ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ನಾವಲಗಿಯವರ ಆನಂದಕಂದರ ಸಾಹಿತ್ಯ – ಒಂದು ಅನುಸಂಧಾನ

ಕನ್ನಡದ ಹರಿಕಾರ ಯುಗದ ಮಹತ್ವದ ಲೇಖಕರಲ್ಲೊಬ್ಬರಾದ ಬೆಟಗೇರಿ ಕೃಷ್ಣಶರ್ಮರು ಆನಂದಕಂದ ಎಂದೇ ಖ್ಯಾತಿ ಪಡೆದವರು. ಅವರು ಕಾವ್ಯ, ಕಥೆ, ಕಾದಂಬರಿ, ಜನಪದ, ಸಂಶೋಧನೆ ಮತ್ತು ಪತ್ರಿಕೋದ್ಯಮ – ಹೀಗೆ ಆರು ಪ್ರಕಾರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಆನಂದಕಂದರ ಹಾಡುಗಳು ಬೇಂದ್ರೆಯವರಷ್ಟೇ ಅಥವಾ ಬೇಂದ್ರೆಯವರನ್ನೂ ಮೀರಿಸುವಷ್ಟು ಜನಪ್ರಿಯತೆ ಗಳಿಸಿವೆ. ಆನಂದಕಂದರ ‘ನಲ್ವಾಡುಗಳು’ ಎಂಬ ಪ್ರೇಮಗೀತೆಗಳ ಸಂಕಲನ ಅಪಾರ ಖ್ಯಾತಿ ಪಡೆದಿದೆ. ಸಣ್ಣಕಥೆಗಳ ರಚನೆಯಲ್ಲಿ ಮಾಸ್ತಿಯವರ ನಂತರದ ಸ್ಥಾನ ನಿಸ್ಸಂಶಯವಾಗಿಯೂ ಆನಂದಕಂದರಿಗೆ ಸಲ್ಲತಕ್ಕದ್ದು. ಹಳೆಯ ಮೈಸೂರು ಪ್ರದೇಶದ ಜನಜೀವನ ಮತ್ತು ಸಂಸ್ಕೃತಿಯ ಜೀವಂತ ಚಿತ್ರಣವನ್ನು ಮಾಸ್ತಿಯವರು ನೀಡಿದ್ದಾರೆ. ಅದೇ ಕೆಲಸವನ್ನು ಆನಂದಕಂದರು ತಮ್ಮ ಕಥೆಗಳ ಮೂಲಕ ಉತ್ತರ ಕರ್ನಾಟಕದಲ್ಲಿ ಮಾಡಿದರು ಎಂಬುದು ಗಮನಾರ್ಹ. ಉತ್ತರ ಕರ್ನಾಟಕದ ಅದರಲ್ಲೂ ಬೆಳುವಲ ನಾಡೆಂದು ಖ್ಯಾತಿ ಪಡೆದ ವಾಯವ್ಯ ಕರ್ನಾಟಕದ ಒಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವನ್ನು ಆನಂದಕಂದರ ಕಥೆಗಳಲ್ಲಿ ಕಾಣಬಹುದು. ‘ಸುದರ್ಶನ’ ಮತ್ತು ‘ಮಗಳ ಮದುವೆ’ ಆನಂದಕಂದರ ಸಾಮಾಜಿಕ ಕಾದಂಬರಿಗಳು. ನವೋದಯ ಕಾಲಘಟ್ಟದ ಕಾದಂಬರಿಗಳಾದ ಇವು ಆ ಕಾಲದ ರಮ್ಯ ಮತ್ತು ಆದರ್ಶವಾದಿ ಚಿತ್ರಣವನ್ನು ವಾಸ್ತವದ ನೆಲೆಯಲ್ಲಿ ಕಟ್ಟಿಕೊಟ್ಟಿವೆ.

‘ಮಲ್ಲಿಕಾರ್ಜುನ’, ‘ಅಶಾಂತಿ ಪರ್ವ’ ಮತ್ತು ‘ರಾಜಯೋಗಿ’ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಕುರಿತ ಆನಂದಕಂದರ ಕಾದಂಬರಿ ತ್ರಿವಳಿ. ಸಂಪೂರ್ಣ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಇಪ್ಪತ್ತು ಕಾದಂಬರಿಗಳ ರೂಪದಲ್ಲಿ ಬರೆಯಬೇಕೆಂಬ ಮಹತ್ವಾಕಾಂಕ್ಷಿ ಯೋಜನೆ ಆನಂದಕಂದರದಾಗಿತ್ತು ಆದರೆ ದುರದೃಷ್ಟವಶಾತ್ ಕೇವಲ ಮೂರು ಐತಿಹಾಸಿಕ ಕಾದಂಬರಿಗಳು ಮಾತ್ರ ಪ್ರಕಟವಾದವು. ‘ಮಲ್ಲಿಕಾರ್ಜುನ’ ಕಾದಂಬರಿಗೆ ಸಿಗಬೇಕಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. ಆನಂದಕಂದರ ಐತಿಹಾಸಿಕ ಕಾದಂಬರಿಗಳು ವಾಸ್ತವದ ನೆಲೆಯಲ್ಲಿ ರೂಪುಗೊಂಡ ಕಾದಂಬರಿಗಳು. ಅವರ ಕಾದಂಬರಿಯಲ್ಲಿ ಚರಿತ್ರೆಯ ವೈಭವೀಕರಣವಿಲ್ಲ. ಸಾಹಸ, ಶೃಂಗಾರ, ವೈಭೋಗದ ಅನವಶ್ಯಕ ವರ್ಣನೆಯಿಲ್ಲ. ರಾಜ, ಮಹಾರಾಜರುಗಳನ್ನು ಅತಿ ಮಾನುಷರಂತೆ ಚಿತ್ರಿಸುವ ಕ್ರಮವಿಲ್ಲ. ಹಿಂದಿನದೆಲ್ಲ ಶ್ರೇಷ್ಠ ಎಂಬ ದೃಷ್ಟಿಕೋನವಿಲ್ಲ. ಇತಿಹಾಸವನ್ನು ವರ್ತಮಾನದ ಸ್ಥಿತಿ, ಗತಿಯ ಹಿನ್ನಲೆಯಲ್ಲಿ ವಸ್ತುನಿಷ್ಠವಾಗಿ ಚಿತ್ರಿಸಿರುವುದರಿಂದ ಆನಂದಕಂದರ ಐತಿಹಾಸಿಕ ಕಾದಂಬರಿಗಳು ವಾಸ್ತವಕ್ಕೆ ತೀರ ಹತ್ತಿರವಾಗಿದ್ದು, ಇಂದಿಗೂ ಕೂಡ ಪ್ರಸ್ತುತವಾಗುವಂತಿವೆ. ಕನ್ನಡ ಕಥನ ಸಾಹಿತ್ಯದಲ್ಲಿ ಐತಿಹಾಸಿಕ ದುರಂತ ಪ್ರಜ್ಞೆಯನ್ನು ಬಹುಶಃ ತುಂಬ ಯಶಸ್ವಿಯಾಗಿ ತಂದ ಕನ್ನಡದ ಮೂವರು ಲೇಖಕರೆಂದರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ. ಪುಟ್ಟಸ್ವಾಮಯ್ಯ ಮತ್ತು ಆನಂದಕಂದರು ಮಾತ್ರ.

ಜನಪದ ಮತ್ತು ಸಂಶೋಧನೆ ಆನಂದಕಂದರ ಆಡುಂಬೋಲ. ಕವಿತೆ, ಕಥೆ ಮತ್ತು ಕಾದಂಬರಿ ಬರವಣಿಗೆಯಲ್ಲಿ ತೋರಿಸಿದಷ್ಟೆ ಪ್ರೀತಿ ಮತ್ತು ಶ್ರದ್ಧೆಯನ್ನು ಅವರು ಜನಪದ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಹ ತೋರಿಸಿದ್ದಾರೆ. ಜನಪದ ಸಾಹಿತ್ಯದ ಸಂಗ್ರಹ ಮತ್ತು ಸಂಶೋಧನೆಯ ವಿಚಾರದಲ್ಲಿ ಅತ್ಯಂತ ಖಚಿತ ಮತ್ತು ನಂಬಲರ್ಹ ಎಂಬಂತಹ ಮಾಹಿತಿಯನ್ನು ಕಲೆ ಹಾಕಿ, ಶಾಸ್ತ್ರೀಯ ರೂಪದಲ್ಲಿ ಲಭ್ಯವಾಗುವಂತೆ ಮಾಡಿದ ಶ್ರೇಯ ಆನಂದಕಂದರಿಗೆ ಸಲ್ಲತಕ್ಕದ್ದು. ಜನಪದ ಸಾಹಿತ್ಯದಲ್ಲಿ ಅತ್ಯಂತ ಪ್ರಖ್ಯಾತವಾದ ‘ಕೆರೆಗೆ ಹಾರ’ ಎಂಬ ಜನಪದ ಕಥನ ಕಾವ್ಯವನ್ನು ಮೊಟ್ಟ ಮೊದಲ ಬಾರಿಗೆ ಸಂಪಾದಿಸಿ, ಪ್ರಕಟಿಸಿದವರು ಆನಂದಕಂದರು. ಮುಂದೆ ಇದು ಹತ್ತು ಹಲವು ರೂಪಗಳಲ್ಲಿ ವಿವಿಧ ಜನಪದ ವಿದ್ವಾಂಸರುಗಳ ಮೂಲಕ ಸಾಕಷ್ಟು ಪ್ರಚಾರ ಪಡೆಯಿತು. ಬೆಳುವಲ ನಾಡೆಂದು ಖ್ಯಾತಿ ಪಡೆದ ವಾಯವ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿರುವ ಗುಡಿ-ಗುಂಡಾರಗಳು, ಹಳ್ಳಿಗಳ ಹೆಸರಿನ ಹಿಂದಿರುವ ಮೂಲ-ಚೂಲಗಳ ಕುರಿತ ಸಂಶೋಧನೆ, ಮಾಸ್ತಿಕಲ್ಲು, ವೀರಗಲ್ಲು, ದಾನ ಶಾಸನಗಳು, ಲಾವಣಿಗಳು, ಜನಪದ ಗೀತೆಗಳು, ಜನಪದ ಆಚರಣೆಗಳು ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಪಾಂಡಿತ್ಯ ಪೂರ್ಣವಾದ ಸಂಶೋಧನಾ ಲೇಖನಗಳನ್ನು ಆನಂದಕಂದರು ಬರೆದಿದ್ದಾರೆ. ಜನಪದ ಸಂಶೋಧನಾ ಕ್ಷೇತ್ರದಲ್ಲಿ ಆನಂದಕಂದರು ತುಂಬ ಕೆಲಸ ಮಾಡಿದ್ದಾರೆ.

‘ಜಯ ಕರ್ನಾಟಕ’, ‘ಜಯಂತಿ’ ಮುಂತಾದ ಪತ್ರಿಕೆಗಳ ಸಂಪಾದಕರಾಗಿದ್ದ ಆನಂದಕಂದರು ಕನ್ನಡ ಪತ್ರಿಕೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಸದಾ ಹೊಸತನಕ್ಕಾಗಿ ಹಂಬಲಿಸುತ್ತಿದ್ದ ಆನಂದಕಂದರು ಹೊಸ ಲೇಖಕರು ಮತ್ತು ಹೊಸ ಪ್ರಯೋಗಗಳಿಗೆ ತಮ್ಮ ಪತ್ರಿಕೆಯ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡಿದರು. ನವ್ಯ ಸಾಹಿತ್ಯ ಮತ್ತು ಸಾಹಿತಿಗಳಿಗೆ ಆನಂದಕಂದರು ಮುಕ್ತ ಮನಸ್ಸಿನಿಂದ ಬೆಂಬಲಿಸಿದರು. ಐವತ್ತರ ದಶಕದಲ್ಲಿ ‘ಜಯಂತಿ’ ಪತ್ರಿಕೆಯಲ್ಲಿ ನವ್ಯ ಕವಿತೆ ಮತ್ತು ಕಥೆಗಳು ವಿಫುಲವಾಗಿ ಪ್ರಕಟವಾದವು. ಕನ್ನಡದ ಬಹುತೇಕ ಮಹತ್ವದ ಲೇಖಕರ ಬರಹಗಳನ್ನು ಆನಂದಕಂದರು ಪ್ರಕಟಿಸಿದರು. ‘ಜಯಂತಿ’ ಪತ್ರಿಕೆಯ ಮೂಲಕ ಕರ್ನಾಟಕದ ಎಲ್ಲ ಭಾಗಗಳ ಅನೇಕ ಹೊಸ ಪ್ರತಿಭೆಗಳು ಬೆಳಕಿಗೆ ಬಂದವು.

ಸವ್ಯಸಾಚಿ ವ್ಯಕ್ತಿತ್ವದ ಆನಂದಕಂದರು ಕನ್ನಡ ಸಾಹಿತ್ಯಕ್ಕೆ ಇಷ್ಟೆಲ್ಲ ಕೊಡುಗೆ ನೀಡಿದರೂ ಸಹ ವಿಮರ್ಶಕರ ಅವಜ್ಞೆಗೆ ಗುರಿಯಾಗಿದ್ದಾರೆ. ಕಾವ್ಯ, ಕಥೆ, ಕಾದಂಬರಿ, ಜನಪದ, ಸಂಶೋಧನೆ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದರೂ ಸಹ ಅವರಿಗೆ ಸಿಗಬೇಕಾದಷ್ಟು ಮನ್ನಣೆ ಮತ್ತು ಗೌರವ ಸಿಗಲಿಲ್ಲ. ಪ್ರಶಸ್ತಿ-ಪುರಸ್ಕಾರಗಳ ವಿಷಯದಲ್ಲಂತೂ ಆನಂದಕಂದರು ತುಂಬ ದುರದೃಷ್ಟವಂತರು. ಈಗಲಾದರೂ ಈ ಅನ್ಯಾಯವನ್ನು ಸರಿಪಡಿಸಬೇಕಿದೆ. ಮರು ಓದಿನ ಮೂಲಕ ಆನಂದಕಂದರ ಕೃತಿಗಳ ಮಹತ್ವವನ್ನು ಮನಗಾಣಬೇಕಾದ ಅಗತ್ಯವಿದೆ. ಪ್ರಸ್ತುತ ವರ್ಷ ಆನಂದಕಂದರ ೧೨೫ನೆಯ ಜಯಂತಿಯ ವರ್ಷವಾಗಿ ಆಚರಿಸಲ್ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಆನಂದಕಂದರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತು ಕೆಲವು ಪುಸ್ತಕಗಳು ಪ್ರಕಟವಾಗುತ್ತಿವೆ.
ಗೋಕಾಕದ ಡಾ. ಸಿ. ಕೆ. ನಾವಲಗಿಯವರು ಖ್ಯಾತ ಜಾನಪದ ವಿದ್ವಾಂಸರು. ಅವರು ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯದ ಕುರಿತು ಹತ್ತು ಹಲವು ಉಪಯುಕ್ತ ಮತ್ತು ಸಂಗ್ರಹ ಯೋಗ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಳುವಲ ನಾಡಿನವರಾದ ನಾವಲಗಿಯವರು ಬೆಳಗಾವಿ ಜಿಲ್ಲೆಯ ಜಾನಪದ ಸಾಹಿತ್ಯದ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವು ಜಾನಪದ ವಿದ್ವಾಂಸರಲ್ಲೊಬ್ಬರು. ನಾವಲಗಿಯವರು ಆನಂದಕಂದರ ಸಾಹಿತ್ಯವನ್ನು ಕುರಿತು ಬರೆದ ಆಯ್ದ ಹತ್ತು ಲೇಖನಗಳನ್ನು ಸೇರಿಸಿ ‘ಆನಂದಕಂದರ ಸಾಹಿತ್ಯ – ಒಂದು ಅನುಸಂಧಾನ’ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಿದ್ದಾರೆ.

ಬೆಟಗೇರಿ ಕೃಷ್ಣಶರ್ಮರ ‘ಮಾತನಾಡುವ ಕಲ್ಲು’, ‘ಜೋಗತಿಯ ಕಲ್ಲು : ಸ್ತ್ರೀ ಸಂವೇದನೆಯ ಕತೆ’ ಮತ್ತು ‘ಕಲ್ಲೊಂದು ಸೊಲ್ಲು ಹಲವು : ಒಂದು ಅನುಸಂಧಾನ’ ಎಂಬ ಮೂರು ಲೇಖನಗಳು ಆನಂದಕಂದರ ಖ್ಯಾತ ಕಥೆಗಳಾದ ‘ಮಾತನಾಡುವ ಕಲ್ಲು’, ‘ಜೋಗತಿ ಕಲ್ಲು’, ‘ಸೀಮೆಯ ಕಲ್ಲು’, ‘ಬಡವಿಯ ಬಾವಿ’, ‘ಕಂಕಣದ ಕೈ’, ‘ಇಬ್ಬಣದ ನಿಬ್ಬಣ’ ಮತ್ತು ‘ವೀರಮಾನ್ಯ’ ಕಥೆಗಳನ್ನು ವಿಮರ್ಶಾತ್ಮಕವಾಗಿ ಪರಿಚಯಿಸುತ್ತವೆ. ಬೆಳುವಲ ನಾಡಿನ ಗ್ರಾಮೀಣ ಪ್ರದೇಶದ ಜನರ ನಂಬಿಕೆ, ಆಚರಣೆಗಳ ಪ್ರತೀಕದಂತಿರುವ ‘ಮಾತನಾಡುವ ಕಲ್ಲು’, ‘ಜೋಗತಿಯ ಕಲ್ಲು’ ಮತ್ತು ‘ಸೀಮೆಯ ಕಲ್ಲು’ ಕಥೆಗಳ ಪ್ರಸ್ತುತತೆಯನ್ನು ಗುರುತಿಸಿರುವ ನಾವಲಗಿಯವರು ಆ ಕಥೆಗಳ ಶಕ್ತಿ ಮತ್ತು ಮಿತಿಗಳ ಕುರಿತು ಸಹ ಚರ್ಚಿಸಿದ್ದಾರೆ.

‘ಯಾತಕವ್ವಾ ಹುಬ್ಬಳ್ಳಿ ಧಾರವಾಡಾ’ ಬಿಡಿ ಕವಿತೆಯ ವಿಶ್ಲೇಷಣೆ ಗ್ರಾಮ್ಯ ಜೀವನದ ಸೊಬಗನ್ನು ಸುಂದರವಾಗಿ ಪ್ರಸ್ತುತಪಡಿಸಿದೆ. ಇದು ಓದುಗವಿತೆಯಲ್ಲ, ಹಾಡುಗವಿತೆ. ಉತ್ತರ ಕರ್ನಾಟಕದಲ್ಲಿ ತುಂಬ ಖ್ಯಾತಿ ಪಡೆದ ಈ ಗೀತೆ ಗ್ರಾಮೀಣ ಬದುಕು ಮತ್ತು ಸಂಸ್ಕೃತಿಯನ್ನು ತುಂಬ ದಟ್ಟವಾಗಿ ಚಿತ್ರಿಸಿದೆ. ಈ ಲೇಖನದಲ್ಲಿ ನಾವಲಗಿಯವರು ಆನಂದಕಂದರ ದೇಸಿ ಭಾಷೆಯ ಸೊಗಡು ಮತ್ತು ಜಾನಪದ ಶೈಲಿಯಿಂದಾಗಿ ‘ಯಾತಕವ್ವಾ ಹುಬ್ಬಳ್ಳಿ ಧಾರವಾಡಾ’ ಗೀತೆ ವಿಶೇಷ ಖ್ಯಾತಿ ಪಡೆದಿದೆಯೆಂಬುದನ್ನು ಸಕಾರಣವಾಗಿ ಗುರುತಿಸಿದ್ದಾರೆ.

‘ಆನಂದಕಂದರ ಕಾವ್ಯ : ಪ್ರೆರಣೆ-ಪರಿಶೀಲನೆ’ ಲೇಖನದಲ್ಲಿ ಆನಂದಕಂದರ ಕಾವ್ಯ ರೂಪುಗೊಂಡ ಬಗೆಯ ಕುರಿತು ಚರ್ಚಿಸಿದ್ದಾರೆ. ಆನಂದಕಂದರದು ದೇಸಿ ಪ್ರತಿಭೆ. ಜಾನಪದ ಸಾಹಿತ್ಯದ ಪ್ರಭಾವ ಮತ್ತು ಪ್ರೇರಣೆಯಿಂದ ಆನಂದಕಂದರ ಕಾವ್ಯಕ್ಕೆ ಒಂದು ವಿಶಿಷ್ಟತೆ ಪ್ರಾಪ್ತವಾಯಿತು. ಆನಂದಕಂದರು ಬರೆದದ್ದು ಹಾಡುಗಳನ್ನು ಎಂಬ ಕೀರ್ತಿನಾಥ ಕುರ್ತಕೋಟಿಯವರ ಮಾತಿನಲ್ಲಿ ಸತ್ಯವಿದೆ. ಕನ್ನಡದಲ್ಲಿ ಹಾಡಬಲ್ಲಂತಹ ಕವಿತೆಗಳನ್ನು ಬರೆದ ಕೆಲವೇ ಕೆಲವು ಯಶಸ್ವಿ ಕವಿಗಳಲ್ಲಿ ಆನಂದಕಂದರು ಅಗ್ರಗಣ್ಯರು. ನಾವಲಗಿಯವರು ಈ ಲೇಖನದಲ್ಲಿ ಆನಂದಕಂದರ ದೇಸಿ ಪ್ರತಿಭೆಯ ಕುರಿತು ಹೇಳಿರುವ ಮಾತುಗಳು ತುಂಬ ಉಪಯುಕ್ತವಾಗಿವೆ.

‘ಡಾ. ಬೆಟಗೇರಿ ಕೃಷ್ಣಶರ್ಮರ ಐತಿಹಾಸಿಕ ಕಾದಂಬರಿಗಳು – ಒಂದು ಅವಲೋಕನ’ ಎಂಬ ಲೇಖನದಲ್ಲಿ ನಾವಲಗಿಯವರು ‘ಮಲ್ಲಿಕಾರ್ಜುನ’, ‘ಅಶಾಂತಿ ಪರ್ವ’ ಮತ್ತು ‘ರಾಜಯೋಗಿ’ ಕಾದಂಬರಿಗಳ ವಸ್ತು, ಭಾಷೆ ಮತ್ತು ಶೈಲಿಯ ಕುರಿತು ಚರ್ಚಿಸಿದ್ದಾರೆ. ಕನ್ನಡದಲ್ಲಿ ಬಂದ ಇತರೆ ಐತಿಹಾಸಿಕ ಕಾದಂಬರಿಗಳಿಗಿಂತ ಈ ಮೂರು ಕಾದಂಬರಿಗಳು ಹೇಗೆ ಭಿನ್ನ ಎಂಬುದನ್ನು ನಾವಲಗಿಯವರು ಸೋದಾಹರಣವಾಗಿ ತೋರಿಸಿ ಕೊಟ್ಟಿದ್ದಾರೆ. ಆನಂದಕಂದರ ಐತಿಹಾಸಿಕ ಕಾದಂಬರಿಗಳ ಕುರಿತು ನಾವಲಗಿಯವರು ಹೇಳಿರುವ ಮಾತುಗಳನ್ನು ಓದುಗರು ಖಂಡಿತ ಒಪ್ಪುತ್ತಾರೆ.

“ಭಾಷಾ ಶೈಲಿ, ತಂತ್ರಾದಿಗಳ ದೃಷ್ಟಿಯಿಂದಲೂ ಮೂರೂ ಕಾದಂಬರಿಗಳು ಐತಿಹಾಸಿಕ ಕಾದಂಬರಿಗೆ ಮಾಡೆಲ್ ಆಗಿವೆ. ಇವುಗಳಲ್ಲಿ ‘ಶುದ್ಧ ಸಾಹಿತ್ಯಕ ಅಂಶಗಳು’ ಚೆಲ್ಲುವರಿದಿವೆ. ಅಷ್ಟೇ ಏಕೆ? ಶುದ್ಧ ಕಲಾತ್ಮಕತೆ’ಯನ್ನು ಮೂರೂ ಕಾದಂಬರಿಗಳಲ್ಲಿ ಆದಿಯಿಂದ ಅಂತ್ಯದವರೆಗೆ ಸಾಧಿಸಿದ ಬೆಟಗೇರಿ ಅವರು ನಿಜವಾಗಿಯೂ ಕಾದಂಬರಿ ರಚನಾ ಕಲಾವಿದರೇ!”
‘ಬೆಟಗೇರಿ ಕೃಷ್ಣಶರ್ಮರ ಜನಪದ ಸಾಹಿತ್ಯ ಸೇವೆ’ ಈ ಸಂಕಲನದ ದೀರ್ಘ ಮತ್ತು ಉತ್ತಮ ಲೇಖನ. ಆನಂದಕಂದರು ಜನಪದ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಮತ್ತು ಕೊಟ್ಟ ಕೊಡುಗೆಯನ್ನು ಎಲ್ಲಾ ಕೋನಗಳಿಂದ ಪರಿಶೀಲಿಸಿ ಬರೆದಿರುವ ಈ ಲೇಖನ ಬಹುಶಃ ಆನಂದಕಂದರ ಜಾನಪದ ಸಾಹಿತ್ಯದ ಕುರಿತು ಬಂದ ಬೆರಳೆಣಿಕೆಯಷ್ಟು ಲೇಖನಗಳಲ್ಲೊಂದು. ೧೯೨೨ರಲ್ಲಿಯೇ ‘ಕೆರೆಗೆ ಹಾರ’ ಎಂಬ ಸುಪ್ರಸಿದ್ಧ ಜನಪದ ಕಥನ ಗೀತೆಯನ್ನು ಮೊದಲ ಬಾರಿಗೆ ಬೆಳಕಿಗೆ ತಂದವರು ಬೆಟಗೇರಿ ಕೃಷ್ಣಶರ್ಮರು. ಕನ್ನಡದಲ್ಲಿ ‘ಜನಪದ ಸಾಹಿತ್ಯ’ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದವರು ಬೆಟಗೇರಿ ಕೃಷ್ಣಶರ್ಮರು. ಕಾವ್ಯ, ಕಥೆ, ಕಾದಂಬರಿ, ಜಾನಪದ, ಸಂಶೋಧನೆ ಎಲ್ಲದರಲ್ಲೂ ಆನಂದಕಂದರ ದೇಸಿ ಪ್ರತಿಭೆ ಮಿನುಗುತ್ತದೆ. ಹೊಸಗನ್ನಡ ಸಾಹಿತ್ಯದ ಆರಂಭಿಕ ಕಾಲಘಟ್ಟದಲ್ಲಿ, ಆ ಕಾಲದ ಪ್ರತಿಕೂಲ ವಾತಾವರಣದಲ್ಲಿ ಆನಂದಕಂದರು ಮಾಡಿದ ಜಾನಪದ ಸಾಹಿತ್ಯ ಸೇವೆಯನ್ನು ನಾವಲಗಿಯವರು ಸೋದಾಹರಣವಾಗಿ ಗುರುತಿಸಿದ್ದಾರೆ. ಆನಂದಕಂದರ ಒಟ್ಟಾರೆ ಜಾನಪದ ಸೇವೆಯ ಕುರಿತು ನಾವಲಗಿಯವರು ಹೇಳಿರುವ ಮಾತುಗಳು ತುಂಬ ಗಮನಾರ್ಹವಾಗಿವೆ.

“ಬೇರೆ ಬೇರೆ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಗೈದು ಕನ್ನಡ ಸಾರಸ್ವತ ಪ್ರಪಂಚದಲ್ಲಿ ಹೆಸರುವಾಸಿಯಾದ ಆನಂದಕಂದರು ಮೂಲತಃ ಜಾನಪದ ಸತ್ವವನ್ನು, ಜಾನಪದ ಸಂವೇದನೆಯನ್ನು ಮೈಗೂಡಿಸಿಕೊಂಡ ಸಾಹಿತಿಯಾದುದರಿಂದ, ಶುದ್ಧ ಜಾನಪದದ ಸೇವೆಯ ಜೊತೆಯಲ್ಲಿ ತಮ್ಮ ಸೃಷ್ಟಿಶೀಲ ಕಾವ್ಯ, ಕಥೆಗಳ ಮೂಲಕ ಉತ್ತರ ಕರ್ನಾಟಕದ ಜನಪದ ಸಾಹಿತ್ಯದ ಪುನರುಜ್ಜೀವನ, ಪುನರ್ಸೃಷ್ಟಿ ಮಾಡುವುದರೊಂದಿಗೆ ಕನ್ನಡ ಜನಪದ ಸಾಹಿತ್ಯದ ಉಳಿವಿಗಾಗಿ ಪರಿಶ್ರಮಿಸಿದ್ದು ನಿಜಕ್ಕೂ ಚಿಂತನಾರ್ಹ. ಜನಪದ ಬದುಕು-ಸಾಹಿತ್ಯ-ಸಂಸ್ಕೃತಿಗಳನ್ನು ತಮ್ಮ ಜೀವನದ ಉಸಿರಾಗಿಸಿಕೊಂಡ ಆನಂದಕಂದರು, ಅವುಗಳನ್ನು ತಮ್ಮ ಅಚ್ಚ ಜನಪದ ಪ್ರತಿಭೆಯ ಮೂಲಕ ಅಭಿವ್ಯಕ್ತಿಸಿದ ಅಪ್ಪಟ ಜನಪದ ಸಂವೇದನೆಯ ನಿಸ್ಸೀಮರು.”

ಆನಂದಕಂದರ ‘ಬೆಳುವಲದ ಸುಗ್ಗಿ’ (ಸಮಗ್ರ ಕಾವ್ಯ), ‘ಬೆಳುವಲದ ಬದುಕು’ (ಸಮಗ್ರ ಕಥೆಗಳು) ಮತ್ತು ‘ನಲ್ವಾಡುಗಳು’ ಪುಸ್ತಕಗಳು ಮಾತ್ರ ಈಗ ಮಾರುಕಟ್ಟೆಯಲ್ಲಿ ಲಭ್ಯ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಬಂದ ಪ್ರೊ. ರಾಘವೇಂದ್ರ ಪಾಟೀಲರ ‘ಆನಂದಕಂದ’ ಪುಸ್ತಕ ಮಾತ್ರ ಸದ್ಯ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತು ಮಾಹಿತಿ ನೀಡಬಲ್ಲ ಏಕೈಕ ಕೃತಿ. ನಾವಲಗಿಯವರ ‘ಆನಂದಕಂದರ ಸಾಹಿತ್ಯ – ಒಂದು ಅನುಸಂಧಾನ’ ಕೃತಿಯಲ್ಲಿ ಆನಂದಕಂದರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತು ಹೊಸ ಒಳನೋಟಗಳಿರುವ ಲೇಖನಗಳಿವೆ. ಆನಂದಕಂದರ ವಿಫುಲ ಸಾಹಿತ್ಯಕ್ಕೆ ಒಂದು ಪುಟ್ಟ ಪ್ರವೇಶಿಕೆಯಂತಿರುವ ಈ ಕೃತಿ, ಆನಂದಕಂದರ ೧೨೫ನೆಯ ಜಯಂತಿಯ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಪ್ರಕಟವಾಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣl ನಾವಲಗಿಯವರ ಆನಂದಕಂದರ ಸಾಹಿತ್ಯ – ಒಂದು ಅನುಸಂಧಾನ”

  1. Chintamani Sabhahit

    ಡಾ. ಸಿ.ಕೆ.ನಾವಲಗಿಯವರ ‘ಅನುಸಂಧಾನ’ದಲ್ಲಿರುವ, ‘ಆನಂದ ಕಂದ’ರ ಬಗೆಗಿನ ಸಮಗ್ರ ವ್ಯಕ್ತಿಮತ್ವ ಮನನ – ಮಂಥನ ಸಮುಚಿತ ಪರಿಚಯ, ನಿಜಕ್ಕೂ ಸಾಂದರ್ಭಿಕ, ಅಧ್ಯಯನಶೀಲ, ಪ್ರಜ್ಞಾನಪೂರ್ಣ, ಪರಿಚಯ ರೂಪದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ!

    ಇಬ್ಬರಿಗೂ ಅಭಿನಂದನೆಗಳು!!

  2. ವಿಠ್ಠಲ ಶ್ರೀನಿವಾಸ ಕಟ್ಟಿ.

    ಆನಂದಕಂದರ ಸಾಹಿತ್ಯದ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ. ಅವರ ಸಾಹಿತ್ಯಕ್ಕೆ ಆ ಕಾಲದಲ್ಲಾದ ಅನ್ಯಾಯವನ್ನು ಈಗಲಾದರೂ ತೊಲಗಿಸಬೇಕು.
    ಐತಿಹಾಸಿಕ ಕಾದಂಬರಿಗಳನ್ನು ಬರೆದವರಲ್ಲಿ ತ ರಾ ಸು ಸಹ ಗಮನಾರ್ಹರು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter