ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಮಾರ್ಕ್ವೆಜ್ ಭಕ್ತರು

ಕನ್ನಡದ ತುಂಬ ಜನ ಸಾಹಿತಿಗಳು ಪಾಶ್ಚಾತ್ಯ ಸಾಹಿತ್ಯದ ಭಕ್ತರು. ನೋಬೆಲ್ ಪ್ರಶಸ್ತಿ ವಿಜೇತರಾದ ಆಲ್ಬರ್ಟ್ ಕಮೂ ಮತ್ತು ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ಪಾಲಿಗೆ ದೇವರಿಗಿಂತ ಹೆಚ್ಚು! ಕನ್ನಡದ ಬಹುತೇಕ ವಿಮರ್ಶಕರು ಮತ್ತು ಅನುವಾದಕರು ಇವರಿಬ್ಬರನ್ನು ದೇವರಂತೆ ಆರಾಧಿಸುತ್ತ ಬಂದಿದ್ದಾರೆ. ನಿಜವಾದ ಭಕ್ತ ದೇವರನ್ನು ಪೂಜಿಸುವುದಿಲ್ಲ, ಪ್ರೀತಿಸುತ್ತಾನೆ! ಆದರೆ ಡೋಂಗಿ ಭಕ್ತರು ದೇವರನ್ನು ಪ್ರೀತಿಸುವುದಿಲ್ಲ, ಪೂಜಿಸುತ್ತಾರೆ!

ಕಮೂ ಮತ್ತು ಮಾರ್ಕ್ವೆಜ್ ವಿಮರ್ಶಾತೀತರೆಂಬುದು ಕನ್ನಡದ ಡೋಂಗಿ ಭಕ್ತರ ಬಲವಾದ ನಂಬುಗೆ. ಇವರ ಪಾಲಿಗೆ ದೇವರಾದ ಅವರಿಬ್ಬರ ಕುರಿತು ಯಾರೂ ವಿಮರ್ಶಾತ್ಮಕವಾಗಿ ಮಾತನಾಡುವಂತಿಲ್ಲ ಅಥವಾ ಬರೆಯುವಂತಿಲ್ಲ. ಅವರಿಬ್ಬರು ಬರೆದದ್ದಲ್ಲ ಬಂಗಾರ ಎಂಬ ಭ್ರಮೆ ನಮ್ಮ ಡೋಂಗಿ ಭಕ್ತರಿಗಿದೆ. ಅವರ ಅತಿರೇಕದ ಮತ್ತು ನಂಬಲಸಾಧ್ಯವಾದ ವಾದಗಳು ತುಂಬ ತಮಾಷೆಯಾಗಿವೆ.

ಕಮೂ ಮತ್ತು ಮಾರ್ಕ್ವೆಜ್ ಪ್ರಪಂಚದ ಗಣ್ಯ ಲೇಖಕರು. ಅವರ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ ಬದಲಾಗಿ ತುಂಬ ಗೌರವವಿದೆ. ಆದರೆ ನನಗೆ ಆಕ್ಷೇಪವಿರುವುದು ಅವರ ಹೆಸರಿನಲ್ಲಿ ಕೆಳಮಟ್ಟದ ರಾಜಕೀಯ ಮಾಡುವ ಅವರಿಬ್ಬರ ಭಕ್ತರಾದ ಕನ್ನಡದ ಕೆಲವು ಛಿದ್ರ ಮನಸ್ಸಿನ ಸಾಹಿತಿಗಳ ಕುರಿತು ಮಾತ್ರ. ಕಮೂ ಮತ್ತು ಮಾರ್ಕ್ವೆಜ್ ರಾಜಕೀಯ ಮಾಡಿ ಮುಂದೆ ಬಂದವರಲ್ಲ. ಪ್ರತಿಭಾ ಸಂಪನ್ನರಾದ ಅವರು ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಮುಂದೆ ಬಂದವರು. ಕನ್ನಡದ ಕೆಲವು ದ್ವಿತೀಯ ದರ್ಜೆಯ ಅನುವಾದಕರು ಮತ್ತು ಪ್ರತಿಭಾ ದರಿದ್ರರಾದ ವಿಮರ್ಶಕರು ಕಮೂ ಮತ್ತು ಮಾರ್ಕ್ವೆಜನ ಹೆಸರು ದುರುಪಯೋಗಪಡಿಸಿಕೊಂಡು ತಾವು ತುಂಬ ದೊಡ್ಡವರೆಂದು ಬೀಗುತ್ತಿದ್ದಾರೆ. ಇದು ದಶಕಗಳಿಂದ ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿದೆ.

ಅಸ್ತಿತ್ವವಾದ, ಪರಕೀಯ ಪ್ರಜ್ಞೆ ಮುಂತಾದುವುಗಳು ಕನ್ನಡದಲ್ಲಿ ಇರಲೇ ಇಲ್ಲ. ಆಲ್ಬರ್ಟ್ ಕಮೂ ಪರಕೀಯ ಪ್ರಜ್ಞೆಯನ್ನು ಮೊಟ್ಟ ಮೊದಲ ಬಾರಿಗೆ ತನ್ನ ‘The Stranger’ ಕಾದಂಬರಿಯಲ್ಲಿ ಯಶಸ್ವಿಯಾಗಿ ತಂದ ಎಂಬುದು ನಮ್ಮ ಡೋಂಗಿ ಭಕ್ತರ ವಾದ. ಕಮೂನ ‘The Stranger’ (ಫ್ರೆಂಚ್ ಭಾಷೆ) ಮೊದಲು ಪ್ರಕಟವಾಗಿದ್ದು ೧೯೪೨ರಲ್ಲಿ. ನಂತರ ಅದು ಇಂಗ್ಲಿಷಿಗೆ ಅನುವಾದಗೊಂಡದ್ದು ೧೯೪೬ರಲ್ಲಿ. ರಾಷ್ಟ್ರಕವಿ ಕುವೆಂಪುರವರ ‘ಕಾನೂರು ಹೆಗ್ಗಡತಿ’ ಕಾದಂಬರಿ ಪ್ರಕಟವಾಗಿದ್ದು ೧೯೩೬ರಲ್ಲಿ. ಕಮೂನ ಕಾದಂಬರಿ ಬರುವುದಕ್ಕಿಂತ ಐದು ವರ್ಷ ಮೊದಲೇ ಬಂದ ತಮ್ಮ ಕಾದಂಬರಿಯಲ್ಲಿ ಕುವೆಂಪುರವರು ಹೂವಯ್ಯನ ಪಾತ್ರದ ಮೂಲಕ ಪರಕೀಯ ಪ್ರಜ್ಞೆಯ ನೆಲೆಗಳನ್ನು ತುಂಬ ಸಮರ್ಥವಾಗಿ ಮತ್ತು ಸೊಗಸಾಗಿ ತಂದಿದ್ದಾರೆ. ಕನ್ನಡದ ಸೋಕಾಲ್ಡ್ ವಿಮರ್ಶಕರು ಇದನ್ನು ಖಂಡಿತ ಒಪ್ಪುವುದಿಲ್ಲ.

ಕನ್ನಡದ ಒಬ್ಬ ಇಂಗ್ಲಿಷ್ ಪ್ರಾಧ್ಯಾಪಕ ವ ಹಿರಿಯ ವಿಮರ್ಶಕನ ಪಾಲಿಗೆ ಮಾರ್ಕ್ವೆಜ್ ಒಬ್ಬ ದೇವತಾ ಮನುಷ್ಯ! ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮೇಲೆ ಮಾರ್ಕ್ವೆಜನ ‘One Hundred Years of Solitude’ ಕಾದಂಬರಿಯ ದಟ್ಟ ಪ್ರಭಾವವಿದೆ ಎಂಬುದು ಅವನ ಹೇಳಿಕೆ. ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದರಿರಲಾರದು ಏಕೆಂದರೆ ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಮತ್ತು ಮಾರ್ಕ್ವೆಜನ ‘One Hundred Years of Solitude’ (ಸ್ಪ್ಯಾನಿಷ್ ಭಾಷೆ) ಎರಡೂ ಕಾದಂಬರಿಗಳು ೧೯೬೭ರಲ್ಲೇ ಪ್ರಕಟವಾಗಿವೆ ನಿಜ ಆದರೆ ಮಾರ್ಕ್ವೆಜನ ಕಾದಂಬರಿ ಬರುವ ಕೆಲವು ತಿಂಗಳ ಮೊದಲೇ ಕುವೆಂಪುರವರ ಕಾದಂಬರಿ ಪ್ರಕಟವಾಗಿತ್ತು! ಮಾರ್ಕ್ವೆಜನ ಕಾದಂಬರಿ ಇಂಗ್ಲಿಷಿನಲ್ಲಿ ಅನುವಾದವಾಗಿದ್ದು ೧೯೭೦ರಲ್ಲಿ. ಅದು ಇಂಗ್ಲಿಷಿಗೆ ಅನುವಾದಗೊಂಡ ನಂತರವಷ್ಟೇ ಅಪಾರ ಖ್ಯಾತಿ ಪಡೆದದ್ದು. ನಮ್ಮ ವಿಮರ್ಶಕ ಮಹಾಶಯನಿಗೆ ಇಂತಹ ಪ್ರಾಥಮಿಕ ಜ್ಞಾನ ಸಹ ಇಲ್ಲ! ನಿಸ್ಸಂಶಯವಾಗಿಯೂ ಕುವೆಂಪು ಮಾರ್ಕ್ವೆಜನಿಗಿಂತ ತುಂಬ ದೊಡ್ಡ ಲೇಖಕರು.

ಮಾಯಾ ವಾಸ್ತವ (Magic Realism) ತಂತ್ರ ಎಂದರೆ ಮಾರ್ಕ್ವೆಜ್, ಮಾರ್ಕ್ವೆಜ್ ಎಂದರೆ ಮಾಯಾ ವಾಸ್ತವ (Magic Realism) ತಂತ್ರ ಎಂಬಂತೆ ಕನ್ನಡದ ಕೆಲವು ಪ್ರಭೃತಿಗಳು ದಶಕಗಳಿಂದ ಪ್ರಚಾರ ಮಾಡುತ್ತ ಬಂದಿದ್ದಾರೆ. ಮಾಯಾ ವಾಸ್ತವ ತಂತ್ರವನ್ನು ಅತ್ಯಂತ ಯಶಸ್ವಿಯಾಗಿ ತಂದಿರುವ ಮಾರ್ಕ್ವೆಜನ ‘One Hundred Years of Solitude’ ಜಗತ್ತಿನ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು. ಅದರ ಬಗ್ಗೆ ಯಾವುದೇ ತಕರಾರಿಲ್ಲ, ಅದನ್ನು ಬಹುತೇಕ ಎಲ್ಲರೂ ಒಪ್ಪುತ್ತಾರೆ. ಆದರೆ ನಮ್ಮ ಕೆಲವು ಡೋಂಗಿ ಭಕ್ತರು ಹೇಳುವಂತೆ ಮಾಯಾ ವಾಸ್ತವ ತಂತ್ರ ಮಾರ್ಕ್ವೆಜನೊಬ್ಬನ ಸ್ವತ್ತಲ್ಲ. ಅವನಿಗಿಂತ ಚೆನ್ನಾಗಿ ತುಂಬ ಜನ ಪಾಶ್ಚಾತ್ಯ ಮತ್ತು ಪೌರ್ವಾತ್ಯ ಲೇಖಕರು ಅದನ್ನು ಬಳಸಿಕೊಂಡಿದ್ದಾರೆ.

ಕನ್ನಡದ ಮಹತ್ವದ ಕಥೆಗಾರರಾದ ರಾಘವೇಂದ್ರ ಪಾಟೀಲರು ‘ಲಯ’ ಎಂಬ ಕಥೆಯಲ್ಲಿ ಮಾಯಾ ವಾಸ್ತವ ತಂತ್ರವನ್ನು ತುಂಬ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಮಾರ್ಕ್ವೆಜನ ‘One Hundred Years of Solitude’ ಕಾದಂಬರಿಗೆ ಸರಿ ಮಿಗಿಲಾಗಿ ನಿಲ್ಲಬಲ್ಲ ಅನನ್ಯ ಕಥೆ ‘ಲಯ’. ಮಾರ್ಕ್ವೆಜ್ ‘One Hundred Years of Solitude’ನಂತಹ ಬೃಹತ್ ಕಾದಂಬರಿಯಲ್ಲಿ ಸಾಧಿಸಿದ್ದನ್ನು ಪಾಟೀಲರು ‘ಲಯ’ದಂತಹ ನೀಳ್ಗತೆಯಲ್ಲಿ ಸಾಧಿಸಿದ್ದಾರೆ. ಪಾಟೀಲರ ‘ಲಯ’ ಜಗತ್ತಿನ ಶ್ರೇಷ್ಠ ಕಥೆಗಳಲ್ಲೊಂದು. ಡೋಂಗಿ ಭಕ್ತರು ಮಾತ್ರ ಇದನ್ನು ಒಪ್ಪುವುದಿಲ್ಲ ಏಕೆಂದರೆ ಕನ್ನಡಿಗರಾದ ಪಾಟೀಲರ ಸಾಧನೆಯನ್ನು ಕನ್ನಡಿಗರೇ ಆದ ಡೋಂಗಿ ಭಕ್ತರು ಒಪ್ಪುವುದೆಂತು?
ಮಾರ್ಕ್ವೆಜನ ‘No One Writes to the Colonel’, ‘One Hundred Years of Solitude’ ಮತ್ತು ಇತರೆ ಕೆಲವು ಕಥೆಗಳು ಕನ್ನಡಕ್ಕೆ ಹಲವು ಬಾರಿ ಅನುವಾದಗೊಂಡಿವೆ. ಆದರೆ ಅನುವಾದದ ಗುಣಮಟ್ಟ ಮಾತ್ರ ಸಾಧಾರಣ ಮಟ್ಟಕ್ಕಿಂತ ಮೇಲೇರುವುದಿಲ್ಲ. ಹಿರಿಯ ಲೇಖಕರಾದ ದಿ. ಶ್ರೀನಿವಾಸ ವೈದ್ಯರು ಅನುವಾದ ಮಾಡಿದ ‘ಕರ್ನಲನಿಗೆ ಯಾರೂ ಬರೆಯುವುದೇ ಇಲ್ಲ’ ಎಂಬುದು ಮಾತ್ರ ಒಳ್ಳೆಯ ಅನುವಾದ. ಆದರೆ ಡೋಂಗಿ ಭಕ್ತರು ಮಾತ್ರ ವೈದ್ಯರ ಅನುವಾದ ಚೆನ್ನಾಗಿಲ್ಲ, ತಮ್ಮ ಅನುವಾದವೇ ಚೆನ್ನಾಗಿದೆ ಎಂದು ಹೇಳಿಕೊಳ್ಳುತ್ತಾರೆ!

ಮಾರ್ಕ್ವೆಜನನ್ನು ದೇವರಂತೆ ಆರಾಧಿಸುವ ಡೋಂಗಿ ಭಕ್ತರು ಆ ಮಹಾನ್ ಲೇಖಕನಿಂದ ಏನಾದರೂ ಒಳ್ಳೆಯದನ್ನು ಕಲಿತಿದ್ದಾರೆಯೇ? ಅವನ ಬರವಣಿಗೆಯ ಪ್ರಭಾವ ಇವರ ಮೇಲೇನಾದರೂ ಆಗಿದೆಯೇ ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಸಿಗುವ ಉತ್ತರ ಇಲ್ಲ! ಇವರು ಮಾರ್ಕ್ವೆಜನ ಹೆಸರು ದುರುಪಯೋಗ ಮಾಡಿಕೊಳ್ಳುವುದನ್ನು ಮಾತ್ರ ಕಲಿತಿದ್ದಾರೆಯೇ ಹೊರತು ಅವನಿಂದ ಬರವಣಿಗೆಯ ಪಾಠಗಳನ್ನು ಕಲಿತಿಲ್ಲ.

ಕನ್ನಡದಲ್ಲಿ ಮಾರ್ಕ್ವೆಜನನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಅನುವಾದಕನೊಬ್ಬನಿದ್ದಾನೆ. ಮಾರ್ಕ್ವೆಜ್ ಎಂದರೆ ಒಬ್ಬ ಅತಿಮಾನುಷ ವ್ಯಕ್ತಿ ಎಂಬುದು ಅವನ ಬಲವಾದ ನಂಬುಗೆ! ಈ ಮಹಾಶಯ ತುಂಬ ಪ್ರಭಾವಶಾಲಿ ಮತ್ತು ಅಪಾಯಕಾರಿ. ರಿಪಬ್ಲಿಕ್ ಆಫ್ ಬೆಂಗಳೂರು ಎಂಬ ಗಣರಾಜ್ಯದ ಬಹುತೇಕ ಸಾಹಿತಿಗಳ ಪಾಲಿಗೆ ಈ ಪ್ರಭೃತಿ ಗುರು ಅಥವಾ ಅಣ್ಣನಿದ್ದಂತೆ. ಮಾರ್ಕ್ವೆಜನನ್ನು ಹಾಡಿ ಹೊಗಳುವುದು ಮತ್ತು ಅವನನ್ನು ಮುಂದಿಟ್ಟುಕೊಂಡು ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳನ್ನು ಬಾಯಿಗೆ ಬಂದಂತೆ ಬಯ್ಯುವುದು ಇವನ ಹವ್ಯಾಸ. ಈ ಮಹಾಶಯ ಕೆಲವು ಅನುವಾದಗಳು, ಪ್ರಬಂಧ ಸಂಕಲನಗಳು ಮತ್ತು ಸಂಪಾದನೆಗಳ ಮೂಲಕ ಒಳ್ಳೆಯ ಕೆಲಸ ಮಾಡಿದ್ದರೂ ಸಹ ಸ್ವಂತ ಸೃಷ್ಟಿಯೆಂಬುದು ಶೂನ್ಯ!

ಈ ಅನುವಾದಕ ಮಾರ್ಕ್ವೆಜನ ಕುರಿತು ಹಬ್ಬಿಸಿದ ದಂತಕಥೆ ತುಂಬ ಸ್ವಾರಸ್ಯಕರವಾಗಿದೆ. ಮಾರ್ಕ್ವೆಜನ ಆತ್ಮಕಥೆ ‘Living to Tell the Tale’ ಆಗಷ್ಟೇ ಬಿಡುಗಡೆಯಾಗಿತ್ತು. ಜಗತ್ತಿನಾದ್ಯಂತ ಸಾಹಿತ್ಯ ಪ್ರೇಮಿಗಳು ಮತ್ತು ಓದುಗರು ಅದನ್ನು ಓದಲು ಕಾತರದಿಂದ ಕಾಯುತ್ತಿದ್ದರು. ಮಾರ್ಕ್ವೆಜನ ಆತ್ಮಕಥನದ ಲಕ್ಷಾಂತರ ಪ್ರತಿಗಳನ್ನು ಅಚ್ಚು ಮಾಡಲಾಗಿತ್ತು. ಒಂದು ಲಾರಿಯಲ್ಲಿ ಅವನ ಆತ್ಮಕಥನದ ಸುಮಾರು ೩೦೦೦೦ ಪ್ರತಿಗಳನ್ನು ಕೊಲಂಬಿಯಾದ ರಾಜಧಾನಿ ಬೊಗೊಟಾದಿಂದ ಮತ್ತೊಂದು ದೊಡ್ಡ ನಗರವಾದ ಮೆಡೆಲಿನ್ ಗೆ ಸಾಗಿಸಬೇಕಿತ್ತು. ಮಾರ್ಕ್ವೆಜನ ಭಕ್ತರಿಗೆ ಅವನ ಆತ್ಮಕಥನದ ಪ್ರತಿಗಳು ತುಂಬಿದ ಲಾರಿ ತಮ್ಮೂರಿನ ಮಾರ್ಗವಾಗಿ ಹೋಗುವ ವಿಷಯ ಗೊತ್ತಾಯಿತು. ಸರಿ, ಓದಿನ ಹುಚ್ಚರಾದ ಕೆಲವು ಜನ ಆ ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಬೇಕೆಂದು ನಿರ್ಧರಿಸಿದರು. ರಾತ್ರಿ ೧೧.೦೦ ರ ಹೊತ್ತಿಗೆ ಲಾರಿ ಊರಿಗೆ ಬಂದಿತು. ಕ್ಲೀನರ್ ತೂಕಡಿಸುತ್ತಿದ್ದ, ಡ್ರೈವರ್ ತನ್ನ ಪಾಡಿಗೆ ತಾನು ಡ್ರೈವ್ ಮಾಡುತ್ತಿದ್ದ. ನೂರಾರು ಜನ ಲಾರಿ ಅಡ್ಡಗಟ್ಟಿದರು, ಮಾರ್ಕ್ವೆಜನ ಚಿತ್ರವಿದ್ದ ಟೀ ಶರ್ಟ್ ಧರಿಸಿದ್ದ ಒಬ್ಬ ಭಕ್ತ, “ಡ್ಯೂಡ್, ಡೋಂಟ್ ವರಿ… ನಾವು ನಿನಗೇನೂ ಮಾಡುವುದಿಲ್ಲ. ನಾವು ನಮ್ಮ ಬಾಸ್ ಪುಸ್ತಕಗಳನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಅದಕ್ಕೆ ಅಡ್ಡ ಬಂದರೆ ಮಾತ್ರ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ…” ಎಂದು ಎಚ್ಚರಿಸಿದ. ಹುಚ್ಚ ಓದುಗರು ಪುಸ್ತಕಗಳು ತುಂಬಿದ್ದ ಪೆಟ್ಟಿಗೆಗಳನ್ನು ಹೊತ್ತೊಯ್ದರು. ಆ ಗುಂಪಿನಲ್ಲಿದ್ದ ಮಾದಕ ಸುಂದರಿಯೊಬ್ಬಳು ಕೊನೆಗೆ ಡ್ರೈವರ್ ಮತ್ತು ಕ್ಲೀನರಿಗೆ ಬರ್ಗರ್ ಮತ್ತು ಬಿಯರಿಗೆಂದು ತಲಾ ೫೦೦ ಕೊಲಂಬಿಯನ್ ಪೇಸೋ ಕೊಟ್ಟಳಂತೆ!

ಮಹಾನ್ ಅನುವಾದಕ ಈ ಕಟ್ಟುಕಥೆಯನ್ನು ಕಂಡಕಂಡವರ ಮುಂದೆ ಹೇಳುತ್ತ, “ಪುಸ್ತಕಗಳನ್ನು ದರೋಡೆ ಮಾಡಿದ ಘಟನೆ ಜಗತ್ತಿನಲ್ಲಿ ನಡೆದದ್ದು ಇದೇ ಮೊದಲು ಮತ್ತು ಇದೇ ಕೊನೆ. ಮಾರ್ಕ್ವೆಜನಂತಹ ಲೇಖಕ ಹಿಂದೆ ಹುಟ್ಟಿಲ್ಲ ಮತ್ತು ಮುಂದೆಯೂ ಹುಟ್ಟುವುದಿಲ್ಲ!” ಎಂದು ಕಣ್ಣೀರು ಸುರಿಸುತ್ತಾನೆ. ಇದು ನಿಜವೋ, ಸುಳ್ಳೋ ಎಂದು ನಾನು ಸಂಶೋಧನೆ ಮಾಡತೊಡಗಿದೆ. ಸ್ಪ್ಯಾನಿಷ್ ಮೂಲದ ಇಂಗ್ಲಿಷ್ ಬಲ್ಲ ಯುವ ಓದುಗಳೊಬ್ಬಳಿಗೆ ಈ ಪುಸ್ತಕ ದರೋಡೆಯ ಕುರಿತು ಕೇಳಿದೆ. ಅದಕ್ಕೆ ಅವಳು, “ಇದೆಲ್ಲ ಸುಳ್ಳು ಮಾರಾಯ, ಇಂತಹ ಕಥೆಗಳನ್ನು ನೀವು ಭಾರತೀಯರು ಮಾತ್ರ ಕಟ್ಟಬಲ್ಲಿರಿ. ನಾವು ಮಾರ್ಕ್ವೆಜನನ್ನು ಪ್ರೀತಿಸುತ್ತೇವೆ. ಹಲವು ಭಾಷೆಗಳಲ್ಲಿ ಅವನ ಪುಸ್ತಕಗಳ ಲಕ್ಷಾಂತರ ಪ್ರತಿ ಮಾರಾಟವಾಗುವುದೂ ನಿಜ. ಆದರೆ ಪುಸ್ತಕ ದರೋಡೆ ಮಾಡುವಷ್ಟು ಹುಚ್ಚರು ನಮ್ಮಲ್ಲಿಲ್ಲ…” ಎಂದು ಬಿದ್ದು ಬಿದ್ದು ನಕ್ಕಳು. ಹುಚ್ಚನಾದ ಅನುವಾದಕನ ಬಗ್ಗೆ ಇದಕ್ಕಿಂತ ಹೆಚ್ಚು ಇನ್ನೇನು ಹೇಳುವುದು!

ಕನ್ನಡದಲ್ಲಿ ಬರೆಯುವ ಇಂಗ್ಲಿಷ್ ಲೇಖಕನೆಂದೇ ಖ್ಯಾತಿ ಪಡೆದ ಒಬ್ಬ ಕಥೆಗಾರನಿದ್ದಾನೆ. ಈ ಮಹಾಶಯ ಅತ್ತ ಇಂಗ್ಲಿಷ್, ಇತ್ತ ಕನ್ನಡ ಹೀಗೆ ಎರಡೂ ಭಾಷೆಗಳಲ್ಲಿ ಖ್ಯಾತಿ ಪಡೆಯಬೇಕೆಂಬ ಹಂಬಲವುಳ್ಳ ವ್ಯಕ್ತಿ. ಈ ಮಹಾಶಯ ಮೊದಲು ಕನ್ನಡ ಓದುಗರಿಗಾಗಿ ಬರೆಯುತ್ತಿದ್ದ, ಈಗ ಇಂಗ್ಲಿಷ್ ಪ್ರಕಾಶಕರಿಗಾಗಿ ಬರೆಯುತ್ತಿದ್ದಾನೆ! ಇಂತಹ ದ್ವಿವಿಧ ವ್ಯಕ್ತಿತ್ವದ ಲೇಖಕ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಲ್ಲಿ ಒತ್ತಡ ಗುಂಪೊಂದು ನಡೆಸಿದ ಕಾರ್ಯಕ್ರಮಕ್ಕೆ ಬಂದಿದ್ದ. ಅಲ್ಲಿ ಕನ್ನಡದ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುವ ಬದಲು ಕಾರ್ಯಕ್ರಮಕ್ಕೆ ಯಥಾರ್ಥ ಸಂಬಂಧವಿಲ್ಲದ ಮಾರ್ಕ್ವೆಜನ ಕುರಿತ ಒಂದು ಘಟನೆ ಹೇಳಿದ. ಒಂದು ಬಾರಿ ಮಾರ್ಕ್ವೆಜ್ ಮೆಡೆಲಿನ್ ಬಸ್ ಸ್ಟ್ಯಾಂಡಿನಲ್ಲಿ ಸ್ಯಾಂಡ್ ವಿಚ್ ತಿಂದು, ಬ್ಲ್ಯಾಕ್ ಕಾಫಿ ಕುಡಿದು ಬರುತ್ತಿರಬೇಕಾದರೆ ಎದುರಿಗೆ ಹೆಮ್ಮಿಂಗ್ವೆ ಬರುತ್ತಿದ್ದ. ಅವನನ್ನು ನೋಡಿ ಮಾರ್ಕ್ವೆಜ್, “ಮೇಷ್ಟ್ರೇ…” ಎಂದು ಕೂಗಿದ. ಅದನ್ನು ಕೇಳಿ ಓಡೋಡಿ ಬಂದ ಹೆಮ್ಮಿಂಗ್ವೆ ಅವನನ್ನು ತಬ್ಬಿಕೊಂಡು ಕ್ಷೇಮ ಸಮಾಚಾರ ವಿಚಾರಿಸಿದನಂತೆ, ನಂತರ ಇಬ್ಬರೂ ಸೇರಿ ಮತ್ತೊಮ್ಮೆ ಬ್ಲ್ಯಾಕ್ ಕಾಫಿ ಕುಡಿಯಲು ಹೋದರಂತೆ!

ಮೇಲೆ ಹೇಳಿದ ಘಟನೆಗಳಾವುವೂ ಕಪೋಲಕಲ್ಪಿತವಲ್ಲ. ಸ್ವಲ್ಪ ಉತ್ಪ್ರೇಕ್ಷೆ ಮತ್ತು ವ್ಯಂಗ್ಯ ಬೆರೆಸಿ ಹೇಳಿದ್ದರೂ ಕೂಡ ಇವೆಲ್ಲ ಸತ್ಯ ಘಟನೆಗಳು. “ಅರ್ಧಂಬರ್ಧ ವಿದ್ಯೆ ಕಲಿತವರು ಊರನ್ನೇ ಹಾಳು ಮಾಡಿದರಂತೆ…” ಎಂಬ ಗಾದೆಮಾತಿದೆ. ಅದರಂತೆ ಇತ್ತ ಕನ್ನಡ ಸಾಹಿತ್ಯ, ಅತ್ತ ಪಾಶ್ಚಾತ್ಯ ಸಾಹಿತ್ಯ ಎರಡನ್ನೂ ಅರ್ಧಂಬರ್ಧ ಓದಿ, ಕನ್ನಡ ಸಾಹಿತ್ಯ ಲೋಕವನ್ನೇ ದಶಕಗಳಿಂದ ದಿಕ್ಕು ತಪ್ಪಿಸುತ್ತ ಬಂದಿರುವ ಪಟ್ಟಭದ್ರ, ಪ್ರಭಾವಿ ಮತ್ತು ಅಪಾಯಕಾರಿ ಲೇಖಕ/ಕಿಯರ ಬಗ್ಗೆ ತುಂಬ ಜನಕ್ಕೆ ತಿಳಿಯಬೇಕಿದೆ. ಇನ್ನಾದರೂ ಇಂತಹವರು ಮಾರ್ಕ್ವೆಜನ ಕುರಿತ ಅಂಧ ಭಕ್ತಿ ತೊರೆಯಬೇಕಿದೆ. ಸ್ವಸ್ಥ ಮನಸ್ಸಿನಿಂದ ಅವನ ಕೃತಿಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಬೇಕಿದೆ. ಅವನಂತಹ ಮಹಾನ್ ಲೇಖಕನಿಂದ ಬರವಣಿಗೆಯ ಪಾಠಗಳನ್ನು ಕಲಿಯಬೇಕಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಮಾರ್ಕ್ವೆಜ್ ಭಕ್ತರು”

  1. ಲಕ್ಷ್ಮಣ ಕೊಡಸೆ

    ಸೊಗಸಾದ ವಿವರಗಳು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇಂಥವರು ಇಪ್ಪತ್ತನೇ ಶತಮಾನದ ಪೂರ್ವಾರ್ಧದಿಂದ ಕಾಣಿಸಿಕೊಂಡು ಓದುಗರ ದಾರಿ ತಪ್ಪಿಸಲು ಪ್ರಯತ್ನಿಸಿದವರು. ಅಂಥವರು ಜಾತಕ ಬಯಲು ಮಾಡುವ ಕೆಲಸ ಆಗಬೇಕು.

  2. ಚೆನ್ನಾಗಿದೆ ಲೇಖನ. ಓದಿನ ಕೊರತೆ ಹಾಗೂ ವ್ಯಾಖ್ಯಾನ ದೋಷ ನಮ್ಲಲ್ಲೆ ಯಾಕಿಷ್ಟು ವಿಜೃಂಭಿಸುತ್ತಿದೆಯ

    1. Raghavendra Mangalore

      ಲೇಖಕರು ಇಂತಹ ವಿಷಯಗಳನ್ನು ಎಲ್ಲಿಂದ ಹೆಕ್ಕಿ ತರುತ್ತಾರೋ ಆ ‘ ವಿಕಾಸ ‘ ರೇ ಬಲ್ಲರು. ಪುಸ್ತಕಗಳನ್ನು ದರೋಡೆ ಮಾಡಿದ ಸುದ್ದಿ ಜಗತ್ತಿಗೇ ಹೊಸದು. ಅಂತಹ ಕಾಲ ಇನ್ನೂ ಬಂದಿಲ್ಲ ಎಂದು ಭಾವಿಸುತ್ತೇನೆ. ಒಟ್ಟಿನಲ್ಲಿ ಲೇಖನದಲ್ಲಿ ಯಾರಿಗೆ ಚಾಟಿ ಬೀಸಬೇಕಾಗಿತ್ತೋ ಅವರಿಗೆ ಬೀಸಿಯಾಗಿದೆ. ಅಭಿನಂದನೆಗಳು ವಿಭಿನ್ನ ಲೇಖನ ಓದುವ ಅವಕಾಶ ನೀಡಿದ್ದಕ್ಕೆ.

  3. ಶೇಖರಗೌಡ ವೀ ಸರನಾಡಗೌಡರ್

    ಹೊಸ ವಿವೇಚನೆಗೆ ಹಚ್ಚುವ ಲೇಖನ. ಮನದುಂಬಿದ ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter