ರಿಯಲ್ ಎಸ್ಟೇಟ್ ರುದ್ರಪ್ಪ ಮತ್ತು ಆಸ್ಪತ್ರೆಯ ಜನರಲ್ ವಾರ್ಡ್

ರೂಮ್ ನಂಬರ್ ಇನ್ನೂರ ಆರರಲ್ಲಿದ್ದ ನನ್ನ ಗಮನ ಜನರಲ್ ವಾರ್ಡಿನ ಕಡೆಗೆ ಹೋದದ್ದು ಕ್ಯಾಂಟೀನಿಗೆ ಹೊರಟಾಗ. ರೂಮಿನಿಂದ ಕ್ಯಾಂಟೀನಿಗೆ ಹೋಗುವ ಮಧ್ಯೆ ಇದ್ದ ಜನರಲ್ ವಾರ್ಡ್ ಅದಾಗಿತ್ತು. ಯಾವುದೋ ವೃದ್ಧೆಯನ್ನು ವೀಲ್‍ಚೇರಿನಿಂದ ಹಾಸಿಗೆಗೆ ತಂದು ಕೂರಿಸುವ ಸಿದ್ಧತೆಯಲ್ಲಿದ್ದರು. ಇದ್ದಕ್ಕಿದ್ದ ಹಾಗೆಯೇ ಅಲ್ಲಿದ್ದ ನೀಲಿ ಅಂಗಿಯ ಒಬ್ಬ ವ್ಯಕ್ತಿ ಆ ಜವಾಬ್ದಾರಿಯನ್ನು ಅವನೇ ವಹಿಸಿಕೊಂಡ. ಬಹಳ ಮುತುವರ್ಜಿಯಿಂದ ಬೊಚ್ಚುಬಾಯಿಯ ಆ ಅಜ್ಜಿಯನ್ನು ಹಾಸಿಗೆಯ ಮೇಲೆ ಕೂರಿಸಿದ. ಹಾಗೆ ಕೂರಿಸಿದವನು ವಾರ್ಡಿನಿಂದ ಹೊರಗೆ ಬಂದು ನನ್ನ ಬಳಿಯಲ್ಲೇ ನಿಂತುಕೊಂಡ. ನನಗೆ ಅವನ ಮನೋಭಾವ ಇಷ್ಟವಾದದ್ದರಿಂದ ಆತ್ಮೀಯತೆಯ ನಗು ಬೀರಿದೆ. ಅವನ ಮುಖದಲ್ಲಿ ನಗುವೇ ಇಲ್ಲ. ನಾನು ಸರಿಯಾಗಿ ಅವನ ಮುಖ ನೋಡಿದ್ದು ಅವನು ನಗುತ್ತಿಲ್ಲ ಎಂದು ಗೊತ್ತಾದ ಮೇಲೆಯೇ. ಪರಿಚಯದ ಮುಖ ಎನಿಸಿತು. ಬಲಗೆನ್ನೆ ಮೇಲಿದ್ದ ಕಾಸಗಲದ ಮಚ್ಚೆ ಕೊನೆಗೂ ಸುಳಿವು ನೀಡಿತು. ಅವನಲ್ಲಿ ಕೇಳಿದೆ, “ನೀವು ರುದ್ರಪ್ಪ ಅವರಲ್ವಾ?” ಹೌದೆನ್ನುವಂತೆ ತಲೆಯಾಡಿಸಿದ. ಆ ಬಳಿಕವೂ ಅವನೇ ಹೌದೋ ಅಲ್ಲವೋ ಎನ್ನುವ ಅನುಮಾನ ನನ್ನಲ್ಲಿ ಇದ್ದೇ ಇತ್ತು.


ನಾವಾಗ ಭರತಪುರದ ಬಾಡಿಗೆ ಮನೆಯಲ್ಲಿ ನೆಲೆನಿಂತಿದ್ದೆವು. ನಾವು ಅಂದರೆ ನನ್ನ ಅಪ್ಪ, ಅಮ್ಮ, ಹೆಂಡತಿ, ಮಗಳು ಮತ್ತು ನಾನು. ಅಂತಹ ಊರಿನಲ್ಲಿ, ಭಸ್ಮಧಾರಿಯಿಂದ ವರ ಪಡೆದ ಭಸ್ಮಾಸುರನಂತೆ ಸೊಕ್ಕಿನಿಂದ ಮೆರೆಯುತ್ತಿದ್ದವನು ಈ ರುದ್ರಪ್ಪ. ರಿಯಲ್ ಎಸ್ಟೇಟ್ ವ್ಯವಹಾರ ಇವನದ್ದು. ಕೊರಳಲ್ಲಿ ನಾಯಿ ಸಂಕೋಲೆಯಷ್ಟು ದಪ್ಪನೆಯ ಮೂರು ಮೂರು ಚೈನುಗಳು, ಕೈಯ್ಯಲ್ಲಿ ಮುಕ್ಕಾಲಿಂಚು ಅಗಲದ ಚಿನ್ನದ ಕಡಗ, ಅದಕ್ಕೆ ಸಂಗಾತಿಯಾಗಿ ಬ್ರೆಸ್‍ಲೆಟ್, ಎಡದ ಕೈಯ್ಯಲ್ಲಿ ಚಿನ್ನದ ಬಣ್ಣದ ವಾಚು, ಕಣ್ಣಿಗೆ ಕೂಲಿಂಗ್ ಗ್ಲಾಸು ಹಾಕಿಕೊಂಡು, ಮಿರಿ ಮಿರಿ ಮಿಂಚುವ ಸ್ಕಾರ್ಪಿಯೋ ಕಾರಿನ ಎದುರು ಸೀಟಿನಲ್ಲಿ ಕುಳಿತ ರುದ್ರಪ್ಪನೆಂಬ ದಪ್ಪನೆಯ ಜೀವ. ಮುಂದೊಬ್ಬ ಡ್ರೈವರು, ಹಿಂದಿನ ಸೀಟಿನಲ್ಲಿ ಎರಡು ದೈತ್ಯ ದೇಹಗಳು ಯಾವತ್ತೂ ಖಾಯಂ. ಇದನ್ನು ನೋಡಿದರೆ ಮೆರವಣಿಗೆಯೇ ಸಾಗಿಬರುತ್ತಿರುವ ದೃಶ್ಯಾನುಭವ ದೊರಕುತ್ತಿತ್ತು. ಅವನ ವ್ಯವಹಾರದಲ್ಲಿ ಪ್ರಾಮಾಣಿಕತೆ ಎನ್ನುವುದು ಇಲ್ಲವೇ ಇಲ್ಲ. ಮೋಸ ಮಾಡಿಯೇ ಹಣ ಮಾಡಿದ್ದಾನೆ ಎಂದು ಜನ ಆಡಿಕೊಳ್ಳುತ್ತಿದ್ದುದನ್ನು ನಾನು ಹಲವಾರು ಸಲ ಕೇಳಿದ್ದೆ. ನಾಲ್ಕೈದು ಕಾರುಗಳು, ಎರಡು ಬಂಗಲೆ, ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಹಣ ಎಲ್ಲವೂ ಇತ್ತು ಅವನಲ್ಲಿ. ಆದರೆ ಯಾವುದಕ್ಕೂ ಸರಿಯಾದ ಲೆಕ್ಕ ಇರಲಿಲ್ಲ. ಒಂದಷ್ಟು ಜನ ಮಂತ್ರಿಗಳ ಪ್ರೀತಿ ಗಳಿಸಿದ್ದರಿಂದ ಏನೇ ಸಮಸ್ಯೆ ಎದುರಾದರೂ ಅದನ್ನು ಬಹಳ ಸುಲಭವಾಗಿ ನೀಗಿಸಿಕೊಳ್ಳುತ್ತಿದ್ದ.
ಇಂತಹ ರೌದ್ರಮುಖಿ ರುದ್ರಪ್ಪನ ಕಣ್ಣು ಬಿದ್ದದ್ದು ನಮ್ಮ ಬಾಡಿಗೆ ಮನೆಗೆ ಹತ್ತಿರದಲ್ಲಿಯೇ ಇದ್ದ ರಂಗಯ್ಯನವರ ಜಾಗದ ಮೇಲೆ. ರಂಗಯ್ಯನವರು ಹೈಸ್ಕೂಲಿನಲ್ಲಿ ಮೇಷ್ಟ್ರಾಗಿದ್ದವರು. ತಾನಾಯಿತು ತನ್ನ ಕೆಲಸವಾಯಿತು ಎಂಬಂತಿದ್ದ ಅವರಿಗೆ ಜೊತೆಯಾಗಿದ್ದದ್ದು ಅದೇ ಮನಃಸ್ಥಿತಿಯ ಅವರ ಹೆಂಡತಿ ಮತ್ತು ಮಗ. ಹೆಂಡತಿ ಮನೆ ನೋಡಿಕೊಂಡಿದ್ದರೆ ಮಗ ಪಿಯುಸಿಯಲ್ಲಿದ್ದ. ಹೀಗೆ ತಮ್ಮದೇ ಸಾತ್ವಿಕ ಜಗತ್ತಿನಲ್ಲಿ ನೆಮ್ಮದಿಯಿಂದಿದ್ದ ರಂಗಯ್ಯನವರ ಜಾಗದಲ್ಲಿ ಗ್ರ್ಯಾನೆಟ್ ಇದೆ ಎಂಬ ಸುದ್ದಿಯನ್ನು ರುದ್ರಪ್ಪನ ಜೊತೆಗೆ ಓಡಾಡಿಕೊಂಡಿದ್ದವರ್ಯಾರೋ ಅವನ ಕಿವಿಗೆ ಹಾಕಿದ್ದರು. ವಿಷಯ ತಿಳಿದ ಮರುದಿನವೇ ಅವನ ಸ್ಕಾರ್ಪಿಯೋ ಕಾರು ಮೇಷ್ಟ್ರ ಮನೆಯೆದುರು ಬಂದುನಿಂತಿತು.
ಕಾರಿನಿಂದಿಳಿದ ರುದ್ರಪ್ಪ ನಗುತ್ತಲೇ ಮೇಷ್ಟ್ರಿಗೆ ಕೈಮುಗಿದು ತಾನು ಬಂದ ವಿಷಯ ಪ್ರಸ್ತಾಪಿಸಿದ. ಆಗಿನ ಮಾರುಕಟ್ಟೆ ಲೆಕ್ಕಾಚಾರದಲ್ಲಿ ಮೇಷ್ಟ್ರ ಜಾಗಕ್ಕೆ ಹೆಚ್ಚೆಂದರೆ ಇಪ್ಪತ್ತು ಲಕ್ಷ ಸಿಗುತ್ತಿತ್ತು. ರುದ್ರಪ್ಪ ಇಪ್ಪತ್ತಮೂರು ಲಕ್ಷ ಕೊಡುತ್ತೇನೆಂದ. ಬೆಳಗ್ಗೆ ಎದ್ದರೆ ಶಾಲೆಗೆ ಹೋಗಿ ಸಾಯಂಕಾಲವಾದರೆ ಮನೆಗೆ ಬಂದುಬಿಡುವ, ಹೆಚ್ಚು ಮಾತೂ ಇಲ್ಲದ ಮೇಷ್ಟ್ರಿಗೆ ರುದ್ರಪ್ಪನ ಮರ್ಜಿ ಗೊತ್ತಿರಲಿಲ್ಲ. ಕೇಳಿದ ತಕ್ಷಣ ಬಿಟ್ಟುಹೋಗುವುದಕ್ಕೆ ಸಾಧ್ಯ ಇಲ್ಲ. ಇನ್ನೂ ಇಪ್ಪತ್ತು ಲಕ್ಷ ಹೆಚ್ಚು ಕೊಟ್ಟರೂ ಈ ಜಾಗ ಮಾರುವುದಿಲ್ಲ ಎಂದು ಮನಸ್ಸಲ್ಲಿದ್ದುದನ್ನು ನೇರವಾಗಿಯೇ ಹೇಳಿದ್ದಾರೆ. “ಸರಿ ಸರಿ. ನೀವು ಕೊಡುವುದಿಲ್ಲ ಎಂದರೆ ನಾವಾದರೂ ಏನು ಮಾಡಲಿಕ್ಕಾಗುತ್ತದೆ!” ಎಂದು ರುದ್ರಪ್ಪ ಗುಳ್ಳೆನರಿಯಂತೆ ನಗುತ್ತಾ ಹೇಳಿದ ಮಾತಿನ ಇನ್ನೊಂದು ಅರ್ಥ ಮೇಷ್ಟ್ರ ತಲೆಗೇ ಹೋಗಿರಲಿಲ್ಲ. ಅವನ ಕಾರು ಹೇಗೆ ಬಂದಿದೆಯೋ ಹಾಗೆಯೇ ಹೊರಟುಹೋಗುವಂತಾಯಿತು.


ದಿನ ಎರಡು ಕಳೆದಿರಲಿಲ್ಲ. ಮೇಷ್ಟ್ರ ಮನೆಗೆ ಫೋನು. ಎತ್ತಿಕೊಂಡರೆ ಮಗ ಅಳುತ್ತಿರುವ ಸದ್ದು. ಅವನ ಕೆನ್ನೆಗೆ ಒಂದೇಟು ಬಲವಾಗಿ ಬಿದ್ದ ಸೂಚನೆ. ಆ ಬಳಿಕದ್ದು ರುದ್ರಪ್ಪನ ಧ್ವನಿ. ಜಾಗ ಮಾರುವುದಕ್ಕೆ ಒಪ್ಪಿಕೊಂಡರೆ ಮಾತ್ರ ಮಗನನ್ನು ಬಿಡುತ್ತೇನೆ. ಇಲ್ಲವಾದರೆ ಮಗನ ಹೆಣ ನೋಡಬೇಕಾಗುತ್ತದೆ. ಪೋಲೀಸರಿಗೆ ಏನಾದರೂ ವಿಷಯ ಹೇಳಿದರೆ ಜಾಗ್ರತೆ ಎಂಬ ಎಚ್ಚರಿಕೆ. ಪೋನೆತ್ತಿಕೊಂಡು ಕೇಳಿಸಿಕೊಳ್ಳುತ್ತಿದ್ದ ಮೇಷ್ಟ್ರು ಅಲ್ಲೇ ಕುಸಿದುಬಿದ್ದರು. ಆದ ಆಘಾತದಿಂದ ಪ್ರಜ್ಞೆ ತಪ್ಪಿಹೋಗಿತ್ತು. ಬಳಿಯಲ್ಲೇ ಇದ್ದ ಮೇಷ್ಟ್ರ ಹೆಂಡತಿ ರುದ್ರಪ್ಪನ ಮಾತನ್ನು ಕೇಳಿಸಿಕೊಂಡಿದ್ದಳು. “ಆಯ್ತು. ನೀವು ಹೇಳಿದ ಹಾಗೆ ಕೇಳ್ತೇವೆ. ಮಗನನ್ನು ಕಳಿಸಿಕೊಡಿ” ಎಂದರು ಆತುರಾತುರದಲ್ಲಿ. ಫೋನು ಸ್ಥಗಿತವಾಯಿತು.
ಮೇಷ್ಟ್ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಏನೂ ಆಗಿಲ್ಲ, ಸ್ವಲ್ಪ ಸುಸ್ತಿದೆ ಅಷ್ಟೇ ಎಂದು ವೈದ್ಯರಿಂದ ಹೇಳಿಸಿಕೊಂಡು ಬರುವಷ್ಟರಲ್ಲಿ ಕತ್ತಲಾಗಿತ್ತು. ಮಗ ಇನ್ನೂ ಬಂದಿಲ್ಲ ಎಂಬ ಆತಂಕ ಮೇಷ್ಟ್ರಿಗೆ ಮತ್ತು ಅವರ ಹೆಂಡತಿಗೆ. ಅಷ್ಟರಲ್ಲಿ ಕಪ್ಪು ಕಾರೊಂದು ಬಂದು, ಅವರ ಮಗನನ್ನು ಇಳಿಸಿ, ವೇಗವಾಗಿ ಹೊರಟುಹೋಯಿತು.
ವಿಷಯ ತಿಳಿದ ನಾವು ಒಂದಷ್ಟು ಮಂದಿ ಮೇಷ್ಟ್ರ ಮನೆಗೆ ಹೋಗಿ ಧೈರ್ಯ ಹೇಳಿಬಂದೆವು. ಅವನನ್ನು ಎದುರು ಹಾಕಿಕೊಳ್ಳಬೇಡಿ. ಎದುರು ಬಿದ್ದರೆ ಅಪಾಯ ಮಾಡಿಯಾನು. ಅವನು ಹೇಳಿದ ಬೆಲೆಗೆ ಜಾಗ ಮಾರಿ. ಬೇರೆಲ್ಲಾದರೂ ಹೋಗಿ ನೆಮ್ಮದಿಯಾಗಿರಿ ಎಂದೆವು. ಮೇಷ್ಟ್ರಿಗೆ ನಮ್ಮ ಮಾತು ಸರಿ ಎನಿಸಿತಾದರೂ ಮಗನ ಓದಿನ ಬಗ್ಗೆ ಚಿಂತೆ ಹತ್ತಿತು. ಈಗೇನೋ ಒಳ್ಳೆ ಕಾಲೇಜಿನಲ್ಲಿ ಓದುತ್ತಿದ್ದಾನೆ. ಬೇರೆ ಕಡೆಗೆ ಹೋದರೆ ಹೇಗೋ ಏನೋ ಎಂದು ಮನಸ್ಸಿನ ಗೊಂದಲ ಹೇಳಿಕೊಂಡರು. ಅದೆಲ್ಲಾ ಸರಿಯಾಗುತ್ತದೆ. ಮೊದಲು ನೀವು ಮೂರೂ ಜನ ಸೇಫ್ ಆಗುವುದನ್ನು ನೋಡಿಕೊಳ್ಳಿ ಎಂದರು ನಮ್ಮ ಜೊತೆಗಿದ್ದ ಒಬ್ಬರು. ಸರಿ ಎನ್ನುವಂತೆ ಮೇಷ್ಟ್ರು ತಲೆಯಾಡಿಸಿದರು.


ಹಿಂದಿನ ದಿನವಷ್ಟೇ ಹೋಗಲು ಒಪ್ಪಿಕೊಂಡಿದ್ದ ಮೇಷ್ಟ್ರು ಈಗ ಮನಸ್ಸು ಬದಲಿಸಿದ್ದಾರೆ ಎಂದು ತಿಳಿದಾಗ ನನಗಂತೂ ಅತೀವ ಖೇದವಾಗಿತ್ತು. ಮೇಷ್ಟ್ರು ಬದಲಾಗಲು ಕಾರಣವಿತ್ತು. ನಾವೆಲ್ಲರೂ ಮಾತನಾಡಿ ಬಂದ ಮೇಲೆ ನಮ್ಮದೇ ಏರಿಯಾದ ಕೊನೆಯ ಮನೆಯಲ್ಲಿದ್ದ ಪ್ರಹ್ಲಾದ ಎನ್ನುವವನು ಮೇಷ್ಟ್ರ ಮನೆಗೆ ಹೋಗಿದ್ದ. ನಿಮ್ಮಂಥ ಕಲಿತವರು ಆ ರುದ್ರಪ್ಪನಂಥ ಗೂಂಡಾಗಳಿಗೆಲ್ಲಾ ಹೆದರಬಾರದು. ಪೋಲೀಸ್ ಕಂಪ್ಲೇಂಟ್ ಕೊಟ್ಟರೆ ಹೆದರಿ ಕೂತುಕೊಳ್ಳುತ್ತಾನೆ. ನಿಮ್ಮ ಜೊತೆ ನಾನಿದ್ದೇನೆ ಎಂದೆಲ್ಲಾ ಹೇಳಿಬಂದಿದ್ದ. ಮೇಷ್ಟ್ರ ಮಗನೂ ಸಹ ಪ್ರಹ್ಲಾದ ಹೇಳಿದ್ದೇ ಸರಿ ಎಂದಿದ್ದ. ಪ್ರಹ್ಲಾದ ಮೊದಲಿನಿಂದಲೂ ಅದೇ ಮನಃಸ್ಥಿತಿಯವನು. ಒಂದೆರಡು ಸಲ ರುದ್ರಪ್ಪನ ಬಗ್ಗೆ ನಾಲ್ಕೈದು ಮಂದಿ ಇದ್ದಾಗಲೇ ಬೈದು ಮಾತಾಡಿದ್ದ. ಒಂದು ಸಲ ಪೋಲೀಸರಿಗೆ ದೂರನ್ನೂ ಕೊಟ್ಟಿದ್ದ. ಆದರೆ ಏನೂ ಪ್ರಯೋಜನವಾಗಿರಲಿಲ್ಲ.
ರುದ್ರಪ್ಪನನ್ನು ಎದುರು ಹಾಕಿಕೊಳ್ಳಲು ನಿರ್ಧರಿಸಿದ್ದ ಮೇಷ್ಟ್ರು ಅದೇ ದಿನ ಸಂಜೆ ಸ್ಟೇಶನ್‍ಗೆ ಹೋಗಿ ರುದ್ರಪ್ಪನ ವಿರುದ್ಧ ಕಂಪ್ಲೇಂಟ್ ಕೊಟ್ಟುಬಂದರು. ಅದೇ ದಿನ ರಾತ್ರಿ ಪೋಲೀಸರು ರುದ್ರಪ್ಪನನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಬಂತು. ಪ್ರಹ್ಲಾದ ಉತ್ಸಾಹದಿಂದ ಮೇಷ್ಟ್ರ ಮನೆಗೆ ಬಂದು ಇನ್ನು ರುದ್ರಪ್ಪನ ಸೊಕ್ಕು ಇಳಿಯುತ್ತದೆ ನೋಡಿ ಎಂದು ಹೇಳಿಹೋದ. ಆದರೆ ಮಾರನೇ ದಿನ ಸಂಜೆ ಹೊತ್ತಿಗಾಗುವಾಗ ರುದ್ರಪ್ಪ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಅದೇ ದಿನ ರಾತ್ರಿ ಮೇಷ್ಟ್ರ ಮನೆಯೆದುರು ನಿಂತ ಕಾರಿನಿಂದ ನಾಲ್ಕೈದು ಮಂದಿ ಇಳಿದರು. ಮನೆಯೊಳಗಿದ್ದ ಮೇಷ್ಟ್ರ ಮಗನನ್ನು ಎಳೆದುಕೊಂಡು ಹೋಗಿ, ತಲೆ ಮೇಲೆ ನಾಲ್ಕು ಬಡಿದು, ಬಲವಂತವಾಗಿ ಕಾರಿನಲ್ಲಿ ಕೂರಿಸಿ ಕರೆದೊಯ್ದರು. ಮೇಷ್ಟ್ರು ಮತ್ತು ಹೆಂಡತಿ ಬೊಬ್ಬೆ ಹೊಡೆದದ್ದು ಯಾವ ಪ್ರಯೋಜನಕ್ಕೂ ಬರಲಿಲ್ಲ. ಪೋಲೀಸರಿಂದ ಯಾವ ಸಹಾಯವೂ ಇಲ್ಲ ಎಂದು ಅರಿವಾಗಿದ್ದರಿಂದ ಮೇಷ್ಟ್ರು ಆ ಕಡೆಗೆ ಮುಖ ಮಾಡಲಿಲ್ಲ.
ಮುಕ್ಕಾಲು ಗಂಟೆ ಕಳೆದಾಗ ರುದ್ರಪ್ಪನ ಫೋನು. ಈಗಲೇ ತನ್ನ ಕಡೆಯ ಹುಡುಗನೊಬ್ಬ ಬರುತ್ತಾನೆ. ಅವನ ಕೈಯ್ಯಲ್ಲೊಂದು ಕಾಗದ ಇರುತ್ತದೆ. ಆ ಕಾಗದದಲ್ಲಿ ಏನೇ ಇದ್ದರೂ ಅದರ ಮೇಲೆ ಸಹಿ ಹಾಕಬೇಕು. ಅವನು ಕೊಡುವ ಹಣ ತೆಗೆದುಕೊಳ್ಳಬೇಕು. ಅದೇ ರಾತ್ರಿ ಗಂಟುಮೂಟೆ ಕಟ್ಟಿಕೊಂಡು ಹೊರಟುಹೋಗಬೇಕು ಎಂದು ಮೇಷ್ಟ್ರಲ್ಲಿ ಹೇಳಿದ. ಮೇಷ್ಟ್ರಿಗೆ ಸಮಾಧಾನ ಹೇಳಲೆಂದು ಹೋಗಿದ್ದ ನಾವಷ್ಟೂ ಮಂದಿ ರುದ್ರಪ್ಪ ಹೀಗೆ ಫೋನಿನಲ್ಲಿ ಹೆದರಿಸುವಾಗ ಅಲ್ಲೇ ಇದ್ದೆವು. ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ ಮೇಷ್ಟ್ರಿಗೆ. ಮಗನಿಗೇನಾಗುತ್ತದೋ ಎಂಬ ಭಯ ಅವರಿಗಿತ್ತು. ನಮ್ಮನ್ನೆಲ್ಲಾ ಅಲ್ಲಿಂದ ಹೋಗಲು ಹೇಳಿದರು.
ರುದ್ರಪ್ಪ ಹೇಳಿದಂತೆಯೇ ಅವನ ಕಡೆಯ ಹುಡುಗ ಬಂದ. ಕಾಗದ ತೋರಿಸಿದ. ಮೇಷ್ಟ್ರ ಸಹಿ ಬಿತ್ತು. ಹಣ ಕೊಟ್ಟ. ಹೊರಟುಹೋದ. ಅದಾಗಿ ಅರ್ಧ ಗಂಟೆಯಲ್ಲಿ ಮೇಷ್ಟ್ರ ಮಗನನ್ನು ಕರೆತಂದು ಬಿಟ್ಟುಹೋದರು. ಸರಿಯಾಗಿ ಹೊಡೆದಿದ್ದಾರೆ ಎನ್ನುವುದು ಗೊತ್ತಾಗುತ್ತಿತ್ತು. ಹುಡುಗ ಕಾಲು ಸೊಟ್ಟಗೆ ಮಾಡಿಕೊಂಡು ನಡೆಯುತ್ತಿದ್ದ. ಮಗನ ಬಳಿ ಬಂದ ಮೇಷ್ಟ್ರ ಹೆಂಡತಿಯ ಕಣ್ಣಿನಿಂದ ನೀರು ಸುರಿಯುತ್ತಲೇ ಇತ್ತು.
ಎಲ್ಲವೂ ರುದ್ರಪ್ಪ ಹೇಳಿದಂತೆಯೇ ನಡೆಯಿತು. ಮೇಷ್ಟ್ರು ಮನೆ ಬಿಟ್ಟು ಹೋಗಲೆಂದು ತಯಾರಾಗುತ್ತಿರುವುದು ಮನೆ ಕಿಟಕಿಯಲ್ಲಿ ನೋಡುತ್ತಿದ್ದ ನಮಗೆಲ್ಲರಿಗೂ ಕಾಣಿಸುತ್ತಿತ್ತು. ಮರುದಿನ ಬೆಳಗ್ಗೆ ಆಗುವಷ್ಟರಲ್ಲಿ ಮೇಷ್ಟ್ರ ಮನೆ ಖಾಲಿಯಾಗಿತ್ತು. ಮನೆಯಲ್ಲಿ ಯಾರೂ ಇರಲಿಲ್ಲ.


ಎರಡು ದಿನ ಕಳೆದಿರಲಿಲ್ಲ, ಬುಲ್ಡೋಜರ್ ಒಂದು ಮೇಷ್ಟ್ರ ಜಾಗವನ್ನು ಅಲ್ಲಲ್ಲಿ ಕೊರೆಯಲು ಆರಂಭಿಸಿತ್ತು. ಠೀವಿಯಿಂದ ಬಂದುನಿಂತ ರುದ್ರಪ್ಪ “ಅಲ್ಲಿ ಅಲ್ಲವೋ ಇಲ್ಲಿ, ಹಾಗೆ ಅಲ್ಲವೋ ಹೀಗೆ” ಎಂದು ಸ್ವತಃ ತಾನೇ ನಿರ್ದೇಶನ ನೀಡುತ್ತಿದ್ದ. ಎಲ್ಲಿ ನೋಡಿದರೂ ಧೂಳು. ಬುಲ್ಡೋಜರ್‍ನ ಬಾಯಿಯ ಹಿಡಿತಕ್ಕೆ ಸಿಲುಕಿದ್ದ ಮಣ್ಣಿನ ರಾಶಿ. ಗ್ರ್ಯಾನೆಟ್‍ಗಾಗಿ ಎಷ್ಟು ಅಗೆದರೂ ಅದು ಸಿಗಲಿಲ್ಲ. ರುದ್ರಪ್ಪ ನಿರಾಶನಾಗಿದ್ದ. ಆದರೆ ಬಿಟ್ಟುಬಿಡಲು ಸಿದ್ಧನಿರಲಿಲ್ಲ. ಮೇಷ್ಟ್ರ ಮನೆಯನ್ನೇ ಕೆಡವಿಹಾಕಿಸಿದ. ಆ ಜಾಗವನ್ನೂ ಅಗೆಸಿದ. ಅಲ್ಲಿಯೂ ಗ್ರ್ಯಾನೆಟ್‍ನ ಕುರುಹಿಲ್ಲ. ನಖಶಿಖಾಂತ ಉರಿದುಹೋದ ರುದ್ರಪ್ಪ. ಕೆಟ್ಟ ಬೈಗುಳಗಳು ಏನೆಲ್ಲಾ ಇದೆಯೋ ಅದೆಲ್ಲವನ್ನೂ ಬೈದುಕೊಳ್ಳುತ್ತಾ, ಅಲ್ಲಿಂದ ಹೊರಟುಹೋದ.
ಇದಾದ ವಾರದ ಮೇಲೆ ತಿಳಿದುಬಂದದ್ದಿಷ್ಟು- ಮೇಷ್ಟ್ರು ಹೊಸದಾಗಿ ಹೋಗಿದ್ದ ಮನೆಗೆ ಹೋದ ರುದ್ರಪ್ಪ ಈ ಮೊದಲು ಕೊಟ್ಟಿದ್ದ ಹಣವನ್ನು ವಾಪಸ್ಸು ಕೇಳಿದ್ದಾನೆ. ಭಯಬಿದ್ದ ಮೇಷ್ಟ್ರು ಉಳಿದಿದ್ದ ಹನ್ನೆರಡು ಲಕ್ಷ ಹಿಂದಿರುಗಿಸಿದ್ದಾರೆ. ಉಳಿದ ಹಣವನ್ನು ಈಗಾಗಲೇ ಹೊಸ ಮನೆಯ ಅಡ್ವಾನ್ಸ್ ಆಗಿ ಕೊಟ್ಟದ್ದರಿಂದ ಇವನ ಕೈಗಿಡುವುದಕ್ಕೆ ಆಗಿಲ್ಲ. ಹಣಬಾಕನಂತಾದ ರುದ್ರಪ್ಪ ಮೇಷ್ಟ್ರ ಹೆಂಡತಿಯ ತಾಳಿಯನ್ನೂ ಬಿಡದೆ, ಮನೆಯಲ್ಲಿದ್ದ ಚಿನ್ನವನ್ನೆಲ್ಲಾ ಹುಡುಕಿ ಹುಡುಕಿ ತಂದಿದ್ದಾನೆ. ಉಳಿದ ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ. ಇಡೀ ಮನೆಗೆ ಬೆಂಕಿ ಕೊಡುತ್ತೇನೆ ಎಂದು ಹೆದರಿಸಿ ಬಂದಿದ್ದಾನೆ.


ಇವನು ಅದೇ ರುದ್ರಪ್ಪನಾ? ಎಂದು ನನಗೆ ಆಶ್ಚರ್ಯ ಹಿಡಿಸುವಷ್ಟರಮಟ್ಟಿಗೆ ಅವನು ಬದಲಾಗಿಹೋಗಿದ್ದ. ಕ್ಷೀಣವಾಗಿದ್ದ ಅವನ ದೇಹದಲ್ಲಿ ಮುಕ್ಕಾಲು ಕೆಜಿ ಮಾಂಸವೂ ಉಳಿದುಕೊಂಡಿರಲಿಲ್ಲ. ಹೆಜ್ಜೆ ಹೆಜ್ಜೆಯಲ್ಲೂ ತುಂಬಿ ತುಳುಕುತ್ತಿದ್ದ ಗತ್ತು ಅದಾಗಲೇ ಸತ್ತು ಸಮಾಧಿ ಸೇರಿಕೊಂಡಿತ್ತು.
ನಾನು ವಿಸ್ಮಯದಿಂದ ನೋಡುತ್ತಿರುವಾಗಲೇ ಅವನು ಆ ಅಜ್ಜಿಯಿದ್ದ ಕಡೆಗೆ ಕೈತೋರಿಸಿ, “ಇಂಥದ್ದೆಲ್ಲಾ ನೋಡುವಾಗ ಆಸ್ತಿ, ಹಣ, ಜಗಳ ಇದೆಲ್ಲಾ ಬೇಕಾ ಅನಿಸುತ್ತಿದೆ” ಎಂದು ಹೇಳಿದವನ ಕಣ್ಣಲ್ಲಿ ಭರ್ತಿ ನೀರು.
ಅವನಿಗೆ ನನ್ನ ಪರಿಚಯ ಹೇಳಿ, ಅವನ ಬಗ್ಗೆ ಕೇಳಿದೆ. ಅವನ ಜೊತೆ ಇದ್ದ ಹುಡುಗನೇ ಅವನಿಗೆ ಮೋಸ ಮಾಡಿ, ಆಸ್ತಿಯಲ್ಲಿ ಮುಕ್ಕಾಲು ಭಾಗ ಕಬಳಿಸಿಕೊಂಡಿದ್ದ. ಇದ್ದ ಇಬ್ಬರು ಮಕ್ಕಳು ಸದ್ದೇ ಇಲ್ಲದೆ ದೂರವಾಗಿದ್ದರು. ಅಷ್ಟರಲ್ಲೇ ಅವನಿಗೆ ಶುಗರ್ ವಿಪರೀತವಾಗಿತ್ತು. ಹೆಂಡತಿಗೆ ಹೃದಯದ ಖಾಯಿಲೆ ಎಂದು ಗೊತ್ತಾಗಿತ್ತು. ಆಸ್ಪತ್ರೆಗೆ ಸೇರಿಸದಿದ್ದರೆ ಅವಳು ಬದುಕುವುದು ಸಾಧ್ಯವೇ ಇರಲಿಲ್ಲ. ಸೇರಿಸಿದ. ಆದರೆ ಪ್ರತ್ಯೇಕ ರೂಮ್ ಪಡೆದುಕೊಳ್ಳುವಷ್ಟು ಹಣ ಇವನಲ್ಲಿರಲಿಲ್ಲ. ಅದಕ್ಕೇ ಜನರಲ್ ವಾರ್ಡಿಗೆ ಸೇರಿಸಿದ. ಅಲ್ಲಿದ್ದಾಳೆ ನನ್ನ ಹೆಂಡತಿ ಎಂದು ಇದ್ದ ಹತ್ತೂ ಮುಕ್ಕಾಲು ಹಾಸಿಗೆಗಳಲ್ಲಿ ಒಂದರ ಕಡೆಗೆ ಕೈತೋರಿಸಿದ. ನನಗೆ ಕಾಣಿಸಿದ್ದು ಅವನ ಹೆಂಡತಿಯ ಕ್ಷೀಣ ಕಾಲು ಮಾತ್ರ.
ಅಷ್ಟರಲ್ಲಿ ನರ್ಸೊಬ್ಬಳು ದೊಡ್ಡ ಧ್ವನಿಯಲ್ಲಿ “ಯಾರ್ರೀ ಈ ಹೆಂಗಸಿನ ಕಡೆಯವರು? ಈ ಇಂಜೆಕ್ಷನ್ ತೆಗೆದುಕೊಂಡು ಬನ್ನಿ” ಎಂದು ಕಾಗದವೊಂದನ್ನು ಎತ್ತಿಹಿಡಿದು ಬೊಬ್ಬೆ ಹೊಡೆಯತೊಡಗಿದಳು. ರುದ್ರಪ್ಪ ನನಗೆ ಕೈಮುಗಿದು ಆತುರಾತುರದಿಂದ ಆ ಕಡೆಗೆ ಹೋದ.


 ಡಾ. ವಿಶ್ವನಾಥ ಎನ್ ನೇರಳಕಟ್ಟೆ
  ಮೊ.ಸಂ.- 6361949436.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ರಿಯಲ್ ಎಸ್ಟೇಟ್ ರುದ್ರಪ್ಪ ಮತ್ತು ಆಸ್ಪತ್ರೆಯ ಜನರಲ್ ವಾರ್ಡ್”

  1. ಶಾಂತಲಾ ಪ್ರಸಾದ್

    ಕತೆ ತುಂಬ ಚೆನ್ನಾಗಿದೆ. ಓದಿಸಿಕೊಂಡು ಹೋಗುತ್ತದೆ. ಸರಳವಾಗಿದೆ. ಅರ್ಥಪೂರ್ಣ ಕತೆ. ಕೊಡುವ ಸಂದೇಶ ಚೆನ್ನಾಗಿದೆ.

    ಶಾಂತಲಾ ಪ್ರಸಾದ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter