ಸುನಂದಾ ಬೆಳಗಾಂವಕರ ಅವರ ‘ಝವಾದಿ’

ಸುನಂದಾ ಬೆಳಗಾಂವಕರ

ಸುನಂದಾ ಬೆಳಗಾಂವಕರರ ‘ನಾಸು’ ಪ್ರಕಟವಾದ ಐದು ವರ್ಷಗಳ ನಂತರ ಬಂದ ಎರಡನೇ ಕಾದಂಬರಿ ‘ಝವಾದಿ’. ಈ ಕಾದಂಬರಿಯಲ್ಲಿ ಅವರ ವಿದೇಶವಾಸದ ಅನುಭವಗಳ ಜೊತೆಗೆ ಧಾರವಾಡ ಸೀಮೆಯ ಬದುಕಿನ ವಿವರಗಳನ್ನು ಹದವಾಗಿ ಬೆರೆಸಲು ಯತ್ನಿಸಿರುವುದರಿಂದ ಅದು ‘ನಾಸು’ ಮತ್ತು ‘ಕಾಯಕ ಕೈಲಾಸ’ಕ್ಕಿಂತ ಭಿನ್ನವೆನಿಸಿಕೊಳ್ಳುತ್ತದೆ.

ಆಫ್ರಿಕಾದ ಸ್ವಾಹಿಲಿ ಭಾಷೆಯಲ್ಲಿ ‘ಝವಾದಿ’ ಎಂದರೆ ಕಾಣಿಕೆ ಎಂದರ್ಥ. ದೇವರ ಕಾಣಿಕೆಯಾಗಿರುವ ಮಾನವ ಜನ್ಮವನ್ನು ಸಾರ್ಥಕಗೊಳಿಸಬೇಕು ಎಂಬ ದನಿಯು ಇಲ್ಲಿದೆ. ಆಫ್ರಿಕಾ ದೇಶದ ಟಾಂಜಾನಿಯಾ ರಾಜ್ಯದ ಜನರ ಪಾಲಿಗೆ ಸಿಂಬಾ (ಸಿಂಹ) ಎಂದರೆ ದೇವದೂತ. ಭಾರತೀಯರ ಪಾಲಿಗೆ ಹಾವು ಗೋವುಗಳಂತೆ ಪೂಜ್ಯ ಪ್ರಾಣಿ. ಸಿಂಬಾದ ಸಂಸಾರದ ಕತೆಯು ಶಂಕರರಾಯರ ಸಂಸಾರದ ಕತೆಯ ಪ್ರತಿಬಿಂಬವಾಗಿದೆ. ಸಿಂಬಾನಲ್ಲಿ ಅವರು ತಮ್ಮನ್ನು, ಕ್ವೀನಳಲ್ಲಿ ಸೌದಾಮಿನಿಯನ್ನು, ಮರಿಗಳಲ್ಲಿ ತನ್ನ ಮಕ್ಕಳಾದ ಅಭಿ ಮತ್ತು ಅಂಜಲಿಯರನ್ನು, ಸಿಂಬಾನ ಬದುಕಿಗೆ ಪ್ರವೇಶಿಸಿದ ಸಿಂಹಿಣಿ ಕ್ಲಿಯೋಪಾತ್ರಾಳನ್ನು ತನ್ನ ಅಬಚಿಯಾಗಿ ಕಾಣುವಲ್ಲಿ ಸಿಂಹಗಳ ಬದುಕು ಕಾದಂಬರಿಯ ಸುತ್ತ ಪ್ರತೀಕವಾಗಿ ರೂಪುಗೊಳ್ಳುತ್ತದೆ. ತನ್ನ ಅಪ್ಪನ ಎರಡನೇ ಹೆಂಡತಿಯಾದ ಅಬಚಿಯೊಂದಿಗಿನ ಸಹವಾಸವು ಶಂಕರರಾಯರ ಅರ್ಧ ಆಯುಷ್ಯವನ್ನು ವ್ಯರ್ಥಗೊಳಿಸಿದರೆ ಆಫ್ರಿಕಾದ ನೀಗ್ರೋ ಜನಾಂಗಕ್ಕೆ ಸೇರಿದ ಟೆಂಬೋನ ಮಾತುಗಳು ಅವರ ಬದುಕಿನ ದೃಷ್ಟಿಯನ್ನು ಬದಲಿಸುತ್ತದೆ.

ಹೆಂಡತಿಯ ಮೇಲೆ ಸಿಟ್ಟುಗೊಂಡ ಶಂಕರರಾಯರು ಉದ್ಯೋಗನಿಮಿತ್ತ ಆಫ್ರಿಕಾಕ್ಕೆ ತೆರಳಿದ ಬಳಿಕ ಅಲ್ಲಿನ ಅರಣ್ಯದಲ್ಲಿ ಸಿಂಹ ಸಿಂಹಿಣಿಯರ ಸಂಸಾರವನ್ನು ಕಂಡು, ತಮ್ಮ ನಡೆನುಡಿಗಳನ್ನು ತಿದ್ದಿಕೊಂಡು ಊರಿಗೆ ಮರಳಿ ಹೆಂಡತಿ ಸೌದಾಮಿನಿಯ ಮುಂದೆ ತಪ್ಪೊಪ್ಪಿಕೊಂಡು ಪರಿಪೂರ್ಣತೆಯೆಡೆಗೆ ಚಲಿಸುವ ಪ್ರಕ್ರಿಯೆಯು ಈ ಕಾದಂಬರಿಯ ವಸ್ತುವಾಗಿದೆ. ಅವರು ತಮ್ಮ ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ಬಂದ ಹೆಂಗಸರ ಸ್ವಭಾವಗಳನ್ನು, ಅವರೊಂದಿಗಿನ ಸಂಬಂಧಗಳ ಸ್ವರೂಪವನ್ನು ವಿಮರ್ಶಿಸುವ, ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದವರು ಎಂಬುದಕ್ಕೆ “ಆಶಾ, ರೂತ ಪತಿಯಿದ್ದೂ ಪರಪುರುಷನಿಗೆ ಮನಸೋತು ಮಜಾ ಮಾಡುವ ಚಂಚಲೆಯರು. ಆದರೆ ಪೂರ್ಣಿಮಾ ಎಳೆ ಜೀವ. ಯೌವನದ ಶಾರೀರಿಕ ಎಳೆತ. ರೂಪ ಮೋಹಿಸಿ ಭಾವನೆಗಳಿಗೆ ಬಲಿಯಾಗಿ, ಭವಿಷ್ಯದ ಕಲ್ಪನೆಯಿಲ್ಲದೆ ತಪ್ಪುದಾರಿ ತುಳಿದದ್ದು ಕೇವಲ ಅವಳ ಯೌವನದ ತಪ್ಪಲ್ಲ. ಸಮಾಜದಲ್ಲಿ ಸಜ್ಜನ, ಪ್ರತಿಷ್ಠಿತ, ಬುದ್ಧಿವಂತ, ಐಶ್ವರ್ಯವಂತ ಎಂದು ಬೀಗುತ್ತಿದ್ದ ತಮ್ಮ ತಪ್ಪು” (ಪುಟ 221) ಎಂಬ ಸಾಲುಗಳು ಸಾಕ್ಷಿಯಾಗುತ್ತವೆ. ಕಾದಂಬರಿಯು ಶಂಕರರಾಯರನ್ನು ಸಮರ್ಥಿಸದೆ, ಅವರ ಮೂಲಕ ಜಟಿಲವೂ ಸಂಕೀರ್ಣವೂ ಆದ ಪ್ರಶ್ನೆಗಳನ್ನು ಸೂಕ್ಷ್ಮವಾದ, ಪ್ರಬುದ್ಧವಾದ ಅನುಭವ, ವಿಶ್ಲೇಷಣೆಯ ಬೆಳಕಿನಲ್ಲಿ ಶೋಧಿಸಿ ತನ್ನ ದರ್ಶನಕ್ಕೆ ಅಧಿಕೃತತೆಯನ್ನು ಗಳಿಸಿಕೊಳ್ಳುತ್ತದೆ.

ಶಂಕರರಾಯರ ಮಡದಿಯಾದ ಸೌದಾಮಿನಿಯ ನೈತಿಕ ಪ್ರಜ್ಞೆಯು ಆಕೆಯ ಬದುಕಿಗೆ ಸುಖಸಮೃದ್ಧಿಗಳನ್ನು ತರುವುದಿಲ್ಲ. ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಆತನ ಮಲತಾಯಿ ಅಬಚಿಯ ಯಜಮಾನ್ಯಕ್ಕೆ ಸಿಕ್ಕಿಬೀಳುವ ಆಕೆಯ ಮೈಮನಗಳ ಮೇಲೆ ಪೆಟ್ಟುಗಳು ಬೀಳತೊಡಗುತ್ತವೆ. ಶಂಕರರಾಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದ ಅಬಚಿಯು ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸುತ್ತಾಳೆ. ಸೌದಾಮಿನಿಗೆ ಜಗದೀಶನೊಂದಿಗೆ ಅನೈತಿಕ ಸಂಬಂಧವಿದೆಯೆಂದು ಆಕೆಯು ಆರೋಪಿಸಿದಾಗ ಶಂಕರರಾಯರು ತಮ್ಮ ಮಕ್ಕಳಿಗೆ ಎದೆಹಾಲನ್ನು ಉಣಿಸುತ್ತಿದ್ದ ಸೌದಾಮಿನಿಗೆ ಬೂಟುಗಾಲಿನಿಂದ ಒದ್ದು ಆಕೆಯನ್ನು ಬಿಟ್ಟು ಹೋಗುತ್ತಾರೆ. ಇನ್ನೇನು ತಾನು ಮುಳುಗಿಹೋದೆನೆಂದು ಅನಿಸುವಾಗ ಅತ್ಯಾಳ ಬೆಂಬಲ ಸಹಾನುಭೂತಿಗಳು ಆಕೆಯ ನೆರವಿಗೆ ಬರುತ್ತವೆ. ಇದು ಆಕೆಯ ದುಗುಡಗಳನ್ನು ಒಂದೇ ಏಟಿಗೆ ನಿವಾರಿಸುವುದಿಲ್ಲ. ಅವುಗಳನ್ನು ತಾಳಿಕೊಳ್ಳುವ, ಎದುರಿಸುವ, ಮಾನಸಿಕ ಅರೋಗ್ಯವನ್ನು ಕಾಯ್ದುಕೊಳ್ಳುವ ಬಲವನ್ನು ತಂದುಕೊಡುತ್ತದೆ. ಕಹಿ ಪ್ರಸಂಗಗಳಿಂದ ಅಧೀರಳಾದರೂ ಕುಸಿಯದೆ, ನೂರು ಮಾತುಗಳನ್ನು ಸಹಿಸಿಕೊಂಡರೆ ಈ ಬದುಕು ಎಂಬ ಸತ್ಯವನ್ನು ಜೀವನಾನುಭವಗಳಿಂದ ಕಂಡುಕೊಳ್ಳುತ್ತಾಳೆ. ಆಕೆಯು ತನ್ನ ಮೇಲಿನ ಆಕ್ರಮಣಗಳನ್ನು ವಿರೋಧವಿಲ್ಲದೆ ಸಹಿಸಿಕೊಂಡಳು ಎಂದಲ್ಲ. ಪ್ರತಿಮಾತು, ದೂರು ಮತ್ತು ಚಾಡಿಗಳು ಪರಿಹಾರವಲ್ಲ ಎಂದು ಆಕೆಗೆ ಗೊತ್ತಿದೆ. ಆಕೆಯು ಬಲಿಪಶು ಎನ್ನುವುದು ನಿಜವಾದರೂ ಕ್ರಿಯಾಹೀನಳಲ್ಲ. ಬದುಕಿನ ಬಗ್ಗೆ ಅಪಸ್ವರವನ್ನು ಎತ್ತದೆ, ತನ್ನ ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಬಾಳುತ್ತಾಳೆ. ತನ್ನನ್ನು ಒಳಗೊಳಗೆ ಪ್ರೀತಿಸುತ್ತಿದ್ದ ಸಹಪಾಠಿ ಜಗದೀಶನನ್ನು ಮದುವೆಯಾಗಿ ಅಥವಾ ಅವನ ಆಸರೆಯಲ್ಲಿದ್ದುಕೊಂಡು ಹೊಸ ಬಾಳು ಬಾಳುವ ಅವಕಾಶವಿದ್ದರೂ ಆಕೆಯು ಆ ಕುರಿತು ಚಿಂತಿಸುವುದಿಲ್ಲ. ಕಠಿಣ ಪರಿಶ್ರಮ ಮತ್ತು ಹಾಡುಗಾರಿಕೆಯ ಕಡೆಗೆ ಗಮನ ಕೊಟ್ಟು ದೈಹಿಕ ಕಾಮನೆಗಳನ್ನು ನಿಯಂತ್ರಿಸಿಕೊಳ್ಳುವ ಮೂಲಕ ತನ್ನ ಲೈಂಗಿಕತೆಯನ್ನು ನೀಗಿಕೊಳ್ಳುತ್ತಾಳೆ. ಸ್ವಾವಲಂಬಿಯಾಗುವುದೇ ತನ್ನ ಸಮಸ್ಯೆಗೆ ಪರಿಹಾರ ಎಂಬ ಅರಿವು ಆಕೆಯು ಹಾಡುಗಾರ್ತಿಯಾಗಿ ರೂಪುಗೊಳ್ಳಲು ಮುಖ್ಯ ಕಾರಣವಾಗುತ್ತದೆ. ತನಗೆ ಅವಮಾನ ಮಾಡಿದವರನ್ನು, ತೊಂದರೆ ಕೊಟ್ಟವರನ್ನು ಆಕೆಯು ಸೇಡಿನ ಭಾವನೆಯಿಂದ ನೋಡುವುದಿಲ್ಲ. ಬದುಕಿನ ಬೆಂಕಿಯಲ್ಲಿ ಬೇಯುತ್ತಾ, ನೋಯುತ್ತಾ ಆಕೆಯು ಗಳಿಸಿಕೊಂಡ ಕಾಣ್ಕೆ ಅದು. ಆಕೆಯ ಬದುಕು ಪರಂಪರಾಗತ ಸಂಪ್ರದಾಯಗಳ ಚೌಕಟ್ಟಿನಲ್ಲಿ ರೂಪುಗೊಂಡಿದ್ದರೆ ಶಂಕರರಾಯರು ಅದನ್ನು ಅನಾರೋಗ್ಯಕರವಾಗಿ ಮೀರುತ್ತಾನೆ. ಅಹಂಕಾರಿಯೂ, ಸ್ವೇಚ್ಛಾಚಾರಿಯೂ ಆದ ಶಂಕರರಾಯನು ಸೌದಾಮಿನಿಯ ಬಗ್ಗೆ ಇದ್ದ ಅನಾದರ, ಅನಾಸ್ಥೆ, ಸಂದೇಹಗಳನ್ನು ನಿವಾರಿಸಿಕೊಂಡು ಸೌಜನ್ಯಯುಕ್ತ ವ್ಯಕ್ತಿಯಾಗಿ ಬದಲಾಗುತ್ತಾನೆ. ಶಂಕರರಾಯರಿಗೆ ತಪ್ಪಿನ ಅರಿವಾದಾಗ ಹೆಂಡತಿಯ ಬಳಿ ಹಿಂತಿರುಗಿ ಆಕೆಯ ಕ್ಷಮೆಯನ್ನು ಬೇಡಿ ಸ್ವೀಕರಿಸುವಂತೆ ಕೇಳಿದಾಗ ಆಕೆಯು ಬೀಗುವುದಿಲ್ಲ. ಆ ಸನ್ನಿವೇಶವು ಆಕೆಗೆ ವಿಧಿಯ ಕ್ರೂರ ಅಪಹಾಸ್ಯದಂತೆ ಭಾಸವಾಗುತ್ತದೆ. ಅಪರಾಧ, ಕ್ಷಮೆ ಮತ್ತು ಪಶ್ಚಾತ್ತಾಪ ಎಂಬ ಪದಗಳಿಗೆ ಆಕೆಯ ದೃಷ್ಟಿಯಲ್ಲಿ ಯಾವ ಅರ್ಥವೂ ಉಳಿದಿರುವುದಿಲ್ಲ. ತನ್ನ ಹೆಣ್ತನವು ಅಪಮಾನಕ್ಕೊಳಗಾಗಿದೆ ಎಂಬ ಅರಿವು ಉತ್ಕಟ ಸಂವೇದನೆಯಾಗಿ ಪುಟಿದೆದ್ದು ಆತನನ್ನು ನಿರಾಕರಿಸುತ್ತಾಳೆ. ಆಮೇಲೆ ಆಳಕ್ಕಿಳಿದು ಚಿಂತಿಸಿದಾಗ ಭವಿಷ್ಯದ ಯೋಚನೆಯು ಮೂಡುತ್ತದೆ. ಬಾಳ ಸಂಜೆಯಲ್ಲಿ ತನಗೆ ಯಾವ ಸಂಗಾತಿಯೂ ಇರುವುದಿಲ್ಲ ಎಂದುಕೊಂಡು ಎಲ್ಲ ರೀತಿಯ ಮಧುರ ಭಾವನೆಗಳೊಂದಿಗೆ ಗಂಡನನ್ನು ಸ್ವೀಕರಿಸುತ್ತಾಳೆ. ಆತನು ತನಗೆ ಎರಡು ಬಗೆದರೂ ಸಹಜಭಾವನೆಗಳಾದ ದ್ವೇಷ ಅಸೂಯೆಗಳನ್ನು ಮೀರಿ ಆತನನ್ನು ಒಪ್ಪಿಕೊಳ್ಳುವ ನಿರ್ಧಾರದಲ್ಲಿ ಆಕೆಯ ಹೃದಯವಂತಿಕೆ ಮತ್ತು ವಿವೇಕವು ವ್ಯಕ್ತವಾಗುತ್ತದೆ.

ತ್ರಿವೇಣಿಯವರ ‘ಕೊನೆಯ ನಿರ್ಧಾರ’ ಎಂಬ ಕತೆಯಲ್ಲಿಯೂ ಇಂಥ ಸನ್ನಿವೇಶವಿದೆ. ಗಂಡನು ತನ್ನ ಹೆಂಡತಿಯ ಶೀಲವನ್ನು ಶಂಕಿಸಿ, ಆಕೆಯನ್ನು ಹೊರದಬ್ಬಿ ಬೇರೆ ಮದುವೆಯಾಗುತ್ತಾನೆ. ಹೆಂಡತಿಯು ಸ್ವಾವಲಂಬಿಯಾಗಿ ಬಾಳುತ್ತಾಳೆ. ಹಲವು ವರುಷಗಳ ನಂತರ ಗಂಡನು ಆಕೆಯೊಂದಿಗೆ ಬದುಕಲು ಕರೆ ನೀಡಿದಾಗ ಏಕಾಕಿತನದಿಂದ ಬೇಸತ್ತಿದ್ದ ಅವಳ ಮನದಲ್ಲಿ ಗೊಂದಲವು ಉಂಟಾದರೂ ಕರೆಯ ಹಿಂದಿನ ಸ್ವಾರ್ಥದ ಅರಿವಾದಾಗ ಅವಳು ಆತನನ್ನು ಹೊರಗೆ ಹಾಕುತ್ತಾಳೆ. ವೀಣಾ ಶಾಂತೇಶ್ವರರ ‘ನಿರಾಕರಣೆ’ಯು ಇದನ್ನು ಪೌರಾಣಿಕ ಚೌಕಟ್ಟಿನಲ್ಲಿಟ್ಟು ಚರ್ಚಿಸುತ್ತದೆ. ತ್ರಿವೇಣಿ ಮತ್ತು ವೀಣಾ ಶಾಂತೇಶ್ವರರ ನಾಯಕಿಯರು ಶಕ್ತಿಯ ವಲಯನ್ನು ನಿರ್ಮಿಸುವ ನಿರೀಕ್ಷೆಯಲ್ಲಿದ್ದರೆ ಸೌದಾಮಿನಿಯು ಒಲವಿನ ಬದುಕನ್ನು ಕಟ್ಟಿಕೊಳ್ಳುವ ಯೋಚನೆಯಲ್ಲಿದ್ದಾಳೆ.

ಶಂಕರರಾಯರ ಕ್ರೌರ್ಯವು ಒಂದು ರೀತಿಯದ್ದಾದರೆ ಅಬಚಿಯ ಕ್ರೌರ್ಯ ವಿಕೃತಿಗಳು ಇನ್ನೊಂದು ರೀತಿಯದ್ದಾಗಿವೆ. ಶಂಕರರಾಯ ಸೌದಾಮಿನಿಯರ ದಾಂಪತ್ಯವು ಆಕೆಯಲ್ಲಿ ಲೈಂಗಿಕ ಅಸೂಯೆಯನ್ನು ಹುಟ್ಟಿಸುತ್ತದೆ. ಆ ಹೊಟ್ಟೆಯುರಿಯು ಕ್ರೌರ್ಯ, ಕ್ಷುದ್ರತೆಗಳಲ್ಲಿ ಪರಿಣಮಿಸಿ ಸೌದಾಮಿನಿಯ ಬದುಕನ್ನು ಕಹಿಗೊಳಿಸುತ್ತದೆ. ಸೌದಾಮಿನಿಯು ಪಾತಿವೃತ್ಯ ಧರ್ಮಲ್ಲಿ ಧನ್ಯತೆಯನ್ನು ಕಂಡುಕೊಂಡರೆ ಅಬಚಿಯು ಅದಕ್ಕೆ ವಿರುದ್ಧವಾಗಿದ್ದಾಳೆ. ಮಲಮಗನಾದ ಶಂಕರರಾಯರಜೊತೆ ಸಂಬಂಧವನ್ನು ಇಟ್ಟುಕೊಂಡು, ಆತನನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾಳೆ. ತಾನೇ ರೂಪಿಸಿಕೊಂಡ ಬಾಳನ್ನು ಬಾಳುತ್ತಾಳೆ. ತನ್ನ ಮಕ್ಕಳನ್ನೂ ಅಂಕೆಯಲ್ಲಿಟ್ಟುಕೊಳ್ಳತ್ತಾಳೆ. ಆದರೆ ಆಕೆಯ ಮೃಗೀಯ ಬದುಕು ಸಾಮಾಜಿಕ ಕಾರಣಗಳಿಂದ, ಆಂತರಿಕ ಸಂಘರ್ಷಗಳಿಂದ ದುರಂತದಲ್ಲಿ ಕೊನೆಗೊಳ್ಳುತ್ತದೆ.

ಕಾದಂಬರಿಯು ಜಗದೀಶನ ಪಾತ್ರವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತದೆ. ಆತನು ಸೌದಾಮಿನಿಯ ಬದುಕಿಗೆ ಪ್ರವೇಶಿಸದೆ ತನ್ನ ಮಗನೊಂದಿಗೆ ಆಕೆಯ ಮಗಳನ್ನು ಮದುವೆ ಮಾಡಿಸುವ ಔದಾರ್ಯವನ್ನು ತೋರುತ್ತಾನೆ. ಸಂಬಂಧಿಕನಲ್ಲದಿದ್ದರೂ ಸೌದಾಮಿನಿಯ ಕುಟುಂಬಕ್ಕೆ ಆಪ್ತನಾಗುತ್ತಾನೆ. ಆಕೆಯ ಮೇಲೆ ಅವನಿಗೆ ಪ್ರೇಮ ಬೆರೆತ ಅನುಕಂಪವಿದೆ. ಆಕೆಯ ಗಂಡ ಶಂಕರರಾಯರ ಬಳಿ ಅದನ್ನು ಒಪ್ಪಿಕೊಳ್ಳುವ ಧೈರ್ಯವಿದೆ. ಆತನ ಮುಕ್ತ ಮನಸ್ಸಿನಿಂದಾಗಿ ಶಂಕರರಾಯರಿಗೆ ತಮ್ಮ ಹೆಂಡತಿಯ ಶೀಲದ ಮೇಲಿದ್ದ ಸಂಶಯವು ಇಲ್ಲವಾಗುತ್ತದೆ. ಜಗದೀಶನ ವ್ಯಕ್ತಿತ್ವ ಮತ್ತು ಅನುಭವಗಳಲ್ಲಿ ವಿಶೇಷತೆಗಳಿಲ್ಲದಿದ್ದರೂ ಶಂಕರರಾಯರ ಮನಃಪರಿವರ್ತನೆಗೆ ಅವನೂ ಕಾರಣನಾಗುತ್ತಾನೆ. ಮಾನವೀಯತೆಯನ್ನು ಕಳೆದುಕೊಂಡು ಸ್ವಾರ್ಥದ ಬೆನ್ನುಹತ್ತಿದ ಶಂಕರರಾಯರಿಗೆ ತಮ್ಮ ಕುಟುಂಬದೊಂದಿಗೆ ಸಂಬಂಧವನ್ನು ಬೆಳೆಸುವ ಆಸಕ್ತಿಯು ಉಂಟಾಗುತ್ತದೆ. ಅದು ಅವರ ಬದುಕಿನ ಬೇರು ಹಿಡಿದು ಅಲುಗಿಸುವ ಘಟನೆಯಾಗಿದೆ.

ಸಾಂಪ್ರದಾಯಿಕ ಬ್ರಾಹ್ಮಣ ಸಂಸ್ಕøತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹಳ್ಳಿಯ ಜನರ ಸ್ಥಿತಿಗತಿಗಳನ್ನು ಚಿತ್ರಿಸುವ ಕಾದಂಬರಿಯಲ್ಲಿ ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕಾದಂಬರಿಯು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತದೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ. ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ ಕಲ್ಪಿಸಿ ಅಭ್ಯಾಸವಾದ ಹೊತ್ತಿನಲ್ಲಿ ಹೆಣ್ಣು ಕೂಡ ಹೆಣ್ಣನ್ನು ಶೋಷಣೆ ಮಾಡಬಲ್ಲಳು ಎಂಬುದನ್ನು ಧ್ವನಿಸುವ ಮೂಲಕ ಲೇಖಕಿಯು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದ್ದಾರೆ. ಹಿಂದಿನ ತಲೆಮಾರಿನ ಬದುಕು ಮತ್ತು ಸಾಹಿತ್ಯದ ಅಧ್ಯಯನದ ಮೂಲಕ ಶಾಶ್ವತವಾದ ಜೀವನಸೂತ್ರಗಳನ್ನು ಕಂಡುಕೊಳ್ಳುವ ಕಾದಂಬರಿಯು ಸಂಪ್ರದಾಯ ನಿಷ್ಠ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ.

ಧಾರವಾಡದ ಸಾಂಪ್ರದಾಯಿಕ ಬದುಕು ಮತ್ತು ದೇಸೀಯತೆಯು ಈ ಕಾದಂಬರಿಯ ವಿಶೇಷತೆಯಾಗಿದೆ. ನಿರೂಪಣೆಯನ್ನು ಶಿಷ್ಟ ಭಾಷೆಯಲ್ಲಿ ಬರೆದ ಲೇಖಕಿಯು ಸಂಭಾಷಣೆಯಲ್ಲಿ ದೇಸೀಯತೆಯನ್ನು ಮೆರೆದಿದ್ದಾರೆ. ಅವರ ಮನೋಭಾವವು ಸಂಕ್ಷೇಪಕ್ಕಿಂತ ವಿಸ್ತಾರದ ಕಡೆಗೆ ಒಲಿದಿದೆ. ರಚನೆಯ ರೂಪವನ್ನು ಗಮನಿಸದೆ, ಆತ್ಮೀಯರ ಎದುರು ಕುಳಿತು ನೆನಪುಗಳನ್ನು ತೋಡಿಕೊಳ್ಳುವ ರೀತಿಯಲ್ಲಿ ಬರೆದುದರಿಂದ ಅಪ್ರಸ್ತುತವೆನಿಸುವ ವಿಷಯಗಳು ಸೇರಿಕೊಂಡಿವೆ. ಆಫ್ರಿಕಾ ಮತ್ತು ಭಾರತ ದೇಶಗಳ ನಡುವಿನ ಸಾಂಸ್ಕøತಿಕ ಭಿನ್ನತೆಯನ್ನು ಅಂಶಿಕವಾಗಿ, ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಜೀವನವಿಧಾನವನ್ನು ದಟ್ಟವಾಗಿ ಕಟ್ಟಿಕೊಡುವ ಸಂದರ್ಭದಲ್ಲಿ ಕಾದಂಬರಿಯ ಮೊದಲ ಭಾಗಗಳು ಯಾತ್ರಾ ವಿವರಣೆಯಂತೆ ಭಾಸವಾಗುತ್ತವೆ. ಲೋಕಾಭಿರಾಮದ ಮಾತುಗಳು ಕಾದಂಬರಿಯ ಒಡಲಿಗೆ ಬೊಜ್ಜು ತರಿಸುತ್ತವೆ. ಏನೇ ಇದ್ದರೂ ಕಾದಂಬರಿಯ ವಸ್ತುವನ್ನು ಗ್ರಾಮ ಜೀವನದಿಂದಲೇ ಆರಿಸಿಕೊಂಡಿರುವ ಅವರು ಹಳ್ಳಿಯ ಬದುಕನ್ನು ಬಹಳ ಚೆನ್ನಾಗಿ ಪುನರ್ ಸೃಷ್ಟಿಸಿದರೇ ಹೊರತು ವೈಭವೀಕರಿಸಲಿಲ್ಲ. ಯಾಕೆಂದರೆ ಅವರಲ್ಲಿರುವ ವಾಸ್ತವ ಪ್ರಜ್ಞೆಯು ಭಾವಾತಿರೇಕ ಮತ್ತು ಅತಿಯಾದ ಅದರ್ಶಗಳಿಗೆ ಕಟ್ಟೆಯನ್ನು ಕಟ್ಟುತ್ತದೆ. ಸಮೀಪದಿಂದ ನೋಡಿ ಅನುಭವಿಸಿದ ಆಧಾರದಿಂದ ಚಿತ್ರಿತವಾದ ಗ್ರಾಮಜೀವನವು ಅದರ ಒಳಹೊರಗುಗಳಿಂದ ಕೂಡಿ ವ್ಯಕ್ತವಾಗುವುದರಿಂದ ಕಾದಂಬರಿಯು ಸತ್ವಯುತವಾಗಿದೆ. ವಾಸ್ತವವಾದಿ ಶೈಲಿಯು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದ ಮನುಷ್ಯ ಪ್ರಪಂಚದ ಸ್ಥಿತಿಗಳನ್ನು ಹಿಡಿದಿಡುವುದರಲ್ಲಿ ಸಫಲವಾಗಿದೆ. ವ್ಯವಸ್ಥೆಯೊಳಗೆ ಜನರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿಯ ಘನತೆ, ಸ್ವಾಭಿಮಾನಗಳನ್ನು ವಿವೇಚಿಸುವ ಲೇಖಕಿಯ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮಿಕೆಯ ಸಾಧ್ಯತೆಗಳೆಡೆಗೆ ಮುಖ ಮಾಡುತ್ತದೆ. ಹಳೆಯ ಮತ್ತು ಹೊಸ ತಲೆಮಾರುಗಳನ್ನು ಪ್ರತಿನಿಧಿಸುವ ಪಾತ್ರಗಳು ವ್ಯವಸ್ಥೆಯ ವಿರುದ್ಧ ಬಂಡೇಳದಿದ್ದರೂ ಅದನ್ನು ಸಮರ್ಥಿಸದೆ ಬದುಕಿನೊಡನೆ ಹೋರಾಡಿ ಗೆಲ್ಲುತ್ತಾರೆ.

ಭಾಷೆಯನ್ನು ಸೂಕ್ಷ್ಮವಾಗಿ ಬಳಸುವ ಲೇಖಕಿಯು ಸಮಾಜದ ಕ್ರೂರ ವಾಸ್ತವವನ್ನು ನಿರ್ಲಿಪ್ತವಾಗಿ, ಕಾವ್ಯಾತ್ಮಕವಾಗಿ ಮಂಡಿಸುತ್ತಾ, ಬದುಕಿನ ವ್ಯಂಗ್ಯವೈರುಧ್ಯಗಳತ್ತ ಗಮನ ಸೆಳೆಯುತ್ತಾರೆ. ಚಿಕ್ಕಪುಟ್ಟ ಪದಗಳಲ್ಲೇ ಸನ್ನಿವೇಶವನ್ನು ಸೃಷ್ಟಿಸುವ ಕತೆಗಳು ವ್ಯಕ್ತಿಗತ-ಸಾಮಾಜಿಕ ಅನುಭವಗಳನ್ನು ಹಿಡಿದಿಡುತ್ತವೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುವ ಕಾದಂಬರಿಯು ಎಲ್ಲಿಯೂ ಉದ್ವೇಗಕ್ಕೊಳಗಾಗದಿರುವುದರಿಂದ ಸಂಯಮವನ್ನು ರೂಢಿಸಿಕೊಂಡಿದೆ. ಕತೆ – ಉಪಕತೆಗಳು ಕಾದಂಬರಿಯ ಗಾತ್ರವನ್ನು ವೃಥಾ ಹಿಗ್ಗಿಸುವಂತೆ ಹೆಣೆದುಕೊಂಡಿದ್ದರೂ ಕಥನಕ್ಕೆ ತಕ್ಕಂತೆ ಅದರ ಸ್ತರ ಮತ್ತು ಕೇಂದ್ರವನ್ನು ಆಯ್ದುಕೊಳ್ಳುವ ಜಾಣ್ಮೆ ಲೇಖಕಿಗೆ ಇರುವುದರಿಂದ ಕಾದಂಬರಿಯ ಓಟಕ್ಕೆ ತಡೆ ಉಂಟಾಗುವುದಿಲ್ಲ. ವಿಪುಲ ವಿವರಗಳಿಂದ ಕೂಡಿದ ಕಾದಂಬರಿಯ ಗಾತ್ರವು ಅಗತ್ಯಕ್ಕಿಂತ ಹೆಚ್ಚು ಬೆಳೆದಿದೆ. ಪಾತ್ರದ ಅನುಭವ ಮತ್ತು ವಿಚಾರಗಳ ಚಿತ್ರಣ ಓದುಗನ ಮನಸ್ಸಿನಲ್ಲಿ ಮೂಡಿ ಕಾದಂಬರಿಯ ರೂಪದಲ್ಲಿ ಬೆಳೆಯುವಾಗ ಅದರೊಳಗಿನ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ಖಚಿತವಾದ ನುಡಿಗಟ್ಟುಗಳು ಗಮನವನ್ನು ಸೆಳೆಯುತ್ತವೆ.. ಕೌಟುಂಬಿಕ ಸಮಸ್ಯೆ, ಗಂಡು ಹೆಣ್ಣಿನ ಸಂಬಂಧ, ಹೆಣ್ಣಿನ ದುಃಖ, ಮುಗ್ಧರ ವಂಚನೆ, ಸಮಾಜದ ದಬ್ಬಾಳಿಕೆಗೆ ಸಿಲುಕಿ ನೊಂದವರ, ತಿರಸ್ಕøತರ ಯಾತನೆಗಳನ್ನು ಚಿತ್ರಿಸುತ್ತಾ ಅವುಗಳನ್ನು ಮೀರುವ ಸಾಧ್ಯತೆಗಳನ್ನು ಶೋಧಿಸುತ್ತದೆ. ಅಮಿತವಾದ ಹರಹಿನಲ್ಲೇ ಅರ್ಥಪೂರ್ಣವಾದ ವಿಚಾರಗಳನ್ನು ಗಾಢವಾಗಿ ಹೇಳಬಲ್ಲ ಲೇಖಕಿಯ ಧಾಟಿಯಲ್ಲಿ ಅಬ್ಬರವಿಲ್ಲದಿದ್ದರೂ ವ್ಯಂಗ್ಯದಿಂದ ಚುಚ್ಚುವ ಸಾಮಥ್ರ್ಯವಿದೆ. ನಿರ್ದಿಷ್ಟ ಘಟನೆಗಳು ಅಂತ್ಯವನ್ನು ಕಂಡುಕೊಂಡಂತೆ ಭಾಸವಾಗುವಂಥ ತಂತ್ರವನ್ನು ಬಳಸಿಕೊಂಡರೂ ಆ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಶೋಧಿಸುವಲ್ಲಿ ಲೇಖಕಿಯ ಕನಸು, ತಲ್ಲಣ ಮತ್ತು ಅಪೇಕ್ಷೆಗಳು ಸೂಚಿತವಾಗುವುದರಿಂದ ಕಾದಂಬರಿಯು ಕುತೂಹಲಕಾರಿಯಾಗಿ ಕಾಣುತ್ತದೆ. ಹೆಣ್ಣಿನ ಸಂಕಷ್ಟಗಳ ಬಗ್ಗೆ ಮಾತ್ರ ಬರೆಯುತ್ತಾ ಸರಳೀಕೃತ, ಏಕಮುಖಿಯಾದ ಪುರುಷವಿರೋಧಿ ನೆಲೆಗಳನ್ನು ಮುಟ್ಟಲು ಹಾತೊರೆಯದೆ ಬದುಕಿನ ವಿರಸದ ಕ್ಷಣಗಳನ್ನು, ಸಂಪ್ರದಾಯದ ಸಂಕೋಲೆಗಳನ್ನು ಮೀರುವ ದಿಟ್ಟ ಗಂಡು ಹೆಣ್ಣುಗಳನ್ನು ತೋರುತ್ತಾರೆ.

“ಶ್ಯಾಮಲಾ ಬೆಳಗಾಂವಕರ, ಕೊಡಗಿನ ಗೌರಮ್ಮ ಮತ್ತು ಗಿರಿಬಾಲೆಯವರ ನಂತರ, ಸ್ವಾತಂತ್ರೋತ್ತರ ಕಾಲದ ತಲೆಮಾರಿಗೆ ಸೇರಿದ ಅನುಪಮಾ ನಿರಂಜನ, ಸರಸ್ವತಿ ಗೌಡರ, ಎಚ್. ವಿ. ಸಾವಿತ್ರಮ್ಮ, ಗೀತಾ ಕುಲಕರ್ಣಿ, ತ್ರಿವೇಣಿ ಮುಂತಾದವರ ಕತೆಗಳಲ್ಲಿ ಹೆಣ್ಣು ತನ್ನ ಅಸ್ಮಿತೆಯ ಅರಿವು-ಸಾಧನೆಗಳಲ್ಲಿ ಸಾಧಿಸಿದ ಪ್ರಗತಿ ಮತ್ತು ಅವಳ ಕ್ರಿಯಾಶಕ್ತಿಯ ಆವಿಷ್ಕಾರಗಳ ನಿದರ್ಶನಗಳಿವೆ. ಅವಳ ಸಾಮಾಜಿಕ ಪರಿಸರದಲ್ಲಿ ನಡೆದ ಸ್ಥಿತ್ಯಂತರ, ಮುಖ್ಯವಾಗಿ ಶಿಕ್ಷಣದ ಪ್ರಸಾರ ಹಾಗೂ ಸಾಮಾಜಿಕ ಸಮಾನತೆಯ ಸ್ವೀಕಾರ- ಈ ಪರಿವರ್ತನೆಯ ಹಿಂದಿನ ಪ್ರೇರಣೆಯಾಗಿದೆ. ಇದರ ಅರ್ಥ ಸ್ವಾತಂತ್ರ್ಯದ ನಂತರ ಅವಳ ಜೀವನ ಒಮ್ಮೆಲೆ ಸುಖಮಯವಾಯಿತು ಎಂದೇನೂ ಅಲ್ಲ. ಆದರೆ ಸ್ತ್ರೀಯ ಅಂತರಂಗದಲ್ಲಿ ನಡೆದ ಮಹತ್ವದ ಬದಲಾವಣೆಗಳಿಂದಾಗಿ ಅವಳು ತನ್ನ ವ್ಯಕ್ತಿತ್ವದ ವಿಕಾಸದತ್ತ ಹೆಚ್ಚು ಲಕ್ಷ್ಯವನ್ನು ಕೊಡುವಂತಾಗಿದೆ. ಅವಳ ಪ್ರತಿಭಟನೆ ಮೊದಲು ಮೂಕಸ್ವರೂಪವಾಗಿದ್ದರೆ ಈಗ ಅದು ಮಾತು ಮತ್ತು ಕೃತಿಗಳಲ್ಲಿ ಆಕಾರ ಪಡೆಯುತ್ತದೆ” ಎಂದ ಜಿ. ಎಸ್. ಆಮೂರರ (ಕನ್ನಡ ಕಥನ ಸಾಹಿತ್ಯ: ಸಣ್ಣಕತೆ, ಪುಟ 339) ಮಾತನ್ನು ಸುನಂದಾ ಬೆಳಗಾಂವಕರರ ’ಝವಾದಿ’ ಕಾದಂಬರಿಯ ಸೌದಾಮಿನಿಯ ಪಾತ್ರಕ್ಕೂ ಅನ್ವಯಿಸಬಹುದು.

ಈ ಕಾದಂಬರಿಯು ಪಾಪ, ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತ್ತಗಳ ಕಥನವಾಗಿದೆ. ಇದು ಶಂಕರರಾಯರ ಮಡದಿ ಸೌದಾಮಿನಿಯ ಬದುಕಿನ ಘಟ್ಟಗಳನ್ನು, ಅನುಭವಿಸಿದ ಕಷ್ಟಗಳನ್ನು ಎದುರಿಸುತ್ತಾ, ಅವರ ವ್ಯಕ್ತಿತ್ವ ಮಾಗುತ್ತಾ ಹೋಗುವುದನ್ನು, ಪ್ರಬುದ್ಧ ನೋಟದಲ್ಲಿ ಬದುಕು ವ್ಯಾಖ್ಯಾನಕ್ಕೆ ಒಳಗಾಗುವುದನ್ನು ಧಾರವಾಡದ ಆಡುಮಾತಿನ ಲಯದಲ್ಲಿ ನಿರೂಪಿಸುತ್ತದೆ. ಇದು ಶಂಕರರಾಯ ಅಥವಾ ಸೌದಾಮಿನಿಯ ಮೂಲಕ ಉತ್ತಮಪುರುಷ ನಿರೂಪಣೆಯ ಮೊರೆ ಹೋಗದೆ ಸರ್ವಸಾಕ್ಷಿತ್ವ ಪ್ರಜ್ಞೆಯ ಮೂಲಕ ಹೇಳುವುದರಿಂದ ಕಥನವು ಭಾವುಕವಾಗುವುದಿಲ್ಲ. ಸರಳವಾದ ನೀತಿಪಾಠವಾಗುವುದಿಲ್ಲ. ಕಾದಂಬರಿಯು ವ್ಯಕ್ತಿಚರಿತೆಯಾಗದಿರುವಲ್ಲಿ ಕಥನದ ಹೆಚ್ಚುಗಾರಿಕೆಯಿದೆ. ದುಷ್ಟರೆಂದರೆ ಪೂರ್ತಿಯಾಗಿ ದುಷ್ಟರಲ್ಲದ, ಪ್ರೇಮಿಗಳೆಂದರೆ ತಮ್ಮ ಪ್ರೇಮವನ್ನು ಸರಿಯಾಗಿ ಅಭಿವ್ಯಕ್ತಿಸಲಾರದ, ಸಂಬಂಧಗಳನ್ನು ಸರಿಯಾಗಿ ನಿರ್ವಹಿಸಲಾರದ ಪಾತ್ರಸರಣಿಯು ಇಲ್ಲಿ ಕಂಡುಬರುತ್ತದೆ. ಆಫ್ರಿಕಾದಲ್ಲಿ ಸಿಂಬಾ ಮತ್ತು ಕ್ವೀನ್ ಎಂಬ ಸಿಂಹ ದಂಪತಿಗಳು ಅನುಭವಿಸುವ ಐಹಿಕ ಸುಖ ಶಂಕರರಾಯರ ದಾಂಪತ್ಯದ ಸೋಲಿಗೆ ವಿರುದ್ಧ ಪ್ರತಿಮೆಯಾಗುತ್ತದೆ. ಆ ಹಿನ್ನೆಲೆಯಲ್ಲಿ ಗಂಡು ಹೆಣ್ಣಿನ ಸಂಬಂಧದ ಮಾದರಿಗಳು, ಉಚ್ಛ ನೀಚ ತರತಮಗಳನ್ನು ಮೀರಿ ನಿಲ್ಲುವ ದುಃಖ ಯಾತನೆಗಳು, ತ್ಯಾಗ ಶರಣಾಗತಿಗಳ ಮೂಲಕ ದೊರಕುವ ಶಾಂತಿ, ಮನುಷ್ಯನ ಒಳ್ಳೆಯತನ ಮತ್ತು ಕೆಟ್ಟತನಗಳ ನಿದರ್ಶನಗಳು, ಸೋಲು ಗೆಲುವುಗಳು ಮೊದಲಾದ ಆಶಯಗಳು ಮೈದಾಳುತ್ತವೆ. ಗಂಡು ಹೆಣ್ಣಿನ ಸಂಬಂಧಗಳನ್ನು ಅವುಗಳ ಹಲವು ನೆಲೆಗಳಲ್ಲಿ, ವಿನ್ಯಾಸಗಳಲ್ಲಿ ಶೋಧಿಸುವ ಲೇಖಕಿಯು ‘ದಾಂಪತ್ಯ ಬದುಕು ಮಾತ್ರ ಪೂರ್ಣ. ಆರೋಗ್ಯಕಾರಿ. ಉಳಿದ ರೀತಿಯ ಸಂಬಂಧಗಳು ಅಪೂರ್ಣ; ಅತೃಪ್ತಿಕರ. ಗಂಡುಹೆಣ್ಣಿನ ಸಂಬಂಧಗಳು ಎಲ್ಲಿ ಯಾವಾಗ ಬೇಕಿದ್ದರೂ ಏರ್ಪಡಬಹುದು. ಆದರೆ ಆ ಸಂಬಂಧಗಳು ವೈವಾಹಿಕ ಚೌಕಟ್ಟಿನಲ್ಲಿ ಮಾತ್ರ ಅರ್ಥಪೂರ್ಣವೆನಿಸುತ್ತದೆ. ಇದು ಕೇವಲ ಹೊರಗಿನ ಅವಲೋಕನಕ್ಕೆ ದಕ್ಕುವ ಸತ್ಯವಲ್ಲ. ಪ್ರತಿಯೊಂದು ಗಂಡು ಹೆಣ್ಣು ತಮ್ಮ ಅನುಭವದಲ್ಲಿ ಕಂಡುಕೊಳ್ಳಬೇಕಾದ ನಿಜ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಶಂಕರರಾಯ ಮತ್ತು ಸೌದಾಮಿನಿಯ ಚಾರಿತ್ರ್ಯವನ್ನು ನಿರೂಪಿಸುವಾಗ ಲೇಖಕಿಯು ಯಾರನ್ನೂ ವೈಭವೀಕರಿಸುವುದಿಲ್ಲ. ತೆಗಳುವುದಿಲ್ಲ. ಸೌದಾಮಿನಿಯ ಕಷ್ಟಗಳ ಬಗೆಯನ್ನು ಬಣ್ಣಿಸಿ ಕಣ್ಣೀರು ತರಿಸುವುದಿಲ್ಲ. ಇಬ್ಬರ ಸ್ಥಿತಿಯನ್ನು ವಿವರಿಸಿ ಅವರ ವ್ಯಕ್ತಿತ್ವದಲ್ಲಿ ಸುಪ್ತವಾಗಿದ್ದ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತಾರೆ. ಸೌದಾಮಿನಿಯ ತಾಳ್ಮೆಯನ್ನು ಮಾತ್ರ ಹೊಗಳದೆ ಆಕೆಯ ಸಂಕಲ್ಪಬಲ ಮತ್ತು ಸಾತ್ವಿಕ ಛಲಗಳನ್ನು ಮುಂದಿಡುತ್ತಾರೆ. ತಾತ್ವಿಕವಾಗಿ ಆಕೆಯ ಲೋಕಗ್ರಹಿಕೆಯನ್ನು ಮತ್ತು ಭಾರತೀಯ ನಾರಿಯ ಪರಿಕಲ್ಪನೆಯನ್ನು ಒಪ್ಪಲು ಹಿಂದೇಟು ಹಾಕುವವರೂ ಆಕೆಯ ಸಾಚಾತನವನ್ನು ಅನುಮಾನಿಸಲಾರರು. ಆ ರೀತಿಯ ಪಾತ್ರ ಮಾದರಿಯನ್ನು ಲೇಖಕಿಯು ನೀಡಿದ್ದಾರೆ. ಆದರೆ ಮಾಸ್ತಿ, ಕಾರಂತ, ಎಂ. ತ್ರಿವೇಣಿ, ಕೆ. ಇಂದಿರಾ ಮೊದಲಾದವರ ಕೃತಿಗಳಲ್ಲಿ ಇಂಥ ಮಹಿಳೆಯರು ಕಾಣಿಸಿಕೊಂಡಿರುವುದರಿಂದ ಆ ಪಾತ್ರವನ್ನು ಒಂಟಿ ಮಾದರಿ ಎನ್ನಲು ಸಾಧ್ಯವಿಲ್ಲ.

ಶ್ರೀಮತಿ ಸುನಂದಾ ಬೆಳಗಾಂವಕರರು ತಮ್ಮ ಆಡುಂಬೊಲವಾದ ಧಾರವಾಡದ ಮಣ್ಣಿನ ಕಂಪು ಮರುಕಳಿಸುವಂತೆ ಕೃತಿಗಳನ್ನು ಬರೆದಿದ್ದಾರೆ. ಉದ್ಯೋಗದ ನಿಮಿತ್ತ ಅವರು ತಮ್ಮ ಬದುಕಿನ ಬಹುಭಾಗವನ್ನು ವಿದೇಶದಲ್ಲಿ ಕಳೆದರೂ ಅವರ ಕೃತಿಗಳಲ್ಲಿ ಅಲ್ಲಿನ ಅನುಭವಗಳು ಕಂಡುಬರುವುದು ವಿರಳ. ಆದರೆ ‘ಝವಾದಿ’ಯಲ್ಲಿ ಆ ಅನುಭವಗಳನ್ನು ತರಲು ಶ್ರಮಿಸಿದ್ದಾರೆ. ಕೃತಿಗಳ ಗುಣಮಟ್ಟದ ಆಧಾರದಲ್ಲಿ ನೋಡಿದರೆ ಕನ್ನಡದ ಕಾದಂಬರಿ ಪರಂಪರೆಯಲ್ಲಿ ಶ್ರೀಮತಿ ಸುನಂದಾ ಬೆಳಗಾಂವಕರರಿಗೂ ಸ್ಥಾನ ದೊರೆಯಬೇಕಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಸುನಂದಾ ಬೆಳಗಾಂವಕರ ಅವರ ‘ಝವಾದಿ’”

  1. Chintamani Sabhahit

    ಸುಧೀರ್ಘ ಕಾದಂಬರಿಯ ಸುದೀರ್ಘ ಪರಾಮರ್ಶೆಯಿದು.ಮಾನವೀಯ ಸಂಬಂಧಗಳ ಸಂಕೀರ್ಣತೆಯ ಸಮಸ್ಯೆಗಳು ಸರ್ವಕಾಲದಲ್ಲೂ ಇರಬಹುದಾದ ವಸ್ತು ವಿದಿತ.

    ಕಾದಂಬರಿಯ ಕಥನ ಸಾಹಿತ್ಯವನ್ನು, ಲಾಲಿತ್ಯವನ್ನು, ಸುಂದರವಾಗಿ, ವಿಶದವಾಗಿ, ಯಥೇಷ್ಟವಾಗಿ, ಗುಣಗ್ರಾಹೀ ಕಕ್ಷೆಯಲ್ಲಿ ನಿಸ್ಸಂಕೋಚವಾಗಿ, ನೀರು0ಬಳವಾಗಿ, ನಿರರ್ಗಳವಾಗಿ ಸೆರೆ ಹಿಡಿದು ವ್ಯಕ್ತಿಸುವದರಲ್ಲಿ, ತಮ್ಮ ಲೇಖನಿಯನ್ನು, ಪಟ್ಟಾಜೆಯವರು, ಮನಃಪೂರ್ಣವಾಗಿ ಬಳಸಿದ್ದಾರೆ.

    ಒಂದು ರೀತಿಯಿಂದ ಈ ಲೇಖನ, ಸುನಂದಾ ಬೆಳಗಾಂವಕರರ ಈ ಕಾದಂಬರಿಗೆ ಸಂದ ವಿನಮ್ರ ಗೌರವವೇ ಸರಿ!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter