ಮಳೆ ಬಂತು ಮಳೆ !


ಹಾಸ್ಯ / ವಿಡಂಬನೆ ಲೇಖನ

” ಹುಯ್ಯೋ ಹುಯ್ಯೋ ಮಳೆರಾಯ. ಹೂವಿನ ತೋಟಕ್ಕೆ ನೀರಿಲ್ಲಾ. ಬಾರೋ ಬಾರೋ ಮಳೆರಾಯ. ಬಾಳೆಯ ತೋಟಕ್ಕೆ ನೀರಿಲ್ಲಾ… ” ಎನ್ನುವ ಮಳೆಯ ಪ್ರಾರ್ಥನೆ ಕುರಿತ ಚಂದದ ಮಕ್ಕಳ ಪದ್ಯ ಮಲೆನಾಡಿಗೆ ಓಕೆ. ಆದರೆ ‘ ಸಿಲಿಕಾನ್ ಸಿಟಿ ‘ ಬೆಂಗಳೂರಿಗೆ ನಾಟ್ ಓಕೆ ಎನ್ನುವದಕ್ಕೆ ಕೆಳಗಿನ ಕಾರಣಗಳನ್ನು ಓದಿ!

” ಮಳೆ ಬರಲಿ…ಜಡಿ ಮಳೆ ಸುರಿಯಲಿ… ” ಎಂದು ಯಾರೋ ಜೋರಾಗಿ ಹಾಡಿದ್ದು ಮೇಘರಾಜನಿಗೆ ಕೇಳಿಸಿತೋ ಏನೋ… ಚದುರಿದ್ದ ಮಳೆ ಮೋಡಗಳೆಲ್ಲಾ ಒಂದು ಗೂಡಿ ಆಕಾಶವೇ ಹರಿದಂತಾಗಿ ಕುಂಭ ದ್ರೋಣ ಮಳೆ ಧೊಪ್ಪನೆ ಸುರಿಯತೊಡಗಿತು. ಕುಂಡದಿಂದ ನೀರು ಸುರಿದ ಹಾಗೆ ಅಲ್ಲ ನೀರಿನ ಟ್ಯಾಂಕರ್ ಪೈಪಿನಿಂದ ನೀರು ಬಿಟ್ಟಂತೆ ದಪ್ಪನೆಯ ಮಳೆ… ಕೋಪದಿಂದ ಕೆನ್ನೆಗೆ ಹೊಡೆದ ಹಾಗೆ ಅಲ್ಲ ಪೊಲೀಸ್ ಲಾಠಿ ಬೆನ್ನಿಗೆ ರಪ್ಪಂತ ಬಿದ್ದು ನೋವಾಗುವಂತಹ ಭೋರ್ಗರೆಯುವ ಆಣೆಕಲ್ಲಿನ ಮಳೆ…ಅಲ್ಲಿಯವರೆಗೆ ಸಣ್ಣಗೆ ಹರಿಯುತ್ತಿದ್ದ ರಾಜ ಕಾಲುವೆಗೆ ಇದ್ದಕ್ಕಿದ್ದಂತೆ ಬಿ ಪಿ ಸರ್ರನೆ ಹೆಚ್ಚಾಗಿ ಸ್ಪೀಡು ಜೋರು ಮಾಡಿತು. ಪಕ್ಕದಲ್ಲಿ ಮೆಲ್ಲಗೆ ತೆವಳುತಿದ್ದ ಪುಟ್ಟ ಕಾಲುವೆ ಆಗಲೇ ರಸ್ತೆ, ಅಂಡರ್ ಬ್ರಿಡ್ಜ್ ಗಳನ್ನು ದಾಟಿ ನಾಗಾ ಲೋಟದಿಂದ ಓಡುತ್ತಿದ್ದ ರಾಜ ಕಾಲುವೆಯನ್ನು ಕೇಳಿತು ” ಎಲ್ಲಿಗೆ ಹೊರಟಿರುವೆ ಅಣ್ಣಾ…?” ಎಂದು.

” ಆಕಾಶದಿಂದ ಮೋಡಗಳ ಗ್ಯಾಂಗ್ ವಾರ್ ಶುರುವಾಗಿ ಒಂದೇ ಸಮನೆ ರಕ್ಕಸ ಹನಿಗಳು ದಾಳಿ ಮಾಡುತ್ತಿದ್ದರೆ ಏನು ಮಾಡುವದು?… ಇದ್ದ ಜಾಗದಲ್ಲಿ ಇರಲಿಕ್ಕೆ ಸಾಧ್ಯವೇನು?… ಈಗ ದಿಕ್ಕಾ ಪಾಲಾಗಿ ಓಡದೆ ಬೇರೆ ದಾರಿ ಇಲ್ಲ…ಜೀವ ಉಳಿಸಿಕೊಳ್ಳಲು ಓಡುತ್ತಿರುವೆ … ಬೇಕಿದ್ದರೆ ನೀನು ಬಂದು ಸೇರಿಕೋ..” ಎಂದು ಜೋರಾಗಿ ಕಿರುಚುತ್ತಾ ಓಡುತ್ತಾ ಪುಟ್ಟ ಕಾಲುವೆಗೆ ಹೇಳಿತು. ಮತ್ತಷ್ಟು ಕಿರಿಯ ಸೋದರ ಕಾಲುವೆಗಳು ರಾಜ ಕಾಲುವೆಯನ್ನು ಸೇರಿ ಓಟ್ಟಿಗೆ ‘ ಮ್ಯಾರಥಾನ್ ‘ ಓಟ ಆರಂಭಿಸಿದವು.

ಅಲ್ಲಿಯವರೆಗೆ ಇರದಿದ್ದ ಗಬ್ಬು ವಾಸನೆ ಒಮ್ಮೆಲೇ ಮೂಗಿಗೆ ಅಡರಿ ‘ ಇದು ಎಲ್ಲಿಯದೋ…? ‘ ಎಂದು ಸಂದೇಹ ಹೊರ ಹಾಕಿತು ಪುಟ್ಟ ಕಾಲುವೆ. ಬಹುಶಃ ಡ್ರೈನೇಜ್ ಮುಚ್ಚಳಗಳು ತೆರೆದುಕೊಂಡು
ಅಲ್ಲಿಂದ ಹೊರಬರುತ್ತಿದೆ ಈ ‘ ದುರ್ಗಂಧದ, ಕೊಳಚೆ, ಗಲೀಜು ನೀರು ‘ ಎಂದು ಉತ್ತರಿಸಿತು ರಾಜ ಕಾಲುವೆ.

ಹೌದೌದು…ಮೂಗು ಮುಚ್ಚಿಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಕಾರಣವಾದ ಯು ಜಿ ಡಿ ಯ ( ನಮ್ಮ ಅದ್ಭುತ ಒಳ ಚರಂಡಿ ಯೋಜನೆ! ) ಗಬ್ಬು ವಾಸನೆ ಮುಖಕ್ಕೆ ರಾಚುತ್ತಿದೆ ಎಂದರೆ ನಾವು ಬಹಳ ಮುಂದೆ ಬಂದಿರುವೆವು ಎಂದು ಅರ್ಥವಾಗುತ್ತದೆ… ಗಿಡ, ಮರ, ಹೆಮ್ಮರಗಳನ್ನು ದಾಟಿ ಮನೆ ಮಠಗಳನ್ನು ಮುಳುಗಿಸಿ ಕಾರು, ಲಾರಿ, ಬಸ್ಸುಗಳು ರಸ್ತೆಗಳಲ್ಲಿ ತೇಲುವ ಜಾಗಕ್ಕೆ ಬಂದಿದ್ದೇವೆ ಎಂದು ಈಗ ಅರ್ಥವಾಗುತ್ತಿದೆ. ನೀರಿನಲ್ಲಿ ಮುಳುಗಿದ ದೊಡ್ಡ ದೊಡ್ಡ ಕಟ್ಟಡಗಳನ್ನು ನಾವು ತುಳಿಯುತ್ತಾ ಮುಂದೆ ಸಾಗುವ
ವಾಹನಗಳನ್ನು ನೋಡುವ ಸೌಭಾಗ್ಯ ದೊರಕಿದ ಬಳಿಕ ಇದೇ ಅಲ್ಲವೇ ‘ ನಮ್ಮ ಮೆಟ್ರೋ ‘ ( ಅಂದದ – ಚಂದದ ಬೆಂಗಳೂರು !) ಎಂದೆನಿಸಿ ಸಂತೋಷದಿಂದ ಕುಣಿದಾಡತೊಡಗಿತು ಪುಟ್ಟ ಕಾಲುವೆ. ಇದು ಸಾಮಾನ್ಯ ನಗರ ಅಲ್ಲ ಇದಕ್ಕೆ ಹೈ ಟೆಕ್ ( ಗ್ಲೋಬಲ್ ) – ಸಿಲಿಕಾನ್ ಸಿಟಿ ಅಂತಾನೂ ಕರೆಯುತ್ತಾರೆ… ಆಗೋ ನೋಡು ಸಾಲು ಸಾಲಾಗಿ ನಿಂತ ವಾಹನಗಳು…ಅವು ನಾಳೆಯೋ ಅಥವಾ ನಾಡಿದ್ದೋ ಮನೆ ಸೇರುತ್ತವೆ ಅದೂ ನಾವು ಸಹಕಾರ ನೀಡಿದರೆ ಮಾತ್ರ… ಅಲ್ಲದೇ ಅದಕ್ಕೆ ಮೇಘ ರಾಜ ಕೂಡ ಸಾಥ್ ಕೊಡಬೇಕು ಅಷ್ಟೇ… ಎಂದು ರಾಜ ಕಾಲುವೆ ಹೇಳಿತು.

ಇವನ್ಯಾವನೋ ನೋಡು ಬೈಕಿನ ಜೊತೆ ಜಾರಿ ಧೋಪ್ಪಂತ ಕೆಳಗೆ ಬಿದ್ದ…ಡ್ರೈನೇಜ್ ನೀರು ಕುಡಿದು ಉಸಿರು ಗಟ್ಟಿ ಸಾಯ್ತಾ ಇದ್ದಾನೆ ಎಂದು ಬೇಸರದಿಂದ ನುಡಿಯಿತು ಪುಟ್ಟ ಕಾಲುವೆ…ಆ ದೊಡ್ಡ ಬ್ರಿಡ್ಜ್ ಕೆಳಗೆ ಒಮ್ಮೆ ನೋಡು… ಮಕ್ಕಳು ಹರಿಯುವ ನೀರಲ್ಲಿ ಬಿಡುವ ಕಾಗದದ ದೋಣಿಗಳಂತೆ ಸಾಲು ಸಾಲು ಕಾರುಗಳು ಒಂದರ ಹಿಂದೆ ಅಥವಾ ಒಂದರ ಮೇಲೊಂದು… ದೂರದಿಂದ ಒಳ್ಳೇ ದಸರಾ ಗೊಂಬೆಗಳ ತರಹ ಕಾಣುತ್ತಿವೆ.

” ಅಣ್ಣಾ… ನಿನ್ನನ್ನೇ ಫಾಲೋ ಮಾಡುತ್ತಿರುವೆ. ಎಲ್ಲಿಗೆ
ಕರೆದೊಯ್ಯುತ್ತಿರುವೆ ನನ್ನನ್ನು…
ಇಲ್ಲಿ ರಸ್ತೆ ಇದ್ದಂತಿಲ್ಲ. ಬರೀ ಕಲ್ಲು ಬಂಡೆಗಳು ಮಾತ್ರ ಕಾಲಿಗೆ ತಾಗುತ್ತಿವೆ. ಹರಿದ ಬಟ್ಟೆಗಳು, ತುಂಡು ಗೋಣಿ ಚೀಲಗಳೇ ಎಲ್ಲಿ ನೋಡಿದರಲ್ಲಿ… ಆರೇರೆ… ಇದೇನಿದು ಮನೆಗಳನ್ನು ಯಾಕೆ ಹೊಕ್ಕುತ್ತಿರುವೆ…ಮನೆಯಲ್ಲಿ ಇದ್ದ ಎಲ್ಲ ವಸ್ತುಗಳು ಈಗ ಯಾಕೆ ಹೊರಗೆ ಬಂದು ತೇಲಲು ಶುರು ಮಾಡಿದವು. ಅಣ್ಣಾ…ಸ್ವಲ್ಪ ನಿಧಾನ ” ಎಂದು ಪುಟ್ಟ ಕಾಲುವೆ ರಾಜ ಕಾಲುವೆಗೆ ಹೇಳಿತು.

” ಇದೆಲ್ಲ ಒಂದಾನೊಂದು ಕಾಲದಲ್ಲಿ ಒಂದು ದೊಡ್ಡ ಕೆರೆ…ಕೆರೆಯನ್ನು ಸಾಯಿಸಿ ಸಾವಿರಾರು ಲಾರಿಗಳಿಂದ ಕಲ್ಲು ಮಣ್ಣು ತಂದು ಅದನ್ನು ಮುಚ್ಚಿ ಭೂಗತ ಮಾಡಿದರು….ನಂತರ ರಾಜಕೀಯ ನಾಯಕರ, ಸಿನಿಮಾ ನಟರ ಭವ್ಯ ಅರಮನೆಗಳು ಅಲ್ಲದೇ ಆಕಾಶದೆತ್ತರದ ಅಪಾರ್ಟುಮೆಂಟುಗಳನ್ನು ರಾಜಾರೋಷವಾಗಿ ಅದರ ಮೇಲೆ ಕಟ್ಟಿ ಇಲ್ಲಿದ್ದ ಕೆರೆಯ ಕುರುಹುಗಳನ್ನು ಎಲ್ಲೂ ಕಾಣದಂತೆ ನಾಶ ಮಾಡಿದರು…ಆದರೆ ನಾವು ನೂರಾರು ವರ್ಷಗಳಿಂದ ವಾಸವಿದ್ದ ಜಾಗ ಇದು. ಈಗ ನಮ್ಮ ಸ್ವಂತ ಜಾಗಕ್ಕೆ ನಾವು ಬಂದಿದ್ದೇವೆ ಅಷ್ಟೇ!..ಮೊದಲು ಮನೆಯಲ್ಲಿನ ಸಾಮಾನುಗಳನ್ನು ಹೊರಗೆ ಹಾಕುತ್ತೇವೆ. ನಂತರ ಮನೆ ಖಾಲಿ ಮಾಡಿಸುತ್ತೇವೆ. ಪ್ರತೀ ಮಳೆಗಾಲದಲ್ಲಿ ಇದನ್ನು ನಾವು ಮಾಡುತ್ತಲೇ ಇರುತ್ತೇವೆ… ತಡೆ ಹಿಡಿಯುವ ದಮ್ಮು( ತಾಕತ್ತು! ) ಯಾರಿಗಿದೆ?… ಮತಗಳು ಸಾರಾ ಸಗಟಾಗಿ ತಮ್ಮ ಪಕ್ಷಕ್ಕೆ ಬೀಳಲು ಏನು ಮಾಡಬೇಕು ಏನ್ನುವತ್ತ ಮಾತ್ರ ಸರ್ಕಾರದ ಚಿತ್ತ! … ಈಗ ಹೊಸದಾಗಿ ಶುರು ಮಾಡಿದ ಗ್ಯಾರಂಟಿ ಸ್ಕೀಮುಗಳು ( ಫ್ರೀ ಬಿ ಗಳು ) ನಮಗೂ ಬೇಕು… ಮನುಷ್ಯರನ್ನು ಮತ್ತು ಅವರ ಮನೆಗಳನ್ನು ನುಂಗಿ ನೀರು ಕುಡಿಯುವ ನಮ್ಮನ್ನು ಯಾವ ಸರ್ಕಾರ ತಡೆಯಲಾರದು. ಅದಕ್ಕಾಗಿಯೇ ನಮ್ಮ ಘನತೆವೆತ್ತ ಸರ್ಕಾರ ಇಲ್ಲಿಯ ನಿವಾಸಿಗಳನ್ನು ಮೊದಲು ಕಾಪಾಡುವ ಉಸಾಬರಿಗೆ ಎಂದೂ ಹೋಗುವದಿಲ್ಲ.

ನಮ್ಮವರು ಎಲ್ಲಾ ದಿಕ್ಕಿನಿಂದ ದಾಳಿ ಮಾಡುತ್ತಿದ್ದಾರೆ. ಗುಡಿಸಲುಗಳು, ಮನೆಗಳು ನಮ್ಮ ರಭಸಕ್ಕೆ ಓಡಿ ಹೋಗುತ್ತಿವೆ ( ನಿಧಾನವಾಗಿ ನಂತರ ತೇಲುತ್ತವೆ! ). ಮರಣ ಹೊಂದಿದವರ ಹಾಗೂ ಸಂಕಷ್ಟಕ್ಕೆ ಈಡಾದವರ ಕುರಿತು ಹೇಗೂ ನಾಳೆಯ ಟಿ ವಿ ಮತ್ತು ಪತ್ರಿಕೆಗಳಲ್ಲಿ ಬರುತ್ತೆ. ನಮ್ಮ ಭೋರ್ಗರೆಯುವ ರಭಸದ ನೀರಿನ ಶಬ್ದದಲ್ಲಿ ಇಲ್ಲಿಯ ನಿವಾಸಿಗಳ ಸಾವಿನ ರಣ ಕೇಕೆಯ ಸದ್ದು ಕೇಳುವುದಿಲ್ಲ ತಿಳಿಯಿತೇ… ಇನ್ನು ಮುನ್ನುಗ್ಗಿ ಎಂದು ರಾಜ ಕಾಲುವೆ ಹುಕುಂ ಜಾರಿ ಮಾಡಿತು.

ಇಷ್ಟರಲ್ಲಿ ಯಾರೋ ನನ್ನನ್ನು ಬಾಲದಿಂದ ಹೊಡೆಯುತ್ತಿದ್ದಾರೆ ಎಂದು ದೂರಿತು ಪುಟ್ಟ ಕಾಲುವೆ ರಾಜ ಕಾಲುವೆಯ ಮುಂದೆ. ” ಯಾರೋ ಅದು…? ” ಎಂದು ಗಟ್ಟಿ ಧ್ವನಿಯಲ್ಲಿ ಗದರಿತು ರಾಜ ಕಾಲುವೆ. ” ಬ್ರದರ್ ಐ ಯಾಮ್ ಕ್ರೊಕೊಡೈಲ್ …” ಎಂದಿತು ಮೊಸಳೆ ತನ್ನ ಬಾಯಿಯನ್ನು ಮತ್ತಷ್ಟು ಹಿಗ್ಗಿಸಿ… ರಾಜ್ಯ ಮಟ್ಟದ 24 X 7 ಧೀಮಂತ ಕನ್ನಡ ಹೋರಾಟಗಾರರು ಇಲ್ಲಿಯೇ ಹುಟ್ಟಿ ಬೆಳೆದ ( ಕರು ) ನಾಡಿನಲ್ಲಿದ್ದು… ಸಾರಿ ನೀರಿನಲ್ಲಿದ್ದು ಕನ್ನಡ ಮಾತನಾಡೋಕೆ ಏನು ಧಾಡಿ? ಎಂದು ದೊಡ್ಡ ಕಾಲುವೆ ಝಾಡಿಸಿದಾಗ ” ನಾನು ಮೊಸಳೆ ಅಣ್ಣಾ… ” ಎಂದು ಉತ್ತರ ಬಂತು ಅಚ್ಚ ಕನ್ನಡದಲ್ಲಿ. ಎಲ್ಲೋ ಕೆರೆಯಲ್ಲಿ ಇರಬೇಕಾಗಿದ್ದ ನೀನು ಈ ಸಿಲಿಕಾನ್ ಸಿಟಿಗೆ ಯಾಕೆ ಬಂದೆ ಎಂದು ಸಿಟ್ಟು ಮಾಡಿತು ರಾಜ ಕಾಲುವೆ. ನಾನೆಲ್ಲಿ ಬಂದೆ ಅಣ್ಣಾ…ನಿಮ್ಮವರೇ ನನ್ನನ್ನ ಇಲ್ಲಿಯವರೆಗೆ ತಳ್ಳಿಕೊಂಡು ಬಂದಿರುವರು.

ಸದ್ಯ ನನಗೆ ಒಂದೇ ಚಿಂತೆ… ಈ ನೀರೆಲ್ಲ ಖಾಲಿಯಾದರೆ ನನ್ನ ಗತಿ ಏನು? ನಾನು ಬದುಕುವುದು ಹೇಗೆ ? ಎಂದು ಚಿಂತಾಕ್ರಾಂತನಾಗಿ ಪ್ರಶ್ನಿಸಿತು. ಇಲ್ಲೇ ಇರುವ ನಿನ್ನ ಬಳಗದ ಜೊತೆ ಸದ್ಯ ‘ ಎಂಜಾಯ್ ‘ ಮಾಡು ಎಂದಿತು ರಾಜ ಕಾಲುವೆ. ನನ್ನವರು ಅಂತ ಯಾರೂ ಇಲ್ಲ ಈ ಊರಲ್ಲಿ ಎಂದು ಮೊಸಳೆ ‘ ಕಣ್ಣೀರು ‘ ಸುರಿಸಿತು. ಇದೇ ಏನು ‘ ಮೊಸಳೆ ಕಣ್ಣೀರು ‘ ಅಂದರೆ ಎಂದು ವ್ಯಂಗ್ಯವಾಗಿ ನುಡಿಯಿತು ರಾಜ ಕಾಲುವೆ. ನಿನ್ನ ಹಾಗೆ ನಿನಗಿಂತ ಚೆನ್ನಾಗಿ, ಹೆಚ್ಚಾಗಿ ಮತ್ತು ಅಖಂಡವಾಗಿ ‘ ಮೊಸಳೆ ಕಣ್ಣೀರು ‘ ಸುರಿಸುವ ಬಡವರ ಬಗ್ಗೆ, ದೀನ ದಲಿತರ, ಅಲ್ಪ ಸಂಖ್ಯಾತರ ಹಾಗೂ ಶೋಷಿತರ ಏಳಿಗೆಗಾಗಿ ಹಗಲೂ ರಾತ್ರಿ ಎಂದು ಭೇದವಿಲ್ಲದೇ ಚಿಂತಿಸುವ ಮಹಾ ನಾಯಕರು ಆಗೋ ದೂರದ ಎತ್ತರದ ದೊಡ್ಡ ಅಂತಸ್ತಿನ ಬಂಗಲೆಗಳಲ್ಲಿ ವಾಸವಾಗಿದ್ದಾರೆ. ಅವರು ಪ್ರತೀ ಚುನಾವಣೆಯಲ್ಲಿ ನಿನಗಿಂತ ಅದ್ಭುತವಾಗಿ ‘ ಮೊಸಳೆ ಕಣ್ಣೀರು ‘ ಹಾಕಿ ಮತವನ್ನು ಸೆಳೆಯುತ್ತಾರೆ ಗೊತ್ತಾ!

ಅವರ ಭವ್ಯ ಬಂಗಲೆಗಳು ನಮ್ಮ ಪಕ್ಕದಲ್ಲಿ ಅಲ್ಲ, ಸ್ವಲ್ಪ ದೂರದಲ್ಲಿ ಎತ್ತರದಲ್ಲಿ ಇರುತ್ತವೆ. ನಮ್ಮಂತಹ ರಾಜ ಕಾಲುವೆಗಳು ಕೂಡ ಅವುಗಳನ್ನು ಏನೂ ಮಾಡಲಾರವು.

ನನಗಿಂತ ಚೆನ್ನಾಗಿ ‘ ಮೊಸಳೆ ಕಣ್ಣೀರು ‘ ಸುರಿಸುವ ಧೀಮಂತ ರಾಜಕೀಯ ನಾಯಕರನ್ನು ದೂರದಿಂದಾದರೂ ಒಮ್ಮೆಯಾದರೂ ನೋಡಿ ಸಂತೋಷ ಪಡುತ್ತೇನೆ…ಈ
ಮೊಸಳೆ ಜನ್ಮಕ್ಕೆ ಇಷ್ಟು ಸಾಕು! ಅಣ್ಣಾ… ಟಾಟಾ..ಬೈ ಬೈ…ಎನ್ನುತ್ತಾ ಮೊಸಳೆ ಆ ದಾರಿಯತ್ತ ಸಾಗಿತು.

ಡ್ರೈನೇಜ್ ನೀರೆಲ್ಲ ದೊಡ್ಡ ರಾಜಾ ಕಾಲುವೆಯ ತರಹ ಹರಿದು, ರಸ್ತೆ ಯಾವುದೋ ಕಾಲುವೆ ಯಾವುದೋ ಗೊತ್ತಾಗದ ಪರಿಸ್ಥಿತಿ ಇದ್ದರೂ ‘ ಜನ ನಾಯಕ ಗುಂಡಣ್ಣ ‘ ಬರೋ ಮಳೆಗಾಲ ಪ್ರಾರಂಭದ ಮುಂಚೆ ಈ ಸಿಲಿಕಾನ್ ಸಿಟಿಯನ್ನು ಸ್ವಚ್ಛಗೊಳಿಸಿ ‘ ಮತ್ತೊಂದು ಸಿಂಗಾಪುರ ‘ ವನ್ನಾಗಿ ಮಾಡುತ್ತದೆ ನಮ್ಮ ಸರ್ಕಾರ ಎನ್ನುವ ಭರವಸೆ ಪ್ರತಿ ವರ್ಷದ ಮಹಾ ಪಾಲಿಕೆಯ ಅಭಿವೃದ್ಧಿಗಾಗಿ ಇರುವ ಬಜೆಟ್ ( ಸದಸ್ಯರ, ಅಧಿಕಾರಿ ವರ್ಗಗಳ ಹಾಗೂ ಗುತ್ತಿಗೆದಾರರ ಕ್ಷೇಮಕ್ಕಾಗಿ! ) ಮಂಡನೆಯಂತೆ ಚಾಚೂ ತಪ್ಪದೇ ಘೋಷಣೆ ಮಾಡುತ್ತಾನೆ ಸರ್ಕಾರದ ಪರವಾಗಿ. ಮೀಡಿಯಾದವರು ಪ್ರತೀ ವರ್ಷ ಅದನ್ನೇ ‘ ಬ್ರೇಕಿಂಗ್ ಸುದ್ದಿ ‘ ಮಾಡಿ ಮಹಾ ಪ್ರಜೆಗಳ ಮಾನಸಿಕ ಆರೋಗ್ಯವನ್ನು ಏರು ಪೇರು ಮಾಡುವರು. ಕೇಳುವವರು ಇರುವವರೆಗೆ ಹೇಳುವವರು ಇದ್ದೇ ಇರುತ್ತಾರೆ…ಯಾಕೆಂದರೆ ಪ್ರಶ್ನಿಸುವವರು ಈಗ ಎಲ್ಲಿದ್ದಾರೆ?.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

26 thoughts on “ಮಳೆ ಬಂತು ಮಳೆ !”

  1. JANARDHANRAO KULKARNI

    ವಾವ್ ಸೂಪರ್ ರಾಘಣ್ಣ. ಮಳೆಯ ಅವಾಂತರದ ವಿಡಂಬನೆ ಹೊಸತಾಗಿ ಚರಂಡಿ ಮತ್ತು ರಾಜ ಕಾಲುವೆಗಳ ಮುಖಾಂತರ ಅದ್ಭುತವಾಗಿ ಚಿತ್ರಿಸಿದ್ದೀರಿ. ಸೊಗಸಾಗಿದೆ. ಅಭಿನಂದನೆಗಳು.

  2. ಮ.ಮೋ.ರಾವ್ ರಾಯಚೂರು

    ಮಳೆ ಬಂತು ಮಳೆ, ರಾಜಾಕಾಲುವೆಯ ಮಾತುಗಳು ತುಂಬ ಅರ್ಥಗರ್ಭಿತ. ಪ್ರಶ್ನಿಸುವವರು ಎಲ್ಲಿದ್ಧಾರೆ? ನಿಜ. ಪ್ರಶ್ನಿಸಿದರೂ ಕೇಳಿಸಿಕೊಳ್ಳುವವರಿ ಯಾರಿದ್ದಾರೆ. ವಿಡಂಬನೆ ಚಿಕ್ಕದಾದರೂ ಬೀಸಿದ ಚಾಟಿಯ ಏಟು ಬಲು ಜೋರು!. ಹಾಸ್ಯಕಥೆಗಾರ ರಾಘವೇಂದ್ರ ಮಂಗಳೂರರಿಗೆ ಅಭಿನಂದನೆಗಳು.

    1. ಬಿ.ಟಿ.ನಾಯಕ್.

      ಮಳೆ ಬಂತು ಮಳೆ ವಿಡಂಬನೆಯ ಲೇಖನ ಅರ್ಥಗರ್ಭಿತವಾಗಿದೆ. ಸೃಷ್ಟಿಯ ನಿಯಮ ಅದನ್ನು ತಡೆಯುವುದು ಸಾಧ್ಯವಿಲ್ಲ. ಆದರೇ ಅದಕ್ಕೆ ತಯಾರಿ ಮತ್ತು ಅದರಿಂದ ಆಗುವ ಕಷ್ಟ ನಷ್ಟಗಳನ್ನು ತಡೆಯಲು ಸಾಧ್ಯವಿದೆ. ಆದರೇ, ಮಳೆ ನಿಂತು ಹೋದ ಮೇಲೆ, ಅದರಿಂದಾಗುವ ನಷ್ಟಗಳನ್ನು ಎದುರಿಸುವ ಯೋಜನೆಗಳ ಬಗ್ಗೆ ಎಲ್ಲರೂ ಮರೆಯುತ್ತೇವೆ. ಹೀಗಾಗಿ, ಇದರಲ್ಲಿ ನಾಗರಿಕರ ಸಮ ಪಾಲೂ ಇದೆ ಎಂಬುವುದು ಸತ್ಯ. ಇಂಥಹ ಲೇಖನಗಳನ್ನು ಓದಿಯಾದರೂ ಎಚ್ಚರವಹಿಸಬೇಕೆಂಬುದಾದರೂ ಎಲ್ಲರ ಮನದಲ್ಲಿ ಮೂಡಲಿ. ರಾಘವೇಂದ್ರ ಲೇಖನವನ್ನು ಅಧ್ಭುತವಾಗಿ ಮೂಡಿಸಿದ್ದಾರೆ. ಅವರಿಗೆ ಅಭಿನಂದನೆಗಳು.

  3. ಮ.ಮೋ.ರಾವ್ ರಾಯಚೂರು

    ಮಳೆ ಬಂತು ಮಳೆ, ರಾಜಾಕಾಲುವೆಯ ಮಾತುಗಳು ತುಂಬ ಅರ್ಥಗರ್ಭಿತ. ಪ್ರಶ್ನಿಸುವವರು ಎಲ್ಲಿದ್ದಾರೆ. ಪ್ರಶ್ನಿಸಿದರೂ ಕೇಳಿಸಿಕೊಳ್ಳುವವರು ಯಾರಿದ್ದಾರೆ. ವಿಡಂಬನೆ ಚಿಕ್ಕದಾದರೂ ಬೀಸಿದ ಚಾಟಿಯ ಏಟು ಬಲು ಜೋರು!. ಹಾಸ್ಯಕಥೆಗಾರ ರಾಘವೇಂದ್ರ ಮಂಗಳೂರರಿಗೆ ಅಭಿನಂದನೆಗಳು.

  4. ಶ್ರೀಧರ ದೇಸಾಯಿ ಧಾರವಾಡ ಜಿಲ್ಲೆ

    ಇದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡ ಬೆಂಗಳೂರು ಜನರು ಊರು ಖಾಲಿ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ರಾಜಕಾಲುವೆಯಲ್ಲಿ ಇರುವ ಮೊಸಳೆಗೆ ಆಹಾರ ವಾಗುತ್ತಿರಿ ಎಂದರೆ.ತಪ್ಪಿಲ್ಲ.

  5. ಶೇಖರಗೌಡ ವೀ ಸರನಾಡಗೌಡರ್

    ರಾಜ ಕಾಲುವೆಯ ಮನದಳಲನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿರುವಿರಿ. ಅಭಿನಂದನೆಗಳು.

  6. ಸಿಲಿಕಾನ್ ಸಿಟಿ ರಾಜಾ ಕಾಲುವೆಯ ಅದ್ಭುತ ದೃಶ್ಯಗಳು ಇರುವ ನಿಮ್ಮ ವಿಡಂಬನಾತ್ಮಕ ಲೇಖನ ತುಂಬಾ ಚೆನ್ನಾಗಿದೆ.
    ಅಭಿನಂದನೆಗಳು.

  7. ಧರ್ಮಾನಂದ ಶಿರ್ವ

    ಮಳೆ ಬಂತು ಮಳೆ ವಿಡಂಬನೆ ರಾಜಧಾನಿಯನ್ನು ಗುರಿಯಾಗಿಸಿ ಬರೆದಂತಿದೆ. ರಾಜಕಾಲುವೆಯ ನೊಂದ ನುಡಿಗಳು ನಗರದ ವಾಸ್ತವತೆಯನ್ನು, ರಾಜಕಾರಣಿಗಳ ಅಧಿಕಾರ, ಧನದಾಹವನ್ನು ಬಯಲು ಮಾಡಿವೆ. ಏನಿದ್ದರೂ ಮಳೆಗಾಲದಲ್ಲೊಮ್ಮೆ ಎಚ್ಚರಗೊಳ್ಳುವ ಅಧಿಕಾರ ವರ್ಗದವರು ಜೊತೆಗೆ ಸಿಕ್ಕಲ್ಲಿ ತಿನ್ನುವ ಚಟವಿರುವ ರಾಜಕಾರಣಿಗಳು ಇಂತಹ ಚಾಟಿಯೇಟಿನಿಂದ ಎಚ್ಚರಗೊಳ್ಳುವುದು ಕಷ್ಟ. ಎಲ್ಲ ದೃಷ್ಟಿಯಿಂದಲೂ ಅವರ ಬುಡಕ್ಕೆ ನೀರು ಬಂದರೆ ಆಗ ಅವರಿಗೆ ಸತ್ಯದ ಅರಿವಾದೀತು.
    ಅಭಿನಂದನೆಗಳು.

  8. ಪಿ. ಜಯರಾಮನ್

    ಬೆಂಗಳೂರಿನಲ್ಲಿ ಮಳೆ ಬಂದಾಗ ಆಗುವ ಅನಾಹುತಗಳನ್ನು ಅರ್ಥಪೂರ್ಣವಾಗಿ ಹೇಳಿದ್ದೀರಿ. ಮಳೆ ಬಂದು ಏನಾದರೂ ಜೀವ ಹಾನಿ ಆದಾಗ ನಮ್ಮ ನಾಯಕರು, ಸಂಬಂಧ ಪಟ್ಟ ಅಧಿಕಾರಿಗಳು spot inspection ಮಾಡಿ ಪರಿಹಾರ (ಹಣದ) ಘೋಷಣೆ ಮಾಡುತ್ತಾರೆ. ಆದರೆ ಈ ರೀತಿಯ ಸಮಸ್ಯೆ ಮರುಕಳಿಸದಂತೆ ಇರಲು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದು ಈ ದೇಶದ ದುರ್ದೈವ. ವಿಡಂಬನೆ ಚೆನ್ನಾಗಿದೆ ಸಾರ್.
    ಅಭಿನಂದನೆಗಳು.

  9. ಧರ್ಮಾನಂದ ಶಿರ್ವ

    ಮಳೆ ಬಂತು ಮಳೆ ವಿಡಂಬನೆ ರಾಜ್ಯ ರಾಜಧಾನಿಯ ಅವಸ್ಥೆಯನ್ನು ನಿಖರವಾಗಿ ಬಿಂಬಿಸಿದೆ. ರಾಜಕಾಲುವೆಯ ನೊಂದ ನುಡಿಗಳು ಇಲ್ಲಿನ ವಾಸ್ತವತೆಯ ಜೊತೆಗೆ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತವೆ.
    ಅಭಿನಂದನೆಗಳು.

  10. ನ್ಯಾನೋ ಕಥೆಗಳ ಕೇಳಿ ಸ್ವಲ್ಪ್ ಸಮಯದಲ್ಲಿ ಆನಂದಿಸುತ್ತಿದೆ . ಬೆಂಗಳೂರಿನ ಮಳೆಯ ಅವಾಂತರವನ್ನು ಎಳೆ ಎಳೆ ಯಾಗಿ ಸುಧೀರ್ಘವಾದ ವಿವರಣೆ ಕೊಟ್ಟು ಎಲ್ಲರ ಗಮನವನ್ನು ಆಕರ್ಷಿದ್ದೀರಿ .

  11. Gopinath dinni

    ಹೆಚ್ಚುತ್ತಿರುವ ನಗರ ಬಾಕ ಸಂಸ್ಕೃತಿ ಜನರಿಗೆ ಭೂಮಿ ಗೆ ಉಪಯೋಗ ಆಗುವಂತೆ ನಿರ್ಮಿಸಿದ್ದ ಕೆರೆ ಗಳನ್ನ ನುಂಗಿ ಮಳೆಯ ನೀರಿಗೆ ದಾರಿಯಿಲ್ಲದಂತೆ ಮಾಡಿವೆ
    ಕಾಡು ನಾಶವಾಗಿ ವನ್ಯ ಪ್ರಾಣಿಗಳು ಊರಿಗೆ ದಾಳಿಯಿಟ್ಟಂತೆ. ಮಳೆಯು ಹನಿ ಹನಿಯೂ ಸಿಕ್ಕ ಸಿಕ್ಕಲ್ಲಿ ಹರಿದು ಪ್ರವಾಹ ಸೃಷ್ಟಿಸುತ್ತಿದೆ
    ಇದನ್ನು ಹಾಸಿನೋಟದಿಂದ ಬರೆದ್ದೀರಿ
    ಪರಿಸರ ಕಾಳಜಿ ವ್ಯಕ್ತ ಆಗಿದೆ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter