ಪ್ರಶಸ್ತಿಗಳು
ಕನ್ನಡ ಸಾಹಿತ್ಯ ಲೋಕದಲ್ಲಿ ಅಸಂಖ್ಯ ಪ್ರಶಸ್ತಿಗಳಿವೆ. ಪ್ರಶಸ್ತಿಗಳ ಕುರಿತು ಎಷ್ಟು ಮಾತನಾಡಿದರೂ, ಎಷ್ಟು ಬರೆದರೂ ಸಹ ಅದು ಮುಗಿಯುವಂತಹುದಲ್ಲ. ವೀರಾಂಜನೇಯನ ಬಾಲದಂತೆ ಅದು ಬೆಳೆಯುತ್ತಲೇ ಹೋಗುತ್ತದೆ. ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳ ಆಯ್ಕೆಯ ಮಾನದಂಡಗಳು ತುಂಬ ವಿಚಿತ್ರವಾಗಿರುತ್ತವೆ. ಮೂವತ್ತೈದು ವರ್ಷದೊಳಗಿನ ಪ್ರತಿಭಾವಂತ ಯುವಕ/ತಿಯರ ಉತ್ತಮ ಕೃತಿಯೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ೨೦೧೧ನೇ ಸಾಲಿನಿಂದ ಯುವ ಪುರಸ್ಕಾರ ನೀಡುತ್ತಿದೆ. ಇದು ಉದಯೋನ್ಮುಖ ಲೇಖಕ/ಕಿಯರನ್ನು ಪ್ರೋತ್ಸಾಹಿಸಲು ಇರುವ ಒಂದು ಪ್ರಶಸ್ತಿ. ಕನ್ನಡದಲ್ಲಿ ಇದುವರೆಗೆ ಹದಿನಾಲ್ಕು ಜನರಿಗೆ ಯುವ ಪುರಸ್ಕಾರ ದೊರೆತಿದೆ. ಇದರಲ್ಲಿ ಕೆಲವರು ಅರ್ಹರಿದ್ದರೆ, ಕೆಲವರು ಅನರ್ಹರು. ಹಿರಿಯ ಕವಿ ದಿ. ಚಂದ್ರಶೇಖರ ಪಾಟೀಲರು ಹೇಳುವಂತೆ ಕೆಲವರು ಪ್ರಶಸ್ತಿ ಪಡೆದುಕೊಂಡರೆ ಕೆಲವರು ಪ್ರಶಸ್ತಿ ಹೊಡೆದುಕೊಂಡಿದ್ದಾರೆ. ಬೆಂಗಳೂರಿನ ಸಂಭಾವಿತ ಖಳನೊಬ್ಬ ನಡೆಸುವ ಜಗದ್ವಿಖ್ಯಾತ ಪ್ರಕಾಶನವೊಂದರ ಪುಸ್ತಕಗಳಿಗೆ ಮತ್ತೆ ಮತ್ತೆ ಪ್ರಶಸ್ತಿ ದೊರೆತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಲಿಂಗ, ಜಾತಿ, ಪ್ರಾದೇಶಿಕತೆ, ವಶೀಲಿ, ಹಿರಿಯ ಸಾಹಿತಿಗಳ ಸ್ನೇಹ, ಸಂಬಂಧಗಳು ಸಹ ಈ ಪ್ರಶಸ್ತಿಯ ಆಯ್ಕೆಯ ಹಿಂದೆ ತುಂಬ ಚೆನ್ನಾಗಿ ಕೆಲಸ ಮಾಡಿವೆ.
ಇನ್ನೂ ಒಂದು ವಿಶೇಷವೆಂದರೆ ಈ ಯುವ ಪುರಸ್ಕಾರ ಪಡೆದ ನಂತರ ತುಂಬ ಜನ ಲೇಖಕ/ಕಿಯರ ಸೃಜನಶೀಲತೆಯೇ ಬತ್ತಿ ಹೋಗಿದೆ. ಯುವ ಪುರಸ್ಕಾರ ಕೊಡುತ್ತಿರುವುದು, “ನೀವು ಚೆನ್ನಾಗಿ ಬರೆಯಲಾರಂಭಿಸಿದ್ದೀರಿ, ಇನ್ನೂ ಚೆನ್ನಾಗಿ ಬರೆಯಬಲ್ಲಿರಿ…” ಎಂದು ಪ್ರೋತ್ಸಾಹ ನೀಡುವ ದೃಷ್ಟಿಯಿಂದ. ಆದರೆ ಈ ಯುವ ಪುರಸ್ಕಾರ ಪಡೆದ ಕೆಲವರು ಅದು ತಮ್ಮ ಜೀವಮಾನದ ಸಾಧನೆಗೆ ಸಿಕ್ಕ ಪುರಸ್ಕಾರ ಎಂದು ತಪ್ಪು ತಿಳಿದು ಬರವಣಿಗೆಯಿಂದ ವಿಮುಖರಾಗುತ್ತಿರುವುದು ವಿಪರ್ಯಾಸದ ಸಂಗತಿ. ಈ ಉದಯೋನ್ಮುಖರು ಯುವ ಪುರಸ್ಕಾರ ಪಡೆದ ಕೃತಿ ಎಂದು ಪುಸ್ತಕದಲ್ಲಿ ಹಾಕುವುದು ಬಿಟ್ಟು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಎಂದು ಹಾಕುತ್ತಾರೆ!
ಯುವ ಪುರಸ್ಕಾರ ಪಡೆದ ಕೆಲವರ ವರ್ತನೆಯನ್ನು ಸಹಿಸುವುದು ತುಂಬ ಕಷ್ಟ. ಸರಸ್ವತಿ ಸಮ್ಮಾನ್, ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಯರು ಸಹ ಸಂಭ್ರಮಿಸಲಿಕ್ಕಿಲ್ಲ ಆ ರೀತಿ ಸಂಭ್ರಮಿಸುತ್ತಾರೆ. ಕೆಲವರ ಅಬ್ಬರ, ಆರ್ಭಟ, ಅಹಂಕಾರ ನೋಡಿದರೆ ತಮಾಷೆಯೆನಿಸುತ್ತದೆ. ಒಬ್ಬ ಯುವ ಪುರಸ್ಕಾರಿ ಖಾಸಗಿ ಸಂಸ್ಥೆಯೊಂದು ನೀಡುವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಮುನ್ನ ಸಂಬಂಧಪಟ್ಟವರಿಗೆ ಕರೆ ಮಾಡಿ, “ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ನಾನು ನಿಮ್ಮ ಪ್ರಶಸ್ತಿಗೆ ಪುಸ್ತಕ ಕಳಿಸುತ್ತಿದ್ದೇನೆ. ಅಷ್ಟು ದೊಡ್ಡ ಪ್ರಶಸ್ತಿಯೇ ನನಗೆ ದೊರೆತಿದೆಯೆಂದ ಮೇಲೆ ನೀವೂ ಕೊಟ್ಟೇ ಕೊಡುತ್ತೀರಿ…” ಎಂದೆಲ್ಲ ಅಸಡ್ಡಾಳತನದಿಂದ ಮಾತಾಡಿದ. ಇನ್ನೊಬ್ಬ ಯುವ ಪುರಸ್ಕಾರಿ, “ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಕೆ. ಸತ್ಯನಾರಾಯಣ, ಅಮರೇಶ ನುಗಡೋಣಿ ಇವರಿಗೆಲ್ಲ ಎಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ? ಆದರೆ ನನಗೆ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ!” ಎಂದು ಕೊಚ್ಚಿಕೊಂಡು ತನ್ನ ಅಜ್ಞಾನದ ಪರಮಾವಧಿಯನ್ನು ಪ್ರಕಟ ಪಡಿಸಿದ. ಮತ್ತೊಬ್ಬ ಯುವ ಪುರಸ್ಕಾರಿ, “ನನ್ನ ಒಂದೇ ಒಂದು ಕೃತಿಗೆ ಒಂಬತ್ತು ಪ್ರಶಸ್ತಿಗಳು ದೊರೆತಿವೆ. ನಾನು ಕನ್ನಡದ ಮಹತ್ವದ ಲೇಖಕರಲ್ಲೊಬ್ಬ!” ಎಂದು ಅಟ್ಟಹಾಸದಿಂದ ಹೇಳುತ್ತಾನೆ. ಇವನ ಬಯೋಡಾಟಾ ಕವನಸಂಕಲನದ ಹಸ್ತಪ್ರತಿಯಷ್ಟು ದೊಡ್ಡದಿದೆ! ಬರೋಬ್ಬರಿ ಮೂವತ್ತಾರು ಪುಟಗಳಷ್ಟು ಉದ್ದದ, ತನ್ನನ್ನು ತಾನೇ ಹೊಗಳಿಕೊಂಡು ತಯಾರಿಸಿದ ಬಯೋಡಾಟಾ ಅದು! ಮತ್ತೊಬ್ಬ ಯುವ ಪುರಸ್ಕಾರಿ (ಇವನಿಗೆ ಕ್ಯಾಸ್ಟ್ ಇಮ್ಯುನಿಟಿ ಇದೆ!), “ನನಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ನನ್ನ ಎಲ್ಲ ಕೃತಿಗಳು ಭಾರತದ ಎಲ್ಲ ಭಾಷೆಗಳಿಗೆ ಅನುವಾದವಾಗಲಿವೆ. ನನ್ನ ಕೃತಿಗಳನ್ನು ಓದದ ನತದೃಷ್ಟರ ಬಗ್ಗೆ ನನಗೆ ಮರುಕವಿದೆ!” ಎಂದು ಹೇಳುತ್ತಾನೆ. ಮೂವತ್ತೈದರೊಳಗಿನ ಯುವ ಪುರಸ್ಕಾರಿಗಳಲ್ಲಿ ಬರವಣಿಗೆಗಿಂತ ಅಬ್ಬರ, ಆಡಂಬರವೇ ಜಾಸ್ತಿ. ಇಂತಹ ದೊಡ್ಡ ಪ್ರಶಸ್ತಿ ಪಡೆದ ಇವರು ಮೂರ್ಖತನ ಮತ್ತು ಸಣ್ಣತನ ಬಿಟ್ಟು ಬರವಣಿಗೆಯತ್ತ ಗಮನ ಹರಿಸಿದರೆ ಅದು ಅವರಿಗೇ ಒಳಿತು!
ಬಾಲ ಸಾಹಿತ್ಯ ಪುರಸ್ಕಾರ ಮತ್ತು ಅನುವಾದ ಸಾಹಿತ್ಯ ಪುರಸ್ಕಾರ ಪಡೆದವರ ಕಥೆಯೇನೂ ಕಡಿಮೆಯಿಲ್ಲ. ಬಾಲ ಪುರಸ್ಕಾರಿಗಳು ಅರ್ಥಾತ್ ಮಕ್ಕಳ ಸಾಹಿತಿಗಳು ಎಳೆಯರಿಗಾಗಿ ಬರೆಯುವವರಾದ್ದರಿಂದ ಅವರ ಬುದ್ಧಿ ಸಹ ಬಲಿತಿರುವುದಿಲ್ಲ! ಬಾಲ ಸಾಹಿತ್ಯ ಪುರಸ್ಕಾರ ಪಡೆದ ಮಹಿಳೆಯೊಬ್ಬಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕಿ ಎಂದು ರಬ್ಬರ್ ಸ್ಟಾಂಪ್ ಮತ್ತು ವಿಸಿಟಿಂಗ್ ಕಾರ್ಡ್ ಸಹ ಮಾಡಿಸಿದ್ದಾಳೆ! ಕನ್ನಡ ಸಾಹಿತ್ಯ ಲೋಕಕ್ಕೆ ಕಿಡಕಿಯ ಸಳಿಗಳನ್ನು ಮುರಿದು ಒಳ ಪ್ರವೇಶಿಸಿದ ಬ್ಯೂರೋಕ್ರಾಟ್ ಒಬ್ಬನಿಗೆ ನಾಡೋಜ ಎಂದು ಕರೆಯದಿದ್ದರೆ ತುಂಬ ಸಿಟ್ಟು ಬರುವಂತೆ, ಈ ಮಕ್ಕಳ ಬುದ್ಧಿಯ ಲೇಖಕಿಗೂ ಸಹ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕಿ ಎಂದು ಕರೆಯದಿದ್ದರೆ ನಾಡೋಜನಿಗಿಂತ ಹೆಚ್ಚು ಸಿಟ್ಟು ಬರುತ್ತದೆ!
ಅನುವಾದ ಸಾಹಿತ್ಯ ಪುರಸ್ಕಾರ ಪಡೆದ ಪತ್ರಕರ್ತನ ಕಥೆ ತುಂಬ ತಮಾಷೆಯಾಗಿದೆ. ಒಂದೇ ಒಂದು ಕೃತಿಯನ್ನು ಅನುವಾದ ಮಾಡಿ ಪ್ರಶಸ್ತಿ ಪಡೆದ ಈ ಮಹಾಶಯನಿಗೆ ಕೂಡ ಕ್ಯಾಸ್ಟ್ ಇಮ್ಯುನಿಟಿ ಇದೆ. ಕನ್ನಡದ ಪ್ರಬಲ ಎಡಪಂಥೀಯ ಪತ್ರಿಕೆಯೊಂದರಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಈ ವ್ಯಕ್ತಿ ಒಳ್ಳೆಯ ಪತ್ರಕರ್ತ ಅದರಲ್ಲಿ ತಕರಾರಿಲ್ಲ ಆದರೆ ಅನುವಾದ ಪುರಸ್ಕಾರ ದೊರೆತ ವಿಚಾರದಲ್ಲಿ ಖಂಡಿತ ತಕರಾರುಗಳಿವೆ.
ಸದ್ಯಕ್ಕಂತೂ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡಿವೆ. ಲೇಖಕ/ಕಿಯರ ಹೆಸರು ನಿಲ್ಲುವುದು ಬರವಣಿಗೆಯ ಮೇಲೆಯೇ ಹೊರತು ಪ್ರಶಸ್ತಿಗಳ ಮೇಲಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ಸದ್ಯ ಅಬ್ಬರಿಸಿ ಬೊಬ್ಬಿರಿಯುತ್ತಿರುವ ದ್ವಿತೀಯ ದರ್ಜೆಯ ಲೇಖಕ/ಕಿಯರಿಗೆ ಇದು ಖಂಡಿತ ಅರ್ಥವಾಗಲಾರದು. ಸುದೈವವಶಾತ್ ಕನ್ನಡದಲ್ಲಿ ಕಡಿಮೆ ಸಂಖ್ಯೆಯಲ್ಲಾದರೂ ಸಹ ಪ್ರಾಜ್ಞರಾದ ಓದುಗರಿದ್ದಾರೆ. ಅವರು ಇಂತಹ ಬಿ – ಗ್ರೇಡ್ ಸಾಹಿತ್ಯ ಮತ್ತು ಸಾಹಿತಿಗಳನ್ನು ಎಲ್ಲಿಡಬೇಕೋ ಅಲ್ಲಿಯೇ ಇಡುತ್ತಾರೆ.
ಸಾಹಿತ್ಯ ಹಬ್ಬಗಳು
ಸದ್ಯ ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಅಬ್ಬರ ಹೆಚ್ಚಾಗುತ್ತಿದೆ. ಸಾಹಿತ್ಯವನ್ನು ಮಾರಾಟದ ಸರಕನ್ನಾಗಿ ಮಾಡಿರುವ ಮೂರ್ಖ ಮತ್ತು ಶ್ರೀಮಂತ ವ್ಯಾಪಾರಿಗಳ ಜೊತೆಗೆ ಸಾಹಿತಿಗಳು ಸಹ ಕೈ ಮಿಲಾಯಿಸಿರುವುದು ದುರದೃಷ್ಟದ ಸಂಗತಿ. ದೊಡ್ಡ ಮೊತ್ತದ ಹಣವನ್ನಿಟ್ಟು ಪ್ರಶಸ್ತಿಗಳನ್ನು ಕೊಡುವ ಮೂಲಕ ಆರಂಭವಾದ ಈ ಹುನ್ನಾರಕ್ಕೆ ಕನ್ನಡದ ತುಂಬ ಜನ ಲೇಖಕ/ಕಿಯರು ಬಲಿಯಾಗುತ್ತಿರುವುದು ವಿಪರ್ಯಾಸ. ರಿಯಾಲಿಟಿ ಶೋಗಳನ್ನು ಕೂಡ ನಾಚಿಸುವಂತೆ ಈ ಸಾಹಿತ್ಯಕ ಸ್ಪರ್ಧೆಗಳು ನಡೆಯುತ್ತವೆ. ಟಾಪ್ ೨೫, ಟಾಪ್ ೧೫, ಟಾಪ್ ೧೦, ಟಾಪ್ ೫ ಎಂದು ತುಂಬ ನಾಟಕೀಯವಾಗಿ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಒಬ್ಬೊಬ್ಬರನ್ನಾಗಿ ಎಲಿಮಿನೇಟ್ ಮಾಡುತ್ತ ಕೊನೆಗೆ ತಮಗೆ ಬೇಕಾದವರಿಗೆ ಬಹುಮಾನ ನೀಡುತ್ತಾರೆ. ಈ ರಿಯಾಲಿಟಿ ಶೋ ಮತ್ತು ಅದರಲ್ಲಿ ಬಹುಮಾನ ಪಡೆದವರ ನಡುವೆ ಒಳ ಒಪ್ಪಂದ ಆಗಿರುತ್ತದೆಂಬ ಮಾತೂ ಉಂಟು. ಇತ್ತೀಚೆಗೆ ಈ ರಿಯಾಲಿಟಿ ಶೋ ಸಂಘಟಕರು ತಮ್ಮ ರಿಯಾಲಿಟಿ ಶೋ ಕುರಿತು ಕನ್ನಡದ ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕ ಸ್ಪರ್ಧೆ ಎಂದು ಹಾಕಿಕೊಂಡಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಕಳ್ಳ ತಾನು ಕಳ್ಳನಲ್ಲವೆಂದು ಬಿಂಬಿಸಿಕೊಳ್ಳಲು ಪಾಡು ಪಡುವಂತೆ ಕಾಣುವ ಈ ಸಾಲುಗಳು ಏಕಕಾಲಕ್ಕೆ ಅರ್ಥ ಮತ್ತು ಅನರ್ಥ ಎರಡೂ ಉಂಟು ಮಾಡುವಂತಿವೆ.
ಸದ್ಯ ಈ ರಿಯಾಲಿಟಿ ಶೋನ ಮುಂದುವರಿದ ಭಾಗವಾಗಿ ಸಾಹಿತ್ಯ ಹಬ್ಬ ನಡೆಯಲಿದೆ. ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿರುವ ಈ ಸಾಹಿತ್ಯ ಹಬ್ಬದಲ್ಲಿ ಸಾಹಿತ್ಯವೊಂದನ್ನು ಹೊರತು ಪಡಿಸಿ ಉಳಿದದ್ದೆಲ್ಲ ವಿಜೃಂಭಿಸುವ ಲಕ್ಷಣಗಳು ಕಾಣುತ್ತಿವೆ. ಹೊಸ ಸಿನಿಮಾವೊಂದನ್ನು ಪ್ರಚಾರ ಮಾಡುವಂತೆ ಈ ಸಾಹಿತ್ಯ ಹಬ್ಬದ ಕುರಿತು ಪ್ರಚಾರ ಮಾಡಲಾಗುತ್ತಿದೆ. ದ್ವಿತೀಯ ದರ್ಜೆಯ ಲೇಖಕ/ಕಿಯರು, ರಂಗಕರ್ಮಿಗಳು ಮತ್ತು ಇತರರು ಈಗಾಗಲೇ ಟವೆಲ್ಲು, ಕರ್ಚೀಫು ಹಾಕಿ ಸ್ಥಳ ಕಾದಿರಿಸಿದ್ದಾರೆ. ದೂರದೂರಿನ ಮಂದಿ ಸಂಘಟಕರ ಜೊತೆ ಮಾತನಾಡಿ ಸ್ಥಳ ಕಾದಿರಿಸಿದ್ದಾರೆ. ಈ ಸಾಹಿತ್ಯ ಹಬ್ಬವನ್ನು ಇದೇನೋ ಒಂದು ನ ಭೂತೋ ನ ಭವಿಷ್ಯತಿ ಸಂಭವ ಎಂಬಂತೆ ವರ್ತಿಸುವ ಕನ್ನಡದ ಆಸೆಬುರುಕ ಮತ್ತು ಅತೃಪ್ತ ಲೇಖಕ/ಕಿಯರನ್ನು ನೋಡಿದರೆ ವಿಷಾದವಾಗುತ್ತದೆ.
ಈ ಸಾಹಿತ್ಯ ಹಬ್ಬ ಪ್ರಾತಿನಿಧಿಕವೂ ಅಲ್ಲ, ಮಹತ್ವದ್ದಂತೂ ಮೊದಲೇ ಅಲ್ಲ. ಕನ್ನಡದಲ್ಲಿ ಬರೆಯುವ ಇಂಗ್ಲಿಷ್ ಲೇಖಕರೆಂದೇ ಖ್ಯಾತರಾದ ಕಾರ್ಪೋರೇಟ್ ಜಗತ್ತಿನ ತ್ರಿಶಂಕು ಸಾಹಿತಿಗಳೇ ಇಲ್ಲಿ ಮಿಂಚಲಿದ್ದಾರೆ. ಇತ್ತ ಕನ್ನಡ ಲೇಖಕರೂ ಅಲ್ಲದ, ಅತ್ತ ಇಂಗ್ಲಿಷ್ ಲೇಖಕರೂ ಅಲ್ಲದ ಪ್ರಚಾರ ಪ್ರಿಯ ಮತ್ತು ಪ್ರದರ್ಶನ ಪ್ರಿಯ ಲೇಖಕರಿಗೆ ತ್ರಿಶಂಕು ಸಾಹಿತಿಗಳು ಎಂದು ಕರೆಯುತ್ತಾರೆ. ಇಂಗ್ಲಿಷಿನಲ್ಲಿ ಖ್ಯಾತರಾದ ಕನ್ನಡದ ಒಂದಿಬ್ಬರು ಲೇಖಕರು ಇಲ್ಲಿ ಜತೆಯಾಟವಾಡಲಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಬಹುತೇಕ ಮಹತ್ವದ ಸಾಹಿತಿಗಳು ಇಲ್ಲಿರುವುದಿಲ್ಲ. ಬೆಂಗಳೂರು ಕೇಂದ್ರಿತ ಲೇಖಕ/ಕಿಯರು, ಸಂಘಟಕರು ಮತ್ತು ಆಯೋಜಕರಿಗೆ ಹತ್ತಿರವಾದವರು ಇಲ್ಲಿ ಹೆಚ್ಚಾಗಿದ್ದಾರೆ. ಕನ್ನಡ ಸಾಹಿತ್ಯದ ಪರಿಜ್ಞಾನವೇ ಇಲ್ಲದ, ಒಂದು ವರ್ಗಕ್ಕೆ ಸೀಮಿತರಾದ ಜನಪ್ರಿಯ ಮತ್ತು ದ್ವಿತೀಯ ದರ್ಜೆಯ ಲೇಖಕ/ಕಿಯರ ಆಡಂಬರ, ಅಟ್ಟಹಾಸ ಮತ್ತು ಆಟಾಟೋಪಕ್ಕೆ ಇದೊಂದು ತಕ್ಕ ವೇದಿಕೆ. ಸಾಹಿತ್ಯ ಹಬ್ಬದ ಅರ್ಥವನ್ನೇ ಮರು ವ್ಯಾಖ್ಯಾನಿಸುವ ಇದು ಮತ್ತೊಂದು ರಿಯಾಲಿಟಿ ಶೋ! ಕನ್ನಡದ ಬಹುತೇಕ ಜನ ಸಾಹಿತಿಗಳು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಕನ್ನಡದ ತುಂಬ ಜನ ಅತೃಪ್ತ ಲೇಖಕ/ಕಿಯರ ವಿರಾಟ್ ಸ್ವರೂಪವನ್ನು ಇಂತಹ ರಿಯಾಲಿಟಿ ಶೋಗಳಲ್ಲಿ ಕಾಣಬಹುದು. ಇಂತಹ ರಿಯಾಲಿಟಿ ಶೋಗಳು ಏನನ್ನು ಕೊಡದಿದ್ದರೂ ಮನರಂಜನೆಯನ್ನಂತೂ ಖಂಡಿತ ಕೊಡುತ್ತವೆ. ಅಂತಹ ಮನರಂಜನೆಗಾಗಿ ನಾನು ತುಂಬ ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ.
ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಇತ್ತೀಚಿನ ಪ್ರಶಸ್ತಿಗಳು ಮತ್ತು ಸಾಹಿತ್ಯ ಹಬ್ಬಗಳು
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ವಿಕಾಸ ಹೊಸಮನಿ
ಯುವ ವಿಮರ್ಶಕ, ಲಲಿತ ಪ್ರಬಂಧಕಾರ ಮತ್ತು ಸಂಘಟಕರಾದ ವಿಕಾಸ ಹೊಸಮನಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಗಂಗಾ, ಧಾರವಾಡ ಸಂಸ್ಥೆಯ ಸ್ಥಾಪಕರು ಮತ್ತು ಮುಖ್ಯಸ್ಥರು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ಸಂಸ್ಥೆಯ ಸಂಚಾಲಕರು. ಭಾರತೀಯ ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮತ್ತು ಕ್ರಿಕೆಟ್ ಕುರಿತು ಅಪಾರ ತಿಳುವಳಿಕೆಯುಳ್ಳ ವಿಕಾಸ ಹೊಸಮನಿಯವರು ತಮ್ಮ ನೇರ, ನಿಷ್ಠುರ ಮತ್ತು ನಿರ್ಭೀತ ಬರವಣಿಗೆಯಿಂದ ಕನ್ನಡ ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆ.
ಅವರ 'ಗಾಳಿ ಹೆಜ್ಜೆ ಹಿಡಿದ ಸುಗಂಧ' (ವಿಮರ್ಶೆ), 'ಮಿಂಚಿನ ಬಳ್ಳಿ' (ಲಲಿತ ಪ್ರಬಂಧ) ಮತ್ತು 'ಹೃದಯದ ಹಾದಿ' (ಸಂಪಾದಿತ) ಕೃತಿಗಳು ಪ್ರಕಟವಾಗಿವೆ. 'ವೀತರಾಗ' (ವಿಮರ್ಶೆ) ಹಾಗೂ 'ಮಂದಹಾಸ' (ಸಂಪಾದಿತ) ಕೃತಿಗಳು ಶೀಘ್ರದಲ್ಲೇ ಪ್ರಕಟವಾಗಲಿವೆ.
All Posts
3 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ಇತ್ತೀಚಿನ ಪ್ರಶಸ್ತಿಗಳು ಮತ್ತು ಸಾಹಿತ್ಯ ಹಬ್ಬಗಳು”
ತುಂಬಾ ವಸ್ತು ಸ್ಥಿತಿಯನ್ನು ಅನಾವರಣ ಮಾಡಿದ ಲೇಖನ. ಚೆನ್ನಾಗಿದೆ
ಇವತ್ತಿನ ಸಾಹಿತ್ಯಲೋಕದ ಅಪಸವ್ಯವನ್ನ ಸೂಕ್ತವಾಗಿ ಅನಾವರಣ ಮಾಡಿದ ಬರಹ . ಧನ್ಯವಾದಗಳು.
ಪ್ರಶಸ್ತಿಗಳಿಗಾಗಿ ಲಾಬಿ ಮಾಡುವವರೇನೂ ಕಡಿಮೆ ಇಲ್ಲ. ಶಾಸಕ, ಸಂಸದರಷ್ಟೇ ಅಲ್ಲದೆ ಗ್ರಾಮಪಂಚಾಯತಿ ಅಧ್ಯಕ್ಷರ ಮೂಲಕವೂ ಪ್ರಭಾವ ಬೀರುವ ಸಾಹಿತಿ(?)ಗಳಿದ್ದಾರೆ. ಎಲ್ಲೋ ಒಂದೆಡೆ ಸಾಹಿತ್ಯ ದಾರಿತಪ್ಪುತ್ತಿರುವದು ಗಮನಕ್ಕೆ ಬರುತ್ತಿದೆ.