ಹಾಯ್, ನಾನು ಕಾರುಣ್ಯಾ. ನನ್ನ ಅಣ್ಣ ಮೇಘರಾಜನ ಊರಿಗೆ ಬಂದು ನಾಲ್ಕು ದಿನಗಳಾಗಿವೆ. ಅಣ್ಣ ಮೇಘರಾಜ್ ಮತ್ತು ಅತ್ತಿಗೆ ಸೌಭಾಗ್ಯಾ ಇಬ್ಬರೂ ನೌಕರದಾರರೇ. ಅಣ್ಣ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದರೆ ಅತ್ತಿಗೆ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿ. ನಾನು ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್. ನನ್ನ ಗಂಡ ವಿದ್ಯಾಸಾಗರ್ ಸಹ ಸಾಫ್ಟ್‍ವೇರ್ ಇಂಜಿನಿಯರ್. ನನಗೂ ಇಬ್ಬರು ಮಕ್ಕಳು, ಅತ್ತಿಗೆಗೂ ಇಬ್ಬರು ಮಕ್ಕಳು; ತಲಾ ಒಂದು ಗಂಡು, ಒಂದು ಹೆಣ್ಣು. ಅಣ್ಣ ನನಗಿಂತ ಮೂರು ವರ್ಷ ದೊಡ್ಡವನಾದರೂ ನನ್ನ ಮದುವೆಯೇ ಮೊದಲು ಜರುಗಿತ್ತು. ಅಪ್ಪ, ಅಮ್ಮ ಇಬ್ಬರೂ ಅಣ್ಣ, ಅತ್ತಿಗೆಯರ ಜೊತೆಗಿರುತ್ತಾರೆ. ಅಪ್ಪ ಮಲ್ಲಪ್ಪ ಕೃಷಿಕ. ಅಮ್ಮ ಪುಷ್ಪಾವತಿ ಗೃಹಿಣಿ. ಸಾಧಾರಣ ಕೃಷಿಕನ ಮಕ್ಕಳಾದ ನಾವು ಓದಿನಲ್ಲಿ ಯಾವಾಗಲೂ ಮುಂದು. ಅಪ್ಪ, ಅಮ್ಮ ಹೇಗೋ ಹೊಟ್ಟೆ-ಬಟ್ಟೆ ಕಟ್ಟಿ ನಮಗಿಬ್ಬರಿಗೂ ನಮ್ಮಿಚ್ಛೆಯಂತೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಅಣ್ಣ ಎಂಎ, ಬಿಎಡ್ ಮಾಡಿಕೊಂಡಿದ್ದರೆ ನಾನು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‍ದಲ್ಲಿ ಬಿಇ ಮಾಡಿಕೊಂಡಿದ್ದೇನೆ. ಸೌಭಾಗ್ಯಾ ಅತ್ತಿಗೆ ಬಿಎ, ಬಿಡ್ ಪದವೀಧರೆ. ವಿದ್ಯಾಸಾಗರ್ ಸಹ ಇ ಅಂಡ್ ಸಿಯಲ್ಲಿ ಬಿಇ ಪದವೀಧರ. ನಾನು ಮತ್ತು ವಿದ್ಯಾಸಾಗರ್ ಬೆಂಗಳೂರಿನ ಬೇರೆ ಬೇರೆ ಸಾಫ್ಟ್‍ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ವಿದ್ಯಾಸಾಗರನ ತಂದೆ-ತಾಯಿಗಳು ನಮ್ಮ ಜೊತೆಗೇ ಬೆಂಗಳೂರಿನಲ್ಲಿ ಇರುತ್ತಿದ್ದಾರೆ. ಮಾವ ಶಿವಶಂಕರಪ್ಪ ಕಂದಾಯ ಇಲಾಖೆಯಲ್ಲಿ ಎಫ್‍ಡಿಎ ಅಂತ ಸೇವೆ ಸಲ್ಲಿಸಿ ನಿವೃತ್ತಿ ಪಡೆದವರು. ಅತ್ತೆ ಅನ್ನಪೂರ್ಣಾದೇವಿ ಗೃಹಿಣಿ. ಸೌಭಾಗ್ಯಾ ನನಗಿಂತ ಕೇವಲ ಮೂರು ತಿಂಗಳಷ್ಟೇ ದೊಡ್ಡವಳು. ಆರ್ಥಿಕ ಸ್ಥಿತಿ-ಗತಿಯಲ್ಲಿ ಸೌಭಾಗ್ಯಾಳ ತಂದೆ-ತಾಯಿಯವರೇ ಮೇಲಿನ ಸ್ಥರದಲ್ಲಿದ್ದಾರೆ ನನ್ನ ಹೆತ್ತವರಿಗಿಂತ.
ನಾನು ಎರಡು ವರ್ಷಗಳಿಂದ ತವರಿಗೆ ಬಂದಿರಲಿಲ್ಲ. ಎರಡು ವಾರಗಳ ಕ್ರಿಸ್‍ಮಸ್ ರಜೆಯ ಜೊತೆಗೆ ಎರಡು ವಾರ ವರ್ಕ ಫ್ರಮ್ ಹೋಮ್‍ಗೆ ಪರ್ಮಿಶನ್ ತೆಗೆದುಕೊಂಡು ಅಣ್ಣನ ಮನೆಗೆ ಬಂದಿರುವೆ. ಬಂದ ದಿನದಿಂದ ನಾನು ಅತ್ತಿಗೆ ಸೌಭಾಗ್ಯಾಳ ದಿನಚರಿಯನ್ನು ಗಮನಿಸತೊಡಗಿದ್ದೇನೆ. ಸೌಭಾಗ್ಯಾಳ ತಾಳ್ಮೆ, ಸಂಯಮ, ಪ್ರೀತಿ ಸೂಸುವ ಮಾತುಗಳು, ಪ್ರೀತಿ ಸೂಸುವ ಕಂಗಳ ನೋಟ, ಆತ್ಮೀಯ ಭಾವ, ಕಾರ್ಯ ಚತುರತೆ, ಕೆಲಸದಲ್ಲಿನ ಚಾಕಚಕ್ಯತೆ, ಕಾರ್ಯ ಕ್ಷಮತೆ, ಕೆಲಸದಲ್ಲಿನ ಶ್ರದ್ಧೆ, ಮಕ್ಕಳು, ಅಣ್ಣ, ನನ್ನೊಂದಿಗೆ, ನನ್ನ ಮಕ್ಕಳೊಂದಿಗೆಗಿನ ಆಪ್ತ ಹಾವ-ಭಾವ, ತನ್ನ ಅತ್ತೆ-ಮಾವನವರೊಂದಿಗೆಗಿನ ವಿನೀತಭಾವದ ನಡತೆ, ಮನೆಗೆ ಬರುವ-ಹೋಗುವ ಜನರೊಂದಿಗೆಗಿನ ಬಾಂಧವ್ಯ ಬೆಸೆಯುವ ನಗುಮೊಗದ ಸವಿ ಮಾತುಗಳು ನನಗೆ ತುಂಬಾ ಮೆಚ್ಚುಗೆಯಾಗತೊಡಗಿವೆ. ಅತ್ತಿಗೆಯ ಸದ್ಗುಣಗಳನ್ನು ನನ್ನ ಗುಣಗಳೊಂದಿಗೆ ಹೋಲಿಸಿಕೊಂಡು ಅಚ್ಚರಿಪಡತೊಡಗಿದ್ದೇನೆ. ಭೂಮಿಯಂಥಹ ತಾಳ್ಮೆ, ಕ್ಷಮಾ ಗುಣ ಮೈಗೂಡಿಸಿಕೊಂಡವಳು ಸೌಭಾಗ್ಯಾ ಎಂಬ ಹೆಮ್ಮೆಯ ಭಾವ ನನ್ನೆದೆಯೊಳಗೆ ಪುಳಕವೆಬ್ಬಿಸುತ್ತಿದೆ. `ಸೌಭಾಗ್ಯಾ ಅತ್ತಿಗೆ ತುಂಬಾ ಅಚ್ಚುಕಟ್ಟಾಗಿ ಮನೆಯ ಜವಾಬ್ದಾರಿಗಳೆಲ್ಲವನ್ನೂ ನಿಭಾಯಿಸುತ್ತಿದ್ದಾಳೆ’ ಎಂದು ಪ್ರಮಾಣಪತ್ರ ನೀಡಿದೆ ನನ್ನ ಹೃದಯವಂತಿಕೆ.
****
ಸೌಭಾಗ್ಯಾ ಅತ್ತಿಗೆಗೆ ದಿನಾಲೂ ಬೆಳಿಗ್ಗೆ ಐದೂವರೆಗೇ ಸುಪ್ರಭಾತವಾಗುತ್ತಿದೆ. ಆಕೆ ತನ್ನ ಮೊಬೈಲಿನಲ್ಲಿ ಅಲಾರಾಂ ಸೆಟ್ ಮಾಡಿಕೊಂಡಿದ್ದಾಳೆ. ಬೆಳಿಗ್ಗೆ ಎದ್ದವಳೇ, `ಬೆಳಗೆದ್ದು ಯಾರ್ಯಾರ ನೆಲೆಯಲಿ…?’ ಎಂದು ಮನದೊಳಗೇ ಗುನುಗಿಕೊಳ್ಳುತ್ತಾ ತನ್ನ ಆರಾಧ್ಯ ದೈವಗಳಿಗೆ ನಮಸ್ಕರಿಸಿ ದಿನಚರಿ ಪ್ರಾರಂಭಿಸುತ್ತಾಳೆ.
ಸೌಭಾಗ್ಯಾ ಓದಿದ್ದು ಬಿಎ, ಬಿಎಡ್ ಆದರೂ ಅವಳು ಜೀವನದ ವಿಶ್ವವಿದ್ಯಾಲಯದಲ್ಲಿ ಸೂಪರ್ ಡಾಕ್ಟರೇಟ್ ಪಡೆದವಳು ಎಂದೆನಿಸತೊಡಗಿದೆ ನನಗೆ. ಅವಳು ಜ್ಞಾನದ ಮಟ್ಟದಲ್ಲಿ ತುಂಬಾ ಎತ್ತರದಲ್ಲಿದ್ದಾಳೆ. ಶಿ ಈಜ್ ಎ ಟ್ರಜರ್ ಆಫ್ ನಾಲೇಡ್ಜ್. ಅವಳ ಪ್ರತಿಯೊಂದು ನಡೆ, ನುಡಿ ನನ್ನ ಮನಸ್ಸನ್ನು ಆಕರ್ಷಿಸುತ್ತಿವೆ. ಮನಸ್ಸಿಗೆ ಮೆಚ್ಚಿಗೆಯೂ ಆಗುತ್ತಿದೆ. ಮನಸ್ಸನ್ನು ಕೆಣಕುತ್ತಿದೆ ಎಂದರೆ ತಪ್ಪಾಗಲಾರದು. `ನೀನೂ ಏಕೆ ನಿನ್ನತ್ತಿಗೆಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬಾರದು’ ಎಂದು ನನ್ನ ಅಂತರಾತ್ಮವನ್ನು ಎಚ್ಚರಿಸುತ್ತಲೂ ಇದೆ. ಅತ್ತಿಗೆಯಿಂದ ಕಲಿಯುವುದು ಬಹಳಷ್ಟಿದೆ ಎಂದು ನನ್ನ ಮನಸ್ಸೂ ಒಪ್ಪಿಕೊಳ್ಳತೊಡಗಿದೆ. `ಹೆಣ್ಣು ಸಂಸಾರದ ಕಣ್ಣು’ ಎಂಬ ಸೂತ್ರದಿಂದ, `ನಮ್ಮ ಸಂಸಾರ ಆನಂದ ಸಾಗರ’ ಎಂದು ಸಮಾಜಕ್ಕೆ ತೋರಿಸಿಕೊಟ್ಟಿರುವ ನಿಜ ಸಾಧ್ವಿ ಅತ್ತಿಗೆ.
ಸೌಭಾಗ್ಯಾ ನಮ್ಮ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದಾಗಿನಿಂದ ಭಾಗ್ಯಲಕ್ಷ್ಮಿ ನಮ್ಮ ಮನೆಯಲ್ಲಿ ಪಟ್ಟಾಗಿ ಕುಳಿತಿರುವುದೂ ನಿಜವೇ. ಅಣ್ಣ ಮೊದಲು ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಅತ್ತಿಗೆ ನಮ್ಮ ಮನೆಯ ಸೌಭಾಗ್ಯಲಕ್ಷ್ಮಿಯಾದ ವರ್ಷವೇ ಅಣ್ಣ ವೃತ್ತಿಯಲ್ಲಿ ಪದೋನ್ನತಿ ಪಡೆದು ಪ್ರೌಢಶಾಲೆಯ ಶಿಕ್ಷಕನಾದ. ಇಷ್ಟರಲ್ಲೇ ಅಣ್ಣ ಮುಖ್ಯೋಪಾಧ್ಯಾಯ ಹುದ್ದೆಯನ್ನೂ ಅಲಂಕರಿಸುವವನಿದ್ದಾನೆ. ಅತ್ತಿಗೆ ಎದ್ದವಳು ಪ್ರಾತಃರ್ವಿಧಿಗಳನ್ನು ಮುಗಿಸಿಕೊಂಡು ಬರಬರನೇ ಕಸಗುಡಿಸಲು ಮುಂದಾಗುತ್ತಾಳೆ. ಕೊರೋನಾ ಮಹಾಮಾರಿ ವಕ್ಕರಿಸಿಕೊಳ್ಳುವುದಕ್ಕೆ ಮುಂಚೆ ಮನೆಯ ಕಸ-ಮುಸುರೆ ಮಾಡುವುದಕ್ಕೆ ಮನೆಗೆಲಸದವಳು ಇದ್ದಳು. ಕೊರೋನಾ ವಕ್ಕರಿಸಿಕೊಂಡ ನಂತರ ಕಸ-ಮುಸುರೆ ಎಲ್ಲವೂ ಅತ್ತಿಗೆಯ ಪಾಲಿಗೇ ಬಿದ್ದವು. ಅಮ್ಮನೂ ಮಾಡಿದರೆ ಮಾಡಿದಳು, ಇಲ್ಲವಾದರೆ ಇಲ್ಲ. ಅಮ್ಮ ಕೆಲಸಕ್ಕೆ ಮುಂದಾದರೆ, `ಇರಲಿ ಬಿಡಿ, ನಾನು ಮಾಡಿಕೊಳ್ಳುವೆ. ಇಲ್ಲಿಯವರೆಗೆ ನೀವು ಬೆವರಿಳಿಸಿ ದುಡಿದಿದ್ದೇ ಸಾಕು’ ಎಂದು ನಯವಾಗಿ ಹೇಳಿ ತಾನೇ ಮಾಡಿಕೊಳ್ಳುತ್ತಿದ್ದಾಳೆ. ವಕ್ಕರಿಸಿದ್ದ ಕೊರೋನಾ ಪಲಾಯನಗೈದಿದ್ದರೂ ಕಸಗುಡಿಸಲು ಕೆಲಸದವಳನ್ನು ಇಟ್ಟುಕೊಂಡಿಲ್ಲ ಅತ್ತಿಗೆ. `ಕೆಲಸದವಳು ಬರುವುದು ಎಂಟು ಗಂಟೆಯ ಮೇಲೆ. ಅಲ್ಲಿವರೆಗೆ ಕಸದ ಮನೆಯಲ್ಲಿ ಓಡಾಡಿಕೊಂಡಿರುವುದಕ್ಕೆ ನನಗೇ ಒಂಥರ ಸರಿ ಎನಿಸುವುದಿಲ್ಲ. ಅದಕ್ಕೆ ನಾನೇ ಮನೆಯನ್ನು ಶುಚಿಗೊಳಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳುತ್ತಾಳೆ ಅತ್ತಿಗೆ. ಮುಸುರೆ ತಿಕ್ಕುವ ಹೆಣ್ಣು ಮಗಳು ಬೆಳಿಗ್ಗೆ ಎಂಟು ಗಂಟೆಗೆ ಬಂದು ತನ್ನ ಕೆಲಸ ಮುಗಿಸಿ ಹೋಗುತ್ತಾಳೆ. ಅಷ್ಟರಲ್ಲಿ ಅತ್ತಿಗೆ ತನಗೆ ಬೇಕು ಬೇಕಾದ ಪಾತ್ರೆ-ಪಗಡಿಗಳನ್ನು ತಾನೇ ತಿಕ್ಕಿ ತೊಳೆದುಕೊಳ್ಳುತ್ತಲೂ ಇರುತ್ತಾಳೆ. ತವರಿಗೆ ಬಂದ ಎರಡನೇ ದಿನ ನಾನೂ, `ಅತ್ತಿಗೆ ನಾನು ಇಲ್ಲಿರುವವರೆಗೆ ಮನೆಯನ್ನು ಸ್ವಚ್ಛಗೊಳಿಸುವುದನ್ನು ನಾನು ಮಾಡುತ್ತೇನೆ. ಆ ಸಮಯವನ್ನು ನೀನು ಬೇರೆ ಕೆಲಸಕ್ಕೆ ಬಳಸಿಕೊಳ್ಳಬಹುದು. ಜೊತೆಗೆ ನಿನಗೆ ತುರ್ತಾಗಿ ಬೇಕಾಗುವ ಪಾತ್ರೆ-ಪಗಡಿಗಳನ್ನೂ ತೊಳೆದುಕೊಡುವೆ’ ಎಂದೆ. ಆಗ ಅತ್ತಿಗೆ ಹೇಳಿದ್ದೇನು ಅಂತ ಗೊತ್ತೇ…?
`ಅಮ್ಮೀ, ಹೆಣ್ಣು ಮಗಳು ತವರಿಗೆ ಬರುವುದ್ಯಾತಕೆ ಹೇಳು…? ಅದೇ ಆಸರಿಕೆ-ಬ್ಯಾಸರಿಕೆ, ಅನುವು-ಆಪತ್ತು ಅಂತ ತವರಿಗೆ ಬರುತ್ತಾಳೆ. ನೀನು ಇಲ್ಲಿ ಇರುವ ನಾಲ್ಕು ದಿನವಾದರೂ ಆರಾಮಾಗಿ ಇರು. ಬೆಂಗಳೂರಿಗೆ ಹೋದ ನಂತರ ಓಡುವುದು ಇದ್ದದ್ದೇ. ಬೆಂಗಳೂರಿನ ಧಾವಂತದ ಜೀವನದಲ್ಲಿ ಹಸನಾಗಿ ಬದುಕನ್ನು ಕಟ್ಟಿಕೊಳ್ಳುವುದೇ ಒಂದು ಮಹತ್ಸಾಧನೆ. ನಿನ್ನಪ್ಪ-ಅಮ್ಮ, ನಿನ್ನಣ್ಣ, ಮಕ್ಕಳೊಂದಿಗೆ ಸಮಯವನ್ನು ಸದ್ವಿನಿಯೋಗ ಮಾಡಿಕೋ’ ಎನ್ನುತ್ತಾಳೆ. ಅತ್ತಿಗೆ ಹೇಳುವುದೂ ಸರಿಯೇ. ಬೆಂಗಳೂರಿಗೆ ಹೋದ ನಂತರ ದೌಡನಾ, ಭಾಗನಾ ಇದ್ದದ್ದೇ. ಉದ್ಯೋಗದಲ್ಲಿರುವವರು ಬೆಂಗಳೂರಿನ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಅಲೆದಾಡುವುದು ಸಾಮಾನ್ಯವೇ. ದಿನದ ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರರಿಂದ ಐದಾರು ತಾಸು ಬರೀ ಸಿಟಿ ಬಸ್, ಮೆಟ್ರೋ ರೈಲು, ಬೈಕ್, ಸ್ಕೂಟಿ, ಅಟೋ, ಕಾರು, ಇಲ್ಲವೇ ಕ್ಯಾಬ್‍ಗಳಲ್ಲಿ ಸುತ್ತುವುದು ಸಹಜವೇ ಆಗಿಬಿಟ್ಟಿದೆ. ಜೊತೆಗೆ ಎಂಟರಿಂದ ಹತ್ತು ತಾಸಿನ ಆಫೀಸ್ ಕೆಲಸ. ಆಫೀಸ್ ಕೆಲಸ ಮುಗಿಸಿಕೊಂಡು ಮನೆಗೆ ಸೇರುವಷ್ಟರಲ್ಲಿ ನಿತ್ರಾಣವಾದ ದೇಹದಲ್ಲಿ ಶಕ್ತಿಯೇ ಉಡುಗಿ ಹೋಗಿರುತ್ತದೆ. ಮನೆಯಲ್ಲಿ ಗಂಡ, ಹೆಂಡತಿ ಇಬ್ಬರೂ ಹೊರಗಡೆ ದುಡಿಯುತ್ತಿದ್ದರೆ ಕೆಲಸ ಮುಗಿಸಿ ಮನೆ ಸೇರಿದರೆ, `ಕರೆದು ಕಟ್ಟಿಹಾಕುವವರಿಲ್ಲ, ತುರುಸಿ ಮೇವು ಹಾಕುವವರಿಲ್ಲ’ ಎಂಬ ದನಗಳಂತೆ ಆಗಿಬಿಡುತ್ತಾರೆ. ಗಂಡ, ಹೆಂಡತಿಗೆ ಪರಸ್ಪರ ಮುದ್ದುಮಾಡಲೂ ಕೆಲವೊಮ್ಮೆ ಉತ್ಸಾಹವೇ ಇರುವುದಿಲ್ಲ. ಉತ್ಸಾಹವೆಲ್ಲವನ್ನೂ ಓಡಾಟದಲ್ಲೇ ಕಳೆದುಕೊಂಡು ಬಂದಾಗ ಜೀವನೋತ್ಸಾಹವಾದರೂ ಇರುವುದೆಲ್ಲಿ…? ಉತ್ಸಾಹವೆಲ್ಲವೂ ಟೆನ್ಸನ್‍ದ ಓಡಾಟ, ಕೆಲಸ ಕಾರ್ಯದಲ್ಲೇ ಸೋರಿ ಹೋಗಿರುತ್ತದೆ.
ಅತ್ತಿಗೆ ಕಸಗುಡಿಸುವುದು ಬೇಡವೆಂದರೂ ನಾನೇ ಅವಳ ಕಣ್ತಪ್ಪಿಸಿ ಮಲಗುವ ಕೋಣೆಗಳ, ಹೊರಗಿನ ಮನೆಯಂಗಳದ ಕಸವನ್ನು ಗುಡಿಸಲು ಪ್ರಯತ್ನಿಸುವೆ. ಅದಕ್ಕೆ, `ಅಯ್ಯೋ ಶಿವನೇ, ನಾನು ಬೇಡವೆಂದರೂ ನೀನು ಬಿಡುತ್ತಿಲ್ಲವಲ್ಲ? ಸುಮ್ಮಸುಮ್ಮನೇ ನೀನೇಕೆ ದಣಿದುಕೊಳ್ಳುತ್ತಿರುವಿ…?’ ಎಂಬ ಕಳಕಳಿಯ ಹೃದಯ ತಟ್ಟುವ ಮಾತುಗಳು ಅವಳದು. ಕೆಲವೊಂದು ಸಾರೆ ನನ್ನ ಕೈಯಿಂದ ಕಸಬರಿಗೆಯನ್ನು ಕಿತ್ತುಕೊಂಡು ನನಗೆ ರೆಸ್ಟ್ ಮಾಡಲು ಹೇಳಿದ್ದೂ ಇದೆ. `ನನಗೆ ಕೆಲಸ ತಪ್ಪಿತಲ್ಲ…? ಅವಳು ಬಳಿದರೆ ಬಳಿಯಲಿ’ ಎಂದೆನ್ನುವವರೇ ಬಹಳ ಜನರಿರುವಾಗ ನನ್ನ ಅತ್ತಿಗೆ ಅದಕ್ಕೆ ಅಪವಾದ. ನಾನೂ ಒಂದಿಷ್ಟು ಹಟವಾದಿಯೇ. `ಅತ್ತಿಗೆಮ್ಮ, ದಿನಾಲೂ ನೀನು ಹೀಗೆ ಬಿಡುವಿಲ್ಲದೇ ದುಡಿಯುವುವುದು ಇದ್ದೇ ಇರುತ್ತದೆ. ಈ ಒಂದು ದಿನವಾದರೂ ನಿನಗೆ ತುಸು ರೆಸ್ಟ್ ಸಿಗಲಿ ಅಂತ ನನ್ನ ಅನಿಸಿಕೆ ಅಷ್ಟೇ.’ `ಅಯ್ಯೋ, ಇದೇನು ಮಹಾ ಕೆಲಸ…? ಚಿಟಿಕೆ ಹೊಡೆಯುವುದರಲ್ಲಿ ಮಾಡಿ ಮುಗಿಸುತ್ತೇನೆ. ಮೇಲಾಗಿ ಇದೆಲ್ಲ ನನಗೆ ರೂಢಿಯಾಗಿದೆ. ನೀನು ಈ ಮನೆಯ ಮುದ್ದಿನ ಕುಡಿ. ಇಲ್ಲಿಗೆ ನಗುನಗುತ್ತಾ ಬಂದು ವಾಪಾಸು ಹೋಗುವಾಗ ನಗುನಗುತ್ತಾ ಹೋದರೆ ನಮಗದೇ ಖುಷಿ’ ಎಂದೆನ್ನುತ್ತಾಳೆ ವಿಶಾಲ ಮನಸ್ಸಿನ ಅತ್ತಿಗೆಮ್ಮ. ಅವಳು ಬೇಡವೆಂದರೂ ನಾನೇ ಹೊಸ್ತಿಲು ಪೂಜೆ ಮಾಡಿ ಮುಗಿಸುತ್ತಿರುವೆ. ಆಗ ಆಕೆ ಅಂದಿನ ಅಡುಗೆಗೆ ತಯಾರಿ ಮಾಡಿಕೊಳ್ಳುತ್ತಿದ್ದಳು. ಅಮ್ಮನೂ ತರಕಾರಿ ಹೆಚ್ಚುವುದು, ಮಕ್ಕಳಿಗೆ ಸ್ನಾನ ಮಾಡಿಸುವುದಕ್ಕೆ ಕೈ ಜೋಡಿಸುತ್ತಿರುತ್ತಾಳೆ. ಬಹಳಷ್ಟು ದಿನಗಳಲ್ಲಿ ಹಿಂದಿನ ರಾತ್ರಿಯೇ ನಾಳೆ ಬೇಯಿಸುವ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳುವ ರೂಢಿಯನ್ನು ಅತ್ತಿಗೆಮ್ಮ ಪಾಲಿಸುತ್ತಿರುವುದು ವಿಶೇಷ. ಬೆಳಿಗ್ಗೆ ಒಲೆಪೂಜೆ ಮಾಡಿಕೊಂಡು ಅನ್ನ, ತರಕಾರಿ, ಬೇಳೆ ಬೇಯಿಸಲು ಕುಕ್ಕರ್ ಇಟ್ಟುಬಿಡುತ್ತಾಳೆ. ಜೊತೆಗೆ ಅಂದಿನ ಬೆಳಗಿನ ನಾಷ್ಟಾಕ್ಕೂ ರೆಡಿಮಾಡಿಕೊಳ್ಳುತ್ತಿರುತ್ತಾಳೆ. ಒಂಭತ್ತಕ್ಕೆಲ್ಲಾ ಬೆಳಗಿನ ನಾಷ್ಟಾ, ರೊಟ್ಟಿ ಇಲ್ಲವೇ ಚಪಾತಿ, ಪಲ್ಲೆ, ಅನ್ನ, ಸಾರು ಎಲ್ಲವೂ ತಯಾರಾಗುತ್ತವೆ. ರೊಟ್ಟಿ ಮಾಡುವುದು ಅಮ್ಮನ ಪಾಲಿಗೇ ಬೀಳುತ್ತದೆ. ಅಮ್ಮನ ಬಿಳಿಜೋಳದ ರೊಟ್ಟಿಗಳು ಹಪ್ಪಳದಂತೆ ತೆಳು. ಅಣ್ಣ-ಅತ್ತಿಗೆಯ ಮಕ್ಕಳಿಗೆ ಕ್ರಿಸ್‍ಮಸ್ ರಜೆ ಇರದಿರುವುದರಿಂದ ಮಕ್ಕಳಿಬ್ಬರೂ ಶಾಲೆಗೆ ಹೋಗುತ್ತಾರೆ. ಅತ್ತಿಗೆ ಅಡುಗೆ ಮನೆಯಲ್ಲಿ ಬಿಜಿ ಇರುವುದರಿಂದ ನಾನೇ ಅವರಿಗೆ ಉಣ್ಣಿಸಿ ಶಾಲೆಗೆ ರೆಡಿಮಾಡಿಸುವೆ.
****
ಬಸವಲೀಲಾ ಮತ್ತು ವಿವೇಕಾನಂದ ಇಬ್ಬರೂ ಅಣ್ಣ-ಅತ್ತಿಗೆಯರ ಪ್ರೇಮದ ಕುಡಿಗಳು. ಬಸವಲೀಲಾ ಒಂದನೇ ತರಗತಿಯಲ್ಲಿ ಓದುತ್ತಿದ್ದರೆ ವಿವೇಕಾನಂದ ಎಲ್‍ಕೆಜಿಯಲ್ಲಿರುವನು. ಅವರಿಬ್ಬರ ಅಂದಂದಿನ ಹೋಮ್ ವರ್ಕ, ಓದು ಅಂದೇ ಮುಗಿದು ಹೋಗುವಂತೆ ಸೌಭಾಗ್ಯಾ ಅತ್ತಿಗೆ ನೋಡಿಕೊಳ್ಳುತ್ತಿದ್ದಾಳೆ. ಶಾಲೆಯಿಂದ ಬಂದ ತಕ್ಷಣ ಒಂದು ತಾಸು ಆಟ ಆಡಿಕೊಂಡು ಬರಲು ಮಕ್ಕಳಿಬ್ಬರನ್ನೂ ಬಿಟ್ಟುಬಿಡುತ್ತಾಳೆ. ಒಂದು ತಾಸು, ಒಂದು ಕಾಲು ತಾಸೋ ಮುಗಿಯುತ್ತಿದ್ದಂತೆ ಮಕ್ಕಳಿಬ್ಬರೂ ಕೈಕಾಲು ಮುಖ ತೊಳೆದು ಪುಸ್ತಕ ಹಿಡಿದು ಕುಳಿತುಕೊಳ್ಳಬೇಕೆಂಬ ನಿಯಮ ಅತ್ತಿಗೆಯದು. ಮಕ್ಕಳೇನು ಕರೆದಾಗ ಒಂದೇ ಸಲಕ್ಕೆ ಬಂದು ಬಿಡುವರೇ…? ಇಲ್ಲ, ಇಲ್ಲ. ಅವರು ತಮ್ಮದೇ ಆಟದ ಧ್ಯಾನದಲ್ಲಿರುತ್ತಾರೆ. ಹತ್ತೆಂಟು ಸಲ ಕೂಗಿ ಕರೆಯಬೇಕು ಅವರನ್ನು, ಅವರ ಆಟದ ತಪಸ್ಸನ್ನು ಭಂಗಗೊಳಿಸಲು. ಹತ್ತೆಂಟು ಸಲ ಕೂಗಿ ಕರೆಯುವಾಗಲೂ ಅತ್ತಿಗೆಮ್ಮ ತಾಳ್ಮೆಯನ್ನು ಕಳೆದುಕೊಳ್ಳದ ಸ್ಥಿತಪ್ರಜ್ಞೆ. `ಬರ್ರೋ, ಬನ್ರೋ, ಬೇಗ ಬನ್ರೋ. ಹೋಮ್ ವರ್ಕ, ಓದು ಎಲ್ಲವನ್ನೂ ಬೇಗ ಬೇಗ ಮುಗಿಸಿಕೊಂಡು ಬಿಡಬೇಕು. ಬೆಳಿಗ್ಗೆ ಅದಕ್ಕೆ ಸಮಯವಿರುವುದಿಲ್ಲ. ನಮಗೂ ಗಡಿಬಿಡಿ, ಧಾವಂತ. ತಿಳಿಸಿ ಹೇಳುವುದಕ್ಕೆ ನಮಗೂ ಸಮಯವಿರುವುದಿಲ್ಲ’ ಎಂದೆನ್ನುತ್ತಾ ನಗುಮೊಗದಿಂದ ಮಕ್ಕಳಿಬ್ಬರನ್ನೂ ಪುಸಲಾಯಿಸಿ ಆಟದ ಅಂಗಳದಿಂದ ಕರೆದುಕೊಂಡು ಬಂದು ಓದಿಗೆ ಹಚ್ಚುತ್ತಾಳೆ. ಆದರೆ ನನ್ನ ಮಕ್ಕಳ ಜೊತೆಗೆ ನನ್ನ ಪಾತ್ರ ಹೇಗಿರುತ್ತದೆ ಗೊತ್ತಾ…? ನನಗೂ ಇಬ್ಬರು ಮಕ್ಕಳಲ್ಲವೇ? ದೊಡ್ಡವ ಆತ್ಮೀಯ, ಎಂಟು ವರ್ಷದವ. ಎರಡನೇ ತರಗತಿಯಲ್ಲಿ ಓದುತ್ತಿದ್ದರೆ ಆರು ವರ್ಷದ ಮಗಳು ಅಧಿಶ್ರೀ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇಬ್ಬರದೂ ಒಂದೇ ಶಾಲೆ. ನನ್ನ ಮಕ್ಕಳೂ ಇವರಂತೆಯೇ. ಶಾಲೆಯಿಂದ ಬರುತ್ತಲೇ ಇಬ್ಬರ ಚಿತ್ತವೂ ಅಪಾರ್ಟಮೆಂಟಿನ ಗೆಳೆಯರೊಂದಿಗೆ ಆಟವಾಡುವುದಕ್ಕೆ. ಅವರಿಗೂ ನಾನು ಒಂದು, ಒಂದೂವರೆ ತಾಸು ಆಡಿಕೊಂಡು ಬರಲು ತಿಳಿಸುತ್ತಿರುವೆ. ಆಟಕ್ಕೆ ಬಿದ್ದ ಮೇಲೆ ಅವರಿಗೆ ಸಮಯದ ಅರಿವು ಇರಲು ಸಾಧ್ಯವೇ…? ಇಲ್ಲ, ಇಲ್ಲ. ನಾನು ಆಫೀಸಿನಿಂದ ಬರುವುದೇ ಆರು, ಆರೂವರೆಯ ಸುಮಾರು. ನಾನು ಬರುವಷ್ಟರಲ್ಲಿ ಆಟ ಮುಗಿಸಿ ಮನೆ ಸೇರಿಕೊಂಡು ಪಾಠದ ಬಗ್ಗೆ ಗಮನ ಕೊಡಬೇಕು ಎಂದು ಹೇಳುತ್ತಿರುವೆ. ನಾನಿಲ್ಲದ ವೇಳೆಯಲ್ಲಿ ಅತ್ತೆಯವರು ಮಕ್ಕಳನ್ನು ಮ್ಯಾನೇಜ್ ಮಾಡುತ್ತಿರುತ್ತಾರೆ. ನಾನು ಮನೆಗೆ ಬಂದ ಮೇಲೂ ಮಕ್ಕಳು ಆಟದಲ್ಲೇ ಮಗ್ನರಾಗಿರುತ್ತಾರೆ. ಅತ್ತೆಯವರ ಮಾತುಗಳನ್ನು ಅವರು ಕಿವಿಗೇ ಹಾಕಿಕೊಳ್ಳುವುದಿಲ್ಲ. ನಾನು ಒಂದೆರಡು ಸಾರೆ ಪ್ರೀತಿಯಿಂದ, `ಆಟ ಸಾಕು ಬನ್ರೋ’ ಎಂದು ಕರೆಯುವೆ. ಮತ್ತೊಂದೆರಡು ಸಾರೆ ಕೂಗುವೆ. ಮಕ್ಕಳು ಮನೆಗೆ ಬರುವ ಮನಸ್ಸು ಮಾಡುವುದೇ ಇಲ್ಲ. ನಂತರ ನನ್ನ ತಾಳ್ಮೆ ತಪ್ಪುತ್ತದೆ. ನನ್ನ ಒದರ್ಯಾಟ ಶುರುವಾಗುತ್ತದೆ. `ನೀವೆಂಥಹ ಮಕ್ಕಳೋ ಏನೋ? ಒಂದಿನಾನೂ ಒಂದೇ ಮಾತಿಗೆ ಆಟಬಿಟ್ಟು ಬಂದು ಮನೆ ಸೇರಿಕೊಂಡು ಅಭ್ಯಾಸದಲ್ಲಿ ತೊಡಗುವುದಿಲ್ಲ. ಎಲ್ಲಾ ನನ್ನ ಕರ್ಮ. ಒದರಿ ಒದರಿ ನನ್ನ ಗಂಟಲು ಹರಿದು ಹೋಗುತ್ತಿದೆ. ನೀವು ಸರಿಯಾಗಿ ಓದದಿದ್ದರೆ ಹಳ್ಳಿಗೆ ಹೋಗಿ ಹೊಲದಲ್ಲಿ ಗೇಯಬೇಕಾಗುತ್ತದೆ ನೋಡಿರಿ. ನಿಮ್ಮ ಅಪ್ಪ ಬರಲಿ, ಇವತ್ತು ನಿಮಗೆ ತಕ್ಕ ಶಾಸ್ತಿ ಮಾಡಿಸುವೆ…’ ಹೀಗೆ ನನ್ನ ಮಾತಿನ ಸರಪಣಿ ಮುಂದುವರಿಯುತ್ತದೆ. ಕೊನೆಗೆ ನಾನೇ ಅವರನ್ನು ಎಳೆದುಕೊಂಡು ಬಂದು ಪುಸ್ತಕ ಹಿಡಿಯುವಂತೆ ಮಾಡುವುದರಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಆಫೀಸಿನಿಂದ ಬರುವಷ್ಟರಲ್ಲಿ ಮೊದಲೇ ಸುಸ್ತಾಗಿರುತ್ತದೆ. ಮಕ್ಕಳ ಜೊತೆಗೆ ಒದರ್ಯಾಡಿ ಮತ್ತೊಂದಿಷ್ಟು ಸುಸ್ತು ಮಾಡಿಕೊಳ್ಳುವೆ.
ಸೌಭಾಗ್ಯಾ ಅತ್ತಿಗೆ ಪ್ರತಿ ನಡೆಯಲ್ಲೂ ಶಿಸ್ತಿನ ಸಿಪಾಯಿಯಂತೆ ಕಾಣುತ್ತಾಳೆ ನನಗೆ. ಶಿ ಈಜ್ ಡಿಸಿಪ್ಲೇನ್ಡ್ ಇನ್ ಎವೆರಿ ವಾಕ್ ಆಫ್ ಲೈಫ್. ಅತ್ತಿಗೆ ಎಂದರೆ ಶಿಸ್ತು, ಶಿಸ್ತು ಎಂದರೆ ಅತ್ತಿಗೆಮ್ಮ. `ಅತ್ತಿಗೆ, ಇದೆಲ್ಲ ಹೇಗೆ ಸಾಧ್ಯ…?’ ಎಂದು ಕೇಳಿದರೆ, `ಮನಸ್ಸು ನಮ್ಮ ಹಿಡಿತಲ್ಲಿದ್ದರೆ ಮನಸ್ಸು ಮಾಡಿದ್ದನ್ನು ಸಾಧಿಸಬಹುದು. ಮನಸ್ಸೆಂಬ ಮರ್ಕಟಕ್ಕೆ ಯಾವಾಗಲೂ ಲಗಾಮು ಬಿಗಿಹಿಡಿದಿರಬೇಕು. ಅವಶ್ಯಕತೆ ಇದ್ದರೆ ಸಡಿಲು ಬಿಡಬೇಕು. ಬೇಡದಿದ್ದಾಗ ಬಿಗಿ ಹಿಡಿಯಬೇಕು. ವಸ್ತುಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದನ್ನು ಮೊದಲು ಬಿಡಬೇಕು’ ಎಂದು ಮುಗುಳು ನಗುತ್ತಾ ಹೇಳಿಬಿಡುತ್ತಾಳೆ. ತನ್ನ ಶಾಲೆಯ ಕೆಲಸದ ಜೊತೆಗೆ ಮನೆಯನ್ನು ತುಂಬಾ ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಇಟ್ಟುಕೊಂಡಿದ್ದಾಳೆ. ಮನೆಯಲ್ಲಿ ಹೆಚ್ಚಿನ ಪೀಠೋಪಕರಣಗಳಿಲ್ಲ. ಅವಶ್ಯಕತೆಗೆ ಬೇಕೆನಿಸುವಷ್ಟನ್ನೇ ಇಟ್ಟುಕೊಂಡಿದ್ದಾಳೆ. ಇಂಥಹುದೇ ಬ್ರ್ಯಾಂಡೆಟ್ ಐಟೆಮ್ ಬೇಕು ಅಂತ ಏನಿಲ್ಲ ಅವಳಿಗೆ. ಓಕೆ ಅನ್ನುವ ಗುಣಮಟ್ಟದ ಸೋಫಾಸೆಟ್ ಇಟ್ಟಿದ್ದಾಳೆ. ನನ್ನ ಮನೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸೋಫಾಸೆಟ್ ಇದೆ. ವಿದ್ಯಾಸಾಗರ ಬೇಡವೆಂದರೂ ನಾನೇ ಹಟಕ್ಕೆ ಬಿದ್ದು ಆ ಸೋಫಾಸೆಟ್ ತಂದಿದ್ದೇನೆ. ದಿನದ ಇಪ್ಪತ್ನಾಲ್ಕು ಗಂಟೆಗಳ ಅವಧಿನಲ್ಲಿ ನಾನು ಅದರಲ್ಲಿ ಕುಳಿತು ಸುಖದ ಸವಿ ಅನುಭವಿಸುವುದೆಷ್ಟೊತ್ತು…? ಬಹಳ ಬಹಳ ಎಂದರೆ ಒಂದು ತಾಸೂ ನಾನು ಸೋಫಾದ ಮೇಲೆ ಕುಳಿತುಕೊಳ್ಳುವುದಿಲ್ಲವೇನೋ? ಬೇರೆಯವರ ಮನೆಯದಕ್ಕಿಂತ ನಮ್ಮ ಮನೆಯದು ಟಾಪ್ ಕ್ವಾಲಿಟಿಯದು ಇರಬೇಕು ಎಂಬ ಉದ್ದೇಶದಿಂದ ಖರೀದಿಸಿದ್ದು ಅಷ್ಟೇ. ಬರೀ ತೋರಿಕೆಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದೇನೆ ನಾನು. ಅದು ಬೇಕೋ, ಬೇಡವೋ ಎಂಬ ವಿಚಾರವಿಲ್ಲ.
ಬಟ್ಟೆಬರೆಗಳನ್ನು ಮನೆಯಲ್ಲಿ ಇರುವ ವಾರ್ಡ್‍ರೋಬ್, ಅಲ್ಮೇರಾಗಳಲ್ಲಿ ನೀಟಾಗಿ ಜೋಡಿಸಿಟ್ಟುಕೊಂಡಿದ್ದಾಳೆ ಅತ್ತಿಗೆ. ರಾತ್ರಿ ಹನ್ನೆರಡು ಗಂಟೆಗೆ ಕತ್ತಲಲ್ಲೂ ಕೈಹಾಕಿದರೆ ಬೇಕೆನ್ನುವ ವಸ್ತು ಅವಳಿಗೆ ಸಿಗುವ ಹಾಗೆ. ಮಕ್ಕಳ ಬಟ್ಟೆಗಳನ್ನೂ ಅಚ್ಚುಕಟ್ಟಾಗಿ ಜೋಡಿಸುವ ರೂಢಿ ಆಕೆಗೆ ಮೊದಲಿನಿಂದಲೂ ಕರಗತವಾಗಿದೆ. ಕಂಡ ಕಂಡದ್ದನ್ನು ಖರೀದಿಸಿ ತಂದು ಮನೆಯಲ್ಲಿ ಗುಡ್ಡೆ ಹಾಕುವ ಕೊಳ್ಳುಬಾಕತನ ಅತ್ತಿಗೆಗೆ ಇಲ್ಲ. ಬೇಕಿದ್ದರೆ ಕೊಳ್ಳುವುದು, ಬೇಡವಾಗಿದ್ದರೆ ಬೇಡ ಎನ್ನುವ ದೃಢತೆ ಅವಳಿಗಿದೆ.
ನನ್ನದೋ…? ನನಗೆ ನನ್ನ ಮನಸ್ಸೇ ಅರ್ಥವಾಗುವುದಿಲ್ಲ. ವೀಕೆಂಡ್‍ನಲ್ಲಿ ಅಲ್ಲಿ ಇಲ್ಲಿ ಸುತ್ತಾಡುತ್ತಾ ಮಾಲ್‍ಗಳಿಗೆ ಹೋದಾಗ ಕಂಡಕಂಡದ್ದನ್ನು ಕೊಳ್ಳುವ ಕೊಳ್ಳುಬಾಕತನ ನನ್ನ ಮನಸ್ಸನ್ನು ಕೆಡಿಸಿದೆ. ಮನೆಯಲ್ಲಿ ಅದೆಷ್ಟೋ ಜೊತೆ ಉಟ್ಟುಕೊಳ್ಳದ ಡ್ರೆಸ್ಸಸ್ ಇದ್ದರೂ ಇನ್ನೂ ಕೊಂಡುಕೊಳ್ಳುವ ಹಪಹಪಿ ನನ್ನ ಮನಸ್ಸಿನದು. ಕೊಂಡಿದ್ದನ್ನು ಒಂದೆರಡು ಸಾರೆಯೂ ಉಟ್ಟುಕೊಂಡಿರುವುದಿಲ್ಲ. ಅಷ್ಟರಲ್ಲಿ ಮತ್ತೊಂದು ಡ್ರೆಸ್ ಮನಸ್ಸಿಗೆ ಹಿಡಿಸಿದರೆ ಅಂದು ನನ್ನ ಕ್ರೆಡಿಟ್ ಕಾರ್ಡ್‍ನಲ್ಲಿ ಉದ್ದರಿ ಖಾತೆಯ ಮೊತ್ತ ಮೇಲೇರುತ್ತದೆ. ವಾರ್ಡರೋಬಿನಲ್ಲಿ ಲೆಕ್ಕಕ್ಕೆ ಸಿಗದಷ್ಟು ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಲೆಗ್ಗಿನ್ಸ್, ಟಾಪ್ಸ್, ಟೈಟ್ಸ್, ಜೀನ್ಸ್ ಇದ್ದರೂ ಮತ್ತೆ ಮತ್ತೆ ಖರೀದಿಸುವ ಚಟ ಬೆಳೆದು ಬಂದಿದೆ ನನಗೆ. ಕೆಲವೊಮ್ಮೆ, `ಇನ್ನೊಂದು ವರ್ಷದವರೆಗೆ ಬಟ್ಟೆಗಳನ್ನು ಖರೀದಿಸುವುದೇ ಬೇಡ’ ಎಂದು ನನ್ನೊಳಗೇ ಅಂದುಕೊಳ್ಳುತ್ತಿದ್ದರೂ ಮಾಲ್‍ಗಳಿಗೆ ಹೋದಾಗ ಆ ಪ್ರತಿಜ್ಞೆ ಮರೆತೇ ಹೋಗುತ್ತದೆ. ಬೇಕಾದದ್ದು, ಬೇಡವಾದದ್ದನ್ನು ಕೊಳ್ಳುವುದು ಹಾಗೇ ಮುಂದುವರಿದಿದೆ. ದೃಢತೆ ಇಲ್ಲದ ನನ್ನ ಮನಸ್ಸನ್ನು ನಾನೇ ಹಳಿದುಕೊಳ್ಳುತ್ತೇನೆ. `ಬಟ್ಟೆಗಿಟ್ಟ ಕೈ ಬರಿಗೈ…’ ಎಂದು ಅತ್ತೆ ಆಗಾಗ ಹೇಳುವ ಮಾತು ನನ್ನ ಮನಸ್ಸಿಗೆ ತಾಗುವುದೇ ಇಲ್ಲ. ಮಹಾನ್ ಸಂತ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ, `ನಾನು ಬದುಕಿರುವುದು ಎದೆ ಬಡಿತದಿಂದಲೇ ಹೊರತು ಬಟ್ಟೆಯಿಂದಲ್ಲ. ಸಮಾಜದಲ್ಲಿ ಇರುವೆನೆಂದ ಮೇಲೆ ಬಟ್ಟೆ ಬೇಕು. ಆದರೆ ಅದರಿಂದಾಗಿಯೇ ನಾನಿಲ್ಲ. ಅವಶ್ಯಕತೆಗೆ ಬೇಕಿದ್ದಷ್ಟು ಬಟ್ಟೆ ಧರಿಸಿದರೆ ಅದೇ ಜಾಣತನ’ ಎಂಬ ನುಡಿಮುತ್ತು ನನ್ನ ಎದೆಯೊಳಗೆ ಇಳಿಯುವುದೇ ಇಲ್ಲ. ಇದರ ಜೊತೆಗೆ ಪೂಜ್ಯ ಸ್ವಾಮೀಜಿಯವರ ಇನ್ನೊಂದು ಮಾತು, `ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ’ ಎಂಬುದು ಅಷ್ಟೇ ಸತ್ಯವೂ ಹೌದು. ನಾವು ಸ್ವಾಮೀಜಿಯವರ ಪ್ರವಚನ ಕೇಳುತ್ತೇವೆ. ಆದರೆ ಅವರ ಆದರ್ಶ ತತ್ವಗಳನ್ನು ಪಾಲಿಸುವುದೇ ಇಲ್ಲ. ಮನೆಯಲ್ಲಿ ವಾರ್ಡರೋಬಿನಲ್ಲೂ ಬಟ್ಟೆಗಳು, ಅಲ್ಮೇರಾದಲ್ಲೂ ಬಟ್ಟೆಗಳು ತುಂಬಿವೆ. ಅಚ್ಚುಕಟ್ಟುತನ ಒಂದಿಷ್ಟೂ ಇಲ್ಲ.
ಅತ್ತಿಗೆಮ್ಮ ಶಾಲೆಗಂತೂ ಕಡ್ಡಾಯವಾಗಿ ಸೀರೆ ಉಟ್ಟುಕೊಂಡು ಹೋಗುತ್ತಾರೆ. ಒಳ್ಳೊಳ್ಳೆಯ ಸೀರೆಗಳೇ ಇವೆ ಅಂದರೆ ತಪ್ಪಾಗಲಾರದು. ಸೀರೆಗಳ ಬಣ್ಣ, ಡಿಸೈನ್, ಬಾರ್ಡರ್, ಸೆರಗು ನಿಜವಾಗಿಯೂ ಸೂಪರ್. ಅವರ ಆಯ್ಕೆಗೆ ಎರಡು ಮಾತಿಲ್ಲ. ಆದರೆ ದಂಡಿಗಟ್ಟಲೇ ಸೀರೆಗಳಿಲ್ಲ. ಬೇಕೆನಿಸುವಷ್ಟು ಇಟ್ಟುಕೊಂಡಿದ್ದಾಳೆ. ಜೊತೆಗೆ ಒಂದಿಷ್ಟು ಲೆಗ್ಗಿನ್ಸ್ ಸಹ ಅವಳ ಅಲ್ಮೇರಾದಲ್ಲಿ ನೀಟಾಗಿ ಕುಳಿತಿವೆ. ಅವಶ್ಯಕತೆ ಬಿದ್ದಾಗ ತೊಡುತ್ತಾಳೆ. ಟೈಟ್ಸ್, ಜೀನ್ಸ್ ಅದೆಂಥಹದೇನೂ ಇಲ್ಲ. ಸೀರೆಯಲ್ಲೇ ನಾರಿಯ ಚೆಲುವು ನೋಡು ಎಂಬಂತೆ ಅತ್ತಿಗೆಮ್ಮ ಸೀರೆಯಲ್ಲಿ ಬೊಂಬಾಟಾಗಿ ಕಾಣುತ್ತಾಳೆ. ಮೊನ್ನೆ ರವಿವಾರ ಅತ್ತಿಗೆ ಸೀರೆ ಉಟ್ಟುಕೊಳ್ಳುವಾಗ ನಾನು ಅವಳ ಪಕ್ಕದಲ್ಲೇ ಇದ್ದೆ. ಅವಳ ಬಟ್ಟೆಗಳ ವಾರ್ಡರೋಬನ್ನೇ ನೋಡುತ್ತಿದ್ದೆ. ತಕ್ಷಣ, `ಅತ್ತಿಗೆ, ಇಷ್ಟೇನಾ ನಿನ್ನ ಸೀರೆಗಳ ಕಲೆಕ್ಷನ್…?’ ಎಂದಿದ್ದೆ ಏಕಾಯೇಕಿ. `ಇಷ್ಟೇನಾ ಅಂದರೆ ಅದೇನು ಅಪ್ಪೀ…?’ ಎಂದು ಆಪ್ತಭಾವದಲ್ಲಿ ಕೇಳಿದ್ದಳು. `ನಿನ್ನಲ್ಲಿರುವ ಸೀರೆಗಳು ತುಂಬಾ ಕಡಿಮೆ ಅನಿಸುತ್ತಿವೆ…’ ಅನುಮಾನಿಸುತ್ತಾ ಕೇಳಿದ್ದೆ. `ಕಾರುಣ್ಯಾ, ಇಲ್ಲಿರುವ ಸೀರೆಗಳೇ ಹೆಚ್ಚೇನೋ ಎಂದು ನನಗೆ ಅನಿಸುತ್ತಿದೆ. ಇಲ್ಲಿರುವುದನ್ನೇ ಉಟ್ಟುಕೊಳ್ಳುವುದಕ್ಕಾಗುತ್ತಿಲ್ಲ. ಇನ್ನೂ ಹೆಚ್ಚಿನ ಸೀರೆಗಳನ್ನು ತೆಗೆದುಕೊಂಡು ನಾನೇನು ಮಾಡಲಿ? ಸುಮ್ಮನೇ ದುಡ್ಡು ವೇಸ್ಟ್ ಅಷ್ಟೇ…’ ಎಂದಿದ್ದಳು ನಗುತ್ತಾ. `ಇದರಲ್ಲಿ ಓಲ್ಡ್ ಮಾಡೆಲ್‍ಗಳು ಬಹಳ ಇವೆ ಎಂದೆನಿಸುತ್ತಿದೆ ನನಗೆ…’ `ಹತ್ತು ವರ್ಷದ ಮೇಲ್ಪಟ್ಟು ವಯಸ್ಸಿನ ಸೀರೆಗಳೂ ಇವೆ. ಮದುವೆಗೆ ಮುಂಚಿನ ಸೀರೆಗಳೂ ಇವೆ. ಇದರಲ್ಲಿ ಓಲ್ಡ್ ಮಾಡೆಲ್ ಅಂತ ಏನಿಲ್ಲ. ಈಗೀಗ ಇವೇ ನ್ಯೂ ಫ್ಯಾಷನ್ ಆಗತೊಡಗಿವೆ. ಆಗಾಗ ಒಂದಿಷ್ಟು ಹಳೇ, ಅದೂ ಒಳ್ಳೆಯ ಸೀರೆಗಳನ್ನು ಮನೆಗೆಲಸದವಳಿಗೆ ಕೊಟ್ಟು ಸೀರೆಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳುತ್ತೇನೆ. ನೀನೂ ಅಲ್ಲಿ ಹಳೇ ಸೀರೆಗಳನ್ನು ಮನೆಗೆಲಸದವಳಿಗೆ ಇಲ್ಲವೇ ಅನಾಥಾಶ್ರಮಕ್ಕೆ ಕೊಡುತ್ತಿರಬೇಕೆಂದು ನಾನು ಭಾವಿಸುವೆ.’ ಚೆಂದದ ಅತ್ತಿಗೆಯ ಮಾತುಗಳು ಅವಳಿಗಿಂತಲೂ ಚೆಂದವೇ. ಚೆಲುವಿನ ಚಿತ್ತಾರದ ಅತ್ತಿಗೆ ಅಣ್ಣನ ಮನಮೆಚ್ಚಿದ ಮನದನ್ನೆ, ಮಡದಿ, ಲವ್ಲೀ ಲೇಡಿಯೂ ಹೌದು. ಅಪ್ಪ-ಅಮ್ಮನ ಮನಗೆದ್ದಿರುವ ಮುದ್ದಿನ ಸೊಸೆಯೂ ಹೌದು. ಅವರ ಬೇಕು, ಬೇಡಗಳನ್ನು ಅರಿತುಕೊಂಡು ನಡೆಯುವ ಹೆಣ್ಣು. ಶಾಲೆಯಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯೂ ಹೌದು. ಯಾವುದೇ ಹಮ್ಮೂ-ಬಿಮ್ಮೂ ಇಲ್ಲದ ಸರಳ, ಸಜ್ಜನಿಕೆಯ ಮಹಿಳೆ ಅತ್ತಿಗೆಮ್ಮ.
****
ಇನ್ನು ಪಾದರಕ್ಷೆಗಳ ಬಗ್ಗೆ ಹೇಳಬೇಕೆಂದರೆ ನಮ್ಮ ಮನೆಯಲ್ಲಿ ಪಾದರಕ್ಷೆಯ ವಸ್ತು ಸಂಗ್ರಹಾಲಯವೇ ಇದೆ ಎನ್ನಬಹುದು. ನನ್ನವೇ ಸುಮಾರು ಇಪ್ಪತ್ತು-ಇಪ್ಪತ್ತೈದು ಜೊತೆ ಚಪ್ಪಲಿ, ಬೂಟು, ಸ್ಯಾಂಡಲ್, ಸ್ಲಿಪ್ಪರ್ ಅಂತ ಇವೆ. ಇನ್ನು ಮಕ್ಕಳು, ನನ್ನ ಗಂಡನವು ಅಂತ ಸೇರಿದರೆ ಲೆಕ್ಕ ಉದ್ದವಾಗುತ್ತದೆ. ನನ್ನೆಲ್ಲ ಪಾದರಕ್ಷೆಗನ್ನು ಬಳಸುತ್ತಿರುವೆನೋ, ಇಲ್ಲವೋ ಎಂಬುದು ನನಗಷ್ಟೇ ಗೊತ್ತು. ಹೀಗೇ ಮಾಲ್‍ಗೆ ಹೋದಾಗ ಚೆಂದನ ಜೋಡಿ ಕಂಡರೆ ಖರೀದಿಸುವುದು ಎಗ್ಗಿಲ್ಲದೇ ಸಾಗಿದೆ. ಅದೇ ಸೌಭಾಗ್ಯ ಅತ್ತಿಗೆಯ ಮನೆಯಲ್ಲಿ ಪಾದರಕ್ಷೆಗಳ ಸಂಖ್ಯೆ ತುಂಬಾ ಕಡಿಮೆ. ಅತ್ತಿಗೆಯವು ಬಹಳ ಬಹಳ ಎಂದರೆ ಮೂರು ಜೋಡಿ ಚಪ್ಪಲಿಗಳಿವೆ, ಒಂದು ಜೋಡಿ ಸ್ಯಾಂಡಲ್ ಇದೆ ಅಷ್ಟೇ. ಅಣ್ಣನವು ಎರಡು ಜೋಡಿ ಚಪ್ಪಲಿಗಳು ಮತ್ತು ಒಂದು ಜೊತೆ ಬೂಟು ಇವೆ. ಮಕ್ಕಳವು ಬಹಳ ಏನಿಲ್ಲ. ಇದ್ದವುಗಳನ್ನೇ ಎಲ್ಲರೂ ಸಮಯಾನುಸಾರ ಚೆನ್ನಾಗೇ ಬಳಸಿಕೊಳ್ಳುತ್ತಾರೆ. `ನೋ ವೇಸ್ಟೇಜ್’ ಎನ್ನುತ್ತಾರೆ. ಅದಕ್ಕೇ ಅತ್ತಿಗೆಯದು ಪ್ರತಿಯೊಂದರಲ್ಲಿ ಅಚ್ಚುಕಟ್ಟುತನ ಎಂದಿದ್ದು.
ಇನ್ನು ವಿದ್ಯುತ್ ಬಳಕೆಯ ಬಗ್ಗೆ ಹೇಳುವುದಾದರೆ, ನಮ್ಮ ಮನೆಯಲ್ಲಿ ಅವಶ್ಯಕತೆ ಇರಲಿ, ಇಲ್ಲದಿರಲಿ ಎಲ್ಲೆಂದರಲ್ಲಿ ವಿದ್ಯುದ್ದೀಪಗಳು ಬೆಳಗುತ್ತಿರುತ್ತವೆ. ಕೋಣೆಯಲ್ಲಿ ಯಾರೂ ಇಲ್ಲವೆಂದರೂ ಅಲ್ಲಿ ದೀಪ ಉರಿಯುತ್ತಿರುತ್ತದೆ. ಹಾಗೇ ಅಡುಗೆ ಮನೆಯಲ್ಲೂ ಸಹ. ಬಚ್ಚಲು ಮನೆಗಳಲ್ಲಿ ಲೈಟ್ ಆಫ್ ಆಗುವುದೇ ಇಲ್ಲ. ಟೀವಿಯನ್ನು ಯಾರೂ ನೋಡದಿದ್ದರೂ ಅದು ತನ್ನಷ್ಟಕ್ಕೆ ತಾನೇ ಒದರುತ್ತಿರುತ್ತದೆ. ಬೆಳ್ಳನೆ ಬೆಳಗಾಗಿದ್ದರೂ ತಲಬಾಗಿಲ ಮುಂದಿನ ಬಲ್ಬ್ ಹಾಗೇ ಪ್ರಕಾಶಿಸುತ್ತಿರುತ್ತದೆ. ವಿದ್ಯಾಸಾಗರ್ ಆಗಾಗ ನಿಗಾ ವಹಿಸುತ್ತಿದ್ದರೂ ವಿದ್ಯುತ್ ಬಿಲ್ ಮೊತ್ತ ತಿಂಗಳಿಂದ ತಿಂಗಳಿಗೆ ಏರುತ್ತಲೇ ಇರುತ್ತದೆ. ಎಲ್ಲರೂ ಟೀವಿ ಕಾರ್ಯಕ್ರಮ ನೋಡಿದ ಮೇಲೂ ಕೆಲವೊಂದು ಸಾರೆ ಹಾಲ್‍ನಲ್ಲಿನ ದೀಪ ಹಾಗೇ ಮುಂಜಾನೆಯವರೆಗೆ ಪ್ರಕಾಶಿಸುತ್ತಿರುತ್ತದೆ. ವಿದ್ಯಾಸಾಗರ್ ಇಲ್ಲವೇ ಮಾವನವರಿದ್ದರೆ ತಕ್ಷಣ ಲೈಟ್ ಆಫ್ ಮಾಡುತ್ತಾರೆ. ನಾಂತೂ ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅದರ ಬಗ್ಗೆ ವಿದ್ಯಾಸಾಗರ್ ಆಗಾಗ ನನಗೆ ನೆನಪುಮಾಡಿ ಕೊಡುತ್ತಿದ್ದರೂ ಅದರ ಬಗ್ಗೆ ನಾನು ಕಾಳಜಿ ವಹಿಸುವುದು ಕಡಿಮೇನೇ. ಅದೇ ಸೌಭಾಗ್ಯಾ ಅತ್ತಿಗೆಯ ಮನೆಯಲ್ಲಿ…? ಬೆಡ್ ರೂಮಿನಲ್ಲಿ ಏನಾದರೂ ಕೆಲಸವಿದ್ದರೆ ಲೈಟ್ ಹಾಕಿಕೊಂಡು ಒಳಗೆ ಹೋಗುತ್ತಾರೆ, ಅಲ್ಲಿಂದ ವಾಪಾಸು ಬರುವಾಗ ಲೈಟ್ ಆಫ್ ಮಾಡಿಕೊಂಡೇ ಬರುತ್ತಾರೆ. ಅದೇ ರೀತಿ ಅಡುಗೆ ಮನೆ, ಬಚ್ಚಲು ಮನೆಯ ಲೈಟ್‍ಗಳೂ ಸಹ. ಅವಶ್ಯಕತೆ ಇದ್ದರೆ ಲೈಟ್ ಆನ್ ಮಾಡಿಕೊಳ್ಳುತ್ತಾರೆ. ಬೇಡವಾದರೆ ಆಫ್ ಮಾಡುತ್ತಾರೆ. ಟೀವಿಯನ್ನು ಯಾರೂ ವೀಕ್ಷಿಸುತ್ತಿಲ್ಲವೆಂದರೆ ಟೀವಿ ಬಾಯಿಮುಚ್ಚಿಕೊಂಡು ಮೂಗನಂತೆ ಸುಮ್ಮನೇ ಬಿದ್ದಿರುತ್ತದೆ. ಮಕ್ಕಳಿಗೂ ಅವರು ಸ್ಟ್ರಿಕ್ಟ್ ಆಗಿ, `ಬೇಕಿದ್ದರೆ ವಿದ್ಯುತ್ ಬಳಸಿ, ಬೇಡವಾಗಿದ್ದರೆ ಬೇಡ’ ಎಂದು ನಿಷ್ಠುರವಾಗಿ ಹೇಳುತ್ತಾರೆ. ಮಲಗುವ ಮುಂಚೆ ಅತ್ತಿಗೆ ಹಾಲ್, ವರಾಂಡ, ಬಚ್ಚಲು ಮನೆ ಇತರೆ ಜಾಗಗಳನ್ನು ವೀಕ್ಷಿಸಿ ಒಂದು ವೇಳೆ ಲೈಟ್ ಉರಿಯುತ್ತಿದ್ದರೆ ಎಲ್ಲವನ್ನೂ ಆಫ್‍ಮಾಡಿ ಬರುತ್ತಾಳೆ.
ಇನ್ನು ಹೊರಗಡೆ ತಿನ್ನೋ ಚಟದ ಬಗ್ಗೇನೂ ಒಂದಿಷ್ಟು ಹೇಳದೇ ಇದ್ದರೆ ತಪ್ಪಾದೀತು. ಈ ಜಾಗತೀಕರಣ, ಆರ್ಥಿಕ ಉದಾರೀಕರಣದಿಂದ ನಮ್ಮ ದೇಶದಲ್ಲೂ ಪಾಶ್ಚಾತ್ಯ ಸಂಸ್ಕøತಿ ಢಾಳಾಗಿ ಸೇರಿಕೊಂಡು ಬಿಟ್ಟಿದೆ. ಮಾಹಿತಿ ತಂತ್ರಜ್ಞಾನದ ಅವಿಷ್ಕಾರದಿಂದ ಉದ್ಯೋಗಾವಕಾಶಗಳು ಹೆಚ್ಚಾಗಿರುವುದಂತೂ ಸತ್ಯ. ಅದರಲ್ಲಿ ಮಹಿಳೆಯರದು ಸಿಂಹಪಾಲು ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯೂ ಪುರುಷನಿಗೆ ಸರಿಸಮಾನಳಾಗಿ ಹೊರಗಡೆ ದುಡಿದು ದುಡ್ಡು ಗಳಿಸುತ್ತಿದ್ದಾಳೆ. ಕುಟುಂಬದ ಆದಾಯ ಹೆಚ್ಚಾಗಿದ್ದೂ ನಿಜವೇ. ವೀಕೆಂಡ್‍ಗಳಲ್ಲಿ ಹೊರಗಡೆ ತಿನ್ನುವುದೂ ಹೆಚ್ಚಾಗಿದೆ. ಕಂಡಕಂಡಲ್ಲಿ ಕಾಲಿಗೊಂದು, ಕೈಗೊಂದು ಎಂಬಂತೆ ಚಾಟ್ ಸೆಂಟರ್‍ಗಳು ನಾಯಿಕೊಡೆಯಂತೆ ತಲೆ ಎತ್ತಿನಿಂತಿವೆ. ವೇಕೆಂಡ್‍ನಲ್ಲಿ ಚಾಟ್ ಸೆಂಟರ್‍ಗಳು, ಐಷಾರಾಮಿ ಹೋಟೆಲ್‍ಗಳು, ಪಬ್ಬೂ, ಬಾರ್‍ಗಳು ಜನರಿಂದ ತುಂಬಿ ತುಳುಕಾಡುತ್ತಿರುತ್ತವೆ. ಶನಿವಾರ ಬಂತೆಂದರೆ ವಿದ್ಯಾಸಾಗರನನ್ನು ಹೊರಡಿಸಿಕೊಂಡು ಮಕ್ಕಳ ಜೊತೆಗೆ ನಾನೂ ಹೊರಗಡೆ ತಿನ್ನಲು ಹೊರಟುಬಿಡುತ್ತೇನೆ. ಇನ್ನೂ ಪಬ್, ಬಾರ್‍ಗಳಿಗೆ ಎಂಟ್ರಿ ಕೊಟ್ಟಿಲ್ಲ ಅನ್ನೋದೇ ಪ್ಲಸ್ ಪಾಯಿಂಟ್. ಅತ್ತೆ-ಮಾವನವರಿಗೆ ಗೊತ್ತಾಗದಂತೆ ನಾನ್-ವೆಜ್ ಮೆಲ್ಲುವುದೂ ಸಾಮಾನ್ಯವಾಗಿದೆ. ಶನಿವಾರ, ರವಿವಾರ ಮುಗಿಯುತ್ತಲೇ ಹಲವು ಸಾವಿರ ರೂಪಾಯಿಗಳು ನೀರಿನಂತೆ ಖರ್ಚಾಗಿ ಕರಗಿ ಹೋಗಿಬಿಡುತ್ತವೆ. ಅಣ್ಣ, ಅತ್ತಿಗೆ ಇರುವುದು ತಕ್ಕ ಮಟ್ಟಿಗೆ ದೊಡ್ಡ ಪಟ್ಟಣದಲ್ಲೇ. ಆದರೆ ಅವರು ಹೊರಗಡೆ ಹೋಟೆಲಿಗೆ ಹೋಗಿ ತಿನ್ನುವುದು ಬಹಳ ಕಡಿಮೆ. ಹೋಟೆಲಿನಲ್ಲಿ ಒಬ್ಬರ ಊಟಕ್ಕೆ ಖರ್ಚುಮಾಡುವ ಹಣದಲ್ಲೇ ಇಡೀ ಮನೆಯವರೆಲ್ಲರೂ ರುಚಿ ರುಚಿಯಾದ ಊಟಮಾಡಬಹುದು ಎಂಬುದು ಅತ್ತಿಗೆಮ್ಮನ ಉವಾಚ. ಅತ್ತಿಗೆ ಮನೆಯಲ್ಲೇ ಎಲ್ಲಾ ತಿಂಡಿ-ತಿನಿಸು ಮಾಡುತ್ತಾಳೆ. ಅದೂ ತುಂಬಾ ರುಚಿಕಟ್ಟಾಗಿ. ಯಾವುದೇ ಸ್ಟಾರ್ ಹೋಟೆಲಿನ ಟೇಸ್ಟಿಗೆ ಕಡಿಮೆ ಇಲ್ಲದಂತೆ. ನಿಜವಾಗಿಯೂ ಸೌಭಾಗ್ಯಾ ಅತ್ತಿಗೆ ಪಾಕ ಪ್ರವೀಣೆ. ಅವಳ ಹಸ್ತ ಅಮೃತ ಹಸ್ತವೇ. ಅವಳು ತಯಾರಿಸುವ ಅಡುಗೆ, ತಿಂಡಿ-ತಿನಿಸು ಎಲ್ಲವೂ ಸೂಪರ್ ಅಷ್ಟೇ. ಬಂದಾಗಿನಿಂದ ಆಕೆಯ ಕೈಯ ಅಡುಗೆಯ ರುಚಿಯನ್ನು ಸಕತ್ತಾಗಿ ಸವಿಯುತ್ತಿದ್ದೇನೆ ನಾನಂತೂ. ಅದಕ್ಕೇ ನಾನು ಈ ಮೊದಲೇ ಹೇಳಿದ್ದು ಸೌಭಾಗ್ಯಾ ಅತ್ತಿಗೆಯಿಂದ ಕಲಿಯುವುದು ಬಹಳ ಇದೆ ಎಂದು. ಎಸ್, ನನ್ನತ್ತಿಗೆಯೇ ನನಗೆ ರೋಲ್ ಮಾಡೆಲ್. ಅತ್ತಿಗೆಯ ಆದರ್ಶ ತತ್ವಗಳನ್ನು ಪಾಲಿಸಿ ಜೀವನ ಸಾರ್ಥಕಗೊಳಿಸಿಕೊಳ್ಳುವುದೇ ನನ್ನ ಭಾವೀ ಜೀವನದ ಪರಮ ಗುರಿ. ಸಂತ ನಾವಾಗದಿದ್ದರೂ ಸಂತರು ಸಾರಿದ ಸಂದೇಶಗಳನ್ನು ಶಾಂತಚಿತ್ತದಿಂದ ಆಲಿದಿ, ಅರಿತು ನಮ್ಮ ಜೀವನಕ್ಕೆ ಅಳವಡಿಸಿಕೊಂಡಾಗಲೇ ಜೀವನ ಸಾರ್ಥಕ ಅಲ್ಲವೇ? ನೀವೂ ಅಷ್ಟೇ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಅಳವಡಿಸಿಕೊಂಡು ನಿಮ್ಮ ಜೀವನಕ್ಕೆ ಮೆರುಗು ತಂದುಕೊಳ್ಳಿರಿ. ಬೈ.–ಕಾರುಣ್ಯಾ.
* ಶೇಖರಗೌಡ ವೀ ಸರನಾಡಗೌಡರ್
3 thoughts on “ಸೌಭಾಗ್ಯಾ-ಕಾರುಣ್ಯಾ”
ಉತ್ತಮವಾದ ವಿಚಾರಗಳನ್ನು ನೋಡಿ ಅರ್ಥೈಸಿಕೊಂಡು ಆಚರಿಸಿದರೆ ಜೀವನ ಸೊಗಸು ಅನ್ನುವುದನ್ನು ಸೌಭಾಗ್ಯಳ ಶಿಸ್ತಿನ ಜೀವನದ ಬಗ್ಗೆ ಸರಳವಾಗಿ ವಿವರವಾಗಿ ತಿಳಿಸಿದ ಸೌಭಾಗ್ಯ – ಕಾರುಣ್ಯ ಕಥೆ ಚನ್ನಾಗಿದೆ.
ಅತ್ತಿಗೆಯ ಸದ್ಗುಣಗಳನ್ನು, ನಡೆನುಡಿಗಳನ್ನು, ಆಪ್ತಭಾವವನ್ನು, ಪ್ರೀತಿಯ ಪರಿಯನ್ನೇ ವಸ್ತುವಾಗಿಸಿ ವರದಿಯಂತೆ ಸರಳ ನಿರೂಪಣೆಯಲ್ಲಿ ಕಥೆ ಸಾಗಿದೆ.
ಅಭಿನಂದನೆಗಳು.
ತುಂಬಾ ಉದಾತ್ತತೆಯ ಆಶಯ ಕಥೆಯಲ್ಲಿ ಹಾಸು ಹೊಕ್ಕಿದೆ. ಎಂದಿನಂತೆ ಸರಳ ನಿರೂಪಣೆ ಮನಸು ಸೆಳೆಯುತ್ತದೆ. ಅಲ್ಲಲ್ಲಿ ಬಳಸಿದ ಸಿದ್ದೇಶ್ವರ ಸ್ವಾಮಿಗಳ ನುಡಿಮುತ್ತುಗಳು ಕಥೆಯ ತೂಕ ಹೆಚ್ಚಿಸಿದೆ.
ಅಭಿನಂದನೆಗಳು.