ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ವ್ಯಾಸರ ಮೂರು ನೀಳ್ಗತೆಗಳು

ಎಂ. ವ್ಯಾಸ

ಎಂ. ವ್ಯಾಸ ಕನ್ನಡದ ವಿಶಿಷ್ಟ ಕಥೆಗಾರ. ಎರಡಕ್ಷರದ ಶೀರ್ಷಿಕೆಯ ಕಥೆಗಳ ಮೂಲಕ ಖ್ಯಾತಿ ಪಡೆದಿದ್ದ ವ್ಯಾಸರ ನೂರಾರು ಕಥೆಗಳು ಕನ್ನಡದ ಬಹುತೇಕ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವ್ಯಾಸರು ನೂರಾರು ಕಥೆಗಳನ್ನು ಬರೆದರೂ ಕೂಡ ಪುಸ್ತಕ ರೂಪದಲ್ಲಿ ಪ್ರಕಟವಾದ ಕಥಾಸಂಕಲನಗಳು ತೀರ ಕಡಿಮೆ. ‘ಕೆಂಡ’, ‘ತಪ್ತ’, ‘ಓಟ’, ‘ದಡ’, ‘ಕಾಂತ’, ‘ಅಸ್ತ್ರ’ ಮತ್ತು ‘ಸ್ನಾನ’ ಅವರ ಕೆಲವು ಪ್ರಕಟಿತ ಕಥಾಸಂಕಲನಗಳು.

೨೦೦೨ರಲ್ಲಿ ಪ್ರಕಟವಾದ ‘ಸ್ನಾನ’ ಸಂಕಲನದಲ್ಲಿ ‘ರಥ’, ‘ಕ್ಷೇತ್ರ’ ಮತ್ತು ‘ಸ್ನಾನ’ ಎಂಬ ಮೂರು ನೀಳ್ಗತೆಗಳಿವೆ. ವ್ಯಾಸರ ಆಡುಂಬೋಲವಾದ ದುರ್ಗಾಪುರ, ಶಂಕರಿ ನದಿ ಮತ್ತು ಶಂಕರಗುಡ್ಡದ ಪರಿಸರದಲ್ಲಿ ಈ ಕಥೆಗಳು ರೂಪುಗೊಂಡಿವೆ. ಈ ಮೂರೂ ನೀಳ್ಗತೆಗಳು ಗಂಡು ಹೆಣ್ಣಿನ ನಡುವಿನ ಸಂಕೀರ್ಣ ಸಂಬಂಧಗಳನ್ನು ವಿವಿಧ ಆಯಾಮಗಳಲ್ಲಿ ತುಂಬ ತೀವ್ರವಾಗಿ ಶೋಧಿಸುತ್ತವೆ.

‘ರಥ’ ಕಥೆ ಸಂಪೂರ್ಣವಾಗಿ ಕಥಾನಾಯಕಿಯಾದ ಸುಶೀಲಾ ಯಾನೆ ಶೀಲಾಳ ಪ್ರಜ್ಞೆಯಲ್ಲಿ ಸ್ವಗತದಂತೆ ನಿರೂಪಿತವಾಗಿದೆ. ಶೀಲಾ ಮತ್ತು ರವಿ ಬಾಲ್ಯ ಸ್ನೇಹಿತರು. ಶೀಲಾ ರವಿಯನ್ನು ಪ್ರೀತಿಸಿದರೂ, ರವಿಯಿಂದ ಅವಳಿಗೆ ಮರಳಿ ಅದೇ ರೀತಿಯ ಪ್ರೀತಿ ದೊರೆಯುವುದಿಲ್ಲ. ರವಿ ಕಾಲೇಜಿನ ಸುಂದರಿಯಾದ ರೂಪಾಳಿಗೆ ಪ್ರೇಮಪತ್ರ ಕೊಟ್ಟು, ಆ ಪ್ರಕರಣ ಪ್ರಾಂಶುಪಾಲರವರೆಗೆ ಹೋಗಿ, ಅಲ್ಲಿ ಛೀಮಾರಿ ಹಾಕಿಸಿಕೊಂಡು ಅವಮಾನಿತನಾಗುತ್ತಾನೆ. ರವಿಯ ಕುರಿತು ಪ್ರೀತಿಯುಳ್ಳ ಶೀಲಾ ಅವನನ್ನು ಸಮಾಧಾನ ಪಡಿಸಲು ಹೋದಾಗ, ರೂಪಾಳ ಮೇಲಿನ ರೊಚ್ಚನ್ನು ತೀರಿಸಿಕೊಳ್ಳಲು ಅವನು ಶೀಲಾಳನ್ನು ಸಂಭೋಗಿಸುತ್ತಾನೆ. ಇದಾದ ನಂತರ ಏನೂ ನಡೆದೇ ಇಲ್ಲವೆಂಬಂತೆ ಶೀಲಾಳನ್ನು ತಿರಸ್ಕರಿಸಿ, ಉಮಾಳನ್ನು ಮದುವೆಯಾಗುವ ರವಿ ತುಂಬ ಸ್ವಾರ್ಥಿಯಂತೆ ಕಾಣುತ್ತಾನೆ.

ಶೀಲಾಳಿಗೆ ಮಾತ್ರ ಆ ರಾತ್ರಿಯ ಅನಿರೀಕ್ಷಿತ ಮಿಲನ ತೀವ್ರವಾಗಿ ಕಾಡತೊಡಗುತ್ತದೆ. ರವಿಯನ್ನು ತುಂಬ ಪ್ರೀತಿಸಿದ ಅವಳಿಗೆ ಅವನನ್ನು ಮರೆಯಲು ಸಾಧ್ಯವಾಗುವುದಿಲ್ಲ. ತಾಯಿಯ ಮರಣ ಮತ್ತು ತಂದೆಯ ಎರಡನೆಯ ಮದುವೆಯ ನಂತರ ಎಲ್.ಐ.ಸಿ.ಯಲ್ಲಿ ಕೆಲಸ ಸಿಕ್ಕು ಹೊಸದುರ್ಗಕ್ಕೆ ಬರುವ ಶೀಲಾ, ಹಳೆಯದನ್ನೆಲ್ಲ ಮರೆತು ಹೊಸ ಬದುಕು ನಡೆಸಲು ಯತ್ನಿಸುತ್ತಾಳೆ. ಅವಳನ್ನು ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡ ಸಹೋದ್ಯೋಗಿ ಕೃಷ್ಣಕಾಂತನನ್ನು ಮದುವೆಯಾಗುತ್ತಾಳೆ. ವಿವಾಹದ ನಂತರ ದುರ್ಗಾಪುರಕ್ಕೆ ಬರುವ ಶೀಲಾಳಿಗೆ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದ ರವಿ ಕಾಣುತ್ತಾನೆ. ಅವನ ಅಸಹಾಯಕತೆಯನ್ನು ಅರ್ಥ ಮಾಡಿಕೊಂಡು ಅನುಕಂಪ ತೋರಿಸುವ ಶೀಲಾ, ಅವನಿಗೆ ಹಣ ಕೊಟ್ಟು ಅಲ್ಲಿಂದ ಹಿಂದಿರುಗಿ ನೋಡದಂತೆ ತೆರಳುತ್ತಾಳೆ.

ಹೆಣ್ಣಿನ ತಾಳ್ಮೆ ಮತ್ತು ಗಂಡಿನ ಕ್ರೌರ್ಯದ ಚಿತ್ರಣವಾದ ‘ರಥ’ ಕಥೆಯಲ್ಲಿ ಶೀಲಾ ರವಿಯಿಂದ ಮಾನಸಿಕವಾಗಿ ನೊಂದರೆ, ಶೀಲಾಳ ತಾಯಿ ಅವಳ ತಂದೆಯ ಕ್ರೌರ್ಯಕ್ಕೆ ಬಲಿಯಾಗಬೇಕಾಗುತ್ತದೆ. ರವಿ ಮತ್ತು ಶೀಲಾಳ ತಂದೆ ಹೆಣ್ಣಿನ ಕೋಮಲ ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ಅವಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಜೀವನದಲ್ಲಿ ಎದುರಾದ ಸಂಕಷ್ಟಗಳಿಂದ ನೊಂದು, ಬೆಂದು ಪ್ರಬುದ್ಧನಾದ ಕೃಷ್ಣಕಾಂತ ಮಾತ್ರ ಶೀಲಾಳನ್ನು ಅರ್ಥ ಮಾಡಿಕೊಳ್ಳುತ್ತಾನೆ. ರವಿಯ ಪ್ರೀತಿಗಾಗಿ ಹಂಬಲಿಸುವ ಶೀಲಾಳಿಗೆ ಕೊನೆಗೂ ಅದು ಸಿಗದೇ ಹೋಗುತ್ತದೆ. ಕಥೆಯ ಕೊನೆಯಲ್ಲಿ ಅನಾರೋಗ್ಯದಿಂದ ಬಳಲುತ್ತ, ಅಸಹಾಯಕ ಪರಿಸ್ಥಿತಿಯಲ್ಲಿರುವ ರವಿಗೆ ಧನ ಸಹಾಯ ಮಾಡುವ ಮೂಲಕ ಆ ಅರಿಯದ ಬಂಧವನ್ನು ಕಿತ್ತೊಗೆದು ಹೊರಬರುವ ಶೀಲಾಳ ನಿರ್ಧಾರ ಅರ್ಥಪೂರ್ಣವಾಗಿದೆ. ಶೀಲಾ ಮತ್ತು ರವಿಯ ಮಿಲನದ ತಾಣವಾದ ಮುರಿದ ರಥ ಅವಳ ಅಪೂರ್ಣ ಪ್ರೀತಿಗೆ ಸಂಕೇತವಾಗಿ ಬಳಕೆಯಾಗಿದೆ.

‘ಕ್ಷೇತ್ರ’ ಕಥೆಯಲ್ಲಿ ಸಹ ಗಂಡು ಹೆಣ್ಣಿನ ನಡುವಿನ ಸಂಕೀರ್ಣ ಸಂಬಂಧ ಕೇಂದ್ರ ವಸ್ತುವಾಗಿದೆ. ರವಿ – ಮೀನಾ, ಅನಂತ ಶರ್ಮ – ವಿಲಾಸಿನಿ ಮತ್ತು ನಾಗಭೂಷಣ – ಮೀನಾರ ನಡುವಿನ ಸಂಬಂಧವನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಣೆಗೊಳಪಡಿಸಿರುವ ವ್ಯಾಸರು ವಿಷಮ ಸಂಬಂಧಗಳು ಬದುಕನ್ನು ಹೇಗೆಲ್ಲ ಪ್ರಭಾವಿಸಬಹುದೆಂಬುದನ್ನು ಈ ಕಥೆಯಲ್ಲಿ ತೋರಿಸಿದ್ದಾರೆ. ವಿಕ್ಷಿಪ್ತ ಮನಸ್ಥಿತಿಯ ರವಿಗೆ ತಂದೆ ಅನಂತ ಶರ್ಮರ ಜೊತೆಯಾಗಲೀ, ಹೆಂಡತಿ ಮೀನಾಳ ಜೊತೆಯಾಗಲೀ ಸೌಹಾರ್ದಯುತ ಸಂಬಂಧವಿಲ್ಲ. ಅನಂತ ಶರ್ಮ ಮತ್ತು ವಿಲಾಸಿನಿಯ ಮಗನಾದ ನಾಗಭೂಷಣನೊಂದಿಗೆ ಅವನಿಗೆ ತೀರದ ಹಗೆ. ರಾಮಾಯಣವನ್ನು ತಿರುಚಿ ಬರೆದು, ತನ್ನ ಮನಕ್ಲೇಶವನ್ನು ಕಡಿಮೆ ಮಾಡಿಕೊಳ್ಳುವ ವಿಚಿತ್ರ ಪ್ರಯತ್ನ ಅವನದು. ಅವನ ವಿಕ್ಷಿಪ್ತತೆ ಹೆಂಡತಿ ಮೀನಾಳನ್ನು ಹಿಂಸಿಸುವುದರ ಮೂಲಕ ವ್ಯಕ್ತವಾಗುತ್ತದೆ. ಅವನ ಕ್ರೌರ್ಯವನ್ನು ಸಹಿಸಿಯೂ ಕೂಡ ತಮ್ಮ ದಾಂಪತ್ಯವನ್ನು ಸುಗಮ ಮತ್ತು ಸುಖಕರಗೊಳಿಸಿಕೊಳ್ಳಲು ಹಾರ್ದಿಕ ಯತ್ನ ನಡೆಸುವ ಮೀನಾಳ ಪ್ರಯತ್ನ ಯಶಸ್ವಿಯಾಗುವುದಿಲ್ಲ.

ಒಂದು ರಾತ್ರಿ ರವಿ ಹೆಂಡತಿ ಮೀನಾಳ ಜೊತೆ ಜಗಳವಾಡಿ, ಮನಸ್ತಾಪದಿಂದ ಮನೆಬಿಟ್ಟು ತೆರಳಿದವ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ. ಅನಂತ ಶರ್ಮ ಮಗ ರವಿಯ ಮರಣದ ನಂತರ ವಿಲಾಸಿನಿಯ ಮಗ ನಾಗಭೂಷಣನನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಬರುಬರುತ್ತ ನಾಗಭೂಷಣ ಮತ್ತು ಮೀನಾಳ ನಡುವೆ ಸಂಬಂಧ ಬೆಳೆಯುತ್ತದೆ. ಹಿಂದೆ ವಿಲಾಸಿನಿ ಮತ್ತು ಅನಂತ ಶರ್ಮರ ನಡುವೆ ಸಂಬಂಧ ಏರ್ಪಟ್ಟರೆ ಮುಂದೆ ಇದು ನಾಗಭೂಷಣ ಮತ್ತು ಮೀನಾಳ ವಿಷಯದಲ್ಲಿ ಪುನರಾವರ್ತನೆಯಾಗುತ್ತದೆ. ಇದನ್ನು ಅರಿತ ಅನಂತ ಶರ್ಮ ಮೊದಲು ಅಸ್ವಸ್ಥರಾದರೂ ಕೂಡ ಕೊನೆಗೆ ಆ ಸಂಬಂಧವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಬೀಜ ಮತ್ತು ಕ್ಷೇತ್ರದ ಕುರಿತ ಪ್ರಶ್ನೆ ತುಂಬ ಹಿಂದಿನಿಂದ ಚರ್ಚೆಗೊಳಗಾಗುತ್ತ ಬಂದಿದೆ. ಗಂಡು ಹೆಣ್ಣಿನ ನಡುವಿನ ಸಂಬಂಧ, ನೈತಿಕ ಅಥವಾ ಅನೈತಿಕ ಯಾವುದೇ ಬಗೆಯದಿರಲಿ ಅದು ಬದುಕಲ್ಲಿ ಉಂಟು ಮಾಡುವ ಪರಿಣಾಮ ಮಾತ್ರ ತುಂಬ ತೀವ್ರವಾಗಿರುತ್ತದೆ. ಇಂತಹ ಸಂಬಂಧಗಳು ಕೆಲವೊಮ್ಮೆ ಧನಾತ್ಮಕ ಮತ್ತು ಇನ್ನೂ ಕೆಲವೊಮ್ಮೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತವೆ. ಅನಂತ ಶರ್ಮ ಮತ್ತು ವಿಲಾಸಿನಿಯ ಸಂಬಂಧ ರವಿ ಮತ್ತು ನಾಗಭೂಷಣ ಇಬ್ಬರ ಮನಸ್ಸಿನ ಮೇಲೂ ಕೂಡ ಗಾಢವಾದ ಪರಿಣಾಮ ಬೀರಿದೆ. ಇದರಿಂದ ರವಿ ಒಂದು ರೀತಿಯಲ್ಲಿ ವಿಕ್ಷಿಪ್ತನಾದರೆ, ನಾಗಭೂಷಣ ಕೂಡ ತೀವ್ರವಾಗಿ ನೊಂದಿದ್ದಾನೆ. ಆದರೆ ಕಥೆಯ ಕೊನೆಯಲ್ಲಿ ನಾಗಭೂಷಣ ಮತ್ತು ಮೀನಾಳ ನಡುವೆ ಏರ್ಪಡುವ ಸಂಬಂಧ ಮಾತ್ರ ಅವರಿಬ್ಬರ ಬಾಳಿಗೆ ಹೊಸ ಅರ್ಥ ನೀಡುವಂತಿದ್ದು, ಒಂದು ರೀತಿಯಲ್ಲಿ ಈ ಕಥೆ ಸುಖಾಂತ ಕಂಡಿದೆ.

ಈ ಸಂಕಲನದ ಕೊನೆಯ ನೀಳ್ಗತೆ ‘ಸ್ನಾನ’. ಡಿ. ಎಸ್. ಸತ್ಯನಾರಾಯಣ ಶರ್ಮ ಎಂಬ ಸಾಮಾನ್ಯ ವ್ಯಕ್ತಿ ದುರ್ಗಾಪುರದ ಸಾಂಧುಮಠದ ಪೀಠಾಧಿಪತಿ ಸತ್ಯಾನಂದನಾಗಿದ್ದಾನೆ. ಸಾಮಾನ್ಯವಾಗಿ ಬದುಕುತ್ತಿದ್ದ ವ್ಯಕ್ತಿಯೊಬ್ಬನ ಬದುಕಿನ ರೀತಿ ಇದ್ದಕ್ಕಿದ್ದಂತೆಯೇ ಬದಲಾಗಿ ಹೋದಾಗ ಆ ವ್ಯಕ್ತಿಗೆ ಎದುರಾಗುವ ಸಂದಿಗ್ಧ ಪರಿಸ್ಥಿತಿ ಮತ್ತು ಮನದಲ್ಲಾಗುವ ತಳಮಳವನ್ನು ಊಹಿಸುವುದು ಕಷ್ಟ. ದೊಡ್ಡ ಮಠದ ಪೀಠಾಧಿಪತಿಯೆಂಬ ಹೆಸರು, ಪ್ರತಿಷ್ಠೆ, ಪ್ರಭಾವ, ಅಧಿಕಾರ ಎಲ್ಲ ಇದ್ದರೂ ಸಹ ಏನೂ ಇಲ್ಲದ ದರಿದ್ರನಂತೆ ಬದುಕುವ ಕಷ್ಟ ಸತ್ಯಾನಂದನನ್ನು ತೀವ್ರ ತಳಮಳಕ್ಕೀಡಾಗುವಂತೆ ಮಾಡಿದೆ. ಅವನ ಒಂದು ಕಾಲದ ಸ್ನೇಹಿತ ಮತ್ತು ಮಠದ ಪಾರುಪತ್ಯಗಾರನಾದ ಹರಿರಾವ್ ಯಾನೆ ಹರಿ ಸಹ ಅವನ ಮನಕ್ಲೇಶವನ್ನು ಅರ್ಥ ಮಾಡಿಕೊಳ್ಳಲಾರ. ಪೂರ್ವಾಶ್ರಮದ ಬಾಲ್ಯದ ನೆನಪುಗಳು ಅವನನ್ನು ಅಶಾಂತಗೊಳಿಸಿವೆ. ಬಾಲ್ಯದಲ್ಲೇ ತಾಯಿಯ ಪ್ರೀತಿ ಮತ್ತು ಸೋದರರ ವಾತ್ಸಲ್ಯದಿಂದ ವಂಚಿತನಾದ ಅವನಿಗೆ ಅದೊಂದು ತುಂಬಲಾರದ ನಷ್ಟ. ಓದು, ಧ್ಯಾನ, ಪೂಜೆ ಯಾವುದರಿಂದಲೂ ಅವನ ಆ ಕೊರತೆ ನೀಗಿಸಲು ಸಾಧ್ಯವಾಗುವುದಿಲ್ಲ.

ಒಂದು ಬಾರಿ ಆಕಸ್ಮಿಕವಾಗಿ ಮಠದ ಹಿರಿಯ ಸ್ವಾಮೀಜಿಯ ಡೈರಿ ಓದುವ ಸತ್ಯಾನಂದನಿಗೆ ತನ್ನ ಹುಟ್ಟಿನ ಗುಟ್ಟು ತಿಳಿದು ಆಘಾತವಾಗುತ್ತದೆ. ಮಠದ ಹಿರಿಯ ಸ್ವಾಮೀಜಿ ಮತ್ತು ತನ್ನ ಪೂರ್ವಾಶ್ರಮದ ತಾಯಿ ಸರಸ್ವತಿಯ ಅನೈತಿಕ ಸಂಬಂಧದ ಫಲವೇ ತಾನು ಎಂಬ ಕಟುಸತ್ಯ ಅವನನ್ನು ತುಂಬ ತೀವ್ರವಾಗಿ ಅಸ್ವಸ್ಥಗೊಳಿಸುತ್ತದೆ. ಇಂತಹ ತೀವ್ರ ತಲ್ಲಣ, ತಳಮಳಗಳಿಂದ ಬಿಡುಗಡೆ ಪಡೆಯಲು ಬಯಸುವ ಅವನಿಗೆ ಅದರಿಂದ ಹೊರಬರಲು ಬಾಲ್ಯದ ಗೆಳತಿ ದೇವಿಯ ಸಾನಿಧ್ಯ ಒಂದು ಹೊಸ ದಾರಿಯಂತೆ ಕಾಣುತ್ತದೆ. ಪೂರ್ವಾಶ್ರಮದ ತಾಯಿಯಲ್ಲಿ ಪ್ರೀತಿ, ಮಮತೆಯರಸಿ ಹೋಗುವ ಸತ್ಯನಿಗೆ ಅಲ್ಲೂ ನಿರಾಶೆಯಾಗುತ್ತದೆ. ಮಾನಸಿಕವಾಗಿ ಅಸ್ವಸ್ಥಳಾದ ತಾಯಿ ಅವನನ್ನು ಗುರುತಿಸದೆ ಹೋದಾಗ ಅವನಿಗೆ ತುಂಬ ನೋವಾಗುತ್ತದೆ.

ಒಂದು ಕಾಲದಲ್ಲಿ ಬಾಲ್ಯದ ಗೆಳತಿಯಾದ ಆದರೆ ಈಗ ವಿಧವೆಯಾಗಿರುವ ತುಂಬು ಹರೆಯದ ಸುಂದರಿ ದೇವಿಯಲ್ಲಿ ತಾನು ಕಳೆದುಕೊಂಡ ಪ್ರೀತಿಯನ್ನರಸುವ ಸತ್ಯನಿಗೆ ಅಲ್ಲೂ ಕೂಡ ಮರ್ಮಾಘಾತವಾಗುತ್ತದೆ. ಸತ್ಯ ತನ್ನ ಮನಸ್ಸಿನಲ್ಲೇ ಗುಪ್ತವಾಗಿ ಆರಾಧಿಸುತ್ತಿದ್ದ ದೇವಿಗೆ ಬೇಕಿರುವುದು ಕಾಮವೇ ಹೊರತು ಪ್ರೇಮವಲ್ಲ! ಭಾವುಕ ವ್ಯಕ್ತಿಯಾದ ಸತ್ಯನಿಂದ ಸಿಗದ ದೈಹಿಕ ಸುಖವನ್ನು ಅವಳು ಮಠದ ಕಟ್ಟುಮಸ್ತಾದ ಆಳು ನಂಬೀಶನಿಂದ ಪಡೆಯುತ್ತಾಳೆ. ಕಥೆಯ ಕೊನೆಯಲ್ಲಿ ಸತ್ಯನನ್ನು ತಿರಸ್ಕರಿಸಿ, ಅವನ ಮುಖಕ್ಕೆ ಹೊಡೆದಂತೆ ಕಿಡಕಿಯ ಬಾಗಿಲು ಮುಚ್ಚುವ ಮೂಲಕ ದೇವಿ ಅವನ ಎದುರಿಗಿದ್ದ ಬದುಕಿನ ಆಶೆಯ ಕೊನೆಯ ಬಾಗಿಲನ್ನು ಸಹ ಮುಚ್ಚುತ್ತಾಳೆ. ಕಥೆಯ ಅಂತ್ಯದಲ್ಲಿ ಸತ್ಯ ಮಠದ ಕಲ್ಯಾಣಿಯಲ್ಲಿ ಸ್ನಾನ ಮಾಡಿ ದೇವರ ಮನೆಯತ್ತ ತೆರಳುವ ದೃಶ್ಯ ಅತ್ಯಂತ ಅರ್ಥಪೂರ್ಣವಾಗಿದೆ.

ಕನ್ನಡದಲ್ಲಿ ತುಂಬ ಜನ ಸಾಹಿತಿಗಳು ಮಠಗಳ ಕುರಿತು, ಮಠಾಧೀಶರ ಕುರಿತು ಸಾಕಷ್ಟು ಕಥೆಗಳನ್ನು ಬರೆದಿದ್ದಾರೆ. ವ್ಯಾಸರ ‘ಸ್ನಾನ’ ಮಾತ್ರ ಆ ಎಲ್ಲ ಕಥೆಗಳಿಗಿಂತ ತುಂಬ ಭಿನ್ನವಾಗಿ ನಿಲ್ಲುತ್ತದೆ. ಕಥಾನಾಯಕ ಸತ್ಯಾನಂದನ ದ್ವಂದ್ವ ಜೀವನ ಮತ್ತು ಅದರಿಂದ ಅವನು ಪಡುವ ಮಾನಸಿಕ ಯಾತನೆ ಓದುಗರನ್ನು ಕಲಕುವಂತಿದೆ. ಸತ್ಯನಿಗೆ ಅತ್ತ ತಾಯಿ ಸರಸ್ವತಿಯಿಂದ ಮಮತೆಯೂ ಸಿಗುವುದಿಲ್ಲ, ಇತ್ತ ಪ್ರೇಯಸಿಯೆಂದು ಭಾವಿಸಿದ ದೇವಿಯಿಂದ ಪ್ರೀತಿಯೂ ಸಿಗುವುದಿಲ್ಲ. ವ್ಯಾಸರು ಸತ್ಯಾನಂದನ ಮನಸ್ಸಿನಲ್ಲಿ ನಡೆಯುವ ಭಾವ ತುಮುಲವನ್ನು ಕಥೆಯಲ್ಲಿ ತುಂಬ ಪರಿಣಾಮಕಾರಿಯಾಗಿ ತಂದಿದ್ದಾರೆ.

ಮಠದ ಹಿರಿಯ ಸ್ವಾಮೀಜಿಯ ಜೊತೆಗಿನ ಅನೈತಿಕ ಸಂಬಂಧದಿಂದ ಜನಿಸಿದ ಮಗುವನ್ನು ಮಠಕ್ಕೆ ಉತ್ತರಾಧಿಕಾರಿಯಾಗಿ ನೀಡಿದ ಸರಸ್ವತಿಗೆ ಆ ಪಾಪಪ್ರಜ್ಞೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅವಳು ಮತ್ತೆ ಮತ್ತೆ ಸ್ನಾನ ಮಾಡುವ ಮೂಲಕ ಮತ್ತು ಗೋಮೂತ್ರ ಕುಡಿಯುವ ಮೂಲಕ ಆ ಪಾಪವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಾಳೆ. ದೇವಿಯ ಬಗ್ಗೆ ಹತ್ತು ಹಲವು ಕನಸು ಕಟ್ಟಿಕೊಂಡ ಸತ್ಯ ಅವಳ ನಿಜ ಸ್ವರೂಪವನ್ನು ಕಂಡು ಆಘಾತಕ್ಕೊಳಗಾಗುತ್ತಾನೆ. ಅವನು ಮಠದ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಮೂಲಕ ಅವಳ ನೆನಪುಗಳಿಂದ ಬಿಡುಗಡೆ ಪಡೆಯಲು ಯತ್ನಿಸುತ್ತಾನೆ. ಈ ರೀತಿ ಕಥೆಯ ಶೀರ್ಷಿಕೆಯಾದ ‘ಸ್ನಾನ’ ಇಲ್ಲಿ ತುಂಬ ಸಾರ್ಥಕವಾಗಿ ಬಳಕೆಯಾಗಿದೆ.

ವ್ಯಾಸರ ಕಥೆಗಳು ವಿಭಿನ್ನ ಕಥಾ ವಸ್ತು, ಲವಲವಿಕೆಯ ನಿರೂಪಣೆ ಮತ್ತು ಕಾವ್ಯಮಯ ಭಾಷಾಶೈಲಿಯಿಂದ ಮಿನುಗುತ್ತವೆ. ಈ ಮೂರು ನೀಳ್ಗತೆಗಳಲ್ಲಿ ವ್ಯಾಸರು ಬಳಸಿರುವ ಭಾಷೆ ಕೆಲವೆಡೆ ತುಂಬ ಕಾವ್ಯಾತ್ಮಕವಾಗಿದೆ. ಅದನ್ನು ಓದಿಯೇ ಸವಿಯಬೇಕು. ಪುಸ್ತಕ ಪ್ರಕಟಣೆ, ಬಿಡುಗಡೆ, ಪ್ರಚಾರ, ಪ್ರಸಿದ್ಧಿ ಮತ್ತು ಪ್ರಶಸ್ತಿಗಳಿಂದ ತುಂಬ ದೂರವಿದ್ದ ವಿರಳ ವ್ಯಕ್ತಿ ಎಂ. ವ್ಯಾಸ. ಅವರು ಕನ್ನಡದ ಪ್ರಥಮ ದರ್ಜೆಯ ಕಥೆಗಾರರು. ಅವರ ಕಥನ ಸಾಮರ್ಥ್ಯ ಸಾಬೀತು ಪಡಿಸಲು ‘ರಥ’, ‘ಕ್ಷೇತ್ರ’ ಮತ್ತು ‘ಸ್ನಾನ’ – ಈ ಮೂರು ನೀಳ್ಗತೆಗಳು ಸಾಕು. ವ್ಯಾಸರ ನೂರಾರು ಕಥೆಗಳು ಇದುವರೆಗೆ ಪುಸ್ತಕ ರೂಪದಲ್ಲಿ ಬಂದಿಲ್ಲ. ಆದಷ್ಟು ಶೀಘ್ರ ಅವರ ಸಮಗ್ರ ಕಥೆಗಳು ಪ್ರಕಟವಾಗಿ, ಓದುಗರ ಕೈಗೆ ಸಿಗುವಂತಾಗಬೇಕು. ಅದು ಕಥೆಗಾರ ವ್ಯಾಸರಿಗೆ ತೋರಬಹುದಾದ ನಿಜವಾದ ಗೌರವ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ವ್ಯಾಸರ ಮೂರು ನೀಳ್ಗತೆಗಳು”

  1. ಜೆ.ವಿ.ಕಾರ್ಲೊ

    ಎಂ.ವ್ಯಾಸರ ಮೂರು ನೀಳ್ಗತೆಗಳ ಕುರಿತ ನಿಮ್ಮ ಬರಹ ಇಷ್ಟವಾಯಿತು. ಇದರಲ್ಲಿ ‘ರಥ’ವನ್ನು ಓದಿದ ನೆನಪಾಯಿತು. ಎಲ್ಲಿ ಎಂದು ಈಗಲೂ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

  2. Raghavendra Mangalore

    ವ್ಯಾಸರ ಬಹು ಮುಖ್ಯ ಕತೆಗಳನ್ನು ಕಣ್ಣ ಮುಂದೆ ತಂದು ಮತ್ತೊಮ್ಮೆ ಓದಲು ಅವಕಾಶ ನೀಡಿದ ವಿಕಾಸ ಹೊಸಮನಿ ಅವರಿಗೆ ಧನ್ಯವಾದಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter