ಕನ್ನಡದ ಮಹತ್ವದ ಕವಿ, ಕಾದಂಬರಿಕಾರ ಮತ್ತು ಸಂಘಟಕರಾಗಿ ಗುರುತಿಸಿಕೊಂಡ ಡಾ. ನಾ. ಮೊಗಸಾಲೆಯವರು ಸುಂದರಿಯ ಎರಡನೇ ಅವತಾರ ಮತ್ತು ಇತರ ಕತೆಗಳು (2004) ಸೀತಾಪುರದ ಕತೆಗಳು (2007) ಸೀತಾಪುರದಲ್ಲಿ ಗಾಂಧೀಜಿ (2011) ಸನ್ನಿಧಿಯಲ್ಲಿ ಸೀತಾಪುರ (2014) ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತುಳು ಕನ್ನಡ ಸಂಸ್ಕೃತಿಯನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರದ ಜನಸಾಮಾನ್ಯರ ಬದುಕನ್ನು ಹತ್ತಿರದಿಂದ ಕಂಡ ಅನುಭವವು ಅವರ ಕಥಾಲೋಕದ ಭಾಗವಾಗಿದೆ. ಎಲ್ಲ ರೀತಿಯ ಸಣ್ಣತನಗಳು, ಕ್ಷುದ್ರ ಸ್ವಾರ್ಥಗಳು, ಮೋಸ ಕುಟಿಲತೆಗಳು, ಆರ್ದತೆ ಅನುಕಂಪಗಳನ್ನು ಹೊಂದಿದ ಜನಸಮುದಾಯದ ಕತೆಯನ್ನು ಹೇಳುವ ಮೂಲಕ ಮೊಗಸಾಲೆಯವರು ಮನುಷ್ಯರನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಶ್ರಮಿಸುತ್ತಾರೆ. ಒಂದೊಂದು ಕತೆಯೂ ಒಂದೊಂದು ಸ್ವತಂತ್ರ ಹುಟ್ಟು. ಚಂದ್ರಶೇಖರ ಕಂಬಾರರ ಶಿವಾಪುರ, ಎಂ. ವ್ಯಾಸರ ದುರ್ಗಾಪುರಗಳ ಸ್ಥಿರ ಆವರಣದಲ್ಲಿ ಜೀವನದರ್ಶನವು ದೊರಕುವಂತೆ ಸೀತಾಪುರದಂಥ ಕಾಲ್ಪನಿಕ ಸ್ಥಳವನ್ನು ಕೇಂದ್ರೀಕರಿಸಿ ಕಾಂತಾವರದಲ್ಲಿ ಕತೆಯಾಗುವ ವ್ಯಕ್ತಿಗಳು, ವಸ್ತು ವಿಶೇಷಗಳು ಇಲ್ಲಿ ಕಾಣಸಿಗುತ್ತವೆ. ಸಮಾಜ ದರ್ಶನದ ಮೂಲಕ ಜೀವನ ದರ್ಶನವೇ ಅವರ ಕತೆಗಳ ದಾರಿ. ಸೀತಾಪುರದಲ್ಲಿ ಕತೆಗಳೇ ಇಲ್ಲ (2018) ಎಂಬ ಹೆಸರಿನಲ್ಲಿ ಅವರ ಸಮಗ್ರ ಕತೆಗಳ ಸಂಗ್ರಹವು ಬಿಡುಗಡೆಗೊಂಡ ಬಳಿಕವೂ ಕಥಾರಚನೆಯ ಮೇಲಿನ ಆಸಕ್ತಿಯು ಬತ್ತಿಲ್ಲ ಎಂಬುದಕ್ಕೆ ಅವರು ಇತ್ತೀಚೆಗೆ ಹೊರತಂದ ‘ಆಗು ನೀ ಅನಿಕೇತನ’ (2023) ಎಂಬ ಸಂಕಲನವೇ ಸಾಕ್ಷಿ.
ನಿಕೇತನ ಎಂದರೆ ಮನೆ, ಅನಿಕೇತನ ಎಂದರೆ ಮನೆ ಇಲ್ಲದಿರುವುದು ಎಂದರ್ಥ. ಜಾತಿ, ಮತ, ಕುಲ, ಗೋತ್ರ, ಭಾಷೆ ಮತ್ತು ದೇಶಗಳೆಂಬ ಗೋಡೆಯನ್ನು ಕಟ್ಟಿಕೊಳ್ಳದೆ, ಅವುಗಳಿಗೆ ಸಂಬಂಧಿಸಿದ ಭ್ರಮೆ ಮತ್ತು ಕಟ್ಟುಪಾಡುಗಳಿಗೆ ಒಳಗಾಗದೆ, ಮನಸ್ಸನ್ನು ವಿಶ್ವಾತ್ಮಕಗೊಳಿಸಿಕೊಂಡು, ಚೈತನ್ಯವನ್ನು ವಿಶ್ವವ್ಯಾಪಿಯಾಗಿಸಬೇಕು ಎಂಬುದು ಇಲ್ಲಿನ ಸೂಚ್ಯಾರ್ಥವಾಗಿದೆ. ಮೊಗಸಾಲೆಯವರ ‘ಆಗು ನೀ ಅನಿಕೇತನ’ ಎಂಬ ಕತೆಯಲ್ಲಿ ಕುವೆಂಪು ಅವರ ಈ ಮಾತಿನ ಪ್ರತಿಫಲನವನ್ನು ಕಾಣುತ್ತೇವೆ. ಕುಡಿತದ ಚಟಕ್ಕೆ ಒಳಗಾಗಿದ್ದ ಮಿತ್ತೊಟ್ಟು ಇನಾಸ ಪರ್ಬುವಿನ ಮೇಲೆ ಯಾರಿಗೂ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಆತನ ಮಗ ಸಿರಿಲನ ಕೈಮುರಿದಾಗ ಚಿಕಿತ್ಸೆಯನ್ನು ಕೊಡಿಸಲು ಅವನಲ್ಲಿ ಹಣವಿರುವುದಿಲ್ಲ. ಸಾಲವನ್ನು ಕೇಳಿದರೆ ಯಾರೂ ಹಣವನ್ನು ಕೊಡುವುದಿಲ್ಲ. ‘ನೀನೇ ಕುಡಿದು ಕೈಮುರಿದಿರಬೇಕು. ಮಗನ ಹೆಸರು ಹೇಳಿ ಕುಡಿಯಲು ಹಣ ಪಡೆಯುವ ಹುನ್ನಾರ ನಿನ್ನದು’ ಎಂಬ ಅಪನಂಬಿಕೆಯಿಂದ ಎಲ್ಲರೂ ಮೂಗು ಮುರಿಯುತ್ತಾರೆ. ಮಗನಿಗಿಂತಲೂ ಹೆಚ್ಚಿನ ನೋವನ್ನು ಅನುಭವಿಸುತ್ತಿದ್ದ ಇನಾಸನನ್ನು ಕಂಡು ಮನಕರಗಿದ ಗಾಡಿ ಹುಸೇನಿಯು ಅವನನ್ನು ಕುಪ್ಪಣ್ಣಯ್ಯನವರ ಹತ್ತಿರ ಕರೆತರುತ್ತಾನೆ. ಆ ದಿನದ ತಮ್ಮ ಸಂಪಾದನೆಯನ್ನು ಅವರು ಸಿರಿಲನ ಚಿಕಿತ್ಸೆಗೆ ನೀಡಿದರೂ ಅದು ಸಾಕಾಗದಿದ್ದಾಗ ಹುಸೇನಿಯು ತನ್ನ ಸಂಪಾದನೆಯ ಹಣವನ್ನೂ ಇನಾಸನ ಕೈಯಲ್ಲಿಡುತ್ತಾನೆ. ವರುಷಗಳು ಉರುಳಿದಂತೆ ಸಿರಿಲನು ದುಬೈಯಲ್ಲಿ ವಿದ್ಯುಚ್ಛಕ್ತಿ ತಜ್ಞನಾಗಿ ಕೈತುಂಬಾ ಸಂಪಾದಿಸತೊಡಗುತ್ತಾನೆ. ಅದೇ ಹೊತ್ತಿಗೆ ಹುಸೇನಿಯು ಅರ್ಬುದದಿಂದ ಬಳಲುತ್ತಿರುವ ತನ್ನ ಹೆಂಡತಿಯ ಚಿಕಿತ್ಸೆಗೆ ಹಣವನ್ನು ಹೊಂದಿಸಲಾರದೆ ಒದ್ದಾಡುತ್ತಿರುತ್ತಾನೆ. ಇದನ್ನು ತಿಳಿದ ಕುಪ್ಪಣ್ಣಯ್ಯನವರು ತಾವಾಗಿಯೇ ಒಂದಷ್ಟು ಧನಸಹಾಯವನ್ನು ಮಾಡಿದರೂ ಚಿಕಿತ್ಸೆಗೆ ಪೂರ್ತಿ ಹೊಂದಿಸಿಕೊಡುವಷ್ಟು ಹಣ ಅವರ ಕೈಯಲ್ಲಿ ಇರುವುದಿಲ್ಲ. ಥಟ್ಟನೆ ಸಿರಿಲನನ್ನು ನೆನೆದುಕೊಂಡ ಕುಪ್ಪಣ್ಣಯ್ಯನವರು ಅವನನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಹುಸೇನಿಯ ಕಷ್ಟವನ್ನು ವಿವರಿಸುತ್ತಾರೆ. ‘ನನಗೆ ಒಂದು ಅಪರೂಪದ ಅವಕಾಶವನ್ನು ಕಲ್ಪಿಸಿಕೊಟ್ಟ ನಿಮಗೆ ದೇವರು ಒಳ್ಳೆಯದು ಮಾಡಲಿ’ ಎಂಬ ಪತ್ರದೊಂದಿಗೆ ಅವನು ಹುಸೇನಿಯ ಹೆಸರಿಗೆ ಅಂಚೆಯ ಮೂಲಕ ಒಂದು ಲಕ್ಷದ ಚೆಕ್ಕನ್ನು ಕಳುಹಿಸುತ್ತಾನೆ. ಕೋಮು ಸೌಹಾರ್ದದ ಆಶಯ ಮತ್ತು ಸ್ವರೂಪಗಳನ್ನು ಸ್ಪಷ್ಟಪಡಿಸುವ ಈ ಕತೆಯಲ್ಲಿ ಜಾತಿಮತಗಳ ಸಂಕುಚಿತತೆಯನ್ನು ತೊರೆಯುವ ಮನೋಭಾವವು ವ್ಯಕ್ತವಾಗುತ್ತದೆ. ಮನುಷ್ಯರ ಹೃದಯಗಳು ನಿಂತ ನೀರಾಗದೆ ಆಗುವಿಕೆಯ ಕಡೆಗೆ ನಿರಂತರವಾಗಿ ಹರಿಯಬೇಕಾದ ಅಗತ್ಯವನ್ನು ಧ್ವನಿಸುತ್ತದೆ. ಮತ ಶ್ರೇಣೀಕರಣದ ಆಧಾರದಲ್ಲಿ ಚಿತ್ರಿತಗೊಂಡ ಹಿಂದೂ, ಕ್ರೈಸ್ತ, ಮುಸಲ್ಮಾನ ಸಮುದಾಯದಲ್ಲಿ ಎಲ್ಲ ಧರ್ಮದವರು ಪರಸ್ಪರ ಭಿನ್ನವಾದ್ದೂ ಒಬ್ಬರನ್ನೊಬ್ಬರು ಅವಲಂಬಿಸಿ ಬದುಕುವ ಸಂಕೀರ್ಣ ವಿನ್ಯಾಸವನ್ನು ಹೆಣೆಯಲಾಗಿದೆ. ಜಾತಿಧರ್ಮಗಳಿಗೆ ಅನುಸಾರವಾಗಿ ಸ್ಥಾನಮಾನಗಳು ನಿರ್ಧರಿತವಾಗಿದ್ದರೂ ಸಾಮುದಾಯಿಕವಾಗಿ ಅವರಿಗೆಲ್ಲರಿಗೂ ತಮ್ಮದೇ ಆದ ಅಸ್ತಿತ್ವ, ಸಂಕಟ, ಸಂಭ್ರಮ, ಇಕ್ಕಟ್ಟು, ಅಶಾಂತ ಜ್ವಾಲಾಮುಖಿಗಳಿವೆ. ಜಾತಿಮತಗಳ ಹೆಸರಿನಲ್ಲಿ ಹೊಡೆದಾಟಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ದ್ವೇಷ, ಕ್ರೌರ್ಯ, ಶೋಷಣೆಗಳು ವಿಜೃಂಭಿಸುತ್ತಿರುವಾಗ ಇವರು ಸೀತಾಪುರಲ್ಲಿ ನಡೆಸುವ ಸಹಬಾಳ್ವೆ, ಮಾನವೀಯತೆಗಳು ಆಧುನಿಕ ಸಮಾಜಕ್ಕೆ ಮಾದರಿಯಾಗಬೇಕೆಂಬ ಉದ್ದೇಶವನ್ನು ಪ್ರಕಟಪಡಿಸುವ ಕತೆಯಲ್ಲಿ ಕಂಡುಬರುವ ಸಂಬಂಧಗಳ ಸ್ವರೂಪವು ಮನುಷ್ಯ ಸಂಬಂಧಗಳಲ್ಲೇ ಉಜ್ವಲವಾಗಿದೆ.
ಹೊಸ ಪ್ರಜ್ಞೆಯ ಪ್ರವೇಶದಿಂದಾಗಿ ಸ್ಥಿರವೆಂದು ತೋರುವ ಜೀವನಕ್ರಮಗಳಲ್ಲಿ ಕಾಣಿಸಿಕೊಳ್ಳುವ ಪಲ್ಲಟಗಳು, ತನ್ನದೇ ಆದ ನಂಬಿಕೆ-ರೀತಿನೀತಿ – ಮೌಲ್ಯ ವ್ಯವಸ್ಥೆಗಳ ಮೂಲಕ ಬದುಕುತ್ತಿದ್ದ ಸಮಾಜವು ಶಿಕ್ಷಣ, ಧರ್ಮ, ಆಡಳಿತಗಳ ಮೂಲಕ ಹೊಸ ಜೀವನ ಶೈಲಿಯೆಡೆಗೆ ತೆರೆದುಕೊಂಡಾಗ ಅವುಗಳ ಪ್ರಭಾವ ಒತ್ತಡಗಳಿಂದ ಕಂಪಿಸುವುದು ಸಹಜವಾದರೂ ಹೊಸ ಕಾಲದ ಇತಿಹಾಸವು ಜಾತಿ ಸಮುದಾಯಗಳ ಮೇಲೆ ಪರಿಣಾಮವನ್ನು ಬೀರುವಂತೆ ಈ ಸಮುದಾಯಗಳೊಳಗಿನ ಪಲ್ಲಟಗಳು ನಾಡಿನ ಹೊಸ ಇತಿಹಾಸಕ್ಕೆ ತನ್ನದೇ ಆದ ಕಾಣಿಕೆಯನ್ನೂ ನೀಡುತ್ತವೆ. ಇವುಗಳಿಗೆ ಯಾವನೋ ಒಬ್ಬ ವ್ಯಕ್ತಿ ಅಥವಾ ಒಂದು ಅಂಶ ನಿರ್ದಿಷ್ಟ ಕಾರಣವಲ್ಲದಿರಬಹುದು. ಹಾಗಿದ್ದೂ ಪ್ರಭಾವ ಪ್ರೇರಣೆಗಳನ್ನು ಕೆಲವು ವ್ಯಕ್ತಿಗಳಲ್ಲಿ ಘನೀಕರಿಸಿ ನೋಡುವುದೂ ತಪ್ಪಲ್ಲ. ಆದ್ದರಿಂದ ಕುವೆಂಪು ಮತ್ತು ಅನಂತಮೂರ್ತಿ ಕೇವಲ ವ್ಯಕ್ತಿಗಳಾಗಿರುವುದಿಲ್ಲ. ಹೊಸ ವಿದ್ಯಮಾನಗಳು, ಬದಲಾವಣೆ ಮತ್ತು ಆಶೋತ್ತರಗಳ ಪ್ರತೀಕವಾಗಿರುತ್ತಾರೆ. ತನ್ನದೇ ಆದ ಕಟ್ಟುಕಟ್ಟಳೆಗಳ ಮೂಲಕ ಬದುಕುತ್ತಿದ್ದ ವ್ಯಕ್ತಿಗಳಿಬ್ಬರು ಕುವೆಂಪು ಮತ್ತು ಅನಂತಮೂರ್ತಿಯವರ ವಿಚಾರಗಳಿಂದ ಪ್ರಭಾವಿತರಾಗಿ ಧಾರ್ಮಿಕ ವಿದ್ಯಮಾನಗಳಿಗೆ ಮುಖಾಮುಖಿಯಾಗುವುದನ್ನು ವಸ್ತುವನ್ನಾಗಿಸಿಕೊಂಡ ‘ಕತೆಯೊಳಗೊಂದು ಕತೆ’ಯು ಪ್ರೀತಿಯೊಂದಿಗೆ ಕ್ರಾಂತಿಯನ್ನೂ ನಡೆಸುವ ವಿಚಾರಗಳನ್ನು ವಾಚ್ಯವಾಗಿ ತೆರೆದಿಡುತ್ತದೆ.
ಮಂಚದಬೈಲು ಶಾಲೆಯ ಶಿಕ್ಷಕನಾದ ಸುಂದರ ಮೇಷ್ಟ್ರು ಮತ್ತು ಮಿತ್ತಬೈಲು ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಸಿಸಿಲಿ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಅವರು ವಿಧುರ ವಿಧವೆಯರಾಗಿದ್ದರೂ ಜಾತಿಧರ್ಮಗಳು ಬೇರೆಯಾಗಿರುವುದರಿಂದ ದೇವಾಲಯ ಮತ್ತು ಇಗರ್ಜಿಗಳು ಅವರ ಮದುವೆಗೆ ಪ್ರೋತ್ಸಾಹವನ್ನು ನೀಡುವುದಿಲ್ಲ. ಇಪ್ಪತ್ತೈದು ವರುಷಗಳ ಹಿಂದೆ ಅನಂತಮೂರ್ತಿಯವರ ‘ಘಟಶ್ರಾದ್ಧ’ ಎಂಬ ಕತೆಯನ್ನು ಓದಿ ಪ್ರಭಾವಿತರಾಗಿದ್ದ ಕುಪ್ಪಣ್ಣಯ್ಯನವರು ತಮ್ಮ ಊರಿನಲ್ಲಿ ಅನೈತಿಕ ಸಂಬಂಧದ ಮೂಲಕ ಬಸಿರಾದ ವಿಧವೆಯ ಘಟಶ್ರಾದ್ಧವನ್ನು ಕಾನೂನಿನ ಸಹಾಯವನ್ನು ಬಳಸಿ ತಡೆದು, ಅದಕ್ಕೆ ಕಾರಣನಾದವನೊಂದಿಗೆ ಆಕೆಯ ಮದುವೆಯನ್ನು ಮಾಡಿಸಿದಂತೆ ತಮ್ಮ ಮದುವೆಯನ್ನೂ ನಡೆಸಿಕೊಡಬೇಕೆಂದು ಕುಪ್ಪಣ್ಣಯ್ಯನವರಲ್ಲಿ ವಿನಂತಿಸುತ್ತಾರೆ. ಕುಪ್ಪಣ್ಣಯ್ಯನವರು ಇಪ್ಪತ್ತೈದು ವರುಷಗಳ ಹಿಂದಿನ ಪರಿಸ್ಥಿತಿಯನ್ನೇ ಎದುರಿಸಬೇಕಾದ ಸನ್ನಿವೇಶ ಮತ್ತೆ ಎದುರಾಗುತ್ತದೆ. ಇದು ವಿಧುರ ವಿಧವೆಯರ ಮದುವೆ ಮಾತ್ರವಲ್ಲ, ಅಂತರ್ಧರ್ಮೀಯ ಮದುವೆ ಕೂಡಾ. ಸಂಪ್ರದಾಯವಾದಿಗಳಿಗೆ ಇದರಲ್ಲಿ ತಪ್ಪೋ ದೋಷವೋ ಕಾಣಬಹುದು. ಯಾಕೆಂದರೆ ನಾವು ಮನುಷ್ಯರನ್ನು ಮನುಷ್ಯರೆಂದು ಪರಿಗಣಿಸುವ ಕಾಲದಿಂದ ಬಹಳ ಹಿಂದೆ ಹೋಗಿದ್ದೇವೆ. ನಮ್ಮ ಕೈಗಳನ್ನು ನಾವೇ ಬಂಧಿಸಿಕೊಂಡಿದ್ದೇವೆ. ಮೌಢ್ಯಗಳನ್ನು ಕಿತ್ತೊಗೆಯಬೇಕು ಎನ್ನುತ್ತಿದ್ದರೂ ಅದನ್ನೇ ಬಯಸುವ ಮನೋಭಾವ ನಮ್ಮ ಅಂತರಂಗದಲ್ಲಿ ಇನ್ನೂ ಉಳಿದುಕೊಂಡಿದೆ. ಎಲ್ಲರಲ್ಲೂ ವಿಶಾಲ ಮನೋಭಾವ ಇರುವುದಿಲ್ಲ. ಕಾಲ ಬದಲಾದರೂ ಮನುಷ್ಯ ಬದಲಾಗುವುದಿಲ್ಲ ಎಂಬ ಧ್ವನಿಯು ಇಲ್ಲಿದೆ. ನಂತರ ಕುಪ್ಪಣ್ಣಯ್ಯನವರು ಕುವೆಂಪು ಅವರ ‘ಮಂತ್ರಮಾಂಗಲ್ಯ’ (ಇದು ಮಂತ್ರಗಳ ಸಂಕಲನದ ಹೆಸರು ಮಾತ್ರವಲ್ಲ, ವಿವಾಹ ವಿಧಾನವೂ ಆಗಿದೆ. ಮದುವೆಯ ಸಂದರ್ಭದಲ್ಲಿ ಚಪ್ಪರ, ಸಂಗೀತ, ಕಾಲಗಣನೆ, ಪಂಕ್ತಿಭೋಜನ ಮತ್ತು ಪುರೋಹಿತರ ಮಂತ್ರಗಳಿಲ್ಲ. ತಮ್ಮ ತಂದೆತಾಯಿಯರು ನಿಗದಿಪಡಿಸಿದ ದಿನಗಳಲ್ಲಿ ವಧೂವರರು ತಮಗೆ ಅನುಕೂಲವಾಗಿರುವ ಸ್ಥಳದಲ್ಲಿ, ಇಷ್ಟದೇವರು ಮತ್ತು ಗತಿಸಿದ ಹಿರಿಯರ ಚಿತ್ರಗಳ ಮುಂದೆ, ಆದಷ್ಟು ಕಡಿಮೆ ಜನರ ಸಮ್ಮುಖದಲ್ಲಿ ಮದುವೆಯಾಗಬಹುದು. ಪರಸ್ಪರ ಹಾರವನ್ನು ಹಾಕಿಕೊಂಡ ಮೇಲೆ ವರನು ದಾಂಪತ್ಯ ಪ್ರೇಮ ಮತ್ತು ನಿಷ್ಠೆಯ ಸಂಕೇತವಾಗಿ ವಧುವಿಗೆ ಮಾಂಗಲ್ಯವನ್ನು ಕಟ್ಟುತ್ತಾನೆ. ಮಾನವೀಯ ಮೌಲ್ಯಗಳನ್ನೇ ಮಂತ್ರಗಳಂತೆ ಉಚ್ಛರಿಸುತ್ತಾ ಅವುಗಳನ್ನು ಬದುಕಿನ ಶಕ್ತಿಯೆಂಬಂತೆ ಆಹ್ವಾನಿಸುತ್ತಾರೆ. ಮದುವೆಯ ಹೆಸರಿನಲ್ಲಿ ಆಡಂಬರ, ಅಹಂಕಾರ ಪ್ರದರ್ಶನ ಮತ್ತು ದಕ್ಷಿಣೆ ವಸೂಲಿಯನ್ನು ತೊರೆದು ಆರ್ಷೇಯವಾದ ಮದುವೆಯ ವಿಧಾನ ಮತ್ತು ಜೀವನ ವಿಧಾನಕ್ಕೆ ಸಂಕೇತವಾಗಿದೆ) ವಿಧಿಯ ಮೂಲಕ ಅವರಿಬ್ಬರ ಮದುವೆಯನ್ನು ನಡೆಸುತ್ತಾರೆ.
ತನ್ನ ಸಂಕೀರ್ಣತೆಯಿಂದ ಗಮನವನ್ನು ಸೆಳೆಯುವ ‘ತನ್ನ ಶಿಲುಬೆ ತಾನೇ ಹೊತ್ತು’ ಎಂಬ ಕತೆಯು ‘ಕತೆಯೊಳಗೊಂದು ಕತೆ’ಯ ಉತ್ತರಾರ್ಧದಂತಿದೆ. ಸುಂದರ ಮೇಷ್ಟ್ರು ಮತ್ತು ಸಿಸಿಲಿ ಟೀಚರ ಮದುವೆಯಂತೆ ಇಲ್ಲಿ ಸೀತಾಪುರ ಪ್ರೌಢಶಾಲೆಯ ಶಿಕ್ಷಕ ಸೀತಾರಾಮ ಉಪಾಧ್ಯಾಯ ಮತ್ತು ಮೇರಿ ಟೀಚರ್ ಅವರ ಮದುವೆಯು ಸಾಂಪ್ರದಾಯಿಕವಲ್ಲದ ನೆಲೆಯಲ್ಲಿ ನೆರವೇರಿದೆ. ಆದ್ದರಿಂದ ಈ ದಂಪತಿಯನ್ನು ಕ್ರೈಸ್ತರು ತಮ್ಮ ಸಮಾರಂಭಗಳಿಗೆ ಆಹ್ವಾನಿಸುತ್ತಿದ್ದುದು ಕಡಿಮೆ. ಬ್ರಾಹ್ಮಣರು ಉಪಾಧ್ಯಾಯರನ್ನು ಆಹ್ವಾನಿಸಿದಾಗ ಮೊದಲಿಗೆ ಸಂಕೋಚದಿಂದ ಭಾಗವಹಿಸಿದರೂ ‘ಪತ್ನಿಯನ್ನು ಆಹ್ವಾನಿಸಿದರೆ ಮಾತ್ರ ತಾನು ಬರುವುದು’ ಎನ್ನತೊಡಗಿದಾಗ ಮೇರಿ ಟೀಚರನ್ನು ಊಟಕ್ಕೆ ಕರೆದರೂ, ಅಡ್ಡಪಂಕ್ತಿಯಲ್ಲಿ ಕೂಡಿಸಿ ಎಂಜಲೆಲೆಯನ್ನು ತೆಗೆಸಿದ್ದನ್ನು ಖಂಡಿಸಿ “ನಾನೂ ಇನ್ನು ಮುಂದೆ ಬರುವವನಲ್ಲ” ಎಂದ ಬಳಿಕ ಇಬ್ಬರಿಗೂ ಸಮಾನ ಪಂಕ್ತಿಯ ಗೌರವವು ದಕ್ಕುತ್ತದೆ. ಸೀತಾರಾಮ ಉಪಾಧ್ಯಾಯರು ದೇವಾಲಯಕ್ಕೆ ಹೋಗದಿದ್ದರೂ ಮೇರಿಯ ಧಾರ್ಮಿಕ ಭಾವನೆಗಳಿಗೆ ಅಡ್ಡ ಬರುವುದಿಲ್ಲ. ಗಂಡನಷ್ಟೇ ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದ ಆಕೆಯೂ ಇಗರ್ಜಿಗೆ ಹೋಗುವುದಿಲ್ಲ. ತನ್ನ ಗಂಡ ಹೃದಯಾಘಾತದಿಂದ ನಿಧನರಾದಾಗ ಬ್ರಾಹ್ಮಣರ ಪದ್ಧತಿಗೆ ಅನುಗುಣವಾಗಿ ಅಂತ್ಯಕ್ರಿಯೆಯನ್ನು ಮಾಡಿಸುತ್ತಾರೆ. ಬಳಿಕ ಇಗರ್ಜಿಗೆ ಹೋಗತೊಡಗುತ್ತಾರೆ. ಇದರಿಂದ ಕೆರಳಿದ ಬ್ರಾಹ್ಮಣ ಸಮುದಾಯದವರು ಸೀತಾರಾಮ ಉಪಾಧ್ಯಾಯರ ತಮ್ಮನಾದ ರಾಮ ಉಪಾಧ್ಯಾಯರ ಬಳಿ “ನಿಮ್ಮ ಅಣ್ಣ ತಪ್ಪು ಮಾಡಿದ್ದರೂ, ನೀವು ಅವರಿಗೆ ಸಾಯುಜ್ಯ ಕಲ್ಪಿಸಿ ಪುಣ್ಯ ಕಟ್ಟಿಕೊಂಡದ್ದು ನಮಗೆ ಸಂತೋಷ ನೀಡಿದೆ. ಆದರೆ ಅವರ ಪತ್ನಿ ಅಂದುಕೊಂಡವಳು ಇದ್ದಾಳಲ್ಲ ಅವಳು ಈಗ ಚರ್ಚ್‍ಗೆ ಹೋಗಲು ಪ್ರಾರಂಭಿಸಿದ್ದಾಳಂತೆ. ನಾಳೆ ಅವಳು ಸತ್ತಳು ಅಂತ ಇಟ್ಟುಕೊಳ್ಳಿ ಆಗ ನೀವು ಅವಳಿಗೆ ನಮ್ಮ ಪದ್ಧತಿಯ ಪ್ರಕಾರ ಅಪರಕರ್ಮ ಮಾಡುವುದಾದರೆ ಅದಕ್ಕೆ ನಮ್ಮ ವಿರೋಧ ಇದೆ. ಈ ವಿಚಾರದಲ್ಲಿ ನೀವು ಆಕೆಯನ್ನು ಎಚ್ಚರಿಸಬೇಕು. ಇಲ್ಲವಾದರೆ ಮುಂದೆ ನೀವೆಲ್ಲಾದರೂ ಆಕೆಯ ಅಪರಕರ್ಮ ಮಾಡಲು ಹೊರಟರೆ ನಾವು ನಿಮ್ಮನ್ನು ಖಂಡಿತಾ ಬಿಡುವವರಲ್ಲ” ಎನ್ನುವ ಮಾತಿನ ಮೂಲಕ ಕತೆಯು ಸೂಕ್ಷ್ಮ ತಿರುವನ್ನು ಪಡೆದುಕೊಳ್ಳುತ್ತದೆ. ಇದನ್ನು ಮೇರಿ ಟೀಚರಿಗೆ ತಿಳಿಸದೆ ನಿರ್ವಾಹವಿಲ್ಲದಿರುವುದರಿಂದ ರಾಮ ಉಪಾಧ್ಯಾಯರು ಅವರ ಮನೆಗೆ ಹೋಗುತ್ತಾರೆ. ಅದೇ ಹೊತ್ತಿಗೆ ಅಲ್ಲಿಗೆ ಬಂದ ಮೋಂತು ಪರ್ಬು “ಕಳೆದ ಎರಡು ವಾರದಿಂದ ನೀವು ಚರ್ಚೆಗೆ ಬರುವುದು ನಮ್ಮ ಫಾದರ್‍ಗೆ ತುಂಬಾ ಖುಶಿ ನೀಡಿದೆ. ಕ್ರಿಸ್ತ ನಿಮ್ಮನ್ನು ಮತ್ತೆ ಕರೆಸಿಕೊಂಡಿದ್ದಾನೆ ಎಂದುಕೊಂಡು ನಿಮಗಾಗಿ ಪ್ರಾರ್ಥಿಸಿದ್ದಾರೆ. ಹಾಗಾಗಿ ಈ ತಿಂಗಳಿಂದ ನೀವು ಚರ್ಚೆಗೆ ಸಲ್ಲಿಸಬೇಕಾದ್ದನ್ನೆಲ್ಲ ವಂತಿಗೆ ವರಾಡನ್ನು ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ ಚರ್ಚಿನೊಳಗೆ ಪ್ರಾರ್ಥನೆಗೆ ಅವಕಾಶ ಕೊಡುವುದು ಚರ್ಚ್‍ನ ನಿಯಮ ರೀತ್ಯಾ ಕಷ್ಟವಾಗುತ್ತದಂತೆ. ಮುಂದೆ ನಿಮ್ಮ ನಿಧನಾನಂತರ ನಿಮ್ಮ ದಫನಕ್ಕೂ ಚರ್ಚ್ ಆವರಣದಲ್ಲಿ ಅವಕಾಶ ಕೊಡಲು ಉಳಿದವರು ಅಡ್ಡಿ ಪಡಿಸುವ ಸಾಧ್ಯತೆ ಇದೆ” ಎಂದು ಪಾದ್ರಿಯ ಅಣತಿಯನ್ನು ವಿವರಿಸುತ್ತಾನೆ. ಮೇರಿ ಟೀಚರ್ ಇದಕ್ಕೆ ಮಾರ್ಮಿಕವಾಗಿ ಉತ್ತರಿಸುತ್ತಾರೆ. “ವಾಸ್ತವವಾಗಿ ನಾನು ಕ್ರಿಶ್ಚಿಯನ್ನೂ ಅಲ್ಲ, ಹಿಂದೂವೂ ಅಲ್ಲ. ಮನುಷ್ಯ ಜಾತಿಯವಳು ಎಂದುಕೊಂಡಿದ್ದೇನೆ. ಮನುಷ್ಯರಾಗಿದ್ದ ಸೀತಾರಾಮ ಉಪಾಧ್ಯಾಯರನ್ನು ನಾನು ಪ್ರೀತಿಸಿ ಮದುವೆಯಾದದ್ದು ಇದಕ್ಕೇ. ಅವರು ನಿಧನರಾದ ಮೇಲೆ ಚರ್ಚ್‍ಗೆ ಹೋಗುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಕ್ರಿಶ್ಚಿಯನ್ ಅಲ್ಲ. ದೇವಸ್ಥಾನಕ್ಕೆ ನಾನು ಹೋದರೂ ಬ್ರಾಹ್ಮಣ ಹೆಣ್ಮಗಳು ಎಂದು ನನ್ನನ್ನು ಬ್ರಾಹ್ಮಣರು ಸ್ವೀಕರಿಸುವುದಿಲ್ಲ. ಸ್ವೀಕರಿಸಬೇಕು ಎಂದು ನನಗೆ ಅನಿಸುತ್ತಲೂ ಇಲ್ಲ. ನಾನು ಚರ್ಚಿಗೆ ಹೋದದ್ದು ಅಲ್ಲಿ ನಾಲ್ಕು ಜನರ ಒಡನಾಟ ದೇವರ ಹೆಸರಿನಲ್ಲಿ ಸಿಗುತ್ತದೆ ಎಂಬ ಭಾವನೆಯಲ್ಲಿ ಮಾತ್ರ. ಚರ್ಚ್‍ನಲ್ಲಿ ಮಾತ್ರ ದೇವರು ಇದ್ದಾನೆ ಎಂಬುದನ್ನು ನಾನು ಒಪ್ಪುತ್ತಿಲ್ಲ. ದೇವರು ಇರುವುದು ನಮ್ಮೊಳಗೇ ಹೊರತು ಖಂಡಿತ ಹೊರಗಲ್ಲ ಎಂದು ನಾನೂ ನನ್ನ ಗಂಡನೂ ಭಾವಿಸಿದ್ದೆವು. ಆದರೆ ನಾನು ದೇವಸ್ಥಾನಕ್ಕೆ ಹೋದರೆ ಅಲ್ಲಿ ನನ್ನನ್ನು ಒಪ್ಪಿಕೊಳ್ಳುವವರಿಗಿಂತ ಪ್ರಶ್ನಿಸುವವರೇ ಜಾಸ್ತಿ ಇರುವುದರಿಂದ ಸದ್ಯಕ್ಕೆ ಅದು ಬೇಡ, ಅದಕ್ಕಿಂತ ಚರ್ಚ್ ಸೂಕ್ತ ಎಂದು ಅಲ್ಲಿಗೆ ಹೋಗುತ್ತಿದ್ದೇನೆ. ನಾಳೆ ಅಲ್ಲೂ ಅಂಥ ಸಮಸ್ಯೆ ಹುಟ್ಟಿದರೆ ಅಲ್ಲಿಗೂ ಹೋಗುವವಳಲ್ಲ! ಈ ಮಾತನ್ನು ನೀವು ನಿಮ್ಮ ಫಾದರ್‍ಗೆ ಹೇಳಬೇಕು ಪರ್ಬುಗಳೇ. ನನ್ನ ದಫನಕ್ಕೆ ಚರ್ಚ್‍ನಲ್ಲಿ ಜಾಗ ಬೇಡ ಅಂತಲೂ ತಿಳಿಸಿ. ನಾನು ಸತ್ತ ನಂತರ ನನ್ನನ್ನು ಯಾರೂ ಸುಡಲೂ ಬಾರದು ಹೂಳಲೂ ಬಾರದು. ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲು ನಿಶ್ಚಯಿಸಿದ್ದೇನೆ. ಅಲ್ಲಿ ಓದುವ ಮಕ್ಕಳ ಅಧ್ಯಯನಕ್ಕೆ ನನ್ನ ಮೃತದೇಹ ಪ್ರಯೋಜನಕ್ಕೆ ಬರಲಿ ಎಂದು ನನ್ನ ಆಸೆ. ನಮ್ಮವರು ಈಗ ಇದ್ದಿದ್ದರೆ ಇಂಥ ನಿರ್ಧಾರ ತೆಗೆದುಕೊಂಡದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಿದ್ದರು. ಈ ಯೋಚನೆ ಬರುವ ಮೊದಲೇ ಅವರು ನಿಧನರಾದದ್ದು ನನ್ನ ದುರದೃಷ್ಟ. ಅವರು ಸತ್ತಾಗ ನೀವೆಲ್ಲ ನಿರ್ಧರಿಸಿದ ಹಾಗೆ ಅವರ ಅಂತ್ಯಕ್ರಿಯೆ ಸರಾಗವಾಗಿ ಮುಗಿದು ಹೋಯಿತು. ನನ್ನದು ಹಾಗಲ್ಲ, ನಾನು ನನ್ನ ಎಲ್ಲವನ್ನೂ ‘ವಿಲ್’ ಮಾಡಿ ಇಡದಿದ್ದರೆ ನಿಮ್ಮ ಎರಡೂ ಧರ್ಮಗಳು ತಂತಮ್ಮ ಧರ್ಮಗಳಲ್ಲಿರುವ ಋಣಾತ್ಮಕ ಅಂಶಗಳನ್ನೆಲ್ಲ ಉಪಯೋಗಿಸಿಕೊಂಡು ನನ್ನ ಹೆಸರಿನಲ್ಲಿ ಹೊಡೆದಾಡಿಕೊಳ್ಳುವುದು ಖಂಡಿತ” ಎನ್ನುತ್ತಾರೆ. ಈ ಮಾತಿನಲ್ಲಿ ಅವರ ಆಧುನಿಕತೆ, ಪ್ರಗತಿಪರ ಚಿಂತನೆ, ಬಂಡಾಯ ಮನೋಧರ್ಮ, ಜನರು ತನ್ನನ್ನು ಸ್ವೀಕರಿಸದಿದ್ದರೂ ತನ್ನ ಜಾತಿಯ ಹೆಸರಿನಲ್ಲಿ ಕಚ್ಚಾಡುವುದು ಬೇಡ ಎಂದು ಒಳಿತನ್ನು ಬಯಸುವ ಮನೋಭಾವ, ತನ್ನನ್ನು ತಿರಸ್ಕರಿಸುವ ವ್ಯವಸ್ಥೆಯಿಂದ ದೂರವಾಗಲು ಬಯಸುವ ಪರಕೀಯ ಪ್ರಜ್ಞೆಯು ವ್ಯಕ್ತವಾಗುತ್ತವೆ. ಜಟಿಲವೂ, ಸಂಕೀರ್ಣವೂ ಆದ ಧಾರ್ಮಿಕ ಪ್ರಶ್ನೆಗಳಿಗೆ ಪ್ರಬುದ್ಧ ಪಾತ್ರಗಳ ವಿಮರ್ಶಾತ್ಮಕ ದೃಷ್ಟಿಕೋನ ಮತ್ತು ವೈಚಾರಿಕತೆಗಳ ಬೆಳಕಿನಲ್ಲಿ ಉತ್ತರವನ್ನು ಹುಡುಕಾಡುವ ಮೊಗಸಾಲೆಯವರು ತಮ್ಮ ದರ್ಶನಕ್ಕೆ ಸ್ಪಷ್ಟತೆ ಮತ್ತು ಅಧಿಕೃತತೆಯನ್ನು ಗಳಿಸಿಕೊಳ್ಳುತ್ತಾರೆ.
ಮನೆಗೆ ಬಂದ ಗೆಳೆಯರಾದ ರೆಡ್ಡಿ ಮತ್ತು ಕೃಷ್ಣಪ್ಪನೊಡನೆ ನಡೆಯುವ ಮುಖಾಮುಖಿಯಲ್ಲಿ ಶಿವಾನಂದ ಭಟ್ಟರ ವ್ಯಕ್ತಿತ್ವವು ಉನ್ನತಿಗೇರುವ ಕತೆ ‘ವಾಗರ್ಥ’. ಕೃಷ್ಣಪ್ಪನು ಬ್ರಾಹ್ಮಣನಾದರೂ ಕಪ್ಪು ಬಣ್ಣದವನಾಗಿದ್ದರಿಂದ ಶೂದ್ರನೆಂದುಕೊಂಡ ಶಿವಾನಂದರ ಹೆಂಡತಿಯ ತಾಯಿ ಶಾರದಮ್ಮನವರು ಊಟದ ಹೊತ್ತಿಗೆ ಆತನನ್ನು ಹೊರಗೆ ಕುಳಿತುಕೊಳ್ಳಿಸಿ ಬಾಳೆಯ ಎಲೆಯನ್ನು ಹಾಕುತ್ತಾರೆ. ಇದನ್ನು ಕಂಡು ಕೆರಳಿದ ಶಿವಾನಂದ ಭಟ್ಟರು “ಬ್ರಾಹ್ಮಣ ಶೂದ್ರ ಎನ್ನುವ ಭೇದ ಇಲ್ಲದೇ ಇಡೀ ಮನುಷ್ಯಕುಲವನ್ನು ಒಪ್ಪಿಕೊಂಡವನು ನಾನು. ಆದರೆ ಈ ದಿನ ನೀವು ನನ್ನ ಮಾನ ಕಳೆದುಬಿಟ್ಟಿರಿ” ಎಂದು ಅತ್ತೆಯವರನ್ನು ಬೈದು ಕೃಷ್ಣಪ್ಪನನ್ನು ಒಳಗೆ ಕರೆದು ರೆಡ್ಡಿಯ ಪಕ್ಕದಲ್ಲಿ ಕುಳಿತುಕೊಳ್ಳಿಸಿ ಇಬ್ಬರಿಗೂ ತಾವೇ ಬಡಿಸುತ್ತಾರೆ. ತಮ್ಮ ಸಣ್ಣತನವನ್ನು ಅರಿತ ಶಾರದಮ್ಮನವರು ಪಶ್ಚಾತ್ತಾಪ ಪಡುತ್ತಾರೆ. ಮಾತು ಮತ್ತು ಅರ್ಥವು ಒಂದೊರಳಗೊಂದು ಬೆರೆತಿರುವಂತೆ ಬದುಕಿನ ಆದರ್ಶವು ನಿತ್ಯಜೀವನದಲ್ಲಿ ಸೇರಬೇಕಾದ ಅಗತ್ಯವನ್ನು ವ್ಯಕ್ತಪಡಿಸುವ ಈ ಕತೆಯು ಕುಂ. ವೀ ಅವರ ‘ಲೋಹಿಯಾವಾದಿಯೊಬ್ಬನ ಕತೆ’ಯ ವಿರುದ್ಧ ನೆಲೆಯಲ್ಲಿದೆ. ಈ ಕತೆಯ ನಾಯಕ ಬಸವರಾಜನು ಕ್ರಾಂತಿಕಾರಿಯಾದರೂ ಸವರ್ಣೀಯ ಗರ್ವದ ಹೆಂಡತಿಯನ್ನು ಎದುರು ಹಾಕಿ ಮಾದಿಗ ಜಾತಿಗೆ ಸೇರಿದ ತನ್ನ ಗೆಳೆಯ ಪರಮೇಶನನ್ನು ಮನೆಯೊಳಗೆ ಸೇರಿಸಲಾಗದೆ ಹೊರಗಡೆಯೇ ಊಟದ ವ್ಯವಸ್ಥೆಯನ್ನು ಮಾಡುತ್ತಾನೆ. ‘ವಾಗರ್ಥ’ದಲ್ಲೂ ಈ ಬಿಕ್ಕಟ್ಟಿದೆ. ಶಿವಾನಂದ ಭಟ್ಟರು ಕ್ರಾಂತಿಕಾರಿಯಲ್ಲದಿದ್ದರೂ ಬಸವರಾಜನಂತೆ ದುರ್ಬಲನಲ್ಲ. ಗೆಳೆಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ತಾಕತ್ತು ಅವರಿಗಿದೆ. ಸಾಮಾಜಿಕ ಪ್ರತಿಭಟನೆಯಲ್ಲಿ ತೊಡಗಿದವರು ವ್ಯವಸ್ಥೆಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡು ಅಪ್ರಾಮಾಣಿಕರಾಗುವ ದುರಂತವನ್ನು ‘ಲೋಹಿಯಾವಾದಿಯೊಬ್ಬನ ಕತೆ’ಯು ಚಿತ್ರಿಸಿದರೆ ಪರಿಸ್ಥಿತಿಯೊಂದಿಗೆ ರಾಜಿಯನ್ನು ಮಾಡಿಕೊಳ್ಳದೆ ಸಮಸ್ಯೆಯನ್ನು ದಿಟ್ಟತನದಿಂದ ಎದುರಿಸಿ ಮೀರುವ ಮನೋಭಾವವನ್ನು ‘ವಾಗರ್ಥ’ವು ಅನಾವರಣಗೊಳಿಸುತ್ತದೆ. ಆತ್ಮವಿಮರ್ಶೆಯ ಅಗತ್ಯವನ್ನು ಸೂಚಿಸುವ ಮೂಲಕ ಆರೋಗ್ಯಕರ ಬೆಳವಣಿಗೆಯ ಸಾಧ್ಯತೆಗಳ ದ್ಯೋತಕವಾಗುತ್ತದೆ. ಹುಟ್ಟಿನೊಂದಿಗೆ ಅಂಟಿಕೊಂಡ ಜಾತಿ, ಮತ, ಧರ್ಮ, ವರ್ಣ, ವರ್ಗಭೇದಗಳು ವ್ಯಕ್ತಿಗೆ ಬಿಡಿಸಲಾರದ ಬಂಧನವನ್ನು ಉಂಟು ಮಾಡುತ್ತವೆ. ಪರಂಪರಾಗತ ವ್ಯವಸ್ಥೆಯಿಂದ ಹೊರಬರಲು ಅದೆಷ್ಟು ಪ್ರಯತ್ನಗಳನ್ನು ಮಾಡಿದರೂ ಅದರಿಂದ ಮುಕ್ತರಾಗಲು ಸಾಧ್ಯವಾಗದ ನೋವು ನಿರಾಶೆಗಳು ‘ಕತೆಯ ಒಳಗೊಂದು ಕತೆ’, ‘ತನ್ನ ಶಿಲುಬೆ ತಾನೇ ಹೊತ್ತು’, ‘ಮನಾಂತರ’, ‘ಬೊಳ್ಳೆಸೊಪ್ಪು’ ಮತ್ತು ‘ವಾಗರ್ಥ’ ಕತೆಗಳಿಗೆ ಹಿನ್ನೆಲೆಯಾಗಿವೆ.
ನೀರು ಮತ್ತು ಕರುಣೆಗಳ ನಡುವಿನ ಸಂಬಂಧವು ಸಾಹಿತ್ಯದಲ್ಲಿ ಹೊಸತಲ್ಲ. ಕೆ. ಸದಾಶಿವ ಅವರ ‘ನಲ್ಲಿಯಲ್ಲಿ ನೀರು ಬಂದಿತು’, ಜನಾರ್ದನ ಎರ್ಪಕಟ್ಟೆ ಅವರ ‘ನೀರು’ ಕತೆಯಂತೆ ಮೊಗಸಾಲೆಯವರ ‘ನೀರು ಬಂತು ನೀರು’ ಕತೆಯಲ್ಲಿ ನೀರು ಕರುಣೆಯ ಪ್ರತೀಕವಾಗಿ ಬೆಳೆಯುವ ರೀತಿಯು ಗಮನಾರ್ಹವಾಗಿದೆ. ವೆಂಕಪ್ಪಯ್ಯ ಮತ್ತು ಶೀನಪ್ಪಯ್ಯ ಎಂಬ ಅಣ್ಣ ತಮ್ಮಂದಿರ ವೈಮನಸ್ಯದಿಂದ ಹುಟ್ಟುವ ಪರಿಣಾಮಗಳನ್ನು ವಿಶ್ಲೇಷಿಸುವ ಕತೆಯು ಮನುಷ್ಯನ ಸ್ವಭಾವದಲ್ಲಿರುವ ಕ್ಷುದ್ರ ಕ್ಷುಲ್ಲಕತೆ ಮತ್ತು ಅದನ್ನು ನಿವಾರಿಸುವ ಬಗೆಯ ಕಡೆಗೆ ಮೇಲೆ ಬೆಳಕನ್ನು ಚೆಲ್ಲುತ್ತದೆ. ವೆಂಕಪ್ಪಯ್ಯನ ದನವು ಶೀನಪ್ಪಯ್ಯನ ಮನೆ ಹಿಂದೆ ಬೆಳೆದ ಬಸಳೆ ಸೊಪ್ಪುಗಳನ್ನು ತಿಂದಾಗ ಶೀನಪ್ಪಯ್ಯನ ಹೆಂಡತಿ ದನದ ಕಾಲನ್ನು ಕಡಿಯುತ್ತಾಳೆ. ಇದನ್ನು ಪ್ರಶ್ನಿಸಿದ ವೆಂಕಪ್ಪಯ್ಯ ಮತ್ತು ಅವನ ಹೆಂಡತಿ ಲಕ್ಷ್ಮಿಯನ್ನು ಅಶ್ಲೀಲ ಮಾತುಗಳಿಂದ ಬೈಯುತ್ತಾಳೆ. ದುಡುಕು ಪ್ರವೃತ್ತಿ ಮತ್ತು ಒಡಕು ಬಾಯಿಯ ಕಾರಣಗಳಿಗಾಗಿ ಎರಡು ಕುಟುಂಬಗಳ ನಡುವೆ ಜಗಳ ಹತ್ತಿ ಸಂಬಂಧವು ಬತ್ತಿ ಹೋಗುತ್ತದೆ. ಬೇಸಿಗೆಯ ದಿನಗಳಲ್ಲಿ ಶೀನಪ್ಪಯ್ಯನ ಪಾಲಿಗೆ ನೀರಿನ ಕೊರತೆ ಉಂಟಾದಾಗ ಆತನು ಪಂಚಾಯತಿನ ವತಿಯಿಂದ ನೀರಿನ ವಿತರಣೆಯನ್ನು ಬಯಸಿ ಅಧ್ಯಕ್ಷರಿಗೆ ಅರ್ಜಿಯನ್ನು ಸಲ್ಲಿಸುತ್ತಾನೆ. ಆದರೆ ನೀರಿನ ಕೊಳವೆಯು ಮೋರಿ ಮತ್ತು ವೆಂಕಪ್ಪಯ್ಯನ ಮನೆಯ ಗೇಟಿನ ನಡುವೆ ಇರುವ ಕಾಂಕ್ರೀಟ್ ರಸ್ತೆಯಲ್ಲೇ ಹಾದು ಹೋಗಬೇಕಾಗುವುದರಿಂದ ಆತನ ಒಪ್ಪಿಗೆಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ಹಿಂದಿನ ಅಹಿತಕರ ಘಟನೆಯ ಕಾರಣದಿಂದಾಗಿ ಮುನಿಸುಗೊಂಡಿದ್ದ ವೆಂಕಪ್ಪಯ್ಯನು ತಮ್ಮನನ್ನು ಬೈದು, ಅವಮಾನಿಸಿ ಕಳುಹಿಸುತ್ತಾನೆ. ವೆಂಕಪ್ಪಯ್ಯನ ಹೃದಯವನ್ನು ಬತ್ತಿಸಿದ್ದು ತನ್ನ ತಮ್ಮನ ಮನೆಯವರ ಕಡೆಯಿಂದ ಆದ ಅನಿರೀಕ್ಷಿತ ಆಘಾತವೇ ಹೊರತು ಕ್ರೌರ್ಯವಲ್ಲ. “ನೀರಿಲ್ಲದೆ ಬದುಕುವುದು ಹೇಗೆ ಸಾಧ್ಯ? ನೀವು ಇಷ್ಟು ಕ್ರೂರವಾಗಿ ನಡೆದುಕೊಳ್ಳಬಾರದಿತ್ತು. ಒಂದು ಮಾತು ಹೇಳುತ್ತೇನೆ ಕೇಳಿ. ನೀವು ಅವರಿಗೆ ನೀರು ಕೊಂಡು ಹೋಗಲು ಅವಕಾಶ ಕೊಡದಿದ್ದರೆ ನಾನು ನಾಳೆಯಿಂದ ಇಲ್ಲಿ ನೀರು ಮುಟ್ಟುವುದಿಲ್ಲ. ಬಿಸಿ ನೀರಾದರೂ ಅದನ್ನು ತಣ್ಣಗೆ ಮಾಡಿ ಕುಡಿಯಬೇಕು ಎನ್ನುತ್ತಿದ್ದರು ನನ್ನ ಅಪ್ಪ. ನಿಮ್ಮ ಹಾಗೇ ನನಗೂ ಸಿಟ್ಟು ಬರುವುದುಂಟು. ಆಗ ನನಗೆ ಅಪ್ಪನ ನೆನಪಾಗುತ್ತದೆ. ನಾನು ನಿಮ್ಮ ಹಾಗೆ ಹುಳಿಮರ ಅಲ್ಲ. ಬಾಳೆ ಅಂದರೆ ಬಾಳೆಯೇ. ಗೊನೆ ಹಾಕಿ ಮಾಗಿದ ಕೂಡಲೇ ಬಾಳೆ ತನ್ನಿಂತಾನೇ ಬಾಗುತ್ತದೆ. ನಿಮಗೆ ಬಾಗಿಯೇ ಗೊತ್ತಿಲ್ಲ. ದಮ್ಮಯ್ಯ. ನಿಮ್ಮ ಹಠ ಬಿಟ್ಟು ಬಿಡಿ. ಆ ಶೀನಪ್ಪಯ್ಯ ನಿಮ್ಮ ಖಾಸಾ ತಮ್ಮ. ಅವನ ಹೆಂಡತಿ ನನ್ನ ತಂಗಿಯಲ್ಲದಿರಬಹುದು. ಆದರೆ ನನ್ನ ಹಾಗೆ ಹೆಣ್ಣು ಮಗಳು. ಹೆಣ್ಣು ಮಕ್ಕಳಿಗೆ ಎಲ್ಲಾ ಹೆಣ್ಣು ಮಕ್ಕಳೂ ಅಕ್ಕ ತಂಗಿಯರೇ ಆಗಿರುತ್ತಾರೆ ಅಥವಾ ಅಮ್ಮ ದೊಡ್ಡಮ್ಮನೇ. ಹಠ ಬೇಡ, ನೀರು ಕೊಡಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎನ್ನುವ ಮೂಲಕ ಹೆಂಡತಿ ಲಕ್ಷ್ಮಿಯು ಆತನ ಮನಪರಿವರ್ತನೆಗೆ ಕಾರಣಳಾಗುತ್ತಾಳೆ. ನೀರಿನ ಬತ್ತುವಿಕೆ, ಉಕ್ಕುವಿಕೆ, ಬದುಕಿಗೆ ಅದರ ಅನಿವಾರ್ಯತೆಗಳು ಸ್ಫುರಿಸುತ್ತಾ ನೀರು ಎಂಬುದು ಕರುಣೆಯ ದೃಶ್ಯರೂಪವಾಗುತ್ತದೆ. ಇಲ್ಲಿ ತಾಯಿಯ ವಾತ್ಸಲ್ಯದಂಥ ಪ್ರೀತಿಯು ನೀರಾಗಿ ಹರಿಯುತ್ತದೆ. ಅನುಕಂಪ, ಸಹೋದರತೆ ಮತ್ತು ಸಹಮಾನವ ಪ್ರಜ್ಞೆ ಪ್ರಾಣದಾಯಕ ನೀರಿನ ರೂಪದಲ್ಲಿ ಒಸರುತ್ತದೆ. ಕೊಳವೆಯ ಮೂಲಕ ಬರುವ ನೀರು, ಅಣ್ಣ ತಮ್ಮಂದಿರ ಕಣ್ಣಿನಲ್ಲಿ ತುಳುಕುವ ಹನಿಗಳೆರಡೂ ಒಂದೇ ಆಗಿದ್ದು ಮನಸ್ಸಿನ ರಾಡಿಯನ್ನು ತೊಳೆದು ಶುದ್ಧಗೊಳಿಸುತ್ತದೆ. ನೀರಿನ ನಿಮಿತ್ತವಾಗಿ ಜಿನುಗಿದ ಹೊಸ ಅರಿವು ಮತ್ತು ತನ್ನೆದೆಯೊಳಗೆ ಇಣುಕಿ ನೋಡಿದ ಅನುಭವದಿಂದ ಅಣ್ಣ ತಮ್ಮಂದಿರು ಹೊಸ ಹುಟ್ಟನ್ನು ಪಡೆದುಕೊಳ್ಳುತ್ತಾರೆ.
‘ಪ್ಲ್ಲಾಸಿಬೋ’ ರೇಬಿಸ್ ಕಾಯಿಲೆಯ ಸುತ್ತ ಹಬ್ಬಿಕೊಳ್ಳುವ ಕತೆ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ಕತೆಯಲ್ಲಿ ಆನೆಯು ಊರಿನ ಅವಾಂತರಗಳಿಗೆ ಕಾರಣವಾಗುವಂತೆ ಇಲ್ಲಿ ದಾಸಭಟ್ಟರ ಬೆಕ್ಕು ಅವರಿಗೆ ಕಚ್ಚಿ ಕಣ್ಮರೆಯಾದಾಗ ಹುಟ್ಟಿಕೊಳ್ಳುವ ಸಂದಿಗ್ಧತೆಯು ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ‘ಕೃಷ್ಣೇಗೌಡನ ಆನೆ’ಯಲ್ಲಿ ಬರುವ ಹುಚ್ಚುನಾಯಿಗಳ ಸಮಸ್ಯೆ ಇಲ್ಲೂ ಬಂದಿರುವುದು ಆಕಸ್ಮಿಕವಾಗಿರಲಾರದು. ಅಲ್ಲಿ ಒಂದು ಸನ್ನಿವೇಶವಾಗಿ ಮಾತ್ರ ಬರುವ ವಿದ್ಯಮಾನವು ಮೊಗಸಾಲೆಯವರ ಕತೆಯಲ್ಲಿ ಸಂಕೀರ್ಣ ರಾಜಕೀಯ ವ್ಯವಸ್ಥೆಯ ಪ್ರತಿಬಿಂಬವಾಗಿ ವಿಸ್ತಾರವನ್ನು ಪಡೆದಿದೆ. ಕಾಯಿಲೆಯು ಇಲ್ಲದಿದ್ದರೂ ಇದೆ ಎಂಬ ಭ್ರಮೆ ಇರುವವರಿಗೆ ಚುಚ್ಚುಮದ್ದು ಅಥವಾ ಗುಳಿಗೆಗಳನ್ನು ಔಷಧ ಮತ್ತು ಜೀವಾತುಗಳ ರೂಪದಲ್ಲಿ ಕೊಟ್ಟು ಅದು ಪರಿಣಾಮಕಾರಿ ಎಂದು ಅವರಿಗೆ ಮನವರಿಕೆ ಮಾಡಿಸುವ ಮಾನಸಿಕ ಚಿಕಿತ್ಸೆಗೆ ಪ್ಲಾಸಿಬೋ (ತನ್ನನ್ನು ತಾನೇ ಖುಷಿಪಡಿಸಿಕೊಳ್ಳುವುದು) ಎನ್ನುತ್ತಾರೆ. ಬೆಕ್ಕಿನ ಕಡಿತಕ್ಕೆ ಒಳಗಾದ ತನಗೆ ರೇಬಿಸ್ ಇರಬಹುದೆಂದು ಭ್ರಮೆಗೆ ಒಳಗಾಗಿ ಆಸ್ಪತ್ರೆಗೆ ತೆರಳಿದ ದಾಸು ಭಟ್ಟರು ಚುಚ್ಚುಮದ್ದುಗಳು ದೊರೆಯದೆ ತಳಮಳಿಸುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡು ‘ಈ ವಾರದೊಳಗೆ ನಾನು ಎಂಟು ಹತ್ತು ಜನರನ್ನು ನಾಯಿ ಕಡಿದಿದೆ ಎಂದು ಆಸ್ಪತ್ರೆಗೆ ಕಳುಹಿಸುತ್ತೇನೆ. ಅಲ್ಲಿ ಚುಚ್ಚುಮದ್ದುಗಳು ಇಲ್ಲದಿರುವುದರಿಂದ ವೈದ್ಯರು ಅವರನ್ನು ರಾಂಪುರದ ಸಾರ್ವಜನಿಕ ಆಸ್ಪತ್ರೆಗೆ ಸಾಗಹಾಕುತ್ತಾರೆ. ಅಲ್ಲಿನ ವೈದ್ಯಾಧಿಕಾರಿಯವರು ಹೊರಗಿಂದ ಚುಚ್ಚುಮದ್ದನ್ನು ತರಲು ಚೀಟಿ ಬರೆದು ಕೊಡುತ್ತಾರೆ. ಆಗ ನಮಗೆ ಒಂದು ಅಸ್ತ್ರ ಸಿಕ್ಕಿದ ಹಾಗೆ ಆಗುತ್ತದೆ. ಮೊದಲು ನಮ್ಮ ಪಂಚಾಯತ್ ಅಧ್ಯಕ್ಷರನ್ನು, ಆಮೇಲೆ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುವ ಹಾಗೆ ಪತ್ರಿಕಾಗೋಷ್ಠಿ ಮಾಡುತ್ತೇವೆ. ಮೂರು ತಿಂಗಳೊಳಗೆ ಬರುವ ಪಂಚಾಯತ್ ಚುನಾವಣೆಯಲ್ಲಿ ಜನಪರವಲ್ಲದ ಈಗಿನ ಪಂಚಾಯತ್ ಸದಸ್ಯರಿಗೆ ಮತ ಚಲಾಯಿಸಬೇಡಿ ಎಂದು ಜನರಿಗೆ ಹೇಳುತ್ತೇವೆ’ ಎಂಬ ಯೋಜನೆಯನ್ನು ತಯಾರಿಸುವ ವೀರಪ್ಪ ಗೌಡ, ಜನರ ಮನವಿಯನ್ನು ಸ್ವೀಕರಿಸಿ ಪಂಚಾಯತ್ ಮೀಟಿಂಗ್‍ನಲ್ಲಿ ಒಂದು ನಿರ್ಣಯ ಮಾಡಿ ಅಧಿಕೃತರಿಗೆ ಕಳುಹಿಸಿ ಕೊಡುವ ಬದಲು ‘ಮನವಿಯನ್ನು ನಮಗೆ ಯಾಕೆ ನೀಡುತ್ತೀರಿ? ತಾಲೂಕು ಅಥವಾ ಜಿಲ್ಲಾ ಪಂಚಾಯತಿಗೆ, ತಾಲೂಕು ವೈದ್ಯಾಧಿಕಾರಿಗಳಿಗೆ ಇಲ್ಲವೇ ಶಾಸಕರಿಗೆ ಕೊಡಿ’ ಎಂದು ದಬಾಯಿಸುವ ಪಂಚಾಯತ್ ಅಧ್ಯಕ್ಷ ಭಾಸ್ಕರ ಹೆಗ್ಡೆ, ‘ನಿಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹತ್ತು ರೇಬಿಪ್ಯೂರ್ ಚುಚ್ಚುಮದ್ದುಗಳನ್ನು ಕೊಟ್ಟು ಕಳುಹಿಸುತ್ತೇನೆ. ಬೀದಿನಾಯಿಗಳ ಕಾಟವನ್ನೂ ನಿಲ್ಲಿಸುತ್ತೇನೆ. ಆದರೆ ವಿರೋಧ ಪಕ್ಷದಲ್ಲಿರುವ ವೀರಪ್ಪ ಗೌಡ ನಮ್ಮ ಪಕ್ಷಕ್ಕೆ ಬರಬೇಕು. ಭಾಸ್ಕರ ಹೆಗ್ಡೆ ತನ್ನ ಬೆಂಬಲಿಗರಿಗೆಲ್ಲ ಬೇನಾಮಿ ಹೆಸರಿನಲ್ಲಿ ಪಂಚಾಯತ್ ಕಾಮಗಾರಿಗಳನ್ನು ಕೊಡುವುದಲ್ಲದೆ ಅವರಿಂದ ಮೂವತ್ತು ಶೇಕಡಾ ಕಮಿಶನ್ ಹೊಡೆಯುತ್ತಿದ್ದಾನೆ. ಪಂಚಾಯತಿನಲ್ಲಿ ಕುಡಿತ ಜಡಿತವೂ ಉಂಟಂತೆ. ಇಪ್ಪತ್ತು ಶೇಕಡಾ ತೆಗೆದುಕೊಳ್ಳುವ ನನಗಿಂತ ಹೆಚ್ಚು ತೆಗೆದುಕೊಳ್ಳುವ ಭಾಸ್ಕರ ಹೆಗ್ಡೆ ಎಲ್ಲಾದರೂ ಶಾಸಕನಾದರೆ ನೂರು ಶೇಕಡಾ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಅವನನ್ನು ಈಗಲೇ ಚಿವುಟಿ ಹಾಕಬೇಕು. ಅವನನ್ನು ಕಿತ್ತೊಗೆದು ವೀರಪ್ಪಗೌಡರನ್ನೇ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಬೇಕು’ ಎನ್ನುವ ಶಾಸಕರು ಇವರೆಲ್ಲರೂ ಪಟ್ಟಭದ್ರ ಹಿತಾಸಕ್ತಿ ಮತ್ತು ಭ್ರಷ್ಟ ವ್ಯವಸ್ಥೆಯ ಪ್ರತಿನಿಧಿಗಳು. ಇದಕ್ಕೆ ಮೂಕಸಾಕ್ಷಿಯಾದ ಕುಪ್ಪಣ್ಣಯ್ಯ ‘ನಿಜವಾದ ಪ್ಲಾಸಿಬೋ ಎಂದರೆ ಇದುವೇ’ ಎಂದು ಮಾರ್ಮಿಕವಾಗಿ ನುಡಿಯುತ್ತಾನೆ. ಜನರ ಹಿತಾಸಕ್ತಿಗಳಿಗೆ ಅಡ್ಡಿ ಆತಂಕಗಳು ಉಂಟಾದಾಗ ದುಸ್ತರಗೊಂಡ ಬದುಕನ್ನು ದುರಸ್ತಿಗೊಳಿಸಬೇಕಾದ ಜನಪ್ರತಿನಿಧಿಗಳು ಅಧಿಕಾರವನ್ನು ಪಡೆಯುವ ಅಥವಾ ಉಳಿಸಲು ಹೊರಡುವ ವಿರೋಧಾಭಾಸವನ್ನು ಲೇಖಕರು ಲೇವಡಿ ಮಾಡಿದ್ದಾರೆ. ಅಧಿಕಾರಕ್ಕೋಸ್ಕರ ತತ್ವನಿಷ್ಠೆಗಳನ್ನು ಮರೆತು ಪಕ್ಷದಿಂದ ಪಕ್ಷಕ್ಕೆ ನೆಗೆಯುವವರನ್ನು ಟೀಕಿಸಿದ್ದಾರೆ. ಅಧಿಕಾರದ ಪಗಡೆಯಾಟದಲ್ಲಿ ಕಾಯಿಗಳನ್ನು ಜರುಗಿಸುವ ಚಿಂತೆಯಲ್ಲಿ ಮಗ್ನರಾಗುವ ವರ ಲಾಭಕೋರರು ಮತ್ತು ಅಧಿಕಾರಕ್ಕಾಗಿ ಆದರ್ಶವನ್ನು ಮಾರಲು ಹೇಸದವರ ನಡುವೆ ಆತ್ಮವಂಚನೆಯನ್ನು ಮಾಡಿಕೊಳ್ಳಲಾರದ, ಧ್ಯೇಯವನ್ನು ಮೀರಿ ನಡೆಯಲಾರದ, ನೇರ ನಡೆನುಡಿಯ ಪ್ರಾಮಾಣಿಕರು ಸಾಮಾಜಿಕ – ರಾಜಕೀಯ ರಂಗದಲ್ಲಿ ವಿಜೃಂಭಿಸುವ ಸೋಗಲಾಡಿಗಳ, ಗೋಮುಖವ್ಯಾಘ್ರರ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಒಂಟಿಯಾಗುವ ಜನಸಾಮಾನ್ಯರ ಪ್ರತಿನಿಧಿಯಾಗಿ ಕುಪ್ಪಣ್ಣಯ್ಯನು ಕಾಣಿಸಿಕೊಳ್ಳುತ್ತಾನೆ. ಏನೂ ಆಗಲಿಲ್ಲವೆಂಬಂತೆ ಬೆಕ್ಕು ದಾಸಭಟ್ಟರ ಮನೆಗೆ ಹಿಂತಿರುಗಿ ಬರುವುದು ಇನ್ನೊಂದು ವ್ಯಂಗ್ಯ. ರೇಬಿಸ್ ಕಾಯಿಲೆಯ ಹೆಸರಿನಲ್ಲಿ ಇಡೀ ಸಮಾಜದ ಕ್ಷುದ್ರ ರಾಜಕೀಯವನ್ನು ಅನಾವರಣಗೊಳಿಸುವ ಕತೆಯು ಮೊಗಸಾಲೆಯವರ ಉತ್ತಮ ರಚನೆಗಳಲ್ಲಿ ಒಂದು.
‘ಕೊಳಲಗೋಪ’ ಎಂಬ ಕತೆಯು ಅಲ್ಪ ಜೀವಿಯ ದುರಂತಗೀತೆಯಾಗಿದೆ. ಪಾತ್ರ ಚಿತ್ರಣವನ್ನು ಗುರಿಯಾಗಿಸಿಕೊಂಡಿರುವ ಈ ಕತೆಯ ವಸ್ತುವು ನಿರಪರಾಧಿಯ ದುರಂತಕ್ಕೆ ಸಂಬಂಧಿಸಿದೆ. ಕಾರ್ಕಳದಿಂದ ಸೀತಾಪುರಕ್ಕೆ ಬರುವ ಕೊಳಲಗೋಪನು ತನ್ನ ನಿಗೂಢತೆಯಿಂದ, ಸಂತನ ಮನೋಭಾವದ ಮೂಲಕ ಗಮನವನ್ನು ಸೆಳೆಯುತ್ತಾನೆ. ಕೆದರಿದ ತಲೆ ಕೂದಲು, ಎಣ್ಣೆ ಹಚ್ಚಿಕೊಂಡ ಥರ ಇರುವ ಮುಖ, ಬಾಯಿ ತೆರೆದರೆ ಕಾಣುವ ಒಂದು ಹಲ್ಲು ಕಿತ್ತು ಹೋದ ಸ್ಥಳ, ಒರಟಾದ ತುಟಿ, ಬಲಿಷ್ಠವಾದ ಕಾಲುಗಳು, ಕೈ ಎತ್ತಿ ಬಾರಿಸಿದರೆ ಎಂಥವನನ್ನೂ ಆಯತಪ್ಪಿ ಬೀಳಿಸಬಹುದೆನ್ನುವಂಥ ತೋಳುಗಳು ಜನರ ಮನದಲ್ಲಿ ಭಯ, ಕುತೂಹಲ, ಸಂದೇಹಗಳನ್ನು ಎಬ್ಬಿಸುತ್ತವೆ. ಆದರೆ ಅವನ ಕೊಳಲ ದನಿ ಎಲ್ಲರನ್ನು ಆಕರ್ಷಿಸುತ್ತದೆ. ಅವನ ಕುರೂಪದ ಬಣ್ಣನೆಯಲ್ಲಿ ಆತನ ಕಲಾಚೇತನದ ಸೂಚನೆಯನ್ನು ಕಾಣುತ್ತೇವೆ. ಉಪಾಹಾರ ಗೃಹದಲ್ಲಿ ತಿಂಡಿಯನ್ನು ತಿಂದರೆ, ಬಸ್ಸಿನಲ್ಲಿ ಪಯಣಿಸಿದರೆ ಅವನು ಕೊಳಲನ್ನು ಊದುವ ಮೂಲಕ ಪ್ರತಿಫಲವನ್ನು ಸಲ್ಲಿಸುತ್ತಾನೆ. ಮಧ್ಯಾಹ್ನದ ಊಟವನ್ನು ಹಾಕಿದ ಮನೆಯವರ ಚಾಕರಿಯನ್ನು ಮಾಡಿ ಋಣವನ್ನು ತೀರಿಸುತ್ತಾನೆ. ವೀಳ್ಯದೆಲೆಗಳನ್ನು ಕೊಳ್ಳಲು ರಥ ಬೀದಿಗೆ ಬಂದ ರಂಗಪ್ಪಯ್ಯನವರಿಗೆ ಹಣದ ಥೈಲಿಯನ್ನು ಮನೆಯ ಜಗಲಿಯಲ್ಲಿ ಬಿಟ್ಟು ಬಂದದ್ದು ನೆನಪಾಗಿ ಮನೆಗೆ ಓಡಿ ಬರುತ್ತಾರೆ. ತನ್ನ ಮನೆಗೆ ಬಂದು ಊಟವನ್ನು ತೀರಿಸಿ ಕೊಳಲು ಊದುತ್ತಾ ಕುಳಿತ ಗೋಪ ಅದನ್ನು ಕದ್ದಿರಬಹುದೇ ಎಂಬ ಸಂಶಯವು ಅವರ ಭಯ ಆತಂಕಗಳಿಗೆ ಕಾರಣವಾಗಿರುತ್ತದೆ. ಹಣದ ಥೈಲಿಯು ಜಗಲಿಯಲ್ಲಿ ಇಲ್ಲದಿದ್ದುದರಿಂದ ಸಿಟ್ಟುಗೊಂಡ ರಂಗಪ್ಪಯ್ಯನು ಗೋಪನ ಕೈಯಲ್ಲಿದ್ದ ಕೊಳಲನ್ನು ಕಿತ್ತೆಸೆದು, ಕೆನ್ನೆಗೆ ಬಾರಿಸಿ, ಒದ್ದು ಓಡಿಸುತ್ತಾನೆ. ಆದರೆ ರಂಗಪ್ಪಯ್ಯನ ಹೆಂಡತಿಯೇ ಹಣದ ಥೈಲಿಯನ್ನು ಜಾಗರೂಕತೆಯಿಂದ ಒಳಗೆ ತೆಗೆದಿಟ್ಟಿರುತ್ತಾಳೆ. ರಂಗಪ್ಪಯ್ಯನು ಮೇಲ್ನೋಟಕ್ಕೆ ಒಳ್ಳೆಯವನಾಗಿದ್ದರೂ ಗೋಪ ಅಥವಾ ತನ್ನ ಹೆಂಡತಿಯಲ್ಲಿ ಒಂದು ಮಾತು ವಿಚಾರಿಸದೆ ಏಕೆ ದುಡುಕಿದ ಎಂಬ ಪ್ರಶ್ನೆಯು ಅಪ್ರಸ್ತುತ ಎನಿಸುವಂತೆ ಒಳಿತಿನ ಶಕ್ತಿಯು ಅಸಹಾಯಕವಾಗಿ ಕ್ರೌರ್ಯವು ವಿಜೃಂಭಿಸುತ್ತದೆ. ಮಾಡದ ತಪ್ಪಿಗೆ ಏಟು ತಿಂದು ನೊಂದ ಗೋಪನು ರಂಗಪ್ಪಯ್ಯನ ದನವನ್ನು ಕಟ್ಟುವ ಹಗ್ಗವನ್ನೇ ಕುತ್ತಿಗೆಗೆ ಬಿಗಿದು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಮೂಲಕ ವೆಂಕಪ್ಪಯ್ಯನ ಕ್ರೌರ್ಯಕ್ಕೆ ಉತ್ತರವನ್ನು ನೀಡುತ್ತಾನೆ. ಊರಿನ ಪ್ರಭಾವಿ ವ್ಯಕ್ತಿಯೇ ಗೋಪನ ಮರಣಕ್ಕೆ ಕಾರಣವಾಗುವುದು ಈ ಸಮಾಜದಲ್ಲಿ ನಡೆಯುವ ಅನ್ಯಾಯಗಳಿಗೆ ಕನ್ನಡಿಯನ್ನು ಹಿಡಿದಂತಿದೆ. ನಿರಪರಾಧಿಯು ಶಿಕ್ಷೆಗೆ ಒಳಗಾಗುವ ಕ್ರಿಯೆಯು ಗ್ರಾಮೀಣ ವಾಸ್ತವದ ಅಂಗವಾಗಿ ಕತೆಯ ತೀವ್ರತೆ ಮತ್ತು ವಿಷಾದವನ್ನು ಹೆಚ್ಚಿಸುತ್ತದೆ. ಬಡವರನ್ನು ತಿರಸ್ಕಾರ ಮತ್ತು ಸಂಶಯದಿಂದ ಕಾಣುವ ಮನೋಭಾವವು ಸಜ್ಜನರೊಳಗೂ ಸೇರಿಕೊಂಡ ಬಗೆಯನ್ನು ವಿವೇಚಿಸುವ ಕತೆಯು ರಂಗಪ್ಪಯ್ಯನ ಪಶ್ಚಾತ್ತಾಪದ ಮಾತುಗಳ ಮೂಲಕ ಅದನ್ನು ಸ್ಫುಟಗೊಳಿಸುತ್ತದೆ. ಕಣ್ಣಿದ್ದೂ ನೋಡಲಾಗದವರ, ಒಳಗಣ್ಣನ್ನು ತೆರೆದು ಸತ್ಯವನ್ನು ಕೊಂಡುಕೊಳ್ಳಲಾಗದವರ ಕಡೆಗೆ ಗಮನವನ್ನು ಸೆಳೆಯುವುದರೊಂದಿಗೆ ಗೋಪನ ಮೇಲಿನ ಅನುಕಂಪವನ್ನು ಹೆಪ್ಪುಗಟ್ಟಿಸುತ್ತದೆ.
ಇದೇ ಪ್ರಾದೇಶಿಕ ಪರಿಸರದಲ್ಲಿ ಹುಟ್ಟಿಕೊಳ್ಳುವ ‘ಊರುಭಂಗ’ವು ಹೆಣ್ಣಿನ ಪ್ರತಿಭಟನೆ ಮತ್ತು ಅದರ ಪರಿಣಾಮಗಳ ಕಡೆಗೆ ಗಮನವನ್ನು ಹರಿಸುತ್ತದೆ. ‘ಊರುಭಂಗ’ದ ಅಪ್ಪಿಯು ಆದರ್ಶಪಾತ್ರವಲ್ಲದಿದ್ದರೂ ಗೋಪನಂತೆ ದುರ್ಬಲಳಲ್ಲ. ಸಾಂತಪ್ಪನನ್ನು ಇಟ್ಟುಕೊಂಡಿರುವ ಆಕೆಯು ತನ್ನನ್ನು ಬಯಸಿ ಬಂದ ಶ್ಯಾನುಭಾಗನ ವಿರುದ್ಧ ಪ್ರತಿಭಟಿಸುತ್ತಾಳೆ. ತನ್ನ ಪ್ರಿಯಕರನಿಗೆ ಮಾತ್ರ ವಿಧೇಯಳಾಗಿರುವ ಆಕೆಯ ಜೀವನ ನಿಷ್ಠೆ ಮತ್ತು ಧೈರ್ಯ, ವ್ಯಕ್ತವಾಗುತ್ತದೆ. ‘ಒಂದು ಕಥಾಪ್ರಸಂಗ’ದ ಕರ್ಗಿಯಂತೆ ಸಿರಿವಂತನನ್ನು ಕೂಡಿ ತನ್ನ ಬದುಕಿಗೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಳ್ಳುವುದಿಲ್ಲ. ತನ್ನಿಂದಾಗಿ ಶ್ಯಾನುಭಾಗನ ಹೆಂಡತಿಯ ಬಾಳು ಹಾಳಾಗಬಾರದೆಂಬ ಉದ್ದೇಶದಿಂದ ಆತನನ್ನು ತಿರಸ್ಕರಿಸುತ್ತಾಳೆ. ‘ಹುಲಿಯ ಹಾಗೆ ಉಗುರುಗಳಿದ್ದರೆ ಇವಳನ್ನು ಸಿಗಿದು ಹಾಕಬಹುದಿತ್ತು’ ಎಂದು ಶ್ಯಾನುಭಾಗರು ಸಿಡಿಮಿಡಿಗೊಳ್ಳುವ, ‘ನೀವು ಹಿಂದೆ ನನ್ನಂಥವಳನ್ನು ಇಟ್ಟುಕೊಂಡು ರಾಜ್ಯವಾಳುತ್ತಿದ್ದಿರಿ. ಈಗ ನಾನು ನಿಮ್ಮಂಥವನನ್ನು ಇಟ್ಟುಕೊಂಡಿದ್ದೇನೆ. ನೀವು ನನಗೇನಾದರೂ ಮಾಡಿದರೆ ಆ ಸಾಂತಪ್ಪ ನಿಮ್ಮನ್ನು ಸಿಗಿದು ಹಾಕುತ್ತಾನೆ’ ಎಂದು ಅಪ್ಪಿಯು ಶ್ಯಾನುಭಾಗನನ್ನು ಬೆದರಿಸುವ ಸನ್ನಿವೇಶವು ಹೊರಗೆ ಕ್ರೂರವಾಗಿದ್ದರೂ ಒಳಗೆ ದುರ್ಬಲವಾಗಿರುವ ಊಳಿಗಮಾನ್ಯ ಪದ್ಧತಿಯ ಒಳ ಹೊರಗುಗಳನ್ನು ವ್ಯಕ್ತಪಡಿಸುವುದರೊಂದಿಗೆ ಕಾಲಗತಿಯು ತಿರುಗುವುದರ ಸೂಚನೆಗಳನ್ನು ನೀಡುತ್ತದೆ. ‘ಭೂತ’ವು ಮೇಲುವರ್ಗದವರ ಕುಟಿಲತನವನ್ನು ಅಲಕ್ಷ್ಯ ಮಾಡಿ, ಅವರಿಗೆ ಅಧೀನವಾಗಿ ಉಳಿಯದೆ ಸ್ವತಂತ್ರವಾಗಿ ಅಸ್ತಿತ್ವವನ್ನು ಸ್ಥಾಪಿಸುವ ದಿಟ್ಟ ನಿಲುವನ್ನು ಪ್ರತಿಪಾದಿಸಿದರೆ ‘ಕೊಳಲಗೋಪ’ ತಾನು ಮಾಡದ ತಪ್ಪಿಗೆ ಆಢ್ಯನೊಬ್ಬನ ಏಟು ತಿಂದು ಮೌನವಾಗಿ ಕೊರಗುತ್ತಾ ಜೀವ ತೆರಬೇಕಾಗಿ ಬಂದ ನಿರ್ಗತಿಕನ ಪರಿಸ್ಥಿತಿಯನ್ನು ಮನಗಾಣಿಸುತ್ತದೆ. ‘ಕೊಳಲಗೋಪ’, ‘ಭೂತ’, ‘ಒಂದು ಕಥಾಪ್ರಸಂಗ’ಗಳಲ್ಲಿ ದಲಿತರ ಸಾನ್ನಿಧ್ಯವಿದ್ದರೂ ಪ್ರತಿಭಟನೆಯ ಕಲ್ಪನೆಯು ಆವರಿಸಿಕೊಳ್ಳುವುದಿಲ್ಲ. ಆದರೆ ‘ಊರುಭಂಗ’ವು ಇದಕ್ಕೆ ಹೊರತಾಗಿದ್ದು ಶೋಷಣೆಯ ವಿರುದ್ಧದ ಪ್ರತಿಭಟನೆಯನ್ನು ಪ್ರಕಟಿಸುತ್ತದೆ. ಈ ಕತೆಗಳಲ್ಲಿ ದಲಿತರ ಜೀವನ ಚೈತನ್ಯ, ಅವರ ಅಸಹಾಯ ಬದುಕಿನ ಹತಾಶೆ, ದಲಿತರ ಒಳಗಡೆ ದಲಿತರ ಕ್ರೌರ್ಯ, ದಲಿತರ ಮೇಲೆ ದಲಿತೇತರರ ದೌರ್ಜನ್ಯ, ಅದಕ್ಕೆ ಅವರು ನೀಡುವ ಪ್ರತಿಕ್ರಿಯೆ, ದಲಿತರು ತಾವಾಗಿಯೇ ಸೃಷ್ಟಿಸಿಕೊಂಡ ಬದುಕಿನ ಅನಿವಾರ್ಯತೆ ಮುಂತಾದ ಸ್ತರಗಳನ್ನು ಗುರುತಿಸಬಹುದು.
ಉಳಿದ ಕತೆಗಳಿಗಿಂತಲೂ ಮುಕ್ತತೆಯನ್ನು ಪಡೆದು ಬೇರೊಂದು ಪ್ರಕಾರದ ಸೃಷ್ಟಿಯ ಹವಣಿಕೆಯಲ್ಲಿರುವಂತೆ ತೋರುವ ‘ಮಹಾಮರ’ದಲ್ಲಿ ಮಾವಿನ ಹಣ್ಣಿನ ರುಚಿ, ಮಾಗುವಿಕೆ, ಲಭ್ಯತೆ ಮತ್ತು ಅಪರೂಪದ ಗುಣಗಳನ್ನು ಸಿಸಿಲಿ ಟೀಚರಿನ ಸದ್ಗುಣ, ಪ್ರಬುದ್ಧತೆ, ಕಷ್ಟಕಾಲಕ್ಕೆ ಒದಗಿ ಬರುವ ಮನೋಭಾವಗಳಿಗೆ ಪರ್ಯಾಯವಾಗಿ ಪರಿಭಾವಿಸಲಾಗಿದೆ. ಮಾವಿನ ಮರದ ನೆಲೆಯಲ್ಲಿ ಆಕೆಯ ವ್ಯಕ್ತಿತ್ವ ನಿರ್ಮಾಣವಾಗಿರುವ ಬಗೆಯು ವ್ಯಕ್ತವಾಗುತ್ತದೆ. ಮಾವಿನ ಮರದಂತೆ ಸಮಗಾತ್ರದ ಗುಣಗಳನ್ನು ಒಳಗೊಳ್ಳುತ್ತಾ ಹಣ್ಣಿನಂತೆ ಪಕ್ವಗೊಂಡು, ಅಪರೂಪದ ವ್ಯಕ್ತಿತ್ವವಾಗಿ ಬೆಳೆದು, ಸಮಾಜದ ಮೆಚ್ಚುಗೆಯನ್ನು ಗಳಿಸಿ, ಊರಿಗೆ ಉಪಕಾರಿಯಾಗಿ ರೂಪುಗೊಳ್ಳುವುದನ್ನು ಕಾಣಬಹುದು. ಆಧುನಿಕ ಸರಕು ಮಾರುಕಟ್ಟೆಯ ನಡುವೆ ಮನುಷ್ಯನ ವ್ಯಕ್ತಿತ್ವವು ಮಾವಿನ ಮರದಂತಾಗಬೇಕೆಂಬ ಉದ್ದೇಶ ಇಲ್ಲಿದೆ. ವ್ಯಾಪಾರಿ ಸಂಸ್ಕøತಿಯ ಗುಣಗಳನ್ನು ಮೈಗೂಡಿಸಿಕೊಳ್ಳದೆ ಜನಪರ ಮತ್ತು ಸಮಾಜಮುಖಿ ಗುಣ, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ದನಿಯಿದೆ. ಮಾವಿನ ಮರ ಮತ್ತು ಹಣ್ಣಿನ ಅಂತಃಸತ್ವದಂತೆ ಸಿಸಿಲಿ ಟೀಚರಿನ ವ್ಯಕ್ತಿತ್ವವು ಓದುಗರೊಳಗೆ ಇಳಿಯುತ್ತದೆ. ಆಕೆಯು ಬೆಳೆಸಿದ ಮಾವಿನಮರವು ಗಾಳಿಮಳೆಯ ಏಟಿಗೆ ತುತ್ತಾಗಿ ಬುಡ ಸಮೇತ ಮುರಿದು ಬಿದ್ದ ಬಳಿಕ ಪೀರಸಾಬಿಯ ಅಂಗಡಿಯಲ್ಲಿ ತನ್ನ ಅಂಗಳದಲ್ಲಿ ಬೆಳೆದಿದ್ದಂಥ ಮಾವಿನ ಹಣ್ಣುಗಳನ್ನು ಕಂಡು ಅಚ್ಚರಿಗೊಂಡಾಗ “ಇದು ಸೇವಂತಿಯಕ್ಕನ ತೋಟದಲ್ಲಿ ಬೆಳೆದದ್ದು ಮತ್ತು ಅದು ನೀವು ಕೊಟ್ಟ ಗಿಡದ್ದಂತೆ” ಎಂಬ ಉತ್ತರವು ದೊರಕುತ್ತದೆ. ಸತ್ತ ಮರದ ಕವಲು ಬೇರೊಂದು ಕಡೆಯಲ್ಲಿ ಜೀವಂತವಾಗಿರುವ ವಿಚಾರ ಗೊತ್ತಾಗುತ್ತದೆ. ಒಂದು ಕಡೆ ಸಾವು, ಇನ್ನೊಂದು ಕಡೆ ಹುಟ್ಟು. ಜೀವವೈವಿಧ್ಯಗಳನ್ನು ಒಳಗೊಂಡು ಬೆಳೆಯುತ್ತಲೇ ಹೋಗುವ ವಿಸ್ಮಯಕಾರಿ ವಿಶ್ವಕ್ಕೆ ನಾಶ ಎಂಬುದಿಲ್ಲ, ಆದಿ ಅಂತ್ಯಗಳೂ ಇಲ್ಲ ಎಂಬುದನ್ನು ಮೊಗಸಾಲೆಯವರ ಕತೆಗಳ ಪೈಕಿ ಅತ್ಯಂತ ಭಿನ್ನವಾದ ರಚನೆಯಾಗಿದೆ. ಸಿಸಿಲಿ ಟೀಚರಿನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಬಳಸಿದ ಮಾವಿನಮರದ ರೂಪಕವನ್ನು ತಾಳಲಯಬದ್ಧವಾಗಿ ದುಡಿಸಿಕೊಂಡರೆ ಅದೊಂದು ಸೊಗಸಾದ ಕವಿತೆಯಾಗಿ ಕಂಗೊಳಿಸುವ ಸಾಧ್ಯತೆಯಿದೆ.
ಆರು ದಶಕಗಳ ಕಾಲ ಕಾವ್ಯ ಮತ್ತು ಕಾದಂಬರಿ ಪ್ರಕಾರದಲ್ಲಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡಿರುವ ಮೊಗಸಾಲೆಯವರು ವಸ್ತು ವೈವಿಧ್ಯದಲ್ಲಿ ಕನ್ನಡ ಕಥಾಸಾಹಿತ್ಯಕ್ಕೂ ಸಮೃದ್ಧ ಕೊಡುಗೆಯನ್ನು ನೀಡಿದ್ದಾರೆ. ಅವರು ಕತೆಗಳನ್ನು ಬರೆಯಲು ಪ್ರಾರಂಭಿಸುವ ವೇಳೆಗೆ ಮಾಸ್ತಿ ಸಂಪ್ರದಾಯವು ಬೇರೂರಿತ್ತು. ನವ್ಯ ಸಾಹಿತ್ಯವನ್ನು ವಿಸ್ತರಿಸಿದ ಅನಂತಮೂರ್ತಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿಯವರು ಆ ಸಂಪ್ರದಾಯವನ್ನು ಮೀರಿ ಬರೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಮೊಗಸಾಲೆಯವರಿಗೆ ಮಾಸ್ತಿಯವರ ಪ್ರಭಾವದಂತೆ ಅವರ ಸಮಕಾಲೀನರ ಪ್ರಯೋಗಗಳೂ ಅನುಕೂಲ ಪ್ರತಿಕೂಲಗಳನ್ನು ಸೃಷ್ಟಿಸಿವೆ. ಕುವೆಂಪು, ಕಾರಂತ, ಅನಂತಮೂರ್ತಿ, ತೇಜಸ್ವಿ, ಮುಂತಾದವರು ಜೀವನವನ್ನು ನೋಡುವ ಧಾಟಿ, ಅದನ್ನು ಬರವಣಿಗೆಯಲ್ಲಿ ಮೂರ್ತಗೊಳಿಸುವ ರೀತಿ, ಜೀವನ ಮೌಲ್ಯಗಳ ಬಗ್ಗೆ ಇವರಿಗೆ ಇರುವ ಕಾಳಜಿ, ಅನುಭವಗಳನ್ನು ದುಡಿಸಿಕೊಳ್ಳುವ ಬುದ್ಧಿವಂತಿಕೆಗಳು ಅವರ ಮೇಲೆ ಪ್ರಭಾವವನ್ನು ಬೀರಿವೆ. ಕತೆಯ ಘಟನೆಗಳ ಕಾಲ ಮತ್ತು ನಿವೇದನೆಯ ಕಾಲಕ್ಕೂ ಇರುವ ಅಂತರ, ಎದ್ದು ಕಾಣುವ ಮಾನವೀಯ ದೃಷ್ಟಿಕೋನ, ಮೌಲ್ಯಗಳು ಮಖ್ಯವಾಗುತ್ತವೆ. ಅವರು ಕತೆಯಿಂದ ಕತೆಗೆ ಬೆಳೆಯುತ್ತಲೇ ಹೋದರು ಎನ್ನುವುದಕ್ಕೆ ‘ಸುಂದರಿಯ ಎರಡನೇ ಅವತಾರ’ದಿಂದ ‘ಆಗು ನೀ ಅನಿಕೇತನ’ವರೆಗೆ ಕಾಣಿಸಿಕೊಳ್ಳುವ ಅಂತರವು ಸಾಕ್ಷಿಯಾಗಿದೆ. ಪ್ರಭಾವಗಳನ್ನು ಅರಗಿಸಿಕೊಳ್ಳುವ ಸಾಮಥ್ರ್ಯ ಮತ್ತು ಸ್ವಂತಿಕೆಯನ್ನು ಸಾಧಿಸಿಕೊಳ್ಳುವ ಹಂಬಲಗಳು ಅವರ ಬೆಳವಣಿಗೆಗೆ ಕಾರಣಗಳಾಗಿವೆ. ಮೊಗಸಾಲೆಯವರದ್ದು ಆದರ್ಶದ ನೆಲೆಯಾದರೂ ವಾಸ್ತವದ ಹಾದಿಯನ್ನು ಆಯ್ದುಕೊಂಡಿದ್ದಾರೆ. ಅವರು ತಮ್ಮ ಅನುಭವ ಪ್ರಪಂಚದ ಪರಿಧಿಯಲ್ಲಿ ಸಾಮಾಜಿಕ ಸತ್ಯಗಳು ಬದುಕನ್ನು ತಟ್ಟುವ ಬಗೆಯನ್ನು ಶೋಧಿಸುವಾಗ ಅವುಗಳ ಸಮಗ್ರ ಸ್ವರೂಪವನ್ನು ಗಮನಕ್ಕೆ ತಂದುಕೊಳ್ಳಲು ಪ್ರಯತ್ನಿಸಿ ಬರವಣಿಗೆಗೆ ಕೈ ಹಚ್ಚುತ್ತಾರೆ. ಈ ಅನುಭವ ಪ್ರಪಂಚದ ಭಾಗವಾಗಿರುವ ಸೀತಾಪುರವು ಅವರ ಎಲ್ಲ ಕತೆಗಳಿಗೂ ಹಿನ್ನೆಲೆಯಾಗಿದ್ದು ಆ ಸಮಾಜವೇ ಕತೆಗಳ ಕೇಂದ್ರವಾಗಿದೆ. ಮಾನವೀಯ ಸಂಬಂಧಗಳ ಮೇಲೆ ದಾಳಿಯನ್ನು ಮಾಡುವ ತೀವ್ರತರವಾದ ಧಾರ್ಮಿಕ ಪ್ರಜ್ಞೆ, ಸ್ವಾರ್ಥಗಳು ಕುಟುಂಬ ಮತ್ತು ಸಾಮಾಜಿಕ ವಿಘಟನೆಗೆ ಕಾರಣವಾಗುತ್ತವೆ ಎಂಬ ಗ್ರಹಿಕೆಯಲ್ಲಿ ಕತೆಯ ವಿನ್ಯಾಸವು ರೂಪು ತಾಳಿದರೂ ಅವರ ಕತೆಗಳು ಸಾಮಾಜಿಕ ಸಂಬಂಧ ಮತ್ತು ಐಕ್ಯತೆಯನ್ನು ಬಯಸುತ್ತವೆ. ಇಲ್ಲಿ ಸಂಪ್ರದಾಯಸ್ಥರು, ಉದಾರವಾದಿಗಳು, ಆಧುನಿಕರು, ಧರ್ಮವನ್ನು ನಂಬುವವರು ಮತ್ತು ಅದನ್ನು ಪ್ರಶ್ನಿಸುವವರು ಇದ್ದಾರೆ. ಹಿಂದೂಗಳು, ಕ್ರೈಸ್ತರು ಮತ್ತು ಮುಸ್ಲಿಮರು ಏಕಶಿಲಾಕೃತಿ ಎಂಬಂತೆ ಚಿತ್ರಿತರಾಗದಿರುವುದರಿಂದ ಯಾವ ಪಾತ್ರವನ್ನೂ ಜಾತಿಮಾದರಿ, ಕೋಮುಮಾದರಿ, ವರ್ಗಮಾದರಿ, ಲಿಂಗಮಾದರಿ ಎನ್ನುವಂತಿಲ್ಲ. ಜಾತಿ, ಕೋಮು, ವರ್ಗ, ಲಿಂಗಗಳು ಧಾರಣ ಮಾಡುವ ರೂಢಿಗತವಾದ ಲಕ್ಷಣಗಳಿದ್ದರೂ ಅವುಗಳನ್ನು ಮೀರಿ, ಮಾನವೀಯತೆಯನ್ನು ಅನಾವರಣಗೊಳಿಸುವ ಆಸ್ಥೆಯು ಕಂಡು ಬರುತ್ತದೆ. ಅವರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳು ಮನುಷ್ಯರ ನಡುವಿನ ಭಿನ್ನಾಭಿಪ್ರಾಯ, ಸಂಘರ್ಷವೆಂಬಂತೆ ಮೂಡಿ ಬಂದಿವೆ. ಏನೇ ಅಸಮಾಧಾನಗಳಿದ್ದರೂ ಜನರು ತಮ್ಮ ನಡುವಿನ ವೈಯಕ್ತಿಕ ಸಂಬಂಧಗಳನ್ನು ಧ್ವಂಸಗೊಳಿಸದಂತೆ ನೋಡಿಕೊಳ್ಳುವ ವಿವೇಕವನ್ನು ತೋರುತ್ತಾರೆ. ದ್ವೇಷದ ಬೀಜಗಳನ್ನು ಬಿತ್ತುವವರ ಬಗ್ಗೆ ಎಚ್ಚರವನ್ನು ತಾಳುತ್ತಾರೆ. ಅದನ್ನು ವಿರೋಧಿಸುವಲ್ಲಿ ಕೈಜೋಡಿಸುತ್ತಾರೆ. ದ್ವಿದಳ ವಿಭಜನೆ, ವರ್ಗೀಕರಣದ ಕಥನ ಮಾದರಿಗಳನ್ನು ಕೈಬಿಟ್ಟಿದ್ದರಿಂದ ಇಲ್ಲಿನ ಕತೆಗಳು ಕೋಮುವಾದಿ ಅಥವಾ ಜಾತ್ಯತೀತ ಕಥನವಾಗದೆ ಮಾನವೀಯ ಕಥನವಾಗುತ್ತದೆ. ಯಾವ ಅತಿಗೂ ಹೋಗದೆ ಸಾಮರಸ್ಯವನ್ನು ಹಂಬಲಿಸುವ ಕತೆಗಳು ವ್ಯಕ್ತಿ, ಕುಟುಂಬ ಮತ್ತು ಜನಸಮುದಾಯದ ಅನುಭವಗಳನ್ನು ನಿರೂಪಿಸುತ್ತವೆ. ಸಂಘರ್ಷದ ನೆಲೆಗಳ ಬದಲು ಸಮಸ್ಯೆಗಳನ್ನು ಪರಿಹರಿಸುವ ಆಶಯ, ಹಂಬಲ, ನಿರೀಕ್ಷೆಗಳನ್ನು ಶೋಧಿಸುತ್ತವೆ. ಆಯಾ ಕಾಲದ ಸಮಸ್ಯೆಗಳನ್ನು ಮಾತ್ರವಲ್ಲ, ತಮ್ಮ ಕನಸುಗಳನ್ನೂ ಹೂಡಿ ಅದರ್ಶ ಮತ್ತು ವಾಸ್ತವಗಳ ಪರಿಭಾಷೆಯಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ. ಅಂತರಂಗದಲ್ಲಿರುವ ಮಾನವೀಯತೆಯ ಸೆಲೆಯನ್ನು ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲಿಸುವ ಕತೆಗಳು ಸರಳತೆಯ ಕಡೆಗೆ ಚಲಿಸುತ್ತಿದ್ದರೂ ಅನಗತ್ಯ ವಿವರಗಳು, ಅನವಶ್ಯಕ ಉಪಕತೆಗಳು, ವಾಚಾಳಿತನಗಳನ್ನು ಬಿಟ್ಟುಕೊಟ್ಟು ಸಣ್ಣಕತೆಯ ಆಕೃತಿ, ಶಿಲ್ಪ, ಮತ್ತು ಚೌಕಟ್ಟಿಗೆ ಹೊಂದಿಕೊಂಡು ರೂಪು ತಾಳಿವೆ. ಆಧುನಿಕ ಒತ್ತಡಗಳ ನಡುವೆ ಜಡವಾಗುತ್ತಿರುವ ಸಂವೇದನೆಯನ್ನು ಜೀವಂತವಾಗಿಡುವ, ಬರಡಾಗುತ್ತಿರುವ ಮನಸ್ಸುಗಳಲ್ಲಿ ಜೀವಸೆಲೆಯನ್ನು ಉಕ್ಕಿಸಿ ಚೈತನ್ಯದ ಹನಿಯನ್ನು ಸಿಂಪಡಿಸುವ, ಉಪಭೋಗ ಸಂಸ್ಕೃತಿಯ ಸೆಳೆತದಲ್ಲಿ ಸಿಕ್ಕಿ ಬಿಕ್ಕಟ್ಟಿನಲ್ಲಿರುವಾಗ ಸಂಬಂಧಗಳಿಗೆ ಮಾನವೀಯ ಸ್ಪರ್ಶವನ್ನು ನೀಡುವ ಮೊಗಸಾಲೆಯವರ ಕತೆಗಳು ವಿಶೇಷ ಚರ್ಚೆಗೆ ಒಳಗಾಗಬೇಕಿವೆ.
1 thought on “ಡಾ.ಮೊಗಸಾಲೆ ಅವರ ‘ಆಗು ನೀ ಅನಿಕೇತನ’”
ನಾ. ಮೊಗಸಾಲೆಯವರ ಸಾಹಿತ್ಯಿಕ ಅಭಿವ್ಯಕ್ತಿ ಮಾನವತಾವಾದ. ಅದು ಅವರ ಮೂಲ ಅಸ್ತಿತ್ವದ ಹಂಬಲ. ಅವರು ಈ ವಿಷಯದಲ್ಲಿ Humble ಆಗಿರುವುದರಿಂದಲೇ, ಆ ದನಿ ಸ್ಪಷ್ಟವಾಗಿ ಕೇಳಿಸುತ್ತದೆ; ಇನ್ನೂ ಬರೆಯುತ್ತಿರುವುದಕ್ಕೂ ಅದೇ ಬೆಂಬಲ!
2939 ಶಬ್ದ ಮಾಲೆಯ ಈ ಲೇಖನದ ಧ್ವನಿಯೂ ಅದೇ ಆಗಿದೆ.