ಕತ್ತಲೊಳಗಿನ ಬೆಳಕು

“ಅಮ್ಮಾ… ಅಮ್ಮಾ… ಮುಕುಂದ ಮೇಷ್ಟ್ರಿಗೆ ಸೌಖ್ಯ ಇಲ್ಲ. ಇವತ್ತು ರಜೆ ಮಾಡಿ ಮನೇಲೇ ಇದ್ದಾರೆ.”
ಹೊರಗಿನಿಂದ ಓಡಿ ಬಂದು ಒಂದೇ ಉಸಿರಿನಲ್ಲಿ ಹೇಳಿದ ಮಗನ ಮಾತು ಕೇಳಿ ರತ್ನಳ ಎದೆ ಬಡಿತ ನಿಂತಂತಾಯಿತು.
“ಏಕೆ ಸುರೇಶ ನೀನು ಇದನ್ನು ಬೆಳಿಗ್ಗೆಯೇ ಹೇಳಲಿಲ್ಲ?”
“ನಾನು ಬೆಳಗ್ಗೆ ಹೋದಾಗ ಅವರು ಹೇಳಲಿಲ್ಲ. ‘ತಲೆ ನೋಯ್ತಾ ಇದೆ. ನಾನಿವತ್ತು ಶಾಲೆಗೆ ಬರೂದಿಲ್ಲ’ ಅಂದ್ರು. ಈಗ ಶಾಲೆಯಿಂದ ಬಂದು ನೋಡಿದ್ರೆ ಕಂಬಳಿ ಹೊದ್ಕೊಂಡು ಮಲಗಿದ್ದಾರೆ. ಸಣ್ಣಕ್ಕೆ ನರಳ್ತಿದ್ರು. ಹಣೆ ಮುಟ್ಟಿ ನೋಡಿದ್ರೆ ಬೆಂಕಿ ಮುಟ್ಟಿದ ಹಾಗಾಯ್ತು. ಗಾಬರಿಯಾಗಿ ಓಡಿ ಬಂದೆ.”
“ಮಗಾ, ನೀನು ಈಗಲೇ ಮೇಷ್ಟ್ರ ಹತ್ರ ಹೋಗು. ಒಂದೇ ಗಳಿಗೆಯಲ್ಲಿ ಅಮ್ಮ ಗಂಜಿ ತಗೊಂಡು ಬರ್ತಾಳೆ ಅಂತ ಹೇಳಿ ಬಾ.”
ಗಂಜಿಯ ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ಹೊಸ್ತಿಲಿನಿಂದ ಹೊರಗೆ ಕಾಲಿಡುವಾಗ ರತ್ನಳ ಎದೆಯೊಮ್ಮೆ ಅಳುಕಿತು. ಏನಾದರಾಗಲಿ ಎಂದುಕೊಂಡು ಮೆಟ್ಟಿಲಿಳಿದು ನಡೆಯತೊಡಗಿದಳು. ಬಾಗಿಲ ಹಿಡಿಯನ್ನು ದೂಡಿದ ಬಳಿಕ ಸಣ್ಣಕ್ಕೆ ಕೆಮ್ಮಿದ್ದರಿಂದಲೋ, ಒಳಗೆ ಬಂದು ಬಾಗಿಲನ್ನು ಮುಚ್ಚಿದ ಸದ್ದು ಕೇಳಿದ್ದರಿಂದಲೋ ಹಾಸಿಗೆಯಲ್ಲಿ ಮಲಗಿದ್ದ ಮುಕುಂದ ಮೇಷ್ಟರ ಮುಖ ಆ ಕಡೆ ಹೊರಳಿತು.
“ಬಾ ರತ್ನಾ. ಇವತ್ತು ನಂಗೆ ಊಟ ಬೇಡ. ಏನೋ ಒಂಚೂರು ಅಸೌಖ್ಯ.”
ಹಾಸಿಗೆಯಿಂದ ಸ್ವಲ್ಪ ದೂರದಲ್ಲಿ ಕುಳಿತ ರತ್ನ “ಏನು ಮೇಷ್ಟ್ರೇ, ನಿಮಗೆ ಇಷ್ಟು ತೊಂದರೆ ಆಗ್ತಿದ್ರೂ ನನ್ನನ್ನು ಕರೆಯಲಿಲ್ಲ ಅಲ್ವಾ? ನಂಗೆ ಹೇಳಿ ಕಳುಹಿಸಬಹುದಿತ್ತಲ್ಲ. ನಿಮಗೆ ನೀವೇ ಶಿಕ್ಷೆ ಕೊಟ್ಕೊಂಡ್ರೆ ಹೇಗೆ ಮೇಷ್ಟ್ರೇ?” ಎನ್ನುತ್ತಿದ್ದಂತೆ ಆಕೆಯ ದನಿಯು ಕಂಪಿಸತೊಡಗಿದ್ದು ಮುಕುಂದ ಮೇಷ್ಟ್ರ ಅರಿವಿಗೆ ಬಂತು.
“ನಂಗೇನಾಗಿದೆ ರತ್ನ? ಮಾಮೂಲಿ ಜ್ವರ ಅಷ್ಟೇ”
“ನಿಮ್ಮ ಬಗ್ಗೆ ನಿಮಗೆ ಯಾವತ್ತೂ ಅಸಡ್ಡೆಯೇ. ನೋಡಿದ್ರೇ ಗೊತ್ತಾಗ್ತದೆ ಇವತ್ತು ಬೆಳಿಗ್ಗೆಯಿಂದ ನೀವೇನೂ ತಿಂದಿಲ್ಲ ಅಂತ. ಬಿಸಿ ಗಂಜಿ ತಂದಿದ್ದೇನೆ. ಕುಡೀರಿ.”
“ನಂಗೇಕೆ ರತ್ನಾ ಇಷ್ಟೆಲ್ಲ ಉಪಚಾರ?” ಎನ್ನುತ್ತಾ ಹಾಸಿಗೆಯ ಮೇಲಿನಿಂದ ನಿಧಾನಕ್ಕೆ ಎದ್ದು, ಆಕೆ ಕೊಟ್ಟ ಗಂಜಿಯನ್ನು ಕುಡಿದ ಬಳಿಕ ಮುಕುಂದ ಮೇಷ್ಟ್ರ ಮೈಯಲ್ಲಿ ತ್ರಾಣ ಬಂದಂತಾಯಿತು. ರತ್ನ ತನ್ನ ಸೆರಗಿನ ಅಂಚಿನಲ್ಲಿ ಕಟ್ಟಿಕೊಂಡು ಬಂದಿದ್ದ ಮಾತ್ರೆಯನ್ನು ಕೊಡುತ್ತಾ ಹೇಳಿದಳು.
“ಮೇಷ್ಟ್ರೇ, ಈಗ ಹಲವು ರೀತಿಯ ಜ್ವರಗಳಿರ್ತವೆ. ಯಾವುದಕ್ಕೆ ಯಾವ ಮದ್ದು ಗೊತ್ತಿಲ್ಲ. ಮನೇಲಿದ್ದ ಜ್ವರದ ಗುಳಿಗೆ ತಗೊಂಡು ಬಂದಿದ್ದೇನೆ. ನಾಳೆ ಬೆಳಗ್ಗೆ ಆಸ್ಪತ್ರೆಗೆ ಹೋಗಿ ಔಷಧಿ ತಗೊಂಡು…”
“ಮದ್ದು ತಗೊಂಡ್ರೆ ಜ್ವರ ಒಂದು ವಾರದಲ್ಲಿ ಗುಣವಾಗ್ತದೆ, ತಗೊಳ್ಳದಿದ್ರೆ ಏಳು ದಿನಗಳಲ್ಲಿ ವಾಸಿಯಾಗ್ತದೆ ಅಂತ ಮಾತೇ ಇದ್ಯಲ್ಲ. ಇರಲಿ, ನೀನು ತಗೊಂಡು ಬಂದದ್ದನ್ನ ಇಲ್ಲಿ ಕೊಡು. ಆದ್ರೆ ನೀನ್ಯಾಕಿಷ್ಟು ತೊಂದ್ರೆ…”
“ತೊಂದ್ರೆ? ಅಪತ್ತಿನಲ್ಲಿ ಒಬ್ರಿಗೊಬ್ರು ಆಗದಿದ್ರೆ ಮನುಷ್ಯರಾಗಿ ಹುಟ್ಟಿ ಏನು ಪ್ರಯೋಜನ? ಈಗ ಒಂದು ಗಂಟೆ ನಿದ್ದೆ ಮಾಡಿ. ಜ್ವರ ಕಮ್ಮಿಯಾಗ್ತದೆ.”
“ಅಪ್ಪಣೆಯಾಗಲಿ” ಎಂದು ನಗುತ್ತಾ ಎದ್ದ ಮುಕುಂದ ಮೇಷ್ಟ್ರು ಹಾಸಿಗೆಯಲ್ಲಿ ಮಲಗಿದರು. ಅವರ ದೇಹಕ್ಕೆ ಕಂಬಳಿಯನ್ನು ಹೊದೆಸಿದ ಬಳಿಕ ರತ್ನಳ ಕೈ ಮೇಷ್ಟ್ರ ಹಣೆಯನ್ನು ನೇವರಿಸಿತು. ಮೇಷ್ಟ್ರು ತುಸು ವಿಚಲಿತರಾದರೂ ಪ್ರತಿಭಟಿಸಲಿಲ್ಲ. ಒದ್ದೆ ಬಟ್ಟೆಯ ಪಟ್ಟಿಯನ್ನು ಹಣೆಗಿರಿಸಿದ್ದರ ಪರಿಣಾಮವಾಗಿ ಅವರು ನಿದ್ದೆಗೆ ಶರಣಾದಾಗ ರತ್ನ ಅಲ್ಲಿ ಉರಿಯುತ್ತಿರುವ ದೀಪವನ್ನೇ ನೋಡತೊಡಗಿದಳು. ಬೆಳಕಿನಲ್ಲಿ ನೆನಪುಗಳು ನಿಚ್ಚಳವಾದವು.

ರತ್ನ ಬೆಳಗ್ಗೆ ಎದ್ದು ಹೊರಗೆ ಬಂದಾಗ ನಿಮ್ಮ ಮನೆಯ ಎದುರು ಸಾಮಾನುಗಳಿಂದ ಕೂಡಿದ ಆಟೋರಿಕ್ಷ ನಿಂತದ್ದು ಕಾಣಿಸಿತು. ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತ ಆ ಮನೆಯನ್ನು ಬಿಟ್ಟು ಹೋದ ವಿಶ್ವೇಶ್ವರ ಭಟ್ಟ ಮತ್ತು ಸಾವಿತ್ರಮ್ಮ ದಂಪತಿಗಳ ನೆನಪಾಗಿ ಬೇಸರ ಹೆಚ್ಚಾಯಿತು. ರಿಕ್ಷಾ ಹೋದ ಬಳಿಕ ರತ್ನ ಕೊಡಪಾನವನ್ನು ಹಿಡಿದುಕೊಂಡು ಬಾವಿಯ ಕಡೆಗೆ ಹೊರಟಾಗ ಮರದ ನೆರಳಲ್ಲಿ ಯಾರೋ ನೀರು ಸೇದುತ್ತಿರುವುದು ಕಾಣಿಸಿತು. ಬೆವರಿ ಮಿಂಚುವ ಬೆನ್ನು, ಅದನ್ನು ಅರ್ಧಕ್ಕೆ ವಿಭಾಗಿಸುವಂತೆ ನೇತಾಡುತ್ತಿದ್ದ ಜನಿವಾರ, ಹುರಿಹಾಕಿದಂತೆ ಇದ್ದ ತೊಡೆ-ರಟ್ಟೆ ನೋಡಿ ಆಕೆ ಅಲ್ಲೇ ನಿಂತುಬಿಟ್ಟಳು. ನೀರು ಸೇದಿದ ಬಳಿಕ ಆತನು ಕೊಡಪಾನವನ್ನು ಹಿಡಿದು ತಿರುಗಿದ. ಒಂದೊಂದೇ ಹೆಜ್ಜೆಯಿಡುತ್ತಾ ಹತ್ತಿರ ಬಂದು ಕೇಳಿದ. “ರತ್ನ ಅಲ್ಲವೇ?”
ಕಿಡಿ ತಗುಲಿದಂತೆ ಎಚ್ಚರಗೊಂಡ ಅವಳು ಸಂಕೋಚದಿಂದ “ಹೌದು” ಎಂದಳು ಅಚ್ಚರಿಯನ್ನು ತೋರಿಸಿಕೊಳ್ಳದೆ.
“ವಿಶ್ವೇಶ್ವರ ಭಟ್ರು ನನ್ನ ಚಿಕ್ಕಪ್ಪ. ಅವರು ಹೇಳಿದ್ದರು ನಿಮ್ಮ ಬಗ್ಗೆ”
“ಹೌದ? ಹತ್ತುಗಂಟೆಯಾಯಿತಲ್ಲ. ಮೇಷ್ಟ್ರಿಗೆ ತಡವಾಯಿತಾ ಇವತ್ತು?”
“ಇಲ್ಲ. ಇವತ್ತು ಆದಿತ್ಯವಾರ ಅಲ್ವಾ?”
“ಓಹ್! ನಾನು ಮರೆತಿದ್ದೆ. ಬೆಳಗ್ಗಿನ ತಿಂಡಿ ಆಯಿತಾ?”
“ಹೂಂ. ತಿಂಡಿ ಮುಗಿಸಿದ ಕೂಡಲೇ ಮನೆಯಿಂದ ಹೊರಟದ್ದು”
“ಇರಿ, ನಾನು ಚಾ ಮಾಡಿ ತರ್ತೇನೆ”
“ಆಯಿತು. ನಿಮ್ಮ ಕೊಡಪಾನ ಇತ್ತ ಕೊಡಿ. ನೀರು ಸೇದಿ ಕೊಡ್ತೇನೆ.”


“ಅರೆ! ಇದೇನು ರತ್ನ? ನನ್ನ ಮನೆಯ ಸ್ವರೂಪವನ್ನೇ ಬದಲಿಸಿಬಿಟ್ಟೆಯಲ್ಲ!”
“ನಿನ್ನೆ ಚಾ ತಗೊಂಡು ಬಂದಾಗ ನಿಮ್ಮ ಬಟ್ಟೆ ಬರೆ, ಪಾತ್ರೆ ಪದಾರ್ಥಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು. ಹೊಸತಾಗಿ ಬಂದದ್ರಿಂದ ಮನೆಯನ್ನು ವ್ಯವಸ್ಥಿತವಾಗಿರಿಸಲು ಸಾಧ್ಯವಾಗಿಲ್ಲ ಅಂದ್ಕೊಂಡೆ. ಮಧ್ಯಾಹ್ನ ಎರಡು ಗಂಟೆಗೆ ಕೆಲಸ ಆರಂಭಿಸಿದ್ರೂ ಮುಗೀವಾಗ ಐದು ಗಂಟೆ.”
“ನಾನು ಬರೋವರೆಗೆ ಕಾಯಬಹುದಿತ್ತು. ಹೊರಲಾರದ ವಸ್ತುಗಳನ್ನು ಎತ್ತಿಡಲು ಅಥವಾ ನೀನು ಹೇಳಿದ ವಸ್ತುಗಳನ್ನು ತಂದುಕೊಡಲು ನೆರವಾಗಬಹುದಿತ್ತು.”
“ಪರ್ವಾಗಿಲ್ಲ ಮೇಷ್ಟ್ರೇ. ಇದಕ್ಕಾಗಿ ಹೆಚ್ಚೇನೂ ಕೊಡ್ಬೇಕಾಗಿಲ್ಲ” ಎನ್ನುತ್ತಾ ರತ್ನ ಮುಗುಳುನಕ್ಕಾಗ ಮೇಷ್ಟ್ರ ಮುಖದಲ್ಲಿ ಅದರ ಪ್ರತಿಬಿಂಬ ಮೂಡಿತು.
“ಅಂತೂ ಮನೆಗೊಂದು ಹೊಸ ಕಳೆ ಬಂತು.”
ಆಕೆ ಸುಮ್ಮನಿದ್ದಳು.
“ಏನು ರತ್ನಾ? ಮನೆಗೆ ಹೊಸ ಕಳೆ ನೀಡಿದ ನಿನ್ನ ಮುಖದಲ್ಲಿ ಕಳೆಯಿಲ್ಲವಲ್ಲ. ಹೊಗಳಿದಾಗಲೂ ಸಂತೋಷವಿಲ್ಲವಲ್ಲ.”
“ನನ್ನ ಜೀವನದಲ್ಲಿ ಸಂತೋಷವಿತ್ತು. ನೆಮ್ಮದಿಯಿತ್ತು. ಆದರೆ ಅದೆಲ್ಲ ಈಗ ಮಾಯವಾಗಿವೆ. ಉಳಿದದ್ದು ಒಂದೇ ಪ್ರಶ್ನೆ- ದೇವರು ನನ್ನ ಬದುಕನ್ನು ಏಕೆ ಕತ್ತಲಾಗಿಸಿದ?”
“ನಾನು ಮಾತಾಡ್ತಿರುವಾಗ ನೀನು ಆ ಪ್ರಶ್ನೆಗೆ ಉತ್ತರ ಹುಡುಕ್ತಿದ್ದೆಯಾ?”
“ಆಗ ಯೋಚಿಸುತ್ತಿದ್ದುದು ಕಳೆದುಹೋದ ನನ್ನ ಬದುಕಿನ ಬಗ್ಗೆ. ಹೇಗೆ ಮರೆಯಲಿ ಅದನ್ನು? ತಪ್ಪಲಲ್ಲಿರುವ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು, ನನ್ನ ಗಂಡ…”
ಎನ್ನುತ್ತಿದ್ದಂತೆ ಅವಳ ಮುಖದ ಮೇಲೆ ಕೆಲವು ಗೆರೆಗಳು ಮೂಡಿದವು. ಇನ್ನೇನೋ ಹೇಳುವಂತೆ ತುಟಿ ಅಲುಗಿತು. ಹುಬ್ಬುಗಳು ಸಂಕುಚಿಸಿ ಒಂದನ್ನೊಂದು ಸೇರಿಕೊಂಡವು. ಬಿಕ್ಕಳಿಸಿ ಅಳುವಾಗ ಆಗುವಂತೆ ಕೆನ್ನೆಗಳು ಅರಳಿದವು.
“ಗಂಡ ಹೋದ. ಒಂದೇ ಆಸ್ತಿಯಾಗಿದ್ದ ಮನೆಯೂ ಹೋಯ್ತು. ಅತ್ತೆಯೋರು ಗಂಭೀರ ಗಾಯಗೊಂಡ್ರು. ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಿದ್ವಿ. ಮೊದಲ ದಿನ ಅವರನ್ನು ಪರೀಕ್ಷಿಸೋದ್ರಲ್ಲೇ ಕಾಲ ಕಳೀತು. ‘ನೋಡಮ್ಮ, ಹೊರಗಿನ ಗಾಯಗಳಿಗೆ ಪಟ್ಟಿ ಕಟ್ಟಿದೇವೆ. ಆದರೆ ಒಳಗೆ ಎಲ್ಲೆಲ್ಲ ಗಾಯವಾಗಿದೆ ಅಂತ ಗೊತ್ತಾಗ್ತಾ ಇಲ್ಲ’ ಎಂದು ನಾಲ್ಕು ದಿನ ಇರಿಸಿಕೊಂಡ್ರು. ದಾದಿಗಳು ಆಗಾಗ ಬಂದು ಮದ್ದು ನುಂಗಿಸಿ, ‘ಇದೆಲ್ಲ ತಗೊಂಡ್ಬಾ’ ಅಂತ ಚೀಟಿ ಬರ್ದು ಕೊಡ್ತಿದ್ರು. ತಂದಿದ್ದ ಹತ್ತು ಸಾವಿರದಲ್ಲಿ ಇನ್ನೂರೈವತ್ತು ಮಾತ್ರ ಉಳೀತು. ಕೊನೆಗೆ ಅವರು ‘ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ಬೇರೇನು ತೊಂದ್ರೆ ಅಂತ ಗೊತ್ತಾಗ್ತಿಲ್ಲ. ನಾಳೆಯೇ ಹಣ ಕಟ್ಟಿ ಅತ್ತೆಯೋರನ್ನು ಕರ್ಕೊಂಡು ಹೋಗ್ಬಹುದು’ ಅಂದಾಗ ದಟ್ಟ ಕಾಡಲ್ಲಿ ಹುಲಿಗಳ ನಡುವೆ ಸಿಕ್ಕಿ ಹಾಕ್ಕೊಂಡ ಪರಿಸ್ಥಿತಿ. ವಿಶ್ವೇಶ್ವರ ಭಟ್ರಲ್ಲಿ ಹೇಳಿದಾಗ ಅವರು ಬ್ಯಾಂಕಿನಿಂದ ಹಣ ತೆಗೆದು ಕೊಟ್ರು. ಅತ್ತೆಯೋರ ಗಾಯ ಒಣಗಿದ್ರೂ ಮಾನಸಿಕವಾಗಿ ಕುಗ್ಗಿ ಹೋಗಿದ್ರು. ಉತ್ಸಾಹ, ಲವಲವಿಕೆಗಳನ್ನು ಕಳಕೊಂಡು, ಬಡಬಡಿಸುತ್ತಾ ಮನೆಯ ಮೂಲೇಲಿ ಕೂತುಕೊಳ್ತಿದ್ರು. ಮಾತಿಗೆ ಉತ್ತರಿಸದೆ ಪಿಳಿಪಿಳಿ ಕಣ್ಣು ಬಿಡ್ತಾ ಕಣ್ಣೀರು ಹಾಕ್ತಿದ್ರು. ನೀವು ಇಲ್ಲಿಗೆ ಬರೋಕ್ಮುಂಚೆ ತೀರಿಹೋದ್ರು. ಮುಂದೇನು ಅಂತ ಗೊತ್ತಾಗದೆ ರೆಕ್ಕೆ ಕಿತ್ತ ಹಕ್ಕಿಯ ಹಾಗೆ ಒದ್ದಾಡ್ತಿದ್ದಂತೆ ಸಾವಿತ್ರಮ್ಮ ‘ಮಗಳೇ, ದಿನಾ ಅತ್ತೂ ಕರೆದೂ ಮಾಡಿ, ಹೋದವ್ರನ್ನು ತಗೊಂಡು ಬರ್ತೀಯೇನು?’ ಅಂತ ಕೇಳಿದ್ರು. ‘ಎರಡು ವರ್ಷಗಳ ಹಿಂದೆಯಷ್ಟೇ ಹಾಕಿದ ಬಳೆ ಒಡೆದಾಯ್ತು. ನನ್ನ ಹಣೆಯಂತೆ ಬದುಕೂ ಬರಿದಾಯ್ತು. ಏನು ಮಾಡಲಿ ತಾಯಿ?’ ಎನ್ನುತ್ತಾ ಅವರಿಗೆ ತೆಕ್ಕೆ ಬಿದ್ದು ಅತ್ತು ಬಿಟ್ಟೆ. ‘ನಿಂಗೆ ಬೇಕಾದ್ದು ತಲೆಗೊಂದು ಸೂರು. ಒಂದು ವರ್ಷದ ಮಗನಿಗೆ ಆಸರೆ. ನನ್ನಪ್ಪ ಮುಖ್ಯೋಪಾಧ್ಯಾಯರಾಗಿದ್ದಾಗ ಮನೆಯ ಹತ್ತಿರವೇ ಆಫೀಸ್ ರೂಂ ಕಟ್ಟಿದ್ರು. ಅವರು ತೀರಿಕೊಂಡ ಬಳಿಕ ಖಾಲಿ ಬಿದ್ದ ಆ ಕೊಠಡಿಗೆ ಸುಣ್ಣ ಬಣ್ಣ ಹಚ್ಚಿಟ್ಟಿದ್ದೇನೆ. ಅದನ್ನೇ ನಿನ್ನ ಮನೆಯಾಗಿ ಉಪಯೋಗಿಸು. ಬಾಡಿಗೆ ಕೊಡ್ಬೇಕಾಗಿಲ್ಲ’ ಅಂತ ವಿಶ್ವೇಶ್ವರ ಭಟ್ರು ಹೇಳಿದಾಗ ಜೀವ ಬಂದಂತಾಯ್ತು. ‘ತಂದೆ, ನಿಮ್ಮ ಈ ಉಪಕಾರವನ್ನು ಏಳೇಳು ಜನ್ಮಕ್ಕೂ ಮರೆಯೋದಿಲ್ಲ’ ಎನ್ನುತ್ತಾ ಅವರ ಕಾಲಿಗೆ ಬಿದ್ದೆ. ಸಾವಿತ್ರಿಮ್ಮ ನನ್ನನ್ನು ಹಿಡಿದೆತ್ತಿ ಎದೆಗಪ್ಪಿಕೊಂಡು ‘ಮಗಳೇ, ಹೀಗೆಲ್ಲ ಮಾಡ್ಬಾರ್ದು. ನಿನ್ನ ತಂದೆತಾಯಿ ಜೀವಂತ ಇರ್ತಿದ್ರೆ ನಿನ್ನ ಬೀದಿಪಾಲಾಗಲು ಬಿಡ್ತಿದ್ರಾ?’ ಅಂದರು.”
“ಅವರು ಹಾಗೇ. ಒಳ್ಳೆಯೋರಿಗೆ ಕಷ್ಟ ಬಂದ್ರೆ ಜಾತಿಮತ ನೋಡದೆ ಸಹಾಯ ಮಾಡೋರು.”
“ಹೌದು. ಆದರೆ ಎಲ್ರೂ ಹಾಗಿರೋದಿಲ್ಲ. ಒಂಟಿ ಹೆಣ್ಣು ಅಂದ್ರೆ ಕೆಲವರಿಗೆ ಎಂಥ ಆಸಕ್ತಿ. ನೀರು ಸೇದಲು, ಅಂಗಡಿಗೆ ಸಾಮಾನು ಕೊಳ್ಳಲು ಹೋಗುವಾಗ ಒಂಥರಾ ನೋಡ್ತಿದ್ರು. ಬಸ್ಸಿನಲ್ಲಿ, ಬಸ್ಸು ನಿಲ್ದಾಣದಲ್ಲಿ, ಸಂತೆಯಲ್ಲಿ, ಸರತಿ ಸಾಲಿನಲ್ಲಿ ತುಂಬ ಹತ್ತಿರ ನಿಂತ ಗಂಡಸರ ಉಸಿರು ನನ್ನ ಕೊರಳ ಹಿಂದಕ್ಕೆ ತಾಗ್ತಿತ್ತು. ಮಗುವನ್ನು ಎತ್ತಿಕೊಂಡು ಸರಸರ ಮನೆ ಸೇರಿದ ಮೇಲೆಯೇ ನೆಮ್ಮದಿಯ ಉಸಿರು ಬಿಡ್ತಿದ್ದೆ. ಆದರೂ ರಾತ್ರಿ ಹೊತ್ತಲ್ಲಿ ಹೆದ್ರಿಕೆ. ಎಲೆಗಳ ಸಪ್ಪಳವಾದ್ರೂ ಎಚ್ಚೆತ್ತು ಗಮನೆಲ್ಲ ಅತ್ತಲೇ. ಒಂದು ದಿನ ವಿಶ್ವೇಶ್ವರ ಭಟ್ರು ‘ನಮ್ಮೂರ ಶಾಲೆಗೆ ಮುಕುಂದ ಮೇಷ್ಟರು ವರ್ಗವಾಗಿ ಬಂದಿದ್ದಾರೆ. ಅವನ ತಂದೆಯೂ ನಾನೂ ಅಣ್ಣತಮ್ಮಂದಿರು. ಆದ್ದರಿಂದ ನಾವು ಮೇಷ್ಟ್ರಿಗೆ ನಮ್ಮ ಮನೆಯನ್ನು ಬಿಟ್ಟುಕೊಟ್ಟು ಬೆಂಗಳೂರಿನಲ್ಲಿರೋ ಮಗನ ಮನೆಗೆ ಹೋಗ್ತೇವೆ’ ಎಂದಾಗ ಕಂಗಾಲಾಗಿ ಬಿಟ್ಟೆ. ‘ಅಯ್ಯೋ! ನೀವ್ಯಾರೂ ಜೊತೆಗಿಲ್ಲದೆ…’ ಎನ್ನುತ್ತಿದ್ದಂತೆ ‘ಚಿಂತೆ ಮಾಡ್ಬೇಕಾದ್ದಿಲ್ಲ. ಮೇಷ್ಟ್ರು ತುಂಬ ಒಳ್ಳೆಯವರು. ಮುಜುಗರ ಸ್ವಭಾವದೋರು. ನೀನು ಎರಡು ಹೊತ್ತು ಅಡುಗೆ ಮಾಡಿ ಕೊಟ್ರೆ ತಿಂಗಳಿಗೆ ಸಾವಿರ ಕೊಡ್ತಾರೆ. ಈಗಿರೋ ಪರಿಸ್ಥಿತೀಲಿ ನಿಮಗೆ ಸಹಾಯವೂ ಆಗ್ತದೆ’ ಅಂತ ಹೇಳಿದಾಗ ಮುಳುಗುತ್ತಿದ್ದವಳಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿ ‘ಆಯ್ತು ಸ್ವಾಮೀ. ಆದರೆ ನಾನು ಮಾಡಿದ ಅಡುಗೆ ಅವರಿಗೆ ಒಪ್ಪಿಗೆಯಾದೀತಾ?’ ಅಂತ ಪ್ರಶ್ನಿಸಿದಾಗ ‘ಅವರೂ ನಮ್ಮ ಹಾಗೆ ಹಳ್ಳಿಯಲ್ಲಿ ಹುಟ್ಟಿ ಬೆಳೆದೋರು. ಜಾತಿಭೇದ ಮಾಡೋರಲ್ಲ. ನಾಳೆಯಿಂದ ಅವರಿಗೆ ಊಟದ ಏರ್ಪಾಡು ಮಾಡಿಕೊಡು’ ಅಂದ್ರು.”
“ಬೇಸರವಾಗಿರಬೇಕು ನಿನಗೆ. ಸಿಟ್ಟೂ ಬಂದಿರಬೇಕು ಅವರ ಜಾಗಕ್ಕೆ ಇವ ಎಲ್ಲಿಂದ ವಕ್ಕರಿಸಿದ ಅಂತ.”
“ಬೇಸರವಾಗದಿದ್ದೀತೇ? ನಿಮ್ಮ ಬಗ್ಗೆ ಕೇಳಿದಾಗ ಎಷಾದ್ರೂ ಬ್ರಾಹ್ಮಣನಲ್ಲವೇ? ತೆಳ್ಳಗಿನ ವ್ಯಕ್ತಿಯಾಗಿರಬಹುದು ಅಂತ ಭಾವಿಸಿದ್ದೆ. ವಿಶ್ವೇಶ್ವರ ಭಟ್ಟ ದಂಪತಿಗಳ ಜಾಗವನ್ನು ತುಂಬಲು ನಿಮ್ಮಿಂದ ಸಾಧ್ಯವಾಗದು ಅಂದುಕೊಂಡಿದ್ದೆ.”
“ಈಗೇನಾಯ್ತು?”
“ನೀವು ನಿಮ್ಮ ಚಿಕ್ಕಪ್ಪನ ಪ್ರತಿರೂಪವೇ.”
“ಆಗಲಿ. ಕೃತಾರ್ಥನಾದೆ. ನಾನಿನ್ನು ಸ್ನಾನಕ್ಕೆ ಹೋಗಲೇ?”
“ಸರಿ. ಅಷ್ಟು ಹೊತ್ತಿನಲ್ಲಿ ನಾನು ದೇವರಿಗೆ ದೀಪ ಹಚ್ಚಿ ಊಟಕ್ಕಿಡುತ್ತೇನೆ.”

ದೀಪ ಹಚ್ಚುವ ಸಮಯ. ಬಾಗಿಲನ್ನು ಮೆಲ್ಲಗೆ ಮುಂದೆ ತಳ್ಳಿ ಮೇಷ್ಟ್ರು ಒಳಗೆ ಬಂದರು. ಮನೆಯ ಮೂಲೆಯಲ್ಲಿ ರತ್ನ ದೀಪವನ್ನು ಹಚ್ಚಿದ್ದಳು. ಆ ಪ್ರಕಾಶದಲ್ಲಿ ಆಕೆಯ ಮುಖ ಬೆಳಗುತ್ತಿತ್ತು. ಆಕೆ ಮಗನ ಕೈ ಮುಗಿಸಿ ದೇವರ ಮುಂದೆ ಕೂರಿಸಿದ್ದಳು. ನಂತರ ಆಕೆ ದೇವರಿಗೆ ವಂದಿಸಿದಳು. ಅವಳ ಮುಖದ ಮೇಲಿನ ಸಾತ್ವಿಕ ಭಾವವನ್ನು ಕಂಡು ಮೇಷ್ಟ್ರ ಮೈಯಲ್ಲಿ ಸಂತಸದ ತೆರೆಗಳೊಂದಿಗೆ ಒಂದು ರೀತಿಯ ಪುಳಕವೆದ್ದಿತು. ಸಂಸಾರದ ದುಃಖಗಳನ್ನು ಸಹಿಸುವ ಶಕ್ತಿ ಈಕೆಗೆ ಎಲ್ಲಿಂದ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ದೊರಕಿತ್ತು. ಸುರೇಶ ಮೋರೆ ಉಬ್ಬಿಸಿ ಕುಳಿತಿದ್ದ. ಅವನತ್ತ ತಿರುಗಿ ಆಕೆ ಮುದ್ದಿನಿಂದ ಹೇಳಿದಳು. “ಹೇಳು ಮಗಾ.”
“ಊಹೂಂ. ಇವತ್ತು ಬೇಡ. ನಾಳೆ ಹೇಳ್ತೇನೆ ಎರಡು ಸಲ.”
“ಇವತ್ತೇಕೆ ಬೇಡ?”
“ಮುಕುಂದ ಮೇಷ್ಟ್ರು ಒಳ್ಳೆ ಕತೆ ಪುಸ್ತಕ ಕೊಟ್ಟಿದ್ರು. ಅದನ್ನು ಓದುತ್ತಿದ್ದಾಗ ನೀನು ಹಿಡಿದೆಳೆದು ತಂದೆ. ಅದನ್ನು ಓದಲು ಬಿಡು ಮೊದಲು.”
“ಆಹಾ! ಅದೆಲ್ಲ ಆಗೋದಿಲ್ಲ.”
ಅಷ್ಟರಲ್ಲಿ ಮೇಷ್ಟ್ರು ಅವನನ್ನು ಕರೆದರು. “ಸುರೇಶಾ”
ಆತ ಅಮ್ಮನ ಮಡಿಲಿನಿಂದ ಎದ್ದು ಚೆಂಡಿನಂತೆ ಪುಟಿದು ಬಂದ. ಅವಳು ತುಂಟಕಣ್ಣಿನಿಂದ ಮೇಷ್ಟ್ರನ್ನು ನೋಡಿದಳು. ಅದರಲ್ಲಿ ಕೋಪ ಪ್ರೀತಿಗಳೆರಡೂ ಬೆರೆತಿದ್ದವು.
“ಅವನನ್ನು ಮುದ್ದು ಮಾಡಿ ಹಾಳು ಮಾಡಿದ್ದೀರಿ ನೀವು.” ನಂತರ ಮಗನ ಕಡೆ ನೋಡುತ್ತಾ ಅಂದಳು. “ಅವರಿನ್ನೂ ಏನೂ ತಿಂದಿಲ್ಲ. ಅಷ್ಟರಲ್ಲೆ ನೀನು ಅವರ ಮೈಗೆ ಅಂಟಲು ಸುರು ಮಾಡಿದೆ. ಹೊರಗಿನಿಂದ ದಣಿದು ಬಂದಿರುವಾಗ…”
“ಮಕ್ಕಳು ಅಂದರೆ ಹಾಗೇ. ಚಿಕ್ಕವಳಿದ್ದಾಗ ನೀನೂ ಹೀಗೆ ಮಾಡಿರಬಹುದು.”
ತಾಯಿ ಸೋತಳೆಂಬ ಕಲ್ಪನೆಯಿಂದ ಸುರೇಶ ಚಪ್ಪಾಳೆ ತಟ್ಟಿದ. ಆಕೆ ನಗುತ್ತಾ ಒಳಗೆ ಹೋದಳು. ತಟ್ಟೆ ತುಂಬಾ ಮಲ್ಲಿಗೆಯ ಮೊಗ್ಗುಗಳಂಥ ಅನ್ನ ತಂದು ಮೇಷ್ಟ್ರ ಮುಂದಿಟ್ಟು, ಅವರೆದುರು ಕುಳಿತು ಸಾಂಬಾರು ಬಡಿಸುತ್ತಾ ಹೇಳಿದಳು.
“ತಂದೆ ತಾಯಿಯರನ್ನು ಕಳೆದುಕೊಂಡು ದಾಯಾದಿಗಳ ಮನೆಯಲ್ಲಿ ಬೆಳೆದವಳು ಯಾರ ಹತ್ತಿರ ತುಂಟಾಟ ಮಾಡೋದು ಮೇಷ್ಟ್ರೇ? ಪ್ರೀತಿಯಿಂದ ಕತೆ ಪುಸ್ತಕ ಕೊಡೋರು ಯಾರಿದ್ದರು? ನನ್ನ ಮಗನ ಪಾಲಿಗೆ ಹಾಗಾಗಿಲ್ಲವಲ್ಲ ಎನ್ನೋದೊಂದು ಸಮಾಧಾನ. ‘ಈ ಕತೆ ಪುಸ್ತಕ ಯಾರು ಓದುತ್ತೀರಿ?’ ಅಂತ ನೀವು ಕೇಳಿದಾಗ ಯಾರೂ ಕೈಯೆತ್ತದಿದ್ದರಿಂದ ಮಗ ಮೆಲ್ಲಗೆ ಎದ್ದು ನಿಂತನಂತೆ ಅಲ್ವಾ? ಮಗ ಹಾಗೆ ಹೇಳಿದ. ಅವನನ್ನು ಮುದ್ದು ಮಾಡಿ ಹಾಳು ಮಾಡಿದ್ರಿ ಅಂದದ್ದು ಕೀಟಲೆಗೆ ಅಷ್ಟೇ”

“ರತ್ನಾ ರತ್ನಾ”

ಆಕೆ ಹೆದರಿ ಎಚ್ಚೆತ್ತಳು. ಯಾರದು ನಿದ್ದೆಯಲ್ಲಿ ಕೂಗಿದ್ದು? ಆಕೆ ಕಣ್ಣುಗಳನ್ನು ತೆರೆದಳು. ನನಗೆ ಕನಸಿನಲ್ಲಿ ಹಾಗೆ ಕೇಳಿಸಿತೇ? ಇಲ್ಲ! ಆ ದನಿಯಿಂದಾಗಿ ನನ್ನ ಮೈಯಲ್ಲಿ ಮುಳ್ಳುಗಳು ಎದ್ದಿವೆ. ಯಾರೋ ಕೂಗಿಕೊಂಡದ್ದು ನಿಜ. ಕಣ್ಣುಗಳನ್ನು ಹೊಸಕಿಕೊಂಡು ನೋಡಿದಳು. ಓಹ್! ನಾನೀಗ ಮೇಷ್ಟ್ರ ಜೊತೆಯಲ್ಲಿದ್ದೇನೆ. ಹೌದು. ಜ್ವರ ಬಂದಿತ್ತಲ್ಲ. ಅವರ ಹತ್ತಿರ ಕುಳಿತುಕೊಂಡು ಏನೇನೋ ಯೋಚನೆ ಮಾಡುತ್ತಾ ಜೊಂಪು ಹತ್ತಿ ನಿದ್ದೆ ಹೋಗಿಬಿಟ್ಟಿದ್ದೆ. ಅವಳಿಗೆ ಮಿಂಚು ಹೊಡೆದಂತಾಯಿತು. ಮೈಯಲ್ಲಿ ಮತ್ತೆ ಮುಳ್ಳುಗಳೆದ್ದವು. ಅವರು ನಿದ್ದೆ ಮಾಡಿದ್ದಾರೆಯೇ ಎಂದು ನೋಡಲು ಅವರತ್ತ ಬಾಗಿದಳು. ಕಣ್ಣುಗಳು ತೆರೆದಿದ್ದವು. ಆಕೆಯನ್ನು ನೋಡಿದ ಕೂಡಲೇ ನಡುಗುವ ದನಿಯಲ್ಲಿ “ರತ್ನಾ” ಎಂದು ಕರೆದು ಅವಳ ಕೈಯನ್ನು ಹಿಡಿದರು. ಅವು ಒದ್ದೆಯಾಗಿವೆ ಎಂದು ಆಕೆಗೆನಿಸಿತು. ಬೆವರು ಬಿಟ್ಟಿತ್ತು.
“ಈ ಚಳಿಗಾಲದಲ್ಲೂ ಇಷ್ಟು ಬೆವರುವುದೆಂದರೆ”
ಅವರು ಹಾಗೆನ್ನುತ್ತಿದ್ದಂತೆ ಆಕೆಯು ಅವರ ಬಾಯಿಯ ಮೇಲೆ ಬೆರಳಿಟ್ಟಳು.
“ತಿಳಿದೋ ತಿಳಿಯದೆಯೋ ಅಮಂಗಳ ಮಾತಾಡಬಾರದು. ನಿಮಗೆ ನಿದ್ದೆ ಬರೋವರೆಗೆ ನಾನಿಲ್ಲೇ ಕೂತುಕೊಳ್ತೇನೆ ಆಯ್ತಾ?”
“ಮಗ?”
“ಇಲ್ಲಿಗೆ ಬರಹೇಳಿದ್ದೇನೆ. ಪಕ್ಕದ ಕೋಣೆಯಲ್ಲಿ ನಿದ್ದೆ ಮಾಡ್ತಿದ್ದಾನೆ.”
ಎನ್ನುತ್ತಾ ದಿಂಬಿನ ಬಳಿ ಬಂದು ಅವರ ಕೂದಲುಗಳಲ್ಲಿ ಬೆರಳಾಡಿಸತೊಡಗಿದಳು. ಹನಿಗಟ್ಟಿದ ಹಣೆಯ ಮೇಲಿನಿಂದ ಬೆರಳುಗಳು ನಡುನೆತ್ತಿವರೆಗೂ ಹೋಗುತ್ತಿದ್ದಂತೆ ಮೇಷ್ಟ್ರು ದೀರ್ಘವಾಗಿ ಉಸಿರೆಳೆಯುತ್ತಾ ಕಣ್ಣು ಮುಚ್ಚಿದರು. ಆಕೆ ತನ್ನ ಸೆರಗಿನಿಂದ ಅವರ ಮುಖದ ಮೇಲಿನ ಬೆವರನ್ನು ಒರೆಸತೊಡಗಿದಳು. ಮೇಷ್ಟ್ರ ಮನಸ್ಸು ಉಕ್ಕಿ ಬಂತು. ಮಾತನಾಡದೆ ಆಕೆಯ ಮುಖವನ್ನೇ ನೋಡತೊಡಗಿದರು. ಆಕೆ ಸರಿಯಾಗಿ ತಲೆ ಬಾಚಿಕೊಂಡಿರಲಿಲ್ಲ. ಮನೆಗೆಲಸದ ಭಾರದಿಂದ, ನಿದ್ದೆಗೆಟ್ಟದ್ದರಿಂದ ಅವಳ ಮುಖ ಮತ್ತಷ್ಟು ಬಾಡಿತ್ತು.
“ನನ್ನಿಂದಾಗಿ ನಿನಗೆ ತುಂಬಾ ಕಷ್ಟವಾಯಿತು.”
“ಇಲ್ಲ. ನೀವು ಬಂದ ಮೇಲೆ ನನ್ನ ಕಷ್ಟ ಕಡಿಮೆಯಾಯಿತು. ನೀವು ಬಹಳ ಶಿಸ್ತಿನ, ಅಚ್ಚುಕಟ್ಟುತನದ ವ್ಯಕ್ತಿ ಅಂದುಕೊಂಡಿದ್ದೆ. ಇತರರನ್ನು ಹಚ್ಚಿಕೊಳ್ಳುವ ಗುಣವೂ ಇದೆ ಅಂತ ಗೊತ್ತಾದಾಗ ನನ್ನ ಮನಸ್ಸಿನ ಬಿಗಿಯೂ ಸಡಿಲಗೊಂಡಿತು. ಅಡುಗೆ ಮಾಡಿ ಕೊಟ್ಟಿದ್ದಕ್ಕೆ ತಿಂಗಳಿಗೆ ಸಾವಿರ ರೂಪಾಯಿ ಕೊಡೋದರ ಜೊತೆಗೆ ಆದಿತ್ಯವಾರದಂದು ಪೇಟೆಗೆ ಹೋಗಿ ತರಕಾರಿ, ಹಣ್ಣು ಹಂಪಲುಗಳನ್ನು ಕೊಂಡು ತರ್ತಿದ್ರಿ. ನನ್ನ ಮಗ ಸುರೇಶನಿಗೆ ಬಟ್ಟೆ ಹೊಲಿಸಿಕೊಡೋದ್ರಿಂದ ತೊಡಗಿ ಅವನನ್ನು ಮನೆಗೆ ಕರೆಸಿ ಉಚಿತವಾಗಿ ಪಾಠ ಹೇಳಿಕೊಡೋವರೆಗೆ ಔದಾರ್ಯ ತೋರಿದ್ರಿ.”
“ಅವನು ತುಂಬಾ ಒಳ್ಳೆಯ ಹುಡುಗ. ನೀನು ಬರೋದಕ್ಕೆ ಸ್ವಲ್ಪ ಮುಂಚೆ ನನ್ನ ಕಾಲುಗಳ ಮೇಲೆ ತಣ್ಣಗಿನ ಸ್ಪರ್ಶವಾದಾಗ ಕಣ್ತೆರೆದು ನೋಡಿದ್ರೆ ಸುರೇಶ ಪುಟ್ಟ ಕೈಗಳಿಂದ ನನ್ನ ಕಾಲೊತ್ತುತ್ತಿದ್ದ. ‘ಏನು ಮಗೂ? ಚಿಕ್ಕ ಮಕ್ಕಳು ದೇವರಿದ್ದಂತೆ. ಅವರ ಕೈಯಿಂದ ಸೇವೆ ಮಾಡಿಸ್ಕೋಬಾರದು’ ಅಂದರೆ ‘ಸಾರ್, ನೀವು ನನ್ನ ಗುರುಗಳು. ನೀವು ಒಂದಿನ ಪಾಠ ಮಾಡ್ತಾ ಏಕಲವ್ಯನ ಕತೆ ಹೇಳಿ, ಗುರುಗಳ ಸೇವೆ ಮಾಡಿದ್ರೆ ಬದುಕಿನಲ್ಲಿ ಮುಂದೆ ಬರ್ತೀರಿ ಅಂದಿದ್ರಿ’ ಎಂದ. ಹೌದು. ನಾನು ಕತೆ ಹೇಳಿರಬಹುದು. ಆದರೆ ಆ ನೀತಿಯನ್ನು ಜೀವನದಲ್ಲಿ ಅನುಸರಿಸಬೇಕೆಂಬ ಮನೋಭಾವ ಬಂದಿದ್ದು ಹೆತ್ತವರಿಂದ ಸಿಕ್ಕಿದ ಸಂಸ್ಕಾರದಿಂದ. ಬಹಳ ಚೆನ್ನಾಗಿ ಬೆಳೆಸಿದ್ದೀ ರತ್ನಾ ನಿನ್ನ ಮಗನನ್ನು.”
ಆಕೆಯ ಹೃದಯ ಹೆಮ್ಮೆಯಿಂದ ಹಿಗ್ಗಿತು.
“ದೇವರು ದೊಡ್ಡವ ಮೇಷ್ಟ್ರೇ. ಒಳ್ಳೆ ಬುದ್ಧಿ ಕೊಟ್ಟಿದ್ದಾನೆ. ನಿಮಗೆ ಸೌಖ್ಯವಿಲ್ಲ ಅಂತ ಗೊತ್ತಾದದ್ದು ಅವನಿಂದಲೇ. ಜುಮ್ಮೆಂದಿತ್ತು ಮೈ. ನಿಮ್ಮ ಹತ್ತಿರ ಓಡಿ ಬರೋಣ ಎಂದುಕೊಂಡ್ರೆ ಕೂಲಿ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಬರೋ ಸಮಯ. ಆ ಹೊತ್ತಲ್ಲಿ ನಾನು ನಿಮ್ಮೊಂದಿಗಿದ್ರೆ ಸುತ್ತುಮುತ್ತಲಿನವರು ಏನಾದ್ರೂ ಹೇಳುವರೋ ಅಂದ್ಕೊಂಡು ಸುಮ್ಮನಾಗಿಬಿಟ್ಟೆ. ಗೂಡಿನೊಳಗಿನ ಹಕ್ಕಿಯ ರೆಕ್ಕೆಯಂತೆ ಪಟಪಟ ಬಡೀತಿತ್ತು ನನ್ನ ಎದೆ. ಕೊನೆಗೆ ಧೈರ್ಯ ಮಾಡಿ ಬಂದುಬಿಟ್ಟೆ” ಎನ್ನುತ್ತಿದ್ದಂತೆ ಆಕೆಯ ಕಣ್ಣುಗಳಿಂದ ಜಿನುಗಿದ ಕಂಬನಿ ಮೇಷ್ಟ್ರ ಮುಂಗೈಗೆ ಬಿದ್ದು ಬಿಸಿಯಾಯಿತು.
“ರತ್ನಾ”
“ಹೇಳಿ ಮೇಷ್ಟ್ರೇ, ಕುಡಿಯಲು ನೀರು ಬೇಕೇ?”
“ಅಲ್ಲ ರತ್ನಾ. ಈಗ ಕೇಳೋ ಪ್ರಶ್ನೆ ನಿನ್ನ ಬದುಕಿಗೆ ಸಂಬಂಧಿಸಿದ್ದು. ಸಂಕೋಚಪಡದೆ ಉತ್ತರಿಸಬೇಕು.”
“ಆಯ್ತು ಮೇಷ್ಟ್ರೇ.”
“ರತ್ನಾ, ನೀನು ಹೂಂ ಅಂದ್ರೆ ನಾನು ನಿನ್ನ ಮದುವೆ ಆಗ್ತೇನೆ. ಇದರಲ್ಲಿ ಒತ್ತಾಯವೇನಿಲ್ಲ. ಸುರೇಶನ ಚಿಂತೆ ಬಿಡು. ನೀನು ನನ್ನ ಪ್ರಸ್ತಾಪ ನಿರಾಕರಿಸಿದ್ರೂ ಅವನನ್ನು ಓದಿಸಿ ಬೆಳೆಸೋದು ನನಗೆ ಬಿಟ್ಟದ್ದು. ನಿನ್ನ ಅತ್ತೆಯೋರ ಚಿಕಿತ್ಸೆಗಾಗಿ ನನ್ನ ಚಿಕ್ಕಪ್ಪ ಕೊಟ್ಟ ಸಾಲದ ಬಗ್ಗೆಯೂ ತಲೆ ಕೆಡಿಸಿಕೊಳ್ಬೇಡ.”
ಆಕೆ ಬಿಟ್ಟ ಕಣ್ಣುಗಳಿಂದ ಅವರನ್ನೇ ನೋಡತೊಡಗಿದಳು. ನೇರವಾಗಿ ನೋಡಲು ಧೈರ್ಯ ಸಾಲದೆ ತಲೆ ತಗ್ಗಿಸಿ “ಮೇಷ್ಟ್ರೇ, ನೀವು ಮದುವೆಯಾಗದೋರು. ನಾನು ವಿಧವೆ. ನೀವು ನನ್ನನ್ನು ಮದುವೆ ಆಗೋ ಸುದ್ದಿ ಊರವರಿಗೆ ಗೊತ್ತಾದ್ರೆ ‘ನಾಲ್ಕು ದಿನ ಅನ್ನ ಬೇಯಿಸಿಕೊಟ್ಟು ಮೇಷ್ಟ್ರನ್ನು ಒಳಗೆ ಹಾಕ್ಕೊಂಡ್ಲು’ ಅಂತಾರೆ. ಈ ವಿಚಾರದಲ್ಲಿ ನೀವು ಇನ್ನಷ್ಟು ಯೋಚಿಸಿ ಮೇಷ್ಟ್ರೇ”
“ನೀನು ವಿಧವೆಯಾದದ್ದು ನಿನ್ನ ತಪ್ಪಲ್ಲ. ಮರುಮದುವೆ ಅಪರಾಧವಲ್ಲ. ಮಾಡದ ತಪ್ಪಿಗೆ ನೀನು ಶಿಕ್ಷೆ ಅನುಭವಿಸಬಾರದು.”
“ಇಂಥ ದೊಡ್ಡ ಮಾತು ನಂಗೆ ಅರ್ಥವಾಗೋದಿಲ್ಲ. ನನ್ನ ಒಪ್ಪಿಗೆ ಏನು ಬಂತು? ನನ್ನಿಂದಾಗಿ ನಿಮ್ಮ ಮರ್ಯಾದೆ ಹೋಗ್ಬಾರ್ದು ಅಷ್ಟೆ.” ಆತಂಕ ತುಂಬಿದ ಕಣ್ಣುಗಳಿಂದ ಮುಕುಂದ ಮೇಷ್ಟ್ರನ್ನು ನೋಡುತ್ತಾ ಆಕೆ ಹೇಳಿದಳು.
“ನೀವು ಮನಸ್ಸು ಮಾಡಿದ್ರೆ ಹೆಣ್ಣು ಕೊಡಲು ನೂರಾರು ಮಂದಿ ಬಂದಾರು. ಕಳೆದ ಸಲ ನಿಮ್ಮ ತಾಯಿ ಇಲ್ಲಿಗೆ ಬಂದಾಗ ‘ಇರೋ ಒಬ್ಬ ಮಗನಿಗೆ ಮದುವೆ ಆಗಿಲ್ಲ.’ ಅಂತ ದುಃಖಿಸಿದ್ರು. ಅವರು ಯಾವುದಾದ್ರೂ ಹೆಣ್ಣನ್ನು ನೋಡಿಟ್ಟಿದ್ರೆ ಅವಳನ್ನೇ ಮಾಡ್ಕೊಳ್ಳಿ ಮೇಷ್ಟ್ರೇ. ನಿಮ್ಮ ಬದುಕು ಖಂಡಿತ ಹಸನಾಗ್ತದೆ.”
“ಆ ಕೆಲಸವನ್ನು ಈಗಾಗಲೇ ಮಾಡಿ ಬಿಟ್ಟಿದ್ದೇನೆ. ‘ರತ್ನಾ ನಿಜಕ್ಕೂ ರತ್ನದಂಥ ಹೆಣ್ಣು. ನೀನು ಆಕೆಯಲ್ಲಿ ಒಂದ್ಮಾತು ಕೇಳಿ ನೋಡು. ಮುಂದಿನ ಆದಿತ್ಯವಾರ ಹೇಗೂ ಬರ್ತೇನಲ್ಲ, ಆಗ ಅವಳ ಹತ್ರ ಮಾತಾಡ್ತೇನೆ. ನಾನು ಅಲ್ಲಿಗೆ ಬಂದಾಗ ಆಕೆ ಮಾಡೋ ಉಪಚಾರ ನೋಡುವಾಗ ಈಕೆಯೇ ನನ್ನ ಸೊಸೆ ಆಗಿರ್ತಿದ್ರೆ ಒಳ್ಳೇದಿತ್ತು ಎಂದು ಎಷ್ಟೋ ಸಲ ಭಾವಿಸಿದ್ದುಂಟು’ ಅಂತ ಬರೆದು ಒಪ್ಪಿಗೆ ಸೂಚಿಸಿದ್ದಾಳೆ.”
ಅಚ್ಚರಿ ಮತ್ತು ಸಂತಸವನ್ನು ತಡೆಯಲಾರದೆ ತೆರೆದ ಆಕೆಯ ಬಾಯಿಯಿಂದ ಪ್ರಶ್ನೆಯೊಂದು ಹೊರಬಿತ್ತು.
“ನನ್ನಂಥವಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ನಿಮ್ಮಮ್ಮ ಅಷ್ಟು ಬೇಗ ಒಪ್ಪಿಗೆ ಕೊಟ್ರಾ? ಅಂದ್ರೆ ನೀವು ಮದುವೆಯೇ ಆಗೋದಿಲ್ಲ ಅಂತ ಕೂತಿದ್ರೇನು?”
“ಮದುವೆಯಾಗಿ, ಗೃಹಸ್ಥ ಎನಿಸಿಕೊಳ್ಳಬೇಕೆಂಬ ಆಸೆಯಿತ್ತು. ಆದರೆ…” ಎನ್ನುತ್ತಾ ಮುಕುಂದ ಮೇಷ್ಟ್ರು ನೀಳವಾದ ಉಸಿರು ಚೆಲ್ಲಿ
“ನಾನು ಒಬ್ಬಾಕೆಯನ್ನು ಪ್ರೀತಿಸಿದ್ದೆ. ಅವಳ ಮೇಲೆ ಜೀವ ಇಟ್ಕೊಂಡಿದ್ದೆ. ಆದರೆ ಆಕೆ ನಂಗೆ ಕೈಕೊಟ್ಟು ಯಾವನನ್ನೋ ಮದುವೆಯಾಗಿ ವಿದೇಶಕ್ಕೆ ಹೋದಳು. ಆಮೇಲೆ ನಂಗೆ ಹೆಂಗಸರ ಮೇಲೆ ಅಪನಂಬಿಕೆ ಶುರುವಾಯ್ತು. ಪ್ರಪಂಚದಲ್ಲಿರೋ ಹೆಣ್ಣುಗಳೆಲ್ಲ ವಂಚಕರು, ಸಮಯಸಾಧಕರು, ಹೃದಯಹೀನ ಲೋಭಿಗಳು ಅನಿಸತೊಡಗಿತು. ನಿನ್ನ ಪರಿಚಯವಾದ ಬಳಿಕ ನನಗೆ ಹೆಣ್ಣಿನ ಇನ್ನೊಂದು ಮುಖ ಕಾಣುವಂತಾಯ್ತು. ಹೆಣ್ಣು ಅಂದ್ರೆ ಪ್ರೀತಿ, ವಾತ್ಸಲ್ಯ, ಅನುಕಂಪ, ಸಹಭಾಗಿತ್ವಗಳ ಪ್ರತಿರೂಪ ಅಂತ ಗೊತ್ತಾಯ್ತು. ಹೀಗಾಗಿ ನಿನ್ನನ್ನೇ ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೇನೆ. ನನ್ನ ಅಭಿಪ್ರಾಯ ನಿಂಗೆ ತಿಳಿಸಿದ್ದೇನೆ. ನೀನು ಒಪ್ಪಿಕೊಂಡ್ರೆ ಸಂತೋಷ. ಆದರೆ ಇದ್ರಲ್ಲಿ ಒತ್ತಾಯವೇನಿಲ್ಲ.”
ಎಂದು ನಿರೀಕ್ಷೆ ತುಂಬಿದ ಕಣ್ಣುಗಳಿಂದ ಮುಕುಂದ ಮೇಷ್ಟ್ರು ರತ್ನಾಳ ಮುಖವನ್ನು ನೋಡಿದರು. ಅವರ ನೋಟವನ್ನು ಕಂಡು ಆಕೆ ನಾಚಿ “ಮೇಷ್ಟ್ರೇ ಒಬ್ಬ ಕುರುಡನ ಹತ್ರ ‘ನಿಂಗೆ ಕಣ್ಣು ಬೇಕಾ’ ಅಂದ್ರೆ, ಬಾಯಾರಿದವನ ಬಳಿ ‘ನೀರು ಬೇಕಾ’ ಅಂತ ಕೇಳಿದ್ರೆ ಅವನೇನು ಹೇಳ್ತಾನೆ?” ಎನ್ನುತ್ತಾ ಸೆರಗಿನಲ್ಲಿ ಮುಚ್ಚಿಕೊಂಡ ಆಕೆಯ ಕೆಂಪೇರಿದ ಮುಖವನ್ನು ದೀಪದ ಬೆಳಕಿನಲ್ಲಿ ಕಂಡ ಮೇಷ್ಟ್ರ ಮೈಯಲ್ಲಿ ಹೊಸ ಚೈತನ್ಯ ಬಂದಂತಾಗಿ ಮೆಲ್ಲನೆ ಎದ್ದು ರತ್ನಳ ಕೂದಲು ಸವರಿದರು. ಆಕೆ ತಲೆ ಎತ್ತಿದಾಗ ಇಬ್ಬರ ಕಣ್ಣುಗಳು ಒಂದಾದವು. ಅವುಗಳ ಹೊಳಪನ್ನು ಕಂಡು ಜ್ವರದ ಬಳಲಿಕೆಯಲ್ಲೂ ಮುಖವನ್ನು ಅರಳಿಸಿಕೊಂಡ ಮುಕುಂದ ಮೇಷ್ಟ್ರು ರತ್ನಳ ಎರಡೂ ಕೈಗಳನ್ನು ಹಿಡಿದು ತಮ್ಮ ಕಣ್ಣಿಗೆ ಒತ್ತಿಕೊಂಡರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter