ಮಾತೇ ಇಲ್ಲದ ಮೌನದ ನಡುವೆ
ನಾನೂ ನೀನೂ ಹುಡುಕುತಿರುವೆವು
ಎಂದೋ ಕಳೆದುಹೋದ
ನೆನೆಪುಗಳ
ಹೀಗೂ ಮರುಕಳಿಸಬಹುದೇ?
ಆಳದಲೆಲ್ಲೋ ಗುಪ್ತಗಾಮಿನಿಯಾಗಿಹ
ಇಲ್ಲಾ
ಹೆಪ್ಪುಗಟ್ಟಿ ಕುಳಿತ
ಮಾಸಿದ ಬಣ್ಣದ
ಒಂದು ನೆವಕೆ ಕಾದುಕುಳಿತಿಹ
ಕಣ್ಣಿನ ಬಿಂದುಗಳು
ಬಿಂಕು, ಬಿಗುಮಾನ, ಸ್ವಾಭಿಮಾನದ
ಕದಗಳ ಹಿಂದೆ
ಒಂದು ಅನುಭೂತಿ
ನಿಧಾನವಾಗಿ ಕರಗುತಿರಬಹುದೇ
ತೊಟ್ಟಿಕ್ಕುತ್ತಿರುವ ಬಿಂದುಗಳು
ಜಲಪಾತವಾಗಬಹುದೇ
ನಿನ್ನ ಕಣ್ಣ ಕೊನೆಯಲಿ
ಮುಂಗುರುಳ ಮರೆಮಾಚಿಕೂತಿಹ
ಕೊಳದಲಿ, ವೀಚಿಯ ಕಂಪನ
ನನ್ನೀ ಅಂತರಂಗವ
ಬಡಿದೆಬ್ಬಿಸಬಹುದೇ
ಮೆಲ್ಲಗೆ, ಚಾಚುತಿರುವ
ನನ್ನೀ ಬೆರಳುಗಳ
ಒಂದು ಕಿರುಸ್ಪರ್ಶಕೆ
ನೀ ಭಾವವಾಗಿ
ನಡುವಿನ ಮಂಜುಗಡ್ಡೆಗೆ
ಒಂದು ಕಾವಾಗಿ
ಕರಗಿಸಬಹುದೇ
ಪ್ರೇಮದ ಭಾರಕೆ
ಮುಳುಗುತ್ತಿರುವ ಅನುಭೂತಿ
ತುಸುವೇ ಅರಿವಿಗೆ ಬರುತಿದೆ
ಪರಸ್ಪರ ನೆರವಾಗಿ
ಈಜಿ ಸುಖಿಸುವ ದಾರಿ
ಹುಡುಕಬಹುದೇ
ಈಗಾಗಲೇ ಸ್ವಲ್ಪ ಸಮಯ ಕಳೆದಿದೆ,
ಹೃಸ್ವಬಾಳಿಗಿರುವ ಸಮಯ
ಇಷ್ಟವಾದದ ಮಾಡಲು ಮಾತ್ರ,
ಅಷ್ಟನ್ನೂ ಮುಗಿಸಲು ಆಗದಾಗ
ಮುಗಿಸಿದ ಮುಷ್ಟಿಯಷ್ಟನ್ನು ನೋಡಿ
ತೃಪಿಯಾಗಬಹುದಲ್ಲವೇ?
ಕಳೆದ ನೆನಪೊಂದು ಸಿಗದಿದ್ದರೆ
ಹೊಸ ನನೆಪುಗಳ
ಜತನದಿಂದ
ಹೊಸತೇ ಮೈತಾಳಿದಂತೆ
ನಾವು ಈಗಷ್ಟೇ ಪರಿಚಿತರಾದಂತೆ
ಕಟ್ಟಬಹುದಲ್ಲವೇ?
- ಎಂ.ವಿ. ಶಶಿಭೂಷಣ ರಾಜು