ಕನ್ನಡದ ಮಹತ್ವದ ಲೇಖಕರಲ್ಲೊಬ್ಬರಾದ ಕೆ. ಸತ್ಯನಾರಾಯಣರು ಬರೆಯಲಾರಂಭಿಸಿ ಹೆಚ್ಚು ಕಡಿಮೆ ಮೂರೂವರೆ ದಶಕಗಳು ಕಳೆದಿವೆ. ಅವರು ಸಣ್ಣಕಥೆ, ಕಾದಂಬರಿ, ಪ್ರಬಂಧ, ವಿಮರ್ಶೆ, ಪ್ರವಾಸ ಕಥನ, ಅಂಕಣ ಬರಹ ಮತ್ತು ಆತ್ಮಕಥೆ ಸೇರಿದಂತೆ ಕನ್ನಡದ ಮುಖ್ಯವಾದ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ಐವತ್ತು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿರುವ ಬೆರಳೆಣಿಕೆಯಷ್ಟು ಪ್ರಯೋಗಶೀಲ ಲೇಖಕರಲ್ಲಿ ಸತ್ಯನಾರಾಯಣರೂ ಒಬ್ಬರು. ಸಾಮಾನ್ಯವಾಗಿ ಯಾವುದೇ ಲೇಖಕ/ಕಿ ಸಾಹಿತ್ಯದಲ್ಲಿ ಒಂದು ಹಂತ ತಲುಪಿ, ತಕ್ಕ ಮಟ್ಟಿಗೆ ಹೆಸರು ಮಾಡಿದ ನಂತರ ತಾವಿರುವ ಸುರಕ್ಷಿತ ವಲಯವನ್ನು ಮೀರಿ ಬರವಣಿಗೆಯಲ್ಲಿ ಪ್ರಯೋಗ ನಡೆಸುವುದು ಕಡಿಮೆ. ಅದರಲ್ಲೂ ಕನ್ನಡದಲ್ಲಂತೂ ತುಂಬ ವಿರಳ.
ಸತ್ಯನಾರಾಯಣರು ಮಾತ್ರ ಬರವಣಿಗೆಯಲ್ಲಿ ನಿರಂತರ ಪ್ರಯೋಗಶೀಲರು. ಸತ್ಯನಾರಾಯಣರು ತಾವು ಬರೆದ ಬಹುತೇಕ ಕೃತಿಗಳಲ್ಲಿ ಒಂದಲ್ಲ ಒಂದು ವಿಧದಲ್ಲಿ ಹೊಸತೇನನ್ನಾದರೂ ತರುವ ನಿರಂತರ ಪ್ರಯತ್ನ ಮಾಡಿದ್ದಾರೆ. ಇಂತಹ ಪ್ರಯೋಗಶೀಲತೆಯಿಂದ ಅವರ ಬರವಣಿಗೆಯಲ್ಲಿ ಸಾಕಷ್ಟು ವೈವಿಧ್ಯವನ್ನು ಕಾಣಬಹುದು. ಯಶಸ್ಸಿನ ದೃಷ್ಟಿಯಿಂದ ನೋಡಿದಾಗ ಅವರು ಸಣ್ಣಕಥೆ ಮತ್ತು ಪ್ರಬಂಧಗಳಲ್ಲಿ ಗಳಿಸಿದ ಯಶಸ್ಸು ಎದ್ದು ಕಾಣುವಂತಿದೆ. ಉಳಿದ ಪ್ರಕಾರಗಳಲ್ಲಿ ಅದೇ ಮಟ್ಟದ ಯಶಸ್ಸು ಸಿಗದಿದ್ದರೂ ಕೂಡ ಅವರ ಕೆಲವು ಕೃತಿಗಳು ಗಮನಾರ್ಹವಾಗಿವೆ. ಯಶಸ್ಸಿನ ಬೆನ್ನು ಹತ್ತಿದ ಲೇಖಕ ಖಂಡಿತವಾಗಿಯೂ ಪ್ರಯೋಗಶೀಲನಾಗಲಾರ. ಆ ದೃಷ್ಟಿಯಿಂದ ಸತ್ಯನಾರಾಯಣರ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಮೆಚ್ಚಲೇಬೇಕು.
ಸತ್ಯನಾರಾಯಣರು ಒಟ್ಟು ಐದು ಸಂಪುಟಗಳಲ್ಲಿ ಆತ್ಮಚರಿತ್ರೆ ಬರೆದಿದ್ದಾರೆ. ‘ನಾವೇನು ಬಡವರಲ್ಲ’ (೨೦೧೩), ‘ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ’ (೨೦೧೬), ‘ವೃತ್ತಿ ವಿಲಾಸ’ (೨೦೧೭), ‘ಬಾಡಿಗೆ ಮನೆಗಳ ರಾಜ ಚರಿತ್ರೆ’ (೨೦೨೦) ಮತ್ತು ‘ನನ್ನ ಪುಸ್ತಕಗಳ ಆತ್ಮಚರಿತ್ರೆ’ (೨೦೨೪).
ಐ. ಆರ್. ಎಸ್. ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ ಸತ್ಯನಾರಾಯಣರು ಕರ್ನಾಟಕ, ಗೋವಾ ರಾಜ್ಯದ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರಾಗಿ ನಿವೃತ್ತರಾದರು. ‘ವೃತ್ತಿ ವಿಲಾಸ’ ಕೃತಿಯಲ್ಲಿ ಅವರು ತಮ್ಮ ವೃತ್ತಿ ಜೀವನದ ಸ್ವಾರಸ್ಯಕರ ಅನುಭವಗಳು ಮತ್ತು ರಸವತ್ತಾದ ಪ್ರಸಂಗಗಳನ್ನು ತುಂಬ ಸೊಗಸಾಗಿ ನಿರೂಪಿಸಿದ್ದಾರೆ. ಕನ್ನಡದಲ್ಲಿ ಹಲವು ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ವೃತ್ತಿ ಜೀವನದ ಅನುಭವಗಳ ಕುರಿತು ಬರೆದಿದ್ದಾರೆ ಆದರೆ ಸತ್ಯನಾರಾಯಣರ ‘ವೃತ್ತಿ ವಿಲಾಸ’ದ ಸೊಗಸೇ ಬೇರೆ. ಅದರಲ್ಲಿ ಬರುವ ಕೆಲವು ವ್ಯಕ್ತಿಗಳು ಮತ್ತು ಪ್ರಸಂಗಗಳ ಕುರಿತು ಪ್ರತ್ಯೇಕ ಕಥೆ, ಕಾದಂಬರಿ ಬರೆಯಬಹುದು. ಅಷ್ಟೊಂದು ರಸವತ್ತಾದ ಪ್ರಸಂಗಗಳಿವೆ. ‘ವೃತ್ತಿ ವಿಲಾಸ’ದ ನಂತರ ಅವರ ಆತ್ಮಕಥನ ಸರಣಿಯ ಐದನೆಯ ಕೃತಿಯಾಗಿ ‘ನನ್ನ ಪುಸ್ತಕಗಳ ಆತ್ಮಚರಿತ್ರೆ’ ಬಂದಿದೆ.
“ನೀವೇಕೆ ಬರೆಯುತ್ತೀರಿ?” ಎಂಬ ಚರ್ವಿತ ಚವರ್ಣ ಪ್ರಶ್ನೆಯನ್ನು ಎಲ್ಲ ಲೇಖಕ/ಕಿಯರಿಗೆ ಒಂದಲ್ಲ ಒಂದು ಸಂದರ್ಭದಲ್ಲಿ ಯಾರಾದಾರೂ ಕೇಳಿಯೇ ಇರುತ್ತಾರೆ. ಸೃಜನಶೀಲ ಲೇಖಕನಿಗೆ ಇಂತಹ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಅದರಲ್ಲೂ “ನಾನೇಕೆ ಬರೆಯುತ್ತೇನೆ” ಎಂಬುದಕ್ಕೆ ತೃಪ್ತಿಕರ ವಿವರಣೆ ನೀಡುವುದು ಇನ್ನೂ ಕಷ್ಟ. ಇಂತಹ ಸಂದರ್ಭದಲ್ಲಿ “ನೀವೇಕೆ ಬರೆಯುತ್ತೀರಿ” ಎಂಬುದಕ್ಕೆ ಉತ್ತರ ರೂಪದಲ್ಲಿ ಸತ್ಯನಾರಾಯಣರು ‘ನನ್ನ ಪುಸ್ತಕಗಳ ಆತ್ಮಚರಿತ್ರೆ’ ಎಂಬ ದೊಡ್ಡ ಗಾತ್ರದ ಪುಸ್ತಕವನ್ನೇ ಬರೆದಿದ್ದಾರೆ. ಈ ಸಾಹಿತ್ಯಕ ಆತ್ಮಕಥನ ಕನ್ನಡದ ಮಟ್ಟಿಗೆ ಹೊಸತು. ಸತ್ಯನಾರಾಯಣರು ಈ ಪುಸ್ತಕಕ್ಕೆ ಬರೆದ ಬೆನ್ನುಡಿಯ ಮಾತುಗಳಲ್ಲಿ ಒಟ್ಟಾರೆ ಈ ಕೃತಿಯ ಆಶಯ ಸ್ಪಷ್ಟವಾಗಿದೆ. ಅವರು ತಮ್ಮ ಬರವಣಿಗೆಗೆ ಸ್ಫೂರ್ತಿಯಾದ ಘಟನೆಗಳು, ಪ್ರೇರಣೆ ನೀಡಿದ ವ್ಯಕ್ತಿ ಅಥವಾ ಕೃತಿಗಳು, ಪ್ರಕಾಶನ ಮಾಡಿದ ವ್ಯಕ್ತಿ, ಸಂಸ್ಥೆ ಮತ್ತು ಪತ್ರಿಕೆಗಳು, ತಮ್ಮ ಬರವಣಿಗೆ ರೂಪುಗೊಳ್ಳಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಹಿರಿಯ, ಕಿರಿಯ ಮತ್ತು ಸಮಕಾಲೀನ ಸಾಹಿತಿಗಳು ಹಾಗೂ ಮುಖ್ಯವಾಗಿ ಲೇಖಕರು ಈ ಮಟ್ಟಕ್ಕೆ ಬೆಳೆಯಲು ಕಾರಣರಾಗಿ, ದಶಕಗಳಿಂದ ಪೊರೆದ ಓದುಗರ ಬಗ್ಗೆ ಇಲ್ಲಿ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಮೂರೂವರೆ ದಶಕಗಳ ಅನುಭವವಿರುವ, ಬಹುತೇಕ ಸಾಹಿತಿಗಳು, ಪ್ರಕಾಶಕರು, ಪತ್ರಿಕೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ಒಂದಲ್ಲ ಒಂದು ವಿಧದಲ್ಲಿ ಸಂಪರ್ಕ ಹೊಂದಿರುವ ಸತ್ಯನಾರಾಯಣರಿಗೆ ಒಬ್ಬ ಲೇಖಕನಾಗಿ ಸಹಜವಾಗಿಯೇ ಸಮೃದ್ಧ ಅನುಭವಗಳಿವೆ. ಅವುಗಳಲ್ಲಿ ಸಿಹಿ ಮತ್ತು ಕಹಿ ಎರಡೂ ಇವೆ. ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎಂಬುದು ಲೇಖಕನ ಆಯ್ಕೆ. ಇದನ್ನು ತುಂಬ ಜಾಣ್ಮೆಯಿಂದ ನಿರ್ವಹಿಸಿರುವ ಅವರು ಈ ಕೃತಿಯಲ್ಲಿ ಸಾಹಿತಿಗಿಂತ ಸಾಹಿತ್ಯಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ.
‘ಕಥಾ ಸಾಹಿತ್ಯ’, ‘ಕಾದಂಬರಿ ಲೋಕ’, ‘ಪ್ರಬಂಧ ಲೋಕ’, ‘ಆತ್ಮಚರಿತ್ರೆ ಮತ್ತು ದಿನಚರಿ’, ‘ಅಂಕಣ ಸಾಹಿತ್ಯ’, ‘ಪ್ರವಾಸ ಕಥನ’, ‘ವಿಮರ್ಶಾ ಬರವಣಿಗೆ’, ‘ವ್ಯಕ್ತಿಚಿತ್ರ – ಸ್ವಭಾವ ಚಿತ್ರ’ ಎಂಬ ಎಂಟು ಅಧ್ಯಾಯಗಳಲ್ಲಿ ತಮ್ಮ ಕೃತಿಗಳ ರಚನೆಯ ಹಿಂದಿನ ಕಥೆಯನ್ನು ವಿಶದವಾಗಿ ನಿರೂಪಿಸಿದ್ದಾರೆ. ಈ ಹಿನ್ನಲೆಯ ಕಥೆಗಳು ವೈವಿಧ್ಯಮಯವಾಗಿದ್ದು, ಸಾಕಷ್ಟು ಕುತೂಹಲಕರ ಮಾಹಿತಿ ಒಳಗೊಂಡಿವೆ.
ಸತ್ಯನಾರಾಯಣರು ಇದುವರೆಗೆ ಹನ್ನೊಂದು ಕಥಾಸಂಕಲನ ಪ್ರಕಟಿಸಿದ್ದಾರೆ. ಅವರು ಬರೆದ ಮೊದಲ ಕಥೆ ‘ದೇಶಪಾಂಡೆಯ ದೇಶಾಂತರ ಕುರಿತು’, ಇದು ೧೯೭೮ರಲ್ಲಿ ಪ್ರಕಟವಾಗಿತ್ತು. ಎಂಬತ್ತರ ದಶಕದಲ್ಲಿ ಕೆಲವು ಕಥೆಗಳನ್ನು ಬರೆದರೂ ಕೂಡ ಅವರ ಮೊದಲ ಕಥಾಸಂಕಲನ ‘ನಿಮ್ಮ ಮೊದಲ ಪ್ರೇಮದ ಕಥೆ’ ಹೊರ ಬಂದದ್ದು ೧೯೯೩ರಲ್ಲಿ. ಸತ್ಯನಾರಾಯಣರು ಕಥೆ ಬರೆಯಲು ಆರಂಭಿಸಿದಾಗ ಇದ್ದ ಸಾಹಿತ್ಯಕ ವಾತಾವರಣದ ಕುರಿತು ಹೇಳಿರುವ ಮಾತುಗಳು ಆ ಕಾಲಘಟ್ಟದ ಕನ್ನಡ ಸಣ್ಣಕಥೆಯ ಸ್ಥಿತಿಗತಿಯ ಒಂದು ಪಾರ್ಶ್ವನೋಟವನ್ನು ನೀಡುತ್ತವೆ.
“ನಾನು ಕಥೆಗಳನ್ನು ಬರೆಯುವ ಹೊತ್ತಿಗೆ ನವ್ಯಕತೆಗಾರರು ತಮ್ಮ ಉತ್ತಮ ಬರವಣಿಗೆಯ ದಿನಗಳನ್ನು ಹಿಂದಕ್ಕೆ ಬಿಟ್ಟಿದ್ದರು. ಮಾಸ್ತಿ ಇನ್ನೊಂದು ಲೋಕದಿಂದ ಬಂದು ಬರೆದ ದಿವ್ಯ ಕತೆಗಾರರಂತೆ ಕಾಣುತ್ತಿದ್ದರು. ದಲಿತ – ಬಂಡಾಯದ ಕತೆಗಳ ಸಾಧನೆಯಿಂದ ನಾನು ಕಲಿಯುವಂಥದ್ದು ಹೆಚ್ಚಾಗಿ ಇರಲಿಲ್ಲ. ಜೊತೆಗೆ ನಾವು ಓದಿಕೊಂಡು ಬಂದ ಬೇರೆ ಭಾಷೆ, ಸಂಸ್ಕೃತಿಗಳ ಕತೆಗಳೂ ನಮ್ಮೆದುರಿಗೇ ಇದ್ದವು. ಸಮೂಹ ಮಾಧ್ಯಮ ಕೂಡ ಮುನ್ನೆಲೆಗೆ ಬಂದಿತ್ತು. ಭಾರತೀಯ ಕಥಾಪರಂಪರೆಯ ವೈವಿಧ್ಯ ಕೂಡ, ಸ್ವಲ್ಪ ನಮ್ಮ ಕಡೆ ಕೂಡ ಮುಂದಿನ ಕತೆಗಾರರು ಗಮನ ಕೊಡಬೇಕು ಎಂದು ಮೆಲುದನಿಯಲ್ಲಿ ನನ್ನಂಥವನನ್ನಾದರೂ ಆಹ್ವಾನಿಸುತ್ತಿತ್ತು. ಕತೆಯ ಒಂದು ನಿರ್ದಿಷ್ಟ ಆಕೃತಿ, ಸ್ವರೂಪಕ್ಕೇ ಗಂಟು ಬೀಳುವ ಕಾಲ ಕೂಡ ಮುಗಿದು ಹೋಗಿತ್ತೆಂದು ಕಾಣುತ್ತದೆ. ಅಲ್ಲದೆ, ನಮಗೆ ಎದುರಾಗುವ ಎಲ್ಲ ಅನುಭವಗಳು ಮತ್ತು ಸಿಗುವ ಎಲ್ಲ ಕತೆಗಳ ಮೇಲೂ ನಮಗೆ ಪ್ರಿಯವಾಗಿವೆ ಅಥವಾ ಕೆಲವು ವಿಮರ್ಶಕರು ಕೆಲವು ಆಕೃತಿಗಳನ್ನು ಮಾನ್ಯ ಮಾಡುತ್ತಾರೆ ಅನ್ನುವ ಕಾರಣವೊಂದಕ್ಕೇ ಚಾಲ್ತಿಯಲ್ಲಿರುವ ಆಕೃತಿಯನ್ನು ಹೇರುತ್ತಾ ಹೋಗಬೇಕಾಗಿಲ್ಲ ಎಂಬ ಅಸಾಂಗತ್ಯ ಕೂಡ ನನ್ನೆದುರಿಗೆ ಇತ್ತು.
ಈ ಹುಡುಕಾಟದಲ್ಲಿ ನನಗೆ ಕನ್ನಡ ಕಥಾಲೋಕದಲ್ಲಿ ಇದುವರೆಗೆ ಆಗಿ ಹೋಗಿರುವ ಆಕೃತಿಗಳು ನೆರವಾದಂತೆಯೇ ಬೇರೆ ಭಾಷೆ, ಸಂಸ್ಕೃತಿಗಳ ಕಥಾಲೋಕದ ಆಕೃತಿಗಳೂ ನೆರವಾಗಿವೆ. ಕತೆ ಹೇಳುವುದು, ದಾಟಿಸುವುದು, ಕೇಳಿಸಿಕೊಳ್ಳುವುದು, ಕಟ್ಟುವುದು, ವ್ಯಾಖ್ಯಾನಿಸುವುದು, ಕತೆಗಳ ಮೂಲಕ ಸಂಕಥನಕ್ಕೆ ಪ್ರಯತ್ನಿಸುವುದು, ಎಲ್ಲ ರೀತಿಯ ಕಥೆಗಾರಿಕೆಗೂ ತೆರೆದುಕೊಂಡಿದ್ದೇನೆ, ಪ್ರಯತ್ನಿಸಿದ್ದೇನೆ. ಒಲಿದು ಬಂದಂತೆ, ಒಲಿದು ಬಂದಷ್ಟು ಕತೆಗಳಲ್ಲಿ ಯಶಸ್ವಿಯಾಗಿದ್ದೇನೆ.”
(ನನ್ನ ಪುಸ್ತಕಗಳ ಆತ್ಮಚರಿತ್ರೆ, ಪುಟ ೧೮-೧೯)
ಸತ್ಯನಾರಾಯಣರು ಇದುವರೆಗೆ ಒಟ್ಟು ಹತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಇವು ಖಂಡಿತ ಪ್ರಯೋಗಶೀಲ ಕೃತಿಗಳು. ಸಾಮಾನ್ಯ ಓದುಗರಿಗೆ ಇವರ ಕಾದಂಬರಿಗಳ ಅಧ್ಯಾಯಗಳು ಪ್ರತ್ಯೇಕ ಸಣ್ಣಕಥೆ, ಪ್ರಬಂಧ, ಪ್ರಸಂಗ ಮತ್ತು ವ್ಯಕ್ತಿಚಿತ್ರಗಳೆಂದು ಭಾಸವಾದರೆ ಅಚ್ಚರಿಯಿಲ್ಲ. ಅತಿಯಾದ ಪ್ರಯೋಗಶೀಲತೆಯೇ ಇವರ ಕಾದಂಬರಿಗಳ ದೊಡ್ಡ ಮಿತಿ. ಆದರೂ ಸಹ ‘ಸನ್ನಿಧಾನ’ ಮತ್ತು ‘ಕಾಲಜಿಂಕೆ’ಯಂತಹ ಒಳ್ಳೆಯ ಕಾದಂಬರಿಗಳು ಅವರಿಂದ ಬಂದಿವೆ. ತಮ್ಮ ಕಾದಂಬರಿಗಳ ಶಕ್ತಿ ಮತ್ತು ಮಿತಿಯ ಬಗ್ಗೆ ಅರಿವಿರುವ ಲೇಖಕರು ಅದನ್ನು ವಿನಯದಿಂದ ಒಪ್ಪಿಕೊಳ್ಳುತ್ತಾರೆ.
“ಸನ್ನಿಧಾನ ಕೃತಿಯ ಬಗ್ಗೆ ನನಗೆ ಹೆಮ್ಮೆಯಿದೆ. ಅದು ಎಷ್ಟು ಸಾರ್ಥಕವಾದ ಕೃತಿ ಎಂಬ ಬಗ್ಗೆ ಅನುಮಾನವೂ ಇದೆ. ಕಥನದ ಪ್ರಯೋಗ ಈ ಕಾದಂಬರಿಯಲ್ಲೇ ಕೊನೆಗೊಳ್ಳಲಿಲ್ಲ, ಕೊನೆಗೊಳ್ಳಬಾರದು ಎಂಬ ಅರಿವೂ ನನಗಿದೆ. ಪ್ರಯೋಗಶೀಲತೆಯನ್ನು ಸಾರಾಸಗಟಾಗಿ ಯಾರೂ ಒಮ್ಮೆಗೇ ಒಪ್ಪುವುದಿಲ್ಲ. ಕೃತಿ ಬಗ್ಗೆ ನಡೆಯುವ ಚರ್ಚೆ, ಮರು ಓದು, ಬದಲಾಗುವ ವಿಮರ್ಶಕರ ಅಭಿಪ್ರಾಯಗಳು ಲೇಖಕನನ್ನೂ, ಓದುಗರನ್ನೂ ಬೆಳೆಸುತ್ತವೆ
ಇದರ ಗೊಡವೆ ಏಕೆ ಎಂದು ಇದನ್ನು ಒಂದು ಕಥಾಸಂಗ್ರಹವಾಗಿ ಓದಿದವರೂ ಇದ್ದಾರೆ. ನಿಮ್ಮ ಕಥಾಸಂಗ್ರಹದಲ್ಲಿ ನನಗೆ ಇಂತಹ ಕತೆಗಳು ಇಷ್ಟವಾದವು, ಇಷ್ಟು ಕತೆಗಳು ಇಷ್ಟವಾದವು ಎಂದು ಪತ್ರ ಬರೆದ ಓದುಗರೂ ಇದ್ದಾರೆ. ಓದುಗರ ಮಾತೇಕೆ, ಸ್ವತಃ ನಾನೇ ಈ ಕಾದಂಬರಿಯಿಂದ ಪ್ರತ್ಯೇಕಿಸಿ, ‘ಹೀಗಿಲ್ಲಿ ಅಮೇರಿಕಾ’, ‘ಲೋಕ ನಾಯಕರ ಮೇಲುಕೋಟೆ ಪುರಾಣ’ದಂತಹ ಕತೆಗಳನ್ನು ಪ್ರಕಟಿಸಿದ್ದೇನೆ. ಯಾವುದೇ ವಿವಾದವಿಲ್ಲದೆ ಎರಡೂ ಕತೆಗಳು ಜನಪ್ರಿಯವಾಗಿವೆ.”
(ನನ್ನ ಪುಸ್ತಕಗಳ ಆತ್ಮಚರಿತ್ರೆ, ಪುಟ ೧೩೫)
ಸಣ್ಣಕಥೆಗಳ ನಂತರ ಸತ್ಯನಾರಾಯಣರ ಬರವಣಿಗೆಯ ಶಕ್ತಿ ಎದ್ದು ಕಾಣುವುದು ಪ್ರಬಂಧಗಳಲ್ಲಿ. ಅವರು ಇದುವರೆಗೆ ಪ್ರಕಟಿಸಿರುವ ಐದು ಲಲಿತ ಪ್ರಬಂಧ ಸಂಕಲನಗಳಲ್ಲಿ ಒಟ್ಟು ಎಂಬತ್ತೆರಡು ಪ್ರಬಂಧಗಳಿವೆ. ಅಪಾರವಾದ ಓದು, ಸಮೃದ್ಧ ಜೀವನಾನುಭವ, ಲೋಕವನ್ನು ಕಣ್ತೆರೆದು ನೋಡುವ ದೃಷ್ಟಿ ಮತ್ತು ಸ್ವ – ವಿಮರ್ಶೆ ಮಾಡಿಕೊಳ್ಳುವ ಶಕ್ತಿಯಿದ್ದವ ಮಾತ್ರ ಒಳ್ಳೆಯ ಪ್ರಬಂಧಗಳನ್ನು ಬರೆಯಬಲ್ಲ. ವೃತ್ತಿ ಜೀವನ, ಸಾಹಿತ್ಯಕ ಜೀವನ ಮತ್ತು ವೈಯಕ್ತಿಕ ಜೀವನ ಈ ಮೂರೂ ನೆಲೆಯಲ್ಲಿ ಸತ್ಯನಾರಾಯಣರು ತಾವು ಓದಿದ, ನೋಡಿದ, ಕೇಳಿದ ಮತ್ತು ಅನುಭವಿಸಿದ ಪ್ರಸಂಗಗಳನ್ನು ಪ್ರಬಂಧಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿಂತನೆ ಮತ್ತು ಲಾಲಿತ್ಯಗಳನ್ನು ಹದವಾಗಿ ಮಿಶ್ರಣ ಮಾಡಿ ಬರೆಯುವ ಅವರ ಪ್ರಬಂಧಗಳಲ್ಲಿ ಸದಭಿರುಚಿ ಎದ್ದು ಕಾಣುತ್ತದೆ. ಸಂಖ್ಯೆ, ಸತ್ವ ಮತ್ತು ವೈವಿಧ್ಯ ಮೂರೂ ದೃಷ್ಟಿಯಿಂದ ಅವರ ಪ್ರಬಂಧಗಳು ಗಮನಾರ್ಹವಾಗಿವೆ.
ಅಂಕಣ ಬರಹ ಮತ್ತು ಪ್ರವಾಸ ಸಾಹಿತ್ಯದಲ್ಲಿ ಕೂಡ ಅವರು ಪ್ರಬಂಧಗಳ ಲಹರಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಕೃತಿಗಳಲ್ಲಿ ಮುಖ್ಯವಾಗಿ ಎದ್ದು ಕಾಣುವುದು ಸತ್ಯನಾರಾಯಣರ ವೈಯಕ್ತಿಕ ಆಸಕ್ತಿಗಳ ಹರಹು ಎಷ್ಟು ವಿಸ್ತಾರವಾದುದು ಎಂಬುದು. ಈ ಎರಡೂ ಪ್ರಕಾರಗಳ ಕೃತಿಗಳಲ್ಲಿ ಅವರು ಸಾಕಷ್ಟು ಹೊಸ ವಿಷಯಗಳ ಕುರಿತು ಓದುಗರ ಗಮನ ಸೆಳೆದಿದ್ದಾರೆ.
ವಿಮರ್ಶಾ ಪ್ರಕಾರದಲ್ಲಿ ಸತ್ಯನಾರಾಯಣರ ಹನ್ನೊಂದು ಕೃತಿಗಳು ಪ್ರಕಟವಾಗಿವೆ. ಇದು ಅವರ ಕಥಾಸಂಕಲನ ಅಥವಾ ಕಾದಂಬರಿಗಳಿಗಿಂತ ಹೆಚ್ಚು. ನವೋದಯ ಮತ್ತು ನವ್ಯ ಕಾಲಘಟ್ಟದಲ್ಲಿ ಒಳ್ಳೆಯ ಸೃಜನಶೀಲ ಲೇಖಕರೇ, ಒಳ್ಳೆಯ ವಿಮರ್ಶಕರೂ ಆಗಿದ್ದರು. ದಲಿತ – ಬಂಡಾಯ ಮತ್ತು ಅದರ ನಂತರ ಬಂದ ನವ್ಯೋತ್ತರ ಕಾಲಘಟ್ಟದಲ್ಲಿ ಈ ಚಿತ್ರಣ ಬದಲಾಯಿತು. ಬಹುತೇಕ ಲೇಖಕರು ಒಂದು ಅಥವಾ ಎರಡು ಪ್ರಕಾರಗಳಿಗೆ ಮಾತ್ರ ಅಂಟಿಕೊಂಡರು. ಎಲ್ಲ ಪ್ರಕಾರಗಳಲ್ಲಿ ಬರೆದು ಸರಾಸರಿ ಮಟ್ಟದ ಲೇಖಕರಾಗುವುದಕ್ಕಿಂತ ತಮಗೆ ಸಾಮರ್ಥ್ಯವಿರುವ ಒಂದೆರಡು ಪ್ರಕಾರಗಳಲ್ಲಿ ಗುಣಮಟ್ಟದ ಕೃತಿಗಳನ್ನು ಪ್ರಕಟಿಸುವ ಒಳ್ಳೆಯ ಉದ್ದೇಶ ಮತ್ತು ಕಾಳಜಿಯೂ ಅದರ ಹಿಂದಿರಬಹುದು. ಇರಲಿ, ನವ್ಯೋತ್ತರ ಲೇಖಕರಲ್ಲಿ ಬಹು ಮುಖ್ಯರಾದ ರಾಘವೇಂದ್ರ ಪಾಟೀಲ (ನಾಲ್ಕು ವಿಮರ್ಶಾ ಕೃತಿಗಳು) ಮತ್ತು ಸತ್ಯನಾರಾಯಣರು ಮಾತ್ರ ಈ ಮಿತಿಯನ್ನು ಮೀರಿದ್ದಾರೆ.
ಸತ್ಯನಾರಾಯಣರ ವಿಮರ್ಶೆ ಅಕಾಡೆಮಿಕ್ ವಲಯದ ವಿಮರ್ಶಕರಿಂದ ತುಂಬ ಭಿನ್ನವಾದುದು. ಕನ್ನಡ ಮತ್ತು ಪಾಶ್ಚಾತ್ಯ ಲೇಖಕ/ಕಿಯರ ಹತ್ತು, ಹಲವು ವೈವಿಧ್ಯಮಯ ಕೃತಿಗಳ ಕುರಿತು ಸತ್ಯನಾರಾಯಣರು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಮತ್ತು ಆಸಕ್ತಿ ಹುಟ್ಟುವಂತೆ ಬರೆದಿದ್ದಾರೆ. ಅಲಕ್ಷಿತ ಮತ್ತು ಅಪರೂಪದ ಕೃತಿಗಳ ಕುರಿತು ಓದುಗರ ಗಮನ ಸೆಳೆಯುವಂತೆ ಮಾಡುವುದು ವಿಮರ್ಶಕನ ಮುಖ್ಯ ಕೆಲಸಗಳಲ್ಲೊಂದು. ಅಂತಹ ಒಳ್ಳೆಯ ಕೆಲಸವನ್ನು ಅವರ ನೂರಾರು ವಿಮರ್ಶಾ ಲೇಖನಗಳು ಮಾಡಿವೆ.
ಆತ್ಮಚರಿತ್ರೆ, ದಿನಚರಿ, ವ್ಯಕ್ತಿಚಿತ್ರ ಮತ್ತು ಸ್ವಭಾವ ಚಿತ್ರಗಳ ಬರವಣಿಗೆಯಲ್ಲಿ ಅವರ ಕಥನ ಮತ್ತು ಪ್ರಬಂಧದ ದಟ್ಟ ಛಾಯೆಯನ್ನು ಕಾಣಬಹುದು. ವ್ಯಕ್ತಿಚಿತ್ರ ರಚನೆ ಅಷ್ಟು ಸುಲಭದ ಕೆಲಸವಲ್ಲ. ಕೆಲವು ಲೇಖಕರು ವ್ಯಕ್ತಿಗಳ ಕುರಿತು ಬರೆಯುವಾಗ ತೀರ ಹೊಗಳಿ ಬರೆಯುವುದು ಇಲ್ಲ, ತೆಗಳಿ ಬರೆಯುವುದನ್ನು ಮಾಡುತ್ತಾರೆ. ಸತ್ಯನಾರಾಯಣರು ಮಾತ್ರ ವ್ಯಕ್ತಿಗಳ ಬಗ್ಗೆ ಬರೆಯುವಾಗ ಸಮತೋಲನ ಕಾಯ್ದುಕೊಳ್ಳುತ್ತಾರೆ. ಖ್ಯಾತ ಅನುವಾದಕ ಮತ್ತು ಪ್ರಭಾವಿ ವ್ಯಕ್ತಿಯಾದ ಎಸ್. ದಿವಾಕರರ ಕುರಿತು ಬರೆಯುವಾಗ ಈ ಎಚ್ಚರ ಎದ್ದು ಕಾಣುತ್ತದೆ. ಸಜ್ಜನರಾದ ಸತ್ಯನಾರಾಯಣರು ಅವರ ಕುರಿತು ಮೆಲುದನಿಯಲ್ಲಿ, ಗೌರವಯುತವಾಗಿ ಟೀಕಿಸುತ್ತಾರೆ. ಸಜ್ಜನರು ದುಷ್ಟರಿಂದ ದೂರವಿರಬೇಕು ಎಂಬ ನೀತಿಯನ್ನು ಅವರು ಪಾಲಿಸುತ್ತ ಬಂದಿದ್ದಾರೆ.
“ಈ ಕಾದಂಬರಿಗೆ ದೊರಕಿದ ಆಶ್ಚರ್ಯಕರ ಮೆಚ್ಚುಗೆಗಳಲ್ಲಿ ಎಸ್. ದಿವಾಕರರವರದು ಒಂದು. ಏಕೆಂದರೆ, ಯಾವತ್ತೂ ಅವರು ನನ್ನ ಬರವಣಿಗೆಯ ಬಗ್ಗೆ ಆದರ, ಗೌರವಗಳನ್ನು ತೋರಿದವರೇ ಅಲ್ಲ. ಕತೆಗಳ ಬರವಣಿಗೆ ಶುರು ಮಾಡಿದಾಗ ನಾನು ಬಲ್ಲ ಓದುಗರು, ವಿಮರ್ಶಕರು, ಪರಿಚಯವಿಲ್ಲದವರು ಕೂಡ ಉತ್ಸಾಹ ತೋರಿದಾಗ, ಅವು ಕತೆಗಳೇ ಅಲ್ಲವೆಂದವರು. ಎಲ್ಲರೂ ಮೆಚ್ಚಿದ ರಾಜಶೇಖರ್ ಮುನ್ನುಡಿಯನ್ನು ಕೂಡ ತೆಗಳಿದವರು. ನನ್ನ ಬಗ್ಗೆ ಹಿಂದುಗಡೆ ಸಣ್ಣ ಮಾತುಗಳನ್ನು ನನ್ನ ಆಪ್ತರ ಹತ್ತಿರವೇ ಹೇಳುತ್ತಿದ್ದರು. ಹೀಗೆಲ್ಲ ಇದ್ದಾಗ, ಕಾದಂಬರಿ ಮೆಚ್ಚಿ ಮನೆಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸಿ, ಬರವಣಿಗೆಯಲ್ಲಿ ಏನೇನು ಸುಧಾರಣೆಗಳಾಗಬಹುದೆಂಬುದನ್ನು ಸೂಚಿಸಿ, ಈ ಸ್ವರೂಪದ ಕಾದಂಬರಿಗಳು ಬೇರೆ ಯಾವುದಿವೆ ಎಂಬುದನ್ನು ಹೇಳಿ, ನನ್ನ ನೆನಪು ಸರಿಯಿದ್ದರೆ Thomas Martinez ಎಂಬ ಲೇಖಕನ ಒಂದು ಕಾದಂಬರಿಯನ್ನು ಕೂಡ ತೋರಿಸಿದರು. ಇದೊಂದು Only One Swallow in Summer. ಮತ್ತೆ ಅವರ ಸ್ವಭಾವಕ್ಕೇ ಹಿಂದಿರುಗಿದರು. ಅವರಿಗೆ ತನ್ನ ಬಗ್ಗೆ ಅತೃಪ್ತಿ, ಎಲ್ಲರ ಬಗ್ಗೆ ಅಸಹನೆ ಇರುವುದರಿಂದ ದೂರ ಉಳಿಯುವುದು ನನ್ನ ಆಯ್ಕೆಯಾಯಿತು.”
(ನನ್ನ ಪುಸ್ತಕಗಳ ಆತ್ಮಚರಿತ್ರೆ, ಪುಟ ೧೨೯)
ಸತ್ಯನಾರಾಯಣರು ‘ನನ್ನ ಪುಸ್ತಕಗಳ ಆತ್ಮಚರಿತ್ರೆ’ಯಲ್ಲಿ ತಾವು ಲೇಖಕರಾಗಿ ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ, ಅದನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸಿದ್ದಾರೆ. ಅವರ ಪ್ರತಿಯೊಂದು ಪುಸ್ತಕ ರೂಪು ತಾಳಿದ ಬಗೆ ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿದೆ. ಕೃತಿಯೊಂದರ ಹಿಂದಿನ ಕಥೆಗಳು ಎಷ್ಟೊಂದು ವೈವಿಧ್ಯಮಯವಾಗಿರಬಲ್ಲವು ಎಂಬ ವಿಷಯ ಓದುಗರ ಆಸಕ್ತಿಯನ್ನು ಕೆರಳಿಸುವಂತಿದೆ. ಅಕ್ಷರ ಪಯಣದಲ್ಲಿ ತಮಗೆ ಸಹಾಯ ಮಾಡಿದ ಬಹುತೇಕ ಎಲ್ಲರನ್ನು ಪ್ರೀತಿ ಮತ್ತು ಗೌರವದಿಂದ ಸ್ಮರಿಸಿಕೊಂಡಿದ್ದಾರೆ. ಕೆಲವು ನಗಣ್ಯ ವ್ಯಕ್ತಿಗಳ ಕುರಿತು ಕ್ಲುಪ್ತವಾಗಿ ಬರೆದಿದ್ದಾರೆ ಮತ್ತು ದಿವಾಕರರಂತಹ ಅಪಾಯಕಾರಿ ವ್ಯಕ್ತಿಗಳ ಕ್ಷುದ್ರಬುದ್ಧಿಯನ್ನು ಗೌರವದಿಂದಲೇ ಟೀಕಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೂರೂವರೆ ದಶಕಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿ, ಮುನ್ನಡೆಯಲು ಒತ್ತಾಸೆ ಮತ್ತು ಬೆಂಬಲ ನೀಡಿದ ಓದುಗರನ್ನು ಅವರು ತುಂಬ ಕೃತಜ್ಞತೆಯಿಂದ ನೆನೆದಿದ್ದಾರೆ. ಆತ್ಮವಿಶ್ವಾಸ ಮತ್ತು ವಿನಯ ಸತ್ಯನಾರಾಯಣರ ಬರವಣಿಗೆಯುದ್ದಕ್ಕೂ ಕಂಡುಬರುತ್ತದೆ. ಅವರ ಒಟ್ಟಾರೆ ಸಾಹಿತ್ಯಕ ಸಾಧನೆಯ ಬಗೆಗೆ ಅವರಿಗಿರುವ ಹೆಮ್ಮೆ ಸಕಾರಣವಾದುದು. ಅದನ್ನವರು ವಿನಯದಿಂದ ಹೇಳಿಕೊಂಡಿದ್ದಾರೆ.
‘ನನ್ನ ಪುಸ್ತಕಗಳ ಆತ್ಮಚರಿತ್ರೆ’ ಸತ್ಯನಾರಾಯಣರು ಸಾಹಿತಿಯಾಗಿ ಬೆಳೆದು ಬಂದ ಬಗೆಯನ್ನು ಹೃದಯಂಗಮವಾಗಿ ಕಟ್ಟಿಕೊಟ್ಟಿದೆ. ಇದು ಅವರ ಸಾಹಿತ್ಯಕ ಆತ್ಮಕಥನವಾದರೂ ಕೂಡ ಒಂದು ಕಾಲಘಟ್ಟದ ಕನ್ನಡ ಸಾಹಿತ್ಯ ಚರಿತ್ರೆಯ ಪಾರ್ಶ್ವನೋಟವನ್ನು ಸಹ ಒದಗಿಸುವುದರಿಂದ ಇದರ ಪ್ರಾಮುಖ್ಯತೆ ಹೆಚ್ಚಿದೆ. ಇದು ಕನ್ನಡ ಓದುಗರು ಮತ್ತು ಬರಹಗಾರರು ಓದಲೇಬೇಕಾದ ಕೃತಿ. ಇಂತಹ ಹೊಸ ಬಗೆಯ ಇನ್ನಷ್ಟು ಕೃತಿಗಳು ಕನ್ನಡದಲ್ಲಿ ಬರಬೇಕಿದೆ, ಅದಕ್ಕೆ ಈ ಕೃತಿ ನಾಂದಿಯಾಗಲಿ. ಸತ್ಯನಾರಾಯಣರ ‘ನನ್ನ ಪುಸ್ತಕಗಳ ಆತ್ಮಚರಿತ್ರೆ’ ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ. ಅದಕ್ಕಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲುತ್ತವೆ.
ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಸತ್ಯನಾರಾಯಣ ಅವರ ‘ನನ್ನ ಪುಸ್ತಕಗಳ ಆತ್ಮಚರಿತ್ರೆ’
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ವಿಕಾಸ ಹೊಸಮನಿ
ಯುವ ವಿಮರ್ಶಕ, ಲಲಿತ ಪ್ರಬಂಧಕಾರ ಮತ್ತು ಸಂಘಟಕರಾದ ವಿಕಾಸ ಹೊಸಮನಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಗಂಗಾ, ಧಾರವಾಡ ಸಂಸ್ಥೆಯ ಸ್ಥಾಪಕರು ಮತ್ತು ಮುಖ್ಯಸ್ಥರು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ಸಂಸ್ಥೆಯ ಸಂಚಾಲಕರು. ಭಾರತೀಯ ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮತ್ತು ಕ್ರಿಕೆಟ್ ಕುರಿತು ಅಪಾರ ತಿಳುವಳಿಕೆಯುಳ್ಳ ವಿಕಾಸ ಹೊಸಮನಿಯವರು ತಮ್ಮ ನೇರ, ನಿಷ್ಠುರ ಮತ್ತು ನಿರ್ಭೀತ ಬರವಣಿಗೆಯಿಂದ ಕನ್ನಡ ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆ.
ಅವರ 'ಗಾಳಿ ಹೆಜ್ಜೆ ಹಿಡಿದ ಸುಗಂಧ' (ವಿಮರ್ಶೆ), 'ಮಿಂಚಿನ ಬಳ್ಳಿ' (ಲಲಿತ ಪ್ರಬಂಧ) ಮತ್ತು 'ಹೃದಯದ ಹಾದಿ' (ಸಂಪಾದಿತ) ಕೃತಿಗಳು ಪ್ರಕಟವಾಗಿವೆ. 'ವೀತರಾಗ' (ವಿಮರ್ಶೆ) ಹಾಗೂ 'ಮಂದಹಾಸ' (ಸಂಪಾದಿತ) ಕೃತಿಗಳು ಶೀಘ್ರದಲ್ಲೇ ಪ್ರಕಟವಾಗಲಿವೆ.
All Posts
4 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಸತ್ಯನಾರಾಯಣ ಅವರ ‘ನನ್ನ ಪುಸ್ತಕಗಳ ಆತ್ಮಚರಿತ್ರೆ’”
ಗೆಳೆಯ ಕೆ ಸತ್ಯನಾರಾಯಣ ಅವರು ಯಾವತ್ತಿಗೂ ಸಾಹಿತ್ಯ ರಚನೆಯಲ್ಲಿ ಅತ್ಯಂತ ಪ್ರೀತಿ ತನ್ಮಯಗಳೊಂದಿಗೆ ತೊಡಗಿದವರು. ನಾನು ಅವರ ಕಥೆ ಕಾದಂಬರಿಗಳನ್ನು ಪ್ರಬಂಧಗಳನ್ನು ಓದುತ್ತ ಬಂದಿದ್ದೇನೆ. ಕೆಲವಷ್ಟು ಇಷ್ಟಪಡುತ್ತ ಕೆಲವಷ್ಟರ ಬಗ್ಗೆ ಅಭ್ಯಂತರ ತಾಳುತ್ತ ಉದ್ದಕ್ಕೂ ಅವರ ಬಗೆಗೆ ಪ್ರೀತಿ ಗೌರವ ಇಟ್ಟುಕೊಂಡು ಬಂದಿದ್ದೇನೆ. ಅವರೂ ನನ್ನ ಬಗ್ಗೆ ಪ್ರೀತಿ ಗೌರವ ತೋರುತ್ತ ಬಂದಿದ್ದಾರೆ. ಅವರು ಇದೀಗ ತಮ್ಮ ಈ ಕೃತಿಯನ್ನು ಪ್ರೀತಿಯಿಂದ ಕಳಿಸಿ ಕೊಟ್ಟಿದ್ದಾರೆ. ನನ್ನ ಸದ್ಯದ ಅನಾರೋಗ್ಯದ ಕಾರಣವಾಗಿ ಅದನ್ನು ಈ ಕೂಡಲೆ ಬದಲಾಗುತ್ತಿಲ್ಲ. ಆಮೇಲೆ ಓದುತ್ತೇನೆ.
ಗೆಳೆಯ ವಿಕಾಸ ಹೊಸಮನಿ ಅವರ ಸತ್ಯನಾರಾಯಣ ಅವರ ಈ ಕೃತಿಯ ಕುರಿತ ಲೇಖನವು ನನಗೆ ತುಂಬ ಇಷ್ಟವಾಯಿತು.ಮೊದಲಾಗಿ, ಅವರೆ ಸಾಹಿತ್ಯದ ಹೊಸ ಅಂಕುರಗಳನ್ನು ಓದಿ ಸಂಭ್ರಮಿಸುವ ವಿಕಾಸ ಅವರ ಮನೋಭಾವ ಈ ಕಾಲದ ಒಂದು ವಿಸ್ಮಯವಾಗಿದೆ. ಸಾಹಿತ್ಯವನ್ನು ಸಾಹಿತ್ಯಕ್ಕಾಗಿಯೇ, ಅದು ಕೊಡುವ ಸಾತ್ವಿಕ ಸಾಮಾಜಿಕ ಸುಖಗಳಿಗಾಗಿ ತೊಡಗಿಕೊಳ್ಳುವ ವಿಕಾಸ ಹೊಸಮನಿ ಅವರ ಬರಹವು ನನಗೆ ಯಾವಾಗಲೂ ಮುಖ್ಯ ಅನ್ನಿಸುತ್ತದೆ. ಅವರ ಈ ಬರಹವೂ ನನಗೆ ತುಂಬ ಮುಖ್ಯ ಅನ್ನಿಸುತ್ತದೆ.
ಹಿರಿಯ ಸಾಹಿತಿ ಶ್ರೀ ಕೆ ಸತ್ಯನಾರಾಯಣ ಅವರ ‘ ನನ್ನ ಪುಸ್ತಕಗಳ ಆತ್ಮ ಚರಿತ್ರೆ ‘ ಯನ್ನು ಶ್ರೀ ವಿಕಾಸ ಹೊಸಮನಿ ಆಪ್ತತೆಯಿಂದ ವಿಶ್ಲೇಷಿಸಿದ ಪರಿ ಅದ್ಭುತ. ನಿಮ್ಮ ಅಂಕಣವನ್ನು ತುಂಬಾ ಇಷ್ಟಪಡುವ ವರ್ಗದಲ್ಲಿ ನಾನೂ ಇರುವೆ.
ಕೆ. ಸತ್ಯನಾರಾಯಣ ಅವರ ಸಾಹಿತ್ಯದ ಬಗ್ಗೆ ಬಹಳಷ್ಟು ತಿಳಿದಂತಾಯಿತು. ಧನ್ಯವಾದಗಳು ವಿಕಾಸ್.
ಕನ್ನಡದಲ್ಲಿ ಪ್ರಯೋಗಶೀಲ ಬರವಣಿಗೆ ಎಂದಾಗ ತಕ್ಷಣ ನೆನಪಿಗೆ ಬರುವ ಹೆಸರು ಕೆ.ಸತ್ಯನಾರಾಯಣ ಅವರದು. ಅವರ ಕಥೆ, ಕಾದಂಬರಿ, ವಿಮರ್ಶೆ, ಲಲಿತ ಪ್ರಬಂಧ ಪ್ರತಿ ಬರವಣಿಗೆಯಲ್ಲಿ ಹೊಸತನ ಮತ್ತು ಪ್ರಯೋಗಶೀಲತೆಯನ್ನು ಕಾಣಬಹುದು. ಸತ್ಯನಾರಾಯಣ ಅವರ ಆತ್ಮಚರಿತ್ರೆಯ ಪುಸ್ತಕಗಳಂತೂ ಕನ್ನಡದ ಮಟ್ಟಿಗೆ ಹೊಸ ಅನ್ವೇಷಣೆಯಂತೆ ಭಾಸವಾಗುತ್ತವೆ. ವಿಕಾಸ ಹೊಸಮನಿ ಅವರು ಸತ್ಯನಾರಾಯಣ ಅವರ ಕೃತಿಯ ಪರಿಚಯವನ್ನು ತುಂಬ ಆಪ್ತವಾಗಿ ಮಾಡಿಕೊಟ್ಟಿರುವರು. ಓದಲೇ ಬೇಕಾದ ಪುಸ್ತಕ. ಶ್ರೀಯುತ ಸತ್ಯನಾರಾಯಣ ಅವರು ತಮ್ಮ ಪ್ರಯೋಗಶೀಲತೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಸಮೃದ್ಧಗೊಳಿಸಲಿ.
-ರಾಜಕುಮಾರ ಕುಲಕರ್ಣಿ