ಒಂದು ಅಸಾಧಾರಣ ಕೃತಿ ‘ನೂರು ಕಾದಂಬರಿಗಳ ವಿಮರ್ಶೆ’

ಒಂದು ಅಸಾಧಾರಣ ಕೃತಿ’ ನೂರು ಕಾದಂಬರಿಗಳ ವಿಮರ್ಶೆ ‘ ಡಾ. ಜನಾರ್ದನ ಭಟ್ ಅವರ 100ನೆಯ ಕೃತಿ, ಅಪೂರ್ವ ಸಾಧನೆ.

ಶ್ರೀರಾಮಪ್ರಕಾಶನ ಮಂಡ್ಯ., ಸಂಪರ್ಕ: 9448930173

ಡಾ. ಜನಾರ್ದನ ಭಟ್ ಅವರು ಸಾಂಪ್ರತ ನಮ್ಮ ನಾಡಿನ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು.ಅವರು ಕತೆಗಾರರಾಗಿ, ಕಾದಂಬರಿಕಾರರಾಗಿ, ಅತ್ಯುತ್ತಮ ಅನುವಾದಕರಾಗಿಯೂ ಮಿಂಚಿದವರು. ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಡಾ ಭಟ್ ಅವರದು ಬಹುಧಾನಕ ಪ್ರತಿಭೆ. ಇದೀಗ ಬೆಳಕು  ಕಂಡಿರುವ ಕಾದಂಬರಿ ಮಾಲೆ ಅವರ ನೂರನೆಯ ಕೃತಿ ಎಂಬುದು ಸಂತೋಷದ ಅಭಿಮಾನದ ಸಂಗತಿ.

ಡಾ. ಬಿ. ಜನಾರ್ದನ ಭಟ್ ಅವರು ನಮ್ಮ ನಾಡಿನ ನಾಮಾ0ಕಿತ ಲೇಖಕರಲ್ಲಿ ಒಬ್ಬರು. ಸೃಜನ ಸೃಜನೇತರ ಈ ಎರಡೂ ಪ್ರಕಾರಗಳಲ್ಲೂ ಸಮಾನ ಪ್ರತಿಭೆ, ಪ್ರಭುತ್ವವನ್ನು ಮೆರೆದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ಆಂಗ್ಲ ಸಾಹಿತ್ಯವನ್ನು ಓದಿ, ಬೋಧಿಸಿಯೂ ಕನ್ನಡದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯಲು ಅವಿರತ ಪ್ರಯತ್ನಿಸುತ್ತಾ ಬಂದಿದ್ದಾರೆ. ಮಾತು ಮತ್ತು ಕೃತಿಗಳ ನಡುವೆ ವಿರೋಧಾಭಾಸ ಎದ್ದು ಕಾಣುವ ಇವತ್ತಿನ ಸಂದರ್ಭದಲ್ಲಿ ಅವರು ಒಬ್ಬ ಅಪರೂಪದ ವ್ಯಕ್ತಿಯಾಗಿ, ಲೇಖಕರಾಗಿ, ವಿಮರ್ಶಕರಾಗಿ, ಬಹು ಶ್ರುತ ವಿದ್ವಾಂಸರಾಗಿ ನಮ್ಮ ಗಮನ ಸೆಳೆಯುತ್ತಾರೆ. ಕತೆ, ಕಾದಂಬರಿ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ, ಗ್ರಂಥ ಸಂಪಾದನೆ, ಜೀವನ ಚರಿತ್ರೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿ ನೂರು ಕೃತಿಗಳನ್ನು ರಚಿಸಿರುವ ಡಾ. ಭಟ್ ಅವರದು ಸಾಂಪ್ರತ ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಛಾಪು.

ಡಾ. ಜನಾರ್ದನ ಭಟ್ ಅವರದು ನಾನಾ ಬಗೆಯ ವ್ಯಕ್ತಿತ್ವ.  ಅವರದು ಬಿಡುವರಿಯದ, ದಣಿವರಿಯದ ಓದು ಹಾಗೂ ಬರವಣಿಗೆ. ನಮ್ಮ ಹಿಂದಿನ ತಲೆಮಾರಿನ ವಿದ್ವಾಂಸ ಕವಿಗಳಲ್ಲಿರುವಂತೆ ಆಳವಾದ ಚಿಂತನೆ-ದರ್ಶನಗಳಿಂದ, ವಿಚಾರ ವಿಮರ್ಶೆಗಳಿಂದ ಕೂಡಿರುವ ಅವರ ಕೃತಿಗಳು ಆನೇಕ ದೃಷ್ಟಿಯಿಂದ ನಮ್ಮ ಗಮನಸೆಳೆಯುತ್ತವೆ. ಅವರದು ಸೂರ್ಯನೇಮೀ ಕನ್ನಡ ಕಾಯಕ. ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲು, ಸಮೃದ್ಧಗೊಳಿಸಲು ಅವರು ನಿರಂತರವಾಗಿ ಶ್ರಮಿಸುತ್ತಾ ಬಂದಿರುವುದು ಉಲ್ಲೇಖನೀಯ ಅಂಶ. ನಮ್ಮ ಸಾಹಿತ್ಯ  ಶಕ್ತಿವತ್ತಾಗುವ ಪರಿಸರವನ್ನು ನಿರ್ಮಿಸಲು ಅವರು ಮಹತ್ವದ ಯೋಗದಾನವನ್ನು ನೀಡಿದ್ದಾರೆ. ಜಾಗತಿಕ ಸಾಹಿತ್ಯವನ್ನು ಓದಿ ಅನುಭವಿಸಿ ಅಲ್ಲಿನ ವೈವಿಧ್ಯಮಯ ಅನುಭವವನ್ನು ಕನ್ನಡ ಸಹೃದಯರಿಗೆ ಭಾಷಾಂತರದ ಮೂಲಕ ಮೊಗೆ ಮೊಗೆದು ಕೊಟ್ಟ ಶ್ರೇಯಸ್ಸು ಡಾ.ಜನಾರ್ದನ ಡಾ. ಭಟ್ ಅವರಿಗೆ ಸಲ್ಲುತ್ತದೆ.

ಡಾ. ಭಟ್ ಅವರು ವ್ಯಕ್ತಿಯಾಗಿಯೂ, ಸಾಹಿತಿಯಾಗಿಯೂ ಸಾಕಷ್ಟು ಹೆಸರು ಮಾಡಿದವರು. ಸೃಜನಶೀಲ ಲೇಖಕರೂ ಬಹುಶ್ರುತ ವಿದ್ವಾಂಸರೂ ಆಗಿರುವ ಅವರ ಬರವಣಿಗೆಯಲ್ಲಿ ವೈವಿಧ್ಯತೆ ಹಾಗೂ ಪ್ರಯೋಗಶೀಲತೆ ಎದ್ದು ಕಾಣುವ ಅಂಶ. ಸಾಹಿತ್ಯ ನಿರ್ಮಿತಿ ಹಾಗೂ ಕಟ್ಟುವ ಕೈಂಕರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿರುವ ಡಾ. ಭಟ್ ಅವರ ಕನ್ನಡ ಪರಿಚಾರಿಕೆ ನಾಡಿಗೆ ಮಾದರಿಯಾಗಿದೆ. ಅವರ ಸಾಹಿತ್ಯ ಸೇವೆ ವೈವಿಧ್ಯಮಯವೂ ವಿಶಿಷ್ಟವೂ ಆಗಿರುವುದು ವಿಶೇಷ. ಒಬ್ಬ ಉತ್ತಮ ಸೃಜನಶೀಲ ಬರಹಗಾರನಲ್ಲಿ ಇರಲೇಬೇಕಾದ ಒಳ್ಳೆಯ ಜೀವನ ದರ್ಶನವನ್ನು ನಾವು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ನೂರು ವೈವಿಧ್ಯಮಯವಾದ ಕೃತಿಗಳನ್ನು ರಚಿಸಿರುವ ಅವರು ಸಾಂಪ್ರತ ಕನ್ನಡದ ಮೇಲ್ಪಂಕ್ತಿಯ ಬರಹಗಾರ, ಸಾಹಿತಿ. ಅವರ ಕೃತಿಗಳ ಸಂಖ್ಯೆ, ಗುಣ ಸತ್ವ, ಸಾರ ಎಲ್ಲ ದೃಷ್ಟಿಗಳಿಂದಲೂ ಮೇಲ್ದರ್ಜೆ ಯದಾಗಿವೆ. ಸಾಹಿತ್ಯ ವಿಮರ್ಶೆಯನ್ನು ಸಾಂಸ್ಕೃತಿಕ ಹೊಣೆಗಾರಿಕೆಯಾಗಿ ಸ್ವೀಕರಿಸಿ ಆ ದಿಸೆಯಲ್ಲಿ ಅವರು ಅಹರ್ನಿಶಿ ಬರವಣಿಗೆಯನ್ನು ಮಾಡುತ್ತಾ ಬಂದಿದ್ದಾರೆ ಎಂಬುದಕ್ಕೆ ಅವರ ನೂತನ ಕೃತಿ, ನೂರನೆಯ ಗ್ರಂಥ ಕಾದಂಬರಿ ಮಾಲೆಯೇ ಸಾಕ್ಷಿ.

ಕನ್ನಡ ಭಾಗ್ಯವಂತ ಸಾಹಿತ್ಯ, ರಾಷ್ಟ್ರಮಟ್ಟದಲ್ಲಿ ಅದಕ್ಕಿರುವ ಸ್ಥಾನಮಾನ ಬಹು ದೊಡ್ಡದು ಎಂಬುದಾಗಿ ನಾಡಿನ ಹಿರಿಯ ಸಾಹಿತಿ ಹಾಮಾನಾ ಅವರು ಹೇಳಿರುವ ಮಾತಿನಲ್ಲಿ ತಥ್ಯವಿದೆ. ಹೊಸಗನ್ನಡ ಸಾಹಿತ್ಯ ಸಾಕಷ್ಟು ಶ್ರೀಮಂತವೂ ವೈವಿಧ್ಯಮಯವೂ ಆಗಿದೆ. ಇಪ್ಪತ್ತನೆಯ ಶತಮಾನ ಕನ್ನಡ ಸಾಹಿತ್ಯದ ಮತ್ತೊಂದು ಸುವರ್ಣಯುಗ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾದಂಬರಿ ಸಾಹಿತ್ಯ ಪ್ರಕಾರಕ್ಕೆ ವಿಶಿಷ್ಟವಾದ ಸ್ಥಾವಿದೆ. ಇಂದಿಗೂ ಕಾದಂಬರಿ ನಮ್ಮ ಕಾಲದ ಶಕ್ತಿಯುತ ಸಾಹಿತ್ಯ ಸಾಧನವಾಗಿರುವುದು ವಿಶೇಷ.

ಇಂಗ್ಲೀಷ್ ಸಾಹಿತ್ಯದ ಪ್ರಭಾವಕ್ಕೆ ಕನ್ನಡ ಒಳಗಾಗುವ ಮುನ್ನವೇ ಕಾದಂಬರಿ ಎನ್ನಬಹುದಾದ ಮೂರು ಕೃತಿಗಳು ರಚಿತವಾಗಿದ್ದವು ಎಂಬ ಅಭಿಪ್ರಾಯವಿದೆ. ಯಾದವನ ‘ಕಲಾವತೀ ಪರಿಣಯ ‘(೧೮೧೫), ಮುಮ್ಮಡಿ ಕೃಷ್ಣರಾಜರ ‘ಸೌಗಂಧಿಕಾ ಪರಿಣಯ’ ಮತ್ತು ಕೆಂಪುನಾರಾಯಣನ ‘ಮುದ್ರಾಮಂಜೂಷ’ (೧೮೨೩) ಇವೇ ಈ ಮೂರು ಕೃತಿಗಳು.

ಸಂಸ್ಕೃತದಲ್ಲಿರುವ ಬಾಣ ಭಟ್ಟನ ಕಾದಂಬರಿಯನ್ನು ತುರಮುರಿಯವರು ೧೯ ನೆಯ ಶತಮಾನದಲ್ಲಿ ಕನ್ನಡಕ್ಕೆ ಅನುವಾದಿಸಿ ‘ಕಾದಂಬರೀ ಕಾವ್ಯದ ಹೊಸಗನ್ನಡ ಗದ್ಯರೂಪ’, ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಕತೆ, ನಿರೂಪಣೆ ವರ್ಣನಾ ಕೌಶಲ್ಯ, ಶೈಲಿ ಮತ್ತು ರಸಾನುಭವದ ದೃಷ್ಟಿಯಿಂದ ಕಾದಂಬರಿ  ಅತ್ಯಂತ ಜನಪ್ರಿಯವಾಯಿತು. ಹೀಗೆಯೇ ಮುಂದುವರಿದು ಸಂಸ್ಕೃತದ ಕಾದಂಬರಿ ಕಾವ್ಯದಂತೆ ರಮ್ಯವಾದ ಎಲ್ಲ ಕೃತಿಗಳಿಗೂ ಕಾದಂಬರಿ ಎಂಬ ನಾಮಾಂಕಿತವೇ ಉಳಿಯಿತು ಎಂಬುದಾಗಿ ತ.ಸು. ಶಾಮರಾಯ, ಶ್ರೀನಿವಾಸ ಹಾವನೂರ ಮೊದಲಾದವರು ಈಗಾಗಲೇ ಗುರುತಿಸಿದ್ದಾರೆ.

1899 ರಲ್ಲಿ ಗುಳವಾಡಿ ವೆಂಕಟರಾಯರು ಬರೆದ ಇಂದಿರಾ ಬಾಯಿ ಅಥವಾ ಸದ್ಧರ್ಮ ವಿಜಯ ಕನ್ನಡದ ಪ್ರಥಮ ಸ್ವತಂತ್ರ ಸಾಮಾಜಿಕ ಕಾದಂಬರಿ ಪ್ರಕಟವಾಗಿ ನೂತನ ಶಕೆ ಆರಂಭವಾದುದು ಈಗ ಇತಿಹಾಸ. ಭಾರತವಲ್ಲದೇ ದೇಶ ವಿದೇಶಗಳಲ್ಲೂ ಇವತ್ತಿಗೂ ಸಹ ಕಾದಂಬರಿ ಒಂದು ಜನಪ್ರಿಯ ಸಾಹಿತ್ಯ ಪ್ರಕಾರವೇ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಹಳ ಹಿಂದೆಯೇ ಡಿ. ಎಚ್. ಲಾರೆನ್ಸ್ ಕಾದಂಬರಿ ಜೀವನದ ಏಕೈಕ ಉಜ್ವಲ ಪುಸ್ತಕ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಅವಲೋಕನೀಯವಾಗಿದೆ. ಹೆನ್ರಿ ಜೇಮ್ಸ್ ನ ಪ್ರಕಾರ ಸಾಹಿತ್ಯ  ಪ್ರಕಾರಗಳಲ್ಲೆಲ್ಲ ಅತ್ಯಂತ ಸ್ವತಂತ್ರವಾದುದು, ಅತ್ಯಂತ ಸ್ಥಿತಿಸ್ಥಾಪಕ ಗುಣವುಳ್ಳದ್ದು, ಅತ್ಯಂತ ಪ್ರಚಂಡವಾದುದು ಕಾದಂಬರಿ ಪ್ರಕಾರ. 

ಎಲ್ಲ ಸಾಹಿತ್ಯಗಳಲ್ಲಿ ಕಾದಂಬರಿ ಈಚೆಗೆ ಕಾಣಿಸಿಕೊಂಡ ಪ್ರಕಾರ, ಆದರೆ ವಿಶಿಷ್ಟವಾಗಿ ಅದ್ಭುತವಾಗಿ ಬೆಳೆದ ಪ್ರಕಾರ. ಕನ್ನಡದ ಮೇಲೆ ಇಂಗ್ಲಿಷ್ ಸಾಹಿತ್ಯದ ಪ್ರಭಾವ ಬೀಳುವ ಮೊದಲೇ ಕಾದಂಬರಿ ಎನ್ನಬಹುದಾದ ಮೂರು ಕೃತಿಗಳು- ಯಾದವನ “ಕಲಾವತೀ ಪರಿಣಯ” (೧೮೧೫), ಮುಮ್ಮಡಿ ಕೃಷ್ಣ ರಾಜರ “ಸೌಗಂಧಿಕಾ ಪರಿಣಯ” ಮತ್ತು ಕೆಂಪು ನಾರಾಯಣನ “ಮುದ್ರಾ ಮಂಜೂಷ” (೧೮೨೩) ರಚಿತವಾದವು ಎಂದು ಹೇಳುತ್ತಾರೆ. ೧೮೮೫ ರಲ್ಲಿ ಬಿ. ವೆಂಕಟಾಚಾರ್ಯರು ಬಂಕಿಂಚಂದ್ರರ “ದುರ್ಗೇಶನಂದಿನಿ”ಯನ್ನು ಕನ್ನಡಕ್ಕೆ ಅನುವಾದಿಸಿದಾಗ ಒಂದು ಇಂಗ್ಲಿಷ್ ಮುನ್ನುಡಿಯನ್ನು ಬರೆದರು ; ಅದರಲ್ಲಿ ಮೊಟ್ಟ ಮೊದಲು “ನಾವೆಲ್” ಪದವನ್ನು ಬಳಸಿದರು ; ಕಾದಂಬರಿ ‘ಸಮಾಜದ ಅಂಗಭೂತನಾದ ಮನುಷ್ಯನ ಚರಿತ್ರೆ ನಡವಳಿಕೆಗಳಲ್ಲಿ ಕಂಡುಬರುವ ದುರ್ನಡತೆ ಮುಂತಾದುವನ್ನು ಉದಾಹರಣೆಗಳೊಡನೆ ಚಿತ್ರಿಸಿ ಪ್ರತಿಯೊಬ್ಬನೂ ಸದ್ಭಾವದಿಂದ ನಡೆದುಕೊಳ್ಳುವುದನ್ನು 

ತೋರ್ಪಡಿಸತಕ್ಕದ್ದಾಗಿದೆ’ ಎಂದರು. ಸಾಹಿತ್ಯದ ದೃಷ್ಟಿಯಿಂದ ಕಾದಂಬರಿ ಎನ್ನಬಹುದಾದದ್ದು ಎಂ.ಎಸ್. ಪುಟ್ಟಣ್ಣನವರ “ಮಾಡಿದ್ದುಣೋ ಮಹರಾಯ” (೧೯೧೫). ೧೯೨೦ರಿಂದ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡದಲ್ಲಿ ಸುಮಾರು ಎಂಬತ್ತು ಕಾದಂಬರಿಗಳು ಪ್ರಕಟವಾದವು, ಎಂದರೆ ವರ್ಷಕ್ಕೆ ಸುಮಾರು ಮೂರು. ಈಗ ಕನ್ನಡದಲ್ಲಿ ವರ್ಷಕ್ಕೆ ಸುಮಾರು ೧೩೦ ಕಾದಂಬರಿಗಳು ಹೊರಬೀಳುತ್ತವೆ ಎಂಬುದಾಗಿ ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ ಕೃತಿಯಲ್ಲಿ ಎಲ್. ಎಸ್. ಶೇಷಗಿರಿ ರಾವ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಡಾ. ಜನಾರ್ದನ ಭಟ್ ವಿರಚಿತ ಕನ್ನಡ ಕಾದಂಬರಿ ಮಾಲೆ ಗ್ರಂಥದಲ್ಲಿ ಭಿನ್ನವಿಭಿನ್ನ ನೂರು ಕನ್ನಡ ಕಾದಂಬರಿಗಳ ಕಥನಗಳು ಸೊಗಸಾಗಿ ಅನಾವರಣ ಗೊಂಡಿರುವುದು ಗಮನೀಯ ಅಂಶ.ಅಂದಾಜು ಕಳೆದ ಒಂದೂ ಕಾಲು ಶತಮಾನದಲ್ಲಿ ಕನ್ನಡದಲ್ಲಿ ಬೆಳಕು ಕಂಡ ಮಹತ್ವದ ಕಾದಂಬರಿಗಳ ವಿಮರ್ಶೆ, ವಿಶ್ಲೇಷಣೆ ಈ ಕೃತಿಯಲ್ಲಿ ನೆಲೆಪಡೆದಿರುವುದು ಇನ್ನೊಂದು ವಿಶೇಷ.ಈ ಕೃತಿ ರಚನೆಯ ಉದ್ದೇಶ, ಅದರ ಶೀರ್ಷಿಕೆ ಹಾಗೂ ಆಶಯಗಳ ಕುರಿತು ಅವರು ಹೀಗೆ ಹೇಳಿಕೊಂಡಿದ್ದಾರೆ.

” ಇದಕ್ಕೆ ‘ಕನ್ನಡ ಕಾದಂಬರಿ ಮಾಲೆ’ ಎಂಬ ಹೆಸರಿಡಲಾಗಿದೆ. 1920 ರಲ್ಲಿ ‘ಮುತ್ತಿನ ಸರ’ ಎಂಬ ಬಂಗಾಳಿ ಕತೆಗಳ ಅನುವಾದ ಸಂಕಲನವು ಪ್ರಕಟವಾಯಿತು. ಅದರಲ್ಲಿನ ಕತೆಗಳು ಮೊದಲೇ ‘ಶ್ರೀಕೃಷ್ಣ ಸೂಕ್ತಿ’ ಮತ್ತು ‘ಕಂಠೀರವ’ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅನುವಾದಕರು ವೆಂಕಟಾದ್ರಿ ಶಾಸ್ತ್ರಿ, ‘ಮುತ್ತಿನ ಸರ’ ಸಂಕಲನವನ್ನು ಅವರು ‘ಕಾದಂಬರಿ ಮಾಲೆ’ ಎಂದು ಕರೆದಿದ್ದಾರೆ. ಅದೇ ಪದವನ್ನು ಇಲ್ಲಿ ಬಳಸಲಾಗಿದೆ.

ಇಂಗ್ಲಿಷಿನ ‘ನಾವೆಲ್’ ಪದ ಮತ್ತು ಆ ಪ್ರಕಾರವು ಭಾರತದ ವಿವಿಧ ದೇಶ ಭಾಷೆಗಳಲ್ಲಿ ಪರಿಚಯಿಸಲ್ಪಟ್ಟಾಗ ನಾವೆಲ್, ಉಪನ್ಯಾಸ ಮತ್ತು ಕಾದಂಬರಿ ಎಂಬ ಪದಗಳು ಬಳಸಲ್ಪಟ್ಟವು. ಕನ್ನಡದಲ್ಲಿ ವೆಂಕಟಾಚಾರ್ಯರು ತಾವು ಅನುವಾದಿಸಿದ ಬಂಗಾಳಿ ಕಾದಂಬರಿಗಳನ್ನು ‘ನಾವೆಲ್ (ನಾವಲ, ನಾವೆಲ್ಲ) ಅಥವಾ ‘ಉಪನ್ಯಾಸ’ ಎಂದು ಕರೆದಿದ್ದರು. ತೆಲುಗಿನಲ್ಲಿ ಮೊದಲು ‘ವಚನ ಪ್ರಬಂಧ’ ಎಂದು ಕರೆಯಲಾರಂಭಿಸಿದ್ದರು. ‘ವಿಚಿತ್ರ ನೂತನ ವಚನ ಪ್ರಬಂಧ’ (1895. ತೆಲುಗಿನ ‘ಕೇಸರೀ ವಿಲಾಸ’ದ ಕನ್ನಡ ಅನುವಾದ) ಎಂಬ ಪದಬಳಕೆಯೂ ಕಾಣಿಸಿಕೊಂಡಿತ್ತು. ಈಗ ‘ನವಲಾ’ ಎನ್ನುವ ಪದವು ನಿಂತಿದೆ. ಹಿಂದಿಯಲ್ಲಿ ‘ಉಪನ್ಯಾಸ್’ ಪದವು ಕಾದಂಬರಿಗೆ ಸಲ್ಲುತ್ತಿದೆ. ಕನ್ನಡದಲ್ಲಿ ನಾವೆಲ್ ಪ್ರಕಾರಕ್ಕೆ ‘ಕಾದಂಬರಿ’ ಎಂಬ ಹೆಸರು 1900 ರ ನಂತರ ಮರಾಠಿಯಿಂದ ಬಂದಿದೆ.

ವೆಂಕಟಾದ್ರಿ ಶಾಸ್ತ್ರಿಗಳು ‘ಕಾದಂಬರಿ ಮಾಲೆ’ ಎಂದು ಸಣ್ಣಕತೆಗಳನ್ನು ಕರೆದಿರುವುದು ವಿಶೇಷವಾಗಿದೆ. ಈ ಪುಸ್ತಕದಲ್ಲಿ ‘ಕಾದಂಬರಿ’ ಪ್ರಕಾರಕ್ಕೆ ಸೇರದ ಕೆಲವು ಗದ್ಯ ಕೃತಿಗಳನ್ನು (ಉದಾಹರಣೆಗೆ ಪಂಜೆ ಮಂಗೇಶರಾಯರ ನಾಲ್ಕು ಕತೆಗಳ ಮಾಲಿಕೆ) ಸೇರಿಸಿಕೊಂಡಿರುವುದರಿಂದ ಈ ಶೀರ್ಷಿಕೆ ಅವೆಲ್ಲವನ್ನೂ ಒಳಗೊಳ್ಳಬಹುದೆನ್ನುವುದು ನನ್ನ ಯೋಚನೆಯಾಗಿದೆ.” ಹೀಗಾಗಿ  ಕನ್ನಡ ಕಾದಂಬರಿಗಳ ಹುಟ್ಟು ಮತ್ತು ಬೆಳವಣಿಗೆ, ಕನ್ನಡ ಕಾದಂಬರಿಯ ಕೇಂದ್ರ ಪರಂಪರೆಯ ಅತಿಶಯತೆ ಕುರಿತು ಅಧ್ಯಯನ ಮಾಡುವವರಿಗೂ ಈ ಕೃತಿ ಕೈದೀವಿಗೆಯಾಗಿದೆ.

ಕನ್ನಡ ಕಾದಂಬರಿ ಪರಂಪರೆ ವಿಶೇಷವಾಗಿ ವಾಸ್ತವ ಮಾರ್ಗದ ಪರಂಪರೆ. ಈ ಮಾರ್ಗದ ಸ್ವರೂಪ, ಸಾಧನೆ ಮಿತಿಗಳನ್ನು ಮಹತ್ವದ ಕಾದಂಬರಿಕಾರರ ಕೃತಿಗಳ ಮೂಲಕ ವಿಶ್ಲೇಷಣೆ ಮಾಡಿರುವುದು ಪ್ರಸಕ್ತ ಕೃತಿಯ ಹೆಚ್ಚುಗಾರಿಕೆ.ಕನ್ನಡ ಕಾದಂಬರಿಗಳಲ್ಲಿ ಸಾಗಿ ಬಂದಿರುವ,ನಾವು ಅಷ್ಟಾಗಿ ಗುರುತಿಸದ ಸಾಂಸ್ಕೃತಿಕ ಸಂವಾದಗಳನ್ನು ಸಹ ಭಟ್ ಅವರು ಇಲ್ಲಿನ ಕೃತಿಗಳ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ಗುರುತಿಸಿರುವುದು ಪ್ರಸ್ತುತ ಕೃತಿಯ ಧನಾತ್ಮಕ ಅಂಶ.

ಕಾದಂಬರಿ ಮಾಲೆ ಕೃತಿ ವಿಮರ್ಶೆಗೆ ಮಾತ್ರ ಸೀಮಿತವಾದುದಲ್ಲ. ನಮ್ಮ ಕಾದಂಬರಿ ಲೋಕದ ನಡಾವಳಿಯನ್ನು ಸಹ ಇಲ್ಲಿ ಕಟ್ಟಿಕೊಟ್ಟಿರುವುದು ಮಹತ್ವದ ಸಂಗತಿ. ಈ ಕುರಿತು ನಿಲುವು ನೇರ, ಸ್ಪಷ್ಟ. “ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅರಸರ ಆಸ್ಥಾನದಲ್ಲಿದ್ದ ಕೆಂಪುನಾರಾಯಣ ಶಾಸ್ತ್ರಿಗಳು 1823 ರಲ್ಲಿ ರಚಿಸಿದ ‘ಮುದ್ರಾ ಮಂಜೂಷ’ ಎನ್ನುವ ಕಾದಂಬರಿ ರೂಪದ ಗ್ರಂಥವೇ ಆಧುನಿಕ ಕನ್ನಡದ ಮೊದಲನೆಯ ಐತಿಹಾಸಿಕ ಕಾದಂಬರಿ ಎಂಬುದನ್ನು ಇಲ್ಲಿ ಒತ್ತಿ ಹೇಳಲಾಗಿದೆ.

‘ಮುದ್ರಾ ಮಂಜೂಷ’ವನ್ನು ಅದರ ಕೃತಿಕಾರನು ತನ್ನ ಕಾಲದ ವಿಚಾರಗಳನ್ನು ಹೊದಿಸಿ, ವಿಸ್ತರಿಸಿ, ‘ಇತಿಹಾಸದ ಆಧಾರದಿಂದ’ ಗದ್ಯ ಕಥಾನಕವಾಗಿ ರಚಿಸಿದುದನ್ನು ಪರಿಗಣಿಸಿ ಮೊದಲನೆಯ ಆಧುನಿಕ ಗದ್ಯ ಕೃತಿಯೆಂದು ಒಪ್ಪಬಹುದಾಗಿದೆ. ಐತಿಹಾಸಿಕ ಕಾದಂಬರಿಗಳು ಕಾಲ್ಪನಿಕವಾಗಿರಲು ಸಾಧ್ಯವಿಲ್ಲ. ಅದರಂತೆ, ಮುಮ್ಮಡಿಯವರ ಆಸ್ಥಾನದಲ್ಲಿದ್ದ ಕೆಂಪು ನಾರಾಯಣ ಶಾಸ್ತ್ರಿಗಳು ವಿಶಾಖದತ್ತನ ‘ಮುದ್ರಾ ರಾಕ್ಷಸ’ ಎಂಬ ಸಂಸ್ಕೃತ ನಾಟಕವನ್ನು ಆಧರಿಸಿ, ಮೈಸೂರಿನ ಆ ಕಾಲದ ರಾಜಕೀಯ ಸ್ಥಿತ್ಯಂತರಗಳನ್ನು ಧ್ವನಿಸುವಂತೆ ರಚಿಸಿದ ಬಹಳ ವಿಶಿಷ್ಟವಾದ ಕೃತಿಯಿದು ” ಎಂಬುದನ್ನು ಡಾ. ಭಟ್ ಸೊಗಸಾಗಿ ವಿವರಿಸಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲುಪ್ತವಾಗಿ ಹೋದ ಸಂಗತಿಗಳ ಮೇಲೂ ಈ ಮೂಲಕ ಬೆಳಕು ಹಾಯಿಸಲಾಗಿದೆ. ಇಲ್ಲಿ ಕಾದಂಬರಿ ಸಾಹಿತ್ಯ ಪ್ರಕಾರವನ್ನು ವಿವಿಧ ಕಾಲ ಖಂಡಗಳಲ್ಲಿ ಅಧ್ಯಯನದ ಅನುಕೂಲಕ್ಕಾಗಿ ವಿಂಗಡಿಸಿ ವಿವೇಚಿಸಿರುವುದು ಔಚಿತ್ಯ ಪೂರ್ಣ ಉಪಕ್ರಮ. ಕನ್ನಡ ಕಾದಂಬರಿಗಳ ಪ್ರಾರಂಭ ಕಾಲದ ಕುರಿತು ಡಾ. ಜನಾರ್ದನ ಭಟ್ ಅವರು ಅನೇಕ ಹೊಸ ಹೊಸ ಸಂಗತಿಗಳನ್ನು ಬೆಳಕಿಗೆ ಹಿಡಿದು ಮಹದುಪಕಾರ ಮಾಡಿದ್ದಾರೆ.

” ಅಧುನಿಕ ಕನ್ನಡದ ಮೊದಲ ಸೃಜನಶೀಲ ಕೃತಿಗಳನ್ನಾಗಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’ ಸಾಮಾಜಿಕ ಕಾದಂಬರಿ, ಮತ್ತು ಪಂಜೆ ಮಂಗೇಶ ರಾಯರ ಸಣ್ಣ ಕತೆಗಳನ್ನು ಗುರುತಿಸಲಾಗುತ್ತಿದೆ. ಆದರೆ 1848 ರಲ್ಲಿ ಪ್ರಕಟವಾಗಿದ್ದ ಮತ್ತು ಜನಪ್ರಿಯವೂ ಆಗಿದ್ದ ಮೊಗ್ಲಿಂಗರ ‘ಈರಾರು ಪತ್ರಿಕೆ’ಯನ್ನು ಕನ್ನಡದ ಮೊದಲನೆಯ ಸೃಜನಶೀಲ ಕೃತಿ ಎಂದು ಕರೆಯುವುದು ಸೂಕ್ತವಾಗಿದೆ. ಎಪಿಸ್ಟಲರಿ ತಂತ್ರದ ಈ ಆಧುನಿಕ ಗದ್ಯವನ್ನು ಬಳಸಿಕೊಂಡ ಕೃತಿ ತನ್ನ ಕಾಲದ ಸಮಾಜದ ಸೂಕ್ಷ್ಮ ಚಿತ್ರಣವನ್ನು ಮಾಡಿದೆ. ಡಾ. ಹಾ. ತಿ. ಕೃಷ್ಣ ಗೌಡರು ಹೇಳುವಂತೆ, “ಒಂದು ಸಾಮಾಜಿಕ ಕಾದಂಬರಿ ಚಿತ್ರಿಸಬಹುದಾದ ಘಟನೆಗಳೆಲ್ಲವನ್ನೂ ಈ ಕೃತಿ ಒಳಗೊಂಡಿದೆ. ಮೊಗ್ಲಿಂಗ್‌ನಿಗೆ ಸಮಾಜವನ್ನು ಕ್ಷಕಿರಣ ಬೀರಿ ನೋಡುವ, ಅದರೆಲ್ಲ ಸೂಕ್ಷ್ಮತೆಗಳನ್ನೂ ಗ್ರಹಿಸುವ ಅಪೂರ್ವ ಶಕ್ತಿ ಸಿದ್ದಿಸಿದೆ.” ಕೃಷ್ಣಗೌಡರು ಹೇಳಿರುವ ಮತ್ತೊಂದು ಮಾತು ಹೀಗಿದೆ: “… ಆಧುನಿಕ ಕನ್ನಡದ ಸೃಜನಶೀಲತೆಯು ಅರೆಗಣ್ಣು ತೆರೆದು ನೋಡುತ್ತಿರುವುದು ಈ ಕೃತಿಯ ಹೆಗ್ಗಳಿಕೆಯಾಗಿದೆ….. ಕನ್ನಡ ಸಾಹಿತ್ಯದ ಹಳೆಬೇರಿಗೆ ಹೊಸ ಚಿಗುರನ್ನು ಈ ಕೃತಿ ಮೂಡಿಸಿತು. ಈ ತಾಜಾತನ ಕನ್ನಡದ ದೃಷ್ಟಿಯಿಂದ ಚಾರಿತ್ರಿಕವಾದದ್ದು.”ಹೊಸಗನ್ನಡದ ಆದ್ಯ ಕೃತಿಗಳ ಕುರಿತು ಚರ್ಚಿಸುವ ಸಂದರ್ಭದಲ್ಲಿ ಮೊಗ್ಲಿಂಗ್ ಅವರ ಈ ಕೃತಿಯನ್ನು ಚರ್ಚಿಸದೆ ಹೋದರೆ ಲೋಪವಾಗುತ್ತದೆ.ಆನಂದರಾವ್ ಕೌ0ಡಿನ್ಯನ ಮತಾಂತರದ ಕಥಾನಕವನ್ನು ಸ್ವಲ್ಪ ಕಾಲ್ಪನಿಕವಾದ ಬಣ್ಣಗಳನ್ನು ಬೆರೆಸಿ ಮೊಗ್ಲಿಂಗ್ ರಚಿಸಿರುವ ಸಾಹಿತ್ಯ ಕೃತಿ ಈರಾರು ಪತ್ರಿಕೆಯ ಬಗೆಗೆ ಚರ್ಚೆಯಾಗಬೇಕಾಗಿದೆ ” ಎಂಬ ಮಾತು ಕನ್ನಡ ಕಥನ ಸಾಹಿತ್ಯದ ಮರುಮೌಲ್ಯಮಾಪನಕ್ಕೂ ಒತ್ತಾಯಿಸುತ್ತದೆ.

ಭಟ್ ಅವರ ಈ ಕೃತಿಯಲ್ಲಿ ಸಂಶೋಧನೆಗೆ ಒಲಿದ ಬುದ್ಧಿ ಹಾಗೂ ಸೃಜನ ಸಾಹಿತ್ಯಕ್ಕೆ ಸ್ಪಂದಿಸುವ ಭಾವ ಕೈ ಕೈ ಹಿಡಿದು ಸಾಗಿರುವುದು ವಿಶೇಷ. ಗೋ. ನ. ಸವಣೂರ್ ಅವರು ಬರೆದ ಹೇಮಲತೆ ಪ್ರಭಾಕರ (1904)ಎನ್ನುವುದು ಕನ್ನಡದ ಆದ್ಯ ಕಾದಂಬರಿಗಳಲ್ಲಿ ಒಂದು. ಆದರೆ ಈ ಕಾದಂಬರಿಯ ಬಗೆಗೆ ಕನ್ನಡದಲ್ಲಿ ಚರ್ಚೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಲೇ ಇದೊಂದು ವಾಸ್ತವ ನೆಲೆಗಟ್ಟಿನ ಕೃತಿ, ತಮ್ಮ ಕಾಲದ ಪರಿವರ್ತನೆಗಳನ್ನು ದಾ ಖಲಿಸಿರುವುದರಿಂದ ಸಾಹಿತ್ಯ ಚರಿತ್ರೆಯಲ್ಲಿಯೂ ಇದಕ್ಕೆ ಐತಿಹಾಸಿಕ ಮಹತ್ವವಿದೆ ಎಂಬುದನ್ನು ಮೊದಲ ಬಾರಿಗೆ ತೋರಿಸಿಕೊಟ್ಟ ಹಿರಿಮೆ ದಾ. ಜನಾರ್ದನ ಭಟ್ ಅವರಿಗೆ ಸಲ್ಲುತ್ತದೆ. ಈ ಕೃತಿಯ ಮಹತ್ವವನ್ನು ಅವರು ಹೀಗೆ ಗುರುತಿಸಿದ್ದಾರೆ.

‘ಹೇಮಲತೆ ಪ್ರಭಾಕರ’ ಕನ್ನಡದ ಆದ್ಯ ಸ್ವತಂತ್ರ ಸಾಮಾಜಿಕ ಕಾದಂಬರಿಗಳಲ್ಲಿ ಗಣ್ಯವಾದ ಒಂದು ಕೃತಿಯಾಗಿದೆ. ಇದು ಕ್ರೈಸ್ತ ಮತ ಪ್ರಚಾರದ ಸನ್ನಿವೇಶಗಳನ್ನು, ಅದರ ಪ್ರಕ್ರಿಯೆ, ಪರಿಣಾಮ ಇತ್ಯಾದಿಗಳನ್ನು ದಾಖಲಿಸಿರುವ ಕಾರಣಕ್ಕೆ ಸಾಂಸ್ಕೃತಿಕ ಮಹತ್ವವನ್ನೂ ಪಡೆದಿದೆ. ಕನ್ನಡದಲ್ಲಿ ಬಂದ ಎರಡು ಸೃಜನಶೀಲ ಕ್ರೈಸ್ತ ಕಾದಂಬರಿಗಳೆಂದರೆ ರೆ. ಮೋಗ್ಲಿಂಗ್ ಅವರ ‘ಈರಾರು ಪತ್ರಿಕೆ’ ಮತ್ತು ಸವಣೂರರ ‘ಹೇಮಲತೆ ಪ್ರಭಾಕರ’. ‘ಈರಾರು ಪತ್ರಿಕೆ’ ಘಟನೋತ್ತರವಾಗಿ ಮತಾಂತರದ ಸಮರ್ಥನೆಯ ಸ್ವರೂಪದಲ್ಲಿದ್ದರೆ ಈ ಕಾದಂಬರಿ ಮತಾಂತರ ಪ್ರಕ್ರಿಯೆಯ ಒಳಗೆ ನಿಂತು ದಾಖಲಿಸಿದೆ.

ಕ್ರೈಸ್ತ ಧರ್ಮದಲ್ಲಿ ಸ್ತ್ರೀಪುರುಷ ಸಮಾನತೆ ಇದೆ, ಬಾಲ್ಯ ವಿವಾಹ ಇಲ್ಲ, ಮುದುಕರಿಗೆ ಸಣ್ಣಪ್ರಾಯದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲ, ಸ್ತ್ರೀಯರ ವಿದ್ಯಾಭ್ಯಾಸವನ್ನು ಅದು ಪ್ರೋತ್ಸಾಹಿಸುತ್ತದೆ, ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುತ್ತದೆ, ಅದರ ಧಾರ್ಮಿಕ ಚಿಂತನೆ ಉನ್ನತ ಮಟ್ಟದ್ದಾಗಿದೆ ಮುಂತಾದ ವಿಚಾರಗಳನ್ನು ಕ್ರೈಸ್ತ ಸಾಹಿತ್ಯ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಿಸಲು ಪ್ರಯತ್ನಿಸುತ್ತಿತ್ತು. ವಿವಿಧ ಬಗೆಯ ಬರಹಗಳ ಮೂಲಕ (ಪತ್ರಿಕಾ ವರದಿ, ಅನುವಾದ, ಸಂವಾದ, ಸಣ್ಣಕತೆ, ಕಾದಂಬರಿ) ಮಿಷನರಿಗಳು ಮತ್ತು ಮತಾಂತರಗೊಂಡ ಸ್ಥಳೀಯ ಕ್ರೈಸ್ತರು ಇಂತಹ ಸಾಹಿತ್ಯ ರಚನೆಯ ಕಾರ್ಯದಲ್ಲಿ ತೊಡಗಿದ್ದಿದೆ. ಮಿಷನರಿ ಸಾಹಿತ್ಯವು ಹಿಂದೂ ಸಮಾಜದ ದೋಷಗಳನ್ನು ಎತ್ತಿತೋರಿಸಿ ಸಮಾಜ ಸುಧಾರಣೆಗೆ ಕಾರಣವೂ ಆಗಿದೆ. ‘ಹೇಮಲತೆ ಪ್ರಭಾಕರ’ ಕಾದಂಬರಿ ಆ ಕಾಲಘಟ್ಟದಲ್ಲಿ ಬಂದ ಒಂದು ಐತಿಹಾಸಿಕ ಮಹತ್ವದ ಕೃತಿಯಾಗಿದೆ ಎಂಬುದನ್ನು ಇಲ್ಲಿ ರುಜುವಾತು ಪಡಿಸಿದ್ದಾರೆ.

ಪ್ರತಿಯೊಂದು ಕಾದಂಬರಿಯ ಆಶಯ, ಕಥೆ, ತಂತ್ರ, ಘಟನೆ, ಸನ್ನಿವೇಶ, ಸಂಭಾಷಣೆ, ನಿರೂಪಣೆ ಮೊದಲಾದ ಘಟಕಗಳು ಹೇಗೆ ಮೈತುಂಬಿಕೊಂಡಿವೆ ಎಂಬುದನ್ನುಇಲ್ಲಿ ತೂಗಿ ನೋಡಿ ಆಯಾಯ ಕೃತಿಯ ಬೆಲೆಕಟ್ಟಿರುವುದು, ಮೌಲ್ಯಮಾಪನ ಮಾಡಿರುವುದು ವಿಶೇಷ. ಕಾದಂಬರಿ ವಿಮರ್ಶೆಗೆ ಬೇಕಾದ ಸಾಹಿತ್ಯ ಮೀಮಾಂಸೆ ಹಾಗೂ ವಿಮರ್ಶೆಯ ಮಾನದಂಡಗಳನ್ನು ಬಳಸುವಲ್ಲಿ ಅವರು ಹಿಂದೆಮುಂದೆ ನೋಡುವುದಿಲ್ಲ.ಕಾದಂಬರಿಯ ಆಳ,ಅಗಲ, ಅನನ್ಯತೆ, ಇತಿಮಿತಿಗಳನ್ನು ಹೇಳುತ್ತಲೇ ಕೃತಿಕಾರನ ಸಣ್ಣ  ಪರಿಚಯವನ್ನು ಅಚ್ಚುಕಟ್ಟಾಗಿ ಕೊಟ್ಟಿರುವುದು ಉಪಯುಕ್ತವಾಗಿದೆ.

ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಗಳಗನಾಥ, ಕೆರೂರ, ಗುಲವಾಡಿ, ಕುವೆಂಪು, ಮಾಸ್ತಿ, ಕಾರಂತ, ಅನಕೃ, ಮೊಕಾಶಿ, ನಿರಂಜನ,ಭೈರಪ್ಪ, ಚಿತ್ತಾಲ, ಬಲ್ಲಾಳ, ದೇವನೂರು, ಬೋಳುವಾರು, ಮೊಗಸಾಲೆ,ಸಾರಾ, ಚದುರಂಗ, ಕೆ. ಸತ್ಯನಾರಾಯಣ, ಹನೂರು,ವಸುಧೇ0ದ್ರ,ಶಶಿಧರ ಹಾಲಾಡಿ ಮೊದಲಾದ ಲೇಖಕರ   ಕೃತಿಗಳಲ್ಲಿ ಒಡೆದುಕಾಣುವ ವಿಶೇಷಗಳನ್ನು ಲೋಕಮುಖಕ್ಕೆ ಸಶಕ್ತವಾಗಿ ತೆರೆದಿಟ್ಟಿದ್ದಾರೆ. ಕನ್ನಡ ಕಾದಂಬರಿಗಳ ಬಹು ರೂಪ ಬಹು ಧ್ವನಿಗಳನ್ನು ವ್ಯಾಪಕವಾಗಿ ಅಧ್ಯಯನಕ್ಕೆ ಗುರಿಪಡಿಸಿರುವ ಈ ವಿಮರ್ಶೆಯ ಕೃತಿ ಕನ್ನಡ ಕಾದಂಬರಿ ಲೋಕ ಇಟ್ಟ ಹೆಜ್ಜೆ ಹಾಗೂ ತೊಟ್ಟ ರೂಪದ ದರ್ಶನವನ್ನು ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಷ್ಟೇನು ಚರ್ಚೆಗೆ ಒಳಗಾಗದ ಅನೇಕ ಚಾರಿತ್ರಿಕ ಮಹತ್ವದ ಸಂಗತಿಗಳನ್ನು ಈ ಕೃತಿ ಹೊತ್ತು ನಿಂತಿರುವುದು ಅವಲೋಕನೀಯವಾಗಿದೆ. ಉದಾಹರಣೆಗೆ,

#  1908 ರಲ್ಲಿ ಪ್ರಕಟವಾದ ಶಾಂತಾಬಾಯಿ ನೀಲಗಾರ ಅವರ ‘ಉತ್ತಮ ಗೃಹಿಣಿ (ಸದ್ಗುಣಿ ಕೃಷ್ಣಾಬಾಯಿ)’ ಎನ್ನುವ ಕಾದಂಬರಿಯೇ ಆಧುನಿಕ ಕನ್ನಡದ ಲೇಖಕಿ ಬರೆದ ಮೊದಲ ಕಾದಂಬರಿ ಎಂದು ಗುರುತಿಸಲ್ಪಟ್ಟಿದೆ. ಬಹಳ ಕಾಲ ಆ ಕೀರ್ತಿಗೆ ಪಾತ್ರವಾಗಿದ್ದ ಕೃತಿ ನಂಜನಗೂಡು ತಿರುಮಲಾಂಬಾ ಅವರ ‘ಸುಶೀಲೆ’ (1913), ಶಾಂತಾಬಾಯಿ ನೀಲಗಾರ ಅವರ ಕಾದಂಬರಿ ಸಿಕ್ಕಿದ ಬಳಿಕ ಈ ಗೌರವ ಅದಕ್ಕೆ ಪ್ರಾಪ್ತವಾಗಿದೆ. ಲೇಖಕಿಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಆದರೆ ಅವರ ಶಿಕ್ಷಣ ಮಹಾರಾಷ್ಟ್ರದಲ್ಲಿ ನಡೆಯಿತು ಎನ್ನಲಾಗಿದೆ. ಅವರು ಧಾರವಾಡದ ಬಾಲಕಿಯರ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿ ಆಗಿದ್ದರು (ಹೆಡ್ ಮಿಸ್ಪೆಸ್, ಗರ್ಲ್ಸ್ ಸ್ಕೂಲ್, ಧಾರವಾಡ). ಮಹಿಳೆಯರಿಗೆ ಆಧುನಿಕ ಶಿಕ್ಷಣದ ಮಹತ್ವ, ಮತ್ತು ಶಿಕ್ಷಣದಲ್ಲಿ ಮನಸ್ಸನ್ನು ಅರಿತು ಅದನ್ನು ಹಿಗ್ಗಿಸುವ ವಿವಿಧೋಪಾಯಗಳನ್ನು ಶಿಕ್ಷಕಿಯಾಗಿ ಅರಿತಿದ್ದುದರಿಂದ ಈ ವಿಷಯಗಳನ್ನು ಅವರು ತಮ್ಮ ಕಾದಂಬರಿಯಲ್ಲಿ ಪ್ರಧಾನವಾಗಿ ತಂದಿದ್ದಾರೆ.

# ಎಂ. ಗೋಪಾಲಕೃಷ್ಣ ಅಡಿಗರು ಕನ್ನಡದ ಶ್ರೇಷ್ಠ ನವ್ಯ ಕವಿ. ಆದರೆ ಅವರ ಕಾದಂಬರಿ ‘ಆನಾಥೆ’ (1954) ನವ್ಯ ಕಾದಂಬರಿಗಳ ಮಾದರಿಯಲ್ಲಿರದೆ ಜೀವನವನ್ನು ಸಮಾಜಮುಖಿಯಾಗಿ ಗ್ರಹಿಸುವ ಶಿವರಾಮ ಕಾರಂತರ ಕಾದಂಬರಿಗಳಂತೆ ಇರುವುದು ಆಶ್ಚರ್ಯಕರವಾಗಿದೆ. ಈ ಕಾದಂಬರಿಯ ರಸಭಾವ ಸೃಷ್ಟಿ, ಪಾತ್ರಗಳ ಮನೋರಂಗದ ಪರಿಶೀಲನೆ ಮತ್ತು ನಿರೂಪಣಾಕ್ರಮಗಳು ಅಮೇರಿಕನ್ ಕಾದಂಬರಿಕಾರ ನಥಾನಿಯಲ್ ಹಾಥರ್ನ್‌ ‘ಕೆಂಪು ಅಕ್ಷರ’ ಎಂಬ ಕಾದಂಬರಿಯನ್ನು ನೆನಪಿಸುವಂತಿವೆ. ಮುಂದೆ ಅಡಿಗರು ‘ಕೆಂಪು ಅಕ್ಷರ’ವನ್ನು ಕನ್ನಡಕ್ಕೆ ಅನುವಾದಿಸಿದರು. ಗಿರಡ್ಡಿ ಗೋವಿಂದರಾಜರು ಈ ಕಾದಂಬರಿಯನ್ನು ಓದಿದಾಗ, ಅದು ವಿಧಿಯ ಆಟಕ್ಕೆ ಕೊಡುವ ಒತ್ತಿನಿಂದಾಗಿ ಥಾಮಸ್ ಹಾರ್ಡಿಯ ಕಾದಂಬರಿಗಳು ನೆನಪಾಗುತ್ತವೆ ಎನ್ನುತ್ತಾರೆ.

# ಸ್ವಾತಂತ್ರ್ಯ ಪೂರ್ವದ ಕನ್ನಡ ಕಾದಂಬರಿಗಾರರೆಂದು ಅಥವಾ ಸಂಕ್ರಮಣ ಕಾಲದ ಕಾದಂಬರಿಕಾರರೆಂದು ಗುರುತಿಸಬಹುದಾದ ಬೆಳ್ಳೆ ರಾಮಚಂದ್ರ ರಾಯರು ತಮ್ಮ ‘ಚಿರವಿರಹಿ’ (1950) ಕಾದಂಬರಿಯ ಮೂಲಕ ಗುರುತಿಸಲ್ಪಡುತ್ತಾರೆ. ಆ ಕಾದಂಬರಿ ಧಾರವಾಡದ ಲಲಿತ ಸಾಹಿತ್ಯಮಾಲೆಯ (ಇದರ ಸಂಪಾದಕರು ಚುಳಕಿ ಗೋವಿಂದರಾಯರು) ಮೂಲಕ ಪ್ರಕಟವಾಯಿತು. ಅದನ್ನು ಬೆಳ್ಳೆ ರಾಮಚಂದ್ರ ರಾಯರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬರೆದಿರುವ ಸಾಧ್ಯತೆ ಹೆಚ್ಚು. ಕುರ್ತಕೋಟಿಯವರು ಅದನ್ನು ಸ್ವಾತಂತ್ರ್ಯ ಪೂರ್ವದ ಕಾದಂಬರಿಯೆಂದೇ ಗುರುತಿಸಿದ್ದಾರೆ.

# ಕನ್ನಡದ ಜೇನ್ ಆಸ್ಟಿನ್ ಎಂದು ಕರೆಯಬಹುದಾದ ತ್ರಿವೇಣಿ (ಅನಸೂಯ ಶಂಕರ್) ಮಧ್ಯಮ ವರ್ಗದ ಹೆಂಗಸರ ಅನುಭವವನ್ನು ಹಾಗೂ ಮನೋಲೋಕವನ್ನು ಅನನ್ಯವಾಗಿ ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದವರು. ಕನ್ನಡದಲ್ಲಿ ಮನೋವೈಜ್ಞಾನಿಕ ಕಾದಂಬರಿಗಳನ್ನು ಬರೆದ ಲೇಖಕಿ ಎಂಬ ಹೆಸರೂ ಅವರಿಗಿದೆ. ಅವರ ‘ಬೆಕ್ಕಿನ ಕಣ್ಣು’, ‘ಶರ ಪಂಜರ’, ‘ದೂರದ ಬೆಟ್ಟ’ ಮುಂತಾದವುಗಳು ಮನೋವೈಜ್ಞಾನಿಕ ಕಾದಂಬರಿಗಳೂ ಹೌದು. ಕೆ. ಸತ್ಯನಾರಾಯಣ ಅವರು ಹೇಳುವ ಪ್ರಕಾರ : “ಕಾದಂಬರಿ ಲೋಕದಲ್ಲಿ ಹೊಸ ರೀತಿಯ ಪಾತ್ರಗಳ, ಕನಸುಗಳ ಮಾತನ್ನು ಓದುಗರಿಗೆ ಕೇಳಿಸಿ, ಒಪ್ಪಿಸುವುದು ತುಂಬಾ ಕಷ್ಟದ ಸಂಗತಿ. ತ್ರಿವೇಣಿ ನಮ್ಮ ಶ್ರೇಷ್ಠ ಕಥನಕಾರರ ಪಟ್ಟಿಯಲ್ಲಿಲ್ಲದೆ ಹೋದರೂ, ಜನಪ್ರಿಯ ಕಾದಂಬರಿಗಳ ಶೈಲಿಯಲ್ಲೇ ಬರೆದಿದ್ದರೂ, ಹೊಸ ಕಾಲದ ಹೆಂಗಸಿನ ‘ಆಯ್ಕೆ’ಯ ಬಹುತೇಕ ಆಯಾಮಗಳನ್ನು ತಮ್ಮ ಕಾದಂಬರಿಗಳಲ್ಲಿ ಗುರುತಿಸಿದರು.

ವೃತ್ತಿ – ಮದುವೆ. ಕುಟುಂಬ – ವೈಯಕ್ತಿಕತೆ, ಶೀಲ – ನೈತಿಕತೆ ಈ ಸಂಗತಿಗಳನ್ನು ಕುರಿತಂತೆ ಹೊಸಕಾಲದ ಹೆಣ್ಣು ಮಕ್ಕಳು ಅನುಭವಿಸುವ ತಹತಹ, ಕಾಣುವ ಕನಸು, ಭಗ್ನಗೊಂಡ ಸ್ವಪ್ನ ಎಲ್ಲವೂ ಕೂಡ ಬೇರೆ ಬೇರೆ ಸಾಂಸ್ಕೃತಿಕ ಭಿತ್ತಿ ಮತ್ತು ವಿವರಗಳಲ್ಲಿ, ತದನಂತರದ ಲೇಖಕಿಯರಿಂದ ನಿರೂಪಿತವಾಗುತ್ತಲೇ ಇದೆ. ಪುರುಷ ಪ್ರಧಾನ ಸಮಾಜ ಮತ್ತು ಕುಟುಂಬ ಹೆಂಗಸನ್ನು ಕುರಿತಂತೆ ಹೇಳಿಸುತ್ತಲೇ ಇರುವ ಅಪಸ್ವರದ ವಿರುದ್ಧ ಮೊದಲ ಖಚಿತ ಮತ್ತು ಸ್ಪಷ್ಟ ಧ್ವನಿ ತ್ರಿವೇಣಿಯವರದು. ತಮ್ಮ ನಂತರದ ಲೇಖಕಿಯರ ಮೇಲೆ ಮಾತ್ರವಲ್ಲ, ತನ್ನ ಕಾಲದ ಮತ್ತು ನಂತರದ ತಲೆಮಾರಿನ ಓದುಗರು, ವಿಶೇಷವಾಗಿ ಮಹಿಳಾ ಓದುಗರ ಮೇಲೆ ತ್ರಿವೇಣಿ ಮಾಡಿದ ಪರಿಣಾಮ ಕೂಡ ಗಮನಾರ್ಹವಾದ್ದು.” (‘ಖಾಸಗಿ ವಿಮರ್ಶೆ’, 2009)

# ಕುಸುಮಾಕರ ದೇವರಗೆಣ್ಣೂರ (ಡಾ. ವಸಂತ ಅನಂತ ದಿವಾಣಜಿ) ಅವರ ‘ನಾಲ್ಕನೆಯ ಆಯಾಮ’ (1966) ಕನ್ನಡದ ಮುಖ್ಯ ನವ್ಯ ಕಾದಂಬರಿಗಳಲ್ಲಿ ಒಂದು. ಶಾಂತಿನಾಥ ದೇಸಾಯಿ ಅವರ ‘ಮುಕ್ತಿ’, ಲಂಕೇಶ್ ಅವರ ‘ಬಿರುಕು’ ಕಾದಂಬರಿಗಳಂತೆ ನಾಯಕನ ಅಂತರಿಕ ತೊಳಲಾಟಗಳನ್ನು ಚಿತ್ರಿಸಿರುವ ಕಾದಂಬರಿಯಿದು. ಆದರೆ ಆ ಕಾದಂಬರಿಗಳಿಗಿಂತ ಭಿನ್ನವಾಗಿ ಮತ್ತು ಗಹನವಾಗಿ ಮನುಷ್ಯನ ಅಂತರಂಗದ ವಿಶ್ಲೇಷಣೆ ನಡೆಸಿರುವ ‘ನಾಲ್ಕನೆಯ ಆಯಾಮ’ ಐತಿಹಾಸಿಕ ದೃಷ್ಟಿಯಿಂದಲೂ ಮೊದಲನೆಯ ನವ್ಯ ಕಾದಂಬರಿ ಎನಿಸಿಕೊಳ್ಳುತ್ತದೆ.

# ವಿ. ಎಂ. ಇನಾಂದಾರ್ ಅವರ ‘ಕನಸಿನ ಮನೆ’ (1947) ಕಾದಂಬರಿ ಕನ್ನಡ ಸಾಹಿತ್ಯದಲ್ಲಿ ಹೊಸಬಗೆಯ ಕಾದಂಬರಿ ಕಲೆಯನ್ನು ಪರಿಚಯಿಸಿದ ಕೃತಿ. ಆಧುನಿಕ ವಾಸ್ತವವಾದದ ಒಂದು ನೆಲೆಯಾದ ಸಮಾಜ ಮತ್ತು ಆಧುನಿಕ ಮೌಲ್ಯವಾದ ವ್ಯಕ್ತಿ ಸ್ವಾತಂತ್ರ್ಯಗಳ ನಡುವಿನ ಸಂಘರ್ಷವನ್ನು ಒರೆಗೆ ಹಚ್ಚಿ ನೋಡಿದ ಕೃತಿ ಇದು. ಈ ಕಾದಂಬರಿಯ ಜನಪ್ರಿಯತೆಯಿಂದಾಗಿ ಇದು ಮೂರು ಮುದ್ರಣಗಳನ್ನು ಕಂಡಿತು ಮತ್ತು ಓದುಗರ ಒತ್ತಾಯಕ್ಕೆ ಮಣಿದು ಇನಾಂದಾರ್ ಅವರು ಇದರ ಕಥಾನಕವನ್ನು ಮುಂದುವರಿಸಿ. ಮತ್ತೆ ಮೂರು ಕಾದಂಬರಿಗಳನ್ನು ಬರೆದು ಇದನ್ನೊಂದು ಚತುಷ್ಕವಾಗಿ ರೂಪಿಸಿದರು. ಸುಮಾರು ಕಾಲು ಶತಮಾನದ ಅವಧಿಯಲ್ಲಿ ನಾಲ್ಕು ಭಾಗಗಳಲ್ಲಿ ಪೂರ್ಣಗೊಂಡ ‘ಮೋಹಿನಿ’ ಕಾದಂಬರಿ ಚತುಷ್ಕ ನಂತರ ಒಂದೇ ಬೃಹತ್ ಸಂಪುಟದಲ್ಲಿ ಪ್ರಕಟಿಸಲ್ಪಟ್ಟಿದೆ. ಅವು – ‘ಕನಸಿನ ಮನೆ’ (ಮೋಹಿನಿ : ಭಾಗ 1). ‘ಕಟ್ಟಿದ ಮನೆ’ (ಮೋಹಿನಿ : ಭಾಗ 2), ‘ಬಾಡಿದ ಹೂವು’ (ಮೋಹಿನಿ : ಭಾಗ 3) ಮತ್ತು ‘ಕತ್ತಲೆಯ ಕಡಲು’ (ಮೋಹಿನಿ : ಭಾಗ 4). ‘ಕನಸಿನ ಮನೆ’ ಕಾದಂಬರಿಯನ್ನು ಪ್ರಕಟಿಸಿದಾಗ ಇನಾಂದಾರರಿಗೆ ಅದನ್ನು ಮುಂದುವರಿಸುವ ಯೋಚನೆಯಿರಲಿಲ್ಲ. ಹಾಗಾಗಿ ಅದನ್ನು ಮಾತ್ರ ಇಲ್ಲಿ ಸ್ವತಂತ್ರ ಪರಿಪೂರ್ಣ – ಕೃತಿಯೆಂದು ಪರಿಗಣಿಸಿ ಪರಿಚಯಿಸಲಾಗಿದೆ.

# ‘ಕನಸಿನ ಮನೆ’ ಕಾದಂಬರಿಯನ್ನು ಇನಾಂದಾರರು 1946 ಜೂನ್ ತಿಂಗಳಲ್ಲಿ ಬರೆದರು. ಅದರ ಏಕೈಕ ಹಸ್ತಪ್ರತಿ ಆಗಿನ ರಾಜಪುತಾನದಲ್ಲಿ ಲೇಖಕರ ರೈಲು ಪ್ರಯಾಣದಲ್ಲಿ ಕಳೆದುಹೋಗಿತ್ತು. ಮಾರವಾಡ ಜಂಕ್ಷನ್ ಮತ್ತು ಸೋಜಾತ್ ರೋಡ್ ಎಂಬ ರೈಲು ನಿಲ್ದಾಣಗಳ ಸ್ಟೇಷನ್ ಮಾಸ್ಟರುಗಳು ಈ ಹಸ್ತಪ್ರತಿಯನ್ನು ಶ್ರಮಪಟ್ಟು ಲೇಖಕರಿಗೆ ತಲುಪಿಸಿದ್ದರಿಂದ ಈ ಕೃತಿ ಇಂದಿಗೂ ಉಳಿದಿದೆ!

# ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವು ಇಂಗ್ಲಿಷ್ ಭಾಷೆಯ ಕೃತಿಗಳು ಕನ್ನಡದಲ್ಲಿ ರೂಪಾಂತರಗೊಂಡು ಮರುಸೃಷ್ಟಿ ಪಡೆದವು. ಅವುಗಳಲ್ಲಿ ಕೆಲವನ್ನು ರೂಪಾಂತರ ಅನ್ನುವುದಕ್ಕಿಂತಲೂ ಪ್ರೇರಣೆ ಅನ್ನಬಹುದು. ಅಂತಹ ಒಂದು ಕೃತಿ ಕಟ್ಟಿ ಶೇಷಾಚಾರ್ಯರ ‘ಶೂರ್ಪಾಲಿಯ ಆಚಾರ್ಯರು”(1941). ಇದು ಇಂಗ್ಲಿಷ್ ಕಾದಂಬರಿಕಾರ ಆಲಿವರ್ ಗೋಲ್ಡ್‌ ಸ್ಮಿತ್‌ನ ‘ದ ವಿಕಾರ್ ಆಫ್ ವೇಕ್‌ ಫೀಲ್ಡ್’ ಅನ್ನುವ ಕಾದಂಬರಿಯಿಂದ ಪ್ರೇರಿತವಾದುದು. ಹುರುಳಿ ಭೀಮರಾಯರ ‘ಮುರುಕು ದಂಬೂಕು’ (1947) ಇಂತಹ ಇನ್ನೊಂದು ಕೃತಿ.

ಕಟ್ಟಿ ಶೇಷಾಚಾರ್ಯರು ಈ ಕಾದಂಬರಿ ಗೋಲ್ಡ್ ಸ್ಮಿತ್‌ನ ‘ದ ವಿಕಾರ್ ಆಫ್ ವೇಕ್‌ ಫೀಲ್ಡ್’ ಅನ್ನುವ ಕಾದಂಬರಿಯ ಮಾದರಿಯನ್ನನುಸರಿಸಿ ಬರೆದ ಸ್ವತಂತ್ರ ಕಾದಂಬರಿ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಕೃತಿಗಳ ಹೆಸರಿನಲ್ಲಿರುವ ಸಾಮ್ಯ, ವೇಕ್‌ ಫೀಲ್ಡ್ ಅನ್ನುವ ಊರಿನ ವಿಕಾರ್ (‘ಗೃಹಸ್ಥ- ಪಾದ್ರಿ) ಎಂದಿರುವಲ್ಲಿ ಶೂರ್ಪಾಲಿ ಎಂಬ ಊರಿನ ಆಚಾರ್ಯರು ಎಂಬ ಬದಲಾವಣೆ ಮತ್ತು ಕಥಾನಾಯಕ ತನ್ನ ಬೋಳೇ ಸ್ವಭಾವದಿಂದ ಮನೆಮಾರು ಕಳೆದುಕೊಂಡು ಊರು ಬಿಟ್ಟು ಬೇರೆ ಕಡೆಗೆ ಹೋಗುವುದು ಮತ್ತು ಹಲವಾರು ಸಾಂಸಾರಿಕ ಸುಖದುಃಖಗಳನ್ನೂ ವ್ಯಾವಹಾರಿಕ ಕಷ್ಟನಷ್ಟಗಳನ್ನು ಅನುಭವಿಸುವುದು: ಈ ಅಂಶಗಳಲ್ಲಿ ಮಾತ್ರ ಗೋಲ್ಡ್ ಸ್ಮಿತ್‌ನ ಕಾದಂಬರಿಯಿಂದ ಶೇಷಾಚಾರ್ಯರ ಕಾದಂಬರಿ ಪ್ರೇರಣೆ ಪಡೆದಿದೆ. ಆದರೆ ಸ್ವತಃ ಲೇಖಕರೇ ಈ ಪ್ರೇರಣೆಯನ್ನು ಹೇಳಿಕೊಂಡಿರದಿದ್ದರೆ ಮೂಲ ಪ್ರೇರಣೆಯನ್ನು ಕಂಡುಹುಡುಕಲು ಕಷ್ಟವಿತ್ತು.

# ಕನ್ನಡದ ಒಂದು ಅನುಪಮವಾದ ಹಾಸ್ಯ ಕಾದಂಬರಿ ಅಂದರೆ ಹುರುಳಿ ಭೀಮರಾಯರ ‘ಮುರುಕು ದಂಬೂಕು’. ಇದು 1947 ರಲ್ಲಿ ಪ್ರಕಟವಾಯಿತು. (ಪ್ರಕಾಶಕರು : ಬಾಳಿಗಾ ಅಂಡ್ ಸನ್ಸ್, ಮಂಗಳೂರು). ಈ ಕಾದಂಬರಿಯ ಚೌಕಟ್ಟನ್ನು ಭೀಮರಾಯರು ಅಮೇರಿಕನ್ ಲೇಖಕ ವಾಷಿಂಗ್ಟನ್ ಐರ್ವಿಂಗ್‌ನ ‘ರಿಪ್ ವ್ಯಾನ್ ವಿಂಕಲ್’ ಎಂಬ ನೀಳತೆಯಿಂದ ಪಡೆದಿದ್ದಾರೆ. ಆದರೆ ಕಾದಂಬರಿಯ ಸನ್ನಿವೇಶ ಸಂಪೂರ್ಣವಾಗಿ ಕನ್ನಡದ್ದು ನಿರ್ದಿಷ್ಟವಾಗಿ ಹೇಳುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯದ್ದು. ಈ ಪ್ರದೇಶದ ಸ್ವಾತಂತ್ರ್ಯ ಪೂರ್ವದ ಜನಜೀವನವನ್ನು ಚಿತ್ರಿಸುವ ಪ್ರಾದೇಶಿಕ ಕಾದಂಬರಿಯಾಗಿಯೂ ಇದಕ್ಕೆ ಮಹತ್ವವಿದೆ. ತಮ್ಮ ಕಾಲದ ಸಾಂಸ್ಕೃತಿಕ ಪಲ್ಲಟವನ್ನು ದಾಖಲಿಸುವುದು ಮತ್ತು ಬ್ರಿಟಿಷ್ ಆಳ್ವಿಕೆಗೆ ಪ್ರಚ್ಛನ್ನವಾಗಿ ಪ್ರತಿಭಟನೆಯನ್ನು ಸೂಚಿಸುವುದು ಹುರುಳಿ ಭೀಮರಾಯರ ಆಶಯವೆಂದು ಗುರುತಿಸಬಹುದು.

‘ಮುರುಕು ದಂಬೂಕು’ 236 ಪುಟಗಳ ಕಾದಂಬರಿ. 166 ಪುಟಗಳ ಒಂದನೆಯ ಭಾಗದಲ್ಲಿ ನಾಯಕ ವಿ. ಚಿತ್ರಮೂರ್ತಿಯ ಬಾಲ್ಯ, ವಿವಾಹ, ಪತ್ನಿ ಮತ್ತು ಅತ್ತೆಯಿಂದ ಅನುಭವಿಸುವ ಕಿರುಕುಳ, ಆ ಊರಿನ ಮುಖ್ಯ ವ್ಯಕ್ತಿಗಳ ಪರಿಚಯ, ಹೆಂಡತಿ ಮತ್ತು ಅತ್ತೆಗೆ ಬುದ್ದಿ ಕಲಿಸಲು ಅವನು ಊರು ಬಿಟ್ಟು ಹೊರಡುವುದು ಈ ಕತೆಯಿದೆ. ಎರಡನೆ ಭಾಗದಲ್ಲಿ ಅವನಿಗೆ ಮುದುಕ ಮತ್ತು ಅವನ ಸಹಚರರ ಭೇಟಿ, ಮದ್ಯ ಕುಡಿದು ನಿದ್ರೆ ಹೋಗುವುದು, ಊರಿಗೆ ಮರಳಿದಾಗ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಜತೆ ಮುಖಾಮುಖಿ, ಕೋರ್ಟಿನಲ್ಲಿ  ಚಿತ್ರಮೂರ್ತಿಯ ವಿಚಾರಣೆ ಮತ್ತು ಕೊನೆಗೆ ಅವನು ತನ್ನ ಮಗ  ಲಕ್ಷಣಮೂರ್ತಿಯ ಜತೆ ಬದುಕಲು ಹೋಗುವುದು – ಈ ಕತೆಯಿದೆ.

ಅಪಾರವಾದ ಶ್ರಮ, ಅಗಾಧವಾದ ವಿದ್ವತ್ತು ಹಾಗೂ ಸೂಕ್ಷ್ಮ ಚಿಂತನೆಗಳಿಂದ ಕೂಡಿರುವ ಈ ಉದ್ಗ್ರಂಥ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿಯೇ ಓದುಗರಿಗೆ ದಕ್ಕಿರುವುದು ಕನ್ನಡದ ಭಾಗ್ಯ.ಸ್ವಾತಂತ್ರ್ಯಪೂರ್ವದ ಕಾದಂಬರಿಗಳನ್ನು ವಿಮರ್ಶೆಗೆ ಒಳಗು ಮಾಡುವಾಗ ಲೇಖಕರು ತೋರುವ ಸಂಯಮ, ಸದೂರ, ವಸ್ತುನಿಷ್ಠತೆ ತೀರಾ ವಿಶೇಷವಾದುದು. ಇಲ್ಲಿ ಚರ್ಚೆಗೆ ಒಳಪಟ್ಟ ಎಲ್ಲ ಕಾದಂಬರಿಗಳನ್ನು ಮರು ಓದು ಮಾಡಲು ಮತ್ತೊಂದು ಮುಕ್ತ ಅವಕಾಶವನ್ನು ಈ ಕೃತಿ ತೆರೆದಿಟ್ಟಿದೆ. ಪ್ರತಿಯೊಂದು ಕೃತಿಯಲ್ಲಿಯೂ ಹುದುಗಿರುವ ಸೃಜನಶೀಲ ಅಭಿವ್ಯಕ್ತಿಯ ನಾವೀನ್ಯವನ್ನು ಗುರುತಿಸುವ ಘನ ಪ್ರಯತ್ನ ಇಲ್ಲಿ ಯಶಸ್ವಿಯಾಗಿ ನಡೆದಿರುವುದು ಉಲ್ಲೇಖನೀಯ ಅಂಶ. ಇವು ಬಿಡಿಬಿಡಿಯಾದ ವಿಮರ್ಶೆಯ ಲೇಖನಗಳು ಅಂತ ಮೇಲುನೋಟಕ್ಕೆ ಅನಿಸಿದರೂ ಕನ್ನಡ ಕಾದಂಬರಿ ಪರಂಪರೆಯ ಸಾಧನೆಯ ಕುರಿತು ಚರ್ಚೆ ಮಾಡಲು ಬೇಕಾದ ಉಪಯುಕ್ತ ಆಕರಗಳು ಇಲ್ಲಿ ಅಡಕಗೊಂಡಿವೆ.ಇದು ಕನ್ನಡಕ್ಕೆ ಲಭಿಸಿರುವ ಗಣ್ಯ ಕೊಡುಗೆಯೂ ಹೌದು.ನೂರು ಕನ್ನಡ ಕಾದಂಬರಿಗಳೊಂದಿಗೆ ಡಾ. ಜನಾರ್ದನ ಭಟ್ ಅವರು ನಡೆಸಿರುವ ಅನುಸಂಧಾನ ಒಂದು ಅಸಾಧಾರಣ ಸಾಧನೆ.ಈ ಮೂಲಕ ಕನ್ನಡ ವಿಮರ್ಶೆಗೆ ಒಂದು ಮೌಲಿಕ ಕೃತಿ ಲಭ್ಯವಾಗಿದೆ. ಇದೊಂದು ಶತಮಾನದ ಸಾಧನೆಯ ಪುನರ್ ಮೌಲ್ಯಮಾಪನವೂ ಆಗಿದೆ. ಈ ಕೃತಿಗಾಗಿ ಡಾ. ಜನಾರ್ದನ ಭಟ್ ಅವರಿಗೆ ಹಾರ್ದಿಕ ಅಭಿನಂದನೆಗಳು.

  • ಪ್ರೊ. ಜಿ. ಎನ್. ಉಪಾಧ್ಯ,  ಮುಂಬೈ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter