ತಿಂಡಿ

ಕದ್ದು ಹೊರಗೆ ತಿನ್ನುತ್ತಾನೆ ಎದುರು ಮನೆ ಪೋರ

ತೆಂಗಿನ ಮರ ಹತ್ತುತ್ತಾನೆ
ಕಾಯಿ ಕೆಳಗೆ ಇಳಿಸುತ್ತಾನೆ
ಯಾರೂ ಕಾಣದಂತೆ ತಂದು
ಕಂಡ ಬೆಲೆಗೆ ಮಾರುತ್ತಾನೆ

ಖಾನಾವಳಿ ಭಟ್ಟರು
ತಿಂಡಿ ತಿನಲು ಕೊಟ್ಟರೂ
‘ಕಳ್ಳತನ ತಪ್ಪು ಮಗಾ’
ಹೇಳುತ್ತಲೇ ಇದ್ದರು

ಅವರು ನೊಂದು ನುಡಿವರು:

ಹೊರಗೆ ಕದ್ದು ತಿನುವ ಚಾಳಿ
“ನಂಗೂ ಗೊತ್ತು ತಪ್ಪು ಹೇಳಿ”

“ಆದರೇನು,ನೋಡಿ ಇವರೇ
ವ್ಯಾಪಾರ.. ಹೇಳಿಕೇಳಿ!”

ಹಳ್ಳಿಯಲ್ಲಿ ದೊಡ್ಡ ಸುದ್ದಿ:

ಅರೇ ನಮ್ಮ ಹುಡುಗನಿಗೆ
ಬೇಡವಾಯ್ತೆ ಆತ್ಮಶುದ್ಧಿ?

ಮನೆಯಲ್ಲಿದೆ ತಿಂಡಿ ತೀರ್ಥ
ಇದನು ಬಿಟ್ಟು ಹೊರಗೆ ಹೋಗಿ
ತಿಂದು ಬಂದರೇನು ಅರ್ಥ?
ಕದ್ದು ತಿಂದರೇನು ಅರ್ಥ?
ಇಲ್ಲಿ ಅಡುಗೆಯೆಲ್ಲ ವ್ಯರ್ಥ!

ಮಡಿ ಇಲ್ಲ ಮುಸುರೆ ಇಲ್ಲ
ಇಂಥ ಕಾಲ ಬಂದಿತಲ್ಲ
ಎಂದು ಅವನ ಅಪ್ಪ ಅಮ್ಮ
ಈ ಹುಡುಗನ ಅಣ್ಣ ತಮ್ಮ
ಎಲ್ಲ ನೊಂದು ನುಡಿವರು
ತಮ್ಮೆದುರಿಗೆ ಕಂಡರೆ
ಹೊರಡದಂತೆ ತಡೆವರು

ಆದರಿವನು ಎಂಥ ಮಾಣಿ!
ಬಲೇ ಬಲೇ ವಿಚಿತ್ರ ಪ್ರಾಣಿ!
ಬೆಕ್ಕಿನಂತೆ ಹೋಗಿಬಿಡುವ ಮೆಲ್ಲಗೆ
ಬಾಯಿರುಚಿ ಕೂಗಿ ಕರೆವ ಅಲ್ಲಿಗೆ

ಹೊರಗೆ ತಿಂಡಿ ತಿಂದು ತಿಂದು
ಹೊಟ್ಟೆ ಕೆಟ್ಟು ರೋಗ ಬಂದು
ನರಳಿ ಉರುಳುತಿದ್ದನು
ಮರಳಿ ಬಯಸುತಿದ್ದನು
ಅದೇ ತಿಂಡಿ
ಅದೇ ತೀರ್ಥ

ಹಳ್ಳಿ ಈಗ ಸಾಕಾಗಿದೆ
ಹೊರಟಿರುವನು ಪೇಟೆಗೆ
ಓಡಿ ಹೋಗಿ ಬಸ್ಸು ಹತ್ತಿ
ಟಿಕೆಟ್ ಕೊಂಡ ಕುಮಟೆಗೆ!

ಕುಮಟೆಯಲ್ಲಿ ಕಂಡರಿವನ ತಡೆಯಿರೇ
ಬಲ್ಲಿದರು ಒಳ್ಳೆ ಬುದ್ಧಿ ಹೇಳಿರೇ

  • ಚಿಂತಾಮಣಿ ಕೊಡ್ಲೆಕೆರೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ತಿಂಡಿ”

  1. ಎದುರುಮನೆಯ ಪೋರನೆದುರ ಮನೆಯ ಕವಿಯ ಕಂಡೆವೈ
    ಚದುರಿನಿಂದ ಕವಿತೆ ಪೊಸೆವ ಸೊಗಕೆ ಮಾರುಪೋದೆವೈ
    ಹದವನರಿತು ಪದಗಳಿರಿಸಿ ಪೋಣಿಪ ಪರಿ ಚಂದವೈ

  2. Balachandra Damle

    ಹದಿಹರೆಯದ ಹುಡುಗುತನಕೆ
    ಮಡಿಯ ಭಾಷೆ ಮೈಲಿಗೆ!
    ಎದೆಯ ಸೆಟೆಸಿ ಹುಡುಕುತಿಹರು
    ಬೀದಿ ಬದಿಯ ಮಲ್ಲಿಗೆ!

  3. ದತ್ತಾತ್ರೇಯ ಹೆಗಡೆ

    ಬಹಳ ಚಂದ ನಿನ್ನ ಪದ, ಸರಳ ಪದ್ಯವಾದರೂ ಸೂಚ್ಯ ಎಚ್ಚರಿಕೆ ಇದೆ. ಈಗಿನ ಫಾಸ್ಟ್ಫುಡ್ ಪ್ರಿಯರಿಗೆ ತಕ್ಕ ಎಚ್ಚರಿಕೆ ಇದೆ. ದಾರಿ ತಪ್ಪಿ ನಡೆದರೆ ಪಶ್ಚಾತ್ತಾಪ ಪಡಬೇಕಾದೀತು ಎಂಬ ಸೂಚ್ಯಾರ್ಥವು ಇದೆ.

    1. ಮ.ಮೋ.ರಾವ್ ರಾಯಚೂರು

      ಕವಿ ಚಿಂತಾಮಣಿ ಕೊಡ್ಲಕೆರೆ ಯವರ ಈ ಪುಟ್ಟ ಕವನ ಎರೆಡಕ್ಷರಗಳಲ್ಲಿ ಏನೆಲ್ಲ ತಿಳಿಸುತ್ತದೆ! ಮೊದಲು ಇದು ಹೊಸರುಚಿಯ ತಿನಿಸು ಇರಬಹುದೆಂದುಕೊಂಡಿದ್ದೆ. ಆದರೆ, ತುರಿಸಿದಷ್ಟು ಹೆಚ್ಚಾಗುವ ತುರಿಕೆಯ ಹಾಗೆ ಇರುವ ಚಟದ ಬಗ್ಗೆ ಮತ್ತು ಅದರ ಪ್ರತಿಫಲವನ್ನೂ ಸೂಚ್ಯವಾಗಿ ತಿಳಿಸಿದ್ದಾರೆ. ಅಭಿನಂದನೆಗಳು.

  4. ನೆ.ಲ.ರಾಮಮೂರ್ತಿ, ವಿಜಯನಗರ, ಬೆಂಗಳೂರು.

    ಸೊಗಸಾಗಿ ನಿರೂಪಿತ. ಧನ್ಯವಾದಗಳೊಂದಿಗೆ

  5. Chintamani Sabhahit

    ಬದುಕು ಯಾವಾಗಲೂ ಸುಂದರವಾಗಿರುವುದಿಲ್ಲ. ಎಲ್ಲವೂ ಅಶಾಶ್ವತ! ಎಲ್ಲವೂ ನಾವೆಣಿಸಿಕೊಂಡಂತೆ, ಆಗದಿರುವುದೇ ಕತೆಗೆ, ಕವಿತೆಗೆ ಕುಮ್ಮಕ್ಕು – ಎಲ್ಲಿ ಭಾವಸ್ಪಂದನೆಯೇ ಪ್ರಧಾನವಾಗಿದೆಯೋ ಅಲ್ಲೆಲ್ಲ.

    ವಿಷಯದ ಹಿನ್ನೆಲೆ ಏನೇ ಇರಲಿ, “ವಿಶ್ವಧ್ವನಿ”ಯಲ್ಲಿ ಈ ವಾರ ಪ್ರಕಟವಾದ ಚಿಂತಾಮಣಿ ಕೊಡ್ಲೆಕೆರೆಯವರ “”ತಿಂಡಿ “, ಸೌಮ್ಯ ಪ್ರವೀಣ್ ಅವರ “ಮಾರಾಟವಾಗದ ನೆಲ” – ಈ ಎರಡೂ ಕವಿತೆಗಳ ಪಾರ್ಶ್ವ ಭೂಮಿ, ಒಂದು ಆದರ್ಶಕ್ಕೆ, ಅರುಚಿಯಾಗಿ, ವಾಸ್ತವತೆಯಿಂದ ಭಿನ್ನವಾಗುವ ಬಗೆಯನ್ನು, ತನ್ನದೇ ರೀತಿಯಲ್ಲಿ, ಕವಿಯ, ಕವಯಿತ್ರಿಯ ಅನುಭವ ಮೂಸೆಯಲ್ಲಿ, ವರ್ಣಿಸುತ್ತದೆ.

    ೧೯೭೫ರಲ್ಲಿ ಅಭ್ಯಸಿಸಿದ, ನೈಲಾನ್ ನೆನಪಾಗುತ್ತಿದೆ : ಯಾವ ಥ್ರೆಡ್ ಒಂದೇ ಕಾಲದಲ್ಲಿ, New York ಮತ್ತು Londonನ್ನಲ್ಲಿ ಸಂಶೋದಿಸಲ್ಪಟ್ಟಿದಿಯೋ, ಆ ವಸ್ತುವಿಗೆ NY – LON ಎಂದು ಹೆಸರಿಡಲಾಯಿತು.( New York ನಿಂದ “NY”, London ನಿಂದ “LON”)

    ಅದೇ ರೀತಿ, ಈ ಎರಡೂ ಕವಿತೆಗಳ ಭಾವದ ಬೆನ್ನೆಲುಬಿನಲ್ಲಿ, ಒಂದೇ ಡಿಎನ್ಎ ಇದೆ ಅನ್ನುವುದು ಒಂದು ವಿಶೇಷ!

    ‘ಕವಿ ಸಮಯ’ವನ್ನು ಭಟ್ಟಿ ಇಳಿಸಿದ, ಇಬ್ಬರಿಗೂ ಧನ್ಯವಾದಗಳು!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter