ಹಲವು ವಿಧಗಳಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುವವರಿದ್ದಾರೆ. ಕೆಲವರು ಆ ದಿನ ಅಭಯಾಶ್ರಮಕ್ಕೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಿದರೆ ಇನ್ನು ಕೆಲವರು ದೇವರಿಗೆ ದೊಡ್ಡ ಮಟ್ಟದ ಪೂಜೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ರಾತ್ರಿಯಿಡೀ ಪಾರ್ಟಿ ಏರ್ಪಡಿಸಿ ಮಜಾ ಉಡಾಯಿಸುತ್ತಾರೆ. ಇಲ್ಲೊಬ್ಬರು ಕಳೆದ ನಲುವತ್ತು ವರ್ಷಗಳಿಂದ ತಮ್ಮ ಪ್ರತಿ ಹುಟ್ಟುಹಬ್ಬದ ದಿನ ಪ್ರಕೃತಿ ಹಾಗೂ ಪರಿಸರದ ಜೊತೆಗೆ ಅನುಸಂಧಾನ ನಡೆಸುತ್ತ ಬಂದಿದ್ದಾರೆ. ಅವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿದ್ದ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರೂ ಆಗಿರುವ ವೈ ಕೆ ಮುದ್ದುಕೃಷ್ಣ (ವೈಕೆಎಮ್) ಅವರು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ವೈ ಕೆ ಮುದ್ದುಕೃಷ್ಣ ಅವರು ಬೆಂಗಳೂರು ಮಹಾನಗರ ಪಾಲಿಕೆಯ ಜಾಯಿಂಟ್ ಕಮಿಷನರ್ ಆಗಿದ್ದಾಗ ಶಿಕ್ಷಣ, ಆರೋಗ್ಯ ಇತ್ಯಾದಿ ಇಲಾಖೆಗಳ ಜೊತೆಗೆ ತೋಟಗಾರಿಕೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಅವರು ತೋಟಗಾರಿಕೆ ಇಲಾಖೆಯನ್ನು ನಿಭಾಯಿಸಿದ ಬಗೆಯೇ ಬೇರೆ. ಮಾಡಿದ ಬಹುಮುಖ್ಯ ಕೆಲಸವೆಂದರೆ ಬೆಂಗಳೂರಿನ ಒಳಹೊರಗುಗಳಲ್ಲಿರುವ ನೂರ ಅರುವತ್ತೊಂದು ಪಾರ್ಕ್‌ಗಳಿಗೆ ಹೊಸ ರೂಪ ಕೊಟ್ಟದ್ದು. ಪಾರ್ಕಿನ ಒಳಗಡೆಯ ಹಾಗೂ ಸುತ್ತಮುತ್ತಲಿನ ಸ್ಥಿತಿಗತಿ ಚಿಂತಾಜನಕವಾಗಿದ್ದ ಕಾಲಘಟ್ಟವದು. ʻಉದ್ಯಾನ ನಗರಿ- ಬೆಂಗಳೂರುʼ ಎಂಬ ಹೆಸರಿಗೆ ಕಳಂಕ ತಟ್ಟಿತ್ತು. ಒಂದು ವ್ರತದ ಹಾಗೆ ಉದ್ಯಾನಗಳ ಪುನರುತ್ಥಾನದ ಜವಾಬ್ದಾರಿಯನ್ನು ಕೈಗೆತ್ತಿಕೊಂಡು ನಿಗದಿತ ಅವಧಿಯಲ್ಲಿ ಅಷ್ಟೂ ಪಾರ್ಕ್‌ಗಳ ಗಿಡನೆಡುವ ಕಾಯಕ, ಪಾದಚಾರಿಗಳಿಗೆ ಪಾರ್ಕಿನೊಳಗೆ ನಡೆಯುವ ಹಾದಿ, ಸುತ್ತಣ ಬಂದೋಬಸ್ತು ಇತ್ಯಾದಿಗಳನ್ನು ಖುದ್ದು ನಿಂತು ನೆರವೇರಿಸಿ, ಅವುಗಳನ್ನು ನವೋನ್ಮೇಷಶಾಲಿನಿಯನ್ನಾಗಿ ಮಾಡಿದ್ದು ವೈಕೆಎಮ್ ಅವರು. ಅದಷ್ಟು ಕೆಲಸವಾದ ಬಳಿಕ ಆ ಕುರಿತ ʻಹ್ಯಾಂಡ್ ಬುಕ್ ಆಫ್ ಗಾರ್ಡನ್ಸ್ ಇನ್ ಬೆಂಗಳೂರುʼ ಎಂಬ ಹೊತ್ತಗೆಯನ್ನೂ ಹೊರತಂದರು.
ಅವರು ಕನ್ನಡ ಮತ್ತಯ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದಾಗ ಕರ್ನಾಟಕಕ್ಕೊಂದು ಅಭೂತಪೂರ್ವ ʻಕನ್ನಡ ಭವನʼ ಕಟ್ಟಿಸಿದ್ದು ಈಗ ಇತಿಹಾಸ. ಆ ಭವನದ ಮತ್ತೊಂದು ಮಗ್ಗುಲಲ್ಲಿ ಅವರು ನಿರ್ಮಿಸಿದ ʻಶಿಲ್ಪವನʼ ಆ ಕಾಲಕ್ಕೊಂದು ವಿನೂತನ ನಿರ್ಮಿತಿಯೇ ಆಗಿತ್ತು. ಅಲ್ಲಿ ಶಿಲ್ಪ ಹಾಗೂ ಸಸ್ಯಗಳು ಜೊತೆಯಾಗಿ ಮೇಳೈಸಿದ್ದವು.
ಗಿಡಮರಗಳ ಮೇಲಿನ ಅವರ ಪ್ರೀತಿಗೆ ದೃಷ್ಟಾಂತಗಳು ಅನೇಕ. ಜಯನಗರದತ್ತ ಸಾಗುವ ರಸ್ತೆಯ ಇಕ್ಕೆಲದಲ್ಲಿರುವ ಲಕ್ಷ್ಮಣ ರಾವ್ ಉದ್ಯಾನಗಳ ನಡುವಿನಿಂದ ಮೆಟ್ರೋ ಹಳಿಗಳು ಹಾದುಹೋಗುವ ಸಿದ್ಧತೆ ನಡೆದಿತ್ತು. ಉದ್ಯಾನಗಳ ಉಳಿವಿಗೆ ಕಟಿಬದ್ಧರಾದ ವೈಕೆಎಮ್ ಅವರು ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ (ಎನ್‌ಜಿಟಿ) ಮೆಟ್ಟಲೇರಿ, ಹೋರಾಟ ನಡೆಸಿ ಜಯಗಳಿಸಿದರು. ಮೆಟ್ರೋ ಬಂತು; ಉದ್ಯಾನಗಳು ಅಂತೆಯೇ ಉಳಿದುವು!
ಕರ್ನಾಟಕ ಸುಗಮ ಸಂಗೀತ ಪರಿಷತ್ತನ್ನು ಗೆಳೆಯರೊಂದಿಗೆ ಸೇರಿ ಹುಟ್ಟು ಹಾಕಿ ಅದನ್ನು ರಾಜ್ಯಮಟ್ಟದಲ್ಲಿ ಬೆಳೆಯುವಂತೆ ನೋಡಿಕೊಂಡ ವೈಕೆಎಮ್ ಅವರು ಸ್ವತಃ ಒಬ್ಬ ಪ್ರಸಿದ್ಧ ಗಾಯಕರು. ಗಾಯನಕ್ಕೂ ಗಿಡಮರಗಳಿಗೂ ಪರಸ್ಪರ ಸಂಬಂಧವಿದೆ ಎಂಬ ವೈಜ್ಞಾನಿಕ ಹೇಳಿಕೆಗೆ ದೃಷ್ಟಾಂತವೆಂಬಂತೆ ಅವರ ಮನೆಯ ಮುಂದುಗಡೆ ಸುಂದರವಾದ ಹೂದೋಟವನ್ನು ನಿರ್ಮಿಸಿ ನಿತ್ಯವೂ ಅವುಗಳೊಂದಿಗೆ ಆಲಾಪಿಸುವರು.
ಉದ್ಯಾನವನಗಳನ್ನು ದುರಸ್ತಿ ಮಾಡಿ ಉದ್ಯಾನ ನಗರಿಯನ್ನು ಮರುನಿರ್ಮಿಸುತ್ತಿದ್ದ ದಿನಗಳಲ್ಲಿಯೇ ವೈಕೆಎಮ್ ಅವರು ʻಇದನ್ನು ಇಲ್ಲಿಗೇ ಬಿಟ್ಟುಬಿಡಲಾಗದು, ನಾನು ನಿಮಿತ್ತವಾಗಿ ನೆಲದಿಂದ ಮೇಲಕ್ಕಡರಿದ ಗಿಡಗಳು ನನ್ನ ಬದುಕಿನಲ್ಲೂ ನಳನಳಿಸಬೇಕುʼ ಎಂದುಕೊಂಡರು. ಅಂದಿನಿಂದ ಮೊದಲುಗೊಂಡು ಅವರ ಪ್ರತಿ ಜನುಮ ದಿನದಂದು ಬೆಂಗಳೂರಿನ ಯಾವುದಾದರೊಂದು ಪಾರ್ಕಿನಲ್ಲಿ ಅವರ ಆಗಿನ ವಯಸ್ಸಿನಷ್ಟು ಗಿಡಗಳನ್ನು ನೆಡುತ್ತ ಬಂದರು. ಇದೇ ಜೂನ್ ೫ರಂದು ಮುಂಜಾನೆ ವೈಕೆಎಮ್ ಅವರು ಜಯನಗರದ ಲಕ್ಷ್ಮಣ್ ರಾವ್ ಪಾರ್ಕಿನಲ್ಲಿ ಎಪ್ಪತ್ತೇಳು ಗಿಡಗಳನ್ನು ನೆಡುವವರಿದ್ದಾರೆ! ಅವರ ವಯಸ್ಸಿನೊಂದಿಗೆ ನೆಡುವ ಗಿಡಗಳ ಸಂಖ್ಯೆಯನ್ನು ಹೊಂದಿಸಿಕೊಂಡದ್ದೊಂದು ಆದರ್ಶ ಮಾದರಿಯೆ!