ಆಗಾಗ ಬಿಸಿಲು ಬಂದರೂ ಮತ್ತೆ ನಸುಗತ್ತಲಾಗುವಂತೆ ಮೋಡ ಕವಿಯುತ್ತಿತ್ತು. ಮತ್ತರಘಳಿಗೆಗೆ ಪನ್ನೀರು ಚಿಮುಕಿಸಿದಂತೆ ಮಳೆಯೂ ಸುರಿಯುತ್ತಿತ್ತು. ಪಾಚಿಗಟ್ಟಿದ ಅಂಗಳದಲ್ಲಿ ಜಾರದಂತೆ ಹಾಕಿದ ಅಡಿಕೆ ದಬ್ಬೆಯ ಮೇಲೆ ಸ್ವಲ್ಪ ಜಾಗರೂಕತೆಯಲ್ಲಿ ನಡೆದು ಬೇಲಿಗೆ ಬಟ್ಟೆ ಒಣಗಿಸಿದಳು ವಸುಮತಿ. ‘ಚೋಲೋ ಬಿಸಿಲು ಬಿದ್ದಿದ್ರೆ ಒಂದ ತಾಸಲ್ಲಿ ಬಟ್ಟೆ ಒಣಗ್ತಿತ್ತು. ಈ ಮಳ್ಳು ಮಳೆ ಎಷ್ಟೊತ್ತಿಗೆ ಬತ್ತು ಹೇಳದೇ ಗೊತ್ತಗ್ತಿಲ್ಲೆ…,ಅಕ್ಕಿ ತೊಳೆದು ಒಣಗಿಸವು ಮತ್ತದನ್ನ ಹುರಿಯವು, ಕೊಬ್ಬರಿ ತುರಿದಿಡವು, ಚೌತಿಹಬ್ಬ ಹತ್ರ ಬಂದ ಹಾಂಗೆ ಎಷ್ಟೆಲ್ಲ ಕೆಲಸ’ ಎಂದು ಉಟ್ಟ ಸೀರೆಯ ನಿರಿಗೆಯನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಿದ್ದಳು ಅವಳು. ಬೆಳಗಿನಿಂದ ಟಿವಿಯ ಮುಂದೆ ಸ್ಥಾಪನೆಗೊಂಡಿದ್ದ ಅವಳ ಮಗ ಪ್ರಥಮ.
‘ಎಷ್ಟೊತ್ತು ಟಿವಿ ನೋಡದು ಮಗಾ, ಎದ್ಕ, ಹೋಗಿ ಸ್ನಾನ ಮಾಡಿಕ್ಯಂಡುಬಾ ಯನ್ನ ಜೊತೆಗೆ ಕೆಲಸಕ್ಕೆ ಕೈಗೂಡಿಸಲಕ್ಕು’ ತಪೋಭಂಗವಾದ ಮುನಿ ಅದಕ್ಕೆ ಕಾರಣವಾದವರನ್ನು ನೋಡಿದಂತೆ ಅಮ್ಮನನ್ನು ಗುರುಗುಟ್ಟಿಕೊಂಡು ನೋಡಿದ ಮಗರಾಯ.
‘ಸೀರಿಯಲ್ ಅರ್ಧ ಆಗಿತ್ತು. ನೀ ಹುಳುಕು ಮಾಡ್ದೆ ಈಗ ಬಂದ್ ಮಾಡಿದ್ದೆಂತಕ್ಕೆ? ನನಗೆ ನೋಡದಿತ್ತು’ ಎಂದು ರಾಗ ತೆಗೆದ.
‘ ಸೀರಿಯಲ್ಲು ಅಂದ್ರೆ ಅರ್ಧರ್ಧ ಕಥೆನೆ ಅಲ್ದನಾ ಪುಟ್ಟಾ ? ನೀನು ಯನ್ನ ಜೊತೆಗೆ ಕೆಲಸಾ ಮಾಡಿದ್ರೆ ಹೊಸಾ ಕಥೆ ಹೇಳ್ತಿ’ ಎಂದು ಲಂಚದಾಸೆ ತೋರಿದಳು ವಸುಮತಿ. ಕಥೆ ಎಂದೊಡನೆ ಮಗನ ಕಣ್ಣರಳಿತ್ತು.
‘ಓಕೆ ಡನ್ ಅಮ್ಮ ಅರ್ಜೆಂಟ್ ಸ್ನಾನ ಮಾಡಿಕ್ಯಂಡು ಬರ್ತಿ’ ಎಂದು ಟವೆಲ್ಲ ಹೊತ್ತು ಬಚ್ಚಲು ಮನೆಗೆ ಓಡಿದ ಪ್ರಥಮ ಹತ್ತೇ ನಿಮಿಷದಲ್ಲಿ ತಾಯಿಯ ಇದಿರು ಹಾಜರಾದ. ಕಥೇ ಶುರೂ ಮಾಡು ಎಂದು ಅಮ್ಮನನ್ನು ಹಗುರಾಗಿ ಅಪ್ಪಿಕೊಂಡ ಮಗನ ಒದ್ದೆ ಕೂದಲನ್ನು ಒಮ್ಮೆ ಕೆದರಿ ನೆತ್ತಿ ಮೂಸಿ ಹಿತವಾದ ಅನುಭೂತಿಗೊಳಗಾಗಿ ‘ಅಮ್ಮನಾಗುವುದೆಂದರೆ ಒಂದು ಬಗೆಯ ಸಾರ್ಥಕ್ಯವೇ ಸರಿ’ ಎಂದುಕೊಂಡು ನಿಡಿದಾದ ಉಸಿರು ತೆಗೆದು ಮುಗುಳ್ನಗುತ್ತಾ ಒಂದಿಷ್ಟು ಏಲಕ್ಕಿಯನ್ನು ಮಗನೆದುರು ತಟ್ಟೆಯಲ್ಲಿ ಸುರಿದಿಟ್ಟಳು. ನೀನು ಇದರ ಸಿಪ್ಪೆ ತೆಗಿ, ಆನು ತರಕಾರಿ ಕೊಚ್ತಾ ಕಥೆ ಹೇಳ್ತಿ ಎನ್ನುತ್ತಾ ಮೆಟ್ಗತ್ತಿ ಮೇಲೆ ಕುಳಿತಳು. ಹನ್ನೆರಡು ವರ್ಷದ ಹುಡುಗ ಅಮ್ಮನೆದುರು ಕಣ್ಣರಳಿಸಿ ಕುಳಿತ.
ಒಂದಲ್ಲಾ ಒಂದೂರಿತ್ತು. ಆ ಊರಿನ ಹೆಸರು ಕೆರೆಗದ್ದೆ. ಆ ಊರಿಗೆ ಆ ಹೆಸರೆಂತಕ್ಕೆ ಹೇಳ ಕುತೂಹಲ ನಿನಗಿದ್ದಿಕ್ಕು ಕೇಳು……
ಹದಿನಾರು ಮನೆಗಳ ಆ ಊರಿನ ಪಕ್ಕದಲ್ಲೊಂದು ಒಂದು ಕೆರೆ ಇತ್ತು ಆ ಕೆರೆ ಪಕ್ಕದಲ್ಲಿ ದೊಡ್ಡ ಗದ್ದೆ ಬಯಲಿತ್ತು. ಅದಕ್ಕೆ ಆ ಊರಿಗೆ ಕೆರೆಗದ್ದೆ ಎನ್ನುವ ಹೆಸರು ಬಂದಿತ್ತು. ಊರಿನ ಜನರು, ಬಟ್ಟೆ ತೊಳೆಯಲ್ಲೆ ಪಾತ್ರೆ ತೊಳೆಯಲ್ಲೆ ಸ್ನಾನ ಮಾಡಲ್ಲೆ ಕೆರೆ ನೀರನ್ನೇ ಬಳಸ್ತಾ ಇದ್ದಿದ್ದ. ಊರು ಅಂದ ಮೇಲೆ ಕೆರೆ ಗದ್ದೆ ಅಷ್ಟೇ ಇದ್ರೆ ಸಾಕ?ವಸುಮತಿ ಮಗನನ್ನು ಕೇಳಿದಳು.
ಇಲ್ಲೆ ಅಮ್ಮಾ ಮನೆ ಇರವು, ಜನ ಇರವು ಎಂದ ಪ್ರಥಮ್.
ಹೌದೂ.. ಎಂದು ಎಂದು ತಲೆ ಕುಣಿಸುತ್ತಾ ಕಥೆ ಮುಂದುವರಿಸಿದಳು ವಸುಮತಿ..ಆ ಊರಲ್ಲ್ಲಿ ನೂರಾರು ಜನರಿದ್ದಿದ್ದ. ಅವ್ರೆಲ್ಲ ಬೆಳೆಸಿದ ಅಡಿಕೆ, ತೆಂಗು, ಬಾಳೆ ತೋಟಗಳೂ ಇದ್ದಿದ್ದ. ಅಷ್ಟೇ ಅಲ್ಲ ಊರಿನ ಸಮೀಪದಲ್ಲಿ ಒಂದು ಪುಟ್ಟ ಕಾಡೂ ಕೂಡಾ ಇತ್ತು. ಅದರಲ್ಲಿ ಒಂದು ಮನೆಯ ಹೆಸರು ಹೂವಿನ ಮನೆ. ಹೆಸರಿಗೆ ತಕ್ಕ ಹಾಗೆ ಮನೆಯ ಸುತ್ತಲೂ ಸೇವಂತಿಗೆ ಸಂಪಿಗೆ ಮಲ್ಲಿಗೆ, ಗುಲಾಬಿ ಮಲ್ಲಿಗೆ ಹೀಗೆ ಒಂದ್ರಾಶಿ ಗಿಡಗಳು ಮನೆ ಸುತ್ತಲೂ ಇದ್ದಿದ್ದ. ರಾಮ ಭಟ್ಟರು ಆ ಮನೆ ಯಜಮಾನರು. ಸೀತಮ್ಮ ಅವರ ಹೆಂಡ್ತಿ. ಅವರಿಗೆ ಒಬ್ಬನೇ ಒಬ್ಬ ಮಗಾ ಇದ್ದಿದ್ದ. ಅವನ ಹೆಸರು ಈಶಾ. ಊರಾಚೆ ಇರೋ ಸರಕಾರಿ ಶಾಲೆಯಲ್ಲಿ ಆರನೇ ತರಗತಿ ಓದ್ತ ಇದ್ದಾ. ಕಲಿಯಲಿಕ್ಕೆ ಅಂವಾ ನಿನ್ನ ಹಾಂಗೆ ಜಾಣ ಇದ್ದಿದ್ದಾ. ಶಾಲೆ ಮುಗಿಸಿ ಮನೆಗೆ ಬಂದ ನಂತರಾ ಹೋಮ್ವರ್ಕ ಎಲ್ಲಾ ಮುಗಿಸಿ ಕೊಟ್ಟಿಗೆಯಲ್ಲಿರೋ ಹಸುಗಳಿಗೆ ಹುಲ್ಲು ಹಾಕತಿದ್ದಾ ನೀರು ಕುಡಿಸ್ತಾ ಇದ್ದಾ ಅಮ್ಮ ನೆಟ್ಟ ಗಿಡಗಳಲ್ಲಿ ಆದ ಮೊಗ್ಗೆ ಬಿಡಿಸಿಕೊಡ್ತಾ ಇದ್ದ. ಪುಟ್ಟ ಪುಟ್ಟ ಕೆಲಸಾ ಮಾಡಿ ಅಮ್ಮನ ಹತ್ರ ಗುಡ್ ಗುಡ್ ಹೇಳಿಶ್ಗತ್ತಿದ್ದ. ಈಶನ ಅಪ್ಪ ರಾಮ ಭಟ್ಟರು ಒಬ್ಬ ಕಲಾವಿದರು. ಅವರಿಗೆ ಮಣ್ಣಿನ ಗಣಪತಿ ಮೂರ್ತಿಯನ್ನು ಮಾಡುವ ಕಲೆ ಕರಗತವಾಗಿತ್ತು.
ಮಣ್ಣಿನ ಗಣಪತಿ ಹೆಂಗೆ ಮಾಡ್ತ ನಿನಗೆ ಗೊತ್ತಿದ್ದ ? ಮಗನತ್ತ ಒಂದು ಪ್ರಶ್ನೆಯನ್ನೆಸೆದು ಅವನು ಗೊತ್ತಿಲ್ಲೆ ಎಂದು ತಲೆ ಆಡಿಸಿ ಮೂತಿ ಚೂಪಗೆ ಮಾಡಿದ ಮೇಲೆ ಮತ್ತೆ ಮಾತು ಮುಂದುವರೆಸಿದಳು ವಸುಮತಿ.
ಆ ಊರಿನಲ್ಲಿ ಕೆರೆ ಇತ್ತು ಅಂತಾ ಹೇಳಿದ್ನಲ್ಲಾ ಅದನ್ನು ಮಳೆಗಾಲ ಆರಂಭ ಆಗೋದಕ್ಕಿಂತ ಮೊದ್ಲು ಸೋಸತ್ತಿದ್ದ. ಅಂದ್ರೆ ಕೆರೆಯ ನೀರನ್ನೆಲ್ಲ ಕೊಡದಲ್ಲಿ ತುಂಬಿ ಸಮೀಪದ ತೋಟಗಳಿಗೆ ಹಾಯಿಸ್ತಾ ಇದ್ದ. ತಳದಲ್ಲಿ ಒಳ್ಳೆಯ ಜಿಗುಟಾದ ಮಣ್ಣಿರುತ್ತಿತ್ತು. ಅದನ್ನು ತೆಗೆದು ಬುಟ್ಟಿ ತುಂಬತಿದ್ದ. ನೀರಿನ ಒರತೆ ಅಂದ್ರೆ ಜಲದ ಕಣ್ಣು ಅದನ್ನು ಬಿಡಿಸಿ ಕೆರೆಗೆ ನೀರು ತುಂಬಲಿಕ್ಕೆ ಅನುವು ಮಾಡಿಕೊಡ್ತಾ ಇದ್ದ. ಕೆರೆಯಿಂದ ತೆಗೆದ ಮಣ್ಣನ್ನು ರಾಮ ಭಟ್ಟರ ಮನೆಯಂಗಳಕ್ಕೆ ಸಾಗಿಸ್ತಾ ಇದ್ದ. ‘ಹೋಯ್ ರಾಂಭಟ್ರೆ ಎಲ್ಲರ ಮನಿಗೂ ಗಣಪತಿ ಮಾಡಿ ಕೊಡವು. ನಿಮ್ಮನೆ ಅಂಗಳದವರೆಗೆ ಮಣ್ಣು ಹೊತ್ಗಂಡು ಬಂದು ಹಾಕಿದ್ಯ ನೋಡಿ’ ಎನ್ನುತ್ತಿದ್ದರು. ಮೇ ತಿಂಗಳ ಬಿಸಿಲಿಗೆ ಮಣ್ಣು ಚೆನ್ನಾಗಿ ಒಣಗುತ್ತಿತ್ತು. ಹೆಂಡೆಯಂತಹ ಮಣ್ಣನ್ನು ಕುಟ್ಟಿ ಪುಡಿ ಮಾಡಿ ಕಲ್ಲು ಕಸ ಎಲ್ಲ ಜರಡಿ ಹಿಡಿದು ತೆಗೆದು ಮತ್ತೆ ನೀರು ಹಾಕಿ ನೆನೆಸುತ್ತಿದ್ರು. ಯಾರು ಹೇಳು?ಅಮ್ಮ ಕೇಳಿದಾಗ ‘ರಾಮಭಟ್ಟರು’ ಎಂದು ಮಗ ಉತ್ಸಾಹದಿಂದ ಉತ್ತರಿಸಿದ.
ಮಣ್ಣನ್ನು ಹದವಾಗಿ ಕಲೆಸಿದ ಮೇಲೆ ಭಟ್ಟರಿಗೆ ಕೈ ತುಂಬಾ ಕೆಲಸ. ಮತ್ತೆ ನಮ್ಮ ಕಥೆಯಲ್ಲಿರೋ ಪುಟಾಣಿ ಹೀರೋ ಅಂದ್ರೆ ಈಶುಗೂ ಕೆಲಸವೋ ಕೆಲಸ. ಅಪ್ಪಾ ನಾನು ಒಂದು ಗಣಪತಿ ಮಾಡ್ಲ? ಎಂದು ಕೇಳುತ್ತಿದ್ದ. ಪುಟ್ಟ ಪುಟ್ಟ ಕೈಗಳಲ್ಲಿ ಮಣ್ಣು ಕಲೆಸಿಕೊಡುತ್ತಿದ್ದ. ಆರಂಭದಲ್ಲೇ ಗಣಪತಿ ಮಾಡದಲ್ಲಾ ಮಗಾ, ಮೊದಲು ಇಲಿ ಮತ್ತೆ ಹಾವು ಮಾಡದು ಕಲಿಯವು’ ಹೇಳತಿದ್ರು ಭಟ್ಟರು.
ಅದು ಮಾಡದು ಹ್ಯಾಂಗೆ? ಅಂತಾ ಈಶು ಕೇಳಿದ್ರೆ ಅಮ್ಮ ಕೋಡುಬಳೆ ಮಾಡಕ್ಕಾದ್ರೆ ಹಿಟ್ಟನ್ನಾ ಉದ್ದಕ್ಕೆ ತಿಕ್ಕತಲಾ ಹಾಂಗೆ ಮಾಡಿ ಹಾವಿನ ಆಕಾರದ ಶರೀರ ಮಾಡು, ಇಷ್ಟುದ್ದಾ ಆಗವು ಶರೀರ ಎಂದು ಮೊಳಕೈ ಉದ್ದ ತೋರಿಸುತ್ತಿದ್ದರು. ಅದರ ತುದಿಗೆ ಸಪೂರ ಮಾಡಿ ಬಾಲ ಮಾಡು, ಅದನ್ನು ಸುತ್ತಿ ಕೊನೆಯಲ್ಲಿ ಹೆಡೆ ಮಾಡಲಕ್ಕಡಾ ಅಂತಾ ಹೇಳಿ …ಪುಟ್ಟದೊಂದು ಕಟ್ಟಿಗೆಯ ಮಣೆ ಕೊಟ್ಟು ಕೂಡಿಸ್ತಿದ್ರು. ಈಶು ತನ್ನ ಪುಟ್ಟ ಪುಟ್ಟ ಕೈಯಲ್ಲಿ ಜಿಗುಟು ಮಣ್ಣನ್ನು ಮಣೆ ಮೇಲೆ ತಿಕ್ಕುತ್ತಾ ಕುಳಿತುಕೊಳ್ಳುತ್ತಿದ್ದ. ಗೇಣುದ್ದ ಹೊಸೆಯುವಷ್ಟರಲ್ಲಿ ಅದು ತುಂಡಾಗುತ್ತಿತ್ತು. ನಾಲ್ಕಾರು ಸಲ ಹೊಸೆಯುವಷ್ಟರಲ್ಲಿ ಈಶುಗೆ ಬೇಜಾರಾಗ್ತಿತ್ತು. ಅಪ್ಪಾ ಇವತ್ತೆಂತಕ್ಕೋ ಹಾವನ್ನಾ ಸರಿಯಾಗಿ ಮಾಡಲ್ಲೆ ಬರ್ತಾ ಇಲ್ಲೆ, ಮಣ್ಣು ಮೆತ್ತಗಿದ್ದು ನಾಳೆ ಮಾಡ್ತಿ. ಇವತ್ತು ಅಮ್ಮ ಮಾಡುವಂತಹ ತಿಂಡಿ ಮಾಡ್ತಿ, ಎನ್ನುತ್ತಾ ಉಂಡೆ ಕಟ್ಟಿಟ್ಟು, ರೊಟ್ಟಿ ತಟ್ಟುತ್ತಿದ್ದ. ಅಮ್ಮಾ ನೀ ಮಾಡಿದ ಉಂಡೆ ನಾನು ತಿನ್ನತ್ನಲೇ ನಾ ಮಾಡಿದ ಉಂಡೆ ನೀನು ತಿನ್ನು ಎನ್ನತಾ ಇದ್ದ.
ಅಮ್ಮಂಗೆ ಅಪ್ಪಂಗೆ ಮಗ ಮಾಡಿದ ಉಂಡೆ ನೋಡಿ ನಗುವೋ ನಗು. ಮಣ್ಣುಂಡೆ ತಿನ್ನವನಾ ಮಾಣಿ? ಮಾತಾಡ್ತಾ ಮಾತಾಡ್ತಾ ರಾಮ ಭಟ್ಟರು ಪುಟ್ಟ ಮಣೆಯಂತಹ ಕಟ್ಟಿಗೆಯ ಮೇಲೆ ಗಣಪತಿಯ ಕಾಲುಗಳನ್ನು ಮಾಡ್ತಾ ಇದ್ರು .
‘ಅಪ್ಪಾ ಮೂರ್ತಿ ಮಾಡಕಾರೆ ಮೊದಲು ಕಾಲೆಂತಕ್ಕೆ ಮಾಡ್ತೆ/ ಫಸ್ಟು ಮುಖಾ ಮಾಡಿಬಿಡವು ..ಎಂದು ಐಡಿಯಾ ಕೊಡ್ತಾ ಇದ್ದಾ ಈಶು. ಮುಖ ಒಂದೇ ಇಟ್ಟು ಪೂಜೆ ಮಾಡತ್ವಿಲ್ಲೆ ಮಗಾ. ಗಣಪತಿಯ ಇಡೀ ಮೂರ್ತಿ ಪೂಜೆ ಮಾಡ್ತ. ಮುಖಕ್ಕೆ ಆಧಾರವಾಗಿ ಕುತ್ತಿಗೆ ಕುತ್ತಿಗೆಗೆ ಆಧಾರವಾಗಿ ಶರೀರ ಶರೀರಕ್ಕೆ ಆಧಾರವಾಗಿ ಕಾಲುಗಳು ಬೇಕು ಹಾಗಾಗಿ ಕಾಲನ್ನು ಮೊದಲು ಮಾಡಿ ಸ್ವಲ್ಪ ಒಣಗಿದ ಮೇಲೆ ಶರೀರ ಮಾಡ್ತಿ ಎನ್ನುತ್ತಿದ್ದರು. ಹೌದು ಅಪ್ಪಾ ಮತ್ತೆ ಸೊಂಡಿಲು ಮಾಡವಲಿ ನಮ್ಮ ಹಾಂಗಲ್ಲ ಅವನ ಮುಖಾ. ದೊಡ್ಡ ದೊಡ್ಡ ಕಿವಿಗಳನ್ನೂ ಮಾಡವು ಎಂದು ಕಣ್ಣರಳಿಸಿ ಹೇಳ್ತಾ ಇದ್ದ. ರಾಮಭಟ್ಟರು ಮಗನ ಮಾತಿಗೆ ತಲೆ ಆಡಿಸ್ತಾ ಇದ್ರು.
ಶಾಲೆಗೆ ಹೋದ್ರೂ ಈಶೂಗೆ ಗಣಪತಿಯದ್ದೇ ಧ್ಯಾನ!. ಇವತ್ತು ಮನೆಗೆ ಹೋಗುವಷ್ಟರಲ್ಲಿ ಅಪ್ಪ ಹೊಟ್ಟೆ ಮಾಡಬಹುದಾ? ಅದೆಷ್ಟು ದೊಡ್ಡ ಹೊಟ್ಟೆ ಮಾಡಬಹುದು. ಅಮ್ಮ ಮಾಡಿದ ಕಜ್ಜಾಯ ಎಲ್ಲಾ ತಿಂದ್ರೆ ಹಿಡಿಸೋ ಅಷ್ಟು ದೊಡ್ಡದಾಗಬಹುದಾ? ನಾಳೆ ಕೈಗಳನ್ನ ಮಾಡಬಹುದೇನೋ ಕೈಯಲ್ಲಿ ಅಂಕುಶ ಹಿಡಿಸಬಹುದಾ ಅಥವಾ ಕಮಲ ಹಿಡಿಸಬಹುದಾ? ಸೊಂಡಿಲು ಎಡಕ್ಕೆ ತಿರುಗಿರುವ ಹಾಗಿರುತ್ತದೆಯೊ ಬಲಕ್ಕೋ? ಪುಟ್ಟ ಹುಡುಗನ ತಲೆಯಲ್ಲಿ ನೂರೆಂಟು ಪ್ರಶ್ನೆ, ಶಾಲೆ ಬೆಲ್ಲ ಹೊಡೆದ ಕೂಡ್ಲೇ ಬಿಲ್ಲಿನಿಂದ ಹೊರಟ ಬಾಣದ ಹಾಗೆ ಮನೆಗೆ ಸುಂಯ್ ಎಂದು ಬರುತ್ತಿದ್ದ. ಕುತೂಹಲದಿಂದಾ ಓಡಿ ಹೋಗಿ ಅಪ್ಪ ಮಾಡಿದ ಕೆಲಸ ನೋಡುತ್ತಿದ್ದ. ಅರೇ ದೊಡ್ಡ ಹೊಟ್ಟೆ ತಯಾರಜು. ಒಳಗೆ ಮಣ್ಣು ತುಂಬಡಾ ಅಪ್ಪಾ ಕಜ್ಜಾಯ ಎಲ್ಲಾ ತಿನ್ನವಲ ಅಂವಾ, ಅಂತಾ ಹೇಳತಿದ್ದಾ.
‘ಅಕ್ಕು ಮಾರಾಯ ಹೊಟ್ಟೆನ ಟೊಳ್ಳು ಮಾಡ್ತೆ ನೀ ತಿನ್ನುವಷ್ಟೇ ಕಜ್ಜಾಯ ಅವನೂ ತಿನ್ನತ್ನಡಾ ಈ ವರ್ಷಾ, ಗಣಪತಿ ನಿನ್ನೆ ಕನಸಲ್ಲಿ ಬಂದು ಯನಗೆ ಹೇಳಿದ್ದಾ’ ಎಂದು ನಗುತ್ತಿದ್ದರು ಭಟ್ಟರು.
ಹೀಗೆ ದಿನಕ್ಕೊಂದು ಬಗೆಯ ಸಂಭ್ರಮದಲ್ಲಿ ಗಣಪತಿ ಮೂರ್ತಿ ತಯಾರಾಗ್ತಾ ಇತ್ತು, ಗೌರಮ್ಮನ ಮೂರ್ತಿಗಳೂ, ಹಾವು, ಇಲಿ ಎಲ್ಲಾ ತಯಾರಾಗ್ತಾ ಇತ್ತು. ಗಣಪತಿಗೆ ಕೆಮ್ಮಣ್ಣು ಶೇಡಿಯ ಅಲಂಕಾರ ಮಾಡುತ್ತಿದ್ದರು, ಕಣ್ಣಿಗೆ ದೃಷ್ಟಿ ತುಂಬುತ್ತಿದ್ದರು. ಊರಿನವರೆಲ್ಲರೂ ಗೌರಿ ಹಬ್ಬದ ಹಿಂದಿನ ದಿನ ದೊಡ್ಡ ದೊಡ್ಡ ಪಾತ್ರೆ ಅದರೊಳಗೊಂದು ದಪ್ಪನೆಯ ಬಟ್ಟೆಯನ್ನು ಹಾಕಿಕೊಂಡು ಬರ್ತಾ ಇದ್ರು. ರಾಮ ಭಟ್ಟರಿಗೆ ಒಂದು ತೆಂಗಿನ ಕಾಯಿ ವೀಳ್ಳದೆಲೆ ಅಡಿಕೆ ಕೊಟ್ಟು, ಕೈಲಾದಷ್ಟು ಹಣ ಕೊಡುತ್ತಿದ್ದರು. ಊರಿನ ಜನರು ಬಟ್ಟೆಯನ್ನು ಪಾತ್ರೆಯೊಳಗಡೆ ಹಾಸಿ ಅದರ ಮೇಲೆ ಗಣಪತಿ ಹಾಗೂ ಗೌರಿಯ ಮೂರ್ತಿಯನ್ನು ಜೋಪಾನವಾಗಿ ಇಡುತ್ತಿದ್ದರು. ಈಶು ಗಣಪತಿ ಜೊತೆಗೆ ಇದನ್ನು ತಗಂಡು ಹೋಗಿ ಎನ್ನುತ್ತ ಇಲಿ ಹಾಗೂ ಹಾವನ್ನು ಕೂಡ ಕೊಡುತ್ತಿದ್ದ. ಹಾವು ಇಲಿ ಮಾಡಿದ್ದು ನೀನೆಯನೋ, ನಿನಗೂ ದುಡ್ಡು ಕೊಡವ ಮತ್ತೆ ಎಂದು ಕೇಳಿದವರಿಗೆ ಹೌದು ಎಂದು ಹೆಮ್ಮೆಯಿಂದ ನಗುತ್ತಾ ಉತ್ತರಿಸುತ್ತಿದ್ದ. ‘ನಿನಗೆ ಈ ವರ್ಷ ದುಡ್ಡು ಕೊಡತ್ವಿಲ್ಲೆ ನಿನ್ನಪ್ಪಂಗೇ ಕೊಟ್ಯ. ಮುಂದಿನ ವರ್ಷ ಗಣಪತಿನೂ ಮಾಡು ಆಗ ನಿನಗೆ ಕೊಡತ್ಯ’ ಎಂದು ಕಿಚಾಯಿಸುತ್ತಿದ್ದರು ಊರಿನವರು.
ಸುಲಿದ ಏಲಕ್ಕಿ ಬೀಜವನ್ನು ಅಮ್ಮನ ಕೈಗಿತ್ತ ಪ್ರಥಮ ಅಮ್ಮ ನಮ್ಮನೆಲೂ ಅಪ್ಪ ಗಣಪತಿ ಮಾಡಿದ್ರೆ ನಾನೂ ಹಾವು ಇಲಿ ಎಲ್ಲಾ ಮಾಡತಿದ್ದಿ ಎಂದ! ಹೌದಲಾ ಮಹರಾಯಾ ಅಪ್ಪಂಗೆ ಸಂಜೆ ಹೇಳು ಆತ? ಈಗ ಕಥೇ ಮುಂದುವರಿಸಲ ನಿಲ್ಲಿಸಲ? ಅಮ್ಮಾ ಮುಂದೆಂತಾ ಆತು ಹೇಳು ಈಶು ಸ್ವಲ್ಪ ಯನ್ನ ಹಾಗೆ ತರಲೆ ಇದ್ದಾ ಅಲ್ದ? ಕೇಳಲ್ಲೆ ಮಜಾ ಬರ್ತಾ ಇದ್ದು…ಮುಂದುವರಿಸೇ ‘ಅಕ್ಕು ಆದ್ರೆ ನೀ ಒಂದಷ್ಟು ಕೊಬ್ಬರಿ ತುರದು ಕೊಡು ಯನಗೆ ಎಂದು ವಸುಮತಿ ಒಂದು ತಾಟಿನಲ್ಲಿ ತುರಿಮಣೆ ಹಾಗೂ ಕೊಬ್ಬರಿಯನ್ನಿಟ್ಟು ಮಗನಿಗೆ ಕೊಟ್ಟಳು.
‘ಅಮ್ಮಾ ಒಂದಾದ ಮೇಲೊಂದು ಕೆಲಸಾ ಕೊಡತ್ಯಲಿ ಬಾಲ ಕಾರ್ಮಿಕರ ಹತ್ರ ಹೀಂಗೆಲ್ಲ ದುಡಿಸದು ಅಪರಾಧ ಹೇಳಿ ಯಂಗಳ ಪಾಠದಲ್ಲಿ ಬಂಜು’ ಎಂದ ಮಗರಾಯ!
‘ಹೇ ದೇವ್ರೆ ಯನ್ನ ಮಗಂಗೆ ತಕರಾರಿಲ್ದೆ ಕೆಲಸ ಮಾಡುವ ಬುದ್ದಿ ಕೊಡು’ ಎಂದು ನಾಟಕೀಯವಾಗಿ ಹೇಳಿ ಕೈ ಮುಗಿದು ವಸುಮತಿ ಕಥೆ ಮುಂದುವರಿಸಿದಳು.
ಊರಿನವೆಲ್ಲ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋದ ನಂತರ ರಾಮ ಭಟ್ಟರು ‘ಬಾರೋ ಮಾಣಿ ಮಂಟಪಾ ಮಾಡೋಣ’ ಅಂತಾ ಹೇಳತಿದ್ರು. ಭಟ್ಟರು ಒಂದು ದೊಡ್ಡ ಖುರ್ಚಿ ತಂದು ದೇವರ ಮನೆಯಲ್ಲಿಡುತ್ತಿದ್ದರು. ಇಟ್ಟು ಆಕಡೆ ಈಕಡೆ ತೋಟದಿಂದ ಕಡಿದು ತಂದ ಬಾಳೆ ಮರವನ್ನು ನಿಲ್ಲಿಸ್ತಾ ಇದ್ರು. ಅದರೊಂದಿಗೆ ಕಬ್ಬು ಕಟ್ಟುತ್ತಿದ್ದರು. ಗೌರಿ ಹೂವು ಚೆಂಡು ಹೂವಿನ ಅಲಂಕಾರ ಮಾಡ್ತಾ ಇದ್ರು. ಹಿತ್ತಲಲ್ಲಿ ಬೆಳೆದ ತರಕಾರಿಗಳನ್ನೆಲ್ಲ ಒಂದೊಂದು ಬಳ್ಳಿಯಲ್ಲಿ ಸುತ್ತಿ ಕಟ್ಟಿ ನಂತರ ಮಂಟಪದೆದುರು ಸಾಲಾಗಿ ಫಲವಳಿಗೆ ಕಟ್ಟತಾ ಇದ್ರು. ‘ಓ ಆ ಬಳ್ಳಿ ಕೊಡು ಈ ಗಿಡಾ ಹಿಡಕ’ ಎಂದು ಮಗನಿಗೂ ಕೆಲಸ ಹೇಳುತ್ತಿದ್ದ ಅಪ್ಪನಿಗೆ ಸಹಾಯ ಮಾಡುತ್ತಿದ್ದ ಈಶು. ಸರಿ ರಾತ್ರಿಯವರೆಗೂ ಮಂಟಪ ಕಟ್ಟಿ ಮಲಗಿದರೆ ಗಣೇಶನೇ ಬರುತ್ತಿದ್ದ ಈಶುನ ಕನಸಿನಲ್ಲಿ.
ಬೆಳಿಗ್ಗೆ ಸ್ನಾನ ಮಾಡಿಕೊಂಡು ಮಡಿ ಸೀರೆ ಉಟ್ಟು ಅಮ್ಮ ಕಮ್ಮಗೆ ಕಡಲೆಯನ್ನು ಹುರಿಯುತ್ತಿದ್ದರೆ ಈಶುವಿಗೆ ಖುಷಿ. ಹುರಿದ ಕಡಲೆಯನ್ನು ಪುಡಿ ಮಾಡಿ ಅಮ್ಮ ಪಂಚಕಜ್ಜಾಯ ಮಾಡ್ತಾಳೆ. ಉಂಡೆ ಮೋದಕ ಮಾಡತಾಳೆ.. ಆಗಾಗ ಅಡುಗೆ ಮನೆಗೆ ಹೋಗಿ ಕೆಲಸ ಏನೇನಾಯ್ತು ಅಂತ ನೋಡ್ತಾ ಇರ್ತ ಈಶು.
ರಾಮ ಭಟ್ಟರು ಜಗುಲಿಯಲ್ಲಿಯೇ ನಾಂದಿ ಪೂಜೆ ಮಾಡತಿದ್ರು. ಆಮೇಲೆ ಮೆಲ್ಲಗೆ ಗಣಪತಿಯ ಮೂರ್ತಿಯನ್ನೆತ್ತಿ ಮಂಟಪಕ್ಕೆ ತಂದಿಡತ್ರು. ಅಂಗಳದಲ್ಲಿದ್ದ ಹೂವುಗಳು, ಗದ್ದೆಯಂಚಿನಿಂದ ಕೊಯ್ದು ತಂದ ಗರಿಕೆ ಹುಲ್ಲಿನ ಕಟ್ಟುಗಳು ಬುಟ್ಟಿ ತುಂಬಿರ್ತಿದ್ದವು. ಭಟ್ಟರು ಮಂತ್ರ ಹೇಳ್ತಾ ಹೂವೇರಿಸಿ ಪೂಜೆ ಮಾಡತಿದ್ರು.
‘ಕಟ್ಟಿದರು ಫಲವಳಿಯ ಗಣಪನ ಪುಟ್ಟ ಮಂಟಪದಿದಿರೊಳು… ಎಂದು ಸೀತಮ್ಮ ಹಾಡು ಹೇಳ್ತಿತ್ತು. ಈಶು ಬಡಿಯುತ್ತಿದ್ದ ಜಾಗಟೆಯ ನಾದದಿಂದ ಊರಿನವರೆಲ್ಲರಿಗೆ ರಾಮ ಭಟ್ಟರ ಮನೆಯಲ್ಲಿ ಪೂಜೆ ಆಗ್ತಾ ಇದೆ ಎನ್ನುವುದು ಗೊತ್ತಾಗುತ್ತಿತ್ತು.
‘ಇಪ್ಪತ್ತೊಂದು ಬಗೆ ಕಜ್ಜಾಯವ ತಿಂದನೆ ಗಣಪತಿಯು…’ ಎಂದು ಅಮ್ಮ ಹಾಡು ಹೇಳುವಾU ಈಶು. ನೈವೇದ್ಯಕ್ಕಿರಿಸಿದ ಕಜ್ಜಾಯಗಳನ್ನು ಆಸೆಗಣ್ಣಿನಿಂದ ನೋಡುತ್ತಿದ್ದ. ಆಮೇಲೆ ತಪ್ಪು ಮಾಡಿದೆನೇನೋ, ದೇವರಿಗಿಟ್ಟಿದ್ದನ್ನು ನಾನು ಹೀಗೆ ನೋಡಿದೆ ಎಂದು ಎರಡೂ ಕೆನ್ನೆಗಳ ಮೇಲೆ ಮೆಲ್ಲಗೆ ಹೊಡೆದುಕೊಳ್ಳುತ್ತಿದ್ದ. ಪೂಜೆ ಮುಗಿದಾಗ ಈಶು ಏನು ಬೇಡಿಕೊಳ್ತಾ ಇದ್ದಾ ಗೊತ್ತಾ ಮಗಾ?
ವಿದ್ಯಾ ಬುದ್ದಿಯ ಕೊಡು ಓ ಗಣಪಾ
ಜಯ ಗಣಪಾ ಶ್ರೀ ಗಣಪಾ …
ಸೇಮ್ ನನ್ನ ಹಾಗೆ! ..ಕಥೆಯ ನಡುವೆ ಮರುದ್ವನಿ ಕೇಳಿತು.
ಪೂಜೆ ಎಲ್ಲಾ ಮುಗಿದ ಮೇಲೆ ಊಟ..
ತೊಳೆದಿಟ್ಟ ಕುಡಿ ಬಾಳೆಯ ಬಲ ಭಾಗದಲ್ಲಿ ತುಪ್ಪ ಪಾಯಸ, ಹಾಕಿ ಸುತ್ತಲೂ ಮೋದಕ, ಚಕ್ಕುಲಿ, ಸುಟ್ಟೇವು, ಅತಿರಸ, ಬಜೆ, ಕರಜಿಕಾಯಿ, ಅನಾರಸ,.. ಹೀಗೆ ಒಂದೊಂದಾಗಿ ಕಜ್ಜಾಯ£ವನ್ನು ಸೀತಮ್ಮ ಬಡಿಸುತ್ತಿದ್ದರು. ಕಜ್ಜಾಯ ಹಾಕಿದ ನಂತರ ನಡುವೆ ಅನ್ನ ಬಡಿಸಿ ಅದರ ಮೇಲೆ ಮಿಳ್ಳೆ ತುಪ್ಪ ಹಾಕುತ್ತಿದ್ದರು ‘ಪಂಚಕಜ್ಜಾಯ ಬಾಯಲ್ಲಿಟ್ಟರೆ ಚೊಲೋ ಕರಗ್ತು. ಚಕ್ಕುಲಿ ಹೋದ ವರ್ಷದ ಚಕ್ಕುಲಿಗಿಂತ ಒಳ್ಳೆ ಹಗುರಾಜು. ಅತಿರಸ ಸ್ವಲ್ಪ ಎಣ್ಣೆ ಕುಡದ್ದು!’ ಎಂದೆಲ್ಲ ಭಟ್ಟರು ಕಜ್ಜಾಯ ವಿಮರ್ಶೆ ಮಾಡುತ್ತಾ ಊಟ ಮಾಡುತ್ತಿದ್ದರು. ಈಶುನೂ ಅದಕ್ಕೆ ದ್ವನಿ ಕೂಡಿಸ್ತಾ ಇದ್ದ. ‘ಕೈಗೆ ಬಾಯಿಗೆ ಹೊಡೆದಾಟ ಆದ್ರೆ ಸಾಕು. ಎಲ್ಲದಕ್ಕೂ ಏನೋ ಒಂದು ಹೇಳಡಿ’ ಎಂದು ಸೀತಮ್ಮ ಹೇಳುತ್ತಿದ್ದಳು.
ಸಂಜೆ ಆ ಕಡೆ ಮನೆಯವರು ಈ ಕಡೆ ಮನೆಯವರೆಲ್ಲ ರಾಮಭಟ್ಟರ ಮನೆಗೆ ಬಂದು ಗಣಪತಿಯನ್ನು ನೋಡುತ್ತಿದ್ದರು. ಅವರ ಕೈ ಮೇಲೆ ಒಂದೊಂದು ಚಮಚೆ ಪ್ರಸಾದ ಕೊಡುತ್ತಿದ್ದ ಪ್ರಥಮ. ಸೀತಮ್ಮ ಎಲ್ಲರಿಗೂ ಅರಿಶಿನ ಕುಂಕುಮ ಎಲೆಪಟ್ಟಿ ಕೊಡುತ್ತಿದ್ದರು. ‘ಯಮ್ಮನೆ ಮಂಟಪ ಹೆಂಗಾಜು? ಇಲಿ ಹಾವು ನಾ ಮಾಡಿದ್ದಿ ನೋಡಿ ‘ಎನ್ನುತ್ತಿದ್ದ ಈಶು. ಕಣ್ಣಾಮುಚ್ಚಾಲೆ ಆಟದಲ್ಲಿ ಅಡಗಿಕೊಳ್ಳುವ ಮಕ್ಕಳ ಹಾಗೆಯೇ ಪುಟ್ಟ ಇಲಿ ಹಾವುಗಳು ಅಪ್ಪ ಏರಿಸಿದ ಹೂವಿನ ನಡುವೆ ಅಡಗಿಕೊಂಡುಬಿಟ್ಟಿರುತ್ತಿದ್ದವು. ಎಲ್ಲಿದ್ದಾ ನೀ ಮಾಡಿಟ್ಟಿದ್ದು ಕಾಣತೇ ಇಲ್ಯಲಾ’ ಸ್ನೇಹಿತರು ಹೇಳಿದಾಗ ಎಂದಾಗ ಈಶುವಿಗೆ ನಿರಾಸೆ.
‘ಮುಂದಿನ ವರ್ಷ ಅಪ್ಪ ಮಾಡಿದ ಹಾಂಗೆ ದೊಡ್ಡಕೆ ಗಣಪತಿಯನ್ನೇ ಮಾಡವು ಎಲ್ರಿಗೂ ಕಾಣ್ತು. ಹಾವು ಇಲಿ ಕೇಳವ್ವಿಲ್ಲೆ ನೋಡವ್ವಿಲ್ಲೆ’ ಎಂದು ಗೊಣಗಿಕೊಳ್ಳುತ್ತಿದ್ದÀ ಅವ. ಮತ್ತೆ ಅಮ್ಮನ ಜೊತೆ ಎಲ್ಲರ ಮನೆಗಳನ್ನೂ ಓಡಾಡಿ ಅವರ ಮನೆಯ ಮಂಟಪ ಹಾಗೂ ಗಣಪತಿ ನೋಡಿಕೊಂಡು ಬರುತ್ತಿದ್ದ, ಬಂದ ನಂತರ ಈಶು ಏನು ಹೇಳ್ತಾ ಇದ್ದಾ ಗೊತ್ತಿದ್ದ? ಎಲ್ಲರ ಮನೆ ಗಣಪತಿಗಿಂತಾ ನಮ್ಮನೆ ಗಣಪತಿಯೆ ಚೆಂದ ನಮ್ಮನೆ ಮಂಟಪವೇ ಅಂದ!
ಮರು ದಿನ ಅಂದ್ರೆ ಇಲಿ ಪಂಚಮಿಯ ದಿನವೂ ಹಿಂದಿನ ದಿನದ ಹಾಂಗೆ ಗಣಪತಿಗೆ ಪೂಜೆ ಮಾಡುತ್ತಿದ್ದ. ಸಂಜೆ ಗಣಪತಿಗೆ ಮಾಡಿದ ಅಲಂಕಾರಗಳನ್ನೆಲ್ಲ ತೆಗೆದು ವಿಸರ್ಜನೆ ಮಾಡುತ್ತಿದ್ದ.
‘ಗೌರಿ ಪೋಗುವಳು ಮುದ್ದು ಗೌರಿ ಪೋಗುವಳು ಬಾಲನೊಡಗೊಂಡು ಹರುಷದಿಂದಾ ಗೌರಿ ಪೋಗುವಳು’ ಎಂದು ಊರಿನ ಹೆಂಗಸರೆಲ್ಲ ಹಾಡು ಹೇಳುತ್ತ ಗೌರಮ್ಮನನ್ನು ಎತ್ತಿಕೊ ಂಡು ಕೆರೆಯತ್ತ ನಡೆಯುತ್ತಿದ್ದರು. ಪ್ರತಿ ಮನೆಯ ಗಂಡಸರು ಗಣಪತಿ ಬಪ್ಪಾ ಮೋರಯಾ ಎನ್ನುತ್ತ ಗಣಪತಿಯ ಮೂರ್ತಿಯನ್ನೆತ್ತಿಕೊಂಡು ಕೆರೆಯತ್ತ ಸಾಗುತ್ತಿದ್ದರು. ಮಕ್ಕಳು ಇಲಿ ಹಾವನ್ನು ಮೂರ್ತಿಯನ್ನು ಕೆರೆಯಲ್ಲಿ ಮುಳುಗಿಸುತ್ತಿದ್ದರು. ಪೂಜಿಸಿದ ಗಣಪತಿಯನ್ನು ಹೀಗೆ ಮುಳುಗಿಸುವುದಿರಬಾರದಾಗಿತ್ತು ಎಂದು ಊರಿನ ಅನೇಕ ಮಕ್ಕಳು ಅಳತಿದ್ದ.
ಆದ್ರೆ ಹಬ್ಬದ ಕಥೆ ಇಲ್ಲಿಗೇ ಮುಗದ್ದಿಲ್ಲೆ. ಮಂಟಪ ಇದ್ದಲಿ ಅದನ್ನ ತೆಗಿಯವು ಅಲ್ದ ಪ್ರಥಮ್?
ಭಟ್ರು ಕಬ್ಬನ್ನು ಪುಟ್ಟ ಪುಟ್ಟ ತುಂಡು ಮಾಡಿ ಈಶುಗೆ ಕೊಟ್ರು. ಬಾಳೆ ಕಂದನ್ನು ಕಡಿದು ಕೊಟ್ಟಿಗೆಯಲ್ಲಿರೋ ಹಸುಗಳಿಗೆ ಹಾಕಿದ್ರು, ಫಲವಳಿಗೆಗೆ ಕಟ್ಟಿದ್ದ ತರಕಾರಿಗಳನ್ನು ಅಡುಗೆ ಮಾಡಲ್ಲೆ ಕೊಟ್ಟರು. ಮಾವಿನೆಲೆ ತೋರಣ ಹೂವುಗಳನ್ನೆಲ್ಲ ತೆಗೆದು ಗೊಬ್ಬರಗುಂಡಿಗೆ ಹಾಕತಿದ್ರು. ಅಂತೂ ಇಂತು ಹಬ್ಬ ಮುಗೀತು ಹೇಳಿ ದೊಡ್ಡವರಿಗೆ ಖುಷಿ. ಇನ್ನೂ ಡಬ್ಬಿಲಿ ತುಂಬಿಟ್ಟ ತಿಂಡಿಗಳಿದ್ದು ಅಂತಾ ಈಶುಗೆ ಖುಷಿ.
ಹಬ್ಬ ಮುಗಿದ ಎರಡು ದಿನಗಳಾದ ಮೇಲೆ ನೋಡಿದರೆ ರಾಮ ಭಟ್ಟರು ಮಾಡಿದ ಗಣಪತಿ ಮೂರ್ತಿಗಳೆಲ್ಲ ಕೆರೆ ನೀರಿನಲ್ಲಿ ಮಣ್ಣಾಗಿ ಕರಗಿ ತಳ ಸೇರಿರತಿತ್ತು.. ಊರಿನ ಗಂಡಸರು ಮಕ್ಕಳೆಲ್ಲಾ ಸೇರಿಕ್ಯಂಡು ಮತ್ತೆ ಕೆರೆ ನೀರನ್ನೆಲ್ಲಾ ಎತ್ತಿ ತೋಟಕ್ಕೆ ಹಾಯಿಸ್ತಾ ಇದ್ದ. ಹೂಳನ್ನು ಎತ್ತಿ ಅಡಿಕೆ ಮರ ಹಾಗೂ ಬಾಳೆ ಮರದ ಬುಡದಲ್ಲಿ ಹಾಕ್ತಾ ಇದ್ದ. ಕೊನೆಯಲ್ಲಿ ಜಲದ ಕಣ್ಣನ್ನಾ ಬಿಡಿಸ್ತಾ ಇದ್ದ. ‘ಈ ವರ್ಷದ ಒಂದು ಹಬ್ಬ ಆತು’ ಎನ್ನುತ್ತ ಎಲ್ರೂ ಮನೆಗೆ ಹೋಗುತ್ತಿದ್ದ. ಈಶು ಕುತೂಹಲದಿಂದ ಮರುದಿನ ಬೆಳಗಾದ ಕೂಡ್ಲೆ ಕೆರೆದಂಡೆಗೆ ಹೋಗಿ ಎಷ್ಟು ನೀರು ಬಂಜು ನೋಡಿದ್ರೆ ಮತ್ತೆ ಸ್ವಚ್ಛವಾದ ನೀರು ಕೆರೆಯಲ್ಲಿ ತುಂಬಿಕೊಂಡಿರತ್ತಿತ್ತು. ಹಿಂಗೆ ಪ್ರತೀ ವರ್ಷವೂ ಗೌರಿ ಗಣೇಶನ ಹಬ್ಬ ಸಾಂಗವಾಗಿ ನೆರೆವೇರುತ್ತಿತ್ತು.
ಅದೇ ಊರಿನಲ್ಲಿ ಜೋಯಿಸರು ಇದ್ರು. ಅವರಿಗೆ ರಾಮ ಭಟ್ಟರನ್ನು ಕಂಡರೆ ಒಂಚೂರು ಅಸೂಯೆ ಎಲ್ಲರ ಮನೆಗೂ ಗಣಪತಿ ಮಾಡಿಕೊಡುತ್ರು. ಎಲ್ಲರ ಪ್ರೀತಿಯನ್ನಾ ಗಳಿಸಿಗ್ಯಂಡಿದ್ರು. ಯನಗಿಂತಾ ಎಲ್ರೂ ಅವ್ರಿಗೆ ಗೌರವ ಕೊಡ್ತ…. ಹೀಗೆ ಏನೇನೋ ವಿಚಾರ ಅವರಿಗೆ. ಅವ್ರು ಒಂದು ಉಪಾಯ ಮಾಡತ್ರು. ಏನದು? ಕೇಳು
ಜನರನ್ನೆಲ್ಲಾ ಸೇರಿಸ್ತ್ರು. ಮುಂದಿನ ವರ್ಷ ಊರಿನವ್ರೆಲ್ಲ ಒಂದು ಸಾರ್ವಜನಿಕ ಗಣಪತಿ ಇಡನ, ಎಲ್ರೂ ಸೇರಿ ಮಂಟಪಾ ಕಟ್ಟನ, ಭಜನೆ ಮಾಡನ, ಒಳೊಳ್ಳೆ ಅಡುಗೆ ಮಾಡಿಸಿ ಒಟ್ಟಾಗಿ ಊಟ ಮಾಡನ.. ಹೇಳ್ತ್ರು. ಹೊಸಾ ವಿಷಯಾ ಅಲ್ದ. ಊರಿನವ್ರೆಲ್ಲಾ ಖುಷಿಲಿ ಒಪ್ಪಿಗ್ಯತ್ತ. ಕೆರೆ ಹೂಳೆತ್ತೋದ ರಾಮ ಭಟ್ಟರ ಮನೆಗೆ ಸಾಗಿಸೋದು ಎಲ್ಲಾ ಕಷ್ಟ ಎಂತಕ್ಕೆ? ಹತ್ತಿರದ ಪಟ್ಟಣದಲ್ಲಿ ಪ್ಯಾಸ್ಟರ್ ಆಫ್ ಪ್ಯಾರೀಸಿನ ಗಣಪತಿ ಮೂರ್ತಿ ಸಿಗತು. ಒಂದಾಳೆತ್ರ ಇರ್ತು, ಆದ್ರೂ ತುಂಬಾ ಹಗುರ ಇರ್ತು. ನಾವು ಅಲ್ಲಿಂದ ದೊಡ್ಡ ಗಣಪತಿ ತರನ. ಅದೇ ಗಾಡಿಯಲ್ಲಿ ಎಲ್ಲರ ಮನೆಗೆ ಬೇಕಾದಷ್ಟು ಗಣಪತಿಗಳನ್ನೂ ಅದೇ ಗುಡಿಗಾರ್ರಿಂದಾ ತರನ.. ಅದೂ ಹೊಸಾ ವಿಷಯಾ ಆಗಿದ್ದರಿಂದ ಜನರೆಲ್ಲಾ ಒಪ್ಪತ.
‘ಭಟ್ರೆ ಯಮ್ಮನೆ ಸಲುವಾಗಿ ಈ ವರ್ಷ ಗಣಪತಿ ಮಾಡದು ಬ್ಯಾಡಾ, ಪ್ಯಾಟೆಯಿಂದ ಗಣಪತಿ ತರತ್ಯ ಎಂದು ಊರಿನವರು ಒಬ್ಬೊಬ್ಬರಾಗಿ ಬಂದು ಹೇಳಿದಾಗ ಭಟ್ಟರಿಗೆ ಸಣ್ಣ ಆಘಾತ. ಭಟ್ರು ದೇವರ ಮೂರ್ತಿಗಳನ್ನು ಮಾಡೋದು ಸೇವೆ ಅಂದುಕೊಂಡಿದ್ರು..
ಆ ವರ್ಷ ಜನರು ಕೆರೆ ಹೂಳೆತ್ತತ್ವಿಲ್ಲೆ. ಭಟ್ಟರಿಗೆ ತಮ್ಮ ಮನೆಗೆ ಬೇಕಾದ ಗಣಪತಿ ಮೂರ್ತಿಯನ್ನು ಮಾಡಲ್ಲೆ ಆಗ್ತಿಲ್ಲೆ. ಪಟ್ಟಣದಿಂದ ಮೂರ್ತಿ ತರಲಿಕ್ಕೂ ಅವ್ರಿಗೆ ಮನಸ್ಸಾಗ್ತಿಲ್ಲೆ, ಅವರು ಪರಿಸರಪ್ರಿಯರು. ಭಟ್ಟರು ಕೊರಗಿ ಕೊರಗಿ ಹಾಸಿಗೆ ಹಿಡಿತ್ರು. ಅವರ ಇಷ್ಟ ದೈವ ಅಲ್ವ ಗಣಪತಿ? ಒಂದಿನಾ ಭಟ್ಟರ ಕನಸಿನಲ್ಲಿ ಬರ್ತಾ ‘ನೀನು ಮಾಡದೇ ಇದ್ದ ತಪ್ಪಿಗೆ ನೀ ಎಂತಕ್ಕೆÉ ಕೊರಗತೆ? ಪ್ರತಿ ವರ್ಷ ಹದಿನಾರು ಗಣಪತಿ ಮೂರ್ತಿ ಮಾಡುತ್ತಿದ್ಯಲಾ. ಅಷ್ಟು ಸಂಖ್ಯೆಯ ಗಿಡಗಳನ್ನು ಬೋಳು ಬೆಟ್ಟದ ಮೇಲೆ ನೆಟ್ಟರೆ ಅದೇ ನೀ ಯನಗೆ ಸಲ್ಲಿಸ ಪೂಜೆ ಆಗ್ತು” ಹೇಳತಾ. ಭಟ್ಟರು ದೇವರು ತೋರಿದ ದಾರಿಯಲ್ಲಿ ನಡೆಯದು ಅಂದ್ಕತ್ರು.
ಬೋಳು ಬೆಟ್ಟಕ್ಕೆ ಮಗನ್ನೂ ಕರಕಂಡು ಹೋಗಿ ‘ಓಂ ಗಂ ಗಣಪತಯೇ ನಮಃ’ ಅಂತಾ ಹೇಳ್ತಾ ಹದಿನಾರು ಗಿಡಗಳನ್ನು ನೆಟ್ಟಿಕ್ಕೆ ಬತ್ರು. ಈ ವರ್ಷ ನಮ್ಮದು ವೃಕ್ಷ ಗಣಪನ ಪೂಜೆ ಹೇಳತ್ರು. ಆದರೆ ಸೀತಮ್ಮಂಗೆ ಸಮಾಧಾನ ಆಜಿಲ್ಲೆ. ಮಾಡಿದ ನೈವೇದ್ಯ ಇಡದೆಲ್ಲಿ ಹೇಳದು ಚಿಂತೆ ಅವಳಿಗೆ, ‘ಮಗಾ ನೀನಾದ್ರು ಮಣ್ಣಿನ ಗಣಪತಿ ಮೂರ್ತಿ ಕೊಡಾ’ ಹೇಳ್ತು. ಮಣ್ಣಿಲ್ಯಲೇ ಅಮ್ಮಾ, ತಡಿ ಗೋವಿನ ಸಗಣಿಯಲ್ಲಿ ಮೂರ್ತಿ ಮಾಡ್ತಿ ಹೇಳಿ ಗೋಮಯಕ್ಕೆ ಒಂದಿಷ್ಟು ಅಕ್ಕಿ ಹಿಟ್ಟು ಸೇರಿಸಿಪುಟ್ಟ ಮೂರ್ತಿ ಮಾಡಿ ದೇವರ ಮನೆಗೆ ತಂದಿಡ್ತಾ. ಅಮ್ಮ ಮಗ ಅದನ್ನೇ ಪೂಜೆ ಮಾಡ್ತ.
ಊರಿನವ್ರೆಲ್ಲ ಹ್ಯಾಂಗೆ ಪೂಜೆ ಮಾಡ್ತ? ಕುತೂಹಲದ ಪ್ರಶ್ನೆ ಕಥೆಯ ನಡುವೆ ತೂರಿ ಬಂತು.
ಊರಿನವು ಸಾರ್ವಜನಿಕವಾಗಿ ಗಣಪನನ್ನು ಕೂಡಿಸ್ತ. ಭರ್ಜರಿಯಾಗಿ ಹಬ್ಬಾ ಮಾಡತ.. ಪಟಾಕಿ ಹೊಡಿತ ಭಜನೆ ಮಾಡತ, ಊಟ ಮಾಡ್ತ. ಊರಿನವೆಲ್ಲ ಒಟ್ಟಾಗಿ ಊಟಾ ಮಾಡ್ತ. ಎರಡು ದಿನ ಹೀಂಗೆ ಹಬ್ಬ ಮಾಡ್ತ. ಜೋಯಿಸರಿಗೆ ತನ್ನ ಯೋಜನೆ ಯಶಸ್ವಿ ಆತು ಹೇಳಿ ಭಾರಿ ಖುಷಿ. ಅವತ್ತು ರಾತ್ರಿ ಊರಿನವ್ರೆಲ್ಲ ಗಣಪತಿ ಮೂರ್ತಿಗಳನ್ನು ಮೂರ್ತಿಗಳನ್ನೆಲ್ಲ ಕೆರೆಗೆ ತಂದು ಮುಳುಗಿಸ್ತ. ಮರುದಿನ ರಾಮ ಭಟ್ಟರು ಕೆರೆಗೆ ಹೋಗಿ ನೋಡತ್ರು. ಮೂರ್ತಿ ನೀರಿನಲ್ಲಿ ಸರಿಯಾಗಿ ಮುಳುಗದೇ ತೇಲ್ತಾ ಇರತು. ಗಣಪತಿಯ ಕಾಲು ಕೈ ಮುರಿದು ಹೋಗಿರ್ತು. ನೀರಿಗೆ ರಾಸಾಯನಿಕ ಬಣ್ಣ ಬಿಟ್ಗೊಂಡಿರ್ತು. ನೀರಿನಲ್ಲಿ ಸಳಸಳನೇ ಓಡಾಡಿಕ್ಯಂಡಿದ್ದ ನೂರಾರು ಮೀನುಗಳೂ ಕೂಡಾ ಸತ್ತು ವಾಸನೆ ಬರ್ತಾ ಇರ್ತು. ರಾಮ ಭಟ್ಟರು ವ್ಯಥೆಯಿಂದ ಮನೆಗೆ ಹೋಗತ್ರು. ಕೆರೆ ಸ್ವಚ್ಚ ಮಾಡಲಿಕ್ಕೆ ಬಂದ ಜನರಿಗೂ ಏನೋ ಒಂಥರಾ ಕಸಿವಿಸಿ. ಪೂಜೆ ಮಾಡಿದ ಗಣಪತಿಯನ್ನು ಈ ಸ್ಥಿತಿಯಲ್ಲಿ ನೋಡೋ ಹಾಂಗಾತಲಿ. ಥೋ ಎಂದು ಗೊಣಗಿಕೊಂಡ್ರು.
ಮೀನು ಸತ್ತಿದ್ದು ನೋಡಿದ್ರೆ ನೀರಿನಲ್ಲಿ ಗಣಪತಿ ಮೂರ್ತಿಗೆ ಹಚ್ಚಿದ ಆರ್ಸನಿಕ್ ಬೆರೆತ ಬಣ್ಣ ಬೆರೆತ ಹಾಂಗಿದ್ದು. ಪ್ರತಿ ವರ್ಷದ ಹಾಂಗೆ ನಮ್ಮನೆ ತೋಟಕ್ಕೆ ನೀರು ಹೂಳು ಹಾಕದು ಬ್ಯಾಡಾ. ದೂರದ ಕೊಡ್ಲಿಗೆ ಹಾಕಿ ಅಂತಾ ಪಕ್ಕದ ತೋಟದ ಮಾದೇವಣ್ಣ ಹೇಳಿದಾಗ ಎಲ್ಲರ ಮೋರೆ ಪೆಚ್ಚಾಗುತ್ತದೆ. ಬೇರೆ ದಾರಿ ಕಾಣದೇ ನೀರನ್ನ ದೂರದ ಕೊಡ್ಲಿಗೆ ತಗೆದುಕೊಂಡು ಹೋಗಿ ಸುರುವಿ ಕೆರೆ ಸ್ವಚ್ಛ ಮಾಡೋದ್ರಲ್ಲಿ ಎಲ್ಲರಿಗೂ ಸುಸ್ತಾಗಿ ಹೋಗ್ತು. ‘ಮುಂದಿನ ವರ್ಷ ರಾಮ ಭಟ್ರ ಹತ್ರನೆ ಗಣಪತಿ ಮಾಡ್ಸದು ಒಳ್ಳೇದು. ಪ್ರತಿ ವರ್ಷ ಇಷ್ಟೆಲ್ಲ ಕಷ್ಟ ಆಗ್ತಾ ಇತ್ತಿಲ್ಲೆ ಎಂದು ಯಾರೋ ಒಬ್ಬರು ಹೇಳ್ತಾ ಇದ್ರು. ಆದ್ರೆ ಜೋಯಿಸರು ಸುಮ್ಮನಾಗವ್ರ? ‘ಹಂಗೇನೂ ಬ್ಯಾಡ ಮುಂದಿನ ವರ್ಷವೂ ಇಂಥಾ ಮೂರ್ತಿಗಳನ್ನೇ ಈ ಕೆರೆಲಿ ಮುಳುಗಿಸೋದು ಬ್ಯಾಡಾ. ಕಾಡಿನಲ್ಲಿರೋ ಕೆರೆಯಲ್ಲಿ ಮುಳುಗಿಸನ, ಕೆರೆ ಸೋಸುವ ಕೆಲಸ ಇರತಿಲ್ಲೆ’……ಕೆಲ್ಸ ಕಡಿಮೆ ಆಗ್ತಲಿ ಹೇಳಿ ಊರಿನವರೆಲ್ಲ ಒಪ್ಪಿಗ್ಯತ್ತ.
‘ಅಷ್ಟೆಲ್ಲ ಮೀನ ಸತ್ತಿದ್ದು ನೋಡಿರೂ ಯಾರಿಗೂ ಪಾಪ ಅನ್ನಿಸಿದ್ದೇ ಇಲ್ಯನೇ ಅಮ್ಮಾ?’ ಮಗ ಕೇಳಿದ.
‘ಇಲ್ಲೆ ಪುಟ್ಟಾ, ಸ್ವಂತದ ಸುಖದ ಮುಂದೆ ಉಳಿದಿದ್ದರ ಬಗ್ಗೆ ಲಕ್ಷ್ಯ ಇರ್ತಿಲ್ಲೆ ಎಷ್ಟೋ ಜನಕ್ಕೆ’ ಮುಂದೆಂತಾ ಆತು ಕೇಳು.
ಮಾರನೆಯ ವರ್ಷವೂ ಯಥಾ ಪ್ರಕಾರ ಪ್ಯಾಸ್ಟರ್ ಆಫ್ ಪ್ಯಾರಿಸ್ಸಿನ ಮೂರ್ತಿಗಳನ್ನೇ ತಂದು ಪೂಜೆ ಮಾಡತ. ಕೆಂಪಿ ಬಣ್ಣದ್ದು, ಗುಲಾಬಿ ಬಣ್ಣದ್ದಮೂರ್ತಿಗಳನ್ನೆಲ್ಲ ತಗಂಡು ಬತ್ತ. ಪೂಜೆ ಮಾಡತ. ರಾಮ ಭಟ್ಟರು ಬೆಟ್ಟದಲ್ಲಿ ಹದಿನಾರು ಗಿಡಗಳನ್ನು ನೆಟ್ಟಿಕ್ಕೆ ಬತ್ರು. ಈಶು ಗೋಮಯ ಗಣಪತಿ ಮಾಡ್ತಾ ಅಮ್ಮಾ ಮಗ ಪೂಜೆ ಮಾಡಿ ಅಪ್ಪ ನೆಟ್ಟ ಗಿಡದ ಬುಡದಲ್ಲಿ ವಿಸರ್ಜನೆ ಮಾಡ್ತ. ಆ ವರ್ಷ ಊರಿನವು ಮೆರವಣಿಗೆ ಮಾಡ್ತಾ , ಪಟಾಕಿ ಹೊಡಿತಾ ಕಾಡಿನ ಕೆರೆಗೆ ಗಣಪತಿ ಮೂರ್ತಿಗಳನ್ನು ತಗಂಡು ಹೋಗಿ ಮುಳುಗಿಸಿಕ್ಕೆ ಬತ್ತ. ಹಬ್ಬದ ಕೆಲಸ ಸಸಾರಕ್ಕೆ ಮುಗತ್ತು ಕೆರೆ ಸೋಸುವ ತಲೆಬಿಸಿ ಇಲ್ಲೆ ಹೇಳಿ ಖುಷಿಪಡತ. ಮಳೆಗಾಲ ಮುಗಿತು. ಭೂಮಿ ಮೇಲೆ ಸ್ವಲ್ಪ ಸ್ವಲ್ಪ ನಿಂತ ನೀರೆಲ್ಲ ಒಣಗ್ತು. ಕಾಡಿನ ಪ್ರಾಣಿ ಪಕ್ಷಿಗಳಿಗೆಲ್ಲಾ ಕುಡಿಯಲ್ಲೆ ಕೆರೆನೀರೇ ಗತಿಯಾಗ್ತು.
ಒಂದು ದಿನ ಜೋಯಿಸರ ಮನೆಗೆ ಅರಣ್ಯವನ್ನು ಕಾಯಲಿಕ್ಕಿದ್ದ ಗಾರ್ಡ ಬರ್ತಾ. “ಕಾಡಿನಲ್ಲಿ ಪ್ರಾಣಿ ಪಕ್ಷಿಗಳ ಕಳೆಬರಹ ಸಿಗ್ತಾ ಇದೆ, ಇಷ್ಟು ವರ್ಷ ಇಷ್ಟೆಲ್ಲಾ ಪ್ರಾಣಿ ಸಾಯ್ತಾ ಇರಲಿಲ್ಲ. ಈಗ್ಯಾಕೆ ಸಾಯ್ತ ಇವೆ ನೋಡಲಿಕ್ಕೆ ನಿನ್ನೆ ಅರಣ್ಯಾಧಿಕಾರಿಗಳು, ಪರಿಸರ ತಜ್ಞರು ಕಾಡೆಲ್ಲ ಓಡಾಡಿ ನೋಡಿದು. ನೋಡಿದ್ರೆ ನಿಮ್ಮೂರಿನವ್ರು ಗಣಪತಿ ಮೂರ್ತಿಗಳನ್ನು ಕಾಡಿಗೆ ತಂದು ಮುಳುಗಿಸಿದ್ದೀರಿ. ಅವು ನೀರಲ್ಲಿ ಪೂರ್ತಿ ಕರಗಲಿಲ್ಲ ಬಿಳಿ ಬಿಳಿ ತುಂಡಾಗಿ ತೇಲ್ತಾ ಅದೆ. ನೀರಿನ ಗುಣಮಟ್ಟ ಮೊದಲಿನ ಹಾಗಿಲ್ಲ ಅನ್ನೋದು ಗೊತ್ತಾಯ್ತು. ಇನ್ನು ಮೇಲೆ ಗಣಪತಿಯನ್ನು ಕಾಡಿನ ಕೆರೆಗೆ ತಂದು ಮುಳುಗಿಸಿದ್ರೆ ಕೇಸ್ ಹಾಕ್ತೇವಿ ಅಂತಾ ನೋಟೀಸ್ ಕಳಿಸಿದ್ದಾರೆ. ತಗಳಿ, ಮತ್ತೆ ಮುಂದಿನ ವರ್ಷ ಗಣಪತಿ ತಂದು ಮುಳುಗಿಸಿದರೆ ಕೇಸ್ ಹಾಕ್ತಾರಂತೆ” ಎಂದ. ಅದನ್ನೆಲ್ಲಾ ಕೇಳ್ತಾ ಇದ್ದ ಜೋಯಿಸರ ಹೆಂಡ್ತಿಗೆ ಸಿಟ್ಟು ಬಂತು. ಊರಲ್ಲಿ ಎಲ್ಲಾರೂ ಪರಿಸರಸ್ನೇಹಿ ಗಣಪತಿ ತಂದು ಎಷ್ಟು ಚೆಂದಾ ಪೂಜೆ ಮಾಡತಿದ್ದ ಕೋತಿ ತಾ ಕೆಡದಲ್ಲದೇ ವನಾನು ಕೆಡಿಸಿತ್ತು ಅನ್ನ ಹಾಂಗೆ ಮಾಡಿದ್ರಿ. ಎಲ್ಲರ ಮನಿಗೂ ಬಣ್ಣ ಬಣ್ಣದ ಗಣಪತಿ ತಗಂಡು ಬರನ ಹೇಳಿ ಎಂತಾ ಸಾಧಿಸಿದ್ರಿ? ಮೊದಲಿನ ಹಾಂಗಾದ್ರೆ ನೀರೂ ಹಾಳಾಗತಿತ್ತಿಲ್ಲೆ, ಪ್ರಾಣಿ ಪಕ್ಷಿಜಲಚರಗಳೂ ಸಾಯತಿದ್ವಿಲ್ಲೆ.
ನಿಮಗೇನು ಸಿಕ್ತು ಇದರಿಂದ?ಗಟ್ಟಿಯಾಗಿ ಕೇಳಿದಳು. ‘ಏನೂ ಇಲ್ಲೆ’ ಎಂದು ಜೋಯಿಸರು ತಲೆ ತಗ್ಗಿಸಿದರು. ಊರಿನವರಿಗೆಲ್ಲ ತಮ್ಮ ತಪ್ಪಿನ ಅರಿವಾಗಿತ್ತು. ಅರಣ್ಯಾಧಿಕಾರಿಯ ಬಳಿಗೆ ಹೋಗಿ ‘ನಾವಿನ್ನು ಪ್ಯಾಸ್ಟರ್ ಆಫ್ ಪ್ಯಾರೀಸಿನ ಗಣಪತಿ ಪೂಜೆ ಮಾಡೋದಿಲ್ಲ’, ಕಾಡಿನ ಕೆರೆಲಿ ಮುಳುಗಿಸೋದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟು ಬಂದರು. ಶಪಥ ಮಾಡಿದ್ರು. ಆದ್ರರೆ ಚೌತಿ ಹಬ್ಬ ನಿಲ್ಲಿಸೋ ಹಾಗಿಲ್ಲವಲ್ಲಾ .
ಮತ್ತೆ ರಾಮಭಟ್ಟರ ಮನೆಗೆ ಬಂದರು. “ಮುಂದಿನ ವರ್ಷದಿಂದ ಮತ್ತೆ ಗಣಪತಿ ಮೂರ್ತಿಗಳನ್ನು ಮಾಡಿಕೊಡಿ ಅಂತಾ ಬೇಡಿಕೆ ಇಟ್ರು, ನಮ್ಮದು ತಪ್ಪಾಯ್ತು “ಎಂದು ಅವರ ಕಾಲಿಗೆ ಬಿದ್ರು. ಆದರೆ ಭಟ್ಟರು ಗಣಪತಿಯನ್ನು ಮಾಡಲಿಕ್ಕೆ ಒಪ್ಪಲಿಲ್ಲ. ಯನಗೀಗ ವಯಸ್ಸಾಯಿತು. ಆನು ಈಗ ವೃಕ್ಷ ಗಣಪತಿಯನ್ನು ಪೂಜೆ ಮಾಡ್ತ ಇದ್ದಿ. ಹಬ್ಬ ಮಾಡೋದರ ಬದಲು ಗಿಡ ನೆಡ್ತಾ ಇದ್ದೇನೆ ಅಂದ್ರು. ಪ್ರಥಮ ಈಗ ದೊಡ್ಡವನಾಗಿ ಯುವಕನಾಗಿದ್ದ. ‘ನೀನಾದ್ರೂ ಊರಿನವ್ಕೆ ಬೇಕಾದಷ್ಟು ಗಣಪತಿ ಮೂರ್ತಿಗಳನ್ನಾ ಮಾಡಿಕೊಡೋ, ಹೇಗೂ ಅಪ್ಪನ ಹತ್ತಿರ ಕಲಿತಿದ್ಯಲೋ’ ಎಂದರು. ಅವನು ಅಪ್ಪನತ್ತ ನೋಡಿದ. ಅವರೂ ಒಪ್ಪಿಗೆ ಸೂಚಿಸಿದರು.
‘ಮೂರ್ತಿಗಳನ್ನು ಮಾಡತಿ, ಆದರೆ ಮಣ್ಣಿಂದಲ್ಲ. ಮಲೆನಾಡುಗಿಡ್ಡ ತಳಿಯ ಹಸುವಿನ ಸಗಣಿದು ಅಂದ್ರೆ ‘ಗೋಮಯ ಗಣಪ’ ಆದ್ರೆ ಯನ್ನದೊಂದು ಕಂಡಿಷನ್’ ಎಂದ ಈಶು. ಊರಿನವ್ರಿಗೆ ಕುತೂಹಲ.. ಮೂರ್ತಿಯ ಹೊಟ್ಟೆಯಲ್ಲಿ ಅತ್ತಿಮರ ಅಂಟುವಾಳ ಮರ, ಮತ್ತಿಮರ ತಾರಿಮರ ಹೀಗೆ ಕಾಡಿನಲ್ಲಿ ಬೆಳೆಯಬಹುದಾದ ವೃಕ್ಷಗಳ ಬೀಜಗಳನ್ನು ಇಡತಿ, ಹಬ್ಬ ಮುಗಿದ ಮೇಲೆ ನಮ್ಮನೆ ಸಮೀಪದ ಬೆಟ್ಟದಲ್ಲಿ ಗುಂಡಿ ತೆಗೆದು ನೀರು ತುಂಬಿಸಿ ಗಣಪತಿ ಮುಳುಗಿಸವು….… ಜನರೆಲ್ಲ ಒಪ್ಪಿಕೊಳ್ಳುತ್ತಾರೆ.
‘ಈಶೂಂದು ಮಸ್ತ ಈಡಿಯಾನಲೇ ಅಮ್ಮಾ’…ಪ್ರಥಮನ ಉತ್ಸಾಹದ ದ್ವನಿ ಕೇಳಿತು.
ಆ ವರ್ಷ ಗಣಪತಿ ಮೂರ್ತಿಗಳನ್ನು ಮುಳುಗಿಸಿದ ಜಾಗದಲ್ಲೆಲ್ಲ ಗಿಡಗಳು ಹುಟ್ಟಿಕೊಳ್ಳುತ್ತವೆ. ರಾಮ ಭಟ್ಟರು ಎಳೆಯ ಗಿಡದ ಸುತ್ತಲೂ ಮಣ್ಣು ಮುಚ್ಚಿ ಬಿಗಿ ಮಾಡತ್ರು ಊರಿ£ ಮಕ್ಕಳೆಲ್ಲ ಸೇರಿ ದನ ಮೇಯದ ಹಾಂಗೆ ಗಿಡಗಳಿಗೆ ರಕ್ಷಣಾ ಬೇಲಿ ಹಾಕತ. ಬೋಳು ಬೆಟ್ಟಕ್ಕೆ ವಿನಾಯಕ ವನ ಅಂತಾ ಹೆಸರಿಡ್ತ. ಹತ್ತಾರು ವರ್ಷ ಜೌತಿ ಹಬ್ಬ ಮಾಡಿದಾಗ ಗಣಪತಿ ಮೂರ್ತಿಯ ಉದರದ ಬೀಜದಿಂದ ಗಿಡಗಳು ಹುಟ್ಟಿ ಬೋಳು ಬೆಟ್ಟ ಹೆಸರಿಗೆ ತಕ್ಕ ಹಾಂಗೆ ದೊಡ್ಡ ವನವೇ ಆಗ್ತು ಇದು ನಮ್ಮನೆ ಗಣಪನ ಗಿಡ. ಅದು ನಿಮ್ಮನೆದ?ಹೇಳ್ತ ಮಕ್ಕಳು ಅಲ್ಲಿ ಆಟ ಆಡ್ತ. ಮರ ದೊಡ್ಡದಾದ ಹಾಂಗೆ ನೂರಾರು ಪಕ್ಷಿಗಳು ಅಲ್ಲಿಗೆ ಬತ್ತ. ಇಲ್ಲಿಗೀ ಕಥೆ….ವಸುಮತಿ ಮಗನತ್ತ ನೋಡುತ್ತಾ ಮಾತು ನಿಲ್ಲಿಸಿದಳು.
‘ಇಲ್ಲಿಗೀ ಕಥೆ ಮುಗಿಯಿತು. ಆನು ಮಾಡುವ ಕೆಲಸವೂ ಮುಗಿಯಿತು ಟಣ್ ಟಣಾ ಟಣ್’.. ಎದ್ದು ಕುಣಿಯಲಾರಂಭಿಸಿದ ಮಗನ ಕೈ ಹಿಡಿದ ವಸುಮತಿ ಕಥೆ ಹ್ಯಾಂಗಿತ್ತು ಹೇಳಿದ್ದಿಲ್ಯಲಾ ಪುಂಡು’ ಎಂದು ಕೇಳಿದಳು.
‘ಅಮ್ಮಾ ಕಥೆ ಚೊಲೋ ಇತ್ತು. ನಾವು ಗೋಮಯ ಗಣಪನ್ನ ಅಥವಾ ಮಣ್ಣಿನ ಗಣಪನ್ನೇ ತರನ ಹೇಳಿ ಅಪ್ಪಂಗೆ ಹೇಳನ, ಮತ್ತೆ ಪಟಾಕಿನೂ ಇನ್ನು ಮೇಲೆ ಹೊಡಿತ್ನಿಲ್ಲೆ ನಾನು. ತರದು ಬ್ಯಾಡ’… ವಸುಮತಿಯ ಮೊಗವರಳಿತ್ತು.
‘ಆದ್ರೆ ನಿಂಗ ಯನಗೆಂತೋ ಬೇರೆದು ಕೊಡಿಸವು’ ಎಂದ ಪ್ರಥಮ ಗಂಭೀರವಾಗಿ…
ಅಮ್ಮ ಪ್ರಶ್ನಾರ್ಥಕವಾಗಿ ಮಗನ ಕಡೆ ನೋಡಿದಳು ‘ಯಂಗ ದೋಸ್ತರೆಲ್ಲ ಸೇರಿ ಗಿಡಗಳನ್ನ ನೆಡತ್ಯ ಬೋಳು ಬೆಟ್ಟ ಕೊಡಿ’ ಎಂದ!
2 thoughts on “ಕಥೆ ಕಥೆ ಕಾರಣ”
ಪರಿಸರ ಹಾಗೂ ವೃಕ್ಷ ಗಣಪತಿ ಶ್ರೇಷ್ಠ ಎಂದು ಸಾರುವ ಕಥೆ ತುಂಬಾ ಸೊಗಸಾಗಿದೆ. ಕಥೆ ನೇಯ್ದ ರೀತಿ ಅದ್ಭುತ.
ಮುಗ್ಧ ಮನಸ್ಸುಗಳ ಮೇಲೆ ಕ್ಷ ಕಿರಣ ಬೀರುವ, ಈರ್ಷೆ, ಅಸೂಯೆಗಳನ್ನು ಬದಿಗೊತ್ತಿ, ದೇವರ ಬಗೆಗಿನ, ದೇವರ ಹಾದಿಯ ತೋರಿಸುವ, ಪರಿಣಾಮಕಾರೀ ಕಥೆ!
ಅಭಿನಂದನೆಗಳು.