*ಅಮೇರಿಕೆಯ ಕವಿ ಎಡ್ಗರ್ ಅಲ್ಲನ್ ಪೋ ( Edgar Allan Poe) ಅವರ ’ A Dream Within a Dream’ ಕವಿತೆ, ಭಾವಾನುವಾದ : ಸೀಮಾ ಕುಲಕರ್ಣಿ, ಕೌಲಾಲಂಪುರ , ಮಲೇಶಿಯ*
ಸ್ವೀಕರಿಸು ವಿಧಿಲಿಖಿತವನು
ನಾವು ದೂರವಾಗುವ ಸಮಯವಿದು
ಈಗ ನಾ ಹೇಳಲೇಬೇಕಾದದ್ದು ಇದು –
ನನ್ನ ದಿನಗಳು ಕನಸುಗಳಾದವೆಂದು
ನೀನು ಭಾವಿಸಿದ್ದು ತಪ್ಪಲ್ಲ;
ಆದರೂ ಒಂದು ರಾತ್ರಿ, ಒಂದು ದಿನದಲ್ಲಿ,
ಒಂದು ರೀತಿಯಲ್ಲಿ ಯಾವುದರಿಂದಲೋ
ಭರವಸೆಯು ಸೊರಗಿ ಹೋಗಿದ್ದರೂ
ಸಂಬಂಧ ಕರಗಿದಂತೆಯೇ ಅಲ್ಲವೇ?
ನಮಗೆ ಕಾಣುವ, ತೋರುವದೆಲ್ಲವೂ
ಬರಿ ಕನಸಿನೊಳಗಿನ ಕನಸು ಮಾತ್ರ.
–
ಶಿಥಿಲಗೊಂಡ ದಂಡೆಗಪ್ಪಳಿಸುವ
ಅಲೆಗಳಬ್ಬರದ ಮಧ್ಯೆ ನಿಂತಿಹೆನು,
ಕೈಯ್ಯಲ್ಲಿರುವ ಹೊಳೆಹೊಳೆವ ಮಳಲ ಕಣಗಳು-
ಮುಷ್ಠಿಯಲ್ಲುಳಿಯುತ್ತವೆ ಎಂದುಕೊಂಡಿದ್ದೆ
ಆ ಕಣಗಳೆಲ್ಲವೂ ಜಾರಿ
ಸಾಗರದಾಳವ ಸೇರಿಕೊಂಡಿವೆಯಲ್ಲ!
ಕೋಡಿಗಟ್ಟಿಹುದು ಕಣ್ಣೀರು –
ಓ ದೇವರೇ ಕನಸು ಕಳೆಯದಂತೆ
ಹೇಗೆ ಹಿಡಿದಿಟ್ಟುಕೊಳ್ಳಲಿ ಬಿಗಿ ಮುಷ್ಠಿಯಲಿ?
ಹೇಗೆ ರಕ್ಷಿಸಲಿ ನುಗ್ಗುವ ನಿರ್ದಯಿ ಅಲೆಗಳಿಂದ ?
ಹೀಗೆ ಕಾಣುವ, ತೋರುವ ಭರವಸೆಗಳೆಲ್ಲ
ಬರಿ ಕನಸಿನೊಳಗಿನ ಕನಸು ಮಾತ್ರವೇ?
(ಎಡ್ಗರ್ ಅಲನ್ ಪೋ (ಜನವರಿ 19, 1809 – ಅಕ್ಟೋಬರ್ 7, 1849) ಅಮೇರಿಕನ್ ಬರಹಗಾರ, ಕವಿ, ಸಂಪಾದಕ ಮತ್ತು ಸಾಹಿತ್ಯ ವಿಮರ್ಶಕ. ಅವರು ತಮ್ಮ ಕವನ ಮತ್ತು ಸಣ್ಣ ಕಥೆಗಳಿಗೆ, ಅದರಲ್ಲೂ ವಿಶೇಷವಾಗಿ ನಿಗೂಢತೆ ಮತ್ತು ಭಯಾನಕತೆಯ ಕಥಾವಸ್ತುವನ್ನೊಳಗೊಂಡ ಕಥೆಗಳಿಗೆ ಜನಪ್ರಿಯರಾಗಿದ್ದಾರೆಗಿದ್ದಾರೆ. ಎಡ್ಗರ್ ಅಲನ್ ಪೋ ಅವರನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ರೊಮ್ಯಾಂಟಿಸಿಸಂ, ಗೋಥಿಕ್ ಫಿಕ್ಷನ್ ಮತ್ತು ಆರಂಭಿಕ ಅಮೇರಿಕನ್ ಸಾಹಿತ್ಯದ ಕೇಂದ್ರ ವ್ಯಕ್ತಿಗಳಲ್ಲೊಬ್ಬರೆಂದು ಪರಿಗಣಿಸಲಾಗಿದೆ. ಅಮೇರಿಕೆಯಲ್ಲಿ ಸಣ್ಣ ಕಥೆಯ ಪ್ರಾರಂಭಿಕ ಯಶಸ್ವಿ ಬರಹಗಾರರಲ್ಲಿ ಪೋ ಒಬ್ಬರಾಗಿದ್ದರು ಮತ್ತು ಅವರನ್ನು ಸಾಮಾನ್ಯವಾಗಿ ಪತ್ತೇದಾರಿ ಕಾಲ್ಪನಿಕ ಪ್ರಕಾರದ ಸಂಶೋಧಕರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಜೊತೆಗೆ ಅವರು ವೈಜ್ಞಾನಿಕ ಕಾದಂಬರಿಯ ಪರಿಕಲ್ಪನೆಗೆ ಗಣನೀಯ ಕೊಡುಗೆ ನೀಡಿದ್ದಾರೆ.)