ಪರಿಸರ ಬರೆಹಗಳ ಗುಚ್ಛ – ‘ಹೆಜ್ಜೆ ಊರುವ ತವಕ’

ಪಕ್ಷಿವೀಕ್ಷಣೆ ಮತ್ತು ಓದುವ ಹವ್ಯಾಸದೊಡನೆ ಪ್ರಾಕೃತಿಕ ವಿದ್ಯಮಾನಗಳತ್ತ ಕಣ್ಣು ಹಾಯಿಸಿದಾಗ ಲೇಖಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಆರಿಸಿದ ಮಾಧ್ಯಮವೇ ಬರೆವಣಿಗೆ. ಆ ಮೂಲಕ ಅನುಭವಗಳನ್ನು ಶಾಶ್ವತವಾಗಿ ದಾಖಲಿಸುವ ಪ್ರಯತ್ನವಾಗಿ ಪ್ರಾಣಿ-ಪಕ್ಷಿಗಳು, ಜಲಪಾತ, ನೀರಿನ ಮೂಲಗಳು, ಪರಿಸರದ ಕುರಿತಾದ ಬರೆಹಗಳನ್ನು ಒಳಗೊಂಡ ಕೃತಿ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ‘ಹೆಜ್ಜೆ ಊರುವ ತವಕ’.

‘ಅಜ್ಜಿ ಮನೆ, ಕೆಮರಾ ಹಾಗೂ ಬನದ ಹುಡುಗ’ ಎಂಬ ವಿಭಿನ್ನವಾದ ಮುನ್ನುಡಿಯೊಡನೆ, ಆಕರ್ಷಕ ಮುಖಪುಟ ಹಾಗೂ ಒಳಗಿರುವ ಮೂರು ಭಾಗಗಳಲ್ಲಿರುವ ಹದಿನೆಂಟು ಲೇಖನಗಳ ಮೂಲಕ ಮನಸ್ಸಿಗೆ ಮುದವನ್ನು, ಆಪ್ತತೆಯ ಭಾವವನ್ನು, ಪ್ರಕೃತಿಯ ಬಗೆಗಿನ ಅನುಪಮ ಕಾಳಜಿಯನ್ನು ಮೂಡಿಸುವಂತಹ ವಿಭಿನ್ನ ನೋಟವನ್ನು ಒಳಗೊಂಡಂತಹ ಕೃತಿಯಿದು.

ಹೆಜ್ಜೆ ಹೆಜ್ಜೆಗೂ ಬೆಳೆಯುತ್ತಾ, ತಾನೇ ಗಮನಿಸಿದ ಸಂಗತಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಾ, ಭಾಷೆಯನ್ನು ವಿಭಿನ್ನವಾಗಿ ಬಳಸಿಕೊಳ್ಳುತ್ತಾ, ಬರೆವಣಿಗೆಯ ವಿಶಿಷ್ಟ ದಾರಿಯನ್ನು ರೂಪಿಸಿಕೊಂಡು, ಕ್ಯಾಮರಾ ಹೆಗಲಿಗೇರಿಸಿ ಕಾಡು-ಹಳ್ಳಿ ಸುತ್ತಾಡುವ ಲೇಖಕ ಅಜ್ಜಿ ಮನೆಗೆ ಹೋದಾಗ, ನಾಗಬನದಲ್ಲಿ ಸುತ್ತಾಡುವಾಗ, ಜಲಪಾತದ ಸೌಂದರ್ಯ ಸವಿಯುವಾಗ, ತಮ್ಮದೇ ಮನೆಯ ಪಪ್ಪಾಯಿ ಮರಕ್ಕೆ ಹಕ್ಕಿಗಳು ಬಂದು ಕಣ್ಣರಳಿಸಿ ಕುಳಿತಾಗ, ತಾನು ಕಂಡ ಹಕ್ಕಿಗಳ ಬಗ್ಗೆ ಕುತೂಹಲದಿಂದ ತಿಳಿಯುತ್ತಾ ‘ಇದು ಮಲಬಾರ್ ಟ್ರೋಜನ್, ಇದು ಮಡಿವಾಳ ಹಕ್ಕಿ, ಇದು ಬೂದು ಮಂಗಟ್ಟೆ, ಇದು ಬಾಲದಂಡೆ ಹಕ್ಕಿ, ಇದು ಕಳ್ಳಿಪೀರ…’ ಹೀಗೆ ಒಂದೊಂದು ಹಕ್ಕಿಯ ಬಗೆಗೂ ಕುತೂಹಲಿಯಾಗುತ್ತಾ, ವಿವರಗಳನ್ನು ದಾಖಲಿಸುತ್ತಾ, ತಮ್ಮ ಅನುಭವಗಳನ್ನು ಬರೆಹದ ಸಾಲುಗಳಾಗಿ ಮೂಡಿಸುತ್ತಾ ಸಾಗಿದ ರೀತಿ ವಿಭಿನ್ನವಾಗಿದೆ.

ನುಡಿಚಿತ್ರ ಬರೆಹದ ರೂಪದಲ್ಲಿರುವ ಲೇಖನಗಳು ಕೆಮರಾದ ಮೂಲಕ ಓಡುವ ಮನಸ್ಸಿಗೆ ಪರಿಸರದ ವಿಚಾರಗಳನ್ನು ಜೊತೆಯಾಗಿಸಿದೆ. ಕೆಮರಾ ಹೊತ್ತು ಸುತ್ತುವ ಯುವಕರು ಕಡಿಮೆಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಪರಿಸರದ ವಿಚಾರಗಳ ಬಗೆಗೆ ಬರೆಯುವವರು ಕಾಣದೆ ಹೋಗುತ್ತಿರುವ ಸಂದರ್ಭದಲ್ಲಿ ಲೇಖಕರು ಉತ್ತಮ ಬರೆಹಗಳ ಮೂಲಕ ಹೊಸ ಛಾಪನ್ನಿತ್ತಿದ್ದಾರೆ. ಉತ್ತಮವಾದ ವಿಷಯಗಳನ್ನು ಆಯ್ದುಕೊಂಡು ತಮ್ಮದೇ ಆದ ಶೈಲಿಯಲ್ಲಿ ಪದಗಳನ್ನು ಬಳಸುತ್ತಾ, ಸಣ್ಣ ಸಣ್ಣ ಸಾಲುಗಳ ಮೂಲಕ ಸಹಜವಾಗಿ ಅಭಿವ್ಯಕ್ತಿಸುವ ರೀತಿ ಅತ್ಯಂತ ಸೊಗಸಾಗಿದೆ.

ಬರೆಹವು ಜನಪ್ರಿಯ ವಿಜ್ಞಾನ ಶೈಲಿಯಲ್ಲಿದ್ದು, ಕುತೂಹಲಕಾರಿ ಪಕ್ಷಿವೀಕ್ಷಣೆ, ಅವಲೋಕನ, ವೈವಿಧ್ಯಪೂರ್ಣ ಒಳನೋಟಗಳು, ಪರಿಸರದೊಂದಿಗಿನ ಸಂಬಂಧ, ಪರಿಸರ ಅವನತಿಯ ಬಗೆಗಿನ ಕಾಳಜಿ, ಕಾರಣಗಳು ಇವೆಲ್ಲವನ್ನೂ ವಿಶ್ಲೇಷಿಸುತ್ತಾ, ಪಕ್ಷಿಗಳ ಪಾರಿಭಾಷಿಕ ಹೆಸರುಗಳನ್ನು, ಸ್ಥಳೀಯ ಆಡುಭಾಷೆಯ ಹೆಸರುಗಳನ್ನು ಲೇಖನಗಳಲ್ಲಿ ಬಳಸಿರುವುದು ವಿಶೇಷವಾಗಿದೆ.

ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೋ’ ಕಾದಂಬರಿಯಲ್ಲಿ ಕಂಡುಬರುವ ಹಾರುವ ಓತಿಯ ಛಾಯಾಚಿತ್ರವನ್ನು ಸೆರೆಹಿಡಿದು, ಹಾರುವ ಓತಿಯ ಸಮಗ್ರ ಮಾಹಿತಿಯನ್ನು ನೀಡಿರುವುದು ವೈಶಿಷ್ಟ್ಯಪೂರ್ಣವಾಗಿದೆ. ಅನೇಕ ಪಕ್ಷಿಗಳ ವಿವರಣಾತ್ಮಕ ಚಹರೆ ಹಾಗೂ ನಡೆವಳಿಕೆಗಳ ದಾಖಲೆ ಇಲ್ಲಿದೆ. ಪಕ್ಷಿವೀಕ್ಷಣೆಗೆ ಬೇಕಾದ ಪೂರ್ವ ತಯಾರಿ, ಇರಬೇಕಾದ ಉಪಕರಣಗಳು, ಪರಿಸರವನ್ನು ಆಯ್ದುಕೊಳ್ಳುವ ರೀತಿ, ಎದುರಿಸಬಹುದಾದ ಸವಾಲುಗಳ ಚರ್ಚೆಯು ಆರಂಭಿಕ ಪಕ್ಷಿವೀಕ್ಷಕರಿಗೆ ಮಾದರಿಯನ್ನು ಒದಗಿಸುವಂತಿದೆ.

ಕೃತಿಯ ಮೊದಲನೆಯ ಭಾಗದಲ್ಲಿ ಕೆಮರಾ ಹಿಡಿದು ಹಕ್ಕಿಗಳನ್ನು ಸೆರೆಹಿಡಿಯಲು ಹೊರಟಾಗ ಗಮನಿಸಿದ ಪ್ರಾಕೃತಿಕ ವಿದ್ಯಮಾನಗಳ ಕುರಿತ ಬರೆಹವಿದ್ದು, ಎರಡನೆಯ ಭಾಗದಲ್ಲಿ ನಿಸರ್ಗದ ಚಾರಣದ ಅನುಭವಗಳನ್ನು ದಾಖಲಿಸುವಿಕೆ ಹಾಗೂ ಮೂರನೆಯ ಭಾಗದಲ್ಲಿ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ವಿಮರ್ಶಾತ್ಮಕ ಬರೆಹವಿದೆ.

ಅಜ್ಜಿ ಮನೆಯಲ್ಲಿ ಹಾರುವ ಓತಿ, ಮಧುರ ಧ್ವನಿಯ ಮಡಿವಾಳ ಹಕ್ಕಿ, ಒಂದೊಮ್ಮೆಗೆ ಪುಟ್ಟ ರಣರಂಗದಂತಾದ ನಮ್ಮ ಪರಿಸರ, ಗುಬ್ಬಚ್ಚಿ ಗಾತ್ರದ ಹಳದಿ ಹೂಗುಬ್ಬಿ, ತ್ರಿವರ್ಣೆ ಎಂಬ ಪಾತರಗಿತ್ತಿ, ಮಳೆಗಾಲದ ಪಕ್ಷಿವೈಭವ, ನೈಸರ್ಗಿಕ ಕೀಟನಾಶಕ ಸಣ್ಣ ಕಳ್ಳಿಪೀರ, ಪಕ್ಷಿಲೋಕದ ವಿಸ್ಮಯದ ಖನಿ ಬಾಲದಂಡೆ ಹಕ್ಕಿ, ಸಿರಿಮನೆ ಜಲಪಾತ, ಅಂಬಾತೀರ್ಥ, ಚೆಂಧಮಂಗಲಮ್ ವೆಟ್ ಲ್ಯಾಂಡ್ಸ್, ಜೊತೆಗೆ ಕಾನುಘಟ್ಟ, ಪ್ರಸ್ಥಾನ, ಕೆನ್ನಾಯಿಯ ಜಾಡಿನಲ್ಲಿ, ಮಲೆನಾಡಿನ ರೋಚಕ ಕಥೆಗಳು ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಬದುಕಿನ ಲೇಖನಗಳು ಛಾಯಾಚಿತ್ರಗಳೊಡಗೂಡಿ ಇಲ್ಲಿವೆ.

ಅಪರೂಪದ ಹಕ್ಕಿಯ ಛಾಯಾಚಿತ್ರವನ್ನು ಸೆರೆಹಿಡಿಯುವ ಸಾಹಸದಲ್ಲೂ ಯಶಸ್ವಿಯಾಗುವ ಲೇಖಕರು ಯಾವುದೋ ಹಕ್ಕಿಯ ಬೆನ್ನು ಹತ್ತಿದಾಗ ಗಮನಿಸಿದ ಹಾರುವ ಓತಿಯನ್ನು ಸೆರೆಹಿಡಿದ ಕ್ಷಣ ಲೇಖಕರ ಕೌಶಲ್ಯವನ್ನು ತೋರುತ್ತದೆ. ಒಟ್ಟಿನಲ್ಲಿ, ಪರಿಸರ ಮತ್ತು ಪರಿಸರದ ಜೊತೆಗೆ ಒಡನಾಟದ ಅನುಭವಗಳನ್ನು ಲೇಖನವನ್ನಾಗಿಸುವ ಮೂಲಕ ಎಲ್ಲರೂ ಕಂಡ ಪರಿಸರವನ್ನು ಅಕ್ಷರ ರೂಪದಲ್ಲಿ ದಾಖಲಿಸ ಹೊರಟ ವಿಭಿನ್ನ ಕೃತಿಯಿದು.

  • ಡಾ. ಮೈತ್ರಿ ಭಟ್, ವಿಟ್ಲ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter