ಹಾಸ್ಯ/ವಿಡಂಬನೆ ಲೇಖನ
ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ನಗರದ ನಾಲ್ಕು ಪ್ರತಿಷ್ಠಿತ ಇಂಗ್ಲಿಷ್ ಕಾನ್ವೆಂಟ್ ಗಳ ಸಂಸ್ಥಾಪಕ ಅಧ್ಯಕ್ಷ ಗುಂಡಣ್ಣ ಬಾಳೆಕಾಯಿ ದೊಡ್ಡ ಸಾಹಿತ್ಯ ಪ್ರೇಮಿ ಎಂದು ಊರಿಗೆ ಗೊತ್ತಾಗಿದ್ದು ಅವರ ತಂದೆ ದಿವಂಗತ ನುಂಗಣ್ಣ ಬಾಳೆಕಾಯಿ ಅವರ ಹತ್ತನೆಯ ಪುಣ್ಯ ತಿಥಿ ಸ್ಮರಣಾರ್ಥ ಜಿಲ್ಲಾ ಮಟ್ಟದ ಭರ್ಜರಿ ಕವಿಗೋಷ್ಠಿಯ ಸಮ್ಮೇಳನ ಆಯೋಜಿಸಿದಾಗಲೇ… ದಿವಂಗತ ನುಂಗಣ್ಣ ಬಾಳೆಕಾಯಿ ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಊರಿನ ಆಯಕಟ್ಟಿನ ಜಾಗಗಳನ್ನು ನುಂಗಿದ್ದರಿಂದಲೇ ಅವರಿಗೆ ಆ ಹೆಸರು ಶಾಶ್ವತವಾಗಿ ಉಳಿಯಿತು ಎಂಬ ಆಪಾದನೆ ಸತ್ಯಕ್ಕೆ ದೂರವಾದದ್ದು ಅಲ್ಲವೇ ಅಲ್ಲ! ಕನ್ನಡಿಗರ ಸೌಭಾ(ದೌರ್ಭಾ)ಗ್ಯದ ವಿಷಯವೆಂದರೆ ಅವರು ಒಂದು ಕಾಲದ ಪ್ರ(ಕು)ಖ್ಯಾತ ಕವಿಯೂ ಹೌದು!. ಕನ್ನಡ ತಾಯಿ ಭುವನೇಶ್ವರಿಯ ಸೇವೆಗೈಯುತ್ತಾ ನಿರಂತರವಾಗಿ ಅವರು ಸ್ವಯಂ ರಚಿಸಿದ ಸಾವಿರಾರು ಕವನಗಳು ಕಾಲ ಗರ್ಭ(ಅಪ್ರಕಟಿತ!)ದಲ್ಲಿ ಹುದುಗಿ ಹೋಗಿದ್ದನ್ನು ಮಹಾ ಕವಿಗಳ ಶೋಚನೀಯ ನಿಧನದ ನಂತರ ಅವರ ಸುಪುತ್ರ ಗುಂಡಣ್ಣ ಬಾಳೆಕಾಯಿ ‘ ಅಗೆದು ‘ ಹೊರ ತೆಗೆದು ವರ್ಷಕ್ಕೊಮ್ಮೆ ಅವರ ಸ್ಮರಣಾರ್ಥ ಕವನ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಪ್ರೇಮಿಗಳ ಮುಖ್ಯವಾಗಿ ಕವಿಗಳ ಮನಸನ್ನು ಸೂರೆಗೊಳ್ಳಲು (ಹಿಂಸಿಸಲು!) ಶುರುವಿಟ್ಟುಕೊಂಡ. ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆಂದು ನಿರೂಪಿಸಲು ಗುಂಡಣ್ಣ ಬಾಳೆಕಾಯಿ ತಾನೂ ಸಹಾ ಮೊಬೈಲ್/ಲ್ಯಾಪ್ ಟ್ಯಾಪ್ ಹಿಡಿದು ಕವನಗಳನ್ನು ಪುಂಖಾನುಪುಂಖವಾಗಿ ಬರೆಯಲು (ಹೊಸೆಯಲು) ಶುರು ಮಾಡಿದ. ತನ್ನ ಸ್ಕೂಲಿನ ವಾರ್ಷಿಕೋತ್ಸವಗಳಲ್ಲಿ ಎಷ್ಟು ಜನ ಪರಿಪರಿಯಾಗಿ ಬೇಡವೆಂದು ಪ್ರಾರ್ಥಿಸಿದರೂ ಕನಿಕರವಿಲ್ಲದೆ ಕವನಗಳನ್ನು ಗಟ್ಟಿಯಾದ ಧ್ವನಿಯಲ್ಲಿ ವಾಚಿಸಿ ಅವುಗಳನ್ನು ಶ್ರವಣ ಮಾಡಿದ ಕೆಲ ಸಾಹಿತ್ಯ ಪ್ರೇಮಿ(ದ್ವೇಷಿ!)ಗಳನ್ನು ಕೋಮಾಕ್ಕೆ ತಳ್ಳುವಲ್ಲಿ ಯಶಸ್ವಿಯಾದ!
ಈ ಬಾರಿಯ ನುಂಗಣ್ಣ ಬಾಳೆಕಾಯಿ ಅವರ ದಶಮಾನೋತ್ಸವದ ಪುಣ್ಯ ತಿಥಿಯ ಅಂಗವಾಗಿ ಜಿಲ್ಲಾ ಕವಿಗೋಷ್ಠಿ ಸಮ್ಮೇಳನವನ್ನು ತನ್ನ ಸ್ವಂತ ಖರ್ಚಿನಿಂದ ಆಯೋಜಿಸಿದ ಗುಂಡಣ್ಣ ಬಾಳೆಕಾಯಿ. ಭಾಗವಹಿಸುವ ಕವಿಗಳಿಗೆ ಅವರ ಸ್ವರಚಿತ ಕವನದ ಜೊತೆ ತಮ್ಮ ತಂದೆ ಮಹಾ ಕವಿ ದಿವಂಗತ ನುಂಗಣ್ಣ ಬಾಳೆಕಾಯಿ ಬರೆದ (ಎಂದೋ ಬರೆದು ಬಿಸಾಡಿದ!) ಕವನವನ್ನು ಕಡ್ಡಾಯವಾಗಿ ವಾಚನ (ಒಂದು ಕೊಂಡರೆ ಮತ್ತೊಂದು ಉಚಿತ ಎನ್ನುವ ಸ್ಕೀಮಿನಂತೆ!) ಮಾಡಬೇಕೆಂದು ಹೊಸ ಕಂಡೀಷನ್ ಹಾಕಿದ. ಹಾಗಿದ್ದರೆ ಮಾತ್ರ ಭಾಗವಹಿಸಿದ ಕವಿ/ಕವಿಯತ್ರಿಗಳು ಹೂವಿನ ಹಾರ, ಫಲಕ ಮತ್ತು ಸನ್ಮಾನ ಸ್ವೀಕರಿಸಲು ಅರ್ಹರು ಎಂದು ಕವಿಗಳಲ್ಲಿ ಸವಿನಯ (ಹಕ್ಕೊತ್ತಾಯ!) ಮನವಿ ಮಾಡಿದ ‘ ಮರಿ ಸಾಹಿತಿ ‘ ಗುಂಡಣ್ಣ ಬಾಳೆಕಾಯಿ. ಅಲ್ಲದೇ ಈ ದಶಮಾನೋತ್ಸವದ ಕವಿಗೋಷ್ಠಿ ಸಮಾರಂಭ ‘ ನ ಭುತೋ ನ ಭವಿಷ್ಯತ್ ‘ ಎನ್ನುವಂತೆ ಆಚರಿಸಲು ಮೊದಲು ನಗರದ ಒಂದು ದೊಡ್ಡ ಫಂಕ್ಷನ್ ಹಾಲ್ ಬುಕ್ ಮಾಡಿದ ಗುಂಡಣ್ಣ ಬಾಳೆಕಾಯಿ.
ಅಂದು ಫಂಕ್ಷನ್ ಹಾಲಿನಲ್ಲಿ ಸೇರಿದ ಜನರನ್ನು ನೋಡಿದರೆ ಯಾರಿಗಾದರೂ ರೈಲ್ವೆ ಸ್ಟೇಷನ್ ನೆನಪಿಗೆ ಬಂದರೆ ಆಶ್ಚರ್ಯವಿಲ್ಲ…ಎಲ್ಲಿ ನೋಡಿದರೂ ಜನವೋ ಜನ! ಹೆಣ್ಣು ಮಕ್ಕಳು ಭರ್ಜರಿ ಜರತಾರಿ ರೇಷ್ಮೆ ಸೀರೆಗಳನ್ನು ಧರಿಸಿ ಟಿ ವಿ ಸೀರಿಯಲ್ ನಟಿಯರಂತೆ ಮುಗುಳು ನಗೆ ಸೂಸುತ್ತಾ ಓಡಾಡುತ್ತಿದ್ದರೆ… ಗಂಡಸರು ದೊಗಳೆ ಬಿಳಿ ಪೈಜಾಮ ಜುಬ್ಬಾ ಅದಕ್ಕೊಪ್ಪುವ ನೆಹರು ಅಲ್ಲಲ್ಲ… ಮೋದಿ ಜಾಕೆಟ್ ಹಾಕಿಕೊಂಡು ಸಡಗರದಿಂದ ಓಡಾಡುತ್ತಿದ್ದರು. ಒಟ್ಟಿನಲ್ಲಿ ಅಲ್ಲಿ ನೆರೆದ ಎಲ್ಲರ ಮುಖದಲ್ಲೂ ಏನೋ ಸಂಭ್ರಮದ ಕಳೆ! ಅವರೆಲ್ಲರೂ ಅಲ್ಲಿ ಹಾಜರಿದ್ದದ್ದು ವೇದಿಕೆಯ ಮೇಲೆ ತಮ್ಮ ತಮ್ಮ ಸ್ವರಚಿತ ಕವನದ ಜೊತೆ ಜೊತೆ ದಿವಂಗತ ಮಹಾ ಕವಿ ನುಂಗಣ್ಣ ಬಾಳೆಕಾಯಿಯವರ ಆಯ್ದ ಕವನ ವಾಚನ ಮಾಡುವ ಸಲುವಾಗಿ. ಈ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ತಿಂಡಿ ತೀರ್ಥ ಎಲ್ಲವನ್ನೂ ಬಿಟ್ಟು ಓಡಿ ಬಂದ ಅನೇಕರಿದ್ದಾರೆ. ಇಂತಹ ಘಟನೆಗೆ ಸಾಕ್ಷಿಯಾಗಲು ದೂರದ ಊರಿನಿಂದ ಬಂದ ‘ ಅಪ್ರತಿಮ ‘ ಕವಿ/ಕವಿಯತ್ರಿಯವರು ಜಾತಕ ಪಕ್ಷಿಯಂತೆ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.
ಬೆಳಿಗ್ಗೆ ಹತ್ತು ಘಂಟೆಗೆ ಸರಿಯಾಗಿ ಕವಿಗೋಷ್ಟಿ ಆರಂಭವಾಗುವುದು ಎಂದು ಗುಂಡಣ್ಣ ಬಾಳೆಕಾಯಿ ತಂಡದವರು ಮೊದಲೇ ತಿಳಿಸಿದ್ದರೂ ಕೆಲವು ಕವಿ ಪುಂಗವರು ಬೆಳಗಿನ ಬೆಡ್ ಕಾಫಿ ಸಮಯಕ್ಕೆ ಹಾಜರಾಗಿದ್ದರು. ಫಂಕ್ಷನ್ ಹಾಲಿನ ಬಾಗಿಲನ್ನು ಇನ್ನೂ ತೆರೆದಿರದಿದ್ದುದನ್ನು ನೋಡಿ ಬೇಸರಗೊಂಡು ಟೀ – ಕಾಫಿ ಕುಡಿಯಲು ಹೋದರು. ಮತ್ತೆ ಸರಿಯಾಗಿ ಹತ್ತು ಘಂಟೆಗೆ ವಾಪಾಸು ಬಂದು ಹಾಲಿನ ವೇದಿಕೆಯತ್ತ ಇಣುಕಿ ನೋಡಿದರೆ ಯಾರೋ ಒಂದಿಬ್ಬರು ಬ್ಯಾನರ್ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು.
ಉಪಹಾರ ಅಥವಾ ಊಟದ ವ್ಯವಸ್ಥೆ ಇರುತ್ತದೆಂದು ಭಾವಿಸಿದ ಕವಿಗಳಿಗೆ ಅದರ ಯಾವ ಲಕ್ಷಣವೂ ಕಾಣದೆ ನಿರಾಸೆಯಾಗಿ ಹತ್ತಿರದ ರಸ್ತೆ ಬದಿಯ ಹೋಟೆಲುಗಳತ್ತ ದೌಡಾಯಿಸಿದರು. ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ದೂರದ ಊರಿನಿಂದ ಬಂದ ಕೆಲವು ಕವಿಗಳೂ ಅವರಲ್ಲಿ ಸೇರಿದ್ದರು. ಇದಕ್ಕೂ ಮುಂಚೆ ಊಟ ಹಾಗೂ ವಸತಿ ಏರ್ಪಾಟನ್ನು ಸಹಾ ಆಯೋಜಕರೇ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಕವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾದ ಬಳಿಕ ಅದನ್ನು ನಿಲ್ಲಿಸಿದ್ದಾರೆ. ಆಯೋಜಕ ಗುಂಡಣ್ಣ ಬಾಳೆಕಾಯಿ ತಂಡ ಕೂಡ ಅದಕ್ಕೆ ಹೊರತಲ್ಲ…ಈಗ ಎಲ್ಲರಿಗೂ ಅವರವರ ತಲೆ ಬಿಸಿ ಅವರವರಿಗೆ!. ಹೀಗಾಗಿ ಕವಿಗಳು ತಮ್ಮಲ್ಲಿ ಅಡಗಿದ್ದ ‘ ಪ್ರತಿಭೆ ‘ ಯನ್ನು ಹೊರ ಹಾಕುವ ಅವಕಾಶದ ವೇದಿಕೆಯನ್ನು ಒದಗಿಸುವುದು ಅಷ್ಟೇ ಈಗಿನ ಆಯೋಜಕರ ಉದ್ದೇಶ. ಬೇಗ ಬಂದ ಕವಿ ಪುಂಗವರು ಹೊರಗೆ ಹೋಗಿ ಗಡದ್ದಾಗಿ ಉಪಹಾರ ಸೇವಿಸಿ ಒಂದು ಸ್ಟ್ರಾಂಗ್ ಚಾಯ್ ಕುಡಿದ ಬಳಿಕ ಅವರಲ್ಲಿ ಅಡಗಿದ ‘ ಜೀವಾತ್ಮ ‘ ತಣ್ಣಗಾದ ಬಳಿಕ ಫಂಕ್ಷನ್ ಹಾಲಿಗೆ ಮರಳಿದರು.
ಮುಖ್ಯ ಅತಿಥಿಗಳು ಅಲ್ಲದೇ ಇತರ ಹಲವು ಹತ್ತು ‘ ಸಾದಾ ‘ ಅತಿಥಿಗಳು ಬರುವುದು ಸ್ವಲ್ಪ ತಡವಾಗುವ ಲಕ್ಷಣಗಳು ಇರುವುದರಿಂದ ಸಮಯ ವ್ಯರ್ಥ ಮಾಡದೆ ಕೆಲವು ಕವಿಗಳು ತಮ್ಮ ‘ ಸಿದ್ಧ ‘ ಕವನದ ಜೊತೆ ದಿವಂಗತ ಮಹಾ ಕವಿ ನುಂಗಣ್ಣ ಬಾಳೆಕಾಯಿ ಅವರ ಕವನ ವಾಚನ ಮಾಡಲು ಮುಕ್ತ ಅವಕಾಶ ಇದೆ ಎನ್ನುವ ಸಂತಸದ ಸುದ್ದಿ ಗುಂಡಣ್ಣ ಬಾಳೆಕಾಯಿ ತಂಡ ತಿಳಿಸಿದ ಬಳಿಕ ಅಲ್ಲಿ ನೆರೆದ ಕವಿಗಳ ಮುಖದಲ್ಲಿ ಪುನೀತರಾದ ಭಾವ.
ಇತ್ತೀಚಿಗೆ ವೇದಿಕೆ ಹೇಗೆ ಸಿದ್ಧವಾಗಿದೆ ಎಂದು ನೋಡುತ್ತಾರೆಯೇ ಹೊರತು ಅದರ ಮುಂದೆ ಜನಗಳು ಇದ್ದಾರೆಯೋ ಇಲ್ಲವೋ ಅಂತ ಯಾರೂ ನೋಡೋದೇ ಇಲ್ಲ! ನೆರೆದ ಕವಿಗಳು ವೇದಿಕೆ ಅಲಂಕರಿಸಿ ಕವನ ವಾಚನ ಮಾಡುವ ಉತ್ಸುಕತೆಯಲ್ಲಿ ಎದುರಿಗೆ ಕವಿತೆಯನ್ನು ಕೇಳುವ ಒಬ್ಬೇ ಒಬ್ಬ(‘ ನತದೃಷ್ಟ!’) ಪ್ರೇಕ್ಷಕನಾದರೂ ಇದ್ದಾನೋ ಇಲ್ಲವೋ ಅಥವಾ ಬರೀ ಖಾಲಿ ಕುರ್ಚಿಗಳು ಕಂಡು ಬರುತ್ತವೋ ಏನೋ ಎನ್ನುವುದರ ಬಗ್ಗೆ ಯಾವೊಬ್ಬ ಕವಿಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಇತ್ತೀಚಿನ ಟ್ರೆಂಡ್! ಅವರಿಗೆ ಬೇಕಾಗಿದ್ದು ತಾವು ಕವಿತೆ ವಾಚನ ಮಾಡುತ್ತಿರುವಾಗ ಮತ್ತು ತಮ್ಮನ್ನು ಸನ್ಮಾನಿಸುವಾಗ ತೆಗೆದ ಒಂದೆರಡು ಫೋಟೋಗಳು ಇದ್ದರೆ ಸಾಕು… ಕವಿರಾಜ ಧನ್ಯ! ಮರುದಿನ ಲೋಕಲ್ ಪತ್ರಿಕೆಗಳಲ್ಲಿ ನೂರಾರು ಅಭಿಮಾನಿಗಳ ಮಧ್ಯೆ ಮಾಡಿದ ಸತ್ಕಾರ ಎಂದು ತಮ್ಮ ಫೋಟೋ ತಾವೇ ಪ್ರಕಟಿಸಿಕೊಂಡು ಬೀಗುವ ಕವಿಗಳು ನಮ್ಮಲ್ಲಿ ಈಗ ಹೆಚ್ಚಾಗಿದ್ದಾರೆ.
ಹೀಗಾಗಿಯೇ ಗುಂಡಣ್ಣ ಬಾಳೆಕಾಯಿಯಂತಹ ಆಯೋಜಕರು ಆಹ್ವಾನ ಪತ್ರಿಕೆಗಳನ್ನು ಈಗ ಪ್ರಕಟಿಸಿ ಹಂಚುವ ಶ್ರಮ ಪಡದೆ ಇಂತಹ ಊರಿನ ಇಂತಹ ದಿನ ಇಂತಹ ಸ್ಥಳದಲ್ಲಿ ಇಂತಹ ಆಯೋಜಕರ ವೇದಿಕೆಯಲ್ಲಿ ಇಂತಹ ಸಮಯಕ್ಕೆ ಕವಿಗೋಷ್ಠಿ ಏರ್ಪಡಿಸಲಾಗಿದೆ. ಆಸಕ್ತರು ಇಂತಹ ವೇದಿಕೆಯ ಇಂತಹ ಫೋನ್ ನಂಬರ್ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಲು ಕೋರಲಾಗಿದೆ ಎನ್ನುವ ಇಂತಹ ವಾಟ್ಸಪ್ ಮೆಸ್ಸೇಜ್ಗಳು ಕ್ಷಣಾರ್ಧದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತವೆ.
ವೇದಿಕೆಯ ಮೇಲೆ ತಡವಾಗಿ ಬಂದು ಆಸಿನರಾದ ಗಣ್ಯಾತಿ ಗಣ್ಯ ಮುಖ್ಯ ಅತಿಥಿಗಳು ಹಾಗು ಸಾದಾ ಅತಿಥಿಗಳ ಮಾತುಗಳು ಮುಗಿಯುವುದರೊಳಗೆ ಮಧ್ಯಾನ್ಹ ಎರಡು – ಮೂರು ಘಂಟೆ ದಾಟುತ್ತದೆ. ಇದರಲ್ಲಿ ಸಂದೇಹವಿಲ್ಲ. ನಮ್ಮ ಹಲವು ಕವಿಗಳು ವೇದಿಕೆ ಹತ್ತಿ ಸುಮ್ಮನೆ ಕವಿತೆ ಎಂದೂ ವಾಚಿಸುವದಿಲ್ಲ. ಬದಲಾಗಿ ವೇದಿಕೆ ಮೇಲೆ ಆಸೀನರಾದ (ನ)ಗಣ್ಯರು ಹಾಗೂ ಅವರ ಸ್ಥಾನಮಾನಗಳನ್ನು ಒಂದೊಂದಾಗಿ ಸ್ತುತಿಸಿ ಅವರಿಗೆಲ್ಲ ವಂದಿಸಿ ಉಪನ್ಯಾಸ ಶುರು ಮಾಡುತ್ತಾರೆ. ಕವಿತೆ ವಾಚಿಸಿದ ಬಳಿಕ ಇನ್ನೊಮ್ಮೆ ಲಘು ಉಪನ್ಯಾಸ…ಇಷ್ಟಾದರೂ ಸುಮ್ಮನೆ ವೇದಿಕೆಯಿಂದ ಕೆಳಗಿಳಿಯದ ಕೆಲವು ಕವಿಗಳು ಮತ್ತೊಂದು ಕವನ ವಾಚಿಸುವ
ಉತ್ಸಾಹ ತೋರಿಸಿ ಮುಂದಿನ ಕವಿಗೆ ಬೇಗ ದಾರಿಯನ್ನೇ ಬಿಡುವುದಿಲ್ಲ. ಕವಿಗಳಲ್ಲಿ ಇರುವ ದೊಡ್ಡ ಗುಣವೇ (ರೋಗವೇ!) ಇದು…ಹಾಗೂ ಹೀಗೂ ಮೊದಲು ಕವಿತೆ ಓದುವ ಸದವಕಾಶ ಪಡೆದ ನಾಲ್ಕಾರು ‘ ಲಕ್ಕಿ ಕವಿ ‘ ಗಳು ತಮ್ಮ ಕವನ ವಾಚನ – ಕಂ – ಉಪನ್ಯಾಸ ಮುಗಿಸುವದರೊಳಗೆ ಊಟದ ಸಮಯ ದಾಟುವುದು ‘ ಗ್ಯಾರಂಟಿ ‘.
ಇವೊತ್ತಿನ ಡಿಜಿಟಲ್ ಜಮಾನದಲ್ಲಿ ಎಲ್ಲ ಕವಿಗಳು ತಮ್ಮಷ್ಟಕ್ಕೆ ತಾವೇ ಅತ್ಯಂತ ಜನಪ್ರಿಯ ಎಂದು ಭಾವಿ (ಭ್ರಮಿಸು!) ಸುವರು. ಇನ್ನೊಬ್ಬರ ಕವಿತೆ ಕನಿಷ್ಠ ತನ್ನದು ಮಾತ್ರ ಶ್ರೇಷ್ಠ! ಅಲ್ಲದೆ ಈಗ ಯಾರಿಗೂ ಇನ್ನೊಬ್ಬರ ಕವಿತೆ ಕೇಳುವ ಸಹನೆ ಮತ್ತು ಸಹೃದಯತೆ ಇಲ್ಲ. ತಮ್ಮ ಕವಿತೆಯ ವಾಚನ ಮುಗಿದ ಕೂಡಲೇ ಬಂದ ದಾರಿಯತ್ತ ಓಡುವ ತವಕ. ಇದನ್ನೆಲ್ಲಾ ಗಮನಿಸಿಯೇ ಗುಂಡಣ್ಣ ಬಾಳೆಕಾಯಿಯಂತಹ ಜಾಣ ಆಯೋಜಕರು ಕೊನೆಯಲ್ಲಿ ಸನ್ಮಾನ – ಫೋಟೋ ಸೆಷನ್ ಇಡುವ ಪದ್ಧತಿ ಜಾರಿಗೆ ತಂದರು. ಹೀಗಾಗಿ ಮೊದಲೇ ಕವಿತೆ ವಾಚನ ಮಾಡಿದ ಕವಿಗಳು ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿಕೊಂಡು ತೆಪ್ಪಗೆ ವೇದಿಕೆಯ ಕೆಳಗೆ ಹಾಕಿದ ಚೇರುಗಳಲ್ಲಿ ಅನ್ಯಮನಸ್ಕರಾಗಿ ಕೂಡುವುದು ತಪ್ಪುವುದಿಲ್ಲ.
ಒಂದು ಸಣ್ಣ ಉಡನ್ (ಕಟ್ಟಿಗೆಯ) ತುಂಡಿನ ಅಥವಾ ಮೆಟಲಿನ ಮೊಮೆಂಟೋ ಸಲುವಾಗಿ ಅದೆಷ್ಟು ಹಣ ಖರ್ಚು ಮಾಡುತ್ತೀರಿ ಎಂದು ಕುಟುಂಬ ಸದಸ್ಯರು ಮಾತಿನಲ್ಲಿ ಅದೆಷ್ಟೇ ಕುಟುಕಿದರೂ ಕವಿ ಪುಂಗವರು ಅದನ್ನು ಮನಸಿಗೆ ಹಚ್ಚಿಕೊಳ್ಳುವುದಿಲ್ಲ…ಕಾರಣ
ತಮ್ಮ ಶ್ರೇಷ್ಠ ಕವಿತೆಗಳಿಗೆ ಅದು ಸಂದ ಗೌರವದ ಸಂಕೇತ ಎಂದು ಎಲ್ಲ ಕವಿ/ಕವಿಯತ್ರಿಯವರು ಭಾವಿಸುತ್ತಾರೆ. ಅದರಂತೆ ಹೆಗಲಿಗೆ ಹೊದಿಸುವ ಶಾಲು ಒಂದು ಕಲರ್ ಬಟ್ಟೆಯ ತುಂಡು ಎಂದು ಕವಿ(ಪಿ!)ಗಳಲ್ಲದವರ ಒಮ್ಮತದ ಅಭಿಪ್ರಾಯ. ಆದರೆ ಅದು ತಮ್ಮ ದಿವ್ಯ ಪ್ರತಿಭೆಗೆ ಸಿಕ್ಕ ಮನ್ನಣೆ ಎಂದು ಹೆಮ್ಮೆ ಪಡುವರು ಕವಿಗಳು. ಅಲ್ಲದೇ ಸಾಮಾನ್ಯ ವ್ಯಕ್ತಿಗಳಿಗೆ ಶಾಲು ಹೊದಿಸುವ ಸಂಪ್ರದಾಯ ನಮ್ಮಲ್ಲಿ ಇಲ್ಲ. ಅದು ಏನಿದ್ದರೂ ಕವಿ ಪುಂಗವರಿಗೆ ಮಾತ್ರ ಎಂದು ಹೆಚ್ಚಿನ ಕವಿಗಳ ಅಂಬೋಣ…
ಈಗ ಎಷ್ಟು ಜನ ಕವಿಗಳು ಇದ್ದಾರೆ ನಮ್ಮ ಕರುನಾಡು ಕರ್ನಾಟಕದಲ್ಲಿ ಅಂತ ತಾನೇ ನಿಮ್ಮ ಅನುಮಾನ? ವಾಟ್ಸಪ್, ಫೇಸ್ ಬುಕ್, ಇನ್ಸ್ತಾಗ್ರಾಂ, ಟೆಲಿಗ್ರಾಂ ಇತ್ಯಾದಿ ಬಂದ ಮೇಲೆ ಎಲ್ಲರೂ ‘ ಇನ್ಸ್ತಾಂಟ್ ‘(ಸಿದ್ಧ!) ಕವಿಗಳು…ಹತ್ತು ಕನ್ನಡ ಶಬ್ದಗಳನ್ನು ಸಾಲಾಗಿ ಜೋಡಿಸುವುದು ಗೊತ್ತಿದ್ದ ಎಲ್ಲರೂ ಕವಿಗಳೇ! ಗುಂಡಣ್ಣ ಬಾಳೆಕಾಯಿಯಂತಹ ಶ್ರೀಮಂತ ಕವಿಗಳು ತಮ್ಮ ಸ್ವಂತ ಹಣದಿಂದ ಕವಿತಾ ಸಂಕಲನಗಳನ್ನು ಪ್ರಕಟಿಸಿ ಅವುಗಳನ್ನು ತಾವು ಭರ್ಜರಿಯಾಗಿ ಏರ್ಪಡಿಸಿದ ಸಮಾರಂಭದಲ್ಲಿ (ಪ್ಲಾಸ್ಟಿಕ್ ಹಾರ, ಶಾಲು ಮತ್ತು ನೆನಪಿನ ಕಾಣಿಕೆ ಕಂಪಲ್ಸರಿ!) ಹ್ಯಾಂಡ್ ಬಿಲ್ ಗಳಂತೆ ಹಂಚಿದ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ನೂರು – ನೂರೈವತ್ತು ರೂಪಾಯಿಗಳ ಶಾಲುಗಳು ನೋಡಲಷ್ಟೇ ಚಂದ. ಅವು ಮುಂದೆ ಉಪಯೋಗಕ್ಕೆ ಬರುವುದಿಲ್ಲ ಎಂದು ಸನ್ಮಾನ ಮಾಡಿದ ‘ ಕೈ ‘ ಗಳಿಗೂ ಗೊತ್ತು…ಅದಕ್ಕಾಗಿ ‘ ಭುಜ ‘ ಒಡ್ಡುವ ಕವಿಗಳಿಗೂ ಗೊತ್ತು. ಆದರೂ ಮೊದಲಿನಿಂದ ಬಂದ ಸಂಪ್ರದಾಯ…ಬಿಡುವಂತಿಲ್ಲ!
ಮಧ್ಯಾನ್ಹದ ಸಮಯ ನಾಲ್ಕು ದಾಟಿತೆಂದರೆ ಸಾಕು ಕವಿಗಳಿಗೆ ಅಗ್ನಿ ಪರೀಕ್ಷೆ! ಯಾಕೆಂದರೆ ದೂರದ ಊರಿನಿಂದ ಬರುವಾಗ ರಿಸರ್ವೇಶನ್ ಮಾಡಿಸಿಕೊಂಡ ಬಂದ ಅವರು ‘ ಮರು ಟಪಾಲಿ ‘ ನಂತೆ ಬೇಗ ವಾಪಸು ಹೋಗುವ ಅವಸರ. ಸಮಯದ ಅಭಾವವಿದೆಯೆಂದು ವೇದಿಕೆಯ ಮೇಲೆ ಬಂದ ಕವಿಗಳಿಗೆ ಚಾಲಾಕಿ ಗುಂಡಣ್ಣ ಬಾಳೆಕಾಯಿಯಂತಹ ಆಯೋಜಕರು ಹಾಕುವ ಶಾಲನ್ನು ಒಂದು ಕೈಯಿಂದ ತಾವೇ ಸುತ್ತಿಕೊಂಡು ಮತ್ತೊಂದು ಕೈಯಿಂದ ಸರ್ಟಿಫಿಕೇಟ್ ಪಡೆದ ಸಧೃಡ ಕವಿಗಳು ವೇದಿಕೆಯಿಂದ ಕೆಳಗೆ ‘ ಲಾಂಗ್ ಜಂಪ್ ‘ ಮಾಡುವರು, ಒಮ್ಮೊಮ್ಮೆ ತಮ್ಮ ಅದ್ಭುತ ಕವಿತೆ ವಾಚನ ಮಾಡುವ ಅವಕಾಶ ಸಹಾ ಸಿಗದೇ!… ಈ ಗ್ಯಾಪಿನಲ್ಲಿ ಫೋಟೋಗಳನ್ನು ಕ್ಲಿಕ್ಕಿಸುವ ಕೆಲಸವನ್ನು ಆತ್ಮೀಯ ಗೆಳೆಯರು ಅಥವಾ ಸಹೋದ್ಯೋಗಿ ಕವಿಗಳು ಮಾಡಿ ಮುಗಿಸುವರು.
ಕೆಲವು ಸೀನಿಯರ್ ಕವಿಗಳು ಸಮಾರಂಭದಲ್ಲಿ ತಮಗೆ ತಕ್ಕ ಮರ್ಯಾದೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುವರು. ಆದರೆ ಗುಂಡಣ್ಣ ಬಾಳೆಕಾಯಿಯಂತಹವರು ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳುವುದಿಲ್ಲ…ಕಾರಣ ಈಗ ಯಾವ ಕವಿಯನ್ನೂ ಖುದ್ದಾಗಿ ಅಮಂತ್ರಿಸದೆ ಬರೀ ಅನ್ ಲೈನ್ ಮುಖಾಂತರ ಮೆಸ್ಸೇಜ್ ಮಾಡಿ ಕೈ ತೊಳೆದುಕೊಳ್ಳುವರು. ಅಲ್ಲದೆ ನಾವು ಯಾರನ್ನೂ ಪ್ರತ್ಯೇಕವಾಗಿ ಆಹ್ವಾನಿಸಿಲ್ಲ. ಬದಲಾಗಿ ನೀವೇ ಗ್ರೂಪಿಗೆ ಜಾಯಿನ್ ಆಗಿ ಬಂದಿರುವಿರಿ ಎಂದು ಹೇಳುವ ಸಬೂಬನ್ನು ಸದಾ ಸಿದ್ಧವಾಗಿ ಜೇಬಲ್ಲಿ ಇಟ್ಟುಕೊಂಡಿರುತ್ತಾರೆ.
ಕವಿಗಳು ಇಲ್ಲದೆ ಕವಿಗೋಷ್ಠಿಯಿಲ್ಲ – ಸಮ್ಮೇಳನವಿಲ್ಲ! ನಿಮಗಾಗಿಯೇ ಈ ಸಿದ್ಧ ವೇದಿಕೆ ಎಂದು ಕೊನೆಯಲ್ಲಿ ಒಂದೆರಡು ಔಪಚಾರಿಕ ನುಡಿಮುತ್ತುಗಳು ಗುಂಡಣ್ಣ ಬಾಳೆಕಾಯಿಯಂತಹ ಆಯೋಜಕರಿಂದ. ಜೊತೆಗೆ ಕವಿ ಸಮ್ಮೇಳನ ಯಶಸ್ವಿಯಾಗಲು ಕವಿಪುಂಗವರು ನೀಡಿದ ಸಹಕಾರಕ್ಕೆ ಹೃದಯಪೂರ್ವಕ ಕೃತಜ್ಞತೆಗಳು ಎಂದು
ಹೇಳುವದರೊಂದಿಗೆ ಕವಿಗೋಷ್ಟಿ ಮುಕ್ತಾಯವಾಗುವದು. ಅದನ್ನು ಆಯೋಜಕರು ಹೇಳಿ ಮುಗಿಸುವದರೊಳಗೆ ಇಡೀ ಹಾಲು ಗುಂಡಣ್ಣ ಬಾಳೆಕಾಯಿಯ ‘ ಚೊಂಬು ‘ ತಲೆಯಂತೆ ಖಾಲಿ ಖಾಲಿ!
‘ ಪುನರಪಿ ಜನನಂ ಪುನರಪಿ ಮರಣಂ.. ‘ ಎನ್ನುವಂತೆ ಮತ್ತೆ ಮತ್ತೆ ಕವಿಗೋಷ್ಠಿ ಆಯೋಜನೆಗೊಳ್ಳುವದು ಹಾಗೂ ಕವಿ ಪುಂಗವರು ಎಲ್ಲಿಲ್ಲದ ಉತ್ಸಾಹದಿಂದ ಭಾಗವಹಿಸುವ ಭವ್ಯ ಪರಂಪರೆ ಹಿಂದಿನಿಂದಲೂ ಇದೆ. ಇದು ನಿನ್ನೆಯೂ ಇತ್ತು… ಇಂದೂ ಇರುತ್ತದೆ…ಮತ್ತು ನಾಳೆಯೂ ಇದ್ದೇ ಇರುತ್ತದೆ. ಅಲ್ಲದೇ ಕವಿಗಳ ಮನದಲ್ಲಿ ಇಂತಹ ಕವಿಗೋಷ್ಠಿಗಳು ಚಿರಸ್ಥಾಯಿಯಾಗಿ ನೆನಪಿನಲ್ಲಿ ಉಳಿಯುತ್ತವೆ ಎನ್ನುವದಕ್ಕೆ ಸದರಿ ಕವಿಗೋಷ್ಠಿಗೆ ಹಾಜರಾದ ನಿಮ್ಮಂತಹ ಕವಿಗಳೇ ಸಾಕ್ಷಿ!
*
13 thoughts on “‘ ಮಹಾ ಕವಿ ದಿವಂಗತ ನುಂಗಣ್ಣ ಬಾಳೆಕಾಯಿ’ ಸ್ಮರಣಾರ್ಥದ ಕವಿಗೋಷ್ಠಿ!”
ವಾವ್ ಸೂಪರ್ ರಾಘಣ್ಣ. ಕವಿಗೋಷ್ಠಿಗಳಲ್ಲಿ ಏನು ನಡೆಯುತ್ತದೆ ಎಂದು ವಿಡಂಬನಾತ್ಮಕವಾಗಿ ಅದ್ಭುತವಾಗಿ ಚಿತ್ರಿಸಿದ್ದೀರಿ. ಅಭಿನಂದನೆಗಳು.
ಧನ್ಯವಾದಗಳು
ಕವಿ ರಾಘವೇಂದ್ರ ಮಂಗಳೂರು ಅವರ ಈ ವಿಡಂಬನಾತ್ಮಕ ನಿಜವಾಗಿಯೂ ವಿಡಂಬನಾತ್ಮಕವೇ ? ಎನ್ನುವಷ್ಟು ಸತ್ಯಾತ್ಮಕವಾಗಿದೆ. ಮರು ಟಪಾಲು, ಲಾಂಗ್ ಜಂಪ್ ಗಳೂ ಅವಿಭಾಜ್ಯ. ಮರುದಿನ ಲೋಕಲ್ ಪತ್ರಿಕೆಗಳು ಸ್ವಲ್ಪ ಬೇಗನೆ ಮಾರಾಟವಾಗುತ್ತವೆ. ಮನೆಯ ಮುಂದಿನ ರಸ್ತೆ ಒಂದೆರೆಡು ಗಂಟೆಗಳಲ್ಲೇ ಮೊದಲಿನಂತಾಗುವುದೆಂದು ಗೊತ್ತಿದ್ದರೂ ಬಕೆಟ್ ಗಟ್ಟಲೆ ನೀರು ಬರಕಿ ತೊಳೆಯುವವರಂತೆ ಕೆಲವರಿಗೆ ಇಂಥವೆಲ್ಲ ದಿನಚರಿಯಾಗಿರುತ್ತವೆ. ನಮ್ಮನ್ನೆಲ್ಲ ನಗಿಸುವ ಹೂರಣ ಸವಿಯಾಗಿದೆ. ಇಂಥ ಕವಿಗೋಷ್ಠಿಯಲ್ಲಿ ತಮ್ಮ ಕವನವಾಚನಕ್ಕೆ ಅವಕಾಶ ಸಿಗದವರಂತೂ ಈ ಲೇಖನಕ್ಕೆ ಖಂಡಿತ ಸಹಿಮಾಡುತ್ತಾರೆ. ಅಭಿನಂದನೆಗಳು.
ಧನ್ಯವಾದಗಳು
ರಾಘಣ್ಣ
ವಿಡಂಬನೆ ಬಹಳ ಚೆನ್ನಾಗಿ ಮೂಡಿ ಬಂದಿದೆ
ಆದರೆ ಒಂದು ವಿಪರ್ಯಾಸ ಅಂದ್ರೆ
ಇತ್ತೀಚೆಗೆ ನಾವೆಲ್ಲರೂ ಅದರ ಭಾಗವಾಗಿಯೇ ಇರುವುದೇ………
ತುಂಬಾ ರಸವತ್ತಾಗಿ ನಗು ಉಕ್ಕಿ ಬರುವಂತೆ ಗುಂಡಣ್ಣ ಅವರಪ್ಪ ನುಂಗಣ್ಣನವರ ಕವಿತ್ವ , ಕವಿಗೋಷ್ಠಿ ಬಗ್ಗೆ ಬರಿದಿರುವ ನಿಮಗೆ ಅಭಿನಂದನೆಗಳು ಸರ್.ಹಾಸ್ಯ, ವಿಡಂಬನೆ ನಿಮಗೆ ಸಿದ್ಧಿಸಿದೆ 💐👌🙏🏻
ಕವಿಗೋಷ್ಠಿಯ ಬಗ್ಗೆ ಬರೆದ ವಿಡಂಬನೆ ಇಂದಿನ ವಾಸ್ತವಿಕತೆಯನ್ನು ತೆರೆದಿಟ್ಟಿದೆ. ಕನ್ನಡ ಸರಿಯಾಗಿ ಬರೆಯಲು, ಓದಲು ಬಾರದವರೂ ಇಂದು ಕವಿಗಳಾಗಿದ್ದಾರೆ. ಗದ್ಯವನ್ನು ತುಂಡರಿಸಿ ಚಿಕ್ಕ ಸಾಲುಗಳಲ್ಲಿ ಜೋಡಿಸಿದರೆ ಕವನವಾಗುವ ಮಟ್ಟಕ್ಕೆ ನಾವು ಇಳಿದಿದ್ದೇವೆ. ಮೇಲೆ ಸತ್ಕಾರ, ಸನ್ಮಾನಗಳ ಹೆಚ್ಚುಗಾರಿಕೆ. ಜೊಳ್ಳು ಸಾಹಿತ್ಯ ಹುಟ್ಟುವುದೇ ಇಲ್ಲಿಂದ.
ಅಭಿನಂದನೆಗಳು.
ಧನ್ಯವಾದಗಳು
ಧನ್ಯವಾದಗಳು
ಬಾಳೆಕಾಯಿ ನುಂಗಣ್ಣ ಮತ್ತು ಗುಂಡಣ್ಣ ಇಬ್ಬರೂ ಓದುಗರ ಮನದಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯುತ್ತಾರೆ.
ಮನದುಂಬಿದ ಅಭಿನಂದನೆಗಳು
ಧನ್ಯವಾದಗಳು
ನಿಮ್ಮ ಹಾಸ್ಯ/ ವಿಡಂಬನಾತ್ಮಕ ಲೇಖನ ಓದಿದಮೇಲೆ ಸಂಸ್ಕೃತ ಸುಭಾಷಿತ, ‘ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ’ ನೆನಪಿಗೆ ಬಂದಿತು. ಸನ್ಮಾನ, ಪಾರಿತೋಷಕ, ಬಿರುದು ಗಳ ಹಿ೦ದೆ ಬಿದ್ದ ಕವಿ ಮಹಾಶಯರು ಹಣ ಬಲ, ಜನ ಬಲ ದಿಂದ ಆಡಂಬರದ ಕಾರ್ಯಕ್ರಮ ಆಯೋಜಿಸುತ್ತಾರೆ. ಇಂತಹ ಸಾಹಿತಿಗಳು ಸಮಾಜದಲ್ಲಿ ಬೆಳೆಯುವದು ತುಂಬಾ ಆಘಾತಕಾರಿ. ಬರಹದ ಮೂಲಕ ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ.
ಅಭಿನಂದನೆ ಗಳು.
ಧನ್ಯವಾದಗಳು