ಕರ್ನಾಟಕ ಸಂಸ್ಕೃತಿಯ ಪುನಾರಚನೆ; ಪ್ರೊ. ದೇವರಕೊಂಡಾರೆಡ್ಡಿ ಅವರ ಕೊಡುಗೆ 

ನಮ್ಮ ನಾಡು, ನುಡಿ, ಸಾಹಿತ್ಯ, ವಾಸ್ತುಶಿಲ್ಪ, ಇತಿಹಾಸ, ಸಂಸ್ಕೃತಿಗಳ ಕುರಿತು ಅಥಾರಿಟಿಯಿಂದ ಮಾತಾಡಬಲ್ಲ ಬೆರಳೆಣಿಕೆಯ ವಿದ್ವಾಂಸರಲ್ಲಿ  ಪ್ರೊ. ದೇವರಕೊಂಡಾರೆಡ್ಡಿ ಅವರೂ ಒಬ್ಬರು. ಎಪ್ಪತ್ತಾರರ ಎತ್ತರದಲ್ಲೂ ಅವರು ಅತ್ಯಂತ ಕ್ರಿಯಾಶೀಲರಾಗಿ ಕನ್ನಡದ ಪರಿಚಾರಿಕೆಯನ್ನು ಮಾಡುತ್ತಾ ಬಂದಿದ್ದಾರೆ. ಅವರ ಯಶೋಗಾಥೆಯ ಕುರಿತಾದ ಕಿರು ಲೇಖನ ಇಲ್ಲಿದೆ.

ಸಾಂಪ್ರತ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಪುನಾರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ವಿರಳ ಮಹನೀಯರಲ್ಲಿ ಪ್ರೊ. ದೇವರಕೊಂಡಾರೆಡ್ಡಿ  ಅವರೂ ಒಬ್ಬರು.ಕನ್ನಡ ನಾಡು ನುಡಿಯ ಬಗೆಗೆ, ಅದರ ಇತಿಹಾಸದ ಕುರಿತು ಅಧಿಕೃತವಾಗಿ ಮಾತಾಡಬಲ್ಲ ಅವರದು ನಾನಾ ಬಗೆಯ ವ್ಯಕ್ತಿತ್ವ.ಇತಿಹಾಸವನ್ನು ಯಾರೂ ಸೃಷ್ಟಿಸಿಯಾರು. ಆದರೆ ಅದನ್ನು ಬರೆಯಬಲ್ಲಾತ ಮಾತ್ರ ಮಹಾವ್ಯಕ್ತಿಯೇ ಸರಿ ಎಂಬುದು ಆಸ್ಕರ್ ವೈಲ್ಡ್ ನ ಪ್ರಸಿದ್ಧ ಹೇಳಿಕೆ ಅವಲೋಕನೀಯವಾಗಿದೆ.ಚರಿತ್ರೆಯ ಬೆಳಕಿನಲ್ಲಿ ಕರ್ನಾಟಕದ ಹಿರಿಮೆ ಗರಿಮೆಯನ್ನು ಅವಿರತವಾಗಿ ಕಟ್ಟಿಕೊಡುತ್ತಾ ಬಂದ ಪ್ರೊ. ದೇವರಕೊಂಡಾರೆಡ್ಡಿ ಅವರು ಇತಿಹಾಸ, ಪುರಾತತ್ವ, ಭಾಷೆ, ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ವಿಭಿನ್ನ ನೆಲೆಗಳಲ್ಲಿ ತಾಳೆಹಾಕಿ ನೋಡಿ ಕೆಲಸ ಮಾಡಿದವರು.

ನಮ್ಮ ದೇಶದಲ್ಲಿ ಇತಿಹಾಸಕ್ಕೆ ಆಧಾರವಾದ ದಾಖಲೆಗಳು ಪ್ರಾಚೀನ ಕಾಲದಿಂದಲೂ ಉಳಿದು ಬಂದಿದ್ದರೂ ನಮ್ಮ ದೃಷ್ಟಿ ಇತಿಹಾಸದ್ದಲ್ಲ. ನಮ್ಮಲ್ಲಿ ಚಾರಿತ್ರಿಕ ಮಹತ್ವ ಎಂಬುದಿಲ್ಲ, ಚಾರಿತ್ರಿಕ ದೃಷ್ಟಿ ಎಂಬುದೂ ಇಲ್ಲ.ಇದು ಈಗೀಗ ಅಸ್ತ್ತಿತ್ವಕ್ಕೆ ಬರುತ್ತಿದೆ.  ನಾವು ಇತಿಹಾಸಕ್ಕೆ ಮಹತ್ವ ಕೊಟ್ಟ ಜನರಲ್ಲ. ಇತಿಹಾಸ ಬರೆಯುವುದು ಮಾತ್ರ ತುಂಬ ಕಷ್ಟ. ಇತಿಹಾಸಕಾರ ನಿರ್ಲಿಪ್ತನಾಗಿರಬೇಕು. ನಿಸ್ಪಕ್ಷ ಪಾತಿಯಾಗಿರಬೇಕು,  ವಸ್ತುನಿಷ್ಠನಾಗಿರಬೇಕು. ಇತಿಹಾಸದ ಬಗೆಗೆ ಹೆಚ್ಚಿನ ಗಮನ ಕೊಡದ ನಮ್ಮಲ್ಲಿ ಯಾವುದು ನಿಜವಾದ ಸಂಗತಿ ಯಾವುದು ಕಟ್ಟುಕತೆ ಎಂದು ನಿರ್ಧಾರವಾಗಿ ಹೇಳುವುದು ಎಷ್ಟೋ ಸಂದರ್ಭಗಳಲ್ಲಿ ಕಷ್ಟ ಎಂಬುದಾಗಿ ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಹಾಮಾನಾ ಅವರು ಹೇಳಿರುವ ಮಾತು ನಿಜವೇ ಆಗಿದೆ.ಹೀಗೆ ಅಸಡ್ಡೆಗೆ ಒಳಗಾದ ನಮ್ಮ ನಾಡಿನ ಸಂಸ್ಕೃತಿಯ ಮುಚ್ಚಿದ ಬಾಗಿಲುಗಳನ್ನು ತೆರೆಯುವ ಕಾರ್ಯದಲ್ಲಿ ನಿತ್ಯ ನಿರಂತರವಾಗಿ ದೇವರಕೊಂಡಾರೆಡ್ಡಿ ಅವರು ಬಹು ಆಸ್ಥೆಯಿಂದ ತೊಡಗಿಸಿಕೊಂಡಿದ್ದಾರೆ.

ಕನ್ನಡಿಗರಾದ ನಾವು ಭವ್ಯವಾದ ಚರಿತ್ರೆ, ಪರಂಪರೆಯ ವಾರಸುದಾರರು. ಕನ್ನಡ ನಾಡಿನ ಅಮೋಘವಾದ ಇತಿಹಾಸವನ್ನು ಅವಿರತವಾಗಿ ಜನಮನಕ್ಕೆ ಪ್ರಚುರ ಪಡಿಸುತ್ತ ಬಂದ ಹಿರಿಯ ಸಾಧಕರಲ್ಲಿ ಡಾ. ದೇವರಕೊಂಡಾರೆಡ್ಡಿ ಅವರದು ದೊಡ್ಡ ಹೆಸರು.ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ ಎಂಬ ಕವಿವಾಣಿಯಂತೆ ಅವರು ಕೆಲಸ ಮಾಡಿದವರು. ಶಾಸನಗಳಲ್ಲಿ ಸಾಹಿತ್ಯವನ್ನು ನೋಡುವುದು, ಸಾಹಿತ್ಯದಲ್ಲಿ ಇತಿಹಾಸವನ್ನು ಹುಡುಕುವ ಸತ್ಯಾನ್ವೇಷಣೆ ಅವರಿಗೆ ಇಷ್ಟವಾದ ಕಾಯಕ. ಉಪೇಕ್ಷೆಗೆ ಅಂಚಿಗೆ ಸಿಲುಕಿದ ಗತಕಾಲದ ಕನ್ನಡ ನಾಡಿನ ಸಮಗ್ರ ಜನಜೀವನದ ದಾಖಲಾತಿ ಅವರ ಪ್ರಧಾನ ಕಾಳಜಿ. ಅದಕ್ಕಾಗಿ ಅವರು ಹೆಚ್ಚಾಗಿ ಮೊರೆಹೋದದ್ದು ಶಾಸನಶಾಸ್ತ್ರವನ್ನು.

ಎಂ. ಎ ತರಗತಿಯಲ್ಲೇ ಕನ್ನಡ ಶಾಸನಗಳ ಕುರಿತು ವಿಶೇಷ ಅಧ್ಯಯನವನ್ನು ಮಾಡಿದ ಅವರು ಅದೇ ಮಾರ್ಗದಲ್ಲಿ ಸಾಗಿ ಮಾಡಿದ ಕೈಂಕರ್ಯ ಗುಣಗಾತ್ರದಲ್ಲಿ ಹಿರಿದಾದುದು. ಸುಮಾರು ಹದಿನೆಂಟು ವರ್ಷಗಳ ಕಾಲ ಅವರು ಕನ್ನಡ ಸಾಹಿತ್ಯ ಪರಿಷತ್ ನ ಶಾಸನಶಾಸ್ತ್ರ ತರಗತಿಗೆ ಬೋಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮೂರನೆಯ ಶತಮಾನದಿಂದ ಹತ್ತೊಂಭತ್ತನೆಯ ಶತಮಾನದ ವರೆಗಿನ ಶಾಸನಗಳ ಲಿಪಿಯನ್ನು ಓದುವುದರಲ್ಲಿ ಅವರದು ಎತ್ತಿದ ಕೈ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಅವರು ಮಾಡಿದ ಕೆಲಸ ಬಹು ಮೌಲಿಕವಾದುದು. ಕರ್ನಾಟಕ ಗಾಜೆಟಿಯರ್ ಇಲಾಖೆಯಲ್ಲಿ ಮುಖ್ಯ ಅನ್ವೇಷಕರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ನಾಡಿನ ಮೂಲೆಮೂಲೆಗಳ ದೇವಾಲಯ, ಗುಡಿಗುಂಡಾರಗಳನ್ನು ನೋಡಿ ಟಿಪ್ಪಣಿ ಮಾಡಿಕೊಳ್ಳುವ, ಹೊಸ ಹೊಸ ಶಾಸನಗಳನ್ನುಹುಡುಕಿ ತೆಗೆದು ಇತಿಹಾಸದ ಅನೇಕ ಕಗ್ಗಂಟುಗಳನ್ನು ಬಿಡಿಸಲು ಅವರಿಗೆ ಸಾಧ್ಯವಾಗಿರುವುದು ಉಲ್ಲೇಖನೀಯ ಅಂಶ. ಕನ್ನಡ  ವಿಶ್ವವಿದ್ಯಾಲಯ ಶಾಸನ ಸಂಪುಟ ಮಾಲಿಕೆಯ ಪ್ರಧಾನ ಸಂಪಾದಕರಾಗಿ ಹದಿಮೂರು ಬ್ರಹತ್ ಕೃತಿಗಳು ಹೊರಬರಲು ಅವರು ಬಹುವಾಗಿ ಶ್ರಮಿಸಿದ್ದಾರೆ.

ಲಿಪಿಯ ಹುಟ್ಟು ಮತ್ತು ಬೆಳವಣಿಗೆ, ಕರ್ನಾಟಕದ ಶಾಸನಗಳು, ತಲಕಾಡಿನ ಗಂಗರ ದೇವಾಲಯಗಳು,ಶ್ರವಣಬೆಳಗೊಳದ ಬಸದಿಗಳ ವಾಸ್ತುಶಿಲ್ಪ, ಕರ್ನಾಟಕದ ಶಾಸನಗಳಲ್ಲಿ ಶಾಪಾಶಯಗಳು ಮೊದಲಾದ ಕೃತಿಗಳನ್ನು ಅವರು ಕನ್ನಡ ಸಾರಸ್ವತ ಲೋಕಕ್ಕೆ ಧಾರೆಯೆರೆದಿದ್ದಾರೆ. ನೂರಾರು ಶೋಧ ಪ್ರಬಂಧಗಳನ್ನು ಬರೆದಿರುವ ಅವರ ಸಾಹಿತ್ಯ ಸೃಷ್ಟಿ ಬಹುಮುಖವಾಗಿ ಮುನ್ನಡೆದಿದೆ.ಕರ್ನಾಟಕ ಸಂಸ್ಕೃತಿ, ಪರಂಪರೆಯನ್ನು ಇಡಿಯಾಗಿ ನೋಡುವ ಆಶಯ ಅವರ ಕೃತಿಗಳಲ್ಲಿ ಢಾಳಾಗಿ ಕಾಣಿಸುತ್ತದೆ. ಶಾಸನ ಸಾಹಿತ್ಯ, ವಾಸ್ತು ಶಿಲ್ಪ ಕ್ಷೇತ್ರಗಳಲ್ಲಿ ಕರ್ನಾಟಕದ ಸಾಧನೆ ಅಗಾಧವಾದದು ಎಂಬುದನ್ನು ಅವರು ತಮ್ಮ ಬರವಣಿಗೆಯಲ್ಲಿ ರುಜುವಾತು ಪಡಿಸಿದ್ದಾರೆ.ಲಾಗಾಯ್ತಿನಿಂದಲೂ ಕರ್ನಾಟಕ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಯೋಗದಾನವನ್ನು ನೀಡಿದೆ ಎಂಬುದನ್ನು ತಮ್ಮ ಮಾತು ಕೃತಿಗಳಲ್ಲಿ ತೋರಿಸಿಕೊಡುತ್ತಾ ಬಂದ ಪ್ರೊ. ದೇವರಕೊಂಡಾರೆಡ್ಡಿ ಅವರದು ಸಾರ್ಥಕ ಸಾಧನೆ. ಸರಳ ಸಜ್ಜನಿಕೆಗೆ ಹೆಸರಾದ ಅವರದು ಅಪರೂಪದ ವ್ಯಕ್ತಿತ್ವ.

  • ಪ್ರೊ. ಜಿ. ಎನ್. ಉಪಾಧ್ಯ.ಮುಂಬೈ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಕರ್ನಾಟಕ ಸಂಸ್ಕೃತಿಯ ಪುನಾರಚನೆ; ಪ್ರೊ. ದೇವರಕೊಂಡಾರೆಡ್ಡಿ ಅವರ ಕೊಡುಗೆ ”

  1. ಶ್ರೀ ಯುತರ ವ್ಯಕ್ತಿತ್ವ , ಸೇವೆ ಶ್ಲಾಘನೀಯ ಹೆಚ್ಚಿನ ಸೇವೆ ನಾಡಿಗೆ ಲಭಿಸುವಂತಾಗಲಿ ಧನ್ಯವಾದಗಳು

  2. Dr K P Prakasha

    ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಅವರು ಸಂಶೋಧಕರು ಮಾತ್ರವಲ್ಲದೆ,ಅನೇಕ ಕಿರಿಯ ಸಂಶೋಧಕರಿಗೆ ಮಾರ್ಗದರ್ಶಕರಾಗಿ, ವ್ಯಕ್ತಿತ್ವದಲ್ಲಿ ಗುಣಮದುರ ರಾಗಿ ,ಸರಳ ಬದುಕಿನ ಶ್ರೇಷ್ಠ ವ್ಯಕ್ತಿತ್ವ ಅವರದಾಗಿದೆ.

  3. ಡಾ.ಎಸ.ವೈ. ಸೋಮಶೇಖರ್

    ಕನ್ನಡ ನಾಡಿನ ಶಾಸನ, ಸಾಹಿತ್ಯ, ಸಂಸ್ಕೃತಿ ಕುರಿತ ಅಧ್ಯಯನಾ ಅದರಲ್ಕೂ ಸಾಂಸ್ಕೃತಿಕ ಚರಿತ್ರೆಗೆ ತಮ್ಮದೇ ಛಾಪನ್ನು ನೀಡಿದ ವಿದ್ವಾಂಸರೆಂದರೆ ಡಾ. ದೇವರ ಕೊಂಡಾರೆಡ್ಡಿ ಅವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಶಾಸನಶಾಸ್ತ್ರ ವಿಭಾಗದ ಮೂಲಕ ಉತ್ತರ ಕರ್ನಾಟಕದ ಶಾಸನ ಸಂಪುಟಗಳನ್ನು ಹೊರತಂದ ಹೆಗ್ಗಳಿಕೆ ಇವರದ್ದು, ಕರ್ನಾಟಕ ಇತಿಹಾಸ ಅಕಾಡೆಮಿಯ ಮೂಲಕ ಯುವಕರನ್ನು ಪ್ರೇರೇಪಿಸಿ ಪ್ರೋತ್ಸಾಹಿಸುವ ಮೂಲಕ ಕನ್ನಡ ನಾಡಿಗೆ ಅನೇಕ ಯುವ ವಿದ್ವಾಂಸರನ್ನು ನಾಡಿಗೆ ಪರಿಚಯಿಸಿದ ಹಿರಿಯ ಚೇತನ ನಮ್ಮ ರೆಡ್ಡಿ ಸರ್. ಅವರಿಗೆ ಹಾರ್ದಿಕ ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter