ಅನ್ನ ಹಳಸಿತ್ತು…

ಇಟ್ಟಿಗೆ ತುಂಬಿದ ಬುಟ್ಟಿಯನ್ನು ಹೊತ್ತುಕೊಂಡು ಹೊರಟಿದ್ದ ದೀಪಾಳ ಮನಸ್ಸು ಹುಚ್ಚುಗುದುರೆಯಂತೆ ಎತ್ತತ್ತಲೋ ಕೆನೆದಾಡುತ್ತಿತ್ತು. ಮೂರು ದಿನಗಳ ಹಿಂದೆ ಟೆಂಗಿನಕಾಯಿ ಬಸಪ್ಪನವರ ತೋಟಕ್ಕೆ ಪೇರಲ ಹಣ್ಣು ಹರಿಯಲು ಹೋಗಿದ್ದಾಗಿನ ದೃಶ್ಯ ಕಣ್ಮುಂದೆ ಬಂದು ಕಚಗುಳಿ ಇಟ್ಟಂತಾಯಿತು. ಹತ್ತೆಕರೆಯಲ್ಲಿ ಅಲಹಾಬಾದ್ ಸಫೇಧ್ ಎನ್ನುವ ಪೇರಲ ತಳಿ ಸೊಂಪಾಗಿ ಬೆಳೆದಿತ್ತು. ಅಂದು ಹತ್ತು ಜನ ಹೆಣ್ಣಾಳುಗಳು ಇಬ್ಬರು ಗಂಡಾಳುಗಳು ಪೇರಲ ಹಣ್ಣುಗಳನ್ನು ಕಿತ್ತು ಟ್ರೇಗಳಲ್ಲಿ ತುಂಬಿಕೊಂಡು ಒಂದು ಕಡೆಗೆ ಗುಡ್ಡೆಹಾಕುತ್ತಿದ್ದರು. ನಣತರ ಗ್ರೇಡಿಂಗ್‍ಮಾಡಿ ಟ್ರೇಗೆ ತುಂಬಿಸಿ ತೂಕಮಾಡಿ ಲಾರಿಗೆ ಏರಿಸುತ್ತಿದ್ದರು. ಹಿಡಿಗಾತ್ರಕ್ಕಿಂತಲೂ ದೊಡ್ಡದಾಗಿದ್ದ ಗುಂಡನೆಯ ಪೇರಲ ಹಣ್ಣುಗಳು ನೋಡಲು ತುಂಬಾ ಆಕರ್ಷಕವಾಗಿದ್ದವು. ಒಂದು ಕೆಜಿಗೆ ಮೂರ್ನಾಲ್ಕು ತೂಗುತ್ತಿದ್ದವು. ಹಣ್ಣುಗಳನ್ನು ಕೀಳಲು ಬಸಪ್ಪ ಮತ್ತು ಅವರ ತೋಟದ ಸಂಬಳದಾಳು ರಾಮಪ್ಪ ಮಾರ್ಗದರ್ಶನ ನೀಡುತ್ತಿದ್ದರು. ತೋಟದಲ್ಲಿ ಮನೆ ಮಾಡಿದ್ದ ರಾಮಪ್ಪ ಮತ್ತು ಆತನ ಪತ್ನಿ ಅನ್ನಪೂರ್ಣಮ್ಮ ಕೂಲಿಯಾಳುಗಳೊಂದಿಗೆ ಕೆಲಸದಲ್ಲಿ ತೊಡಗಿಕೊಂಡು ಅವರು ಕೆಲಸವನ್ನು ಸರಿಯಾಗಿ ಮಾಡುವಂತೆ ನಿಗಾವಹಿಸುತ್ತಿದ್ದರು. ಬಸಪ್ಪನವರ ತೋಟದಲ್ಲಿ ಪೇರಲ ಅಲ್ಲದೇ ದಾಳಿಂಬೆ, ಲಿಂಬೆ, ಮಾವು, ನೇರಳೆ ಅಂತ ಬಹುವಾರ್ಷಿಕ ಬೆಳೆಗಳಲ್ಲದೇ ಆಯಾಕಾಲಕ್ಕೆ ಬರುವ ಬೆಳೆಗಳಾದ ಕಲ್ಲಂಗಡಿ, ಮೆಣಸಿನಕಾಯಿ ಮುಂತಾದ ಬೆಳೆಗಳು ಖಾಯಂ ಇರುವುದರಿಂದ ತೋಟದಲ್ಲಿ ದಿನನಿತ್ಯ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ.   

ದೀಪಾಳ ಕಾಲೋನಿಯಿಂದ ತೋಟ ಬರೀ ಒಂದು ಕಿಮೀ ದೂರ ಅಷ್ಟೇ. ಅವರ ಓಣಿಯಲ್ಲೇ ಹದಿನೈದಿಪ್ಪತ್ತು ಜನ ಕೂಲಿಕಾರ್ಮಿಕರ ಗುಂಪಿದೆ. ಗುಂಪಿಗೆ ಚೆನ್ನಮ್ಮ ನಾಯಕಿ. ಆಕೆಯೇ ಉಳಿದವರಿಗೆಲ್ಲಾ ಸ್ವತಃ ಭೆಟ್ಟಿಯಾಗಿ ಇಲ್ಲವೇ ಮೊಬೈಲಿನಲ್ಲಿ ಮಾತಾಡಿ ಸುದ್ದಿಮುಟ್ಟಿಸಿ ಕೂಲಿ ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದಳು. ಸುತ್ತಮುತ್ತಲಿನ ತೋಟದವರಿಗೆ ಚೆನ್ನಮ್ಮ ಮತ್ತು ಆಕೆಯ ತಂಡದ ಸದಸ್ಯರು ಯಾವಾಗಲೂ ಬೇಕೇಬೇಕು. ಇಂದು ಮದುವೆ, ಅದೂ ಇದೂ ಅಂತ ಕೆಲವರು ಕೈಕೊಟ್ಟಿದ್ದರಿಂದ ಬರೀ ಹತ್ತೇ ಜನ ಹೆಣ್ಣಾಳುಗಳು ಕೆಲಸಕ್ಕೆ ಬಂದಿದ್ದರು. ಅಲ್ಲದೇ ಪಕ್ಕದ ಊರಿನಿಂದ ಇಬ್ಬರು ಗಂಡಾಳುಗಳು ಬಂದಿದ್ದರು. ಹೆಣ್ಣಾಳುಗಳು ಕಿತ್ತ ಹಣ್ಣುಗಳ ಟ್ರೇಗಳು ತುಂಬಿದಾಗ ಗಂಡಾಳುಗಳು ಅವುಗಳನ್ನು ಹೊತ್ತು ಸಾಗಿಸುತ್ತಿದ್ದರು. ಗಂಡಾಳಿನಲ್ಲಿ ಒಬ್ಬ ಶಿವೂ ಮತ್ತೊಬ್ಬ ಮಲ್ಲೂ. ಇಬ್ಬರೂ ಇಪ್ಪತ್ತೈದರ ಆಜುಬಾಜುವಿನ ಹಂಗಾಮದ ಹುಡುಗರು. ಹಂಗಾಮದ ಹೆಣ್ಣಾಳು ಹುಡುಗಿಯರ ಜೊತೆಗೆ ನಗೆಚಾಟಿಗೆ ಮಾಡುತ್ತಾ ಕೆಲಸದಲ್ಲಿ ಬೋರಾಗದಂತೆ ನೋಡಿಕೊಂಡಿದ್ದರು ಹುಡುಗರು. ನಗೆಚಟಾಕಿ ಹಾರಿಸುವುದರಲ್ಲಿ ಶಿವೂನದು ಎತ್ತಿದ ಕೈ. ತನ್ನ ಮೊಬೈಲಿನಲ್ಲಿ ಇತ್ತೀಚಿನ ಸಿನಿಮಾಗಳ ರೋಮ್ಯಾಂಟಿಕ್ ಹಾಡುಗಳನ್ನು ಜೋರಾಗಿ ಹಾಕಿಕೊಂಡು ಎಲ್ಲರಿಗೂ ಕೇಳಿಸತೊಡಗಿದ್ದ. ಅವನು ಹೆಚ್ಚುಕಡಿಮೆ ದೀಪಾಳ ಹಿಂದೇನೇ ಸುತ್ತುತ್ತಿದ್ದ ಅಂದು. ಮಧ್ಯಾಹ್ನದ ಊಟಕ್ಕೆ ಬಿಡುವ ಮುಂಚೆ ಅವನು ಟ್ರೇನಲ್ಲಿದ್ದ ಹಿಡಿಗಾತ್ರದ ಪೇರಲ ಹಣ್ಣುಗಳೆರಡನ್ನು ತನ್ನೆರಡೂ ಕೈಯಲ್ಲಿ ಹಿಡಿದುಕೊಂಡು ಮೂಸಿನೋಡಿ, `ಆಹಾ, ಎಂಥಹ ಚೆಲುವಿನ ಬಣ್ಣ, ಎಂಥಹ ಮತ್ತೇರಿಸುವ ಮಧುರ ಸುವಾಸನೆ! ನೋಡಿದರೇ ತಿಂದುಬಿಡಬೇಕೆನ್ನಿಸುತ್ತಿದೆ' ಎಂದು ಹಣ್ಣುಗಳನ್ನು ವರ್ಣಿಸುತ್ತಾ ದೀಪಾಳ ಚೆಲುವು, ಆಕರ್ಷಕ ಮೈಮಾಟದ ಸೌಂದರ್ಯದಲ್ಲಿ ದೃಷ್ಟಿ ನೆಟ್ಟಿದ್ದ. ಅವಳ ದೇಹದ ತುಂಬೆಲ್ಲಾ ಹರಿದಾಡುತ್ತಿದ್ದ ಅವನ ಹಿತವೆನಿಸುವ ನೋಟಕ್ಕೆ ಅವಳ ಮೈಯಲ್ಲಿ ಒಂಥರ ಅವ್ಯಕ್ತ ಪುಳಕ, ಕಚಗುಳಿ. ಆಸೆ ತುಂಬಿದ ಕಣ್ಣುಗಳಿಂದ ಅವನನ್ನೇ ಒಂದು ಕ್ಷಣ ದಿಟ್ಟಿಸಿ ನೋಡಿದ್ದಳು. ಎದೆಯ ಸೀಳಿನಲ್ಲಿ ಬೆವರೊಡೆದ ಭಾವ. ಅವಳಿಗರಿವಿಲ್ಲದಂತೆ ಎದೆಯೊಳಗೆ ನವಿರು ಭಾವನೆಗಳು ಸುಳಿದಾಡಿದ್ದವು. ದೀಪಾ ಒಲ್ಲದ ಮನಸ್ಸಿನಿಂದ ಬೇರೆಡೆಗೆ ಮುಖ ತಿರುಗಿಸಿಕೊಂಡಿದ್ದರೂ ಅವಳೆದೆ ಅವನ ನೋಟಕ್ಕೆ ಹಂಬಲಿಸುತ್ತಿತ್ತೆನ್ನುವುದಕ್ಕೆ ನಾಚಿಕೆಯಿಂದ ಕೆಂಪೇರಿದ್ದ ಮುಖಭಾವವೇ ಹೇಳುತ್ತಿತ್ತು. ಎಷ್ಟಾದರೂ ಅವಳು ಬಣ್ಣಬಣ್ಣದ ಕನಸು ಕಾಣುವ ಹರೆಯದ ಹುಡುಗಿಯಲ್ಲವೇ?
"ಏಯ್ ದೀಪಾ, ನೀನು ಪುಟ್ಟಿಯನ್ನು ಮ್ಯಾಲೆ ಹೊತ್ಕೊಂಡೋಗಿ ಅಲ್ಲೇ ಇಟ್ಟಂಗಿಗಳನ್ನು ಸುರುವು. ಅಲ್ಲಿ ಅರ್ಜೆಂಟ್ ಇಟ್ಟಂಗಿ ಬೇಕಾಗೈತೆ. ಹೋಗು, ಹೋಗು ಜಲ್ದಿ ಮ್ಯಾಲೇರಿ ಹೋಗು. ದೀಪಾ ಮ್ಯಾಲೆ... ಮ್ಯಾಲೆ ಹೋಗು" ಎಂದು ಮೇಸನ್ ಶ್ಯಾಮ್ ಕೂಗುತ್ತಿದ್ದರೂ ಕಚಗುಳಿ ಇಡುವ ಕನಸಿನ ಹಕ್ಕಿಯ ರೆಕ್ಕೆಗಳ ಮೇಲೇರಿ ಕುಳಿತಿದ್ದ ದೀಪಾಳ ಕಿವಿಯೊಳಗೆ ಆ ಕೂಗಿನ ಧ್ವನಿ ತೂರಿಕೊಳ್ಳಲೇ ಇಲ್ಲ. ಪ್ರಸನ್ನವದನೆಯಾಗಿ, ಹಂಸಗಮನೆಯಾಗಿ ಹೆಜ್ಜೆಯನಿಕ್ಕುತ್ತಿದ್ದ ಅವಳು ಮಾಮೂಲಿನಂತೆ ಸೀದಾ ತಲೆಯ ಮೇಲಿದ್ದ ಪುಟ್ಟಿಯಲ್ಲಿನ ಇಟ್ಟಂಗಿಗಳನ್ನು ಶ್ಯಾಮ್‍ನ ಪಕ್ಕವೇ ಸುರುವಿದಳು.

"ದೀಪಾ, ನಿನ್ ಕಿವಿ ಕೇಳಸ್ತಾವೋ ಇಲ್ಲೋ? ಮೈಮ್ಯಾಲೆ ಎಚ್ರಗಿಚ್ರ ತಪ್ಪೈತೇನು...? ನಾನು ಆಗ್ನಿಂದ ಒದ್ರಲಾಕತ್ತೀನಿ, ಪುಟ್ಟಿ ಮ್ಯಾಲೆ ತೊಗೊಂಡೋಗು ಅಂತ. ನನ್ಮಾತು ನಿನ್ ಕಿವ್ಯಾಗ ಬೀಳವಲ್ದಾಗೇದ. ಯಾವ್ ಲೋಕದಾಗ ಅದೀದಿ? ತಟಗು ಲಕ್ಷ್ಯ ಇಟ್ಕೊಂಡು ಕೆಲ್ಸ ಮಾಡು" ಎಂದು ಶ್ಯಾಮ್ ಜೋರುದನಿಯಲ್ಲಿ ಅಬ್ಬರಿಸಿದಾಗಲೇ ದೀಪಾ ಕನಸಿನ ಲೋಕದ ಹಕ್ಕಿಯ ರೆಕ್ಕೆಗಳ ಮೇಲಿಂದ ಕೆಳಗಿಳಿದಿದ್ದಳು. 
"ಅಣ್ಣಾ, ಅದೂ... ಅದೂ..." ಎಂದು ತೊದಲತೊಡಗಿದಾಗ, `ಅದೂ ಇಲ್ಲ, ಇದೂ ಇಲ್ಲ. ಇರ್ಲಿ, ಮಾತು ಬ್ಯಾಡ. ಮೊದ್ಲು ಪುಟ್ಯಾಗ ಇಟ್ಟಂಗಿ ಹಾಕ್ಕೊಂಡು ಮ್ಯಾಲೆ ಕೊಡು ಹೋಗು. ಯಾವಾಗ್ ನೋಡಿದ್ರೂ, ನೀನ್ ಯಾವ್ದೋ ಗುಂಗಿನ್ಯಾಗ ಇರ್ತಿ. ಏನ್ ಗೇನ್ಸಿಕೊಳ್ತಿರ್ತಿಯೋ ಏನೋ? ಕೆಲ್ಸದ ಮ್ಯಾಲೆ ಖಬರು ಇರಾಂಗಿಲ್ಲಂದ್ರೆ ನಾಳಿಂದ ನೀ ಕೆಲ್ಸಕ್ಕೆ ಬರೋದೂ ಬ್ಯಾಡ.' ಮೇಸ್ತ್ರಿಯ ಗುಡುಗಿಗೆ ದೀಪಾ ಬೆದರಿದ್ದಳು. `ಇಲ್ಲ ಅಣ್ಣಾ ತಪ್ಪಾಯಿತು, ಮುಂದೆ ಹೀಗೆ ಮಾಡೋದಿಲ್ಲ' ಎಂದು ಅಂಗಲಾಚಿ ಬೇಡಿದ್ದಳು. `ಸರಿ ಸರಿ. ಕೆಲಸ ನೋಡಿಕೋ. ಇನ್ಮುಂದೆ ಮನಸಿಟ್ಟು ಕೆಲಸ ಮಾಡು' ಎಂದು ಮೇಸನ್ ಗುರುಗುಟ್ಟಿದಾಗ ಮಾತಿಲ್ಲದೇ ಬಡಬಡನೇ ಪುಟ್ಟಿಗೆ ಇಟ್ಟಂಗಿ ತುಂಬಿಕೊಂಡು ಮೊದಲ ಮಹಡಿಯ ಮೆಟ್ಟಲೇರತೊಡಗಿದಳು.
                     ****
ದೀಪಾ ಇಪ್ಪತ್ತೆರಡರ ಹರೆಯದ ಏರು ಜವ್ವನದ ಹುಡುಗಿ. ಅಂಗಾಂಗಗಳಲ್ಲಿ ಇಪ್ಪತ್ತೆರಡು ವಸಂತ ಮಾಸಗಳ ಮಧು ತುಂಬಿಕೊಂಡಿರುವ ಸಾಧಾರಣ ಮೈಕಟ್ಟಿನ ಹುಡುಗಿ. ಎಣ್ಣೆಗೆಂಪಿನ ಮೈಬಣ್ಣ. ನೋಡಲು ತಕ್ಕಮಟ್ಟಿಗೆ ಚೆಲುವೆಯೇ. ರಾತ್ರಿ ಊಟಮಾಡಿ ಮಲಗಿದ್ದ ದೀಪಾಳ ಮನದ ನೆನಪಿನಂಗಳದಲ್ಲಿ ಅಂದಿನ ಘಟನೆ ಮರುಕಳಿಸಿತು. ಮಧ್ಯಾಹ್ನ ಊಟದ ಸಮಯದಲ್ಲಿ ಗೆಳತಿ ಕವಿತಾ, `ದೀಪಾ, ಮೇಸನ್ ಶಾಮಣ್ಣ ಹೇಳಿದ್ದರಲ್ಲಿ ತಪ್ಪೇನಿಲ್ಲ ಅಂತ ನನಗನಿಸುತ್ತಿದೆ. ನಾನೂ ನಿನ್ನ ಕೆಲವು ದಿನಗಳಿಂದ ಗಮನಿಸುತ್ತಿದ್ದೇನೆ. ನೀನೊಂಥರ ಮಂಕು...ಮಂಕಾಗಿ ಕಾಣುತ್ತಿರುವಿ. ಯಾವಾಗಲೂ ಅದೇನನ್ನೋ ಯೋಚಿಸುವಂತಿರುತ್ತದೆ ನಿನ್ನ ಮುಖಭಾವ. ಇಲ್ಲಿನ ಕೆಲಸಗಾರರ ಜೊತೆಗೆ ಸರಿಯಾಗಿ ಬೆರೆಯುತ್ತಿಲ್ಲ. ಮುಖಕ್ಕೆ ಮುಖಕೊಟ್ಟು ಮಾತೂ ಆಡುತ್ತಿಲ್ಲ. ನಿನ್ನದೇ ಗುಂಗಿನಲ್ಲಿರುತ್ತಿ. ಮೊದಲೆಲ್ಲಾ ಅರಳು ಹುರಿದಂತೆ ಮಾತಾಡುತ್ತಿದ್ದವಳು ಈಗ ಮೌನಗೌರಿಯಂತೆ ಕಾಣುತ್ತಿರುವಿ. ಬೇರೆಯವರು ಹೇಳಿದ್ದನ್ನೂ ನೀನು ನಿನ್ನ ಕಿವಿಗೆ ಸರಿಯಾಗಿ ಹಾಕಿಕೊಳ್ಳುತ್ತಿಲ್ಲ. ಯಾಕೋ ಏನೋ...? ಯಾವುದಕ್ಕೂ ಬಾಯಿಬಿಟ್ಟು ಹೇಳಿದರೆ ತಾನೇ ಗೊತ್ತಾಗುವುದು? ನಾನೆಷ್ಟಾದರೂ ನಿನ್ನ ಆತ್ಮೀಯ ಗೆಳತಿ ಅಲ್ಲವೇ...?' ಎಂದು ಬಡಬಡಿಸಿದ್ದಳು.

ಕವಿತಾ ಮತ್ತು ದೀಪಾ ಇಬ್ಬರೂ ವಾರಿಗೆಯ ಹುಡುಗಿಯರು. ಇಬ್ಬರೂ ಜೊತೆಜೊತೆಯಾಗಿ ಹತ್ತನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಓದಿದವರು. ಕವಿತಾಳಿಗೆ ಮದುವೆಯಾಗಿ ಆಗಲೇ ಮುದ್ದಾದ ಒಂದು ಹೆಣ್ಣು ಮಗುವಿಗೆ ತಾಯಿಯೂ ಆಗಿದ್ದಾಳೆ. ಅವಳ ಗಂಡನದೂ ಇದೇ ಊರು. ಕವಿತಾ ದೀಪಾಳಷ್ಟು ಚೆಲುವೆ ಅಲ್ಲದಿದ್ದರೂ ಗಂಡನೊಂದಿಗೆ ಚೆಂದದ ಬದುಕನ್ನು ಕಟ್ಟಿಕೊಂಡಿದ್ದಾಳೆ. ಅವಳ ಗಂಡನೂ ಅಲ್ಲಿ, ಇಲ್ಲಿ ಕೂಲಿ-ನಾಲಿ ಮಾಡುತ್ತಾನೆ. ಬಾಳದೋಣಿಗೆ ಇಬ್ಬರೂ ಜೊತೆಜೊತೆಯಾಗಿ ಹುಟ್ಟು ಹಾಕುತ್ತಿದ್ದಾರೆ. ದುಡಿದಿದ್ದರಲ್ಲೇ ತಕ್ಕ ಮಟ್ಟಿಗೆ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ಬಡವರಿದ್ದರೂ ಪ್ರೀತಿಗೇನೂ ಬರವಿರಲಿಲ್ಲ. ಕೂಲಿಕಾರ್ಮಿಕರಲ್ಲಿ ಬಹುತೇಕರು ಕುಡುಕರಿರುವರಾದರೂ ಕವಿತಾಳ ಗಂಡ ಕುಡಿತದ ಚಟಕ್ಕೆ ಬಿದ್ದಿರಲಿಲ್ಲವಾದ್ದರಿಂದ ಅವಳದೇ ಸುಖಿ ಸಂಸಾರ. ಕವಿತಾಳ ಮಾತುಗಳೆಲ್ಲವನ್ನೂ ಕೇಳಿಸಿಕೊಂಡಿದ್ದ ದೀಪಾ ಸುಮ್ಮನಿದ್ದುದರಿಂದ ಕವಿತಾಳೇ ಮಾತಿಗೆ ಮುಂದಾಗಿದ್ದಳು.
"ದೀಪಾ, ನೀನು ಜೀವನದಲ್ಲಿ ದೊಡ್ಡ ತಪ್ಪು ಮಾಡಿರುವಿ. ಮದುವೆಯಾಗಿ ಗಂಡನ ಮನೆಯಲ್ಲಿ ನಾಲ್ಕೈದು ದಿನ ಇದ್ದು ಮದುವೆ ಮುರಿದುಕೊಂಡು ಬಂದಿದ್ದು ಸರಿ ಕಾಣುವುದಿಲ್ಲ. ಮದುವೆ ಮಾಡಿಕೊಂಡ ನಂತರ ಮದುವೆಯನ್ನು ಮುರಿದುಕೊಳ್ಳುವುದಕ್ಕಿಂತ ಮದುವೆಗೆ ಮುಂಚೇನೇ ಆ ಸಂಬಂಧ ಬೇಡವೆಂದು ನೀನು ಸಾರಾಸಗಟಾಗಿ ನಿರಾಕರಿಸಬೇಕಿತ್ತು. ಮದುವೆಯಾಗುವವರೆಗೆ ಸುಮ್ಮನಿದ್ದು, ನಂತರ ಈ ರೀತಿಯಾಗಿರುವುದು ಬೇರೆಯವರ ಕಣ್ಣಿಗೆ ಕಿಸಿರಾಗಿ ಕಾಣದಿರುತ್ತದೆಯೇ...? ಗಂಡನೊಂದಿಗೆ ಶೋಭನವನ್ನೇ ಮಾಡಿಕೊಂಡಿಲ್ಲ ಎಂದು ನೀನು ಹೇಳಿದರೆ ಜನ ಒಪ್ಪುತ್ತಾರೆಯೇ...? ಜನ, `ಇಲಿ ಹೋದರೆ ಹುಲಿ ಹೋತು' ಅಂತಾರೆ. ಕಡ್ಡೀನ ಗುಡ್ಡಮಾಡಿ ಬಣ್ಣ ಕಟ್ಟಿ ಟಾಂಟಾಂ ಮಾಡುತ್ತಾರೆ. ಆ ಹುಡುಗ ಕುಂಟನೂ ಅಲ್ಲ, ಕುರುಡನೂ ಅಲ್ಲ. ನೋಡಲು ಚೆನ್ನಾಗೇ ಇದ್ದಾನೆ. ಆಸ್ತಿವಂತನೂ ಹೌದು. ನಿಮ್ಮಂತೆ ಬರೀ ಕೂಲಿ-ನಾಲಿ ಮಾಡಿಕೊಂಡು ಜೀವನ ಮಾಡುತ್ತಿಲ್ಲ. ಎಂಟೆಕರೆ ಜಮೀನೂ ಇದೆಯಂತೆ. ಏನಂದರೆ ಆ ಹುಡುಗನಿಗೆ ಇದು ಎರಡನೇ ಮದುವೆ. ನಿನಗೆ ಎರಡನೇ ಸಂಬಂಧ ಅಷ್ಟೇ. ಹಾಗಂತ ಆ ಹುಡುಗನೇನು ಮುದುಕನೂ ಅಲ್ಲ. ನಿನಗಿಂತ ಐದಾರು ವರ್ಷ ದೊಡ್ಡವನಿರಬೇಕು ಅಷ್ಟೇ. ಸರಿಯಾದ ವಯಸ್ಸೇ. ಮೊದಲನೇ ಹಂಡತಿ ಅಕಾಲಿಕವಾಗಿ ಅಪಘಾತವೊಂದರಲ್ಲಿ ತೀರಿಕೊಂಡಿದ್ದರಿಂದ ಎರಡನೇ ಮದುವೆ ಮಾಡಿಕೊಳ್ಳಲು ಮನಸ್ಸು ಮಾಡಿದ್ದ. ಮೊದಲನೇ ಹೆಂಡತಿಯಿಂದ ಆತನಿಗೆ ಮಕ್ಕಳೂ ಇಲ್ಲ. ಆವಾಗ ನಿನಗೆ ಹದಿನೆಂಟು ಇದ್ದರೆ ಆ ಹುಡುಗನಿಗೆ ಇಪ್ಪತ್ನಾಲ್ಕೋ ಇಪ್ಪತ್ತೈದೋ ಇದ್ದವು. ಇಷ್ಟವಾಗಿಲ್ಲದಿದ್ದರೆ ಮದುವೆಗೆ ಮುಂಚೇನೇ ಪ್ರತಿಭಟಿಸಬೇಕಿತ್ತು. ಆ ಮದುವೆ ಮುರಿದುಕೊಂಡು ನಾಲ್ಕು ವರ್ಷಗಳಾಗಿದ್ದರೂ ಮತ್ತೆ ನಿನಗೆ ಕಂಕಣ ಬಲ ಕೂಡಿ ಬರುತ್ತಿಲ್ಲ. ಮದುವೆ ಗಟ್ಟಿಯಾಗುತ್ತಿಲ್ಲ. ವರಗಳೇ ಹತ್ತುತ್ತಿಲ್ಲ. ಆವಾಗಿನಿಂದ ನಿನ್ನ ಅದೃಷ್ಟದ ಬಾಗಿಲೇ ಮುಚ್ಚಿಕೊಂಡು ಹೋಗಿದೆ ಎಂದೆನ್ನಬಹುದು. ಇದರಲ್ಲಿ ನಿನ್ನ ಹೆತ್ತವರ ತಪ್ಪೂ ಇಲ್ಲವೆಂದು ನಾನು ಹೇಳುವುದಿಲ್ಲ. ನಿನ್ನ ಮನಸ್ಸಿನ ಇಷ್ಟಾನಿಷ್ಟಗಳನ್ನು ಅರಿತುಕೊಳ್ಳದೇ ನಿನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಬಿಟ್ಟರು ನಿನ್ನಪ್ಪ, ಅಮ್ಮ. 
ನಾನು ಹೀಗೆ ಹೇಳುತ್ತೇನೆ ಅಂತ ಬೇಸರ ಮಾಡಿಕೊಳ್ಳಬೇಡ. ಆದರೂ ನಾನು ಹೇಳಬೇಕಾದದ್ದನ್ನು ಹೇಳಿಬಿಡುವೆ. ಅದೇನೆಂದರೆ ನಾನು ನಿನ್ನಷ್ಟು ಚೆಂದ ಇಲ್ಲದಿದ್ದರೂ ಮೂರು ವರ್ಷದ ಹಿಂದೆ ನನಗೆ ಕಂಕಣ ಬಲ ಕೂಡಿಬಂತು. ಮದುವೇನೂ ಆಯಿತು, ಮಗುವೂ ಆಯಿತು. ನನ್ನದು ಸುಖೀ ಸಂಸಾರ ಎಂದು ನೀನೇ ಹೇಳುತ್ತಿರುವಿ. ಗಂಡ-ಹೆಂಡತಿ ಇಬ್ಬರೂ ಚೆನ್ನಾಗೇ ಇದ್ದೇವೆ. ಇಷ್ಟು ವರ್ಷಗಳಾದರೂ ನಿನ್ನ ಮದುವೆ ಆಗದಿದ್ದುದಕ್ಕೆ ನನ್ನ ಮನಸ್ಸಿಗೂ ಬೇಸರವಿದೆ. ನನ್ನ ಪ್ರೀತಿಯಾತ್ಮೀಯ ಗೆಳತಿಯ ಬಾಳು ಹೀಗಾಗಿದೆಯಲ್ಲ ಎಂಬ ಕೊರಗು ನನ್ನೆದೆಯಲ್ಲೂ ಕುಟುಕುತ್ತಿದೆ. ನೀನು ಒಳಗೊಳಗೇ ಚಿಂತಿಸುತ್ತಿರುವಿ ಎಂದು ನಾನು ಚೆನ್ನಾಗಿ ಬಲ್ಲೆ. ಅದೇ ಕೊರಗಿನಲ್ಲಿ ನೀನು ಬೇಯುತ್ತಿರುವಿ ಎಂದೂ ನನಗೆ ಗೊತ್ತು. ಮೌನದಲ್ಲೇ ಕುದ್ದು ಹೋಗುತ್ತಿರುವಿ. ಹೀಗಾಗಿ ಬಹಳ ದಿನಗಳಿಂದ ನಿನ್ನ ಮುಖದಲ್ಲಿ ಕಳೆಯೇ ಇಲ್ಲದಂತಾಗಿದೆ." ಕವಿತಾಳ ಮಾತುಗಳನ್ನು ಮೌನದಲ್ಲೇ ಕೇಳಿಸಿಕೊಂಡು ಚುಟುಕಾಗಿ ಉತ್ತರಿಸಿದ್ದಳು ಮಾತು ಬೆಳೆಸಲಿಚ್ಛಿಸದೇ. ಅವಳೂ ಮತ್ತೆ ಕೆದಕಿ ಕೇಳಿ ಅವಳ ಮನಸ್ಸಿಗೆ ನೋವುಂಟು ಮಾಡಲೂ ಇಲ್ಲ. 
                    **** 
ಬೆಳಿಗ್ಗೆಯಿಂದ ಕೆಲಸದ ಶ್ರಮದ ಪ್ರಭಾವದಿಂದ ಬಳಲಿದ್ದ ದೀಪಾಳ ದೇಹ ವಿಶ್ರಾಂತಿ ಬಯಸಿತ್ತೇನೋ? ಮನಸ್ಸು ಇನ್ನೇನೋ ನೆನಪುಗಳನ್ನು ತಡಕಾಡುತ್ತಿತ್ತಾದರೂ ಆಕಳಿಕೆಗಳು ಒತ್ತರಿಸಿಕೊಂಡು ಬರತೊಡಗಿದ್ದರಿಂದ ನಿದ್ರೆಯ ಸುಳಿಗೆ ಗಾಳವಾಗತೊಡಗಿತ್ತು. ಪಕ್ಕದಲ್ಲಿ ಮಲಗಿದ್ದ ಅವಳ ತಂಗಿಯರಾದ ಕಾವ್ಯ, ಕುಸುಮಾ ಮತ್ತು ತುಸು ಆಚೆ ಕಡೆಗೆ ಮಲಗಿದ್ದ ತಮ್ಮ ರುದ್ರೇಶ್ ಗಾಢವಾದ ನಿದ್ದೆಯಲ್ಲಿದ್ದರು. ನಿದ್ದೆಯ ಬಲವಾದ ಮಂಪರಿಗೆ ದೀಪಾಳೂ ಕಣ್ಮುಚ್ಚಿದಳು. 
ರಾತ್ರಿ ಒಂದ್ಹೊತ್ತಿನಲ್ಲಿ ಎಚ್ಚರವಾದಾಗ ದೀಪಾ ಪಕ್ಕದಲ್ಲಿದ್ದ ಮೊಬೈಲನ್ನು ಆನ್‍ಮಾಡಿ ಸಮಯ ನೋಡಿದಳು. ಬೆಳಗಿನ ಮೂರೂವರೆಯ ಸಮಯ. ಹತ್ತು ಗಂಟೆಗೆ ಮಲಗಿದವಳಿಗೆ ಆಗಷ್ಟೇ ಎಚ್ಚರವಾಗಿತ್ತು. ತಡಬಡಾಯಿಸಿ ಬಚ್ಚಲು ಮನೆಗೆ ಹೋಗಿ ನಿರಾಳಳಾಗಿ ಬಂದು ಪುನಃ ಹಾಸಿಗೆಗೆ ಮೈಯೊಡ್ಡಿದಳು. ಇನ್ನೇನು ಮತ್ತೆ ನಿದ್ದೆಗೆ ಶರಣಾಗುವವಳಿದ್ದಳು. ಅಷ್ಟರಲ್ಲಿ ಒಂಥರ ಮುಲುಕಾಟದ ಶಬ್ದ ನೀರವ ರಾತ್ರಿಯಲ್ಲಿ ಅಸ್ಪಷ್ಟವಾಗಿ ಕೇಳಿಸತೊಡಗಿತು. ಚಿಕ್ಕದಾದ ಹಾಲಿನಲ್ಲಿ ಮಲಗಿದ್ದ ದೀಪಾಳಿಗೆ ಅದಕ್ಕೆ ಹತ್ತಿಕೊಂಡಿದ್ದ ಚಿಕ್ಕ ಕೋಣೆಯಲ್ಲಿ ಮಲಗಿದ್ದ ಅಣ್ಣ-ಅತ್ತಿಗೆಯರ ಸರಸ-ಸಲ್ಲಾಪದ ಶಬ್ದ ಅದಾಗಿತ್ತು. ಅತ್ತಿಗೆಯ ಕೀರಲು ಧ್ವನಿಯ ಮುಲುಕಾಟ, ಪಿಸುಮಾತುಗಳಿಗೆ ಅವಳ ನಿದ್ದೆ ಎತ್ತಲೋ ಹಾರಿಹೋಯಿತು. ಮೈಯಲ್ಲಿ ಕಾವೇರಿದ ಅನುಭವ. `ನಾನೂ ನನ್ನ ಗಂಡ ಮಲ್ಲಿಕಾರ್ಜುನನ ಜೊತೆಗಿದ್ದಿದರೆ ಇದೇ ರೀತಿ ದಾಂಪತ್ಯ ಸುಖದ ಮತ್ತಿನಲ್ಲಿ ತೇಲಾಡಬಹುದಿತ್ತಲ್ಲವೇ...?' ಹೀಗೆ ಯೋಚನೆ ಬರುತ್ತಲೇ ದೀಪಾಳ ಕಣ್ಣುಗಳು ತೇವವಾಗಿದ್ದವು. `ಅತ್ತು ಹಗುರಾಗಲು ಒಂದು ತೋಳಿಲ್ಲದೇ ಹೋದರೆ ಮನುಷ್ಯ ಯಾವ ವಯಸ್ಸಿನಲ್ಲಿ ಬೇಕಾದರೂ ಅನಾಥತನ ಅನುಭವಿಸಬಹುದು' ಎಂದು ಗೆಳತಿ ಕವಿತಾ ಹೇಳಿದ್ದ ಮಾತು ನೆನಪಾಗಿ ಒಂಥರ ಒಂಟಿತನ ದೀಪಾಳ ಮೈ, ಮನಸ್ಸುಗಳನ್ನು ಆವರಿಸಿತು. `ನಾನು ದುಡುಕಿದೆನೇನೋ...?' ಎಂಬ ಅಪರಾಧಿ ಭಾವ ಅವಳ ಮನಸ್ಸನ್ನು ಕಾಡಿತು. `ಹೌದು, ನಿನ್ನ ತಪ್ಪುತಪ್ಪು ನಿರ್ಧಾರಗಳೇ ನಿನ್ನನ್ನು ಈಗಿನ ಸ್ಥಿತಿಗೆ ತಂದು ನಿಲ್ಲಿಸಿವೆ' ಎಂದು ಅವಳ ಸುಪ್ತ ಮನಸ್ಸು ಅಣಕಿಸಿ ನಕ್ಕಂತಾಯಿತು. ತುಸು ಹೊತ್ತಿನ ನಂತರ ದೀಪಾ ಮತ್ತೊಮ್ಮೆ ನೆನಪಿನ ದೋಣಿಯಲ್ಲಿ ವಿಹರಿಸತೊಡಗಿದಳು. ಅವಳ ಮದುವೆಯ ಘಟನೆಗಳು ಮನದಲ್ಲಿ ಮೂಡಿ ನಿಂತವು.
ಹತ್ತನೇ ತರಗತಿಗೇ ದೀಪಾಳ ಓದು ಮೊಟಕುಗೊಂಡಿತು. ಅವಳ ಅಪ್ಪ-ಅಮ್ಮ ಬೇಡವೆಂದರು. ತಾಯಿಯ ಜೊತೆಗೆ ದೀಪಾಳೂ ಕೂಲಿ-ನಾಲಿಗೆ ಹೋಗತೊಡಗಿದಳು. ದೀಪಾಳಿಗೆ ಹದಿನೆಂಟು ತುಂಬಿದಾಗ ಮದುವೆಯ ಪ್ರಸ್ತಾಪ ಬಂದಿತು. ಅವಳಮ್ಮನಿಗೆ ತುಂಬಾ ಆಸಕ್ತಿ ಮೂಡಿತ್ತು ಆ ಪ್ರಸ್ತಾಪದ ಬಗ್ಗೆ. ಆದರೆ ಹುಡುಗನಿಗೆ ಮದುವೆಯಾಗಿ ಹೆಂಡತಿ ತೀರಿಕೊಂಡಿದ್ದಳು. ಮಕ್ಕಳು ಇರಲಿಲ್ಲ. ವರನಿಗೆ ಸ್ವಂತ ಮನೆ, ಒಂದಿಷ್ಟು ಜಮೀನು ಕೂಡಾ ಇತ್ತು. ಹುಡುಗ ಚಿಕ್ಕವನೇ. ದೀಪಾಳಿಗೂ ಎರಡನೇ ಸಂಬಂಧ ಬೇಡವಾಗಿತ್ತು. ಅವಳಪ್ಪನಿಗೂ ಎರಡನೇ ಸಂಬಂಧಕ್ಕೆ ಅವಳನ್ನು ಕೊಡಲು ಅಷ್ಟಾಗಿ ಇಷ್ಟವಿರಲಿಲ್ಲ. ಆದರೆ ಮನೆಯಲ್ಲಿ ಅವಳಮ್ಮನ ಮಾತೇ ನಡೆಯುತ್ತಿದ್ದುದರಿಂದ ಹಟಕ್ಕೆ ಬಿದ್ದಳು. ದೀಪಾ ಬೇಡವೆಂದು ಹಟ ಹಿಡಿದಳು. `ಮೊದಲು ಹುಡುಗನಾದರೂ ಬಂದು ನೋಡಿಕೊಂಡು ಹೋಗಲಿ. ಮುಂದಿನ ಮಾತು ಮುಂದೆ' ಎಂದು ದೀಪಾಳನ್ನು ವಧು ಪರೀಕ್ಷೆಗೆ ಒಪ್ಪಿಸಿ ಕೂಡ್ರಿಸಿದ್ದರು ಹುಡುಗನ ಮುಂದೆ. ಹುಡುಗನೇನು ತೆಗೆದು ಹಾಕುವಂತಿರಲಿಲ್ಲ ರೂಪದಲ್ಲಿ. ಹುಡುಗ ವಿನಯವಂತನೂ ಆಗಿದ್ದ. ಹುಡುಗನಿಗೆ ದೀಪಾ ಇಷ್ಟವಾಗಿಬಿಟ್ಟಳು. ಹುಡುಗ ತನ್ನ ಪಾಲಿಗೆ ಬಂದಿದ್ದ ಎಂಟೆಕರೆ ಜಮೀನಿನಲ್ಲಿ ಎರಡೆಕರೆ ನೀರಾವರಿನೂ ಮಾಡಿಕೊಂಡಿದ್ದ. ಆದರೆ ದೀಪಾ ಮದುವೆಗೆ ಒಪ್ಪಲಿಲ್ಲ. ಅವಳಮ್ಮನ ಒತ್ತಾಯ ನಿಲ್ಲಲಿಲ್ಲ. ಅಪ್ಪನೂ ಅಮ್ಮನ ಕೆಂಗಣ್ಣ ನೋಟಕ್ಕೆ ಹೆದರಿಕೊಂಡು ಅವಳ ಮಾತಿಗೇ ಮಣೆ ಹಾಕತೊಡಗಿದ. ದೀಪಾ ಅದೇನೇನೋ ಬೆದರಿಕೆ ಹಾಕಿದಳು. ಆತ್ಮಹತ್ಯೆಗೂ ಪ್ರಯತ್ನಿಸಿ ನೋಡಿದಳು. ಆದರೂ ಅವಳಮ್ಮನ ಮನಸ್ಸನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅವಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲ. ಅಮ್ಮ ಜಪ್ಪಯ್ಯ ಎನ್ನಲಿಲ್ಲ. ಅವಳಪ್ಪ ನಿರ್ವೀರ್ಯನಾಗಿದ್ದ. ಮೊಬೈಲನ್ನು ಕಿತ್ತುಕೊಂಡು ಒಂದು ವಾರದವರೆಗೆ ದೀಪಾಳನ್ನು ಗೃಹ ಬಂಧನದಲ್ಲಿರಿಸಿದ್ದಳು ಅವಳ ಅಮ್ಮ. ಹೊರಗಿನವರ ಜೊತೆಗೆ ಸಂಪರ್ಕ ಕಡಿದು ಹೋಗಿತ್ತು. ಕೊನೆಗೂ ಅವಳಮ್ಮನ ಹಟವೇ ಗೆದ್ದಿತು. ತಾಬಡಾ-ತೂಬಡಾ ಮದುವೇನೂ ಮಾಡಿಬಿಟ್ಟರು. ಅಷ್ಟೊತ್ತಿಗೆ ದೀಪಾಳಿಗೆ ಆಕಳಿಕೆಗಳು ಒತ್ತರಿಸಿಕೊಂಡು ಬರತೊಡಗಿದ್ದವು. ಗಂಟಲು ಒಣಗಿದ್ದರಿಂದ ಮೇಲೆದ್ದು ಅಡುಗೆ ಮನೆಗೆ ಹೋಗಿ ಗಟಗಟನೇ ಒಂದಿಷ್ಟು ನೀರು ಕುಡಿದು ಬಂದು ಮತ್ತೆ ಹಾಸಿಗೆಗೆ ಬೆನ್ನೊಡ್ಡಿದಳು.           
ಆಕಳಿಕೆಗಳು ಪುರುಸೊತ್ತಿಲ್ಲದೇ ಒತ್ತರಿಸಿಕೊಂಡು ಬರುತ್ತಿದ್ದರೂ ಅವಳ ಕಣ್ಣು ರೆಪ್ಪೆಗಳು ಒಂದನ್ನೊಂದು ಅಪ್ಪಿಕೊಳ್ಳುವ ತವಕ ತೋರಿಸಲಿಲ್ಲ. ದೀಪಾಳ ಮನದ ಮೂಲೆಯಲ್ಲಿ ಕೃಷ್ಣಮೂರ್ತಿ ಗಹಗಹಿಸಿ ನಕ್ಕಂತಾಯಿತು. ಒಂದು ಕ್ಷಣ ಗಲಿಬಿಲಿಗೊಂಡಳು. ದೀಪಾ ಮತ್ತೆ ನೆನಪಿನ ಚುಂಗು ಹಿಡಿದುಕೊಂಡು ಹೆಜ್ಜೆ ಹಾಕತೊಡಗಿದಳು.  
                    ****

ಕೃಷ್ಣಮೂರ್ತಿ ದೀಪಾಳ ಓಣಿಯ ಹುಡುಗನೇ. ಅವಳದೇ ಜಾತಿಯವ. ಸಂಬಂಧಿಯೂ ಹೌದು. ಇವಳು ಒಂಭತ್ತನೇ ತರಗತಿಯಲ್ಲಿದ್ದಾಗ ಅವನು ಪಿಯುಟೂ ಮುಗಿಸಿ ಆಗಲೇ ಕಟ್ಟಡ ಕಟ್ಟುವಲ್ಲಿ ಕೆಲಸ ಮಾಡುತ್ತಿದ್ದ. ಆವಾಗಲೇ ಕೃಷ್ಣಮೂರ್ತಿ ದೀಪಾಳೆದೆಯಲ್ಲಿ ಪ್ರೀತಿಯ ಕನಸುಗಳನ್ನು ಬಿತ್ತಿದ್ದ. ದೀಪಾ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಕೃಷ್ಣಮೂರ್ತಿ ಕೆಲಸವನ್ನು ಅರಸಿಕೊಂಡು ಬೆಂಗಳೂರಿಗೆ ಹೋಗಿದ್ದ. ರಿಯಲ್ ಎಸ್ಟೇಟಿನ ಬೂಮಿನಲ್ಲಿ ಮಿಂಚುತ್ತಿರುವ  ಬೆಂಗಳೂರಿನ ಕಟ್ಟಡಗಳ ಕೆಲಸದಲ್ಲಿ ಮೊದಮೊದಲು ಕೂಲಿಕಾರ್ಮಿಕನಾಗಿ ಕೆಲಸ ಶುರುಮಾಡಿದ. ನಂತರ ಕೆಲಸ ಕಲಿಯುತ್ತ ಕಲಿಯುತ್ತ ಮೇಸನ್ ಪದವಿಯನ್ನು ಗಿಟ್ಟಿಸಿಕೊಂಡ. ಊರಿಗೆ ಬಂದಾಗೊಮ್ಮೆ ಟೀಕ್-ಟಾಕಾಗಿ ಡ್ರೆಸ್ ಮಾಡಿಕೊಂಡು ಬೆಂಗಳೂರಿನ ಭಾಷೆಯಲ್ಲಿ ಮಾತಾಡುತ್ತಾ ತಿರುಗಾಡುತ್ತಿದ್ದ. ಬಂದಾಗೊಮ್ಮೆ ದೀಪಾಳೊಂದಿಗೆ ಬಿಚ್ಚು ಮನಸ್ಸಿನಿಂದ ಹರಟಿ ಹೋಗುತ್ತಿದ್ದ. ಪರಸ್ಪರ ಕಾಣಬೇಕು, ಮಾತಾಡಬೇಕೆಂಬ ತುಡಿತವಿತ್ತು ಇಬ್ಬರೆದೆಗಳಲ್ಲೂ. ಕೃಷ್ಣಮೂರ್ತಿ ದೀಪಾಳ ಮನೆಗೆ ಎಡತಾಕುತ್ತಿದ್ದ. ಪ್ರೀತಿಯ ಸಲಿಗೆ ಇಬ್ಬರನ್ನೂ ಹತ್ತಿರ ತಂದಿತ್ತು. 

"ದೀಪಾ, ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿರುವೆ." ಕೃಷ್ಣಮೂರ್ತಿ ಆ ಸಾರೆ ಊರಿಗೆ ಬಂದಾಗ ತನ್ನೆದೆಯಲ್ಲಿನ ಪ್ರೀತಿಯ ತುಡಿತವನ್ನು ದೀಪಾಳ ಮುಂದೆ ಬಿಚ್ಚಿಟ್ಟಿದ್ದ. 
"ಕೃಷ್ಣಾ, ನೀನೇಳಿದಂತೆ ನಾನೂ ನಿನ್ನನ್ನು ಮನಸಾರೆ ಪ್ರೀತಿಸುತ್ತಿರುವೆ. ನಿನ್ನ ರೂಪ ನನ್ನ ಯೌವನದ ಅಂಗಳದಲ್ಲಿ ರಂಗೋಲಿ ಚೆಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದೆ. ನೀನೇ ನನ್ನ ಜೀವ ಮತ್ತು ಜೀವನ" ಎಂದು ದೀಪಾಳೂ ಉಲಿದಿದ್ದಳು ಬಳುಕುತ್ತಾ.
"ದೀಪಾ, ನಮ್ಮ ಕಡೆಯ ಬಹಳಷ್ಟು ಜನರು ಬೆಂಗಳೂರಿನ ಕಟ್ಟಡ ಕಟ್ಟುವಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಒಳ್ಳೆಯ ಕೂಲಿ ಸಿಗುತ್ತದೆ. ನೀನು, ನಿನ್ನಪ್ಪ, ನಿನ್ನಮ್ಮ ಎಲ್ಲರೂ ಇಲ್ಲಿ ಕೂಲಿ ಕೆಲಸ ಮಾಡುತ್ತಿರುವಿರಿ. ನೀವೆಲ್ಲರೂ ಬೆಂಗಳೂರಿಗೆ ಬಂದರೆ ಸಾಕಷ್ಟು ಸಂಪಾದಿಸಬಹುದು" ಎಂದು ಹೇಳಿದ್ದ.       
"ಬೆಂಗಳೂರಿಗೆ ಬರುವ ಮನಸ್ಸು ನಮ್ಮ ಮನೆಯಲ್ಲಿ ಯಾರಿಗೂ ಇಲ್ಲ." ದೀಪಾ ಸ್ಪಷ್ಟಪಡಿಸಿದ್ದಳು. ಅಂದು ಅವಳ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕೃಷ್ಣಮೂರ್ತಿ ದೀಪಾಳನ್ನು ಬಿಗಿದಪ್ಪಿಕೊಂಡು ಅವಳ ಕೆನ್ನೆಗೆ ತನ್ನ ಪ್ರೀತಿಯ ಮೊದಲ ಪ್ರೇಮದುಂಗುರ ತೊಡಿಸಿದ್ದ. ಇಬ್ಬರೂ ಖುಷಿಯಲ್ಲಿ ಸಂಭ್ರಮಿಸಿದ್ದರು.

ಆದರೆ ಆದದ್ದೇ ಬೇರೆ. ದೀಪಾಳ ಅಮ್ಮನ ಹಟಮಾರಿತನಕ್ಕೆ ಅವಳ ಪ್ರೀತಿ ಅವಸಾನ ಕಂಡಿತ್ತು. ಮದುವೆ ಸಮಯದಲ್ಲಿ ದೀಪಾ ಗೃಹ ಬಂಧನದಲ್ಲಿದ್ದುದರಿಂದ ಕೃಷ್ಣಮೂರ್ತಿಗೆ ಅವಳ ಮದುವೆ ವಿಷಯವೇ ಗೊತ್ತಾಗಲಿಲ್ಲ. ಅವನ ಪ್ರೀತಿಯ ಕನವರಿಕೆಯಲ್ಲೇ ದೀಪಾ ಮಲ್ಲಿಕಾರ್ಜುನ ಕಟ್ಟಿದ ತಾಳಿಗೆ ಕೊರಳೊಡ್ಡಿದಳು.
ಅಂದು ದೀಪಾಳಿಗೆ ಮೊದಲರಾತ್ರಿಯ ದಿನ. ಮಾಮೂಲಿನಂತೆ ಹಾಲಿನ ಲೋಟದೊಂದಿಗೆ ಗಂಡನ ಕೋಣೆಗೆ ಸೇರಿದ್ದಳು. ಗಂಡ ಮಲ್ಲಿಕಾರ್ಜುನ ಅವಳನ್ನು ಖುಷಿ ಪಡಿಸಲು ಪ್ರಯತ್ನಿಸಿದ. ಆದರೆ ದೀಪಾ ಯಾವುದಕ್ಕೂ ಗಂಡನೊಂದಿಗೆ ಸ್ಪಂದಿಸಲಿಲ್ಲ. ಅವನ ಮಾತಿಗೆ ಯಾವುದೇ ರೀತಿಯ ಉತ್ತರ ಕೊಡದೇ ಮೌನವ್ರತ ಹಿಡಿದವಳಂತೆ ಸುಮ್ಮನೇ ಕುಳಿತಿದ್ದಳು. ದೃಷ್ಟಿ ಎತ್ತಲೋ ಇತ್ತು. ಮಲ್ಲಿಕಾರ್ಜುನ ಹೆಂಡತಿಯನ್ನು ಬಿಗಿದಪ್ಪಿಕೊಳ್ಳಲು ಪ್ರಯತ್ನಿಸಿದ. ಸೆರಗನ್ನು ಜಾರಿಸಿ ಸೆರಗಿನ ಮರೆಯ ಸೌಂದರ್ಯವನ್ನು ಸವಿಯಲು ಮುಂದಾದಾಗ ದೀಪಾ ಬೇಡವೆಂದಳು. `ಇವಳ ನಡೆಯೇ ಅರ್ಥವಾಗುತ್ತಿಲ್ಲವಲ್ಲ...? ಮೊದಲರಾತ್ರಿ ಎಂದರೆ ಗಂಡು, ಹೆಣ್ಣು ಇಬ್ಬರೆದೆಗಳಲ್ಲೂ ಕೌತುಕವಿರುತ್ತದಲ್ಲವೇ...? ಇವಳು ನೋಡಿದರೆ ಕಲ್ಲಿನ ಗೊಂಬೆಯಂತೆ ಸುಮ್ಮನೇ ಕುಳಿತಿದ್ದಾಳೆ. ಅದೇಕೆ? ಒಂದೂ ಅರ್ಥವಾಗುತ್ತಿಲ್ಲವಲ್ಲ...?' ಎಂದು ಮನದೊಳಗೇ ಯೋಚಿದ ಮಲ್ಲಿಕಾರ್ಜುನ.

"ದೀಪಾ, ಈ ಮದುವೆ ನಿನಗೆ ಇಷ್ಟವಿರಲಿಲ್ಲವೇ...?" ಅಳುಕುತ್ತಾ ಮಲ್ಲಿಕಾರ್ಜುನ ಪ್ರಶ್ನಿಸಿದ. ದೀಪಾಳ ಗದ್ದವನ್ನು ಹಿಡಿದೆತ್ತಿ ಅವಳ ಕಣ್ಣುಗಳಲ್ಲೇ ದೃಷ್ಟಿ ನೆಟ್ಟ. ಹೆದರಿದ ಹರಿಣಿಯಂತಾಗಿದ್ದ ದೀಪಾ ಗಳಗಳನೇ ಅಳಲು ಶುರುಮಾಡಿದಳು. ಮಲ್ಲಿಕಾರ್ಜುನನಿಗೆ ಗಾಬರಿ. ಅವಳನ್ನು ತಬ್ಬಿಕೊಂಡು ಕಣ್ಣೀರನ್ನು ಒರೆಸಬೇಕೆಂದು ಮುಂದಾದ. ದೀಪಾ ಸಹಕರಿಸಲಿಲ್ಲ. 
"ದೀಪಾ, ಏನೂ ಹೇಳದೇ ಈ ರೀತಿ ವರ್ತಿಸಿದರೆ ನಿನ್ನ ಮನಸ್ಸಿನಲ್ಲಿರುವುದು ನನಗೆ ಗೊತ್ತಾಗುವುದಾದರೂ ಹೇಗೆ...? ಅದೇನಿದ್ದರೂ ಅಂಜಿಕೆ ಇಲ್ಲದೇ ತಿಳಿಸಿಬಿಡು." ಮಲ್ಲಿಕಾರ್ಜುನ ಒತ್ತಾಯಿಸಿದ.
"ನಾನೂ...ನಾನೂ... ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡವೆಂದರೂ ನನ್ನ ಅಮ್ಮ ಹಟಕ್ಕೆ ಬಿದ್ದು ಮದುವೆ ಮಾಡಿಸಿದಳು." 
"ಮೊದಲೇ ಹೇಳಿದ್ದರೆ ಎರಡೂ ಮನೆಯವರಿಗೆ ಖರ್ಚು-ವೆಚ್ಚವಾದರೂ ತಪ್ಪುತ್ತಿತ್ತು. ಈಗ ನಿನ್ನ ಕೊನೆಯ ನಿರ್ಧಾರ...?"
"ನನ್ನಿಂದ ತಪ್ಪಾಯಿತು, ಕ್ಷಮಿಸಿಬಿಡಿರಿ."
ಮಲ್ಲಿಕಾರ್ಜುನ ಅವಳ ಭಾವನೆಗಳಿಗೆ ಗೌರವ ಕೊಟ್ಟ. ಮರುದಿನ ಹಿರಿಯರ ಸಮಕ್ಷಮದಲ್ಲಿ ಮದುವೆ ಮುರಿದುಬಿತ್ತು.
                    ****
ದೀಪಾಳ ಎದೆಯಲ್ಲಿ ಪ್ರೀತಿಯ ಭಾವನೆಗಳು ತುಂಬಿಕೊಂಡಿದ್ದವು. ಕೃಷ್ಣಮೂರ್ತಿ ಬರುತ್ತಾನೆ, ತನ್ನ ಕೈಹಿಡಿಯುತ್ತಾನೆ ಎಂಬ ಕನಸಿನ ಲೋಕದಲ್ಲಿ ವಿಹರಿಸತೊಡಗಿದ್ದಳು. ಫೋನಲ್ಲಿ ಅವನೊಂದಿಗೆ ವಿವರಗಳೆಲ್ಲವನ್ನೂ ಹಂಚಿಕೊಂಡಳು. ಅವನು ಇಷ್ಟರಲ್ಲೇ ಊರಿಗೆ ಬರುವುದಾಗಿ ಹೇಳಿಕೊಂಡ. ಚಂದ್ರನಿಗಾಗಿ ಕಾತರಿಸುವ ನೈದಿಲೆಯಂತೆ ದೀಪಾ ಕೃಷ್ಣಮೂರ್ತಿಯ ಆಗಮನಕ್ಕಾಗಿ ಕಾಯತೊಡಗಿದಳು. ಇಷ್ಟರಲ್ಲೇ ಬರುವುದಾಗಿ ಹೇಳಿದ ಕೃಷ್ಣಮೂರ್ತಿ ತಿಂಗಳ ನಂತರವೇ ಬಂದ. `ಕೆಲಸ ತುಂಬಾ ಇತ್ತು, ಬರಲಿಕ್ಕಾಗಲಿಲ್ಲ' ಎಂದು ಏನೇನೋ ಸಬೂಬು ಹೇಳಿದ. ದೀಪಾಳನ್ನು ತಬ್ಬಿಕೊಂಡು ಸಂತೈಸಿದ, ಅವಳ ಭೋರ್ಗರೆಯುವ ಕಣ್ಣೀರು ಒರೆಸಿದ. `ಆದಷ್ಟು ಬೇಗ ನಾವಿಬ್ಬರೂ ಹಸೆಮಣೆ ಏರಬೇಕು' ಎಂದು ದೀಪಾ ಅವನಲ್ಲಿ ಬೇಡಿಕೊಂಡಳು. `ನೀನು ಬೆಂಗಳೂರಿಗೆ ಬರುವಿಯಾದರೆ ಇಂದು ರಾತ್ರೋರಾತ್ರಿ ಹೋಗಿ ಅಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳೋಣ' ಎಂದ. `ಸಂಪ್ರದಾಯದಂತೆ ಮದುವೆ ಮಾಡಿಕೊಂಡ ಮೇಲೆ ಹೋಗೋಣ' ಎಂದು ದೀಪಾ ತಾಕೀತು ಮಾಡಿದಳು. `ಸಿಕ್ಕಿರುವ ಏಕಾಂತದ ಸದುಪಯೋಗ ಪಡೆದುಕೊಳ್ಳೊಣ' ಎಂದೆನ್ನುತ್ತಾ ಕೃಷ್ಣಮೂರ್ತಿ ಅವಳನ್ನು ಬೆತ್ತಲೆಗೊಳಿಸಲು ಮುಂದಾದಾಗ, `ಅದೆಲ್ಲವೂ ಮದುವೆಯ ನಂತರ' ಎಂದು ದೀಪಾ ಪಟ್ಟು ಹಿಡಿದಾಗ ಕೃಷ್ಣಮೂರ್ತಿ ತೆಪ್ಪಗಾಗಿದ್ದ. ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾ ಬಂದಿದ್ದ ಅವನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸುಮ್ಮನೇ ಹೋದ. 

ಕೃಷ್ಣಮೂರ್ತಿ ತನ್ನ ಹೆತ್ತವರ ಜೊತೆಗೆ ತಾನು ಮತ್ತು ದೀಪಾ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿದ. ಮದುವೆಯ ಬಗ್ಗೆನೂ ಪ್ರಸ್ತಾಪಿಸಿದ. `ಅವಳು ಈಗಾಗಲೇ ಮದುವೆಯಾಗಿ ಗಂಡನೊಂದಿಗೆ ಸಂಸಾರಮಾಡಿ ಬಂದವಳು. ಅಂಥಹವಳು ನಮ್ಮನೆಗೆ ಸೊಸೆಯಾಗಿ ಬರುವುದು ನಮಗಿಷ್ಟವಿಲ್ಲ. ಅವಳ ಬಗ್ಗೆ ಓಣಿಯ ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ತಿರುಗಾ-ಮುರಗಾ ನೀನು ಅವಳ ಮನೆಗೆ  ಹೋಗಬೇಡ. ಬೇರೆ ಕಡೆಗೆ ಹೆಣ್ಣು ನೋಡಿ ನಿನಗೆ ಆದಷ್ಟು ಬೇಗ ಮದುವೆ ಮಾಡುತ್ತೇವೆ. ಅವಳನ್ನು ನೀನು ಮರೆತುಬಿಡು. ಅವಳೇ ನಿನಗೆ ಹೆಚ್ಚೆನಿಸಿದರೆ ನಮ್ಮನ್ನು ಮರೆತುಬಿಡು' ಎಂದು ಖಡಾಖಂಡಿತವಾಗಿ ಹೇಳಿದ್ದರು ಅವನ ಹೆತ್ತವರು. ಕೃಷ್ಣಮೂರ್ತಿ ಯೋಚನೆಯಲ್ಲಿ ಬಿದ್ದ. ಯಾವ ನಿರ್ಧಾರಕ್ಕೂ ಬರದೇ ಹ್ಯಾಪುಮೋರೆ ಹಾಕಿಕೊಂಡು ಬೆಂಗಳೂರಿಗೆ ಹೋದ. ಹೇಳಿದಂತೆ ಅವನ ತಂದೆ-ತಾಯಿಗಳು ಬೇರೆ ಕಡೆಗೆ ಹುಡುಗಿ ನೋಡಿ ಕೃಷ್ಣಮೂರ್ತಿಯ ಮದುವೆಯನ್ನು ಅವಸರವಸರವಾಗಿ ಮಾಡಿ ಮುಗಿಸಿಬಿಟ್ಟರು. ಕೃಷ್ಣಮೂರ್ತಿ ಗಪ್-ಚಿಪ್ಪಾಗಿ ಹೆಂಡತಿಯ ಜೊತೆಗೆ ಬೆಂಗಳೂರು ಸೇರಿಕೊಂಡುಬಿಟ್ಟ. ಕೃಷ್ಣಮೂರ್ತಿಯ ಪ್ರೀತಿಯ ನಂಬಿಗೆಯ ಮೇಲೆ ಮಲ್ಲಿಕಾರ್ಜುನನ್ನು ತೊರೆದು ಬಂದಿದ್ದ ದೀಪಾಳಿಗೆ ಆಘಾತವಾಗಿತ್ತು. ಅದೇ ಚಿಂತೆಯಲ್ಲಿ ಮಂಕಾಗಿದ್ದಾಳೆ.
"ದೀಪಾ, ಇನ್ನೂ ಕಾಲ ಮಿಂಚಿಲ್ಲ. ನಿನ್ನ ಮನಸ್ಸನ್ನು ಬದಲಿಸಿಕೊಂಡರೆ ನೀನು ಪುನಃ ಮಲ್ಲಿಕಾರ್ಜುನನ ಗೂಡಿನೊಳಗೆ ಸೇರಿಕೊಳ್ಳಬಹುದು. ಆ ಹುಡುಗ ಅದೇಕೋ ಮತ್ತೆ ಮದುವೆಯಾಗಿಲ್ಲವಂತೆ. ಮದುವೇನೇ ಬೇಡವೆನ್ನುತ್ತಿದ್ದಾನಂತೆ. ಹಿರಿಯರು ಮತ್ತೆ ಮಾತಾಡಿ ನಿಮ್ಮಿಬ್ಬರನ್ನು ಒಂದುಗೂಡಿಸಲು ಸಾಧ್ಯವಿದೆ. ಆಗ ನಿನ್ನ ಬಾಳು ಹಸನಾಗುತ್ತದೆ. ಜನರ ಕೆಟ್ಟ ನೋಟ, ಚಾಟಿ ಏಟಿನಂಥಹ ಮಾತುಗಳು ನಿಲ್ಲಬಹುದು. ಶಾಂತಚಿತ್ತದಿಂದ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು" ಎಂದು ಗೆಳತಿ ಕವಿತಾ ಅಂದು ಹೇಳಿದ್ದ ಮಾತುಗಳು ದೀಪಾಳ ಸ್ಮøತಿಪಟಲದಲ್ಲಿ ಹಾದುಹೋದವು. `ಹೌದಲ್ಲವಾ? ಕವಿತಾ ಹೇಳಿದ್ದು ಸರಿಯಾಗಿಯೇ ಇದೆ. ನಂಬಿ ನೆಚ್ಚಿಕೊಂಡಿದ್ದ ಕೃಷ್ಣಮೂರ್ತಿ ಕೈಕೊಟ್ಟ. ಅವನ ನೆನಪಲ್ಲೇ ಜೀವನ ಪರ್ಯಂತ ಕೊರಗುವುದು ಮೂರ್ಖತನ. ಜನರು ಸುಮ್ಮಸುಮ್ಮನೇ ನನ್ನ ಚಾರಿತ್ರ್ಯವಧೆ ಬೇರೆ ಮಾಡುತ್ತಿದ್ದಾರೆ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ಎಲ್ಲರೂ ನನ್ನ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ. ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂಬಂತಾಗಿದ್ದೇನೆ ನಾನೀಗ. ನಾನು ಮಲ್ಲಿಕಾರ್ಜುನ ಹೆಂಡತಿಯೇ. ಅವನ ಮನೆ, ಮೈ, ಮನಗಳನ್ನು ತುಂಬುವುದೇ ಸರಿ. ಹೌದು, ಇದೇ ಸರಿಯಾದ ಗಟ್ಟಿ ನಿರ್ಧಾರ' ಎಂಬ ವಿಚಾರ ಹೊಳೆದಾಗ ದ್ವಂದ್ವದಲ್ಲಿ ದೀಪಾಳ ಮನಸ್ಸಿಗೆ ಹಿತವೆನಿಸಿತ್ತು. ಮೈಮನಗಳಲ್ಲಿ ನವಚೈತನ್ಯ ಭೋರ್ಗರೆಯುತ್ತಿರುವ ಅನುಭವ. ಆಗಷ್ಟೇ ಮೂಡಣದಲ್ಲಿ ಕೆಂಪು ಪಸರಿಸತೊಡಗಿತ್ತು.

ಶೇಖರಗೌಡ ವೀ ಸರನಾಡಗೌಡರ್, ಮೊ.ನಂ.-9448989332,
ತಾವರಗೇರಾ-583279, ತಾ:ಕುಷ್ಟಗಿ, ಜಿ:ಕೊಪ್ಪಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಅನ್ನ ಹಳಸಿತ್ತು…”

  1. Raghavendra Mangalore

    ಕೊನೆಗೆ ಪ್ರೇಮಿ ಕೈಕೊಟ್ಟಮೇಲೆ ಹಳೆಯ ಗಂಡನ ಮನ – ಮನೆ ನೆನಪಾಗಿ ಮತ್ತೆ ಅವನೊಂದಿಗೆ ಬಾಳಲು ನಿರ್ಧಾರ ಮಾಡಿದ್ದು
    ‘ ಹಳಸಲು ಅನ್ನ ‘ ಪದ ತೊಡೆದು ಹಾಕುವಂತೆ ಮಾಡಿದ ಕ್ರಿಯೆ ಸಮಂಜಸ ಮತ್ತು ಉತ್ತೇಜನಕಾರಿ.ಅಭಿನಂದನೆಗಳು ಸರ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter