ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಕೆಲವು ಸಾಹಿತ್ಯ ಚಿತ್ರಗಳು ಅಂದು – ಇಂದು

ಸಾಮಾನ್ಯವಾಗಿ ಸಾಹಿತಿಗಳ ಕುರಿತು ಸಾಮಾನ್ಯ ಜನರಿಗೆ ಒಂದು ಬಗೆಯ ಕುತೂಹಲ, ಅಭಿಮಾನ ಮತ್ತು ಗೌರವವಿರುತ್ತದೆ. ತುಂಬ ಜನ ಅಭಿಮಾನಿಗಳು ಹಲವು ವಿಷಯಗಳಲ್ಲಿ ಅವರನ್ನು ಅನುಸರಿಸುತ್ತಾರೆ. ಇಂತಹವರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಿದಾಗ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ವಿಧದ ಪರಿಣಾಮಗಳು ಉಂಟಾಗುತ್ತವೆ. ಬದುಕು ಮತ್ತು ಬರಹಕ್ಕೆ ವ್ಯತ್ಯಾಸವಿಲ್ಲದಂತೆ ಆದರ್ಶಪ್ರಾಯರಾಗಿ ಜೀವಿಸಿದ ಹಲವು ಹಿರಿಯರು ಹಿಂದೆ ನಮ್ಮ ಸಾಹಿತ್ಯ ಲೋಕದಲ್ಲಿದ್ದರು. ಅಂತಹ ದೊಡ್ಡ ಮನುಷ್ಯರ ಬದುಕು, ಬರಹ ಮತ್ತು ಆದರ್ಶಗಳ ಕುರಿತು ಹೊಸ ತಲೆಮಾರಿನ ನಾವು ತಿಳಿದುಕೊಳ್ಳಬೇಕಾಗಿರುವುದು ಅತ್ಯಗತ್ಯ.
ಸಾಹಿತ್ಯ ಚಿತ್ರಗಳು ಅಂದು:

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ೧೯೮೩ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ‘ಚಿಕ್ಕವೀರ ರಾಜೇಂದ್ರ’ ಕಾದಂಬರಿಗೆ ಪ್ರಶಸ್ತಿ ಘೋಷಣೆ ಮಾಡುವ ಮುನ್ನ ಕೆಲವು ಕಹಿ ಘಟನೆಗಳು ನಡೆದು ಮಾಸ್ತಿಯವರು ನೊಂದುಕೊಂಡು ಪ್ರಶಸ್ತಿ ಬೇಡವೆಂಬ ತೀರ್ಮಾನ ಮಾಡುವಷ್ಟರ ಮಟ್ಟಿಗೆ ಬೇಸರಗೊಂಡಿದ್ದರು. ಕನ್ನಡದ ಹಿರಿಯ ಲೇಖಕರಾದ ಹಾ. ಮಾ. ನಾಯಕರು ಸೇರಿದಂತೆ ಹಲವು ಸಹೃದಯರು ಮಾಸ್ತಿಯವರ ಮನವೊಲಿಸುವಲ್ಲಿ ಯಶಸ್ವಿಯಾದ್ದರಿಂದ ಕನ್ನಡಕ್ಕೆ ನಾಲ್ಕನೆಯ ಜ್ಞಾನಪೀಠ ಪ್ರಶಸ್ತಿ ದೊರೆಯುವಂತಾಯಿತು. ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದ ನಂತರ ಅವರನ್ನು ಅಭಿನಂದಿಸಿ ಸಾಹಿತಿಗಳು ಮತ್ತು ಓದುಗರು ಬರೆದಂತಹ ಸುಮಾರು ೭೫೦ ಪತ್ರಗಳಿಗೆ ಮಾಸ್ತಿಯವರು ಸ್ವತಃ ಪ್ರತ್ಯುತ್ತರ ಬರೆದರು, ಆಗ ಅವರಿಗೆ ೯೩ ವರ್ಷ ವಯಸ್ಸು! ಮಾಸ್ತಿಯವರು ಎಷ್ಟು ದೊಡ್ಡವರು ಎಂದು ನಿರೂಪಿಸಲು ಇದೊಂದು ಘಟನೆ ಸಾಕು.

‘ದುರ್ಗಾಸ್ತಮಾನ’ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲೊಂದು‌. ಅನಾರೋಗ್ಯದಿಂದ ಬಳಲುತ್ತಿದ್ದ ತ.ರಾ.ಸು. ಅವರು ಹಲವು ವರ್ಷಗಳ ಬಿಡುವಿನ ಬಳಿಕ ಆವೇಶಿತರಾದಂತೆ, ಒಂದೇ ಸಮನೆ ಬರೆದು ಮುಗಿಸಿದ ಕಾದಂಬರಿ ‘ದುರ್ಗಾಸ್ತಮಾನ’. ನಾಡಿನ ಜನತೆಯಿಂದ ಅದಕ್ಕೆ ಅಭೂತಪೂರ್ವ ಸ್ವಾಗತ ದೊರೆಯಿತು. ತುಂಬ ಜನ ಓದುಗರು ಮತ್ತು ಬರಹಗಾರರು ಆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುತ್ತದೆಂದು ನಿರೀಕ್ಷೆ ಮಾಡಿದ್ದರು. ೧೯೮೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯಶವಂತ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕಥಾಸಂಕಲನಕ್ಕೆ ದೊರೆಯಿತು.
ಪ್ರಶಸ್ತಿ ಘೋಷಣೆಯಾದ ವಾರದ ಬಳಿಕ ತ.ರಾ.ಸು. ಅವರನ್ನು ಭೇಟಿಯಾದ ಹಿರಿಯ ಲೇಖಕರೊಬ್ಬರು, “ಸರ್, ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನಿಮ್ಮ ಕಾದಂಬರಿಗೆ ಬರಬೇಕಿತ್ತು. ಆದರೆ ಚಿತ್ತಾಲರ ಕಥಾಸಂಕಲನಕ್ಕೆ ಕೊಟ್ಟಿದ್ದಾರೆ…” ಎಂದು ಬೇಸರ ವ್ಯಕ್ತಪಡಿಸಿದರು. ತ.ರಾ.ಸು. ಅವರು ತಮ್ಮ ಮೇಜಿನ ಮೇಲಿದ್ದ ಚಿತ್ತಾಲರ ‘ಕಥೆಯಾದಳು ಹುಡುಗಿ’ ಪುಸ್ತಕ ತೋರಿಸುತ್ತ, “ಚಿತ್ತಾಲರ ಕಥೆಗಳನ್ನು ನಾನು ಓದಿದ್ದೇನೆ. ನಿಜಕ್ಕೂ ಅದೊಂದು ಅತ್ಯುತ್ತಮ ಕಥಾಸಂಕಲನ. ಅವರಿಗೆ ಪ್ರಶಸ್ತಿ ಬಂದದ್ದು ಯೋಗ್ಯವಾಗಿದೆ. ನನಗೆ ಈ ವರ್ಷ ಬರದಿದ್ದರೆ ಮುಂದಿನ ವರ್ಷ ಬಂದೀತು ಅದರಲ್ಲಿ ಬೇಸರವೇನಿದೆ?” ಎಂದು ಹೇಳಿದರಂತೆ! ತ.ರಾ.ಸು. ಎಂತಹ ಮಹಾನ್ ಚೇತನ ಎಂದು ಇದರಿಂದ ತಿಳಿಯಬಹುದು.

ಅ.ನ.ಕೃ. ಅವರು ಬರವಣಿಗೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ, ಬರೆದು ಬದುಕಿದ ಕೆಲವೇ ಲೇಖಕರಲ್ಲಿ ಅಗ್ರಗಣ್ಯರು. ಬೆಳಿಗ್ಗೆಯಿಂದ ಸಂಜೆಯವರೆಗೆ ಬರವಣಿಗೆ ಮಾಡುತ್ತಿದ್ದ ಅವರು ಸಂಜೆ ಹೊತ್ತಿಗೆ ಬರವಣಿಗೆಗೆ ವಿರಾಮ ನೀಡಿ, ಮನೆಯೆದುರಿನ ಅಂಗಳದಲ್ಲಿ ವಾಕ್ ಮಾಡುತ್ತಿದ್ದರು. ಒಂದು ದಿನ ಸಂಜೆ ಹೀಗೆ ವಾಕ್ ಮಾಡುತ್ತಿದ್ದಾಗ, ಯುವಕನೊಬ್ಬ ಬಂದು ನಮಸ್ಕರಿಸಿ ತನ್ನ ಪರಿಚಯ ಹೇಳಿಕೊಂಡ. ಅ.ನ.ಕೃ. ಅವರು ಅವನನ್ನು ಕರೆದು ಕೂರಿಸಿ, ಚಹ ಕೊಟ್ಟು, ಇತ್ಯೋಪರಿಯನ್ನೆಲ್ಲ ವಿಚಾರಿಸಿದರು. ಆ ಯುವಕ ತಾನೊಂದು ಕಾದಂಬರಿ ಬರೆದಿರುವುದಾಗಿಯೂ, ಅ.ನ.ಕೃ. ಅವರು ಅದನ್ನೋದಿ, ಅಗತ್ಯ ತಿದ್ದುಪಡಿ ಮಾಡಿ, ಸಾಧ್ಯವಾದರೆ ಮುನ್ನುಡಿಯೊಂದನ್ನು ಬರೆದು ಕೊಟ್ಟು ಆಶೀರ್ವದಿಸಬೇಕೆಂದು ವಿನಯದಿಂದ ಕೋರಿಕೊಂಡ. ಅದಕ್ಕೊಪ್ಪಿದ ಅ.ನ.ಕೃ. ಅವರು ಎರಡು ದಿನಗಳ ನಂತರ ಬರುವಂತೆ ಸೂಚಿಸಿದರು.
ಆ ಯುವಕ ಅ.ನ.ಕೃ. ಅವರನ್ನು ಎರಡು ದಿನಗಳ ನಂತರ ಭೇಟಿಯಾದ. ಅವನನ್ನು ಕರೆದು ಪ್ರೀತಿಯಿಂದ ಮಾತನಾಡಿಸಿದ ಅವರು ಆ ಕಾದಂಬರಿಯನ್ನು ಆಮೂಲಾಗ್ರವಾಗಿ ತಿದ್ದುವುದರ ಜೊತೆಗೆ ಕಾದಂಬರಿಯ ಕೊನೆಯ ೪೦ ಪುಟಗಳನ್ನು ತಾವೇ ಬರೆದಿದ್ದರು! ಇಷ್ಟೆಲ್ಲ ಮಾಡುವುದರ ಜೊತೆಗೆ ಒಂದು ಸೊಗಸಾದ ಮುನ್ನುಡಿ ಸಹ ಬರೆದಿದ್ದರು. ಆ ಯುವಕನ ಬಳಿ ಕಾದಂಬರಿಯ ಪ್ರಕಟಣೆಯ ಕುರಿತು ವಿಚಾರಿಸಿದ ಅ.ನ.ಕೃ. ಅವರು ಪ್ರಕಾಶಕರು ಇನ್ನೂ ಸಿಕ್ಕಿಲ್ಲ ಎಂದು ತಿಳಿದು ತಾವೇ ಒಬ್ಬ ಪ್ರಕಾಶಕರ ಗುರುತು ಮಾಡಿಕೊಟ್ಟು, ಆ ಕಾದಂಬರಿ ಪ್ರಕಟವಾಗುವಂತೆ ಸಹ ನೋಡಿಕೊಂಡರು! ಅ.ನ.ಕೃ. ಅವರು ಹಾಗೆ ಪ್ರೋತ್ಸಾಹ ನೀಡಿದ ಆ ಅನಾಮಧೇಯ ಯುವಕ ಮುಂದೆ ಬೀಚಿ ಎಂದು ನಾಡಿನಾದ್ಯಂತ ಅಪಾರ ಖ್ಯಾತಿ ಪಡೆದರು. ಸಹೃದಯತೆಗೆ ಮತ್ತೊಂದು ಹೆಸರೇ ಅ.ನ.ಕೃ.

ಖ್ಯಾತ ಲೇಖಕ ಹಾ. ಮಾ. ನಾಯಕರ ಕಿರುಗಥೆಗಳ ಸಂಕಲನ ‘ಬಾಳ್ನೋಟಗಳು’. ಈ ಕೃತಿ ೧೯೫೦ರಲ್ಲಿ ಮೊದಲ ಮುದ್ರಣ ಕಂಡಾಗ ನಾಯಕರು ಇನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದರು! ಹಿರಿಯರೊಬ್ಬರ ಸಲಹೆಯಂತೆ ತಾವು ಕಂಡ, ತಮ್ಮ ಸುತ್ತಮುತ್ತಲಿನ ಜನಜೀವನವನ್ನೇ ಅವರು ಚಿತ್ರಿಸಿದ್ದರು. ಆಗ ಅನಾಮಧೇಯ ಶಾಲಾ ಬಾಲಕನಾಗಿದ್ದ ಅವರು ತುಂಬ ಹಿಂಜರಿಕೆಯಿಂದಲೇ ಧಾರವಾಡದ ಸಮಾಜ ಪುಸ್ತಕಾಲಯಕ್ಕೆ ತಮ್ಮ ಹಸ್ತಪ್ರತಿ ಕಳಿಸಿದರು. ಹಸ್ತಪ್ರತಿಯೋದಿದ ಬಾಲಚಂದ್ರ ಘಾಣೇಕರರು ಪುಸ್ತಕ ಪ್ರಕಟಿಸುವುದಾಗಿ ತಿಳಿಸಿದರು. ಸಮಾಜ ಪುಸ್ತಕಾಲಯದ ೧೯೫೦ನೇ ಸಾಲಿನ ಹೊಸ ಪ್ರಕಟಣೆಯಾದ ‘ಬಾಳ್ನೋಟಗಳು’ ಪುಸ್ತಕದ ಗೌರವ ಪ್ರತಿಗಳು ಮತ್ತು ಗೌರವ ಧನ ೧೯೪೯ರ ಡಿಸೆಂಬರಿನಲ್ಲೇ ಬಾಲಕ ಹಾ. ಮಾ. ನಾಯಕರ ಕೈ ತಲುಪಿದವು!
ಬಾಲಚಂದ್ರ ಘಾಣೇಕರರ ಸಹೃದಯತೆ ಮತ್ತು ಗುಣಗ್ರಾಹಿತ್ವಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಶತಮಾನೋತ್ಸವಕ್ಕೆ ತುಂಬ ಹತ್ತಿರದಲ್ಲಿರುವ ಸಮಾಜ ಪುಸ್ತಕಾಲಯ ಕನ್ನಡದ ಅತ್ಯಂತ ಹಳೆಯ ಮತ್ತು ಪ್ರಖ್ಯಾತ ಪ್ರಕಾಶನ ಸಂಸ್ಥೆ. ಕನ್ನಡದ ಬಹುತೇಕ ಪ್ರಮುಖ ಲೇಖಕ/ಕಿಯರ ಕೃತಿಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಸಮಾಜ ಪುಸ್ತಕಾಲಯ ಲೇಖಕ/ಕಿಯರಿಗೆ ಗೌರವ ಧನ ಕೊಡುವುದಿರಲೀ, ಗೌರವ ಪ್ರತಿ ಕೊಡುವುದಿರಲೀ, ಪುಸ್ತಕ ಪ್ರಕಟಣೆಯಿರಲೀ ಅಥವಾ ಪುಸ್ತಕ ಮಾರಾಟವಿರಲೀ ಎಲ್ಲದರಲ್ಲೂ ಶುದ್ಧತೆ ಮತ್ತು ಬದ್ಧತೆ ಕಾಯ್ದುಕೊಂಡಿದೆ. ಪ್ರಕಾಶನ ಸಂಸ್ಥೆ ಹೇಗಿರಬೇಕೆಂಬುದಕ್ಕೆ ಒಂದು ಮಾದರಿ ಸಮಾಜ ಪುಸ್ತಕಾಲಯ.
ಸಾಹಿತ್ಯ ಚಿತ್ರಗಳು ಇಂದು:

ಬೆಂಗಳೂರಿನ ಟೆಕ್ಕಿಯೊಬ್ಬ ತನ್ನ ಪುಸ್ತಕ ತಾನೇ ಪ್ರಕಟಿಸಿಕೊಳ್ಳುತ್ತಾನೆ. ಅವನು ಅಲ್ಲಿ, ಇಲ್ಲಿ ವಿಷಯ ಎತ್ತಿಕೊಂಡು ಬರೆದ ಜನಪ್ರಿಯ ಚಾರಿತ್ರಿಕ ಕಾದಂಬರಿ ೧೦ಕ್ಕೂ ಅಧಿಕ ಮುದ್ರಣ ಕಂಡಿದೆ! ಎಷ್ಟು ನೂರು ಅಥವಾ ಸಾವಿರ ಪ್ರತಿಗಳು ಎಂಬ ಪ್ರಶ್ನೆ ಇಲ್ಲಿ ಅಪ್ರಸ್ತುತ! ಮನರಂಜನೆಗಾಗಿ ಮಾತ್ರ ಓದಬಹುದಾದ ಈ ಜನಪ್ರಿಯ ಕಾದಂಬರಿಯನ್ನು ಬೆಂಗಳೂರಿನ ಕೆಲವು ಪ್ರಭಾವಿ ವಿಮರ್ಶಕರು ಕ್ಲಾಸಿಕ್ ಕಾದಂಬರಿ ಎಂದು ಘೋಷಣೆ ಮಾಡಿದ್ದಾರೆ! ಹೊಸದೇನನ್ನೂ ಸೃಷ್ಟಿ ಮಾಡುವ ಸಾಮರ್ಥ್ಯವಿಲ್ಲದ ಈ ಟೆಕ್ಕಿ ಶೀಘ್ರದಲ್ಲೇ ಇನ್ನೊಂದು ಚಾರಿತ್ರಿಕ ಜನಪ್ರಿಯ ಕಾದಂಬರಿ ತರಲಿದ್ದಾನೆ. ಅದರ ಕುರಿತು ಇನ್ನಿಲ್ಲದಂತೆ ಪ್ರಚಾರ ಮಾಡಲಾರಂಭಿಸಿದ್ದಾನೆ. ಗಿಮಿಕ್ ಮಾಡುವುದರಲ್ಲಿ ಇವನು ಸಿನಿಮಾ ರಂಗದ ರಾಜಮೌಳಿ, ಲೋಕೇಶ್ ಕನಕರಾಜ ಮತ್ತು ಅಟ್ಲಿ ಕುಮಾರನನ್ನೂ ಮೀರಿಸುತ್ತಾನೆ.
ಪ್ರಕಾಶಕನಾದ ಇವನು ಹೊಸಬರ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಾನೆ ಆದರೆ ಗುಣಮಟ್ಟ ತುಂಬ ಕಳಪೆ. ಇವು ಒಂದು ಬಾರಿ ಓದಿ ಬದಿಗಿಡಬಹುದಾದ ಪುಸ್ತಕಗಳು. ಇವನು ಪ್ರಕಟಿಸುವ ದ್ವಿತೀಯ ದರ್ಜೆಯ ಪುಸ್ತಕಗಳು (ಅನುವಾದಗಳೂ ಸೇರಿ) ಅತ್ಯುತ್ತಮ ಎಂಬ ಭ್ರಮೆ ಇವನಿಗೂ, ಇವನ ಬಳಗದವರಿಗೂ ಇದೆ. ಇಷ್ಟೆಲ್ಲ ಅಬ್ಬರ, ಆಡಂಬರ, ಅಹಂಕಾರ ತೋರಿಸುವ ಇವನು ಇದರ ಕಾಲು ಭಾಗದಷ್ಟನ್ನು ಬರವಣಿಗೆಯ ವಿಷಯದಲ್ಲಿ ತೋರಿಸಿದ್ದರೆ ಒಂದೆರಡು ಒಳ್ಳೆಯ ಕೃತಿ ಕೊಡಬಹುದಿತ್ತು. ಇವನ ಆಟಾಟೋಪ ಮತ್ತು ಆರ್ಭಟಗಳ ಕುರಿತೇ ಒಂದು ಜನಪ್ರಿಯ ಕಾದಂಬರಿ ಬರೆಯಬಹುದು.

ಬೆಂಗಳೂರಿನಲ್ಲಿ ಒಬ್ಬ ವಿಮರ್ಶಕ ವ ಅನುವಾದಕನಿದ್ದಾನೆ. ಇವನು ಪಾಮುಕ್ ಎಂಬ ವಿದೇಶಿ ಲೇಖಕನ ಭಕ್ತ ಮತ್ತು ಕಟ್ಟಾ ಎಡಪಂಥೀಯ. ಸ್ತ್ರೀಯರ ಬಗ್ಗೆ ಇವನಿಗೆ ವಿಶೇಷ ಮಮತೆಯಿದೆ. ಹೆಂಗರುಳಿನ ವಿಮರ್ಶಕ ಎಂದು ಖ್ಯಾತಿ ಪಡೆದ ಈ ಮಹಾಶಯ ಲೇಖಕಿಯರ ಕೃತಿಗಳಿಗೆ ರಣಕೇಕೆ ಹಾಕಿ ಮುನ್ನುಡಿ, ಬೆನ್ನುಡಿ ಬರೆಯುತ್ತಾನೆ. ಯಾವುದೇ ಕೃತಿಯ ಕುರಿತು ತೀರ್ಪು ಕೊಟ್ಟಂತೆ ಬರೆಯುವುದು, ಮಾತನಾಡುವುದು ಇವನ ರೂಢಿ. ತಾನು ತುಂಬ ದೊಡ್ಡವ, ಯಾವುದೇ ಕೃತಿಯ ಕುರಿತು ತೀರ್ಪು ಕೊಡಬಲ್ಲ ಉದ್ಧಾಮ ಪಂಡಿತ, ಕೃತಿಯ ಅಳಿವು, ಉಳಿವು ತನ್ನ ತೀರ್ಪಿನ ಮೇಲೆ ನಿಂತಿದೆ ಎಂಬ ಭ್ರಮೆ ಇವನನ್ನು ಹಾಳು ಮಾಡಿದೆ.
ಇತ್ತೀಚೆಗೆ ಹೇಗಾದರೂ ಖ್ಯಾತಿ ಪಡೆಯಬೇಕೆಂದು ಒದ್ದಾಡುತ್ತಿರುವ ಅನಿವಾಸಿ ಕನ್ನಡಿಗನೊಬ್ಬನ ಸಾಧಾರಣ ಮಟ್ಟದ ಜನಪ್ರಿಯ ಕಾದಂಬರಿಯೊಂದನ್ನು ಅತ್ಯುತ್ತಮ ಕಾದಂಬರಿಯೆಂದು ಹಿನ್ನುಡಿಯಲ್ಲಿ ಘೋಷಿಸುವ ಮೂಲಕ ಇವನೆಂತಹ ರೋಗಗ್ರಸ್ತ ಮನಸ್ಥಿತಿಯ ವ್ಯಕ್ತಿ ಎಂದು ಜಾಹೀರು ಮಾಡಿದ್ದಾನೆ. ವಿಮರ್ಶಕ ಮೌಲ್ಯಮಾಪಕನೇ ಹೊರತು ತೀರ್ಪುಗಾರನಲ್ಲ ಎಂಬ ಸತ್ಯವನ್ನು ಈ ಹಿರಿಯ ಲೇಖಕ ಅರಿಯಬೇಕಿದೆ. ಕಳಪೆ ವಿಮರ್ಶೆ ಬರೆಯುವುದು ಬಿಟ್ಟು ಅನುವಾದದತ್ತ ಗಮನ ಹರಿಸಿದರೆ ಈ ಪ್ರತಿಭಾವಂತ ಹಿರಿಯನಿಂದ ಕೆಲವು ಒಳ್ಳೆಯ ಅನುವಾದಿತ ಕೃತಿಗಳು ದೊರೆಯಬಹುದು.

ಪ್ರತಿಭೆಯಿರದಿದ್ದರೂ ಸಹ ಬಲವಂತವಾಗಿ ಲೇಖಕನಾದ ಟೆಕ್ಕಿಯ ಕಥೆ ಇನ್ನೂ ವಿಚಿತ್ರವಾಗಿದೆ. ವಾಸ್ತುವಿನ್ಯಾಸಕಾರನಾದ ಇವನಿಗೆ ತನ್ನ ಪ್ರತಿಭೆಯ ಕುರಿತು ಭಯಂಕರ ಭ್ರಮೆಗಳಿವೆ. ಏನೇನೋ ಹಾಳುಮೂಳು ಬರೆದು, ಕವಿತೆ, ಕಥೆ ಮತ್ತು ಕಾದಂಬರಿ ಎಂದು ಪ್ರಕಟಿಸುತ್ತಾನೆ. ಇವನಿಗೆ ಕನ್ನಡ ಸಾಹಿತ್ಯ ಪರಂಪರೆಯ ಕನಿಷ್ಠ ಜ್ಞಾನ ಸಹ ಇಲ್ಲ. ಬರವಣಿಗೆಯ ಪ್ರಾಥಮಿಕ ಪಾಠಗಳು ಸಹ ಗೊತ್ತಿರದ ಮೂರ್ಖ ಇವನು!
ಇವನ ಪ್ರತಿಭೆ ಎಷ್ಟು ಅಗಾಧವಾದುದೆಂದರೆ ಇವನ ಬರವಣಿಗೆಯನ್ನು ಧಾರಣ ಮಾಡಿಕೊಳ್ಳುವ ಶಕ್ತಿ ಕನ್ನಡಕ್ಕಿಲ್ಲವಂತೆ! ಇವನ ಅದ್ಭುತ ಚಿಂತನೆಗಳನ್ನು ವ್ಯಕ್ತಪಡಿಸಲು ಕನ್ನಡ ಪದಗಳು ಸಾಲದಂತೆ! ಇವನ ಶ್ರೀಮಂತ ಪ್ರತಿಭೆಯ ಅಭಿವ್ಯಕ್ತಿಗೆ ಬಡ ಕನ್ನಡ ಭಾಷೆ ತತ್ತರಿಸುತ್ತದೆಯಂತೆ! ಮಾನಸಿಕ ಅಸ್ವಸ್ಥನೊಬ್ಬನ ಅಸಂಬದ್ಧ ಪ್ರಲಾಪಗಳೆಂದು ಇವನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಹಣವಂತನಾದ ಈ ಮೂರ್ಖ ಟೆಕ್ಕಿಗೆ ಬೆಂಬಲ ಕೊಡುವ ಮಂದಿಯೂ ಕೂಡ ಸಾಹಿತ್ಯ ಲೋಕದಲ್ಲಿದ್ದಾರೆ!

ಕನ್ನಡದ ಕೆಲವು ಲೇಖಕಿಯರಿಗೆ ಅಶ್ಲೀಲ ಮತ್ತು ಶೃಂಗಾರಕ್ಕೆ ವ್ಯತ್ಯಾಸ ಗೊತ್ತಿಲ್ಲ! ಅಶ್ಲೀಲವಾಗಿ ಬರೆದು ಅತ್ಯಾಧುನಿಕರು ಮತ್ತು ಮುಕ್ತವಾಗಿ ಬರೆಯುವವರು ಎಂದು ಅಡ್ಡದಾರಿಯಿಂದ ಪ್ರಖ್ಯಾತಿ ಪಡೆಯುವ ಹುಚ್ಚು ಹಂಬಲ ಇತ್ತೀಚೆಗೆ ಕೆಲವರಲ್ಲಿ ಹೆಚ್ಚಾಗುತ್ತಿದೆ. ಇಂತಹವರಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಪ್ರಭಾವಿ ಲೇಖಕರು ಕನ್ನಡದಲ್ಲಿ ತುಂಬ ಜನ ಇದ್ದಾರೆ ಎಂಬುದು ಗಮನಾರ್ಹ.
ಕನ್ನಡದ ಒಬ್ಬ ಅತೃಪ್ತ ಲೇಖಕಿ ಅಶ್ಲೀಲ ಕವಿತೆಗಳ ಮೂಲಕ ರಾತ್ರಿ ಬೆಳಗಾಗುವುದರೊಳಗೆ ತುಂಬ ಖ್ಯಾತಿ ಪಡೆದಿದ್ದಾಳೆ. ಕನ್ನಡದ ಕೆಲವು ಪ್ರಭಾವಿ ಲೇಖಕರು ಈಗ ಇವಳ ಅಭಿಮಾನಿಗಳಾಗಿದ್ದಾರೆ! ಈ ಕವಯತ್ರಿಯ ಅಶ್ಲೀಲ ಕವಿತೆಗಳಿಗೆ ಕೆಲವು ಬಹುಮಾನ ಸಹ ಸಿಕ್ಕಿರುವುದು ವಿಶೇಷ. ಕೆಲವು ಲೇಖಕರಂತೂ ಇವಳ ಅಶ್ಲೀಲ ಕವಿತೆಗಳನ್ನು ಹಾಡಿ ಹೊಗಳುತ್ತಾರೆ. ಇವಳ ದಿಢೀರ್ ಜನಪ್ರಿಯತೆಗೆ ಮನಸೋತು, ಇನ್ನೂ ಕೆಲವು ಅತೃಪ್ತ ಲೇಖಕಿಯರು ಇವಳ ಹಾದಿ ತುಳಿಯುತ್ತಿದ್ದಾರೆ.
ಇನ್ಸ್ಟಾಗ್ರಾಂ, ಫೇಸ್ ಬುಕ್, ವಾಟ್ಸಪ್ ಮತ್ತು ಟೆಲಿಗ್ರಾಂ ಸೇರಿದಂತೆ ಹತ್ತು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಇವರು ಆಡುವ ತುಂಬ ಕೆಳಮಟ್ಟದ ಆಟಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗಬಹುದು. ಇಂತಹ ಕೆಲವು ಲೇಖಕಿಯರ ದೆಸೆಯಿಂದ ಒಳ್ಳೆಯ ಲೇಖಕಿಯರನ್ನು ಸಹ ಅನುಮಾನದಿಂದ ನೋಡುವಂತಾಗಿದೆ. ತೀರ ಕೆಳಮಟ್ಟಕ್ಕಿಳಿದಿರುವ ಇಂತಹವರ ಕುರಿತು ಹತ್ತಾರು ಜನಪ್ರಿಯ, ಮಸಾಲಾ ಕಾದಂಬರಿ ಬರೆಯಬಹುದು!

ಇತ್ತೀಚೆಗೆ ಬೆಂಗಳೂರಿನ ಒಂದೆರಡು ಕಾರ್ಪೋರೇಟ್ ಸಂಸ್ಥೆಗಳು ಕನ್ನಡ ಸಾಹಿತ್ಯ ಲೋಕವನ್ನು ಉದ್ಧಾರ ಮಾಡಲು ಹೊರಟಿದ್ದೇವೆ ಎಂದು ಫೋಸು ಕೊಡುತ್ತಿವೆ. ದೊಡ್ಡ ಮೊತ್ತದ ಬಹುಮಾನವಿರುವ ಸ್ಪರ್ಧೆಗಳು, ಸಾಹಿತ್ಯ ಹಬ್ಬಗಳು, ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನೆಲ್ಲುಗಳಲ್ಲಿ ತಮ್ಮ ಬಣ್ಣದ ತಗಡಿನ ತುತ್ತೂರಿಯನ್ನು ಜೋರಾಗಿ ಊದಿಕೊಳ್ಳುವ ಮೂಲಕ ಜಗದ್ವಿಖ್ಯಾತರಾದವೆಂದು ಭ್ರಮಿಸಿ, ಬೀಗುವುದು ಈ ಸಂಸ್ಥೆಗಳು ಮತ್ತು ಇವರ ಬಳಗದ ಅತೃಪ್ತರಿಗಂಟಿದ ಹೊಸ ಖಾಯಿಲೆ. ದುರ್ದೈವವಶಾತ್ ಈ ಸಾಂಕ್ರಾಮಿಕ ರೋಗ ಶೇಕಡಾ ಎಪ್ಪತ್ತರಷ್ಟು ಕನ್ನಡದ ಸಾಹಿತಿಗಳು ಮತ್ತು ಓದುಗರಿಗೂ ಕೂಡ ಅಂಟಿದೆ!
ಕನ್ನಡದಲ್ಲಿ ತುಂಬ ಜನ ಸಾಹಿತಿಗಳು, ಪ್ರಕಾಶಕರು ಮತ್ತು ಇತರೆ ಸಂಸ್ಥೆಗಳು ಕನ್ನಡದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಕನ್ನಡವನ್ನು ಬೆಳೆಸಿದ್ದಾರೆ ಮತ್ತು ತಾವೂ ಬೆಳೆದಿದ್ದಾರೆ. ಆದರೆ ಅವರಾರಿಗೂ ಇಲ್ಲದ ಭ್ರಮೆ ಮತ್ತು ಅಹಂಕಾರ ಬೆಂಗಳೂರಿನ ಕೆಲವು ಮೂರ್ಖ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗಿದೆ. ನಿನ್ನೆ, ಮೊನ್ನೆ ಬಂದ ವೀರ ಬ್ರಹ್ಮರು ಕನ್ನಡ ಸಾಹಿತ್ಯ ಲೋಕದ ಹಣೆ ಬರಹವನ್ನು ಬದಲಿಸುತ್ತೇವೆ ಎಂದು ಹೊರಟಿರುವುದು ತೀರ ಹಾಸ್ಯಾಸ್ಪದ. ಲಕ್ಷ, ಕೋಟಿಗಳ ಲೆಕ್ಕದಲ್ಲಿ ಮಾತನಾಡುವ ಇವರಿಗೆ ಅಷ್ಟು ದುಡ್ಡು ಎಲ್ಲಿಂದ ಬರುತ್ತದೆ? ಇವರು ನಡೆಸುವ ಲಕ್ಷಾಂತರ ರೂಪಾಯಿ ಮೊತ್ತದ ಬಹುಮಾನವಿರುವ ಸ್ಪರ್ಧೆಗಳು ಪಾರದರ್ಶಕವೇ? ಬಹುಮಾನಿತರಾದ ಸ್ಪರ್ಧಿಗಳು ಯೋಗ್ಯರೇ? ತೀರ್ಪುಗಾರರು ಪ್ರಾಮಾಣಿಕರೇ? ಸಾಹಿತ್ಯ ಹಬ್ಬಗಳು ಅರ್ಥಪೂರ್ಣವೇ? ಸಂವಾದ, ವಿಚಾರ ಗೋಷ್ಠಿಗಳಲ್ಲಿ ಯೋಗ್ಯರಿದ್ದರೇ? ಕನ್ನಡದ ಪ್ರಮುಖ ಸಾಹಿತಿಗಳೇ ಇಲ್ಲದ, ತಮಗೆ ಬೇಕಾದ ಸಾಹಿತಿಗಳಷ್ಟೇ ಇದ್ದ, ಕೋಟಿ ವೆಚ್ಚದ, ವರ್ಣರಂಜಿತ, ವಿಶ್ವವಿಖ್ಯಾತ ಸಾಹಿತ್ಯ ಹಬ್ಬದಿಂದ ಕನ್ನಡ ಸಾಹಿತ್ಯಕ್ಕೆ ಕಿಂಚಿತ್ತಾದರೂ ಪ್ರಯೋಜನವಾಯಿತೇ? ಎಂಬ ಪ್ರಶ್ನೆಗಳು ಸಹಜವಾಗಿಯೇ ಪ್ರಾಜ್ಞರನ್ನು ಕಾಡುತ್ತವೆ. ಇರಲಿ, ಸದ್ಯ ಭ್ರಮಾಲೋಕದಲ್ಲಿರುವ ಇಂತಹವರಿಗೆ ಅಚ್ಛೇ ದಿನ್ ಶುರುವಾಗಿವೆ. ಸ್ವಲ್ಪ ಕಾಲ ಅವರೂ ಕೂಡ ಸಂಭ್ರಮಿಸಲಿ!
ಭ್ರಮೆ ಮತ್ತು ಅಹಂಕಾರದಲ್ಲಿ ಮೈ ಮರೆತಿರುವ, ಅಕ್ಷರ ವ್ಯಾಪಾರಿಗಳಾದ ವೀರ ಬ್ರಹ್ಮರ ಎದುರು ಮಂಡಿಯೂರಿರುವ ಆತ್ಮಾಭಿಮಾನವಿಲ್ಲದ ಕನ್ನಡದ ಲೇಖಕ/ಕಿಯರ ಕುರಿತು ನೆನೆದರೆ ತುಂಬ ವಿಷಾದವಾಗುತ್ತದೆ. ಅಂದಿನ ಸಾಹಿತಿಗಳು ರೋಲ್ ಮಾಡೆಲ್ ಆಗಿದ್ದರು. ಆದರೆ ಅವರಂತಾಗಬೇಕು ಎಂಬಂತಿದ್ದರು! ಇಂದಿನ ಸಾಹಿತಿಗಳು ರೋಲ್ ಮಾಡೆಲ್ಲುಗಳಲ್ಲ, ಯಾರೂ ಸಹ ಇವರಂತಾಗಬಾರದು ಎಂಬಂತಿದ್ದಾರೆ! ಯಾರನ್ನು ಪುರಸ್ಕರಿಸಬೇಕು ಮತ್ತು ಯಾರನ್ನು ತಿರಸ್ಕರಿಸಬೇಕು ಎಂಬುದನ್ನು ಪ್ರಾಜ್ಞ ಓದುಗರೇ ನಿರ್ಧರಿಸಬೇಕಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಕೆಲವು ಸಾಹಿತ್ಯ ಚಿತ್ರಗಳು ಅಂದು – ಇಂದು”

  1. ವಿಠ್ಠಲ ಶ್ರೀನಿವಾಸ ಕಟ್ಟಿ.

    ಕೇಂದ್ರ ಸಾಹಿತ್ಯ ಅಕಾಡಮಿಯಲ್ಲಿಯೂ ಕೆಲವು ಪಟ್ಟಭದ್ರರು ಏನೆಲ್ಲ ಆವಾಂತರ ಸೃಷ್ಟಿಸುತ್ತಿದ್ದಾರೆಂಬುದರ ಕುರಿತಾಗಿ ಬರೆಯಬಹುದು..

  2. Raghavendra Mangalore

    ಇಂದಿನ ಅನೇಕ ಸಾಹಿತಿಗಳು ಹಾಗೂ ನೂತನ (ನವ್ಯ) ಪ್ರಕಾಶಕರು ಅದರಲ್ಲೂ ಮುಖ್ಯವಾಗಿ ಯುವ ಓದುಗರನ್ನು ಹಲವು
    ಆಮಿಷಗಳ ಮುಖಾಂತರ ಗಟ್ಟಿ ಬಂಧನದಲ್ಲಿ ಇಡಲು ಪ್ರಯತ್ನಿಸುತ್ತಾರೆ. ಪಟ್ಟಭದ್ರ (ಸಾಹಿತಿ) ಹಿತಾಸಕ್ತರ ಜನ್ಮವನ್ನು ಚೆನ್ನಾಗಿ
    ಜಾಲಾಡಿದ್ದೀರಿ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter