ಸಾಂಸ್ಕೃತಿಕ ನೇತಾರ – ಶಿಮುಂಜೆ ಪರಾರಿ

ನುಡಿ ನಮನ

ಶ್ರೀ ಶಿಮುಂಜೆ ಪರಾರಿ (84 ವರ್ಷ ವಯಸ್ಸಿನಲ್ಲಿ, 15.09.2024 ರಂದು ನಿಧನರಾದರು)

ಇತ್ತೀಚಿಗೆ ನಮ್ಮನ್ನು ಅಗಲಿದ ಸಾಹಿತಿ, ಕಲಾವಿದ ಶಿಮುಂಜೆ ಪರಾರಿ ಅವರ ಸಾಂಸ್ಕೃತಿಕ ಪರಿಚಾರಿಕೆ ಗುರುತರವಾದುದು.ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಅವರು ತಮ್ಮನ್ನು ತಾವು ರೂಪಿಸಿಕೊಂಡು ಮುಂಬೈನ ತುಳು ಕನ್ನಡಿಗರಿಗೆ ಮಾದರಿಯಾಗಿದ್ದ ಕ್ರಿಯಾಶೀಲ ಚೇತನ.ಸದ್ದುಗದ್ದಲವಿಲ್ಲದೇ ಅವರು ಮಾಡಿದ ಸಾಹಿತ್ಯ  ಕೃಷಿಯೂ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ.ಶಿಮುಂಜೆ ಅವರ ಜೀವನ ಯಾನದ ಕಿರು ಲೇಖನ ಇಲ್ಲಿದೆ.

ಮುಂಬಯಿ ಕನ್ನಡಿಗರಿಗೆ ಶಿಮುಂಜೆ ಪರಾರಿ (1940-2024)ಅವರು ಚಿರಪರಿಚಿತರಾಗಿದ್ದರು.ಅವರು ನಾಟಕಕಾರರಾಗಿ, ಅಧ್ಯಾಪಕರಾಗಿ, ಅನುವಾದಕರಾಗಿ, ನಟರಾಗಿ,ಆಧುನಿಕ ವಚನಕಾರ ರಾಗಿ,ಸ್ನೇಹಸೇತುವಾಗಿ ಮುಂಬಯಿಯ ಸಾಂಸ್ಕೃತಿಕ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರು. ಅವರದು ಬಹುಮುಖ ಪ್ರತಿಭೆ ಹಾಗೂ ಬಹು ಭಾಷಿಕ ಸಂವೇದನೆ.ಕನ್ನಡ, ತುಳು, ಹಿಂದಿ,ಮರಾಠಿ, ಗುಜರಾತಿ ಮೊದಲಾದ ಭಾಷೆಗಳಲ್ಲಿ ನಿರರ್ಗಳ ವ್ಯವಹಾರ, ಸಾಹಿತ್ಯ ರಚನೆ, ಆದಾನ ಪ್ರದಾನ. ಹಾಗೆಯೇ ‘ಅವಳ ತೊಡಿಗೆ ಇವಳಿಗಿಟ್ಟು’ ನೋಡುವ ಪ್ರಯೋಗಶೀಲ ಮನಸ್ಸು.ಶಿಮುಂಜೆ ಅವರು ತುಳು ಭಾಷೆಯಲ್ಲಿ ಸಾವಿರಾರು ಚುಟುಕುಗಳನ್ನು ಬರೆದ ಸರದಾರ. ರಂಗದ ಮೇಲೆ ಬಣ್ಣ ಹಚ್ಚಿ ಕುಣಿದು ಬೆಳ್ಳಿ ತೆರೆಯಲ್ಲೂ ಮಿಂಚಿ ಸೈ ಸೈ ಎನಿಸಿಕೊಂಡ ಅಪೂರ್ವ ಕಲಾವಿದ. ಅದಕ್ಕಾಗಿ ನಟ ನಾನಾ ಪಾಟೇಕರ್, ಸದಾನಂದ ಸುವರ್ಣ ಮೊದಲಾದವರಿಂದ ಕೊಂಡಾಟ. ಕೊನೆಯ ತನಕ ಕಾಪಿಟ್ಟುಕೊಂಡು ಬಂದ ಮುಗ್ಧತೆ, ಸರಳತೆ, ರಸಿಕತೆ ಸಾಹಿತ್ಯ ಸಂಸ್ಕಾರ ಪಡೆದ ಸಹೃದಯಿ, ಅಜಾತಶತ್ರು. ಹಾಗಾಗಿ ಶಿಮುಂಜೆ ಪರಾರಿ ಅವರು ಮುಂಬಯಿ ಕನ್ನಡ-ತುಳು ಅಭಿಮಾನಿಗಳಿಗೆ ಅತ್ಯಂತ ಆಪ್ತರು,ಆತ್ಮೀಯರು.

ಶಿಮುಂಜೆ ಅವರ ಪೂರ್ಣ ಹೆಸರು ಸೀತಾರಾಮ ಮುದ್ದಣ ಶೆಟ್ಟಿ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ. ಬೆಳೆದದ್ದು ಬೊಂಬಾಯಿಯಲ್ಲಿ. ಅತ್ತ ಗ್ರಾಮೀಣ ಸಂವೇದನೆ, ಇತ್ತ ನಗರ ಪ್ರಜ್ಞೆ; ಇವೆರಡರ ನಡುವೆ ಅರಳಿತು ಅವರ ಕವಿ  ಮನಸ್ಸು. ತಂದೆ ಹಾಕಿಕೊಟ್ಟ ಶಿಸ್ತು ಬದ್ಧ ಜೀವನ; ಅಜ್ಜನ ಅಪ್ಪುಗೆಯ ವಾತ್ಸಲ್ಯ; ಸುತ್ತಲಿನದೆಲ್ಲವನ್ನು ನೋಡುವ ಹವ್ಯಾಸ; ಬೆಳೆಯುತ್ತಿದ್ದ ಎಳೆಯ ಮನಸ್ಸಿಗೆ ಗಾಂಧೀ, ಸುಭಾಷಚಂದ್ರ ಬೋಸ್, ನೆಹರೂ, ಸರೋಜಿನಿ ನಾಯ್ಡು, ಆಜಾದ್ ಮೊದಲಾದವರ ದರ್ಶನ ಭಾಗ್ಯ ! ‘ಗುರು ನಿತ್ಯಾನಂದರ ವಿವೇಕವಾಣಿ, ರಾಮಾಯಣ, ಮಹಾಭಾರತಗಳ ಪ್ರಭಾವ, ಕನ್ನಡ ಪುಸ್ತಕಗಳ ಓದು ಇವೆಲ್ಲ ತನ್ನನ್ನು ಹೊಸಬನನ್ನಾಗಿ ಮಾಡಿದವು’ ಎಂದವರು ಸದಾ ಸ್ಮರಿಸುತ್ತಾ ಬಂದಿದ್ದರು.

ಶಿಮುಂಜೆ,ಕನ್ನಡದ ಮೇರು ಸಾಹಿತಿ ಅನಕೃ ಅವರ  ಉತ್ಕಟ ಅಭಿಮಾನಿ. ಹೀಗಾಗಿ ಬಾಲ್ಯದಲ್ಲೇ ಓದಿನ ಗೀಳು ಅವರಿಗೆ ಅಂಟಿಕೊಂಡಿತು. ದೂರದ ಮುಂಬಯಿಯಲ್ಲೂ ಅನಕೃ ಪುಸ್ತಕಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ! ಕನ್ನಡ ಗದ್ಯ ಸಾಹಿತ್ಯದ ಓಟ; ಓಜಸ್ಸುಗಳು ಅವರಿಗೆ ಪ್ರಿಯವೆನಿಸಿದವು. ಮುಂಬೈ ಮಹಾನಗರದಲ್ಲಿ ಬಹುಭಾಷೆಗಳ ನಡುವೆ ಬದುಕು ಕಟ್ಟಿಕೊಂಡು ಸಾಂಸ್ಕೃತಿಕ ಸರದಾರನಂತೆ ಕೆಲಸ ಮಾಡಿದರು . ತುಳು, ಕನ್ನಡ, ಹಿಂದಿ,ಮರಾಠಿ, ಗುಜರಾತಿ, ಬಂಗಾಳಿ, ಸಿಂಧೀ, ಪಂಜಾಬಿ ಸಿನೇಮಾ ನಾಟಕಗಳನ್ನು ನೋಡಿ, ಕಂಡು ಆನಂದಿಸುವ ಅಪೂರ್ವ ಅವಕಾಶ ಅವರಿಗೆ ಎಳವೆಯಲ್ಲೇ ಸಿಕ್ಕಿತು . ಅನುವಾದದಲ್ಲಿ ವಿಶೇಷ ಆಸ್ಥೆಬಲಿಯಿತು , ಪರಿಣಾಮ 1959 ರಲ್ಲೇ ಖ್ಯಾತ ಹಿಂದಿ ಲೇಖಕ ವಿಷ್ಣು ಪ್ರಭಾಕರ್ ಅವರ ಐತಿಹಾಸಿಕ ಕೃತಿ , ‘ನವಪ್ರಭಾತ’ ಎಂಬ ಕಿರು ನಾಟಕವನ್ನು ಕನ್ನಡಕ್ಕೆ ತಂದರು. ಪ್ರಸಿದ್ದ ರಂಗ ನಿರ್ದೇಶಕ ಸದಾನಂದ ಸುವರ್ಣ ಅವರು ಈ ನಾಟಕವನ್ನು ‘ಧರ್ಮಚಕ್ರ’ ಎಂಬುದಾಗಿ ಹೆಸರಿಸಿ ರಂಗದ ಮೇಲೆ ತಂದರು. ಆಗ ಶಿಮುಂಚೆ ಅವರೊಳಗಿದ್ದ ‘ನಟ’ ಪ್ರತ್ಯಕ್ಷನಾದ. ಸದಾನಂದ ಸುವರ್ಣ, ಕೆ. ಜೆ. ರಾವ್, ಸುಬ್ಬನರಸಿಂಹ ಮೊದಲಾದವರ ನಾಟಕಗಳಲ್ಲಿ ಮನಸೋಕ್ತ ಅಭಿನಯ, ಅಭಿಮಾನಿಗಳಿಂದ ಮುಕ್ತ ಕಂಠದ ಪ್ರಶಂಸೆ. ಇದರ ಬೆನ್ನಲ್ಲೇ ಬೆಳ್ಳಿತೆರೆಗೆ ಬುಲಾವ್, ಪ್ರತಿಭಾವಂತ ನಿರ್ದೇಶಕ ಗಿರೀಶ ಕಾಸರವಳ್ಳಿ ನಿರ್ದೇಶನದ ಸದಾನಂದ ಸುವರ್ಣ ಅವರು ನಿರ್ಮಿಸಿದ ‘ಘಟಶ್ರಾದ್ದ ‘ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ. ಅದರಲ್ಲೂ ಶಿಮುಂಜೆ ಅವರು ಮಿಂಚಿದರು. 1977 ರಲ್ಲಿ ‘ಘಟಶ್ರಾದ್ಧ’ಕ್ಕೆ ಸ್ವರ್ಣ ಕಮಲ ಪ್ರಶಸ್ತಿ; ಆ ಸಿನಿಮಾ ಒಂದು ಅಪೂರ್ವ ಅನುಭವ ಅವರಿಗೆ.ಮುಂದೆ ‘ಅಣ್ಣನ ಮದುವೆ’, ‘ಆಕಸ್ಮಿಕ’, ‘ಡೊಂಕು ಬಾಲದ ನಾಯಕರು’, ‘ಗುಡ್ಡದ ಭೂತ’, ‘ಸುಳಿ’, ‘ಸೂತ್ರ’, ‘ಚಕ್ರವ್ಯೂಹ’, ‘ಯಾರು ನನ್ನವರು’ ಮೊದಲಾದ ಪ್ರಮುಖ ನಾಟಕಗಳಲ್ಲಿ ಉತ್ತಮ ನಟನಾಗಿ ಶಿಮುಂಜೆ ಹೆಸರು ಗಳಿಸಿದರು.

ಇತ್ತ ಅನುವಾದ ಕಾರ್ಯದಲ್ಲೂಅವರ ದುಡಿಮೆ ದೊಡ್ಡದು . ಹಿಂದಿ, ಮರಾಠಿ, ಗುಜರಾತಿಯ ಶ್ರೇಷ್ಠ ಕತೆ, ನಾಟಕ, ಲೇಖನಗಳನ್ನು ಅವರು ಕನ್ನಡಕ್ಕೆ ತಂದರು. ಹುತಾತ್ಮರು, ನಿಯೋಗ, ಹಣತೆ, ಯಾರು ನನ್ನವರು (ಪ್ರಸಿದ್ಧ ಮರಾಠಿ ನಾಟಕ), ನಾನು… ನೀನು… ಮತ್ತು (ಚಂದ್ರಕಾಂತ ಭಕ್ಷೀ ಅವರ ಗುಜರಾತಿ ಸಣ್ಣಕತೆಗಳ ಅನುವಾದ) ಮೊದಲಾದ ಕೃತಿಗಳನ್ನು ಕನ್ನಡಕ್ಕೆ ತಂದ ಸಾಧನೆ ಅವರದು. ಅವರು ಅನುವಾದಿಸಿದ ಕೆಲವು ಒಳ್ಳೆಯ ಕೃತಿಗಳು ಇನ್ನೂ ಬೆಳಕು ಕಂಡಿಲ್ಲ ಎನ್ನುವುದು ಬೇಸರದ ಸಂಗತಿ. ಹೊರನಾಡಿನಲ್ಲಿದ್ದುಕೊಂಡು ಕೃತಿಗಳನ್ನು ಬರೆದು ಅಚ್ಚುಹಾಕಿಸಿ ಮಾರಾಟ ಮಾಡುವಾಗ ಲೇಖಕ ಸುಸ್ತು ಹೊಡೆದು ಹೋಗುತ್ತಾನೆ. ಶಿಮುಂಜೆ ಅವರೂ ಅದಕ್ಕೆ ಹೊರತಲ್ಲ.ಆದರೂ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿ ತುಳು ಸಾಹಿತ್ಯ ವಲಯದಲ್ಲಿಯೂ ಮಿಂಚಿದರು.

ಶಿಮುಂಜೆ ಅವರು ಮೂಲತಃ ಕವಿ, ಚಿಂತನಶೀಲ ಕವಿ. ಅವರದು ಮೃದು ಮಾತು. ಪಕ್ವ ಮನಸ್ಸು ‘ನಿತ್ಯ ಆನಂದ ವಚನ’  ಮುಕ್ತಕಗಳ ಮಾಲೆಯ ಬಹು ಸಂಪುಟಗಳು ಅವರಿಗೆ ವಿಶೇಷವಾದ ಸಿದ್ಧಿ ಪ್ರಸಿದ್ಧಿಯನ್ನು ತಂದುಕೊಟ್ಟಿವೆ . ಹೀಗಾಗಿ ಆಧುನಿಕ ವಚನಕಾರರ ಸಾಲಿನಲ್ಲಿಯೂ ಶಿಮುಂಜೆ ಅವರಿಗೆ ಶಾಶ್ವತ ಕೀರ್ತಿ ಲಭಿಸಲಿದೆ. ಕನ್ನಡದಂತೆ ಅವರು ತುಳುವಿನಲ್ಲಿಯೂ ದೊಡ್ಡ ಸಾಧನೆಗೈದಿದ್ದಾರೆ. ಸಾವಿರಾರು ಚುಟುಕುಗಳನ್ನು ಬರೆದು ‘ತುಳು ಚುಟುಕು ಬ್ರಹ್ಮ ‘ನಾಗಿ ಕಂಗೊಳಿಸಿದ್ದಾರೆ. ‘ಯಾನ್ ಪಣ್ಣಿನಿ ಇಂಚ’ ಎಂಬ ಹತ್ತು ಸಂಪುಟಗಳಲ್ಲಿ ಈ ಸಾವಿರಾರು ಮುಕ್ತಕಗಳನ್ನು ಪ್ರಕಟಿಸಿ ವಿವಿಧ ಸಂಘ ಸಂಸ್ಥೆಗಳ, ದಾನಿಗಳ ನೆರವಿನಿಂದ ಮೂವತ್ತು ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಿ ಉಚಿತವಾಗಿ ಹಂಚಿದ್ದಾರೆ! ಇದು ಭಾರತೀಯ ಭಾಷೆಗಳ ಇತಿಹಾಸದಲ್ಲೇ ಒಂದು ಅನನ್ಯ ಸಾಧನೆ. ಚಿಕ್ಕ ಚಿಕ್ಕ ಭಾವಗಳನ್ನು ಚೊಕ್ಕವಾಗಿ, ಮನಸ್ಸಿಗೆ ನಾಟುವಂತೆ ಹೇಳಬಲ್ಲ ಸಾಮರ್ಥ್ಯ ಅವರಿಗೆ ಸಿದ್ಧಿಸಿತ್ತು . ಉದಾಹರಣೆಗೆ, ಅವರ ಎರಡು ಮುಕ್ತಕಗಳನ್ನು ನಾವಿಲ್ಲಿ ಗಮನಿಸಬಹುದು.

‘ಮಧುರವಾಗಿ ಮಾತಾಡುವವ ಮೆಣಸನ್ನು ಮಾರಬಲ್ಲನಯ್ಯಾ ಕಹಿಯಾಗಿ ಮಾತಾಡುವವ ಜೇನನೂ ಮಾರಲಾರನಯ್ಯಾ ಗುರುನಿತ್ಯಾನಂದ’

‘ಅರಮನೆಗೆ ಆಗಮಿಸಿದ ಸನ್ಯಾಸಿಯ ಸತ್ಕರಿಸಿ ರಾಜ ಕೇಳಿದನಂತೆ –  ನಿಮಗೇನು ಬೇಕು ಹೇಳಿ  ಜಿಗಿದೆದ್ದು ನಿಂತು ಸನ್ಯಾಸಿ ಹೇಳಿದವನಂತೆ ಬೇಡುವವನಲ್ಲಿ – ಬೇಡುವವ ನಾನಲ್ಲ ಕೇಳಿ –  ಗುರು ನಿತ್ಯಾನಂದ’

ಹೀಗೆ ಶಿಮುಂಜೆ ವಿರಚಿತ ಮುಕ್ತಕಗಳು ಸರಳವಾಗಿವೆ, ಸುಂದರವಾಗಿವೆ. ಎಲ್ಲ ಅನುಭವಗಳ ಅಭಿವ್ಯಕ್ತಿಗೂ ಈ ಮುಕ್ತಕ ಮಾಧ್ಯಮವಾಗಬಲ್ಲುದು ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಶಿಮುಂಜೆ – ಅವರು ತುಳು ಹಾಗೂ ಕನ್ನಡ ಭಾಷೆಯಲ್ಲಿ ಬರೆದಿರುವ ಈ ಮುಕ್ತಕಗಳನ್ನು ‘ನಿತ್ಯೋಪನಿಷತ್ತುಗಳು’ ಎಂದು ವಿದ್ವಾಂಸರು ಕೊಂಡಾಡಿದ್ದಾರೆ. ತುಳು ಭಾಷೆಗೆ ಅವರು ಅನುವಾದಿಸಿದ ಮರಾಠಿ ನಾಟಕ ‘ಜೋಕುಲು ಬಾಲೆಲು’  ರಂಗ ಮಂಚದಲ್ಲಿ ಹೆಸರು ಮಾಡಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದೊಂದು ಒಳ್ಳೆಯ ಅನುವಾದಿತ ನಾಟಕ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.

 ಮುಂಬಯಿಯ ಸಂಘ ಸಂಸ್ಥೆಗಳೂ ಶಿಮುಂಜೆ ಅವರ ಜೀವನ ಸಾಧನೆಯನ್ನು ಗುರುತಿಸಿ ಸತ್ಕರಿಸಿವೆ.ಕರ್ನಾಟಕ ಸಂಘದ ವರದರಾಜ ಆದ್ಯ ಪ್ರಶಸ್ತಿ, ಐ ಲೇಸಾದ ವಯೋ ಸಮ್ಮಾನ್, ಮುಂಬೈ ವಿವಿ ಕನ್ನಡ ವಿಭಾಗದ ಗೌರವಕ್ಕೂ ಅವರು ಭಾಜನರಾಗಿದ್ದರು. ಅವರ ಬದುಕು ಬರಹವನ್ನು ಅಧ್ಯಯನ ಮಾಡಿ ಡಾ. ಪೂರ್ಣಿಮಾ ಶೆಟ್ಟಿ ಅವರು ಮುಂಬೈ ವಿವಿಯಿಂದ ಎಂ. ಫಿಲ್ ಪದವಿಯನ್ನು ಪಡೆದುಕೊಂಡಿದ್ದರು. ಆ ಸಂಪ್ರಬಂಧ ಕೃತಿ ರೂಪದಲ್ಲಿ ಪ್ರಕಟಣೆ ಕಂಡಿದೆ. ಸಂಪ್ರೀತಿ ಶಿಮುಂಜೆ ಅವರಿಗೆ ಅರ್ಪಿಸಲಾದ ಗೌರವ ಗ್ರಂಥ.ನಮ್ಮ ನಾಡಿನ ಹಿರಿಯ ಕಲಾವಿದರಲ್ಲಿ ಶಿಮುಂಜೆ ಅವರೂ ಒಬ್ಬರಾಗಿದ್ದರು. 

ಮುಂಬಯಿಯಲ್ಲಿ ಸದ್ದು ಗದ್ದಲವಿಲ್ಲದೆ  ಯಾವುದೇ ಪ್ರಚಾರದ ಗೀಳು ಅಂಟಿಸಿಕೊಳ್ಳದೆ, ಯಾವುದೋ ಒಂದು ತತ್ವ ಸಿದ್ಧಾಂತಕ್ಕೆ ಕಟ್ಟು ಬೀಳದೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಶಿಮುಂಜೆ ಅವರು ‘ಆರಕ್ಕೇರದ ಮೂರಕ್ಕಿಳಿಯದ’ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಅವರ ಸಾಹಿತ್ಯ ಸಾಧನೆಯನ್ನುಹಿರಿಯ ಸಾಹಿತಿ ರತ್ನಾಕರ ಶೆಟ್ಟಿ ಅವರು ಒಂದು ಕಡೆ ಹೀಗೆ ಗುರುತಿಸಿದ್ದಾರೆ,’ಶಿಮುಂಜೆ ಪರಾರಿ’ ಇದೊಂದು ಮಾರ್ಮಿಕ ಕಾವ್ಯನಾಮ. ಪರಾರಿ ಅವರಿಗೆ ಕುತೂಹಲದ ಕಣ್ಣು ಜನ್ಮಜಾತವಾಗಿಯೇ ಬಂದಿರಬೇಕು. ಎಲ್ಲೆಡೆ ಕಣ್ಣಾಡಿಸುವ ಅಂತೆಯೇ ಕೈಯಾಡಿಸುವ ಬುದ್ದಿ ಅವರದು. ಒಮ್ಮೆಲೆ ಬರವಣಿಗೆಯನ್ನೆಲ್ಲ ತೊರದು ನಾಟಕ, ಸಿನಿಮಾ, ದೃಶ್ಯ ಮಾಧ್ಯಮಗಳಲ್ಲಿ ತಾನೇ ನಟನಾಗಿ ಅಭಿನಯ ಕುಶಲತೆಯನ್ನು ತೋರಿ ಜನಮೆಚ್ಚುಗೆ ಗಳಿಸಿದ್ದು, ತಾನು ಓದಿ ಮೆಚ್ಚಿದ ಅನ್ಯಭಾಷಾ ಲೇಖಕರ ಬರೆಹಗಳನ್ನು ಕನ್ನಡ ಬಾಂಧವರೂ ಓದಿ ಆನಂದಿಸಲೆಂದು ಕೃತಿಗಳನ್ನು ಹೊರತಂದ ಗಮನಾರ್ಹ ಲೇಖಕ. ಈ ಹೊಗಳಿಕೆಯ ಮಾತಿನಲ್ಲಿ ತಥ್ಯವಿದೆ. “ಜನ ಓದಿ ಖುಷಿಪಟ್ಟು ತನ್ನೊಡನೆ ಆ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನಾವುದಿದೆ?” ಎಂದವರು ಪ್ರಾಂಜಲ ಮನಸ್ಸಿನಿಂದ  ಹೇಳಿಕೊಂಡಿದ್ದರು.ಅವರು ಹಾಸ್ಯ ಪ್ರಿಯ, ನೇರ ನಡೆನುಡಿಯ ಮನುಷ್ಯ.ಸರಳ ಸಜ್ಜನಿಕೆಯ ಶಿಮುಂಜೆ ಅವರದು ಸುಸಂಸ್ಕೃತ ವ್ಯಕ್ತಿತ್ವ, ಸಾರ್ಥಕ ಬದುಕು.

ಶಿಮುಂಜೆ ಅವರೊಂದಿಗೆ ಕಾಲ ಕಾಲಕ್ಕೆ ಮಾತುಕತೆ ನಡೆಸುವ ಅವಕಾಶ ನನಗೆ ಸಿಕ್ಕಿತ್ತು. ಅವರ ಜೀವನ ಸಾಧನೆಯನ್ನು ಅರ್ಥಮಾಡಿಕೊಳ್ಳಲು ಇದು ಸಹಾಯಕವಾಗಿದೆ.

ಸಾಹಿತ್ಯದಲ್ಲಿ ನಿಮಗೆ ಆಸಕ್ತಿ ಮೂಡಿದ್ದು ಹೇಗೆ?

ಸಾಹಿತ್ಯದಲ್ಲಿ ಆಸಕ್ತಿ ಹೇಗೆ ಮೂಡಿತು ಎಂದು ನನಗೆ ಗೊತ್ತಿಲ್ಲ. 1918 ರ ಸುಮಾರಿಗೆ ಮುಂಬಯಿಗೆ ಬಂದ ನಮ್ಮ ತಂದೆಯವರು ಇಲ್ಲಿ ನಾಲ್ಕಾರು ಹೊಟೇಲು ಮಾಡಿದ್ದರು. 1942 ರಲ್ಲಿ ಮುಂಬಯಿಯಲ್ಲಿ ಹಿಂದೂ – ಮುಸ್ಲಿಂ ಜಗಳ ಶುರುವಾದಾಗ, ಸಿಕ್ಕಿದ ಬೆಲೆಗೆ ಎಲ್ಲವನ್ನೂ ಮಾರಿ, ಪ್ರಭಾದೇವಿಯಲ್ಲೊಂದು ಹೋಟೆಲ್  ಖರೀದಿಸಿದರು. ಗುರು ನಿತ್ಯಾನಂದರ ಭಕ್ತರಾಗಿದ್ದ ಅವರು ತೀರಾ ಆಧ್ಯಾತ್ಮ ಪ್ರವೃತ್ತಿ ಹೊಂದಿದ್ದರು. ಅವರು ಯಕ್ಷಗಾನ, ತಾಳಮದ್ದಳೆ, ಭಜನೆಗಳಲ್ಲಿ ಭಾಗವಹಿಸುತ್ತಿದ್ದರು. ರಾಷ್ಟ್ರೀಯ ಮನೋವೃತ್ತಿಯಿತ್ತು. ಸ್ವಾತಂತ್ರ್ಯ ಪೂರ್ವದ ರಾಷ್ಟ್ರೀಯ ನಾಯಕರ ಭಾಷಣಗಳನ್ನು ಕೇಳಲು ಚೌಪಾಟಿ ಮತ್ತು ಶಿವಾಜಿ ಪಾರ್ಕಿಗೆ ಹೋಗುವಾಗ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ಬೇರೆ ಬೇರೆಯವರು ಬರೆದ ರಾಮಾಯಣ – ಮಹಾಭಾರತ ಭಗವದ್ಗೀತೆಗಳ ಹತ್ತಾರು ಕನ್ನಡ ಆವೃತ್ತಿಗಳು ಅವರ ಬಳಿಯಿದ್ದವು. ಅವರು ಅದನ್ನು ಪ್ರತಿದಿನ ಪಾರಾಯಣ ಮಾಡುವುದನ್ನು ನಾನು ಕಂಡಿದ್ದೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾನು ಭಜನಾವಳಿ, ಚಂದಮಾಮ, ಬಾಲಮಿತ್ರ ಮೊದಲಾದ ಪುಸ್ತಕಗಳನ್ನು ಖರೀದಿಸಿದಾಗ ಅವರು ಸಿಟ್ಟಾಗುತ್ತಿರಲಿಲ್ಲ. ಬಹುಶಃ ಇವೆಲ್ಲ ಬಾಲ್ಯದಲ್ಲೇ. ನನ್ನ ಮೇಲೆ ಪ್ರಭಾವ ಬೀರಿರಬಹುದು.

ನಿಮ್ಮ ಬಾಲ್ಯದ ದಿನಗಳು ಹೇಗಿದ್ದವು? ಯಾರ ಯಾರ ಪ್ರಭಾವ ನಿಮ್ಮ ಮೇಲಾಯಿತು?

1940 ರಲ್ಲಿ ಹುಟ್ಟಿದ ನಾನು 1949 ರ ವರೆಗೆ ಮುಂಬಯಿಯಲ್ಲಿ ಮಾತಾ – ಪಿತರ ಜೊತೆಯಲ್ಲೇ ಬೆಳೆದೆ. ಬಾಲ್ಯವು ಆನಂದಮಯವಾಗಿತ್ತು. ದಾದರಿನ ರಾಮಮಾರುತಿ ರೋಡ್ ಮ್ಯುನ್ಸಿಪಲ್ ಕನ್ನಡ ಶಾಲೆಗೆ ಹೋಗುವುದು, ಸಾಯಂಕಾಲ ಶಿವಾಜಿ ಪಾರ್ಕಿನಲ್ಲಿ ಗಾಂಧೀಜಿ, ಸುಭಾಸ್, ನೆಹರೂ, ಸರೋಜಿನೀ ನಾಯಿಡು, ಅಬ್ದುಲ್ ಕಲಾಂ ಆಜಾದ್ ಮುಂತಾದ ರಾಷ್ಟ್ರೀಯ ನಾಯಕರನ್ನು ನೋಡುವುದು, ಮನೆಗೆ ಬಂದ ಬಳಿಕ ತಂದೆಯವರು ಕತೆ ಹೇಳುವುದನ್ನು ಕೇಳುತ್ತಾ ತೂಕಡಿಸುವುದು. 1947 ರಲ್ಲಿ ದೊರಕಿದ ಸ್ವಾತಂತ್ರ್ಯದ ಸಂಭ್ರಮ, 1948 ರಲ್ಲಿ ಗಾಂಧೀ ಹತ್ಯೆಯ ಬಳಿಕ ನಡೆದ ನರಮೇಧ ಎರಡನ್ನೂ ಕಂಡಿರುವ ಮಸುಕು ನೆನಪುಗಳಿವೆ. ಇದೇ ಸಮಯದಲ್ಲಿ ಮುಂಬಯಿಗೆ ಬಂದ ನನ್ನ ತಾಯಿಯ ತಂದೆ (ಅಜ್ಜ) ಶಿಮಂತೂರು ಮಜಲುಗುತ್ತು ಹರಿಯಪ್ಪ ಶೆಟ್ಟರು. “ಮನೆಯಲ್ಲಿ ಚಿಕ್ಕ ಮಕ್ಕಳಿಲ್ಲ” ಎಂದು ನನ್ನನ್ನು ಊರಿಗೆ ಕರೆದುಕೊಂಡು ಹೋದರು. ನಾನು ಅಜ್ಜನ ಪೆಟ್ . 1954 ರಲ್ಲಿ ಅವರು ತೀರಿಕೊಳ್ಳುವವರೆಗೂ ನಾನು ಮಲಗಿದ್ದು ಚಾಪೆ – ಹಾಸಿಗೆಯ ಮೇಲಲ್ಲ, ಅವರ ಎದೆಯ ಮೇಲೆ. ಕೇಳಿದ್ದು ಸಿರಿ ಪಾಡ್ಡನದ ಜೋಗುಳ. ಅವಿದ್ಯಾವಂತರಾಗಿದ್ದ ಅವರು ಶಾಲೆಯ ಮೇಷ್ಟ್ರುಗಳಿಗೆ ತೋರುತ್ತಿದ್ದ ಗೌರವಾದರಗಳು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಪಕ್ಷವಾತಕ್ಕೆ ಅವರು ಗಿಡಮೂಲಿಕೆ ಎಣ್ಣೆಗೆ ಹಾಕಿ ಕುದಿಸಿಕೊಡುತ್ತಿದ್ದುದು, ಗುಣಮುಖರಾದ ಮಂದಿ ಬಂದು ಅವರ ಕಾಲಿಗೆರಗುತ್ತಿದ್ದುದು, ಸುತ್ತುಮುತ್ತಲ ಗ್ರಾಮಗಳಲ್ಲಿ ದನ – ಎಮ್ಮೆ ಕರು ಹಾಕಿತ್ತಿದ್ದರೆ ಜನ ಬಂದು ಅವರನ್ನು ಕರೆದುಕೊಂಡು ಹೋಗುತ್ತಿದ್ದರು. “ಅಮ್ಮಾ – ತಾಯಿ, ಏನೂ ಹೆದರಬೇಡ, ದೇವರು ಎಲ್ಲ ಸರಿ ಮಾಡುತ್ತಾನೆ” ಎಂದು ಪಶುವಿನೊಂದಿಗೆ ಮಕ್ಕಳ ಜೊತೆ ಮಾತಾಡುವಂತೆ ಮಾತಾಡುತ್ತಾ ತಲೆ – ಬೆನ್ನು ಪೂಸಿದಾಗ, ಅವುಗಳು ಒಂದು ಕ್ಷಣ ನೋವು ಮರೆತು ಅವರ ಕೈ ಮೈ ನೆಕ್ಕುತ್ತಿದ್ದುದನ್ನು ಕಂಡು ನಾನು ಆ ವಯಸ್ಸಿನಲ್ಲೂ ಗದ್ಗದಿತನಾಗುತ್ತಿದ್ದೆ. ಅದರ ಸುಖ ಪ್ರಸವದ ಬಳಿಕ, ಅವರು ಅದರ ಕೊರಳನ್ನು ತಬ್ಬಿಕೊಂಡು ಮೈನೇವರಿಸುತ್ತಿದ್ದುದನ್ನು ಈಗ ನೆನಪಿಸಿಕೊಂಡರೂ ನನಗೆ ರೋಮಾಂಚನವಾಗುತ್ತದೆ. 1954 ರಲ್ಲಿ ಅವರು ತೀರಿಕೊಂಡ ಬಳಿಕ ನಾನು ಮತ್ತೆ ಮುಂಬಯಿಗೆ ಬಂದೆ. ತಂದೆಯ ಹೊಟೇಲು ವ್ಯಾಪಾರಕ್ಕೆ ಹೋಗದೆ, ಹಗಲು ದುಡಿದು ರಾತ್ರಿ ಶಾಲೆಗೆ ಹೋಗುವುದಾಗಿ ಹಟ ಹಿಡಿದೆ.

ನಾಟಕ ರಂಗ ನಿಮ್ಮನ್ನು ಹೇಗೆ ಸೆಳೆಯಿತು?

ಭಾಷೆಗಳು ನನಗೊಂದು ಅಡ್ಡಿ ಅನಿಸಿರಲೇ ಇಲ್ಲ. ಭಾರತದ ಅಂತರಾತ್ಮದ ‘ಭಾವ’ ಒಂದೇ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ತುಳು, ಕನ್ನಡ, ಹಿಂದಿ, ಮರಾಠಿ, ಗುಜರಾತಿ, ಬಂಗಾಲಿ, ತಮಿಳು, ತೆಲುಗು, ಮಲೆಯಾಳಿ, ಸಿಂಧೀ, ಪಂಜಾಬಿ ಸಿನೇಮಾ ನಾಟಕ ನೋಡಿ ಆನಂದಿಸುತ್ತಿದ್ದೆ. ಅಭಿನಯಿಸುವ ಆಸೆ ಮಾತ್ರ ಎಂದೂ ಹುಟ್ಟಿರಲಿಲ್ಲ. ಬಂಟರ ಸಂಘದ ವಾರ್ಷಿಕೋತ್ಸವಕ್ಕಾಗಿ ಗೆಳೆಯ ಕೋಡು ಭೋಜ ಶೆಟ್ಟಿ ಬರೆದ ‘ನಿರ್ಸಾನಿಗ್ ನೀರ್’ ತುಳು ನಾಟಕದ ನಾಯಕನಟ ಕೊನೆಯ ಗಳಿಗೆಯಲ್ಲಿ ಊರಿಗೆ ಹೋಗಬೇಕಾಗಿ ಬಂದ ಕಾರಣ, ನಾನು ಬಣ್ಣ ಹಚ್ಚಿ ರಂಗದ ಮೇಲೆ ಬರುವಂತಾಯಿತು. 1959 ರಲ್ಲಿ ನಾನು ಅನುವಾದಿಸಿದ ಮೊದಲ ಪುಸ್ತಕ ‘ನವಪ್ರಭಾತ’ ಪ್ರಕಟವಾಯಿತು. ಹಿಂದಿಯ ಖ್ಯಾತ ಸಾಹಿತಿ ವಿಷ್ಣು ಪ್ರಭಾಕರ ಅವರು ಬರೆದ ಅಶೋಕಕಾಲೀನ ಐತಿಹಾಸಿಕ ರೇಡಿಯೋ ರೂಪಕ ಅದು. ಅದರ ಸಂಭಾಷಣೆ ಓದಿ ಪ್ರಭಾವಿತರಾದ ಸದಾನಂದ ಸುವರ್ಣ ಅದನ್ನು ರಂಗನಾಟಕವಾಗಿ ರೂಪಾಂತರಿಸಿ ‘ಧರ್ಮಚಕ್ರ’ ಎಂದು ಹೆಸರಿಸಿದರು. ಕನ್ನಡ ಕಲಾಕೇಂದ್ರದ ನಾಟಕ ಉತ್ಸವದಲ್ಲಿ ಅದನ್ನು ಪ್ರಸ್ತುತಗೊಳಿಸುವುದಿತ್ತು. ಈ ನಾಟಕದಲ್ಲಿ ನಾನು ಒಂದು ಪಾತ್ರ ಮಾಡಬೇಕೆಂದು ಅವರು ಅಪೇಕ್ಷಿಸಿದರು. ನನ್ನ ರಾತ್ರಿ ಶಾಲೆಯ ಅಧ್ಯಾಪಕರಾದ ವೈ. ವಿ. ಅಮೀನ್ ಒತ್ತಾಯಿಸಿದರು. ಆನಂತರದ ಹದಿಮೂರು ವರ್ಷಕಾಲ ಸದಾನಂದ ಸುವರ್ಣ, ಕೆ. ಜೆ. ರಾವ್, ಸುಬ್ಬನರಸಿಂಹ ಅವರ ಜೊತೆ ಸೇರಿ ಮನಸೋಕ್ತ ಅಭಿನಯಿಸಿ ಜನರ ಪ್ರೀತಿ ಗಳಿಸಿದ್ದು,1977 ರ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ವಿಜೇತ ಕನ್ನಡ ಸಿನೇಮಾ ‘ಘಟಶ್ರಾದ್ದ ‘ದಲ್ಲಿ ಅಭಿನಯಿಸಿದ್ದು ಎಲ್ಲವೂ ಒಂದು ಆಕಸ್ಮಿಕ.

ಯಾವ ಅಭಿವ್ಯಕ್ತಿ ಮಾಧ್ಯಮ ನಿಮಗೆ ಇಷ್ಟವಾಯಿತು? ಯಾಕೆ?

ಅಭಿವ್ಯಕ್ತಿ ಮಾಧ್ಯಮದ ಕುರಿತು ನಾನೆಂದು ಚಿಂತಿಸಲೇ ಇಲ್ಲ, ಏಕೆಂದರೆ ಮೂಲತಃ ನಾನು ಬರಹಗಾರನಲ್ಲ – ಒಳ್ಳೆಯ ಓದುಗನಾಗುವ ಪ್ರಯತ್ನ ಮಾಡುತ್ತಿರುವವ. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಮುಂಬಯಿಯ ಮೊಗವೀರ ವ್ಯವಸ್ಥಾಪಕ ಮಂಡಳಿಯ ಧರ್ಮಾರ್ಥ ಲೈಬ್ರರಿಯಿಂದ ನನಗೆ ಅಪಾರ ಪುಸ್ತಕಗಳು ಓದಲು ದೊರಕಿದುವು. ವಿದ್ಯಾನಿಧಿಯ ಎಮ್. ಎಸ್. ಕೋಟ್ಯಾನ್ ಅವರಲ್ಲಿ ಖಾತೆಯ ಪುಸ್ತಕವಿಟ್ಟು ತಿಂಗಳ ಸಂಬಳ ಸಿಕ್ಕಿದ ನಂತರ ಹಣ ಪಾವತಿಸುವ ವ್ಯವಸ್ಥೆ ಮಾಡಿಕೊಂಡಿದ್ದೆ. ರೂಪಾರೇಲ್ ಕಾಲೇಜ್ ಮತ್ತು ಕಿಂಗ್ ಸರ್ಕಲಿನ ಕನ್ನಡ ಸಂಘದಿಂದ ಪುಸ್ತಕಗಳನ್ನು ತಂದುಕೊಟ್ಟು ನನ್ನ ಓದಿನ ಹಸಿವು ಹೆಚ್ಚಿಸಲು ಕಾರಣರಾದವರು ಶ್ರೀ ಶೇಖರ ಇಡ್ಯ, ಆಫೀಸಿನಲ್ಲಿ ಕೂಡ ನನ್ನೆಲ್ಲ ಸಹೋದ್ಯೋಗಿಗಳು “ಅವನು ಎಲ್ಲಾ ಭಾಷೆ ಓದುವವನು” ಎಂದು ಹಾಸ್ಯ ಮಿಶ್ರಿತ ಅಭಿಮಾನದೊಂದಿಗೆ ಅವರವರ ಭಾಷೆಗಳ ಪತ್ರಿಕೆಗಳನ್ನು ನನ್ನ ಮೇಜಿನ ಮೇಲಿರಿಸಿ ಹೋಗುತ್ತಿದ್ದರು. ತಮಿಳು ಕಲಿಯುವ ನನ್ನ ಪ್ರಯತ್ನ ಅರ್ಧದಲ್ಲೇ ನಿಂತು ಹೋಯಿತು. ಈ ಓದುವಿಕೆಯ ಮಧ್ಯೆ ಯಾವುದಾದರೊಂದನ್ನು ಇದು ಚೆನ್ನಾಗಿದೆ, ಇದನ್ನು ನಮ್ಮವರಿಗೆ ಹೇಳಬೇಕು, ಅನಿಸಿದಾಗ ಮಾತ್ರ ನಾನು ಅವನ್ನು ಕನ್ನಡಕ್ಕೆ ಅನುವಾದಿಸಿದೆ. ಹೀಗಾಗಿ ಈಗ ನನ್ನನ್ನು ಅನುವಾದಕ / ರೂಪಾಂತರಕಾರ ಎಂದು ಗುರುತಿಸಲಾಗುತ್ತಿದೆ. ನನ್ನ ಪ್ರತೀ ಅನುವಾದಿತ ಲೇಖನ / ಕತೆಗಳ ಜೊತೆ ಮೂಲ ಲೇಖಕರ ಹೆಸರು ಬರೆಯುವುದು ನನಗೆ ಅಭಿಮಾನವೆನಿಸುತ್ತದೆ.

ನಿಮ್ಮ ಮುಂಬಯಿ ಅನುಭವವನ್ನು ತಿಳಿಸಬಹುದೆ?

ಮುಂಬಯಿಯಲ್ಲೇ ಹುಟ್ಟಿದ ಬೆಳೆದ (ಮಧ್ಯದ 4-5 ವರ್ಷ ಬಿಟ್ಟು) ನನ್ನ ಅನುಭವಗಳೆಲ್ಲವೂ ಮುಂಬಯಿಯದೇ. ಅಧ್ಯಾಪಕ, ಬರಹಗಾರ, ಕಲಾವಿದರನ್ನು ಗೌರವಿಸುವ ಮರಾಠಿ ಜನರ ನಡುವೆ ಬೆಳೆದುದರಿಂದಲೋ ಏನೋ ಆ ಗುಣಗಳು ನನ್ನೊಳಗೂ ತುಂಬಿಕೊಂಡಿರಬೇಕು. ಮುಂಬಯಿಯ ಕನ್ನಡ ಸಾಹಿತ್ಯಕೂಟ ಪ್ರಾ. ಚಿದಂಬರ ದೀಕ್ಷಿತರು ಮತ್ತು ಡಾ|ಶ್ರೀನಿವಾಸ ಹಾವನೂರರು ಅಧ್ಯಕ್ಷರಾಗಿದ್ದಾಗ ನಾನು ಮತ್ತು ಸಂತೋಷಕುಮಾರ ಗುಲ್ವಾಡಿ ಕಾರ್ಯನಿರ್ವಾಹಕರಾಗಿದ್ದೆವು. ಮುಂಬಯಿಯ ಎಲ್ಲ ಬರಹಗಾರರು ಮಾತ್ರವಲ್ಲ ಕರ್ನಾಟಕದಿಂದ ಬಂದ ಬಹುತೇಕ ಸಾಹಿತಿಗಳನ್ನು ನಾನು ಅಲ್ಲಿ ಕಾಣುವಂತಾಯಿತು. ಹಲವಾರು ಅಭಿಮಾನಿ ಸಾಹಿತಿ ಮಿತ್ರರನ್ನು ಪಡೆದುದು ನಾನು ಈ ಮುಂಬಯಿಯಲ್ಲಿ. ಸ್ವಾತಂತ್ರ್ಯವೀರ ಸಾವರಕರ್, ಆಚಾರ್ಯ ಪಿ. ಕೆ. ಅತ್ರೆ, ಪು. ಲ. ದೇಶಪಾಂಡೆ, ಪ್ರಭಾಕರ ಪಣ್ಣೀಕರ್, ಮಧುಕರ ತೋರಾಡ್‌ಲ್, ದಾಜೀ ಬಟ್ಟಡೇಕರ್, ಶೇಖರ ತಮ್ಮಾಣೇ ಅಶೋಕ ಪಾಟೋಳೆಯಂತಹ ಘಟಾನುಘಟಿಗಳಾದ ಮರಾಠಿ ಮಹನೀಯರೊಂದಿಗೆ ಬೆರೆಯುವ ಅವಕಾಶ ನನಗೆ ದೊರೆತುದು ಈ ಮುಂಬಯಿ ನಗರಿಯಲ್ಲಿ.

ನಾಟಕ ರಂಗದ ನಿಮ್ಮ ನೆನಪುಗಳೇನು?

ನಾನು ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಜನ ಅದನ್ನು ಮೆಚ್ಚಿಕೊಂಡರು, ಅದು ನನ್ನ ಭಾಗ್ಯ. ಚಕ್ರವ್ಯೂಹ ನಾಟಕದ ‘ಸ್ವಾಮಿ ಪ್ರಭೋದಾನಂದ’ನಾಗಿ ಪ್ರೇಕ್ಷಕರಿಂದ ಗಳಿಸಿದ ಬೈಗಳು, ಕಪ್ಪು ದ್ವೀಪ – ಕೆಂಪು ದ್ವೀಪದ ‘ವಾಚಳಯ್ಯ’ನಾಗಿ ಪ್ರೇಕ್ಷಕರ ಕವಿಗಡಚಿಕ್ಕುವಂತೆ ಭಾಷಣ ಮಾಡಿದ್ದು, ಗುಡ್ಡೆದ ಭೂತದ ‘ರಂಗಣ್ಣ ‘ನಾಗಿ “ಅದೊಂದು ಜನ ಮುಂಬಯಿಯದಲ್ಲ, ಕಂಬಳ – ಕೋಳಿ ಕಟ್ಟಕ್ಕೆ ಹೋಗುವ ಜನ, ಊರಿಂದಲೇ ಬಂದಿರಬೇಕು” ಎಂದು ಪ್ರೇಕ್ಷಕರು ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡದ್ದು, ಭುಲಾಭಾಯ್ ದೇಸಾಯಿ ಆಡಿಟೋರಿಯಮ್ ಪ್ರವೇಶಿಸುವಾಗ ನಾಟಕ ಪ್ರಿಯ ತುಳುವ ಮಂದಿ, ನಾಟಕದ ನನ್ನ ಸಂಭಾಷಣೆಯನ್ನು, ನನ್ನದೇ ಸ್ವರವನ್ನು ಅನುಕರಿಸುತ್ತಾ ಗಟ್ಟಿಯಾಗಿ ಹೇಳುತ್ತಾ ಬರುತ್ತಿದ್ದುದು ನನ್ನ ಬಾಳಿನ ಅವಿಸ್ಮರಣೀಯ ಕ್ಷಣಗಳು.

ಮುಕ್ತಕಗಳ ರಚನೆ ನಿಮಗೆ ಯಾಕೆ ಇಷ್ಟ? 

ಸ್ವಲ್ಪ ಶಬ್ದಗಳಲ್ಲಿ ಬಹಳಷ್ಟನ್ನು ಹೇಳಬಹುದಾದ ಚುಟುಕು, ವಚನ, ಮುಕ್ತಕಗಳು ನನಗೆ ಬಾಲ್ಯದಿಂದಲೂ ಬಹಳ ಪ್ರಿಯವಾಗಿದ್ದವು. ನನ್ನ ಶಾಲಾ ಅಧ್ಯಾಪಕರು ಶಿವಶರಣರ ವಚನಗಳನ್ನು ಹೃದ್ಯವಾಗಿ ಹಾಡಿ ವಿವರಿಸುತ್ತಿದ್ದರು. ಶಾಲಾ ಅಭ್ಯಾಸ ಮುಗಿಸಿದ ಬಳಿಕ ಮತ್ತೊಮ್ಮೆ ಅವೆಲ್ಲವನ್ನು ಮತ್ತು ‘ಮಧುರ ಚೆನ್ನ ‘ರ ಪದಗಳನ್ನು ಓದಿದಾಗ ಸುಖ – ಅನನ್ಯ. ಶೃಂಗಾರ, ಸಂಸಾರ ಮತ್ತು ಅನುಭಾವದ ಕುರಿತು ನೇರವಾಗಿ ಹೇಳಲು ಇದು ಸುಲಭ ಮಾಧ್ಯಮ ಅನಿಸಿತು.

ನಾನು ಬರೆದು ಏನಾದರೂ ಸಾಧಿಸುತ್ತೇನೆ ಎಂಬ ಭ್ರಮೆ ನನಗಿಲ್ಲ ನಾನು ಬರೆಯಲೇಬೇಕು ಎಂದು ಯಾರೂ ಹೇಳಿಲ್ಲ. ನಾನು ಓದಿದ್ದು, ತಿಳಿದಿದ್ದು, ಅನುಭವಿಸಿದ್ದನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ಸಿಗುವ ಸುಖಕ್ಕಾಗಿ ನಾನು ಬರೆಯತೊಡಗಿದೆ. ಅದು ಚೆನ್ನಾಗಿದೆ ಎಂದೋ ಅಥವಾ ತಮ್ಮ ಅಂತಹದೇ ಅನುಭವವೊಂದನ್ನು ಅವರು ನನ್ನೊಂದಿಗೆ ಹಂಚಿಕೊಂಡಾಗ ಸಂತೋಷ ಪಟ್ಟಿದ್ದೇನೆ. ನಾನು ಬರೆದ ಒಂದು ಶಬ್ದ ನೂರು ಓದುಗರ ಮನದಲ್ಲಿ, ನೂರು ವಿಭಿನ್ನ ಚಿತ್ರಗಳನ್ನು ಮೂಡಿಸುವುದನ್ನು ಕಂಡು ಚಕಿತನಾಗಿದ್ದೇನೆ. ಆ ಸಾಮರ್ಥ್ಯವಿರುವುದು ಬರೇ ಶಬ್ದಕ್ಕೆ ಮಾತ್ರ ಎಂದು ಪ್ರಾಮಾಣಿಕವಾಗಿ ನಂಬಿದ್ದೇನೆ.

ಯಾನ್ ಪಣ್ಪಿನಿ ಇಂಚ ಕೃತಿಯ ಮೂಲ ಆಶಯವೇನು?

ಹಿಂದೀ, ಮರಾಠಿ, ಗುಜರಾತಿಯ ಮುಕ್ತಕಗಳನ್ನು ಓದಿ ನಾನು ನಗುತ್ತಿದ್ದಾಗ ಅದನ್ನು ತುಳುವಿನಲ್ಲಿ ಹೇಳಿ ಎಂದು ಶ್ರೀಗಣೇಶ ಮಾಡಿಸಿದವರು ನನ್ನ ಮಕ್ಕಳು. ತುಳುವಿನಲ್ಲಿ ಹೇಳಿದಾಗ ಕೆಲವು ಮೂಲಕ್ಕಿಂತಲೂ ಚೆಲುವಾಗಿ ಮೂಡಿ ಬಂದುದು ನನ್ನ ಗಮನಕ್ಕೆ ಬಂತು. ಮೊದಲು ಕೆಲವನ್ನು ಅನುವಾದಿಸಿದೆ. ಅನಂತರ ನಾನು ಕಂಡುಂಡು ಅನುಭವಿಸಿದ್ದನ್ನು ಬರೆದು ಪತ್ರಿಕೆಯಲ್ಲಿ ಪ್ರಕಟಿಸಿ, ಓದುಗರ ಪ್ರತಿಕ್ರಿಯೆ ತಿಳಿಯಲು ಯತ್ನಿಸಿದೆ. ಅದರ ಅದ್ಭುತವಾದ ಪ್ರತಿಕ್ರಿಯೆ ಕಂಡು ಕೌತುಕವೆನಿಸಿತು. ಪತ್ರಿಕೆ ಉಳಿಯುವುದಿಲ್ಲ. ಪುಸ್ತಕ ರೂಪದಲ್ಲಿ ಪ್ರಕಟಿಸಿ ಎಂದು ನನ್ನ ತುಳುವ ತಾಯಿ ತಂಗಿಯರು ಪತ್ರ ಬರೆಯತೊಡಗಿದರು.

ಮುಂಬಯಿ ತುಳುವರನ್ನು ತುಳು ಓದುವ, ಅಭ್ಯಾಸ ಮಾಡಿಸುವ ದಿಶೆಯಲ್ಲಿ ನನ್ನ ಪ್ರಯತ್ನ ಸಫಲವಾಯಿತು. 19 ಉದ್ಯಮಿಗಳಿಂದ ಸಹಾಯ ಪಡೆದು, ತುಳುವರ 13 ಜಾತೀಯ ಸಂಸ್ಥೆಗಳಿಂದ ಅವರ ಸದಸ್ಯರಿಗೆ ಅವನ್ನು ಉಚಿತವಾಗಿ ವಿತರಿಸಲು ನೆರವು ಪಡೆದುಕೊಂಡೆ. 10 ಕಿರು ಪುಸ್ತಕಗಳ 30 ಸಾವಿರ ಪ್ರತಿಗಳನ್ನು ಮನೆ – ಮನೆಗಳಿಗೆ ಮುಟ್ಟಿಸುವ ನನ್ನ ಕನಸು ನನಸಾಯಿತು. “ಶಿಮುಂಜೆಯವರೇ, ನೀವು ಈ ಕುರಿತು ಆಲೋಚಿಸಿರುವಿರೋ ಇಲ್ಲವೋ ತಿಳಿಯದು. ಆದರೆ ನೀವು ನಮಗೊಂದು ಬಹುದೊಡ್ಡ ಉಪಕಾರ ಮಾಡಿದಿರಿ. ತುಳು ಓದಲು ಕಷ್ಟವಾಗುತ್ತದೆ ಎಂಬವರಿಗೆ ಈ ಪುಸ್ತಕ ಕೊಟ್ಟು ಬಾಯಿ ಮುಚ್ಚಿಸಲು ಸುಲಭವಾಯಿತು” ಎಂದವರು ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು. ಭಾರತೀಯ ಸಾಹಿತ್ಯದ ಪ್ರಕಟಣೆಯಲ್ಲಿಯೇ ಈ ಬಗೆಯ ಸಾಹಸ ಹೊಸದು ಎಂದು ಜನ ಆಡಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಸಾಂಸ್ಕೃತಿಕ ನೇತಾರ – ಶಿಮುಂಜೆ ಪರಾರಿ”

  1. ದಯಾಶಶಿ

    ತುಂಬ ಚೆನ್ನಾಗಿ ಮೂಡಿ ಬಂದಿದೆ “…. ಅಭಿನಂದನೆಗಳು 🙏🙏ಧನ್ಯವಾದಗಳು 🙏🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter