ಕನ್ನಡಿ ಇಲ್ಲದ ಕೋಣೆ

ಬೆಂಗಳೂರಿಗೆ ದಾಂಗುಡಿಯಿಟ್ಟ ಡೆಂಗ್ಯೂ ಎಲ್ಲೆಡೆ ಹರಡತೊಡಗಿದಾಗ ನಾನು ಅದರೆಡೆ ಲಕ್ಷ್ಯವಿಲ್ಲದವನಂತೆ ನಿರಾಳನಾಗಿದ್ದೆ. ಏಕೆಂದರೆ ನಾನಿರುವುದು ವಸತಿ ಸಮುಚ್ಛಯದ ಮೂರನೆಯ ಅಂತಸ್ತಿನಲ್ಲಿ. ಬಲ್ಲವರ ಮಾತಿನಂತೆ ನೆಲದಿಂದ ಎರಡಡಿ ಎತ್ತರಕ್ಕೆ ಮಾತ್ರ ಹಾರಬಲ್ಲ ಡೆಂಗ್ಯೂ ಸೊಳ್ಳೆ ನನ್ನನ್ನೇನು ಮಾಡೀತು ಎನ್ನುವ ಬಲವಾದ ನಂಬಿಕೆ ಬೇರೆ. ಆದರೆ ಹಗಲಿಡೀ ಮನೆಯೊಳಗೆ ಕೂರಲಾಗುತ್ತದೆಯೇ? ಏನಾದರೂ ಕೆಲಸದ ನೆಪದಲ್ಲಿ ಹೊರಗೆ ಅಡ್ಡಾಡುವುದು ಇದ್ದೇ ಇತ್ತು. `ಛೆ.. ನನಗೆ ಡೆಂಗ್ಯೂವೇ… ಸಾಧ್ಯವೇ ಇಲ್ಲ…’ ಎಂದು ಎದೆಯುಬ್ಬಿಸಿ ನಡೆದವನ ಸವಾಲನ್ನು ಸ್ವೀಕರಿಸುವಂತೆ ಅದ್ಯಾವುದೋ ಮಾಯಕದಲ್ಲಿ ಸೊಳ್ಳೆಯೊಂದು ಬಂದು ನನ್ನನ್ನು ಕಚ್ಚೇಬಿಟ್ಟಿತು.

ಕಚ್ಚಿದ್ದು ಮಾತ್ರ ತಿಳಿಯಲಿಲ್ಲ. ಅದೇನು ಹೇಳಿಕೇಳಿ ಕಚ್ಚುತ್ತದೆಯೇ? ಸಣ್ಣಗೆ ಶುರುವಾದ ತಲೆಬೇನೆ ಜೊತೆಗೆ ಅಮರಿದ ಜ್ವರ, ಸ್ವಲ್ಪ ಚಳಿ ಹೀಗೆ ನನ್ನ ಆರೋಗ್ಯದಲ್ಲಿ ಏರುಪೇರಾದಾಗ ಮೊದಲು ಸಂಶಯ ಹುಟ್ಟಿದ್ದು ಡೆಂಗ್ಯೂ ಮೇಲೆ. ಹೀಗಾಗಿ ಹತ್ತಿರದ ವೈದ್ಯರೊಬ್ಬರನ್ನು ಕಂಡಾಗ ಅವರು ತಾವು ಕೊಡುವ ಔಷಧಿಯ ಜೊತೆಜೊತೆಗೆ ರಕ್ತಪರೀಕ್ಷೆಗೆ ಬರೆದುಕೊಟ್ಟರು. ರಕ್ತಪರೀಕ್ಷೆಯಲ್ಲಿ ಆಗ ಡೆಂಗ್ಯೂ, ಮಲೇರಿಯಾದ ಯಾವ ಲಕ್ಷಣಗಳೂ ಕಂಡುಬರದಿದ್ದಾಗ ಗೆದ್ದವನಂತೆ ಬೀಗಿದೆ. ಅಲ್ಲದೆ ಡೆಂಗ್ಯೂ ಸೋಂಕನ್ನು ಸಾರುವ ರಕ್ತದಲ್ಲಿನ ಪ್ಲೆಟಲೆಟ್ಸ್ 380000 (ಪ್ಲೆಟಲೆಟ್ಸ್ ಇರಬೇಕಾದ ಪ್ರಮಾಣ 150000 ರಿಂದ 450000) ಇದ್ದುದು ನನ್ನ ನೆಮ್ಮದಿ ಮತ್ತು ನಂಬಿಕೆಯನ್ನು ಇಮ್ಮಡಿಸಿತು.

ಡೆಂಗ್ಯೂ ಇಲ್ಲ ಪೆಂಗ್ಯೂ ಇಲ್ಲ ಅಂತ ನಗುತ್ತಾ ಮನೆಗೆ ಬಂದೆ. ಡಾಕ್ಟರ್ ಕೊಟ್ಟ ಮಾತ್ರೆಗಳನ್ನು ಕಾಲಕಾಲಕ್ಕೆ ನುಂಗತೊಡಗಿದೆ.
ಮರುದಿನ ಏರಿದ ಜ್ವರವಾಗಲಿ, ತಲೆಯೇರಿ ಕುಳಿತ ತಲೆಶೂಲೆಯಾಗಲಿ ಕಡಿಮೆಯಾಗದ ಕಾರಣ ಮಗನೊಂದಿಗೆ ರಾತ್ರಿ ದೊಡ್ಡಾಸ್ಪತ್ರೆಗೆ ಸ್ಕೂಟರ್ ಏರಿ ಹೋದೆ. ಅಲ್ಲಿ ಆಗ ಮಾಡಿದ ರಕ್ತ ಪರೀಕ್ಷೆಯಲ್ಲಿ ಪ್ಲೆಟಲೆಟ್ಸ್ 150000 ಕ್ಕೆ ಇಳಿದು ಡೆಂಗ್ಯೂ ಸೋಂಕನ್ನು ಸಾಬೀತು ಪಡಿಸಿತು. ಇದ್ಯಾಕೆ ಹೀಗಾಯಿತು ಎಂದು ಕೇಳಿದರೆ ತಲೆನೋವು, ಜ್ವರ ಬಂದ ತಕ್ಷಣ ನಾವು ರಕ್ತಪರೀಕ್ಷೆಗೆ ಇಳಿದರೆ ಫೇಲಾಗುವುದೇ ಖಚಿತವಂತೆ. ಕಾರಣ ಡೆಂಗ್ಯೂ ತನ್ನ ಪ್ರಭಾವವನ್ನು ಬೀರಲು ಒಂದು ದಿನವಾದರೂ ಬೇಕು ಎನ್ನುವ ಅದರ ಮಂದಗತಿಯ ಅರಿವಾಯಿತು. `ಇದು ಡೆಂಗ್ಯೂ ಅಡ್ಮಿಟ್ ಆಗಿ ಬಿಡಿ’ ಎಂದು ಆಸ್ಪತ್ರೆಯವರು ಅವಸರಿಸಿದರು. ಅದಕ್ಕೆ ನಾವು ಮರುದಿನ ಮುಂಜಾನೆ ಬರುತ್ತೇವೆಂದು ಆಶ್ವಾಸನೆ ಕೊಟ್ಟು ಮನೆದಾರಿ ಹಿಡಿದೆವು. ಡೆಂಗ್ಯೂ ಅಂದ ಮೇಲೆ ಆಸ್ಪತ್ರೆ ಸೇರುವುದೇ ವಾಸಿ ಎಂದು ಮನೆಯವರೆಲ್ಲ ಒಮ್ಮತದ ಠರಾವನ್ನು ಮಂಡಿಸಿದ ನಂತರ ಮರುದಿನ ನನ್ನ ಪಯಣ ಮತ್ತೆ ಆಸ್ಪತ್ರೆಯೆಡೆಗೆ ಸಾಗಿತು.

ನಾನು ಆಸ್ಪತ್ರೆಗೆ ಅಡ್ಮಿಟ್ ಆಗಲು ಬಂದಿದ್ದೇನೆಂದು ತಿಳಿದ ಅಲ್ಲಿನ ಸಿಬ್ಬಂದಿ ಚುರುಕಾದರು. ತುರ್ತು ತಪಾಸಣೆಯ ಕೋಣೆಯಲ್ಲಿರುವ ಹಾಸಿಗೆಯೊಂದರ ಮೇಲೆ ನನ್ನನ್ನು ಪವಡಿಸಿ ನಾನಾ ವಿಧದ ಪರೀಕ್ಷೆಗೆ ಶುರುವಿಟ್ಟರು. ಅದಕ್ಕಿಂತ ಮೊದಲು ನನ್ನಲ್ಲಿ ಆರೋಗ್ಯ ವಿಮೆ ಇರುವುದನ್ನು ಖಚಿತಪಡಿಸಿಕೊಂಡರು. ರಕ್ತಪರೀಕ್ಷೆಯಿಂದ ಹಿಡಿದು ಇಸಿಜಿವರೆಗೆ, ತೂಕದಿಂದ ಹಿಡಿದು ಬಿಪಿ, ನನ್ನ ಎತ್ತರದವರೆಗೆ ಅಲ್ಲಿ ಎಲ್ಲವನ್ನೂ ಅಳೆದು ತೂಗಿದರು. `ಇಸಿಜಿ ಎಲ್ಲ ಬೇಕಾ…’ ಎಂದು ಕೇಳಿದವನ ಬಾಯಿಮುಚ್ಚಿಸಲು ಅವರ ವೈದ್ಯಕೀಯ ಪದಗಳನ್ನೆಲ್ಲ ಬಳಸಿ ನನ್ನನ್ನು ಮೂಕನನ್ನಾಗಿ ಮಾಡಿದರು. ಆಗ ಬಂದ ರಕ್ತಪರೀಕ್ಷೆಯಲ್ಲಿನ ಪ್ಲೆಟಲೆಟ್ಸ್ ಸಂಖ್ಯೆ ನನ್ನ ದುರಾದೃಷ್ಟಕ್ಕೆ ಗಣನೀಯವಾಗಿ 120000 ಕ್ಕೆ ಇಳಿದಿತ್ತು. ಇದು ಮತ್ತೇನಲ್ಲ ಡೆಂಗ್ಯೂ ಎಂದು ಅಲ್ಲಿದ್ದವರೆಲ್ಲ ಒಮ್ಮತದ ನಿರ್ಧಾರಕ್ಕೆ ಬಂದಾಗ ನಾನು `ನನಗೂ ಡೆಂಗ್ಯೂ ಬಂತೇ…’ ಎನ್ನುವ ಅಚ್ಚರಿಯಲ್ಲಿ ಮಿಳಿತವಾದ ಹತಾಶೆಯೊಂದಿಗೆ ನಿಡುಸುಯ್ದೆ.

ಅಡ್ಮಿಟ್ ಆದ ನನ್ನನ್ನು ಮುಂದೆ ಇತರ ರೋಗಿಗಳಿರುವ ಸಾಮಾನ್ಯ ವಾರ್ಡಿಗೋ ಇಲ್ಲಾ ನಮ್ಮ ಅನುಕೂಲಕ್ಕೆ ತಕ್ಕಂತಿರುವ, ಹೆಚ್ಚಿನ ಸೌಲಭ್ಯಗಳಿರುವ ಕೋಣೆಗೋ ರವಾನಿಸುವ ಸಿದ್ಧತೆ ನಡೆಯಿತು. ಸಾಮಾನ್ಯ ವಾರ್ಡ್ ಬೇಡವೆಂದ ನಾನು ಇಬ್ಬರು ರೋಗಿಗಳಿರುವ ಸ್ಪೆಶಲ್ ವಾರ್ಡ್‍ನ್ನು ಆರಿಸಿಕೊಂಡೆ. ತಪಾಸಣಾ ಕೋಣೆಯಲ್ಲಿ ಆಗ ನನಗೆ ನಾನುಟ್ಟ ಬಟ್ಟೆಯನ್ನು ಬಿಚ್ಚಿಟ್ಟು ಆಸ್ಪತ್ರೆಯ ಗವನು ಹಾಕುವಂತೆ ಹೇಳಲಾಯಿತು. ಇಬ್ಬರು ಸಿಬ್ಬಂದಿ ಗಾಲಿಕುರ್ಚಿಯೊಂದನ್ನು ತಂದು ನಿಲ್ಲಿಸಿ ರಥವೇರು ಅನ್ನುವ ಭಾವದಲ್ಲಿ ನನ್ನೆದುರು ನಿಂತುಬಿಟ್ಟರು. ನಾನು ನಡೆದುಕೊಂಡೇ ವಾರ್ಡಿಗೆ ಹೋಗಬಲ್ಲೆ ಎನ್ನುವ ಮಾತು ಅವರ ಅಲ್ಲಿಯ ನಿಯಮಗಳ ಎದುರು ಗಾಳಿಯಲ್ಲಿ ತೇಲಿಹೋಯಿತು.

ಗಾಲಿಕುರ್ಚಿಯಲ್ಲಿ ಕೂತವನ ಪಾದಗಳನ್ನು ನಾಜೂಕಾಗಿ ಎತ್ತಿ ಕೆಳಗೆ ಬಿಡಿಸಿದ ಪಾದಾಸನಗಳ ಮೇಲೆ ಇರಿಸಿದ ಸಹಾಯಕ ಸಿಬ್ಬಂದಿ ಜಾಗರೂಕತೆಯಿಂದ ಗಾಲಿಕುರ್ಚಿಯನ್ನು ತಳ್ಳುತ್ತಾ, ಲಿಫ್ಟ್‍ನಲ್ಲಿ ಏರಿಸುತ್ತಾ ಯಾವುದೋ ಒಂದು ವಾರ್ಡಿನಲ್ಲಿ ತಂದಿಳಿಸಿದರು. ನೋಡುತ್ತೇನೆ… ಅಲ್ಲಿ ಹಾಸ್ಟೆಲ್ಲಿನಲ್ಲಿರುವಂತೆ ಒತ್ತೊತ್ತಾಗಿ ನಾಲ್ಕು ಬೆಡ್‍ಗಳಿದ್ದವು. ಸಂವಹನದ ಕೊರತೆಯಿಂದ ಆದ ಪ್ರಮಾದ ಇದು ಎಂದರಿತ ನಾನು, ನನ್ನೊಡನೆ ಬಂದ ಮಗ `ನಾವು ಆರಿಸಿದ ವಾರ್ಡ್ ಇಂತದ್ದಲ್ಲ’ ಎಂದು ಹೇಳಬೇಕಾಯಿತು. ಇಬ್ಬರು ರೋಗಿಗಳಿರುವ ಕೋಣೆಗಳು ಸದ್ಯಕ್ಕೆ ಖಾಲಿ ಇಲ್ಲ. ಬೇಕಾದರೆ ಒಬ್ಬರೇ ಇರುವಂತಹ ಸೂಪರ್ ಸ್ಪೆಶಲ್ ಕೋಣೆಯನ್ನು ತೆಗೆದುಕೊಳ್ಳಬಹುದೆನ್ನುವ ಸಲಹೆ ಬಂತು. ನಾನು ಬಂದಿಳಿದ ಕೋಣೆಯಲ್ಲೊಮ್ಮೆ ಕಣ್ಣಾಡಿಸಿದೆ. ಅಲ್ಲಿ ರೋಗಿಯ ಜೊತೆ ಇರುವವರಿಗೆ ಮಲಗಲು ಕಿರುಮಂಚ ಬಿಡಿ ಕೂರಲೂ ಒಂದು ಕುರ್ಚಿ ಸಹ ಇರಲಿಲ್ಲ. ರೋಗಿಯನ್ನು ನೋಡಿಕೊಳ್ಳಲು ಇರುವ ಮನೆಯವರು ಬೇರೆ ಗತಿಯಿಲ್ಲದೆ ರೋಗಿಯ ಹಾಸಿಗೆಯ ಮೇಲೆಯೇ ಕೂರಬೇಕಾಗಿತ್ತು. ನಿಯಮಿತವಾಗಿ ತಪಾಸಣೆಗೆ ಬರುವ ಡಾಕ್ಟರರಿಗೆ ರೋಗಿ ಯಾರು, ನೋಡಲು ಇರುವವರು ಯಾರು ಎನ್ನುವ ಗೊಂದಲ ಖಂಡಿತಾ ಇದರಿಂದ ಸೃಷ್ಟಿಯಾಗಬಹುದೆನ್ನುವ ತಿಳಿಹಾಸದ ಮಿಂಚೊಂದು ನನ್ನ ತಲೆಯಲ್ಲಿ ಮಿಂಚಿ ಮಾಯವಾಯಿತು. ಇಷ್ಟೆಲ್ಲ ಹಣ ಕೀಳುವವರು ಕನಿಷ್ಠ ಸವಲತ್ತೂ ಕೊಡದಿದ್ದರೆ ಹೇಗೆ ಅನಿಸಿತು. ನಮ್ಮ ಅನಿಸಿಕೆಗಳನ್ನು ಪರಾಂಬರಿಸಲು ಅವರೇನು ನಮ್ಮ ಒಡಹುಟ್ಟಿದವರೇ? ದುಡ್ಡು ಮಾಡಲು ಕೂತವರು ಎನ್ನುವ ವಾಸ್ತವವನ್ನು ನುಂಗಬೇಕಾಯಿತು.

ಸ್ಪೆಶಲ್ ಕೋಣೆಯ ದಿನದ ಬಾಡಿಗೆಯೋ ತೀರ ದುಬಾರಿ. ಏನೆಲ್ಲ ಸವಲತ್ತುಗಳಿವೆ ಎಂದು ಕೇಳಿದಕ್ಕೆ ಟಿವಿ ಇದೆ, ಏಸಿ ಇದೆ, ರೋಗಿಯನ್ನು ನೋಡಿಕೊಳ್ಳುವವರಿಗೆ ಕೂರಲು, ಮಲಗಲು ಸಣ್ಣ ಮಂಚ ಇದೆ, ಅಟ್ಯಾಚ್ಡ್ ಬಾತ್‍ರೂಂ ಇದೆ, ಗಳಿಗೆಗೊಮ್ಮೆ ಬಂದು ನೋಡುವ ನರ್ಸ್‍ಗಳಿರ್ತಾರೆ, ದಿನಕ್ಕೆರಡು ಬಾರಿ ಬಂದು ಹೋಗುವ ಡಾಕ್ಟರರಿರುತ್ತಾರೆ… ಹೀಗೆ ಅದರ ಬೆಲೆಯಂತೆ ಉದ್ದನೆಯ ಪಟ್ಟಿಯ ವಾಚನವಾಯಿತು. ಬೇರೆ ಗತಿಯಿಲ್ಲದೆ ನಾನು ಅದನ್ನೇ ನೆಚ್ಚಿಕೊಳ್ಳುವಂತಾಯಿತು. ಅಲ್ಲಿಂದ ಮತ್ತೆ ಗಾಲಿಕುರ್ಚಿ ಪಯಣ. ನಾನು ಸೇರಬೇಕಾದ ಸೂಪರ್ ಸ್ಪೆಶಲ್ ಕೋಣೆಗೆ ಅಂತೂ ಕೊನೆಗೆ ಬಂದಿಳಿದಾಯಿತು. ಆಸ್ಪತ್ರೆಯ ಹೆಚ್ಚಿನ ಬೆಡ್‍ಗಳು ಡೆಂಗ್ಯೂ ರೋಗಿಗಳಿಂದ ತುಂಬಿದ್ದವು. ಹೀಗಾಗಿ ಅವರ ಸುಗ್ಗಿಯ ಕಾಲದಲ್ಲಿ ನಮಗೆ ಬೇಕಾದ ವಾರ್ಡ್ ಸಿಗದಿರುವುದು ಅಚ್ಚರಿಯೆನಿಸಲಿಲ್ಲ. ಕೊರೊನಾ ಕಾಲದ ಭೀಕರತೆ ಮತ್ತೊಮ್ಮೆ ನನ್ನ ಮನಸ್ಸಿನಲ್ಲಿ ಬೇಡವೆಂದರೂ ಸುಳಿದು ಹೋಯಿತು.

ನನ್ನ ಸೂಪರ್ ಸ್ಪೆಶಲ್ ಕೋಣೆಯಲ್ಲೆಲ್ಲ ಒಮ್ಮೆ ಕಣ್ಣಾಡಿಸಿದೆ. ಅವರು ಹೇಳಿದಂತೆ ಎಲ್ಲವೂ ಕಣ್ಣೆದುರು ಕಾಣುತ್ತಿದ್ದವು. ಬಾತ್‍ರೂಂ ಸ್ವಚ್ಛತೆಯ ದೃಷ್ಟಿಯಿಂದ ಪರವಾಗಿಲ್ಲ ಅನಿಸಿತು. ಫ್ಯಾನ್ ಇದ್ದುದರಿಂದ ಏಸಿ ಮುಟ್ಟಲು ಹೋಗಲಿಲ್ಲ. ಏಸಿ ಬೇಕೆಂದರೂ ಅದನ್ನು ನಿಯಂತ್ರಿಸುವ ರಿಮೋಟ್ ಅಲ್ಲಿರಲಿಲ್ಲ ಅಲ್ಲದೆ ಅದು ಸುಸ್ಥಿತಿಯಲ್ಲಿ ಇರುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ. ಇದೇ ಗತಿ ಟಿವಿಗೂ ಆಗಿತ್ತು. ಅದರ ಸಂಪರ್ಕ ತಂತುಗಳನ್ನೆಲ್ಲ ಬಗೆದ ಕರುಳಿನಂತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಕಿತ್ತಿಡಲಾಗಿತ್ತು. ಅದನ್ನು ಹಚ್ಚುವ ರಿಮೋಟ್‍ಗಳೂ ಅಲ್ಲಿ ಕಾಣಿಸಲಿಲ್ಲ. ರೋಗದ ಚಿಂತೆಯಲ್ಲಿರುವವನಿಗೆ ಟಿವಿ ನೋಡುವ ಮನಸ್ಸಾದರೂ ಇರುತ್ತದೆಯೇ? ಅವರ ಜೊತೆಗಿರುವವರಿಗೆ ರೋಗಿಯದ್ದೇ ಚಿಂತೆಯ ಜೊತೆಗೆ ಪಾಲನೆಯ ಕೆಲಸವಾದರೆ ಟಿವಿ ನೋಡುವವರ್ಯಾರು? ಹೀಗಾಗಿ ಇವೆಲ್ಲ ಹೀಗೇಕೆ ಎಂದು ಕೇಳುವ ಗೋಜಿಗೂ ನಾವು ಹೋಗಲಿಲ್ಲ. ಕೋಣೆಗೆ ಬಂದಾಕ್ಷಣದಿಂದ ಹಾಸಿಗೆಯ ಮೇಲೆ ಮಲಗಿಸಿ ಏರಿಸಿದ ಡ್ರಿಪ್ ಹನಿಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ದೇಹದೊಳಗೆ ಇಳಿಯತೊಡಗಿದ್ದವು. ನಾನು ಬಾತ್‍ರೂಂಗೆ ಹೋಗುವಾಗಷ್ಟೇ ಅದಕ್ಕೆ ವಿರಾಮ. ಅಲ್ಲಿ ಸೇರಿಕೊಂಡ ನಂತರ ಬೇಕು ಬೇಡದ ಎಲ್ಲ ಪರೀಕ್ಷೆಗಳನ್ನು ನನ್ನ ಕೋಲೆಬಸವನ ರೀತಿಯ ಒಪ್ಪಿಗೆ ಪಡೆದು ಮಾಡಲಾಯಿತು.

ದಿನಕ್ಕೆರಡು ಬಾರಿ ನನ್ನ ರಕ್ತದಲ್ಲಿನ ಪ್ಲೆಟಲೆಟ್ಸ್‍ನ ಪ್ರಮಾಣವನ್ನು ಪರೀಕ್ಷಿಸಲಾಗುತ್ತಿತ್ತು. ಜಿದ್ದಿಗೆ ಬಿದ್ದಂತೆ ಅದು ದಿನದಿಂದ ದಿನಕ್ಕೆ ಇಳಿಯುತ್ತಾ 90000 ಮುಟ್ಟಿತು. ಆಗ ನೋಡಿದ ಲೇಡಿ ಡಾಕ್ಟರರೊಬ್ಬರು `ನೀವೇನೂ ಗಾಬರಿಯಾಗಬೇಡಿ. ನಮ್ಮಲ್ಲಿ ಪ್ಲೆಟಲೆಟ್ಸ್ 15000 ಕ್ಕೆ ಇಳಿದ ರೋಗಿಗಳೂ ಇದ್ದಾರೆ’ ಅಂತ ಅಪಾಯದ ಮಟ್ಟವಿನ್ನೂ ಮುಟ್ಟಿಲ್ಲ ಹೇಳಿ ಧೈರ್ಯ ತುಂಬಿದರು. ಮುಂದಿನ ದಿನಗಳಲ್ಲಿ ಇದು ಇಳಿಯುತ್ತಾ ಹೋದರೆ ಗತಿಯೇನು ಎನ್ನುವ ಆತಂಕ ನನ್ನೊಳಗೆ ಸಣ್ಣಗೆ ಮೂಡತೊಡಗಿತು. `ಚಿಂತೆ ಮಾಡಬೇಡಿ. ಒಮ್ಮೆ ಪ್ಲೆಟಲೆಟ್ಸ್ ಏರಲು ತೊಡಗಿದರೆ ಮತ್ತೆ ಇಳಿಯುವುದಿಲ್ಲ ಬಿಡಿ’ ಅಂತನೂ ಸಮಾಧಾನಿಸಿದರು.

ಇದು ಸಾಕಾಗಿಲ್ಲ ಎಂಬಂತೆ `ನೋಡಿ ತಪ್ಪಿಯೂ ಪಪ್ಪಾಯಿ ರಸ ತೆಗೆದುಕೊಳ್ಳಬೇಡಿ. ಅದು ಕಹಿಯ ಜೊತೆಗೆ ನಿಮಗೆ ವಾಂತಿಯ ಸಮಸ್ಯೆಯನ್ನೂ ತಂದೊಡ್ಡಬಹುದು’ ಎನ್ನುವ ಎಚ್ಚರಿಕೆಯನ್ನೂ ಕೊಟ್ಟರು. ವೈದ್ಯರು ಹೇಳಿದ್ದನ್ನು ಮೀರಲಾದೀತೆ?. ಹಾಗಾಗಿ ಕ್ಷಣವೂ ಆ ಕಡೆ ಗಮನಹರಿಸದೆ ನಿಶ್ಚಿಂತೆಯಲ್ಲಿದ್ದೆ. ಆದರೆ ನನ್ನ ಆರೋಗ್ಯ ವಿಚಾರಿಸಿ ಬರುವ ಕರೆಗಳೆಲ್ಲದರ ಕೊನೆಯಲ್ಲಿ `ಪಪ್ಪಾಯಿ ರಸ ಸೇವಿಸಿ. ಪ್ಲೆಟಲೆಟ್ಸ್ ಏರುತ್ತೆ’ ಎನ್ನುವ ಪುಕ್ಕಟೆ ಸಲಹೆ ತೂರಿಬರತೊಡಗಿದಾಗ ಮನಸ್ಸು ಅತ್ತ ವಾಲತೊಡಗಿತು. ಕರೆ ಮಾಡಿದವರೆಲ್ಲರ ಸ್ವಾನುಭವವನ್ನು ಅವರು ಹೇಳುತ್ತಿರುವಾಗ ಅದನ್ನು ತಿರಸ್ಕಾರದಿಂದ ಪಕ್ಕಕ್ಕೆ ಸರಿಸಿ ಕೂರಲು ಸಾಧ್ಯವಾಗಲಿಲ್ಲ. ಪಪ್ಪಾಯಿ ರಸ ಕಹಿಯಾದರೇನಂತೆ ಕುಡಿದೇ ಬಿಡೋಣ ಎನ್ನುವ ನಿರ್ಧಾರದೊಂದಿಗೆ ಡಾಕ್ಟರರಿಗೆ ತಿಳಿಯದ ರೀತಿಯಲ್ಲಿ ಗೌಪ್ಯವಾಗಿ ಮುಂಜಾನೆ ಸಂಜೆ ಒಂದೆರಡು ಚಮಚದಂತೆ ರಸ ಕುಡಿತ ಆರಂಭವಾಯಿತು. ಅದರ ಪ್ರಭಾವ ಎಷ್ಟಿತ್ತೆಂದರೆ ಪ್ಲೆಟಲೆಟ್ಸ್‍ಗಳ ಸಂಖ್ಯೆ ಭೂಮಿಬಿಟ್ಟು ಮೇಲೇರುವ ವಿಮಾನದಂತೆ ಗಳಿಗೆಯಿಂದ ಗಳಿಗೆಗೆ ಏರತೊಡಗಿತು. ಮನೆಯಲ್ಲಿಯೇ ಕೂತು ಪಪ್ಪಾಯಿ ರಸ ಸೇವಿಸಿದ್ದರೆ ಖರ್ಚಿಲ್ಲದೆ ಡೆಂಗ್ಯೂ ಓಡಿಸಬಹುದಿತ್ತು ಎನ್ನುವ ಯೋಚನೆಯೂ ಆಗ ಬಾರದೆ ಇರಲಿಲ್ಲ.

ಹಗಲಿನಲ್ಲಿ ನನ್ನ ಜೊತೆ ಇರುತ್ತಿದ್ದ ಮಗ ಒಂದು ದಿನ `ಈ ಕೋಣೆಯಲ್ಲಿ ಮುಖ ನೋಡಲು ಒಂದು ಕನ್ನಡಿಯೂ ಇಲ್ಲ’ ಎಂದು ರಾಗವೆಳೆದ. ಅಲ್ಲಿಯ ತನಕ ಆ ಕೊರತೆ ನನ್ನನ್ನು ಬಾಧಿಸಿರಲಿಲ್ಲ. ಯಾಕೆಂದರೆ ಆಸ್ಪತ್ರೆ ಸೇರಿದ ನಂತರ ಕ್ಷೌರ ಕಾಣದ ಮುಖ, ಗುಳಿಬಿದ್ದ ಕಣ್ಣುಗಳು, ನಿಸ್ತೇಜವಾದ ಮುಖ, ಸೊರಗಿದ ದೇಹ ನೋಡುವ ಆತುರ ನನಗಿರಲಿಲ್ಲ. ಈ ಕಾರಣಕ್ಕೆ ಕನ್ನಡಿ ಇಟ್ಟಿರಲಿಕ್ಕಿಲ್ಲ ಬಿಡು ಅಂದೆ. ಕನ್ನಡಿಯಲ್ಲಿ ಮುಖ ಕಂಡು ರೋಗ ಇನ್ನಷ್ಟು ಬಿಗಡಾಯಿಸುವುದು ಬೇಡವೆನ್ನುವ ತರ್ಕ ಅವರದ್ದಿರಬಹುದು. ಕನ್ನಡಿ ನೋಡಿ ಮಾನಸಿಕವಾಗಿ ರೋಗಿ ಕೊರಗುವುದು ಬೇಡವೆನ್ನುವ ಸಮಜಾಯಿಷಿಯೂ ಇರಬಹುದು. ಒಟ್ಟಿನಲ್ಲಿ ಅಲ್ಲಿ ಕನ್ನಡಿ ಇರಲಿಲ್ಲ. ರೋಗಿಯನ್ನು ನೋಡಿಕೊಳ್ಳುವ ವ್ಯಕ್ತಿ ಕನ್ನಡಿಯಂತೆ ಆ ಸಂದರ್ಭದಲ್ಲಿ ರೋಗಿಯ ಯಾವ ದೈಹಿಕ ಅವಲಕ್ಷಣಗಳನ್ನೂ ಮಾತಿನಲ್ಲಿ ಬಿಂಬಿಸಲಾರ. ಹಾಗೆ ಬೇಕಾದರೆ ಮೊಬೈಲ್‍ನ ಸೆಲ್ಫೀ ಸ್ಕ್ರೀನ್ ನೋಡುತ್ತಾ ತಲೆ ಬಾಚಿಕೊಳ್ಳಬಹುದು, ಮುಖ ಮೇಕಪ್ ಮಾಡಿಕೊಳ್ಳಬಹುದು. ಕೋಣೆಯೊಳಗೊಂದು ಕನ್ನಡಿ ಇಟ್ಟರೆ ಅದು ಆಸ್ಪತ್ರೆ ಆಗಲಾರದು ಬದಲು ವಸತಿಗೃಹವಾಗಬಹುದು ಎನ್ನುವ ಭಾವವೂ ಆಸ್ಪತ್ರೆಯವರನ್ನು ಕಾಡಿರಬಹುದು!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ಕನ್ನಡಿ ಇಲ್ಲದ ಕೋಣೆ”

  1. JANARDHANRAO KULKARNI

    ವಾವ್ ಸೂಪರ್. ‘ ಕನ್ನಡಿ ಇಲ್ಲದ ಕೋಣೆ ‘ ಲಘು ಬರಹ ಚೆನ್ನಾಗಿದೆ. ಆಸ್ಪತ್ರೆಯ ಅವಸ್ತೆ ಮತ್ತು ವ್ಯವಸ್ತೆಯ ಬಗ್ಗೆ ವಿವರವಾಗಿ ವಿಡಂಬನಾತ್ಮಕವಾಗಿ ಸೊಗಸಾಗಿ ಚಿತ್ರಿತವಾಗಿದೆ. ಅಭಿನಂದನೆಗಳು ಧರ್ಮಾನಂದ ಶಿರ್ವ ಅವರಿಗೆ

  2. Raghavendra Mangalore

    ಸ್ಟಾರ್ ಆಸ್ಪತ್ರೆಗಳು ತಮ್ಮ ಅವಶ್ಯಕತೆಗೆ ತಕ್ಕಂತೆ ತಮ್ಮಲ್ಲೇ ರಕ್ತ ಪರೀಕ್ಷೆ ( ಅದರಲ್ಲಿ ಪ್ಲೇಟೆಟ್ ಕಡಿಮೆ ಬರುವ ತಂತ್ರಗಾರಿಕೆ!) ಮಾಡಿಸುತ್ತಾರೆ. ಇನ್ನು ಇನ್ಸೂರೆನ್ಸ್ ಇದೆಯಂದರೆ ಅವರಿಗೆ ದೊಡ್ಡ ಹಬ್ಬ. ಅದೂ ಇದೂ ಎಂದು ನೂರೆಂಟು ಟೆಸ್ಟ್ ಮಾಡಿಸಿ ಬೆಟ್ಟದಷ್ಟು ಬಿಲ್ ಸಲ್ಲಿಸುತ್ತಾರೆ. ದೊಡ್ಡ ದೊಡ್ಡ ಆಸ್ಪತ್ರೆಗಳ ಚಾಕಚಕ್ಯತೆಯನ್ನು ಚೆನ್ನಾಗಿ ತಿಳಿಸಿದ್ದೀರಿ. ವಿಡಂಬನೆ ಶೈಲಿ ಹಿಡಿಸಿತು.

  3. ಮ.ಮೋ.ರಾವ್ ರಾಯಚೂರು

    ‘ಕನ್ನಡಿ ಇಲ್ಲದ ಕೋಣೆ’ ಲಹರಿಯಿಂದ ಕೊಡಿದೆ. ಅಸ್ಪತ್ರೆಯವರು ಅಡ್ಮಿಟ್ ಆಗಲು ಬಂದ ರೋಗಿಯನ್ನು ಮುಖ್ಯ ಅತಿಥಿಯನ್ನು ಸ್ವಾಗತಿಸಿ ಸತ್ಕರಿಸುವಂತೆ ಉಪಚರಿಸಿದ್ದು.ಆಸ್ಪತ್ರೆಯ ಹಿತಾಸಕ್ತಿಯನ್ನು ತಿಳಿಸಿತ್ತದೆ. ತಾನಾಗಿಯೇ ಆಸ್ಪತ್ರೆಯಂಬ ಚಕ್ರವ್ಯೂಹದಲ್ಲಿ ಪ್ರವೇಶಿಸಿದ ರೋಗಿಯನ್ನು ಅದೃಶ್ಯವಾಗಿ ಪಪ್ಪಾಯಿಯ ರಸ ರಕ್ಷಿಸಿದ್ದು, ಅಲ್ಲಿಂದ ಹೊರಬರಲು ಸಹಕಾರಿಯಾದದ್ದು ಊಹಿಸಬಹುದಾಗಿದೆ. ಶ್ರೀ. ಧರ್ಮಾನಂದ ಶಿರ್ವರ ‘ಸ್ವಗತ’ ಸರಳ, ಸುಂದರ. ಅಭಿನಂದನೆಗಳು.

  4. ಶೇಖರಗೌಡ ವೀ ಸರನಾಡಗೌಡರ್

    ಅಬ್ಬಾ…! ಡೆಂಗ್ಯೂದ ಕರಾಳ ಚಿತ್ರಣ, ಲೂಟಿಮಾಡುವ ಹೈಟೆಕ್ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ಸೊಗಸಾಗಿ ಬರೆದಿರುವಿರಿ. ಅಭಿನಂದನೆಗಳು.

  5. ಬಿ.ಟಿ.ನಾಯಕ್.

    ಅಕ್ಷರಶಃ ಇಲ್ಲಿ ಅನುಭಾವಿಕ ಶಬ್ದಗಳು ಮೂಡಿವೆ. ಲೇಖಕರು ತಮ್ಮ ಅನುಭವಕ್ಕೆ ತಕ್ಕಂತೆ ಇಲ್ಲಿ ಬಿಡಿ ಬಿಡಿಯಾಗಿ ಮೂಡಿಸಿದ್ದಾರೆ. ಅವರು ಶಬ್ದಗಳ ಪ್ರಯೋಗವನ್ನು ಸಮಂಜಸವಾಗಿ ಬಳಸಿದ್ದಾರೆ. ಅಲ್ಲದೇ, ಅವು ಆಕರ್ಷಣೀಯ ಮತ್ತು ಮಾನ್ಯ ಕೂಡಾ. ಲೇಖಕರಿಗೆ ಅಭಿನಂದನೆಗಳು.🌹

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter