ಸುಭಿಕ್ಷೆ ರಾಜ್ಯಾಡಳಿತ!


ಹಾಸ್ಯ/ವಿಡಂಬನೆ ಬರಹ

ಅದೊಂದು ಸುಭಿಕ್ಷೆ ರಾಜ್ಯ. ಅಷ್ಟೇ ಅಲ್ಲ ಅದು ಭೂ ಲೋಕದ ಸ್ವರ್ಗವೂ ಹೌದು. ಅದನ್ನು ಸುಮಾರು ವರ್ಷಗಳಿಂದ ಮಹಾರಾಜ ಶ್ರೀ ಶ್ರೀ ಗುಂಡಣ್ಣನವರು ರಾಜ್ಯ ಭಾರ ಮಾಡುತ್ತಿದ್ದಾರೆ. ಅಲ್ಲಿಯ ಪ್ರಜೆಗಳೆಲ್ಲ ರಾಜನ ಔದಾರ್ಯದ ಹಲವಾರು ‘ ಉಚಿತ ‘ ಕೊಡುಗೆಗಳಿಂದ (ಏನೊಂದೂ ಕಷ್ಟಪಡದೆ!) ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ಆದರೂ ಮಹಾರಾಜ ಶ್ರೀ ಶ್ರೀ ಗುಂಡಣ್ಣ ತಮ್ಮ ಪ್ರಜೆಗಳ ಕುಂದು ಕೊರತೆಗಳನ್ನು ಖುದ್ದಾಗಿ ಕೇಳಲು, ನೋಡಲು ಮತ್ತು ದಯಪಾಲಿಸಿದ ಉಚಿತ ಕೊಡುಗೆಗಳು ರಾಜ್ಯದ ಎಲ್ಲ ಜನರಿಗೆ ಸರಿಯಾಗಿ ತಲುಪುತ್ತಿವೆಯೋ ಇಲ್ಲವೋ ಎಂದು ಪರೀಕ್ಷಿಸಲು (ತಾಲೂಕು – ಜಿಲ್ಲಾ ಸಮಿತಿ ರಚಿಸದೆ!) ಸ್ವಯಂ ತಾವೇ ಆಗಾಗ್ಗೆ ವೇಷ ಮರೆಸಿಕೊಂಡು ಇಡೀ ರಾಜ್ಯಾದ್ಯಂತ ಸಂಚರಿಸುತ್ತಾರೆ.

ಕೊಡುಗೆಗಳ ಕುರಿತಾಗಿ ಹಾಗೂ ರಾಜ್ಯದ ಪ್ರಜೆಗಳ ಸಂಕಷ್ಟಗಳನ್ನು ಅರಿಯುವ ಸಲುವಾಗಿ ಒಂದು ದಿನ ರಾಜ್ಯದ ಎಲ್ಲ ಪತ್ರಕರ್ತ ಬಂಧುಗಳನ್ನು ತನ್ನ ‘ ಸ್ವರ್ಗ ರೆಸಾರ್ಟ್ ‘ ನಲ್ಲಿ ನಡೆಸುವ ಪತ್ರಿಕಾ ಗೋಷ್ಠಿಗೆ ಆಹ್ವಾನಿಸಿದರು ಮಹಾರಾಜ ಶ್ರೀ ಶ್ರೀ ಗುಂಡಣ್ಣನವರು. ರಾಜ್ಯದ ಕಣ್ಣು, ಕಿವಿ ಮತ್ತು ನಾಲಿಗೆಯ ಒಡೆಯರಾದ ಪತ್ರಕರ್ತರಿಗೆ (ಪ್ರಿಂಟ್/ದೃಶ್ಯ ಮಾಧ್ಯಮದ ಬಂಧುಗಳು!) ಕೊಡಲು ಹಲವು ಬಗೆಯ ‘ ಗಿಫ್ಟ್ ಕಿಟ್ ‘ ಗಳನ್ನು ಔತಣ ಕೂಟದ (ಸುರಪಾನ ಕಾರ್ಯಕ್ರಮದ ಬಳಿಕ) ಎಲ್ಲ ಪತ್ರಕರ್ತರಿಗೆ ಕೊಡಲು ಮೊದಲೇ ಏರ್ಪಾಟು ಮಾಡಿದ್ದರು ಮಹಾ ಮಂತ್ರಿಗಳಾದ ವಿದ್ವಾನ್ ವೀರಬಸಪ್ಪನವರು ಮತ್ತು ಅವರ ತಂಡದವರು.

ರೆಸಾರ್ಟ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯ ಪ್ರಶ್ನೋತ್ತರದ ಸವಿಸ್ತಾರ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಅವು ಯಥಾವತ್ತಾಗಿ ಈ ಕೆಳಗಿನಂತಿವೆ.

” ರಾಜರೇ, ನೀವು ಮಾರು ವೇಷದಲ್ಲಿ ರಾಜ್ಯಾದ್ಯಂತ ಸಂಚರಿಸುವುದು ಏಕೆ?”.

“ನಮ್ಮ ಆಡಳಿತದ ಕುರಿತು ಸಾಮಾನ್ಯ ಜನರ ಅಭಿಪ್ರಾಯವೇನು ಎಂದು ಸ್ಪಷ್ಟವಾಗಿ ಕಾಣಲು ಮತ್ತು ಕಿವಿಯಾರೆ ಕೇಳಲು ನಮ್ಮ ಮಾರುವೇಷ ಸಹಾಯ ಮಾಡುತ್ತದೆ. ಹೀಗಾಗಿ ಮುಂದೆಯು ಸಹಾ ಈ ಮಾರು ವೇಷದ ಅಭಿಯಾನವನ್ನು ನಾವು ಮುಂದುವರೆಸುವೆವು”

” ಇತ್ತೀಚಿಗೆ ತಾವು ಅಲ್ಲಲ್ಲಿ ಪ್ರಜೆಗಳಿಗಾಗಿ ವಿಶೇಷ ತರಬೇತಿ ನೀಡುವ ಸಂಸ್ಥೆಗಳನ್ನು ಸ್ಥಾಪಿಸಿದ್ದೀರಿ. ಅಲ್ಲಿ ಪ್ರಜೆಗಳಿಗೆ ಏನನ್ನು ಕಲಿಸುತ್ತಾರೆ?”

” ಅಲ್ಲಿ ಸಾಲವನ್ನು ಹೇಗೆ ಪಡೆಯಬೇಕು ಹಾಗೂ ಸರ್ಕಾರಿ ಯೋಜನೆಗಳ ಸಬ್ಸಿಡಿ ಹೇಗೆ ಸದ್ವಿನಿಯೋಗಗೊಳಿಸಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿ ಕೊಡಲಾಗುತ್ತದೆ “.

” ಇಷ್ಟಕ್ಕೂ ಸಾಲ ಏಕೆ ಮಾಡಬೇಕು ? “

” ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು. ಈ ಗಾದೆ ನೀವು ಕೇಳಿಲ್ಲವೇ? ಇದು ಮೊದಲಿನಿಂದ ಬಂದ ಶುದ್ಧ ಸಂಪ್ರದಾಯ. ಇದನ್ನು ಬಿಡಲು ಆಗುತ್ತದೆಯೇ…
ಅಲ್ಲದೇ ಹೆಚ್ಚೆಚ್ಚು ಸಾಲ ಮಾಡಿದವರಿಗೆ ಈ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಅಲ್ಲದೇ ಅವರ ಹಿಂದೆ ಸಾಲ ಕೊಟ್ಟವರು ಅಥವಾ ಬ್ಯಾಂಕ್ ಸಿಬ್ಬಂದಿ ಸಹಾ ಓಡಾಡಿ ಆ ವ್ಯಕ್ತಿಯ ಘನತೆಯನ್ನು ಹೆಚ್ಚಿಸುತ್ತಾರೆ “

” ಸಾಲ ಮಾಡಿದವರಿಗೆ ಸಮಾಜದಲ್ಲಿ ನಾಚಿಕೆ ಆಗುವುದಿಲ್ಲವೇ? “

” ರಾಜ್ಯಗಳು ತಮ್ಮಉಚಿತ ಕೊಡುಗೆಗಳಿಗಾಗಿ ಸಿಕ್ಕಾ ಪಟ್ಟೆ ಸಾಲ ಮಾಡಿದ ಬಳಿಕ ಪ್ರಜೆಗಳು ಸಾಲ ಮಾಡಬಾರದು ಎನ್ನುವುದು ಯಾವ ನ್ಯಾಯ! ಯಥಾ ರಾಜ ತಥಾ ಪ್ರಜೆ…ಇದರಲ್ಲಿ ನಾಚಿಕೆ ಪಡುವಂತಹುದು ಏನಿದೆ? ಸಮಾಜ ಅಂದರೆ ಏನು? ‘ ಒಂದೇ ಜಾತಿಗೆ ‘ ಸೇರಿದ ಹಲವಾರು ಪ್ರಜೆಗಳ ಒಕ್ಕೂಟವೇ ಸಮಾಜ ಅಲ್ಲವೇ…”

” ಅದು ಸರಿ ಮಹಾರಾಜರೇ…ಸೊಳ್ಳೆಗಳು ನಮ್ಮ ರಾಜ್ಯದಲ್ಲಿ ವೀರ ವಿಹಾರ ಮಾಡುತ್ತಿವೆ. ಡೆಂಗ್ಯೂ ಜ್ವರ ಹೆಚ್ಚಾಗಿ ನಮ್ಮ ಪ್ರಜೆಗಳು ತುಂಬಾ ಕಷ್ಟ ಪಡುತ್ತಿದ್ದಾರೆ…ಅದಕ್ಕೆ ಪರಿಹಾರ ಏನಾದರೂ ಕಂಡುಕೊಂಡಿರುವಿರಾ? “

” ಯಾಕಿಲ್ಲ…ಸೊಳ್ಳೆಗಳಿಗೆ ಹಂತ ಹಂತವಾಗಿ ಕಡ್ಡಾಯ ಫ್ಯಾಮಿಲಿ ಪ್ಲಾನಿಂಗ್ ಮಾಡಿಸುತ್ತೇವೆ. ಅಲ್ಲಿಯವರೆಗೆ ಸೊಳ್ಳೆ ಬತ್ತಿಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುತ್ತೇವೆ. ಅಲ್ಲದೇ ಪ್ರಜೆಗಳಿಗೆ ಉಚಿತವಾಗಿ ಸೊಳ್ಳೆ ಪರದೆಗಳನ್ನು ಹಂಚುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.”

” ಪ್ರತೀ ದಿನ ‘ ಅನ್ ಶೆಡ್ಯೂಲ್ಡ್ ಲೋಡ್ ಶೆಡ್ಡಿಂಗ್ ‘ ನಿಂದಾಗಿ ಸಾಮಾನ್ಯ ಪ್ರಜೆಗಳು ಹೆಚ್ಚೂ ಕಡಿಮೆ ಕತ್ತಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಪ್ರಜೆಗಳ ಮನದಲ್ಲಿ ಮೂಡಿದೆ. ಅಲ್ಲದೇ ಕರೆಂಟ್ ಇರದೆ ಮಕ್ಕಳು ರಾತ್ರಿ ಸರಿಯಾಗಿ ಪಠ್ಯ ಪುಸ್ತಕಗಳನ್ನು ಓದಲು ಸಹಾ ಆಗುತ್ತಿಲ್ಲ. ಜೊತೆಗೆ ಹೆಚ್ಚು ಪುಸ್ತಕಗಳು ತುಂಬಿದ ಸ್ಕೂಲ್ ಬ್ಯಾಗುಗಳನ್ನು (ತಮ್ಮ ಸರ್ಕಾರದ ಮತ್ತೊಂದು ಉಚಿತ ಕೊಡುಗೆ!) ಮಕ್ಕಳು ಶಾಲೆಗೆ ತರಲಾಗುತ್ತಿಲ್ಲ ಎಂದು ಶಿಕ್ಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ… ಈ ಬಗ್ಗೆ ತಮ್ಮ ಅಭಿಪ್ರಾಯವೇನು ಮಹಾರಾಜರೇ?”

” ನಮ್ಮ ಎಲ್ಲ ಗೌರವಾನ್ವಿತ ಪ್ರಜೆಗಳ ಮನೆ ಮನೆಗೆ ಕಂದೀಲು ತಲುಪಿಸುತ್ತೇವೆ. ಅದಕ್ಕೆ ಬಳಸುವ ಬತ್ತಿ ಹಾಗೂ ಎಣ್ಣೆಯನ್ನು ಉಚಿತವಾಗಿ ಸರಬರಾಜು ಮಾಡುತ್ತೇವೆ. ಜೊತೆಗೆ ಮೇಣದಬತ್ತಿ ಸಹಾ ಎಲ್ಲ ಕಡೆ ಸಬ್ಸಿಡಿ ದರದಲ್ಲಿ ಸಿಗುವ ವ್ಯವಸ್ಥೆ ಮಾಡುತ್ತೇವೆ…ಹೀಗೆ ರಾತ್ರಿಯ ಕತ್ತಲನ್ನು ಹೊಡೆದೋಡಿಸಿ ‘ ಭರವಸೆಯ ‘ ಬೆಳಕನ್ನು ಪಸರಿಸಲು ಸದಾ ಸಿದ್ಧವಾಗಿರುತ್ತದೆ ನಮ್ಮ ಪ್ರಜಾ ಸರ್ಕಾರ. ಇನ್ನು ವಿದ್ಯಾರ್ಥಿಗಳು ಹೆಚ್ಚೆಚ್ಚು ಓದಿ ವಿದ್ಯಾವಂತರಾಗಿ ಏನು ಮಾಡಬೇಕು?…ಓದಿದ ಅವರೆಲ್ಲರಿಗೆ ಕೆಲಸ ಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲ… ಹೆಚ್ಚು ಭಾರವಿರುವ ಪುಸ್ತಕಗಳ ಬ್ಯಾಗುಗಳನ್ನು ಬಾಲ್ಯತನದಿಂದ (ಕತ್ತೆಗಳಂತೆ!) ಹೋರುವ ಅಭ್ಯಾಸ ಅವರ ಮುಂದಿನ ದಿನಗಳಲ್ಲಿ ‘ ಸ್ವಯಂ ಉದ್ಯೋಗ ‘ ಯೋಜನೆ ಅಡಿಯಲ್ಲಿ ಅವರು ಭಾರವಾದ ಚೀಲಗಳನ್ನು ಸರಾಗವಾಗಿ ಹೋರುವ ಕೂಲಿಯಾಗಿ ಕೆಲಸ ಮಾಡಿ ರಾಜ್ಯದ ಉತ್ಪಾದನೆ ಹೆಚ್ಚಿಸುವದರಲ್ಲಿ ಸಂಶಯವಿಲ್ಲ “.

” ಹಳ್ಳಿ – ಶಹರ ಎನ್ನದೆ ನಾಯಿಗಳು ಸ್ವಚ್ಛಂದವಾಗಿ ತಿರುಗುತ್ತಾ ಮಕ್ಕಳು ವೃದ್ಧರು ಎನ್ನುವ ಭೇದವಿಲ್ಲದೆ ಯಾರನ್ನು ಬೇಕಾದರೂ ಸಲೀಸಾಗಿ ಕಚ್ಚುತ್ತಿವೆ. ಆಸ್ಪತ್ರೆಗಳಿಗೆ ಹೋದರೆ ನಾಯಿ ಕಡಿತಕ್ಕೆ ಅಲ್ಲಿ ಸರಿಯಾದ ಔಷದಿಗಳು ಸಿಗುತ್ತಿಲ್ಲ…ಈ ಸಮಸ್ಯೆಗೆ ಪರಿಹಾರ ಏನು ಮಹಾರಾಜರೇ? “

” ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಜೆಗಳಿಗೆ ಪಾದರಕ್ಷೆಗಳನ್ನು (ಬಾಟಾ ಬ್ರಾಂಡ್ ಅಲ್ಲ!) ಉಚಿತವಾಗಿ ಸರಬರಾಜು ಮಾಡುತ್ತೇವೆ. ನಾಯಿಗಳಿಗೆ ಮಂಪರು ಚುಚ್ಚುಮದ್ದನ್ನು ಹಾಕಿ ಬೇರೆ ಊರಿಗೆ (ಆ ಊರಿನ ನಾಯಿಗಳನ್ನು ಈ ಊರಿಗೆ – ಈ ಊರಿನ ನಾಯಿಗಳನ್ನು ಆ ಊರಿಗೆ ಎನ್ನುವ ಸ್ಕೀಮಿನಲ್ಲಿ!) ಕಳಿಸುವ ಏರ್ಪಾಟು ಮಾಡುತ್ತೇವೆ. ಇದೆಲ್ಲವನ್ನೂ ಮೀರಿ ಯಾರಿಗಾದರೂ ದುರದೃಷ್ಟವಶಾತ್ ನಾಯಿ ಕಚ್ಚಿದರೆ ಆ ನಾಯಿ ಸಾಕ್ಷಾತ್ತು ‘ ದೇವರ ಸ್ವರೂಪ ‘ ಎನ್ನುವುದನ್ನು ಪ್ರಜೆಗಳಿಗೆ ನೆನಪು ಮಾಡಿಕೊಡಲು ಸರ್ಕಾರ ಎಲ್ಲ ಕಡೆ ಡಂಗುರ ಹೊಡೆಸುತ್ತದೆ…”

” ಸರಕಾರಿ ಕಚೇರಿಗಳಲ್ಲಿ ಫೈಲುಗಳು ತೆವಳುತ್ತಾ ತೆವಳುತ್ತಾ ಮುಂದೆ ಸಾಗದೆ ವರ್ಷಗಟ್ಟಲೆ ಇಟ್ಟ ಜಾಗದಲ್ಲೇ ಕೊಳೆತು ಹೋಗುತ್ತಿವೆ. ಅವುಗಳನ್ನು ಕಡಿಮೆ ಮಾಡಲು ತಾವು ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ತಿಳಿಯಲು ಬಯಸುತ್ತೇವೆ ಮಹಾರಾಜರೇ…”

” ನೋಡಿ…ಕಡತ ವಿಲೇವಾರಿಯನ್ನು ವೇಗವಾಗಿ ಮಾಡಲಿ ಎನ್ನುವ ಸದುದ್ದೇಶದಿಂದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಲಿ ಮತ್ತು ಹೆಗ್ಗಣಗಳನ್ನು ಸಾಕಲು ಏರ್ಪಾಡು ಮಾಡಿರುವೆವು. ಬಡಾ ನೇತಾರರ ಫೈಲುಗಳು ( ದೊಡ್ಡ ದೊಡ್ಡ ಸ್ಕ್ಯಾಂಗಳನ್ನು ಒಳಗೊಂಡ!) ಬೇಗ ವಿಲೇವಾರಿ ಆಗಲು (ರಾತ್ರೋ ರಾತ್ರಿ ಸುಟ್ಟು ಭಸ್ಮವಾಗಲು!) ಅವುಗಳನ್ನು ಇಟ್ಟ ರೂಮಿನಲ್ಲಿ ‘ ಶಾರ್ಟ್ ಸರ್ಕ್ಯೂಟ್ ‘ ವ್ಯವಸ್ಥೆ ಮಾಡಿರುತ್ತೇವೆ.”

” ಮಹಾರಾಜರೇ…ತಾವು ನಿದ್ದೆ ಮಾಡೋದಿಲ್ಲ…ಪ್ರಜೆಗಳನ್ನು ಸಹಾ ನಿದ್ದೆ ಮಾಡೋದಿಕ್ಕೆ ಬಿಡೋದಿಲ್ಲ ಎಂದು ಈ ಮುಂಚೆ ತಾವು ಬಹಳ ಸಲ ಹೇಳಿದ್ದು ನೆನಪಿದೆ ಸಾರ್…ಇದರ ಗೂಢಾರ್ಥ ಏನು? “

” ಅಕಸ್ಮಾತ್ ಆಗಿ ನಾನು ಗಾಢ ನಿದ್ದೆ ಮಾಡಿದರೆ ನಮ್ಮ ಮಹಾ ಮಂತ್ರಿ ನನ್ನನ್ನು ಕೆಳಕ್ಕೆ ತಳ್ಳಿ ಕೂಡಲೇ ಸಿಂಹಾಸನ ಅಲಂಕರಿಸುತ್ತಾರೆ (ಆಕ್ರಮಿಸುತ್ತಾರೆ!) …ಇನ್ನು ಪ್ರಜೆಗಳು ನಿದ್ದೆ ಮಾಡೋದಿಕ್ಕೆ ಬಿಟ್ಟರೆ ನನ್ನ ‘ ಹಗಲು ವೇಷ ‘ ನೋಡೋರು ಯಾರು? ಹೀಗಾಗಿ ಇಲ್ಲಿಯವರೆಗೆ ಯಾರಿಗೂ ಸೊಂಪಾಗಿ ನಿದ್ದೆ ಮಾಡೋಕೆ ನಾನು ಅವಕಾಶ ಮಾಡಿಕೊಟ್ಟಿಲ್ಲ. ತಿಳಿಯಿತಾ…”

” ನೀವು ತಿಂಗಳಿಗೆ ಒಂದು ಅಥವಾ ಎರಡು ಪರ ರಾಜ್ಯಗಳಿಗೆ ಪ್ರಯಾಣ ಮಾಡುವ ಉದ್ದೇಶ ಏನು ಮಹಾರಾಜರೇ… “

” ಆ ರಾಜ್ಯಗಳಿಂದ ಸಾಲವನ್ನು ಎತ್ತುವಳಿ ಮಾಡುವ ಅವಕಾಶಕ್ಕಾಗಿ! ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಹೆಚ್ಚೆಚ್ಚು ಸಾಲ ಮಾಡಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ. ತಿಳಿಯಿತಾ? “

” ಹೊಸದಾಗಿ ಪ್ರಾರಂಭಿಸಿದ ಬಾಲ ಗುರುಕುಲಗಳಲ್ಲಿ ಓದಿದವರಿಗೆ ಸರ್ಟಿಫಿಕೇಟ್ ಕೊಡುತ್ತೀರಾ? “

” ಸರ್ಟಿಫಿಕೇಟ್ ಬದಲಾಗಿ ಒಂದು ಭಿಕ್ಷಾ ಪಾತ್ರೆ ಕೊಡುತ್ತೇವೆ. ಅದರ ಮೇಲೆ ನಮ್ಮ ರಾಜ ಮುದ್ರೆ ಇರುತ್ತದೆ. ಅದು ಒಂದು ತರಹ ನಮ್ಮ ಸರ್ಕಾರದ ಅಧಿಕೃತ ಲೈಸೆನ್ಸ್ ಇದ್ದಂತೆ. ಅದನ್ನು ಪಡೆದ ಬಾಲ ಭಿಕ್ಷುಕ ರಾಜ್ಯದ ಎಲ್ಲಾದರೂ ಭಿಕ್ಷೆ ಬೇಡಲು ಅರ್ಹನಿರುತ್ತಾನೆ. “

” ವಂಡರ್ ಫುಲ್ ಮಹಾರಾಜರೇ… ಅದಿರಲಿ ವಿರೋಧ ಪಕ್ಷದ ಹಲವರನ್ನು ತಮ್ಮ ಪಕ್ಷಕ್ಕೆ ಯಾಕೆ ಎತ್ತಾಕಿಕೊಂಡು ಬಂದಿರಿ?… ಇದು ಪಕ್ಷ ಹಾಗೂ ಪ್ರಜೆಗಳಿಗೆ ಮಾಡುವ ದ್ರೋಹವಲ್ಲವೇ? ಪಕ್ಷಾಂತರದ ಬಿಗಿ ನಿಯಮ ಇಂತಹ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲವೇ ? “

” ಪಕ್ಷಾಂತರದ ನಿಯಮಗಳು ಇದಕ್ಕೆ ಬಿಲ್ಕುಲ್ ಅನ್ವಯವಾಗುವುದಿಲ್ಲ ಪಕ್ಷಾಂತರ ನಮ್ಮ ಪ್ರಜಾ ನಾಯಕರ ಜನ್ಮ ಸಿದ್ಧ ಹಕ್ಕು! ಅಲ್ಲದೇ ಇದು ನಮ್ಮ ದೇಶದಲ್ಲಿ ರಾಮಾಯಣ ಕಾಲದಿಂದಲೂ ನಡೆದು ಬಂದಂತಹ ಸಂಸ್ಕೃತಿ. ಉದಾಹರಣೆಗೆ ವಿಭೀಷಣ ರಾಮನ ಪಕ್ಷಕ್ಕೆ ಸೇರಿದ್ದರಿಂದಲೇ ಲಂಕೆಗೆ ರಾಜನಾದ. ಹೌದು ತಾನೇ…ಇದನ್ನು ಮರೆತರೆ ಹೇಗೆ? “

ಅಷ್ಟರೊಳಗೆ ಇದ್ದಕ್ಕಿದ್ದಂತೆ ಮಹಾರಾಣಿಯಿಂದ ಬುಲಾವ್ ಬಂದ ಕಾರಣ ಮಹಾರಾಜ ಶ್ರೀ ಶ್ರೀ ಗುಂಡಣ್ಣನವರು ತಮ್ಮ ಅಸೀನದಿಂದ ಏದ್ದು ಅವಸರದಿಂದ ಹೊರಟರು. ಕೂಡಲೇ ಅವರ ಒಡ್ಡೋಲಗ ಸಹಾ ಅವರನ್ನು ಹಿಂಬಾಲಿಸಿತು. ಅದರೊಂದಿಗೆ ಮಹಾರಾಜರ ಪತ್ರಿಕಾ ಗೋಷ್ಟಿ ಕೂಡ ಬರಖಾಸ್ತು ಆಯಿತು.

ಪತ್ರಕರ್ತರಿಗೆ ಏರ್ಪಡಿಸಿದ ಭೂರಿ ಭೋಜನ ಮತ್ತು ವಿತರಿಸಿದ ಭರ್ಜರಿ ‘ ಗಿಫ್ಟ್ ‘ ನೊಂದಿಗೆ ಅಂದಿನ ಪತ್ರಿಕಾ ಗೋಷ್ಠಿ ಮುಕ್ತಾಯವಾಯಿತು.

ಬೆಳಗಿನ ಬ್ರಾಹ್ಮಿ ಸಮಯಕ್ಕೆ ಏಳುವ ಅಭ್ಯಾಸ ಎಲ್ಲ ರಾಜ ಮಹಾರಾಜರದು. ನಮ್ಮ ಮಹಾರಾಜ ಶ್ರೀ ಶ್ರೀ ಗುಂಡಣ್ಣ ಸಹಾ ಆ ಹೊತ್ತಿನಲ್ಲೇ ಅಂದು ನಿದ್ದೆಯಿಂದ ಎದ್ದರು. ಗುಡಿಗಳಲ್ಲಿ ಘಂಟೆ ಶಬ್ದ ಇನ್ನೂ ಶುರುವಾಗಿರಲಿಲ್ಲ. ಆದರೆ ನಮ್ಮ ರಾಜರಿಗೆ ‘ ಮಾಸ್ಟರ್ ಪ್ಲಾನ್ ಐಡಿಯಾ ‘ ಗಳು ಈ ಹೊತ್ತಿನಲ್ಲೇ ಹೊಳೆಯುವದು. ಇದಕ್ಕೆ ಮಹಾರಾಜ ಶ್ರೀ ಶ್ರೀ ಗುಂಡಣ್ಣ ಹೊರತಲ್ಲ.

ಅಂದು ಅಂತಹ ಬ್ರಾಹ್ಮಿ ಮುಹೂರ್ತದಲ್ಲಿ ಪಕ್ಷದ ಯುವ ನಾಯಕರಿಗೆ ತರಬೇತಿ ಕೊಟ್ಟು ಮುಂದಿನ ದಿನಗಳಲ್ಲಿ ಅವರ ಅಮೂಲ್ಯ ಸೇವೆ ರಾಜ್ಯಕ್ಕೆ ಪಡೆಯಬೇಕು ಎಂದು ಮಹಾರಾಜರ ತಲೆಯಲ್ಲಿ ಬಂದ ಐಡಿಯಾ ಕಾರ್ಯರೂಪಕ್ಕೆ ತರಲು ‘ ಸ್ಕೆಚ್ ‘ ಹಾಕಲಾಯಿತು.

ಈ ನಿಟ್ಟಿನಲ್ಲಿ ಮೊದಲು ಕೆಲ ಆಯ್ದ ಯುವ ನಾಯಕರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಆಯ್ಕೆ ಮಾಡಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು ಮಹಾರಾಜರು. ಅದಕ್ಕಾಗಿ ಐದು ದಿನಗಳ ಬೃಹತ್ ತರಬೇತಿ ಶಿಬಿರವನ್ನು ರಾಜಧಾನಿಯಲ್ಲಿ ಆಯೋಜಿಸಿದರು. ಅಲ್ಲದೇ ದಿನಕ್ಕೊಬ್ಬ ಸಂಪನ್ಮೂಲ ವ್ಯಕ್ತಿಗಳಿಂದ ಪಾಠಗಳ ಏರ್ಪಾಟು ಮಾಡಿದರು.

ಮೊದಲ ದಿನ – ‘ ಕ್ಲಾಸ್ ಅಂಡ್ ಮಾಸ್ ಬೆಗ್ಗರ್ ಲೀಡರ್ ‘ ನಿಂದ ಲೆಸನ್. ಆತ ‘ ಮತ ಭಿಕ್ಷೆ ‘ ಹೇಗೆ ಬೇಡಬೇಕು… ಅದನ್ನು ಬೇಡುವಾಗ ಹೇಗೆ ಬಣ್ಣದ ಮಾತುಗಳನ್ನು ಆಡಿ, ಉಚಿತ ಕೊಡುಗೆಗಳ ಮಹತ್ವವನ್ನು ಜನರಂಜಕವಾಗಿ ಪ್ರಜೆಗಳಿಗೆ ಅದರಲ್ಲೂ ಮುಖ್ಯವಾಗಿ ಮಹಿಳಾ ಮತದಾರರನ್ನು ಹೇಗೆ ಸೆಳೆಯಬೇಕು ಎನ್ನುವುದನ್ನು ಕೆಲವು ಉದಾಹರಣೆ ಮೂಲಕ ಶಿಬಿರಾರ್ಥಿಗಳಿಗೆ ತಿಳಿಸಿದ.

ಎರಡನೇ ದಿನ – ಮಹಿಳಾ ಮಣಿಗಳದ್ದು. ಓಣಿಯಲ್ಲಿ ಅಷ್ಟೇ ಅಲ್ಲ ಊರಲ್ಲೆಲ್ಲ ‘ ಜಗಳಗಂಟಿ ಜಾನಕಮ್ಮ ‘ ಎಂದು (ಕು) ಖ್ಯಾತಿ ಪಡೆದ ನಾಯಕಿಯಿಂದ ಅಂದಿನ ಸ್ತ್ರೀ ಶಿಬಿರಾರ್ಥಿಗಳಿಗೆ ಪಾಠ, ಪ್ರವಚನ. ಹೆಣ್ಣು ಮಕ್ಕಳ ತಂಟೆಗೆ ಪಡ್ಡೆ ಹುಡುಗರು ಬರದಂತೆ ಏನು ಮಾಡಬೇಕು…ಹೆಂಡತಿಯ ಮಾತು ಕೇಳದ ‘ ಗಂಡು ಪ್ರಾಣಿ ‘ ಯನ್ನು ಹೇಗೆ ಪಳಗಿಸಬೇಕು…ಇತ್ಯಾದಿ ವಿಷಯಗಳ ಕುರಿತು ಸವಿಸ್ತಾರವಾಗಿ ಸಾಂಗವಾಗಿ ತರಬೇತಿ ನೀಡಿದಳು ಮಹಿಳಾ ನಾಯಕಿ ಜಾನಕಮ್ಮ.

ಮೂರನೆಯ ದಿನ – ಒಬ್ಬ ಹೆಸರಾಂತ ಗೂಂಡಾ ಬಂದು ಕ್ಲಾಸ್ ತೆಗೆದುಕೊಂಡ. ಎದುರಾಳಿ ಪಕ್ಷದ ನಾಯಕರ ಮೇಲೆ ಹೇಗೆ ವಾಗ್ದಾಳಿ ಜೊತೆಗೆ ದೈಹಿಕ ದಾಳಿ ಆರಂಭಿಸಬೇಕು… ಕೊಳೆತ ಟಮೋಟ, ಕೋಳಿ ಮೊಟ್ಟೆಗಳು ಹಾಗೂ ಹಳೆಯ ಚಪ್ಪಲಿಗಳ ಸಂಗ್ರಹ (ಬ್ರಾಂಡೆಡ್ ಅಲ್ಲ!) ಮಾಡಿ ಎದುರಾಳಿಗಳ ಸಭೆಯಲ್ಲಿ ಅವುಗಳನ್ನು ಹೇಗೆ ‘ ಸರ್ಜಿಕಲ್ ಸ್ಟ್ರೈಕ್ ‘ ಮಾಡಬೇಕು?… ಸಭೆಗಳು ನಡೆಯುವಾಗ ಮೈಕುಗಳನ್ನು ಕಿತ್ತಿ ಹೇಗೆ ಗಲಾಟೆ ಮಾಡಬೇಕು? ಇತ್ಯಾದಿ ಇತ್ಯಾದಿ ಮಹತ್ತರ ವಿಷಯಗಳ ಮೇಲೆ ಪಾಠ ಮಾಡಿ ನಂತರ ಕೆಲವು ದೃಷ್ಟಾಂತಗಳ ಮೂಲಕ
ಪ್ರಾಕ್ಟಿಕಲ್ ಆಗಿ ತೋರಿಸಿದ.

ನಾಲ್ಕನೆಯ ದಿನ – ಯಾವುದೇ ಮೇಕಪ್ ಇಲ್ಲದೆ ಪ್ರಜೆಗಳ ಮುಂದೆ ಹೇಗೆ ನಟಿಸಬೇಕು ಎಂದು ತೋರಿಸಿದ ಒಬ್ಬ ನುರಿತ ಹಿರಿಯ ರಾಜಕೀಯ ಕಲಾವಿದ. ಯಾವಾಗ ಸತ್ತಂತೆ ನಾಟಕ ಮಾಡಬೇಕು…ಯಾವಾಗ ಮತದಾರನ ಮುಂದೆ ಮೊಸಳೆ ಕಣ್ಣೀರು ಸುರಿಸಬೇಕು…ಅನುಕಂಪದ ಹೊಳೆ ಹರಿಸಬೇಕು… ಮತದಾರರನ್ನು ಹೇಗೆಲ್ಲಾ ಓಲೈಸಬೇಕು ಎಂದೆಲ್ಲ ಪ್ರತ್ಯಕ್ಷವಾಗಿ ವೈವಿಧ್ಯಮಯ ಪಾತ್ರಗಳ ನಟನೆಯ ಮೂಲಕ ತೋರಿಸಿದ.

ಇನ್ನು ಐದನೆಯ ಮತ್ತು ಕಡೆಯ ದಿನ ಒಬ್ಬ ವಿಚಾರವಾದಿ ಮತ್ತು ಪ್ರಖಂಡ ಭಾಷಣಕಾರ ಯಾವ ‘ ವಿಷಯ ‘ ದ ಬಗ್ಗೆಯೂ ಮಾತನಾಡದೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮತದಾರರನ್ನು ಹೇಗೆ ಕೊರೆಯೋದು… ಎಂದು ಪ್ರಾಕ್ಟಿಕಲ್ ಆಗಿ ತಿಳಿಸಿದ.

ಬ್ರಾಹ್ಮಿ ಮಹೂರ್ತ ಮುಗಿದ ಬಹಳ ಹೊತ್ತಿನ ಬಳಿಕವೂ ಸುಖ ನಿದ್ರೆಯಲ್ಲಿದ್ದ ಮತ್ತು ಇತ್ತೀಚಿಗಷ್ಟೇ ಸರ್ಕಾರದ ನಿರುದ್ಯೋಗಿ ಭತ್ಯೆಗೆ ಅರ್ಜಿ ಸಲ್ಲಿಸಿದ್ದ ‘ ಸೂರ್ಯ ವಂಶ ‘ ದ ಗುಂಡಣ್ಣ ಮಂಚದ ಮೇಲೆ ಇನ್ನೂ ‘ ಶವಾಸನ ‘ ಹಾಕಿ ಮಲಗಿದ್ದ… ಗುಂಡಣ್ಣನಿಗೆ ಏನೋ ನೆನಪಾಗಿ ಸಡನ್ನಾಗಿ ಮಗ್ಗಲು ಬದಲಿಸಿದ. ಪರಿಣಾಮ ಧೊಪ್ಪನೆ ಮಂಚದಿಂದ ಕೆಳಗೆ ಬಿದ್ದ ಜೋಳ ತುಂಬಿದ ಮೂಟೆಯಂತೆ! ನೆಲಕ್ಕೆ ಬಿದ್ದು ಎಚ್ಚರವಾದಾಗ ಗುಂಡಣ್ಣನಿಗೆ ತಾನು ಗಾಢ ನಿದ್ರೆಯ ಕನಸಿನಲ್ಲಿ ಮಹಾರಾಜ ಶ್ರೀ ಶ್ರೀ ಗುಂಡಣ್ಣನ ಅವತಾರ ತಾಳಿ ರಾಜ್ಯಭಾರ ಮಾಡಿದ್ದು ನೆನಪಾಗಿ ಮನಸಿನಲ್ಲೇ ಮುಸಿ ನಕ್ಕ!
*

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

16 thoughts on “ಸುಭಿಕ್ಷೆ ರಾಜ್ಯಾಡಳಿತ!”

  1. JANARDHANRAO KULKARNI

    ಸುಭೀಕ್ಷ ರಾಜ್ಯಾಡಳಿತ, ವಿಡಂಬನಾತ್ಮಕ ಲೇಖನ ಧೀರ್ಘವಾದರೂ ಚನ್ನಾಗಿದೆ.

  2. ಧರ್ಮಾನಂದ ಶಿರ್ವ

    ಸುಭಿಕ್ಷೆ ರಾಜ್ಯಾಡಳಿತ! ವಿಡಂಬನೆ ರಾಜಕೀಯದ ಅಸಲೀ ಒಳನೋಟವನ್ನು ಹೊರಗೆಡಹಿದೆ.
    ಅಭಿನಂದನೆಗಳು.

  3. ಗುಂಡಣ್ಣ ಕನಸಿನ ರಾಜ್ಯಭಾರ, ಪತ್ರಕರ್ತರೊಂದಿಗಿನ ಸಂವಾದ, ಶಿಬಿರ ಆಯೋಜನೆ ಎಲ್ಲಾ ಒಂದಕ್ಕಿಂತ ಒಂದು ವಿಶಿಷ್ಟ, ವಿಡಂಬನೆ ರೂಪಕವಾಗಿ ದ್ದವು.ಅಭಿನಂದನೆಗಳು ಸರ್. ನಿಮ್ಮ ವಿಡಂಬನೆ ಓದುವುದೇ ತುಂಬಾ ಖುಷಿ ,ಸಂತೋಷದಾಯಕ.

  4. ಮ.ಮೋ.ರಾವ್ ರಾಯಚೂರು

    ‘ಸುಭಿಕ್ಷೆ ರಾಜ್ಯಾಡಳಿತ’ ನಮ್ಮ ರಾಜಕೀಯ ಆಡಳಿತದ ಡೊಂಬರಾಟವನ್ನು ಸ್ಪಷ್ಟವಾಗಿ ಮತ್ತು ಎಳೆಎಳೆಯಾಗಿ ಬಿಡಿಸಿಟ್ಟಿದೆ. ಇಲ್ಲಿ ಮಹಾರಾಜರ ಯೋಚನೆಗಳು, ಯೋಜನೆಗಳು ಅದ್ಭುತ. ಪ್ರಶ್ನೆಗೆ ತಕ್ಕ ಉತ್ತರ ಮತ್ತು ಆಳ್ವಿಕೆಗಾಗಿ ತಕ್ಕ ತರಬೇತಿ! ಇದು ಒಂದು ವಿಡಂಬನೆಯ ಜೊತೆಗೆ ಇಂದಿನ ಆಡಳಿತಗಳ ವಿಶ್ಲೇಷಣೆಯೂ ಆಗಿದೆ. ಕವಿ ಮಂಗಳೂರು ರಾಘವೇಂದ್ರರ ವಿಚಾರಧಾರೆಗೆ ಒಂದು ಸಲಾಂ. ಅಭಿನಂದನೆಗಳು.

  5. ಮಹಾರಾಜ್ ಶ್ರೀ ಶ್ರೀ ಗುಂಡಣ್ಣ ನವರ ಆಡಳಿತ ವೈಖರಿ ಹಾಸ್ಯ/ವಿಡಂಬನಾತ್ಮಕ ಬರಹ ಮೂಲಕ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ. ಅಭಿನಂದನೆಗಳು

  6. ಶೇಖರಗೌಡ ವೀ ಸರನಾಡಗೌಡರ್

    ಗುಂಡಣ್ಣನ ಕನಸಿನ ಘಟನೆಗಳು ಸದ್ಯದ ರಾಜಕೀಯ ಡೊಂಬರಾಟದ ನೈಜ ಚಿತ್ರಣವೇ ಎಂದರೆ ತಪ್ಪಾಗಲಾರದು.
    ವಿಡಂಬನೆಗಳ ರಚನೆ ನಿಮಗೆ ಕರಗತವಾಗಿದೆ.
    ವಿಡಂಬನಾ ಚಕ್ರವರ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter