಮಸುಕಾಗುತ್ತದೆ
ಸೆರಾಫಿಮ್ ಮತ್ತು ಸೈತಾನನ ಬಂಟರು ಹೊರಟುಹೋಗುತ್ತಾರೆ
ಕೊಟ್ಟ ಮಾತಂತೆ ನೀನು ಮತ್ತೆ ಮರಳಿ ಬರುವೆಯೆಂದು ಭಾವಿಸಿದ್ದೆ ನಾನು.
ಆದರೀಗ ಮುದುಕಿಯಾಗುತ್ತಿದ್ದೇನೆ ,ನಿನ್ನ ಹೆಸರ ಮರೆತುಬಿಡುತ್ತೇನೆ.
ನಿನ್ನ ಬದಲಿಗೆ ನಾನು ಥಂಡರ ಬರ್ಡನ್ನಾದರೂ ಪ್ರೀತಿಸಬೇಕಿತ್ತು
ಕನಿಷ್ಟ ಪಕ್ಷ ವಸಂತ ಬರುತ್ತಲೇ ಮರಳಿ ಮೊರೆಯುತ್ತವೆ ಅವು
ಕಣ್ಣುಗಳ ಮುಚ್ಚಿದೆ, ಜಗತ್ತೇ ಸತ್ತಂತೆ ಬಿದ್ದಿತು.
ನನಗನ್ನಿಸುತ್ತಿದೆ ತಲೆಯೊಳಗೆ ನಿನ್ನನ್ನೆ ತುಂಬಿಕೊಂಡಿರುವೆನೇನೋ ನಾನು.
*****
1 thought on “ಹುಚ್ಚು ಹುಡುಗಿಯ ಪ್ರೇಮಗೀತೆ”
ಕಣ್ಣುಗಳ ಮುಚ್ಚಿದೆ, ಜಗತ್ತೇ ಸತ್ತಂತೆ ಬಿದ್ದಿತು.ಅದ್ಭುತ ವಾಕ್ಯ.