ವೀರಭದ್ರಪ್ಪನವರ ಮನಸ್ಸು ತುಂಬಾನೇ ದುಗುಡದಲ್ಲಿತ್ತು, ಕಸಿವಿಸಿಗೊಂಡಿತ್ತು. ಮನಸ್ಸು ಚಿಂತೆಯಲ್ಲಿ ಸವೆಯತೊಡಗಿತ್ತು. ಇತ್ತೀಚಿಗೆ ಹೆಂಡತಿ ಸುಮಾದೇವಿಯ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದೇ ಅವರ ಚಿಂತೆಗೆ ಕಾರಣವಾಗಿತ್ತು. ಸುಮಾದೇವಿ ಒಂದು ದಿನ ಆರಾಮದಿಂದ ಇದ್ದರೆ ಇನ್ನೊಂದು ದಿನ ಆರಾಮದಿಂದ ಇರುತ್ತಿರಲಿಲ್ಲ. ಸುಮಾದೇವಿಯ ಅನಾರೋಗ್ಯ ವೀರಭದ್ರಪ್ಪನವರನ್ನು ಕಳವಳಕ್ಕೀಡು ಮಾಡಿತ್ತು. ಮೊಣಕಾಲಿನ ನೋವುಗಳಂತೂ ಅವಳ ದಿನಚರಿಗೆ ಸೇರಿಕೊಂಡು ಆಗಲೇ ಐದಾರು ವರ್ಷಗಳೇ ಸರಿದಿದ್ದವು. ಜೊತೆಗೆ ಅಧಿಕ ರಕ್ತದೊತ್ತಡ ಬೇರೆ. ನೆಗಡಿ, ಕೆಮ್ಮು ಜನ್ಮಕ್ಕಂಟಿದ ಶತ್ರುಗಳಾಗಿದ್ದು ವಿಶೇಷವೇ. ಮಾತ್ರೆಗಳು, ಮುಲಾಮುಗಳು ಅವಳ ಸಂಗಾತಿಗಳೇ. ಅದೇನು ಪುಣ್ಯವೋ ಏನೋ, ಸಕ್ಕರೆ ಕಾಯಿಲೆಯೊಂದು ಮಾತ್ರ ಅವಳ ಸಮೀಪ ಸುಳಿದಿರಲಿಲ್ಲ. ಅವಳು ಅದೂ, ಇದೂ, ಕೈಗೆ ಸಿಕ್ಕಿದ್ದನ್ನು, ಕಂಡಕಂಡದ್ದನ್ನು ತಿನ್ನದೇ ಕಟು ಪಥ್ಯ ಮಾಡುತ್ತಿದ್ದರೂ ಅವು, ಇವು ಅವಳನ್ನು ವಕ್ರಿಸಿಕೊಳ್ಳುತ್ತಿರುವುದು ನಿಜವೇ. ಅವಳೇನು ಧೈರ್ಯಗೆಡುವ ಹೆಣ್ಣಲ್ಲ. ಬಂದಿದ್ದನ್ನು ಬಂದಾಂಗ ಸ್ವೀಕರಿಸೋ ಸಹನಾಮಯಿ.
ಎಪ್ಪತ್ತರ ಆಜು-ಬಾಜುವಿನಲ್ಲಿ ಬದುಕನ್ನು ಮುನ್ನಡೆಸುತ್ತಿರುವ ವೀರಭದ್ರಪ್ಪ ಮತ್ತು ಅರವತ್ತೈದರ ಹರೆಯದ ಸುಮಾದೇವಿ ದಂಪತಿಗಳು ಮೂಲತಃ ಕೃಷಿಕರು. ವೀರಭದ್ರಪ್ಪನವರಿಗೆ ಪಿತ್ರಾರ್ಜಿತ ಆಸ್ತಿ ಅಂತ ಹತ್ತೆಕರೆ ಖುಷ್ಕಿ ಜಮೀನು ಬಂದಿತ್ತು ಒಡಹುಟ್ಟಿದವರು ಪಾಲಾಗುವಾಗ. ಅದೇ ಹತ್ತೆಕರೆ ಖುಷ್ಕಿ ಬೇಸಾಯದ ಜಮೀನಿನ ಆದಾಯದಲ್ಲೇ ವೀರಭದ್ರಪ್ಪ-ಸುಮಾದೇವಿ ದಂಪತಿಗಳ ಬದುಕಿನ ಬಂಡಿ ಚಲಿಸತೊಡಗಿತ್ತು. ಮೇಘರಾಜ ಹನಿಹನಿಯಾಗಿ ಮಳೆರಾಯನಾಗಿ ಧರೆಯನ್ನು ಮನಸೋ ಇಚ್ಛೆ ತಣಿಸಿದ ವರ್ಷ ದಂಪತಿಗಳ ಬದುಕು ಹಸಿರು ಹಸಿರಾಗಿ ನಳನಳಿಸುತ್ತಿತ್ತು. ಮೇಘರಾಜ ಮಳೆರಾಯನಾಗದೇ ಮುನಿಸಿಕೊಂಡು ಆಕಾಶದಲ್ಲೇ ಠಿಕಾಣಿ ಹೂಡಿದ ವರ್ಷ ದಂಪತಿಗಳ ಬಾಳ ಬಂಡಿ ವಗ್ಗಾಲಿಯಾಗುತ್ತಿದ್ದುದು ಸತ್ಯವೇ. ಮಳೆರಾಯ ಸಾಧಾರಣ ರೀತಿಯಲ್ಲಿ ಸುರಿದ ವರ್ಷ ಜೀವನ ಚಕ್ರ ನಿಧಾನ ಗತಿಯಲ್ಲಿ ಉರುಳುತ್ತಿತ್ತು. ದುಂದು ವೆಚ್ಚಕ್ಕೆ ಕಡಿವಾಣಹಾಕಿ ಜೀವನ ಕ್ರಮವನ್ನು ಆದಾಯಕ್ಕೆ ತಕ್ಕಂತೆ ರೂಪಿಸಿಕೊಂಡು ಈಜಬೇಕು, ಇದ್ದು ಜಯಿಸಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹೆಜ್ಜೆ ಹಾಕುತ್ತಿದ್ದರು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನಸ್ಸು ದಂಪತಿಗಳೀರ್ವರದು. ಇದ್ದುದರಲ್ಲಿ ಹೇಗೋ ಜೀವನ ಸವೆಸುತ್ತಿದ್ದರು. ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಜೀವಿ ವೀರಭದ್ರಪ್ಪ. ಕೈಕೆಸರಾದರೆ ಬಾಯಿ ಮೊಸರು, ದುಡಿತವೇ ದುಡ್ಡಿನ ತಾಯಿ ಎಂಬುದನ್ನು ಬಲ್ಲ ತಿಳುವಳಿಕಸ್ಥ. ನೀ ನನಗೆ, ನಾ ನಿನಗೆ ಎಂಬಂತಿದ್ದರು ವೀರಭದ್ರಪ್ಪ-ಸುಮಾದೇವಿ ದಂಪತಿಗಳು. `ನಾನು ಬಡವ, ನೀನು ಬಡವಿ, ಒಲವೇ ನಮ್ಮ ಬದುಕು' ಎಂಬಂತಿದ್ದರು.
****
ವೀರಭದ್ರಪ್ಪ- ಸುಮಾದೇವಿ ದಂಪತಿಗಳಿಗೆ ಮಕ್ಕಳ ಭಾಗ್ಯ ಲಭಿಸಿದ್ದು ಮದುವೆಯಾಗಿ ಐದು ವರ್ಷಗಳ ನಂತರ. ಮನೆತನದ ಕೀರ್ತಿ ಬೆಳಗಲು ಪುತ್ರೋತ್ಸವವಾಗಿತ್ತು. ಅಷ್ಟೊತ್ತಿಗೆ ವೀರಭದ್ರಪ್ಪ ತನ್ನ ಪರಿಶ್ರಮದ ಖಾತೆಗೆ ಐದೆಕರೆ ಜಮೀನನ್ನು ಖರೀದಿಸಿ ಹತ್ತೆಕರೆಯ ಆಸ್ತಿಯನ್ನು ಹದಿನೈದು ಎಕರೆಯನ್ನಾಗಿ ಮಾಡಿದ್ದರು. ಮುದ್ದಿನ ಮಗು, `ಸಮರ್ಥ'ನೆಂದು ನಾಮಕರಣಗೊಂಡಿದ್ದ. ಸಮರ್ಥನಿಗೆ ಮೂರು ವರ್ಷಗಳು ತುಂಬಿದಾಗ ವಿನೀತಾ ಅವನಿಗೆ ತಂಗಿಯಾಗಿ ಬಂದು ಮನೆ ಮಂದಿಯ ಮುಖಗಳಲ್ಲಿ ನಗೆಮಲ್ಲಿಗೆ ಚಿಮ್ಮಿಸಿದ್ದಳು. ಸಮರ್ಥ ಕೀರ್ತಿಗೊಬ್ಬ ಮಗನಾದರೆ ವಿನೀತಾ ಆರತಿಗೊಬ್ಬ ಮಗಳಾದಳು. ವಿನೀತಾಳ ತರುವಾಯ ಸುಮಾದೇವಿ ಮತ್ತೆ ಗರ್ಭ ಧರಿಸಲಿಲ್ಲ. ವಿನೀತಾಳಿಗೆ ಐದು ವರ್ಷವಾಗುವಷ್ಟರಲ್ಲಿ ವೀರಭದ್ರಪ್ಪ ಮತ್ತೆ ಐದೆಕರೆ ಜಮೀನನ್ನು ಖರೀದಿಸಿ ತನ್ನ ಒಡೆತನದ ಆಸ್ತಿಯನ್ನು ಇಪ್ಪತ್ತು ಎಕರೆಗೆ ಏರಿಸಿದ್ದರು. ಆ ಐದೆಕರೆ ಜೀಮೀನಿನಲ್ಲಿ ಎರಡು ಕೊಳವೆ ಭಾವಿ ಕೊರೆಸಿ ಪಂಪ್‍ಸೆಟ್ ಕೂಡ್ರಿಸಿ ಹನಿ ನೀರಾವರಿಗೆ ಒಳಪಡಿಸಿದ್ದರು. ಬ್ಯಾಂಕಿನ ಸಾಲದ ಜೊತೆಗೆ ಸರಕಾರದಿಂದ ಒಂದಿಷ್ಟು ಸಹಾಯ ಧನವೂ ಸಿಕ್ಕಿತ್ತು. ವೀರಭದ್ರಪ್ಪ ತಮ್ಮ ಸಮಾಜದ ಜನತೆಯ ಕಣ್ಣುಗಳಲ್ಲಿ ಮತ್ತು ಊರಿನ ಜನರ ದೃಷ್ಟಿಯಲ್ಲಿ ಗಣ್ಯವ್ಯಕ್ತಿಯಾಗತೊಡಗಿದರು ಅವರಿಗರಿವಿಲ್ಲದಂತೆ.
`ವಿನೀತಾ' ತಮ್ಮ ಕುಟುಂಬದ ಭಾಗ್ಯಲಕ್ಷ್ಮಿ ಎಂದು ಭಾವಿಸಿದರು ವೀರಭದ್ರಪ್ಪ. ಮಕ್ಕಳಿಬ್ಬರೂ ಬಿದಿಗೆ ಚಂದ್ರಮನಂತೆ ಬೆಳೆಯತೊಡಗಿದರು. ಓದಿನಲ್ಲಿ ಸಮರ್ಥ ಮತ್ತು ವಿನೀತಾ ತಮ್ಮದೇ ಆದ ಛಾಪನ್ನು ಮೂಡಿಸತೊಡಗಿದರು. ಅವರಿಬ್ಬರು ತಮ್ಮ ತರಗತಿಗಳಲ್ಲಿ ಯಾವಾಗಲೂ ಮುಂದೇ. ಸತತ ಪ್ರಾಮಾಣಿಕ ಪ್ರಯತ್ನ, ಪರಿಶ್ರಮ, ಶ್ರದ್ಧೆ, ನಿರಂತರ ಅಭ್ಯಾಸಗಳಿಂದ ಇಬ್ಬರೂ ತಮ್ಮ ಬುದ್ಧಿಮತ್ತೆ, ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳತೊಡಗಿದ್ದರು. ಹಾಗೇ ತಮ್ಮ ಸದ್ಗುಣ, ವಿನೀತ ಭಾವಗಳಿಂದ ಶಾಲೆಯಲ್ಲಿ ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮತೊಡಗಿದರು. ಶಿಕ್ಷಕ ವೃಂದದಲ್ಲಿ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಾದರು. ಅವರ ಶ್ರೇಯೋಭಿಲಾಷೆಗೆ ಎಲ್ಲರೂ ಶುಭ ಹಾರೈಸುವವರೇ. ವರ್ಷಗಳು ಸರಿದಂತೆ ಸಮರ್ಥ ತಾಯಿಯ ಮುದ್ದಿನ ಮಗನಾದರೆ, ವಿನೀತಾ ತಂದೆಯ ಮುದ್ದಿನ ಮಗಳಾಗ ತೊಡಗಿದಳು.
ಪಿಯುಸಿ ನಂತರ ಸಮರ್ಥ ಮತ್ತು ವಿನೀತಾ ಆರಿಸಿಕೊಂಡಿದ್ದು ಇಂಜಿನಿಯರಿಂಗ್ ವಿಭಾಗವನ್ನೇ. ಇಬ್ಬರೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಶಾಖೆಯಲ್ಲೇ ಅಭ್ಯಾಸ ಮಾಡಿದರು. ಸಮರ್ಥ ಅಂತಿಮ ವರ್ಷದ ಬಿಇಯಲ್ಲಿದ್ದಾಗ ವಿನೀತಾ ಮೊದಲನೇ ವರ್ಷದ ಬಿಇಗೆ ಎಂಟ್ರಿ ಕೊಟ್ಟಿದ್ದಳು. ಸಿಇಟಿಯಲ್ಲಿ ಒಳ್ಳೇ ರ್ಯಾಂಕಿಂಗ್ ಬಂದಿದ್ದರಿಂದ ಬೆಂಗಳೂರಿನ ಪ್ರತಿಷ್ಠಿತ ಇಂಜಿನಯರಿಂಗ್ ಕಾಲೇಜುಗಳಲ್ಲೇ ಸೀಟು ಸಿಕ್ಕಿದ್ದವು. ಆದರೆ ಇಬ್ಬರೂ ಅಭ್ಯಸಿಸಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಸಮರ್ಥ ರ್ಯಾಂಕ್ ಗಳಿಸುವುದರ ಮೂಲಕ ತನ್ನ ಪದವಿ ಮುಗಿಸಿದ್ದ. ಅಷ್ಟೊತ್ತಿಗೆ ಪ್ರತಿಷ್ಠಿತ ಐಟಿ ಕಂಪನಿಯ ಕ್ಯಾಂಪಸ್ ಸಿಲೆಕ್ಷನ್‍ದಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದ. ವೀರಭದ್ರಪ್ಪ-ಸುಮಾದೇವಿ ಮಕ್ಕಳ ಸಾಧನೆ, ಏಳಿಗೆಯನ್ನು ಸಂಬಂಧಿಕರು, ಊರಿನವರು ಹಾಡಿ ಹೊಗಳತೊಡಗಿದ್ದರು. `ಅವರಂಥ ಮಕ್ಕಳು ನಮಗಿಲ್ಲವಲ್ಲ...' ಎಂದು ಕೆಲವರು ಕರುಬುತ್ತಿದ್ದುದೂ ನಿಜ.
ವಿನೀತಾ ಆಗಷ್ಟೇ ತನ್ನ ಬಿಇ ಮುಗಿಸಿದ್ದಳು. ಅವಳಿಗೂ ಹೆಸರಾಂತ ಐಟಿ ಕಂಪನಿಯಲ್ಲಿ ಕ್ಯಾಂಪಸ್ ಸಿಲೆಕ್ಷನ್ ಆಗಿತ್ತು. ಮೂರು ವರ್ಷಗಳ ಸೇವೆ ಮುಗಿಸಿದ್ದ ಸಮರ್ಥನಿಗೆ ಯುಎಸ್‍ಗೆ ಹೋಗುವ ಅವಕಾಶ ಒದಗಿಬಂದಿತ್ತು. ಯುಎಸ್‍ಗೆ ಹೋಗಲು ಸಮರ್ಥ ತುದಿಗಾಲಲ್ಲೇ ನಿಂತಿದ್ದ. ವೀರಭದ್ರಪ್ಪ, ಸುಮಾದೇವಿಯವರ ಅಭ್ಯಂತರವೇನೂ ಇರಲಿಲ್ಲ. ತಾಯಿ ಸುಮಾದೇವಿ, `ಸಮೂ, ನೀ ಪರದೇಶಕ್ಕೆ ಹೋಗುವುದಕ್ಕಿಂತ ಮುಂಚೆ ಮದುವೆಮಾಡಿಕೊಂಡು ನಿನ್ನ ಹೆಂಡತಿಯ ಜೊತೆಗೇ ಹೋಗುವುದು ಒಳ್ಳೆಯದು' ಎಂದು ಮಗನಿಗೆ ಉಪದೇಶ ಮಾಡಿದಳು. ಮನೆಯಲ್ಲಿ ಬೆಳೆದು ನಿಂತಿರುವ ಮಗಳಿರುವಾಗ ಮಗನಿಗೆ ಮೊದಲು ಮದುವೆಮಾಡುವ ಮನಸ್ಸಿರಲಿಲ್ಲ ವೀರಭದ್ರಪ್ಪನವರಿಗೆ. `ನಾನು ಈಗಷ್ಟೇ ಪದವಿ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಅಣ್ಣ ಮದುವೆ ಮಾಡಿಕೊಂಡು ಯುಎಸ್‍ಗೆ ಹೋಗಲಿ. ಇನ್ನೆರಡು-ಮೂರು ವರ್ಷಗಳ ನಂತರ ನಾನು ಮದುವೆಯಾಗುವೆ. ಸದ್ಯ ನನಗೆ ಮದುವೆ ಬೇಡ' ಎಂದು ವಿನೀತಾಳೇ ಹೆತ್ತವರಿಗೆ ಮನದಟ್ಟು ಮಾಡಿದಳು. ಸುಮಾದೇವಿಗೆ ತನ್ನಣ್ಣನ ಮಗಳು ಪ್ರಿಯಾಂಕಾಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬ ಹಂಬಲವಿತ್ತು. ಅವಳೂ ವರ್ಷದ ಹಿಂದೇನೇ ಬಿಇ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದಳು. ಸಮರ್ಥನಿಗೆ ಪ್ರಿಯಾಂಕಾಳ ಮೇಲೆ ಮನಸೂ ಇತ್ತು. ತಾಯಿಯ ಪ್ರೋಪೋಜಲ್ ಥಟ್ಟಂತ ಒಪ್ಪಿಕೊಂಡೂಬಿಟ್ಟ. ವೀರಭದ್ರಪ್ಪನವರಿಗೆ ತನ್ನ ತಂಗಿಯ ಮಗಳು ಮಂದಾಕಿನಿಯನ್ನು ಸಮರ್ಥನಿಗೆ ಜೊತೆಮಾಡಬೇಕೆಂಬ ಮಹದಾಸೆಯಿತ್ತು. ಕೊನೆಗೆ ಸುಮಾದೇವಿಯ ಮಾತೇ ಸ್ಥಿರವಾಯಿತು. ಪ್ರಿಯಾಂಕಾಳ ಜೊತೆಗೆ ಸಮರ್ಥನ ಮದುವೆಯೂ ಜರುಗಿತು. ಮದುವೆಯಾದ ಆರು ತಿಂಗಳಲ್ಲಿ ಪ್ರಿಯಾಂಕಾಳಿಗೂ ಯುಎಸ್‍ಗೆ ಹೋಗುವ ಅವಕಾಶವೂ ಸಿಕ್ಕಿತು. ಅವಳು ಯುಎಸ್‍ನಲ್ಲಿ ಗಂಡನನ್ನು ಕೂಡಿಕೊಂಡಳು. ಸಮರ್ಥ ಸಂತುಷ್ಟನಾದರೆ ಸುಮಾದೇವಿ ಫುಲ್ ಖುಷ್.
****
ಕಾಲನನ್ನು ತಡೆಯಲು ಸಾಧ್ಯವೇ? ಉಹೂಂ. ಕಾಲಚಕ್ರವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲವಲ್ಲ? ದಿನಗಳು ಉರುಳಿದವು. ವೀರಭದ್ರಪ್ಪ-ಸುಮಾದೇವಿಯವರ ಮಕ್ಕಳು ಜೀವನದಲ್ಲಿ ನೆಲೆ ಕಂಡುಕೊಂಡಿದ್ದೂ ಆಯಿತು. ಮಗ-ಸೊಸೆ, ಅವರ ಮಕ್ಕಳು ಯುಎಸ್‍ನಲ್ಲಿ, ಮಗಳು-ಅಳಿಯ, ಅವರ ಮಕ್ಕಳು ಬೆಂಗಳೂರಿನಲ್ಲಿ, ಇಳಿಯವಸ್ಸಿನ ವೀರಭದ್ರಪ್ಪ-ಸುಮಾದೇವಿ ಇಬ್ಬರೇ ತಮ್ಮ ಸ್ವಂತ ಊರಿನ ಮನೆಯಲ್ಲಿ. ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡನೆಂಬಂತೆ ಅವರ ಬಾಳ ದೋಣಿಯ ಪಯಣ ಮುಂದುವರೆದಿತ್ತು. ಸುಮಾದೇವಿಯ ಆರೋಗ್ಯ ಚೆನ್ನಾಗಿರುವಾಗ ಎಲ್ಲವೂ ಚೆನ್ನಾಗೇ ನಡೆದಿತ್ತು. ಆರೋಗ್ಯದಲ್ಲಿ ಏರುಪೇರಾಗತೊಡಗಿದಾಗ ಜೊತೆಗೆ ನಮ್ಮವರೆನ್ನುವ ಮಕ್ಕಳಾಗಲೀ, ಸಂಬಂಧಿಕರಾಗಲಿ ಇರಬೇಕು ಎಂಬ ಭಾವನೆ ಅವರೆದೆಗಳಲ್ಲಿ ಮೂಡತೊಡಗಿತ್ತು. ಕೂಡು ಕುಟುಂಬದ ಪರಿಕಲ್ಪನೆ ಇಂಥಹ ಪರಿಸ್ಥಿತಿಗಾಗಿಯೇ ಜಾರಿಯಲ್ಲಿತ್ತೇನೋ ಎಂಬ ಅರಿವಿನ ಹಂದರ ಮನದಲ್ಲಿ ಮಿಂಚಿ ಮಾಯವಾಗತೊಡಗಿತ್ತು.
ಅಂದು ಸುಮಾದೇವಿ ಎಂದಿನಂತೆ ಬೆಳಗ್ಗೆ ಐದೂವರೆಗೇ ಎದ್ದು ತನ್ನ ಆರಾಧ್ಯ ದೈವ ಶಿವನ ಪಟಕ್ಕೆ ಭಕ್ತಿಪೂರ್ವಕವಾಗಿ ನಮಿಸಿ ಮನೆಯ ಕಸ-ಮುಸುರೆ ಕೆಲಸಕ್ಕೆ ಮುಂದಾಗಿದ್ದಳು. ಕಸಗೂಡಿಸಿ, ರಾತ್ರಿ ಉಳಿದಿದ್ದ ಪಾತ್ರೆಗಳನ್ನು ತಿಕ್ಕಿ-ತೊಳೆದಳು. ಪಾತ್ರೆಗಳ ಕಲರವ ಶಬ್ದಕ್ಕೆ ಎಚ್ಚರವಾಗಿ ವೀರಭದ್ರಪ್ಪನವರು ಮಡದಿಯ ಹತ್ತಿರ ಬರತೊಡಗಿದ್ದರು. ಅಷ್ಟರಲ್ಲಿ ಅದೇನಾಯಿತೋ ಏನೋ, ಸುಮಾದೇವಿಗೆ ತಲೆತಿರುಗಿದಂತಾಗಿ ನಿಂತಲ್ಲೇ ಕೆಳಗುರುಳ ತೊಡಗಿದಳು. ತಕ್ಷಣ ವೀರಭದ್ರಪ್ಪ ಮಡದಿಯತ್ತ ದೌಡಾಯಿಸಿ ಬೀಳುತ್ತಿದ್ದ ಅವಳನ್ನು ಹಿಡಿದುಕೊಂಡು ಹಾಗೇ ಹಾಲಿನಲ್ಲಿದ್ದ ಸೋಫಾದ ಮೇಲೆ ಕೂಡ್ರಿಸಿದರು. ಸುಮಾದೇವಿ ಬೆವೆತು ತೊಯ್ದು ತೊಪ್ಪೆಯಾಗಿದ್ದಳು. ತಕ್ಷಣ ಊರಿನಲ್ಲಿದ್ದ ಕುಟುಂಬದ ಡಾಕ್ಟರ್ ಮಲ್ಲಿಕಾರ್ಜುನರ ಹತ್ತಿರ ಕರೆದುಕೊಂಡು ಹೋದರು. ಸುಮಾದೇವಿಯನ್ನು ಕೂಲಂಕಶವಾಗಿ ಪರೀಕ್ಷಿಸಿದರು. ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕಿಂತ ತುಂಬಾ ಹೆಚ್ಚಿಗೆ ಇತ್ತು. ರಕ್ತದಲ್ಲಿನ ಸಕ್ಕರೆ ಅಂಶವೂ ಹೆಚ್ಚಿಗಿತ್ತು. ತಕ್ಷಣ ಎರಡು ಇಂಜೆಕ್ಷನ್ ಕೊಟ್ಟು ಡ್ರಿಪ್ ಹಚ್ಚಿದರು. ಒಂದಿಷ್ಟು ಮಾತ್ರೆಗಳನ್ನೂ ಕೊಟ್ಟರು. ನಾಲ್ಕು ತಾಸು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಟ್ಟರು. ರಕ್ತದೊತ್ತಡ ಕಡಿಮೆಯಾಗಿತ್ತು. ಇಡೀ ದಿನ ಹೆಂಡತಿಯದೇ ಆರೈಕೆಯಾಯಿತು ವೀರಭದ್ರಪ್ಪನವರಿಗೆ.
ಸುಮಾದೇವಿಯ ಮನದಲ್ಲಿ ಮಕ್ಕಳನ್ನು ನೋಡಬೇಕೆನ್ನುವ ಬಯಕೆ ಮಡುವುಗಟ್ಟತೊಡಗಿತು. ಅಮೇರಿಕಾ ಸೇರಿದ್ದ ಮಗರಾಯ ಭೂಪತಿ ಸಮರ್ಥ ಹದಿನೈದು ವರ್ಷಗಳಲ್ಲಿ ತವರು ನಾಡಿಗೆ ಬಂದಿದ್ದು ಕೇವಲ ಮೂರು ಸಲ ಅಷ್ಟೇ. ತಂಗಿ ವಿನೀತಾಳ ಮದುವೆಗೆ ಹೇಗೋ ಹೊಂದಾಣಿಕೆ ಮಾಡಿಕೊಂಡು ಬಂದಿದ್ದ. ಆಗ ಅವನ ಜೊತೆಗೆ ಅವನ ಹೆಂಡತಿ ಪ್ರಿಯಾಂಕಾ ಬಂದಿದ್ದಳು. ಮದುವೆಯ ನಂತರ ಅವಳು ಅತ್ತೆ-ಮಾವನ ಮನೆಗೆ ಬಂದಿದ್ದು ಅದೇ ಮೊದಲು ಮತ್ತು ಕೊನೇ ಸಲ ಅಷ್ಟೇ. ಆ ನಂತರ ಅವಳು ಇತ್ತ ಮುಖವನ್ನೇ ಹಾಕಲಿಲ್ಲ. ಸಮರ್ಥ ಎರಡನೆಯ ಸಲ ಹೆಂಡತಿ ಪ್ರಿಯಾಂಕಳ ತಮ್ಮನ ಮದುವೆಗೆ ಬಂದಿದ್ದ. ಮೂರನೇ ಸಲ ಬಂದಿದ್ದು ಅವನ ಮಾವನ ಅಂತ್ಯ ಸಂಸ್ಕಾರಕ್ಕೆ. ಪ್ರಿಯಾಂಕಾ ಎರಡು ಮಕ್ಕಳಿಗೆ ಜನ್ಮ ನೀಡಿದ್ದು ಅಮೇರಿಕಾದಲ್ಲೇ. ಹೆರಿಗೆ ಅವಳು ತನ್ನ ತಾಯಿಯನ್ನು ಕರೆಸಿಕೊಂಡಿದ್ದಳೇ ವಿನಃ ಅತ್ತೆಯನ್ನು ಆಮಂತ್ರಿಸಲೇ ಇಲ್ಲ. ಅದೇನೋ ಹೇಳ್ತಾರಲ್ಲ, ನೆಚ್ಚಿನ ಎಮ್ಮೆ ಕೋಣನ ಈಯ್ತಂತೆ, ಹಾಗಾಗಿತ್ತು ಸುಮಾದೇವಿಯ ಮನದ ಸ್ಥಿತಿ. ಪ್ರಿಯಾಂಕಾ ಅವರ ನೆಚ್ಚಿನ, ಮೆಚ್ಚಿನ ಸೊಸೆ ಮುದ್ದಾಗಿದ್ದಳು ಮದುವೆಗೆ ಮುಂಚೆ. ನಂತರ ಅವಳು ತನ್ನ ಸೋದರತ್ತೆಯನ್ನು ಕೇರೇ ಮಾಡಲಿಲ್ಲ. ಸಮರ್ಥ ಹೆಂಡತಿಯ ಗುಲಾಮನೂ ಆಗಿಬಿಟ್ಟ.
****
ಸಮರ್ಥನದು ಒಂದು ಕಥೆಯಾದರೆ ವಿನೀತಾಳದು ಇನ್ನೊಂದು ಕಥೆ. ಪದವಿಯ ನಂತರ ಎರಡು-ಮೂರು ವರ್ಷ ಮದುವೆ ಬೇಡವೆಂದ ವಿನೀತಾ ಕೆಲಸಕ್ಕೆ ಸೇರಿದ ಮೇಲೆ ಪ್ರೀತಿಸಿದ್ದು ಸಹೋದ್ಯೋಗಿ ವಿಶ್ವಾಸನನ್ನು. ಅವನು ಮೈಸೂರು ಜಿಲ್ಲೆಯ, ಮೈಸೂರು ತಾಲೂಕಿನ ಒಕ್ಕಲಿಗ ಕೋಮಿನ ಹುಡುಗ. ಇವಳೋ ಬಸವ ಧರ್ಮದ ಲಿಂಗಾಯತರವಳು. ವಿಶ್ವಾಸ್ ಹೆಸರಿಕೆ ತಕ್ಕಂತೆ ವಿಶ್ವಾಸವನ್ನು ಗಳಿಸುವಂಥಹ ಹುಡುಗನೇ. ಸದ್ಗುಣ ಸಂಪನ್ನ. ವಿಶ್ವಾಸ್ ಮತ್ತು ವಿನೀತಾ ಪರಸ್ಪರ ಪ್ರೀತಿಸಿದ್ದು ನಿಜ. ಪ್ರೀತಿಯನ್ನು ಮನದುಂಬಿ ವ್ಯಕ್ತಪಡಿಸಿದ್ದೂ ನಿಜ. ವಿನೀತಾ ತನ್ನ ಮನೆಯ ಸಾಧಕ-ಬಾಧಕಗಳನ್ನು, ಆಚಾರ-ವಿಚಾರಗಳನ್ನು ಮುಕ್ತವಾಗಿ ಅವನೊಂದಿಗೆ ಹಂಚಿಕೊಂಡಿದ್ದಳು. ವಿಶ್ವಾಸನ ಕುಟುಂಬದವರು ಮೂಲತಃ ಮಾಂಸಾಹಾರಿಗಳು. ಅವನು ತನ್ನ ಪ್ರೀತಿಗಾಗಿ, ಪ್ರೀತಿಯ ಹುಡುಗಿಗಾಗಿ ಮಾಂಸಾಹಾರವನ್ನು ತ್ಯಜಿಸುವುದಾಗಿ ಪ್ರಮಾಣ ಮಾಡಿದ. ಫೋನಲ್ಲಿ ಮಗಳ ಪ್ರೀತಿಯ ಪುರಾಣವನ್ನು ಕೇಳಿಸಿಕೊಂಡ ವೀರಭದ್ರಪ್ಪನವರ ಮನೆಯಲ್ಲಿ ಅಲ್ಲೋಲ ಕಲ್ಲೋಲವಾಯಿತು, ಜ್ವಾಲಾಮುಖಿ ಸ್ಫೋಟಿಸಿತು.
"ಏನ್ರೀ, ನಿಮ್ಮ ಮುದ್ದಿನ ಮಗಳು ನಮ್ಮ ಮನೆತನದ ಮಾನ, ಮರ್ಯಾದೆಗಳನ್ನು ಮೂರು ಕಾಸಿಗೆ ಹರಾಜಿಟ್ಟುಬಿಟ್ಟಳು. ಇಷ್ಟು ವರ್ಷ ನಿಮ್ಮ ಪರಿಶ್ರಮದಿಂದ ಗಳಿಸಿದ್ದ ಒಳ್ಳೆಯ ಹೆಸರಿಗೆ ಮಸಿ ಬಳಿದುಬಿಟ್ಟಳು. ಇನ್ನು ಮುಂದೆ ಸಂಬಂಧಿಕರ ಎದುರಲ್ಲಿ ತಲೆ ಎತ್ತಿ ನಡೆಯದಂತೆ ಮಾಡಿದಳು. ಇವಳು ಪ್ರೀತಿಸಿದ್ದೇನೋ ನಿಜ. ನಮ್ಮ ಜಾತಿಯ ಹುಡುಗನನ್ನೇ ಪ್ರೀತಿಸಿದ್ದರೆ ಗಂಟೇನು ಹೋಗುತ್ತಿತ್ತು...? ನಮ್ಮ ಜಾತಿಯಲ್ಲಿ ಹುಡುಗರಿಗೇನು ಬರ? ಈಗ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಕಡಿಮೆ. ಹುಡುಗಿಯರೇ ಸಿಗುವುದಿಲ್ಲವೆಂದು ಗಂಡು ಮಕ್ಕಳನ್ನು ಹೆತ್ತವರು ಪರದಾಡುತ್ತಿದ್ದಾರೆ. ಇವಳಿಗೆ ಅಂಥಹ ಅವಸರವೇನಿತ್ತು...? ಇವಳದು ಬರೀ ಪ್ರೀತೀನೋ, ಅಥವಾ ಪ್ರೀತಿ ಪ್ರೀತಿ ಅಂತ ಆಗಲೇ ಮತ್ತೇನಾದರೂ ಅವಘಡ ಮಾಡಿಕೊಂಡಿದ್ದಾಳೋ ಏನೋ...? ಈಗಿನ ಕಾಲದ ಮಕ್ಕಳ ನಡೆ, ನುಡಿ ಒಂದೂ ಅರ್ಥವಾಗುವುದೇ ಇಲ್ಲ. ಇಂಜಿನಿಯರಿಂಗ್ ಓದಿದ ಬಹಳಷ್ಟು ಮಕ್ಕಳ ಹಣೆಬರಹವೇ ಇಷ್ಟೇ. ಎಲ್ಲರದೂ ಬೆಂಗಳೂರಲ್ಲೇ ಕೆಲಸ. ಇಲ್ಲವೇ ಮಾತೆತ್ತಿದರೆ ಫಾರಿನ್, ಫಾರಿನ್ ಅಂತ ಬಡ್ಕೊಳ್ತಿರ್ತಾರೆ. ಫಾರಿನ್ ಅಂದರೆ ಈಗ ನಮ್ಮೂರಿನಿಂದ ಪಕ್ಕದ ಊರಿಗೆ ಹೋಗಿ ಬಂದಂತಾಗಿದೆ. ಅಯ್ಯೋ ಶಿವನೇ, ಇನ್ನೂ ನಾನು ಏನೇನು ಕಾಣಬೇಕಿದೆಯೋ ಏನೋ...? ಅದಕ್ಕಾಗೇ ಈ ಪಾಪಿ ಜೀವ ಇನ್ನೂ ಉಸಿರಾಡುವಂತೆ ಮಾಡಿರುವೆಯಾ...?" ಸುಮಾದೇವಿಯ ಪ್ರಲಾಪ ಹೇಳತೀರದಾಗಿತ್ತು.
"ಸುಮಾ, ಈಗೇನು ಆಗಿದೆ ಅಂತ ಈ ರಾದ್ಧಾಂತ, ಪ್ರಲಾಪ...? ಮಗಳ ಪಾವಿತ್ರ್ಯತೆಯ ಬಗ್ಗೆ ಕುಟುಕಿದೆಯಲ್ಲ, ನೀನೆಂಥಹ ತಾಯಿ...? ನಾನೂ ಅವಳಲ್ಲಿ ವಿಚಾರಿಸಿದೆ. ವಿನೀತಾ ತುಂಬಾ ನೊಂದುಕೊಂಡಳು. `ಅಪ್ಪಾ, ನಾನು ಅಂಥಹ ಅವಸರಗೇಡಿಯಲ್ಲ. ನಿಮ್ಮ ಪವಿತ್ರ ಸಂಸ್ಕಾರಗಳನ್ನು ಮೈಗೂಡಿಸಿಕೊಂಡವಳು. ಬರೀ ಪ್ರೀತಿಗಾಗಿ ನನ್ನತನವನ್ನು ಬಲಿಗೊಡುವವಳಲ್ಲ. ಪ್ರೀತಿ ಮದುವೆಯೆಂಬ ಪವಿತ್ರ ಸಂಬಂಧದಲ್ಲಿ ಬೆಸೆದುಕೊಂಡಾಗ ಮಾತ್ರ ಮುಂದಿನ ಹೆಜ್ಜೆ. ಬರೀ ಮೈಸುಖಕ್ಕಾಗಿ ಹಪಹಪಿಸುವ ಹೆಣ್ಣಲ್ಲ ನಾನು' ಎಂದು ಹೇಳಿದಾಗ ನೀನು ಅವಳ ನಡತೆಯನ್ನು ಅನುಮಾನಿಸಿದ್ದನ್ನು ನೆನೆಸಿಕೊಂಡು ಹನಿಗಣ್ಣವನಾದೆ. ಸಮಾಧಾನ ಮಾಡಿಕೋ. ಮನಸ್ಸನ್ನು ಸಣ್ಣದು ಮಾಡಿಕೊಳ್ಳಬೇಡ ಅಷ್ಟೇ."
"ಹಾಂ! ಏನಂದಿರಿ...? ಈಗೇನೂ ಅಗಿಲ್ಲವೇ...? ಮತ್ತೇನು ಆಗಬೇಕಿತ್ತು ಅಂತೀರಿ? ಈಗ ಆಗಿದ್ದು ಸಾಕಾಗಿಲ್ಲವೇ? ಲಿಂಗಾಯಿತರ ಹುಡುಗಿ ಮಾಂಸ-ಮಡ್ಡಿ ತಿನ್ನುವ ಆ ಒಕ್ಕಲಿಗ ಜಾತಿಯ ಹುಡುಗನನ್ನು ಪ್ರೀತಿಸಿದ್ದು ಸರಿಯೇ...? ಇದೇನು ಸಣ್ಣ ತಪ್ಪಾ...? ಅವಳು ಇಷ್ಟು ಮುಂದುವರಿಯಲು ನೀವೇ ಕಾರಣ. ಅವಳು ಹೀಗಾಗಲು ನಿಮ್ಮ ಅತಿಯಾದ ಸಲುಗೆಯೇ ಕಾರಣ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯಂತೆ ಹಾರಾಡುತ್ತಿದ್ದಾಳೆ. ನಿಮ್ಮ ಅತಿಯಾದ ಪ್ರೀತಿ, ನಂಬಿಕೆಗಳನ್ನು ವಿನೀತಾ ದುರುಪಯೋಗ ಮಾಡಿಕೊಂಡುಬಿಟ್ಟಳು. ಅದು ನಿಮ್ಮ ಅರಿವಿಗೆ ಬರುತ್ತಲೇ ಇಲ್ಲ. ಅವಳ ಈ ನಡೆಗೆ ನಿಮ್ಮ ಕುಮ್ಮಕ್ಕೂ ಇರಬೇಕು." ಸುಮಾದೇವಿ ಒಂದು ರೀತಿಯಲ್ಲಿ ಆರ್ಭಟಿಸಿದಳು.
"ಸುಮಾ, ಅದೇನು ಅಂತ ನೀನು ಈ ರೀತಿ ಮಾತಾಡುತ್ತಿರುವಿ...? ನಾನೇನು ಅವಳಿಗೆ ಒಕ್ಕಲಿಗರ ಹುಡುಗನನ್ನು ಪ್ರೀತಿಸಲು ಹೇಳಿದ್ದೆನಾ...? ಹರಕೆ ಹೊತ್ತಿದ್ದೆನಾ...? ಇಂಥಹದ್ದಕ್ಕೆ ನಾನೇಕೆ ಅವಳಿಗೆ ಕುಮ್ಮಕ್ಕು ನೀಡಬೇಕು? ನೀನು ವಿನೀತಾಳಿಗೆ ತಾಯಿ ಹೇಗೆಯೋ, ನಾನೂ ಹಾಗೆ ಅವಳಿಗೆ ತಂದೆ. ನನಗೇನು ಜವಾಬ್ದಾರಿ ಇಲ್ಲ ಅಂತ ತಿಳಿದುಕೊಂಡಿರುವಿಯಾ? ಬಾಲಿಶವಾಗಿ ಮಾತಾಡಬೇಡ. ಜವಾಬ್ದಾರಿಯುತ ತಾಯಿಯಾಗಿ ಮಾತಾಡು." ವೀರಭದ್ರಪ್ಪನವರು ಒಂದಿಷ್ಟು ಖಾರವಾಗಿಯೇ ಪ್ರತಿಕ್ರಿಯಿಸಿದರು.
"ಅಯ್ಯೋ, ಅದು ಹೋಗಲಿ ಬಿಡಿ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ಮಾತಾಡೋಣ. ವಿನೀತಾ ನೋಡಿದರೆ, `ನಾನು ವಿಶ್ವಾಸನನ್ನು ಪ್ರೀತಿಸಿದ್ದು ನಿಜ. ಅವನ ಜಾತಿಯನ್ನು ನೋಡಿ ಪ್ರೀತಿಸಿಲ್ಲ ಎಂಬುದೂ ಸತ್ಯ. ಅವನ ಒಳ್ಳೆಯತನ ನೋಡಿ ಪ್ರೀತಿಸಿದೆ. ಪ್ರೀತಿ ಎಲ್ಲರ ಮೇಲೆ ಹುಟ್ಟಲು ಸಾಧ್ಯವೇ...? ಪ್ರೀತಿ ಜಾತಿ, ಧರ್ಮ, ಆಸ್ತಿ, ಅಂತಸ್ತು ಒಂದನ್ನೂ ನೋಡುವುದಿಲ್ಲ. ಹನ್ನೆರಡನೇ ಶತಮಾನದಲ್ಲಿ ಅಣ್ಣ ಬಸವಣ್ಣನವರೇ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲಿಲ್ಲವೇ? ಈಗಂತೂ ಕಾಲ ಬದಲಾಗಿದೆ. ಅದೂ ಜಾಗತೀಕರಣದ ನಂತರ ಜಾತಿ-ಜಾತಿ, ಧರ್ಮ-ಧರ್ಮ, ದೇಶ-ದೇಶಗಳ ನಡುವಿನ ಅಂತರ ಕಡಿಮೆಯಾಗತೊಡಗಿದೆ. ದೊಡ್ಡ ಮನಸ್ಸು ಮಾಡಿ ನಮ್ಮನ್ನು ಹರಸಿಬಿಡಿ' ಎಂದು ಭಾಷಣವನ್ನೇ ಬಿಗಿದಳು. ತನ್ನ ಪ್ರೀತಿಯನ್ನು ಸಮರ್ಥಿಸಿಕೊಂಡಳು. ಅವನನ್ನು ಬಿಟ್ಟುಬಿಡು. ನಮ್ಮ ಜಾತಿಯಲ್ಲೇ ಬೇರೆ ಹುಡುಗನನ್ನು ಮದುವೆಯಾಗು ಎಂದು ನಾನು ಪರಿಪರಿಯಾಗಿ ಕೇಳಿದೆ. ಅದಕ್ಕೆ ಅವಳು, `ಹಾಗಾದರೆ ನನ್ನ ಹೆಣಕ್ಕೆ ಬೇರೆ ಹುಡಗನೊಂದಿಗೆ ತಾಳಿ ಕಟ್ಟಿಸು ಅಷ್ಟೇ' ಎಂದು ಖಡಕ್ಕಾಗಿ ಹೇಳಿ ಕಣ್ಣೀರು ತೆಗೆದಳು."
"ಸುಮ್ಮೀ, ಬಸವಣ್ಣನವರ ಕಾಲಕ್ಕೇ ಈ ಜಾತಿ ನಿರ್ಮೂಲನೆಯ ಹೋರಾಟಕ್ಕೆ ನಾಂದಿಯಾಯಿತು. ಆಳವಾಗಿ ಯೋಚಿಸಿದಾಗ ಈ ಜಾತಿಗಳೆಲ್ಲ ಮನುಷ್ಯನಿಂದಲೇ ಅವಿಷ್ಕಾರಗೊಂಡಂಥಹವು. ನಾವೀಗ ಆಗಲೇ ಹಣ್ಣೆಲೆಗಳು. ಯಾವಾಗಲಾದರೂ ಉದುರಿ ಬೀಳಬಹುದು. ಮಗಳಿನ್ನೂ ಬದುಕಿ ಬಾಳಬೇಕಾದವಳು. ನಮ್ಮ ಮಗಳ ಪ್ರೀತಿ ಉಳಿಯಬೇಕು. ಅವಳ ಬಾಳು ಹಸನಾಗಬೇಕು. ಅವಳಿಚ್ಛೆಯಂತೆಯೇ ಬೆಳಗಬೇಕು. ಜಾತಿಯನ್ನು ಧಿಕ್ಕರಿಸಿ ವಿನೀತಾ ತನ್ನ ಪ್ರೇಮಿಯನ್ನೇ ಮದುವೆಯಾಗಲಿ. ಅವಳಿನ್ನೂ ಚಿಗುರೆಲೆ. ಅವಳ ಜೀವನದ ಬಳ್ಳಿ ತಾನು ನಂಬಿಕೊಂಡಿರುವ ಮರವನ್ನು ಅಪ್ಪಿಕೊಂಡು ಚಿಗುರಿ, ಮೊಗ್ಗು ಮೂಡಿಸಿ, ಹೂವರಳಿಸಿ, ಕಾಯಿ-ಹಣ್ಣುಗಳಾಗಿ ಫಲಿಸಿ ಸಾರ್ಥಕ ಜೀವನ ಕಂಡುಕೊಳ್ಳಲಿ. ಮೇಲಾಗಿ ತಾನು ಪ್ರೀತಿಸುವ ಹುಡುಗ, ಹುಡುಗನ ಮನೆಯವರು ತುಂಬಾ ಒಳ್ಳೆಯವರು ಎಂದು ಬೇರೆ ಹೇಳುತ್ತಿದ್ದಾಳೆ. ಅವಳ ಭಾವೀ ಜೀವನ ಚೆನ್ನಾಗಿದ್ದರೆ ಸಾಕಲ್ಲವೇ? ವಿನೀತಾ ನಗು ನಗುತಿರಬೇಕು ಅಷ್ಟೇ...? ಒಂದು ಹೆಣ್ಣಿಗೆ ಹಣ, ಆಸ್ತಿ, ಅಂತಸ್ತಿಗಿಂತ ಪ್ರೀತಿಸುವ ಒಂದು ಮುದ್ದು ಹೃದಯ ಬೇಕು ತಾನೇ? ತನ್ನ ಜೀವನದ ಬೇಕು-ಬೇಡಗಳನ್ನು ನಿರ್ಧರಿಸುವ ಸಾಮಥ್ರ್ಯ ವಿನೀತಾಳಿಗಿದೆ ಎಂದು ನನಗೆ ಗೊತ್ತಿದೆ. ತನಗೆ ಬೇಕಿದ್ದನ್ನು ಪಡೆಯುವ ಹಕ್ಕೂ ಅವಳಿಗಿದೆ ಎಂದು ನಾನು ಭಾವಿಸುವೆ. ನೀನು ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಮನಸ್ಸಿನಿಂದ ಯೋಚಿಸಿದರೆ ಎಲ್ಲವೂ ಅರ್ಥವಾಗುತ್ತದೆ. ಮಗಳು ಹೇಗೆ ಎಂಬುದು ನಿನಗೆ ತಿಳಿದೇ ಇದೆ. ಇದು ಬಹು ಸೂಕ್ಷ್ಮವಾದ ವಿಷಯ. ಶಾಂತಚಿತ್ತದಿಂದ ಯೋಚಿಸಿ ಹಸಿರು ನಿಶಾನೆ ತೋರಿಸು." ವೀರಭದ್ರಪ್ಪನವರು ಒಂದಿಷ್ಟು ಉದ್ದುದ್ದಾಗೇ ಮಾತಾಡಿದರು.
ತುಸು ಹೊತ್ತಿನವರೆಗೆ ಇಬ್ಬರಲ್ಲೂ ಮಾತುಗಳು ಕಳೆಗಟ್ಟಲಿಲ್ಲ. ಸುಮಾದೇವಿಯ ಮನಸ್ಸು ಗೊಂದಲದಲ್ಲಿ ಸಿಕ್ಕು ವಿಲವಿಲನೇ ಒದ್ದಾಡತೊಡಗಿತ್ತು.
"ನಿಮ್ಮಿಷ್ಟ. ನನಗಂತೂ ಈ ಸಂಬಂಧ ಎಳ್ಳಷ್ಟೂ ಇಷ್ಟವಿಲ್ಲ. ಈ ಮನೆಯಲ್ಲಿ ನನ್ನದೇನು ನಡೆಯುತ್ತೆ...? ಎಲ್ಲಾ ನಿಮ್ಮದೇ ದರ್ಬಾರ್. ನೀವುಂಟು, ನಿಮ್ಮ ಮಗಳು ಉಂಟು." ಸೊಂಟಿ ಕೊಂಬು ಮುರಿದಂತೆ ಮಾತಾಡಿ ಸೊರ ಸೊರ ಅಂತ ಮೂಗನ್ನು ಒರೆಸಿಕೊಳ್ಳತೊಡಗಿದಳು ಸುಮಾದೇವಿ.
"ಸುಮಾ, ಹೀಗೆಲ್ಲ ಹಟಮಾಡುವುದು ನನಗೇಕೋ ಸರಿಕಾಣುತ್ತಿಲ್ಲ. ಮಗಳಿಚ್ಛೆಯಂತೆ ನಡೆದುಕೊಂಡು ಬಿಡೋಣ. ಮುಂದೆ ಭಗವಂತನಿದ್ದಾನೆ" ಎಂದೆನ್ನುತ್ತಾ ವೀರಭದ್ರಪ್ಪನವರು ಹೆಂಡತಿಯನ್ನು ಬರಸೆಳೆದು ತಬ್ಬಿಕೊಂಡು ಮುಂಗುರುಳು ನೇವರಿಸಿ, ಆತ್ಮೀಯವಾಗಿ ಬೆನ್ನು ಸವರುತ್ತಾ ಆಗಿನ ಮಟ್ಟಿಗೆ ಸಮಾಧಾನ ಮಾಡಿದರು.
****
ವೀರಭದ್ರಪ್ಪನವರು ಮಗ ಸಮರ್ಥನೊಂದಿಗೆ ಫೋನಲ್ಲಿ ಮಾತಾಡಿದರು. ವಿನೀತಾಳ ಲವ್ ಸ್ಟೋರಿ ಹೇಳಿದರು. ತಮ್ಮ ನಿರ್ಧಾರವನ್ನೂ ತಿಳಿಸಿದರು. ಸಮರ್ಥ ತಂಗಿ ವಿನೀತಾಳ ನಿರ್ಧಾರವನ್ನು ಸಕಾರಾತ್ಮಕವಾಗಿ ಸ್ವೀಕರಿಸಲಿಲ್ಲ.
ಮುಂದೆ ಕೆಲವೇ ದಿನಗಳಲ್ಲಿ ವಿಶ್ವಾಸನ ಹೆತ್ತವರ ಜೊತೆಗೆ ಮಾತುಕತೆಗಳಾದವು. ವೀರಭದ್ರಪ್ಪನವರ ಒಂದಿಷ್ಟು ಜನ ಅಣ್ಣ-ತಮ್ಮಂದಿರು ಗೇಲಿಮಾಡಿ ವಿಕಟ ನಗೆ ಬೀರಿದರು. ಸಂಬಂಧಿಕರೂ ಪ್ರೋತ್ಸಾಹದ ಮಾತುಗಳನ್ನಾಡಲಿಲ್ಲ. ಒಂದಿಷ್ಟು ಜನ ಗೆಳೆಯರು ಅವರ ಬೆನ್ನಿಗೆ ನಿಂತು ಧೈರ್ಯ ತುಂಬಿದರು. ಬಹಳಷ್ಟು ಜನರು ಹಿಂದೆ-ಮುಂದೆ ತಮಗೆ ತಿಳಿದಂತೆ ಮಾತಾಡಿಕೊಂಡು ತಮ್ಮ ವಿಕೃತ ಮನಸ್ಸುಗಳನ್ನು ತಣಿಸಿಕೊಂಡು ಬೀಗಿದರು. ವೀರಭದ್ರಪ್ಪನವರು ಅಂಥಹ ವಿಕಾರ ಮನಸ್ಸಿನವರ ಕೇಕೆಗಳಿಗೆ ಸೊಪ್ಪೇ ಹಾಕಲಿಲ್ಲ.
ವಿನೀತಾಳ ಮದುವೆ ವಿಶ್ವಾಸನ ಊರಲ್ಲೇ ವಿಜೃಂಭಣೆಯಿಂದ ಸಂಭ್ರಮಿಸಿತು. ಸುಮಾದೇವಿ ನಗೆ ಮಲ್ಲಿಗೆ ಚೆಲ್ಲುತ್ತಾ ಮದುವೆಯ ಸಂಭ್ರಮದ ಸವಿ ಸವಿಯಲಿಲ್ಲ. ಬಹಳಷ್ಟು ಜನ ಸಂಬಂಧಿಕರು ಮದುವೆಗೆ ಬರಲಿಲ್ಲ. `ಯಾರು ಬರಲೀ, ಬಿಡಲೀ, ವಿನೀತಾಳ ಮದುವೆ ನಡೆಯುತ್ತೆ' ಎಂದು ಧೈರ್ಯದಿಂದ ಮುನ್ನುಗ್ಗಿದರು ವೀರಭದ್ರಪ್ಪ. ಬೀಗರು ವೀರಭದ್ರಪ್ಪ, ಅವರ ಸಂಬಂಧಿಕರನ್ನು ಚೆನ್ನಾಗೇ ನೋಡಿಕೊಂಡರು. ಅವರು ಗಂಡಿನ ಕಡೆಯವರಾದರೂ ಯಾವುದೇ ಹಮ್ಮು, ಬಿಮ್ಮು ಇಲ್ಲದೇ ವೀರಭದ್ರಪ್ಪನವರ ಮನೆಯವರು, ಸಂಬಂಧಿಕರನ್ನು ಆದರಿಸಿ ಸತ್ಕರಿಸಿದರು. ಸುಮಾದೇವಿಗೆ ತುಂಬಾನೇ ಗೌರವ ಕೊಟ್ಟು ಆದರಿಸಿದರು. ಸಮರ್ಥ-ಪ್ರಿಯಾಂಕಾ ಹೇಗೋ ಮದುವೆಗೆ ಬಂದಿದ್ದು ವಿಶೇಷ.
ವೀರಭದ್ರಪ್ಪನವರಿಗೆ ಮಗಳ ಮೇಲಿನ ಮಮತೆ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ಸುಮಾದೇವಿ ಮನಬಿಚ್ಚಿ ಮಾತಾಡದೇ ಮಗಳೊಂದಿಗೆ ಅಷ್ಟಕಷ್ಟೇ ಮಾತಾಡತೊಡಗಿದಳು. ಆದರೆ ವಿನೀತಾಳಿಗೆ ತಾಯಿಯ ಮೇಲಿನ ಪ್ರೀತಿ ಒಂಚೂರೂ ಕಡಿಮೆಯಾಗಲಿಲ್ಲ. ತಾಯಿಗಾಗಿ ತರತರಹದ ರೇಷಿಮೆ ಸೀರೆಗಳ ಉಡುಗೊರೆ ಕೊಟ್ಟಿದ್ದಳು ವಿನೀತಾ. ಸುಮಾದೇವಿ ಮಾತ್ರ ವಿನೀತಾಳ ಮೇಲೆ ಪ್ರಸನ್ನಳಾಗಲಿಲ್ಲ. ಅತ್ತೆ-ಮಾವನವರಿಗೆ ವಿನೀತಾ ತುಂಬಾ ಅಚ್ಚುಮೆಚ್ಚಿನ ಸೊಸೆಯಾದಳು. ವಿಶ್ವಾಸನ ಅಕ್ಕ-ತಂಗಿಯರ, ಸಂಬಂಧಿಕರ ಮನಸ್ಸನ್ನು ಗೆದ್ದಿದ್ದಳು ವಿನೀತಾ. ಎಲ್ಲರಿಗೂ ಅವಳ ಮೇಲೆ ಎಲ್ಲಿಲ್ಲದ ಪ್ರೀತಿಯ ಹೊನಲು ಸದಾ ಹರಿಯುತ್ತಿತ್ತು.
****
ಅಂದೇ ಸಾಯಂಕಾಲ ಸುಮಾದೇವಿ ಆಸ್ಪತ್ರೆಯಿಂದ ಮನೆಗೆ ಬಂದಳು. ಯಾಕೋ ಅವಳ ಜೀವ ಮಗನನ್ನು ನೆನಸತೊಡಗಿತು. ಮಗನನ್ನು ನೋಡಬೇಕು, ಅವನ ಜೊತೆಗೆ ಮಾತಾಡಬೇಕೆಂದು ಅವಳ ಮನಸ್ಸು ಹಂಬಲಿಸುತ್ತಿತ್ತು. ಆದರೆ ಮಗಳ ಬಗ್ಗೆ ಮನಸ್ಸು ಹರಿಯಲಿಲ್ಲ. ವೀರಭದ್ರಪ್ಪನವರು ಸಮರ್ಥನಿಗೆ ಫೋನಾಯಿಸಿ ಸುಮಾದೇವಿಯ ಆರೋಗ್ಯದ ಬಗ್ಗೆ ತಿಳಿಸಿ ತಕ್ಷಣ ಹೊರಟು ಬರಲು ತಿಳಿಸುತ್ತಾ ಸುಮಾದೇವಿಯ ಕೈಗೆ ಫೋನ್ ಕೊಟ್ಟರು.
"ಸಮೂ, ಇತ್ತೀಚಿಗೆ ಯಾಕೋ ನನ್ನ ಆರೋಗ್ಯ ಕೈಕೊಡುತ್ತಿದೆ. ನಾನೇನು ಬಾಳ ದಿನ ಬದುಕೋದಿಲ್ಲ ಅಂತ ಅನಿಸ್ಲಿಕತ್ತೇದ.ನಿನ್ನ ನೋಡದೇ ಬಹಳ ವರ್ಷಗಳೇ ಆದವಲ್ಲ? ಮಾತೃ ಹೃದಯ ಹಪಹಪಿಸುತ್ತಿದೆ. ತಕ್ಷಣ ಹೊರಟು ಬಂದುಬಿಡು. ಜೊತೆಗೆ ನಿನ್ನ ಹೆಂಡತಿ, ಮಕ್ಕಳನ್ನೂ ಕರೆದುಕೊಂಡು ಬಂದುಬಿಡು. ತಡಮಾಡಬೇಡ ಕೂಸೇ..." ಸುಮಾದೇವಿ ಹಲುಬಿದಳು.
"ಅಮ್ಮಾ, ಅಮೇರಿಕಾ ಅಂದರೆ ನಮ್ಮೂರಿನ ಪಕ್ಕದಲ್ಲೇ ಇರುವ ನಿನ್ನ ತವರುಮನೆಯ ಊರು ಅಂತ ತಿಳಿದುಕೊಂಡೀಯೇನು...? ಅಲ್ಲಿಗೆ ಬಂದು ಹೋಗಲು ಲಕ್ಷಾನುಗಟ್ಟಲೇ ದುಡ್ಡು ಖರ್ಚಾಗುತ್ತದೆ." ಸಮರ್ಥನ ಸಮರ್ಥನೆ.
"ನನಗಿಂತ ನಿನಗೆ ದುಡ್ಡೇ ಹೆಚ್ಚೇನೋ...?"
"ಹೌದಮ್ಮ ದುಡ್ಡೇ ದೊಡ್ಡಪ್ಪ ಅಲ್ವೇನು...? ಅಮ್ಮಾ, ನಿನಗಿರುವುದು ವಯೋ ಸಹಜ ಕಾಯಿಲೆ. ಅಂಥಹದ್ದನ್ನೆಲ್ಲ ಅಷ್ಟು ಮನಸ್ಸಿಗೆ ಹಚ್ಚಿಕೊಳ್ಳುವ ಅವಶ್ಯಕತೆ ಇಲ್ಲ. ಅದೇನೇ ಇರಲಿ, ಸದ್ಯಕ್ಕಂತೂ ನಮಗೆ ಬರುವುದಕ್ಕೆ ಆಗುವುದಿಲ್ಲ. ಮಕ್ಕಳ ಶಾಲೆ ತಪ್ಪಿಸುವುದಕ್ಕೆ ಆಗುವುದಿಲ್ಲ." ಸಮರ್ಥ ಕಡ್ಡಿ ಮುರಿದಂತೆ ಹೇಳಿದ.
ಸುಮಾದೇವಿ ತನ್ನ ನೆಚ್ಚಿನ ಮುದ್ದಿನ ಸೊಸೆಯ ಜೊತೆಗೂ ಮಾತಾಡಿದಳು. ಪ್ರಿಯಾಂಕಾ ತನ್ನ ಗಂಡನ ಮಾತುಗಳನ್ನು ಸಮರ್ಥಿಸಿಕೊಂಡಳು. ಕೊನೆಗೆ ತನ್ನ ಚಿಕಿತ್ಸೆಗೆ ಒಂದಿಷ್ಟು ದುಡ್ಡನ್ನಾದರೂ ಕಳುಹಿಸಿಕೊಡಲು ಸುಮಾದೇವಿ ಮಗನಿಗೆ ಕೇಳಿಕೊಂಡಳು. `ನಮ್ಮ ಸಂಬಳದಿಂದ ನಮ್ಮ ಜೀವನ ಸಾಗಿಸುವುದೇ ಕಷ್ಟವಾಗಿದೆ. ಸದ್ಯಕ್ಕೆ ನಮಗಂತೂ ಏನೂ ಕೊಡುವುದಕ್ಕೆ ಆಗುವುದಿಲ್ಲ. ಊರಲ್ಲಿರುವ ಹೊಲದ ಆದಾಯವನ್ನು ನೀವೇ ಉಣ್ಣುತ್ತಿರುವಿರಿ. ಸಾಕಾಗುವುದಿಲ್ಲವೇ...?" ಮಗನ ಮಾತುಗಳು ಸುಮಾದೇವಿಯ ಹೃದಯಕ್ಕೆ ಚೂರಿಯಿಂದ ಇರಿದಂತಾದವು.
ನೂರು ನೋವು ನುಂಗಿ ಬದುಕಿನ ದಾರಿ ಸವಿದಾಗಲೂ ಸುಮಾದೇವಿಗೆ ಸಂಕಟವಾಗಿರಲಿಲ್ಲ. ಹೆತ್ತ ಕುಡಿಯ ಚುಚ್ಚು ಮಾತುಗಳು ಅವಳ ಎದೆಯನ್ನೇ ಬಗೆದಿದ್ದವು.
"ತಾಯಿ ಅಂದರೆ ನಿನಗೆ ಏನೂ ಅನಿಸುವುದಿಲ್ಲವೇನೋ...?"
"ತಾಯಿ ಅಂದರೆ ತಾಯಿ ಅಷ್ಟೇ. ಬೇರೆ ತಾಯಿಯರಂತೆ ನೀನೂ ಒಬ್ಬ ತಾಯಿ. ನೀನೇ ನನಗೆ ತಾಯಿಯಾಗಬೇಕಿತ್ತು ಎಂದು ನಾನೇನು ಬಯಸಿದ್ದೆನಾ...? ಸೃಷ್ಟಿಯ ನಿಯಮದಂತೆ ನೀನೂ ನನ್ನನ್ನು ಹೆತ್ತಿರುವಿ ಅಷ್ಟೇ. ಅದರಲ್ಲೇನು ವಿಶೇಷವಿದೆ...?" ಮಗನ ಮಾತುಗಳನ್ನು ಕೇಳಿಸಿಕೊಂಡ ಸುಮಾದೇವಿ ಮೂಕವಿಸ್ಮಿತಳಾಗಿ ಮುಂದೆ ಮಾತು ಬೆಳೆಸಲಿಲ್ಲ.
"ನಿನ್ನ ಮುದ್ದಿನ ಮಗ, ಮುದ್ದಿನ ಸೊಸೆಯಿಂದ ಮಂಗಳಾರತಿ ಮಾಡಿಸಿಕೊಂಡಿದ್ದು ಸಾಕು. ಅವರೆಲ್ಲ ರೆಕ್ಕೆ ಬಲಿತ ಹಕ್ಕಿಗಳು. ಯಾವ ಸಂಕೋಲೆ ಇಲ್ಲದೇ ಸ್ವಚ್ಛಂದವಾಗಿ ಹಾರಾಡಲು ಬಯಸುತ್ತಾರೆ ಅಷ್ಟೇ. ಈಗ ನಿನಗೆ ನಾನು, ನನಗೆ ನೀನು ಅಷ್ಟೇ. ನಾನಿದ್ದೇನೆ. ಸುಮ್ಮಸುಮ್ಮನೇ ಚಿಂತಿಸಬೇಡ. ಸುಮಾ, ನಿರೀಕ್ಷೆ ಬಿಟ್ಟುಬಿಡು. ನೆಮ್ಮದಿ ತಾನಾಗಿಯೇ ಸಿಗುತ್ತದೆ. ಮನುಷ್ಯ ದುಃಖವನ್ನು ಮಾರಲಾರ, ಖುಷಿಯನ್ನು ಖರೀದಿಸಲಾರ" ಎಂದು ವೀರಭದ್ರಪ್ಪನವರು ಹೆಂಡತಿಗೆ ಸಾಂತ್ವನದ ಮಾತುಗಳನ್ನು ಹೇಳಿದರು.
****
ಮರುದಿನ ಬೆಳಗ್ಗೆ ಒಂಭತ್ತು ಗಂಟೆಯ ಸುಮಾರು ಸುಮಾದೇವಿಗೆ ನಾಲಿಗೆ ಹೊರಳದಾಯಿತು. ತೊದಲು ಮಾತುಗಳೂ ಬರದಂತಾದವು. ಬಲಗೈ, ಬಲಗಾಲುಗಳಲ್ಲಿ ಶಕ್ತಿಯೇ ಇಲ್ಲದಂತಾಗಿತ್ತು, ಮೇಲೆತ್ತಲಾಗುತ್ತಿರಲಿಲ್ಲ. ಎರಡೂ ನಿಷ್ಕ್ರಿಯವಾಗಿದ್ದವು. ಲಕ್ವ ಹೊಡೆದಿತ್ತು. ವೀರಭದ್ರಪ್ಪ ಹೌಹಾರಿದರು. ತಕ್ಷಣ ಡಾಕ್ಟರನ್ನು ಮನೆಗೇ ಕರೆಸಿದರು. ಸುಮಾದೇವಿ ಪಾಶ್ವವಾಯುವಿನಿಂದ ಬಳಲುತ್ತಿರುವುದನ್ನು ಡಾಕ್ಟರ್ ತಿಳಿಸಿ ಪ್ರಥಮ ಚಿಕಿತ್ಸೆನೀಡಿ ತಕ್ಷಣ ಜಿಲ್ಲಾ ಕೇಂದ್ರದಲ್ಲಿರುವ ತಜ್ಞ ವೈದ್ಯರನ್ನು ಕಾಣಲು ತಿಳಿಸಿದರು.
ವೀರಭದ್ರಪ್ಪನವರು ಹೆಂಡತಿಯನ್ನು ಕರೆದುಕೊಂಡು ತಕ್ಷಣ ಜಿಲ್ಲಾ ಕೇಂದ್ರಕ್ಕೆ ಹೊರಟೇಬಿಟ್ಟರು. ಮೆದುಳಿನ ಎಮ್‍ಆರ್‍ಐ ಸ್ಕ್ಯಾನಿಂಗ್, ರಕ್ತ ತಪಾಸಣೆ, ಅದೂ ಇದೂ ಪರೀಕ್ಷೆಗಳಾದವು. ಮೆದುಳು ಭಾಗಶಃ ಕೆಲಸ ನಿಲ್ಲಿಸಿತ್ತು. ಚಿಕಿತ್ಸೆ ಶುರುವಾಯಿತು. ವೀರಭದ್ರಪ್ಪನವರು ಮಗನಿಗೆ ಮತ್ತೆ ಫೋನಾಯಿಸಿ ವಿಷಯ ತಿಳಿಸಿ ತಾಯಿಯನ್ನು ನೋಡಲು ಬರಬೇಕೆಂದು ವಿನಂತಿಸಿಕೊಂಡಾಗಲೂ ಸಮರ್ಥನ ಮನಸ್ಸು ಕರಗಲಿಲ್ಲ. ಮಗಳಿಗೆ ತಿಳಿಸುವುದೋ, ಬಿಡುವುದೋ ಎಂಬ ದ್ವಂದ್ವದಲ್ಲಿದ್ದ ಅವರು ಮಗಳಿಗೆ ವಿಷಯ ತಿಳಿಸಲೇ ಇಲ್ಲ.
ಆ ದಿನ ಸಂಜೆ ಐದು ಗಂಟೆಗೆ ವೀರಭದ್ರಪ್ಪನವರಿಗೆ ಆಶ್ಚರ್ಯಕರ ಸಂಗತಿ ಕಾದಿತ್ತು. ವಿನೀತಾ ಮತ್ತು ವಿಶ್ವಾಸ್ ಆಸ್ಪತ್ರೆಯಲ್ಲಿದ್ದರು. ತಾನು ವಿಷಯ ತಿಳಿಸದಿದ್ದರೂ ಮಗಳು ಅಳಿಯನೊಂದಿಗೆ ಬಂದಿರುವುದನ್ನು ಕಂಡು ವೀರಭದ್ರಪ್ಪನವರು ಮೂಕವಿಸ್ಮಿತರಾದರು. ಸುಮಾದೇವಿ ಆದ್ರ್ರವದನೆಯಾಗಿ ಮಗಳು, ಅಳಿಯನನ್ನೇ ದಿಟ್ಟಿಸತೊಡಗಿದಳು.
"ಅಪ್ಪಾಜೀ, ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗೋಣ. ಅಲ್ಲಿ ತಜ್ಞ ಡಾಕ್ಟರಿಂದ ಚಿಕಿತ್ಸೆ ಕೊಡಿಸೋಣ. ಅಮ್ಮ ಬೇಗ ಮೊದಲಿನಂತಾಗುತ್ತಾಳೆ. ನೀವೇನೂ ಚಿಂತಿಸಬೇಡಿರಿ. ನಾವು ನಿಮ್ಮ ಜೊತೆಗಿದ್ದೇವೆ" ಎಂದು ಮಾತಿಗಿಳಿದಿದ್ದ ವಿನೀತಾ ಡಾಕ್ಟರ್ ಜೊತೆಗೆ ಮಾತಾಡಿ ತಾಯಿಯನ್ನು ಡಿಸ್ಚಾರ್ಜ ಮಾಡಿಸಿಕೊಂಡು ತಂದೆಯನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟೇಬಿಟ್ಟಳು.
ಸುಮಾದೇವಿ ಬೆಂಗಳೂರಿನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯೊಂದರಲ್ಲಿ ಒಂದು ವಾರದವರೆಗೆ ಇದ್ದಳು. ಅಷ್ಟರಲ್ಲಿ ಅವಳ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಂಡು ಬಂದಿತು. ನಿಧಾನವಾಗಿ ಮಾತುಗಳು ಬರತೊಡಗಿದವು. ಕೈ, ಕಾಲುಗಳಲ್ಲಿ ಚಲನೆ ಮರುಕಳಿಸತೊಡಗಿತು. ಹಗಲು-ರಾತ್ರಿ ಎನ್ನದೇ ಮಗಳು ಮತ್ತು ಅಳಿಯ ಸುಮಾದೇವಿಯ ಆರೈಕೆಯಲ್ಲಿ ನಿರತರಾಗಿದ್ದನ್ನು ಕಂಡು ವೀರಭದ್ರಪ್ಪನವರ ಎದೆ ತುಂಬಿಬರತೊಡಗಿತ್ತು. ವಿನೀತಾಳ ಅತ್ತೆ-ಮಾವನವರೂ ಸುಮಾದೇವಿಯನ್ನು ಕಂಡು ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಹೋದರು. ವಾರದ ನಂತರ ಸುಮಾದೇವಿಯ ಆರೈಕೆ ವಿನೀತಾಳ ಮನೆಯಲ್ಲಿ ಮುಂದುವರಿಯಿತು. ಒಂದಿಷ್ಟೂ ಬೇಸರಿಸಿಕೊಳ್ಳದೇ ವಿನೀತಾ ತಾಯಿಯ ಸೇವೆ ಮಾಡತೊಡಗಿದಳು. ಅಳಿಯನೂ ಅಷ್ಟೇ.
"ಮಗಳ ಬಗ್ಗೆ ನಾನೇನೋ ತಿಳಿದುಕೊಂಡಿದ್ದೆ. ಆದರೆ ಅವಳೀಗ ನನಗೆ ಹೆತ್ತವ್ವನೇ. ಚಿಕ್ಕ ಮಗುವನ್ನು ನೋಡಿಕೊಳ್ಳುವಂತೆ ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ ವಿನೀತಾ. ಅವಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾದಾಗ ನಾನು ಒಪ್ಪಿದ್ದು ಒಲ್ಲದ ಮನಸ್ಸಿನಿಂದಲೇ. ವಿಶ್ವಾಸನನ್ನು ನಾನು ಎಂದೂ ನಮ್ಮ ಅಳಿಯ ಎಂದು ಸ್ವೀಕರಿಸಲೇ ಇಲ್ಲ. ಆದರೆ ಅವನೀಗ ಮಾನವೀಯತೆಯ ಸಾಕಾರ ಮೂರ್ತಿ ಎಂದೆನಿಸುತ್ತಿದೆ. ತುಂಬಾ ಎತ್ತರದಲ್ಲಿರುವ ಮಾನವೀಯ ಕಳಕಳಿಯ ಹುಡುಗ ಎಂದು ಅರಿವಾಗಿದೆ. ಮನುಷ್ಯ ಸೃಷ್ಟಿಯ ಜಾತಿಗಿಂತ ಅವನಲ್ಲಿರುವ ಮಾನವೀಯ ಗುಣಗಳೇ ಮುಖ್ಯ ಎಂಬುದೀಗ ನನ್ನ ಮನದರಿವಿಗೆ ಬಂದಿದೆ. ನನ್ನ ಮುದ್ದಿನ ಮಗ ಸಮರ್ಥನಲ್ಲಿ ನಾನು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಅವನಿಂದ ನನಗಾದ ಅನುಭವ...! ಮನುಷ್ಯತ್ವವೇ ಇಲ್ಲದ ಮನುಷ್ಯ ಎಂದು ಸಾಬೀತು ಮಾಡಿಬಿಟ್ಟ. ಎಂಥಹ ವಿಪರ್ಯಾಸ...? ಯಾವುದನ್ನು ನಾನು ಅಪರಂಜಿ ಎಂದು ಭಾವಿಸಿದ್ದೆನೋ, ಅದೀಗ ಬರೀ ಕಲ್ಲು. ಯಾವುದನ್ನು ನಾನು ಕಲ್ಲು ಎಂದು ಭಾವಿಸಿದ್ದೆನೋ ಅದೀಗ ಬೆಲೆಬಾಳುವ ವಜ್ರ! ನನ್ನ ವಿನೀತಾಳೀಗ ಫಳಪಳನೇ ಹೊಳೆಯುವ ವಜ್ರ. ಮಿತಭಾಷಿಯ ವಿಶ್ವಾಸ್ ತುಂಬಿದ ಕೊಡವೇ. ವಿದ್ಯೆ, ವಿನಯ, ಸಂಪತ್ತು ಎಲ್ಲವೂ ವಿಶ್ವಾಸನಲ್ಲಿವೆ ಎಂದರೆ ತಪ್ಪಾಗಲಾರದು. ವಿನೀತಾ ವಿಶ್ವಾಸನನ್ನು ಮೆಚ್ಚಿಕೊಂಡಿದ್ದು ಸರಿಯಾದದ್ದೇ. ಅವಳ ದೃಢ ನಿರ್ಧಾರ ಅವಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಇಟ್ಟಿದೆ. ಒಲಿದ ಜೀವದ ಜೊತೆಗೆ ಹಾಯಾಗಿದ್ದಾಳೆ ವಿನೀತಾ. ಅದೇ ನನ್ನ ಸೊಸೆ ಪ್ರಿಯಾಂಕಾ...! ನಾನೇ ನೆಚ್ಚಿ, ಮೆಚ್ಚಿ ಹಂಬಲಿಸಿ ಅವಳನ್ನು ಮನೆ ತುಂಬಿಸಿಕೊಂಡೆ. ಅವಳು ನನಗೆ ಸೊಸೆಯಾಗಿ ಬರದೇ ಹೆಮ್ಮಾರಿಯಾಗಿ ಬಂದು ನನ್ನ ಮಗನನ್ನು ನನ್ನಿಂದ ದೂರಮಾಡಿದ ಚಾಂಡಾಲಿ. ಮದುವೆಯ ನಂತರ ನಮ್ಮ ಜೊತೆಗಿದ್ದು ಒಂದಿನಾನೂ ಕಳೆಯಲಿಲ್ಲ. ತಾನಾಯಿತು, ತನ್ನ ಗಂಡನಾಯಿತು, ತನ್ನ ಮಕ್ಕಳಾಯಿತು, ತನ್ನ ತವರಿನ ಬಳಗವಾಯಿತು, ಅಷ್ಟೇ ಅವಳಿಗೆ ಬಂಧು-ಬಳಗ. ನಾವ್ಯಾರೂ ಬೇಕಿಲ್ಲ. ಸಮರ್ಥ, ಪ್ರಿಯಾಂಕಾ ಕೆಟ್ಟ ಸ್ವಾರ್ಥಿಗಳಾಗಿಬಿಟ್ಟರು.
ವಿನೀತಾಳ ಮದುವೆಯ ನಂತರ ನಾನು ಅವಳನ್ನು ತಾಯಿಯಂತೆ ನೋಡಿಕೊಂಡೆನೇ...? ಉಹೂಂ...! ನಾನವಳಿಗೆ ಒಳ್ಳೆಯ ತಾಯಿಯಾಗಲೇ ಇಲ್ಲ. ಏನೋ ಒಂಥರ ಅಸಡ್ಡೆ ಭಾವ ಬೆಳೆದುಬಿಟ್ಟಿತು ಅವಳ ಬಗ್ಗೆ ನನ್ನ ಮನಸ್ಸಿನಲ್ಲಿ. ಸಮರ್ಥ, ಪ್ರಿಯಾಂಕಾ ದೂರದ ದೇಶದಲ್ಲಿದ್ದರೂ ಅವರ ಬಗ್ಗೆ ಮಾತ್ರ ಎಲ್ಲಿಲ್ಲದ ಕಳಕಳಿ. ನನ್ನ ಮಾತೃ ಹೃದಯ ಅವರಿಗಾಗಿ ನಿರಂತರ ಮಿಡಿಯುತ್ತಿತ್ತಲ್ಲವೇ? ವಿನೀತಾ ನನಗೆ ಲೆಕ್ಕವಿಲ್ಲದಷ್ಟು ರೇಶಿಮೆ ಸೀರೆಗಳನ್ನು ತಂದುಕೊಟ್ಟಳಲ್ಲವೇ? ನನ್ನದೆಂಥಹ ತಾಯಿ ಕರುಳೋ ಏನೋ...? ನನ್ನ ತಾಯಿ ಕರುಳು ಅವಳಿಗಾಗಿ ಮಿಡಿಯಲೇ ಇಲ್ಲ. ವಿನೀತಾ ಚೊಚ್ಚಲ ಬಸಿರಿಯಾದಾಗ ಕಾಟಾಚಾರಕ್ಕೆ ಹೆರಿಗೆಗೆ ಕರೆದುಕೊಂಡು ಬಂದಿದ್ದೆನಲ್ಲವೇ? ಚೊಚ್ಚಲ ಗರ್ಭಿಣಿಗೆ ಕೊಡಬೇಕಾದ ಪ್ರಾಶಸ್ಥ್ಯವನ್ನು ಕೊಡಲಿಲ್ಲ. ಎರಡನೇ ಹೆರಿಗೆಗೆ ವಿನೀತಾಳನ್ನು ತವರುಮನೆಗೆ ಕರೆದುಕೊಂಡು ಬರಲೇ ಇಲ್ಲ. ಅವಳು ಗಂಡನ ಮನೆಯಲ್ಲೇ ಉಳಿದುಕೊಂಡಳು. ತುಂಬಾ ಅನ್ಯಾಯ ಮಾಡಿಬಿಟ್ಟೆ ಅವಳಿಗೆ. ಆದರೆ ವಿನೀತಾ...? ನನ್ನ ಬಗ್ಗೆ ಅವಳಿಗಿದ್ದ ಪ್ರೀತಿ, ಕಳಕಳಿ ಒಂಚೂರೂ ಕಡಿಮೆಯಾಗಲಿಲ್ಲ. ನಾನು ಮುಖ ಊದಿಸಿಕೊಂಡಿದ್ದರೂ ಅವಳು ನನ್ನನ್ನು ಮೊದಲಿನಂತೆಯೇ ಪ್ರೀತಿಸುತ್ತಿದ್ದಳು. ನಾನೆಂದರೆ ಅವಳಿಗೆ ಮೊದಲಿನಿಂದಲೂ ಪೂಜ್ಯ ಭಾವನೆ. ಈಗಲೂ ಅಷ್ಟೇ. ನನಗೆ ಆರಾಮ ಇಲ್ಲದ ಸುದ್ದಿಯನ್ನು ಅವಳಿಗೆ ಹೇಳದಿದ್ದರೂ ಯಾರಿಂದಲೋ ಸುದ್ದಿ ತಿಳಿದು ನನಗಾಗಿ ಓಡೋಡಿ ಬಂದಳು. ಅದೂ ತನ್ನ ಗಂಡನ ಜೊತೆಗೆ. ತಕ್ಷಣ ಬೆಂಗಳೂರಿಗೂ ಕರೆದುಕೊಂಡು ಬಂದು ಸುಸಜ್ಜಿತ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಕ್ಕೆ ನನ್ನ ಆರೋಗ್ಯದಲ್ಲಿ ಮಹತ್ತರ ಸುಧಾರಣೆಯೂ ಆಗಿದೆ. ಅವಳು ನಿಜವಾಗಿಯೂ ಸಮಚಿತ್ತದ ಹುಡುಗಿಯೇ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದ್ದ ನನಗೀಗ ನನ್ನ ತಪ್ಪಿನರಿವಾಗತೊಡಗಿದೆ. ಬೆಳ್ಳಗಿದ್ದುದೆಲ್ಲವೂ ಹಾಲು ಎಂದು ನಂಬುತ್ತಿದ್ದ ನನಗೀಗ ಹಾಲು ಯಾವುದು, ಸುಣ್ಣ ಯಾವುದು ಎಂದು ಅರ್ಥವಾಗತೊಡಗಿದೆ.
ನನ್ನ ಆರೈಕೆಗಾಗಿ ವಿನೀತಾ ಮತ್ತು ವಿಶ್ವಾಸ್ ತಮ್ಮ ಕಂಪನಿಯ ಬಾಸ್‍ಗಳಿಗೆ ವಿನಂತಿಸಿಕೊಂಡು ಮನಯಿಂದಲೇ ಕೆಲಸ ಮಾಡುವುದಕ್ಕೆ ಅನುಮತಿ ಪಡೆದು ನನ್ನ ಸೇವೆ ಮಾಡುತ್ತಿದ್ದಾರೆ. ಅವರ ನಿಸ್ಪøಹ, ಪ್ರಾಮಾಣಿಕ ಸೇವೆಗೆ ನನ್ನ ಹೃದಯ ತುಂಬಿ ಬರುತ್ತಿದೆ."
"ಅಮ್ಮಾ, ಎಲ್ಲಿ ಕಳೆದು ಹೋಗಿರುವಿ...? ನಾನು ಆಗಿನಿಂದ ಈ ಮಾತ್ರೆಯನ್ನು ಕೊಡಲು ಪ್ರಯತ್ನಿಸುತ್ತಿದ್ದೇನೆ. ನಿನ್ನ ಗಮನ ಇತ್ತ ಇಲ್ಲವೇ ಇಲ್ಲ..." ಎಂದು ವಿನೀತಾ ಸುಮಾದೇವಿಯ ತೋಳಿಡಿದು ಅಲುಗಾಡಿಸಿದಾಗ ಆಕೆ ಯೋಚನಾ ಲಹರಿಯಿಂದ ಹೊರಬಂದಳು.
"ಹಾಂ...! ಏನಂದಿ ವಿನೂ...?" ಸುಮಾದೇವಿ ಬಹಳ ವರ್ಷಗಳ ನಂತರ ಮಗಳನ್ನು ಮುದ್ದಿನಿಂದ ವಿನೂ ಎಂದು ಕರೆದಿದ್ದು ಈಗಷ್ಟೇ. ವಿನೀತಾಳ ಎದೆಯಲ್ಲಿ ಮಧುರ ಸಂಗೀತದ ಆಲಾಪನೆಯಾದಂತಾಯಿತು. ಬಿಟ್ಟ ಕಣ್ಣುಗಳಿಂದ ತಾಯಿಯನ್ನೇ ನೋಡಗಿದಳು. ತಿಂಗಳು ತುಂಬುವಷ್ಟರಲ್ಲಿ ಸುಮಾದೇವಿಯ ಆರೋಗ್ಯದಲ್ಲಿ ಸುಧಾರಣೆಯಾಗಿ ತೊದಲು ತೊದಲು ಮಾತಾಡಲು ಮುಂದಾಗಿದ್ದಳು.
"ಅಮ್ಮಾ, ಈ ಮಾತ್ರೆ ತೆಗೆದುಕೋ..." ಎಂದೆನ್ನುತ್ತಾ ವಿನೀತಾ ತಾಯಿಯ ಬಾಯಿಯಲ್ಲಿ ಮಾತ್ರೆ ಇಟ್ಟು ನೀರು ಕುಡಿಸಿದಳು. ಮಾತ್ರೆಯನ್ನು ನುಂಗಿದ ಸುಮಾದೇವಿ ಹನಿಗಣ್ಣವಳಾಗಿ, `ವಿನೂ, ನೀನು ನನ್ನ ಹೆತ್ತವ್ವ ಕಣೇ...' ಎಂದೆನ್ನುತ್ತಾ ನಿಧಾನವಾಗಿ ವಿನೀತಾಳ ಮುಂಗುರಳನ್ನು ನೇವರಿಸುತ್ತಾ ತಬ್ಬಿಕೊಂಡು ಬೆನ್ನ ಮೇಲೆ ಕೈಯಾಡಿಸತೊಡಗಿದಳು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ವೀರಭದ್ರಪ್ಪ ಮತ್ತು ವಿಶ್ವಾಸ್ ತಾಯಿ-ಮಗಳ ಬಂಧನ ನೋಡುತ್ತಾ ಸಂಭ್ರಮಿಸತೊಡಗಿದರು.
ಶೇಖರಗೌಡ ವೀ ಸರನಾಡಗೌಡರ್, ಮೊ.ನಂ.-9448989332,
ತಾವರಗೇರಾ-583279, ತಾ : ಕುಷ್ಟಗಿ, ಜಿ : ಕೊಪ್ಪಳ.
ಮಗಳೆಂಬ ಅವ್ವ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಶೇಖರಗೌಡ ವೀ. ಸರನಾಡಗೌಡರ್
ಶೇಖರಗೌಡ ವೀರನಗೌಡ ಸರನಾಡಗೌಡರ್ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದವರು.
ಕೃಷಿ ಪದವೀಧರರು. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಚೀಫ್ ಮ್ಯಾನೇಜರ್ ಆಗಿದ್ದು ಈಗ ನಿವೃತ್ತಿ ಪಡೆದಿರುವರು.
ಸಾಹಿತ್ಯ ರಚನೆ : ೩೫೫ ಕಥೆಗಳು, ೧೦ ಕಾದಂಬರಿಗಳು, ೩೫ ಲೇಖನಗಳು, ೧೦ ಕವನಗಳು.
ಪ್ರಕಟವಾಗಿರುವ ಕೃತಿಗಳು: ಕಥಾ ಸಂಕಲನಗಳು -೨೨,ಕಾದಂಬರಿಗಳು - ೦೮.
ಸದ್ಯ ಕರ್ಮವೀರ ವಾರಪತ್ರಿಕೆಯಲ್ಲಿ, "ಅತಿ ಮಧುರ ಅನುರಾಗ" ಎಂಬ ಕಾದಂಬರಿ ೨೩-೦೧-೨೦೨೨ರಿಂದ ಧಾರಾವಾಹಿಯಾಗಿ ಪ್ರಕಟವಾಗತೊಡಗಿದೆ. ಎರಡು ನೂರಕ್ಕೂ ಹೆಚ್ಚು ಕಥೆಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಪ್ರಶಸ್ತಿ, ಪುರಸ್ಕಾರಗಳು :
೧) ೨೦೨೦ರ ಕಲಬುರಗಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.
೨) ೨೦೨೧ರಲ್ಲಿ ಜರುಗಿದ ಕುಷ್ಟಗಿ ತಾಲೂಕಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ.ಇನ್ನೂ ಹಲವಾರು.
ಸದ್ಯ ಸಾಹಿತ್ಯ ಕೃಷಿಯ ಜೊತೆಗೆ ನಿಜ ಕೃಷಿಯಲ್ಲಿ ತೊಡಗಿರುವರು. ಪತ್ನಿ : ಅಕ್ಕಮಹಾದೇವಿ.
All Posts
5 thoughts on “ಮಗಳೆಂಬ ಅವ್ವ”
ಕಥೆ ಚನ್ನಾಗಿದೆ. ತಂದೆ ತಾಯಿಯರನ್ನು ಪ್ರೀತಿಯಿಂದ ಆರೈಕೆ ಮಾಡುವುದು ಹೆಣ್ಣು ಮಕ್ಕಳೇ. ಮದುವೆಯಾದ ಗಂಡು ಮಕ್ಕಳು ಮೊದಲಿನ ಪ್ರೀತಿಯನ್ನು ತಂದೆ ತಾಯಿಯರನ್ನು ನೋಡಿಕೊಳ್ಳುವುದು ಅಪರೂಪ. ಕತೆಯ ಅಂತ್ಯ ಸೊಗಸಾಗಿದೆ.
ಸರಳ ಕಥೆ ಸರಾಗವಾಗಿ ಓದಿಸಿಕೊಂಡು ಹೋಗುವಂತಿದೆ.
ಅಭಿನಂದನೆಗಳು
ಮಗಳು ಅವ್ವಳಾಗಿ ಆಕೆಯ ಹೆತ್ತಮ್ಮಳಂತೆ ನೋಡ್ಪುವ ಪರಿ ತುಂಬಾ ಖುಷಿ ಕೊಟ್ಟಿತು. ಭಾವಪೂರ್ಣ ಕಥೆ ಓದಲು ಸರಳವಾಗಿ ಮತ್ತು ಸುಂದರವಾಗಿದೆ.
ಕಥೆ ತುಂಬಾ ಚೆನ್ನಾಗಿ ಮೂಡಿದೆ. ಲೇಖಕರು ಹಸ್ತ ಸಿದ್ಧರು. ಅವರಿಗೆ ಅಭಿನಂದನೆಗಳು.🌹🌹
ಕಥೆ ತುಂಬಾ ಚನ್ನಾಗಿದೆ.ಪ್ರಸುತ್ತ ಕಾಲ ಘಟ್ಟದಲ್ಲಿ ಪ್ರತಿ ಹಿರಿಯರು ಮಕ್ಕಳ ಬಗ್ಗೆ ತುಂಬಾ ನಂಬಿಕೆ ಇಟ್ಟು ಕೊಂಡು ಬದುಕುತ್ತಾರೆ. ಆದರೆ ಕಾಲಚಕ್ರದಲ್ಲಿ ಮಕ್ಕಳು ಹಿರಿ ಜೀವ ವನ್ನು ಮರೆತು ಬದುಕುವ ಪರಿ ದೇವರಿಗೆ ಪ್ರೀತಿ. ಕಥೆ ಓದಿಸಿ ಕೊಂಡು ಹೋಗುತ್ತಾ ಮಗಳ ಮುತುವರ್ಜಿ ಯಲ್ಲಿ ಸುಂದರ ಶಾಂತಿಯ ಬದುಕು ಕಟ್ಟಿಕೊಡುತ್ತೆ. ಶುಭವಾಗಲಿ 💐🙏