ಮಾರಾಟವಾಗದ ನೆಲ

ಮಾರಾಟವಾಗದ ನೆಲವೆಂದರೆ
ಸಕಾಲಕ್ಕೆ ಮದುವೆಯಾಗದ ಹೆಣ್ಣು
ಎಲ್ಲಿ ಕಂಡರೂ ಜನರು
ಏನೇನೋ ಮಾತಾಡಿ ಕೊನೆಗೆ
“ಮಗಳಿಗೆ ನೆಂಟಸ್ತಿಕೆ ಬಂತೇ “
ಎನ್ನುವಂತೆ
“ಜಾಗಕ್ಕೆ ಗಿರಾಕಿಗಳು ಬಂದ್ರೇ?”

ಮಾಲೀಕನ ಅನುಪಸ್ಥಿತಿಯಲ್ಲಿ
ಜಾಗ ನೋಡಲು ಬಂದವರ
ಸಾಗ ಹಾಕುವವರಿದ್ದಾರೆ
ಮುಗ್ಧ ಜಮೀನಿನ ಮಾನವನ್ನು
ಮನ ಬಂದಂತೆ ಹರಾಜು ಮಾಡುವವರಿದ್ದಾರೆ

ತಕ್ಷಣ ಪ್ರತಿಕ್ರಯಿಸಲಸಾಧ್ಯವಾದಾಗ
ಬಾಯಿಗೆ ಬಂದಂತೆ ಬಡಬಡಿಸುವ
ತಲೆಕೆಟ್ಟ ಬ್ರೋಕರ್ ಗಳು

ಮಾರಾಟವಾಗದ ನೆಲವೆಂದರೆ
ಸುಮ್ಮನೆ ಅಲ್ಲ.
ಉಪಯೋಗಕ್ಕಿಲ್ಲದೆ
ಮೂಲೆಯಲ್ಲಿ ಬಿದ್ದ ನೋವೆಂದರೆ
ಸಾಮಾನ್ಯವಲ್ಲ.
ಸದಾ ಕಾಯುತ್ತಿರುತ್ತದೆ
ತನ್ನನ್ನು ಕೊಳ್ಳುವವನಿಗಾಗಿ.

ಗುಡಿಸಲೋ ಅರಮನೆಯೋ
ಏನಾದರೊಂದು ಕಟ್ಟಿ ಬಿಡಿ
ಎಂದೆನ್ನುವ ಅದರ ಅಳಲು.
ಕುಡುಕನಿಗೋ ಸಿಡುಕನಿಗೋ
ಯಾರೊಂದಿಗಾದರೂ ಸರಿ
ಕಟ್ಟಿಸಿ ಬಿಡಿ ಎಂದಳುವ
ಅವಿವಾಹಿತ ಹೆಣ್ಣಂತೆ

ಯಾರೂ ಇಲ್ಲದ ಸಮಯದಲ್ಲಿ
ತನಗಿಷ್ಟ ಬಂದಂತೆ ಚಿಗುರೊಡೆಯುವ
ಕಳೆ ಗಿಡಗಳ ಬಗ್ಗೆ ದ್ವೇಷ

ಯಾರು ಯಾರೋ ಬಂದು
ಹೂ ಹಣ್ಣುಗಳ ಕದ್ದೊಯ್ಯುವ ಬಗ್ಗೆ
ಭಯ

ಪಾಳು ಬಿದ್ದ ಮನೆ
ಪೋಲಿಗಳ ಕೇಂದ್ರವಾಗುವ ಆತಂಕ.
ಸೇರಿಕೊಂಡಿರುವ ವಿಷಜಂತುಗಳ
ನೆನೆವಾಗ ತತ್ತರ

ಬಿಕ್ಕಿ ಬಿಕ್ಕಿ ಅತ್ತರೂ
ವಾರೀಸುದಾರ ಅಸಹಾಯಕ.
ದಿನವೆಷ್ಟೇ ಕಳೆದರೂ ಕಾಯುತ್ತಾನೆ
ಸಿಗಬೇಕಲ್ಲ ಸರಿಯಾದ ರೊಕ್ಕ

******

                          

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

9 thoughts on “ಮಾರಾಟವಾಗದ ನೆಲ”

  1. JANARDHANRAO KULKARNI

    ಮದುವೆಯಾಗದ ಹೆಣ್ಣಿನ ಮನಸ್ಥಿತಿಯ ಬಗ್ಗೆ ಮನೋಜ್ಞವಾಗಿ ಚಿತ್ರಿತವಾಗಿದೆ. ಅಭಿನಂದನೆಗಳು.

  2. Chintamani Sabhahit

    ಬದುಕು ಯಾವಾಗಲೂ ಸುಂದರವಾಗಿರುವುದಿಲ್ಲ. ಎಲ್ಲವೂ ಅಶಾಶ್ವತ! ಎಲ್ಲವೂ ನಾವೆಣಿಸಿಕೊಂಡಂತೆ, ಆಗದಿರುವುದೇ ಕತೆಗೆ, ಕವಿತೆಗೆ ಕುಮ್ಮಕ್ಕು – ಎಲ್ಲಿ ಭಾವಸ್ಪಂದನೆಯೇ ಪ್ರಧಾನವಾಗಿದೆಯೋ ಅಲ್ಲೆಲ್ಲ.

    ವಿಷಯದ ಹಿನ್ನೆಲೆ ಏನೇ ಇರಲಿ, “ವಿಶ್ವಧ್ವನಿ”ಯಲ್ಲಿ ಈ ವಾರ ಪ್ರಕಟವಾದ ಸೌಮ್ಯ ಪ್ರವೀಣ್ ಅವರ “ಮಾರಾಟವಾಗದ ನೆಲ”,ಚಿಂತಾಮಣಿ ಕೊಡ್ಲೆಕೆರೆಯವರ “”ತಿಂಡಿ “, – ಈ ಎರಡೂ ಕವಿತೆಗಳ ಪಾರ್ಶ್ವ ಭೂಮಿ, ಒಂದು ಆದರ್ಶಕ್ಕೆ, ಅರುಚಿಯಾಗಿ, ವಾಸ್ತವತೆಯಿಂದ ಭಿನ್ನವಾಗುವ ಬಗೆಯನ್ನು, ತನ್ನದೇ ರೀತಿಯಲ್ಲಿ, ಕವಯಿತ್ರಿಯ, ಕವಿಯ ಅನುಭವ ಮೂಸೆಯಲ್ಲಿ, ವರ್ಣಿಸುತ್ತದೆ.

    ೧೯೭೫ರಲ್ಲಿ ಅಭ್ಯಸಿಸಿದ, ನೈಲಾನ್ ನೆನಪಾಗುತ್ತಿದೆ : ಯಾವ ಥ್ರೆಡ್ ಒಂದೇ ಕಾಲದಲ್ಲಿ, New York ಮತ್ತು Londonನ್ನಲ್ಲಿ ಸಂಶೋದಿಸಲ್ಪಟ್ಟಿದಿಯೋ, ಆ ವಸ್ತುವಿಗೆ NY – LON ಎಂದು ಹೆಸರಿಡಲಾಯಿತು.( New York ನಿಂದ “NY”, London ನಿಂದ “LON”)

    ಅದೇ ರೀತಿ, ಈ ಎರಡೂ ಕವಿತೆಗಳ ಭಾವದ ಬೆನ್ನೆಲುಬಿನಲ್ಲಿ, ಒಂದೇ ಡಿಎನ್ಎ ಇದೆ ಅನ್ನುವುದು ಒಂದು ವಿಶೇಷ!

    ‘ಕವಿ ಸಮಯ’ವನ್ನು ಭಟ್ಟಿ ಇಳಿಸಿದ, ಇಬ್ಬರಿಗೂ ಧನ್ಯವಾದಗಳು!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter