ಬಹು ನಿರೀಕ್ಷಿತ ಲೋಕಸಭಾ ಚುನಾವಣೆ ಮುಗಿದು, ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರ ರಚನೆಯಾಗಿ ಒಂದು ತಿಂಗಳಾಗುತ್ತ ಬಂದಿದೆ. ಈ ಬಾರಿ ಮತದಾರರು ಎನ್.ಡಿ.ಎ. ಮತ್ತು ಐ.ಎನ್.ಡಿ.ಐ.ಎ. ಅಥವಾ ಇಂಡಿ ಒಕ್ಕೂಟ ಎರಡಕ್ಕೂ ತಕ್ಕ ಪಾಠ ಕಲಿಸಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎನ್ನುವವರು ಒಂದೆಡೆಯಾದರೆ, ಸಂವಿಧಾನ ರಕ್ಷಿಸುತ್ತೇವೆ ಎನ್ನುವವರು ಇನ್ನೊಂದೆಡೆಗಿದ್ದರು. ಸಂವಿಧಾನವನ್ನು ಚುನಾವಣಾ ಪ್ರಚಾರದ ಮುಖ್ಯ ವಿಷಯವನ್ನಾಗಿಟ್ಟುಕೊಂಡು ಸಾಕಷ್ಟು ಹಗ್ಗ ಜಗ್ಗಾಟ ನಡೆಯಿತು. ಒಂದು ಹಂತದಲ್ಲಿ ಬಿ.ಜೆ.ಪಿ. ಪಕ್ಷದ ಅತಿಯಾದ ಆತ್ಮವಿಶ್ವಾಸ, ಸ್ಥಳೀಯ ನಾಯಕತ್ವದ ಕೊರತೆ, ವಿವಿಧ ರಾಜ್ಯಗಳಲ್ಲಿದ್ದ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮತ್ತು ಕೆಲವು ಪುಢಾರಿಗಳ, “ಸಂವಿಧಾನ ಬದಲಿಸುತ್ತೇವೆ…” ಎಂಬಂತಹ ಅತಿರೇಕದ ಹೇಳಿಕೆಗಳು ಸೇರಿದಂತೆ ಹಲವು ಕಾರಣಗಳಿಂದ ಪೂರ್ಣ ಬಹುಮತ ಪಡೆಯುವಲ್ಲಿ ವಿಫಲವಾದರೂ ಕೂಡ ಮಿತ್ರ ಪಕ್ಷಗಳ ನೆರವಿನಿಂದ ಸತತ ಮೂರನೆಯ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ.
ಬಿ.ಜೆ.ಪಿ.ಗೆ ಬಹುಮತ ಬಾರದಂತೆ ತಡೆದದ್ದೇ ಬಹುದೊಡ್ಡ ಸಾಧನೆಯೆಂಬಂತೆ ಬೀಗುತ್ತಿರುವ ಇಂಡಿ ಒಕ್ಕೂಟ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಬಿ.ಜೆ.ಪಿ. ಸಂವಿಧಾನ ಬದಲಿಸಲು ಹೊರಟಿದೆ ಎಂಬ ವಿಷಯವನ್ನು ತುಂಬ ವ್ಯವಸ್ಥಿತವಾಗಿ ಪ್ರಚಾರ ಮಾಡಿದ ಇಂಡಿ ಒಕ್ಕೂಟ ದಲಿತ, ಅಲ್ಪ ಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗಗಳ ಮತದಾರರ ಮನಸ್ಸಿನಲ್ಲಿ ಬಿ.ಜೆ.ಪಿ. ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಹಿಂದಿ ಪ್ರದೇಶದ ಹೃದಯ ಭಾಗವಾದ ಉತ್ತರ ಪ್ರದೇಶದಲ್ಲಿ ಇದರ ಸ್ಪಷ್ಟ ಪರಿಣಾಮ ಕಂಡಿತು. ಬಿ.ಜೆ.ಪಿ.ಗೆ ಬಹುಮತ ಬರಲು ಅಥವಾ ಬಾರದಂತೆ ಮಾಡುವಲ್ಲಿ ಉತ್ತರ ಪ್ರದೇಶ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂತಹ ಉತ್ತರ ಪ್ರದೇಶದಲ್ಲಿ ಈ ಬಾರಿ ಬಿ.ಜೆ.ಪಿ.ಗೆ ಆಘಾತವಾಯಿತು. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ವಿಶೇಷವಾಗಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದಿ ಭಾಷಿಕ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಈ ಬಹು ದೊಡ್ಡ ಪ್ರದೇಶದಲ್ಲಿ ಜಾತಿ ಸಮೀಕರಣ ಮತ್ತು ಉಚಿತ ಯೋಜನೆಗಳ ಪ್ರಲೋಭನೆ ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದದ್ದೆಂದರೆ ಇಂಡಿ ಒಕ್ಕೂಟದ ಒಗ್ಗಟ್ಟು. ಸತತ ಒಂದು ದಶಕದ ಕಾಲ ಅಧಿಕಾರ ವಂಚಿತವಾಗಿದ್ದ ವಿಪಕ್ಷಗಳು ಅಧಿಕಾರಕ್ಕಾಗಿ ಎಷ್ಟು ಹಸಿದಿದ್ದವೆಂದರೆ ಅವು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾದವು. ಬಿ.ಜೆ.ಪಿ.ಯನ್ನು ಸೋಲಿಸುವುದೇ ತಮ್ಮ ಏಕೈಕ ಗುರಿ ಎಂಬಂತೆ ಹಗಲಿರುಳೂ ದುಡಿದವು. ಆ ದುಡಿಮೆಯ ಪೂರ್ಣ ಫಲ ದಕ್ಕದಿದ್ದರೂ ಸಹ ಭಾಗಶಃ ಯಶಸ್ಸು ಕಂಡಿವೆ ಎಂದು ಹೇಳಬಹುದು.
ಇರಲಿ, ಚುನಾವಣೆಯಲ್ಲಿ ಸೋಲು-ಗೆಲುವುಗಳು ಸಹಜ. ಸ್ವಾತಂತ್ರ್ಯಾನಂತರ ಸುಮಾರು ದಶಕಗಳ ಕಾಲ ಕಾಂಗ್ರೆಸ್ ದೇಶವನ್ನಾಳಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ಸೇತರ ಸರ್ಕಾರವೊಂದು ದಶಕ ಪೂರೈಸಿ ಮುನ್ನಡೆದಿದೆ. ಯಾವ ಪಕ್ಷವನ್ನು ಚುನಾಯಿಸಬೇಕು, ಯಾರು ಅಧಿಕಾರ ಹಿಡಿಯಬೇಕು ಮತ್ತು ಯಾರು ಪ್ರಧಾನಮಂತ್ರಿಯಾಗಬೇಕೆಂದು ನಿರ್ಧರಿಸುವವರು ಪ್ರಜೆಗಳು. ಪ್ರಜೆಗಳ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಇಲ್ಲದಿದ್ದರೆ ಅದು ಸಂವಿಧಾನವನ್ನು ವಿರೋಧಿಸಿದಂತೆ ಮತ್ತು ಅದಕ್ಕೆ ಅಗೌರವ ತೋರಿಸಿದಂತೆ!
ಚುನಾವಣೆ ಬಂತೆಂದರೆ ವಿವಿಧ ಪಕ್ಷಗಳ ರಾಜಕಾರಣಿಗಳು ಮತ್ತು ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದು ಸಹಜ. ರಾಜಕೀಯ ಪಕ್ಷಗಳಿಗೆ ಚುನಾವಣೆಯೆಂದರೆ ಅಳಿವು – ಉಳಿವಿನ ಪ್ರಶ್ನೆ. ಚುನಾವಣೆಯ ಕುರಿತು ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಕೆಲವು ಜನ ತುಂಬ ತಲೆ ಕೆಡಿಸಿಕೊಳ್ಳುತ್ತಾರೆ, ಅವರೇ ಬುದ್ಧಿಜೀವಿಗಳು! ಬುದ್ಧಿಜೀವಿಗಳು ಎಂಬ ಕೆಟಗರಿಯಲ್ಲಿ ದ್ವಿತೀಯ ದರ್ಜೆಯ ಲೇಖಕ/ಕಿಯರು, ಕಲಾವಿದರು ಮತ್ತು ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿದ ಪ್ರತಿಭಾ ದರಿದ್ರರು ಬರುತ್ತಾರೆ.
ಸಾಹಿತ್ಯ, ಕಲೆ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳಿಗಿಂತ ಇವರಿಗೆ ರಾಜಕೀಯದಲ್ಲೇ ಹೆಚ್ಚು ಆಸಕ್ತಿ. ಪ್ರತಿಭಾ ದರಿದ್ರರಾದ, ದ್ವಿತೀಯ ದರ್ಜೆಯ ಸಾಹಿತಿಗಳು ಯಾವ ಪರಿ ರಾಜಕೀಯ ಮಾಡುತ್ತಾರೆಂದರೆ, ಅದನ್ನು ನೋಡಿ ವೃತ್ತಿಪರ ರಾಜಕಾರಣಿಗಳು ಸಹ ಬೆಚ್ಚಿ ಬಿದ್ದಿದ್ದಾರೆ! ಬುದ್ಧಿಜೀವಿಗಳು ಅರೆಕಾಲಿಕ ಸಾಹಿತಿಗಳು ಮತ್ತು ಪೂರ್ಣಕಾಲಿಕ ರಾಜಕಾರಣಿಗಳಾಗಿರುತ್ತಾರೆ. ಇವರು ಸ್ವಾರ್ಥ, ಸ್ವಜನ ಪಕ್ಷಪಾತ, ಜಾತೀಯತೆ, ಲಂಪಟತನ ಮತ್ತು ಭ್ರಷ್ಟಾಚಾರದಲ್ಲಿ ಪರಿಣಿತರಾಗಿರುತ್ತಾರೆ. ಪ್ರಶಸ್ತಿ, ಪುರಸ್ಕಾರ, ಕವಿಗೋಷ್ಠಿ, ಕಥಾಗೋಷ್ಠಿ, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷಗಿರಿ, ವಿವಿಧ ಅಕಾಡೆಮಿ, ಪ್ರಾಧಿಕಾರ, ಟ್ರಸ್ಟುಗಳ ಸದಸ್ಯತ್ವ, ಪ್ರವಾಸಾನುದಾನ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಬಕೆಟ್ ಹಿಡಿದು ಅಥವಾ ಚಮಚಾಗಿರಿ ಮಾಡಿ ಪಡೆದಿರುತ್ತಾರೆ!
ಬರೆಯಲು ಬಾರದಿದ್ದರೂ ಸಾಹಿತಿಗಳಾಗಬೇಕೆಂಬ ಆಸೆಯುಳ್ಳ ಅಪ್ರಯೋಜಕರು, ಪ್ರತಿಭೆಯಿಲ್ಲದಿದ್ದರೂ ಸಹ ಎಲ್ಲೆಂದರಲ್ಲಿ ಮಿಂಚಬೇಕೆಂಬ ಹಪಾಹಪಿಯುಳ್ಳ ಪ್ರತಿಭಾ ದರಿದ್ರರು, ಯೋಗ್ಯತೆಯಿರದಿದ್ದರೂ ಪ್ರಶಸ್ತಿ – ಪುರಸ್ಕಾರಗಳು ಬೇಕೆಂಬ ಹಂಬಲವುಳ್ಳ ಅಯೋಗ್ಯರು, ಅಕಾಡೆಮಿ, ಪ್ರಾಧಿಕಾರ, ಪರಿಷತ್ತು ಮತ್ತು ಟ್ರಸ್ಟುಗಳಲ್ಲಿ ಅಧ್ಯಕ್ಷ, ಸದಸ್ಯರಾಗಬಯಸುವ ಅತೃಪ್ತರ ದೊಡ್ಡ ಕೂಟವೇ ಕನ್ನಡ ಸಾಹಿತ್ಯ ಲೋಕದಲ್ಲಿ ಸಕ್ರಿಯವಾಗಿದೆ.
ಬುದ್ಧಿಜೀವಿಗಳು ತಮ್ಮನ್ನು ತಾವು ತುಂಬ ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ಎಡಪಂಥೀಯ ಮತ್ತು ಬಲಪಂಥೀಯರೆಂದು ಗುರುತಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಾನಂತರ ದಶಕಗಳ ಕಾಲ ಎಡಪಂಥೀಯ ಸರ್ಕಾರಗಳೇ ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದದ್ದರಿಂದ ಎಡಪಂಥೀಯ ಬುದ್ಧಿಜೀವಿಗಳ ಮೆಜಾರಿಟಿ ಹೆಚ್ಚು. ಬುದ್ಧಿಜೀವಿಗಳ ಲೆಕ್ಕಾಚಾರವೇ ಅಂತಹುದು, ಮಾರ್ವಾಡಿಗಳ ಲೆಕ್ಕಾಚಾರ ಸಹ ಇವರ ಮುಂದೆ ಏನೂ ಅಲ್ಲ! ಇತ್ತೀಚೆಗೆ ಬಲಪಂಥೀಯ ಸರ್ಕಾರಗಳು ದೇಶದೆಲ್ಲೆಡೆ ಅಧಿಕಾರಕ್ಕೆ ಬರುತ್ತಿರುವುದರಿಂದ ಬಲಪಂಥೀಯ ಬುದ್ಧಿಜೀವಿಗಳ ಸಂಖ್ಯೆಯಲ್ಲಿ ಸಹ ಗಣನೀಯ ಏರಿಕೆ ಕಂಡು ಬರುತ್ತಿದೆ.
ಇತ್ತೀಚೆಗೆ ಸಂವಿಧಾನದ ಸುತ್ತಮುತ್ತ ತುಂಬ ಚರ್ಚೆ ನಡೆಯುತ್ತಿದೆ. ನಮ್ಮ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂವಿಧಾನದ ಬದಲಾವಣೆ ಮತ್ತು ಸಂರಕ್ಷಣೆ ಚುನಾವಣಾ ವಿಷಯವಾದದ್ದು ಗಮನಾರ್ಹ. ಬಲಪಂಥೀಯರು ಸಂವಿಧಾನದ ಬದಲಾವಣೆಯ ಕುರಿತು ಮಾತನಾಡಿದರೆ, ಎಡಪಂಥೀಯರು ಅದರ ಸಂರಕ್ಷಣೆಯ ಕುರಿತು ಮಾತನಾಡುತ್ತ ಅನಗತ್ಯ ವಾದ – ವಿವಾದಗಳನ್ನು ಹುಟ್ಟು ಹಾಕಿದರು. ಮೂಲತಃ ಸ್ವಾರ್ಥಿಗಳು ಮತ್ತು ಸಮಯಸಾಧಕರಾದ ಎರಡೂ ಪಂಥಗಳ ಬುದ್ಧಿಜೀವಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಘನತೆವೆತ್ತ ಸಂವಿಧಾನವನ್ನು ಬಳಸಿಕೊಂಡದ್ದು ವಿಷಾದದ ಸಂಗತಿ. ಈ ಮೂರ್ಖ ಬುದ್ಧಿಜೀವಿಗಳಿಗೆ ಸಂವಿಧಾನ ಎಷ್ಟು ಶಕ್ತಿಶಾಲಿಯಾದುದು ಎಂಬುದರ ಕಲ್ಪನೆಯೇ ಇಲ್ಲ. ಅಂತಹ ಬಲಿಷ್ಠ ಸಂವಿಧಾನದ ಕುರಿತು ಬಾಯಿಗೆ ಬಂದಂತೆ ಮಾತನಾಡುತ್ತ ಓಡಾಡುವ ಸ್ವಾರ್ಥಿಗಳಿಗೆ ನಿಜಕ್ಕೂ ಸಂವಿಧಾನದ ಕುರಿತು ಗೌರವವಿದೆಯೇ ಎಂಬ ಸಂಶಯ ಉಂಟಾಗುತ್ತದೆ.
ಭಾರತದ ಸಂವಿಧಾನ ಪ್ರಜಾಪ್ರಭುತ್ವದ ಆತ್ಮ, ಅದು ಈ ದೇಶದ ಶಕ್ತಿ. ನಮ್ಮ ಸಂವಿಧಾನ ತುಂಬ ಶಕ್ತಿಶಾಲಿಯಾಗಿದೆ. ಅದರ ಮೂಲಭೂತ ರಚನೆಯನ್ನು ಬದಲಿಸಲು ಸಾಧ್ಯವೇ ಇಲ್ಲ. ದೇಶದ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಬಹುದೇ ಹೊರತು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ಸಂವಿಧಾನ ಬದಲಿಸುತ್ತೇವೆ ಎಂಬುದು ಎಂದಿಗೂ ಸಾಧ್ಯವಾಗದ ದಾರ್ಷ್ಟ್ಯದ ಹೇಳಿಕೆಯಷ್ಟೆ. ಅದೇ ರೀತಿ ಸಂವಿಧಾನವನ್ನು ರಕ್ಷಿಸುತ್ತೇವೆ ಎಂಬ ಹೇಳಿಕೆ ಸಹ ಅಷ್ಟೇ ಹಾಸ್ಯಾಸ್ಪದವಾಗಿದೆ. ಸ್ವಯಂಪೂರ್ಣ, ಸಾರ್ವಕಾಲಿಕ ಮತ್ತು ಶಕ್ತಿಶಾಲಿಯಾದ ಸಂವಿಧಾನ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ನೀಡಿದೆ. ಅಂತಹುದರಲ್ಲಿ ಪರಾವಲಂಬಿಗಳಾದ ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಹೂಂಕರಿಸುವುದು ವಿದೂಷಕನ ವ್ಯರ್ಥಾಲಾಪದಂತೆ ಕಾಣುತ್ತದೆ.
ಬುದ್ಧಿಜೀವಿಗಳಷ್ಟು ಮಹತ್ವಾಕಾಂಕ್ಷಿಗಳು ಮತ್ತು ಅತೃಪ್ತರು ಬೇರೆಲ್ಲೂ ಇಲ್ಲ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರ ಹಿಂಬಾಲಕರಾದ ಇವರು ಸಾಮಾಜಿಕ ಕಳಕಳಿಯಿಲ್ಲದ ಜನ. ಎಡಪಂಥೀಯರು ಎಡಪಂಥೀಯ ರಾಜಕೀಯ ಪಕ್ಷ ಮತ್ತು ಬಲಪಂಥೀಯರು ಬಲಪಂಥೀಯ ರಾಜಕೀಯ ಪಕ್ಷದ ಸಮರ್ಥಕರಾಗಿರುತ್ತಾರೆ. ಇವೆರಲ್ಲ ಬಹಿರಂಗವಾಗಿ ರಾಜಕೀಯ ಮಾಡಿದರೂ ಸಹ ಅದನ್ನು ಮುಚ್ಚಿಟ್ಟುಕೊಳ್ಳಲು ಸಾಮಾಜಿಕ, ರಾಜಕೀಯ ಚಿಂತಕರೆಂದು ಸೋಗು ಹಾಕುತ್ತಾರೆ. ವಾಸ್ತವವಾಗಿ ಬುದ್ಧಿಜೀವಿಗಳು ಸೂಕ್ಷ್ಮವಾಗಿ ಮತ್ತು ವ್ಯವಸ್ಥಿತವಾಗಿ ರಾಜಕೀಯ ಮಾಡುತ್ತಾರೆ. ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಬುದ್ಧಿಜೀವಿಗಳ ರಾಜಕೀಯ (Intellectual Politics) ತುಂಬ ಜೋರಾಗಿದೆ.
ಇತ್ತೀಚೆಗೆ ಬುದ್ಧಿಜೀವಿಗಳು ಸಂವಿಧಾನದ ವಿವಿಧ ಆಕಾರ, ವಿನ್ಯಾಸ ಮತ್ತು ಬಣ್ಣಗಳ ಸಂಕ್ಷಿಪ್ತ ಆವೃತ್ತಿಯ ಪ್ರತಿಗಳನ್ನು ಹೆಗಲಚೀಲ, ಕೈಚೀಲ ಮತ್ತು ಕಂಕುಳಲ್ಲಿಟ್ಟುಕೊಂಡು ತಿರುಗಲಾರಂಭಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅದನ್ನು ಎರಡೂ ಕೈಯಲ್ಲಿ ಎತ್ತಿ ಹಿಡಿದು ಪ್ರದರ್ಶಿಸುತ್ತಾ, ಅದರ ರಕ್ಷಣೆಯ ಕುರಿತು ಮೊಸಳೆ ಕಣ್ಣೀರು ಸುರಿಸುತ್ತ ಹದಿನೈದು ನಿಮಿಷ, ಅರ್ಧಗಂಟೆ ಅಥವಾ ಒಂದು ಗಂಟೆಯ ಕಾಲ ಕೊರೆಯುತ್ತಾರೆ. ಕೆಲಸವಿಲ್ಲದ ಸೋಮಾರಿಗಳು ಆಕಳಿಸುತ್ತಾ, ಮೈ ಮುರಿಯುತ್ತಾ ಅದನ್ನು ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಟ್ಟು ಬಿಡುತ್ತಾರೆ. ಕೆಲವರು ಇಂತಹ ಭಾಷಣ ಕೇಳುತ್ತಾ ಸುಖವಾಗಿ ನಿದ್ದೆ ಮಾಡುತ್ತಾರೆ. ಈ ಭಾಷಣಗಳ ರೀತಿ ಹೆಚ್ಚಾಗಿ ಮತ ಪ್ರಚಾರಕರ ಜಾಹೀರಾತು ಭಾಷಣಗಳಂತಿರುತ್ತವೆ.
ಇತ್ತೀಚೆಗೆ ಸ್ವಯಂಘೋಷಿತ ಸಂವಿಧಾನ ರಕ್ಷಕರ ಅಥವಾ ಸ್ವಾರ್ಥಿಗಳಾದ ಬುದ್ಧಿಜೀವಿಗಳ ಸಮಾವೇಶವೊಂದು ಕರ್ನಾಟಕದ ಜಿಲ್ಲಾಕೇಂದ್ರವೊಂದರಲ್ಲಿ ನಡೆಯಿತು. ಅಲ್ಲಿ ಭಾಗವಹಿಸಿದ್ದ ಬಹುತೇಕ ಜನ ಕಂಕುಳಲ್ಲಿ ಸಂವಿಧಾನದ ಸಂಕ್ಷಿಪ್ತ ಆವೃತ್ತಿಯ ಪ್ರತಿಯೊಂದನ್ನು ಇಟ್ಟುಕೊಂಡು ಬಂದಿದ್ದರು. ಸಭೆಯ ಆರಂಭದಲ್ಲಿಯೇ, “ಪ್ರಾಣ ಹೋದರೂ ಪರವಾಗಿಲ್ಲ, ನಾವು ಸಂವಿಧಾನ ರಕ್ಷಿಸುತ್ತೇವೆ…” ಎಂದು ಕಣ್ಣೀರು ಹಾಕುತ್ತ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಬಹುತ್ವ, ಸಮುದಾಯ, ಜೀವಪರ ನಿಲುವು ಮತ್ತು ಜಾತ್ಯಾತೀತತೆ ಎಂದು ಹೇಳಿದ್ದನ್ನೇ ಹೇಳುವ ಸಲಾಮತ್ ಹಳ್ಳಿಕೇರಿ ಎಂಬ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕನೊಬ್ಬ ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಏನು ಮಾಡಬೇಕು ಎಂಬುದರ ಕುರಿತು ಕೊರೆದ. ಮುಂದೆ ಮಾತನಾಡಿದ ಬೆಂಕಿ ಬಸು ಸ್ಪಷ್ಟವಾಗಿ ತಮ್ಮ ರಾಜಕೀಯ ಪಕ್ಷದ ಪರ ಪ್ರಚಾರ ಭಾಷಣ ಮಾಡಿದ. ವಿರೋಧ ಪಕ್ಷದ ಬುದ್ಧಿಜೀವಿಗಳ ಕುರಿತು ವೈಯಕ್ತಿಕ ಟೀಕೆ ಮಾಡಿದ. ಒಂದು ಹಂತದಲ್ಲಿ ಕೇಂದ್ರ ಸರ್ಕಾರದ ಕುರಿತು ಟೀಕೆ ಮಾಡುವ ಭರದಲ್ಲಿ ತೊಟ್ಟಿದ್ದ ಅಂಗಿ ಹರಿದುಕೊಂಡ! ನಂತರ ಮಾತನಾಡಿದ ಹರಿದಂಗಿ ಬಸೂನ ಪ್ರೇಯಸಿ ಅನುರಾಧಾ ತಮ್ಮ ಪಕ್ಷ ಅಧಿಕಾರಕ್ಕೆ ಬಾರದೆ ಇದ್ದುದ್ದರಿಂದ ಇಂತಿಂತಹ ಅಕಾಡೆಮಿ, ಪ್ರಾಧಿಕಾರ, ಪರಿಷತ್ತಿನಲ್ಲಿ ತನಗೆ ಸ್ಥಾನ ಸಿಗದೆ ಹೋಯಿತು ಎಂದು ಅಲವತ್ತುಕೊಂಡಳು. ಅವಳ ಸ್ನೇಹಕ್ಕಾಗಿ ಹಾತೊರೆಯುತ್ತಿದ್ದ ಬೆಂಗಳೂರಿನ ವಿಮರ್ಶಕ ಕಾಟರಾಜು ಅವಳ ಪ್ರತಿ ಮಾತಿಗೂ, “ಹಿಯರ್… ಹಿಯರ್…” ಎಂದು ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದ. ಸಂವಿಧಾನ ರಕ್ಷಣೆ ಮಾಡುವುದರ ಕುರಿತ ಸಭೆ ಹಾದಿ ತಪ್ಪಿ ಏನೇನೋ ಚರ್ಚೆ ನಡೆದು ಕೊನೆಗೂ ಬರಖಾಸ್ತಾಯಿತು. ಬಡ್ಡಿ ವ್ಯಾಪಾರಿಯೊಬ್ಬನ ಪ್ರಾಯೋಜಕತ್ವದಲ್ಲಿ ಪುಷ್ಕಳ ಭೋಜನದ ವ್ಯವಸ್ಥೆ ಇದ್ದದ್ದರಿಂದ ಸಭೆಗೆ ಬಂದವರು ರೊಚ್ಚಿಗೇಳದೆ ಕಂಠ ಮಟ್ಟ ಊಟ ಮಾಡಿ ಜಾಗ ಖಾಲಿ ಮಾಡಿದರು!
ವಿಶ್ವವಿದ್ಯಾಲಯದ ಪ್ರಾಧ್ಯಾಪಕನೊಬ್ಬ ರಾಜ್ಯದಲ್ಲಿ ಎಡಪಂಥೀಯ ಸರ್ಕಾರ ಅಧಿಕಾರಕ್ಕೆ ಬಂದಾಗ, “ಕೊನೆಗೂ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಿತು…” ಎಂದು ಹಲುಬತೊಡಗಿದ. ಎಡಪಂಥೀಯ ಅಥವಾ ಬಲಪಂಥೀಯ ಯಾವುದೇ ರಾಜಕೀಯ ಪಕ್ಷಗಳಿರಲಿ, ಚುನಾವಣೆಯಲ್ಲಿ ಗೆಲ್ಲುವುದು ಮತ್ತು ಅಧಿಕಾರ ಹಿಡಿಯುವುದೇ ಆ ಪಕ್ಷಗಳ ಮುಖ್ಯ ಗುರಿ. ಮತದಾರರು ತಮಗೆ ಬೇಕಾದ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುತ್ತಾರೆ. ಯಾರೇ ಅಧಿಕಾರಕ್ಕೆ ಬಂದರೂ ಚೆನ್ನಾಗಿ ಕೆಲಸ ಮಾಡುವ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಬೇಕಾಗುತ್ತದೆ. ಈ ಬಾರಿ ಎಡಪಂಥೀಯ ಸರ್ಕಾರಕ್ಕೆ ಅಧಿಕಾರ ಕೊಟ್ಟ ಮತದಾರರೇ ಐದು ವರ್ಷಗಳ ಹಿಂದೆ ಬಲಪಂಥೀಯ ಸರ್ಕಾರ ಚುನಾಯಿಸಿದ್ದರು. ಮುಂದೆ ಅವರ ಆಯ್ಕೆ ಇವೆರಡನ್ನೂ ಹೊರತುಪಡಿಸಿ ಬೇರೊಂದು ಪಕ್ಷವೂ ಆಗಿರಬಹುದು. ಆದರೆ ಬುದ್ಧಿಜೀವಿಗೆ ಸಾಮಾನ್ಯ ಜ್ಞಾನವಿಲ್ಲದ್ದರಿಂದ ಮತದಾರರನ್ನು ಅವಮಾನಿಸುವಂತಹ ಹೇಳಿಕೆ ಕೊಟ್ಟು ತನ್ನ ಸಣ್ಣ ಬುದ್ಧಿ ತೋರಿಸಿದ. ಇನ್ನೂ ಕೆಲವು ಬುದ್ಧಿಜೀವಿಗಳು ತಮ್ಮ ರಾಜಕೀಯ ಪಕ್ಷಗಳಿಗೆ ಮತ ಹಾಕದ ಜನರನ್ನೇ ಯದ್ವಾತದ್ವಾ ಬಯ್ಯುತ್ತಾರೆ. ಸಂಯಮಿಗಳೂ, ಸಹಿಷ್ಣುಗಳೂ ಆದ ಸಾಮಾನ್ಯ ಜನರು ಇಂತಹ ಬುದ್ಧಿಜೀವಿಗಳನ್ನು ಹುಚ್ಚರು ಅಥವಾ ವಿದೂಷಕರಂತೆ ಪರಿಗಣಿಸಿ ಅಲಕ್ಷಿಸುತ್ತಾರೆ.
ಎಡಪಂಥೀಯ ಅಥವಾ ಬಲಪಂಥೀಯ ಬುದ್ಧಿಜೀವಿಗಳಿಗೆ ತಮ್ಮ ಸ್ವಾರ್ಥವೇ ಮುಖ್ಯ. ಸಮಾಜ, ರಾಜ್ಯ ಅಥವಾ ರಾಷ್ಟ್ರದ ಹಿತ ಅವರಿಗೆ ಮುಖ್ಯವಲ್ಲ. ತಮ್ಮ ಸರ್ಕಾರದ ಅವೈಜ್ಞಾನಿಕ ಯೋಜನೆಗಳು, ಭ್ರಷ್ಟ ಮತ್ತು ಲಂಪಟರಾದ ರಾಜಕಾರಣಿಗಳನ್ನು ಎಗ್ಗಿಲ್ಲದೇ ಸಮರ್ಥಿಸಿಕೊಳ್ಳುತ್ತಾರೆ. ಏಕೆಂದರೆ ಇವರು ಲಂಪಟತನ ಮತ್ತು ಭ್ರಷ್ಟಾಚಾರದ ವಿಚಾರದಲ್ಲಿ ರಾಜಕಾರಣಿಗಳನ್ನು ಮೀರಿಸುವಷ್ಟು ಚಾಣಾಕ್ಷರು. ಚುನಾವಣೆಯಲ್ಲಿ ಸೋತ ರಾಜಕೀಯ ಪಕ್ಷವೊಂದು ಜನರ ತೀರ್ಪಿಗೆ ತಲೆಬಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡಲಾರಂಭಿಸಿತು. ಆ ಪಕ್ಷದ ರಾಜಕಾರಣಿಗಳೇ ಚುನಾವಣೆಯಲ್ಲಿ ಸೋತದ್ದನ್ನು ಒಪ್ಪಿಕೊಂಡರೂ ಕೂಡ ಬುದ್ಧಿಜೀವಿಗಳು ಮಾತ್ರ ಆ ಸೋಲನ್ನು ಅರಗಿಸಿಕೊಳ್ಳಲಾಗದೇ ಒದ್ದಾಡಿದರು! ಮತ್ತೆ ಆ ಪಕ್ಷ ಅಧಿಕಾರಕ್ಕೆ ಬರಲು ಏನು ಮಾಡಬೇಕು ಎಂಬುದರ ಕುರಿತು ಆ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಘಟಕದ ರಾಜಕಾರಣಿಗಳಿಗಿಂತ ಹೆಚ್ಚು ತಲೆ ಬಿಸಿ ಮಾಡಿಕೊಂಡರು.
ಬುದ್ಧಿಜೀವಿಗಳ ಈ ನಾಯಿ ನಿಷ್ಠೆಗೆ ತಕ್ಕ ಪ್ರತಿಫಲ ದೊರೆಯಿತು. ವಿರೋಧ ಪಕ್ಷ ಅಧಿಕಾರಕ್ಕೆ ಬಂದ ನಂತರ ಆ ಪಕ್ಷಕ್ಕೆ ಪತಿವ್ರತಾ ನಿಷ್ಠೆ ತೋರಿಸಿದ್ದ ಬುದ್ಧಿಜೀವಿಗಳಿಗೆ ವಿವಿಧ ಅಕಾಡೆಮಿ, ಪ್ರಾಧಿಕಾರ ಮತ್ತು ಟ್ರಸ್ಟುಗಳಲ್ಲಿ ಸ್ಥಾನ ನೀಡಲಾಯಿತು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ, ಸದಸ್ಯತ್ವ ನೀಡಲಾಯಿತು. ರಾಜ್ಯೋತ್ಸವ, ಪಂಪ, ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರ ಮತ್ತು ಗೌರವಗಳನ್ನು ನೀಡಲಾಯಿತು. ಇದಕ್ಕಾಗಿ ಹಗಲಿರುಳು ಕಾದು, ಕಾತರಿಸಿ, ಕನವರಿಸಿದ್ದ ಬುದ್ಧಿಜೀವಿಗಳ ಹಿಗ್ಗನ್ನು ನೋಡಲು ಎರಡು ಕಣ್ಣು ಸಾಲದು!
ಸದ್ಯ ಸಂವಿಧಾನವನ್ನು ಮುಂದಿಟ್ಟುಕೊಂಡು ಹಗ್ಗ ಜಗ್ಗಾಟ ನಡೆಸಿರುವ ಬುದ್ಧಿಜೀವಿಗಳು ಸಂವಿಧಾನದ ಸಂಕ್ಷಿಪ್ತ ಆವೃತ್ತಿಯ ಪ್ರತಿಗಳನ್ನು ಹಿಡಿದು ಓಡಾಡುತ್ತಾ, ರಾಜಕೀಯ ಮಾಡುವ ಬದಲು ಸಂವಿಧಾನವನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಯಾವುದೋ ಒಂದು ರಾಜಕೀಯ ಪಕ್ಷದ ಪರ ಪ್ರಚಾರ ಭಾಷಣ ಮಾಡುವುದು ಅಥವಾ ತಮಗಾಗದವರನ್ನು ಬಯ್ಯುವುದಲ್ಲ ಎಂಬುದನ್ನು ತಿಳಿಯಬೇಕಿದೆ. ಅಪ್ರಾಮಾಣಿಕರಾಗಿ ವ್ಯವಹರಿಸುತ್ತ, ಭಂಡ ಬಾಳು ಬದುಕುತ್ತಿರುವ ಬುದ್ಧಿಜೀವಿಗಳು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಹಿಂಬಾಲಕರಾಗಿ ಕೈ, ಬಾಯಿ ಹೊಲಸು ಮಾಡಿಕೊಳ್ಳುವುದನ್ನು ಬಿಟ್ಟು ಮರ್ಯಾದಸ್ಥ ಮನುಷ್ಯರಾಗಬೇಕಿದೆ. ಸಾಹಿತಿಗಳು, ಕಲಾವಿದರು, ಸಂಗೀತಗಾರರು ಮತ್ತು ಕ್ರೀಡಾಪಟುಗಳಿಗೆ ಕ್ಷುಲ್ಲಕ ರಾಜಕೀಯ ಸಲ್ಲದು. ಒಂದು ವೇಳೆ ರಾಜಕೀಯ ಮಾಡಲೇಬೇಕೆಂದಿದ್ದರೆ ನೇರವಾಗಿ ರಾಜಕೀಯಕ್ಕೆ ಧುಮುಕಬೇಕು ಅದು ಬಿಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯವನ್ನು ಕೆಟ್ಟ ರಾಜಕೀಯದಿಂದ ಕಲುಷಿತಗೊಳಿಸಬಾರದು.
ಸಂವಿಧಾನ ಬದಲಿಸುವ ಅಥವಾ ರಕ್ಷಿಸುವ ಯೋಗ್ಯತೆ ಬುದ್ಧಿಜೀವಿಗಳಿಗೆ ಖಂಡಿತ ಇಲ್ಲ. ಅವರು ತಮ್ಮ ಮಾನ, ಮರ್ಯಾದೆ ಮತ್ತು ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು. ಸಾಧ್ಯವಾದರೆ ಬಕೆಟ್ ಹಿಡಿಯುವುದು ಅಥವಾ ಚಮಚಾಗಿರಿ ಮಾಡುವ ಗುಣವನ್ನು ಬದಲಿಸಿಕೊಳ್ಳಬೇಕು. ಸಾಧ್ಯವಾದಷ್ಟು ಶುದ್ಧತೆ ಮತ್ತು ಬದ್ಧತೆಯನ್ನು ಕಾಪಾಡಿಕೊಳ್ಳಬೇಕು. ಆರಾಮ ಖುರ್ಚಿಯಲ್ಲಿ ಕುಳಿತು ಬಹುತ್ವ, ಸಮುದಾಯ, ಜಾತ್ಯಾತೀತತೆ, ಸಮಾನತೆ, ಸಾಮಾಜಿಕ ಪ್ರಜ್ಞೆ ಮತ್ತು ಸಹಿಷ್ಣುತೆಯ ಬಗ್ಗೆ ಮಾತಾಡುವ ಮತ್ತು ಬರೆಯುವ ಬುದ್ಧಿಜೀವಿಗಳು ಮೊದಲು ಅದನ್ನು ತಾವು ಅಳವಡಿಸಿಕೊಂಡು ನಂತರ ಇತರರಿಗೆ ಉಪದೇಶಿಸುವುದು ಒಳಿತು. ಘನತೆವೆತ್ತ ಸಂವಿಧಾನವನ್ನು ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಸ್ವಾರ್ಥಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟರೆ ಅದೂ ಸಹ ಸಂವಿಧಾನಕ್ಕೆ ಗೌರವ ತೋರಿಸದಂತೆಯೇ! ಆದರೆ ಪರಾವಲಂಬಿಗಳಾದ ನಮ್ಮ ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳಿಗೆ ಇದು ಖಂಡಿತವಾಗಿಯೂ ಅರ್ಥವಾಗಲಾರದು. ಸುದೈವವಶಾತ್ ಭಾರತದ ಸಂವಿಧಾನ ಇಂತಹ ದುಷ್ಟರಿಂದ ನಮ್ಮನ್ನೆಲ್ಲ ರಕ್ಷಿಸುತ್ತಿದೆ! ಭಾರತ್ ಕೀ ಸಂವಿಧಾನ್ ಮಹಾನ್ ಹೈ! ಸಂವಿಧಾನ್ ಕೀ ಜೈ ಹೋ!
ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಸಂವಿಧಾನ, ಚುನಾವಣೆ ಮತ್ತು ಬುದ್ಧಿಜೀವಿಗಳು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ವಿಕಾಸ ಹೊಸಮನಿ
ಯುವ ವಿಮರ್ಶಕ, ಲಲಿತ ಪ್ರಬಂಧಕಾರ ಮತ್ತು ಸಂಘಟಕರಾದ ವಿಕಾಸ ಹೊಸಮನಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಗಂಗಾ, ಧಾರವಾಡ ಸಂಸ್ಥೆಯ ಸ್ಥಾಪಕರು ಮತ್ತು ಮುಖ್ಯಸ್ಥರು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ಸಂಸ್ಥೆಯ ಸಂಚಾಲಕರು. ಭಾರತೀಯ ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮತ್ತು ಕ್ರಿಕೆಟ್ ಕುರಿತು ಅಪಾರ ತಿಳುವಳಿಕೆಯುಳ್ಳ ವಿಕಾಸ ಹೊಸಮನಿಯವರು ತಮ್ಮ ನೇರ, ನಿಷ್ಠುರ ಮತ್ತು ನಿರ್ಭೀತ ಬರವಣಿಗೆಯಿಂದ ಕನ್ನಡ ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆ.
ಅವರ 'ಗಾಳಿ ಹೆಜ್ಜೆ ಹಿಡಿದ ಸುಗಂಧ' (ವಿಮರ್ಶೆ), 'ಮಿಂಚಿನ ಬಳ್ಳಿ' (ಲಲಿತ ಪ್ರಬಂಧ) ಮತ್ತು 'ಹೃದಯದ ಹಾದಿ' (ಸಂಪಾದಿತ) ಕೃತಿಗಳು ಪ್ರಕಟವಾಗಿವೆ. 'ವೀತರಾಗ' (ವಿಮರ್ಶೆ) ಹಾಗೂ 'ಮಂದಹಾಸ' (ಸಂಪಾದಿತ) ಕೃತಿಗಳು ಶೀಘ್ರದಲ್ಲೇ ಪ್ರಕಟವಾಗಲಿವೆ.
All Posts
1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಸಂವಿಧಾನ, ಚುನಾವಣೆ ಮತ್ತು ಬುದ್ಧಿಜೀವಿಗಳು”
ಉತ್ತಮ ವಿಶ್ಲೇಷಣೆ…ಚೆನ್ನಾಗಿದೆ.ಅಭಿನಂದನೆಗಳು