ಎಸ್ಥರ್ ದುಫ್ಲೋ ಫ್ರೆಂಚ್-ಅಮೇರಿಕನ್ ಅರ್ಥಶಾಸ್ತ್ರಜ್ಞೆ. ಸಮಕಾಲೀನ ಅರ್ಥಶಾಸ್ತ್ರಜ್ಞರಲ್ಲಿ ತುಂಬ ಪ್ರಸಿದ್ಧರಾದ ಎಸ್ಥರ್ ಭಾರತೀಯ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಯವರ ಪತ್ನಿ. 2019ನೆಯ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅರ್ಥಶಾಸ್ತ್ರ ವಿಭಾಗದಲ್ಲಿ ಅಭಿಜಿತ್ ಬ್ಯಾನರ್ಜಿ ಮತ್ತು ಮೈಕೆಲ್ ಕ್ರೆಮರ್ ಅವರ ಜೊತೆ ಜಂಟಿಯಾಗಿ ಪಡೆದಿದ್ದಾರೆ. ಜಾಗತಿಕ ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ವಿಷಯದಲ್ಲಿ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿ ಲಭಿಸಿದೆ.
ಎಸ್ಥರ್ ದುಫ್ಲೋ ಅವರು ಹಲವು ವಿಷಯಗಳಲ್ಲಿ ತಮ್ಮ ಸಮಕಾಲೀನ ಅರ್ಥಶಾಸ್ತ್ರಜ್ಞರಿಗಿಂತ ತುಂಬ ಭಿನ್ನರಾಗಿದ್ದಾರೆ. Poor Economics ಎಂಬ ವಿಷಯದಲ್ಲಿ ಅವರು ನಡೆಸಿದ ಆಳವಾದ ಅಧ್ಯಯನ ಮತ್ತು ಅದರ ಕುರಿತು ನೀಡಿರುವ ಒಳನೋಟಗಳು ಜಗತ್ತಿನ ಗಮನ ಸೆಳೆದಿವೆ. “ಜಾಗತಿಕ ಪಿಡುಗಾದ ಬಡತನದ ನಿರ್ಮೂಲನೆಯ ವಿಷಯದಲ್ಲಿ ಎಸ್ಥರ್ ಅವರು ಕಂಡುಕೊಂಡ ಪರಿಹಾರೋಪಾಯಗಳು ತುಂಬ ವಾಸ್ತವಿಕ ಮತ್ತು ಪ್ರಯೋಗಶೀಲವಾಗಿದ್ದು ಜಾಗತಿಕ ಬಡತನ ನಿರ್ಮೂಲನೆಯಲ್ಲಿ ಮುಖ್ಯ ಪಾತ್ರ ವಹಿಸಬಲ್ಲವು…” ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಅವರು ಹೇಳಿದ್ದಾರೆ.
ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾದ ಬಡತನದ ನಿರ್ಮೂಲನೆಯ ಕುರಿತ ಎಸ್ಥರ್ ಅವರ ಚಿಂತನೆಗಳು ಹೊಸತನದಿಂದ ಕೂಡಿದ್ದು, ಅವನ್ನು ವ್ಯವಸ್ಥಿತವಾಗಿ ಜಾರಿಗೆ ತಂದಲ್ಲಿ ತುಂಬ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯ ಎಂಬುದನ್ನು ಅನೇಕ ಅರ್ಥಶಾಸ್ತ್ರಜ್ಞರು ಒಪ್ಪಿದ್ದಾರೆ. ವಿಶೇಷವಾಗಿ ತುಂಬ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಬಡತನ ನಿರ್ಮೂಲನೆ ಮಾಡುವ ವಿಷಯದಲ್ಲಿ ಎಸ್ಥರ್ ದುಫ್ಲೋ ಅವರ ಚಿಂತನೆಗಳು ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವು. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ರಾಷ್ಟ್ರಗಳಲ್ಲಿ Microfinance (ಸೂಕ್ಷ್ಮ ಹಣಕಾಸು) ಯೋಜನೆ ಬಡ ಮತ್ತು ಕೆಳ ಮಧ್ಯಮವರ್ಗದ ಜನರ ಜೀವನಶೈಲಿಯ ಸುಧಾರಣೆಯಲ್ಲಿ ವಹಿಸಿದ ಪಾತ್ರದ ಕುರಿತ ಎಸ್ಥರ್ ಅವರ ಅಧ್ಯಯನ ತುಂಬ ಮಹತ್ವದ ಒಳನೋಟಗಳಿಂದ ಕೂಡಿದ್ದು, ಸೂಕ್ಷ್ಮ ಹಣಕಾಸು ಯೋಜನೆಯ ಸಾಧಕ – ಬಾಧಕಗಳ ಕುರಿತು ಮರುಚಿಂತನೆ ನಡೆಸಲು ಆಗ್ರಹಿಸುವಷ್ಟು ಪ್ರಭಾವಶಾಲಿಯಾಗಿದೆ. ಒಟ್ಟಿನಲ್ಲಿ ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆಯ ಕುರಿತು, ಆ ದೇಶಗಳ ಬಡತನ ನಿರ್ಮೂಲನೆ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಕುರಿತ ಎಸ್ಥರ್ ದುಫ್ಲೋ ಅವರ ಕೊಡುಗೆ ಅಸಾಧಾರಣವಾದುದು. ಅದಕ್ಕೆಂದೇ ಅವರಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ.
ಅರ್ಥಶಾಸ್ತ್ರಜ್ಞೆಯಾದ ಎಸ್ಥರ್ ದುಫ್ಲೋ ಅವರು ಮಕ್ಕಳ ಸಾಹಿತ್ಯದಲ್ಲಿ ಕೆಲಸ ಮಾಡಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಆರ್ಥಿಕ ವಿಕಾಸ ಮತ್ತು ಮೂಲಭೂತ ಅಧಿಕಾರಗಳನ್ನು ಪಡೆಯುವ ಬಗೆಗಿನ ಐದು ಪುಸ್ತಕಗಳ ಸರಣಿಯನ್ನು ಎಸ್ಥರ್ ಅವರು ಫ್ರೆಂಚ್ ಭಾಷೆಯಲ್ಲಿ ರೂಪಿಸಿದ್ದು, ಖ್ಯಾತ ಚಿತ್ರಕಾರ ಶಾಯೆನ್ ಒಲೀವ್ಹಿಯೆ ಚಿತ್ರಗಳನ್ನು ಒದಗಿಸಿದ್ದಾರೆ. ಈ ಸಚಿತ್ರ ಮಕ್ಕಳ ಪುಸ್ತಕಗಳ ಸರಣಿಯಲ್ಲಿ ಒಟ್ಟು ಐದು ಪುಸ್ತಕಗಳಿವೆ. ‘ಅಫಿಯಾ – ಅವಳನ್ನು ಗುಣಪಡಿಸುವವರು ಯಾರು?’, ‘ಬಿಬಿರ್ – ಮಾಟಗಾತಿಗೊಂದು ಪುಟ್ಟ ಸಹಾಯ’, ‘ನೀಲೂ – ಇನ್ನು ಶಾಲೆ ತಪ್ಪಿಸುವುದಿಲ್ಲ!’, ‘ಊಲಾ – ಚುನಾವಣಾ ಸಮಯ’ ಹಾಗೂ ‘ನೆಸೊ ಮತ್ತು ನಾಜೆ – ದೊಡ್ಡ ಸಿಟಿಯ ಭಯವಿಲ್ಲ’.
ಈ ಸರಣಿಯ ಮೊದಲ ಪುಸ್ತಕ, ‘ಅಫಿಯಾ – ಅವಳನ್ನು ಗುಣಪಡಿಸುವವರು ಯಾರು?’. ಅಫಿಯಾಳಿಗೆ ಆರೋಗ್ಯ ಚೆನ್ನಾಗಿಲ್ಲ. ರಾತ್ರಿಯೆಲ್ಲ ಮೈ ನಡುಕದಿಂದ ನಿದ್ದೆಯಿಲ್ಲದೆ ಬಳಲಿದ್ದಾಳೆ. ಸ್ವತಃ ಔಷಧಿಯಂಗಡಿಯೊಂದರ ಮಾಲೀಕನಾದ ಅವಳ ಅಪ್ಪ ಹಳ್ಳಿಯ ವೈದ್ಯ ದಾದಾಸ್ ಹತ್ತಿರ ಚಿಕಿತ್ಸೆ ಕೊಡಿಸಿದರೂ ಅಫಿಯಾಳಿಗೆ ಗುಣವಾಗುವುದಿಲ್ಲ. ಹಳ್ಳಿಯ ವೈದ್ಯ ದಾದಾಸ್ ಭೂಗೋಳದಲ್ಲಿ ಡಿಪ್ಲೋಮಾ ಪದವಿ ಪಡೆದವನು! ಅವನಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದಾಗ ಹಳ್ಳಿಯ ಮಂತ್ರವಾದಿ ಬಕಾಲಾನ ಹತ್ತಿರ ಕರೆದೊಯ್ಯುತ್ತಾರೆ. ಅಲ್ಲೂ ಕೂಡ ಅಫಿಯಾಳ ರೋಗ ಗುಣವಾಗದೇ ಹೋದಾಗ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಾರೆ. ಈ ಹೊತ್ತಿಗೆ ಅಫಿಯಾ ಸಾಕಷ್ಟು ನಿಶ್ಶಕ್ತಳಾಗಿರುತ್ತಾಳೆ. ಆರೋಗ್ಯ ಕೇಂದ್ರದಲ್ಲಿ ಅಫಿಯಾಳಿಗೆ ಬಂದಿರುವುದು ಮಲೇರಿಯಾ ಖಾಯಿಲೆಯೆಂದು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡುತ್ತಾರೆ. ಆರೋಗ್ಯ ಕೇಂದ್ರದಲ್ಲಿ ಲಸಿಕೆ ಖಾಲಿಯಾಗಿದ್ದರಿಂದ ನೀಲೂಳ ತಂದೆ ದೊಡ್ಡ ನಗರಕ್ಕೆ ಹೋಗಿ ಲಸಿಕೆ ತಂದು ಕೊಡುತ್ತಾರೆ. ಲಸಿಕೆ ಪಡೆದ ನಂತರ ಅಫಿಯಾಳ ಆರೋಗ್ಯ ಸುಧಾರಿಸುತ್ತದೆ. ಮುಂದೆ ಸರ್ಕಾರದಿಂದ ಅಫಿಯಾಳ ಹಳ್ಳಿಯವರಿಗೆಲ್ಲಾ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಮತ್ತು ಸೊಳ್ಳೆ ಪರದೆಗಳನ್ನು ಹಂಚಲಾಗುತ್ತದೆ.
ಈ ಪುಟ್ಟ ಕಥೆ ದಡಾರ ಮತ್ತು ಮಲೇರಿಯಾದಂತಹ ರೋಗಗಳಿಂದ ಸೊಳ್ಳೆ ಪರದೆ ಉಪಯೋಗಿಸುವ ಮೂಲಕ ಮತ್ತು ಲಸಿಕೆ ಪಡೆದುಕೊಳ್ಳುವ ಮೂಲಕ ಯಾವ ರೀತಿ ಪಾರಾಗಬಹುದು ಎಂಬುದನ್ನು ತುಂಬ ಸೊಗಸಾಗಿ ನಿರೂಪಿಸಿದೆ.
‘ಬಿಬಿರ್ – ಮಾಟಗಾತಿಗೊಂದು ಪುಟ್ಟ ಸಹಾಯ’ ಎಂಬ ಕಥೆಯಲ್ಲಿ ಒಬ್ಬ ಮುದುಕಿ ಊರ ಜನರಿಂದ ತಿರಸ್ಕೃತಳಾಗಿ ಊರ ಹೊರಗೆ ಒಬ್ಬಂಟಿಯಾಗಿ ಬದುಕುತ್ತಿದ್ದಾಳೆ. ಅವಳಿಗೆ ಮಾಟಗಾತಿ ಎಂಬ ಕುಖ್ಯಾತಿಯಿದೆ, ಆದರೆ ಅವಳು ಮಾಟಗಾತಿಯಲ್ಲ. ಬಡತನದಿಂದ ಬಳಲುತ್ತಿರುವ ಅವಳಿಗೆ ಯಾವುದೇ ಕೆಲಸವೂ ಇಲ್ಲ, ಹೊಟ್ಟೆಗೆ ಅನ್ನವೂ ಇಲ್ಲ. ಇದನ್ನು ಮೊದಲು ಗುರುತಿಸುವವ ಪುಟ್ಟ ಬಾಲಕ ಬಿಬಿರ್. ಮುಂದೆ ಸರ್ಕಾರಿ ಯೋಜನೆಯೊಂದರಲ್ಲಿ ಮುದುಕಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆ ಯಂತ್ರ ನೀಡಲಾಗುತ್ತದೆ. ಹೊಲಿಗೆಯಲ್ಲಿ ನುರಿತವಳಾದ ಅಜ್ಜಿ ಊರ ಜನರಿಗೆ ಒಳ್ಳೊಳ್ಳೆಯ ಬಟ್ಟೆ ಹೊಲಿದು ಕೊಡುತ್ತಾಳೆ. ಮುಂದೆ ಕೊರೋನಾ ಮಹಾಮಾರಿ ಬಂದ ಸಮಯದಲ್ಲಿ ಮಾಸ್ಕ್ ಗಳಿಗೆ ತುಂಬ ಬೇಡಿಕೆ ಬರುತ್ತದೆ. ಆ ಸಮಯದಲ್ಲಿ ಸಾಕಷ್ಟು ಮಾಸ್ಕ್ ಗಳನ್ನು ಹೊಲಿದು ಕೊಡುವ ಮೂಲಕ ಸಾಕಷ್ಟು ಸಂಪಾದನೆ ಮಾಡುತ್ತಾಳೆ. ಮುಂದೆ ಅವಳ ಹೊಲಿಗೆಯ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಬಂದಾಗ ಊರ ಜನರಲ್ಲಿ ಕೆಲವರನ್ನು ಸೇರಿಸಿಕೊಳ್ಳುತ್ತಾಳೆ.
ಈ ಪುಟ್ಟ ಕಥೆ ಸ್ವಾವಲಂಬನೆ ಮತ್ತು ಸ್ವಯಂ ಉದ್ಯೋಗದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತದೆ. ಅದೇ ರೀತಿ ಬಡವರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದು ಹೇಗೆ ಬದುಕು ರೂಪಿಸಿಕೊಳ್ಳಬಹುದು ಎಂಬುದನ್ನು ಸಹ ಸೊಗಸಾಗಿ ಹೇಳಿದೆ.
‘ನೀಲೂ – ಇನ್ನು ಶಾಲೆ ತಪ್ಪಿಸುವುದಿಲ್ಲ!’ ಎಂಬುದು ಶಾಲೆಯೆಂದರೆ ಆಗದ ನೀಲೂ ಎಂಬ ಪುಟ್ಟ ಬಾಲಕಿಯ ಕಥೆ. ಶಾಲೆಯ ಪಾಠಗಳು, ಸೊಸ್ಸಾ ಮಿಸ್ಸಿನ ಬೈಗುಳಿಂದ ಬೇಸತ್ತಿರುವ ನೀಲೂಗೆ ಶಾಲೆಯೆಂದರೆ ಅಲರ್ಜಿ. ಹೀಗಾಗಿ ಅವಳು ಶಾಲೆಗೆ ಚಕ್ಕರ್ ಹಾಕಿ ಬಿಬಿರ್, ಥುಂಪಾ ಮತ್ತು ಊಲಾರ ಜೊತೆ ಆರಾಮಾಗಿ ಆಟವಾಡಿಕೊಂಡಿರುತ್ತಾಳೆ. ಕೊನೆಗೆ ಅವಳ ಅಮ್ಮ ಇದನ್ನು ಪತ್ತೆ ಹಚ್ಚಿ ಅವಳನ್ನು ಪುನಃ ಶಾಲೆಗೆ ಕರೆದೊಯ್ಯುತ್ತಾಳೆ. ಒಂದು ಬಾರಿ ಪಟ್ಟಣದಿಂದ ಬಂದ ಒಬ್ಬ ಅಕ್ಕ ಸಾಕಷ್ಟು ಪುಸ್ತಕ ತರುತ್ತಾಳೆ. ಅದೇ ರೀತಿ ಸಿಟಿಗೆ ಹೋಗಿ ಬಂದ ದೊಡ್ಡ ಮಕ್ಕಳು, ಚಿಕ್ಕ ಮಕ್ಕಳಿಗೆ ಪಾಠ ಹೇಳಿ ಕೊಡಲು ಆರಂಭಿಸಿದ ನಂತರ ನೀಲೂ ಸೇರಿದಂತೆ ಎಲ್ಲ ಮಕ್ಕಳಿಗೆ ಕಲಿಕೆ ಸುಲಭವಾಗುತ್ತದೆ.
ಈ ಪುಟ್ಟ ಕಥೆ ಶಿಕ್ಷಣದ ಮಹತ್ವ ಮತ್ತು ಹೊಸ ಕಲಿಕಾ ವಿಧಾನಗಳ ಕುರಿತು ಮಕ್ಕಳ ಗಮನ ಸೆಳೆಯುತ್ತದೆ. ಕಲಿಕೆ ಮಕ್ಕಳಿಗೆ ಭಾರವೆನಿಸದೇ, ಇಷ್ಟಪಟ್ಟು ಕಲಿಯುವಂತಾಗಬೇಕೆಂದು ತಿಳಿಸುವಲ್ಲಿ ಈ ಕಥೆ ಸಫಲವಾಗಿದೆ.
‘ಊಲಾ – ಚುನಾವಣೆ ಸಮಯ’ ಎಂಬ ಕಥೆಯಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ನೂರ್ ಮತ್ತೆ ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ವಿಷಯದಿಂದ ಆರಂಭವಾಗಿ ನೀಲೂಳ ತಾಯಿ ಶೋನಾ ಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ಸುಖಾಂತ್ಯ ಕಾಣುತ್ತದೆ. ಊರ ಜನರ ಹಿತದೃಷ್ಟಿಯಿಂದ ಕೆಲಸ ಮಾಡುವ ನೂರ್ ಮತ್ತೆ ಅಧ್ಯಕ್ಷೆಯಾಗುವುದು ಮಾಗೂಗೆ ಇಷ್ಟವಿಲ್ಲ. ಅದೇ ರೀತಿ ಊರ ಜನರ ಹಿತ ಚಿಂತನೆ ಮಾಡದ ಮಾಗೂ ಚುನಾವಣೆಯಲ್ಲಿ ಗೆಲ್ಲುವುದು ತುಂಬ ಜನರಿಗೆ ಇಷ್ಟವಿಲ್ಲ. ಆದ್ದರಿಂದ ಶೋನಾ ಚುನಾವಣೆಗೆ ನಿಂತು ಗೆಲ್ಲುತ್ತಾಳೆ.
ಈ ಪುಟ್ಟ ಕಥೆ ಸ್ಥಳೀಯ ಸಂಸ್ಥೆಗಳು, ಚುನಾವಣೆಗಳು, ಊರ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಅಗತ್ಯವನ್ನು ತುಂಬ ಸರಳವಾಗಿ, ಮಕ್ಕಳಿಗೆ ಅರ್ಥವಾಗುವಂತೆ ತಿಳಿ ಹೇಳುವಲ್ಲಿ ಯಶಸ್ವಿಯಾಗಿದೆ
ಈ ಸರಣಿಯ ಕೊನೆಯ ಪುಸ್ತಕ, ‘ನೆಸೊ ಮತ್ತು ನಾಜೆ – ದೊಡ್ಡ ಸಿಟಿಯ ಭಯವಿಲ್ಲ’. ಈ ಪುಟ್ಟ ಕಥೆಯಲ್ಲಿ ಬಡತನದಿಂದ ಕಂಗೆಟ್ಟ ನೆಸೊ ಮತ್ತು ನಾಜೆ ದೊಡ್ಡ ಸಿಟಿಗೆ ಹೋಗಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಮೂಲಕ ಹಣ ಸಂಪಾದಿಸುತ್ತಾರೆ. ತಾವು ಸಂಪಾದಿಸಿದ ಹಣವನ್ನು ಹಳ್ಳಿಯಲ್ಲಿರುವ ತಮ್ಮ ಕುಟುಂಬಗಳಿಗೆ ಕಳಿಸುತ್ತಾರೆ. ಅವರು ಕಳಿಸುವ ಹಣದಿಂದ ಅವರ ಕುಟುಂಬಗಳು ನೆಮ್ಮದಿಯಾಗಿ ಬಾಳುವಂತಾಗುತ್ತದೆ. ಆದರೆ ಇದ್ದಕ್ಕಿದ್ದಂತೆ ಬಂದ ಸಾಂಕ್ರಾಮಿಕ ರೋಗದ ಕಾರಣ ಲಾಕ್ ಡೌನ್ ಆಗಿ ಕೆಲಸಗಳು ನಿಂತು ಬಿಡುತ್ತವೆ. ಮುಂದೆ ನಿಧಾನವಾಗಿ ಎಲ್ಲ ಸರಿಯಾದಾಗ ನೊಸೆ ಮತ್ತು ನಾಜೆ ಪುನಃ ಸಿಟಿಗೆ ಮರಳಿ, ಯಜಮಾನನ ಮನವೋಲಿಸಿ ತಮಗೆ ಬೇಕಾದ ಕೆಲವು ಸೌಲಭ್ಯಗಳನ್ನು ಪಡೆಯುವಲ್ಲಿ ಸಫಲರಾಗುತ್ತಾರೆ.
ಈ ಪುಟ್ಟ ಕಥೆ ಬಡತನ, ಸಾಂಕ್ರಾಮಿಕ ರೋಗಗಳ ಪರಿಣಾಮಗಳು, ಕಾರ್ಮಿಕರ ಕಷ್ಟಗಳು ಮತ್ತು ಕಾರ್ಮಿಕರ ಮೂಲಭೂತ ಹಕ್ಕುಗಳಾದ ಊಟ, ವಸತಿ ಮತ್ತು ವೇತನದ ಕುರಿತ ಜಾಗೃತಿಯನ್ನು ಮಕ್ಕಳಿಗೆ ತುಂಬ ಸರಳವಾಗಿ ತಿಳಿಯುವಂತೆ ಹೇಳುವಲ್ಲಿ ಸಫಲವಾಗಿದೆ.
ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಾದ ಎಸ್ಥರ್ ದುಫ್ಲೋ ಅವರು ಮಕ್ಕಳಿಗಾಗಿ ಪುಸ್ತಕ ಬರೆದದ್ದು ನಿಜಕ್ಕೂ ಒಂದು ಅಪರೂಪದ ಸಂಗತಿ ಮತ್ತು ಅದು ಸ್ವಾಗತಾರ್ಹವಾದುದು. ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ವಿಷಯದಲ್ಲಿ ಸಾಕಷ್ಟು ಕೆಲಸ ಮಾಡಿರುವ ಎಸ್ಥರ್ ಅವರು ಮೂಲಭೂತ ವಿಚಾರಗಳಾದ ಬಡತನ ನಿರ್ಮೂಲನೆ, ಶಿಕ್ಷಣದ ಮಹತ್ವ, ಆರೋಗ್ಯದ ಅರಿವು, ಸ್ವಂತ ಉದ್ಯೋಗದ ಅವಕಾಶ, ಸರ್ಕಾರಿ ಯೋಜನೆಗಳು, ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳು, ಚುನಾವಣೆಯ ಅಗತ್ಯ ಮತ್ತು ಮೂಲಭೂತ ಹಕ್ಕುಗಳ ಕುರಿತ ಜಾಗೃತಿ ಮೂಡಿಸಲು ನೆರವಾಗುವಂತೆ ಈ ಸಚಿತ್ರ ಮಕ್ಕಳ ಪುಸ್ತಕಗಳನ್ನು ರೂಪಿಸಿದ್ದಾರೆ. ಮಕ್ಕಳ ಮನಸ್ಸಿಗೆ ಸರಳವಾಗಿ ಅರ್ಥವಾಗುವಂತಹ ಪುಟ್ಟ ಪುಟ್ಟ ಘಟನೆಗಳನ್ನಿಟ್ಟುಕೊಂಡು ಬರೆದಿರುವ ಈ ಕಥೆಗಳು ವಸ್ತು, ಭಾಷೆ ಮತ್ತು ಶೈಲಿಯ ದೃಷ್ಟಿಯಿಂದಲೂ ಸಹ ಗಮನ ಸೆಳೆಯುವಂತಿವೆ. ಈ ಸಚಿತ್ರ ಪುಸ್ತಕಗಳಲ್ಲಿರುವ ಸಣ್ಣ ಸಣ್ಣ ಕಥೆಗಳು ತುಂಬ ಕಡಿಮೆ ಪದಗಳಿಂದ ಕೂಡಿದ್ದು, ಚಿತ್ರಗಳ ಮೂಲಕವೇ ಮಕ್ಕಳಿಗೆ ಅರ್ಥವಾಗುವಂತೆ ರೂಪಿಸಲ್ಪಟ್ಟಿರುವುದರಿಂದ ಖಂಡಿತವಾಗಿಯೂ ಮಕ್ಕಳಿಗೆ ಇಷ್ಟವಾಗುತ್ತವೆ. ಎಸ್ಥರ್ ಅವರ ಕಥೆಗಳಿಗೆ ತಕ್ಕಂತಹ ಒಳ್ಳೆಯ ಚಿತ್ರಗಳನ್ನು ಬರೆದಿರುವ ಚಿತ್ರಕಾರ ಶಾಯೆನ್ ಒಲೀವ್ಹಿಯೆ ಅವರ ಕಲಾ ಚಾತುರ್ಯ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಎದ್ದು ಕಾಣುತ್ತದೆ. ಈ ಪುಸ್ತಕಗಳು ಇಷ್ಟು ಚೆನ್ನಾಗಿ ಮೂಡಿ ಬರಲು ಕಾರಣರಾದ ಎಸ್ಥರ್ ದುಫ್ಲೋ ಮತ್ತು ಶಾಯೆನ್ ಒಲೀವ್ಹಿಯೆ ಅಭಿನಂದನಾರ್ಹರು.
ಪ್ರಸ್ತುತ ಎಸ್ಥರ್ ದುಫ್ಲೋ ಅವರ ಈ ಸಚಿತ್ರ ಮಕ್ಕಳ ಪುಸ್ತಕ ಸರಣಿಯಲ್ಲಿ ಒಟ್ಟು ಐದು ಪುಸ್ತಕಗಳಿವೆ. ತಲಾ 40 ಪುಟಗಳ ಈ ಪುಸ್ತಕಗಳು ಆರ್ಟ್ ಪೇಪರಿನಲ್ಲಿ, ಬಹುವರ್ಣದಲ್ಲಿ, ತುಂಬ ಆಕರ್ಷಕ ವಿನ್ಯಾಸದೊಂದಿಗೆ ಮುದ್ರಣಗೊಂಡಿವೆ. ಈ ಪುಸ್ತಕಗಳು ಖಂಡಿತ ಮಕ್ಕಳಿಗೆ ಇಷ್ಟವಾಗುತ್ತವೆ. ಕನ್ನಡ ಭಾಷೆಯಲ್ಲಿ ಇಂತಹ ಒಳ್ಳೆಯ ಗುಣಮಟ್ಟದ ಮಕ್ಕಳ ಪುಸ್ತಕಗಳನ್ನು ತರುತ್ತಿರುವ ಪ್ರಥಮ್ ಬುಕ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮಕ್ಕಳ ಮನೋವಿಕಾಸ ಮತ್ತು ಓದಿನ ಅಭಿರುಚಿಯನ್ನು ಹೆಚ್ಚಿಸುವಂತೆ ಮಾಡುವ ಈ ಸಚಿತ್ರ ಮಕ್ಕಳ ಪುಸ್ತಕ ಸರಣಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ದೊರೆಯುವಂತಾಗಲಿ.
3 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಎಸ್ಥರ್ ದುಫ್ಲೋ ಅವರ ಮೂಲಭೂತ ವಿಚಾರಗಳ ಕುರಿತ ಮಕ್ಕಳ ಪುಸ್ತಕ ಸರಣಿ”
ತುಂಬ ಒಳ್ಳೆಯ ಬರೆಹ. ಅತ್ಯವಶ್ಯವಾದ ಮತ್ತು ಅತ್ಯಂತ ಉಪಯುಕ್ತವಾದ ವಿಷಯವನ್ನು ನಮ್ಮ ಗಮನಕ್ಕೆ ತರುತ್ತದೆ. ವಿಕಾಸ ಇಂತಹ ವಿಧಾಯಕ ಬರೆಹಗಳನ್ನು ಹೆಚ್ಚಿಗೆ ನೀಡಲಿ
ವಿಕಾಸ ಅವರ ವೈವಿಧ್ಯಮಯ ಲೇಖನಗಳು ಓದಲು ತುಂಬಾ ಇಷ್ಟವಾಗುತ್ತವೆ.
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ವಿಕಾಸ್.