ತಿಂಗಳ ಮೊದಲ ಭಾನುವಾರ ಸಂಜೆ ನಾಲ್ಕು ಘಂಟೆಗೆ ‘ ಜೈ ಹನುಮಾನ್ ‘ ಪಾರ್ಕಿನಲ್ಲಿ ” ಪ್ರತೀ ದಿನ ಟಿ ವಿ ಸೀರಿಯಲ್ ನೋಡುವ ಹೆಂಡತಿಯರಿಂದ ಗಂಡಂದಿರ ಮೇಲೆ ಆಗುವ ಬವಣೆಗಳು ” ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋದ ಕವಿ ಗುಂಡಣ್ಣ. ಅಲ್ಲಿ ಆಗಲೇ ಬಕ್ಕ ತಲೆಯ, ಪೀಚು ದೇಹ, ಗುಡಾಣ ಹೊಟ್ಟೆಯ ‘ ಮಾಲಕರು ‘ ಅದೇ ಮಧ್ಯಮ ವಯಸ್ಸಿನಿಂದ ಹಿರಿಯ ನಾಗರಿಕರಾಗಿ ಬಡ್ತಿ ಪಡೆಯಲು ಸನ್ನದ್ಧರಾದ ಒಂದು ತಂಡವೇ ಸಭೆಯಲ್ಲಿ ಉಪಸ್ಥಿತಿಯಿತ್ತು.
” ಹೆಂಡತಿಯಿಂದ ಶೋಷಣೆಗೊಳಗಾದ ಪತಿಗಳು ” ವೇದಿಕೆಯ ಜಿಲ್ಲಾ ಮಟ್ಟದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಸೊಳಕೇಶ್ ರಾವ್ ಅವರು ಸಭೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಲು ಮುಖ್ಯ ಅತಿಥಿ ಮತ್ತು ಕವಿ (ಸಾಹಿತಿ ಎನ್ನುವ ಆಪಾದನೆ ಹೊತ್ತ!) ಶ್ರೀ ಗುಂಡಣ್ಣ ಅವರನ್ನು ವೇದಿಕೆಯ ಮೇಲೆ ಬರಲು ವಿನಂತಿಸಿದರು. ಅಧ್ಯಕ್ಷರಾದ ಶ್ರೀ ಭಂಡೇಶಪ್ಪ ಅವರು ಕವಿ ಶ್ರೀ ಗುಂಡಣ್ಣನವರನ್ನು ಸಾದರವಾಗಿ ಸಭೆಗೆ ಆಹ್ವಾನಿಸಿ ಸಭಿಕರಿಗೆ ಪರಿಚಯಿಸಿದರು.
ಸುಮಾರು ಅರವತ್ತೈದು ವರ್ಷದ ಹಿರಿಯ ನಾಗರೀಕ ಶ್ರೀ ಪರಿಮಳಾಚಾರ್ ಅವರು ಹಾಡಿದ ‘ ಗಂಡು ಎಂದರೆ ಗಂಡು, ಭೂಪತಿ ಗಂಡು ‘ (ಗಂಡು ಕುರಿತ ಸಿನಿಮಾ ಜನಪ್ರಿಯ ಗೀತೆ!) ವನ್ನೇ ಪ್ರಾರ್ಥನಾ ಗೀತೆಯನ್ನಾಗಿ ಪರಿಗಣಿಸಿತು ನೆರೆದ ಸಭೆ. ನಂತರ ಒಂದಿಬ್ಬ ಅನುಭವಸ್ಥ ‘ ಗಂಡಸರು ‘(ಹೆಂಡತಿಯ ಅನುಪಸ್ಥಿತಿಯಲ್ಲಿ!) ತಾವು ಹೆಂಡತಿಯಿಂದ ಶೋಷಣೆಗೊಳಗಾದ ಬಗ್ಗೆ ತಮ್ಮ ಅನುಭವಾಮೃತವನ್ನು ಸಭೆಯಲ್ಲಿ ಹಂಚಿಕೊಂಡರು.
ಬಳಿಕ ಅಂದಿನ ಸಭೆಗೆ ಮುಖ್ಯ ಅತಿಥಿಯಾಗಿ ಬಂದ (ಸ್ವಯಂ!) ಜನಪ್ರಿಯ ಕವಿ ಗುಂಡಣ್ಣ ನೆರೆದ ಮಧ್ಯಮ ಮತ್ತು ಹಿರಿಯ ವಯಸ್ಕರಾದ ‘ ಗಂಡು ಸಂತತಿ ‘ ಯನ್ನು ಉದ್ದೇಶಿಸಿ ಹೆಂಡಂದಿರು ದಿನ ನಿತ್ಯದ ಸೀರಿಯಲ್ ವೀಕ್ಷಣೆ ತಮ್ಮ ಬದುಕನ್ನು ಹೇಗೆ ಬರ್ಬಾದ್ ಮಾಡುತ್ತದೆ ಎಂದು ತಮ್ಮ ಸ್ವಯಂ ಅನುಭವವನ್ನು ವಿಶದವಾಗಿ ಉದಾಹರಣೆಗಳೊಂದಿಗೆ ಸವಿಸ್ತಾರವಾಗಿ ಹೇಳಿದ. ಕವಿ ಗುಂಡಣ್ಣನ ಭಾಷಣದ ಮುಖ್ಯಾಂಶಗಳು ಈ ಕೆಳಗಿನಂತಿವೆ.
” ಈಚೆಗೆ ಮಧ್ಯ ವಯಸ್ಕರ ಕಿಟ್ಟಾಟದ ಮೂಲಕ ಮದುವೆಯಾದವರ ಸಮಸ್ಯೆಗಳನ್ನು ಎಳೆ ಎಳೆಯಾಗಿ ಚಿತ್ರಿಸಿದ ಧಾರವಾಹಿ ‘ ಅಮೃತ ಧಾರೆ ‘ ನಾಲ್ಕು ನೂರು ಎಪಿಸೋಡ್ ಮುಗಿಸಿ ಮುನ್ನುಗ್ಗುತ್ತಿದೆ. ಅದೇ ರೀತಿ ‘ ಜನನಿ ‘ ಸೀರಿಯಲ್ ಐದು ನೂರು ಸಂಚಿಕೆಗಳನ್ನು ಮುಗಿಸಿತು. ಅದನ್ನು ಹೆಚ್ಚಿನ ಭಾಗ ಮಹಿಳೆಯರೇ ನೋಡ್ತಾರೆ ಎನ್ನೋ ಕಾರಣಕ್ಕೆ ‘ ಜನನಿ ‘ ಎನ್ನುವ ಹೆಸರನ್ನು ಇಟ್ಟರೆಂದು ನಿಮಗೆಲ್ಲಾ ತಿಳಿದ ವಿಷಯ. ಟಿ ಎನ್ ಸೀತಾರಾಂ ಅವರ ‘ ಮುಕ್ತ ಮುಕ್ತ ‘ (ಇದಕ್ಕೆ ಮುಕ್ತಿಯೇ ಇಲ್ಲ!) ಸೀರಿಯಲ್ ಎಪಿಸೋಡುಗಳು ಈಗ ಸಾವಿರದ ಎರಡು ನೂರು ದಾಟಿವೆ. ಇದು ನಮ್ಮೆಲ್ಲ ಕನ್ನಡಿಗರ ದಾಖಲೆ ಮತ್ತು ಹೆಮ್ಮೆ. ಈ ಧಾರವಾಹಿ ಇಷ್ಟು ಜನಪ್ರಿಯತೆ ಪಡೆಯಲು ಕಾರಣೀಕರ್ತರು ದಿನ ನಿತ್ಯ ತಪ್ಪದೇ ನೋಡುವ ನಮ್ಮ ಮಹಿಳೆಯರೇ ಅಂತ ನಿಸ್ಸಂಶಯವಾಗಿ ಹೇಳಬಹುದು.
” ಹೆಂಗಸರ ಸೀರಿಯಲ್ ಹುಚ್ಚು ಕುರಿತು ನಾಲ್ಕೇ ನಾಲ್ಕು ಜೋಕುಗಳನ್ನು ಹೇಳಿ ನನ್ನ ಮಾತುಗಳಿಗೆ ವಿರಾಮ ಹಾಡುವೆ ” ಎಂದ ಗುಂಡಣ್ಣ. ಒಬ್ಬ ತುಂಬಾ ವಯಸ್ಸಾದ ಅಜ್ಜಿ ತನ್ನ ವೃದ್ಧಾಪ್ಯ ಗೆಳತಿಗೆ ಹೇಳಿದಳು ” ಈ ಸೀರಿಯಲ್ಲನ್ನು ನನ್ನ ಮದುವೆಯಾದ ಹೊಸತರಿಂದ ನೋಡುತ್ತಿರುವೆ. ಇದರ ಕೊನೆ ಎಪಿಸೋಡ್ ನೋಡಿ ಭಗವಂತನ ಪಾದ ಸೇರಬೇಕೆಂದಿರುವೆ. ಪಾಪ ನಿಮ್ಮ ಅಣ್ಣ ಈಗ ಮುಕ್ತವಾಯಗುತ್ತೆ ಆಗ ಮುಕ್ತಾಯವಾಗುತ್ತದೆ ಅಂತ ಕಾದು ಎದುರು ನೋಡಿ ನೋಡಿ ಕೊನೆಗೆ ಅವರೇ ಮೇಲೆ ಹೋಗಿಬಿಟ್ಟರು. ನನಗೆ ಬೇರೆ ಪ್ರತ್ಯೇಕ ಕೋರಿಕೆಗಳು ಅಂತ ಏನಿಲ್ಲ ಭಾಗೀರಥಮ್ಮ…ಇದೊಂದು ಸೀರಿಯಲ್ಲಿನ ಕೊನೆಯ ಎಪಿಸೋಡ್ ನೋಡಲೆಂದೇ ಇಲ್ಲಿಯವರೆಗೆ ಜೀವ ಗಟ್ಟಿ ಹಿಡಿದಿದ್ದೇನೆ ತಿಳಿಯಿತಾ…”
ಎರಡನೆಯದು. ಒಬ್ಬ ಬಾಲಕ ಪ್ರತಿ ನಿತ್ಯ ಸಂಜೆಯಲ್ಲಿನ ತಾಯಿಯ ಅನ್ಯಮನಸ್ಕತೆಯನ್ನು ಗಮನಿಸಿ ತನ್ನ ತಾಯಿಗೆ ಹೇಳುತ್ತಾನೆ ” ನಿನ್ನ ಮನಸಿಗೆ ಕಡಿವಾಣ ಹಾಕಿ ಇಷ್ಟವಾದ ಕೆಲಸ ಮಾಡದೇ ಇರಬೇಡಮ್ಮ… ಹೋಗು ಮೊದಲು ಸೀರಿಯಲ್ ನೋಡು. ಹೋಂ ವರ್ಕ್ ಬೇಕಾದರೆ ನಾಳೆ ಕೂಡಾ ಹೇಳಿಕೊಡಬಹುದು… ” ಎಂದು ತಾಯಿಯ ಮೇಲಿನ ಮಮತೆ ವ್ಯಕ್ತಪಡಿಸಿದ.
ಮೂರನೆಯ ಜೋಕು. ಒಬ್ಬ ಖೈದಿಗೆ ನ್ಯಾಯಾಲಯ ಉರಿ ಶಿಕ್ಷೆ ದಂಡನೆ ಹಾಕಿರುತ್ತದೆ. ಖೈದಿಯನ್ನು ನೇಣು ಕಂಬಕ್ಕೆ ಕರೆದುಕೊಂಡು ಬಂದು ” ನಿನ್ನ ಕಟ್ಟ ಕಡೆಯ ಆಸೆ ಏನು? ” ಎಂದು ಕೇಳುತ್ತಾರೆ ಜೈಲಿನ ಅಧಿಕಾರಿ. ಆ ಕಿಲಾಡಿ ಖೈದಿ ” ಮುಕ್ತ ಮುಕ್ತ ” ಸೀರಿಯಲ್ಲನ್ನು ಮೊದಲನೇ ಎಪಿಸೋಡಿನಿಂದ ಇಲ್ಲಿಯವರೆಗೆ ಪ್ರತಿದಿನಕ್ಕೊಂದರಂತೆ ನೋಡಬೇಕು ಎನ್ನುವುದೇ ನನ್ನ ಕೊನೆಯಾಸೆ ಸಾರ್ ” ಎಂದುಬಿಡುವುದೇ?
ಇನ್ನು ಕೊನೆಯ ಜೋಕ್. ಒಬ್ಬ ವಯಸ್ಸಾದ ಹೆಂಗಸಿನ ‘ ಎಕ್ಸಪೈರಿ ಡೇಟ್ ‘ ಮುಗಿದ ಕೂಡಲೇ ಯಮ ಲೋಕದಿಂದ ಇಬ್ಬರು ಯಮ ಭಟರು ಆಕೆಯ ಜೀವವನ್ನು ತಮ್ಮ ಲೋಕಕ್ಕೆ ಕರೆದೊಯ್ಯಲು ಭೂ ಲೋಕದ ಅವರ ಮನೆ ಮುಂದೆ ಬಂದರು. ಆಗ ಆಕೆ ತುಂಬಾ ಲೀನಳಾಗಿ ತನ್ನ ಇಷ್ಟದ ಸೀರಿಯಲ್ ನೋಡುತ್ತಿದ್ದಳು. ಒಬ್ಬ ಭಟ ” ಈಗ ಒಂದರ್ಧ ಘಂಟೆ ಬಳಿಕ ನಮ್ಮೊಂದಿಗೆ ಬರುತ್ತಾಳೆ. ಪಾಪ ಹೋಗಲಿ ಬಿಡು ನೋಡಲಿ… ಈ ಸೀರಿಯಲ್ ಪೂರ್ತಿ ಆದಮೇಲೆ ನಮ್ಮ ಕೆಲಸ ಮಾಡೋಣ ” ಎಂದು ಅನುಕಂಪ ವ್ಯಕ್ತಪಡಿಸಿದ. ಬಹಳ ಹೊತ್ತು ಕಾದು ಕಾದು ಸುಸ್ತಾಗಿ ಬಹಳ ಹೊತ್ತಿನ ಬಳಿಕ ಸಹೋದ್ಯೋಗಿಯಾದ ಇನ್ನೊಬ್ಬ ಭಟ ” ಅಯ್ಯೋ…ಅಯ್ಯಯ್ಯೋ… ಆಕೆಗ್ಯಾಕೆ ಅನುಮತಿ ನೀಡಿದೆ. ಆಕೆ ನೋಡ್ತಾ ಇರೋ ಸೀರಿಯಲ್ ಐವತ್ತು ಸಾವಿರ ಎಪಿಸೋಡಿನದ್ದು. ಈಗ ಇನ್ನೂ ಒಂದು ನೂರಷ್ಟೇ ಮುಗಿದಿವೆ! …ಅದು ಮುಗಿಯುವುದರೊಳಗೆ ನಾವಿಲ್ಲೇ ಸತ್ತು ಸಮಾಧಿ ಸೇರ್ತೀವಿ ಅಷ್ಟೇ! ” ಎಂದು ಕಿಡಿ ಕಾರಿದ ಮೊದಲ ಯಮಭಟನ ಮೇಲೆ!
ನೆರದ ಸಭಿಕರಿಂದ ಭರ್ಜರಿ ಕಾರತಾಡನ. ‘ ಜೋಕ್ಸ್ ಒನ್ಸ್ ಮೋರ್ ‘ ಎಂದು ಕೂಗಿದರು ಹಲವಾರು. ತಾನು ಇಲ್ಲಿಯವರೆಗೆ ವಾಚಿಸಿದ ನೂರಾರು ಕವಿತೆಗಳನ್ನು ಕೇಳಿದ ಕವಿ ಪ್ರೇಮಿಗಳು (ದುರದೃಷ್ಟವಂತರು!) ಒಮ್ಮೆಯೂ ಒನ್ಸ್ ಮೋರ್ ಎಂದು ಎನ್ನಲಿಲ್ಲ…ಆದರೆ ಒನ್ಸ್ ಮೋರ್ ಶಬ್ದ ಇಂದು ಕೇಳಿದ ಕವಿ ಗುಂಡಣ್ಣನ ಜನ್ಮ ಸಾರ್ಥಕ! ನಾಲ್ಕಾರು ದಿನಗಳ ಬಳಿಕ ಒಂದು ದಿನ… ” ಸಾವಿತ್ರಿ… ಶ್ರಾವಣ ಶುಕ್ರವಾರ ದಿನ ಈ ಸಂಜೆ ಸಹಾ ಅಳೋ ಕಾರ್ಯಕ್ರಮವೇನು?… ಈ ಸಂತಾಪದ ಸಂಗೀತಕ್ಕೆ ಕೊನೆಯೇ ಇಲ್ಲವೇನು? ” ಎಂದು ಮೆತ್ತಗೆ ಗದರಿದ ಗುಂಡಣ್ಣ ಹೆಂಡತಿಯನ್ನು ಟೀವಿಯಲ್ಲಿ ಬರುತ್ತಿರೋ ಸೀರಿಯಲಿನತ್ತ ಬೇಸರದಿಂದ ಒಮ್ಮೆ ದೃಷ್ಟಿ ಹಾಯಿಸಿ. ಗಂಡನ ಮಾತಿಗೆ ಎಳ್ಳಷ್ಟೂ ಬೆಲೆ ಕೊಡದೆ (ಎಂದೂ ಕೊಟ್ಟಿರಲಿಲ್ಲ!) ಸೀರೆ ಸೆರಗಿನಿಂದ ಕಣ್ಣೀರು ಒರೆಸುತ್ತಾ ಭಾವ ಪರವಶತೆಯಿಂದ ಸೀರಿಯಲ್ ನೋಡುವದನ್ನು ಮುಂದುವರೆಸಿದಳು ಸಾವಿತ್ರಮ್ಮ. ಟಿ ವಿ ಸೀರಿಯಲ್ಲಿನ ನಾಯಕಿಯನ್ನೇ ದೃಷ್ಟಿಸಿ ನೋಡುತ್ತಿದ್ದ ಸಾವಿತ್ರಮ್ಮನ ಮನಸು ಈಗ ದುಃಖದ ಕಡಲಾದದ್ದು ಸುಳ್ಳಲ್ಲ!…ಹುಚ್ಚು ಹುಡುಗಿ…ಆಕೆಗೆ ಎಷ್ಟೊಂದು ಕಷ್ಟಗಳು…ಸಮಸ್ಯೆಗಳು…
ಗಂಡನ ಶವದ ಮುಂದೆ ಕೂತು ಒಂದೇ ಸಮನೆ ದುಃಖಿಸಿ ದುಃಖಿಸಿ ಅಳುತಿದ್ದಾಳೆ. ” ಕಾಲೇಜಿನಲ್ಲಿ ಆರಂಭವಾದ ಅವರ ಅಮರ ಪ್ರೇಮ ಕಥೆ ಇಂದು ಗಂಡ (ನಾಯಕ) ನಡೆಸುತ್ತಿದ್ದ ಸ್ಕೂಟರಿಗೆ ವೇಗವಾಗಿ ಬಂದ ಅಪರಿಚಿತ ಲಾರಿ ಢಿಕ್ಕಿ ಹೊಡೆದು ಆತ ಹೆಣವಾಗುವವರೆಗಿನ ಪ್ರತೀ ಕ್ಷಣದ ನೆನಪು ಮಾಡಿಕೊಂಡು ಅಳುತ್ತಲೇ ಇದ್ದಾಳೆ ಮಧ್ಯದಲ್ಲಿ ಒಂದು ಗುಟುಕು ನೀರು ಸಹಾ ಕುಡಿಯದೇ… ಪಾಪ ಆಕೆಯ ದುಃಖವನ್ನು ಯಾರಿಂದಲೂ ನಿಲ್ಲಿಸಲಾಗುತ್ತಿಲ್ಲ…” ಎಂದು ಮತ್ತೊಮ್ಮೆ ಸೆರಗಿನಿಂದ ಕಣ್ಣುಗಳನ್ನು ಒತ್ತಿಕೊಂಡಳು ಸಾವಿತ್ರಮ್ಮ.
ಹೆಂಡತಿಯನ್ನು ನೋಡುತ್ತಿದ್ದ ಗಂಡ ಕವಿ ಗುಂಡಣ್ಣನಿಗೆ ಪಿತ್ತ ನೆತ್ತಿಗೇರಿತು. ” ಈಗ ಸರಿಯಾಗಿ ಒಂದು ವಾರವಾಯಿತು ಸತ್ತ ಶವವನ್ನು ಅಲ್ಲೇ ಅಂಗಾತ ಮಲಗಿಸಿ…ನಾಯಕಿ ಗಂಡನ ಮುಖ ನೋಡೋದು…ಮತ್ತೆ ಮತ್ತೆ ದುಃಖಿಸಿ ದುಃಖಿಸಿ ಅಳೋದು…ಸೀರಿಯಲ್ ಒಂದು ಇಂಚು ಸಹಾ ಮುಂದೆ ಸಾಗದೆ ಅಲ್ಲೇ ಬಂಡೆಯಂತೆ (ಕನಕಪುರದ ಬಂಡೆಯಲ್ಲ!) ಗಟ್ಟಿಯಾಗಿ ಕೂತಿದೆ ” ಎಂದು ಕ್ಷೀಣ ಸ್ವರದಲ್ಲಿ ಅರಚಿದ. ಎಂದಿನಂತೆ ಗಂಡನ ಮಾತನ್ನು ಕಿವಿಗೆ ಹಾಕಿಕೊಳ್ಳದ ಸಾವಿತ್ರಮ್ಮ ಸೆರಗನ್ನು ಬಾಯಿಗೆ ಅಡ್ಡ ಹಾಕಿ ಆಗಿಷ್ಟು ಈಗಿಷ್ಟು ಅಳುವ ಕಾರ್ಯಕ್ರಮ ಮುಂದುವರೆಸಿದಳು… ಊಟದ ಶಾಸ್ತ್ರದ ಮಧ್ಯೆ ಒಂದೆರಡು ತುತ್ತು ಬಾಯಿಗಿಟ್ಟುಕೊಂಡು ಮತ್ತೆ ನಾಯಕಿಯ ಕಷ್ಟ ನೆನಪಾಗಿ ತನಗರಿವಿಲ್ಲದೆ ಕಣ್ಣೀರು ಸುರಿಸತೊಡಗಿದಳು.
ಅದನ್ನು ನೋಡಿ ತಾನು ಅತಿಥಿಯಾಗಿ ಹೋದ ಕವಿಗೋಷ್ಠಿಗಳಲ್ಲಿ ನೂರಾರು ಕವಿಗಳ (ಅದರಲ್ಲೂ ಬಿಸಿ ರಕ್ತದ ಹೊಸ ಕವಿಗಳು!) ಕವಿತೆಗಳನ್ನು ಶ್ರವಣ ಮಾಡಿದ ತಪ್ಪಿನ ಪ್ರಾಯಶ್ಚಿತ್ತ ಎನ್ನುವಂತೆ ಸೀನಿಯರ್ ಕವಿ ಗುಂಡಣ್ಣ ಮುಖ ಕಿವುಚಿಕೊಂಡ. ಮಧ್ಯಾಹ್ನದಿಂದ ಶುರುವಾಗುವ (ಮನೆಹಾಳು!) ಧಾರಾವಾಹಿಗಳನ್ನು ಬಿಡುವಿಲ್ಲದೆ ನೋಡುತ್ತಾ ಅವುಗಳಲ್ಲಿನ ಪಾತ್ರಗಳು ತಾನೇ ಎನ್ನುವ ಭ್ರಾಂತಿಗೆ ಒಳಗಾಗುವಳು ಸಾವಿತ್ರಮ್ಮ. ಪಾತ್ರಗಳ ಪರಕಾಯ ಪ್ರವೇಶ ತನ್ನಲ್ಲಾಗಿ ತಾನೇ ನಟಿಸಿದ ಅನುಭವವಾಗುತ್ತಿತ್ತು ಸಾವಿತ್ರಮ್ಮನಿಗೆ. ಕವಿ ಗುಂಡಣ್ಣ ತನ್ನ ಆಪ್ತ ಸ್ನೇಹಿತರ ಮುಂದೆ ಫೋನಿನಲ್ಲಿ ಸಂಭಾಷಿಸುತ್ತಾ ” ಯಾವಾಗ ಆ ಬಾಡಿ ತೆಗಿತಾರೋ… ಮನೆಯಲ್ಲಿ ತನ್ನ ಹೆಂಡತಿಯ ಅಳು ಯಾವಾಗ ನಿಲ್ಲುತ್ತದೋ ಆ ಶಿವನೇ ಬಲ್ಲ ” ಎಂದು ಅವಲತ್ತುಕೊಂಡ. ಮರುಕ್ಷಣದಲ್ಲಿ ಜ್ಞಾನೋದಯಗೊಂಡ ಕವಿ ಗುಂಡಣ್ಣ ” ಈಕೆ ಬದಲಾಗೋದಿಲ್ಲ…ಹೇಳಿದ ಮಾತು ಕೇಳೋದಿಲ್ಲ… ಬರೀ ಬಾಯಿ ಜೋರು ಮಾಡಿ ಬದುಕುತ್ತಾಳೆ. ” ಹೀಗಂತ ಮನಸಿನಲ್ಲೇ ಮೆತ್ತಗೆ ಅಂದುಕೊಂಡ ಕವಿ ಗುಂಡಣ್ಣ. ಸಾವಿತ್ರಮ್ಮನನ್ನು ಮದುವೆಯಾದ ಬಳಿಕ ‘ ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು ‘ ಎನ್ನುವ ಘೋಷಣೆ ಒಮ್ಮೆಯೂ ಬಾಯಿಂದ ಹೊರ ಬರಲಾರದೆ ಅಲ್ಲೇ ಕರಗಿ ಹೋಯಿತು ಪಾಪ ಕವಿ ಗುಂಡಣ್ಣನಿಗೆ!
ಸಂಜೆ ‘ ಹಾಟ್ ಕಾಫಿ ಟೈಮ್ ‘ ನಲ್ಲಿ ಪಕ್ಕದ ಮನೆ ಪಂಕಜಮ್ಮನ ಜೊತೆ ಕಂಪೌಂಡ್ ಗೋಡೆ ಪಕ್ಕದಲ್ಲಿ ಶುರುವಾದ ‘ ಕಾಫಿ ಪೇ ಚರ್ಚಾ ‘ ರಾತ್ರಿ ‘ ಡಿನ್ನರ್ ಟೈಂ ‘ ಆಗುವವರೆಗೆ ನಡೆದಿರುತ್ತದೆ. ಇದು ಇಬ್ಬರಿಗೂ ಇಷ್ಟದ ದಿನಚರಿ. ಅಂದು ಸಹ ಹಿಂದಿನ ದಿನದ ಸೀರಿಯಲ್ಲಿನ ಎಪಿಸೋಡ್ ನಲ್ಲಿನ ನಾಯಕಿಯ ದುಃಖದ ಅಳುವನ್ನು ನೆನೆಸಿಕೊಂಡ ಇಬ್ಬರೂ ತುಂಬಾ ಕಣ್ಣೀರು ಹಾಕುತ್ತಾ ತಮ್ಮ ಸೀರೆಯ ಅಂಚಿನಿಂದ ಕಣ್ಣುಗಳನ್ನು ಆಗಾಗ್ಗೆ ಒಟ್ಟಾಗಿ ಒರೆಸಿಕೊಳ್ಳುತ್ತಿದ್ದರು. ಆ ಕ್ಷಣದಲ್ಲೇ ಗಂಡು ಜಾತಿಗೆ ಹೆಣ್ಣಿನ ಮೇಲೆ ಎಳ್ಳಷ್ಟೂ ಅನುಕಂಪವಿಲ್ಲದ ರಾಕ್ಷಸರು ಎನ್ನುವ ಗಟ್ಟಿ ನಿರ್ಣಯಕ್ಕೇ ಬಂದರು ಇಬ್ಬರೂ ಜಂಟಿಯಾಗಿ!
ಒಂದು ತಿಂಗಳ ಬಳಿಕ ಮಗಳ ಚೊಚ್ಚಲ ಹೆರಿಗೆ ಸಲುವಾಗಿ ಲಂಡನ್ ಗೆ ಹೋಗಲು ಸಿದ್ಧರಾದರು ಕವಿ ಗುಂಡಣ್ಣ ದಂಪತಿಗಳು. ವಿದೇಶಕ್ಕೆ ಸದ್ಯದಲ್ಲಿ ಹಾರಲಿದ್ದೇವೆ ಎನ್ನುವ ‘ ಬ್ರೇಕಿಂಗ್ ‘ ಸುದ್ದಿಯನ್ನು ನೂರಾ ಒಂದನೆಯ ಸಲ ಹೇಳಿದಳು ಸಾವಿತ್ತಮ್ಮ ಆಪ್ತ ಗೆಳತಿ ಪಂಕಜಮ್ಮನಿಗೆ. ” ಸೀರಿಯಲ್ ಒಳ್ಳೇ ಸಸ್ಪೆನ್ಸ್ ಘಟ್ಟದಲ್ಲಿ ಇದ್ದಾಗ ನೀವು ಲಂಡನ್ ಸಿಟಿಗೆ ಹೋಗುತ್ತಿರುವಿರಿ. ಅಲ್ಲಿ ಕನ್ನಡ ಧಾರಾವಾಹಿಗಳು ಬರುತ್ತವೋ ಇಲ್ಲವೋ ಯಾರನ್ನಾದರೂ ವಿಚಾರಿಸಿದ್ದೀರಾ? ” ಎಂದು ಕೇಳಿದಳು ಪಂಕಜಮ್ಮ. ” ಬರುತ್ತವೆ ಅಂತ ಕೇಳಿದ್ದೀನಿ.. ಬರದೆ ಇದ್ದರೆ ನಾನು ಸುಮ್ಮನೆ ಕೂಡುವ ಹೆಂಗಸು ಅಲ್ಲ ಅಂತ ನಿಮಗೆ ಗೊತ್ತಲ್ಲ… ” ಸಾವಿತ್ರಮ್ಮ ಗತ್ತಿನಿಂದ ನುಡಿದಳು.
” ಓಕೆ…ಹಾಗೆ ಹೇಳಿ ಮತ್ತೆ…” ಎಂದು ಶೇಕ್ ಹ್ಯಾಂಡ್ ಕೊಟ್ಟಳು ಪಂಕಜಮ್ಮ ಜೀವದ ಗೆಳತಿ ಸಾವಿತ್ರಮ್ಮನಿಗೆ… ಆಲ್ ದ ಬೆಸ್ಟ್ ಎನ್ನುವಂತೆ! ಲಂಡನ್ ಸಿಟಿಯನ್ನು ಅಲ್ಲಿಂದ ಇಲ್ಲಿಗೆ – ಇಲ್ಲಿಂದ ಅಲ್ಲಿಗೆ ಎನ್ನುವಂತೆ ದಿನವೂ ನೋಡಿ ಸುತ್ತುತ್ತಾ ಮಗಳ ಮನೆಯಲ್ಲಿ ಒಂದು ವಾರ ಕಳೆದಳು ಸಾವಿತ್ರಮ್ಮ. ನಂತರ ಮಗಳಿಗೆ ಒಂದು ದಿನ ” ಕನ್ನಡ ಚಾನೆಲ್ಸ್ ಸೆಟ್ ಮಾಡಿ ಕೊಡು ನಿಮ್ಮ ಟಿ ವಿ ಯಲ್ಲಿ…” ಎಂದು ಮಗಳನ್ನು ಕೇಳಿದಳು ಸಾವಿತ್ರಮ್ಮ.
” ಸಾರಿ ಅಮ್ಮ…ಅವು ಯಾವೂ ಇಲ್ಲಿ ಬರೋದಿಲ್ಲ. ನಾನು ‘ ಕ್ಯಾರಿ ‘ (ಗರ್ಭಿಣಿ) ಆದ ಬಳಿಕ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಚಾನೆಲ್ಸ್ ಎಲ್ಲವನ್ನೂ ತೆಗೆದುಬಿಟ್ಟಿದ್ದಾರೆ ನಿಮ್ಮ ಅಳಿಯಂದಿರು. ಮನೆ ಹಾಳು ಸೀರಿಯಲ್ಸ್ ಮೊದಲೇ ನೋಡಬಾರದು ಎಂದು ಕಂಡಿಷನ್ ಬೇರೆ ಹಾಕಿದ್ದಾರೆ. ಅವುಗಳಲ್ಲಿ ಬರುವ ಅತ್ತೆ ಸೊಸೆ ಜಗಳ, ಲೇಡಿ ವಿಲನ್ಸ್, ಮಾಸ್ಟರ್ ಪ್ಲ್ಯಾನುಗಳು, ಆಕ್ರಮ ಸಂಬಂಧಕ್ಕೆ ಒತ್ತು ಕೊಡುವ ಸೀನುಗಳು, ಸುಖಾ ಸುಮ್ಮನೆ ಅರ್ಥವಿಲ್ಲದೆ ಬರುವ ದೃಶ್ಯಗಳು, ಟೈಟಲ್ ಸಾಂಗುಗಳು, ಫೈಟಿಂಗ್ ಸೀನುಗಳು ಇತ್ಯಾದಿ…ಇತ್ಯಾದಿ ನೋಡಬಾರದು… ಅದರ ಬದಲಿಗೆ ಕಾಮೆಡಿ ಸೀನುಗಳನ್ನು, ರಾಜಕುಮಾರ್ – ವಿಷ್ಣುವರ್ಧನ್ – ಅನಂತ್ ನಾಗ್ ನಟಿಸಿದ ಹಳೆಯ ಕನ್ನಡ ಕೌಟುಂಬಿಕ ಸಿನಿಮಾಗಳನ್ನು, ಸತ್ಸಂಗ ಕಾರ್ಯಕ್ರಮಗಳನ್ನು, ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳನ್ನು, ದೇವರ ಹಾಡಿನ ದೃಶ್ಯಗಳನ್ನು ನೋಡು…ಅದು ನಿನ್ನ ಮತ್ತು ಹುಟ್ಟುವಿನ ಮಗುವಿನ ಆರೋಗ್ಯಕ್ಕೂ ಒಳ್ಳೆಯದು ಎಂದು ಟಿ ವಿ ಕೇಬಲ್ ಕನೆಕ್ಷನ್ ತೆಗೆಸಿಬಿಟ್ಟಿದ್ದಾರಮ್ಮ…” ಎಂದು ಸಮಜಾಯಿಷಿ ನೀಡಿದಳು ಮಗಳು ತಾಯಿಗೆ.
ಮಗಳ ಮಾತು ಕೇಳಿ ಕ್ಷಣ ಬರ ಸಿಡಿಲು ಬಡಿದಂತಾಗಿ ಒಂದು ಕ್ಷಣ ಅವಾಕ್ಕಾದಳು ಸಾವಿತ್ರಮ್ಮ. ” ದಿನಾನೂ ಟಿ ವಿ ಯಲ್ಲಿ ಸಿನಿಮಾ ನೋಡುತ್ತಿದ್ದ ನೀನೇ ಇಂತಹ ಮಾತುಗಳನ್ನು ಹೇಳುವುದು. ” ಎಂದು ಅಚ್ಚರಿ ವ್ಯಕ್ತಪಡಿಸಿದಳು ಸಾವಿತ್ರಮ್ಮ. ” ಹೊಟ್ಟೆಯಲ್ಲಿನ ಮಗುವಿಗೆ ಒಳ್ಳೆಯದು ಅಲ್ಲ ಎಂದು ಗೊತ್ತಾದ ಬಳಿಕವೂ ಅಂತಹ ಮೂರ್ಖ ಕೆಲಸ ಹೇಗೆ ಮಾಡಲಿಕ್ಕೆ ಆಗುತ್ತದೆ ಹೇಳು ಅಮ್ಮಾ…ನನಗೆ ಪ್ರತೀ ದಿನ ಏನೋ ಒಂದು ಕೆಲಸವಿರುತ್ತದೆ. ಬೇಕಿದ್ದರೆ ಕಾಮೆಡಿ ಸೀನುಗಳೋ ಇಲ್ಲಾ ಹರಟೆ ಮಲ್ಲರ ಮಾತುಗಳೋ ಅಥವಾ ದೇಶ ಭಕ್ತಿ ಗೀತೆಗಳೋ, ಭಾವ ಗೀತೆಗಳೋ ನೋಡಮ್ಮ… ಆಗ ನಿನ್ನ ಮನಸು ತುಸು ಹಗುರಾಗುತ್ತದೆ. ” ಎಂದು ನುಡಿದಳು ಮಗಳು ತಾಯಿಯನ್ನು ಉದ್ದೇಶಿಸಿ. ” ಮತ್ತೆ ಟಿ ವಿ ಸೀರಿಯಲ್ಸ್ ? ಅವುಗಳನ್ನು ನೋಡೋದು ಹೇಗೆ ” ತುಂಬಾ ಕಳವಳದಿಂದ ಪ್ರಶ್ನಿಸಿದಳು ಮಗಳನ್ನು ಸಾವಿತ್ರಮ್ಮ.
” ಅಮ್ಮಾ..ನಿನ್ನ ಅಳಿಯ ಟಿ ವಿ ಸೀರಿಯಲ್ ಅಂದರೆ ಎಗರಿ ಬೀಳ್ತಾರೆ. ಅದಕ್ಕಾಗಿ ನಾನು ನೋಡೋದಿಲ್ಲ. ಅಲ್ಲದೇ ಕೇಬಲ್ ಕನೆಕ್ಷನ್ ತೆಗೆಸಿ ಬಿಟ್ಟಿದ್ದಾರೆ. ಆದರೂ ಎಂದೂ ಮುಗಿಯದ, ಮುಗಿಯಲಾರದ ಸೀರಿಯಲುಗಳನ್ನು ಇಲ್ಲಿ ಯಾರೂ ನೋಡೋದಿಲ್ಲ. ” ಎನ್ನುವ ಮಗಳತ್ತ ಒಂದು ಕ್ಷಣ ಬೆರಗು ಕಣ್ಣುಗಳಿಂದ ನೋಡಿದರು ಸಾವಿತ್ರಮ್ಮ. ” ಮದುವೆಯಾದ ಕೂಡಲೇ ಈ ಹೆಣ್ಣು ಮಕ್ಕಳು ಎಷ್ಟು ಬದಲಾಗ್ತಾರೆ. ” ಎನ್ನುತ್ತಾ ಗಂಡನತ್ತ ದೃಷ್ಟಿ ಹಾಯಿಸಿದಳು. ಅಲ್ಲಿಯವರೆಗೆ ತಾಯಿ ಮಗಳ ಸಂಭಾಷಣೆ ಕೇಳಿ ಮುಸಿ ಮುಸಿ ನಗುತ್ತಿದ್ದ ಕವಿ ಗುಂಡಣ್ಣ ಇದ್ದಕ್ಕಿದ್ದಂತೆ ನ್ಯೂಸ್ ಪೇಪರ್ ಅಡ್ಡ ಹಿಡಿದು ಓದುವುದರಲ್ಲಿ ತಲ್ಲೀನವಾದಂತೆ ‘ ಕವಿ ಫೋಜ್ ‘ ಕೊಟ್ಟ.
ಸಾವಿತ್ರಮ್ಮ ದುಃಖದಿಂದ ಬೆಡ್ ರೂಮಿಗೆ ಓಡಿ ಹೋಗಿ ಹಾಸಿಗೆ ಮೇಲೆ ಮಲಗಿದಳು. ಮನಸೆಲ್ಲ ಗಜಿಬಿಜಿ…ದಿನಕ್ಕೆ ಕನಿಷ್ಠ ಪಕ್ಷ ಒಂದು ಸೀರಿಯಲ್ ಆದರೂ ನೋಡಲಾರದೆ ಹೇಗೆ ಇರೋದು…ರಾತ್ರಿ ನಿದ್ರೆ ಆದರೂ ಹೇಗೆ ಬರುತ್ತದೆ… ಇಂತಹ ನಿರ್ಜೀವ ಜೀವನಕ್ಕೆ ಏನಾದರೂ ಅರ್ಥವಾದರೂ ಇದೆಯೇ?… ತಾನು ತುಂಬಾ ಇಷ್ಟ ಪಡುವ ಸೀರಿಯಲ್ ‘ ಎಂದೂ ಮುಗಿಯದ ಕಥೆ ‘ ಯ ಹೀರೋಯಿನಳು ಗಂಡ ಸತ್ತ ದುಃಖದಲ್ಲಿದ್ದಾಳೆ. ಆ ಯಾತನೆಯನ್ನು ಭರಿಸಲಾಗದೆ ನಿದ್ರೆ ಮಾತ್ರೆಗಳ ಬಾಟಲಿಯ ಮೇಲೆ ಪ್ರತೀ ದಿನ ಕೈ ಹಾಕುತ್ತಾಳೆ… ಮತ್ತೇನೋ ನೆನಪಾಗಿ ಹಿಂದೆ ಸರಿಸುತ್ತಾಳೆ. ಇದೇ ನಡೆದಿದೆ ಕಳೆದ ಹತ್ತು ದಿನಗಳ ಎಪಿಸೋಡುಗಳಲ್ಲಿ.. ಆಕೆ ನಿದ್ರೆ ಮಾತ್ರೆಗಳನ್ನು ನುಂಗುವ ಪ್ರಯತ್ನ ನಿರಂತರ ಮಾಡುತ್ತಾ ಕೊನೆಗೊಂದು ದಿನ ಗಟ್ಟಿ ಮನಸು ಮಾಡಿ ನಿದ್ರೆ ಮಾತ್ರೆಗಳನ್ನು ನುಂಗಿದಳು. ಮರು ದಿನ ಆಕೆ ಏಳದಿದ್ದಾಗ ಆಕೆಯನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ ಅಡ್ಮಿಟ್ ಮಾಡಿದರು ಆಕೆಯ ಪೋಷಕರು.
ದೇವರೇ, ಮುಂದೆ ಏನಾಯ್ತೋ ಗೊತ್ತಿಲ್ಲ…ಅದನ್ನು ನೆನೆಸಿಕೊಂಡರೆ ಸಾಕು ಮೈಯೆಲ್ಲ ಜುಂ ಎಂದು ಏಕ್ ದಂ ತಲೆ ಸುತ್ತಿದಂತಾಗಿ ಸ್ವಲ್ಪ ಟೀ ಆದರೂ ಕುಡಿಯೋಣ ಎಂದು ಅಡುಗೆ ಮನೆಗೆ ಹೋದಳು ಸಾವಿತ್ರಮ್ಮ. ” ಅಮ್ಮಾ ನಾನು ಮಾಡಿ ತರುತ್ತೇನೆ…ನೀನು ಏನೂ ಮಾಡದೇ ಸುಮ್ಮನೆ ಟಿ ವಿ ಮುಂದೆ ಕೂತು ಸಿನಿಮಾ ನೋಡು ಸಾಕು…” ಎಂದು ಮಗಳು ಕಡಕ್ ಚಾಯ್ ಮಾಡಿಕೊಂಡು ತಂದು ತನಗೊಂದು ತಾಯಿಗೊಂದು ಕಪ್ ಕೊಟ್ಟು ಟಿ ವಿ ಮುಂದೆ ಕೂತಳು ಮಗಳು. ಹೆಸರಿಗಷ್ಟೇ ಸಾವಿತ್ರಮ್ಮ ಸಿನಿಮಾ ನೋಡುತ್ತಿದ್ದರೂ ನಿಜವಾದ ಆಸಕ್ತಿ, ಕೂತೂಹಲ ಎಲ್ಲ ತಾನು ಸದ್ಯ ನೋಡಲಾಗದ ಸೀರಿಯಲ್’ ಎಂದೂ ಮುಗಿಯದ ಕಥೆ ‘ ಯ ಮೇಲೆ ಇತ್ತು.
ಸ್ವಲ್ಪ ಹೊತ್ತು ಒಬ್ಬಳೇ ನಿಟ್ಟುಸಿರು ಹಾಕಿದಳು. ಮನಸಲ್ಲೇ ಚಡಪಡಿಸಿದಳು. ಅಂಗಾತದ ಮೇಲೆ ತಿರುಗುತ್ತಿದ್ದ ಫ್ಯಾನಿನತ್ತ ದೃಷ್ಟಿಸಿ ನೋಡಿದಳು. ಗಂಡ ಕವಿ ಗುಂಡಣ್ಣ ಮತ್ತು ಆತನ ಸಾಹಿತ್ಯದ ಮೇಲೆ ವಿನಾಕಾರಣ (ಕಾರಣ ಬೇಕಿಲ್ಲ) ರೇಗಿದಳು (ಬೈಸಿಕೊಳ್ಳಲು ಅಷ್ಟು ಬೇಗ ತನ್ನ ಗಂಡನಲ್ಲದೆ ಬೇರೆ ಯಾವ ಪ್ರಾಣಿ ಸಿಗಬೇಕು!). ಇದೆಲ್ಲಾ ಸೀರಿಯಲ್ ಎಫೆಕ್ಟ್ ಅಂತ ಮಗಳಿಗೆ ಗೊತ್ತಾಯ್ತು. ಆದರೆ ತಾನು ಏನೂ ಮಾಡುವ ಹಾಗಿಲ್ಲ. ಗಂಡನ ಆದೇಶ ಹಾಗಿತ್ತು. ಅನ್ಯಮನಸ್ಕಳಾಗಿ ಇಳಿ ಸಂಜೆಯಿಂದ ಏನೋ ಒಂದು ಕಳೆದುಕೊಂಡ ರೀತಿಯ ಹೆಂಡತಿಯ ವರ್ತನೆ ನೋಡಿದ ಕವಿ ಗುಂಡಣ್ಣನಿಗೆ ಗಾಬರಿ ಆಗಲಿಲ್ಲ… ಆತನಿಗಿದು ಆಗಲೇ ಅಭ್ಯಾಸವಾಗಿತ್ತು. ಮಧ್ಯಾನ್ಹ ಊಟ ಸಹಾ ಮಾಡದೆ ಮಂಕಾಗಿ ಶೂನ್ಯದತ್ತ ದೃಷ್ಟಿ ಹರಸುತ್ತಾ ಕೂತಳು. ” ನನ್ನನ್ನು ಸ್ವದೇಶಕ್ಕೆ ನಾಳೆಯೇ ಕಳಿಸಿಬಿಡಿ. ಟಿ ವಿ ಯಲ್ಲಿ ದಿನ ನಿತ್ಯ ಸೀರಿಯಲ್ ನೋಡಲಾರದೆ ನಾನು ಇಲ್ಲಿರಲಾರೆ. ಅದು ನನ್ನ ಕೈಯಿಂದ ಆಗುತ್ತಿಲ್ಲ. ನೀವು ಬಾಣಂತನಕ್ಕೆ ಬೇಕಾದರೆ ಬೇರೆ ಏನಾದರೂ ಏರ್ಪಾಟು ಮಾಡಿಕೊಳ್ಳಿ…” ಎಂದು ಮೆದು ಸ್ವರದಲ್ಲಿ ಮಾತನಾಡುತ್ತಾ ಕಣ್ಣು ಚಕ್ರ ಬಂದಂತಾಗಿ ಧೊಪ್ಪನೆ ಕೆಳಕ್ಕೆ ಬಿದ್ದಳು ದಪ್ಪನೆಯ ಆಕೃತಿಯ ಒಡತಿ ಸಾವಿತ್ರಮ್ಮ.
ಹೆಂಡತಿ ಗಾಬರಿಯಿಂದ ತನ್ನ ತಾಯಿಯು ಬಿದ್ದ ಸುದ್ದಿ ಫೋನ್ ಮಾಡಿ ಹೇಳಿದ ಕೂಡಲೇ ಅಳಿಯ ಓಡೋಡಿ ಬಂದ. ತಡಮಾಡಿ ಬರುವ ಸಾಹಸ ಮಾಡಲಿಲ್ಲ. ಕಾರಣ ಕುಸಿದು ಬಿದ್ದದ್ದು ತನ್ನ ತಾಯಿ ಅಲ್ಲ ಹೆಂಡತಿಯ ತಾಯಿ! ಮನೆಯ ವೈದ್ಯರಿಗೆ ಫೋನ್ ಮಾಡಿ ಕರೆಸಿದ. ಅವರು ಬಂದು ” ಬಿ ಪಿ ಚೆಕ್ ಮಾಡಿದೆ…ಸ್ವಲ್ಪ ಹೆಚ್ಚಾಗಿದೆ. ನಿಜ ಹೇಳಬೇಕೆಂದರೆ ಅಂತಹ ಗಾಬರಿಯಾಗುವಂತಹದ್ದು ಏನೂ ಇಲ್ಲ, ಆದರೆ ಏನೋ ಒಂದು ಅಂಶ ಅವರು ಮನಸಿಗೆ ತುಂಬಾ ಹಚ್ಚಿಕೊಂಡಿದ್ದಾರೆ ” ಎಂದು ‘ ಸಿನಿಮಾ ‘ ಗಳಲ್ಲಿ ಬರುವ ಟೈ ಧರಿಸಿದ ಲೆದರ್ ಬ್ಯಾಗ್ ಹಿಡಿದು ಬರುವ ಕನ್ನಡಕ ಹಾಕಿದ ವಯಸ್ಸಾದ ಸ್ಪುರದ್ರೂಪಿ ಡಾಕ್ಟರಿನಂತೆ ಕೂಲಾಗಿ ಒಂದು ಡೈಲಾಗ್ ಹೇಳಿ…ಮತ್ತೆ ಮುಂದುವರೆಸಿ ” ಅವರು ಏನು ಮಾಡಿದರೆ ಪ್ರಶಾಂತವಾಗಿ ಇರಲು ಸಾಧ್ಯವೋ ಅದನ್ನು ಮಾಡಲು ಬಿಟ್ಟು ಬಿಡಿ. ಈಗ ಅವರ ಆರೋಗ್ಯ ಮುಖ್ಯ.. ಇಲ್ಲವೆಂದರೆ ನಿಮಗೇ ಹೆಚ್ಚು ಸಮಸ್ಯೆ…ಯೋಚನೆ ಮಾಡಿ ” ಎಂದು ಹಿತವಚನ ಕೊಟ್ಟು ರಾತ್ರಿಗೆ ಕೊಡಲು ಒಂದೆರಡು ಮಾತ್ರೆಗಳನ್ನು ಬರೆದು ಕೊಟ್ಟು ಹೋದರು.
ಇಡೀ ರಾತ್ರಿಯೆಲ್ಲಾ ನಿದ್ದೆ ಇಲ್ಲದೆ ಒದ್ದಾಡಿದರು ಸಾವಿತ್ರಮ್ಮನ ಮಗಳು ಮತ್ತು ಅಳಿಯ. ತನ್ನ ಹೆಂಡತಿಯ ಆರೋಗ್ಯ ಮತ್ತು ಹೆರಿಗೆ ಸರಿಯಾಗಿ ಆಗಬೇಕೆಂದರೆ ಒಂದು ಕೆಲಸ ತಪ್ಪದೇ ಮತ್ತು ಕೂಡಲೇ ಮಾಡಬೇಕೆಂಬ ಅಚಲ ನಿರ್ಧಾರಕ್ಕೆ ಬಂದ. ಜೊತೆಗೆ ಮನೆಯ ವಾತಾವರಣ ಸಹಾ ಹದಗೆಡದೆ ನೋಡುವ ಸಂಪೂರ್ಣ ಜವಾಬ್ದಾರಿ ಆತನ ಮೇಲಿತ್ತು. ವಿದೇಶಕ್ಕೆ ಭಾರತದಿಂದ ಬಂದ ಸ್ತ್ರೀ ಪ್ರತಿನಿತ್ಯ ಟಿ ವಿ ಸೀರಿಯಲ್ ನೋಡುತ್ತಾ ನೆಮ್ಮದಿಯಿಂದ ಇರಬೇಕು. ಆಗ ಮಾತ್ರ ಮನೆ ನೆಮ್ಮದಿಯ ನಂದಗೋಕುಲವಾಗಿರುತ್ತದೆ. ಮುಂಜಾನೆ ಎದ್ದಕೂಡಲೇ ಮೊದಲು ಎಲ್ಲ ಕೆಲಸ ಬಿಟ್ಟು ಟಿ ವಿಗೆ ಡಿಶ್ ಕನೆಕ್ಷನ್ ಕೊಡಿಸಿದ. ಅಷ್ಟೇ ಅಲ್ಲ…ಕನ್ನಡ ಸೀರಿಯಲ್ಸ್ ಬರುವಂತೆ ಮಾಡಿದ.
ಕನ್ನಡ ಸೀರಿಯಲ್ ಅದರಲ್ಲೂ ‘ ಎಂದೂ ಮುಗಿಯದ ಕಥೆ ! ಯ ‘…ಮುಂದುವರೆದ ಭಾಗದ ಇಂದಿನ ಎಪಿಸೋಡಿನಲ್ಲಿ ನಾಯಕಿ ಮಾತನಾಡುವ ಶಬ್ದ ಕೇಳಿ ಅತ್ತೆ ಬೆಡ್ ರೂಮಿನಿಂದ ತಾಯಿ, ಗೋ ಮಾತೆಯನ್ನು ಕಂಡ ಪುಟ್ಟ ಆಕಳು ಕರುವಿನಂತೆ ಹಾಲಿನತ್ತ ಓಡೋಡಿ ಬಂದಳು ಸಾವಿತ್ರಮ್ಮ. ಮುಖದಲ್ಲಿ ಮಂದಹಾಸ….ಮುಷ್ಠಿಯಿಂದ ಗೆಲುವಿನ ಸಂಕೇತ. ಪಕ್ಕದಲ್ಲಿದ್ದ ಪತಿ ಕವಿ ಗುಂಡಣ್ಣ ತಲೆ ಚಚ್ಚಿಕೊಂಡ. ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುವರೆಗೆ ಮಾತ್ರ ನೀರು ಎನ್ನುವ ನಾಣ್ಣುಡಿ ನೆನಪಾಗಿ ಕುರ್ಚಿಯಲ್ಲಿ ಕುಸಿದು ಕೂತ!
*
9 thoughts on “ಎಂದೂ ಮುಗಿಯದ ಕಥೆ!”
ಎಂದೂ ಮುಗಿಯದ ಕಥೆ, ವಿಡಂಬನಾತ್ಮಕ ಲೇಖನ ಉತ್ತಮವಾಗಿದೆ. ಟೀವಿ ಧಾರಾವಾಹಿಗಳ ಹುಚ್ಚು ಹೆಂಗಸರಿಗೆ ಅಷ್ಟೇ ಅಲ್ಲ ಕೆಲವು ಗಂಡಸರಿಗೂ ಇದೆ. ಪ್ರಪಂಚ ಮರೆತು ಧಾರಾವಾಹಿಗಳಲ್ಲಿ ಮುಳುಗಿರುತ್ತಾರೆ.
ಧನ್ಯವಾದಗಳು
ವಿಡಂಬನಾ ಬರಹ ಸೊಗಸಾಗಿದೆ. ಟಿವಿ ಸೀರಿಯಲ್ ನೋಡುವ ಮಹಿಳೆಯರ ಮನಸ್ಥಿತಿಯನ್ನು ಬರಹ ತೆರೆದಿಟ್ಟಿದೆ. ಅಭಿನಂದನೆಗಳು
ಧನ್ಯವಾದಗಳು
ಧಾರಾವಾಹಿ ನೋಡುವ ಹೆಂಗಸರನ್ನು ಗುರಿಯಾಗಿಸಿಕೊಂಡ ವಿಡಂಬನೆ ವಾಸ್ತವ ಘಟನೆಗಳೊಂದಿಗೆ ನಿಮ್ಮ ವಿಶಿಷ್ಟ ಶೈಲಿಯಲ್ಲಿ ವಿನೋದಭರಿತವಾಗಿದೆ ಸರ್.ಅಭಿನಂದನೆಗಳು ಸರ್ 💐💐🙏🏻
ಟಿವಿ ಸೀರಿಯಲ್ ನೋಡುವ ಹವ್ಯಾಸವನ್ನು ಎಳೆಎಳೆಯಾಗಿ ಬಿಡಿಸಿದ್ದಾರೆ. ಕೇವಲ ಕನ್ನಡದವಷ್ಟೇ ಅಲ್ಲ ಹಲವರು ಬಹುಭಾಷಾ ವಿಷಾರಾದರು. ಟೈಂಟೇಬಲ್ ಹೊಂದಿಸಿಕೊಳ್ಳುತ್ತಾರೆ. ವಿಡಂಬನೆ ತುಂಬ ಚನ್ನಾಗಿದೆ. ಹೇಗೂ ತಮ್ಮ ಕನ್ನಡ ಚಾನಲ್ ಹಾಕಿಸಿಕೊಂಡು ಜೈಕಾರ ಹಾಕಿದ್ದಾರೆ. ಅಭಿನಂದನೆಗಳು.
ಧನ್ಯವಾದಗಳು ಮೇಡಂ
ಅಕಸ್ಮಾತ್ ಟಿ.ವಿ.ಧಾರಾವಾಹಿಗಳನ್ನು ಯಾವುದೋ ಒಂದು ದಿನ ನೋಡದೆ ಇದ್ದರೇ ಅಂದು ಅಸಮಾಧಾನದ ಹೋಗೆ ಆಡುತ್ತಲೆಯೇ ಇರುತ್ತದೆ ಮತ್ತು ನಾವೇನಾದರೂ ಕಳೆದುಕೊಂಡೆವೇನೋ ಎನ್ನೋ ಹಾಗೆ ಭ್ರಮೆ ಉಂಟಾಗುತ್ತದೆ. ಇದು ಯಾರ ಪ್ರೇರಣೆಯಿಂದ ಮೂಡಿದ್ದು ಅಲ್ಲ. ಆದರೂ, ನಮ್ಮ ಸುತ್ತಲೂ ಪರಿ ಭ್ರಮಣೆ ಮಾಡುತ್ತಲೇ ಇರುತ್ತದೆ. ಹಾಗಾಗಿ, ಶ್ರೀಯುತ ಮಂಗಳೂರು ರಾಘವೇಂದ್ರ ಇದೇ ವಸ್ತು ಸ್ಥಿತಿ ಮೇಲೆ ಸ್ವಾರಸ್ಯಕರವಾಗಿ ಮುದವಾಗುವಂತೆ ಮೂಡಿಸಿ ನಮ್ಮೆಲ್ಲರ ಮನ ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. 🌹🌹: ಬಿ.ಟಿ.ನಾಯಕ್, ಬೆಂಗಳೂರು.
ಧನ್ಯವಾದಗಳು