ಭಾರತೀಸುತ
ಭಾರತೀಸುತರೆಂಬ ಕಾವ್ಯನಾಮದಿಂದ ಖ್ಯಾತರಾದ ಶಾನಭಾಗ ರಾಮಯ್ಯ ನಾರಾಯಣರಾವ್ (1915 – 1975) ಅವರು ಕನ್ನಡದ ಜನಪ್ರಿಯ ಕಾದಂಬರಿಕಾರು. ‘ಬಯಲು ದಾರಿ’, ‘ಎಡಕಲ್ಲು ಗುಡ್ಡದ ಮೇಲೆ’, ‘ಹುಲಿಯ ಹಾಲಿನ ಮೇವು’, ‘ಹುಲಿಬೋನು’, ‘ಬಂಗಾರದ ಕುಲುಮೆ’, ‘ಬೆಳ್ಳಿ ಮೂಡಿತು’, ‘ಗಿರಿಕನ್ನಿಕೆ’, ‘ಮನದನ್ನೆ ಮಾಲತಿ’ ಮತ್ತು ‘ಗಿಳಿಯು ಪಂಜರದೊಳಿಲ್ಲ’ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ‘ಬೆಂಕಿಯಲ್ಲಿ ಬೆಂದವಳು’, ‘ಚಿಂಬ ಹಿಡಿದ ಮೀನು’, ‘ಟೊಳ್ಳು ನಂದಿಮರ’, ‘ಕರೆಗೆ ಓಗೊಟ್ಟ ಕಾರ್ಡೇಲಿಯಾ’ ಇವುಗಳು ಅವರ ಕಥಾ ಸಂಕಲನಗಳಾದರೆ, ‘ದೂರ ಹೋದಳು’, ‘ನನ್ನ ಅತ್ತಿಗೆ’, ‘ಪೆಟ್ರೀಷಿಯಾ’, ‘ಮಾದಯ್ಯ ಮತ್ತು ವೇಣುವಿನ ಕೊನೆಯ ದಿನಗಳು’, ‘ಮನೆಗೆ ಬಂದ ಮಹಾಬಲಿ’ ಇವರ ನೀಳ್ಗತೆಗಳಾಗಿವೆ.
ಭಾರತೀಸುತರ ಜನ್ಮ ಶತಮಾನೋತ್ಸವದ ಸವಿನೆನಪಿಗೆ ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನವು ‘ಬೆಂಕಿಯಲ್ಲಿ ಬೆಂದವಳು’, ‘ಚಿಂಬ ಹಿಡಿದ ಮೀನು’ ಸಂಕಲನಗಳ ಜೊತೆಗೆ ‘ದೂರ ಹೋದಳು’ ಎಂಬ ನೀಳ್ಗತೆಯನ್ನು ಸೇರಿಸಿ ‘ಚಿಂಬ ಹಿಡಿದ ಮೀನು ಮತ್ತು ಇತರ ಕಥೆಗಳು’ ಎಂಬ ಹೆಸರಿನಲ್ಲಿ ಅವರ ಸಮಗ್ರ ಕತೆಗಳ ಮೊದಲ ಸಂಪುಟವನ್ನು ಬಿಡುಗಡೆಗೊಳಿಸಿದೆ. ಅವರ ಸಮಗ್ರ ಕತೆಗಳ ಎಲ್ಲ ಸಂಪುಟಗಳು ಪ್ರಕಟವಾದರೆ ಕನ್ನಡ ಸಾಹಿತ್ಯಾಸಕ್ತರಿಗೆ ಪ್ರಯೋಜನವಾಗುತ್ತದೆ.
‘ಬೆಂಕಿಯಲ್ಲಿ ಬೆಂದವಳು’ ಎಂಬ ರಚನೆಯು ಕಾದಂಬರಿಯ ವಸ್ತುವನ್ನು ಸಣ್ಣಕತೆಯ ಹರಹಿನಲ್ಲಿ ನಿರ್ವಹಿಸುತ್ತದೆ. ಸುಬ್ಬುವಿನ ಪ್ರೇಯಸಿ ಸಾತು ಆತನ ಎಚ್ಚರಿಕೆಯ ಮಾತುಗಳನ್ನು ಲೆಕ್ಕಿಸದೆ ಕಳ್ಳಂಗಡಿಯ ಗಂಗಣ್ಣನನ್ನು ಮದುವೆಯಾಗುತ್ತಾಳೆ. ಶೋಕಿಯವನಾದ ಆತನು ಕುಡುಕನೂ ಜೂಜುಕೋರನೂ ಆಗಿರುತ್ತಾನೆ. ಸಾತು ಅವನ ನಡತೆಯನ್ನು ಪ್ರತಿಭಟಿಸಿದಾಗ ಆಕೆಯ ಆಭರಣಗಳನ್ನು ಕದ್ದು ಓಡುತ್ತಾನೆ. ಹಣವಿಲ್ಲದಿದ್ದಾಗ ಸಾಲವನ್ನು ನೀಡಿದ ಪ್ಲಾಂಟರ್ ಭದ್ರಪ್ಪನನ್ನು ಸಾತುವಿನ ಹಾಸಿಗೆಗೆ ಕಳುಹಿಸುತ್ತಾನೆ. ಆದರೆ ಅವಳು ಭದ್ರಪ್ಪನನ್ನು ಹೊಡೆದು ಓಡಿಸುತ್ತಾಳೆ. ಮನಸ್ಸು ಮಾಡಿದ್ದರೆ ಆತನನ್ನು ಇಟ್ಟುಕೊಂಡು ಅವಳಿಗೆ ಸುಖವಾಗಿ ಬಾಳಬಹುದಿತ್ತು. ಅವಕಾಶಗಳು ದೊರೆತರೂ ಆಕೆಯು ಅಂಥ ಬದುಕನ್ನು ಒಪ್ಪುವುದಿಲ್ಲ. ಅವಲಂಬಿತ ಪರಿಸ್ಥಿತಿಯಲ್ಲೂ ಸ್ವಾಭಿಮಾನವನ್ನು ಬಿಡುವುದಿಲ್ಲ. ಗಂಗಣ್ಣನನ್ನು ವರಿಸುವ ಸಂದರ್ಭದಲ್ಲಿ ತನ್ನ ಕರ್ಮದ ಬಗ್ಗೆ ಸ್ವಲ್ಪವೂ ಚಿಂತಿಸದಿದ್ದ ಆಕೆಯು ಬದುಕಿನಲ್ಲಿ ಸೋತ ಮೇಲೆ ತನ್ನ ಮಿತಿಗಳ ಕುರಿತು ಯೋಚಿಸುತ್ತಾಳೆ. ತನ್ನ ಕೃತಿಗಳ ಔಚಿತ್ಯವನ್ನು ಪ್ರಶ್ನಿಸಿಕೊಳ್ಳುತ್ತಾಳೆ. ಆಗ ಆಕೆಗೆ ಶೂನ್ಯದ ದರ್ಶನವಾಗುತ್ತದೆ. ಅಪರಾಧಿ ಪ್ರಜ್ಞೆ, ದ್ವಂದ್ವ ಮತ್ತು ಅಪೂರ್ಣತೆಯ ಅರಿವು ಕಾಡತೊಡಗುತ್ತದೆ. ಗಂಗಣ್ಣನನ್ನು ಮದುವೆಯಾಗಿ ದಾಂಪತ್ಯದ ಸುಖವನ್ನು ಅನುಭವಿಸಿದರೂ ಆಕೆಗೆ ಸುಬ್ಬುವನ್ನು ಮರೆಯಲಾಗುವುದಿಲ್ಲ. ತನ್ನ ಅನುಭವವನ್ನು ಹೇಳಲು ಬಯಸಿದಾಗ ಆತನ ವ್ಯಂಗ್ಯದ ಮಾತುಗಳು ಆಕೆಯನ್ನು ಇರಿಯುತ್ತವೆ. ಗಂಗಣ್ಣನ ಕಳ್ಳಂಗಡಿಯ ಮಾಲೀಕನಾದ ಚೆಟ್ಟಿಯಪ್ಪನು ಅಂಗಡಿಮನೆಯನ್ನು ವಶಪಡಿಸಿ, ಗಂಗಣ್ಣನಿಂದ ಬರಬೇಕಾದ ಹಣಕ್ಕೆಂದು ಮನೆಯ ಪಾತ್ರೆಪರಡಿಗಳನ್ನು ಮುಟ್ಟುಗೋಲು ಹಾಕಿದಾಗ ಬೀದಿಪಾಲಾದ ಸಾತು ಪಟ್ಟಣಕ್ಕೆ ಹೋಗಿ ಶ್ರೀಮಂತರ ಮನೆಯ ಕೆಲಸದಾಳಾಗಿ ದುಡಿಯುತ್ತಾಳೆ. ಅಲ್ಲಿಯೂ ನೆಮ್ಮದಿಯಿರುವುದಿಲ್ಲ. ಮಗುವಿನ ಹಾರವನ್ನು ಕದ್ದ ಆರೋಪಕ್ಕೆ ಒಳಗಾಗಿ ಸೆರೆಮನೆಯನ್ನು ಸೇರುತ್ತಾಳೆ. ಕೊನೆಗೆ ಹಾರವು ಒಡೆಯರ ಅಂಗಳದಲ್ಲಿ ದೊರಕಿ ಆಕೆಯು ಬಿಡುಗಡೆಗೊಂಡಾಗ ಅವರ ಜೊತೆ ಇರಲು ಒಪ್ಪದೆ ಸುಬ್ಬುವಿನ ಬಳಿ ಬಂದು ತನ್ನನ್ನು ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾಳೆ. ಆಗ ಸುಬ್ಬವಿನ ಮಾನವೀಯತೆಯು ಹೊರಬರುತ್ತದೆ. ಗಂಗಣ್ಣನು ಜೀವಂತವಾಗಿದ್ದ ಸಂದರ್ಭದಲ್ಲಿ ಆಕೆ ಜ್ವರ ಹಿಡಿದು ಮಲಗಿದ್ದಾಗ, ರಾಗಿರೊಟ್ಟಿ, ಮದ್ದುಗಂಜಿಗಳಿಗಾಗಿ ಕಾಸು, ಬೀದಿಪಾಲಾಗಿ ಹೊರಬಿದ್ದಾಗ ದಾರಿವೆಚ್ಚಕ್ಕೆಂದು ರೂಪಾಯಿಗಳನ್ನು ಹಟ್ಟಿ ಬಾಗಿಲಲ್ಲಿ ಇಟ್ಟಿದ್ದ ವಿಚಾರವನ್ನು ತಿಳಿದು ಸಾತು ಮೂಕಳಾಗುತ್ತಿದ್ದಂತೆ ‘ನೀನು ಬೆಂಕಿಯಲ್ಲಿ ಬೆಂದ ಬಂಗಾರ’ ಎನ್ನುತ್ತಾ ಆಕೆಗೆ ತೋಳುಗಳ ಆಸರೆಯನ್ನು ನೀಡುವ ಸುಬ್ಬುವಿನ ವ್ಯಕ್ತಿತ್ವವು ಒಮ್ಮೆಲೇ ಉನ್ನತಿಗೇರುತ್ತದೆ. ತನ್ನ ಸ್ವಂತವೆಂದು ಭಾವಿಸಿ ಆಕೆಯೊಂದಿಗೆ ಹಸೆಮಣೆಯನ್ನೇರುವ ಕನಸನ್ನು ಕಾಣುತ್ತಿದ್ದ ಹೊತ್ತಿನಲ್ಲಿ ಅವಳು ಗಂಗಣ್ಣನಿಗೆ ಮರುಳಾಗಿ ಆತನ ವಶವಾದಾಗ ಸುಬ್ಬು ಅನುಭವಿಸಿರಬಹುದಾದ ದುಃಖ ಯಾತನೆಗಳನ್ನು ಓದುಗರೇ ಊಹಿಸಬೇಕಾಗಿದೆ. ಸಾಮಾಜಿಕ ಮುಖವನ್ನು ಹೊಂದಿದ ಕತೆಯಲ್ಲಿ ಸಮಸ್ಯೆ (ಹೆಣ್ಣಿನ ಶೋಷಣೆ) ಅದಕ್ಕೆ ಕಾರಣ (ಗಂಡಸರು) ಮತ್ತು ಸಮಸ್ಯೆಯ ಪರಿಹಾರ (ಆಕೆಯ ಮನಸ್ಸನ್ನು ಅರ್ಥ ಮಾಡಿಕೊಂಡು ಹೊಸ ಬಾಳುವೆಗೆ ಅವಕಾಶವನ್ನು ನೀಡುವುದು) ಸೂಚಿತವಾಗಿರುವುದರಿಂದ ಅದೊಂದು ಪ್ರಗತಿಶೀಲ ಕತೆಯಾಗಿದೆ. ‘ದಾರಿಯಲ್ಲಿ ಬಿದ್ದ ಹೂವು’ ಎಂಬ ಕತೆಯ ವಿನ್ಯಾಸವೂ ಈ ರೀತಿಯಲ್ಲಿದೆ.
ಯಾವುದೋ ಒಂದು ವಸ್ತುವನ್ನು ನೋಡಿ ಅದಕ್ಕೆ ಸಂಬಂಧಿಸಿದ ನೆನಪುಗಳನ್ನು ಮುಂದಿಟ್ಟುಕೊಂಡು ಕತೆಯನ್ನು ಹೇಳುವ ತಂತ್ರವು
ನವೋದಯದ ಕತೆಗಳಲ್ಲಿ ಕಂಡು ಬರುತ್ತದೆ. ‘ಜೇನು ಕಹಿ’ ಎಂಬ ಸಾಮಾನ್ಯ ಕತೆಯು ಇದಕ್ಕೆ ಉದಾಹರಣೆ ಎನ್ನಬಹುದಾದರೂ ನವ್ಯ ಕತೆಗಳಲ್ಲಿ ಹೆಚ್ಚಾಗಿ ಕಂಡುಬರುವ ಕೇಂದ್ರ ಪ್ರತೀಕದ ಅರ್ಥಕ್ರಿಯೆಯನ್ನು ಬೇರೆ ದೃಷ್ಟಿಗಳಿಂದ ನೋಡಲು ಸಾಧ್ಯವಿದೆ. ಪುಟ್ಟ ಮಕ್ಕಳಿಗೆ ಜೇನು ಸವಿಯಾದ ತಿನಿಸು. ‘ನಿನ್ನ ತುಟಿ ಸವಿ ಹೆಚ್ಚೋ, ಜೇನು ಸವಿ ಹೆಚ್ಚೋ’ ಎನ್ನುವ ಜೊನ್ನನಿಗೆ ಅದು ಶೃಂಗಾರದ, ರಸಿಕತನದ ಸಂಕೇತ. ಜೊನ್ನನ ಸಾವಿಗೆ ಕಾರಣವಾದ ಜೇನು ಮಾದಿಯ ಪಾಲಿಗೆ ಮರೆಯಲಾಗದ ನೋವಿನ ಕುರುಹು. ಕಾಡುಹಂದಿ ಮತ್ತು ಕರಡಿಗಳೊಂದಿಗೆ ಹೋರಾಡಿ ಗೆದ್ದ ಶೂರ ಜೊನ್ನನು ಕಾಡುಜೇನನ್ನು ಸಂಗ್ರಹಿಸಲು ಹೋಗಿ ಜೇನುನೊಣಗಳ ಕಡಿತಕ್ಕೊಳಗಾಗಿ ಮರದಿಂದ ಬಿದ್ದು ಸಾಯುವುದು ಬದುಕಿನ ವ್ಯಂಗ್ಯ. ಮಾದಿಯನ್ನು ಕಾಡುವ ಕಹಿ ನೆನಪುಗಳೊಡನೆ ಜೋಡಿಸುವ ಜೇನು ಉತ್ತಮ ಪ್ರತೀಕವೂ ಹೌದು.
ಕಳೆದುಕೊಂಡ ಪ್ರೇಮದ ನೆನಪು ದೇಶಕಾಲ ಪರಿಮಿತವಾದದ್ದಲ್ಲ. ‘ಕತ್ತಲೆ ಹರಿಯಿತು’ ಎಂಬ ಕತೆಯಲ್ಲಿ ಲೇಖಕರು ಅದನ್ನು ಅಭಿವ್ಯಕ್ತಿಸಿದ ರೀತಿಯು ಆ ಕಾಲಕ್ಕೆ ಹೊಸತಾಗಿದೆ. ತೀರಿಕೊಂಡ ಗಂಡನ ನೆನಪುಗಳನ್ನು ಮೀರಲಾರದ ಪೂವಿಯು ತನ್ನ ಕಲ್ಪನೆಯೊಳಗೆ ರೂಪು ತಳೆದ ಆತನೊಡನೆ ಮಾತನಾಡುತ್ತಾ ನೆನಪುಗಳಲ್ಲಿ ಜೀವಿಸುತ್ತಾಳೆ. ಇಲ್ಲಿ ಕಥನದ ಆವರಣವು ಮುಖ್ಯವಾಗುತ್ತದೆ. ಘಟನೆಗಳು ಮತ್ತು ಮಾನಸಿಕ ಕ್ರಿಯೆಗಳಿಗೆ ಮಳೆಯ ಹೊದಿಕೆಯಿದೆ. ನೆನಪಿನಿಂದ ಪ್ರೇರಿತಳಾಗಿ ಪ್ರಜ್ಞೆಯ ಆಳಕ್ಕಿಳಿದು ತನ್ನ ಬದುಕಿನಲ್ಲಿ ಅನುಭವಿಸಿದ್ದ ಕ್ಷಣಗಳನ್ನು ಮತ್ತೆ ಸೃಷ್ಟಿಸುವ ಕ್ರಮ, ಹಲವು ವರುಷಗಳ ಹಿಂದಿನ ಘಟನೆಗಳು ಮತ್ತು ಸಂಬಂಧಗಳಿಗೆ ಕೊಡುವ ಮಹತ್ವ, ಅಂಥ ಕ್ಷಣಗಳಲ್ಲಿ ನಾನು ನಿಜವಾಗಿ ಜೀವಿಸಿದ್ದೆ ಎಂಬ ಅರಿವಿನಿಂದ ಹುಟ್ಟಿದೆ. ಇಲ್ಲಿ ಪೂವಿಯ ನೆನಪುಗಳು ಮಾತ್ರ ಕತೆಯ ವಸ್ತುವಾಗಿದೆ. ಗಂಡನ ಸಾವಿನ ಬಳಿಕ ಆತನ ತಮ್ಮನನ್ನು ಕೂಡಿಕೆ ಮಾಡಿಕೊಂಡ ಪರಿಸ್ಥಿತಿ, ಹೊಸ ಸಂಸಾರದಲ್ಲಿ ಅನುಭವಿಸಿದ ತೃಪ್ತಿ ಅತೃಪ್ತಿಗಳು, ಹೊಸ ಬದುಕಿಗೆ ಕಾಲಿರಿಸಿದಾಗ ಎದುರಿಸಿರಬಹುದಾದ ಅಳುಕು, ಹೊಸ ಕನಸುಗಳು ಮುಂತಾದ ಭಾವನೆಗಳು ಒಟ್ಟಾಗಿ ಬಂದಿದ್ದರೆ ಈ ಕತೆಗೆ ಅಪೂರ್ವವಾದ ಸಂಕೀರ್ಣತೆ ಒದಗುವ ಸಾಧ್ಯತೆ ಇತ್ತು. ನಂತರದ ದಿನಗಳಲ್ಲಿ ಬಿ. ಸಿ. ರಾಮಚಂದ್ರ ಶರ್ಮ, ಯು. ಆರ್. ಅನಂತಮೂರ್ತಿ ಮೊದಲಾದ ನವ್ಯ ಲೇಖಕರು ಈ ತಂತ್ರವನ್ನು ಉಪಯೋಗಿಸಿಕೊಂಡು ಕತೆಗಳನ್ನು ಬರೆದರು. ಭಾರತೀಸುತರ ಸಾಹಿತ್ಯವನ್ನು ನವೋದಯ ಮತ್ತು ಪ್ರಗತಿಶೀಲ ಪಂಥದೊಂದಿಗೆ ಗುರುತಿಸುತ್ತಿದ್ದರೂ ಅವರ ಕತೆಗಳೊಳಗೆ ನವ್ಯದ ಬೀಜಗಳು ಇದ್ದವು ಎಂದು ವ್ಯಕ್ತವಾಗುತ್ತದೆ.
ಮಗುವೊಂದು ಪ್ರೌಢ ಜಗತ್ತಿನ ಮೇಲೆ ಮಾಡುವ ಆಘಾತಗಳನ್ನು ‘ಮಲಮಗನ ಕರೆ’ ಎಂಬ ಕತೆಯು ವಿವರಿಸುತ್ತದೆ. ಪ್ರೀತಿಸುವ ಗಂಡ ಮತ್ತು ಮುದ್ದು ಮಗನನ್ನು ಹೊಂದಿರುವ ಬೋಜುವಿನ ಹೊಸ ಸಂಸಾರವು ಸುಖಮಯವಾಗಿದ್ದರೂ ಅವಳು ದುಃಖಿತಳಾಗಿದ್ದಾಳೆ. ಸವತಿಯ ಮಗನಾದ ಡಾಲಿಯ ಪಾಲಿಗೆ ತಾನು ಕ್ರೂರಿಯಾದೆ ಎಂಬ ಭಾವನೆಯನ್ನು ಹತ್ತಿಕ್ಕಲು ಆಕೆಗೆ ಸಾಧ್ಯವಾಗುವುದಿಲ್ಲ. ಡಾಲಿಯನ್ನು ತನ್ನ ಮಗನಂತೆ ಪ್ರೀತಿಸುತ್ತಿದ್ದ ಆಕೆಗೆ ಮಗು ಹುಟ್ಟಿದಾಗ ಆತನು ಗೊಂದಲದಲ್ಲಿ ಬೀಳುತ್ತಾನೆ. ಅಸೂಯೆಯನ್ನು ತಾಳಲಾರದೆ ಮಗುವಿನ ಜೀವಕ್ಕೆ ಅಪಾಯವಾಗುವಂಥ ಉಪಟಳಗಳನ್ನು ನೀಡುತ್ತಾನೆ. ಮಗು ತನ್ನ ತಾಯಿಯಾದ ಬೋಜುವಿನ ಸಮಯ ಪ್ರಜ್ಞೆಯಿಂದ ಪಾರಾಗುತ್ತಿದ್ದರೂ ಅದರ ಪಾಲಿಗೆ ಡಾಲಿ ಕಂಟಕಪ್ರಾಯನಾಗುವುದರಲ್ಲಿ ಸಂದೇಹವಿಲ್ಲ ಎಂದರಿತ ಆಕೆಯು ಡಾಲಿಗೆ ವಿಷ ಉಣಿಸಿ ಕೊಲ್ಲುತ್ತಾಳೆ. ಬಳಿಕ ಆಕೆಯು ಡಾಲಿಯನ್ನೇ ಕನಸಿನಲ್ಲಿ ಕಂಡು ಮಾತನಾಡುವ ಕ್ರಿಯೆಯು ಆಕೆಯು ತೆರೆತೆರೆಯಾಗಿ ಅನುಭವಿಸುವ ಮಾನಸಿಕ ಸ್ಥಿತಿಯ ದಾಖಲೆಯಾಗಿದ್ದು ನಂತರದ ದಿನಗಳಲ್ಲಿ ಪಾಪಪ್ರಜ್ಞೆಯನ್ನು ತಾಳಲಾರದೆ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಕಾರಣವಾಗುವ ಭೂಮಿಕೆಯನ್ನು ಸಿದ್ಧಪಡಿಸುತ್ತದೆ. ಕನಸಿನ ಮೂಲಕ ತೆರೆದುಕೊಳ್ಳುವ ಕತೆಯು ಕನಸಿನಲ್ಲಿ ಮುಕ್ತಾಯವಾಗುತ್ತದೆ. ‘ನೀನು ಪುಟ್ಟನ ತಾಯಿ’ ಎಂಬ ಕತೆಯಲ್ಲಿ ಲೇಖಕರ ಹಿರಿಯ ಸಮಕಾಲೀನರಾದ ಆನಂದಕಂದರು ಈ ಸಮಸ್ಯೆಯನ್ನು ಮಲಮಗನ ಕಣ್ಣಿನಿಂದ ನೋಡಿದ್ದರು.
1940ರಲ್ಲಿ ಪ್ರಕಟವಾದ ‘ದೂರ ಹೋದಳು’ ಎಂಬ ನೀಳ್ಗತೆಯಲ್ಲಿ ಆಧುನಿಕತೆಯಿದೆ. ಆ ಕಾಲದಲ್ಲಿ ಅಂತರ್ಧರ್ಮೀಯ ವಿಚಾರದ ಬಗ್ಗೆ ಕತೆಯನ್ನು ಬರೆದ ಲೇಖಕರ ಧೈರ್ಯವನ್ನು ಮೆಚ್ಚಬೇಕಾಗಿದೆ. ಕ್ರೈಸ್ತ ಧರ್ಮಕ್ಕೆ ಸೇರಿದ ಲಿಲ್ಲಿಯು ಈ ಕತೆಯ ಕೇಂದ್ರವಾಗಿದ್ದಾಳೆ. ಅವಳ ಸಜ್ಜನಿಕೆ, ಸ್ವಾತಂತ್ರ್ಯ ಪ್ರೀತಿ, ಬ್ರಾಹ್ಮಣ ಜಾತಿಯವನಾದ ಬಾಲನೊಡನೆ ಬೆಳೆಸುವ ಪ್ರೇಮ, ಅವಳ ಸಂಪರ್ಕದಲ್ಲಿ ಬಾಲನಿಗೆ ಹುಟ್ಟುಕೊಂಡ ಹೊಸ ಬಯಕೆಗಳು, ಅದರಿಂದ ಎದ್ದೇಳುವ ನೈತಿಕ- ಧಾರ್ಮಿಕ ಸಮಸ್ಯೆ, ಅದಕ್ಕೆ ಅವಳು ಕಂಡುಕೊಳ್ಳುವ ಪರಿಹಾರ ಅತ್ಯಂತ ಸಹಜವಾಗಿ, ಸರಳವಾಗಿ ಮೂಡಿಬಂದಿವೆ. ಸಿರಿವಂತ ಮನೆತನಕ್ಕೆ ಸೇರಿದ ಲಿಲ್ಲಿಗೆ ಉದ್ಯೋಗಸ್ಥ ಅಣ್ಣನಾದ ಪೀಟರನ ಆಸರೆಯು ಇರುವುದರಿಂದ ಆಕೆಯು ಅಸಹಾಯಕಳಲ್ಲ. ಬಾಲನ ಸಂಪರ್ಕದಿಂದಾಗಿ ಆಕೆಯ ಬಾಳು ಸಮಸ್ಯಾತ್ಮಕವಾಗುತ್ತದೆ. ಅವಳು ಬಾಲನನ್ನು ಬಿಟ್ಟು ಹೋಗುವುದು ಸೋಲೆನಿಸಿದರೂ ಅದೊಂದು ನೈತಿಕ ಕ್ರಿಯೆಯೇ ಹೊರತು ಪಲಾಯನವಲ್ಲ. ಬೇರೆ ಸಾಂಸ್ಕøತಿಕ ಸಂದರ್ಭಗಳಲ್ಲಿ ಅವಳಿಗೆ ಹೆಚ್ಚಿನ ಆಯ್ಕೆಗಳು ಇರುತ್ತಿದ್ದವು. ಆದರೆ ಆ ಸಂದರ್ಭದಲ್ಲಿ ಅವಳು ಬದುಕಿದ್ದ ಸಮಾಜದಲ್ಲಿ ಆ ನಿರ್ಣಯವೇ ಸಾಧುವಾಗಿದೆ. ಚೆಲುವು, ಅಚ್ಚುಕಟ್ಟುತನ, ಪ್ರೀತಿಸುವ ಶಕ್ತಿ, ತನ್ನದಲ್ಲದ ಸಂಸಾರದ ನೋವು ತಲ್ಲಣಗಳನ್ನು ಅರಿತುಕೊಳ್ಳುವ ಸಾಮಥ್ರ್ಯ, ಆಳವಾದ ಭಾವನೆಗಳು ಮುಂತಾದ ಹೃದಯ ಶ್ರೀಮಂತಿಕೆಯಿದ್ದರೂ ಕ್ರೈಸ್ತ ಸಮುದಾಯಕ್ಕೆ ಸೇರಿದವಳೆಂಬ ಕಾರಣದಿಂದ ಬಾಲನ ಹೆತ್ತವರು ಆಕೆಯ ಪಾಲಿಗೆ ಬಾಗಿಲನ್ನು ಮುಚ್ಚುತ್ತಾರೆ. ಆಕೆ ಸ್ವಾರ್ಥಿಯಾಗಿದ್ದರೆ ಸುಖ ದೊರೆಯಬಹುದಿತ್ತು. ಆದರೆ ಅವಳು ಆ ಹಾದಿಯನ್ನು ಆಯ್ದುಕೊಳ್ಳುವುದಿಲ್ಲ. ಈ ನೈತಿಕ ಶಕ್ತಿಯು ಅವಳ ವ್ಯಕ್ತಿತ್ವಕ್ಕೆ ಗಟ್ಟಿತನವನ್ನು ಒದಗಿಸುತ್ತದೆ.
‘ನೀಲಿಯ ಪೇಂಟು’, ‘ಉಡಿಯಲ್ಲಿ ಕಟ್ಟಿಕೊಂಡ ಕೆಂಡ’, ‘ಚಿಂಬ ಹಿಡಿದ ಮೀನು’, ‘ಕೊಳಂಬನ ಉರಾಟಿ’ ಎಂಬ ಕತೆಗಳು ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದ ಭಿನ್ನ ನೆಲೆಗಳನ್ನು ಸ್ಪರ್ಶಿಸುತ್ತವೆ. ಸಾಮಾಜಿಕ ಚೌಕಟ್ಟಿನಿಂದ ಹೊರಗಿಟ್ಟು ಅರ್ಥಶೋಧನೆಯನ್ನು ಮಾಡುತ್ತವೆ. ‘ನೀಲಿಯ ಪೇಂಟು’ ಕತೆಯ ವಾಸಂತಿಗೆ ಸಾಹುಕಾರ ಸೋಮಣ್ಣನ ಜೊತೆ ಸಂಬಂಧವಿದೆ. ಆದರೆ ಆ ಅವಮಾನವನ್ನು ತಾಳಿಕೊಳ್ಳುವ ಗುಣ ಆಕೆಯ ಗಂಡ ಭೀಮುವಿಗೆ ಇಲ್ಲ. ಆತನು ಸೋಮಣ್ಣನೆದುರು ಗಟ್ಟಿ ದನಿಯಲ್ಲಿ ಪ್ರತಿಭಟಿಸಿದರೂ ಪ್ರಯೋಜನವಾಗುವುದಿಲ್ಲ. ಖಾಕಿ ಪ್ಯಾಂಟಿನ ಬದಲು ತಾನು ಧರಿಸಿದ ನೀಲಿ ಪ್ಯಾಂಟ್ ಸೋಮಣ್ಣನದ್ದೆಂದು ತಿಳಿಯುವುದು, ಅದರ ಜೇಬಿನಲ್ಲಿ ನೋಟುಗಳು ಸಿಗುವುದು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದರ ಸೂಚನೆಯಾಗಿದೆ. ಹಣದ ಆಸೆಗಾಗಿ ತನ್ನ ಹೆಂಡತಿಯು ಸೋಮಣ್ಣನನ್ನು ಒಪ್ಪಿಕೊಳ್ಳುವುದು ಆತನ ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ಇದು ಅವನ ಸೋಲಿನ, ವೈಫಲ್ಯದಲ್ಲಿ ಕೊನೆಗೊಳ್ಳುತ್ತದೆ. ನೋಟುಗಳನ್ನು ಬೆಂಕಿಗೆ ಎಸೆಯುವ ಮೂಲಕ ಆತನು ತನ್ನ ಪ್ರತಿಭಟನೆಯನ್ನು ಬೂದಿಗೊಳಿಸುವ ಕ್ರಿಯೆಯು ಕತೆಯಲ್ಲಿ ನಡೆಯುವ ದುರಂತವಾಗಿದೆ. ಇದೇ ವಸ್ತು ಮತ್ತು ಸನ್ನಿವೇಶಗಳನ್ನು ಭಾರತೀಸುತರ ನಂತರದ ತಲೆಮಾರಿಗೆ ಸೇರಿದ ದೇವನೂರು ಮಹಾದೇವರ ‘ಮಾರಿಕೊಂಡವರು’ ಎಂಬ ಕತೆಯಲ್ಲಿ ಕಾಣುತ್ತೇವೆ.
‘ನೀಲಿಯ ಪೇಂಟು’ ಕತೆಯಲ್ಲಿ ಮೇಲ್ವರ್ಗದ ವ್ಯಕ್ತಿಯು ಕೆಳವರ್ಗದ ಹೆಣ್ಣಿನೊಂದಿಗೆ ಸಂಬಂಧವನ್ನು ಇಟ್ಟುಕೊಂಡರೆ ‘ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ’ವು ಅದರ ವಿರುದ್ಧ ನೆಲೆಯಲ್ಲಿದೆ. ಆವುಲ್ಲ ಮೇಸ್ತ್ರಿಯ ಸೇವಕನಾದ ಕಾದರನು ಆತನ ಹೆಂಡತಿ ಮೆಹರಳ ಮಿಂಡನೂ ಹೌದು. ಇಜ್ಜೋಡು ದಾಂಪತ್ಯದ ಪರಿಣಾಮವಾಗಿ ಲೈಂಗಿಕ ಅತೃಪ್ತಿಯನ್ನು ಅನುಭವಿಸುತ್ತಿದ್ದ ಆಕೆಯು ಹರೆಯದ ಗಂಡು ಕಾದರನನ್ನು ಬಯಸಿದ್ದಲ್ಲಿ ಅಚ್ಚರಿಯಿಲ್ಲ. ಆದರೆ ಕಾದರನು ಆಕೆಯ ಸಂಗ ಮಾಡಲು ಒಪ್ಪದಿದ್ದಾಗ “ಮೇಸ್ತ್ರಿಯ ಪ್ರಾಯ ಐವತ್ತು ದಾಟಿದರೂ ಹೆಣ್ಣಿನ ಚಪಲ ತೀರದು. ತಂದೆಯ ಜೇಬಿಗೆ ದುಡ್ಡು ಸುರಿದು ನನ್ನನ್ನು ಎಳೆದುಕೊಂಡು ಬಂದ. ನನ್ನ ಮೋರೆ ನೋಡಿದವರ ಮೇಲೆಲ್ಲ ಸಂದೇಹ. ನೀನು ಹೆಡ್ಡ ಮತ್ತು ದಡ್ಡ ಎಂದು ಮೇಸ್ತ್ರಿ ಬಲ್ಲ. ತನ್ನ ಹೆಂಡತಿಯ ಮೇಲೆ ಯಾರೂ ಕಣ್ಣು ಹಾಕದಂತೆ ಆತನು ನಿನ್ನ ಕಾವಲಿರಿಸಿದ್ದಾನೆ. ನೀನು ಮಂತ್ರಿ ನೇಮಿಸಿದ ಕಾವಲುಗಾರ” (ಪುಟ 94) ಎಂಬ ನಯವಾದ ಮಾತುಗಳ ಮೂಲಕ ಆತನ ಮನಸ್ಸನ್ನು ಬದಲಿಸಿ ಆತನೊಂದಿಗೆ ಸುಖ ಪಡುತ್ತಾಳೆ. ಕಾದರನು ಮೆಹರಳ ಜೊತೆ ಹಾಸಿಗೆಯಲ್ಲಿದ್ದಾಗ ಮೇಸ್ತ್ರಿಯ ಕೈಗೆ ಸಿಕ್ಕಿಬಿದ್ದು, ಏಟು ತಿಂದು, ಆಸ್ಪತ್ರೆಯನ್ನು ಸೇರಬೇಕಾಗಿ ಬಂದರೂ, ನಂತರದ ದಿನಗಳಲ್ಲಿ ಆತನನ್ನು ಕಳ್ಳರಿಂದ ಕಾಪಾಡಿ, ಹಣದ ಸಹಿತ ಮೆಹರಳಿಗೆ ಒಪ್ಪಿಸುವ ಕ್ರಿಯೆಯು ಈ ಕತೆಯಲ್ಲಿ ನಡೆಯುವ ಮುಖ್ಯ ಘಟನೆಯಾಗಿದೆ. ಕಳ್ಳರ ದಾಳಿಗೆ ಒಳಗಾಗಿ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಯನ್ನು ಕಾಪಾಡುವ ಉದ್ದೇಶದಿಂದ, ಕಳ್ಳರನ್ನು ಒಬ್ಬಂಟಿಯಾಗಿ ಎದುರಿಸಿ, ಹೊಡೆದು, ಓಡಿಸಿ ಸಾಹಸವನ್ನು ಮೆರೆದ ಕಾದರನಿಗೆ ತಾನು ಕಾಪಾಡಿದ್ದು ಆವುಲ್ಲ ಮೇಸ್ತ್ರಿಯನ್ನು ಎಂದು ತಿಳಿದಾಗ ಆಘಾತವಾಗುತ್ತದೆ. ಮೇಸ್ತ್ರಿಯ ಹಣವನ್ನು ಕಂಡಾಗ ಆಸೆಯು ಕೆರಳುತ್ತದೆ. ಅದನ್ನು ಜೇಬಿಗಿಳಿಸಿ ತನ್ನ ಅಂತರಂಗದೊಡನೆ ಮಾತನಾಡುತ್ತಾ ನಡೆಯುವಾಗ ಅವನ ಮನಸ್ಸಿನ ದ್ವಂದ್ವ ಹೊರಗೆ ಬರುತ್ತದೆ.
“ನಾನು ಕಳ್ಳನಲ್ಲ. ನಾನು ಬರದಿದ್ದರೆ ಕಳ್ಳರು ಮೇಸ್ತ್ರಿಯನ್ನು ಸುಲಿಗೆ ಮಾಡಿಕೊಂಡು ಹೋಗುತ್ತಿದ್ದರು.”
“ಆ ಕಳ್ಳರು ಮಾಡುತ್ತಿದ್ದ ಕೆಲಸವನ್ನೇ ನೀನು ಮಾಡಿದೆ. ಕಲ್ಲಿಕೋಟೆಯ ಬೀದಿಗಳಲ್ಲಿ ಅಲೆಯುತ್ತಿದ್ದ ನಿನ್ನನ್ನು ಆವುಲ್ಲ ಕರೆತಂದ. ನಿನಗೊಂದು ಕೆಲಸಕೊಟ್ಟು ಮನೆಯಲ್ಲಿರಿಸಿಕೊಂಡು ಮಗನಂತೆ ಸಾಕಿದ. ನೀನು ಆತನ ಕೈಹಿಡಿದವಳನ್ನು ಅಡ್ಡಹಾದಿಗೆಳೆದೆ. ಈಗ ಅವನಿಗೆ ಜೇಲು ಕಾಣಿಸುತ್ತಿರುವೆ”
“ನಾನು ಆತನನ್ನು ಜೇಲಿಗೆಲ್ಲಿ ಅಟ್ಟುವೆನು?”
“ಕಳ್ಳರು ಸಾವಿರ ರೂಪಾಯಿಗಳನ್ನು ಸುಲಿಗೆ ಮಾಡಿದ ವಿಚಾರ ದೊರೆ ನಂಬಲೊಲ್ಲ. ಮೇಸ್ತ್ರಿ ಗಂಟನ್ನು ಎತ್ತಿಹಾಕಲು ಹೂಡಿದ ನಾಟಕವೆಂದೇ ಎಣಿಸುತ್ತಾರೆ. ದೊರೆ ದೂರು ಕೊಡುತ್ತಾನೆ. ಇಪ್ಪತ್ತು ವರ್ಷ ಮರ್ಯಾದೆಯಿಂದ ಕೆಲಸ ಮಾಡಿದ ಮೇಸ್ತ್ರಿ ಜೇಲು ಸೇರುತ್ತಾನೆ. ಕಾದರ ನೀನು ಕಳ್ಳ. ಅನ್ನ ಇಕ್ಕಿದ ಕೈಯನ್ನು ಕಡಿದ ಕೇಡಿಗ.” (ಪುಟ 99 – 100)
ಕಳ್ಳರೊಡನೆ ಹೋರಾಡಿ ಗೆದ್ದ ಏಕಾಂಗಿ ವೀರನು ಮನಸ್ಸಿನೊಡನೆ ನಡೆದ ಹೋರಾಟದಲ್ಲಿ ಸೋತು, ತನ್ನ ಅಂತರಂಗದ ಮುಂದೆ ಶರಣಾಗಿ, ಆವುಲ್ಲ ಮೇಸ್ತ್ರಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ. ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದಂತಾಯಿತು ಎಂಬ ಸಮಾಧಾನವೂ ಅವನಲ್ಲಿರಬಹುದು. ಪ್ರಜ್ಞೆ ಬಂದ ಬಳಿಕ ವಿಷಯವನ್ನು ತಿಳಿದ ಆವುಲ್ಲ ಮೇಸ್ತ್ರಿಯು ತನ್ನ ಹೆಂಡತಿ ಮತ್ತು ಕಾದರನ ಪಾಪವನ್ನು ಕ್ಷಮಿಸುತ್ತಾನೆ. ಪ್ರಕ್ಷುಬ್ಧಕರ ಸನ್ನಿವೇಶದಲ್ಲಿ ಮನುಷ್ಯರು ತಮ್ಮ ಮಾನವೀಯತೆಯನ್ನು ಉಳಿಸಿಕೊಂಡ ನಿದರ್ಶನಗಳು ಇಲ್ಲಿವೆ. ಕಾದರನ ಪರಿವರ್ತನೆಯು ಅನಿರೀಕ್ಷಿತವಾದರೆ ಆವುಲ್ಲನ ಕೃತಿಯು ನಿರೀಕ್ಷಿತವೇ ಆಗಿದೆ. “ಮೇಸ್ತ್ರಿ, ಇಂದಿಗೆ ಇಲ್ಲಿನ ನೀರಿನ ಋಣ ಮುಗಿಯಿತು. ಇನ್ನು ಮುಂದೆ ನಾನು ಈ ತೋಟದಲ್ಲಿರುವುದೇ ಆದರೆ ನೀನು ಉಡಿಯಲ್ಲಿ ಕೆಂಡ ಕಟ್ಟಿಕೊಂಡಂತೆ. ನಾನು ದೂರ, ಬಹುದೂರ ಹೋಗುವೆನು. ಅಪ್ಪಣೆ ಕೊಡು” (ಪುಟ 101) ಎನ್ನುವ ಮಾತಿನಲ್ಲಿ ಕಾದರನ ಪಶ್ಚಾತ್ತಾಪ, ಕೃತಜ್ಞತೆ, ಸ್ವಾಮಿನಿಷ್ಠೆ ಮತ್ತು ಕಾಮದ ಬಯಕೆಯನ್ನು ಹತ್ತಿಕ್ಕುವ ಸೂಚನೆಗಳನ್ನು ಕಾಣಬಹುದು. ಮೆಹರಳಿಂದ ಪಾರಾಗಲು ಆತನಿಗೆ ಬೇರೆ ದಾರಿಯಿಲ್ಲ. ತಂತ್ರದ ದೃಷ್ಟಿಯಿಂದ ಕತೆಯ ಸಂಕೀರ್ಣತೆ ಮತ್ತು ನಾಟಕೀಯತೆ ಗಮನಾರ್ಹವಾಗಿದೆ. ಕಾದರನ ಮಾನಸಿಕ ಹೊಯ್ದಾಟಗಳಲ್ಲಿ ಹಾದು ಹೋಗುವ ಭಾವನೆಗಳೂ ಸಂಕೀರ್ಣವಾಗಿವೆ.
ಕೇರಳದ ವಯನಾಡಿನ ಕಾಫಿ ತೋಟದಲ್ಲಿ ಹಲವು ವರ್ಷ ರೈಟರ್ ಆಗಿ ಕೆಲಸ ಮಾಡಿದ್ದ ಭಾರತೀಸುತರಿಗೆ ಕೊಡಗು, ವಯನಾಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಪ್ರದೇಶಕ್ಕೆ ಸೇರಿದ, ಜನಜೀವನದ ನಿಕಟ ಪರಿಚಯವಿತ್ತು. ಆ ಪ್ರದೇಶದ ಜನಸಾಮಾನ್ಯರ ಬದುಕನ್ನು ಹತ್ತಿರದಿಂದ ಕಂಡ ಅನುಭವವು ಅವರ ಕತೆಗಳ ವಸ್ತು ಪ್ರಪಂಚದ ಒಂದು ಪ್ರಮುಖ ಭಾಗವಾಗಿದೆ. ಆದ್ದರಿಂದ ಲೇಖಕರಿಗೆ ಅಲ್ಲಿನ ಸಾಮಾಜಿಕ ಭೌಗೋಳಿಕ ಪರಿಸರ, ಮುಸ್ಲಿಮರ ಸ್ಥಿತಿಗತಿಗಳ ಅರಿವು ಇರುವುದರಿಂದ ಮಲಯಾಳಂ ಭಾಷೆಯ ಮಹತ್ವದ ಲೇಖಕರಾದ ವೈಕ್ಕಂ ಮುಹಮ್ಮದ್ ಬಷೀರರಂಥವರು ಬರೆಯಬಹುದಾಗಿದ್ದ ಈ ಕತೆಯನ್ನು ಬರೆದಿರುವುದರಲ್ಲಿ ಅಚ್ಚರಿಯಿಲ್ಲ. ಮಲಯಾಳದ ಪ್ರಸಿದ್ಧ ಬರಹಗಾರರಾದ ಎಂ.ಟಿ. ವಾಸುದೇವನ್ ನಾಯರ್ ಕೂಡ ರೈಟರ್ ಆಗಿ ಕೆಲಸ ಮಾಡಿದವರು. ಅವರ ಹೆಚ್ಚಿನ ಕತೆ ಕಾದಂಬರಿಗಳು ನಾಯರ್ ತರವಾಡುಗಳ ಕಡೆ ಮುಖ ಮಾಡಿರುವುದರಿಂದ ವೃತ್ತಿಬದುಕಿನಲ್ಲಿ ಹಾಸು ಹೊಕ್ಕ ಇತರ ಜನವರ್ಗಗಳ ಅನುಭವಗಳನ್ನು ಕಾಣಲು ಸಾಧ್ಯವಾಗುವುದಿಲ್ಲ. ಆದರೆ ಭಾರತೀಸುತರು ವೈಯಕ್ತಿಕ ವಿಚಾರಗಳ ಸುತ್ತ ಗಿರಕಿ ಹೊಡೆಯದೆ ವಯನಾಡು, ಕಣ್ಣೂರು ಮತ್ತು ಮಲಪ್ಪುರಂ ಭಾಗದ ಕಾಫಿ ತೋಟಗಳಲ್ಲಿ ದುಡಿದು ಬದುಕುವ ಪಣಿಯರು ಮತ್ತು ಇತರ ಬುಡಕಟ್ಟು ವರ್ಗದ ಜನರ ಬದುಕು ಬವಣೆಗಳನ್ನು ಅಧ್ಯಯನ ಮಾಡಿ ಅವುಗಳನ್ನು ಸೊಗಸಾದ ಕತೆಗಳನ್ನಾಗಿಸಿದ್ದಾರೆ. ಶಿವರಾಮ ಕಾರಂತರ ‘ಚೋಮನ ದುಡಿ’ಯ ನಂತರ ದಲಿತ ಸಂವೇದನೆಯನ್ನು ದಲಿತೇತರನೊಬ್ಬ ವಿಶಿಷ್ಟವಾಗಿ ನೋಡುವ ಸಂದರ್ಭ ಲಂಕೇಶರ ‘ಮುಟ್ಟಿಸಿಕೊಂಡವನು’ ಎಂಬ ಕತೆಯಲ್ಲಿದೆ ಎಂದು ಅಭಿಪ್ರಾಯಪಟ್ಟ ವಿಮರ್ಶಕರು ಅದಕ್ಕಿಂತ ಮೊದಲು ಅಂಥ ಕತೆಗಳನ್ನು ಬರೆದ ಭಾರತೀಸುತರನ್ನು ಗುರುತಿಸದಿರುವುದು ವಿಷಾದನೀಯವಾಗಿದೆ.
‘ಚಿಂಬ ಹಿಡಿದ ಮೀನು’ ಕತೆಯ ಮಾಚಿಯು ಒಂದು ರೀತಿಯಲ್ಲಿ ಬಲಿಪಶುವೇ. ಸಹಜ ಬಯಕೆಯನ್ನು ಪೂರೈಸಲು ಸಾಧ್ಯವಿಲ್ಲದಿದ್ದರೂ ದೈಹಿಕ ಹಿಂಸೆಯನ್ನು ನೀಡುವ ಗಂಡ, ಅವನ ಮೇಲೆ ಮಾಚಿಯ ಅತೃಪ್ತಿ, ಪರಿಶುದ್ಧ ಪ್ರೀತಿಗಾಗಿ ಚಿಂಬನ ಕಡೆ ತುಡಿಯುವ ಅವಳ ಮನಸ್ಸು, ಸ್ತ್ರೀ ಸಹಜ ಬಯಕೆಗಳು, ಜೀವನಪ್ರೀತಿ ಮೊದಲಾದ ಅಂಶಗಳನ್ನು ಸೂಕ್ಷ್ಮವಾಗಿ ವಿವರಿಸುವಾಗ ಚಿಂಬ ಮತ್ತು ಮಾಚಿಯ ಪರ ಲೇಖಕರು ತೋರುವ ಸಹಾನುಭೂತಿ, ಸಮಾಜದ ಲಕ್ಷ್ಮಣ ರೇಖೆಯನ್ನು ದಾಟುವ ಅವರ ನಿರ್ಧಾರದ ಕುರಿತ ನಿರ್ಲಿಪ್ತತೆಯು ಗಮನ ಸೆಳೆಯುತ್ತದೆ. ಮಾಚಿಯು ವಿಷಮ ದಾಂಪತ್ಯಕ್ಕೆ ಬಲಿಯಾದರೂ ಅಸಹಾಯಕಳಲ್ಲ. ಆಕೆಯ ಕೈಬೆರಳಿಗೆ ಕಚ್ಚಿದ ಏಡಿಯನ್ನು ಚಿಂಬನು ಬಿಡಿಸುತ್ತಾನೆ. ರಸಿಕತನದ ಮಾತು, ಪ್ರೀತಿಯ ಸ್ಪರ್ಶ ಮತ್ತು ಚುಂಬನಗಳಿಂದ ಆಕೆಯ ಮನಸ್ಸನ್ನು ಗೆಲ್ಲುತ್ತಾನೆ. ಇನ್ನೊಬ್ಬನ ಹೆಂಡತಿಯಾದ ಆಕೆಯ ಮನಸ್ಸಿನಲ್ಲಿ ಭಯ, ಅಪರಾಧಿ ಪ್ರಜ್ಞೆ, ತಾರುಣ್ಯದ ಬಯಕೆಗಳು ತಾಕಲಾಡಿದರೂ ಅವನ ಪ್ರೀತಿಗೆ ಸ್ಪಂದಿಸದಿರಲು ಆಗುವುದಿಲ್ಲ. ಚಿಂಬನು ಕಿರುಬನ ಎದುರು ಸಿಕ್ಕಿಬಿದ್ದಾಗ ತಲ್ಲಣಿಸಿದ ಆಕೆಯು ತನ್ನ ಪ್ರಾಣವನ್ನು ಲೆಕ್ಕಿಸದೆ, ನದಿಯನ್ನು ಈಜಿ ಬಂದು ಆತನನ್ನು ಕಾಪಾಡುವಲ್ಲಿ ಆಕೆಯ ಪ್ರೇಮದ ತೀವ್ರತೆಯು ವ್ಯಕ್ತವಾಗುತ್ತದೆ. ಸ್ನೇಹಜೀವಿಗಳಾದ ಅವರಿಬ್ಬರೂ ತಮ್ಮ ಚೆಲುವು, ಅಚ್ಚುಕಟ್ಟುತನ, ಪ್ರೀತಿಸುವ ಶಕ್ತಿಯಿಂದಾಗಿ ಓದುಗರ ಮನಸ್ಸಿನಲ್ಲಿ ಸರಿಜೋಡಿಗಳಾಗಿ ಬೆಳಗುತ್ತಾರೆ. ಅವಳು ತನ್ನ ಗಂಡನನ್ನು ಬಿಟ್ಟು ಚಿಂಬನ ಜೊತೆ ಓಡಿಹೋದರೂ ಅದು ಆಕ್ಷೇಪಾರ್ಹವೆನಿಸದ ರೀತಿಯಲ್ಲಿ ಇಲ್ಲಿನ ಬರವಣಿಗೆಯಿದೆ. ಜನಪದ ವಾಸ್ತವವನ್ನು ಒಳಗೊಂಡು ಪರಿಪುಷ್ಟವಾಗಿರುವ ಈ ಕತೆಯಲ್ಲಿ ನೈತಿಕತೆ ಮತ್ತು ಅನೈತಿಕತೆಯ ನಡುವಿನ ಗೆರೆಯು ಅಳಿಸಿ ಹೋಗುವ ಕ್ಷಣವನ್ನು ಕಾಣುತ್ತೇವೆ.
ಇದೇ ವಸ್ತುವನ್ನು ಹೊಂದಿದ ‘ಕೊಳಂಬನ ಉರಾಟಿ’ಯು ಸುಖಮಯವಲ್ಲದ ಸಂಸಾರ, ಹಿಂಸಿಸುವ ಗಂಡ, ಪ್ರಿಯಕರನ ಮೇಲಿನ ಪ್ರೀತಿ, ಅವರ ನಡುವಿನ ಪ್ರಣಯ ಸನ್ನಿವೇಶ, ಆ ಸಹವಾಸದಲ್ಲಿ ದೊರೆಯುವ ಸುಖ, ಹೊಸ ಜೀವನವನ್ನು ನಡೆಸುವ ನೆಮ್ಮದಿ ಮುಂತಾದ ಭಾವನೆಗಳೊಂದಿಗೆ ಪಣಿಯರ ಬದುಕಿನ ರೀತಿನೀತಿಗಳೊಂದಿಗೆ ಜನಪದ ನಂಬಿಕೆ ಮತ್ತು ಸಂಸ್ಕøತಿ ಹಾಸುಹೊಕ್ಕಿರುವುದರಿಂದ ‘ಚೆಂಬ ಹಿಡಿದ ಮೀನು’ಗಿಂತ ಸಂಕೀರ್ಣವೆನಿಸಿಕೊಳ್ಳುತ್ತದೆ. “ಸಂಜೆಯಾಗಲು ಪಣಿಯ ಹುಡುಗರು ಹಾಡಿಯ ನಡುವೆ ಇರುವ ಅಂಗಳದಲ್ಲಿ ಕಟ್ಟಿಗೆ ತುಂಡುಗಳನ್ನು ತಂದು ಒಟ್ಟಿದರು. ಕಟ್ಟಿಗೆಯ ರಾಸಿಗೆ ಕಿಚ್ಚನ್ನಿಕ್ಕಿ ಕೈಗಳಲ್ಲಿ ದುಡಿಯನ್ನು ಎತ್ತಿಕೊಂಡರು. ಪಣಿಯ ಹೆಣ್ಣುಗಳು ಒಲೆಯನ್ನು ಉರಿಸಿ ಅನ್ನಕ್ಕೆ ಎಸರಿಕ್ಕಿ ನೆಲ್ಲನ್ನು ಒರಲಿಗೆ ಹಾಕಿ ಮಿದಿಯಲಾರಂಭಿಸಿದರು. ಉರಿವ ಬೆಂಕಿಯ ಸುತ್ತಲೂ ಕುಳಿತ ಕೆಲವು ಪಣಿಯರು ಕೊಳಲನ್ನೂದತೊಡಗಿದರು. ಇನ್ನು ಕೆಲವರು ದುಡಿಯನ್ನು ಬಾರಿಸಲಾರಂಭಿಸಿದರು. ದುಡಿಯ ಬಡಿತದ ತಾಳಕ್ಕೆ ತಕ್ಕಂತೆ ಪಣಚ್ಚಿಯರು ಕೊರಳೆತ್ತಿ ಹಾಡತೊಡಗಿದರು. ದುಡಿಗಳ ಬಡಿತ, ಕೊರಳ ಉಲಿತ, ಹಾಡು ಗಾಳಿಯಲ್ಲಿ ತುಂಬಿಕೊಂಡವು. ದುಡಿಯ ಬಡಿತದ ವೇಗ ಹೆಚ್ಚಿದಂತೆ ಹಾಡುಗಳ ಗತಿ ತೀವ್ರಗೊಂಡಿತು. ಸ್ವರ ತಾರಕಕ್ಕೇರಲು ದುಡಿ ಬಡಿವವರ ಉತ್ಸಾಹ ಹೆಚ್ಚಿತು.” (ಪುಟ 160) ಇಲ್ಲಿ ಪಣಿಯರ ಸಂಸ್ಕøತಿ ಮತ್ತು ಪ್ರಾದೇಶಿಕತೆಯ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಆದರೆ ಅವರ ಬದುಕಿನ ಚೆಲುವಿನ ಜೊತೆಗೆ ಅದರ ಕುರೂಪವೂ ದಾಖಲಾಗಿದೆ. ಪ್ರತಿ ತಿಂಗಳೂ ಇತರ ಹೆಂಗಸರ ಜೊತೆಯಲ್ಲಿ ಸುಖಿಸುತ್ತಿದ್ದು, ಕೊಳಂಬನೊಡನೆ ಮಾತನಾಡಿದ ಹೆಂಡತಿ ನಂಜಿಯನ್ನು ಅಮಾನುಷವಾಗಿ ಹಿಂಸಿಸುವ ಮಾದನು ಪುರುಷ ಪ್ರಧಾನ ಸಮಾಜದ ಕ್ರೌರ್ಯದ ಸಂಕೇತವಾಗಿದ್ದಾನೆ. ಮಾದನ ಈ ಧೋರಣೆಯು ನಂಜಿಗೆ ಅವನ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿದರೆ ಕೊಳಂಬನಿಗೆ ನಂಜಿಯ ಮೇಲೆ ಅನುಕಂಪ ಬೆರೆತ ಪ್ರೀತಿ ಹುಟ್ಟಲು ಕಾರಣವಾಗುತ್ತದೆ. ಮಾದನು ನಂಜಿಗೆ ಹೊಡೆಯುವ ಸಂದರ್ಭಲ್ಲಿ ಕೊಳಂಬನಿಗೆ ಆತನ ಬಲಿಷ್ಠ ದೇಹದಲ್ಲಿರುವ ಶಕ್ತಿಯ ಅರಿವಿದ್ದೂ ಆತನನ್ನು ತಿವಿದು ಘಾಸಿಗೊಳಿಸುವಲ್ಲಿ ಆ ಭಾವನೆಯು ವ್ಯಕ್ತವಾಗುತ್ತದೆ. ಗಂಡಹೆಂಡಿರ ಸಂಸಾರದ ನಡುವೆ ತಲೆಹಾಕಿದ ತಪ್ಪಿಗಾಗಿ ಪಂಚಾಯತಿ ಕೂಟವು ದಂಡವನ್ನು ವಿಧಿಸಿ ‘ಉರಾಳ(ಗಂಡ) ನನ್ನು ಕಟ್ಟಿಕೊಂಡ ಹೆಣ್ಣಿನ ಹಿಂದೆ ಓಡಾಡುವುದು ಸರಿಯಲ್ಲ’ ಎಂದು ಎಚ್ಚರಿಸುವಲ್ಲಿ ನೈತಿಕ ಮತ್ತು ಅನೈತಿಕತೆಯ ನಡುವಿನ ತಿಕ್ಕಾಟದ ಸ್ವರೂಪವು ಸ್ಪಷ್ಟವಾಗುತ್ತದೆ. ಆಮೇಲೆ ಕೊಳಂಬನು ಆಕೆಗೆ ಎದುರಾಗದಿದ್ದರೂ ಆತನ ಜೀವ ಆಕೆಯ ಸುತ್ತ ಸುಳಿದಾಡುತ್ತದೆ. ಒಂಟಿಕೊಂಬಿನ ಆನೆಯ ತಿವಿತಕ್ಕೊಳಗಾಗಿ ಮಾದನು ಸತ್ತ ಬಳಿಕ ಆತನು ನಂಜಿಯನ್ನು ಕೂಡಿಕೆ ಮಾಡಿಕೊಳ್ಳುತ್ತಾನೆ. ಹಳ್ಳಿಯ ಜನರು ಕೆಟ್ಟ ಕೆಲಸ ಮತ್ತು ಪಾಪಕಾರ್ಯಗಳನ್ನು ಮಾಡಿದಾಗ ತ್ವಕ್ಕೆಪಟ್ಟ ದೇವರು ಅವರನ್ನು ದಂಡಿಸಲು ಒಂಟಿಕೊಂಬಿನಿಂದ ಆನೆಯನ್ನು ಕಳುಹಿಸುವನೆಂಬ ನಂಬಿಕೆಯನ್ನು ಆಕೆಗೆ ನೆನಪಿಸಿ “ಅಂದಿನ ರಾತ್ರಿ ತ್ವಕ್ಕೆಪಟ್ಟ ಅಪ್ಪನೇ ಹುಲಿಯ ರೂಪ ತಾಳಿ ಗರ್ಜಿಸುತ್ತಿರುವನೆಂದು ತೋರಿತು. ನೀನು ನನ್ನ ಉರಾಟಿ (ಹೆಂಡತಿ) ಆಗಲಿಲ್ಲ ಎಂಬ ನೋವು ನನ್ನ ಕೊರಳು ಹಿಚುಕುತ್ತಿತ್ತು. ನೀನು ನನ್ನ ಉರಾಟಿಯಾಗುವುದಾದರೆ ತ್ವಕ್ಕೆಪಟ್ಟ ಅಪ್ಪನಿಗೆ ಜೋಡು ಹಣ್ಣು ಕಾಯಿ ಮಾಡಿಸುತ್ತೇನೆಂದು ಹರಕೆ ಹೊತ್ತೆ.” (ಪುಟ 170) ಎಂದರೆ ನಂಜಿಯು “ನನ್ನನ್ನು ಮಾದನ ಸೆರೆಯಿಂದ ಬಿಡುಗಡೆ ಮಾಡಿ ನಿನ್ನ ಉರಾಟಿಯಾಗುವ ಭಾಗ್ಯವನ್ನು ಕರುಣಿಸಿದರೆ ತ್ವಕ್ಕೆಪ್ಪಾಟು ಅಪ್ಪನಿಗೆ ಜೋಡು ಹಣ್ಣುಕಾಯಿ ಮಾಡಿಸುವೆನೆಂದು ನಾನೂ ಹರಕೆ ಹೊತ್ತಿದ್ದೆ” (ಪುಟ 170) ಎನ್ನುವ ಮೂಲಕ ಅವರ ಭಾವಸಾಮ್ಯತೆಯನ್ನು ಪ್ರಕಟಪಡಿಸಿ, ಕೂಡಿಕೆಯನ್ನು ಸಮರ್ಥಿಸುವ ಉದ್ದೇಶವು ಸಫಲವಾಗುತ್ತದೆ. ಇಲ್ಲಿನ ಪಾತ್ರಗಳು ಶಿಷ್ಟ ಭಾಷೆಯ ಬದಲು ಆಡುನುಡಿಯಲ್ಲಿ ಮಾತನಾಡುತ್ತಿದ್ದರೆ ಕತೆಗಳ ಸೊಗಸು ಇನ್ನಷ್ಟು ಹೆಚ್ಚುತ್ತಿತ್ತು.
ಹೊಸ ಪ್ರಜ್ಞೆಯ ಪ್ರವೇಶದಿಂದಾಗಿ ಸ್ಥಿರವೆಂದು ತೋರುವ ಜೀವನಕ್ರಮಗಳಲ್ಲಿ ಕಾಣಿಸಿಕೊಳ್ಳುವ ಪಲ್ಲಟಗಳು, ತನ್ನದೇ ಆದ ನಂಬಿಕೆ-ರೀತಿನೀತಿ – ಮೌಲ್ಯ ವ್ಯವಸ್ಥೆಗಳ ಮೂಲಕ ಬದುಕುತ್ತಿದ್ದ ಸಮಾಜವು ಶಿಕ್ಷಣ, ಧರ್ಮ, ಆಡಳಿತಗಳ ಮೂಲಕ ಹೊಸ ಜೀವನ ಶೈಲಿಯೆಡೆಗೆ ತೆರೆದುಕೊಂಡಾಗ ಅವುಗಳ ಪ್ರಭಾವ ಒತ್ತಡಗಳಿಂದ ಕಂಪಿಸುವುದು ಸಹಜವಾದರೂ ಹೊಸ ಕಾಲದ ಇತಿಹಾಸವು ಜಾತಿ ಸಮುದಾಯಗಳ ಮೇಲೆ ಪರಿಣಾಮವನ್ನು ಬೀರುವಂತೆ ಈ ಸಮುದಾಯಗಳೊಳಗಿನ ಪಲ್ಲಟಗಳು ನಾಡಿನ ಹೊಸ ಇತಿಹಾಸಕ್ಕೆ ತನ್ನದೇ ಆದ ಕಾಣಿಕೆಯನ್ನೂ ನೀಡುತ್ತವೆ. ಇವುಗಳಿಗೆ ಯಾವನೋ ಒಬ್ಬ ವ್ಯಕ್ತಿ ಅಥವಾ ಒಂದು ಅಂಶ ನಿರ್ದಿಷ್ಟ ಕಾರಣವಾಗುವ ಸಾಧ್ಯತೆ ಇರುವುದರಿಂದ ಅದಕ್ಕೆ ಸಂಬಂಧಿಸಿದ ಪ್ರಭಾವ ಪ್ರೇರಣೆಗಳನ್ನು ಕೆಲವು ವ್ಯಕ್ತಿಗಳಲ್ಲಿ ಘನೀಕರಿಸಿ ನೋಡಿದರೆ ತಪ್ಪಾಗಲಾರದು. ಆದ್ದರಿಂದ ಗಾಂಧೀಜಿಯವರು ಕೇವಲ ವ್ಯಕ್ತಿಯಾಗಿರದೆ, ಹೊಸ ವಿದ್ಯಮಾನ, ಬದಲಾವಣೆ ಮತ್ತು ಆಶೋತ್ತರಗಳ ಪ್ರತೀಕವಾಗುತ್ತಾರೆ. ತನ್ನದೇ ಆದ ಕಟ್ಟುಕಟ್ಟಳೆಗಳ ಮೂಲಕ ಬದುಕುತ್ತಿದ್ದ ಕುಡುಕನೊಬ್ಬನು ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತನಾಗಿ ಮಾನಸಿಕ ಬದಲಾವಣೆಗೆ ಒಳಗಾಗುವುದನ್ನು ವಸ್ತುವನ್ನಾಗಿಸಿಕೊಂಡ ‘ಕುಡುಕನ ಕೊಡುಗೆ’ಯು ತನ್ನದೇ ಆದ ವಿಶೇಷತೆಗಳಿಂದ ಕಂಗೊಳಿಸುತ್ತದೆ. ತನ್ನ ಹೆಂಡತಿಯನ್ನು ಇಟ್ಟುಕೊಂಡ ಪ್ಲಾಂಟರ್ ಸಣ್ಣಯ್ಯನನ್ನು ಇರಿದು ಬೀಳಿಸಿದ ವೀರಣ್ಣನು ಆರಕ್ಷಕರ ಮುಂದೆ ಶರಣಾಗುತ್ತಾನೆ. ಆದರೆ ಸಣ್ಣಯ್ಯನು ಬದುಕುಳಿದುದರಿಂದ ಆರು ವರ್ಷಗಳ ಕಾಲ ಕಣ್ಣೂರಿನ ಸೆರೆಮನೆಯಲ್ಲಿದ್ದು ಹೊರಗೆ ಬರುತ್ತಾನೆ. ಆಗ ಎರಡನೇ ಲೋಕ ಮಹಾಯುದ್ಧದ ಕಾಲ. ಆಹಾರ ಸಾಮಾಗ್ರಿಗಳ ಕ್ಷಾಮವು ತಲೆದೋರಿದ್ದರಿಂದ ಆಂಗ್ಲರ ಸರಕಾರವು ಹೇರಿದ ನಿಯಂತ್ರಣ ಕಾಯಿದೆಯ ಕಣ್ಣು ತಪ್ಪಿಸಿ ಹಣವನ್ನು ಗಳಿಸಲು ಹೊಂಚು ಹಾಕುತ್ತಿದ್ದ ಸಿದ್ಧಪ್ಪಸೆಟ್ಟರ ಸಹಾಯಕನಾಗಿ ಸೇರಿಕೊಂಡ ವೀರಣ್ಣನು ಬೆಲ್ಲ, ಸಕ್ಕರೆ, ಬೇಳೆಗಳನ್ನು ದೋಣಿಯ ಮೂಲಕ ಕೊಡಗಿಗೆ ಸಾಗಿಸಿ ಅವರಿಗೆ ಲಾಭವನ್ನು ಉಂಟುಮಾಡುವುದರೊಂದಿಗೆ ಪ್ರತಿಯೊಂದು ಮೂಟೆಗೂ ನಿಗದಿತ ಮೊತ್ತವನ್ನು ಪಡೆದು ಕೈತುಂಬಾ ಸಂಪಾದಿಸುತ್ತಾನೆ. ಹೆಣ್ಣು ಹೆಂಡಗಳಿಗಾಗಿ ರೊಕ್ಕವನ್ನು ಖರ್ಚುಮಾಡಿ ಹೆಂಡತಿಯನ್ನು ಕಳೆದುಕೊಂಡ ನೋವನ್ನು ಮರೆಯಲು ಯತ್ನಿಸುತ್ತಾನೆ. ಆ ವೇಳೆಯಲ್ಲಿ ಆರಕ್ಷಕರಿಂದ ತಪ್ಪಿಸಿಕೊಂಡ ಇಬ್ಬರು ಸ್ವಾತಂತ್ರ್ಯ ಹೋರಾಟಗಾರ್ತಿಯರು ಅವನ ಮನೆಯಲ್ಲಿ ಆಸರೆಯನ್ನು ಪಡೆಯುತ್ತಾರೆ. ಅವರ ಪೈಕಿ ಒಬ್ಬಳು ತನ್ನ ಹೆಂಡತಿಯನ್ನು ಕೆಡಿಸಿದ ಸಣ್ಣಯ್ಯನ ಮಗಳು ಎಂದು ಅವನಿಗೆ ತಿಳಿದಾಗ ಆಕೆಯನ್ನು ಕೆಡಿಸಿ ಸೇಡು ತೀರಿಸುವ ಯೋಚನೆಯು ಮೂಡುತ್ತದೆ. ಆದರೆ ಅವರು ಗಾಂಧೀ ಜನ ಎಂದು ತಿಳಿದಾಗ ಅವನ ಮನಸ್ಸು ಬದಲಾಗುತ್ತದೆ. ಯಾಕೆಂದರೆ ತಮ್ಮ ಆದರ್ಶಗಳನ್ನು ಹರಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರಿಂದಾಗಿ ಗಾಂಧೀಜಿಯವರು ಎಲ್ಲರ ಪಾಲಿಗೂ ದೇವರೆನಿಸಿಕೊಂಡಿದ್ದರು. ವೀರಣ್ಣನಂಥ ಕಳ್ಳಸಾಗಣೆದಾರನ ಮನಸ್ಸಿನೊಳಗೂ ಅಷ್ಟಿಷ್ಟು ಇಳಿಯುವ ಮೂಲಕ ಗಾಂಧಿ ಎಂಬ ಚೇತನವು ತನ್ನ ಪ್ರಭಾವವನ್ನು ಬೀರಿತ್ತು. ಆಯುಧಗಳಿಲ್ಲದೆ ಹೆಣ್ಣು ಗಂಡು ಮಕ್ಕಳ ದಂಡು ಕಟ್ಟಿ ಬ್ರಿಟಿಷರನ್ನು ಎದುರಿಸಲು ಹೊರಟ ಗಾಂಧಿಯು ಮಡಿಕೇರಿಗೆ ಬಂದಿದ್ದಾಗ ಅವರ ಪಾದಕ್ಕೆರಗಿ ಹಣದ ರೂಪದ ಕಾಣಿಕೆ ಒಪ್ಪಿಸಿದ್ದ ವೀರಣ್ಣನಿಗೆ ಅವರ ಮೇಲೆ ಭಕ್ತಿ ಗೌರವಗಳಿದ್ದವು.
“ಮಹಾತ್ಮ, ನಾನು ನಿನ್ನ ದಯೆಗೆ ತಕ್ಕವನಲ್ಲದ ಪಾಪಿ. ನೀನು ಕಳ್ಳು ಕುಡಿಯಬಾರದೆಂದೆ. ಕಳ್ಳಿಲ್ಲದೆ ನನ್ನ ಬಾಳ್ವೆ ಸಾಗೋದಿಲ್ಲ. ಆದರೂ ನಿನ್ನ ಮುಂದೆ ಕುಡಿಯೋದಿಲ್ಲ. ನನ್ನ ಹಗೆಯ ಮಗಳು ನನ್ನ ಮನೆಯ ಮಾಡಿಗೆ ಬಂದು ನಿಂತಿದ್ದಾಳೆ. ಸೇಡಿಗೋಸ್ಕರ ನನ್ನ ಜೀವ ಕಾತರಿಸುತ್ತದೆ. ಏನು ಮಾಡಬೇಕೆಂದು ಹೇಳು.”
ವೀರಣ್ಣ ತಲೆಯೆತ್ತಿ ನೋಡಿದ. ಭಾವಚಿತ್ರದಲ್ಲಿದ್ದ ಗಾಂಧೀಜಿಯ ಕಣ್ಣುಗಳು ಅವನನ್ನೇ ನಿಟ್ಟಿಸಿ ನೋಡುತ್ತಿದ್ದವು.
“ಏನು ಮಾಡಲಿ ದೊರೆ?” ಆರ್ತ ಸ್ವರದಲ್ಲಿ ಕೇಳಿದ ವೀರಣ್ಣ.
“ಅಹಿಂಸೆ, ತಾಳ್ಮೆ. ಕೊನೆಯಿಲ್ಲದ ತಾಳ್ಮೆ” ಎಂಬ ನುಡಿಗಳು ಕಿವಿಯಲ್ಲಿ ಮಾರುಲಿದವು. (ಪುಟ 192)
ಆ ಬಳಿಕ ಅವನು ಸ್ವಾತಂತ್ರ್ಯ ಹೋರಾಟಗಾರ್ತಿಯರನ್ನು ದೋಣಿಯ ಮೂಲಕ ಪಾರುಮಾಡಿ, ಸ್ವಾತಂತ್ರ್ಯ ಹೋರಾಟದ ನಿಧಿಗೆ ಧನ ಸಹಾಯವನ್ನು ಮಾಡುತ್ತಾನೆ. ಮನಸ್ಸಿನ ದೌರ್ಬಲ್ಯಗಳ ಸಂಕೇತವಾದ ಕೋಪ – ದ್ವೇಷ, ರೋಷ – ಆವೇಶಗಳು ಗಾಂಧಿಯ ಅದೃಶ್ಯ ಸಾನ್ನಿಧ್ಯದಲ್ಲಿ ಅನುಕಂಪ, ಔದಾರ್ಯ, ತಾಳ್ಮೆ ಮತ್ತು ಅಹಿಂಸೆಯ ರೂಪವನ್ನು ತಾಳುತ್ತವೆ. ಈ ಬದಲಾವಣೆಗೆ ವೈಯಕ್ತಿಕ ಸ್ಪರ್ಶವಿರುವಂತೆ ಗಾಂಧಿ ಪ್ರಭಾವದ ಲೇಪವಿದೆ. ಕತೆಯೊಳಗಿನಿಂದ ಹೊರಡುವ ತಾತ್ವಿಕತೆಯು ಶ್ರೇಷ್ಠ ಮಟ್ಟದ್ದಾಗಿದೆ.
ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರೂ ಸೇರಿದಂತೆ ಮೇಲ್ಜಾತಿಯವರಿಂದ ಹಿಡಿದು ಕೆಳವರ್ಗದವರೆಗೆ ಚಾಚಿಕೊಂಡಿರುವ ಸಮುದಾಯದಲ್ಲಿ ಎಲ್ಲ ಜಾತಿಯವರು ಪರಸ್ಪರ ಭಿನ್ನವಾಗಿದ್ದೂ ಒಂದನ್ನೊಂದು ಅವಲಂಬಿಸಿ ಬದುಕುತ್ತಿರುವ ಸಂಕೀರ್ಣ ವಿನ್ಯಾಸವನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಪ್ರೀತಿ – ದ್ವೇಷಗಳ ಸಂಬಂಧದಲ್ಲಿ ಬದುಕುವವರ ದೈನಂದಿನ ಬದುಕಿನ ಸುಖದುಃಖಗಳನ್ನು, ಇಕ್ಕಟ್ಟು ಬಿಕ್ಕಟ್ಟುಗಳನ್ನು ಆಪ್ತವಾಗಿ ನಿರೂಪಿಸುತ್ತಾರೆ. ಎಲ್ಲ ಕಡೆ ಇರುವಂಥ ಮನುಷ್ಯನ ಸಣ್ಣತನಗಳು, ಕ್ಷುದ್ರ ಸ್ವಾರ್ಥಗಳು, ಮೋಸ ಕುಟಿಲತೆಗಳನ್ನು ಮೀರಿದರೂ ಜಾತಿ, ಮತ, ವರ್ಗಗಳ ಇಕ್ಕಟ್ಟುಗಳನ್ನು ಒಪ್ಪಿಕೊಂಡು ಉತ್ಕಟವಾದ ಮಾನವೀಯ ಸಂಬಂಧವನ್ನು ಸಾಧ್ಯವಾಗಿಸುವ ಮಾದರಿಗಳು ಇಲ್ಲಿವೆ. ನಾಗರಿಕರ ಕಣ್ಣುಗಳಿಗೆ ಅಷ್ಟೇನೂ ತೆರೆದುಕೊಳ್ಳದ ಸಮುದಾಯಗಳ ಅನುಭವಗಳ ಹಿನ್ನೆಲೆಯಲ್ಲಿ ಜೀವ ತಳೆದಿರುವ ಕತೆಗಳು ಮೇಲ್ನೋಟಕ್ಕೆ ಸರಳೀಕರಣದಂತೆ ಕಂಡರೂ ಮುಖ್ಯವಾಹಿನಿಯಿಂದ ಆಚೆಗೆ ಉಳಿದು ನಲುಗಿರುವ ಸಮುದಾಯವೊಂದರ ದನಿಯಾಗಿ ಈ ಕತೆಗಳನ್ನು ಗುರುತಿಸಿದಾಗ ಅಂಥವರ ಬದುಕನ್ನು ಬೆಳಕಿಗೆ ತರುವ ಲೇಖಕರ ಹಂಬಲ, ಕತೆಗಳ ಆಳದಲ್ಲಿರುವ ಜೀವನಪ್ರೀತಿ ವ್ಯಕ್ತವಾಗುತ್ತದೆ. ಚಿಂಬ – ಮಾದಿ, ಕೊಳಂಬ – ನಂಜಿಯರ ಸಮಾಗಮವು ಅವರ ಸಾಹಸದ ನೆಲೆಯಲ್ಲಿ, ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ನೆರವೇರುತ್ತದೆ. ಸಮುದಾಯದ ಸಂಪ್ರದಾಯದೊಳಗೆ ಹುದುಗಿರುವ ಭಿನ್ನಮತ, ಕ್ರೌರ್ಯ, ಶೋಷಣೆಗಳ ನಡುವೆಯೂ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಕಾಣದ ಮಾನವೀಯ ಸಂಬಂಧವು ಕಾಣಲು ಸಿಗುತ್ತದೆ. ಸಾಮಾಜಿಕ ಬದುಕಿನಲ್ಲಿ ಅವರ ಸ್ಥಾನಮಾನಗಳು ಜಾತಿ, ಲಿಂಗ, ವರ್ಗಗಳನ್ನು ಆಧರಿಸಿ ನಿರ್ಧರಿತವಾಗಿದ್ದರೂ ಒಂದು ಸಮುದಾಯವಾಗಿ ಅವರಿಗೆ ಅಸ್ತಿತ್ವವಿದೆ. ಸಂಭ್ರಮದ ಜೊತೆ ಅತೃಪ್ತಿ, ಶೋಷಣೆಯ ಜೊತೆ ಒಳಬಂಡಾಯಗಳಿವೆ. ತೀರ ಸಾಮಾನ್ಯ ವ್ಯಕ್ತಿಗಳು ತೋರುವ ಮನೋವಿಕಾಸದ ಸಾಧ್ಯತೆಗಳು ಮುಖ್ಯವಾಗುತ್ತವೆ. ಭಾರತೀಸುತರ ಕತೆ ಕಾದಂಬರಿಗಳಲ್ಲಿ ಕೊಡಗು – ವಯನಾಡು ಭಾಗದ ಜನಜೀವನ, ಸಮಾಜ ಮತ್ತು ಸಂಸ್ಕøತಿಯ ದಟ್ಟ ಚಿತ್ರಣವನ್ನು ಕಾಣಬಹುದು. ಕನ್ನಡ ಕಥನ ಸಾಹಿತ್ಯದಲ್ಲಿ ಮೊತ್ತಮೊದಲ ಬಾರಿಗೆ ಕೊಡಗಿನ ಸಂಸ್ಕೃತಿಯನ್ನು ಪರಿಚಯಿಸಿದ ಹಿರಿಮೆಯು ಭಾರತೀಸುತರಿಗೆ ಸಲ್ಲುತ್ತದೆ.
2 thoughts on “ಭಾರತೀಸುತ ಅವರ ಕತೆಗಳು”
ನಮಸ್ಕಾರ, ತಮ್ಮ ಲೇಖನ ಚೆನ್ನಾಗಿದೆ,ಭಾರತೀಸುತರ ಸಾಹಿತ್ಯದ ಅವಲೋಕನ ಮೂಲಕ ಶುಭೋದಯವಾಗಿದೆ.ಭಾರತೀಸುತರ ಮಗಳು ಮತ್ತು ಅಳಿಯ ಶಿರಸಿಯಲ್ಲಿ ತಮ್ಮ ಜೀವನ ಸಂಧ್ಯೆಯಲ್ಲಿದ್ದಾರೆ.
ಭಾರತೀಸುತರ ಕತೆಗಳ ವೈಶಿಷ್ಟ್ಯ ಗಳನ್ನು ಸವಿವರವಾಗಿ ವಿಶ್ಲೇಷಿಸಿದ ನಿಮಗೆ ಅಭಿನಂದನೆ ಗಳು ಸುಭಾಷ್.