ಮಣ್ಣು ಮತ್ತು ನೀರು
ತಪ್ಪದ ಹದ
ಸುಮಾರಾಗಿ ಬೆಸೆದ
ಕಣಕದ ಕಟ್ಟು
ಬೆರಳ ಸಂದುಗೊಂದುಗಳಲ್ಲಿ
ಸುಳಿದಾಡಿ
ಅಚ್ಚಿನಲ್ಲಿ ಕೂತು ಗಚ್ಚಾಗಿ
ಅರಳಿ ನಗುತ್ತವೆ
ಮಣ್ಣ ಹಣತೆಗಳು
ಟಂಕಶಾಲೆಯಲ್ಲಿ
ಹೊಳಪು ಬಣ್ಣಗಳ
ಲೋಹದ ನೀರು
ಹೊಯ್ದ ಎರಕ
ಮೂಡಿದ ಅಚ್ಚು
ತಳತಳಿಸುವ ಮೈಕಾಂತಿಯ
ಕಣ್ಕುಕ್ಕುವ ಲೋಹದ ಹಣತೆಗಳು
ಎಲ್ಲಕ್ಕೂ
ಒಂದೇ ಕಾಯಕ.
ಒಂದೇ ಬಯಕೆ;
ಬೆಳಕ ಕುದುರಿಸುವ ಕಲೆ,
ಧ್ಯಾನಿಸುವ ಸೆಲೆ
ಹಿಂದಿಕ್ಕಿ, ಮುಂದಿಕ್ಕಿ
ಅಕ್ಕ ಪಕ್ಕ
ಪದಗಳ ಜರಿಲಂಗ ತೊಟ್ಟ
ಏಕ ನೃತ್ಯ ಭಂಗಿ
ತೈಲ ಮತ್ತು ಬತ್ತಿಗಳ
ಸಹಮತದ ನಡುವೆ
ಹಣತೆಗಳ ಮೋಜು
ಪೈಪೋಟಿ.
ವಾಂಛೆಯಲ್ಲಿ ತುಟಿ ಬಿಚ್ಚಿ
ಕಚ್ಚಿ, ಹುಚ್ಚೆದ್ದು ಉರಿದದ್ದು,
ಮೆಚ್ಚಿ ನಕ್ಕಿದ್ದು
ಬೆಚ್ಚಗೆ ಬೆಳಕ
ಹೊಸೆದದ್ದು.
ಹಣತೆ ಹೊಸೆವ ಬೆಳಕ
ಕಣ್ತುಂಬಿಕೊಳ್ಳುವ ಕನಸುಗಂಗಳು
ಎದೆಯಿಂದ ಉಕ್ಕುವ
ಅಕ್ಷರಗಳ ಪರಿಮಳ
ಮೆದುಳಿನ ಮೂಲೆ ಮೂಲೆಯಲ್ಲಿ
ಕೋನ ತ್ರಿಕೋನ
ತ್ರಿಜ್ಯ ಕೊನೆಗೊಮ್ಮೆ ವ್ಯಾಜ್ಯ.
ಹಣತೆಗಳ ಕಾಣಿಕೆಯ ಪಟ್ಟಿ
ಬೆಳೆಯುತ್ತಲೇ
ಮಂದ ಬೆಳಕಿನಲ್ಲಿ ಮೈ ಸುಟ್ಟುಕೊಳ್ಳುವ
ಹಾತೆಗಳು
ಅರೇ!
ಆಯತಪ್ಪಿ ಫಳಾರನೇ
ಕೆಳಗುರುಳಿದಾಗ;
ಬಿದ್ದರೂ, ಗುದ್ದಿದರೂ
ಲೋಹದ ಹಣತೆ
ನೆಗ್ಗಬಹುದು, ಮತ್ತೆದ್ದು
ನಗಲೂಬಹುದು
ಆದರೆ ಚೂರಾದದ್ದು
ಮೆದು ಮೈಯ ಮಣ್ಣಹಣತೆ
- ನಾಗರೇಖಾ ಗಾಂವಕರ
4 thoughts on “ಹಣತೆಗಳು”
ಚೆನ್ನಾಗಿ ದೆ
ತುಂಬಾ ಚಂದದ ಕವಿತೆ
‘ಹಣತೆ’ಯ ರೂಪಕದಲ್ಲಿ, ಬದುಕಿನ ಕಠೋರತೆಯನ್ನು ಬಿಂಬಿಸುವ ಕವನ.
ಸ್ಥಾವರ-ಜಂಗಮದ ಒಟ್ಟಾರೆಯ ಸ್ರೋತದಲ್ಲಿ, ಕಾಠಿಣ್ಯ – ಮಾರ್ದವತೆಗಳ ಪಾರದರ್ಶಿಕತೆಯ ಮೂಲಕ, ಭದ್ರತೆ – ಅಭದ್ರತೆಯ ‘ವಾಸ್ತವ’ವನ್ನು ಚಿತ್ರಿಸುವ ಬಗೆ, ಒಳಗಣ್ಣ ಸೂಕ್ಷ್ಮತೆಗೆ ಮೈದುಂಬಿಸಿದರೆ, ಹೃದಯದ ನೋವು, ಬುದ್ಧಿಗೆ ತಲುಪುತ್ತದೆಯೇ ಎಂಬ ತೀವ್ರವಾಗಿ ಕಾಡುವ ಪ್ರಶ್ನೆ, ಕವನದ ತುಂಬ ಜೀವಂತವಾಗುತ್ತದೆ.
ಸ್ಪಷ್ಟವಾಗಿ ಕಲಕುವ ಈ ದೃಷ್ಟಿ, ಅಭಿಜಾತತೆಗೆ ಹತ್ತಿರವಾದದ್ದು!
ಸುಂದರವಾದ, ಅರ್ಥಗರ್ಭಿತ ಕವಿತೆ