ಸಾ.ದಯಾ ಅವರ ಈ ಗ್ರಂಥದಲ್ಲಿ ನಲುವತ್ತು ಅಂಕಣ ಬರಹಗಳಿದ್ದು ಇನ್ನೂರ ಎಂಭತ್ತಾರು ಪುಟಗಳಲ್ಲಿ ಮುಂಬೈಯ ಬಹುಮುಖೀ ಇತಿಹಾಸವನ್ನು ಕಟ್ಟಿಕೊಡಲಾಗಿದೆ. ಈ ಮಹತ್ವದ ನಗರ ಎಲ್ಲರ ಆಕರ್ಷಣೆಯ ಕೇಂದ್ರವೂ ಹೌದು.
ಈ ಮೊದಲು ಮುಂಬಯಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ವಿವರಗಳು ‘ಮುಂಬೈ ಗೆಜೆಟಿಯರ್’ನಲ್ಲಿ ಪ್ರಕಟಗೊಂಡಿದ್ದು ಆನಂತರ ವಿಭಿನ್ನ ನೆಲೆಗಳಲ್ಲಿ ಈ ನಗರದ ಬಗೆಗಿನ ಅಧ್ಯಯನಗಳೂ ನಡೆದಿವೆ. ಬಹುಶಃ ಭಾರತದ ಯಾವ ನಗರವೂ ಇಷ್ಟು ಮಹತ್ತರವಾದ ಪಲ್ಲಟಗಳಿಗೆ ಸಾಕ್ಷಿಯಾಗಿಲ್ಲ; ಎಂದರೆ ಇದು ಧಾರ್ಷ್ಟ್ಯದ ಮಾತಾಗದು. ಇಲ್ಲಿ ಮೊಗೆದಷ್ಟೂ ವಿಷಯಗಳಿವೆ; ಮುಖ್ಯ ಕಾರಣ, ಭಾರತದ ಹಾಗೂ ಪ್ರಪಂಚದ ವಿವಿಧೆಡೆಗಳಿಂದ ಜನ, ಮುಂಬಯಿ ನಗರಕ್ಕೆ ವಲಸೆ ಬಂದು ಬದುಕು ಕಟ್ಟಿಕೊಂಡದ್ದೇ ಆಗಿದೆ. ಇಲ್ಲಿಯ ರಾತ್ರಿ ಶಾಲೆಗಳ ಇತಿಹಾಸವಂತೂ ಅದ್ವಿತೀಯ; ಸಾಟಿಯಿಲ್ಲದ ವ್ಯಾಪಾರ, ಉದ್ದಿಮೆಗಳು, ಸಂಘಟನೆಗಳು ಈ ನಗರಕ್ಕೆ ಬಣ್ಣ ತುಂಬಿದ್ದರಿಂದ ಅದು ಆಕರ್ಷಣೆಯ ಕೇಂದ್ರವಾಗಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಆದ್ದರಿಂದ ಇದೊಂದು ಮಹತ್ವದ, ಹಾಗೂ ಉಪಯುಕ್ತ ಗ್ರಂಥವೆನಿಸಿದೆ. ಮುಂದಿನ ಅಧ್ಯಯನಕಾರರಿಗೂ ಇದು ಮಹತ್ವದ ಕೈಪಿಡಿ.
ಇಡಿ ಪ್ರಪಂಚವನ್ನೆ ತಲ್ಲಣಗೊಳಿಸಿದ ಕೊರೋನಾ ಮಹಾಮಾರಿ ರೋಗವೊಂದು ವ್ಯಾಪಿಸಿಕೊಂಡಾಗ, ಆಗ ದೊರೆತ ಬಿಡುವಿನಲ್ಲಿ ಮಂಗಳೂರಿನ ‘ವಾರ್ತಾಭಾರತಿ’ ಪತ್ರಿಕೆಗೆ, ತಾನು ಅಂಕಣ ಬರಹಗಳನ್ನು ಬರೆದುದಾಗಿ ಸಾ.ದಯಾ ಹೇಳುತ್ತಾರೆ. ಈ ಬರಹಗಳು ಅಧಿಕೃತವೆನಿಸಲು ಅವರು ಆಯಾಯಾ ಕ್ಷೇತ್ರಗಳ ಪರಿಣಿತರನ್ನು ಭೇಟಿಯಾಗಿ ಸಂದರ್ಶನ ನಡೆಸಿ, ವಿಷಯಗಳನ್ನು ಕಲೆಹಾಕಿದ್ದಾರೆ. ಆದ್ದರಿಂದ ಇಲ್ಲಿರುವುದು ಸತ್ಯಾಂಶಗಳೇ ಹೊರತು ಊಹನೆಯಲ್ಲ. ಅವರೇ ಹೇಳುವಂತೆ, “ಅಸಂಗತ ಬದುಕಿಗೆ ರೂಪಕವಾಗಿರುವ ಮುಂಬಯಿ ನಗರ – ಮರಾಠೀ ಮಾನುಸ್ ಗಳ ನಡುವೆ ಸಾಮರಸ್ಯ ಬೆಸೆದು ಮೆರೆಯುತ್ತಿರುವ ಮುಂಬಯಿ ನಗರದ ಹೊಲಸಿನಲ್ಲೂ ತಾವರೆಯಂತಹ ಮನಸ್ಸುಗಳು ಅರಳುತ್ತವೆ”. ಮರಾಠಿ ಪೋರ ನಿತಿನ್ ಜಾದವ್, ಅಪ್ಪಟ ಯಕ್ಷಗಾನ ಕಲಾವಿದನಾಗಿ ಮೆರೆಯುತ್ತಿರುವುದಲ್ಲದೆ ತುಳು ರಂಗಭೂಮಿಯಲ್ಲೂ ಮಿಂಚುವುದೆಂದರೆ ಇದು ಈ ನಗರದಲ್ಲಿ ಮಾತ್ರ ಸಾಧ್ಯವಾಗುವಂತಹುದು. ಮರಾಠಿಯ ಮುರಳೀಧರ ಶಿಂಗೋಟೆ, ಮುಂಬಯಿಯ ಜನಪ್ರಿಯ ಪತ್ರಿಕೆ “ಕರ್ನಾಟಕ ಮಲ್ಲ”ವನ್ನು ಜೀವಂತವಾಗಿ ಇಟ್ಟಿದ್ದಾರೆ. ಲೇಖಕರ ಮಾತಿನಲ್ಲೇ ಹೇಳುವುದಿದ್ದರೆ – “ಮುಂಬೈ ನಗರದ ಮೈಯನ್ನು ಸವರುತ್ತ ಒಂದು ಸುತ್ತು ಬಂದರೆ, ಕನ್ನಡದ ಕಂಪು ಎಲ್ಲೆಂದರಲ್ಲಿ ಹರಡಿರುವುದು ನಮ್ಮ ಗಮನಕ್ಕೆ ಬರುತ್ತದೆ”. ಇದು ಅಕ್ಷರಶಃ ಸತ್ಯ. “ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ”.
ಮುಂಬೈಯ ಶೈಕ್ಷಣಿಕ ಸಂಘಟನೆಗಳು, ರಾತ್ರಿ ಶಾಲೆಗಳು, ಜಾತೀಯ ಸಂಘಗಳು, ದೈವಾರಾಧನೆ, ಪತ್ರಕರ್ತರ ಸಂಘ, ಪ್ರಕಾಶನ ಸಂಸ್ಥೆಗಳು, ಧಾರ್ಮಿಕ ಚಟುವಟಿಕೆಗಳು, ಕ್ರೀಡಾಕ್ಷೇತ್ರ, ರಾಜಕೀಯ ಚಟುವಟಿಕೆಗಳು, ಕ್ರೆಡಿಟ್ ಸೊಸೈಟಿಗಳು, ಕಾರ್ಮಿಕ ಚಳುವಳಿ, ಕಲಾಕ್ಷೇತ್ರ, ಮನಪಾ ಶಾಲೆಗಳು, ಕನ್ನಡಿಗ ನ್ಯಾಯವಾದಿಗಳು, ಕನ್ನಡ ವಿದ್ಯಾಪೀಠ – ಮುಂಬಯಿ ವಿ. ವಿ. – ಮುಂತಾದ ವಿವರಗಳ ಜೊತೆಗೆ ಕನ್ನಡಿಗ ಪಾನ್ ವಾಲಾಗಳೂ ಮಿಂಚಿದ್ದಾರೆ. ವಿಶೇಷವೆಂದರೆ ಈ ಗ್ರಂಥದಲ್ಲಿ ‘ಹಿಜ್ರಾ’ಗಳ ಬಗೆಗಿನ ಚಿಂತನೆಯೂ ಇದೆ. ಡಾಕ್ಟರೇಟ್ ಪಡೆದ ‘ಮಲ್ಲಿಕಾ’ – ರವರ ಹೇಳಿಕೆಗಳು ಕುತೂಹಲ ಹುಟ್ಟಿಸುತ್ತವೆ.
ಓದುಗರಿಗೆ ಮುದನೀಡುವ ಇನ್ನೊಂದು ಸಂಗತಿಯೆಂದರೆ ಮುಂಬೈ ಕನ್ನಡಕ್ಕೆ ಮುಸ್ಲಿಮರ ಕೊಡುಗೆ (ಮೂರು ಲೇಖನಗಳು) ಮತ್ತು ಕ್ರೈಸ್ತರ ಕೊಡುಗೆ (ಮೂರು ಲೇಖನಗಳು) – ಇವು ಗ್ರಂಥದ ಕೊನೆಯಲ್ಲಿ ದಾಖಲಾಗಿದ್ದು, ವಿಶೇಷವೆನಿಸುತ್ತವೆ.
ಇದನ್ನು ಹೀಗೆ ವಿಂಗಡಿಸಿ ಹೇಳುವ ಅವಶ್ಯವಿತ್ತೇ!? ಎಂದು ಓದುಗರಿಗೆ ಅನಿಸದಿರದು. ಆದರೆ ಅರಿವಿಗೆ ಬಂದಿರದ ಎಷ್ಟೋ ಸಂಗತಿಗಳಿಂದಾಗಿ, ಇವು ಪ್ರಿಯವೆನಿಸುತ್ತವೆ.
ಬಹು ಭಾಷೆಯಿಂದಾಗಿ ಬಹು ಸಂಸ್ಕೃತಿ – ಈ ನೆಲದ ವೈಶಿಷ್ಟ್ಯ; ಇಲ್ಲಿಯ ಬರಹಗಾರರಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆ ಇದೆ ಎನ್ನುವ ಲೇಖಕರು, ಅಂಥ ಕೆಲವು ವ್ಯಕ್ತಿಗಳ ಸೇವಾ ಮನೋಭಾವ, ‘ಕೊಳೆಗೇರಿ’ ಎನಿಸುವ ಧಾರಾವಿಯ ಸಾಧನೆ, ಅಲ್ಲಿಯ ಕನ್ನಡ ಪ್ರೇಮ, ಧಾರ್ಮಿಕ ಬಾಂಧವ್ಯ – ಮುಂತಾದುವುಗಳನ್ನು ಬಣ್ಣಿಸಿದ್ದಾರೆ. ಸಾಧಕ ಕನ್ನಡಿಗರ ವಿವರಗಳೂ ಇಲ್ಲಿವೆ. ಡಾ! ಶಿವರಾಮ ಕಾರಂತರ ‘ಬ್ಯಾಲೆ’ – ಪ್ರದರ್ಶನ ಪ್ರಥಮವಾಗಿ ನಡೆದುದು ಮುಂಬಯಿಯಲ್ಲಿ ಎಂಬುದನ್ನು ನಾವು ಹೇಗೆ ಮರೆತೇವು? ಪುಸ್ತಕದ ಅಂಗಡಿ ಇಟ್ಟು ಇಲ್ಲಿಯ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ “ವಿದ್ಯಾನಿಧಿ”ಯ ಎಂ. ಎಸ್. ಕೋಟ್ಯಾನ್ – ಈ ಹೆಸರು ಮರೆಯಾಗುವುದು ಹೇಗೆ ಸಾಧ್ಯ? ಮುಂಬೈ ಕಮಿಶನರ್ ಖೈರ್ನಾರ್ – ಇವರ ಸೇವಾಕಾರ್ಯಗಳು, ಅವರ ಆಪ್ತ ಮಿತ್ರ ಬಿ. ಆರ್. ಶೆಟ್ಟಿಯವರು ಬ್ಯಾಂಕುಗಳ ಸಾಲ ವಸೂಲಿ ಮಾಡುವ “ಯೂನಿಕ್ ರಿಕವರಿ” – ಎಂಬ ಪ್ರಯೋಗವನ್ನು ಹುಟ್ಟುಹಾಕಿ, ಹಿಜ್ರಾಗಳನ್ನು ಈ ಕೆಲಸಕ್ಕೆ ನೇಮಿಸಿದ್ದು – ಇವು ಸಣ್ಣ ವಿಷಯಗಳೇನಲ್ಲ.
ಆದರೆ ಒಂದು ಕಾಲದಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ಕನ್ನಡ ವಿದ್ಯಾರ್ಥಿಗಳು ನಗರ ಸಭೆಯ ಶಾಲೆಗಳಲ್ಲಿ ಓದುತ್ತಿದ್ದು, ಈಗ ಆ ಶಾಲೆಗಳು ಕಣ್ಣುಮುಚ್ಚುತ್ತಾ ಬರುತ್ತಿರುವುದು ಕನ್ನಡದ ಮಟ್ಟಿಗೆ ಶುಭದಾಯಕವಲ್ಲ; ಎಂದಿದ್ದರೂ ಇದು ಅನಿವಾರ್ಯ.
ಸದ್ಯದ ಸ್ಥಿತಿಯಲ್ಲಿ ಕನ್ನಡ – ತುಳು ಸಂಘಟನೆಗಳು, ಕೊಂಕಣಿ ಭಾಷೆಯ ಚಟುವಟಿಕೆಗಳು, ಕನ್ನಡಿಗರ ಹವಾನಿಯಂತ್ರಿತ ಸಭಾಗೃಹಗಳು, ಶಿಕ್ಷಣ ಸಂಸ್ಥೆಗಳು – ನಾಡಿನ ಋಣವನ್ನು ತೀರಿಸುತ್ತಾ ಇವೆ, ಎನ್ನುವುದು ಸತ್ಯವೇ. ಇಲ್ಲಿಯ ಕಲಾ ಕ್ಷೇತ್ರಕ್ಕೆ ದೀರ್ಘ ಇತಿಹಾಸವಿದೆ. ಈಗಲೂ ‘ಮೈಸೂರು ಎಸೋಸಿಯೇಶನ್’ ಹಾಗೂ ಕನ್ನಡ ಕಲಾ ಕೇಂದ್ರ – ಇವು ಒಳನಾಡಿನಿಂದಲೂ ತಂಡಗಳನ್ನು ಕರೆಸಿ ಉತ್ಸವಗಳನ್ನು ನಡೆಸುತ್ತಿವೆ. ಇದು ಆಶಾದಾಯಕ.
ಇತ್ತೀಚೆಗೆ ಇಲ್ಲಿಯ ಕೆಲವು ಯುವಕರು ಸೇರಿ ಕಟ್ಟಿಕೊಂಡ “ತ್ರಿರಂಗ ಸಂಗಮ” ಎಂಬ ಪುಟ್ಟ ಸಂಸ್ಥೆಯು ನಾಟಕ, ಯಕ್ಷಗಾನ ಮತ್ತು ಚಲಚಿತ್ರ – ಹೀಗೆ ಮೂರು ನೆಲೆಗಳಲ್ಲಿ ಕಲಾ ತಂಡಗಳನ್ನು ಮುಂಬಯಿಗೆ ಕರೆಯಿಸಿ, ಪ್ರದರ್ಶನಗಳನ್ನು ನೀಡುವ ಪ್ರಯತ್ನ ನಡೆಸುತ್ತಿದೆ; ಇದು ಕೊಲ್ಲಿ ರಾಜ್ಯಗಳಲ್ಲೂ ಪ್ರಚುರಗೊಂಡಿದೆ. ಈಗಾಗಲೇ ‘ಲಿಮ್ಕಾ’ ದಾಖಲೆಗೆ ಸೇರಿಕೊಂಡ ‘ಕಲಾಜಗತ್ತು’ ‘ಗಿನ್ನಿಸ್’ ದಾಖಲೆಯತ್ತ ದಾಪುಗಾಲು ಹಾಕುತ್ತ ನಡೆದಿದೆ. ಮುಂಬಯಿಯಲ್ಲಿ ಅಪರೂಪವೆನಿಸುವಂತೆ ತುಳುನಾಡಿನ ‘ಕಂಬಳ ಕ್ರೀಡೆ’ಯನ್ನೂ ಇದು ನಡೆಸಿ ಕೃತಾರ್ಥತೆಯನ್ನು ಸಾಧಿಸಿದೆ.
ಹಾಗೆಯೇ ತಮ್ಮ ತಮ್ಮ ಮಿತಿಯಲ್ಲಿ ಕನ್ನಡ – ತುಳು ಚಟುವಟಿಕೆಗಳನ್ನು ನಡೆಸುವ ಪುಟ್ಟ – ಪುಟ್ಟ ಸಂಸ್ಥೆಗಳೂ ಮುಂಬಯಿಯಲ್ಲಿ ಇವೆ. ಅಖಿಲ ಭಾರತ ‘ತುಳು ಒಕ್ಕೂಟ’ – ಮುಂಬಯಿಯಲ್ಲಿ ಭದ್ರ ನೆಲೆಯನ್ನು ಸ್ಥಾಪಿಸಿದ್ದು, ಒಳನಾಡಿನಲ್ಲೂ ವ್ಯಾಪಕ ಕೆಲಸಗಳನ್ನೂ ಅ.ಭಾ.ತುಳು ಸಮ್ಮೇಳನಗಳನ್ನು ನಡೆಸಿ ಜನ-ಜಾಗೃತಿ ಗೊಳಿಸಿದೆ.
ಇಂಥ ಮುಂಬಯಿಗೆ ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳನ್ನು ಸಮೃದ್ಧಗೊಳಿಸಿದ ಮುಂಬಯಿಗೆ ಅದೆಷ್ಟು ಮುಖಗಳು! ಸಾ.ದಯಾ ಇವರು ಕೇವಲ ಆಧಾರ ಗ್ರಂಥಗಳಿಗೇ ಶರಣುಹೋಗದೆ ಕ್ಷೇತ್ರಕಾರ್ಯ ನಡೆಸಿ ಹೊಸ ವಿಷಯಗಳನ್ನು ಬೆಳಕಿಗೆ ತರುವ ಪ್ರಯತ್ನ ನಡೆಸಿದ್ದು ಶ್ಲಾಘನೀಯ. ಅಂಕಣ ಬರಹಕ್ಕೆ ಒಂದು ಮಿತಿ ಇದೆ. ಅಷ್ಟರಲ್ಲೇ ವಿಷಯ ಸಂಗ್ರಹವೂ ನಡೆದಿದೆ.
ಇದೊಂದು ಉತ್ತಮ ಆಕಾರ ಗ್ರಂಥವೆಂದು ಎಲ್ಲರೂ ಇದನ್ನು ಸ್ವಾಗತಿಸಬೇಕು. ಮುಂಬಯಿ ಬಗೆಗೆ ಆಸಕ್ತಿ ತೋರಿ, ಇಂಥದೊಂದು ಅಂಕಣ ಬರಹವನ್ನು ಪ್ರಕಟಿಸಿದ “ವಾರ್ತಾಭಾರತಿ” ಪತ್ರಿಕೆಗೂ ಅಭಿನಂದನೆ ಸಲ್ಲಬೇಕು.
5 thoughts on “ಮುಂಬೈ ಸ್ವ-ಗತ”
ಸೊಗಸಾದ ಕೃತಿ ಪರಿಚಯ ವಿಶ್ಲೇಷಣೆ. ಹೌದು, ಮುಂಬಯಿ ಕುರಿತು ಬಂದಂತಹ ಅಪರೂಪದ ಅಷ್ಟೇ ಹಳ ಮಹತ್ವದ ಕೃತಿ ಇದು. ಅಭಿನಂದನೆಗಳು ಸಾ.ದಯಾ ಅವರಿಗೆ ಮತ್ತು ಡಾ.ಸುನೀತಾ ಮೇಡಮ್ ಅವರಿಗೂ ಸಹ.
ಗೆಳೆಯರಾದ ಸಾ.ದಯಾ ಅವರ ಕೃತಿಗೆ ಅವರ ಮೇಡಂ ನ ಆಶೀರ್ವಾದದ ಸಿಂಚನ ಚೆಂದ.ಇಬ್ಬರಿಗೂ ಅಭಿನಂದನೆ
ಇದೊಂದು ಉಪಯುಕ್ತ ಗ್ರಂಥವೆನ್ನುವುವದರಲ್ಲಿ ಎರಡು ಮಾತಿಲ್ಲ. ಲೇಖಕರಿಗೆ ಅಭಿನಂದನೆಗಳು.
ಮುಂಬಯಿಯೇ, ಮಹಾ – ಭಾರತದ ಮಹತ್ವದ ಒಂದು ಭಾಗ ಹಾಗೂ ಭಾರತದ ಯಾವುದೇ ಒಂದು ಶಹರದಲ್ಲಿರುವ ಚಲಾವಣೆಯಲ್ಲಿರುವ ಹಣದಲ್ಲಿ ಮೊದಲನೇ ಅಂಕವನ್ನು ಎಂದಿಗೂ ಬಿಟ್ಟುಕೊಡದ, ಎರಡನೇ ಅಂಕದಿಂದ ಅಜಗಜಾಂತರ ದೂರದಲ್ಲಿರುವ ವ್ಯಾವಹಾರಿಕ ಸಂಕೀರ್ಣ ಚೈತನ್ಯ. ಇದೊಂದು ಸಕ್ರಿಯವಾಗಿ ಯಾವಾಗಲೂ ಜಾಗೃತವಾಗಿರುವ ಬದುಕಿನ ಪುಟ. ಸತರ್ಕವಾಗಿ, ಸಚೇತವಾಗಿರುವ ಯಾವ ವ್ಯಕ್ತಿಗೂ ಒಂದು ಸ್ವಂತ ವ್ಯಕ್ತಿತ್ವವನ್ನು ಒದಗಿಸುವ ಪ್ರಾಯೋಗಿಕವಾಗಿ, ವಿಶ್ವಾಸಾರ್ಹವಾಗಿ ‘ನಡೆಯುವ ಸ್ಥಳ’. ಇದರ ಬಗೆಗೆ ಏನು ಬರೆದರೂ ಕಡಿಮೆಯೇ. “ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ”. ಇದು ಅಕ್ಷರಶಃ ಸತ್ಯ!
ಮುಂಬಯಿನ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಅತ್ಯಂತ ಕಳಕಳಿಯಿಂದ, ಸಾತತ್ಯವಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲಮಾನ ಭಾಗವಹಿಸುತ್ತಿದ್ದ ಡಾ. ಸುನೀತಾ ಶೆಟ್ಟಿಯವರ ನಿಷ್ಠಾವಂತ, ಅವಿರತ ಕನ್ನಡ ಸೇವೆ, ನಾನು ನೋಡಿದಂತೆ, ಕೇಳಿದಂತೆ, ಓದಿದಂತೆ, ಗಮನೀಯ, ಗಣನೀಯ, ಅಸದೃಶ ಹಾಗೂ ಅಸದಳ. ಹೀಗಾಗಿ, “ಮುಂದಿನ ಅಧ್ಯಯನಕಾರರಿಗೂ ಇದು ಮಹತ್ವದ ಕೈಪಿಡಿ.” ಅನ್ನುವ ಅವರ ಆತ್ಮೀಯ, ಪ್ರೋತ್ಸಾಹಿಕ ಮಾತುಗಳು, ಸಾ.ದಯಾ ಅವರ “ಮುಂಬೈ ಸ್ವ – ಗತ”ಕ್ಕೆ, ಒಂದು ಉತ್ಕೃಷ್ಟ, ಭಾರೀ ಕವಚವನ್ನು ಒದಗಿಸಿದೆ!
ಈ ಸಂದರ್ಭದಲ್ಲಿ, ಹೆಸರಾಂತ ಪತ್ರಕಾರ ಹಾಗೂ ವಿಜಯ ಕರ್ನಾಟಕ, ಕನ್ನಡ ಪ್ರಭ, ಸುವರ್ಣ ನ್ಯೂಸ್ ಹಾಗೂ ವಿಶ್ವವಾಣಿ ಪತ್ರಿಕೆಗಳಿಗೆ ಸಂಪಾದಕರಾಗಿ ಅಪ್ರತಿಮ ಸೇವೆ ಸಲ್ಲಿಸಿದ ವಿಶ್ವೇಶ್ವರ ಭಟ್ಟರ, ತುಳುನಾಡಿಗರ ಭಾಷಾ ಪ್ರೇಮದ ಬಗೆಗಿನ, ಇತ್ತೀಚಿನ ವಿಶೇಷ ಟಿಪ್ಪಣಿಯನ್ನೂ ನೆನೆಯುತ್ತೇನೆ :
“…..ತುಳು ಭಾಷಿಕರು ಅನ್ಯಗ್ರಹಗಳಿಂದ ಬಂದವರಲ್ಲ, ಹೊರನಾಡು ಅಥವಾ ಪಕ್ಕದ ನಾಡಿನವರೂ ಅಲ್ಲ. ಅವರು ನಮ್ಮವರೇ. ನಮಗೆ ಕನ್ನಡ ಕಲಿಕೆಗೆ ಮಾರ್ಗದರ್ಶಕರು. ಅವರು ಭಾಷಾಪ್ರೇಮವೇ ನಮಗೆ ದಾರಿದೀಪ. ಬಳಸುವ ಮೂಲಕವೇ ಭಾಷೆಯನ್ನು ಬೆಳೆಸಬಹುದು ಹಾಗೂ ಉಳಿಸಬಹುದು ಎಂಬುದಕ್ಕೆ ಅವರೇ ನಮಗೆ ನಿದರ್ಶನ. ಕನ್ನಡದ ಬಗ್ಗೆ ನಿರಾಶದಾಯಕವಾಗಿ ಮಾತಾಡುವವರು ನಮ್ಮವರೇ ಆದ ತುಳುವರ ಭಾಷಾಪ್ರೇಮ ಮೈಗೂಡಿಸಿಕೊಳ್ಳಬೇಕು, ಪ್ರೇರಣೆ ಪಡೆಯಬೇಕು……”.
ಧನ್ಯವಾದಗಳು.
ನಮಗೆ ಗೊತ್ತಿಲ್ಲದ ಮುಂಬಯಿ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತು