ಕೃತಿ: ಸಂಶೋಧಕ ರಾಜಮಾರ್ಗ
ಲೇಖಕ: ಡಾ ಅಜಕ್ಕಳ ಗಿರೀಶ್ ಭಟ್
ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಷನ್, ಬೆಂಗಳೂರು,
ಸಂಪರ್ಕ: 9620916996
ಬೆಲೆ : 230, ವರ್ಷ 2024
ಪುಟಗಳು : 188
ಸಂಶೋಧಕ ರಾಜಮಾರ್ಗ ಇದು ಡಾ.ಅಜಕ್ಕಳ ಗಿರೀಶ್ ಭಟ್ ಅವರ ಇತ್ತೀಚಿನ ಮಹತ್ವದ ಕೃತಿ.ಸಂಶೋಧನೆ ಎಂದರೇನು, ಸಂಶೋಧನೆ ಎನ್ನುವ ಶಿಸ್ತು, ಅದಕ್ಕೆ ಸಂಬಂಧಿಸಿದ ಪರಿಭಾಷೆಗಳನ್ನು ಮತ್ತು ಪರಿಕಲ್ಪನೆಗಳನ್ನು ಸ್ಪಷ್ಟಗೊಳಿಸುವ ಪ್ರಯತ್ನ ಈ ಕೃತಿಯ ಹೂರಣ. ಸಾಂಪ್ರತ ಸಂಶೋಧನೆಯ ಬಗೆಗೆ ಚಿಂತಿಸುವುದಕ್ಕೆ ಹಿನ್ನೆಲೆಯಾಗಿ ಭಾರತೀಯ ಜ್ಞಾನ ಪರಂಪರೆಯ ವೈಶಿಷ್ಟ್ಯ, ಅಲ್ಲಿ ತರ್ಕ ಹಾಗೂ ತತ್ವಕ್ಕೆ ಇರುವ ಮಹತ್ವ, ಭಾರತೀಯ ಚಿಂತನಕ್ರಮದಿಂದ ನಾವು ನಮ್ಮ ಸಂಶೋಧನ ಪ್ರಕ್ರಿಯೆಯಲ್ಲಿ ಯಾವ ಬಗೆಯ ಪ್ರಯೋಜನವನ್ನು ಪಡೆಯ ಬಹುದು ಎಂಬೆಲ್ಲ ವಿಚಾರಗಳನ್ನು ಮುನ್ನೆಲೆಗೆ ತಂದು ವಿಶ್ಲೇಷಣೆ ಮಾಡಿರುವುದರ ಜತೆಗೆ ಸಾಂಪ್ರತ ಸಂಶೋಧನೆಗೆ ದಿವ್ಯ ತಿರುವು ತೋರುವ ಆಶಯ ಇಲ್ಲಿ ಪ್ರಕಟವಾಗಿದೆ.
ಸಂಶೋಧನೆಯೆನ್ನುವುದು ಒಂದು ಶೈಕ್ಷಣಿಕ ಶಿಸ್ತು. ‘ಸಂಶೋಧಕನ ದೃಷ್ಟಿ ಹೊಸದನ್ನು ಕಾಣುವುದರತ್ತ; ಕಾಣಿಸುವುದರತ್ತ’ ಎಂಬ ಮಾತಿದೆ. ಹೊಸದನ್ನು ಕಾಣಿಸುವ ಹುಡುಕಾಟಕ್ಕೆ ನೆಲೆಯೇ ಸಂಶೋಧನೆ. ಅದೊಂದು ನಿರಂತರವಾದ ಪ್ರಕ್ರಿಯೆ. ಸಂಶೋಧನೆ ಎನ್ನುವುದು ಒಂದು ಸತ್ಯದ ದರ್ಶನ ಅಥವಾ ಹಲವು ಸತ್ಯಗಳನ್ನು ದರ್ಶಿಸುತ್ತಾ ಸಂಶೋಧಕನನ್ನು ಗುರಿಮುಟ್ಟುವಂತೆ ಮಾಡುತ್ತದೆ. ಸಂಶೋಧನೆಯೆಂಬುದು ಪರಿಪೂರ್ಣವಾಗಿ ವಸ್ತುನಿಷ್ಠವಾದ ಕ್ರಿಯೆ. ಸಂಶೋಧನೆ ಇಂದು ಹೆಚ್ಚು ಹೆಚ್ಚಾಗಿ ಬೆಳೆಯುತ್ತಿದ್ದಂತೆ ಅದು ಹಲವಾರು ಆಪಾದನೆಗಳಿಗೆ ಗುರಿಯಾಗಿದೆ. ಸಾಹಿತ್ಯ ಸಂಶೋಧನ ಕ್ಷೇತ್ರದಲ್ಲಿ ಗೊಂದಲ ಹೆಚ್ಚಾಗಿದೆ. ಅಲ್ಲಿ ರಸ-ಕಸವೆಲ್ಲ ಸೇರಿ ಎಲ್ಲ ಬಣ್ಣವನ್ನು ಮಸಿ ನುಂಗಿತು ಎಂಬಂತಾಗಿದೆ. ಸಂಶೋಧನ ಶಿಸ್ತು, ಗೌರವ ಮರೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ.ಗೂಢ ನಿಗೂಢಗಳನ್ನು ಬಯಲಿಗೆ ಎಳೆಯವ ಸಂಶೋಧನ ರಂಗ ಸ್ಥಾವರವಾಗದೇ ಜಂಗಮವಾಗಿ ಮುಂದುವರಿಯ ಬೇಕಾದ ಅಗತ್ಯವನ್ನು ಈ ಕೃತಿಯಲ್ಲಿ ಮನದಟ್ಟು ಮಾಡಿಕೊಡಲಾಗಿದೆ.ನಮ್ಮ ಸಂಶೋಧನ ಕ್ಷೇತ್ರದಲ್ಲಿ ಎದುರಾದ ತಪ್ಪು ತೊಡಕು, ತೊಡರುಗಳನ್ನು ಮುಲಾಜಿಲ್ಲದೆ ಎತ್ತಿಹೇಳಿ ಹೊಸ ಹಾದಿಯಲ್ಲಿ ಸಂಶೋಧಕ ಹೀಗೂ ಸಾಗಬಹುದು ಎಂಬುದಾಗಿ ಪಥ ನಿರ್ದೇಶನ ಮಾಡಿರುವುದು ಈ ಕೃತಿಯ ಗುಣಾತಿಶಯ.
ಸಂಶೋಧನೆ ಎಂದರೇನು? ಸಂಶೋಧನ ಕಾರ್ಯದ ನೈಜ ವಿಧಾನ ಯಾವುದು? ಸಂಶೋಧಕ ಮನೋಧರ್ಮ ರೂಢಿಸಿಕೊಳ್ಳುವ ಪರಿ ಎಂತು?ಎಂಬಾದಿಯಾದ ಪ್ರಶ್ನೆಗಳಿಗೆ ಸೂತ್ರರೂಪದಲ್ಲಿ ಉತ್ತರಿಸುವುದು ಕಷ್ಟದ ಕೆಲಸ. ಸಾಹಿತ್ಯ ಸಂಶೋಧನೆಯ ಗುಣಮಟ್ಟ ಕುಸಿಯುತ್ತಿದೆ; ಸಂಶೋಧನೆಯ ನೆಪದಲ್ಲಿ ಬರೇ ಏನೇನೋ ಕಸರತ್ತು ನಡೆಯುತ್ತಿವೆ ಎಂಬಾದಿಯಾದ ಗೊಣಗಾಟ ಇಂದು ಹೆಚ್ಚಾಗುತ್ತಿದೆ. ಹೀಗಿದ್ದೂ ಸಂಶೋಧನೆಯಿಂದಾದ ಪ್ರಯೋಜನಗಳನ್ನು ಯಾರೂ ಅಲ್ಲಗಳೆಯಲಾರರು. ಸಂಶೋಧನೆ ಎನ್ನುವುದು ಜ್ಞಾನದ ಅಂಚನ್ನು ಮತ್ತಷ್ಟು ವಿಸ್ತಾರಗೊಳಿಸುವ ಕ್ರಿಯೆ. ಅದು ಸತ್ಯವನ್ನು ಕಾಣುವ ಪ್ರಾಂಜಲ ಮತ್ತು ಪ್ರಾಮಾಣಿಕ ಪ್ರಯತ್ನ.ನಾಗರಿಕತೆಯ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಸಂಶೋಧನೆಯು ಪ್ರಧಾನವಾದ ಪಾತ್ರವನ್ನು ವಹಿಸುತ್ತಾ ಬಂದಿದೆ.ಹೀಗಿದ್ದೂ ನಮ್ಮ ಸಾಂಪ್ರತ ಸಂಶೋಧನೆಯ ವೈಧಾನಿಕತೆಯು ಪಾಶ್ಚಿಮಾತ್ಯ ತಿಳುವಳಿಕೆ ಒದಗಿಸಿರುವ ಚೌಕಟ್ಟು.ಬಹು ರೂಪಿಯೂ ಬಹು ವ್ಯಾಪಿಯೂ ಆಗಿರುವ ಸಂಶೋಧನ ವಲಯದ ಗುಣಮಟ್ಟ ಉತ್ತಮಗೊಳ್ಳಬೇಕಾದರೆ ಏನೇನು ಮಾಡಬೇಕು ಎಂಬ ವಿವೇಚನೆ ಇಲ್ಲಿ ಸಾಂದ್ರವಾಗಿ ಮೂಡಿಬಂದಿದೆ.ಸಂಶೋಧನೆಯ ಸಿದ್ಧ ಚೌಕಟ್ಟನ್ನು ತುಸು ಮುರಿದು ಕಟ್ಟಿರುವುದು ಈ ಕೃತಿಯ ಧನಾತ್ಮಕ ಅಂಶ.
ಸಂಶೋಧನೆಯ ಮಹತಿ,ಅದನ್ನು ಸರಿಯಾಗಿ ಕೈಗೊಳ್ಳುವ ಬಗೆ ಎಂತು ? ಕನ್ನಡ ಸಂಶೋಧನೆಯ ಪ್ರಾತಿನಿಧಿಕ ಕ್ಷೇತ್ರಗಳಾವವು?ಹೀಗೆ ಕನ್ನಡದಲ್ಲಿ ಸಂಶೋಧನೆಯ ವಿಧಿವಿಧಾನಗಳನ್ನು ನಿರೂಪಿಸುವ ಅನೇಕ ಕೃತಿಗಳು ಬೆಳಕು ಕಂಡಿವೆ. ಹೀಗಿದ್ದೂ ಪ್ರಸ್ತುತ ಡಾ. ಗಿರೀಶ್ ಭಟ್ ಅವರ ಕೃತಿ ಈ ನಿಟ್ಟಿನಲ್ಲಿ ತುಸು ಭಿನ್ನ ವಿಭಿನ್ನವಾಗಿ ಸಂಶೋಧನೆಯಲ್ಲಿ ನಿರತರಾಗುವವರಿಗೆ ಕೈದೀವಿಗೆಯಾಗಿದೆ.
ಸಂಶೋಧನೆಯ ಹೆಸರಲ್ಲಿ ಭಾರತೀಯ ಸಂಶೋಧಕರು ಮಾಡುತ್ತಿರುವ ತಪ್ಪುಗಳು, ಅವರ ಚಿಂತನದೋಷಗಳು, ಪಾರಿಭಾಷಿಕ ಪದಗಳ ತಪ್ಪು ಬಳಕೆಯಿಂದ ಆಗುತ್ತಿರುವ ಅನಾಹುತಗಳು ಇತ್ಯಾದಿಯ ಕುರಿತು “ಎಡವಲ್ಲದ” ಚಿಂತನೆಯ ಬರಹ/ಕೃತಿ ಬಂದದ್ದು ಇಲ್ಲವೆಂಬಷ್ಟುವಿರಳ. “ಸಂಶೋಧಕ ರಾಜಮಾರ್ಗ” ಕೃತಿ ಭಾರತೀಯ ಚಿಂತನೆ/ಸಂಶೋಧನೆ/ಅಧ್ಯಯನ ಭಾರತೀಯ ಸಂಶೋಧಕರು ವಿದೇಶಿ ಕುಣಿಕೆಗಳಿಂದ ಬಿಡಿಸಿಕೊಳ್ಳುವುದು ಹೇಗೆ ಎಂಬುದನ್ನು ಪ್ರಧಾನವಾಗಿ ಚರ್ಚಿಸುತ್ತದೆ. ಮಾನವಿಕ ವಿಷಯಗಳಲ್ಲಿ ಸಂಶೋಧನೆಗೆ ತೊಡಗುವವರಿಗೆ ಸಮಸ್ಯಾ ನಿರೂಪಣೆ, ಸಂಶೋಧನ ಆಕರಗಳು, ಭೂಮಿಕೆ ಸಿದ್ಧಪಡಿಸುವುದು ಮೊದಲಾದ ಎಲ್ಲ ಅತ್ಯಗತ್ಯ ಸಂಗತಿಗಳ ಬಗೆಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತದೆ. ಪಿಎಚ್.ಡಿ. ಸಂಶೋಧನೆಯಲ್ಲಿ ತೊಡಗಬಯಸುವವರು ಅವಶ್ಯವಾಗಿ ಓದಬೇಕಾದ ಬಹು ಮುಖ್ಯ ಕೃತಿ ಇದಾಗಿದೆ.
ಸಂಶೋಧನೆಯ ಮಹತ್ವವನ್ನು ಯಾರೂ ಅಲ್ಲಗಳೆಯಲಾಗದು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳ ಸಂಶೋಧನೆಗೆ ಇರುವ ಮಹತ್ತ್ವವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾವುದೇ ದೇಶ ಸ್ವಾವಲಂಬನೆಯನ್ನು ಸಾಧಿಸುವಲ್ಲಿ ಸಂಶೋಧನೆಗಳು ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತವೆ. ‘ಅಭಿವೃದ್ಧಿ’ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗುವ ಹೊಸಹೊಸ ಸಂಶೋಧನೆಗಳು ಕಾರಣವಾಗುತ್ತವೆ ಎಂದು ಮೇಲುನೋಟಕ್ಕೆ ಕಾಣುತ್ತದೆಯಾದರೂ ಸಮಾಜವಿಜ್ಞಾನ ವಿಷಯಗಳು, ಸಾಹಿತ್ಯ, ಕಲೆ ಮುಂತಾದ ಮಾನವಿಕ ವಿಷಯಗಳಲ್ಲಿ ನಡೆಯುವ ಸಂಶೋಧನೆಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ನಮ್ಮ ಸಾಂಸ್ಕೃತಿಕ ಪರಿಸರವನ್ನು ಸಮೃದ್ಧಗೊಳಿಸುವಲ್ಲಿ ಮಾನವಿಕ ವಿಷಯಗಳು ಎಂದು ನಾವು ಸಾಮಾನ್ಯವಾಗಿ ಪರಿಗಣಿಸುವ ಸಾಹಿತ್ಯ, ಕಲೆ ಮುಂತಾದವುಗಳಲ್ಲಿ ಆಗುವ ಸಂಶೋಧನೆಗಳು ಸಹಕಾರಿಯಾಗುತ್ತವೆ.
ಸಮಾಜವಿಜ್ಞಾನಗಳ ಮತ್ತು ಮಾನವಿಕಗಳ ಸಂಶೋಧನೆಯನ್ನು ನಾವೇ ಮಾಡದಿದ್ದರೆ ತುಂಬ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈಗಲೂ ಭಾರತೀಯ ಸಮಾಜದ ಸ್ವರೂಪದ ಬಗ್ಗೆ ಜಗತ್ತಿನಲ್ಲಿ ಇರುವ ಕಥನವು ಪಶ್ಚಿಮದವರು ತಮ್ಮ ಸಂಶೋಧನೆಗಳ ಮೂಲಕ ಕಟ್ಟಿದ್ದೇ. ಭಾರತೀಯ ವಿದ್ವಾಂಸರೂ ಅದನ್ನೇ ಅವಲಂಬಿಸುತ್ತಾರೆ. ಸಂಸ್ಕೃತಿಗಳ ನಿಜಸ್ವರೂಪವನ್ನು ಅಥವಾ ಯಥಾರ್ಥವನ್ನು ಅರಿಯದೆ ಕಟ್ಟುವ ಇಂಥ ಕಥನಗಳಲ್ಲೇ ದೋಷವಿದ್ದಾಗ ಆ ದೋಷವು ನೀತಿನಿರೂಪಣೆ ಮತ್ತು ಕಾನೂನುಗಳಲ್ಲಿ ಪ್ರತಿಫಲಿಸುತ್ತದೆ. ಆ ಕಾರಣದಿಂದಾಗಿ ಸಮಾಜದಲ್ಲಿರುವ ಸಮಸ್ಯೆಗಳು ಅಥವಾ ದೋಷಗಳು ಅಂತ ನಾವೇನನ್ನು ಗುರುತಿಸುತ್ತೇವೆ ಅವುಗಳು ನಿವಾರಣೆಯಾಗುವುದಿಲ್ಲ; ಸಮಸ್ಯೆಯ ನಿವಾರಣೆಗೆಂದು ಕೈಗೊಳ್ಳುವ ಪ್ರಯತ್ನಗಳು ಗಾಳಿಯಲ್ಲಿ ಹಾರಿಸಿದ ಗುಂಡುಗಳಾಗುತ್ತವೆ. ಮತ್ತೆಷ್ಟೋ ಬಾರಿ ತಪ್ಪು ಗುರಿಯತ್ತ ಹಾರಿಸಿದ ಗುಂಡುಗಳಾಗುತ್ತವೆ. ಹೀಗಾಗಿ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ನಮ್ಮ ದೇಶದಲ್ಲಿಸಾಕಷ್ಟು ಉದಾಹರಣೆಗಳಿವೆ ಎಂಬದನ್ನು ಸಾಧಾರವಾಗಿ ಖಚಿತವಾಗಿ ವಿಶ್ಲೇಷಣೆ ನಡೆಸಿರುವುದು ಈ ಕೃತಿಯ ಬಲ್ಮೆ.
ಸಂಶೋಧನೆಯ ವಿಧಾನ ಮತ್ತು ವಿಧಾನಕ್ರಮ ಎಂಬೆರಡು ಪರಿಕಲ್ಪನೆಗಳು ಯಾವಾಗಲೂ ಸಂಶೋಧನ ವಿದ್ಯಾರ್ಥಿಗಳ ತಲೆತಿನ್ನುತ್ತವೆ. ವಿಧಾನ ಮತ್ತು ವಿಧಾನಕ್ರಮ ಇವುಗಳ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಲು ಮಾರ್ಗದರ್ಶಕರು ಒದ್ದಾಡಬೇಕಾಗುತ್ತದೆ.ಈ ಕುರಿತು ಡಾ. ಭಟ್ ಅವರು ನೀಡಿರುವ ವಿವರಣೆ ಈ ರಂಗದಲ್ಲಿ ಕ್ರಮಿಸುವವರಿಗೆ ಬಹು ಪ್ರಯೋಜನಕಾರಿ. ಅದು ಹೀಗಿದೆ,’ವಿಧಾನ’ವು ಕೌಶಲಕ್ಕೆ ಸಂಬಂಧಿಸಿದ್ದಾದರೆ ‘ವಿಧಾನಕ್ರಮ’ವು ಬೌದ್ಧಿಕ ಮತ್ತು ವೈಚಾರಿಕ ಸೂಕ್ಷ್ಮತೆ ಮತ್ತು ತೀಕ್ಷ್ಯತೆಗೆ ಸಂಬಂಧಿಸಿದ್ದು.
ಒಂದು ವಿಧಾನಕ್ರಮವನ್ನು ಅಳವಡಿಸಿಕೊಳ್ಳುವುದು ಎಂದರೆ ನಮ್ಮ ಸಂಶೋಧನೆಗೆ ಸೂಕ್ತವಾದ ಒಂದು ವ್ಯವಸ್ಥಿತ ಚೌಕಟ್ಟನ್ನು ಹೊಂದುವುದು ಮತ್ತು ಅದಕ್ಕೆ ಬೇಕಾದ ವೈಚಾರಿಕ ಹತ್ಯಾರುಗಳನ್ನು ಬಳಸುವುದು. ಸಂಶೋಧನೆಯನ್ನು ‘ಹೇಗೆ’ ಮಾಡುತ್ತೇವೆ ಎನ್ನುವುದನ್ನು ವಿಧಾನವು ಹೇಳುವಂತೆಯೇ ವಿಧಾನಕ್ರಮವು ಕೂಡ ಹೇಳುತ್ತದೆ. ಆದರೆ ವಿಧಾನವು ತಾಂತ್ರಿಕ ಅಂಶಗಳ ದೃಷ್ಟಿಯಿಂದ ‘ಹೇಗೆ’ ಎನ್ನುವುದನ್ನು ಹೇಳಿದರೆ, ವಿಧಾನಕ್ರಮವು ವೈಚಾರಿಕವಾಗಿ/ಬೌದ್ಧಿಕವಾಗಿ ‘ಹೇಗೆ’ ಎನ್ನುವುದನ್ನು ಹೇಳುತ್ತದೆ. ದತ್ತಾಂಶಗಳನ್ನು ಮತ್ತು ಆಕರಗಳನ್ನು ‘ಯಾವ’ ವೈಚಾರಿಕ/ಬೌದ್ಧಿಕ ಹತ್ಯಾರುಗಳನ್ನು ಬಳಸಿ ‘ಹೇಗೆ’ ವಿಶ್ಲೇಷಣೆ ಮಾಡಿ ಸಂಶೋಧನ ಸಮಸ್ಯೆಗೆ ಉತ್ತರಗಳನ್ನು ಕಂಡುಕೊಳ್ಳುತ್ತೇವೆ ಹಾಗೂ ಸಂಶೋಧನೆಯ ಉದ್ದೇಶವನ್ನು ಈಡೇರಿಸಿಕೊಳ್ಳುತ್ತೇವೆ ಎನ್ನುವುದನ್ನು ವಿಧಾನಕ್ರಮವು ಸೂಚಿಸುತ್ತದೆ.ಈ ಬಗೆಯ ಸ್ಪಷ್ಟತೆ, ಸರಳತೆ ಕನ್ನಡದಲ್ಲಿ ಬಂದ ಯಾವ ಕೃತಿಗಳಲ್ಲೂ ಕಾಣಸಿಗದಿರುವುದು ಅವಲೋಕನೀಯವಾಗಿದೆ.
ನಮ್ಮ ಸಂಶೋಧನ ರಂಗ ಕುಸಿದು ಹೋಗಲು ಕಾರಣಗಳೇನು ಎಂಬದನ್ನು ಭಟ್ ಅವರು ಗುರುತಿಸಿರುವ ಪರಿ ಅತ್ಯಂತ ಸಮಂಜಸವಾಗಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶೋಧನೆಗಳನ್ನು ಮಾಡುವ ವಿಜ್ಞಾನಿಗಳಿಗೆ ಬೇಕಾದುದು ಉತ್ತಮ ತರ್ಕಕೌಶಲವೇ. ಮಾನವನು ವಿಜ್ಞಾನಿಯಾಗಿ ಚಂದ್ರಲೋಕಕ್ಕೆ ನೌಕೆಯನ್ನು ಕಳುಹಿಸಬಲ್ಲನಾದರೂ ಭಾವನೆ ಮತ್ತು ನಂಬಿಕೆಗಳಿಂದ ಇನ್ನೂ ಕಳಚಿಕೊಂಡಿಲ್ಲ ಎನ್ನುವ ವೈಜ್ಞಾನಿಕ ಸತ್ಯವು ತರ್ಕಬದ್ಧವಾಗಿ ಯೋಚಿಸಬಲ್ಲ ವಿಜ್ಞಾನಿಗಳಿಗೆ ಗೊತ್ತಿದೆ. ಹೀಗಾಗಿಯೇ ರಾಕೆಟ್ ಸೈನ್ಸ್ ಮುಂತಾದ ಸಂಕೀರ್ಣ ವೈಜ್ಞಾನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ‘ವೈಜ್ಞಾನಿಕ ಮನೋಭಾವ’ವನ್ನು ಎಲ್ಲಿ ಬಳಸಬೇಕು ಮತ್ತು ‘ನಂಬಿಕೆ’ಗೆ ಯಾವ ಸ್ಥಾನವನ್ನು ಎಲ್ಲಿ ನೀಡಬೇಕು ಎನ್ನುವುದು ಗೊತ್ತಿರುತ್ತದೆ. ಹೀಗಾಗಿಯೇ ಅಂಥ ವಿಜ್ಞಾನಿಗಳು ‘ನಂಬಿಕೆ’ಯಿಂದ ದೇವರಿಗೆ ಕೈಮುಗಿದರೂ ಪ್ರಯೋಗಾಲಯದಲ್ಲಿ ‘ವಿಜ್ಞಾನ’ವನ್ನೇ ಆಶ್ರಯಿಸುತ್ತಾರೆ. ಆದರೆ ಅಂಥ ತರ್ಕ ಇಲ್ಲದವರು ಏನು ಮಾಡುತ್ತಾರೆ? ನಂಬಿಕೆ ಮತ್ತು ವಿಜ್ಞಾನವನ್ನು ಬೆರೆಸಿಬಿಡುತ್ತಾರೆ. ತಮ್ಮೊಳಗೇ ದ್ವಂದ್ವವನ್ನು ಅನುಭವಿಸುತ್ತಾರೆ; ಇತರರನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲಾರದೆ ಹೋಗುತ್ತಾರೆ.
ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ತರ್ಕಬದ್ಧ ಯೋಚನೆಯನ್ನು ಮಾಡುವ ತರಬೇತಿ ನೀಡುವುದು ಅತ್ಯಂತ ಅಗತ್ಯ. ಆದರೆ ನಮ್ಮ ಪ್ರಾಥಮಿಕ, ಪ್ರೌಡ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ತರ್ಕಬದ್ಧವಾದ ಯೋಚನೆಯನ್ನು ಮಾಡಲು ಹೇಗೆ ತರಬೇತಿಯಿಲ್ಲವೋ ಹಾಗೆಯೇ ತತ್ತ್ವದ ಆಳಕ್ಕಿಳಿಯುವ ತರಬೇತಿಯೂ ಇಲ್ಲ. ಒಟ್ಟಿನಲ್ಲಿ ಇಂದಿನ ಕನ್ನಡ ಸಂಶೋಧನೆಯಲ್ಲಿ ಅಥವಾ ಚಿಂತನೆಯಲ್ಲಿ ತರ್ಕ ಮತ್ತು ತತ್ತ್ವಜ್ಞಾನ ಎರಡೂ ಮಹತ್ತ್ವ ಪಡೆಯದಿರುವುದೇ ಬಹಳ ದೊಡ್ಡ ಸಮಸ್ಯೆ.ಇದಕ್ಕೆ ಅವರು ಪರಿಹಾರಗಳನ್ನು ಈ ಕೃತಿಯಲ್ಲಿ ಸೂಚಿಸಿರುವುದು ಔಚಿತ್ಯಪೂರ್ಣ ಉಪಕ್ರಮ.
“ಉನ್ನತ ಮಟ್ಟದ ಬೌದ್ಧಿಕತೆಯತ್ತ ನಮ್ಮ ತುಡಿತ ಇಲ್ಲದಿದ್ದರೆ ತತ್ತ್ವಜ್ಞಾನದ ಆಳ ಚಿಂತನೆಯಾಗಲೀ ತರ್ಕಬದ್ಧ ಚಿಂತನೆಯಾಗಲೀ ಕಷ್ಟಸಾಧ್ಯ. ವಾಸ್ತವವಾಗಿ ತತ್ತ್ವಜ್ಞಾನ ಮತ್ತು ತರ್ಕ ಬೇರೆಬೇರೆಯಲ್ಲ. ಚಿಂತನೆಯು ನಿಜವಾಗಿ ತರ್ಕಬದ್ಧವಾಗಿದ್ದರೆ ಅದು ತತ್ತ್ವಜ್ಞಾನದ ಹಂತಕ್ಕೆ ಏರದೆ ಇರುವುದು ಸಾಧ್ಯವಿಲ್ಲ ಎಂಬ ಮಾತು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.
ಒಳ್ಳೆಯ ಮಹಾಪ್ರಬಂಧಗಳಲ್ಲೂ ಎಷ್ಟೋ ಬಾರಿ ಸಂಶೋಧನ ಸಾರ ಹಾಗೂ ಅಧ್ಯಯನದ ಫಲಿತಗಳು ಸ್ಪಷ್ಟವಾಗಿ ಬಿಂಬಿತವಾಗಿರುವುದಿಲ್ಲ. ಕೇವಲ ಮಹಾಪ್ರಬಂಧಕ್ಕೆ ಮಾತ್ರ ಈ ಫಲಿತ ಅನ್ವಯಿಸುವಂಥದ್ದಲ್ಲ ಯಾವುದೇ ಒಂದು ಸಣ್ಣ ಲೇಖನ ಬರೆದರೂ ಅದು ಸಾತತ್ಯ,ತರ್ಕಬದ್ಧ ಸುಸ0ಬದ್ಧ ವಿಚಾರ ಸರಣಿಯನ್ನು ಹೊಂದಿದ್ದರೆ ಅದರಲ್ಲಿ ಏನು ಹೇಳಿದೆ ಅನ್ನುವುದನ್ನು ಕೆಲವೇ ವಾಕ್ಯಗಳಲ್ಲಿ ಹೇಳಲು ಸಾಧ್ಯವಾಗಬೇಕು. ಸಂಶೋಧಕನಿಗೆ ಮಾನವಿಕ ವಿಷಯದಲ್ಲಿ ಒಂದು ಫಲಿತಾಂಶ ಎಂಬುದು ಇರುವುದಿಲ್ಲ. ಸಂಶೋಧನೆ ಒಂದು ಪ್ರಕ್ರಿಯೆ. ಈ ಕುರಿತು ಹೆಚ್ಚಿನ ಸ್ಪಷ್ಟತೆ ಇಲ್ಲಿರುವುದು ಪ್ರಸಕ್ತ ಕೃತಿಯ ಗಟ್ಟಿತನವೂ ಆಗಿದೆ.
“ಸಂಶೋಧನ ಫಲಿತ ಎಂದರೆ ವಿಜ್ಞಾನದ ಸಂಶೋಧನೆಯ ಹಾಗೆ ಅಲ್ಲ; ಹಾಗಂತ ವಿಜ್ಞಾನದಲ್ಲಿಯೂ ಅಪೇಕ್ಷಿಸಿದ್ದನ್ನು ಪಡೆಯುವುದು ಮಾತ್ರ ಫಲಿತವಲ್ಲ! ಉದಾಹರಣೆಗೆ ಕೂದಲು ಉದುರದಂತೆ ತಡೆಯುವ ಔಷಧವೊಂದನ್ನು ಕಂಡುಕೊಳ್ಳಲು ಪ್ರಯೋಗಗಳ ಮೂಲಕ ಸಂಶೋಧನೆ ಮಾಡುವ ಒಬ್ಬ ಸಂಶೋಧಕ ಫಲಿತ/ಫಲಿತಾಂಶವನ್ನು ಪಡೆಯುವುದೆಂದರೆ ಸರಿಯಾದ ಔಷಧವನ್ನು ಕಂಡುಹಿಡಿಯುವುದು ಮಾತ್ರ ಅಲ್ಲ. ಅವನು ತಯಾರಿಸಿ ಪ್ರಯೋಗಿಸಿದ ಯಾವ ಔಷಧವೂ ಕೂದಲು ಉದುರುವುದನ್ನು ತಡೆಯಲಿಲ್ಲ ಎಂದರೆ ಆ ನಿರ್ದಿಷ್ಟ ಔಷಧಗಳು ಪ್ರಯೋಜನವಿಲ್ಲ ಎಂಬುದಾದರೂ ಗೊತ್ತಾಯಿತಲ್ಲ? ಅದು ಕೂಡ ಫಲಿತವೇ. ಮಾನವಿಕ ವಿಷಯಗಳಲ್ಲಾಗಲೀ ಇತರ ವಿಷಯಗಳಲ್ಲಾಗಲೀ ಈ ರೀತಿಯ ‘ಅನುಪಲಬ್ದಿ ‘ಯ ಫಲಿತವಾದರೂ ಸಿಕ್ಕಿಯೇ ಸಿಗುತ್ತದೆ. ಸಿಗಬೇಕು.”
ವಾಸ್ತವವಾಗಿ ನಾವು ಸಂಶೋಧನೆಯ ಆರಂಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ಹೇಳುತ್ತೇವಷ್ಟೆ. ಅಂತಹ ಪ್ರಶ್ನೆಗಳಿಗೆ ಸಂಶೋಧನೆಯ ಮೂಲಕ ಏನೇನು ಉತ್ತರಗಳು ದೊರಕುತ್ತವೆಯೋ ಅವನ್ನೇ ಫಲಿತವಾಗಿ ದಾಖಲಿಸಬಹುದು. ಉತ್ತರ ಸಿಗದಿದ್ದರೆ ಸಿಗಲಿಲ್ಲವೆಂಬುದೂ ಫಲಿತವೇ. ಯಾಕೆ ಉತ್ತರ ಸಿಗಲಿಲ್ಲವೆಂಬುದು ಗೊತ್ತಾದರೆ ಅದು ಕೂಡ ಒಂದು ಬಹುಮುಖ್ಯ ಫಲಿತವೇ ಎನ್ನಬಹುದು.ಹೀಗೆ ಕೃತಿಯ ಉದ್ದಕ್ಕೂ ಒಂದು ಬಗೆಯ ಖಚಿತ ನಿಲುವು, ಉದಾಹರಣೆ ಸಹಿತ ವಿವರಣೆ, ವಿಶ್ಲೇಷಣೆ, ದೃಷ್ಟಿತಿದ್ದುವ, ಮನದಟ್ಟು ಮಾಡಿಕೊಡುವ ತರ್ಕಬದ್ಧ ನಿರೂಪಣ ವಿಧಾನವು ಎದ್ದುಕಾಣುತ್ತದೆ. ಸಂಶೋಧನ ರಂಗದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವವರಿಗೆ ಇದೊಂದು ಚಿಮ್ಮುಹಲಗೆಯೂ ಆಗಬಲ್ಲದು.
- ಪ್ರೊ. ಜಿ. ಎನ್. ಉಪಾಧ್ಯ. ಮುಖ್ಯಸ್ಥರು , ಕನ್ನಡ ವಿಭಾಗ. ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ. ಮುಂಬೈ. 400098
3 thoughts on “ಸಂಶೋಧನೆಗೆ ದಿವ್ಯ ತಿರುವು ತೋರುವ ಕೃತಿ “ಸಂಶೋಧಕ ರಾಜಮಾರ್ಗ” ”
ತುಂಬಾ ಧನ್ಯವಾದಗಳು… ಡಾ.ಜಿ.ಎನ್.ಉಪಾಧ್ಯ ಅವರಿಗೆ…
ಅಜಕ್ಕಳ ಗಿರೀಶ
ವಿಮರ್ಶೆ ಚೆನ್ನಾಗಿದೆ
“ಸಂಶೋಧಕ ರಾಜಮಾರ್ಗ” ಮೂಲ ಕೃತಿಯ ಬಗ್ಗೆ, ಲೇಖಕರ ಈ ಕೆಳಗಿನ ಮಾತುಗಳು ನಿಜಕ್ಕೂ ಗಮನೀಯ:
ಸಂಶೋಧನೆಯೆನ್ನುವುದು ಒಂದು ಶೈಕ್ಷಣಿಕ ಶಿಸ್ತು.
ಸಂಶೋಧಕನ ದೃಷ್ಟಿ ಹೊಸದನ್ನು ಕಾಣುವುದರತ್ತ; ಕಾಣಿಸುವುದರತ್ತ.
– ‘ಹೊಸತು’ ಅಂದರೇನು? ನಮಗೆ ಈವರೆಗೆ ಗೊತ್ತಿರದೇ ಇದ್ದದ್ದು, ತಾನೇ? –
ಸಂಶೋಧನೆ ಎನ್ನುವುದು ಜ್ಞಾನದ ಅಂಚನ್ನು ಮತ್ತಷ್ಟು ವಿಸ್ತಾರಗೊಳಿಸುವಂಥಾದ್ದು.
ಮಾನವನ ಬದುಕು ಯಾವಾಗಲೂ ಗತಿಶೀಲವಾದದ್ದು. ಅದೊಂದು ರಿಲೇ ರೇಸಿನ ತರಹ. ನಾವು ಇಲ್ಲಿಯವರೆಗೆ ಬಂದೆವು. ನಮ್ಮ ಮುಂದಿನವರು, ಇಲ್ಲಿಗಿಂತ ಮತ್ತೂ ಮುಂದೆ ಹೋಗಿರಬೇಕಾಗಿದೆ. ಅದಕ್ಕೆ, ಸಂಶೋಧನಾ ಕ್ರಿಯೆ ಬೇಕೇ ಬೇಕು.
ಹೀಗಾಗಿ, ರಾಜ ಮಾರ್ಗದ ಪರಿಕಲ್ಪನೆ, ಈ ದಿಸೆಯಲ್ಲಿ ಮಹತ್ವದ ಹೆಜ್ಜೆ.
ಪುಸ್ತಕದ ಮೂಲ ನಿರ್ದೇಶಾಂಕಗಳ ಕಿರು ಪರಿಚಯದಲ್ಲೂ, ಉಲ್ಲೇಖಾರ್ಹ ಅಂಶಗಳಿಂದ, ಲೇಖಕರ ಆಸ್ಥೆ ಹಾಗೂ ಶಕ್ತ ಪರಿಶ್ರಮ ಫಲಿತವಾಗಿವೆ.