ಪ್ರೀತಿಯನರಸುತ್ತಾ ಚಿಣ್ಣರು

`ಶಾರದಾ ವಿದ್ಯಾ ನಿಕೇತನ' ತಲೆಬರಹ ಹೊತ್ತ ವಿದ್ಯಾ ಸಂಸ್ಥೆಯಲ್ಲಿ ಶಿಶು ವಿಹಾರದಿಂದ ಹಿಡಿದು ಪದವಿಪೂರ್ವ ತರಗತಿಗಳವರೆಗೆ ವಿದ್ಯಾರ್ಜನೆ ಲಭ್ಯವಿತ್ತು. ಅನುಭವಿ, ಮಾನವೀಯ ಕಳಕಳಿಯ, ಜ್ಞಾನ ಭಂಡಾರದ, ದಕ್ಷ ಆಡಳಿತಗಾರ ಪ್ರಾಂಶುಪಾಲರಿದ್ದರು. ನುರಿತ ಶಿಕ್ಷಕ ವೃಂದವಿತ್ತು. ಮಕ್ಕಳಿಗೆ ಆಟವಾಡಲು ವಿಶಾಲವಾದ ಮೈದಾನವಿತ್ತು. ಜ್ಞಾನಾರ್ಜನೆಗೆ ವಿಪುಲ ಪುಸ್ತಕಗಳ ಗ್ರಂಥಾಲಯವಿತ್ತು. ಊರಲ್ಲಿ ಇಂಥಹ ಹತ್ತಾರು ವಿದ್ಯಾ ಸಂಸ್ಥೆಗಳಿದ್ದರೂ ಶಾರದಾ ವಿದ್ಯಾನಿಕೇತನ ಮೊದಲ ಸ್ಥಾನದಲ್ಲಿ ನಿಲ್ಲುತ್ತಿತ್ತು. ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ಫೀಜ್ ಯೋಗ್ಯದರಲ್ಲಿತ್ತು. ಬೇರೆ ವಿದ್ಯಾ ಸಂಸ್ಥೆಗಳಿಗೆ ಹೋಲಿಸಿದರೆ ಕಡಿಮೆಯೇ ಎಂದೆನ್ನಬಹುದು. ಹೀಗಾಗಿ ಊರಿನಲ್ಲಿ ಆ ಶಾಲೆ ಎಂದರೆ ಬಹುತೇಕರಿಗೆ ಅಚ್ಚುಮೆಚ್ಚು.
ಆರನೇ ತರಗತಿಯಲ್ಲಿ ಓದುತ್ತಿರುವ ಪ್ರಚೇತ್ ಮತ್ತು ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಅವನ ತಂಗಿ ಪ್ರಣಮ್ಯಾ ಶಾರದಾ ವಿದ್ಯಾನಿಕೇತನದಲ್ಲಿ ಅರಳುತ್ತಿರುವ ಪ್ರತಿಭೆಗಳು. ಅವರದೇ ಬಡಾವಣೆಯಲ್ಲಿ ವಾಸಿಸುವ, ಆರನೇ ತರಗತಿಯಲ್ಲಿ ಓದುತ್ತಿರುವ ಅಕ್ಷತಾ ಮತ್ತು ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಅವಳ ತಮ್ಮ ಆವಿಷ್ಕಾರ್ ಅವರ ಆತ್ಮೀಯ ಗೆಳೆಯರು. ಅಂದಿನ ಶಾಲೆಯ ಸಮಯ ಮುಗಿದಾಗ ಪ್ರಚೇತ್, ಅಕ್ಷತಾ, ಪ್ರಣಮ್ಯಾ, ಆವಿಷ್ಕಾರ್ ತಮ್ಮ ಇತರ ಸಹಪಾಠಿಗಳ ಜೊತೆಗೆ ತರಗತಿಯಿಂದ ಹೊರಬಂದು ಅದೂ, ಇದೂ ಮಾತಾಡುತ್ತಾ ಶಾಲೆಯ ಆವರಣದಲ್ಲಿ ಎಲ್ಲರೂ ಕೂಡಿಕೊಂಡು ಮುಖ್ಯದ್ವಾರ ತಲುಪಿದರು. ಎಲ್ಲರ ಬೆನ್ನಲ್ಲಿ ಮಣಭಾರದ ಶಾಲಾ ಪುಸ್ತಕಗಳ ಬ್ಯಾಗ್. ಶಾಲೆಯ ಮುಖ್ಯ ದ್ವಾರದ ಕಂಪೌಂಡ್ ಗೋಡೆಯ ಸುತ್ತಮುತ್ತ ಎಲ್ಲೆಲ್ಲೂ ವಾಹನಗಳೇ. ಸಾಲು ಸಾಲು ಬೈಕ್‍ಗಳು, ಸ್ಕೂಟಿಗಳು, ಕಾರುಗಳು, ಆಟೋಗಳು, ಶಾಲಾ ವಾಹನಗಳು. ವಿದ್ಯಾ ಸಂಸ್ಥೆಯವರೂ ವಾಹನಗಳ ನಿಲುಗಡೆಗೆಂದೇ ಸಾಕಷ್ಟು ಜಾಗವನ್ನು ಬಿಟ್ಟುಕೊಟ್ಟಿದ್ದರು. ವಿದ್ಯಾರ್ಥಿಗಳ ಪಾಲಕರು ಮಕ್ಕಳ ಬರುವಿಕೆಗಾಗಿ ಹಾದಿ ನೋಡುತ್ತಿದ್ದರು. ಪಾಲಕರ ಕಣ್ಣುಗಳು ತಮ್ಮ ಮಕ್ಕಳ ಹುಡುಕಾಟದಲ್ಲಿದ್ದರೆ ಮಕ್ಕಳ ಕಣ್ಣುಗಳು ತಮ್ಮ ಪಾಲಕರ ಹುಡುಕಾಟದಲ್ಲಿದ್ದವು.  

"ಅಕ್ಷತಾ, ನಿಮ್ಮ ಅಜ್ಜ, ಅಜ್ಜಿ ಕಾಣುತ್ತಿಲ್ಲವಲ್ಲ...? ಊರಿಗೆ ಹೋದರೇನು...?" ಅಕ್ಷತಾ ಮತ್ತು ಆವಿಷ್ಕಾರ್ ಅವರ ಅಜ್ಜ, ಅಜ್ಜಿಯರು ಕಣ್ಣಿಗೆ ಬೀಳದಿದ್ದಾಗ ಪ್ರಚೇತ್ ಅಕ್ಷತಾಳೊಂದಿಗೆ ಮಾತಿಗಿಳಿದ. ಅಕ್ಷತಾ ಮತ್ತು ಆವಿಷ್ಕಾರರ ಅಜ್ಜ ಒಬ್ಬರೇ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಹೋಗಲು ಬರುತ್ತಿದ್ದರು. ಕಾರಣ ಅಜ್ಜಿ ಬೆಳಿಗ್ಗೆ ಅಡುಗೆ ಮನೆಯ ಕೆಲಸಗಳಲ್ಲಿ ಒಂದಿಷ್ಟು ಬಿಜಿಯಾಗಿರುತ್ತಿದ್ದರು. ಸಾಯಂಕಾಲ ಅಜ್ಜ, ಅಜ್ಜಿ ಇಬ್ಬರೂ ಜೊತೆಗೂಡಿಕೊಂಡು ಬಂದು ಮೊಮ್ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಚಿಣ್ಣರ ಚಿಲಿಪಿಲಿ ಗಾನ ಆಲಿಸುತ್ತಾ ಮೊಮ್ಮಕ್ಕಳೊಂದಿಗೆ ತಾವೂ ಮೊಮ್ಮಕ್ಕಳಾಗಿ ಹರಟುತ್ತಾ, ನಗುತ್ತಾ, ಕೇಕೆಹಾಕುತ್ತಾ ಅವರ ಹೆಜ್ಜೆಗಳಲ್ಲಿ ಹೆಜ್ಜೆಗಳನ್ನಿಕ್ಕುತ್ತಾ ಮುನ್ನಡೆಯುತ್ತಿದ್ದರು. ತಮ್ಮ ಮೊಮ್ಮಕ್ಕಳ ಜೊತೆಗೆ ಸದಾ ಮಿಂಚುತ್ತಿದ್ದ ಪ್ರಚೇತ್ ಮತ್ತು ಪ್ರಣಮ್ಯಾ ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಅವರ ಬಡಾವಣೆಯ ಮೊದಲ ತಿರುವಿನಲ್ಲಿ ಅವರಿಗೆ `ಬೈ' ಹೇಳಿ ತಾವೂ `ಬೈ' ಹೇಳಿಸಿಕೊಂಡು ಮುಂದಿನ ತಿರುವಿನಲ್ಲಿದ್ದ ತಮ್ಮ ಮನೆಗೆ ತಮ್ಮ ಮೊಮ್ಮಕ್ಕಳೊಂದಿಗೆ ಹೆಜ್ಜೆಹಾಕುತ್ತಿದ್ದರು. ಪ್ರಚೇತ್ ಮತ್ತು ಪ್ರಣಮ್ಯಾರ ಜೊತೆಗೆ ಒಂಥರ ಅವಿನಾಭಾವ ಬೆಸುಗೆ ಬೆಸೆದಿತ್ತು. ಅವರ ತಂದೆ, ತಾಯಿಗಳಿಬ್ಬರೂ ಉದ್ಯೋಗದಲ್ಲಿದ್ದುದರಿಂದ, ಅಲ್ಲದೇ ಮನೆಯೂ ಕೇವಲ ಎರಡು ಫರ್ಲಾಂಗ್ ದೂರದಲ್ಲಿದ್ದುದರಿಂದ ಇಬ್ಬರೂ ನಡೆದುಕೊಂಡೇ ಶಾಲೆಗೆ ಹೋಗಿಬಂದು ಮಾಡುತ್ತಿದ್ದರು.
"ಅರೇ ಹೌದಲ್ವಾ...? ತಾತ, ಅಜ್ಜಿ ಇನ್ನೂ ಯಾಕೆ ಬಂದಿಲ್ಲ ಇವತ್ತು...? ಪ್ರಚೇತೂ, ಹಂಗೆಲ್ಲ ತಾತ, ಅಜ್ಜಿ ಹೇಳದೇ-ಕೇಳದೇ ಊರಿಗೆ ಹೋಗುವವರಲ್ಲ?" ಅಕ್ಷತಾ ತಾತ, ಅಜ್ಜಿ ಬರುವ ದಿಕ್ಕಿನತ್ತ ದೃಷ್ಟಿ ಹರಸಿ ಗಾಬರಿಯ ಧ್ವನಿಯಲ್ಲಿ ಉಲಿದಾಗ ಆ ದನಿ ತೀರಾ ಸಪ್ಪೆ ಎನಿಸಿತು. ನಾಲ್ಕೂ ಹುಡುಗರ ಕಣ್ಣುಗಳು ತಮ್ಮ ಮನೆಯ ಬಡಾವಣೆಯ ರಸ್ತೆಯ ಕಡೆಗೇ ನೆಟ್ಟಿದ್ದವು. ಅಕ್ಷತಾ ಮತ್ತು ಆವಿಷ್ಕಾರ್‍ರ ಮುಖದಲ್ಲಿನ ಕಾಂತಿಯೇ ಕರಗಿದಂತಿತ್ತು. 
"ಅಕ್ಷೂ, ಗಾಬರಿ ಬೀಳಬೇಡ. ಏನೋ ಮನೆ ಬಿಡುವಾಗ ತುಸು ತಡವಾಗಿರಬೇಕು ಅಷ್ಟೇ" ಎಂದು ಪ್ರಚೇತ್ ಸಮಾಧಾನದ ಮಾತು ಹೇಳಿದರೆ, `ಹೌದೌದು, ಅಣ್ಣ ಹೇಳುತ್ತಿರುವುದು ಸರಿಯಾಗಿಯೇ ಇದೆ. ಇನ್ನೇನು ಬಂದಾರು? ಹಿಂಗ್ಯಾಕೆ ನಿಮ್ಮಿಬ್ಬರ ಮುಖಗಳು ಸಪ್ಪಗಾಗಿವೆ...? ಆವಿ, ಈ ಕಡೆಗೆ ನೋಡೋ....? ಅವರು ನಿಮ್ಮ ತಾತ, ಅಜ್ಜಿ ಅಲ್ಲವೇನೋ...?' ಎಂದೆನ್ನುತ್ತಾ ಪ್ರಣಮ್ಯಾ ಮೂವರ ಗಮನವನ್ನು ತಮ್ಮ ಮನೆಯ ರಸ್ತೆಯ ವಿರುದ್ಧ ದಿಕ್ಕಿನತ್ತ ಸೆಳೆದಾಗ ಅಕ್ಷತಾ ಮತ್ತು ಆವಿಷ್ಕಾರ್ ಅವರ ಅಜ್ಜ, ಅಜ್ಜಿ ಆಗಲೇ ಅವರನ್ನು ಸಮೀಪಿಸಿದ್ದರು. 
"ಇಲ್ಲ, ನಾವು ಇವತ್ತು ಇಲ್ಲಿಗೆ ಜಲ್ದೀನೇ ಬಂದಿವಿ. ಇನ್ನೂ ಸಮಯವಿತ್ತು. ಹೀಗೇ ಟೈಮ್ ಪಾಸಿಗೆ ಅಂತ ಆ ಕಡೆಗೆ ಹೋಗಿದ್ದೆವು. ನೀವೆಲ್ಲರೂ ಒಂದಿಷ್ಟು ಗಾಬರಿಲ್ಲೇ ಇರುವ ಹಾಗಿದೆ...? ನಡೆಯಿರಿ ಹೋಗೋಣ" ಎಂದೆನ್ನುತ್ತಾ ಅಕ್ಷತಾಳ ಅಜ್ಜ ಅವಳ ತಲೆ ನೇವರಿಸುತ್ತಾ ಆವಿಷ್ಕಾರನ ಸ್ಕೂಲ್ ಬ್ಯಾಗನ್ನು ಎತ್ತಿಕೊಂಡರು. ಅಜ್ಜಿ ಇಬ್ಬರೂ ಮೊಮ್ಮಕ್ಕಳನ್ನು ಎದೆಗವುಚಿ ಹಿಡಿದುಕೊಂಡು ಒಂದರೆಕ್ಷಣ ಮುದ್ದುಮಾಡಿ ಸಮಾಧಾನ ಮಾಡಿದಳು. ಎಲ್ಲರೂ ಮೆಲ್ಲಗೇ ಮನೆಯ ಕಡೆಗೆ ಹೆಜ್ಜೆ ಹಾಕಿದರು. 
ಒಂದು ಫರ್ಲಾಂಗ್ ಹೋಗುತ್ತಲೇ ಮೊದಲನೇ ತಿರುವು ಬಂತು. `ಬೈ ಅಕ್ಷತಾ, ಬೈ ಆವಿ, ಅಜ್ಜ, ಅಜ್ಜಿ ಟಾಟಾ' ಎಂದೆನ್ನುತ್ತಾ ಕೈಬೀಸಿ ಪ್ರಚೇತ್ ಮತ್ತು ಪ್ರಣಮ್ಯಾ ಮೊದಲನೇ ತಿರುವಿನಲ್ಲಿ ತಮ್ಮ ಮನೆಯತ್ತ ಹೆಜ್ಜೆ ಹಾಕತೊಡಗಿದರು. ಅಲ್ಲಿಂದ ಅವರ ಮನೆ ಸುಮಾರು ಒಂದು ಫರ್ಲಾಂಗ್ ಅಷ್ಟೇ. 
                    **** 
"ಅಣ್ಣಾ, ಅಕ್ಷೂ ಮತ್ತು ಆವಿ ನಿಜ್ವಾಗ್ಲೂ ತುಂಬಾ ಲಕ್ಕಿ ನೋಡು. ಅವರ ತಾತ, ಅಜ್ಜಿ ಅವ್ರನ್ನ ದಿನಾಲೂ ಬೆಳಿಗ್ಗೆ ಶಾಲೆಗೆ ಕರ್ಕೊಂಡು ಬಂದು ಬಿಡ್ತಾರ. ಮತ್ತೆ ಶಾಲೆ ಬಿಟ್ಟನಂತರ ಮನೆಗೆ ಕರ್ಕೊಂಡು ಹೋಗ್ತಾರ. ನಮಗ್ಯಾರಿದ್ದಾರೆ? ಅಪ್ಪಾಜಿಯ ಅಮ್ಮ, ಅಪ್ಪ ಬಂದಾಗ ಒಂದಿಷ್ಟು ದಿನ ನಮ್ಜೊತಿಗೆ ಬರ್ತಾರೆ ಅಷ್ಟೇ. ಆದರೆ ಅದೇ ಮಮ್ಮಿಯ ಅಪ್ಪ, ಅಮ್ಮ ಬಂದರೆ ಅವರ್ಯಾರೂ ನಮ್ಜೊತಿಗೆ ಬರೋದೇ ಇಲ್ಲ. ನಾವೆಂದ್ರೆ ಅವ್ರಿಗೆ ಒಂಚೂರೂ ಕೇರೇ ಇಲ್ಲ. ಅವ್ರಿಗೆ ತಾವಾಯಿತು ತಮ್ಮ ಲೋಕ ಆಯಿತು ಎಂಬಂತಿರ್ತಾರೆ ಅಲ್ವಾ...?" ಪ್ರಣಮ್ಯಾ ಮೆಲ್ಲಗೇ ಮಾತಿಗೆ ಶುರುವಿಟ್ಟುಕೊಂಡಳು. ಎದೆಯೊಳಗಿನ ಧಗೆಯನ್ನು ಬಿಚ್ಚಿಡತೊಡಗಿದಳು.
ಪ್ರಚೇತ್ ಮತ್ತು ಪ್ರಣಮ್ಯಾ ಅವರ ತಂದೆ ಶಿವಪ್ರಸಾದನ ತಂದೆ-ತಾಯಿ ಮಹಾದೇವಪ್ಪ ಮತ್ತು ಪಾರ್ವತೆಮ್ಮ ಬಂದಾಗ ಇಬ್ಬರೂ ತುಂಬಾ ಖುಷಿಖುಷಿಯಲ್ಲಿ ಇರುತ್ತಾರೆ. ಆ ಅಜ್ಜ-ಅಜ್ಜಿಯರ ಪ್ರೀತಿಯ ಮಾತುಗಳಲ್ಲಿ, ಊಟ-ಉಪಚಾರದಲ್ಲಿ, ಅವರು ಹೇಳುವ ಕಥೆಗಳನ್ನು ಕೇಳಿಸಿಕೊಳ್ಳುತ್ತಾ ಸಂಭ್ರಮಿಸುತ್ತಾರೆ. ಅವರು ವರ್ಷಕ್ಕೆ ಬಹಳ ಬಹಳ ಎಂದರೆ ಮೂರ್ನಾಲ್ಕು ಸಾರೆ ಮಗನ ಮನೆಗೆ ಬರುವುದು ರೂಢಿ. ಅವರಿಗೇನೋ ಮಗ-ಸೊಸೆ, ಮೊಮ್ಮಕ್ಕಳ ಜೊತೆಗೆ ಇನ್ನೂ ಇರಬೇಕೆಂಬ ಆಸೆ. ಆದರೆ ಸೊಸೆ ಆಕಾಂಕ್ಷಾಳ ಕಿರುಕುಳ, ಏಟುಮಾತುಗಳು, ಅವಳ ವಿಚಿತ್ರ ವಿಭಿನ್ನ ನಡೆ, ಹಾವ-ಭಾವ ಅವರನ್ನು ಆದಷ್ಟು ಬೇಗ ವಾಪಾಸು ತಮ್ಮ ಊರಿಗೆ ಹೋಗುವಂತೆ ಮಾಡುತ್ತವೆ. 
"ಪ್ರಣೂ, ನೀನು ಹೇಳಿದ್ದರಲ್ಲಿ ತಪ್ಪೇನಿಲ್ಲ. ಅಪ್ಪಾಜಿಯ ಅಪ್ಪ, ಅಮ್ಮ ನಮ್ಮಲ್ಲಿಗೆ ಬಂದಾಗ ನಾವು ತುಂಬಾ ಖುಷಿಪಡ್ತೀವಿ. ಆ ಅಜ್ಜ-ಅಜ್ಜಿಯರ ಜೊತೆಗೆ ನಾವು ಬಾಳಷ್ಟು ಮಜವಾಗೇ ಇರ್ತೀವಿ. ಅವರೂ ನಮ್ಜೊತಿಗೆ ಮಕ್ಳಾಗಿ ಬಿಡ್ತಾರೆ. ಅವ್ರು ಹಳ್ಳಿಯಿಂದ ಬಂದವ್ರಾದ್ರೂ ನಮ್ಮನ್ನು ತುಂಬಾ ಅಂದ್ರೆ ತುಂಬಾ ಪ್ರೀತಿ ಮಾಡ್ತಾರೆ ಅಲ್ವೇನೇ? ಅದೆಷ್ಟು ಕಾಳಜಿ, ಕಕ್ಕುಲಾತಿ, ಕಳ್ಳು ನಮ್ಮ ಮ್ಯಾಲೆ...? ಅವರ ಪ್ರೀತೀನ ಅಳಿಲಿಕ್ಕಾಗಂಗಿಲ್ಲ. ಅಜ್ಜ ಓದಿದ್ದು ತಟಗಾದ್ರೂ ತುಂಬಾ ಹ್ಯೂಮನ್ ರಿಲೇಷನ್ಸ್ ಇಟ್ಕೊಂಡಾರ. ನಮ್ ಮ್ಯಾಲೆ ಅಂದ್ರೆ ತುಂಬಾನೇ ಜೀವ. ಅಜ್ಜಿ ಏನೂ ಓದಿಲ್ಲಾಂದ್ರೂ ಅವ್ರಿಂದ ನಾವು ಕಲಿಯೋದು ಬಾಳ ಅಂದ್ರೆ ಬಾಳ ಐತೆ ಅಂತ ಅನಸತೈತಿ. ಅಜ್ಜಿಗೆ ತುಂಬಾನೇ ಪೇಶೆನ್ಸ್. ಒಂಥರ ಭೂಮಿತಾಯಿ ಇದ್ದಂಗೆ ಅಲ್ವಾ...? ತುಂಬಿದ ಕೊಡಪಾನ ಇದ್ದಂಗೆ. ಅಮ್ಮನ ಏಟು ಮಾತುಗಳನ್ನು ನಕ್ಕೋತ ಹೊಟ್ಟೆಗೆ ಹಾಕ್ಕೊಂಡು ಸುಮ್ನಿದ್ದುಬಿಡ್ತಾರೆ." ಪ್ರಚೇತ್ ಅಜ್ಜ, ಅಜ್ಜಿಯರ ಗುಣಗಾನಕ್ಕೆ ಮುಂದಾಗಿದ್ದ.
ಆದ್ರೆ ಅದೇ ಅವರಮ್ಮನ ಅಪ್ಪಾಜಿ ಅರವಿಂದ್ ಮತ್ತು ಅಮ್ಮ ಭಾವನಾ ಬಂದಾಗ ಅವರಿಗೆ ಆ ಸಂತಸ ಇರೋದಿಲ್ಲ. ಅವ್ರಿಬ್ರೂ ಬಾಳಷ್ಟು ವಿದ್ಯಾವಂತರಾದ್ರೂ ತಮ್ಮದೇ ಒಂದು ಹೈಲೀ ಹೈಫೈ ಸ್ಟೇಟಸ್‍ನಲ್ಲಿ ಇರ್ತಾರೆ. ಭಾವನಾ ಅಜ್ಜಿಯಂತೂ ತುಂಬಾ ಮಾಡ್ ಮಾಡ್. ಆಕೆ ಸೀರೆ ಉಟ್ಟಿದ್ದೇ ಅಪರೂಪ. ಆಕೆ ಹೈಲೀ ಫ್ಯಾಷನೆಬಲ್ ಲೇಡಿ. ಯಾವಾಗಲೂ ಲೆಗ್ಗಿನ್ಸ್, ಜೀನ್ಸ್‍ಗಳನ್ನು ಉಟ್ಟುಕೊಂಡಿರುತ್ತಾಳೆ. ದೊಡ್ಡ ಅಧಿಕಾರಿ ಹುದ್ದೆಯಲ್ಲಿರುವ ಜಂಬ ಬೇರೆ. ಸಾಧಾರಣ ರೈತಾಪಿ ಕುಟುಂಬದಿಂದ ಬಂದಿರುವ ಶಿವಪ್ರಸಾದನ ತಂದೆ-ತಾಯಿಗಳನ್ನು ಆಕೆ ಪ್ರೀತಿ, ಗೌರವಗಳಿಂದ ಆದರಿಸಿದ್ದು ಕಡಿಮೇನೇ. ಏನೋ ಮಗಳ ಒಂದು ಹಟಮಾರಿ ಧೋರಣೆಗೆ ಕಟ್ಟುಬಿದ್ದು ಸಂಬಂಧವನ್ನು ಬೆಳೆಸಿದ್ದಳು. ಅರವಿಂದ್ ಒಂಥರ ತಟಸ್ಥ ಮನುಷ್ಯ. ಬಂದಿದ್ದನ್ನು ಬಂದಾಂಗ ಸ್ವೀಕಾರ ಮಾಡಿಕೊಂಡು ಹೋಗುವವ. ಮೊಮ್ಮಕ್ಕಳನ್ನು ಅಷ್ಟಾಗಿ ಪ್ರೀತಿಯಿಂದ ಕಂಡವರಲ್ಲ. ಗಂಡ-ಹೆಂಡತಿ ಇಬ್ಬರಿಗೂ ಬೆಂಗಳೂರಿನಲ್ಲಿ ಬಹಳಷ್ಟು ಜನ ಆಫೀಸಿಯಲ್ ಫ್ರೆಂಡ್ಸ್. ಸಂಜೆಯಾಗುತ್ತಲೇ ಫ್ರೆಂಡ್ಸ್, ಪಾರ್ಟಿ ಅಂತ ಇಬ್ಬರೂ ಹೊರಟುಬಿಡುತ್ತಿದ್ದರು. ಅವರು ವಾಪಾಸು ಬಂದಾಗ ಪ್ರಚೇತ್, ಪ್ರಣಮ್ಯಾ ನಿದ್ರಾಲೋಕದಲ್ಲಿ ಇರುತ್ತಿದ್ದರು. ಬೆಳಿಗ್ಗೆಯಾದರೂ ಮೊಮ್ಮಕ್ಕಳ ಸ್ನಾನ, ಅವರನ್ನು ಶಾಲೆಗೆ ಕಳುಹಿಸುವುದರ ಬಗ್ಗೆ ಅವರು ಆಸಕ್ತಿ ವಹಿಸುತ್ತಿರಲಿಲ್ಲ. ಹೀಗಾಗಿ ಮೊಮ್ಮಕ್ಕಳಿಗೂ ಅವರ ಮೇಲೆ ಅಷ್ಟಾಗಿ ಆತ್ಮೀಯತೆಯ ನಂಟಿನ ಗಂಟು ಕಟ್ಟಿಕೊಳ್ಳಲಿಲ್ಲ.

                    ****
ಅಜ್ಜ ಮಹಾದೇವಪ್ಪ ಮತ್ತು ಅಜ್ಜಿ ಪಾರ್ವತೆಮ್ಮನಿಗೆ ಮೊಮ್ಮಕ್ಕಳೆಂದರೆ ತುಂಬಾನೇ ಮಮಕಾರ, ಪ್ರೀತಿ, ಖುಷಿ. ಇಬ್ಬರೂ ಬಡತನದಲ್ಲೇ ಹುಟ್ಟಿ ಬೆಳೆದು ಪರಿಶ್ರಮದಿಂದ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಂಡವರು. ಕೈಕೆಸರಾದರೆ ಬಾಯಿ ಮೊಸರು, ದುಡಿತವೇ ದುಡ್ಡಿನ ತಾಯಿ ಎಂದಂದುಕೊಂಡು ಜೀವನ ಸಾಗಿಸುತ್ತಿರುವವರು. ಶುದ್ಧಕಾಯಕದಲ್ಲೇ ಕೈಲಾಸವನ್ನು ಕಂಡುಕೊಳ್ಳುತ್ತಿರುವ ಜೀವಿಗಳು. ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳನ್ನು ವೈನಾಗಿ ಬೆಳೆಸಿದ ಸಾಧಕರು. ಕಷ್ಟ ಸಹಿಷ್ಣುಗಳು. ಮಹಾದೇವಪ್ಪ, ಪಾರ್ವತೆಮ್ಮ ದಂಪತಿಗಳದು ಚಿಕ್ಕ, ಚೊಕ್ಕ ಸಂಸಾರ. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಅಷ್ಟೇ ಅವರ ಕರುಳಿನ ಕುಡಿಗಳು. ಮಗಳು ಮಂಗಳಗೌರಿ, ಮಗ ಶಿವಪ್ರಸಾದ್.  
ಕೃಷಿಕರ ಕುಟುಂಬದ ಮಹಾದೇವಪ್ಪನ ಸಹೋದರರು ಆಸ್ತಿಯನ್ನು ಹಿರಿಯರ ಸಮಕ್ಷಮ ಪಾಲು ಮಾಡಿಕೊಂಡಾಗ ಮಹದೇವಪ್ಪನ ಪಾಲಿಗೆ ಬಂದಿದ್ದು ಐದು ಎಕರೆ ಜಮೀನು ಮತ್ತು ಕಡ್ಡಿಪೆಟ್ಟಿಗೆಯಂಥಹ ಎರಡು ಪುಟ್ಟ ಪುಟ್ಟ ಕೋಣೆಗಳ ಒಂದು ಚಿಕ್ಕ ಮನೆ. ಆಗಲೇ ಮಂಗಳಗೌರಿ ಅವರ ಮಡಿಲು ತುಂಬಿದ್ದಳು. ಅಕ್ಷರಜ್ಞಾನದ ಅರಿವು ಇಲ್ಲದಿದ್ದರೂ ಸಂಸಾರವನ್ನು ಚೆಂದಾಗಿ ತೂಗಿಸಿಕೊಂಡು ಹೋಗುವ ಜಾಣೆ ಪಾರ್ವತೆಮ್ಮ. ಹಾಸಿಗೆ ಇದ್ದಷ್ಟು ಕಾಲುಚಾಚಿ ಒಲವಿನ ಬದುಕನ್ನು ಕಟ್ಟಿಕೊಳ್ಳುವ ಜಾಣ್ಮೆ, ಎದೆಗಾರಿಕೆ ಅವಳಲ್ಲಿದ್ದವು. ಗಂಡನ ಹೆಗಲಿಗೆ ಹೆಗಲು ಕೊಟ್ಟಳು. ಪರಿಶ್ರಮ, ಪ್ರಯತ್ನ ದಂಪತಿಗಳ ಜೀವನ ಶೈಲಿಯಾಯಿತು. ತಮ್ಮ ಪಾಲಿನ ಜಮೀನಿನ ಕೃಷಿಯ ಜೊತೆಗೆ ಅವರಿವರ ಹೊಲಗಳಿಗೆ ಕೂಲಿಗೆ ಹೋದರು. ಆಸ್ತಿ ಪಾಲು ಮಾಡಿಕೊಂಡ ಎರಡನೇ ವರ್ಷ ಶಿವಪ್ರಸಾದ್ ಮಂಗಳಗೌರಿಗೆ ತಮ್ಮನಾಗಿ ಬಂದ. ಪ್ರಾಮಾಣಿಕ ಪರಿಶ್ರಮಕ್ಕೆ ಫಲವಿರುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಮಹಾದೇವಪ್ಪ ನಿಧಾನವಾಗಿ ತನ್ನ ಪಾಲಿನ ಆಸ್ತಿಯ ವಿಸ್ತಾರವನ್ನು ಹೆಚ್ಚಿಸತೊಡಗಿದ. ಐದು ಎಕರೆಯ ಪಿತ್ರಾರ್ಜಿತ ಆಸ್ತಿಗೆ ಹತ್ತು ಎಕರೆ ಸ್ವಯಾರ್ಜಿತ ಜಮೀನನ್ನು ಸೇರಿಸಿದ ಮಹಾದೇವಪ್ಪ. ಬಿದಿಗೆಯ ಚಂದ್ರಮನಂತೆ ಬೆಳೆಯುತ್ತಿದ್ದ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾ ಹೆತ್ತವರು ಸಂತಸದಿಂದ ಸಂಭ್ರಮಿಸುವಂತೆ ಮಾಡಿದರು. ಅದೇ ಹುಮ್ಮಸ್ಸು, ಹುರುಪಿನಲ್ಲಿ ದಂಪತಿಗಳು ಪ್ರತಿಭಾವಂತ ಮಕ್ಕಳಿಗೆ ಅವರು ಇಷ್ಟಪಡುವ ವಿದ್ಯೆಯನ್ನು ಕೊಡಿಸಬೇಕೆಂಬ ದೃಢ ನಿರ್ಧಾರ ತೆಗೆದುಕೊಂಡು ಆ ದಿಶೆಯಲ್ಲಿ ದಿಟ್ಟ ಹೆಜ್ಜೆ ಇಡತೊಡಗಿದರು. ನೋಡನೋಡುತ್ತಿದ್ದಂತೆ ಮಂಗಳಗೌರಿ, ಶಿವಪ್ರಸಾದ್ ಕಾಲೇಜು ಕಟ್ಟೆ ಏರಿದರು. ಪಿಯುಸಿ ನಂತರ ಮಂಗಳಗೌರಿ ಬಿಎಎಮ್‍ಎಸ್ ವೈದ್ಯಕೀಯ ಪದವಿ ಕಾಲೇಜಿಗೆ ಸೇರಿಕೊಂಡರೆ ಶಿವಪ್ರಸಾದ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಸಿಸತೊಡಗಿದ.     
ಆಯುರ್ವೇದದ ವೈದ್ಯೆ ಮಂಗಳಗೌರಿ ತಂದೆ-ತಾಯಿಗಳ ಇಚ್ಛೆಯಂತೆ ಧಾರವಾಡದ ಆಯುರ್ವೇದದ ಡಾಕ್ಟರನ ಕೈಹಿಡಿದು ಸುಖೀ ದಾಂಪತ್ಯ ಜೀವನದ ಜೊತೆಗೆ ಗಂಡನೊಂದಿಗೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡಿದ್ದಾಳೆ. 

ಶಿವಪ್ರಸಾದನದು ಲವ್ ಅಂಡ್ ಅರೇಂಜ್ಡ್ ಮ್ಯಾರೇಜ್. ಇಂಜಿನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಶಿವಪ್ರಸಾದ್. ಅವನು ಕೆಲಸಕ್ಕೆ ಸೇರಿದ ಮೂರನೇ ವರ್ಷ ಆಕಾಂಕ್ಷಾಳೂ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಮೊದಲ ಭೆಟ್ಟಿ, ಮೊದಲ ನೋಟದಲ್ಲೇ ಶಿವಪ್ರಸಾದ್ ಅವಳಿಗೆ ಇಷ್ಟವಾಗಿದ್ದ. ಆಕಾಂಕ್ಷಾಳ ಮನಸ್ಸಿನ ಪಾತರಗಿತ್ತಿ ರೆಕ್ಕೆಬಿಚ್ಚಿ ಹಾರಾಡತೊಡಗಿತು. ಶಿವಪ್ರಸಾದನ ಪ್ರೀತಿ ಸೂಸುವ ಕಂಗಳಲ್ಲಿ ಕರಗಿ ಹೋಗಬೇಕೆನ್ನುವಾಸೆ ಅವಳಿಗೆ. ಅವಳ ಮನವೆಂಬ ಕಡಲೊಳಗೆ ಬಯಕೆಗಳ ಸುರಿದು ಕಾಡತೊಡಗಿದ ಶಿವಪ್ರಸಾದ್. ಅವನ ಹೃದಯಕ್ಕೆ ಜೊತೆಯಾಗುವಾಸೆ ಆಕಾಂಕ್ಷಾಳಿಗೆ. ಭಾರೀ ಶ್ರೀಮಂತ ಮನೆತನದ ಹುಡುಗಿ ಆಕಾಂಕ್ಷಾ. ಹೈಲೀ ಹೈಫೈ ಲೈಫ್ ಸ್ಟೈಲಿನಲ್ಲಿ ಬೆಳೆದವಳು. ಅರವಿಂದ್ ಮತ್ತು ಭಾವನಾ ದಂಪತಿಗಳ ಮುದ್ದಿನ ಮಗಳು. ಅರವಿಂದ್ ಕಮರ್ಶಿಯಲ್ ಟ್ಯಾಕ್ಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಭಾವನಾ ಆದಾಯ ಕರ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಳು. ದಂಪತಿಗಳಿಬ್ಬರದೂ ಹೈಫೈ ಲೈಫೇ. ದುಡ್ಡಿಗೆ ಬರವಿರಲಿಲ್ಲ. ಆಕಾಂಕ್ಷಾಳ ಅಣ್ಣನೂ ಬೆಂಗಳೂರಿನಲ್ಲಿ ಬಿಇ ಮುಗಿಸಿ ಯುಎಸ್‍ದಲ್ಲಿ ಎಂಎಸ್ ಮಾಡಿಕೊಂಡು ಅಲ್ಲೇ ನೆಲೆ ನಿಂತಿರುವನು. ಬಿಳಿ ಹುಡುಗಿಯೊಬ್ಬಳ ಪ್ರೇಮಪಾಶದಲ್ಲಿ ಬಿದ್ದು ಅವಳನ್ನೇ ಮದುವೆಯಾಗಿ ಅಲ್ಲೇ ಸೆಟ್ಲ್ ಆಗಿದ್ದಾನೆ. 
ಆಕಾಂಕ್ಷಾಳೇ ಮೊದಲು ಪ್ರೋಪೋಜ್ ಮಾಡುತ್ತಾಳೆ. ತನ್ನೆದೆಯೊಳಗಿನ ಪ್ರೀತಿಯನ್ನು ಬಿಚ್ಚಿಡುತ್ತಾಳೆ. `ಶಿವಪ್ರಸಾದ್, ನಿನ್ನ ನೆನಪಾದಾಗಲೆಲ್ಲ ಜೋರಾಗುವ ಎದೆ ಬಡಿತ, ಸಮುದ್ರದ ಅಲೆಗಳಿಗಿಂತ ವೇಗವಾಗಿ ಉಕ್ಕುವ ಭಾವನೆಗಳು, ನಕ್ಷತ್ರಗಳಿಗಿಂತ ತುಸು ಹೆಚ್ಚೇ ಹೊಳೆಯುವ ಕಂಗಳು, ಸ್ಥಿಮಿತ ಕಳೆದುಕೊಳ್ಳುವ ಹೃದಯದ ಬಡಿತ ನನ್ನೊಳಗೆಲ್ಲ ಹಬ್ಬದ ವಾತಾವರಣವನ್ನು ಸೃಷ್ಟಿಸುವುದಕ್ಕೆ ಕಾರಣ ನನಗೆ ನಿನ್ನ ಮೇಲಿನ ಪ್ರೀತಿ. ಅಂದರೆ ಆಯ್ ಯಾಮ್ ಇನ್ ಲವ್ ವಿಥ್ ಯು. ನನಗೆ ನಿನ್ನಲ್ಲಿ ಪ್ರೀತಿ ಮೂಡಿದೆ' ಎಂದು ಉಲಿದಿದ್ದಳು. ಮೊದಲೇ ಬಡತನದಲ್ಲಿ ಹುಟ್ಟಿ ಬೆಳೆದ ಮಿತಭಾಷಿ ಶಿವಪ್ರಸಾದ್ ಅವಳ ಪ್ರೀತಿಯ ನಿವೇದನೆಯನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಅವನಿಗೆ ಅವಳ ಸ್ಥಿತಿಗತಿ, ತನ್ನ ಸ್ಥಿತಿಗತಿ ಚೆನ್ನಾಗಿ ಗೊತ್ತಿತ್ತು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಜಾಯಮಾನದವ. `ಆಕಾಂಕ್ಷಾ, ನಾನು ನಿನ್ನಂತೆ ಹುಟ್ಟುವಾಗಲೇ ಬಂಗಾರದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವನಲ್ಲ. ಕಡುಬಡತನದ ಬೇಗೆಯಲ್ಲಿ ಬೆಂದು ಬೆಳದವನು. ನಮ್ಮದು ತೀರಾ ಸಾಧಾರಣ ಮನೆತನ. ನನ್ನಪ್ಪ ಏನೋ ಓದಲು, ಬರೆಯಲು ಒಂದಿಷ್ಟು ಕಲಿತಿದ್ದಾನೆ. ನನ್ನವ್ವ ನಿರಕ್ಷರ ಕುಕ್ಷಿ. ನಿಮ್ಮದು ಹೈಲೀ ಎಜ್ಯೂಕೇಟೆಡ್ ಫೆಮಿಲಿ. ಹೈಫೈ ಕುಟುಂಬ. ನಮ್ಮಿಬ್ಬರ ಜಾತಿ ಒಂದಾಗಿದ್ದರೂ ನಮ್ಮ ನಿಮ್ಮ ಆಚಾರ-ವಿಚಾರಗಳಿಗೆ ಬಹಳಷ್ಟೇ ವ್ಯತ್ಯಾಸವಿದೆ. ನಿನ್ನಂಥಹ ಶ್ರೀಮಂತ ಮನೆತನದ ಹುಡುಗಿಯನ್ನು ಮದುವೆಯಾದರೆ ನನ್ನ ಸ್ಟೇಟಸ್ ಹೆಚ್ಚುವುದು ಎಂದು ನಾನೇನು ಭಾವಿಸಿಲ್ಲ. ನಿನ್ನ ಹೆತ್ತವರಿಗೆ ನಮ್ಮ ಮನೆತನದ ಸಂಬಂಧ ಬೆಳೆಸುವ ಮನಸ್ಸೂ ಇರಲಿಕ್ಕಿಲ್ಲ. ಪ್ರೀತಿಯ ಹುಚ್ಚಿನಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಅಷ್ಟಾಗಿ ಸರಿ ಕಾಣುವುದಿಲ್ಲ. ನಿಮ್ಮ ಕುಟುಂಬದ ಅಂತಸ್ತಿಗೆ ತಕ್ಕ ಹುಡುಗನನ್ನು ಮದುವೆಯಾಗುವುದು ಸೂಕ್ತ.' `ಹಾಗಲ್ಲ ಶಿವಪ್ರಸಾದ್, ನಾನು ಮದುವೆಯಾಗಲು ಇಚ್ಛಿಸುತ್ತಿರುವುದು ನಿನ್ನನ್ನು. ನಿನ್ನ ಬಡತನ, ಸಿರಿತನವನ್ನಲ್ಲ. ಹೇಗೂ ನಾವಿಬ್ಬರೂ ಒಳ್ಳೇ ಉದ್ಯೋಗದಲ್ಲಿದ್ದೇವೆ. ನಮ್ಮ ದುಡಿಮೆಯ ಹಣವೇ ಸಾಕು ನಮ್ಮ ಜೀವನ ನಿರ್ವಹಣೆಗೆ. ನಾನು ನಿಮ್ಮವಳೆಂದ ಮೇಲೆ ನಿನ್ನ ಹೆತ್ತವರು ನಮ್ಮವರಲ್ಲವೇ...?' ಹೀಗೆ ಏನೇನೋ ಸಮಜಾಯಿಸಿ ಹೇಳಿ ಆಕಾಂಕ್ಷಾ ಶಿವಪ್ರಸಾದನನ್ನು ಒಪ್ಪಿಸಿ ಮದುವೆಯಾಗಿದ್ದಳು.  
                    ****    

ಮನೆಯ ಸಮೀಪದ ಉದ್ಯಾನವನ ಬರುತ್ತಿದ್ದಂತೆ, `ಅಣ್ಣಾ, ಉದ್ಯಾನವನದಲ್ಲಿ ಒಂದೈದು ನಿಮಿಷ ಕುಳಿತು ನಂತರ ಮನೆಗೆ ಹೋಗೋಣವೇ...? ಹೇಗೂ ಮನೆಯಲ್ಲಿ ನಮ್ಮನ್ನು ಆದರಿಸಿ ಸ್ವಾಗತಿಸುವವರಿಲ್ಲ. ಅಪ್ಪ, ಅಮ್ಮ ಆಫೀಸಿನಿಂದ ಬರುವುದಕ್ಕೆ ಇನ್ನೂ ಸಮಯವಿದೆ' ಎಂದೆನ್ನುತ್ತಾ ಪ್ರಣಮ್ಯಾ ಪ್ರಚೇತನ ಮುಖ ದಿಟ್ಟಿಸತೊಡಗಿದಳು.
"ಸರಿ ಪ್ರಣೂ, ನಿನ್ನಿಷ್ಟದಂತೆಯೇ ಆಗಲಿ" ಎಂದ ಪ್ರಚೇತ್. 
ಅಣ್ಣ, ತಂಗಿ ಇಬ್ಬರೂ ಉದ್ಯಾನವನದೊಳಗೆ ಎಂಟ್ರಿ ಕೊಟ್ಟರು. ಅಲ್ಲೇ ಇದ್ದ ಕಲ್ಲಿನ ಬೆಂಚಿನ ಮೇಲೆ ತಮ್ಮ ಬೆನ್ನಿಗಂಟಿದ್ದ ಸ್ಕೂಲ್ ಬ್ಯಾಗಿನ ಭಾರವನ್ನು ಕೆಳಗಿಳಿಸಿ, `ಉಶ್ಯಪ್ಪಾ' ಎನ್ನುತ್ತಾ ಕುಳಿತುಕೊಂಡರು.
"ಹಳ್ಳಿ ಊರಿನ ನಮ್ಮ ಅಜ್ಜ, ಅಜ್ಜಿ ಇದ್ದರೆ ನಮ್ಮನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಹೋಗುತ್ತಿದ್ದರು. ಮನೆ ತಲುಪುತ್ತಿದ್ದಂತೆ ನಮ್ಮ ಕೈಕಾಲು, ಮುಖ ತೊಳೆದು ತಿನ್ನಲು ಸ್ನ್ಯಾಕ್ಸ್ ಕೊಡುತ್ತಿದ್ದರಲ್ಲವೇ? ಸಮಯವಿದ್ದರೆ ನಮ್ಮನ್ನು ಈ ಉದ್ಯಾನವನಕ್ಕೆ ಕರೆದುಕೊಂಡು ಬರುತ್ತಿದ್ದರು. ದಾರಿಯ ಪಕ್ಕದ ರಾಜೂ ಅಂಕಲ್‍ನ ಅಂಗಡಿಯಲ್ಲಿ ಬಿಸ್ಕಿಟ್ಸ್, ನಿಪ್ಪಟ್ಟು ಅದೂ ಇದೂ ಅಂತ ಒಂದಿಷ್ಟು ತಿಂಡಿ ತಿನ್ನಲು ಕೊಡಿಸುತ್ತಿದ್ದರು. ಇಲ್ಲಿ ನಮ್ಮ ಜೊತೆಗೆ ಒಂದಿಷ್ಟೊತ್ತು ಆಟವಾಡಿ ಅಪ್ಪ, ಅಮ್ಮ ಬರುವುದಕ್ಕಿಂತ ಮುಂಚೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಇಲ್ಲಿಗೆ ಪಾರ್ಕಿಗೆ ಬರದಿದ್ದರೆ ನಮ್ಮ ಅಪಾರ್ಟಮೆಂಟಿನ ಕೆಳಗೆ ಕರೆದುಕೊಂಡು ಬರುತ್ತಿದ್ದರು. ಅಲ್ಲಿ ನಮ್ಮ ಅಪಾರ್ಟಮೆಂಟಿನ ಗೆಳೆಯರ ಜೊತೆಗೆ ಆಟವಾಡುತ್ತಿದ್ದೆವು. ರಸ್ತೆ ಬದಿಯ ಅಂಗಡಿಗಳಲ್ಲಿ ತಿಂಡಿ ಕೊಡಿಸಿದ್ದು ಗೊತ್ತಾದರೆ ಅಮ್ಮ ಅಜ್ಜ, ಅಜ್ಜಿಯರ ಮೇಲೆ ರೇಗುತ್ತಿದ್ದಳು. ಆಟದ ನಂತರ ಹೋಮ್ ವರ್ಕ ಶುರುವಾಗುತ್ತಿತ್ತು."
"ಅಜ್ಜ ಸಂಡೇ ಸಂಡೇ ಬೆಳಿಗ್ಗೆ ನಮ್ಮನ್ನು ನಮ್ಮ ಅಪಾರ್ಟಮೆಂಟಿನ ಹಿಂದೆ ಇರುವ ಕೆರೆಯ ಕಡೆಗೆ ವಾಕಿಂಗ್‍ಗೆ ಕರೆದುಕೊಂಡು ಹೋಗುತ್ತಿದ್ದರಲ್ಲವೇ ಅಣ್ಣಾ...? ಕೆರೆಯ ದಂಡೆಯ ಮೇಲೆ ನಾವಿಬ್ಬರೂ ಮಸ್ತ್ ಮಸ್ತ್ ಆಟ ಆಡುತ್ತಿದ್ದೆವು. ತುಂಬಿದ ಕೆರೆಯಲ್ಲಿನ ನೀರನ್ನು ನೋಡುವುದೇ ಒಂದು ಚೆಂದ ಅಲ್ಲವೇ...? ಅಜ್ಜ, ಅಜ್ಜಿಯರ ಊರಲ್ಲೂ ದೊಡ್ಡ ಕೆರೆ ಇದೆಯಂತೆ. ಆದರೆ ಅಮ್ಮ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುವುದೇ ಇಲ್ಲ. ಕೆರೆಯ ದಂಡೆಯ ಮೇಲೆ ಸಿಗುವ ನಮ್ಮ ಬಡಾವಣೆಯ ಬೇರೆ ಮನೆಗಳ ಮಕ್ಕಳ ಜೊತೆಗೂ ಆಟವಾಡುತ್ತಿದ್ದೆವು. ವಾಕಿಂಗ್ ಮುಗಿಸಿಕೊಂಡು ಬರುವಾಗ ಕೆರೆಗೆ ಸಮೀಪದ ಉಡುಪಿ ಹೋಟೇಲಿನಲ್ಲಿ ಶಿರಾ, ಇಡ್ಲಿ-ವಡೆ ಇಲ್ಲವೇ ಗರಂ ಗರಂ ಪೂರಿ ತಿನ್ನಿಸಿಕೊಂಡು ವಾಪಾಸು ಮನೆಗೆ ಕರೆದುಕೊಂಡು ಬರುತ್ತಿದ್ದರು. ಅಲ್ಲಿ ತಿಂಡಿ ತಿಂದಿದ್ದು ಗೊತ್ತಾದರೆ ಅಮ್ಮ ಅಜ್ಜನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಹೋಟೇಲಿನಲ್ಲಿ ತಿಂದಿದ್ದು ಅಮ್ಮನಿಗೆ ಗೊತ್ತಾಗದಂತೆ ನಾವು ಬಿಹೇವ್ ಮಾಡುತ್ತಿದ್ದೆವು."
"ಹೌದು, ಈ ಸಾರೆ ಅಜ್ಜ, ಅಜ್ಜಿ ಬೆಂಗಳೂರಿಗೆ ಬರದೇ ತುಂಬಾ ದಿನಗಳೇ ಆದವಲ್ಲ...? ಪ್ರಣೂ, ಅವರು ಯಾಕೆ ಬಂದಿಲ್ಲ ಅಂತೀ...?"
"ಅಣ್ಣಾ, ಹಿಂದಿನ ಸಾರೆ ಬಂದಾಗ ಒಂದು ಸಂಡೇ ತಾತ ಕೆರೆಯ ಏರಿಯ ಮೇಲೆ ವಾಕಿಂಗ್ ಕರಕೊಂಡು ಹೋಗಿ ಬರುವಾಗ ಉಡುಪಿ ಹೋಟೇಲಿನಲ್ಲಿ ನಮಗೆ ಪೂರಿ, ವಡೆ ತಿನ್ನಿಸಿಕೊಂಡು ಬಂದಿದ್ದು ನಿನಗೆ ನೆನಪಿರಬಹುದು. ಆವತ್ತು ನಮಗಿಬ್ಬರಿಗೂ ಮಧ್ಯಾಹ್ನಕ್ಕೆಲ್ಲಾ ಕೆಮ್ಮು ಶುರುವಾಗಿತ್ತು ತಾನೇ...? ಅಮ್ಮ ತುಸು ಗಾಬರಿಗೊಂಡಿದ್ದಳು. ಏಕಾಯೇಕಿ ಕೆಮ್ಮಿಗೆ ಅಮ್ಮ ನಿಜ ಕಾರಣ ಹುಡುಕಲು ನಮ್ಮನ್ನು ಪೀಡಿಸಿ ಪೀಡಿಸಿ ವಿಚಾರಿಸಿದ್ದಕ್ಕೆ ಉಡುಪಿ ಹೋಟೇಲಿನಲ್ಲಿ ವಡೆ, ಪೂರಿ ತಿಂದಿದ್ದನ್ನು ಹೇಳಿದಾಗ ಅಮ್ಮ ನಮ್ಮಿಬ್ಬರನ್ನಲ್ಲದೇ ಅಜ್ಜನನ್ನೂ ತರಾಟೆಗೆ ತೆಗೆದುಕೊಂಡಿದ್ದಳು. `ತಿಳುವಳಿಕೆ ಇಲ್ಲದ ಮಕ್ಕಳು ಏನೇನೋ ಕೇಳ್ತಾರಂತ ರಸ್ತೆ ಬದಿಯ ಹೋಟೇಲಿನಲ್ಲಿ ಸಿಕ್ಕ ಸಿಕ್ಕಿದ್ದನ್ನು ಕೊಡಿಸುವ ನಿಮಗಾದರೂ ಒಂಚೂರು ಬುದ್ಧಿ ಬೇಡವಾ...? ಈಗ ನೋಡಿ ಮಕ್ಕಳಿಗೆ ವಿಪರೀತ ಕೆಮ್ಮು. ನಿಮಗೆ ಹೇಗೆ ತಿಳಿಸಿ ಹೇಳಬೇಕೋ ಏನೋ? ನಿಮಗೆ ಅಷ್ಟು ಬಾಯಿ ಚಪಲ ಇದ್ದರೆ ನೀವೊಬ್ಬರೇ ಹೋಗಿ ಬೇಕು ಬೇಕಾದದ್ದನ್ನು ತಿಂದು ಬನ್ನಿರಿ. ಬೇಡವೆನ್ನುವವರಾರು?' ಎಂದು ಅಜ್ಜನ ಮನಸ್ಸಿಗೆ ಬೇಸರವಾಗುವ ಹಾಗೆ ಅಮ್ಮ ಒಂದಿಷ್ಟು ಖಾರವಾಗೇ ಒದರಾಡಿದ್ದಳಲ್ಲವೇ? ಅಮ್ಮನ ಮಾತಿಗೆ ಮರುಮಾತಾಡದ ತಾತ ಇಡೀ ದಿನ ಸಪ್ಪಗೇ ಇದ್ದರು. `ತಿಳುವಳಿಕೆ, ಬುದ್ಧಿ ಇಲ್ಲದ ನಾವು ನಮ್ಮೂರಿಗೆ ಹೋಗಿಬಿಡೋಣ' ಎಂದು ಅಜ್ಜಿಯ ಜೊತೆಗೆ ಮೆತ್ತಗೇ ಮಾತಾಡಿಕೊಂಡಿದ್ದನ್ನು ನಾವು ಕೇಳಿಸಿಕೊಂಡಿಲ್ಲವೇ? ಇನ್ನೆರಡು ವಾರ ಬೆಂಗಳೂರಿನಲ್ಲಿ ಇರಬೇಕೆಂದು ಬಂದವರು ಅದಾದ ನಾಲ್ಕನೇ ದಿನವೇ ಹಳ್ಳಿಗೆ ಹೋಗಲಿಲ್ಲವೇ...? ಅದೇ ಕಾರಣಕ್ಕೆ ಇಲ್ಲಿಗೆ ಬರಲು ಮನಸ್ಸು ಮಾಡಿಲ್ಲವೇನೋ...?"
"ಹೌದೌದು, ನೀನು ಹೇಳಿದ್ದು ಎಕ್ಸ್ಯಾಕ್ಟಲೀ ನಿಜ. ಸದ್ಯ ಮನೆಗೆ ಹೋಗೋಣ. ಪಪ್ಪನ ಫೋನಿಂದ ಅಜ್ಜ, ಅಜ್ಜಿಯ ಜೊತೆಗೆ ಮಾತಾಡಿ ಇಲ್ಲಿಗೆ ಬರಲು ರಿಕ್ವೆಸ್ಟ್ ಮಾಡೋಣ."
"ಸರಿ. ಅಜ್ಜ, ಅಜ್ಜಿ ಬರದೇ ಇರುವುದಕ್ಕೆ ಅದೇ ರೀಜನ್ ಇರಬೇಕು." ಅಣ್ಣ, ತಂಗಿ ಇಬ್ಬರೂ ತಮ್ಮ ಸ್ಕೂಲ್ ಬ್ಯಾಗ್‍ಗಳನ್ನು ಹೆಗಲಿಗೇರಿಸಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು. ಕಾನ್ವೆಂಟ್ ಸ್ಕೂಲಿನ ಮಕ್ಕಳು ಯಥೇಚ್ಛವಾಗಿ ಇಂಗ್ಲೀಷ್ ಶಬ್ದಗಳನ್ನು ಬಳಸುತ್ತಿದ್ದರು.  
                    **** 

ಪ್ರಚೇತ್ ಮತ್ತು ಪ್ರಣಮ್ಯಾ ಮನೆಗೆ ಬಂದಾಗ ಅವರ ಪಪ್ಪ ಆಗಲೇ ಮನೆಗೆ ಬಂದಿದ್ದ. ಸ್ಕೂಲ್ ಬ್ಯಾಗ್‍ಗಳ ಭಾರವಿಳಿಸಿ, ಕೈಕಾಲು ಮುಖ ತೊಳೆದುಕೊಂಡು ಇಬ್ಬರೂ ತಮ್ಮ ಅಪ್ಪಾಜಿಯ ಹತ್ತಿರ ಹೋಗಿ ಹಳ್ಳಿ ತಾತ ಮತ್ತು ಅಜ್ಜಿಗೆ ಫೋನ್ ಮಾಡಬೇಕೆಂದು ಹೇಳಿ ಫೋನ್ ಪಡೆದು ತಮ್ಮ ಕೋಣೆ ಸೇರಿಕೊಂಡರು. ತಾತನಿಗೆ ಫೋನಾಯಿಸಿದರು. ತಕ್ಷಣ ಅವರ ತಾತ ಕರೆಯನ್ನು ಸ್ವೀಕರಿಸಿದಾಗ ಪ್ರಚೇತನೇ, `ಅಜ್ಜ, ನಾನು ಪ್ರಚೇತ್ ಮಾತಾಡುತ್ತಿರುವುದು. ಪ್ರಣಮ್ಯಾ ನನ್ನ ಪಕ್ಕದಲ್ಲೇ ಇರುವಳು. ಇಲ್ಲಿ ನಾವೆಲ್ಲರೂ ಚೆನ್ನಾಗಿದ್ದೇವೆ. ನೀವು, ಅಜ್ಜಿ ಹೇಗಿರುವಿರಿ?' ಎಂದ. `ಇಲ್ಲಿ ನಾನು, ನಿಮ್ಮಜ್ಜಿ ಇಬ್ಬರೂ ಚೆನ್ನಾಗಿದ್ದೇವೆ' ಎಂದ ಮಹಾದೇವಪ್ಪ. `ಅಜ್ಜಾ, ನೀವು ಬೆಂಗಳೂರಿಗೆ ಬರದೇ ಬಹಳ ದಿನಗಳೇ ಆದವಲ್ಲ...? ಯಾಕೆ ನಮ್ಮ ನೆನಪೇ ಆಗುತ್ತಿಲ್ಲವೇ...?' ಪ್ರಣಮ್ಯಾ ಮಾತಿಗೆ ಮುಂದಾದಳು. `ಹಾಗೇನಿಲ್ಲ ಪುಟ್ಟಿ. ಹೀಗೇ ಹೊಲದ ಕೆಲಸ, ಅದೂ ಇದೂ ಅಂತ ಕೆಲಸ ಇವೆಯಲ್ಲ, ಅದಕ್ಕೇ ಬೆಂಗಳೂರಿಗೆ ಬರಲು ಆಗಿಲ್ಲ. ನಿಮ್ಮ ನೆನಪು ಆಗದೇ ಇರುತ್ತದೆಯೇ? ನೀವು ಯಾವಾಗಲೂ ನಮ್ಮ ಮನದಲ್ಲಿ ಇರುತ್ತೀರಿ.' `ತಾತ, ಹೊಲದ ಕೆಲಸ ಯಾವಾಗಲೂ ಇದ್ದೇ ಇರುತ್ತವೆ. ನೀವು ಇಲ್ಲಿಗೆ ಬರಲು ಮನಸ್ಸೇ ಮಾಡಿಲ್ಲ. ನಾವಂತೂ ನಿಮ್ಮಿಬ್ಬರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮನ್ನು ನೋಡಲು ಮನಸ್ಸು ತುಂಬಾ ಆಸೆ ಪಡುತ್ತಿದೆ. ತಕ್ಷಣ ಹೊರಟು ಬಂದುಬಿಡಿರಿ.' `ಅಲ್ಲ ಪುಟ್ಟಾ, ಇಲ್ಲಿ ಕೆಲಸ...' ಮಹಾದೇವಪ್ಪ ಒಂದಿಷ್ಟು ತೊದಲಿದ. `ಹೋದ ಸಾರೆ ಬಂದಾಗ ಅಮ್ಮ ಮಾತಾಡಿದ್ದನ್ನು ನೀವು ಮನಸ್ಸಿಗೆ ಹಚ್ಚಿಕೊಂಡಿರುವ ಹಾಗಿದೆ. ನಿಮ್ಮ ಮನಸ್ಸಿಗೆ ನೋವಾಗಿದೆ ಎಂದು ನಮಗೆ ಗೊತ್ತು. ಅಮ್ಮನ ಮಾತುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಬಾರದು. ನಿಮ್ಮ ಜೊತೆಗೆ ನಾವು ಟೈಮ್ ಸ್ಪೆಂಡ್ ಮಾಡಬೇಕಿದೆ. ತಕ್ಷಣ ಬನ್ನಿರಿ. ನಮ್ಮ ಫ್ರೆಂಡ್ಸ್ ಅಜ್ಜ, ಅಜ್ಜಿ ಅವರನ್ನು ಶಾಲೆಗೆ ಕಳುಹಿಸಲು, ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಬಂದಾಗ ನಿಮ್ಮದೇ ನೆನಪು ನಮಗೆ. ಪ್ಲೀಜ್ ಅಜ್ಜಿಯನ್ನು ಕರೆದುಕೊಂಡು ಬಂದುಬಿಡಿ. ಅಜ್ಜಿ, ನೀನೇ ಅಜ್ಜನಿಗೆ ತಿಳಿಸಿ ಹೇಳಿ ಕರೆದುಕೊಂಡು ಬಂದುಬಿಡು.' ಪ್ರಚೇತ್ ಕಳಕಳಿಯ ಮನವಿ ಮಾಡಿದ. `ಚಿನ್ನಾರಿಗಳಾ, ನಾನು ನಿಮ್ಮಜ್ಜನ ಜೊತೆಗೆ ಕುಳಿತಿದ್ದು ನಿಮ್ಮ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿರುವೆ. ನನಗೂ ನಿಮ್ಮನ್ನು ನೋಡಬೇಕು, ನಿಮ್ಮೊಂದಿಗೆ ಆಟವಾಡಬೇಕೆಂಬ ಹಪಹಪಿ ಬಹಳಾನೇ ಇದೆ. ಆಯಿತು ಮಕ್ಕಳಿರಾ, ನಾವು ಬೇಗ ಬೆಂಗಳೂರಿಗೆ ಬರುತ್ತೇವೆ. ಸಂತೋಷವಾ...?' `ಸಂತೋಷವಾಗದೇ ಇರುತ್ತದಾ ಅಜ್ಜಿ...? ಹಾಗಾದರೆ ನಾಳೇನೇ ರಾತ್ರಿ ಬಸ್ಸಿಗೆ ಹತ್ತಿಬಿಡಿರಿ. ಸ್ಲೀಪರ್ ಕೋಚ್ ಬಸ್ಸಿಗೆ ಎರಡು ಟಿಕೆಟ್‍ಗಳನ್ನು ಬುಕ್‍ಮಾಡಲು ಪಪ್ಪನಿಗೆ ಹೇಳುವೆವು. ಸರಿನಾ...? ನಾಳೆ ರಾತ್ರಿ ಬಸ್ಸು ಹತ್ತಿಬಿಡಿರಿ. ಥ್ಯಾಂಕ್ಯೂ ಅಜ್ಜ, ಅಜ್ಜಿ. ಯು ಆರ್ ಅವರ್ ಸ್ವೀಟ್ ಅಜ್ಜ, ಅಜ್ಜಿ.' ಪ್ರಚೇತ್ ಮತ್ತು ಪ್ರಣಮ್ಯಾ ಇಬ್ಬರೂ ಒಕ್ಕೊರಲಿನಿಂದ ಕೇಕೆಹಾಕುತ್ತಾ ಹೇಳಿದರು. ಚಿಣ್ಣರ ಕಣ್ಣುಗಳಲ್ಲಿ ಪ್ರೀತಿಯ ಕೋಲ್ಮಿಂಚಿತ್ತು. 

ಶಿವಪ್ರಸಾದನ ಹತ್ತಿರ ಓಡೋಡುತ್ತಾ ಹೋದ ಪ್ರಚೇತ್ ಮತ್ತು ಪ್ರಣಮ್ಯಾ ನಾಳಿನ ರಾತ್ರಿ ಬಸ್ಸಿಗೆ ಅಜ್ಜ, ಅಜ್ಜಿಗೆ ಟಿಕೆಟ್ ಬುಕ್‍ಮಾಡಲು ಹೇಳಿದರು. `ಹೌದಾ...? ಅಪ್ಪ, ಅಮ್ಮ ಬರಲು ಒಪ್ಪಿದ್ದಾರೆಯೇ...? ಗುಡ್ ನ್ಯೂಜ್. ಈಗಲೇ ಟಿಕೆಟ್ ಬುಕ್‍ಮಾಡುವೆ' ಎಂದೆನ್ನುತ್ತಾ ಶಿವಪ್ರಸಾದ್ ಮಕ್ಕಳಿಬ್ಬರನ್ನೂ ಎದೆಗವುಚಿ ಹಿಡಿದುಕೊಂಡು ಸಂಭ್ರಮಿಸತೊಡಗಿದ.

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಪ್ರೀತಿಯನರಸುತ್ತಾ ಚಿಣ್ಣರು”

  1. JANARDHANRAO KULKARNI

    ಪ್ರೀತಿಯನರಸುತ್ತಾ ಚಿಣ್ಣರು ಕಥೆ ಮಕ್ಕಳ ಬಯಕೆಗಳ ಬಗ್ಗೆ ಸೊಗಸಾಗಿ ಚಿತ್ರಿತವಾಗಿದೆ. ಶಾಲೆಯಲ್ಲಿ ಹೈಫೈ ವಾತಾವರಣ ಇದ್ದರೂ ಮನೆಯಲ್ಲಿ ಪ್ರೀತಿಯಿಂದ ನೋಡಿಕೊಳ್ಳುವ ಹೃದಯಗಳನ್ನು ಇಷ್ಟಪಡುತ್ತಾರೆ. ಕಥೆಯ ತಿರುಳು ಚನ್ನಾಗಿದೆ.

  2. ಧರ್ಮಾನಂದ ಶಿರ್ವ

    ಚಿಕ್ಕ ಮಕ್ಕಳ ಮನಸ್ಸು ಬೇಡುವ ಹೆತ್ತವರ, ಹಿರಿಯರ ಪ್ರೀತಿ ಸೊಗಸಾಗಿ ನಿರೂಪಿತವಾಗಿದೆ. ಅಭಿನಂದನೆಗಳು

  3. ಹೀರಾಲಾಲ್ ಝಾಡೇ

    ನಮಸ್ಕಾರ ಸರ್. ಕಥೆ ತುಂಬಾ ಚೆನ್ನಾಗಿದೆ. ಅಭಿನಂದನೆಗಳು ಸರ್

  4. Raghavendra Mangalore

    ಇಂದಿನ ಧಾವಂತ ಬದುಕಿನಲ್ಲಿ ವಿದ್ಯಾವಂತ ಮತ್ತು ಉದ್ಯೋಗಸ್ಥ ತಂದೆ ತಾಯಿಗಳು ಮಕ್ಕಳತ್ತ ಗಮನ ಕೊಡುತ್ತಿಲ್ಲ. ಇದು ದುರಂತ. ಆದರೆ ಅಜ್ಜ ಅಜ್ಜಿಯರ ಪ್ರೀತಿ ದೊರೆತ ಮೊಮ್ಮಕ್ಕಳು ಧನ್ಯ ಮತ್ತು ಅದನ್ನೇ ಅವರು ಸಹಾ ಬಯಸೋದು… ಸದ್ಯದ ವಾಸ್ತವಿಕ ನೆಲೆಗಟ್ಟಿನಲ್ಲಿ ಹೆಣೆದ ಕಥೆ ತುಂಬಾ ಇಷ್ಟವಾಯ್ತು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter