ವಿಸ್ತಾದೋಮಿನ ಪ್ರಯಾಣದ ವಿಶಿಷ್ಟಾನುಭವ !

ಈ ವರ್ಷ ವರುಣನ ಕೃಪೆಯಾಗಿದ್ದರಿಂದ ತೋಟಗಳು, ಹೊಲ ಗದ್ದೆಗಳ ಬೆಳೆಗಳೂ ನಳನಳಿಸಿ ಸಮೃದ್ಧಿಯ ಸೂಚನೆ ನೀಡುತ್ತಿವೆ.
ಮಳೆ ಬರುವಾ ಕಾಲಕ್ಕ ಒಳಗ್ಯಾಕ ಕುಂತೇವು ಇಳೆಯೊಡನೆ ಝಳಕಾ ಮಾಡೋಣ ನಾವೂನು ವಿಸ್ತಾದೋಮ್ ಏರಿ ಸಾಗೋಣ… ಎಂದು ಗುನುಗಿಕೊಳ್ಳುತ್ತಾ ನಮ್ಮ ಮೈಸೂರು ಗೆಳತಿಯರ ಬಳಗದ ಮಂಜುಳಾ, ಸುಧಾ, ಛಾಯಾ, ಕರುಣಾ, ಸೀಮಾ, ವಿನೂತಾ, ಅನಿತಾ,ಸುಮನ್, ರೂಪಾ, ಅನಘಾ ಜೊತೆಗೆ ನಾನೂ ಸೇರಿಕೊಂಡು ಮಂಗಳೂರು ಪ್ರವಾಸಕ್ಕೆ ಹೊರಟೆವು.

ಮೈಸೂರಿನಿಂದ ಹಾಸನಕ್ಕೆ ಬಸ್ಸಿನಲ್ಲಿ ಹೋಗಿ ಗಜಾನನ ಹೊಟೆಲ್ಲಿನಲ್ಲಿ ರುಚಿಕರ ಮಸಾಲೆದೋಸೆ, ಇಡ್ಲಿವಡಾ, ತಿಂದು ಬಿಸಿ ಕಾಫಿ ಹೀರಿ ವಿಸ್ತಾದೋಮ್ ಬೋಗಿ ಏರಿದೆವು. ದೊಡ್ಡ ದೊಡ್ಡ ಗಾಜಿನ ಕಿಟಕಿಗಳು ಸೂರಿಗೂ ಗಾಜು! ಆರಾಮವಾಗಿ ಕಿಟಕಿಗೇ ಮುಖ ಮಾಡಿ ಕುಳಿತುಕೊಳ್ಳಬಹುದಾದ ಸಾಧ್ಯತೆ ಇರುವ ಖುರ್ಚಿಗಳನ್ನು ನೋಡಿ ಎಲ್ಲರ ಮೊಗದಲ್ಲೂ ಮಂದಹಾಸ. ‘ಎಷ್ಟು ಚೆನ್ನಾಗಿದೆ ಅಲ್ವಾ?’ ಎನ್ನುತ್ತಾ ಇಡೀ ಬೋಗಿಯನ್ನೂ ವೀಕ್ಷಣೆ ಮಾಡಿ ಅದರ ಹಿಂಭಾಗದಲ್ಲಿರುವ ಗಾಜಿನ ಕೋಣೆಯನ್ನು ಸೇರಿಕೊಂಡೆವು. ಒಂದೆಡೆ ಗಿರಿ ಕಣಿವೆಗಳಿಂದೇಳುವ ಮಂಜಿನ ಸೊಬಗು ಇನ್ನೊಂದೆಡೆ ಗುಡ್ಡದಿಂದ ಮಳೆ ನೀರಿಳಿಯುವ ಚೆಂದ ‘ಈ ಕಡೆ ನೋಡಿ ಆ ಕಡೆ ನೋಡಿ ಎನ್ನುತ್ತಾ ವಾವ್ ಎಂದು ಉದ್ಗಾರ ತೆಗೆಯುತ್ತಾ ಸಾಗುವ ಸಕಲೇಶಪುರ ಮಾರ್ಗದ ಚೆಲುವನ್ನು ಬಣ್ಣಿಸಲು ಪದಗಳೇ ಸೋಲುತ್ತವೆ. ಕ್ಯಾಮರಾಕ್ಕೆ ಬಿಡುವಿಲ್ಲದ ಕೆಲಸ. ದೈನಂದಿನ ಕೆಲಸದ ಜಂಜಡದಲ್ಲಿ ಕಳೆದುಹೋಗುವ ನಡು ಹರಯದ ಮಹಿಳೆಯರೆಲ್ಲ ಅಕ್ಷರಶಃ ಮಕ್ಕಳಾಗಿಬಿಟ್ಟಿದ್ದೆವು. ಕೊನೆ ಮೊದಲಿಲ್ಲದ ಹರಟೆ, ಪರಸ್ಪರ ಮೆಚ್ಚುಗೆಯ ಮಾತುಗಳು, ಹಾಡು, ಕುಣಿತ ರೀಲ್ಸ ಮಾಡುವುದು… ಹೀಗೆ ಪ್ರಕೃತಿಯ ಆಸ್ವಾದನೆಯನ್ನು ಪ್ರತಿಯೊಬ್ಬರೂ ಅನನ್ಯವಾಗಿಯೇ ಸವಿಯುತ್ತಿದ್ದರು.

ವಿಸ್ತಾಡೋಮ್ ಬೋಗಿಯಲ್ಲಿಯೇ ಸ್ನಾಕ್ಸ, ಕಾಫಿ ಸಿಗುವ ಪುಟ್ಟ ಅಂಗಡಿಯೂ ಇದೆ. ಆರ್ಡರ್ ಮಾಡಿದರೆ ಊಟವೂ ಸಿಗುತ್ತದೆ.
ಭಾರತ ಒಂದು ಬಡರಾಷ್ಟ್ರ ಎಂದು ಬಾಲ್ಯದಲ್ಲಿ ಉರು ಹೊಡೆದ ಸಾಲು ಯಾಕೋ ನೆನಪಾಯ್ತು. ಮರುಘಳಿಗೆಯೇ ಇಂತಹ ಸೌಲಭ್ಯವನ್ನೆಲ್ಲ ನಾವು ನಮ್ಮ ದೇಶದಲ್ಲಿಯೇ ನೋಡುವಂತಾಯ್ತಲ್ಲ ಎನ್ನುವ ಸಮಾಧಾನ ಕೂಡಾ ಆಯ್ತು. ತುಂತುರು ಇಲ್ಲಿ ನೀರ ಹಾಡು .. ಎನ್ನುವ ಸಾಲು ಸಾಕಾರವಾದಂತೆ ಆಗಾಗ ಸಣ್ಣ ಮಳೆ, ಬಾಗಿಲಿನಿಂದಾಚೆ ಕೈ ಚಾಚಿ ಮಳೆ ನೀರು ಹಿಡಿದು ಪರಸ್ಪರ ಮುಖಕ್ಕೆ ಎರಚಿ ಸಂಭ್ರಮಿಸಿದೆವು. ಪ್ರವಾಸಿಗರಿಗೆ ನೋಡಲು ಅನುಕೂಲವಾಗಲೆಂಬಂತೆ ನೋಡಲು ಚೆಂದವಾದ ದೃಶ್ಯ ಇರುವಲ್ಲಿ ರೈಲು ಅರೆಘಳಿಗೆ ನಿಂತು ಸಾಗುತ್ತಾ ನಮ್ಮ ಆನಂದಕ್ಕೆ ಸಾಥ್ ನೀಡುತ್ತಿತ್ತು.’ಕೊಟ್ಟ ಹಣಕ್ಕೆ ಖಂಡಿತಾ ಮೋಸವಿಲ್ಲ ಆನಂದದಾಯಕ ಪ್ರಯಾಣ ಅಲ್ವಾ… ಎನ್ನುತ್ತಾ ಮಂಗಳೂರು ತಲುಪಿದೆವು.

ಮಂಗಳೂರಿಗೆ ಹೋದ ಕೂಡಲೆ ಮೊದಲು ಧಾವಿಸಿದ್ದು ನೀರು ದೋಸೆ, ಗಡ್ ಐಸ್ಕ್ರೀಮ್ ದೊರೆಯುವ ಪಬ್ಬಾಸ್ ಹೊಟೆಲ್ಲಿಗೆ. ಮಳೆ ಸುರಿಯುತ್ತಿದ್ದರೂ ಸಣ್ಣಗೆ ಬೆವರುವ ಮಂಗಳೂರಲ್ಲಿ ತುಸು ತುಸುವೇ ಐಸ್ಕ್ರೀಮ್ ಬಾಯಲ್ಲಿಡುತ್ತಾ ರಾಗವಾಗಿ ಮಾತಾಡುವ ಕನ್ನಡದ ಮಾತುಗಳಿಗೆ ಕಿವಿಯಾಗುತ್ತಾ ಕಟಿ ಪಿಟಿ ಓಡಾಡುವ ನೀಳಕಾಯದ ತರುಣಿಯನ್ನು ಮೆಚ್ಚುಗೆಯಿಂದ ನೋಡಿದೆವು. ಅಲ್ಲಿಂದ ಸಾಗಿದ್ದು ಕಟಿಲಿನ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ. ನಂದಿನಿ ಎಂಬ ಪುಟ್ಟ ನದಿ ಮಳೆ ನೀರಿನಿಂದ ಸೊಕ್ಕೇರಿ ಅಬ್ಬರಿಸುವ ಸದ್ದಿನೊಂದಿಗೆ ದೇಗುಲದ ಗಂಟೆಯ ನಾದವೂ ಮಿಳಿತವಾಗಿ ದಿವ್ಯ ಅನುಭವ ನೀಡುತ್ತಿತ್ತು. ವಿಶಾಲವಾದ ದೇವಸ್ಥಾನದಲ್ಲಿ ತುಂಬಿಕೊಂಡ ಭಕ್ತರು ಶಾಂತವಾಗಿ ಕುಳಿತುಕೊಂಡು ಮಹಾ ಮಂಗಳಾರತಿಗಾಗಿ ಕಾಯುತ್ತಿದ್ದರು. ಅರೆಘಳಿಗೆಯಲ್ಲಿ ಆದ ದುರ್ಗೆಯ ದರ್ಶನವೂ ಅಪಾರ ಆನಂದದ ತರಂಗಗಳನ್ನು ಮನದಲ್ಲೆಬ್ಬಿಸಿತು. ‘ಜಗದ ಸಂಕಷ್ಟಗಳನ್ನು ಕಳೆಯೇ ನೀ ತಾಯೇ’ ಎಂದು ಪ್ರಾರ್ಥಿಸಿದೆವು.ದುರ್ಗಾ ಪರಮೇಶ್ವರಿ ಕಲಾಪ್ರಿಯೆಯಂತೆ. ಕಟಿಲು ಯಕ್ಷಗಾನ ತಂಡ ಪೌರಾಣಿಕವಾದ ಯಕ್ಷಗಾನಗಳನ್ನು ಅಡುತ್ತಾ ದೇಶದಾದ್ಯಂತ ಭಾರತೀಯ ಸಂಸ್ಕೃತಿಯನ್ನು ಸಂಸ್ಕಾರವಾಗಿ ನೀಡುತ್ತದೆ. ನಿತ್ಯವೂ ಮಂಗಳಾರತಿಯ ನಂತರ ರಂಗಪೂಜೆ ನಡೆಯುತ್ತದೆಯಂತೆ.

ನದಿಯ ಇನ್ನೊಂದು ದಡದಲ್ಲಿ ವಿಶಾಲವಾದ, ಸಾವಿರ ಜನರು ಒಮ್ಮಲೇ ಊಟ ಮಾಡಬಹುದಾದ ಭೋಜನ ಶಾಲೆ ಇದೆ. ಬಿಸಿ ಬಿಸಿಯಾದ ಅನ್ನ, ಸಾಂಬಾರು, ಪಲ್ಯ, ಪಾಯಸದೂಟ. ‘ಈ ಪ್ರಸಾದದ ಮುಂದೆ ಯಾವ ಹೊಟೆಲ್ ಊಟವೂ ಅಲ್ಲ ಅಲ್ವಾ’ ಎಂದಳು ಗೆಳತಿ ಕರುಣಾ. ನಿಜ ಅಷ್ಟು ರುಚಿ ಆ ಊಟಕ್ಕಿತ್ತು. ವರ್ಷಕ್ಕೆ ಸುಮಾರು ಹತ್ತು ಲಕ್ಷ ಜನರಿಗೆ ಅಲ್ಲಿ ಅನ್ನದಾನ ನಡೆಯುತ್ತದೆಯಂತೆ! ಶಾಲೆ, ಕಾಲೇಜಿಗಳು, ಸಂಸ್ಕೃತ ಪಾಠಶಾಲೆಗಳೂ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ದೇವಸ್ಥಾನ ನಡೆಸುತ್ತಿದ್ದು ಅಲ್ಲಿ ಕಲಿಯುವ ಮಕ್ಕಳಿಗೆ ಯಕ್ಷಗಾನ, ಸಂಗೀತಗಳನ್ನೆಲ್ಲ ಶಾಲಾ ಶಿಕ್ಷಣದ ಜೊತೆಗೇ ಕಲಿಸಿ, ಜೊತೆಗೆ ಉಚಿತವಾಗಿ ಮಧ್ಯಾಹ್ನದ ಊಟವನ್ನೂ ಕೊಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈ ಪುಟ್ಟದ್ವೀಪ ದೇವಸ್ಥಾನ , ಅಲ್ಲಿಯ ಸಕಾರಾತ್ಮಕ ವಾತಾವರಣ ಮನಕ್ಕೆ ಅತ್ಯಂತ ಮುದ ನೀಡಿತು.

ಅಲ್ಲಿಂದ ಉಡುಪಿಯ ಕೃಷ್ಣಮಠದ ವಸತಿ ಗೃಹಕ್ಕೆ ತೆರಳಿದೆವು. ಮರುದಿನ ಬೆಳಿಗ್ಗೆ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ. ಮಧ್ವಾಚಾರ್ಯರು ಸ್ಥಾಪಿಸಿದ ಸುಂದರವಾದ ಕೃಷ್ಣಮೂರುತಿಯ ದರ್ಶನ ಭಾಗ್ಯ ದೊರೆಯಿತು. ಕನಕದಾಸರ ಆರಾಧ್ಯ ದೈವ ಕೃಷ್ಣನನ್ನು ಕಾಣುವ ಭಾಗ್ಯಕ್ಕೆ ಎಣೆಯುಂಟೇ. ಕನಕನ ಕಿಂಡಿಯೊಳಗಿಂದ ನಾವೂ ಇಣುಕಿ ನೋಡಿದೆವು. ಅಷ್ಟಮಠಗಳು ಈ ದೇಗುಲದ ಪೂಜೆಯನ್ನು ಎರಡು ವರ್ಷ ಗಳಿಗೊಮ್ಮೆ ಪರ್ಯಾ ಯ ಮಹೋತ್ಸವದಲ್ಲಿ ಮಠದಿಂದ ಮಠಕ್ಕೆ ಹಸ್ತಾಂತರಿಸುತ್ತಾ ಸುಗಮವಾಗಿ ನೆರವೇರಿಸುತ್ತಿವೆ. ದೇಗುಲದ ಅವರಣದಲ್ಲಿ ನಿರಂತರವಾಗಿ ಕೇಳಿ ಬರುವ ವಿಷ್ಣು ಸಹಸ್ರನಾಮ, ಮಂತ್ರಘೋಷ ದೈವಿಕವಾದ ಅನುಭವ ನೀಡುತ್ತದೆ. ಗೋಶಾಲೆಯಲ್ಲಿ ದಷ್ಟಪುಷ್ಟವಾದ ದೇಸಿ ಹಸು ಕರುಗಳನ್ನು ನೋಡಿ ಕೈಮುಗಿದು ಬಾಲ ಕೃಷ್ಣ ಕೊಳಲನೂದಿದಾಗ ಇಂತಹ ಹಸುಗಳೇ ಅವನ ಸುತ್ತ ನಿಲ್ಲುತ್ತಿದ್ದವೇನೋ ಎಂದುಕೊಂಡೆವು. ನಿತ್ಯವೂ ಕೃಷ್ಣ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪವಾಗಿ ಊಟ ಹಾಕಲಾಗುತ್ತದೆ.

ಅಲ್ಲಿಂದ ಸಾಗಿದ್ದು ಅಂಬಲಪಾಡಿಯ ಮಹಾಕಾಳಿಯ ದೇವಾಲಯಕ್ಕೆ. ಉಡುಪಿಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯವಿದೆ. ಆರು ಅಡಿ ಎತ್ತರದ ಮಹಾಕಾಳಿಯ ವಿಗ್ರಹ ನಿತ್ಯಪೂಜೆಗೊಳ್ಳುತ್ತದೆ. ಪಕ್ಕದಲ್ಲಿಯೇ ಲಕ್ಷ್ಮಿ ಜನಾರ್ದನ ದೇವಾಲಯವಿದೆ. ಭಕ್ತರ ಮನೋಕಾಮನೆಗಳನ್ನು ಈಡೇರಿಸುವ ಶಕ್ತಿ ಈ ದೇವಿಗಿದೆ ಎಂಬುದು ಅಲ್ಲಿಯ ಭಕ್ತರ ನಂಬುಗೆ.

ಅಂಬಲಪಾಡಿಯಿಂದ ನಾವು ಸಾಗಿದ್ದು ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನಕ್ಕೆ. ಕಾಪು ತಾಲೂಕಿನಲ್ಲಿರುವ ಉಚ್ಚಿಲದ ಮಹಾಲಕ್ಷ್ಮಿ ಮೊಗವೀರ ಸಮಾಜದ ಕುಲ ದೇವತೆ. ಹದಿನಾಲ್ಕು ಎಕರೆ ವಿಸ್ತೀರ್ಣದಲ್ಲಿರುವ ದೇವಾಲಯದೆದುರು ದ್ವಜಸ್ಥಂಭವಿದೆ. ತೀರ್ಥ ಮಂಟಪವಿದೆ. ಚಿರೆಕಲ್ಲಿನಲ್ಲಿ ಕಟ್ಟಿದ ಗೋಡೆ, ಸಾಗವಾನಿ ಕಟ್ಟಿಗೆ, ಹಂಚಿನಂತಹ ಟೈಲ್ಸ ಬಳಸಿ ಮಾಡಿದ ಮೇಲ್ಛಾವಣಿ ದೇವಾಲಯಕ್ಕೆ ವಿಶಿಷ್ಟ ಚೆಲುವಿಕೆ ನೀಡಿದೆ. ದೇಗುಲದ ಎಡಭಾಗದ ದಕ್ಷಿಣ ತುದಿಯಲ್ಲಿ ಭದ್ರಕಾಳಿ ದೇವಸ್ಥಾನ ಇವೆ. ದೇವಿ ನವರಾತ್ರಿಯಲ್ಲಿ ಅದ್ದೂರಿಯಾಗಿ ಪೂಜಿಸಲ್ಪಡುತ್ತಾಳೆ. ಎಂದು ಅರ್ಚಕರು ವಿವರಿಸಿದರು.

ಮೂರೂ ದೇವಸ್ಥಾನಗಳನ್ನು ನೋಡಿ ದೇವರ ದರ್ಶ ನ ಮಾಡಿ ಹೊರಬರುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು. ಇಲ್ಲಿಯ ಭೋಜನಶಾಲೆಯಲ್ಲಿ ಪ್ರಸಾದ ಸ್ವೀಕರಿಸಬಹುದು ಎಂದು ಭಕ್ತರೊಬ್ಬರು ತಿಳಿಸಿದಾಗ ಅತ್ತ ಧಾವಿಸಿದೆವು. ವಿಶಾಲವಾದ ಭೋಜನಶಾಲೆ ಶುಭ್ರವಾಗಿತ್ತು. ಶಿಸ್ತಿನಿಂದ ನಿಂತ ಮಹಿಳೆಯರು ಉಪ್ಪಿನಕಾಯಿ, ಅನ್ನ ಸಾಂಬಾರು,ಪಲ್ಯ, ಪಾಯಸ… ಉಣಬಡಿಸಿದರು.

ಹೊಟ್ಟೆ ತುಂಬಿದ ಮೇಲೆ ಟೆಂಪೋ ಏರಿದೆವು. ಪ್ರವಾಸ ನೀಡಿದ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ ಅರೆ ನಿದ್ದೆಗೆ ಜಾರಿದೆ. ಗೆಳತಿಯರ ಮಾತುಗಳು ಜೋಗುಳದಂತಾಯ್ತು… ಮಡಕೇರಿಯ ಮೇಲೆ ಹಾದು ಬರುವಾಗ ಮುಸ್ಸಂಜೆಯ ಕಿರು ಮಳೆ ನೋಡುತ್ತಾ ಇದು ಬಿರುಸಾದ ಮಳೆಯಾಗದಿರಲೆಂದು ಪ್ರಾರ್ಥಿಸುತ್ತಾ, ಮತ್ತೊಂದು ಪ್ರವಾಸಕ್ಕೆ ಸ್ಕೆಚ್ ಹಾಕುತ್ತಾ ಮೈಸೂರು ಸೇರಿದಾಗ ಅನನ್ಯ ಅನುಭವದ ಪ್ರವಾಸ ನೆನಪಿನ ಬುತ್ತಿಯಾಯ್ತು.

ಇಂತಹ ಹಿಂದೂ ದೇವಸ್ಥಾನಗಳು ಎಷ್ಟು ಜನರಿಗೆ ಅನ್ನ, ನೀರು, ನೆರಳು, ಉದ್ಯೋಗಾವಕಾಶ, ಸಕಾರಾತ್ಮಕ ಮನೋಭಾವ ರೂಢಿಸಿಕೊಳ್ಳುವ ನೆಮ್ಮದಿಯ ನೆಲೆಯಾಗಿದೆ ಎಂಬುದರ ಸ್ಮರಣೆ ಮಾಡಿಕೊಳ್ಳುವಾಗ ಹೇಗೆ ಇವೆಲ್ಲ ಕ್ಷೇತ್ರ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆದುಕೊಂಡಿವೆ ಎಂಬ ವಿಸ್ಮಯವಾಗುತ್ತದೆ! ಎಲ್ಲವೂ ದೇವರಿಂದ ದೇವರಿಗಾಗಿ! ಮನುಜರು ನಿಮಿತ್ತ ಮಾತ್ರರು. ದಾನಿಗಳ ಸಂತತಿ ಸಾವಿರವಾಗಲಿ ಮನ ಗುನುಗಿಕೊಂಡಿತು. .

-ಮಾಲತಿ ಹೆಗಡೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ವಿಸ್ತಾದೋಮಿನ ಪ್ರಯಾಣದ ವಿಶಿಷ್ಟಾನುಭವ !”

  1. ಗೆಳತಿಯರ ಜೊತೆ ಪ್ರವಾಸ ಹೋಗುವುದು ಅಂದರೆ ಒಂದು ಹೊಸ ಅನುಭವ ಮತ್ತು ಮರೆಯಲಾಗದ ಸಂಗತಿ.. ಅದ್ರಲ್ಲೂ ಶ್ರೀಮತಿ ಮಾಲತಿ ಪ್ರವಾಸ ಮುಗಿಸಿ ಬಂದ ನಂತರ ಪ್ರವಾಸದ ಬಗ್ಗೆ ಬರಯುವ ಲೇಖನ ಓದಿದ ನಂತರ ಮತ್ತೆ ಹೋಗುವ ಕುತೂಹಲ ಮತ್ತು ಆಸೆ ಮೂಡಿಸುತದೆ. ಧನ್ಯವಾದಗಳು ಮಾಲತಿ. 👏👏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter