ರಜಾಕಾರರು

ಆಗಸ್ಟ್ ಹದಿನೈದು, ಸಾವಿರದೊಂಭೈನೂರಾ ನಲವತ್ತೇಳರಂದು ಸ್ವಾತಂತ್ರ್ಯ ಬಂದಾಗ ಇಂಗ್ಲೀಷರು ಮತ್ತು ನಿಜಾಮನ ದುರಾಡಳಿತ ತೊಲಗಿದವಲ್ಲ ಎಂದು ಹೈದರಾಬಾದ್ ನಿಜಾಮನ ಸಂಸ್ಥಾನದ ಪ್ರದೇಶಗಳ ಜನರು ಸಮಾಧಾನದ ಉಸಿರು ಹಾಕಿ ಸಂತಸದಿಂದ ಬೀಗತೊಡಗಿದ್ದರು. ಆದರೆ ಆ ಸಮಾಧಾನ, ಸಂತಸಗಳೇನೂ ಬಹಳ ದಿನಗಳವರೆಗೆ ಉಳಿಯಲಿಲ್ಲ.
ಆಗಸ್ಟ್ ಹದಿನೈದು ಸಾವಿರದ ಒಂಭೈನೂರಾ ನಲವತ್ತೇಳ ನಂತರ ಹೈದರಾಬಾದ್ ಸಂಸ್ಥಾನದ ಪ್ರದೇಶಗಳಲ್ಲಿ ತುಂಬಾ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಬಹಳಷ್ಟು ಕಡೆಗೆ ಮತೀಯ ಗಲಭೆಗಳು, ಹೋರಾಟಗಳು, ಸಾವು-ನೋವುಗಳು ಸಂಭವಿಸತೊಡಗಿದವು. ಮತಾಂಧ, ಉಗ್ರಗಾಮಿ ಖಾಸೀಂ ರಜ್ವಿಯಿಂದ ನಿರ್ಮಾಣಗೊಂಡ ರಜಾಕಾರ್ ಸಂಸ್ಥೆ ಹೈದರಾಬಾದ್ ಸಂಸ್ಥಾನದ ಪ್ರದೇಶಗಳೆಲ್ಲೆಡೆ ದಾಂಧಲೆ ನಡೆಸತೊಡಗಿತು. ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಬಹುದ್ದೂರ್‍ನ ಆಡಳಿತಕ್ಕೆ ಒಳಪಟ್ಟಿದ್ದ ಕನ್ನಡದ ಪ್ರದೇಶಗಳಾದ ರಾಯಚೂರು, ಬೀದರ್, ಕಲಬುರ್ಗಿ ಜಿಲ್ಲೆಗಳಲ್ಲಿ ರಜಾಕಾರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಜಿಲ್ಲೆಯ ಪ್ರಮುಖ ಕೇಂದ್ರಗಳೆಲ್ಲವುಗಳಲ್ಲಿ ರಜಾಕಾರರ ಸಂಖ್ಯೆ, ದುರಾಡಳಿತದ ಪ್ರಖರತೆ ಢಾಳಾಗಿ ಕಾಣತೊಡಗಿತು. 
ರಜಾಕಾರರ ಆಡಳಿತ ಶುರುವಾಗುತ್ತಿದ್ದಂತೆ ಪ್ರತಿನಿತ್ಯ ಕ್ಷಣಕ್ಷಣಕ್ಕೂ ಒಂದೊಂದು ಸುದ್ದಿ ಕೇಳಿ ಬರತೊಡಗಿದವು. 

`ರಜಾಕಾರರು ಆ ಊರಿಗೆ ದಾಳಿ ಇಟ್ಟಿದ್ದಾರೆ; ಈ ಊರಲ್ಲಿ ಶೆಟ್ಟರ ಕಿರಾಣಿ ಅಂಗಡಿ ದರೋಡೆ ಮಾಡಿದ್ದಾರೆ; ಆ ಓಣಿಯ ಹೆಣ್ಣು ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ; ಈ ಹೆಣ್ಣುಮಗಳ ಸೀರೆ ಸೆರಗು ಎಳೆದು ಮಾನಭಂಗ ಮಾಡಿದ್ದಾರೆ; ಆ ಊರಿನ ಪೋಲೀಸ್‍ಗೌಡನ ಹಗೇವಿನಲ್ಲಿನ ಧವಸ ಧಾನ್ಯಗಳನ್ನು ತುಂಬಿಕೊಂಡು ಹೋಗಿದ್ದಾರೆ; ಆ ಊರಿನಲ್ಲಿ ಹರೇದ ಹೆಣ್ಣು ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬಟ್ಟೆಗಳನ್ನು ಕಳಚಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ; ನೀರು ತರಲು ಹೋದ ಶಾನುಭೋಗರ ಮನೆಯ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ; ಮೇವಿನ ಬಣವೆಗಳಿಗೆ ಬೆಂಕಿ ಇಟ್ಟಿದ್ದಾರೆ. ಹೊಲಗಳಲ್ಲಿ ಅಡಗಿ ಕುಳಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆ; ಈ ಊರ ಗೌಡನ ಹರೇದ ಮಗಳ ಎದೆಗೆ ಕೈಹಾಕಿ ಅಮಾನವೀಯವಾಗಿ ವರ್ತಿಸಿದ್ದಾರೆ; ಚಿಕ್ಕ ಮಕ್ಕಳ ಮಾರಣ ಹೋಮ ಮಾಡಿದ್ದಾರೆ; ಜನರನ್ನು ತಮ್ಮ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ; ಮತಾಂತರಕ್ಕೆ ಒಪ್ಪದವರನ್ನು ಜೇಲಿಗೆ ಹಾಕಿದ್ದಾರೆ; ಊರಿನ ಜನರು ಹೊರಗೆಲ್ಲೂ ಹೋಗದಂತೆ ಊರಲ್ಲೇ ಕೂಡಿ ಹಾಕಿದ್ದಾರೆ; ಕೇರಿಯ ಹೆಂಗಸರನ್ನು ತಮ್ಮ ಕಾಮ ಪಿಪಾಸೆಯನ್ನು ತಣಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ' ಅಂತ ಚಿತ್ರವಿಚಿತ್ರ ಸುದ್ದಿಗಳು ಎಲ್ಲೆಡೆ ಹರಿದಾಡತೊಡಗಿದವು. 

ಸ್ವಾತಂತ್ರ್ಯ ಬಂದು ಜನರು ಖುಷಿಖುಷಿಯಿಂದ ಇದ್ದು ಹದಿನೈದು ದಿನಗಳಾಗಿದ್ದವೇನೋ? ರಾಯಚೂರು ಜಿಲ್ಲೆಯ ತಾವರಗೇರಿ ಗ್ರಾಮಕ್ಕೂ ರಜಾಕಾರರು ವಕ್ರಿಸಿಕೊಂಡುಬಿಟ್ಟರು. ಇಡೀ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದರೂ ತಾವರಗೇರಿ ಗ್ರಾಮಕ್ಕೆ ಸ್ವಾತಂತ್ರ್ಯ ಮಾತ್ರ ಕನಸಿನ ಮಾತಾಗಿತ್ತು, ಗಗನ ಕುಸುಮವಾಗಿತ್ತು. ಹೈದರಾಬಾದ್ ನಿಜಾಮನ ಸಂಸ್ಥಾನಕ್ಕೆ ಸೇರಿದ ಹಳ್ಳಿ ಎಂದು ಹಣೆಪಟ್ಟಿ ಹೊತ್ತಿದ್ದರಿಂದ ಆ ಊರಿಗೆ ಸ್ವಾತಂತ್ರ್ಯ ಸಿಗಲಿಲ್ಲ. ಕೆಂಪುಮೋತಿ ಬ್ರಿಟಿಷರ ಆಡಳಿತದಲ್ಲಿ ಅಂಥಹ ತ್ರಾಸೇನೂ ಅನುಭವಿಸಿರದಿದ್ದ ಗ್ರಾಮದ ಜನರು ಹೈದರಾಬಾದ್ ನಿಜಾಮನ ಆಡಳಿತದಲ್ಲಿ ನಲುಗಿ ಹೋಗಿದ್ದಂತೂ ನಿಜ. 

ಖಾಸೀಂ ರಜ್ವಿಯ ರಜಾಕಾರರ ತಂಡವೊಂದು ಗ್ರಾಮದಲ್ಲಿ ಬೀಡುಬಿಟ್ಟಿತು. ತಂಡದಲ್ಲಿ ಸುಮಾರು ಇಪ್ಪತ್ತು ಜನರಿದ್ದರು. ರಜಾಕಾರರ ಕೈಯಲ್ಲಿ ಬಂದೂಕುಗಳು, ಖಡ್ಗಗಳು, ಕತ್ತಿ, ಚಾಕು, ಚೂರಿ, ಮಚ್ಚು, ಕೊಡಲಿ, ಕುಡುಗೋಲುಗಳು ಠಳಾಯಿಸುತ್ತಿದ್ದವು. ಒಂದು ಮಿನಿ ಮಿಲಿಟರಿ ಗಾಡಿಯಲ್ಲಿ ಬಂದಿಳಿದಿದ್ದರು ರಜಾಕಾರರು. ತಂಡದ ನಾಯಕ ಊರಲ್ಲಿ ಕಾಲಿಡುತ್ತಲೇ ಊರಿನ ಪ್ರಮುಖರನ್ನು ಕರೆಸಿ ತುರ್ತು ಸಭೆಯೊಂದನ್ನು ಕರೆದೇಬಿಟ್ಟ. ಊರಿನ ಮಾಲಿಗೌಡ, ಪೋಲೀಸ್‍ಗೌಡ, ಕುಲಕರ್ಣಿ, ಶಾನುಭೋಗ, ಸಾಹುಕಾರರು, ಪಟವಾರಿ, ಊರಿನ ಮತ್ತಿತರ ಪ್ರಮುಖರನ್ನು ಕರೆಸಿ ಒಂದು ಚಿಕ್ಕ ಭಾಷಣವನ್ನೇ ಬಿಗಿದ. `ನಾವು ಹೈದರಾಬಾದ್ ಸಂಸ್ಥಾನದ ರಾಜ ನಿಜಾಮ್ ಮೀರ್ ಉಸ್ಮಾನ್ ಅಲಿಖಾನ್ ಬಹುದ್ದೂರ್ ಕಡೆಯವರು. ನಿಮ್ಮೂರಿಗೆ ಕೆಂಪು ಮೋತಿಯವರಿಂದ ಸ್ವಾತಂತ್ರ್ಯ ಸಿಕ್ಕಿರಬಹುದು. ಆದರೆ ನಮ್ಮ ನಿಜಾಮರ ಆಡಳಿತ ಇನ್ನೂ ಕೊನೆಗೊಂಡಿಲ್ಲ. ನಮ್ಮ ನಾಯಕ ಖಾಸೀಂ ರಜ್ವಿ ಸಾಬ್ ನಿಜಾಮರ ಬಲಗೈ ಬಂಟ. ನಾವು ರಜ್ವಿ ಸಾಬರ ಅನುಯಾಯಿಗಳು ಮತ್ತು ರಜಾಕಾರರು. ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ನಿಜಾಮರು ಇಡೀ ಹಿಂದುಸ್ಥಾನವನ್ನು ಗೆಲ್ಲುತ್ತಾರೆ. ಹಿಂದುಸ್ಥಾನ ದೇಶ ಮುಸಲ್ಮಾನರ ದೇಶ ಆಗುತ್ತದೆ. ದಿಲ್ಲಿಯ ಕೆಂಪುಕೋಟೆಯಲ್ಲಿ ನಮ್ಮ ನಿಜಾಮರ ಝಂಡಾ ಹಾರಾಡುತ್ತದೆ. 

ನೀವೆಲ್ಲರೂ ನಾವು ಹೇಳಿದಂತೆ ಕೇಳಿದರೆ ನಿಮ್ಮ ಪ್ರಾಣ ಉಳಿಯುತ್ತವೆ. ಯಾರೂ ಊರುಬಿಟ್ಟು ಹೋಗುವ ಹಾಗಿಲ್ಲ. ಎಲ್ಲರೂ ಸೇರಿಕೊಂಡು ಮೀಟಿಂಗ್ ಮಾಡುವ ಹಾಗಿಲ್ಲ. ಯಾರೂ ಗುಸುಗುಸು ಮಾತಾಡುವಂತಿಲ್ಲ. ಹಾಗೇನಾದರೂ ನಮ್ಮ ಹಿಂದೆ ಪಿತೂರಿ ಮಾಡಿದರೆ ನಮ್ಮ ಬಂದೂಕಿನ ಗುಂಡುಗಳು ನಿಮ್ಮ ಎದೆಗಳನ್ನು ಸೀಳುತ್ತವೆ. ನಮಗೆಲ್ಲರಿಗೂ ನೀವು ಊಟ, ವಸತಿಗೆ ವ್ಯವಸ್ಥೆ ಮಾಡಬೇಕು. ನಾವು ಹೇಳಿ ಕಳುಹಿಸಿದಾಗ ಬಂದು ನಮ್ಮ ಮುಂದೆ ಕೈಕಟ್ಟಿಕೊಂಡು ನಿಂತುಕೊಂಡು ನಾವು ಹೇಳಿದ್ದನ್ನು ಪಾಲಿಸಬೇಕು' ಎಂದೆನ್ನುತ್ತಾ ತನ್ನ ಬಂದೂಕಿನಿಂದ ಗಾಳಿಯಲ್ಲಿ ಢಮಾರ್ ಎಂದು ಗುಂಡೊಂದನ್ನು ಹಾರಿಸುತ್ತಾ ಊರಿನವರೆಲ್ಲರೆದೆಯೊಳಗೆ ಭಯದ ಬೀಜ ಬಿತ್ತಿದ. ಬಂದಿದ್ದ ರಜಾಕಾರರು ಊರಿನ ಮಸೀದಿಯಲ್ಲಿ ನೆಲೆ ನಿಂತರು. ಅವರೆಲ್ಲರಿಗೂ ಊಟ, ತಿಂಡಿಯ ವ್ಯವಸ್ಥೆ ಗ್ರಾಮಸ್ಥರೇ ಮಾಡತೊಡಗಿದರು. ಒಂಥರ ಗ್ರಾಮಸ್ಥರೆಲ್ಲರೂ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಭಯದ ವಾತಾವರಣದಲ್ಲಿ ದಿನಗಳನ್ನು ನೂಕತೊಡಗಿದರು. ರಜಾಕಾರರು ಸುತ್ತಮುತ್ತಲಿನ ಹಳ್ಳಿಗಳಿಗೂ ಅವರು ಗಸ್ತು ತಿರುಗುತ್ತಿದ್ದರು. 
                    ****

ರಜಾಕಾರರ ಉಪಟಳ ಶುರುವಾದಂದಿನಿಂದ ಊರಿನ ಹೆಣ್ಣುಮಕ್ಕಳೆಲ್ಲರೂ ಸೂರ್ಯೋದಯಕ್ಕಿಂತ ಮುಂಚೇನೇ ಬಹಿರ್ದೆಸೆಗೆ ಹೋಗುವುದನ್ನು ರೂಢಿಸಿಕೊಂಡಿದ್ದರು. ಬೆಳಗಾಗುತ್ತಲೇ ರಜಾಕಾರರ ಗಸ್ತು ಶುರುವಾಗುತ್ತಿತ್ತು. ಅಂದು ಅತ್ಯಂತ ಕರಾಳ ದಿನ ಗ್ರಾಮಸ್ಥರ ಪಾಲಿಗೆ. ಊರಿಗೆ ಊರೇ ಗಭೇ ಎಂದಿತು ಬೆಳಗಿನ ಅಮಾನುಷ, ರಾಕ್ಷಸೀಯ, ಅಟ್ಟಹಾಸದ, ಅತ್ಯಾಚಾರದ ಸಂಗತಿ ತಿಳಿದಾಗ. ಅಂಬರದಾಗ ನೇಸರ ಆಗಷ್ಟೇ ಹಣಕಿ ಹಾಕತೊಡಗಿದ್ದ. ಕೆಂಪಾಯಿತೋ, ಎಲ್ಲಾ ಕೆಂಪಾಯಿತೋ ಎಂಬಂತೆ ಊರಿನ ಪಂಚಾಯಿತಿ ಕಟ್ಟೆಯ ಸಮೀಪದ ಭೂಮಿಯ ಒಡಲೂ ಕೆಂಪಾಗಿತ್ತು ಪೈಶಾಚಿಕ ಕೃತ್ಯದಿಂದ. ಆ ದಿನ ಬೆಳ್ಳಂಬೆಳಿಗ್ಗೆ ನಡೆದಿದ್ದು ಇಷ್ಟೇ. ಸೂರ್ಯೋದಯಕ್ಕಿಂತ ಮುಂಚೇನೇ ಗ್ರಾಮದ ಪಟವಾರಿ ಶೇಷಪ್ಪನ ಸೊಸೆ ಅಹಲ್ಯಾ ತಂಬಿಗೆ ತೊಗೊಂಡು ಶೌಚಾಲಯಕ್ಕೆ ಹೋಗಿ ಮರಳಿ ಮನೆಗೆ ಬರತೊಡಗಿದ್ದಳು. ಸೊಸೆ ಅಂದರೆ ವಿಧವೆ ಸೊಸೆ. ನಾಲ್ಕು ವರ್ಷಗಳ ಹಿಂದೇನೇ ಗಂಡನನ್ನು ಕಳೆದುಕೊಂಡಿದ್ದ ನಿಗಿನಿಗಿ ಕೆಂಡದಂಥಹ ಯೌವ್ವನದ ಶಾಪಗ್ರಸ್ಥ ಹೆಣ್ಣು ಅಹಲ್ಯಾ. ಕೆಂಪನೆಯ ಮೈಬಣ್ಣದ, ದುಂಡನೆಯ ಮುಖದ, ರತಿವರ್ಚಸ್ಸಿನ ಹೆಂಗಸು ಅಹಲ್ಯಾ. ಕೆಂಪು ಸೀರೆಯಲ್ಲೂ ಅಹಲ್ಯಾಳ ಅಂಗಸೌಷ್ಠವ ಆಕರ್ಷಕವಾಗಿ ಒಡೆದು ಕಾಣುವಂಥಹದು. 

ಅಂಥಹ ಸೌಂದರ್ಯವತಿಗೆ ಶಾಪಗ್ರಸ್ಥವಾಗಿ ಬಂದಿರುವ ವಿಧವೆಯ ಪಟ್ಟಕ್ಕೆ ಎಲ್ಲರೂ ಮರುಗುವವರೇ. ಹದಿನಾರನೇ ವಯಸ್ಸಿನಲ್ಲೇ ಮದುವೆಯಾಗಿ ದಾಂಪತ್ಯ ಜೀವನದ ಕನಸುಗಳನ್ನು ಕಟ್ಟಿಕೊಂಡು ಗಂಡನ ಮನೆ ಸೇರಿಕೊಂಡಿದ್ದ ಅಹಲ್ಯಾ ಇಪ್ಪತ್ತಕ್ಕೇ ಗಂಡನನ್ನು ಕಳೆದುಕೊಂಡು ತಲೆ ಬೋಳಿಸಿಕೊಂಡು ಕೆಂಪು ಬಣ್ಣದ ಸೀರೆ ಉಡಲು ಮುಂದಾಗಿದ್ದಳು. ಕಾಲರಾ ಎಂಬ ಹೆಮ್ಮಾರಿ ಅಹಲ್ಯಾಳ ಗಂಡ ಸೀತಾರಾಮನನ್ನು ತನ್ನ ತೆಕ್ಕೆಗೆ ಎಳೆದುಕೊಂಡುಬಿಟ್ಟಿತ್ತು.   
ಅಹಲ್ಯಾಳ ಕಣ್ಣು ಕುಕ್ಕುವ ಸೌಂದರ್ಯ ರಜಾಕಾರರ ಹುಡುಗರ ಮೈ ಬಿಸಿಯಾಗುವಂತೆ ಮಾಡಿತ್ತು. ಎರಡು ದಿನಗಳಿಂದ ಅವಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ್ದರು. ಪ್ರತಿನಿತ್ಯ ಅಹಲ್ಯಾ ಸೂರ್ಯೋದಯಕ್ಕಿಂತ ಮುಂಚೇನೇ ಬಹಿರ್ದೆಸೆಗೆ ಹೋಗಿ ಬಂದುಬಿಡುತ್ತಿದ್ದಳು. ಅವಳ ಜೊತೆಗೆ ಮನೆಯವರಾಗಲೀ, ನೆರೆಹೊರೆಯ ಯಾರಾದರೂ ಹೆಂಗಸರೋ, ಹುಡುಗಿಯರೋ ಇರುತ್ತಿದ್ದರು.

 ಅಂದು ಅಹಲ್ಯಾ ಒಂದಿಷ್ಟು ತಡವಾಗಿ ತಂಬಿಗೆ ತೆಗೆದುಕೊಂಡು ಹೊರಟಿದ್ದಳು. ಮೇಲಾಗಿ ಜೊತೆಗೆ ಯಾರೂ ಇರಲಿಲ್ಲ. ಹೋಗುವುದೇನೋ ಹೋಗಿಬಿಟ್ಟಳು. ಶೌಚಾಲಯದಲ್ಲೂ ಯಾರೂ ಜೊತೆಗೆ ಸಿಗಲಿಲ್ಲ. ಹೆಣ್ಮಕ್ಕಳೆಲ್ಲ ಆಗಲೇ ಶೌಚ ಮುಗಿಸಿಕೊಂಡು ಮನೆ ಸೇರಿಕೊಂಡಿದ್ದರು. ಅಹಲ್ಯಾಳೂ ಶೌಚ ಮುಗಿಸಿಕೊಂಡು ಮನೆಯ ಕಡೆಗೆ ಹೊರಟೂ ಬಿಟ್ಟಳು. ಅಹಲ್ಯಾ ತಲೆ ತಗ್ಗಿಸಿಕೊಂಡು ಪಂಚಾಯಿತಿ ಕಟ್ಟೆಯ ಹತ್ತಿರ ಹೆಜ್ಜೆ ಹಾಕುತ್ತಿದ್ದಳು. ಪಂಚಾಯಿತಿ ಕಟ್ಟೆಯ ಮಗ್ಗುಲಿನ ಕೊಂಡಕುಂದಿ ರಾಮಣ್ಣನ ಚಾದಂಗಡಿ ಆಗಷ್ಟೇ ತೆರೆದುಕೊಂಡಿತ್ತು. ಚಹದ ತಲಬಿನ ಮನುಷ್ಯರು ಬೆಳಿಗ್ಗೆ ಬೆಳಿಗ್ಗೆ ರಾಮಣ್ಣನ ಚಹದಂಗಡಿಗೆ ಬರುವ ರೂಢಿ ಇತ್ತು.

ಆಗ ಅದೆಲ್ಲಿಂದ ಬಂದರೋ ಏನೋ? ನಾಲ್ಕು ಜನ ರಜಾಕಾರರ ಒಂದು ತಂಡ ಏಕಾಯೇಕಿ ಕಾಣಿಸಿಕೊಂಡಿತು. ನಾಲ್ವರ ಕೈಯಲ್ಲೂ ಬಂದೂಕುಗಳು. ಎಲ್ಲರೂ ಇಪ್ಪತ್ತೈದರಿಂದ ಮೂವತ್ತು ವರ್ಷಗಳ ಒಳಗಿನ ತರುಣರೇ. ಮಿಲಿಟರಿಯ ಸೈನಿಕರಂತೆ ಎಲ್ಲರೂ ಹಸಿರು ಬಣ್ಣದ ದಿರಿಸುಗಳಲ್ಲಿ ಬಲಾಢ್ಯರಂತೆ ಕಾಣುತ್ತಿದ್ದರು. ಬಂದೂಕುಧಾರಿಯೊಬ್ಬ ಮಿಂಚಿನ ವೇಗದಲ್ಲಿ ಅಹಲ್ಯಾಳತ್ತ ನುಗ್ಗಿ ಅವಳ ಬಾಯಿಗೆ ಬಟ್ಟೆ ತುರುಕಿದ. ಇನ್ನೊಬ್ಬ ದಿಢೀರನೇ ಅವಳನ್ನು ಅನಾಮತ್ತಾಗಿ ಎತ್ತಿಕೊಂಡು ತಕ್ಷಣ ಪಂಚಾಯಿತಿ ಕಟ್ಟೆಯ ಆಚೆ ಬದಿಗೆ ಹೋದ. ನೋಡನೋಡುತ್ತಿದ್ದಂತೆ ನಾಲ್ಕೂ ಜನರು ಅವಳ ಮೈಮೇಲಿನ ಬಟ್ಟೆಗಳೆಲ್ಲವನ್ನೂ ತುಂಡು ತುಂಡುಮಾಡಿ ಕಿತ್ತು ಎಸೆದು ಅಂಗಾತ ನೆಲಕ್ಕೆ ಕೆಡವಿದರು. ಖಡ್ಗಧಾರಿಗಳಿಬ್ಬರಲ್ಲಿ ಒಬ್ಬ ಅವಳ ಎರಡೂ ಕೈಗಳನ್ನು ಹಿಡಿದುಕೊಂಡರೆ ಇನ್ನೊಬ್ಬ ಅವಳ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. `ಯಾರಾದರೂ ಹತ್ತಿರ ಬಂದರೆ ನಿಮ್ಮನ್ನು ಸುಟ್ಟು ಬಿಡುತ್ತೇವೆ' ಅಂತ ಒಬ್ಬ ಬಂದೂಕನ್ನು ಹಿಡಿದುಕೊಂಡು ಕಾವಲಿಗೆ ನಿಂತ. ನಾಲ್ಕು ಜನರಲ್ಲಿ ಒಬ್ಬ ಅವಳ ಮೇಲೆ ಎರಗಿದ್ದ. ಅಹಲ್ಯಾಳ ಒದ್ದಾಟ, ತಪ್ಪಿಸಿಕೊಳ್ಳಬೇಕೆಂಬ ಹರಸಾಹಸ ಕೈಗೂಡಲಿಲ್ಲ. 

ಒಬ್ಬರ ನಂತರ ಒಬ್ಬರಂತೆ ನಾಲ್ಕೂ ಜನರು ಅವಳ ಮೇಲೆ ಅವ್ಯಾಹತವಾಗಿ ಅತ್ಯಾಚಾರ, ಪೈಶಾಚಿಕ ಕೃತ್ಯ ಎಸಗಿದಾಗ ಅಹಲ್ಯಾ ನಿತ್ರಾಣಳಾಗಿ ಭೂದೇವಿಯನ್ನಪ್ಪಿಕೊಂಡಿದ್ದಳು. ಚಾದಂಗಡಿಗೆ ಬಂದಿದ್ದ ಗಿರಾಕಿಗಳು ಅಲ್ಲಿಂದ ದಿಕ್ಕಾಪಾಲರಾಗಿ ಓಟಕಿತ್ತರು. ಕೊಂಡಕುಂದಿ ರಾಮಣ್ಣನೂ ಅವರ ಜೊತೆಗೆ ದೌಡಾಯಿಸಿದ. ಪಂಚಾಯಿತಿ ಕಟ್ಟೆಯ ಸುತ್ತಮುತ್ತಲಿನ ಮನೆಯವರು ತಮ್ಮ ಮನೆಗಳ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡು ಬಾಗಿಲ, ಕಿಟಕಿಗಳ ಸಂದಿಯಿಂದ ರಜಾಕಾರರ ಪೈಶಾಚಿಕ ಕೃತ್ಯವನ್ನು ನೋಡತೊಡಗಿದ್ದರು. ಎಲ್ಲರೆದೆಗಳಲ್ಲಿ ಗಾಬರಿಯ ನರ್ತನ ತಾಂಡವವಾಡತೊಡಗಿತ್ತು. ಎಲ್ಲವನ್ನೂ ಮುಗಿಸಿಕೊಂಡ ರಜಾಕಾರರು ಅಹಲ್ಯಾಳ ಕೆನ್ನೆ ಹಿಂಡುತ್ತಾ, `ನಿಜವಾಗಿಯೂ ನಿನ್ನ ಸಾಂಗತ್ಯದಲ್ಲಿ ನಾವು ತುಂಬಾ ಖುಷಿ ಅನುಭವಿಸಿದೆವು. ಶುಕ್ರಿಯಾ. ನಮ್ಮಂಥಹ ಹುಡುಗರ ತುಂಟಾಟವನ್ನು ನೀನೂ ಖುಷಿಯಿಂದ ಅನುಭವಿಸಿದಿ ಎಂದು ನಿನ್ನ ಮುಖ ನೋಡಿದರೇ ಗೊತ್ತಾಗುತ್ತದೆ. ಎಷ್ಟಾದರೂ ನೀನು ಗಂಡನಿಲ್ಲದ ಒಂಟಿ ಹೆಣ್ಣಲ್ಲವೇ? ಮೇಲಾಗಿ ಉಪ್ಪು, ಹುಳಿ, ಖಾರ ತಿನ್ನುವ ದೇಹ ನಿನ್ನದಲ್ಲವೇ...?' ಎಂದೆನ್ನುತ್ತಾ ಅವಳ ದೇಹದ ಮೇಲೆಲ್ಲಾ ಸವರ್ಯಾಡಿದ್ದರು. ಅಲ್ಲಿಂದ ಕದಲುವ ಮುಂಚೆ ಒಬ್ಬ, `ನಿಜವಾಗಿಯೂ ನೀನು ರಂಭೆಯಂಥಹ ಸುಂದರಿ. ನಿನ್ನ ಈ ಯೌವ್ವನ ಹೀಗೆ ಹಾಳಾಗಬಾರದು. ನಿನ್ನ ಸಾಂಗತ್ಯದಲ್ಲಿ ನಾನಂತೂ ಸಕತ್ತಾಗಿ ಸಂತಸ ಅನುಭವಿಸಿದೆ. ಧನ್ಯವಾದ' ಎಂದೆನ್ನುತ್ತಾ ಅಹಲ್ಯಾಳನ್ನು ಬಿಗಿದಪ್ಪಿಕೊಂಡು ಮುದ್ದಿಸಿದ್ದ ಅಲ್ಲಿಂದ ಮರೆಯಾಗುವಾಗ. ಚಿಂದಿಯಾಗಿದ್ದ ಬಟ್ಟೆಗಳಿಂದಲೇ ಮಾನ ಮುಚ್ಚಿಕೊಂಡು ರೋಧಿಸುತ್ತಾ ಅಹಲ್ಯಾ ಮನೆಯತ್ತ ಧಾವಿಸಿದ್ದಳು. ಸುತ್ತಲಿನ ಮನೆಯವರು ಅವಳಿಗೊದಗಿ ಬಂದಿದ್ದ ಕೆಟ್ಟ ಪರಿಸ್ಥಿತಿಗೆ ಮರುಗುವವರೇ.

ತುಸು ಹೊತ್ತಿನಲ್ಲಿ ಊರಿನ ಪೋಲೀಸ್ ಗೌಡ ಕಲ್ಲನಗೌಡನ ಹತ್ತಿ ಗಿರಣಿಯ ಗುದಾಮಿನಲ್ಲಿ ಸಭೆ ಸೇರಿತ್ತು. ಗೌಡನ ಮುಂದಾಳತ್ವದಲ್ಲಿ ಆಗಷ್ಟೇ ನಡೆದಿದ್ದ ರಜಾಕಾರರ ಅತ್ಯಾಚಾರದ ಪೈಶಾಚಿಕ ಹೀನ ಕೃತ್ಯದ ಬಗ್ಗೆ ಚರ್ಚೆ ರಂಗೇರತೊಡಗಿತ್ತು. ಊರಿನ ಶಾನುಭೋಗ ತಿರುಮಲರಾವ್, ಮಾಲೀಗೌಡ ಮಹಾಂತಗೌಡ, ಕುಲಕರ್ಣಿ ಭೀಮಪ್ಪಯ್ಯ, ಪಟವಾರಿ ಶೇಷಪ್ಪ, ಹನುಮಂತಯ್ಯ ಶೆಟ್ಟಿ, ಸಾಹುಕಾರ್ ಯಂಕಪ್ಪ ಮುಂತಾದ ಮುಖಂಡರು ಸೇರಿದ್ದರು. ರಜಾಕಾರರ ಅಂದಿನ ಪೈಶಾಚಿಕ ಕೃತ್ಯವನ್ನು ಖಂಡಿಸುತ್ತಾ ಅವರ ಅಟ್ಟಹಾಸವನ್ನು ಅದ್ಹೇಗೆ ಮಟ್ಟ ಹಾಕಬೇಕು ಎಂಬುದರ ಬಗ್ಗೆ ಮಾತುಕತೆಗಳು ನಡೆದಿದ್ದವು. ಅಷ್ಟರಲ್ಲಿ ಎಂಟ್ಹತ್ತು ಜನ ರಜಾಕಾರರ ತಂಡ ಗುದಾಮಿಗೆ ನುಗ್ಗಿತ್ತು. ಎಲ್ಲರ ಕೈಯಲ್ಲಿ ಆಯುಧಗಳು ವಿಜೃಂಭಿಸುತ್ತಿದ್ದವು. ತಂಡದ ಮುಖಂಡ ಕೈಯಲ್ಲಿದ್ದ ಬಂದೂಕಿನಿಂದ ಗಾಳಿಯನ್ನು ಗುಂಡನ್ನು ಹಾರಿಸುತ್ತಾ, `ತುಮ್ ಸಬ್ ಲೋಗ್ ಇಧರ್ ಕ್ಯೋಂ ಇಕ್ಕಟ್ಟೆ ಹೋಗಯೆ ಹೈಂ...? ಛುಪ್ ಚಾಪ್ ಇಧರ್ ಸೆ ಚಲೆ ಜಾನಾ. ನಹಿ ತೋ ಹಮಾರಾ ಬಂದೂಕೇಂ ಜವಾಬ್ ದೇತೆ. ಐಸೇ ಮೀಟಿಂಗ್-ಗೀಟಿಂಗ್ ಕುಛ್ ನಹಿ ಕರನಾ. ತುರಂತ್ ಇಧರ್ಸೇ ನಿಕಲ್ಜಾನಾ" ಎಂದೆನ್ನುವಷ್ಟರಲ್ಲಿ ರಜಾಕಾರರು ಅಲ್ಲಿದ್ದವರೆಲ್ಲರ ಕಡೆಗೆ ತಮ್ಮ ಬಂದೂಕುಗಳನ್ನು ಗುರಿ ಮಾಡಿಟ್ಟುಕೊಂಡು ನೋಡತೊಡಗಿದರು. 

ಮೇಗಳಪೇಟೆಯ ವೀರಭದ್ರ ಎನ್ನುವ ಬಿಸಿರಕ್ತದ ತರುಣ ಏನೋ ಮಾತಾಡಬೇಕೆಂದು ಬಾಯಿ ತೆರೆದ. `ಏಯ್ ಹುಡುಗಾ, ನೀ ಇಲ್ಲಿಂದ ಸುಮ್ಮನೇ ಹೋದರೆ ಚೊಲೋ. ಇಲ್ಲಾಂದ್ರೆ ನಿನ್ನ ಹೆಣ ಬೀಳುತ್ತದೆ ಹುಷಾರ್! ಇನ್ನೊಂದು ಸಾರೆ ಊರಿನ ಜನರು ಈ ರೀತಿ ಒಂದೇ ಕಡೆಗೆ ಕುಳಿತುಕೊಂಡು ಮೀಟಿಂಗ್ ಮಾಡಿದ್ದು ನಮಗೆ ಗೊತ್ತಾದರೆ ಆಗ ನಮ್ಮ ಬಂದೂಕು, ತಲವಾರ್‍ಗಳು ಮಾತಾಡುತ್ತವೆ' ಎಂದ ಒಬ್ಬ ಬಂದೂಕುಧಾರಿ. ಸಭೆಗೆ ಬಂದಿದ್ದವರೆಲ್ಲರೂ ಕಮಕ್-ಕಿಮಕ್ ಎನ್ನದೇ ಜೀವ ಉಳಿದರೆ ಸಾಕು ಎಂದು ಅಂದುಕೊಂಡು ದಿಕ್ಕಾಪಾಲಾಗಿ ಓಟಕಿತ್ತರು. ಹೀಗೇ ಯಾರೂ ಗುಂಪು ಗುಂಪಾಗಿ ಸೇರಿಕೊಂಡು ಮಾತಾಡದಂತೆ, ಸಭೆ ಸೇರದಂತೆ ರಜಾಕಾರರು ಹಗಲು-ರಾತ್ರಿ ಗಸ್ತು ತಿರುಗುವುದನ್ನು ರೂಢಿಸಿಕೊಂಡಿದ್ದರು. ಊರಿನ ಜನರು ಗುಂಪು ಸೇರಿಕೊಂಡು ತಮ್ಮ ಮೇಲೆ ಮುಗಿಬೀಳಬಹುದು ಎಂಬ ಅನುಮಾನವಿತ್ತು ರಜಾಕಾರರ ಎದೆಯೊಳಗೆ.   
                    ****

ಅಹಲ್ಯಾಳ ಮೇಲೆ ಅತ್ಯಾಚಾರ ಜರುಗಿ ಒಂದು ತಿಂಗಳ ಆಗಿತ್ತು. ಊರಲ್ಲಿ ಯಾವ ಅಹಿತಕರ ಘಟನೆಯೂ ಜರುಗಲಿಲ್ಲ. ಆದರೆ ರಜಾಕಾರರ ಹದ್ದಿನ ಕಣ್ಣುಗಳು ಹಗಲಿರುಳೂ ಜನರ ಚಲನವಲನಗಳ ಮೇಲೆ ಕೇಂದ್ರೀಕೃತವಾಗಿದ್ದಂತೂ ನಿಜ. ಊರಿನ ಜನರಲ್ಲಿ ಒಂದಿಷ್ಟೂ ಉತ್ಸಾಹವಿರಲಿಲ್ಲ. ಜೀವನೋತ್ಸಾಹ ಮರೆಯಾಗಿತ್ತು. ರಜಾಕಾರರು ವಕ್ರಿಸಿಕೊಂಡ ನಂತರ ಮದುವೆ-ಮುಂಜುವಿ, ಜಾತ್ರೆ-ಜಪಾಟಿಯಂಥಹ ಮಂಗಲ ಕಾರ್ಯಗಳ್ಯಾವೂ ವಿಜೃಂಭಿಸಲಿಲ್ಲ. ಊರಿನ ಹೆಣ್ಣು ಮಕ್ಕಳು ನಿರ್ಭಿಡೆಯಿಂದ ತಿರುಗಾಡುವುದು ದುಸ್ತರವಾಗಿತ್ತು. ರೈತರು ತಮ್ಮ ಮನೆಯ ಹೆಂಗಸರೊಂದಿಗೆ ಹೊಲಮನೆಗಳಿಗೆ ಅಲೆಯುವುದು ಕಷ್ಟವೆನಿಸತೊಡಗಿತ್ತು. ಬಹಳಷ್ಟು ಜನರು ತಮ್ಮ ಮನೆಯ ಹೆಂಗಸರನ್ನು ಪಕ್ಕದೂರಿನ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದರು.

ಈ ನಡುವೆ ಮಹಾನವಮಿ ಹಬ್ಬ ಬಂದೋಯಿತು. ನಂತರ ಹಾಗೇ ದೀಪಗಳ ಹಬ್ಬ ದೀಪಾವಳಿಯೂ ಬಂದು ಹೋಯಿತು. ಹಬ್ಬ ಆಚರಿಸುವ ಉತ್ಸಾಹ, ಆಸಕ್ತಿ ಯಾರಲ್ಲೂ ಇರಲಿಲ್ಲ. ಹಾಗೇ ಎಳ್ಳ ಅಮವಾಸ್ಯೆಯೂ ಬಂದಿತು. ಯಾವ ರೈತನೂ, `ಚರಗ' ಚೆಲ್ಲಲು ಹೊಲಗಳಿಗೆ ಹೋಗಲಿಲ್ಲ, ಚರಗ ಚೆಲ್ಲುವ ಹಬ್ಬ ಆಚರಿಸಲಿಲ್ಲ. ಬೆಳೆದು ನಿಂತಿದ್ದ ಬೆಳೆಗಳನ್ನೂ ಕಟಾವು ಮಾಡುವ ಉತ್ಸಾಹವೂ ಇರಲಿಲ್ಲ. ಯಾವಾಗ ಏನಾಗುವುದೋ ಎಂಬ ಭಯ ಗ್ರಾಮಸ್ಥರೆಲ್ಲರೆದೆಯೊಳಗೆ ಭದ್ರವಾಗಿ ಕುಳಿತುಕೊಂಡು ಬಿಟ್ಟಿತ್ತು. ತಮ್ಮ ಮುಂದಿನ ಜೀವನವೇ ಮುಗಿದು ಹೋಯಿತೇನೋ ಎಂದು ಅಂದುಕೊಳ್ಳತೊಡಗಿದರು. 
ಅದೊಂದು ದಿನ ಬೆಳ್ಳಂಬೆಳಿಗ್ಗೆ ಮಿಲಿಟರಿ ವಾಹನವೊಂದು ಊರಲ್ಲಿ ತಿರುಗಾಡತೊಡಗಿತು. ಬಂದೂಕುಗಳನ್ನು ಹಿಡಿದುಕೊಂಡಿದ್ದ ರಜಾಕಾರರಿಂದ ತುಂಬಿತ್ತು ವಾಹನ. ವಾಹನ ಸೀದಾ ಮಾಲಿಗೌಡ ವೀರಭದ್ರಗೌಡನ ಮನೆಯಂಗಳಕ್ಕೆ ನುಗ್ಗಿತು. ರಜಾಕಾರರು ಬಂದಾಗಿನಿಂದ ವೀರಭದ್ರನಂತಿದ್ದ ಗೌಡನ ರಟ್ಟೆಯಲ್ಲಿ ರಕ್ತವೇ ಇಲ್ಲದಂತಾಗಿತ್ತು. ವಾಹನದಿಂದ ದುಡದುಡನೇ ಹತ್ತು ಜನ ರಜಾಕಾರರು ಕೆಳಗಿಳಿದರು. ಮನೆಯ ಬಂಕದ ಕಟ್ಟೆಯ ಮೇಲೆ ಕುಳಿತಿದ್ದ ಗೌಡ, `ಏನು ಅನಾಹುತ ಕಾದಿದೆಯೋ ಏನೋ...?' ಎಂದು ಮನದೊಳಗೇ ಅಂದುಕೊಳ್ಳುತ್ತ ದೌಡಾಯಿಸಿ ರಜಾಕಾರರ ನಾಯಕನತ್ತ ಹೆಜ್ಜೆ ಹಾಕಿದ.

"ಏಯ್ ಗೌಡಾ, ನಿನ್ನ ಮನೆಯ ಕೆಲಸದಾಳುಗಳನ್ನು ಕೂಗು. ಈ ವರಾಂಡದಲ್ಲಿ ಅದೆಷ್ಟು ಹಗೇವುಗಳಿವೆ ಎಂಬುದನ್ನು ತೋರಿಸು. ನಿನ್ನ ಕೆಲಸದಾಳುಗಳ ಜೊತೆಗೆ ನಮ್ಮ ಹುಡುಗರೂ ಹಗೇವಿನಿಂದ ಧವಸ-ಧಾನ್ಯ ತೆಗೆಯಬೇಕು. ಜಲ್ದಿ ಜಲ್ದಿ ಈ ಕೆಲಸ ಆಗಬೇಕು. ತತಕ್ಷಣ ನಾನು ರಾಯಚೂರಿಗೆ ಧಾನ್ಯ ತುಂಬಿದ ಗಾಡಿಯನ್ನು ಕಳುಹಿಸಬೇಕಿದೆ. ಕಮಕ್, ಕಿಮಕ್ ಎನ್ನದೇ ಸುಮ್ಮನಿರಬೇಕು. ಕಂಯ್-ಕುಂಯ್ ಅಂದರೆ ಬಂದೂಕಿನ ಗುಂಡುಗಳು ನಿನ್ನ ಎದೆ ಸೀಳುವುದರ ಜೊತೆಗೆ ಮನೆಯ ಹೆಂಗಸರ ಮಾನ ಬೀದಿ ಪಾಲಾಗುತ್ತದೆ ಅಷ್ಟೇ" ಎಂದು ದೊಡ್ಡ ಧ್ವನಿಯಲ್ಲಿ ದರ್ಪದಿಂದ ಗರ್ಜಿಸಿದ. ನಾಲ್ಕು ಜನರು ನಾಲ್ಕೂ ಕಡೆಗೆ ಬಂದೂಕುಗಳನ್ನು ಹಿಡಿದುಕೊಂಡು ಕಾವಲಿಗೆ ನಿಂತರು. ಚಕಚಕ ಅಂತ ಎರಡು ಹಗೇವುಗಳಿಂದ ಜೋಳ, ಸಜ್ಜೆ ತೆಗೆದು ಚೀಲಗಳಲ್ಲಿ ತುಂಬಿಕೊಂಡರು ರಜಾಕಾರರು. ನಲವತ್ತು ಚೀಲಗಳಷ್ಟು ಧಾನ್ಯ ತುಂಬಿಕೊಂಡು ಗುಡುಗುಡು ಅಂತ ಶಬ್ದ ಮಾಡುತ್ತಾ ಗಾಡಿ ಹೊರಟೇ ಹೋಯಿತು. ಅಲ್ಲಿಂದ ಗಾಡಿ ಸೀದಾ ಬಜಾರಕ್ಕೆ ದೌಡಾಯಿಸಿತ್ತು. ಐಲಿ ಶಾಮಣ್ಣನ ಬಟ್ಟೆ ಅಂಗಡಿ ಹೊಕ್ಕಿದ್ದರು ರಜಾಕಾರರು. ಬಂದೂಕು ತೋರಿಸುತ್ತಾ ಅಂಗಡಿಯಲ್ಲಿದ್ದ ಬಟ್ಟೆಗಳ ಥಾನುಗಳೆಲ್ಲವನ್ನೂ ಗಾಡಿಯಲ್ಲಿ ಹಾಕಿಕೊಂಡರು. ನಂತರ ಹೊಗೆ ಕಾರುತ್ತಾ ಗಾಡಿ ಸೀದಾ ರಾಯಚೂರು ಕಡೆಗೆ ಮುಖಮಾಡಿಕೊಂಡು ಹೊರಟಿತು. ಅಂದು ಊರಲ್ಲಿ ಅದೇ ಸುದ್ದಿ ಜನರೆಲ್ಲರ ಬಾಯಲ್ಲಿ ಹರಿದಾಡತೊಡಗಿತು. 

ಅದೇ ದಿನ ರಾತ್ರಿ ಐದು ರಜಾಕಾರರ ತಂಡ ದೇವದಾಸಿ ತಿಮ್ಮಿಯ ಮನೆ ಹೊಕ್ಕಿದ್ದರು. ಇಪ್ಪತ್ತರ ಹರೆಯದ ತಿಮ್ಮಿ ನಲವತ್ತು ವರ್ಷದ ಪೋಲೀಸ್‍ಗೌಡ ಕಲ್ಲನಗೌಡ ಮತ್ತು ನಲವತ್ತೈದು ವರ್ಷದ ಕುಲಕರ್ಣಿ ಭೀಮಪ್ಪಯ್ಯನ ಖಾಯಂ ಗಿರಾಕಿ. ತುಸು ಕಪ್ಪೆನಿಸುವ ಮೈಬಣ್ಣದ ತಿಮ್ಮಿಯ ಪೆಡಸು ದೇಹ ಕಟೆದ ವಿಗ್ರಹದಂತಿತ್ತು. ತಿಮ್ಮಿಯ ಜೊತೆಗಿದ್ದುದು ಅವಳ ಅಜ್ಜಿ ಅಷ್ಟೇ. ಅವಳ ತಾಯಿ ಸಾಹುಕಾರ್ ಯಂಕಪ್ಪನ ತೋಟದ ಮನೆ ಸೇರಿಕೊಂಡಿದ್ದಳು. ತಲೆತಲಾಂತರದಿಂದ ದೇವದಾಸಿಯ ಪಟ್ಟ ಅವಳ ಮನೆತನಕ್ಕೆ ಅಂಟಿಕೊಂಡಿತ್ತು. ಮೈನೆರೆತ ತನ್ನ ಹದಿಮೂರನೇ ವಯಸ್ಸಿನಿಂದಲೇ ತಿಮ್ಮಿ ಸರಸ ಮತ್ತು ಸುರತದಲ್ಲಿ ಪಳಗಿದವಳು. ಕುಲಕರ್ಣಿ ಭೀಮಪ್ಪಯ್ಯನೇ ಅವಳ ಮೀಸಲು ಮುರಿದಿದ್ದ. ಇಪ್ಪತ್ತರ ಹರೆಯದ ಮಾಲಿಗೌಡನ ಮಗ ಮಂಜುನಾಥ್ ಮತ್ತು ಪಟವಾರಿಯ ಮಗ ವೆಂಕಟೇಶ್ ತಿಮ್ಮಿಯನ್ನು ತಮ್ಮ ತೆಕ್ಕೆಯೊಳಗೆ ಸೇರಿಸಿಕೊಳ್ಳುವ ಹುನ್ನಾರವೂ ಗಪ್ಚಿಪ್ಪಾಗಿ ನಡೆದಿತ್ತಾದರೂ ಅವರಿನ್ನೂ ತಮ್ಮ ಕಾರ್ಯ ಸಾಧನೆಯಲ್ಲಿ ಯಶಸ್ಸನ್ನು ಸಾಧಿಸಿರಲಿಲ್ಲ. ಪ್ರಯತ್ನ ಮುಂದುವರೆದಿತ್ತು. ತಿಮ್ಮಿಗೂ ಆ ಹರೆಯದ ಹುಡುಗರ ಪೆಡಸು ತೋಳ್ಗಳಲ್ಲಿ ನಲುಗಿ ನಲಿಯಬೇಕೆಂಬ ಮಹದಾಸೆಯೂ ಇತ್ತು. 


ಆ ರಾತ್ರಿ ಕಲ್ಲನಗೌಡನಾಗಲೀ ಭೀಮಪ್ಪಯ್ಯನಾಗಲೀ ಅವಳ ಮನೆಯತ್ತ ಸುಳಿದಿರಲಿಲ್ಲ. ಅಜ್ಜಿಯ ಜೊತೆಗೆ ಊಟಮಾಡಿ ಇನ್ನೇನು ಹಾಸಿಗೆಗೆ ಮೈಯೊಡ್ಡುವವಳಿದ್ದಳು ತಿಮ್ಮಿ. ಅಷ್ಟರಲ್ಲಿ ಬಾಗಿಲು ತಟ್ಟಿದ ಶಬ್ದ. ಬಹುಶಃ ಕಲ್ಲನಗೌಡ ಬಂದಿರಬೇಕೆಂಬ ಸಂಭ್ರಮದಲ್ಲಿ ಬಾಗಿಲು ತೆಗೆದಾಗ ಐದು ಜನ ಬಂದೂಕುಧಾರಿ ರಜಾಕಾರರು ಬಾಗಿಲಲ್ಲಿ ನಿಂತಿದ್ದನ್ನು ಕಂಡು ತಿಮ್ಮಿ ಭಯಭೀತಳಾದಳು. ಎಲ್ಲರೂ ಇಪ್ಪತ್ತರ ಆಜು-ಬಾಜುವಿನ ವಯಸ್ಸಿನ ಚಿಗುರು ಮೀಸೆಯ ಹುಡುಗರು. ಅವರೇನು ತಿಮ್ಮಿಯನ್ನು ತಳ್ಳಿಕೊಂಡು ಮನೆಯೊಳಗೆ ನುಗ್ಗಲಿಲ್ಲ. ನಿಧಾನವಾಗಿ ಒಳಗೆ ಬಂದು ಬಾಗಿಲನ್ನು ಭದ್ರಪಡಿಸಿದ್ದರು. ಅವರ ಉದ್ದೇಶ ಅವಳ ಮನದರಿವಿಗೆ ಬಂದಾಗ ಪ್ರತಿಭಟಿಸಲು ಮುಂದಾದಳು. ಒಬ್ಬ ನೇರವಾಗಿ ಅವಳ ಪೊದಸ್ತಾದ ಉಬ್ಬಿದೆಗೆ ಬಂದೂಕನ್ನು ಹಿಡಿದ. ಇಬ್ಬರು ಅವಳ ಎರಡೂ ಕೈಗಳನ್ನು ಹಿಡಿದುಕೊಳ್ಳಲು ಮುಂದಾದಾಗ ಅವಳಿಗೆ ತನ್ನ ಪ್ರತಿಭಟನೆ ಅರ್ಥವಿಲ್ಲದ್ದೆಂದು ಅರಿವಾಗಲು ಬಹಳ ಹೊತ್ತೇನೂ ಬೇಕಾಗಲಿಲ್ಲ. `ಅನಿವಾರ್ಯತೆ ಇದ್ದಾಗ ಅನುಭವಿಸಿ ಸುಖಿಸು' ಎಂಬುದನ್ನು ತಿಳಿಯದವಳೇನಲ್ಲ ತಿಮ್ಮಿ. `ಸರಿ ಸರಿ. ನಿಮ್ಮೆಲ್ಲರ ಮೈಮನಗಳನ್ನು ತಣಿಸುವೆ. ಯಾವುದಕ್ಕೂ ಅವಸರ ಬೇಡ' ಎಂದೆನ್ನುತ್ತಾ ತಿಮ್ಮಿ ಎದೆಗೆ ಬಂದೂಕನ್ನು ಒತ್ತಿ ಹಿಡಿದುಕೊಂಡು ನಿಂತಿದ್ದ ಯುವಕನ ಚಿಗುರು ಮೀಸೆ ತಿರುವಿದಳು.

 ಪಳಗಿದ ಹೆಣ್ಣು ಹುಲಿಯಂತಿದ್ದ ತಿಮ್ಮಿ ಒಬ್ಬೊಬ್ಬರಂತೆ ಐದೂ ಹುಡುಗರನ್ನು ತೃಪ್ತಿ ಪಡಿಸಿದಾಗ ರಜಾಕಾರ್ ಹುಡುಗರಿಗೇ ಅಚ್ಚರಿ. ಅನುಭವಸ್ಥೆ, ನಿಪುಣೆ ತಿಮ್ಮಿಯ ಜೊತೆಗೆ ಅವರೆಲ್ಲರೂ ಸರಸ ಸಲ್ಲಾಪದಲ್ಲಿ ಖುಷಿಖುಷಿಯಿಂದ ಸಂಭ್ರಮಿಸಿದರು. ಅವಳ ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಕೈಗಳನ್ನು ಕಟ್ಟಿಹಾಕಿ ಅಡುಗೆ ಮನೆಯಲ್ಲಿ ಕೂಡಿಹಾಕಿದ್ದರು ಭೂಪರು ತಮ್ಮ ಮನದಭೀಷ್ಟೆ ತೀರಿಸಿಕೊಳ್ಳಲು ಮುಂದಾಗುವುದಕ್ಕಿಂತ ಮುಂಚೆ. ತರುಣ ರಜಾಕಾರರ ಬಲಿಷ್ಠ ಬಾಹುಗಳಲ್ಲಿ ನಲುಗಿತ್ತು ತಿಮ್ಮಿಯ ದೇಹ. ಅವಳ ಸೊಕ್ಕಿದ ಮೈ ಒಂದಿಷ್ಟು ನುಜ್ಜುಗುಜ್ಜಾದರೂ ಖುಷಿಯಲ್ಲಿ ಸಂಭ್ರಮಿಸಿತ್ತು. ಯಾವ ತಕರಾರು ಇಲ್ಲದೇ ತಿಮ್ಮಿ ಸಹಕರಿಸಿದ್ದಕ್ಕೆ ಹುಡುಗರು ಖುಷಿಯ ಪರಾಕಾಷ್ಠೆಯ ಅನುಭೂತಿಯಲ್ಲಿದ್ದರು. ಹೋಗುವಾಗ ಅವಳಿಗೆ ಒಂದಿಷ್ಟು ಭಕ್ಷೀಸನ್ನೂ ಕೊಟ್ಟು ಹೋದರು. ಬೆಳಿಗ್ಗೆ, `ತಿಮ್ಮಿಯ ಮೇಲೆ ರಜಾಕಾರರಿಂದ ಅತ್ಯಾಚಾರ' ಎಂಬ ಭಯಾನಕ ಸುದ್ದಿ ಕಾಳ್ಗಿಚ್ಚಿನಂತೆ ಊರಲ್ಲಿ ಹರಡಿ ಜನರೆಲ್ಲರೂ ದಿಗ್ಭ್ರಮೆಗೊಳ್ಳುವಂತೆ ಮಾಡಿತ್ತು.
                    ****

ರಜಾಕಾರರ ಉಪಟಳ ಅಷ್ಟಕ್ಕೇ ನಿಲ್ಲಲಿಲ್ಲ. ದಿನನಿತ್ಯ ಏನಾದರೂ ಒಂದು ಕಿರಿಕಿರಿ ಇದ್ದೇ ಇರುತ್ತಿತ್ತು. ಜೀವ ಭಯದಲ್ಲೇ ಜನರು  ದಿನಗಳನ್ನು ತಳ್ಳುತ್ತಿದ್ದುದರಿಂದ ಇಡೀ ವರ್ಷ ಯಾರ ಮನೆಯಲ್ಲೂ ಯಾವ ಮಂಗಲ ಕಾರ್ಯವೂ ಕಳೆಗಟ್ಟಲಿಲ್ಲ. ಭಯ, ಅನಿಶ್ಚತೆಗಳ ಕತ್ತಲೆಯ ಕಾರ್ಮೋಡ ಇಡೀ ಗ್ರಾಮವನ್ನು ಆವರಿಸಿಕೊಂಡಿತ್ತು. 

ಅಂದು ಎಂದಿನಂತೆ ಬೆಳಗಾಗತೊಡಗಿತ್ತು. ಬಂಗಾರವನ್ನೇ ಹೊದ್ದಂತಿದ್ದ ಆಕಾಶದಲ್ಲಿ ಮುತ್ತುಗದ ಹೂವಿನ ರಾಶಿಯನ್ನೇ ಸುರಿದಂತಿತ್ತು ಮೂಡಣದಲ್ಲಿ. ಆಗಲೇ ಕೊಂಡಕುಂದಿ ರಾಮಣ್ಣನ ಚಾದಂಗಡಿಯಲ್ಲಿ ಪಾತ್ರೆಗಳ ಕಲರವಗಳ ಜೊತೆಗೆ ಒಲೆಗಳು ಹೊತ್ತಿಕೊಂಡು ಬಂಗಾರದ ಬಣ್ಣದ ಜ್ವಾಲೆಗಳನ್ನು ಹೊರಹಾಕುತ್ತಾ ತಿಂಡಿ ತಿನಿಸುಗಳ ತಯಾರಿಯಲ್ಲಿ ತೊಡಗಿಕೊಂಡಿದ್ದನ್ನು ಸಾರಿ ಹೇಳುತ್ತಿದ್ದವು. ಕಡಾಯಿಯಲ್ಲಿ ಚಟಪಟ... ಎಂದೆನ್ನುತ್ತಿದ್ದ, ಚುಂಯ್‍ಗುಡುತ್ತಿದ್ದ ಕಾದ ಎಣ್ಣೆ ಪೂರಿಯ ಪೂರ್ವ ಸಿದ್ಧತೆಗೆ ಹಸಿರು ನಿಶಾನೆ ತೋರಿಸುವಂತಿತ್ತು. ರಾಮಣ್ಣ ಆಗಲೇ ತಯಾರಿಸಿಟ್ಟುಕೊಂಡಿದ್ದ ಮಂಡಾಳು ವಗ್ಗರಣಿಯ ಘಾಟು ಬಾಯಿಯಲ್ಲಿ ನೀರೂರಿಸುವಂತಿತ್ತು. ರಾಮಣ್ಣನ ಅಂಗಡಿ ಪೂರಿ-ಚಟ್ನಿ, ಮಂಡಾಳು ವಗ್ಗರಣಿ, ಮಿರ್ಚಿ-ಬಜಿ, ಡಾಣಿ-ಮಂಡಾಳಿಗೆ ತುಂಬಾ ಹೆಸರುವಾಸಿಯಾಗಿತ್ತು. ಗಿರಾಕಿಗಳು ಪೂರಿ-ಚಟ್ನಿ, ಮಂಡಾಳ ವಗ್ಗರಣಿ ಮೆಲ್ಲಲು ಜಮಾಯಿಸತೊಡಗಿದ್ದರು. ಶಾನುಭೋಗರ ಮಗ ಪ್ರಾಣೇಶ್, ಮಾಲಿಗೌಡರ ಮಗ ಮಂಜುನಾಥ್ ಜೊತೆಜೊತೆಯಲ್ಲಿ ಅಂಗಡಿಗೆ ಬಂದಿದ್ದರು. ಇಬ್ಬರೂ ಒಳ್ಳೇ ಶುಭ್ರ ಬಿಳಿ ಬಟ್ಟೆಗಳಲ್ಲಿ ಮಿಂಚುತ್ತಿದ್ದುದು ವಿಶೇಷವಾಗಿತ್ತು. ಮೊದಲು ಒಂದಿಷ್ಟು ಪೂರಿ ತಿಂದರು. ಅಷ್ಟರಲ್ಲಿ ನಾಲ್ಕು ಜನ ರಜಾಕಾರರು ಚಾದಂಗಡಿಗೆ ಬಂದರು. ಅವರು ಬಂದಿದ್ದಕ್ಕೆ ಕೆಲವೊಂದಿಷ್ಟು ಜನರು ತಕ್ಷಣ ಹಣಪಾವತಿ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದರು. ಪ್ರಾಣೇಶ್ ಮತ್ತು ಮಂಜುನಾಥ್ ಮಾತ್ರ ಕದಲಿಲ್ಲ. ರಜಾಕಾರರ ಹುಡುಗರು ಸಕತ್ತಾಗಿ ಪೂರಿ, ಮಂಡಾಳು ವಗ್ಗರಣಿ ತಿಂದು ತೇಗಿದರು. ತಮ್ಮ ಮುಸುರೆ ಕೈಗಳನ್ನು ಮಂಜುನಾಥ್ ಮತ್ತು ಪ್ರಾಣೇಶ್ ಅವರ ಬಿಳಿ ಅಂಗಿ ಮತ್ತು ಧೋತಿಗಳಿಗೆ ತಿಕ್ಕಿ ತಿಕ್ಕಿ ಒರೆಸಿಕೊಂಡರು. ಅವರು ಪ್ರತಿಭಟಿಸಲು ಮುಂದಾದಾಗ ರಜಾಕಾರ ಹುಡುಗರ ಬಂದೂಕುಗಳು ಅವರೆದೆಗಳ ಕಡೆಗೆ ತಿರುಗಿದ್ದರಿಂದ ಇಬ್ಬರೂ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರು. 

ಗರಿಗರಿಯಾಗಿಯಾಗಿದ್ದ ಅವರಿಬ್ಬರ ಬಟ್ಟೆಗಳು ಮುಸುರೆಯಿಂದ ಹಳದಿ ಮತ್ತು ಕಂದು ಬಣ್ಣಕ್ಕೆ ತಿರುಗಿದವು. ತಿಂಡಿ ತಿಂದುಂಡು ಚಹ ಕುಡಿದು ಅವರಿಬ್ಬರನ್ನು ಕೆಕ್ಕರಿಸಿ ನೋಡುತ್ತಾ ರಜಾಕಾರರ ಹುಡುಗರು ಧೀರೋದಾತ್ತ ಹೆಜ್ಜೆ ಹಾಕಿದ್ದರು. ಹೋಗುವಾಗ, `ನೀವೇನಾದರೂ ಕಮಕ್-ಕಿಮಕ್ ಎಂದರೆ ನಮ್ಮ ಬಂದೂಕುಗಳು ಮಾತಾಡಿ ನಿಮ್ಮೆದೆಗಳನ್ನು ಸೀಳುತ್ತವೆ, ಹುಷಾರ್!' ಎಂದು ಎಚ್ಚರಿಕೆಯನ್ನೂ ಕೊಟ್ಟು ಅಲ್ಲಿಂದ ಜಾಗ ಖಾಲಿಮಾಡಿದ್ದರು. ಹೀಗಾಗಿ ಅಂಗಡಿಯಲ್ಲಿದ್ದ ಪ್ರಾಣೇಶನಾಗಲೀ, ಮಂಜುನಾಥನಾಗಲೀ ಅಥವಾ ಇತರೆ ಜನರಾಗಲೀ ಯಾರೂ ಬಾಯಿ ಬಿಡಲಿಲ್ಲ. ಎಲ್ಲರು ಮಾತು ಬಲ್ಲವರಾಗಿದ್ದರೂ ಮಾತು ಬರದ ಮೂಕರಂತಾಗಿಬಿಟ್ಟರು. ಜೀವ ಭಯ ಎಲ್ಲೆರೆದೆಗಳನ್ನು ನಡುಗಿಸತೊಡಗಿತ್ತು. 

ಈ ನಡುವೆ ಊರಿನ ಒಂದಿಷ್ಟು ಜನ ಯುವಕರು ರಜಾಕಾರರ ಉಪಟಳ, ಹಾವಳಿಯನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕು ಅಂತ ಅಂದುಕೊಂಡು ರಹಸ್ಯವಾಗಿ ಒಂದು ಕಡೆಗೆ ಸಭೆ ಸೇರಿ ಚರ್ಚೆಮಾಡತೊಡಗಿದರು. ಮಾಲಿಗೌಡರ ಮಗ ಮಂಜುನಾಥ್, ಕುಲಕರ್ಣಿಯವರ ರಂಗನಾಥ್, ಪಟವಾರಿಯವರ ಮಗ ವೆಂಕಟೇಶ್, ಶಾನುಭೋಗರ ಮಗ ಪ್ರಾಣೇಶ್, ಪೋಲೀಸ್‍ಗೌಡರ ಮಗ ಚಂದ್ರಶೇಖರ್, ಸಾಹುಕಾರ್ ಯಂಕಪ್ಪನ ಮಗ ಶ್ರೀನಿವಾಸ್, ಐಲಿ ಚಂದ್ರಪ್ಪನ ಮಗ ರಾಜೇಶ್, ಪ್ರಗತಿಪರ ರೈತ ಮಾಳಪ್ಪನ ಮಗ ಶರಣ ಬಸವರಾಜ್, ಕೊಂಡಕುಂದಿ ರಾಮಣ್ಣನ ಮಗ ಕೇದಾರ್, ಜಮೀನುದಾರ ರಾಜಪ್ಪನ ಮಗ ರವಿಶಂಕರ್ ಹೀಗೆ ಹಲವಾರು ಜನ ಯುವಕರು ರಜಾಕಾರರ ಮೇಲೆ ಕತ್ತಿ ಮಸೆಯತೊಡಗಿದ್ದರು. ಎಲ್ಲರೂ ಊರಿನ ಹಳ್ಳದ ದಂಡೆಯಲ್ಲಿ ಸೇರಿ ಚರ್ಚಿಸಿ ರಜಾಕಾರರ ಮೇಲೆ ಕ್ರಮ ಕೈಗೊಳ್ಳುವುದರ ಬಗ್ಗೆ ತೀರ್ಮಾನಿಸೋಣ ಎಂದಿದ್ದರು. ಒಬ್ಬಿಬ್ಬರನ್ನು ಬಿಟ್ಟು ಎಲ್ಲಾ ಯುವಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಟವಾರಿ ವೆಂಕಟೇಶನ ಗೈರು ಹಾಜರಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಪಾಪ ವೆಂಕಟೇಶ್ ಅದೇಕೆ ಬರಲಿಲ್ಲವೋ ಏನೋ ಎಂದು ಎಲ್ಲರೂ ತಮ್ಮೊಳಗೇ ಅಂದುಕೊಂಡು ಅದನ್ನು ಸಭೆಯಲ್ಲಿ ಬಯಲಿಗಿಟ್ಟಿದ್ದೂ ಆಯಿತು. 

ಆಗಷ್ಟೇ ಸಭೆಯಲ್ಲಿ ವಿಷಯ ಗಂಭೀರವಾಗಿ ಚರ್ಚೆಗೆ ಶುರುವಿಟ್ಟುಕೊಂಡಿತ್ತು. ಅಷ್ಟರಲ್ಲಿ ಹಳ್ಳದ ದಂಡೆಯಲ್ಲಿ ಧಡ-ಬಡ... ಧಡ-ಬಡ ಶಬ್ದವಾಗತೊಡಗಿತು. ಹುಡುಗರು ಕಿವಿಗೊಟ್ಟು ಕೇಳಲು ಮುಂದಾದಾಗ ಅದು ರಜಾಕಾರರ ಬೂಟುಗಾಲಿನ ಶಬ್ದ ಎಂದು ಮನವರಿಕೆಯಾಗುವಷ್ಟರಲ್ಲಿ ಹದಿನೈದು ಜನ ಬಂದೂಕುಧಾರಿ ರಜಾಕಾರರ ತಂಡ ಅಲ್ಲಿ ಮಿಂಚಿನಂತೆ ಪ್ರತ್ಯಕ್ಷವಾಗಿತ್ತು. ಊರಿನ ಹುಡುಗರು ಅಲ್ಲಿಂದ ದಿಕ್ಕಾಪಾಲಾಗಿ ಓಡಿಹೋಗಬೇಕೆನ್ನುವಷ್ಟರಲ್ಲಿ ರಜಾಕಾರರ ಬಂದೂಕುಗಳು ಊರಿನ ಯುವಕರ ಎದೆಗಳ ಕಡೆಗೇ ಗುರಿಯಾಗಿಟ್ಟುಕೊಂಡಿದ್ದವು. `ಯಾರಾದರೂ ಇಲ್ಲಿಂದ ಪಾರಾಗಲು ಪ್ರಯತ್ನಿಸಿದರೆ ನಮ್ಮ ಕೈಯಲ್ಲಿನ ಬಂದೂಕಿನ ಗುಂಡುಗಳು ನಿಮ್ಮೆದೆಗಳ ರಕ್ತ ಪುಟಿಯುತ್ತದೆ ಹುಷಾರ್! ನಾವು ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ ನೀವೆಲ್ಲರೂ ನಮ್ಮ ಮೇಲೆ ಷ್ಯಡ್ಯಂತ್ರ ರೂಪಿಸಲು ಇಲ್ಲಿ ಸೇರಿರುವಿರಿ. ಎಲ್ಲರೂ ಕೈಗಳನ್ನು ಮೇಲೆತ್ತಿಕೊಂಡು ಆಚೆ ಇರುವ ನಮ್ಮ ಟ್ರಕ್‍ನ್ನು ಹತ್ತಿಕೊಳ್ಳಿರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ನಿಮ್ಮ ಹೆಣಗಳು ಧರೆಗುರುಳುತ್ತವೆ' ಎಂದೆನ್ನುತ್ತಾ ಒಬ್ಬ ತನ್ನ ಕೈಯಲ್ಲಿದ್ದ ಬಂದೂಕಿನಿಂದ ಆಕಾಶದತ್ತ ಗುಂಡೊಂದನ್ನು ಹಾರಿಸಿಬಿಟ್ಟ. ಗುಂಡಿನ, `ಢಮಾರ್' ಎನ್ನುವ ಭಯಂಕರ ಶಬ್ದಕ್ಕೆ ಹುಡುಗರೆಲ್ಲರೂ ಹೆದರಿಕೊಂಡುಬಿಟ್ಟರು. 

ಚಕಚಕ ಅಂತ ರಜಾಕಾರರು ಹುಡುಗರ ಕಡೆಗೆ ಬಂದೂಕನ್ನು ತೋರಿಸುತ್ತಾ ಟ್ರಕ್ಕಿಗೆ ಹತ್ತಿಸಿಕೊಂಡು ನೇರವಾಗಿ ರಾಯಚೂರು ಕಡೆಗೆ ಹೊರಟರು. ರಜಾಕಾರರ ಆಡಳಿತದ ವಿರುದ್ಧ ಪಿತೂರಿ ನಡೆಸುತ್ತಿರುವ ಆಪಾದನೆಗಾಗಿ ಯುವಕರೆಲ್ಲರನ್ನೂ ಜೇಲಿಗೆ ಹಾಕಿದರು. ರಜಾಕಾರರ ವಿರುದ್ಧ ಹೋರಾಟ ಮಾಡಬೇಕೆನ್ನುವ ಯುವ ಜನತೆಯ ಕನಸು ಚಾಲನೆಗೆ ಬರುವುದಕ್ಕಿಂತ ಮುಂಚೇನೇ ಟುಸ್ಸಾಗಿಬಿಟ್ಟಿತ್ತು. 

ಈ ಸುದ್ದಿ ಊರಲ್ಲಿ ಗುಲ್ಲಾಗುವುದಕ್ಕೆ ಬಹಳ ಸಮಯವೇನು ಹಿಡಿಯಲಿಲ್ಲ. ತಮ್ಮ ಮಕ್ಕಳು ರಜಾಕಾರರ ಕೈದಿಗಳಾಗಿದ್ದಕ್ಕೆ ಹಿರಿಯರು ಒಂದಿಷ್ಟು ಆರ್ಭಟಿಸಿದರು, ಚೀರಾಡಿದರು, ಒದರ್ಯಾಡಿದರು. ಕೊನೆಗೆ ಊರಿನ ಪ್ರಮುಖರೆಲ್ಲರೂ ಸೇರಿಕೊಂಡು ಮಸೀದಿಗೆ ಹೋಗಿ ರಜಾಕಾರರಿಗೆ ತಮ್ಮ ಮಕ್ಕಳನ್ನು ಜೇಲಿನಿಂದ ಬಿಡುಗಡೆಗೊಳಿಸಿ ಕರೆದುಕೊಂಡು ಬರಲು ವಿನಮ್ರವಾಗಿ ಮನವಿಯನ್ನು ಮಾಡಿಕೊಂಡರು. ಅವರ ವಿನಮ್ರ ಬೇಡಿಕೆಯನ್ನು ಮನ್ನಿಸಿದ ರಜಾಕಾರರ ನಾಯಕ ಒಂದು ವಾರದ ಜೇಲು ಶಿಕ್ಷೆಯನ್ನು ಅನುಭವಿಸಿದ ನಂತರ ಯುವಕರೆಲ್ಲರನ್ನೂ ಕರೆದುಕೊಂಡು ಬರುವುದಾಗಿ ಹೇಳಿದ. ಜೊತೆಗೆ ಮುಂದೆ ಅವರು ಹಾಗೇನಾದರೂ ಗುಂಪುಗಾರಿಕೆಯಲ್ಲಿ ತೊಡಗಿದರೆ ಅಲ್ಲೇ ಅವರನ್ನು ನಿರ್ದಾಕ್ಷಣ್ಯವಾಗಿ ಗುಂಡಿಕ್ಕಿ ಕೊಲ್ಲುವುದಾಗಿಯೂ ಬೆದರಿಸಿದ. ಹಾಗೇನೂ ಆಗದಂತೆ ನೋಡಿಕೊಳ್ಳುವುದಾಗಿ ವಚನವಿತ್ತು ಬಂದಿದ್ದರು ಊರಿನ ಪ್ರಮುಖರು. ರಜಾಕಾರ ನಾಯಕ ಹೇಳಿದಂತೆ ಊರಿನ ಹುಡುಗರನ್ನು ಒಂದು ವಾರದ ನಂತರ ಜೇಲಿನಲ್ಲಿ ಇಟ್ಟು ಬಿಡುಗಡೆ ಮಾಡಿ ಕಳುಹಿಸಿಕೊಟ್ಟರು.      

ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದು ವರ್ಷವಾಗುತ್ತ ಬಂದರೂ ಹೈದರಾಬಾದ್ ಸಂಸ್ಥಾನದ ಪ್ರದೇಶಗಳಿಗೆ ಸ್ವಾತಂತ್ರ್ಯವೆಂಬುದು ಕನಸಿನ ಮಾತಾಗಿತ್ತು. ರಜಾಕಾರರು ಊರಲ್ಲಿ ನಿತ್ಯ ಏನಾದರೂ ಒಂದು ಆತಂಕಕಾರಿ ಹೊಸ ಸುದ್ದಿಯನ್ನು ಹರಡುತ್ತಿದ್ದರು. `ನಮ್ಮ ನವಾಬ್ ಈಗಾಗಲೇ ಮದ್ರಾಸ್ ಪ್ರಾಂತ್ಯವನ್ನು ಕಬ್ಜ ಮಾಡಿಕೊಂಡಿದ್ದಾನೆ. ತುಸು ದಿನಗಳಲ್ಲಿ ಮುಂಬಯಿ ನಮ್ಮ ವಶಕ್ಕೆ ಬರುತ್ತದೆ. ಇಡೀ ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯದ ಮರಾಠವಾಡಾ ಜಿಲ್ಲೆಗಳು ನಮ್ಮ ಆಳ್ವಿಕೆಯಲ್ಲಿ ಇವೆ. ಇನ್ನೇನು ಆಗಷ್ಟ್ ಹದಿನೈದು 1948ರಂದು ನಮ್ಮ ನವಾಬ ದಿಲ್ಲಿಯ ಲಾಲ್ ಕಿಲ್ಲಾದಲ್ಲಿ ಹಿಂದುಸ್ಥಾನದ ಧ್ವಜವನ್ನು ಕಿತ್ತೊಗೆದು ನಮ್ಮ ಧ್ವಜವನ್ನು ಹಾರಿಸುತ್ತಾನೆ. ಇಡೀ ಹಿಂದುಸ್ಥಾನ ಮುಸ್ಲಿಂ ದೇಶವಾಗಿಬಿಡುತ್ತದೆ. ಇಡೀ ದೇಶದ ಹಿಂದುಗಳನ್ನು ಮುಸ್ಲಿಮರನ್ನಾಗಿ ಮಾಡುತ್ತೇವೆ. ನಿಮ್ಮ ಊರಿನ ಎಲ್ಲ ಹಿಂದು ಜನರನ್ನು ಮುಸ್ಲಿಮರನ್ನಾಗಿ ಮಾಡುತ್ತೇವೆ. ಪ್ರತಿಭಟಿಸಿದವರ ಸಂತಾನ ಹರಣ ಮಾಡಿ ಜೇಲಿಗೆ ದಬ್ಬುತ್ತೇವೆ. ಹೆಂಗಸರು ಯಾರಾದರೂ ಒದರ್ಯಾಡಿದರೆ ಅಂಥಹವರನ್ನು ಊರಿನ ಸಾರ್ವಜನಿಕ ಪ್ರದೇಶದಲ್ಲಿ ಬೆತ್ತಲೆಗೊಳಿಸಿ ಮಾನಭಂಗ ಮಾಡುತ್ತೇವೆ, ಸಾಮೂಹಿಕ ಅತ್ಯಾಚಾರವನ್ನೂ ಮಾಡುತ್ತೇವೆ ಇಲ್ಲವೇ ಕುತ್ತಿಗೆ ಕೊಯ್ದು ನಾಯಿ-ನರಿಗಳಿಗೆ ಎಸೆಯುತ್ತೇವೆ. ಹಟಮಾರಿ ಮಕ್ಕಳನ್ನು ಬೂಟುಗಾಲಿನಿಂದ ತುಳಿದು ಕೊಲ್ಲುತ್ತೇವೆ. ನಿಮ್ಮ ಅಂಗಡಿ, ಮನೆಮಾರುಗಳನ್ನು ದರೋಡೆ ಮಾಡುತ್ತೇವೆ. ದನಕರುಗಳನ್ನು ಕಸಾಯಿ ಕಾರ್ಖಾನೆಗೆ ದಬ್ಬುತ್ತೇವೆ. ನಿಮ್ಮ ಹೆಸರಿನಲ್ಲಿರುವ ಹೊಲ-ಮನೆ, ಆಸ್ತಿ-ಪಾಸ್ತಿಗಳನ್ನು ನಮ್ಮ ಹೆಸರಿಗೆ ಬದಲಾಯಿಸಿಕೊಳ್ಳುತ್ತೇವೆ' ಎಂದು ಹಾಗೆ, ಹೀಗೆ ಅಂತ ಭಯಾನಕ, ಎದೆ ನಡುಗಿಸುವ ಸುದ್ದಿಗಳನ್ನು ನಿತ್ಯವೂ ಊರಿನ ಓಣಿ ಓಣಿಗಳಲ್ಲಿ ಸಾರಿ ಸಾರಿ ಹೇಳುತ್ತಿದ್ದರು. ರಜಾಕಾರರು ಎಂಥಹ ನೀಚ ಕೆಲಸಕ್ಕೂ ಹೇಸುತ್ತಿರಲಿಲ್ಲವಾದ್ದರಿಂದ ಯಾರೊಬ್ಬರೂ ಕಮಕ್-ಕಿಮಕ್ ಎನ್ನದೇ ಬಾಯಿ ಮುಚ್ಚಿಕೊಂಡು ಮೂಕರಂತೆ ಬಂದಿದ್ದನ್ನು ಸುಮ್ಮನೇ ಅನುಭವಿಸುತ್ತಿದ್ದರು. ಕಣ್ಣಿದ್ದರೂ ಕುರುಡರಂತಾಗಿದ್ದರು. ಕಿವಿ ಇದ್ದರೂ ಕಿವುಡರಂತಾಗಿದ್ದರು. ಬಾಯಿ ಇದ್ದರೂ ಮೂಕರಂತಾಗಿದ್ದರು.     

ಹೀಗೇ ಕರಾಳ ದಿನಗಳು ಸರಿದು ಹೋಗತೊಡಗಿದ್ದವು. 1948 ಆಗಷ್ಟ್ ಹದಿನೈದು ಬಂದು ಹೋಯಿತು. ದಿಲ್ಲಿಯ ಕೆಂಪು ಕೋಟೆಯ ಮೇಲೆ ಹಿಂದಿನ ವರ್ಷದಂತೆ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರೂ ಅವರೇ ಧ್ವಜಾರೋಹಣ ಮಾಡಿದ್ದಲ್ಲದೇ ಪ್ರಜೆಗಳನ್ನುದ್ದೇಶಿಸಿ ಮಾತಾಡಿ ದೇಶದ ಏಕತೆ ಮತ್ತು ಐಕ್ಯತೆಗೆ ಪ್ರತಿಯೊಬ್ಬ ಪ್ರಜೆಯೂ ಶ್ರಮಿಸಬೇಕೆಂದು ಕರೆಕೊಟ್ಟರು. ದೇಶದ ಐಕ್ಯತೆಗೆ ಭಂಗ ತರುವ ವಿಷ ಜಂತುಗಳನ್ನು ಮಟ್ಟಹಾಕುವುದಾಗಿ ದೇಶದ ರಕ್ಷಣಾ ಮಂತ್ರಿಗಳಾದ ವಲ್ಲಭಭಾಯಿ ಪಟೇಲರು ಜನತೆಗೆ ಸಂದೇಶ ನೀಡಿದರು. ರಜಾಕಾರರು ಹೇಳಿಕೊಂಡಂತೆ ಹೈದರಾಬಾದ್ ಸಂಸ್ಥಾನದ ನವಾಬನ ಕರಾಮತ್ತು ಏನೂ ಕೆಲಸ ಮಾಡಿರಲಿಲ್ಲ. ಊರಿನ ಜನರು ಕಾದು ನೋಡುವ ತಂತ್ರಕ್ಕೆ ಒಗ್ಗಿಕೊಂಡರು. 
                    ****

ಊರಲ್ಲಿ ರಜಾಕಾರರ ಹಾವಳಿ ಮತ್ತಷ್ಟು ತೀವ್ರಗೊಂಡಿತು. ಕಿರಾಣಿ ಅಂಗಡಿಗಳನ್ನು ಲೂಟಿಮಾಡುವುದು, ರೈತರ ಮನೆಯಲ್ಲಿನ ಧವಸ-ಧಾನ್ಯಗಳನ್ನು ಕೊಂಡೊಯ್ಯುವುದು, ಶ್ರೀಮಂತರ ಮನೆಯಲ್ಲಿನ ನಗ-ನಾಣ್ಯಗಳನ್ನು ದೋಚುವುದು ಸಾಮಾನ್ಯವಾಗಿಬಿಟ್ಟಿತು. ಹರೆಯದ ಹೆಣ್ಣು ಮಕ್ಕಳ ಮಾನ ಹರಣ ಮಾಡುವುದು, ರಾತ್ರೋರಾತ್ರಿ ಕೆಳವರ್ಗದವರ ಮನೆಗೆ ನುಗ್ಗಿ ಗಂಡನ ಎದುರಿಗೇ ಹೆಂಡತಿಯ ಮೇಲೆ ಅತ್ಯಾಚಾರ ಎಸಗುವುದು ಅತಿಯಾಗತೊಡಗಿತು. ಊರಿನ ಜನರ ಹೊಟ್ಟೆಯೊಳಗಿನ ಸಿಟ್ಟು ರಟ್ಟೆಗೆ ಬರಲಿಲ್ಲ. `ಯಾವಾಗ ಏನು ಕೆಟ್ಟದಾಗುವುದೋ...?' ಎಂಬ ಭಯದ ವಾತಾವರಣದಲ್ಲಿ ಊರಿನ ಜನತೆ ಕೈಯಲ್ಲಿ ಜೀವ ಹಿಡಿದುಕೊಂಡು ದಿನಗಳನ್ನು ತಳ್ಳತೊಡಗಿದ್ದರು.

ಸಪ್ಟೆಂಬರ್ ಹದಿನೈದರಂದು ರಾಯಚೂರಿನಿಂದ ರಜಾಕಾರ ನಾಯಕ ಊರಿನ ಮಾಲಿಗೌಡ, ಪೋಲೀಸ್‍ಗೌಡ, ಕುಲಕರ್ಣಿ, ಶಾನುಭೋಗ, ದೇಸಾಯಿ, ಸಾಹುಕಾರ, ಪಟವಾರಿ ಮುಂತಾದವರನ್ನು ಕರೆಸಿ ಸಭೆ ಮಾಡಿದ. `ಹೈದರಾಬಾದಿನ ನಮ್ಮ ನಾಯಕನಿಗೆ ತತಕ್ಷಣ ಹತ್ತು ಸಾವಿರ ಹಣವನ್ನು ಕಳುಹಿಸಬೇಕಿದೆ. ನೀವೆಲ್ಲರೂ ಸೇರಿಕೊಂಡು ಊರಿನವರಿಂದ ಹತ್ತು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಕೊಡಬೇಕು. ನಿಮಗೆ ಮೂರು ದಿನಗಳ ಗಡುವು ಕೊಡುವೆ. ಅಷ್ಟರೊಳಗೆ ನೀವು ಹಣವನ್ನು ಜಮಾಯಿಸಿ ಕೊಡಬೇಕು. ಇಲ್ಲದಿದ್ದರೆ ಮೊದಲು ನಿಮ್ಮ ಮನೆಗಳನ್ನು ಲೂಟಿಮಾಡಬೇಕಾಗುತ್ತದೆ. ನಂತರ ಉಳಿದ ಗಣ್ಯರ ಮನೆಗಳ ಮೇಲೆ ದಾಳಿ ಮಾಡುತ್ತೇವೆ. ಅಡ್ಡ ಬಂದವರನ್ನು ಅಡ್ಡಡ್ಡ ಕತ್ತರಿಸಿಬಿಡುತ್ತೇವೆ. ಹುಷಾರ್! ಒಂದಿಷ್ಟು ಜನರನ್ನು ಜೇಲಿಗೆ ತಳ್ಳುತ್ತೇವೆ' ಎಂದು ಧಮಕಿ ಹಾಕಿದ. ಊರಿನಲ್ಲಿದ್ದ ರಜಾಕಾರ ನಾಯಕನಿಗೆ ಹಣವನ್ನು ತಂದು ರಾಯಚೂರಿಗೆ ತಲುಪಿಸುವ ಜವಾಬ್ದಾರಿ ವಹಿಸಿದ. `ಈಗಾಗಲೇ ನೀವು ನಮ್ಮಲ್ಲಿದ್ದುದೆಲ್ಲವನ್ನೂ ದೋಚಿದ್ದೀರಿ. ಅಷ್ಟು ಹಣವನ್ನು ಈಗ ನಾವು ಎಲ್ಲಿಂದ ತರಬೇಕು...?' ಎಂದು ಮಾಲಿಗೌಡ ರಾಗ ಎಳೆದ. `ಅದೊಂದೂ ಗೊತ್ತಿಲ್ಲ. ನಮಗೆ ಹಣ ಬೇಕು. ನಾವು ತಕ್ಷಣ ಹೈದರಾಬಾದಿಗೆ ರವಾನಿಸಬೇಕಿದೆ ಅಷ್ಟೇ. ಇಲ್ಲಾ ಅಂದರೆ ಎಲ್ಲರೂ ಸಾಯಲು ಸಿದ್ಧರಾಗಬೇಕು. ನಾಡದು ಇಲ್ಲಿಗೆ ಮೂರ್ನಾಲ್ಕು ಟ್ರಕ್ಕಿನಲ್ಲಿ ಸೈನಿಕರು ಬರುತ್ತಾರೆ. ಅವರ ಬಂದೂಕುಗಳು ನಿಮ್ಮ ಜೊತೆಗೆ ಹೋರಾಟಕ್ಕೆ ಇಳಿಯುತ್ತವೆ ಅಷ್ಟೇ' ಎಂದಿದ್ದ ಗಡಸು ಧ್ವನಿಯಲ್ಲಿ. ಮಾಮೂಲಿನಂತೆ ಅವನ ಕೈಯಲ್ಲಿದ್ದ ಬಂದೂಕಿನಿಂದ ಗುಂಡೊಂದು ಆಕಾಶದೆಡೆಗೆ ಹಾರಿ, `ಢಂ' ಎಂದು ಭಾರೀ ಶಬ್ದಮಾಡಿತ್ತು. ಅದೇ ದರ್ಪದಲ್ಲಿ ಅವನು ಟಕ್ ಟಕ್ ಅಂತ ಬೂಟುಗಾಲಿನ ಶಬ್ದದೊಂದಿಗೆ ತನ್ನ ಸಹಚರರ ಜೊತೆಗೆ ಹೊರಟು ಹೋಗಿದ್ದ. 

ಆಗ ಅಲ್ಲಿ ಉಳಿದವರು ಊರಿನ ಪ್ರಮುಖರು ಮತ್ತು ಜನತೆ. ತಮ್ಮ ತಮ್ಮೊಳಗೇ ಮಾತಾಡಿಕೊಳ್ಳತೊಡಗಿದರು. `ಅಷ್ಟು ಹಣವನ್ನು ಹೇಗೆ ಜೋಡಿಸುವುದು...?' ಎಂಬ ಅನಿಶ್ಚತೆಯಲ್ಲಿ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ಅಷ್ಟರಲ್ಲಿ ಪಟವಾರಿ ಶೇಷಪ್ಪ, `ಎಲ್ಲರೂ ಕೂಡಿ ಹೇಗೋ ಒಂದೈದು ಸಾವಿರ ರೂಪಾಯಿಗಳನ್ನು ಜಮಾಯಿಸಿ ನನ್ನ ಕೈಯಲ್ಲಿ ಕೊಡಿರಿ. ನಾನು ರಜಾಕಾರರಿಗೆ ಹೇಗೋ ಸಮಜಾಯಿಸಿ ಹೇಳಿ ಅಷ್ಟೇ ದುಡ್ಡನ್ನು ಕೊಟ್ಟು ಅಷ್ಟಕ್ಕೇ ಸರಿಮಾಡಿಕೊಳ್ಳಲು ಮನದಟ್ಟು ಮಾಡುವೆ' ಎಂದಾಗ ಎಲ್ಲರೂ ಮುಖ ಮುಖ ನೋಡಿಕೊಂಡರು. ಶೇಷಪ್ಪನ ಕೈಯಲ್ಲಿ ಹಣ ಕೊಡುವುದರ ಬಗ್ಗೆ ಅಲ್ಲಿದ್ದವರೆಲ್ಲರೂ ಸಹಮತಕ್ಕೆ ಬರಲಿಲ್ಲ. `ಹಾಗಾದರೆ ನಿಮ್ಮಿಷ್ಟ, ಅದು ನಿಮ್ಮ ಕರ್ಮ. ನಾನೇನು ಮಾಡುವುದಕ್ಕಾಗುತ್ತೆ? ಏನೋ ಸಹಾಯ ಮಾಡಲು ಪ್ರಯತ್ನಿಸಿದರೆ ನೀವೆಲ್ಲರೂ ತಲೆಗೊಂದರಂತೆ ಮಾತಾಡುತ್ತಿರುವಿರಿ' ಎಂದು ಕಡ್ಡಿ ತುಂಡುಮಾಡುವಂತೆ ಹೇಳಿ ದುರ್ದಾನ ತೆಗೆದುಕೊಂಡವನಂತೆ ಶೇಷಪ್ಪ ತನ್ನ ಮನೆಯ ಕಡೆಗೆ ಹೆಜ್ಜೆ ಹಾಕಿದ್ದ.        

ಸಪ್ಟೆಂಬರ್ ಹದಿನೆಂಟರಂದು ಎಂದಿನಂತೆ ಬೆಳಗಾಯಿತು. ಊರು ತಣ್ಣಗಿತ್ತು. ಬೆಳಗು ಮುಂಜಾನೆ ಮಸೀದೆಯಿಂದ ಮುಲ್ಲಾನ ಆಜಾನ್ ಧ್ವನಿ ಕೇಳಿ ಬರಲಿಲ್ಲ. ಊರಲ್ಲಿ ರಜಾಕಾರರ ಓಡಾಟವಿರಲಿಲ್ಲ. 

`ಇಂದು ನಮಗೇನು ಆಪತ್ತು ಕಾದಿದೆಯೋ...?' ಎಂಬ ಆತಂಕದಲ್ಲಿದ್ದ ಊರಿನ ಜನತೆ ಬೆಳಿಗ್ಗೆ ಒಂಭತ್ತು ಗಂಟೆಯವರೆಗೆ ಯಾರೊಬ್ಬರೂ ಮನೆಯಿಂದ ಹೊರಗೆ ಕಾಲಿಟ್ಟಿರಲಿಲ್ಲ. ಬೆಳಗಿನ ಹತ್ತು ಗಂಟೆಯ ಸಮಯ. ಒಬ್ಬೊಬ್ಬರೇ ಮನೆಯಿಂದ ಹೊರಗೆ ಬರತೊಡಗಿದರು. ಮಾಲಿಗೌಡ, ಪೋಲೀಸ್‍ಗೌಡ, ಕುಲಕರ್ಣಿ, ಶಾನುಭೋಗ, ಸಾಹುಕಾರ, ಊರಿನ ಇತರ ಪ್ರಮುಖರು ಅಲ್ಲದೇ ಇತರೆ ನೂರಾರು ಜನರು ಊರಿನ ಬಜಾರಿನ ಮಧ್ಯದಲ್ಲಿದ್ದ ವಿಶಾಲವಾದ ಬೇವಿನ ಕಟ್ಟೆಯಲ್ಲಿ ನೆರೆದಿದ್ದರು. ಪೋಲೀಸ್‍ಗೌಡ ತಳವಾರನನ್ನು ಮಸೀದೆಗೆ ಕಳುಹಿಸಿ ರಜಾಕಾರರ ಬಗ್ಗೆ ಮಾಹಿತಿ ತಿಳಿದುಕೊಂಡು ಬರಲು ಕಳುಹಿಸಿದ. ಮಸೀದಿಗೆ ಹೋಗಿ ಬಂದ ತಳವಾರ, `ಮಸೀದಿಯಲ್ಲಿ ಯಾವೊಬ್ಬ ರಜಾಕಾರನೂ ಇಲ್ಲ. ಅವರೆಲ್ಲ ಜಾಗ ಖಾಲಿ ಮಾಡಿರುವ ಹಾಗಿದೆ. ನಮ್ಮೂರಿನ ಮುಲ್ಲಾ ಸಾಬನೂ ಇಲ್ಲ' ಅಂತ ಹೇಳುವಷ್ಟರಲ್ಲಿ ಜೀಪೊಂದರ ಶಬ್ದವಾಯಿತು.

ನಿಜವಾಗಿ ಜೀಪೊಂದು ಊರಲ್ಲಿ ಬಂದಿತು. ಜೀಪಿನಲ್ಲಿದ್ದ ಅಧಿಕಾರಿಯೊಬ್ಬ ಜನರನ್ನುದ್ದೇಶಿಸಿ ಮಾತಾಡತೊಡಗಿದ. `ನಿನ್ನೆ ಹೈದರಾಬಾದ್ ನಿಜಾಮ್ ಭಾರತ ಸರಕಾರಕ್ಕೆ ಶರಣಾದ. ಸರದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ಸೈನಿಕರ ಕಾರ್ಯಾಚರಣೆ ನಡೆದಿದ್ದರಿಂದ ಹೈದರಾಬಾದ್ ನಿಜಾಮನ ಸೈನ್ಯ ದಿಕ್ಕಾಪಾಲಾಗಿ ಓಡಿಹೋಯಿತಲ್ಲದೇ ರಜಾಕಾರರ ದುರಾಳಿತವೂ ಕೊನೆಗೊಂಡಿತು. ನಮ್ಮ ಹೈದರಾಬಾದ್ ಸಂಸ್ಥಾನವೀಗ ಸ್ವತಂತ್ರಗೊಂಡಿದೆ. ನಮಗೀಗ ಬ್ರಿಟಿಷರ ಕಾಟವೂ ಇಲ್ಲ, ನಿಜಾಮನ ಕಿರಿಕಿರಿಯೂ ಇಲ್ಲ, ರಜಾಕಾರರ ದಾಂಧಲೆಯೂ ಇಲ್ಲ. ಗ್ರಾಮದ ಜನರೆಲ್ಲರೂ ನಿರ್ಭೀತಿಯಿಂದ ಮೊದಲಿನಂತೆ ಜೀವನ ನಡೆಸಬಹುದು. ಸ್ವಾತಂತ್ರ್ಯೋತ್ಸವದ ವಿಜಯೋತ್ಸವನ್ನು ಆಚರಿಸಿಕೊಳ್ಳಿರಿ. ನಾವು ಮುಂದಿನ ಊರುಗಳಿಗೆ ಸುದ್ದಿ ಮುಟ್ಟಿಸಬೇಕಿದೆ. ಹೊರಡುತ್ತೇವೆ' ಎಂದು ಹೇಳುವಷ್ಟರಲ್ಲಿ ಗಾಡಿ ಮುಂದೋಡಿತು. ಸಂತಸದ ಸುದ್ದಿಯನ್ನು ಕೇಳಿಸಿಕೊಂಡ ಜನತೆ ಕೇಕೆ ಹಾಕುತ್ತಾ ತಂಡೋಪತಂಡವಾಗಿ ಬಜಾರದಲ್ಲಿದ್ದ ಬೇವಿನ ಕಟ್ಟೆಯ ಸುತ್ತಮುತ್ತ ಸೇರತೊಡಗಿದರು. 
ಜನತೆ ಸಂತಸದ ಪರಾಕಾಷ್ಠೆಯಲ್ಲಿ, `ಬೋಲೋ ಭಾರತ್ ಮಾತಾಕಿ ಜೈ; ಬೋಲೋ ಮಹಾತ್ಮಾ ಗಾಂಧೀಜೀಕಿ ಜೈ; ಬೋಲೋ ಸರದಾರ್ ವಲ್ಲಭಭಾಯಿ ಪಟೇಲ್‍ಜೀಕಿ ಜೈ; ಬೋಲೋ ಜವಾಹರಲಾಲ್ ನೆಹರೂಜೀಕಿ ಜೈ; ಬೋಲೋ ಸುಭಾಷ್‍ಚಂದ್ರ ಬೋಸ್‍ಜೀಕಿ ಜೈ;' ಎಂದು ಕೂಗುತ್ತಾ ಸಂಭ್ರಮಿಸತೊಡಗಿದರು.   

ತುಸು ಹೊತ್ತಿನ ನಂತರ. `ಈ ಪಟವಾರಿ ಅನ್ನೋ ನಮ್ಮೂರಿನ ದೊಡ್ಡ ಮನುಷ್ಯ ಇದಾನಲ್ಲ, ಈತ ನಮ್ಮೆದುರಿಗೆ ನಮ್ಮಂತೆ ಮಾತಾಡುತ್ತಾ ರಜಾಕಾರರಿಗೆ ಸಹಾಯ ಹಸ್ತ ಒದಗಿಸುತ್ತಾ ಅವರ ಪುಂಡಾಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದ. ರಜಾಕಾರರೊಂದಿಗೆ ಶಾಮೀಲಾಗಿ ನಮ್ಮೂರಿನ ಜನರ ದಿನನಿತ್ಯದ ಚಟುವಟಿಕೆಗಳ ಬಗ್ಗೆ ರಹಸ್ಯವಾಗಿ ಮಾಹಿತಿ ಒದಗಿಸುತ್ತಿದ್ದ. ಈತನ ಮಾರ್ಗದರ್ಶನದಲ್ಲಿ ರಜಾಕಾರರಿಂದ ನಮ್ಮೂರಿನ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ, ಅನಾಚಾರ, ಮಾನಭಂಗಗಳಂಥಹ ಹೀನಾಯ ಕೆಲಸಗಳು ಎಗ್ಗಿಲ್ಲದೇ ನಡೆದವು. ಅಂಗಡಿಗಳ ಲೂಟಿ, ರೈತಾಪಿ ಜನರ ಹಗೇವುಗಳಲ್ಲಿನ ಧವಸ-ಧಾನ್ಯಗಳ ದರೋಡೆ ಎಲ್ಲವೂ ನಡೆದವು. ರಜಾಕಾರರ ದೌರ್ಜನ್ಯ, ದಬ್ಬಾಳಿಕೆ, ಅನಾಚಾರಗಳನ್ನು ಪ್ರತಿಭಟಿಸಲು ಮುಂದಾದ ನಮ್ಮ ಮೇಲೆ ಗುಂಡಿನ ಮಳೆ ಸುರಿಸುವುದಾಗಿ ಹೇಳಿ ಹೆದರಿಸುತ್ತಿದ್ದರು. 

ಊರಿನ ಯುವಕರು ರಜಾಕಾರರ ಪುಂಡಾಟಿಕೆಗಳನ್ನು ಹತ್ತಿಕ್ಕಲು ಸಭೆ ನಡೆಸಿ ಚರ್ಚಿಸಲು ಮುಂದಾದಾಗ ರಜಾಕಾರರು ಯುವಕರೆಲ್ಲರನ್ನೂ ಬಂಧಿಸಿ ರಾಯಚೂರು ಜೇಲಿಗೆ ಸೇರಿಸುವುದರಲ್ಲಿ ಯಶಸ್ವಿಯಾಗುವಂತೆ ಮಾಡಿದವನೇ ಈ ಪಟವಾರಿ. ಆ ದಿನ ಉದ್ದೇಶಪೂರ್ವಕವಾಗಿ ತನ್ನ ಮಗನನ್ನು ಯುವಕರ ಸಭೆಗೆ ಕಳುಹಿಸದೇ ಸಭೆಯ ಬಗ್ಗೆ ರಜಾಕಾರರಿಗೆ ಮಾಹಿತಿ ನೀಡಿ ಸಭೆಯಲ್ಲಿ ಹಾಜರಿದ್ದ ಹುಡುಗರನ್ನು ಜೇಲಿಗೆ ತಳ್ಳಿಸಿದ ಕುತಂತ್ರ ಈ ಮನುಷ್ಯನದೇ. ನನ್ನ ಮಾತಿನಲ್ಲಿ ತಪ್ಪಿದ್ದರೆ ಇವನನ್ನೇ ಕೇಳಿ ತಿಳಿದುಕೊಳ್ಳಿರಿ' ಎಂದು ಪೋಲೀಸ್‍ಗೌಡ ಹೇಳುತ್ತಿದ್ದಂತೆ ಊರಿನ ಜನರೆಲ್ಲರೂ ಪಟವಾರಿಯನ್ನು ಸುತ್ತುವರಿದು ಮನಸ್ಸಿಗೆ ತಿಳಿದಂತೆ ಪ್ರಶ್ನಿಸಿಸತೊಡಗಿದರು. ಪಟವಾರಿ ತನ್ನ ತಪ್ಪನ್ನು ಒಪ್ಪಿಕೊಂಡ. `ಈಗ ನೀವೇ ನಿರ್ಧರಿಸಿರಿ ಇವನಿಗೇನು ಶಿಕ್ಷೆ ಕೊಡಬೇಕೆಂದು...?' ಎಂದು ಗೌಡ ಎಂದು ಕೇಳುವಷ್ಟರಲ್ಲಿ ರೊಚ್ಚಿಗೆದ್ದ ಜನರು ಪಟವಾರಿ ಶೇಷಪ್ಪನನ್ನು ಬೇವಿನ ಮರಕ್ಕೆ ಕಟ್ಟಿಹಾಕಿದರು. ಶೇಷಪ್ಪನ ಕೊರಳಲ್ಲಿ ಚಪ್ಪಲಿ ಹಾರವನ್ನೂ ಹಾಕಿಬಿಟ್ಟರು. ಜನರ ಸಿಟ್ಟು ಅಷ್ಟಕ್ಕೇ ನಿಲ್ಲಲಿಲ್ಲ. ಒಂದಿಷ್ಟು ಜನರು ತಾವು ಮೆಟ್ಟಿದ್ದ ಚಪ್ಪಲಿಗಳಿಂದ ಶೇಷಪ್ಪನಿಗೆ ಮನಸೋ ಇಚ್ಛೆ ಥಳಿಸತೊಡಗಿದರು. `ನನ್ನದು ತಪ್ಪಾಗಿದೆ. ಕ್ಷಮಿಸಿಬಿಡಿರಿ. ನೀವು ಅದೇನೇ ಶಿಕ್ಷೆ ಕೊಟ್ಟರೂ ಅನುಭವಿಸುವೆ' ಎಂದು ಪಟವಾರಿ ದೀನನಾಗಿ ಬೇಡಿಕೊಳ್ಳತೊಡಗಿದ. ಕೊನೆಗೆ ಶಾನುಭೋಗನ ಮನವಿ ಮೇರೆಗೆ ಊರಿನ ಜನರು ಸುಮ್ಮನಿರಬೇಕಾಯಿತು. 
ಎಲ್ಲವನ್ನೂ ಮರೆತು ಊರಿನ ಜನರೆಲ್ಲರು ಸ್ವಾತಂತ್ರ್ಯೋತ್ಸವದ ವಿಜಯೋತ್ಸವ ಆಚರಿಸಲು ಮುಂದಾದರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ರಜಾಕಾರರು”

  1. Raghavendra Mangalore

    ರಜಾಕಾರರ ಹಾವಳಿ ಕೇಳಿದ್ದೆವು. ತಾವು ಮತ್ತೊಮ್ಮೆ ನೆನಪಿಸಿದಿರಿ. ಅಭಿನಂದನೆಗಳು ಸರ್

  2. JANARDHANRAO KULKARNI

    ರಜಾಕಾರರ ಹಾವಳಿ ಬಗ್ಗೆ ಹೆಚ್ಚಿನ ಕಥೆಗಳು ಬಂದಿಲ್ಲ. ನಿಮ್ಮ ಕಥೆ ಚನ್ನಾಗಿದೆ. ಅವರ ಕರಾಳ ಮುಖವನ್ನು ಬಯಲಿಗಿಟ್ಟಿದೆ. ನಿಮ್ಮ ನೀವೇದ್ಯ ಕಥಾ ಸಂಕಲನದ ‘1947 ಮತ್ತು 1948 ‘ ಕಥೆಯಂತೆ ರಜಾಕಾರರ ಹಾವಳಿ ಬಗ್ಗೆ ಈ ಕತೆಯಲ್ಲೂ ವಿವರ ಇದೆ.

  3. ಧರ್ಮಾನಂದ ಶಿರ್ವ

    ಭಾರತ ಸ್ವಾತಂತ್ರ್ಯಾ ನಂತರದ ರಜಾಕಾರ ಹಾವಳಿ ಕಥೆಯಲ್ಲಿ ಬಂದಂತಹ ಘಟನೆಗಳಿಗೆ ಸಾಕ್ಷಿಯಾಗಿದ್ದು ನಿಜ. ಜನ ಅವರ ಪೈಶಾಚಿಕ ಕೃತ್ಯಗಳಿಗೆ ಪ್ರತಿಭಟಿಸುವ ಶಕ್ತಿಯನ್ಮು ಕಳೆದುಕೊಂಡಿದ್ದರು. ನೋವನ್ನು ಮೂಕವಾಗಿ ಅನುಭವಿಸುತ್ತಿದ್ದರು.
    ಇಂತಹ ಸನ್ನಿವೇಶಗಳಲ್ಲಿ ಹೆಣ್ಣಿನ ಅಂಗಸೌಷ್ಠವದ ಅತಿಯಾದ ವರ್ಣನೆ, ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳನ್ನು ವೈಭವೀಕರಿಸಿ, ರಂಗುರಂಗಾಗಿ ಬರೆಯುವುದು ಎಷ್ಟು ಸರಿ? ನಾವು ಸರಸ, ಸಲ್ಲಾಪ, ರತಿಕ್ರೀಡೆಗಳೇ ನಮ್ಮ ಬರವಣಿಗೆಯ ಶಕ್ತಿ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter