ಪುಸ್ತಕದ ಹೆಸರು : ಆರೋಗ್ಯಕರ ಜೀವನಕ್ಕೆ ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ
ಲೇಖಕರು : ಸಿದ್ಧವೈದ್ಯ ಶ್ರೀ ಪಿ. ಎಸ್. ನರಸಿಂಹಸ್ವಾಮಿ
ಬೆಲೆ : ರೂ. ೪೫೦/-
ಪ್ರಕಾಶಕರು : ಗ್ಲೋಬಲ್ ಸೆಂಟರ್ ಫಾರ್ ಸಿದ್ಧ ಮೆಡಿಸಿನ್ & ರಿಸರ್ಚ್, ಚೆನ್ನೈ & ಅಮೆರಿಕಾ.
ಮಹರ್ಷಿ ಅಗಸ್ತ್ಯರ ಹೆಸರನ್ನು ಕೇಳದ ಭಾರತೀಯನೇ ಇಲ್ಲವೆಂದು ಹೇಳಬಹುದು. ಆದರೆ ಅವರೊಬ್ಬ ವೈದ್ಯರೂ ಆಗಿದ್ದರೆನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕೇವಲ ಋಷಿಗಳಾಗಿರದೆ ಭೌಗೋಳಿಕ, ವೈಜ್ಞಾನಿಕ, ಲೋಕೋಪಕಾರ ಈ ಎಲ್ಲ ದೃಷ್ಟಿಗಳಿಂದಲೂ ಲೋಕಕಲ್ಯಾಣವನ್ನೇ ಬಯಸಿದವರು. ದಕ್ಷಿಣ ಭಾರತದ ಗಂಗೆಯೆನ್ನಿಸಿದ ಕಾವೇರಿ ನದಿಯ ಉಗಮಕ್ಕೆ ಕಾರಣರಾದವರು, ಅವರು ಆರೋಗ್ಯಶಾಸ್ತ್ರದ ತತ್ವಗಳನ್ನು ವಿಶಿಷ್ಟವಾದ ರೀತಿಯಲ್ಲಿ ರೂಪಿಸಿ ಸಿದ್ಧವೈದ್ಯ ಪದ್ಧತಿಗೆ ತಳಹದಿಯನ್ನು ಹಾಕಿಕೊಟ್ಟಂಥವರು.
ಈ ಜಗತ್ತು ಪರಿವರ್ತನಾಶೀಲವಾಗಿದೆ. ಅದರಲ್ಲೂ ನಮ್ಮ ಭಾರತಕ್ಕೆ ಸುಮಾರು ಎಂಟು ಸಾವಿರ ವರ್ಷಗಳ ಒಂದು ಭವ್ಯ ಇತಿಹಾಸವಿದೆ. ಇದು ಅನೇಕ ಋಷಿಮುನಿಗಳು, ಮಹಾಪುರುಷರು, ಯೋಗಿಗಳು, ಸಾಧು ಸಂತರು ಆಗಿ ಹೋದಂಥ ನಾಡು. ಸಂಸ್ಕೃತಿ, ಸಾಹಿತ್ಯ, ಸಂಗೀತ, ಲಲಿತಕಲೆಗಳ ಪರಂಪರೆಯೇ ಇಲ್ಲಿದೆ. ಹೀಗೆ ನಮ್ಮ ವೈದ್ಯ ಪದ್ಧತಿಯೂ ಕೂಡ ಸುಶ್ರುತ, ಚರಕರಂಥ ಮಹಾನುಭಾವರಿಂದಾಗಿ ಇಂದಿಗೂ ವೈದ್ಯಜಗತ್ತಿನಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಅವುಗಳಲ್ಲಿ ಸಿದ್ಧ ವೈದ್ಯ ಪದ್ಧತಿಯೂ ಒಂದು. ಹಿಮಾಲಯದ ಪ್ರದೇಶದ ಜನರಲ್ಲಿ ಆಯುರ್ವೇದವು ಪ್ರಸಿದ್ಧಿ ಹೊಂದಿದರೆ, ವಿಂಧ್ಯ ಪರ್ವತದಿಂದೀಚೆಗೆ ದಕ್ಷಿಣದಲ್ಲಿ ಸಿದ್ಧ ವೈದ್ಯ ಪದ್ಧತಿಯು ಪ್ರಸಿದ್ಧಿಗೆ ಬಂದಿತು. ಆದರೆ ವಿವಿಧ ಕಡೆಗಳಿಂದ ನಡೆದಂಥ ಪರಕೀಯರ ಆಕ್ರಮಣಗಳಿಂದಾಗಿ ಈ ಮಹಾವಿದ್ಯೆಯ ಲಿಪಿಗಳಲ್ಲಿ ಕೆಲವು ನಶಿಸಿಹೋಗಿದ್ದು ಇನ್ನೂ ಕೆಲವು ಬೇರೆ ಬೇರೆ ದೇಶಗಳಿಗೆ ಪರಿಚಯವಾಗಿ ಅಲ್ಲಿಯ ಅವರ ಪದ್ಧತಿಗಳಾಗಿ ರೂಪ ಪಡೆದವು. ಆದರೂ ಕೆಲವು ತಾಳೆಗರಿಗಳು ಉಳಿದು ಕೊಂಡಿವೆಯಾದರೂ ಇನ್ನೂ ಸಿದ್ಧವೈದ್ಯ ಪದ್ಧತಿಯ ಕೆಲವು ಲಿಪಿಗಳು ಚಿದಂಬರ ರಹಸ್ಯವಾಗಿಯೇ ಉಳಿದಿವೆಯೆಂದು ಲೇಖಕರು ಹೇಳುತ್ತಾರೆ.
ಈ ವೈದ್ಯ ಪದ್ಧತಿಯ ಲಿಪಿಯು ಸಾಮಾನ್ಯವಾಗಿ ತಮಿಳಿನಲ್ಲಿದ್ದು, ಪದ್ಯರೂಪದಲ್ಲಿದೆ. ಹೀಗಾಗಿ ಹೊರದೇಶದ ಆಸಕ್ತರಿಗೆ ಇದನ್ನು ಅರಿಯುವುದು ಕಠಿಣವಾಗಿದೆ. ಆದರೂ ಲೇಖಕರು ಕನ್ನಡಿಗರಾಗಿದ್ದರೂ ಕೂಡ, ತಮಿಳು ಹಾಗೂ ಮಲಯಾಳಿ ಭಾಷೆಗಳನ್ನು ಕಲಿತು ಆ ವೈದ್ಯಕೀಯ ಪದ್ಧತಿಯನ್ನು ಕನ್ನಡಿಗರಿಗೆ ಪರಿಚಯಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಯಾವುದೇ ವಿದ್ಯೆಯನ್ನು ಮೈಗೂಡಿಸಿ ಕೊಳ್ಳುವುದರಲ್ಲಿ ಮುಂದೆ ಒಂದು ಗುರಿ ಹಾಗೂ ಹಿಂದೆ ಒಬ್ಬ ಗುರು ಬೇಕೇ ಬೇಕು, ಹಾಗೆ ಒಬ್ಬ ಗುರುವಿನ ಸ್ಥಾನವನ್ನು ತುಂಬಿದವರು ತಮ್ಮ ಮುತ್ತಜ್ಜಿ ಎಂದು ಲೇಖಕರು ಹೇಳುತ್ತಾರೆ. ಮುತ್ತಜ್ಜಿಯಾದ ಶ್ರೀಮತಿ ಪುಟ್ಟತಾಯಮ್ಮ ಈ ಗಿಡಮೂಲಿಕೆಗಳ ಔಷಧಿಗಳ ಬಗ್ಗೆ ವಂಶಪಾರಂಪರ್ಯವಾಗಿ ಅರಿತಿದ್ದು ಜನರಿಗೆ ಮನೆಯಲ್ಲಿಯೇ ವೈದ್ಯಕೀಯ ಶುಶ್ರೂಷೆಯನ್ನು ನೀಡುತ್ತಿದ್ದರಂತೆ. ಅವರು ಮನೆಯಲ್ಲಿಯೇ ತಯಾರಿಸುತ್ತಿದ್ದ ಲೇಹ್ಯ, ಕಷಾಯ, ಚೂರ್ಣಗಳಿಗೆ ಅಗತ್ಯವಿದ್ದ ಗಿಡಮೂಲಿಕೆಗಳನ್ನು ತಮಗೆ ಪರಿಚಯಿಸಿ, ಸಂಗ್ರಹಿಸಲು ತಮ್ಮನ್ನೆ ಕಳಿಸುತ್ತಿದ್ದುದರಿಂದಾಗಿ ಈ ಸಂಬಂಧಿತವಾದ ವೈದ್ಯಕೀಯದಲ್ಲಿ ತಮಗೆ ಆಸಕ್ತಿ ಹುಟ್ಟಿಸಿದುದನ್ನು ಲೇಖಕರು ನೆನೆಯುತ್ತಾರೆ. ನಂತರ ಬೇರುಗಳ ಶುದ್ಧೀಕರಣ, ತಯಾರಿಸುವ ರೀತಿ, ಪಥ್ಯ ಮುಂತಾದವುಗಳನ್ನು ಅವರಿಂದಲೇ ಕಲಿತುದನ್ನು ಜ್ಞಾಪಿಸಿಕೊಳ್ಳುತ್ತಾರೆ.
ಅಲ್ಲದೆ ತಮ್ಮ ಸೋದರ ಮಾವನೊಬ್ಬರು ಮೆಡಿಕಲ್ ಕಲಿಯುತ್ತಲಿದ್ದಾಗ ಯಕೃತ್ತಿನ ಕಾಯಿಲೆ (jaundice) ಯಿಂದ ಬಳಲಿ, ಅಲ್ಲಿಯ ಯಾವುದೇ ಔಷಧೀಯ ಪದ್ಧತಿಯಿಂದಲೂ ಗುಣ ಕಾಣದಿದ್ದಾಗ ಅಜ್ಜಿಯ ಗಿಡಮೂಲಿಕಾ ಪ್ರಯೋಗದಿಂದಲೇ ಗುಣಮುಖರಾಗಿದ್ದುದೂ ಕೂಡ ಅವರಿಗೆ ಈ ವೈದ್ಯ ಪದ್ಧತಿಯನ್ನು ಕಲಿಯುವುದರಲ್ಲಿ ಆಸಕ್ತಿಯನ್ನು ಹುಟ್ಟಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದುದನ್ನು ಹೇಳುತ್ತಾರೆ. ಅಷ್ಟೇ ಅಲ್ಲ, ನಂತರ ಸೋದರಮಾವನ ಕಾಲೇಜಿನಲ್ಲಿಯ ವೈದ್ಯರ ತಂಡವು ಅಜ್ಜಿಯನ್ನು ಸಂಪರ್ಕಿಸಿ ಚಿಕಿತ್ಸೆಯ ವಿವರವನ್ನೂ ಪಡೆದಿದ್ದರಂತೆ!
ಲೇಖಕರು ಪದವಿಯ ವ್ಯಾಸಂಗದ ನಂತರ ತಮಿಳುನಾಡು, ಕೇರಳಗಳಲ್ಲಿ ಸಂಚರಿಸಿ ಅಲ್ಲಿಯ ಆನುವಂಶೀಯ ಸಿದ್ಧವೈದ್ಯರನ್ನು ಸಂಪರ್ಕಿಸಿ ಅವರ ಚಿಕಿತ್ಸಾ ವಿಧಾನಗಳನ್ನು ಕಲಿತು ೧೯೯೩ ರಿಂದಲೂ ಸಿದ್ಧವೈದ್ಯ ಪದ್ಧತಿಯ ಬಗ್ಗೆ ಅನೇಕ ಲೇಖನಗಳನ್ನೂ ದೇಶದ ವಿವಿಧ ಭಾಷೆಗಳಲ್ಲಷ್ಟೇ ಅಲ್ಲದೆ ಇಂಗ್ಲಿಷಿನಲ್ಲಿಯೂ ಬರೆದು ಪ್ರಕಟಿಸಿದ್ದಾರೆ.
ಸಿದ್ಧ ವೈದ್ಯ ಪದ್ಧತಿಯ ಪ್ರವರ್ತಕರನ್ನು ಸಿದ್ಧರು ಎಂದು ಕರೆಯಲಾಗುತ್ತದೆ. ಸಿದ್ಧ ಎಂದರೆ ನಿಪುಣ, ಸಿದ್ಧಿಯನ್ನು ಪಡೆದ, ಅಷ್ಟ ಮಹಾಸಿದ್ಧಿಯನ್ನು ಹೊಂದಿದವ, ಭೂತ, ಭವಿಷ್ಯತ್ ಹಾಗೂ ವರ್ತಮಾನವನ್ನು ಅರಿತವ, ಸಕಲ ರೋಗಗಳಿಗೂ ಔಷಧಿಯನ್ನು ತಯಾರಿಸಿಕೊಡಬಲ್ಲವ ಎಂಬ ಉಲ್ಲೇಖಗಳಿವೆ. ಇದರ ಮೂಲಪುರುಷರು ಅಗಸ್ತ್ಯರು. ಮೂರು-ನಾಲ್ಕನೆಯ ಶತಮಾನಗಳ ಹಿಂದೆಯೇ ಇವರೊಂದಿಗೆ ಹದಿನೆಂಟು ಜನ ಸಿದ್ಧರು ಈ ವೈದ್ಯ ಪದ್ಧತಿಗೆ ರೂಪರೇಷೆಗಳನ್ನು ಕೊಟ್ಟು ಕಾರ್ಯಗತಗೊಳಿಸಿದ್ದರೆಂದು ಹೇಳಲಾಗುತ್ತದೆ.
ಸಿದ್ಧವೈದ್ಯವನ್ನು ರಸವಿದ್ಯೆ ಅಥವಾ ರಸವಾದ ಕಲೆ ಎಂತಲೂ ಹೇಳುತ್ತಾರೆ. ಇದು ಯಾವುದೇ ಲೋಹವನ್ನೂ ಬಂಗಾರವಾಗಿ ಪರಿವರ್ತಿಸುವ ಕಲೆ ಎಂದು ಪ್ರಸಿದ್ಧವಾಗಿದ್ದು, ಇದಕ್ಕೆ ನಿದರ್ಶನಗಳು ಇವೆಯಾದರೂ ಲೇಖಕರ ದೃಷ್ಟಿಯಲ್ಲಿ ಸಿದ್ಧರು ಸಾಮಾನ್ಯ ಲೋಹಗಳನ್ನು ಉಪಯೋಗಿಸಿ ನಿರಪೇಕ್ಷ ಮನೋಭಾವದಿಂದ ಬಂಗಾರದಂಥ ಔಷಧಿಗಳನ್ನು ತಯಾರಿಸಿ ಎಲ್ಲರಿಗೂ ಆರೋಗ್ಯಭಾಗ್ಯವನ್ನು ಕರುಣಿಸುತ್ತಲಿದ್ದರು ಎಂಬ ಅರ್ಥವನ್ನು ಹೊಂದಿದೆ. ನಾಡಿ ಪರೀಕ್ಷೆ, ಅಷ್ಟ ಸ್ಥಾನ ಪರೀಕ್ಷೆ, ತ್ರಿದೋಷಗಳ ಗ್ರಹಿಕೆ, ರೋಗಿಯ ಮನಃಸ್ಥಿತಿ, ಆನುವಂಶೀಯ ಖಾಯಿಲೆಗಳ ತುಲನೆ ಇವೆಲ್ಲವೂ ಕೂಡ ಆಯರ್ವೇದದಂತೆಯೇ ಇಲ್ಲಿಯೂ ಬೇಕಾಗುತ್ತವೆ.
ಕನ್ಯಾಕುಮಾರಿಯಿಂದ ಪಸರಿಸಿಕೊಂಡಿದ್ದ ೩೨ ರಾಜ್ಯಗಳಲ್ಲಿ ಪ್ರಕೃತಿಯ ವಿಕೋಪಗಳಿಂದ ಎಲ್ಲ ರಾಜ್ಯಗಳು ಸಮುದ್ರಗರ್ಭದಲ್ಲಿ ಅಡಗಿಹೋಗಿದ್ದು ಆ ಖಂಡವು ಲೆಮೂರಿಯನ್ ಖಂಡ. ಇತಿಹಾಸಕಾರರ ಮಾಹಿತಿಗಳಿಂದ ಈ ಖಂಡದಲ್ಲಿ ಸಿದ್ಧೌಷಧಿ ಪದ್ಧತಿಯೊಂದೇ ಪ್ರಚಲಿತವಿತ್ತೆಂದು ಹೇಳಲಾಗುತ್ತದೆ. ನಂತರ ಆ ಮೂಲದವರು ಎಲ್ಲೆಲ್ಲಿ ವಲಸೆ ಹೋದರೋ ಅಲ್ಲಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ವೈದ್ಯ ಪದ್ಧತಿಯು ಕರೆಯಲ್ಪಟ್ಟಿತು ಎಂದು ಲೇಖಕರು ಹೇಳುತ್ತಾರೆ. ಮೆಡಿಟರೇನಿಯನ್, ದಕ್ಷಿಣ ಭಾರತ ಮೂಲಾಧಾರವೆಂದೂ ಹೇಳಲಾಗುತ್ತಿದ್ದು, ಸಿಲಪ್ಪದಿಕಾರಂ ಹಾಗೂ ತೊಲ್ಕಾಪ್ಪಿಯಂ ಎಂಬ ತಮಿಳು ಗ್ರಂಥಗಳಲ್ಲಿ ಕೂಡ ಇವುಗಳ ಬಗ್ಗೆ ಉಲ್ಲೇಖವಿದೆ.
ಅಗಸ್ತ್ಯರನ್ನು ಪ್ರಥಮ ಸಿದ್ದರೆಂದು ಹೇಳಲಾಗುತ್ತದೆ. ಅವರ ಕಾಲವು ಸುಮಾರು ಕ್ರಿ. ಪೂ.೧೬ ಸಾವಿರ ವರ್ಷ ಎಂದು ಹೇಳಲಾಗಿದ್ದು ನಂತರ ಬೇರೆ ಬೇರೆ ಕಾಲಘಟ್ಟಗಳಲ್ಲಿಯೂ ಅವರ ವಿವರಗಳನ್ನು ಕೊಡಲಾಗಿದೆ. ಹದಿನೆಂಟು ಜನ ಅಗಸ್ತ್ಯರು ಲೇಖಕರ ಪ್ರಕಾರ ಇದ್ದು, ನಂತರ ಅನೇಕ ಸಿದ್ಧರ ಬಗ್ಗೆಯೂ ವಿವರಿಸಿದ್ದಾರೆ. ಬುದ್ಧನ ಕಾಲದಲ್ಲಿಯೂ ಈ ವೈದ್ಯ ಪದ್ಧತಿಯ ಅಧ್ಯಯನವನ್ನು ಮಾಡಲಾಗಿದೆ ಎಂದು ಹೇಳುತ್ತಾರೆ. ಸಿದ್ಧವೈದ್ಯನಾದವನು ಅನುಸರಿಸಬೇಕಾದಂಥ ಕೆಲವು ನಿಯಮಗಳನ್ನೂ ಹೇಳಿದ್ದಾರೆ.
ಸಿದ್ಧರು ಸಾಧಿಸಿದ ಅಷ್ಟಮಹಾಸಿದ್ಧಿಗಳ ಬಗ್ಗೆಯೂ ಇಲ್ಲಿ ಉಲ್ಲೇಖವಿದೆ. ಅಣಿಮಾ ಎಂದರೆ ಅಣುವಿನಷ್ಟು ಸೂಕ್ಷ್ಮ ರೂಪವನ್ನು ಹೊಂದುವ ಸಿದ್ಧಿಯಾದರೆ, ಮಹಿಮಾ ದೇಹದ ಆಕಾರವನ್ನು ತನ್ನಿಷ್ಟ ಬಂದರೆ ಹೆಚ್ಚಿಸಿಕೊಳ್ಳುವ, ಲಘಿಮಾ ಎಂದರೆ ದೇಹವನ್ನು ಅತ್ಯಂತ ಹಗುರಾಗಿಸಿಕೊಳ್ಳಬಹುದಾದ, ಗರಿಮಾ ಎಂದರೆ ಒಂದೇ ಬಾರಿಗೆ ಅನೇಕ ರೂಪಗಳನ್ನು ಹೊಂದುವ, ಪ್ರಾಪ್ತಿ ಎಂದರೆ ಬೇಕೆಂದುದನ್ನು ತಾನಿರುವಲ್ಲಿಯೇ ಗಳಿಸುವ, ಸೂರ್ಯ ಚಂದ್ರರನ್ನು ಸ್ಪರ್ಶಿಸುವ, ಪ್ರಾಕಾಮ್ಯಂ ಎಂದರೆ ನೀರಿನ ಮೇಲೆ ಹಾಗೂ ನೀರಿನೊಳಗೆಯೂ ನಡೆಯುವ, ಈಶತ್ವ ಎಂದರೆ ಸಕಲ ಚರಾರಚರ ಜೀವಿಗಳಿಗೂ ಒಡೆಯನಾಗುವ, ವಶಿತ್ವ ಎಂದರೆ ಜಗತ್ತಿನ ಯಾವುದೇ ಜೀವಿಯನ್ನೂ ವಶಪಡಿಸಿಕೊಳ್ಳುವ ಸಿದ್ಧಿಗಳೆಂದು ಹೇಳುತ್ತ, ಈ ಅಷ್ಟ ಸಿದ್ಧಿಗಳನ್ನು ಸಾಧಿಸುವುದರಿಂದಾಗಿ ಸಿದ್ಧರಿಗೆ ಜ್ಞಾನದೃಷ್ಟಿಯ ಉಗಮವಾಗುತ್ತದೆ ಎಂದು ಹೇಳುತ್ತಾರೆ.
ತಲೆಗೂದಲನ್ನು ಮುಡಿಯಾಗಿ ದೇವರಿಗೆ ಅರ್ಪಿಸುವುದೂ ಕೂಡ ಸಿದ್ಧ ಸಾಹಿತ್ಯದಲ್ಲಿ ಒಂದು ವಿಶೇಷ ಅರ್ಥವನ್ನೇ ಪಡೆದಿದೆ. ಕೆಲವು ಹಳೆಯ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲು ಸಿದ್ಧರು ಅತ್ಯಂತ ವಿರಳವಾದ ಗಿಡಮೂಲಿಕೆಗಳನ್ನು ಹುಡುಕಿತಂದು ಅವುಗಳನ್ನು ಬೇರೆ ಔಷಧ ಸಾಮಗ್ರಿಗಳೊಂದಿಗೆ ಕೂಡಿಸಿ ಕಂಚಿನ ಹಂಡೆಯಲ್ಲಿ ವಾರಗಟ್ಟಲೆ ಕಾಯಿಸುತ್ತಿದ್ದರಂತೆ. ಅದಕ್ಕೆ ಇಂಧನವಾಗಿ ತಲೆಗೂದಲನ್ನು ಬಳಸುತ್ತಿದ್ದರಂತೆ! ಆದ್ದರಿಂದಲೇ ದಕ್ಷಿಣ ಕರ್ನಾಟಕದಲ್ಲಿ ಮುಡಿ ಒಪ್ಪಿಸುವುದಕ್ಕೆ ಸಿದ್ಧರು ಪ್ರೋತ್ಸಾಹವನ್ನೀಯುತ್ತಿದ್ದರಂತೆ!
ವಿದೇಶಗಳ ಜನರೂ ಕೂಡ ಸಿದ್ಧ ವೈದ್ಯ ಪದ್ಧತಿಯ ಮೇಲೆ ಅಧ್ಯಯನ ಮಾಡಿದ್ದಾರೆ ಎಂದರೆ ಈ ವೈದ್ಯಪದ್ಧತಿಯ ಮಹತ್ವದ ಅರಿವಾಗುತ್ತದೆ. ಆದರೂ ಇಂದು ನಮ್ಮ ಈ ವೈದ್ಯ ಪದ್ಧತಿಯನ್ನು ಹಿತ್ತಲ ಗಿಡದಂತೆ ನಿರ್ಲಕ್ಷ್ಯಿಸಿದ್ದಾರೆ ಎಂದು ಹೇಳಲು ವಿಷಾದವೆನ್ನಿಸುತ್ತದೆ ಎನ್ನುವುದು ಲೇಖಕರ ನೋವಿನ ನುಡಿ.
ಆರೋಗ್ಯವಂತ ಜನತೆ ಆರೋಗ್ಯವಂತ ಸಮಾಜಕ್ಕೆ ತಳಪಾಯವಾಗುತ್ತದೆ. ಸಿದ್ಧರು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕೆಲವು ನಿಯಮಗಳನ್ನೂ ಹೇಳುತ್ತಾರೆ. ನಿಯಮಿತವಾಗಿ ಸಾತ್ವಿಕ ಆಹಾರಸೇವನೆ, ಸೇವಿಸಿದ ಆಹಾರವು ಪಚನವಾದನಂತರವೇ ಮತ್ತೆ ಆಹಾರ ಸೇವನೆ, ರಾತ್ರಿಯ ಊಟದ ನಂತರ ಮಲಗಲು ಎರಡು ಗಂಟೆಗಳ ಅಂತರವಿರಬೇಕು, ಒಟ್ಟಿನಲ್ಲಿ ಮಾನವ ಶರೀರವನ್ನು ಯಾವುದೇ ರೋಗವು ಕಾಡದಂತೆ ಕಾಪಾಡಿಕೊಳ್ಳಬೇಕೆಂದರೆ ಶುಚಿಯಾದ, ಶುದ್ಧವಾದ ಹಾಗೂ ಸಮತೋಲನ ಆಹಾರದ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ ಸಿದ್ಧ ವೈದ್ಯ ಪದ್ಧತಿಯಲ್ಲಿ.
‘ರೋಗ ಬಂದನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದೇ ಉತ್ತಮʼ ಎಂದು ಹೇಳುತ್ತ, ಆರೋಗ್ಯವನ್ನು ಕಾಪಾಡಿಕೊಳ್ಳುವ ಸಿದ್ಧರ ನಿಯಮಗಳನ್ನೂ ಲೇಖಕರು ತಿಳಿಸಿದ್ದಾರೆ. ಹೀಗೆ ಇದು ಕೇವಲ ಔಷಧಶಾಸ್ತ್ರವಾಗಿರದೆ ಜೀವನದ ರೀತಿ ನೀತಿಗಳನ್ನು ತಿಳಿಸುವ ಒಂದು ಕ್ರಮವಾಗಿಯೂ ಅಸ್ತಿತ್ವದಲ್ಲಿತ್ತು ಎನ್ನುವುದು ಇದರಿಂದ ಸಿದ್ಧವಾಗುತ್ತದೆ. ಆಧುನಿಕ ವೈದ್ಯ ಪದ್ಧತಿಯ ಔಷಧ ಪ್ರಯೋಗಗಳಿಂದಾಗಿ ಅಷ್ಟೊಂದು ಪ್ರಚಾರ ಪಡೆಯದ ಸಿದ್ಧ ವೈದ್ಯ ಪದ್ಧತಿಯು ನಂತರದ ದಿನಗಳಲ್ಲಿ ತನ್ನಲ್ಲಿರುವ ಅನೇಕ ಗುಣಕಾರಿ ಔಷಧಿಗಳಿಂದಾಗಿ ಆಧುನಿಕ ಚಿಕಿತ್ಸಾ ಪದ್ಧತಿಯ ನಡುವೆಯೂ ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡಿದೆ ಎಂದರೆ ತಪ್ಪಾಗಲಾರದು.
ಪಶು ಪಕ್ಷಿಗಳು ಎಲ್ಲಾ ರೀತಿಯ ರುಚಿಗಳನ್ನು ಹೊಂದಿರುವ ಆಹಾರವನ್ನು ಸೇವಿಸುತ್ತವೆ. ಕಹಿ, ಒಗರು ನಾಲಿಗೆಗೆ ರುಚಿಸದೆ ಹೋದರೂ ಇವುಗಳಲ್ಲಿಯೂ ಅನೇಕ ಔಷಧೀಯ ಗುಣಗಳಿರುತ್ತವೆ. ಕಹಿ ರುಚಿಯನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಕ್ರಿಮಿಗಳು ನಾಶಗೊಳ್ಳುವುದಲ್ಲದೆ ಇವುಗಳ ಸೇವನೆಯಿಂದ ರಕ್ತಪರಿಚಲನೆಗೆ ಸಹಾಯವಾಗುತ್ತದೆ. ರಕ್ತದ ಕಣಗಳ ಸುಸ್ಥಿತಿಗೆ ಒಗರು ಕಾರಣವಾಗುತ್ತದೆ. ಉದಾ: ಅಗಸೆ, ಬೇವು, ಹಾಗಲ.
ದಿನನಿತ್ಯದ ಆಹಾರ ಪದ್ಧತಿಯಲ್ಲಿಯ ಕೆಲವು ಔಷಧೀಯ ಗುಣಗಳನ್ನು ಆ ಕಾಲದ ಸಾಮಾನ್ಯ ಮಹಿಳೆಯೂ ಅರಿತಿರುತ್ತಿದ್ದಳು. ಧೂಮಪಾನವನ್ನು ತಡೆಗಟ್ಟಲು ಅಗಸೆ ಸೊಪ್ಪಿನ ಖಾದ್ಯವನ್ನು ಮಾಡಿ ಬಡಿಸುತ್ತಿದ್ದರೆ, ಅದು ದೇಹದಲ್ಲಿ ಸೇರಿಕೊಂಡಿರುವ ವಿಷಪದಾರ್ಥವನ್ನು ನಿವಾರಿಸುತ್ತಿತ್ತು. ಮನೆಯಲ್ಲಿಯೇ ಇರುವಂಥ ಶುಂಠಿ, ಮಸಾಲೆಯ ವಸ್ತುಗಳಾದ ಜೀರಿಗೆ, ಮೆಣಸು, ಏಲಕ್ಕಿ, ಮೆಂತ್ಯ, ಪಲಾವು ಎಲೆಗಳು, ದಾಲಚಿನ್ನಿ, ಮೊಗ್ಗು, ಚಕ್ರ ಇವೂ ಕೂಡ ಔಷಧೀಯ ಗುಣಗಳನ್ನೇ ಹೊಂದಿದ್ದು ಅವುಗಳ ಉಪಯೋಗವನ್ನು ಅರಿತವರಾಗಿದ್ದಳು. ಹೀಗೆ ಸಿದ್ಧ ವೈದ್ಯ ಪದ್ಧತಿಯಲ್ಲಿ ಕೈಗೆಟಕುವಂಥ ವಸ್ತುಗಳಿಂದಲೇ ಆರೋಗ್ಯವನ್ನು ಹತೋಟಿಯಲ್ಲಿರಿಸಬಹುದು ಎಂಬ ಮಾತು ಅತ್ಯಂತ ಸತ್ಯ.
ಸಿದ್ಧ ವೈದ್ಯ ಪದ್ಧತಿಯಲ್ಲಿ ದೇವಸ್ಥಾನಕ್ಕೆ ಹೋಗುವುದರ ಉಪಯೋಗವನ್ನೂ ಹೇಳಿದ್ದಾರೆ. ದೇವರ ದರ್ಶನ, ಪ್ರಸಾದ, ತೀರ್ಥ, ಮಂಗಳಾರತಿ, ಪ್ರದಕ್ಷಿಣೆ ಎಲ್ಲದಕ್ಕೂ ಒಂದೊಂದು ಅರ್ಥವಿದೆ ಎಂದು ಹೇಳಲಾಗಿದ್ದು, ಶಿವನಿಗೆ ಏರಿಸಿದ್ದ ಬಿಲ್ವ, ಪಾರ್ವತಿಯ ಪೂಜೆಗೆ ಉಪಯೋಗಿಸಿದ ಬೇವು, ಗಣಪನಿಗೆ ಏರಿಸಿದ ಗರಿಕೆ, ಗಂಗೆಗೆ ಏರಿಸಿದ ಮಾವಿನ ಎಲೆಗಳು, ಬ್ರಹ್ಮನಿಗೆ ಏರಿಸಿದ ಅತ್ತಿ ಎಲೆ, ವಿಷ್ಣುವಿಗೆ ಏರಿಸಿದ ತುಳಸಿ ಇವುಗಳೂ ಕೂಡ ದೇಹಕ್ಕೆ ಔಷಧದಂತೆಯೇ ಕಾರ್ಯ ಮಾಡುತ್ತವೆ. ಹೀಗೆ ಸಿದ್ಧಪುರುಷರು ಮಾನವನಿಗೆ ಅರಿವಿಲ್ಲದಂತೆಯೇ ಪ್ರಸಾದದ ರೂಪದಲ್ಲಿ ಔಷಧಸೇವನೆ ಮಾಡುವಂಥ ಒಂದು ನಿಯಮವನ್ನು ಹಾಕಿಕೊಟ್ಟು ಆರೋಗ್ಯ ಹಾಗೂ ಆಯುಷ್ಯವನ್ನು ಹೆಚ್ಚಿಸುವ ಮಾರ್ಗವನ್ನು ತಿಳಿಸಿದ್ದರು. ಆದರೆ ಇಂದು ಎಲ್ಲದಕ್ಕೂ ವೈಜ್ಞಾನಿಕ ಆಧಾರವನ್ನು ಬೇಡುವ ನಾವು ಆರೋಗ್ಯವಂತ ಸಮಾಜವನ್ನು ಕಟ್ಟುವುದರಲ್ಲಿ ವಿಫಲರಾಗಿದ್ದೇವೆ.
ಈ ಗ್ರಂಥದಲ್ಲಿ ಪ್ರಾಚೀನ ಸಿದ್ಧವೈದ್ಯ ಗ್ರಂಥಗಳ ಮಾಹಿತಿಯನ್ನೂ ಕೊಡಲಾಗಿದೆ. ಅಗಸ್ತ್ಯರ ಹೆಸರಿನಲ್ಲಿಯೇ ೩೧೨ ಗ್ರಂಥಗಳಿವೆಯಂತೆ. ಈ ಸಿದ್ಧ ವೈದ್ಯಪದ್ಧತಿಯ ಸಾಹಿತ್ಯವು ಚೀನಾ, ಇಂಡೋನೇಸಿಯಾ, ಮಲೇಶಿಯಾ ಮುಂತಾದ ದೇಶಗಳ ಭಾಷೆಗಳಿಗೂ ಅನುವಾದ ಹೊಂದಿದೆ. ಜರ್ಮನಿ, ಲಂಡನ್, ಪ್ಯಾರಿಸ್, ವ್ಯಾಟಿಕನ್, ಮುಂತಾದ ಕಡೆಗಳಲ್ಲಿಯ ಗ್ರಂಥಾಲಯಗಳಲ್ಲಿಯೂ ಈ ವೈದ್ಯ ಪದ್ಧತಿಯ ಬಗ್ಗೆ ಗ್ರಂಥಗಳಿವೆ. ಲೇಖಕರು ಭಾರತದ ಗ್ರಂಥಾಲಯಗಳಲ್ಲಿ ತಮಿಳು ಲಿಪಿಯ ಸಿದ್ಧವೈದ್ಯದ ಗ್ರಂಥಗಳನ್ನು ಸಂಸ್ಕೃತ ತಜ್ಞರೂ, ಆಯುರ್ವೇದ ಪಂಡಿತರೂ ಸಂಸ್ಕೃತಕ್ಕೆ ತರ್ಜುಮೆ ಮಾಡಿದ್ದು ಅವುಗಳ ಹೆಸರುಗಳನ್ನೂ, ಕಾಲವನ್ನೂ ತಿಳಿಸಿದ್ದಾರೆ. ತಮಿಳುನಾಡಿನ ಸರಕಾರದ ಓರಿಯೆಂಟಲ್ ಹಸ್ತಪ್ರತಿ ಗ್ರಂಥಾಲಯದಿಂದ ಮುದ್ರಿಸಿರುವ ಗ್ರಂಥಗಳ ಪರಿಚಯವೂ ಈ ಪುಸ್ತಕದಲ್ಲಿದೆ. ಚೆನ್ನೈ, ತಂಜಾವೂರು, ತಿರುವನಂತಪುರಂ, ಗ್ರಂಥಾಲಯಗಳಲ್ಲಿರುವ ಹಸ್ತಪ್ರತಿ ಹಾಗೂ ಗ್ರಂಥಗಳ ಪರಿಚಯವೂ ಇದರಲ್ಲಿದೆ.
ಈ ಪುಸ್ತಕದಲ್ಲಿ ಒಟ್ಟು ೨೩ ಭಾಗಗಳಿದ್ದು ಒಂದೊಂದೂ ಭಾಗವೂ ಒಂದೊಂದು ವಿಷಯದ ಪರಿಪೂರ್ಣ ಪರಿಚಯವನ್ನು ಮಾಡಿಕೊಡಲು ಸಮರ್ಥವಾಗಿದೆ. ಸಿದ್ಧರು ರಚಿಸಿರುವ ಸಾಹಿತ್ಯದ ಪದ್ಯರೂಪದ ಹನಿಗಳು ಪ್ರಕೃತಿಯ ಪಂಚಮಹಾಭೂತದ ಬಗ್ಗೆ, ರೋಗಗಳ ಮೂಲ ಇತ್ಯಾದಿಗಳ ಬಗ್ಗೆ ಹೇಳುತ್ತವೆ. ರೋಗಿಯ ಅಷ್ಟಸ್ಥಾನಗಳಾದ ನಾಡಿ, ಮೂತ್ರ, ಕಣ್ಣು, ಮಲ, ಧ್ವನಿ, ಸ್ಪರ್ಶ, ನಾಲಿಗೆ, ಬಣ್ಣ ಇವುಗಳ ಪರೀಕಾ ವಿಧಾನಕ್ಕೂ ಇಲ್ಲಿ ಹೆಚ್ಚಿನ ಮಹತ್ವವಿದೆ. ಪಂಚಭೂತಗಳು ಮತ್ತು ಮಾನವ ಶರೀರದೊಂದಿಗಿನ ಸಂಬಂಧಗಳು, ರೋಗಗಳ ಸಂಖ್ಯೆ ಇತ್ಯಾದಿಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.
ಸಿದ್ಧ ವೈದ್ಯ ಚಿಕಿತ್ಸೆಯ ಕ್ರಮಗಳನ್ನೂ, ಆಹಾರಸೇವನೆಯ ಕ್ರಮಗಳನ್ನೂ ಕೂಡ ಈ ಗ್ರಂಥದಲ್ಲಿ ಹೇಳಲಾಗಿದೆ. ಪ್ರಕೃತಿಯಲ್ಲಿ ದೊರೆಯುವಂಥ ಸಾಮಾನ್ಯವಾಗಿ ಕೈಗೆಟಕುವಂಥ ಉಪಯುಕ್ತ ಗಿಡಮೂಲಿಕೆಗಳ ಹೆಸರುಗನ್ನೂ ಹಾಗೂ ಅವುಗಳನ್ನು ಔಷಧಿಯಾಗಿ ಉಪಯೋಗಿಸುವ ಕ್ರಮಗಳನ್ನೂ ಇಲ್ಲಿ ಹೇಳಿದ್ದಾರೆ. ಹೂವುಗಳಿಂದ ಕೂಡ ಸಿದ್ಧೌಷಧಿಯನ್ನು ತಯಾರಿಸುವ ಕ್ರಮಗಳನ್ನು ಹೇಳಲಾಗಿದೆ. ಲೋಹ, ಕ್ಷಾರ, ಪಾಷಾಣ, ಪಂಚಸೂತ್ರಗಳ ವಿವರಣೆ, ಕಷಾಯ, ರಸ ಮತ್ತು ತೈಲಗಳ ವಿವರಣೆ, ದಿನನಿತ್ಯದ ಬಳಕೆಯಲ್ಲಿರುವಂಥ ಸಿದ್ಧೌಷಧ, ಪಥ್ಯ, ಅನುಪಾನ ಹೀಗೆ ಇಲ್ಲಿ ಸಿದ್ಧೌಷಧಿಯ ಪರಿಪೂರ್ಣ ವಿವರವೂ ಇದೆ ಎನ್ನಬಹುದು. ಅತ್ತಿ ಅಥವಾ ಔದುಂಬರವು ಹೂವು ಬಿಡದೆ ಕಾಯಾಗಿ ಹಣ್ಣಾಗುವ ಸಸ್ಯ ವರ್ಗಕ್ಕೆ ಸೇರಿದ್ದು ಇದರ ಚಿಗುರೆಲೆ, ಸೀಬೆ ಚಿಗುರೆಲೆ, ಮಾವಿನ ಮರದ ಚೆಕ್ಕೆ, ಅಶೋಕ ಮರದ ಚೆಕ್ಕೆಗಳನ್ನು ಕಷಾಯರೂಪದಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ಸಿದ್ಧರ ಒಂದು ಪದದ ಕನ್ನಡ ರೂಪದಲ್ಲಿ “ಆಡುಸೋಗೆ ಬಳಸಿದರೆ ಸಕಲ ರೋಗಶಮನ ಸುಬ್ರಹ್ಮಣ್ಯನಿಗೆ ಮಿಗಿಲಾದ ದೇವರಿಲ್ಲ, ಶುಂಠಿಗೆ ಮಿಗಿಲಾದ ಔಷಧವಿಲ್ಲ” ಎಂದು ಹೇಳಲಾಗಿದೆ. ಅಸ್ತಮಾ, ಶ್ವಾಸಕೋಶ, ಕಫ, ಕೆಮ್ಮುಗಳಿಗೆ ಇದರ ಚೂರ್ಣವು ಉಪಯುಕ್ತ. ಅಗಸೆಸೊಪ್ಪು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವುದಲ್ಲದೆ, ದೇಹದ ಕೆಲವೆಡೆ ಉಂಟಾಗುವ ಗಂಟುಗಳನ್ನೂ ಕೂಡ ಕರಗಿಸುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಅಶ್ವಗಂಧಿ ಎಂದರೆ ಹಿರೇ ಮದ್ದು ಎಂದೂ ಹೇಳುವ ಈ ಸಸ್ಯವು ಎಲ್ಲಾ ರೋಗಗಳಿಗೂ ಮದ್ದು. ಚರ್ಮ ರೋಗ, ನಿಶ್ಶಕ್ತಿ, ಶ್ಲೇಷ್ಮ ಜ್ವರ, ಕ್ಷಯರೋಗ ಮುಂತಾದವೂ ಕೂಡ ನಿವಾರಣೆ ಆಗುತ್ತವೆ.
ಸಾಮಾನ್ಯವಾಗಿ ಎಲ್ಲಾ ಕಡೆಗೂ ದೊರೆಯುವ ಗರಿಕೆ ಹುಲ್ಲು ಕೂಡ ಔಷಧೀಯ ಗುಣಗಳನ್ನು ಹೊಂದಿದೆ.
ಬಿಳಿನೆಕ್ಕಿ ಎಂದರೆ ಲಕ್ಕಿಯ ಎಲೆಗಳು, ವಾತನಾರಾಯಣಿ ಸೊಪ್ಪು, ಮತ್ತಿಮರದ ಚೆಕ್ಕೆ, ನೆಲ್ಲಿಕಾಯಿ, ಅರಿಶಿನ, ಹುಣಸೆ ಸೊಪ್ಪು, ನೆಗ್ಗಿಲು ಮುಳ್ಳು, ಹೊಂಗೆ, ಒಂದೆಲಗ ನುಗ್ಗೆ ಸೊಪ್ಪು, ಮುಂತಾದ ಇನ್ನೂ ಪ್ರಕೃತಿಯಲ್ಲಿ ಸಹಜವಾಗಿ ದೊರೆಯುವ ಎಷ್ಟೋ ಸಸ್ಯಗಳು ಕೂಡ ಔಷಧೀಯ ಗುಣಗಳನ್ನು ಹೊಂದಿವೆ. ಇಲ್ಲಿ ಅವುಗಳನ್ನು ಉಪಯೋಗಿಸುವ ವಿಧಾನವನ್ನು ಹಾಗೂ ಯಾವ ಯಾವ ರೋಗಗಳಿಗೆ ಅವುಗಳನ್ನು ಉಪಯೋಗಿಸಬಹುದು ಎನ್ನುವುದನ್ನೂ ಕೂಡ ಹೇಳಲಾಗಿದೆ. ಅಷ್ಟೇ ಅಲ್ಲದೆ, ಮಾತ್ರೆಗಳನ್ನು ತಯಾರಿಸುವ ವಿಧಾನವನ್ನು ಕೂಡ ಲೇಖಕರು ಇಲ್ಲಿ ಹೇಳಿದ್ದಾರೆ. ಕಷಾಯ ತಯಾರಿಕೆಯ ಬಗೆಯನ್ನೂ ಇಲ್ಲಿ ವಿವರಿಸಲಾಗಿದೆ. ಗ್ರಂಥದ ಕೊನೆಗೆ ಆಯಾ ಸಸ್ಯಗಳ ಶಾಸ್ತ್ರೀಯ ಹೆಸರುಗಳನ್ನು ಕೂಡ ಕೊಟ್ಟಿರುವುದರಿಂದ ಎಲ್ಲಾ ಭಾಷಿಗರಿಗೂ ಇದು ಅನುಕೂಲಕರವಾಗಿದೆ ಎಂದು ಹೇಳಬಹುದು.
ಸಿದ್ಧ ಆರೋಗ್ಯ ಸಂಜೀವಿನಿಗಳಲ್ಲಿ ಜಲಸೇವನೆಗೆ ಅತ್ಯಂತ ಮಹತ್ವವಿದೆ. ಶುದ್ಧ ಗಾಳಿಯಿಂದ ಮನುಷ್ಯನ ಸಕಲ ರೋಗಗಳು ನಿವಾರಣೆ ಆಗುವುದರಿಂದ ಬೆಳಗಿನ ವಾಯುವಿಹಾರವು ಆರೋಗ್ಯಕ್ಕೆ ಉತ್ತಮ ಎಂದು ಸಿದ್ಧ ವೈದ್ಯರ ಅಭಿಪ್ರಾಯ. ಮಲಗುವುದಕ್ಕೂ ಕೂಡ ವಿಧಾನ ಸೂತ್ರಗಳನ್ನು ಈ ವೈದ್ಯದಲ್ಲಿ ಹೇಳಲಾಗಿದೆ. ಹಾಲಿನಲ್ಲಿ ಕೂಡ ಸಿದ್ಧೌಷಧೀಯ ಗುಣಗಳಿರುವುದರಿಂದ ಪಿತ್ತ ಶಮನದಲ್ಲಿ ಬಲು ಉಪಯುಕ್ತ. ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವೂ ಕೂಡ ಔಷಧೀಯ ರೂಪದಲ್ಲಿ ಉಪಯುಕ್ತ ವಾಗಿವೆ ಎಂದು ಹೇಳಿದ್ದಾರೆ.
ಗ್ರಂಥದ ಕೊನೆಯಲ್ಲಿ ಕರ್ನಾಟಕದಲ್ಲಿ ಸಿದ್ಧ ವೈದ್ಯರ ಪ್ರಸ್ತುತ ವಸ್ತು ಸ್ಥಿತಿ ಎಂಬ ಶೀರ್ಷಿಕೆಯಡಿಯಲ್ಲಿ ಲೇಖಕರು ಮಂಗಳೂರಿನಲ್ಲಿ ಸಿದ್ಧ ವೈದ್ಯ ಘಟಕವು ಪ್ರಾರಂಭವಾಗಿದ್ದು ಇದು ಪಿಎಚ್ ಡಿ ಪದವಿಯನ್ನು ನೀಡುವಂಥ ಸಂಸ್ಥೆಯಾಗಿದೆ. ಹೊರರೋಗಿಗಳ ವಿಭಾಗವನ್ನು ಹೊಂದಿದ್ದು, ಚೆನ್ನೈಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸಿದ್ಧ ದ ಸಹಯೋಗದಲ್ಲಿ ನಡೆದಿದೆ. ಇಲ್ಲಿ 6 ತಿಂಗಳ ಅವಧಿಯ ಅಧ್ಯಯನದಲ್ಲಿ ಮಾನವನ ಶರೀರದಲ್ಲಿ ಇರುವ 533 ಶಕ್ತಿ ಸಂಪರ್ಕ ದಾರಿಗಳ ಶಕ್ತಿ ತಂತುಗಳೊಂದಿಗೆ ನಡೆಸುವ ಕೆಲವು ಸಿದ್ಧ ವೈದ್ಯ ಕ್ರಿಯೆಗಳ ಸಹಾಯದಿಂದ ರೋಗನಿವಾರಣೆ ಮಾಡಲಾಗುತ್ತದೆ. ಇಲ್ಲಿ, MBBS, BDS, AYUSH, BPT, BOT, NURSING, BSc, /MSc YOGA ಈ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲ ವಾಗಿರುವುದು ಎಂದು ಹೇಳಿದ್ದಾರೆ. ಅಮೆರಿಕದ ನಾರ್ಥ್ ಕೆರೋಲಿನಾದಲ್ಲಿಯ ಗ್ಲೋಬಲ್ ಸೆಂಟರ್ ಫಾರ್ ಮೆಡಿಸಿನ್ ಆಂಡ್ ರಿಸರ್ಚ್ ಸಂಸ್ಥೆಯು ಸುಮಾರು 2-3 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧ ಸಂಶೋಧನೆ, ವರ್ಮಂ ಮತ್ತು ಸಮಗ್ರ ಔಷಧೀಯ ಪದ್ಧತಿಗಳ ಸಂಶೋಧನೆ ನಡೆಸಲು ಮಣಿಪಾಲ ಅಕ್ಯಾಡೆಮಿಯನ್ನು ಆಯ್ಕೆ ಮಾಡಿದೆ.
ಕೋವಿಡ್ ಸಮಯದಲ್ಲಿ ಸಿದ್ಧ ವೈದ್ಯ ಪದ್ಧತಿಯ “ಕಬಾಸುರ ಕುಡಿನೀರ್” ಎಂಬ ಔಷಧಿಯು ಅನೇಕ ರೋಗಿಗಳಿಗೆ ಮರುಜನ್ಮ ನೀಡಿದೆ. ಕರ್ನಾಟಕ ಸರ್ಕಾರದ ಅನುಮತಿ ದೊರಕಿದ ನಂತರ ಶ್ರೀ ಶ್ರೀ ತತ್ವ ಎಂಬ ತಯಾರಿಕಾ ಘಟಕವು ಈ ಔಷಧಿಯನ್ನು ಪೂರೈಸಿದೆ. ಹೀಗೆ ಪಾರಂಪರಿಕ ಸಿದ್ಧ ವೈದ್ಯಕ್ಕೆ ಮರುಹುಟ್ಟು ನೀಡುವುದರಲ್ಲಿ ಕರ್ನಾಟಕ ಸರಕಾರದ ಪಾತ್ರವು ಬಹು ಮುಖ್ಯವಾಗಿದೆ ಎಂದು ಲೇಖಕರು ಹೇಳಿದ್ದಾರೆ. ಆದರೂ ಸಿದ್ಧವೈದ್ಯರ ಕೊರತೆಯಿಂದಾಗಿ ಕರ್ನಾಟಕದ ಜನರು ಕೇರಳ, ತಮಿಳುನಾಡುಗಳಿಗೆ ಹೋಗಬೇಕಾಗಿದೆ ಎಂಬ ನೋವು ಲೇಖಕರಿಗಿದೆ.
ಸಿದ್ಧ ವೈದ್ಯದಿಂದಾಗಿ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ಗುಣಹೊಂದಿರುವವರು ಲೇಖಕರಾದ ಡಾ. ನರಸಿಂಹ ಸ್ವಾಮಿಯವರಿಗೆ ಕೃತಜ್ಞತಾಪೂರ್ವಕ ಪತ್ರಗಳನ್ನೂ ಬರೆದಿದ್ದು ಅವುಗಳನ್ನು ಕೂಡ ಈ ಪುಸ್ತಕದ ಕೊನೆಯಲ್ಲಿ ಹಾಕಲಾಗಿದೆ. ಲೇಖಕರ ಅಭಿಪ್ರಾಯದಲ್ಲಿ ಈ ವೈದ್ಯ ಪದ್ಧತಿಯು ದಕ್ಷಿಣ ಭಾರತದಲ್ಲಿ ಅನೇಕ ಶತಮಾನಗಳ ವರೆಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದಕ್ಕೆ ಕಾರಣ ಸಿದ್ಧರುಗಳು ಸಂಶೋಧನೆಗಳ ಮೂಲಕ ಅನೇಕ ಪ್ರಕೃತಿ ರಹಸ್ಯಗಳನ್ನೂ, ಮಾನವ ಶರೀರದ, ಅಂಗಾಂಗಗಳ ಕಾರ್ಯ ವಿಶೇಷತೆಯನ್ನೂ ಅರಿತುಕೊಂಡದ್ದು. ಹೀಗಾಗಿಯೇ ಇಂದಿಗೂ ಕೂಡ ದೇಶ-ವಿದೇಶಗಳಲ್ಲಿಯೂ ಕೂಡ ಇಂದಿಗೂ ಈ ಪದ್ಧತಿಯು ಮಾನ್ಯತೆಯನ್ನು ಪಡೆದಿದೆ ಎಂದು ಲೇಖಕರು ಹೇಳುತ್ತಾರೆ. ಹಗಲೂ ರಾತ್ರಿ ಅನವರತವಾಗಿ ಸಂಶೋಧನಾಪರರಾಗಿರುವ ಆಧುನಿಕ ವೈದ್ಯ ಪದ್ಧತಿಯ ವಿಜ್ಞಾನಿಗಳಿಗೆ ಇಂದಿಗೂ ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ರೋಗ ಮುಂತಾದ ಕೆಲವು ರೋಗಗಳಿಗೆ ಸಂಪೂರ್ಣ ಗುಣ ಹೊಂದುವಂಥ ಔಷಧಿಗಳನ್ನು ಕಂಡುಹಿಡಿಯಲಾಗಿಲ್ಲ.
ಕೇವಲ ನಿಯಂತ್ರಣ ಮಾತ್ರ ಸಾಧ್ಯವಾಗಿದೆ. ಆದರೆ ಲೇಖಕರಿಗೆ ಪ್ರಾಚೀನ ಭಾರತೀಯ ಸಿದ್ಧವೈದ್ಯ ಪದ್ಧತಿಯಲ್ಲಿ ಪರಿಹಾರ ಮಾರ್ಗಗಳಿವೆ ಎಂಬ ವಿಶ್ವಾಸವಿದೆ. ಇದಕ್ಕೆ ಬೇಕಾದ ಆರ್ಥಿಕ ನೆರವನ್ನು ಹಾಗೂ ಮಾರ್ಗದರ್ಶನವನ್ನೂ ಆಸಕ್ತ ಸಂಶೋಧನಾ ವಿದ್ಯಾರ್ಥಿಗಳಿಗೆ ಸರಕಾರವು ನೀಡಲಿ ಎಂಬ ಆಶಯ ಲೇಖಕರದಾಗಿದ್ದು ಒಟ್ಟಿನಲ್ಲಿ ವೈದ್ಯ ಪದ್ಧತಿಯು ಯಾವುದೇ ಇರಲಿ, ಅದರ ಗುರಿಯು ಮಾನವ ಜನಾಂಗದ ಆರೋಗ್ಯವನ್ನು ಕಾಪಾಡುವುದಾಗಿರಬೇಕು ಎನ್ನುವ ಮನೋಭಾವ ಇವರದು.
ಹೀಗೆ ಈ ಗ್ರಂಥದ ಲೇಖಕರಾದ ಡಾ. ನರಸಿಂಹಸ್ವಾಮಿಯವರು ಒಬ್ಬ ಅಪರೂಪದ ಸಿದ್ಧವೈದ್ಯರಾಗಿದ್ದು ಸಂಶೋಧಕರೂ ಆಗಿದ್ದು ಅನೇಕ ರೋಗ ನಿದಾನಗಳನ್ನೂ ಕಂಡು ಹಿಡಿದು, ಬಹಳ ಕಷ್ಟದಿಂದ ಕಾಡುಮೇಡುಗಳಲ್ಲಿ ತಿರುಗಾಡಿ, ಅಮೂಲ್ಯ ಸಸ್ಯಗಳನ್ನು ಶೇಖರಿಸಿ ಔಷಧಿಗಳನ್ನು ತಯಾರಿಸಿ ಚಿಕಿತ್ಸೆಯನ್ನು ನೀಡುವ ಮೂಲಕ ಜನಸೇವೆಯನ್ನು ಮಾಡುತ್ತಿರುವುದು ಅತ್ಯಂತ ಶ್ಲ್ಯಾಘನೀಯವಾದ ಕಾರ್ಯವಾಗಿದೆ. ಇವರು ತಮ್ಮ ಕಾರ್ಯದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಪಡೆಯಲಿ ಎಂಬ ಹಾರೈಕೆ.
3 thoughts on “ಆರೋಗ್ಯಕರ ಜೀವನಕ್ಕೆ “ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ””
ತುಂಬ ಕುತೂಹಲ ಭರಿತ ವಾಗಿದೆ. ಧನ್ಯವಾದಗಳು🙏
ಆರೋಗ್ಯಕರ ಜೀವನಕ್ಕೆ ಸುಲಭ ಮಾರ್ಗವಾಗಬಹುದಾದ “ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ”ಯ ಪ್ರಾಮುಖ್ಯತೆ, ಬಹು ಮುಖತೆ ಹಾಗೂ ಬಹು ರೂಪತೆಗಳ ಬಗೆಗೆ, ಮೂಲಭೂತ ಕಾಳಜಿ ಹಾಗೂ ಎಚ್ಚರಿಕೆಯಿಂದ, ಸಿದ್ಧವೈದ್ಯ ಶ್ರೀ ಪಿ. ಎಸ್. ನರಸಿಂಹಸ್ವಾಮಿಯವರು ಬರೆದ ಈ ಪುಸ್ತಕದ, ಕೂಲಂಕುಷವಾದ ಅವಲೋಕನದಲ್ಲಿ, ಬಹಳಷ್ಟು ರೋಚಕ, ಆತ್ಮೀಯ ಸಂಗತಿಗಳಿವೆ.
ದಿನ ನಿತ್ಯದ, ಮನೆಯಲ್ಲಿಯೇ ಇರುವಂಥ ಶುಂಠಿ, ಮಸಾಲೆಯ ವಸ್ತುಗಳಾದ ಜೀರಿಗೆ, ಮೆಣಸು, ಏಲಕ್ಕಿ, ಮೆಂತ್ಯ, ಪಲಾವು ಎಲೆಗಳು, ದಾಲಚಿನ್ನಿ, ಮೊಗ್ಗು, ಚಕ್ರ ಇವುಗಳ, ಪ್ರಕೃತಿಯಲ್ಲಿ ದೊರೆಯುವಂಥ ಸಾಮಾನ್ಯವಾಗಿ ಕೈಗೆಟಕುವಂಥ ಗಿಡಮೂಲಿಕೆ, ಸಪ್ಪು, ಚಿಗುರೆಲೆ, ಚಕ್ಕೆ, ಇತ್ಯಾದಿಗಳ ಔಷಧೀಯ ಗುಣಗಳನ್ನೆಲ್ಲ, ಸ್ಪಷ್ಟವಾಗಿ ಪ್ರತಿಪಾದಿಸುವ ಉಪಯುಕ್ತ ಮಾಹಿತಿಗಳನ್ನು, ಮಾಲತಿ ಮುದಕವಿಯವರು, ಅತ್ಯಂತ ಸರಳವಾಗಿ, ತಿಳಿಯಾಗಿ, ಮನಮುಟ್ಟುವಂತೆ ವಿಶದೀಕರಿಸಿದ್ದಾರೆ.
ಮಂಗಳೂರಿನಲ್ಲಿ ಈಗಾಗಲೇ ಸಿದ್ಧ ವೈದ್ಯ ಘಟಕವು ಪ್ರಾರಂಭವಾಗಿದ್ದು ಹಾಗೂ ಅಮೆರಿಕದ ಗ್ಲೋಬಲ್ ಸೆಂಟರ್ ಫಾರ್ ಮೆಡಿಸಿನ್ ಆಂಡ್ ರಿಸರ್ಚ್ ಸಂಸ್ಥೆ ‘ಸಿದ್ಧ ಸಂಶೋಧನೆ’ ನಡೆಸಲು ಮಣಿಪಾಲ ಅಕ್ಯಾಡೆಮಿಯನ್ನು ಆಯ್ಕೆ ಮಾಡಿದ್ದು ದಿಟ್ಟ ಹೆಜ್ಜೆಗಳಾದರೂ, ಸಿದ್ಧ ವೈದ್ಯ ಪದ್ಧತಿ”ಯ ಬಗೆಗೆ ಬೇಕಾದ ಆವರ್ಜೂನ ಪ್ರಚಾರ, ಸರಕಾರದ ಬೆಂಬಲ, ಯುವ ಪೀಳಿಗೆಯ ಆಸಕ್ತಿ ಕೆರಳಿಸಿ, ಪ್ರಚೋದಿಸಿ, ಉಳಿಸಿಕೊಳ್ಳುವ ಪ್ರಯತ್ನಗಳು ಆಗಬೇಕಾದುದು ಬಹಳೇ ಅವಶ್ಯವಿದೆ.
ಮೆಚ್ಚುಗೆ ವ್ಯಕ್ತಪಡಿಸಿದುದಕ್ಕೆ ಧನ್ಯವಾದಗಳು ಸರ್.