ಮಿಂಚಾಗಿ ನೀ ಬರಲು

ಬಿ.ಎ. ಮೊದಲನೇ ವರ್ಷದಲ್ಲಿ ಓದುತ್ತಿದ್ದ ಆರತಿ ತನ್ನ ಸಹಪಾಠಿ ವಂದನಾ ಬರದೇ ಇದ್ದುದರಿಂದ ಒಬ್ಬಳೇ ಅಂದು ತನ್ನ ಪುಸ್ತಕಗಳನ್ನು ಎದೆಗವುಚಿ ಹಿಡಿದುಕೊಂಡು ಕಾಲೇಜಿನ ಆವರಣದಲ್ಲಿ ಹೆಜ್ಜೆ ಹಾಕುತ್ತಿದ್ದಳು. ತನ್ನ ಊರಿನ ಕಾಲೇಜಿನಲ್ಲಿ ಪಿಯುಸಿವರೆಗೆ ಓದಿದ್ದ ಆರತಿ ಇದೇ ವರ್ಷ ಈ ಪದವಿ ಕಾಲೇಜಿಗೆ ಬಂದಿದ್ದಳು. ಕಾಲೇಜಿಗೆ ಸೇರಿಕೊಂಡು ಈಗಷ್ಟೇ ಎರಡು ವಾರಗಳಾಗಿದ್ದವು. ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವಳಾಗಿದ್ದ ಆರತಿಯ ಕಾಲೇಜ್ ಡ್ರೆಸ್ ಕೋಡ್ ಹೆಚ್ಚು ಕಡಿಮೆ ಚೂಡಿಯೇ ಆಗಿತ್ತು. ಇಂದು ತನಗಿಷ್ಟವಾಗುತ್ತಿದ್ದ ಹಳದಿ ಚೂಡಿಯಲ್ಲಿ ತನ್ನ ಸೊಬಗನ್ನು ಮೆರೆಯುತ್ತಿದ್ದಳು. ಮಿತಭಾಷಿಯಾದ ಆರತಿ ಹೆಚ್ಚು ಕಡಿಮೆ ಮೌನಗೌರಿಯಂತಿರುತ್ತಿದ್ದಳು. ಆಕೆಯ ಸಹಪಾಠಿ ವಂದನಾ ಮಾತಿನ ಮಲ್ಲಿಯಾಗಿದ್ದಳು. ಗೆಳತಿಯ ಮಾತುಗಳನ್ನು ಕೇಳಿಸಿ ಕೊಳ್ಳುವುದರಲ್ಲಿ ಖುಷಿಪಡುತ್ತಿದ್ದಳು ಆರತಿ. ಕಾಲೇಜಿನಲ್ಲಿ ಜೊತೆಯಾಗುತ್ತಿದ್ದ ಪರಿಚಯದ ಗೆಳತಿಯರೂ ಕಂಡುಬರಲಿಲ್ಲ ಆಕೆಗೆ ಇಂದು. ಸ್ವಲ್ಪ ತಡವಾಗಿದ್ದರಿಂದ ನೆಲ ನೋಡುತ್ತಾ ಅವಸರ ಅವಸರವಾಗಿ ಹೆಜ್ಜೆ ಹಾಕುತ್ತಿದ್ದಳು ಆರತಿ ತನ್ನ ತರಗತಿಯ ಕಡೆಗೆ.
“ಏನೇ ಹಳ್ಳಿ ಗೌರಮ್ಮ, ಒಬ್ಬಳೇ ಹೊರಟಿರುವಿ? ನಿನ್ನ ಪ್ರಾಣದ ಗೆಳತಿ ವಂದನಾ ರಾಣಿ ಎಲ್ಲಮ್ಮಾ?”
“ಸಿಂಹಕಟಿಯ, ನವಿಲಿನ ನಡಿಗೆಯ ನಿನ್ನಂದ ಸವಿಯಲು ಎರಡು ಕಣ್ಣುಗಳು ಸಾಲವು.”
“ಆರತಿ, ನಿನ್ನ ದಂತದ ಮೈ ಬಣ್ಣಕ್ಕೆ ಆ ಬಾಲಿವುಡ್ ರಾಣಿ ಕರೀನಾ ಕಪೂರಳನ್ನು ನಿವಾಳಿಸಿ ಒಗೆಯಬೇಕು.”
“ನಿನ್ನ ಕಂಠ ಮಾಧುರ್ಯಕ್ಕೆ ವಸಂತಕಾಲದ ಕೋಗಿಲೆ ನಾಚುವುದು.”
“ಆರತಿ, ನೀನೇನಾದರೂ ನಮ್ಮ ಕಾಲೇಜಿನ ಬ್ಯೂಟಿ ಕ್ವೀನ್‍ಗಳಂತೆ ಮೈಗಂಟಿಕೊಳ್ಳುವ ಟೈಟ್ಸ್‍ಗಳಲ್ಲಿ ಮಿಂಚುವಿಯಾದರೆ ನಿನ್ನನ್ನು ನಾಯಕಿಯನ್ನಾಗಿ ಮಾಡಿಕೊಂಡು ನಾನು ಸಿನಿಮಾ ಒಂದನ್ನು ಪ್ರೊಡ್ಯೂಸ್ ಮಾಡಲು ರೆಡಿಯಾಗಿದ್ದೇನೆ. ನಮ್ಮ ಕಾಲೇಜಿನ ಹುಡುಗರ ಕಣ್ಮಣಿ ಜೆಸ್ಸಿಕಾಳಂತೆ ತೋಳಿಲ್ಲದ ಫುಲ್‍ಟೈಟ್ ಮಿನಿ ಟಾಪ್ ಮತ್ತು ಪ್ಯಾಂಟಿನಲ್ಲಿ ಮಿಂಚುತ್ತಿಲ್ಲವೇಕೆ ನೀನು?”
“ಆರ್ಟಿಫಿಸಿಯಲ್ ಮೇಕಪ್ ಇಲ್ಲದ ನ್ಯಾಚುರಲ್ ಬ್ಯೂಟಿ ನೀನು. ಸ್ವಲ್ಪ ಮೇಕಪ್ ಮಾಡಿಕೊಂಡು ಮಾಡರ್ನ ಆಗಿ ಮಿಂಚಲು ನೀನೇಕೆ ಪ್ರಯತ್ನಿಸುತ್ತಿಲ್ಲ? ಮಾಡ್ ಡ್ರೆಸ್‍ನಲ್ಲಿನ ನಿನ್ನ ಸೌಂದರ್ಯವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುವ ಹಂಬಲ, ಹಪಹಪಿ ನಮಗೆ. ನೀನು ಯಾವಾಗ ನಮ್ಮೆಲ್ಲರ ಮನದಾಸೆಗೆ ಸ್ಪಂದಿಸುವಿ? ಆದಷ್ಟು ಬೇಗ ನಮ್ಮ ಮನದಭೀಷ್ಟೆಗಳನ್ನು ಈಡೇರಿಸುವಿಯಾ?”
“ಆರತಿ ಬದಲು ನಿನ್ನ ಹೆಸರು ಹಳ್ಳಿಗುಗ್ಗು ಗೌರಮ್ಮ ಎಂದು ಇದ್ದರೆ ಸರಿಯಾಗಿತ್ತೇನೋ?”
“ನಿಮ್ಮಂಥಹವರೇಕೆ ಫಾಸ್ಟಾಗಿರುವ ನಮ್ಮಂಥಹವರ ಕಾಲೇಜಿಗೆ ಬಂದಿರುವಿರೋ? ನಿಮ್ಮಿಂದ ನಮ್ಮ ಕಾಲೇಜಿನ ಇಮೇಜ್, ಚಾರ್ಮ ಮಸುಕಾಗಿ ಬಿಡುತ್ತದೆ.”
“ಯು ಆರ್ ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ ಇನ್ ಅವರ್ ಕಾಲೇಜ್. ಯು ಮಸ್ಟ್ ಬಿಕಮ್ ಮಾಡ್ ಐ ಸೇ. ಉಳಿದವರೆಲ್ಲಾ ತಮ್ಮ ಸಾಧಾರಣ ಅಂದ, ಚೆಂದಕ್ಕೆ ಬಣ್ಣ ಬಳಿದುಕೊಂಡು ಕೃತ್ರಿಮವಾಗಿ ತಮ್ಮ ಥಳುಕು ಬಳುಕನ್ನು ಪ್ರದರ್ಶಿಸಲು ಹೆಣಗುತ್ತಿದ್ದಾರೆ ಅಷ್ಟೇ. ಯು ಆರ್ ದಿ ಓನ್ಲೀ ನ್ಯಾಚುರಲ್ ಬ್ಯೂಟಿ. ಯು ಆರ್ ಸೋ ಸ್ವೀಟ್ ದೆಟ್ ಆಯ್ ಕೆನಾಟ್ ಎಕ್ಸಪ್ರೆಸ್ ಮಾಯ್ ಇನ್ನರ್ ಫೀಲಿಂಗ್ಸ್. ಸ್ವಲ್ಪ ನಮ್ಮ ಮಾತು ಕೇಳಮ್ಮಾ?”
“ಆರತಿ, ಲಾಸ್ಯವಾಡುವ ನಿನ್ನ ಮನಮೋಹಕ ಮುಂಗುರುಳು, ಚಿಗರೆಯಂಥಹ ಚುಂಬಕ ಕಣ್ಣುಗಳು, ಬಿಳಿ ಮೈಬಣ್ಣ, ಬ್ಯೂಟಿಫುಲ್ ಬಾಡಿ, ಒಂದೇ, ಎರಡೇ? ಎಲ್ಲವೂ ನನಗಿಷ್ಟವಾಗಿವೆ.”
ಬಿ.ಎಸ್ಸಿ. ಅಂತಿಮ ವರ್ಷದ ತರಗತಿಯಲ್ಲಿ ಅದೇ ಕಾಲೇಜಿನಲ್ಲಿ ಓದುತ್ತಿದ್ದ ರಂಜಿತ್ ಮತ್ತು ಅವನ ಪಟಾಲಂಗಳಾದ ಸುಂದರ್, ಚಾಲ್ರ್ಸ, ರವಿರಾಜ್, ರಣಜಿತ್, ಕುಂದನ್, ಸುಖೇಶ್ ಮುಂತಾದವರು ತಲೆಗೊಂದರಂತೆ ಮಾತಾಡಿ, ಕಾಡಿಸಿ, ಚುಡಾಯಿಸಿ, ಪೀಡಿಸಲು ಮುಂದಾಗಿದ್ದರು ಆರತಿಯನ್ನು. ಎಲ್ಲರ ಮಾತುಗಳು ಅವಳ ಕಿವಿಯನ್ನು ಹೊಕ್ಕಿದ್ದರೂ ಯಾವುದನ್ನೂ ಗಂಭೀರವಾಗಿ ಹೃದಯಕ್ಕೆ ತೆಗೆದುಕೊಳ್ಳದೇ ತನ್ನ ಪಾಡಿಗೆ ತಾನು ವೇಗವಾಗಿ ಹೆಜ್ಜೆ ಹಾಕುತ್ತಾ ತರಗತಿಯ ಕೊಠಡಿಯನ್ನು ಸೇರಿಕೊಂಡು ತನ್ನ ಖಾಯಂ ಡೆಸ್ಕಿನಲ್ಲಿ ಕುಳಿತುಕೊಂಡು ಸುತ್ತಲೂ ಕಣ್ಣಾಡಿಸತೊಡಗಿದಳು. ದಿಢೀರೆಂದು ನಡೆದ ಘಟನೆಯಿಂದ ಆರತಿಯ ಎದೆ ಡವಗುಟ್ಟುತ್ತಿತ್ತು. ತರಗತಿಯಲ್ಲಿ ಆತ್ಮೀಯರೆನ್ನುವವರು ಯಾರೂ ಕಣ್ಣಿಗೆ ಬೀಳದ್ದರಿಂದ ತೆಪ್ಪಗೆ ಕುಳಿತುಕೊಂಡಳು. ಅಷ್ಟರಲ್ಲಿ ಪ್ರಾಧ್ಯಾಪಕರು ಬಂದಿದ್ದರಿಂದ ಪಾಠದ ಕಡೆಗೆ ಗಮನ ನೀಡಲು ಪ್ರಯತ್ನಿಸಿದಳು. ಮನಸ್ಸು ಗಲಿಬಿಲಿಗೊಂಡಿದ್ದರಿಂದ ಪಾಠದಲ್ಲಿ ಏಕಾಗ್ರತೆ ಮೂಡಲಿಲ್ಲ. ಆದರೂ ಸುಮ್ಮನೇ ಪಾಠವನ್ನು ಯಾಂತ್ರಿಕವಾಗಿ ಕೇಳಿಸಿಕೊಳ್ಳತೊಡಗಿದಳು.


ಮೊದಲನೆಯ ಪಿರಿಯೆಡ್ ಮುಗಿಯುತ್ತಿದ್ದಂತೆ ಗ್ಯಾಪ್ ಇದ್ದುದರಿಂದ ಕ್ಲಾಸ್ ರೂಮಿನಿಂದ ಹೊರಗೆ ಬಂದ ಆರತಿ ಮೊದಲು ಆತ್ಮೀಯ ಗೆಳತಿ ವಂದನಾಳಿಗೆ ಫೋನಾಯಿಸಿ ಒಂದೇ ಉಸುರಿಗೆ ನಡೆದ ಘಟನೆಯನ್ನು ಬಡಬಡಿಸಿದಳು. ಅವಳ ಮಾತಿನಲ್ಲಿ ಆತಂಕ, ಭಯ ಇದ್ದುದರಿಂದ ಎಲ್ಲವನ್ನೂ ಕೇಳಿಸಿಕೊಂಡ ವಂದನಾ, "ಆರತಿ, ಭಯ ಬೀಳಬೇಡ ಕಣೇ. ಇದೆಲ್ಲಾ ಸಿಟಿಯ ಕಾಲೇಜುಗಳಲ್ಲಿ ಕಾಮನ್. ನೀನು ಸಣ್ಣ ಊರಿನ ಕಾಲೇಜಿಂದ ಬಂದವಳಾಗಿರುವುದರಿಂದ ಇಂಥಹ ಅನುಭವವಾಗಿರಲಿಕ್ಕಿಲ್ಲ ಮೊದಲು. ಹಾಗಾಗಿ ಇದು ಹೊಸದೆನಿಸುತ್ತದೆ. ಡೋಂಟ್ ವರಿ, ನಾನಿದ್ದೇನೆ. ಹಾಗೇನಾದರೂ ನಿನ್ನ ಮನಸ್ಸಿಗೆ ತುಂಬಾ ನೋವಾಗಿದ್ದರೆ ಇಂದು ಮನೆಗೆ ಹೊರಟುಬಿಡು. ನೀನು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ಚಿಂತೆನೂ ಮಾಡಬೇಡ" ಎಂದು ಆರತಿಗೆ ಸಾಂತ್ವನ ಹೇಳುವುದರ ಜೊತೆಗೆ ಧ್ಯೆರ್ಯವನ್ನು ತುಂಬುವ ಪ್ರಯತ್ನ ಮಾಡಿದ್ದಳು ವಂದನಾ. 
"ವಂದನಾ, ನಾನೇನೂ ಅಷ್ಟಾಗಿ ಗಾಬರಿ ಬಿದ್ದಿಲ್ಲ. ಇಂದು ನೀವ್ಯಾರೂ ನನ್ನ ಜೊತೆಗೆ ಇರದಿದ್ದರಿಂದ ಕೊಂಚ ಬೇಸರವೆನಿಸಿತು ಅಷ್ಟೇ. ಇಷ್ಟಕ್ಕೆಲ್ಲಾ ಹೆದರುವವಳು ನಾನಲ್ಲ ಕಣೇ. ನಿನ್ನ ಮಾತುಗಳಿಗೆ ಧನ್ಯವಾದಗಳು. ನೀನು ನಾಳೆ ತಪ್ಪದೇ ಕಾಲೇಜಿಗೆ ಬಾರಮ್ಮಾ. ಹೆಚ್ಚಿನ ವಿವರ ತಿಳಿಸುವೆ. ಹೌದು, ಈ ವಿಷಯದ ಬಗ್ಗೆ ಪ್ರಾಂಶುಪಾಲರ ಹತ್ತಿರ ಮಾತಾಡಲೇ ಹೇಗೆ?" ಎಂದು ಕೇಳಿದ್ದಳು ಆರತಿ.
"ಅಯ್ಯೋ, ಇಷ್ಟಕ್ಕೇ ಪ್ರಿನ್ಸ್ ಹತ್ತಿರ ಹೋಗೋದು ಬೇಡ. ನೀನು ಬೇಫಿಕರ್ ಆಗಿ ಇರು ಸಾಕು." ವಂದನಾ ಮಾತು ಮುಗಿಸಿದ್ದಳು. 
ಅಂದು ರಾತ್ರಿ ಆರತಿಗೆ ಇಂದು ಕಾಲೇಜಿನಲ್ಲಿ ಹುಡುಗರು ತನ್ನ ರೂಪದ ಬಗ್ಗೆ ಹೇಳಿದ ಮಾತುಗಳನ್ನು ಮೆಲುಕು ಹಾಕುತ್ತಾ ನಿಲುವುಗನ್ನಡಿಯಲ್ಲಿ ತನ್ನ ಸೌಂದರ್ಯವನ್ನು ಕಣ್ಣುಗಳಲ್ಲಿ ತುಂಬಿಕೊಂಡು ಒಳಗೊಳಗೇ ಖುಷಿಪಟ್ಟಳು. ಮೊದಲ ಬಾರಿಗೆ ತನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಎನಿಸತೊಡಗಿತು ಅವಳಿಗೆ. "ಹೌದು, ನಾನು ಇಷ್ಟು ಬ್ಯೂಟಿಫುಲ್ ಆಗಿ ಇರುವೆನೇ? ನನ್ನ ಸೌಂದರ್ಯದ ಬಗ್ಗೆ ನನಗೇ ಅರಿವಿರಲಿಲ್ಲ ಅಲ್ಲವೇ?" ಎಂಬ ಯೋಚನೆಯೂ ಮಿಂಚಿನಂತೆ ಹೊಳೆದು ಹೋಯಿತು ಅವಳ ಮನದಂಗಳದಲ್ಲಿ. ಹುಡುಗರೆಲ್ಲರ ಮಾತುಗಳು ಅವಳಿಗೆ ಕಚಗುಳಿ ಇಡತೊಡಗಿದ್ದವು. "ಹಲೋ ಬ್ರದರ್ಸ್, ನಿಮ್ಮ ಹೊಗಳಿಕೆಯ ಮಾತುಗಳಿಗೆ ಧನ್ಯವಾದಗಳು. ಆದರೆ ಈ ರೀತಿ ಚುಡಾಯಿಸುವುದನ್ನು ನಾನು ಖಂಡಿಸುತ್ತೇನೆ. ನೀವು ಹೀಗೆಲ್ಲಾ ಮಾಡದೇ ನಿಮ್ಮ ನಡತೆಯನ್ನು ತಿದ್ದಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ಹಿತೋಕ್ತಿ. ನಾವೆಲ್ಲಾ ಕಾಲೇಜಿಗೆ ಬಂದಿರುವುದು ವಿದ್ಯಾರ್ಜನೆಗೆ ಎಂಬುದು ತಿಳಿದಿರಲಿ" ಎಂದು ಮನದಲ್ಲೇ ಹುಡುಗರಿಗೆ ಧನ್ಯವಾದ ಹೇಳುತ್ತಾ ಹಿತವಚನವನ್ನೂ ನೀಡಿದಳು ಆರತಿ. 
ಮರುದಿನ ಆರತಿ ಕಾಲೇಜಿನಲ್ಲಿ ತನ್ನ ಆತ್ಮೀಯ ಗೆಳತಿ ವಂದನಾಳ ಜೊತೆಗೆ ನಿನ್ನೆಯ ಘಟನೆಯ ಬಗ್ಗೆ ಮತ್ತೊಮ್ಮೆ ಮುಖಾಮುಖಿ ಹಂಚಿಕೊಂಡು ಅವಳ ಸಾಂತ್ವನದ ಮಾತುಗಳಿಂದ ಸಮಾಧಾನ ಕಂಡುಕೊಂಡಳು. ಅಂದು ನಿನ್ನೆ ಚುಡಾಯಿಸಿದ ಹುಡುಗರ ತಂಡ ಅವರಿಬ್ಬರ ಕಣ್ಣಿಗೆ ಬೀಳಲೇ ಇಲ್ಲ. ಮುಂದಿನ ಕೆಲವು ವಾರಗಳವರೆಗೆ ರಂಜಿತ್ ಮತ್ತು ಅವನ ಪಟಾಲಂಗಳಿಂದ ಯಾವುದೇ ಕಿರುಕುಳ ಪುನರಾವರ್ತನೆಯಾಗಲಿಲ್ಲ. ಆರತಿಯಾಗಲೀ ವಂದನಾ ಆಗಲೀ ಆ ವಿಷಯವನ್ನು ಅವರೊಂದಿಗೆ ಕೆದಕಿ ಮತ್ತೆ ರಂಪ ಮಾಡಲಿಕ್ಕೆ ಹೋಗಲಿಲ್ಲ.

ಮತ್ತೊಂದು ದಿನ ಬೆಳಿಗ್ಗೆ ಆರತಿ ವಂದನಾಳೊಂದಿಗೆ ಕಾಲೇಜಿನ ಆವರಣದಲ್ಲಿ ಮೆಲ್ಲಗೆ ಹೆಜ್ಜೆ ಹಾಕತೊಡಗಿದ್ದಳು. ತರಗತಿ ಶುರುವಾಗುವುದಕ್ಕೆ ಇನ್ನೂ ಸಾಕಷ್ಟು ಸಮಯವಿದ್ದುದರಿಂದ ಮಾತುಗಳಲ್ಲಿ ಮುಳುಗಿದ್ದ ಅವರಿಬ್ಬರೂ ಕುಲುಕುಲು ನಗುತ್ತಾ ನಿಧಾನವಾಗಿ ಮಂದಗಮನೆಯರಾಗಿ ಹೆಜ್ಜೆ ಹಾಕುತ್ತಿದ್ದರು. ಅಷ್ಟರಲ್ಲಿ ಅಂದೂ ಪುನಃ ರಂಜಿತನ ತಂಡ ಅವರ ಹತ್ತಿರ ಸುಳಿದಿತ್ತು. 
"ಹಾಯ್ ಗಲ್ರ್ಸ, ಹೌ ಆರ್ ಯು?" ಎಂದು ರಂಜಿತ್ ಮಾತಿಗೆ ಶುರುವಿಟ್ಟುಕೊಂಡಿದ್ದ. 
"ವಂದನಾ ಮೇಡಂ, ನಿಮ್ಮ ಗೆಳತಿ ಆರತಿ ನಮ್ಮ ಟೀಮಿಗೆ ತುಂಬಾ ಇಷ್ಟವಾಗಿ ಬಿಟ್ಟಿದ್ದಾಳೆ. ನಾವೆಲ್ಲಾ ಆಕೆಯ ಸೌಂದರ್ಯೋಪಾಸಕರು. ರಿಯಲೀ ನಿಮ್ಮ ಫ್ರೆಂಡ್ ತುಂಬಾ ಸ್ಮಾರ್ಟಾಗಿದ್ದಾರೆ. ಅವರ ಸ್ಮಾರ್ಟನೆಸ್‍ಗೆ ಇನ್ನೂ ಮೆರುಗು ಕೊಡಲು ಅವರಿಗೆ ಮಾಡ್ ಡ್ರೆಸ್ ತೊಡಲು ಅಂದು ನಮ್ಮ ಇಡೀ ತಂಡ ಸಲಹೆ ಕೊಡುತ್ತಾ ಬೇಡಿಕೆಯನ್ನೂ ಇಟ್ಟಿತ್ತು. ಆದರೆ ಆರತಿ ಮೇಡಂನ ಡ್ರೆಸ್ ಕೋಡ್‍ನಲ್ಲಿ ಕೊಂಚವೂ ಬದಲಾವಣೆ ಆಗಿಲ್ಲ ಆಗಿನಿಂದ. ಆದ್ದರಿಂದ ಇಂದು ನೀವೂ ಅವರ ಜೊತೆಗೆ ಇರುವುದರಿಂದ ಮತ್ತೊಮ್ಮೆ ನಮ್ಮ ಕಳಕಳಿಯ ಮನವಿಯನ್ನು ನಿಮ್ಮ ಮುಖಾಂತರ ಸಲ್ಲಿಸ ಬೇಕೆಂದಿದ್ದೇವೆ. ಮೇಡಂ, ನೀವಾದರೂ ಸ್ವಲ್ಪ ತಿಳುವಳಿಕೆ ಹೇಳಿರಿ ನಿಮ್ಮ ಫ್ರೆಂಡ್‍ಗೆ."
"ವಂದನಾ ಮೇಡಂ, ನಿಮ್ಮ ಸಮಯೋಚಿತ ಸಲಹೆ ಅವರಲ್ಲಿ ಸುಧಾರಣೆ ತರಬಹುದು ಎಂಬುದು ನಮ್ಮ ಅನಿಸಿಕೆ."

ಆರತಿ ಮತ್ತು ವಂದನಾ ಇಬ್ಬರೂ ಅವರೆಲ್ಲರ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದವರಂತೆ ಹೆಜ್ಜೆ ಹಾಕತೊಡಗಿದ್ದರು.
“ಅದೇನ್ರೀ ಮೇಡಂ, ನಾವೆಲ್ಲಾ ಆವಾಗಿನಿಂದ ಏನನ್ನೋ ಹೇಳುತ್ತಲಿದ್ದರೂ ನೀವು ಮಾತ್ರ ಹಾಗೇ ಸುಮ್ಮನೇ ಹೋಗುತ್ತಿದ್ದೀರಿ. ಎಪ್ಪತರ ದಶಕದ ಹುಡುಗಿಯರಂತೆ ಎದೆಯ ಮೇಲೆ ಅದೇನು ವೇಲ್‍ನ್ನು ಹಾಕಿಕೊಂಡು ನಿಮ್ಮ ಅತ್ಯಾಕರ್ಷಕ ಸೌಂದರ್ಯವನ್ನು ಮುಚ್ಚಿಟ್ಟುಕೊಳ್ಳುತ್ತಿರುವಿರಿ ಆರತಿ ಮೇಡಂ? ಈಗಿನ ಕಾಲದ ಹುಡುಗಿಯರಂತೆ ಶಾರ್ಟ ಟಾಪ್ ಹಾಕಿಕೊಂಡರೆ ಸರಿ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ನೀವು ನಿಮ್ಮ ಡ್ರೆಸ್ ಕೋಡನ್ನು ಬದಲಿಸದೇ ಇದ್ದುದರಿಂದ ನಾವೇ ನಿಮಗಾಗಿ ಈ ಮಾಡ್ ಡ್ರೆಸ್‍ನ್ನು ತಂದಿದ್ದೇವೆ. ಈ ನಿಮ್ಮ ವೇಲನ್ನು ಕಿತ್ತೊಗೆಯಿರಿ” ಎಂದು ಹೇಳುತ್ತಾ ರಂಜಿತ್‍ನ ಗೆಳೆಯ ಚಾಲ್ರ್ಸ್ ಆರತಿಯ ವೇಲಿಗೆ ಕೈ ಹಾಕಿ ವೇಲನ್ನು ಎಳೆದೊಗೆದುಬಿಟ್ಟ. ಆರತಿ ಮತ್ತು ವಂದನಾರಿಗೆ ಗಾಬರಿಯೋ ಗಾಬರಿ. ಆರತಿ ತನ್ನೆರಡೂ ಕೈಗಳಿಂದ ಎದೆಯನ್ನು ಮುಚ್ಚಿಕೊಳ್ಳುವ ಪ್ರಯತ್ನಕ್ಕೆ ಮುಂದಾದಳು. ವಂದನಾ, “ಹೆಲ್ಪ್, ಹೆಲ್ಪ್” ಎಂದು ಕೂಗಾಟಕ್ಕೆ ಮುಂದಾದಳು. ರಂಜಿತ್ ಮತ್ತು ಅವನ ಪಟಾಲಂಗಳ ದಬ್ಬಾಳಿಕೆಯ ಬಗ್ಗೆ ಅರಿವಿದ್ದ ವಿದ್ಯಾರ್ಥಿ ವೃಂದದವರು ಆ ದೃಷ್ಯವನ್ನು ನೋಡಿಯೂ ನೋಡದವರಂತೆ ತಮ್ಮಷ್ಟಕ್ಕೆ ತಾವು ಹೆಜ್ಜೆ ಹಾಕತೊಡಗಿದ್ದರು. ರವಿರಾಜ್ ಆರತಿಯ ಕೈಗಳನ್ನು ಹಿಡಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದ.
ಅಷ್ಟರಲ್ಲಿ, “ರೀ ಮಿಸ್ಟರ್, ನೀವೊಬ್ಬ ಕಾಲೇಜ್ ವಿದ್ಯಾರ್ಥಿಯಾ? ವಿದ್ಯಾರ್ಜನೆಗೆ ಬಂದಿರುವ ನಿಮಗೆ ಇದು ಶೋಭೆ ತರುವಂಥಹ ಕೆಲಸವೇ? ನಿಮಗೆ ನಾಚಿಕೆಯಾಗುವುದಿಲ್ಲವೇ? ಮನೆಯಲ್ಲಿ ನಿಮಗೆ ಅಕ್ಕ-ತಂಗಿಯರು ಇಲ್ಲವೇ? ಆಕೆ ಒಂದು ವೇಳೆ ಪ್ರಾಂಶುಪಾಲರಿಗೆ ಕಂಪ್ಲೇಟ್ ಕೊಟ್ಟರೆ ನೀವು ಕಾಲೇಜಿನಿಂದಲೇ ಡಿಬಾರ್ ಆಗುವಿರಿ ಎಂಬುದು ನಿಮಗೆ ಗೊತ್ತಿರಬೇಕು ಅಲ್ಲವೇ? ಎಲ್ಲವನ್ನೂ ತಿಳಿದುಕೊಂಡಿರುವ ನೀವು ಇಂಥಹ ಸಾಹಸಕ್ಕೆ ಇಳಿದಿರುವುದು ತಪ್ಪು.” ರಂಜಿತ್‍ನ ಗುಂಪಿನ ಹಿಂದುಗಡೆಯಿಂದ ಅದೇ ಕಾಲೇಜಿನಲ್ಲಿ ಅಂತಿಮ ಬಿ.ಎ.ದಲ್ಲಿ ಓದುತ್ತಿದ್ದ ಶಶಾಂಕ್ ಅಬ್ಬರಿಸತೊಡಗಿದ್ದ.
“ರೀ ಮಿಸ್ಟರ್, ಇಲ್ಲಿ ನಿನಗೇನು ಕೆಲಸ? ನಿನ್ನ ದಾರಿ ನೋಡಿಕೊಂಡು ಸುಮ್ಮನೇ ಹೋಗು. ಆಫ್ಟರ್ ಆಲ್ ನಾವು ಈಕೆಗೆ ಒಳ್ಳೇ ಮಾಡ್ ಡ್ರೆಸ್ ಕೋಡ್ ಬಗ್ಗೆ ಗೈಡ್ ಮಾಡುತ್ತಿದ್ದೇವೆ. ಇಂಥಹ ಬ್ಯೂಟಿ ಹಳ್ಳಿ ಗುಗ್ಗುವಿನಂತೆ ಇರುವುದು ನಮ್ಮ ಕಾಲೇಜಿನ ಇಮೇಜಿಗೆ ಧಕ್ಕೆ ತರುವಂಥಹದು. ನೀನೇನಾದರೂ ಇಂದು ಇಲ್ಲಿ ನಿನ್ನ ಆದರ್ಶತನ ಮೆರೆದು ಬಾಲ ಬಿಚ್ಚಲು ಪ್ರಯತ್ನಿಸಿದರೆ ನಾವೆಲ್ಲಾ ಸೇರಿ ಕತ್ತರಿಸಿ ಹಾಕುತ್ತೇವೆ. ಹುಷಾರ್!” ಎಂದ ರಂಜಿತ್.
“ನಮ್ಮ, ನಿಮ್ಮ ಹಾಗೆ ಆಕೆಯೂ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿ. ತನಗೆ ತಿಳಿದಂತೆ ಡ್ರೆಸ್ ಮಾಡಿಕೊಂಡು ಬರುವುದಕ್ಕೆ ಆಕೆಗೆ ಹಕ್ಕಿದೆ. ನಿಮ್ಮ ಡ್ರೆಸ್ ಕೋಡ್ ನಿಮಗೆ, ಆಕೆಯ ಡ್ರೆಸ್ ಕೋಡ್ ಆಕೆಗೆ. ಇಂಥಹದೇ ಡ್ರೆಸ್ ಧರಿಸಿಕೊಂಡು ಬರಬೇಕೆಂದು ಆಕೆಗೆ ಡಿಕ್ಟೇಟ್ ಮಾಡಲು ನಿಮಗೆ ಯಾವ ಹಕ್ಕೂ ಇಲ್ಲ. ಗಲಾಟೆ ಮಾಡದೇ ಸುಮ್ಮನೇ ಹೊರಡಿ.” ಶಶಾಂಕ್ ಧೈರ್ಯದಿಂದ ಹೇಳಿದ. ಶಶಾಂಕನ ಮಾತುಗಳು ರಂಜಿತ್ ಮತ್ತು ಅವನ ಗೆಳೆಯರ ಗಂಡಸುತನವನ್ನು ಕೆಣಕತೊಡಗಿದ್ದವು.
“ಹಾಗಾದರೆ ಇಂದು ನಮ್ಮ ಕೈಗಳು ನಿನ್ನ ದೇಹದ ಕಣಕಣದೊಂದಿಗೆ ಮಾತಾಡುತ್ತವೆ. ನಮ್ಮ ಏಟುಗಳ ರುಚಿ ಸವಿಯಲು ತಯಾರಾಗು” ಎಂದು ಹೇಳುತ್ತಾ ಚಾರ್ಲ್ಸ್ ಶಶಾಂಕ್ ನ ಮುಖಕ್ಕೆ ಇಕ್ಕಲು ಮುಂದಾದ. ಚಾರ್ಲ್ಸ ದಾಳಿಯನ್ನು ನಿರೀಕ್ಷಿಸಿದ್ದ ಶಶಾಂಕ್ ಪಕ್ಕಕ್ಕೆ ಸರಿದಿದ್ದ ತಕ್ಷಣ. ಶಶಾಂಕನ ಈ ಚಾಲಾಕಿತನವನ್ನು ನಿರೀಕ್ಷಿಸಿರದಿದ್ದ ಶಶಾಂಕ್ ನ ಏಟು ಶಶಾಂಕನ ಹಿಂದಿದ್ದ ಸುಂದರನ ಮುಖಕ್ಕೆ ತಾಗಿತ್ತು. ಶಶಾಂಕ್, ರಂಜಿತ್ ಮತ್ತು ಅವನ ಪಾಟಾಲಂಗಳನ್ನು ಚೆನ್ನಾಗೇ ಎದುರಿಸಿದ್ದ. ಐದು ನಿಮಿಷಗಳಲ್ಲಿ ಅವರೆಲ್ಲರೆನ್ನೂ ಚೆನ್ನಾಗಿ ಚಚ್ಚಿ ಹಣ್ಣುಗಾಯಿ, ನೀರುಗಾಯಿ ಮಾಡಿದ. “ಇನ್ನೂ ಹೀಗೆ ಮುಂದುವರಿದರೆ ನಮ್ಮ ಮಾನವನ್ನು ಹರಾಜಿಗಿಟ್ಟುಬಿಡುತ್ತಾನೆ ಈ ಹುಡುಗ. ಸದ್ಯಕ್ಕೆ ಇವನ ಜೊತೆಗೆ ಹೋರಾಟ ಬೇಡ. ಬೇರೆ ಎಲ್ಲಿಯಾದರೂ ಇವನಿಗೆ ಸರಿಯಾಗಿ ಬುದ್ಧಿ ಕಲಿಸೋಣ” ಎಂದು ಮನದಲ್ಲೇ ಅಂದುಕೊಂಡ ರಂಜಿತ್ ತನ್ನ ಸ್ನೇಹಿತರಿಗೆಲ್ಲಾ ಹಿತವಚನ ನೀಡಿ ಅಷ್ಟಕ್ಕೇ ಹೋರಾಟಕ್ಕೆ ಇತಿಶ್ರೀ ಹಾಡಿದ. “ಹೊತ್ತು ಬಂದಾಗ ಕತ್ತೆ ಕಾಲು ಹಿಡಿಯುವುದೇ ಲೇಸು” ಎಂದು ರಂಜಿತ್ ಮನದಲ್ಲೇ ಅಂದುಕೊಂಡು ಆರತಿ, ವಂದನಾ ಮತ್ತು ಶಶಾಂಕನಿಗೆ ಸಾರಿ ಹೇಳಿ ಅಲ್ಲಿಂದ ಕಾಲ್ತೆಗೆದಿದ್ದ.


"ಹಾಯ್ ಶಶಾಂಕ್ ಅಣ್ಣಾ, ನೀನು ಯಾವಾಗ ಬಂದಿ? ಅಂತೂ ನನ್ನ ಗೆಳತಿಯ ಮಾನವನ್ನು ಕಾಪಾಡಿಬಿಟ್ಟಿ. ಶರವೇಗದಲ್ಲಿ ಬಂದು ಆ ಪುಂಡರನ್ನು ಚಚ್ಚಿದ್ದು ನಮಗೆ ಕನಸೋ, ನನಸೋ ಎಂದು ಅನಿಸುತ್ತಿದೆ. ನೀನೊಬ್ಬ ಸೂಪರ್ ಹೀರೋ ಕಣೋ. ನಿನಗೆ ನಮ್ಮಿಬ್ಬರ ಹಾರ್ದಿಕ ಧನ್ಯವಾದಗಳು. ಅಂದ ಹಾಗೆ ಈಕೆ ನನ್ನ ಆತ್ಮೀಯ ಗೆಳತಿ ಮತ್ತು ಸಹಪಾಠಿ ಆರತಿ ಅಂತ, ಆರತಿ, ಇವನು ನನ್ನ ಕಸಿನ್ ಬ್ರದರ್ ಶಶಾಂಕ ಅಂತ. ಇದೇ ಕಾಲೇಜಿನಲ್ಲಿ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ" ಎಂದು ವಂದನಾ ಶಶಾಂಕನ ಪರಾಕ್ರಮವನ್ನು ಪ್ರಶಂಸಿಸುತ್ತಾ, ಶಶಾಂಕನಿಗೆ ಆರತಿಯ ಮತ್ತು ಆರತಿಗೆ ಶಶಾಂಕನ ಪರಿಚಯ ಮಾಡಿಕೊಟ್ಟಳು. ಒಂದು ಕ್ಷಣ ಶಶಾಂಕ ಮತ್ತು ಆರತಿಯ ನಾಲ್ಕು ಕಣ್ಣುಗಳು ಒಂದಾದವು. ಬೆದರಿದ ಹರಿಣಿಯಂತಾಗಿದ್ದ ಚಿಗರೆ ಕಣ್ಣಿನ ಹುಡುಗಿ ಆರತಿ ಶಶಾಂಕನಿಗೆ ತಮಾಷೆಯಾಗಿ ಕಂಡಳು. 
"ಅಣ್ಣಾ, ಈ ಪುಂಡರು ಈ ಮೊದಲೇ ಒಂದು ದಿನ ಆರತಿಯನ್ನು ಕಾಡಿಸಿ ಗೋಳು ಹೊಯ್ದುಕೊಂಡಿದ್ದಾರೆ. ಆವಾಗಲೇ ನಾನು ನಿನಗೆ ಆ ವಿಷಯವನ್ನು ನಿನ್ನ ಕಿವಿಗೆ ಹಾಕಬೇಕೆಂದಿದ್ದೆ. ಆದರೆ ಈ ಪುಂಡರು ಮತ್ತೆ ಇವಳನ್ನು ಕಾಡಿಸಲಿಕ್ಕಿಲ್ಲ, ಅನಾವಶ್ಯಕವಾಗಿ ವಿಷಯವನ್ನು ದೊಡ್ಡದು ಮಾಡಬಾರದೆಂದು ಅಂದುಕೊಂಡು ಸುಮ್ಮನಿದ್ದೆ. ಇಂದು ನೀನು ಆಪದ್ಬಾಂಧವನಂತೆ ಬಂದು ನಮ್ಮನ್ನು ರಕ್ಷಿಸಿದಿ. ನಿನಗೆಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ." ವಂದನಾ ತನ್ನ ಮಾತುಗಳನ್ನು ಮುಂದುವರಿಸಿದ್ದಳು. 
"ಸರ್, ನಿಮ್ಮ ಸಮಯೋಚಿತ ಸಹಾಯಕ್ಕೆ ನನ್ನ ಹೃದಯದಾಳದಿಂದ ಧನ್ಯವಾದಗಳನ್ನು ಅರ್ಪಿಸುವೆ" ಎಂದು ಹೇಳುತ್ತಿದ್ದ ಆರತಿಯ ಧ್ವನಿ ನಡುಗುತ್ತಿತ್ತು. 
"ನೀವು ತುಂಬಾ ಹೆದರಿದಂತೆ ಕಾಣುತ್ತಿದೆ? ಈ ರೀತಿ ಅಂಜಿಕೊಳ್ಳುವ ಅವಶ್ಯಕತೆಯೇ ಇಲ್ಲ. ವಂದನಾ ಇವರನ್ನು ಕರೆದುಕೊಂಡು ಹೋಗಿ ಸ್ವಲ್ಪ ನೀರು ಕುಡಿಸಿ ಸಮಾಧಾನ ಮಾಡು." ಶಶಾಂಕ್ ಆರತಿಯ ಕಣ್ಣಲ್ಲೇ ದೃಷ್ಟಿನೆಟ್ಟು ಹೇಳಿದ್ದ. 
"ಶಶಿ, ಹಾಗೇನಿಲ್ಲ. ಈಕೆ ಬೋಳ್ಡಾಗಿಯೇ ಇದ್ದಾಳೆ. ಆದರೆ ಅವರು ಬಹಳಷ್ಟು ಜನರಿರುವರಲ್ಲಾ, ಅದಕ್ಕೇ ಆತಂಕಗೊಂಡಿದ್ದಾಳೆ ಅಷ್ಟೇ." ವಂದನಾ ಸಮಜಾಯಿಸಿ ನೀಡಿದಳು ಗೆಳತಿಯ ಪರವಾಗಿ. ಶಶಾಂಕ್ ಇಬ್ಬರಿಗೂ ಧೈರ್ಯ ಮತ್ತು ಬೈ ಹೇಳಿ ಅಲ್ಲಿಂದ ತನ್ನ ಕ್ಲಾಸಿನ ಕಡೆಗೆ ಹೆಜ್ಜೆ ಹಾಕಿದ ಗಂಭೀರವಾಗಿ. ಆತನ ನಡೆಯಲ್ಲಿದ್ದ ದೃಢತೆ ಇಷ್ಟವಾಗತೊಡಗಿತ್ತು ಆರತಿಗೆ. 
ಆ ದಿನ ಸಂಜೆ ಶಶಾಂಕ್ ವಂದನಾಳಿಗೆ ಫೋನಾಯಿಸಿ, "ವಂದನಾ, ನಿನ್ನ ಗೆಳತಿ ನಿಜವಾಗಿಯೂ ತುಂಬಾ ಬ್ಯೂಟಿಫುಲ್. ಅದಕ್ಕೇ ರಂಜಿತ್ ಮತ್ತು ಅವನ ಪಟಾಲಂಗಳು ಆಕೆಯ ಹಿಂದೆ ಬಿದ್ದಿದ್ದಾರೆ. ರಿಯಲೀ ಶಿ ಈಜ್ ಫೆಂಟ್ಯಾಸ್ಟಿಕ್ ಕಣೆ." ಎಂದಿದ್ದ.            
"ಶಶಿ, ನನ್ನ ಗೆಳತಿಯ ರೂಪ ಲಾವಣ್ಯ ನಿನ್ನ ಮನಸ್ಸನ್ನೂ ಸೆಳೆದುಬಿಟ್ಟೈತೇನು?" ವಂದನಾ ಶಶಾಂಕನನ್ನು ರೇಗಿಸಲಿಕ್ಕೆ ಮುಂದಾದಳು. 
"ವಂದನಾ, ನಿಜವಾಗ್ಲೂ ಆರತಿ ತುಂಬಾ ಸ್ಮಾರ್ಟಾಗಿದ್ದಾಳೆ."
"ಈಗೇನು? ನಿನ್ಗೆ ಅವ್ಳ ಜೊತೆಗೆ ಮಾತಾಡ್ಬೇಕೇನೋ? ಅವ್ಳ ಫೋನ್ ನಂಬರ್ ಕೊಡ್ಲೇನೋ?"
"ಹಂಗೇನಿಲ್ಲ ಬಿಡೇ? ನೀನೂ ಭಾರಿ ಬೆರಕಿ ಅದಿ ನೋಡು."
"ನನಗೆ ಎಲ್ಲಾ ಗೊತ್ತಾಗುತ್ತೆ ಬಿಡೋ? ನಾನೇನು ಬೆರಳು ಚೀಪುವ ಮಗುವಲ್ಲ. ತೊಗೋ, ತೊಗೋ ಆರತಿಯ ನಂಬರು. ಎನಿ ವೇ ಆಲ್ ದಿ ಬೆಸ್ಟ್ ಕಣೋ" ಎಂದು ಶಶಾಂಕನನ್ನು ಕಾಡಿಸುತ್ತಾ ವಂದನಾ ಅವನಿಗೆ ಆರತಿಯ ಮೊಬೈಲ್ ನಂಬರ್ ಕೊಟ್ಟಿದ್ದಳು. 

ಮರುದಿನ ಕಾಲೇಜಿಗೆ ಹೋದಾಗ ವಂದನಾ ಗೆಳತಿ ಆರತಿಗೆ, “ಏನೇ ಸುಬ್ಬಕ್ಕಾ, ಯಾರಾದರೂ ಹೊಸ ಗೆಳೆಯ ನಿನಗೆ ಫೋನಾಯಿಸಿದ್ದನೇನೇ?”
“ಅದ್ಯಾರೂ ನನಗೆ ಫೊನ್ ಮಾಡೇ ಇಲ್ಲ ಬಿಡು. ಅದ್ಯಾರೇ ನನ್ನ ಹೊಸ ಗೆಳೆಯ?” ಆರತಿ ವಂದನಾಳಿಗೆ ಮರುಪ್ರಶ್ನಿಸಿದ್ದಳು.
“ಅದೇ ಕಣೇ, ನಿನ್ನೆನೇ ನಿನ್ನನ್ನು ಆ ರಂಜಿತ್ ಮತ್ತು ಅವನ ಧಾಂಡಿಗರಿಂದ ರಕ್ಷಿಸಿ, ಪರಿಚಿತರಾದನಲ್ಲ, ನನ್ನ ಅಣ್ಣ ಶಶಾಂಕ್. ನಿನ್ನೆ ಸಂಜೆ ಅದೇಕೋ ನಿನ್ನ ಫೋನ್ ನಂಬರ್ ತೆಗೆದುಕೊಂಡಿದ್ದ.”
“ಹೌದೇ? ಆದರೆ ಅವರೇನು ನನಗೆ ಫೊನಂತೂ ಮಾಡಿಲ್ಲ. ಇರಲಿ ಬಿಡೇ, ಇದರಲ್ಲೇನಂಥಹ ವಿಶೇಷತೆ ಇದೆ?”
“ಹೌದಾ, ಹಾಗಂತೀಯಾ?” ಗೆಳತಿಯರಿಬ್ಬರು ಅಲ್ಲಿಗೇ ಆ ವಿಷಯದ ಬಗ್ಗೆ ಮಾತಾಡುವುದನ್ನು ನಿಲ್ಲಿಸಿದ್ದರು.
ಆ ದಿನ ಸಂಜೆ ಆರತಿಯ ಮೊಬೈಲಿಗೆ ಅನ್‍ನೋನ್ ಕಾಲ್ ಒಂದು ಬಂದಾಗ ಸ್ವೀಕರಿಸಬೇಕೋ ಬೇಡವೋ ಎಂಬ ದ್ವಂದ್ವದಲ್ಲಿ ಸುಮ್ಮನಿದ್ದುಬಿಟ್ಟಳು. ಅದೇ ನಂಬರ್ ಮೂರು ಸಲ ಪುನರಾವರ್ತನೆಯಾದಾಗ, ಒಂದು ವೇಳೆ ಈ ಕಾಲ್ ಅಪರಿಚಿತ ಹುಡುಗನದೇನಾಗಿದ್ದರೆ ದಬಾಯಿಸಿ ಬಿಡಬೇಕು ಎಂದು ಅಂದುಕೊಂಡು ಕರೆಯನ್ನು ಸ್ವೀಕರಿಸುತ್ತಿದ್ದಂತೆ ಆ ಕಡೆಯಿಂದ, “ಮೇಡಂ, ನಾನು ಶಶಾಂಕ್ ಮಾತಾಡುತ್ತಿರೋದು. ನನ್ನ ಜೊತೆಗೆ ಮಾತಾಡಲಿಕ್ಕೆ ಬೇಸರವೇ? ಬೇಗ ಕಾಲ್ ರಿಸೀವ್ ಮಾಡಲೇ ಇಲ್ಲ” ಎನ್ನುವ ಮಾತುಗಳು ಕೇಳಿದಾಗ, “ಸರ್, ಸಾಮಾನ್ಯವಾಗಿ ನಾನು ಅನ್‍ನೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ತಡವಾಗಿ ನಿಮ್ಮ ಕರೆ ಸ್ವೀಕರಿಸಿದ್ದಕ್ಕೆ ಬೇಸರವಿಲ್ಲ ತಾನೇ? ಸಾರಿ ಸರ್. ಕೆಲವೊಮ್ಮೆ ಅಪರಿಚಿತ ಹುಡುಗರು ಸುಮ್ಮಸುಮ್ಮನೇ ಫೋನ್ ಮಾಡಿ ರೇಗಿಸಲು ಶುರುಮಾಡುತ್ತಾರೆ.” ಆರತಿಯ ಧ್ವನಿಯಲ್ಲಿ ನಮ್ರತೆ ಇತ್ತು.
“ಹೌದೌದು ಆರತಿಯವರೇ, ನೀವ್ಹೇಳುವುದು ಸರಿಯಾಗಿಯೇ ಇದೆ. ನಿನ್ನೆ ನೀವು ಬೆದರಿದ ಹರಿಣಿಯಂತಾಗಿಬಿಟ್ಟಿದ್ದಿರಿ. ತಂಗಿ ವಂದನಾಳಿಂದ ನಿಮ್ಮ ಫೋನ್ ನಂಬರ್ ತೆಗೆದುಕೊಂಡು ನಿನ್ನೆನೇ ಮಾತಾಡಬೇಕೆಂದುಕೊಂಡೆ. ಆದರೆ ಯಾಕೋ ಧೈರ್ಯ ಬರಲಿಲ್ಲ. ಇಂದು ನಿಮ್ಮ ಜೊತೆಗೆ ಮಾತಾಡಲೇಬೇಕು ಎಂದು ಅನಿಸಿದ್ದರಿಂದ ಫೋನಾಯಿಸಿಯೇ ಬಿಟ್ಟೆ. ನೀವು ಯಾರಿಗೂ ಹೆದರದೇ ಧೈರ್ಯವಾಗಿದ್ದುಕೊಂಡು ನಿಮ್ಮ ಅಭ್ಯಾಸದ ಕಡೆಗೆ ಗಮನ ಹರಿಸಿರಿ. ಏನಾದರೂ ಸಮಸ್ಯೆ ಬಂದರೆ ನನಗೆ ತಿಳಿಸಿರಿ.” ಇಷ್ಟು ಹೇಳಿ ಶಶಾಂಕ ತನ್ನ ಮಾತು ಮುಗಿಸಿದ್ದ. ಹೀಗೆ ಶುರುವಾದ ಶಶಾಂಕ ಮತ್ತು ಆರತಿಯವರ ಮಾತುಗಳು ಹಾಗೇ ಮುಂದುವರಿದಿದ್ದವು. ಹಬ್ಬ ಹರಿದಿನಗಳಲ್ಲಿ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಂತೆ ಹಾಗೇ ಆತ್ಮೀಯತೆ ಹೆಚ್ಚಾಗತೊಡಗಿತ್ತು. ಮೊದಮೊದಲು ಹದಿನೈದು ದಿನಗಳಿಗೊಮ್ಮೆ ಮಾತಾಡುತ್ತಿದ್ದ ಅವರು ನಂತರ ವಾರಕ್ಕೊಂದರಂತೆ ತಪ್ಪದೇ ಮಾತಾಡತೊಡಗಿದರು. ಹಾಗೇ ಮುಂದೆ ಕೆಲವು ದಿನಗಳಾಗುಷ್ಟರಲ್ಲಿ ದಿನಕ್ಕೊಂದರಂತೆ ಮಾತಾಡದಿದ್ದರೆ ಏನನ್ನೋ ಕಳೆದುಕೊಂಡ ಭಾಸ ಇಬ್ಬರಿಗೂ ಆಗತೊಡಗಿತ್ತು.


"ಮಿಂಚಾಗಿ ನೀ ಬರಲು, ನಿನ್ನ ಪ್ರೇಮದ ಪರಿಯ ನಾನರಿಯದೇ ಕನಸೊಂದು ಶುರುವಾಗಿದೆ ನನ್ನೆದೆಯಲ್ಲಿ" ಎಂದು ಆರತಿಯ ಹೃದಯಕ್ಕೆ ಮನದಟ್ಟಾಗತೊಡಗಿದ್ದರೂ, "ಅಯ್ಯೋ, ನನ್ನಂಥಹ ಬಡವಿಗೇಕೆ ಈ ಪ್ರೀತಿ, ಪ್ರೇಮ. ಬೇಡ, ಬೇಡ, ಇಂಥಹದ್ದಕ್ಕೆ ನಾನು ಲಾಯಕ್ಕಿಲ್ಲ. ನನ್ನ ಇತಿಮಿತಿಯಲ್ಲಿ ನಾನಿರಬೇಕು" ಎಂದು ಅಂದುಕೊಂಡು ಆರತಿ ಸುಮ್ಮನೇ ಇದ್ದುಬಿಡುತ್ತಿದ್ದಳು. ಆದರೆ ಇಬ್ಬರ ಮಾತುಗಳ ವಿನಿಮಯಕ್ಕೇನು ಕೊರತೆ ಇರಲಿಲ್ಲ. ಆ ವರ್ಷ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಆರತಿ ಎನ್. ಗೋಪಾಲಕೃಷ್ಣ ಅಡಿಗರ, "ಯಾವ ಮೋಹನ ಮುರಳಿ ಕರೆಯಿತೋ" ಎಂಬ ಕವನವನ್ನು ಹಾಡಿ ರಂಜಿಸಿದ್ದಾಗ ಆಕೆಯ ಧ್ವನಿ ಮಾಧುರ್ಯತೆಗೆ ತಲೆದೂಗದವರೇ ಇದ್ದಿದರಲಿಲ್ಲ. ಶಶಾಂಕ್ ಮತ್ತು ವಂದನಾ ಇಬ್ಬರಿಗೂ ಮೋಡಿ ಮಾಡಿಬಿಟ್ಟಿದ್ದಳು ಆರತಿ. 
ಆ ದಿನ ರಾತ್ರಿ ಶಶಾಂಕ್ ಆರತಿಗೆ ಫೋನ್ ಮಾಡಿ, "ನಿಮ್ಮ ಮೋಹನ ಮುರಳಿ ನನ್ನನ್ನು ಕೈಬೀಸಿ ಕರೆಯುತ್ತಿದೆ ಆರತಿ. ನಿಮ್ಮನ್ನು ನೋಡಿದ ದಿನದಂದಿನಿಂದ ನಾನು ನಿಮ್ಮನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಇಂದು ನನ್ನ ಮನದಲ್ಲಿದ್ದುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ದಯವಿಟ್ಟು ನೀವು ಎರಡು ಮಾತಿಲ್ಲದೇ ಒಪ್ಪಿಕೊಳ್ಳಬೇಕಾಗಿ ವಿನಂತಿ" ಎಂದು ತುಂಬಾ ಭಾವುಕನಾಗಿ ಮೊದಲ ಬಾರಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ.
"ಸರ್, ಸರ್, ನೀವೆಲ್ಲೋ, ನಾನೆಲ್ಲೋ? ನೀವು ಆಕಾಶವಾದರೆ ನಾನು ಭುವಿ ಅಷ್ಟೇ. ಆಕಾಶ ಭೂಮಿ ಎಂದಾದರೂ ಒಂದಾಗಲು ಸಾಧ್ಯವೇ?" ಎಂದು ಹೇಳಿ ಆರತಿ ಶಶಾಂಕನ ಇಚ್ಛೆಯನ್ನು ಸಾರಾಸಗಟಾಗಿ ತಿರಸ್ಕರಿಸಲು ಮುಂದಾಗಿದ್ದಳು. ಆದರೆ ಅಷ್ಟಕ್ಕೇ ಶಶಾಂಕ್ ತನ್ನ ಪಟ್ಟನ್ನು ಸಡಿಲಿಸಿಯಾನೆ? ಉಹೂಂ. ಅವ ಏನೇ ಹೇಳಿದರೂ, "ಸರ್, ನೀವು ಭಾರೀ ಶ್ರೀಮಂತರು. ನಾನೋ ಬಡವಿ. ನನಗೂ, ನಿಮಗೂ ಇದು ಸಾಧ್ಯವಾಗದ ಮಾತು" ಎಂದು ಆರತಿ ಹೇಳುತ್ತಿದ್ದಳೇ ವಿನಃ ಹೂಂ ಎಂದು ಹೇಳಲೇ ಇಲ್ಲ. ಕೊನೆಗೆ ಶಶಾಂಕ್ ವಂದನಾಳ ಮಧ್ಯಸ್ತಿಕೆಯ ಸಹಾಯ ಹಸ್ತವನ್ನು ಪಡೆಯಲೇ ಬೇಕಾಯಿತು. 
ಶಶಾಂಕನ ಇಷ್ಟಾನಿಷ್ಟಗಳನ್ನು ಪರಾಮರ್ಶಿಸಿದ ವಂದನಾ ಅವನ ಬೇಡಿಕೆಗೆ ಅಸ್ತು ಎಂದು ಹೇಳಿ ಆರತಿಗೆ, "ಏನೇ ನಿಂದು? ತುಂಬಾ ಕಠೋರ ಮನಸ್ಸು ಕಣೆ! ಶಶಾಂಕ್ ಹೂಂ ಅಂದರೆ ನೂರಾರು ಹುಡುಗಿಯರ ಸಾಲೇ ನಿಲ್ಲುತ್ತದೆ. ಅಂಥಹ ಹುಡುಗನನ್ನು ಪಡೆಯಲು ಏಳೇಳು ಜನ್ಮದಲ್ಲಿ ಪುಣ್ಯ ಮಾಡಿರಬೇಕು. ಬಾಯಿ ಮುಚ್ಕೊಂಡು ಸುಮ್ಮನೇ ಹೂಂ ಅನ್ನು. ಅವನ ಮೇಲೆ ನಿನಗೆ ಪ್ರೀತಿ ಇರದಿದ್ದರೆ ಅವನ ಜೊತೆಗೆ ಫೋನಿನಲ್ಲೇಕೆ ಮಾತು ಮುಂದುವರಿಸಿರುವಿ? ನಿನಗೂ ಅವನ ಮೇಲೆ ಲವ್ ಆಗಿ ಬಿಟ್ಟೈತೆ ಎಂಬುದು ನನಗೆ ಗೊತ್ತಿಲ್ಲವೆಂದು ತಿಳಿದುಕೊಂಡಿರುವಿಯಾ ಹೇಗೆ? ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ತನ್ನನ್ನು ಯಾರೂ ನೋಡುವುದಿಲ್ಲವೆಂದು ಬೆಕ್ಕು ತನ್ನಷ್ಟಕ್ಕೆ ತಾನೇ ಅಂದುಕೊಳ್ಳುತ್ತದೆಯಂತೆ. ಹಾಗಿದೆ ನಿನ್ನ ಕಥೆ. ಪ್ರೀತಿಯ ಅಗ್ಗಿಷ್ಟಿಕೆಯ ಬೆಚ್ಚನೆಯ ಬಿಸುಪಿನಲ್ಲಿ ನೀವಿಬ್ಬರೂ ಈಗಾಗಲೇ ಬೆಂದು ಬೇಯುತ್ತಿರುವಿರಿ. ಇನ್ನೂ ಹೀಗೇ ಮುಂದುವರಿಸುವುದು ಅಷ್ಟಾಗಿ ಚೆಂದ ಕಾಣುವುದಿಲ್ಲ. ಶಶಾಂಕನನ್ನು ಸುಮ್ಮನೇ ಕಾಡಿಸಬೇಡ." ವಂದನಾಳ ಮಾತುಗಳು ಆರತಿಯ ಬಾಯಿಯನ್ನು ಕಟ್ಟಿಹಾಕಿ ಬಿಟ್ಟಿದ್ದವು.
"ವಂದನಾ, ನೀನ್ಹೇಳುವುದೇನೋ ಸರಿ ಕಣೆ. ಆದರೆ ನನ್ನ ಪದವಿ ಮುಗಿಯಲಿ, ಶಶಾಂಕ್ ಅವರು ಮುಂದೆ ಓದಲಿ, ಉದ್ಯೋಗ ಹಿಡಿಯಲಿ. ನಂತರ ಬಾಳ ಪಯಣದ ಬಗ್ಗೆ ವಿಚಾರ ಮಾಡೋಣ." ಆರತಿ ಏನನ್ನೋ ಹೇಳಲು ಪ್ರಯತ್ನಿಸಿದಳು. 
"ನಾನೇನು ನಿಮಗೆ ಈಗಲೇ ಗಂಡ-ಹೆಂಡಿರಾಗೆಂದು ಹೇಳುತ್ತಿದ್ದೇನೆಯೇ? ನಿಮ್ಮ ಪ್ರೀತಿ ಹೀಗೇ ನಿರಂತರವಾಗಿ ಜುಳು ಜುಳು ಎಂದು ಸ್ವಚ್ಛಂದವಾಗಿ ತಿಳಿಯಾಗಿ ಹರಿಯುತ್ತಿರಲಿ. ಜೀವನದಲ್ಲಿ ಸೆಟ್ಲ್ ಆದ ಮೇಲೆ ಮದುವೆ ಮಾಡಿಕೊಳ್ಳುವಿರಂತೆ." ವಂದನಾಳ ಸಲಹೆ ಆರತಿಯ ಹೃದಯವನ್ನು ಗೆದ್ದಿತ್ತು. ಪ್ರೀತಿಯ ಅಲೆಯ ಸೆಳೆತದ ಪುಳಕದಲ್ಲಿ ಆರತಿ ಸಂಭ್ರಮಿಸತೊಡಗಿ ಗರಿಗೆದರಿದ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಲು ತಯಾರಿ ನಡೆಸಿದ್ದಳು. 
ವಂದನಾಳ ಕರೆಯ ಮೇರೆಗೆ ಆಗಲೇ ಶಶಾಂಕ್ ಅಲ್ಲಿಗೆ ಹಾಜರಾಗಿದ್ದ. "ನೋಡಪ್ಪಾ ಶಶಾಂಕ್, ನಿನ್ನಿಚ್ಛೆಯಂತೆ ನನ್ನ ಜೀವದ ಗೆಳತಿಯ ಜೀವ ನಿನ್ನ ಜೀವದೊಂದಿಗೆ ಬೆರೆಯುವಂತೆ ಮಾಡಿದ್ದೇನೆ. ಮುಂದೇನಿದ್ದರೂ, ನೀನುಂಟು, ಆರತಿ ಉಂಟು" ಎಂದು ಹೇಳುತ್ತಾ ವಂದನಾ ಆರತಿ ಮತ್ತು ಶಶಾಂಕನ ಕೈಗಳನ್ನು ಕೂಡಿಸಿದ್ದಳು. 
"ಆರತಿ, ಮಿಂಚಾಗಿ ನೀ ಬಂದಾಗಿನಿಂದ ನನ್ನೆದೆ ನಿನಗಾಗಿಯೇ ಮಿಡಿಯುತ್ತಿದೆ. ನನ್ನೆದೆಯ ಗೂಡಿನಲ್ಲಿ ಬೆಚ್ಚಗೆ ಸಲಹುವ ಜವಾಬ್ದಾರಿ ನನ್ನದು." ಶಶಾಂಕ್ ಮೆಲ್ಲಗೆ ನುಲಿದಾಗ, "ನನ್ನಂಥಹ ಅದೃಷ್ಟಶಾಲಿ ಯಾರೂ ಇರಲಿಕ್ಕಿಲ್ಲ" ಎಂದು ಆರತಿ ಅಂದಾಗ, "ನೀವಿಬ್ಬರೂ ಅದೃಷ್ಟಶಾಲಿಗಳೇ" ಎಂದು ವಂದನಾ ಇಬ್ಬರನ್ನೂ ಅಭಿನಂದಿದಳು. ಮೂವರ ಮನಗಳಲ್ಲಿ ಸಂಭ್ರಮವೋ ಸಂಭ್ರಮ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಮಿಂಚಾಗಿ ನೀ ಬರಲು”

  1. ಧರ್ಮಾನಂದ ಶಿರ್ವ

    ವಿಶೇಷತೆಯಿಲ್ಲದ ಸಿನಿಮಾ ಮಾದರಿಯ ಸಾಧಾರಣ ಕಥಾವಸ್ತುವನ್ನು ಕಥೆ ಒಳಗೊಂಡಿದೆ.
    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter