ವಿರಾಜ ಬಹಳ ಚಿಂತೆಯಲ್ಲಿದ್ದ. ವೇದಿಕೆಯ ನಿರ್ಮಾಣ, ಆಸನಗಳ ವ್ಯವಸ್ಥೆ ಮತ್ತು ಅಡುಗೆಯ ಏರ್ಪಾಡುಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಿದ್ದುದರಿಂದ ಮರುದಿನ ಸಾಹಿತ್ಯ ಹಬ್ಬದ ವೇದಿಕೆಯಲ್ಲಿ ಉಪಸ್ಥಿತರಿರಬೇಕಿದ್ದ ವಿಶಿಷ್ಟ ಅತಿಥಿಗಳಿಗೆ ಕರೆ ಮಾಡಿ ನೆನಪಿಸಲು ಅವನಿಗೆ ಮರೆತು ಹೋಗಿತ್ತು. ಪ್ರವೇಶ ಶುಲ್ಕವನ್ನು ಮನ್ನಾ ಮಾಡಿದ್ದರಿಂದ ಊರಿನವರೆಲ್ಲರೂ ಹಾಜರಾಗಿದ್ದರು. ಆದರೆ ಅತಿಥಿಗಳ ಪತ್ತೆಯಿಲ್ಲ. ಬಹಳ ಹೊತ್ತಿನಿಂದ ಖಾಲಿಯಾಗಿದ್ದ ವೇದಿಕೆಯ ಕಡೆಗೆ ಸಭಾಸದರ ನೋಟ, ಹಾಸ್ಯಕ್ಕೆ ಒಮ್ಮೆಯೂ ಗುರಿಯಾಗದಿದ್ದ ವಿರಾಜನಿಗೆ ‘ಈ ಸಾಹಿತ್ಯ ಹಬ್ಬದ ಸುಖ ಸಾಕು’ ಎಂದೆನಿಸಿದ್ದರಿಂದಲೋ ನನ್ನನ್ನು ಕರೆದು “ಹೇಗಾದ್ರೂ ಮಾಡಿ ಈ ಜನರ ಗಲಭೆಯನ್ನು ಒಮ್ಮೆ ನಿಲ್ಲಿಸಬೇಕಿತ್ತಲ್ಲ. ಅತಿಥಿಗಳು ಬರುವವರೆಗೆ ಯಾರಿಂದಾದರೂ ಹಾಡಿಸೋಣ” ಎಂದ.
‘ನನಗೆ ಬರೋದಿಲ್ಲ’ ಎಂದು ಬಿಂಕ ಮಾಡುತ್ತಿದ್ದ ವೀಣಾಳನ್ನು ಒತ್ತಾಯಪಡಿಸಿ ಹಾಡಿಸಿದ್ದಾಯಿತು. ಅದುವರೆಗೂ ಕುಳಿತು ಬೇಸತ್ತಿದ್ದ ವಿರಾಜನು ಅವಳ ಕರ್ಣಕಠೋರ ದನಿಯನ್ನು, ಅನವಶ್ಯಕ ರಾಗಾಲಾಪವನ್ನು ಹೇಗೆ ಸಹಿಸಿಕೊಂಡನೋ. ಅವಳ ಹಾಡು ಮುಗಿದಾಗ ‘ಸದ್ಯ! ಬದುಕಿದೆ’ ಎಂದುಕೊಂಡೆ. ಒಂದೇ ಒಂದು ಹಾಡು ಹೇಳಿ ಕಾರ್ಯಕ್ರಮವನ್ನು ಮುಗಿಸುವುದೇ? ಇರಲಿ. ಎಷ್ಟಾದರೂ ಹಾಡಿಕೊಳ್ಳಲಿ. ಆದರೆ ಬೇಗ ಹೇಳಿ ಮುಗಿಸಬಾರದೇ? ‘ನೀವು ಹೇಳಿ, ನೀವು ಹೇಳಿ’ ಎಂದು ಹತ್ತಾರು ಸಲ ಹೇಳಿಸಿಕೊಂಡು, ‘ಗಂಟಲು ಸರಿಯಾಗಿಲ್ಲ’ ಎಂದು ವೈಯಾರ ಮಾಡುತ್ತಿದ್ದಂತೆ ಇನ್ನು ಹಾಡಿಗಾಗಿ ಕಾದು ಫಲವಿಲ್ಲ ಎಂದುಕೊಂಡು ವೇದಿಕೆಯನ್ನು ಏರಿ ಧ್ವನಿವರ್ಧಕದ ಮುಂದೆ ನಿಂತು “ಎಲ್ಲರ ಹಾಡು ಮುಗಿಯಿತಲ್ಲ. ಅತಿಥಿಗಳು ಬರುವವರೆಗೆ ಎಲ್ಲರೂ ಮೌನವಾಗಿರಬೇಕಾಗಿ ವಿನಂತಿ” ಎಂದು ಕೇಳಿಕೊಳ್ಳುತ್ತಿದ್ದಂತೆ ಎದುರಲ್ಲಿದ್ದ ಯುವತಿಯರಿಬ್ಬರು “ತ್ಯಾಗರಾಜ ಸ್ವಾಮಿಗಳ ಕೃತಿಗಳನ್ನು ನೀವು ಹೇಳಿ, ನೀವು ಹೇಳಿ” ಎಂದು ತಮ್ಮೊಳಗೆ ವಾದಿಸತೊಡಗಿದರು. ಅದನ್ನು ಕಂಡು ತಲೆ ಕೆಡಿಸಿಕೊಂಡ ವಿರಾಜ ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಹುಡುಗಿಯನ್ನು ನೋಡಿ “ಹೋಗಲಿ. ಅವರಿಗೆ ಬಾರದಿದ್ದರೆ ಬಿಡು, ನೀನಾದರೂ ಹಾಡು ಮನೋರಮಾ” ಎಂದ. ನನಗೆ ನಗು ಬಂತು. ಅವಳು ಹಾಡುವುದೇ? ಇಷ್ಟರವರೆಗೆ ಹಾಡಿದವರ ಪಾಡೇ ಹೀಗೆ. ಇವಳು…
ಹುಡುಗಿಯ ಪ್ರಾಯವೆಷ್ಟು ಗೊತ್ತಿಲ್ಲ. ಬೆಳವಣಿಗೆಯನ್ನು ನೋಡಿದರೆ ಇಪ್ಪತ್ತೈದಕ್ಕಿಂತಲೂ ಹೆಚ್ಚು ಕಾಣುತ್ತಿತ್ತು. ಅವಳ ಬಲಗೈ ಸುರುಟಿತ್ತು. ಬಾಯಿಯ ಕೊನೆ ತಿರುಪಿತ್ತು. ಬಲಗಣ್ಣು ಹೊರಳಿತ್ತು. ದೇಹದ ಬಲಭಾಗವಿಡೀ ಪಾಶ್ರ್ವವಾಯು ಪೀಡಿತಳಂತೆ ಮರಗಟ್ಟಿತ್ತು.
“ತ್ಯಾಗರಾಜ ಕೃತಿಗಳು ನನಗೆ ಬರೋದಿಲ್ಲ. ಬೇರೆ ಹಾಡಲೇ?”
ಅವಳ ದನಿ ನಡುಗುತ್ತಿದೆಯೇ? ತೊದಲುತ್ತಿದೆಯೇ? ನರಳುತ್ತಿರುವಂತೆ ಕೇಳಿಸುತ್ತದೆಯೇ?
ನಾನೆಲ್ಲಿ ಬೇಡವೆನ್ನುವೆನೋ ಎಂದುಕೊಂಡು ವಿರಾಜ “ಏನಾದರೊಂದು ಹೇಳು” ಎಂದ. ಅವಳು ಹಾಡತೊಡಗಿದಳು.
“ಪರಮಾತ್ಮಾ ಹರೇ ಪಾವನರಾಮಾ”
ಹೆಸರಾಂತ ಸಂಗೀತಗಾರರ ಬಾಯಿಯಿಂದ ನಾವು ಆ ಕೀರ್ತನೆಯನ್ನು ಹಲವು ಬಾರಿ ಕೇಳಿದ್ದೆವು. ಅವರ ವಿದ್ವತ್ತು, ಶಬ್ದ ಚಮತ್ಕಾರಗಳು ಆಕೆಯ ಕೊರಳಿನಲ್ಲಿರಲಿಲ್ಲ. ಆದರೆ ಆ ಸ್ವರ, ಆ ಭಾವ ಮಾಧುರ್ಯ, ಹೃದಯನ್ನು ಕದಡುವ ಶಕ್ತಿ…
ಮೆಚ್ಚುಗೆಯ ಅರಿವಿಲ್ಲದೆ ಅವಳು ಹಾಡುತ್ತಿದ್ದಳು. ಹೆಚ್ಚಾಗಿ ನೆಲವನ್ನು ನೋಡುತ್ತಿದ್ದ ಆಕೆಯ ನೋಟವು ಪರಮಾತ್ಮನನ್ನು ನೋಡುತ್ತಿದೆಯೋ ಎಂಬಂತೆ ಆಗಸವನ್ನು ದಿಟ್ಟಿಸುತ್ತಿತ್ತು. ಚೆಲುವಿನಿಂದ ತುಂಬಿದ ಹೃದಯವನ್ನು ತೋರಿಸುವ ಕನ್ನಡಿಗಳಂತಿದ್ದ ಆ ಎರಡು ಕಣ್ಣುಗಳನ್ನು ನೋಡದೆ ಆಕೆಯನ್ನು ಕುರೂಪಿ ಎಂದುಕೊಂಡ ನಾನು… ಛೆ!
ಬೇಸತ್ತಿದ್ದ ವಿರಾಜನ ಬೇಸರವೆಲ್ಲಿ ಹೋಯಿತೋ. ಹಾಡು ಮುಗಿಯುವುದರೊಳಗೆ “ಇನ್ನೊಂದು ಹೇಳಮ್ಮಾ” ಎಂದ. ‘ನನಗೆ ಬರೋದಿಲ್ಲ. ಗಂಟಲು ಸರಿಯಾಗಿಲ್ಲ. ಇಷ್ಟು ಸಾಕು’ ಎನ್ನುವಳೋ ಎಂದು ತಿಳಿದುಕೊಂಡಿದ್ದೆ. ಆದರೆ ಆಕೆ ಹಾಡಿದಳು.
“ನಾನ್ಯಾಕೆ ಬಡವನಯ್ಯಾ”
ಇದೂ ಅನೇಕ ಬಾರಿ ಕೇಳಿಸಿಕೊಂಡ ಕೀರ್ತನೆಯೇ. ಆದರೆ ಮನೋರಮೆಯ ಕೊರಳಿನಿಂದ ಹೊರಡುವಾಗ…
ಅದರ ಬಳಿಕ ಇನ್ನೂ ಹಾಡಿಸಬೇಕೆಂದು ವಿರಾಜನಿಗೆ ಆಸೆ. ನನಗೂ ಇರಲಿಲ್ಲವೆಂದಲ್ಲ.
“ಶಂಭಟ್ಟರ ಮಗಳು ಮೆರೆಯೋದನ್ನು ನೋಡು. ಇವಳೇನು ಸಾಹಿತ್ಯ ಅಥವಾ ಸಂಗೀತದ ವಿದ್ಯಾರ್ಥಿಯಾ? ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿಯನ್ನು ಪಡೆದು, ಯೂಟ್ಯೂಬ್ ಚಾನೆಲುಗಳಲ್ಲಿ ಹಾಡಿ ಲಕ್ಷಾಂತರ ನೋಟಕ್ಕೆ ಒಳಗಾಗಿರುವವರು ಇರುವಾಗ ಇವಳದ್ದೇನು ಹೆಚ್ಚುಗಾರಿಕೆ?” ಎಂದು ಯಾರಲ್ಲೋ ಪಿಸುಗುಡುತ್ತಿದ್ದ ವೀಣಾ ಗಂಟಲು ಸರಿಪಡಿಸಿಕೊಂಡು ಸಂಭಾವಿತಳಂತೆ ಸ್ವಲ್ಪ ದೊಡ್ಡಕ್ಕೇ ಹೇಳಿದಳು. “ಅಯ್ಯೋ! ಅವಳು ಸೌಖ್ಯವಿಲ್ಲದ ಹುಡುಗಿ. ಲೆಕ್ಕಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿಸಿದರೆ ಅವಳ ಆರೋಗ್ಯ ಕೆಟ್ಟೀತು. ಇವತ್ತಿಗೆ ಇಷ್ಟು ಸಾಕು. ಅಲ್ಲವೇ ಮನೋರಮಾ?”
“ಕಾರ್ಯಕ್ರಮ ಸುರುವಾಗುವ ಮೊದಲು ‘ಮನೋರಮಾ ಅದು ಮಾಡು, ಇದು ಮಾಡು ಅಂತ ನೀವೆಲ್ಲ ಸೇರಿ ಕೆಲಸ ಮಾಡಿಸುವಾಗ, ನನ್ನಮ್ಮ ಅವಳ ಬಳಿ ಪ್ರೀತಿಯಿಂದ ಮಾತಾಡುವಾಗ, ‘ಒಳ್ಳೆಯ ಮಾತುಗಳನ್ನು ಆಡಿದ್ರೆ ಸಾಕು, ತಲೆ ಸವರಿದರೆ ಬೆನ್ನು ಹತ್ತುವ ನಾಯಿಯಂತೆ ಆಕೆ ಸಾವಿತ್ರಮ್ಮನ ಹಿಂದೆ ಮುಂದೆ ತಿರುಗೋದೇನು, ಬೇಕು ಬೇಕಾದುದನ್ನು ಒಳಗಿನಿಂದ ತರೋದೇನು, ಅವರು ಕೂತಲ್ಲಿ ಕೂರೋದೇನು?’ ಎಂದು ಕೊಂಕು ನುಡಿಯುವಾಗ ಎಲ್ಲಿ ಹೋಗಿತ್ತು ನಿನ್ನ ಧರ್ಮಬುದ್ಧಿ?” ಎಂದು ವೀಣಾಳ ಮುಂದೆ ನಿಂತು ಚೀರಬೇಕೆನಿಸಿದರೂ ಶಿಷ್ಟಾಚಾರವನ್ನು ನೆನೆದು ಸುಮ್ಮನಾದೆ. ಕೊನೆಗೆ ತಡೆಯಲಾರದೆ ಮನೋರಮೆಯ ಬಳಿಗೆ ಹೋಗಿ “ಮನೂ, ಚೆನ್ನಾಗಿ ಹಾಡಿದೆ. ದೊಡ್ಡ ವಿದ್ವಾಂಸರೂ ನಿನ್ನ ಹಾಡಿಗೆ ತಲೆದೂಗಬೇಕು. ಆದರೆ ವೀಣಾಳ ಬಗ್ಗೆ ಹಾಗೆ ಹೇಳುವಂತಿಲ್ಲ. ಆಕೆಯ ರಾಗದೊಂದಿಗೆ ಭಾವ ಸೇರಿಕೊಂಡಿಲ್ಲ. ತ್ಯಾಗರಾಜರ ಕೃತಿಗಳಲ್ಲಿನ ಸಂಗೀತದ ಚೆಲುವನ್ನು ಅನುಭವಿಸಬೇಕಿದ್ದರೆ ಸಾಹಿತ್ಯಕ್ಕೆ ಒತ್ತು ಕೊಟ್ಟರೆ ಸಾಲದು. ಅರ್ಥ, ಭಾವ, ಸಮಯ, ಸಂದರ್ಭಗಳನ್ನರಿತು ಹಾಡಬೇಕು. ಆಗ ಮಾತ್ರ ಅದು ಸಂಗೀತವೆನಿಸಿಕೊಳ್ಳುತ್ತದೆ. ‘ಪಕ್ಕಲ ನಿಲಬಡಿ’ ಎಂಬ ಕೃತಿಯಲ್ಲಿ ‘ಮನಸುನ ದಲಚಿ ಮೈಮರಚಿಯನ್ನಾರ’ ಎಂಬ ಚರಣವನ್ನು ತಾರ ಸ್ಥಾಯಿಯಲ್ಲಿ ಹಾಡುವ ಮೂಲಕ ಶಬ್ದ ವೈಭವದ ಸೊಗಡನ್ನು ಸೊಗಸಾಗಿ ವ್ಯಕ್ತಪಡಿಸಬಹುದಿತ್ತು. ಸಂಗೀತ ಜ್ಞಾನವಿಲ್ಲದ ಕೇಳುಗರ ಮನಸ್ಸಿನಲ್ಲೂ ಸೀತಾರಾಮ ಲಕ್ಷ್ಮಣರ ಮೂರ್ತಿಗಳನ್ನು ಮೂಡಿಸಬಹುದಿತ್ತು. ಆದರೆ ಅವಳಿಗೆ ಅದು ಸಾಧ್ಯವಾಗಲಿಲ್ಲ. ‘ಅಲಕಲಲ್ಲ ಲಾಡಗಗನಿ’ ಎಂಬಲ್ಲಿ ‘ಅಡಗ ಗನಿ’ ಎಂದು ವಿಂಗಡಿಸಿ ಹಾಡುವಾಗ ರಿಷಭ ಮಧ್ಯಮಗಳ ಮೇಲೆ ಗಮನ ಕೊಟ್ಟದ್ದರಿಂದ ಸ್ವರ ಗಮಕಗಳ ನಡುವಿನ ಸಂಚಾರದಲ್ಲೇ ಶ್ರೀರಾಮನ ಹಣೆಯ ಮೇಲೆ ಅಂದವಾಗಿ ನಲಿಯುವ ಮುಂಗುರುಳು ಕೇಳುಗರ ಕಣ್ಣ ಮುಂದೆ ಮೂಡಿಸಲೂ ಆಗಲಿಲ್ಲ. ತಕ್ಕ ಸಾಧನೆಯಿಲ್ಲದೆ ಅದೆಲ್ಲ ಸಾಧ್ಯವಿಲ್ಲ. ಆದರೆ ನೀನಂತೂ ಅಚ್ಚಗನ್ನಡ ಕೃತಿಗಳ ಮೂಲಕ ಎಲ್ಲರ ಮನದಲ್ಲೂ ಮನೆ ಮಾಡಿಬಿಟ್ಟೆ. ನಿನ್ನ ಹಾಡುಗಾರಿಕೆಯ ಬಗ್ಗೆ ಹೇಳಲು ಮಾತುಗಳಿಲ್ಲ” ಎನ್ನುತ್ತಾ ಏನೂ ಅರ್ಥವಾಗದವಳಂತೆ ನನ್ನನೇ ನೋಡುತ್ತಿದ್ದ ಮನೋರಮೆಯ ಬಳಿ ಕೇಳಿದೆ.
“ನನ್ನ ಗುರುತಾಗಲಿಲ್ವಾ? ನಾನು ಸೂರ್ಯ. ಸೂರ್ಯಕಾಂತ ಮೇಷ್ಟ್ರು”
ಅವಳ ಕಣ್ಣುಗಳು ಮಿಂಚಿದವು. ಮುಖ ಅರಳಿತು. ಪರಿಚಯವಾಯಿತು ಎಂಬಂತೆ ತಲೆ ಅಲ್ಲಾಡಿತು.
“ಕೊನೆಯದಾಗಿ ಒಂದು ಹಾಡು ಹೇಳು.”
ನನ್ನ ಮೇಲಿನಿಂದ ಕಣ್ಣು ತೆಗೆಯದೆ ಆಕೆ ಹಾಡಿ ಬಿಟ್ಟಳು. “ಕೃಷ್ಣ ಮೂರ್ತಿ ಕಣ್ಣಾ ಮುಂದೆ”
ನನ್ನ ಹೃದಯದ ದಳದಳವೂ ಅರಳಿತು. ಹಾಡು ಮುಗಿದ ಬಳಿಕ ವೀಣಾಳ ಕಣ್ಣುಗಳು ನಮ್ಮಿಬ್ಬರನ್ನು ದಿಟ್ಟಿಸಿ ನೋಡುತ್ತಿರುವುದನ್ನು ನನ್ನ ಓರೆನೋಟ ಕಂಡು ಹಿಡಿಯಿತು.
ಸಾಹಿತ್ಯ ಹಬ್ಬ ಮುಗಿದ ಬಳಿಕ ಮಧ್ಯಾಹ್ನದ ಊಟ ಮಾಡುತ್ತಿದ್ದಂತೆ ಹತ್ತಿರ ಬಂದ ವಿರಾಜ ದನಿ ತಗ್ಗಿಸಿ ಹೇಳಿದ. “ಅಂತೂ ಬಾರಿಸಿಬಿಟ್ಟೆ ಕಡಪಾಕಲ್ಲಿನಂಥ ವೀಣಾಳ ಮುಸುಡಿಗೆ”
“ನನಗೆ ಆ ಉದ್ದೇಶ ಇರಲಿಲ್ಲ.”
“ನನಗೆ ಗೊತ್ತು ನಿನ್ನ ಉದ್ದೇಶ ಅದಲ್ಲ ಅಂತ. ನಿನಗೆ ಹಾಗೆ ಮಾಡಲು ಮನಸ್ಸೂ ಬರಲಿಕ್ಕಿಲ್ಲ. ಆದರೂ ಎಂಥ ಸೊಕ್ಕು ಆಕೆಗೆ. ಸಂಗೀತಗಾರಳಾಗಿ ಆಕೆ ಇನ್ನು ಬೆಳೆಯುವುದೇ ಇಲ್ಲ. ಭಕ್ತಿ ಮತ್ತು ವಿನಯದ ಬದಲಿಗೆ ಅಹಂಕಾರ ಬೆರೆತರೆ ಪ್ರತಿಭೆ ಸೊರಗುತ್ತದೆ. ಅವಳ ಪಾಲಿಗೆ ಆದದ್ದು ಅದೇ.”
“ಇರಲಿ. ಅವಳು ಮಾಡೋ ಕೆಲಸ ನೆನೆದುಕೊಂಡರೆ ಊಟ ರುಚಿಸಲಿಕ್ಕಿಲ್ಲ.”
ಮನೋರಮೆ ಪಾಯಸದ ಪಾತ್ರೆಯನ್ನು ಹಿಡಿದು ನಿಂತಿರುವುದನ್ನು ಕಂಡು ಮಾತನ್ನು ಅಲ್ಲಿಗೇ ನಿಲ್ಲಿಸಿದೆ. ಊಟ ಮುಗಿಸಿ ಕೈತೊಳೆದ ಬಳಿಕ ದನಿಯೊಂದು ಕೇಳಿಸಿತು. “ನಿಮ್ಮಲ್ಲೊಂದು ಮಾತು ಕೇಳಬಹುದ?”
“ಏನು ಮನೋರಮಾ?”
“ಅದೇನು ಮೇಷ್ಟ್ರೇ ವೀಣಳ ಸಂಗತಿ?”
“ಅದೇನೆಂದರೆ” ನನ್ನ ಮುಂದಿನ ಮಾತಿಗೆ ಅದು ಪೀಠಿಕೆಯಾಯಿತು. “ಆಕೆ ನನ್ನ ಪರಿಚಯದ ಹುಡುಗಿ. ಅವಳು ಒಂಭತ್ತನೇ ತರಗತಿಯಲ್ಲಿದ್ದಾಗಿನಿಂದಲೂ ನಾನು ಅವಳನ್ನು ಬಲ್ಲೆ. ತುಂಬಾ ಒಳ್ಳೆಯವಳಾಗಿದ್ದಳು. ನಮ್ಮೂರಲ್ಲಿ ಪದವಿ ಮುಗಿಸುವವರೆಗೂ ಗುಣ ಸಂಪನ್ನೆಯಾಗಿದ್ದಳು. ಉನ್ನತ ವ್ಯಾಸಂಗಕ್ಕಾಗಿ ವಿಶ್ವವಿದ್ಯಾಲಯ ಸೇರಿದ ಮೇಲೆ ಕೆಟ್ಟವರ ಸಹವಾಸದಿಂದಾಗಿಯೋ ಏನೋ ಅವಳ ನಡವಳಿಕೆ ಬದಲಾಯಿತು. ನಾನು ದೊಡ್ಡವಳೆಂಬ ಭ್ರಮೆ. ಹುಟ್ಟೂರಿನ ಮೇಲೆ ತುಚ್ಛ ಭಾವನೆ. ನಾನೇ ದೊಡ್ಡ ಸಂಗೀತಗಾರಳೆಂಬ ಹಮ್ಮು. ಇದರ ಅರಿವಿಲ್ಲದ ನಾನು ಅವಳ ತಂದೆಯ ಬಳಿ ಜಾತಕ ಕೇಳಿದಾಗ ‘ನಿನಗೆ ಹೆಣ್ಣು ಬೇಕಿದ್ದರೆ ಪತ್ರಿಕೆಯಲ್ಲಿ ಜಾಹೀರಾತು ಕಾಲಂ ನೋಡು. ವಧೂವರರ ವೇದಿಕೆ ಎಂಬ ವಾಟ್ಸಾಪ್ ಗುಂಪಿಗೆ ಸೇರು’ ಅಂದ. ವಿರಾಜ ನನ್ನ ಪರವಾಗಿ ವೀಣಾಳಲ್ಲಿ ಮಾತಾಡಿದ. ‘ಅವನೊಬ್ಬ ಪುಸ್ತಕದ ಹುಳು. ಮಾಮೂಲಿ ಹಳ್ಳಿ ಮೇಷ್ಟ್ರು’ ಅಂತ ತಿರಸ್ಕರಿಸಿ ಬಿಟ್ಟಳು. ಫೇಸ್ ಬುಕ್ಕಿನಲ್ಲಿ ಅನ್ ಫ್ರೆಂಡ್ ಮಾಡಿ, ಫೋನ್ ನಂಬರ್ ಡಿಲೀಟ್ ಮಾಡಿದಳು.”
“ನಿಮಗೆ ಬಹಳ ಬೇಸರವಾಗಿರಬಹುದು.”
“ಹೌದು. ವಿರಾಜನ ಜೊತೆಗೂ ಅವಳದ್ದು ಜೋರಿತ್ತಂತೆ. ಅವನು ಆಕೆಯ ಹಾಡುಗಾರಿಕೆಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದನಂತೆ. ಕೊನೆಗೆ ಯಾವುದೋ ಕಾರಣಕ್ಕೆ ಮಾತು ಬೆಳೆದು ಜಗಳವಾಡಿದರಂತೆ. ಬರೆದರೆ ಎಂಟು ಪುಟ ಆಗುವಷ್ಟು ಬೈದು ಬಿಟ್ಟನಂತೆ. ಅದರ ನಂತರ ಅವಳಿಗೆ ವಿರಾಜ ಅಂದರೆ ಒಳಗೊಳಗೆ ದ್ವೇಷ. ಅವನ ಆತ್ಮೀಯರಾಗಿದ್ದ ಹುಡುಗಿಯರ ವಿಳಾಸಕ್ಕೆ ‘ನಿಮ್ಮ ಗೆಳೆಯ ವಿರಾಜನ ಬಗ್ಗೆ ಎಚ್ಚರವಾಗಿರಿ. ನಿಮ್ಮ ಶೀಲ ಕಾಪಾಡಿಕೊಳ್ಳಿ. ಆತ ನನಗೆ ಮಾಡಿದ ದ್ರೋಹವನ್ನು ವಿವರಿಸಲು ಸಾಧ್ಯವಿಲ್ಲ. ಆತನನ್ನು ನಾನು ಒಮ್ಮೆಯೂ ಮರೆಯಲಾರೆ’ ಎಂಬ ಇ ಮೈಲುಗಳು ಹೋಗುತ್ತಿವೆಯಂತೆ. ಅದು ಅವಳೇ ಕಳುಹಿಸಿದ್ದೋ ಅಥವಾ ಅವಳನ್ನು ಕಂಡರಾಗದ ಇತರರು ಅವಳ ಮರ್ಯಾದೆ ತೆಗೆಯಲಿಕ್ಕಾಗಿ ಕಳುಹಿಸಿದ್ದೋ ಗೊತ್ತಿಲ್ಲ. ಉಳಿದವರೆಲ್ಲ ಇದನ್ನು ಓದಿ ಸಂದೇಹಪಟ್ಟಾಗ ನವ್ಯಳಂತೂ ವಿರಾಜನನ್ನು ಬಿಟ್ಟು ಕೊಡಲಿಲ್ಲ. ಕಳೆದ ತಿಂಗಳು ಅವರಿಬ್ಬರ ಮದುವೆ ನೆರವೇರಿತಲ್ಲ, ಅದೇ ಸಂತೋಷ.”
“ಸರಿ ಮೇಷ್ಟರೇ, ನಾನು ಹೊರಡ್ತೇನೆ. ನಾಲ್ಕು ಗಂಟೆ ಆಗುವುದರೊಳಗೆ ಮನೆಗೆ ತಲುಪಿ ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯ ಮಾಡಬೇಕು”
“ಓಹ್! ಹೌದಲ್ಲ. ಮಾತಿನ ಗೌಜಿಯಲ್ಲಿ ಸಮಯ ಹೋದದ್ದೇ ತಿಳಿಯಲಿಲ್ಲ. ನಾನೂ ಹೊರಟೆ.”
“ಮನೆಗೆ ಬರೋದಿಲ್ವೇ?”
“ಇನ್ನೊಮ್ಮೆ ಬರ್ತೇನೆ. ನಿನ್ನನ್ನು ಕಂಡಾಯಿತಲ್ಲ ಮೊದಲ ಬಾರಿಗೆ. ನೀನೂ ಬಾ ನಮ್ಮನೆಗೆ. ಸುಳ್ಯದಿಂದ ಬಸ್ ಹತ್ತಿ ಮುಳ್ಳೇರಿಯದಲ್ಲಿ ಇಳಿದು, ಬದಿಯಡ್ಕಕ್ಕೆ ಬಂದು, ಅಲ್ಲಿಂದ ಕಾಸರಗೋಡಿಗೆ ಹೋಗುವ ಬಸ್ಸಿನಲ್ಲಿ… ಛೆ! ಅದೆಲ್ಲ ಬೇಡ. ಬದಿಯಡ್ಕಕ್ಕೆ ಬಂದು ಕರೆ ಮಾಡಿದರೆ ಆಟೋ ಮಾಡಿ ಕರೆದುಕೊಂಡು ಹೋಗುವೆ.”
“ಆಯಿತು ಮೇಷ್ಟರೇ ನಿಮ್ಮ ಮದುವೆಗೆ ಬರ್ತೇನೆ.”
ಅದನ್ನು ಕೇಳಿದಾಗ ಮನಸ್ಸಿಗೆ ಚುಚ್ಚಿದಂತಾಯಿತು. ಆದರೂ ನೋವನ್ನು ತೋರಿಸಿಕೊಳ್ಳದೆ ಹೇಳಿದೆ.
“ಹೋಗಿ ಬರುತ್ತೇನೆ ಮನೂ. ನಿನ್ನ ಮದುವೆಗೆ ಕರೀಬೇಕು.”
“ಕರೆಯದಿರುತ್ತೇನಾ? ಆದರೆ ಎಲ್ಲದಕ್ಕೂ ದಿನ ಕೂಡಿ ಬರಬೇಕಲ್ಲಾ.”ಎನ್ನುತ್ತಾ ಆಕೆ ನಿಟ್ಟುಸಿರು ಬಿಟ್ಟಳು.
ಬಸ್ಸು ಮುಂದಕ್ಕೆ ಚಲಿಸುತ್ತಿದ್ದರೂ ನನ್ನ ಮನಸ್ಸು ಹಿಂದಕ್ಕೆ ಚಲಿಸುತ್ತಿತ್ತು. ವೀಣಾಳ ತಿರಸ್ಕಾರದಿಂದ ನೊಂದಿದ್ದ ನನ್ನ ಮನಸ್ಸಿಗೆ ಮುಲಾಮು ಹಚ್ಚುವುದಕ್ಕೋ ಎಂಬಂತೆ ಒಂದೆರಡು ವರ್ಷಗಳ ಹಿಂದೆ ವಿರಾಜ ನನಗಾಗಿ ಮನೋರಮೆಯ ಪ್ರಸ್ತಾಪವನ್ನು ತಂದಿದ್ದ. ಕನ್ಯೆಯರ ತಿರಸ್ಕಾರದಿಂದ ಬೇಸತ್ತಿದ್ದುದರಿಂದ ಇದೂ ಹತ್ತರೊಂದಿಗೆ ಹನ್ನೊಂದು ಎಂದುಕೊಂಡು ಸುಮ್ಮನಾಗಿದ್ದೆ. ನನ್ನ ಇಪ್ಪತ್ತೇಳನೇ ವಯಸ್ಸಿನಿಂದ ತೊಡಗಿ ಮೂವತ್ತರ ಹರೆಯದ ನಡುವಿನಲ್ಲಿ ಅದೆಷ್ಟು ಹುಡುಗಿಯರ ಜಾತಕ ಕೇಳಿದೆನೋ ಯಾರಿಗೆ ಗೊತ್ತು? ಅವರಲ್ಲೊಬ್ಬಳಿಗೆ ಬೆಂಗಳೂರಿನವನೇ ಆಗಬೇಕು. ಸತಿ lಸಾವಿತ್ರಿಯಂತೆ ವರ್ತಿಸುತ್ತಿದ್ದ ಮತ್ತೊಬ್ಬಳು ಆನ್ಲೈನ್ ಮೂಲಕ ಲೈಂಗಿಕ ವ್ಯವಹಾರ ಮಾಡಿ ಸಿಕ್ಕಿಬಿದ್ದು ಆತ್ಮಹತ್ಯೆ ಮಾಡಿಕೊಂಡಳು. ಇನ್ನಿಬ್ಬರು ಹುಡುಗಿಯರು ಅನ್ಯಜಾತಿಯ ಯುವಕರೊಂದಿಗೆ ಓಡಿಹೋದರು. ಇಂಥ ಘಟನೆಗಳಿಂದ ಬೇಸತ್ತು ಉತ್ತರ ಕರ್ನಾಟಕದ ಕನ್ಯೆಯರ ಬಗ್ಗೆ ವಿಚಾರಿಸಿದರೆ ಅವರಿಗೆ ಹುಬ್ಬಳ್ಳಿಯ ವರನೇ ಬೇಕು. ಮೂವತ್ತು ವಯಸ್ಸು ದಾಟಿದ ಬಳಿಕ ಮದುವೆಯ ಬಗ್ಗೆ ಆಸಕ್ತಿ ಇಲ್ಲವಾಗಿ ವೈರಾಗ್ಯದ ಭಾವನೆ ಕಾಡತೊಡಗಿದ್ದರಿಂದ ಮನೋರಮೆಯ ಬಗ್ಗೆ ವಿಶೇಷ ಭಾವನೆಯು ಹುಟ್ಟಲಿಲ್ಲ. “ನೋಡು ಸೂರ್ಯ, ಈಗಿನ ಹುಡುಗಿಯರ ಪೈಕಿ ಹೆಚ್ಚಿನವರು ಕೆಟ್ಟು ಹೋದರೆಂದರೆ ಎಲ್ಲರೂ ಹಾಳಾಗಿ ಹೋದರು ಎಂದರ್ಥವಲ್ಲ. ಅಯೋಗ್ಯ ಹುಡುಗಿಯರು ನಿನ್ನನ್ನು ಮದುವೆಯಾಗಲು ಒಲ್ಲೆ ಎಂದ ಮಾತ್ರಕ್ಕೆ ನೀನು ತಿರಸ್ಕೃತನೂ ಅಲ್ಲ. ಮನೋರಮೆಗೆ ಪ್ರಾಯವನ್ನು ಮೀರಿದ ಪ್ರಬುದ್ಧತೆಯಿದೆ. ನಾನು ನಿನ್ನ ಬಗ್ಗೆ ಹೇಳಿದಾಗ ಡಿಜಿಟಲ್ ಪತ್ರಿಕೆಗಳಲ್ಲಿ ಪ್ರಕಟವಾದ ನಿನ್ನ ಕತೆ, ಪುಸ್ತಕ ವಿಮರ್ಶೆಗಳನ್ನು ಗೂಗಲ್ ನಲ್ಲಿ ಹುಡುಕಾಡಿ ಓದಿದ್ದಾಳೆ. ನಿನ್ನ ಬಗ್ಗೆ ಆಕೆಗೆ ನವಿರು ಭಾವನೆಗಳಿವೆ” ಎನ್ನುತ್ತಿದ್ದಂತೆ ನನ್ನ ಅಂತರಂಗದಲ್ಲಿ ತುಕ್ಕು ಹಿಡಿದು ಬಿದ್ದಿದ್ದ ಲಗ್ನದ ಬಯಕೆಗೆ ಸಾಣೆ ಇಟ್ಟಂತಾಗಿ “ನನ್ನ ಪರವಾಗಿ ನೀನೇ ಮಾತನಾಡು” ಎಂದು ಅವನನ್ನು ಕೇಳಿಕೊಂಡೆ. ಆತನು ದೂರವಾಣಿಯ ಮೂಲಕ ಆಕೆಯ ತಂದೆಯನ್ನು ಸಂಪರ್ಕಿಸಿದಾಗ “ಆಕೆ ದಿನಾ ಮದ್ದು ತಗೊಳ್ತಾಳೆ ಮಗಾ” ಎಂದರಂತೆ. ವಿಷಯಕ್ಕೆ ಪ್ರವೇಶಿಸುವ ಮುನ್ನವೇ ಹೀಗೆ ಹೇಳಬೇಕಿದ್ದರೆ ಗಂಭೀರ ಕಾಯಿಲೆ ಇರಬೇಕೆಂದುಕೊಂಡು ಅವನು ಅದನ್ನು ಅಲ್ಲಿಗೇ ಕೈಬಿಟ್ಟ. ಮನೋರಮೆಯಲ್ಲಿ ನನ್ನ ಬಗ್ಗೆ ಹೇಳಿದಾಗ ‘ಹಿರಿಯರ ಜೊತೆ ಮಾತಾಡಿದ ಬಳಿಕ ಹೇಳ್ತೇನೆ’ ಎಂದು ಸುಮ್ಮನಾದಳು. ಪುಸ್ತಕದ ಹುಳು, ಮಾಮೂಲಿ ಹಳ್ಳಿ ಮೇಷ್ಟರು ಎಂದುಕೊಂಡು ಇವಳೂ ನನ್ನನ್ನು ತಿರಸ್ಕರಿಸಿದಳು ಎಂದು ಒಳಗೊಳಗೆ ಉರಿಯುತ್ತಿದ್ದಂತೆ ಮೊಬೈಲ್ ರಿಂಗಣಿಸಿತ್ತು.
“ಹಲೋ ಸೂರ್ಯ ಮೇಷ್ಟ್ರಲ್ಲವೇ? ಬಿಡುವಾಗಿದ್ದರೆ ಮಾತಾಡಬಹುದೆ?”
ನನ್ನ ವಿದ್ಯಾರ್ಥಿಯ ತಾಯಿಯಾಗಿರಬಹುದು ಎಂದುಕೊಂಡು “ನಮಸ್ಕಾರ. ಹೇಳೀಮ್ಮಾ” ಎಂದೆ.
“ನಾನು ಮನೋರಮಾ. ಮುಂಡೋಡಿನಿಂದ ಮಾತಾಡ್ತಿದ್ದೇನೆ. ನಿಮ್ಮ ಗೆಳೆಯ ವಿರಾಜ ಹೇಳಿರಬೇಕಲ್ಲ ನನ್ನ ಬಗ್ಗೆ?”
ಅರೆಕ್ಷಣ ತಡವರಿಸಿದ ನನ್ನ ತಲೆಯೊಳಗೆ ಬೆಳಕು ಸ್ಫುರಿಸಿದಂತಾಯಿತು. ಹೌದು! ಅವಳೇ ಇವಳು.
“ಹೇಳಿ” ನಾನು ನಿರ್ಲಿಪ್ತನಂತೆ ಉತ್ತರಿಸಿದೆ.
“ನಿಮ್ಮ ಬಗ್ಗೆ ವಿರಾಜ ತುಂಬಾ ಹೇಳಿದ. ಆದರೆ ಎರಡು ತಿಂಗಳವರೆಗೆ ನನಗೆ ಏನೂ ಉತ್ತರಿಸಲಾಗಲಿಲ್ಲ. ಏನು ಹೇಳಲಿ? ಹೇಗೆ ಹೇಳಲಿ? ನಿಮಗೆ ಬೇಸರವಾಗದಿರಲು ಉತ್ತರಿಸಲೇಬೇಕೆಂದುಕೊಂಡು ಇವತ್ತು ಕರೆ ಮಾಡಿದೆ. ನೀವು ತಿಳಿದಂತೆ ನಾನು ಎಲ್ಲರಂಥವಳಲ್ಲ. ದನಿ ಕೇಳುವಾಗ ಗೊತ್ತಾಗುವುದಿಲ್ಲವೇ? ನಾನು ತೊದಲುತ್ತಿದ್ದೇನೆ. ನರಳಿದಂತೆ ಕೇಳಿಸುತ್ತದೆ. ಮಾತಾಡುವಾಗ ಕೊರಳು ಇನ್ನಿಲ್ಲದಂತೆ ಉಬ್ಬುತ್ತದೆ.”
“ಅದೇಕೆ?”
“ಏಕೆಂದರೆ ನಾನು ಪಾರ್ಕಿನ್‍ಸನ್ ರೋಗಿ.”
ನನ್ನ ಎದೆಗೆ ಗುಂಡಿಟ್ಟಂತಾಯಿತು. “ಪಾರ್ಕಿನ್ಸನ್? ಅರುವತ್ತು ವಯಸ್ಸು ದಾಟಿದವರಿಗೆ ಬರೋದಲ್ವಾ ಅದು?”
“ಅಲ್ಲ ಸರ್. ನೂರು ಮಂದಿಗಳ ಪೈಕಿ ನಾಲ್ಕು ಜನರಿಗೆ ಹುಟ್ಟಿನಿಂದಲೇ ಬರೋದುಂಟು. ಆ ರೀತಿ ಬಾಧಿಸಿದ್ರೆ ದಿನಾ ಮದ್ದು ತಿನ್ನೋದರ ಮೂಲಕ ನಿಯಂತ್ರಣಕ್ಕೆ ತರಬಹುದಲ್ಲದೆ ಒಮ್ಮೆಯೂ ಗುಣವಾಗೋದಿಲ್ಲ. ವರ್ಷ ಹೋದಂತೆ ಕಾಯಿಲೆಯ ಪ್ರಮಾಣ ಹೆಚ್ಚಾಗ್ತಾ ಹೋಗ್ತದೆ. ಸಣ್ಣ ಪುಟ್ಟ ಆಘಾತ, ನೋವುಗಳನ್ನು ಸಹಿಸಲೂ ಶಕ್ತಿ ಇರುವುದಿಲ್ಲ. ವಿಪರೀತ ನಡುಕ, ಒಂದೇ ಸವನೆ ಬೆವರುವುದು ಮುಂತಾದ ಸಮಸ್ಯೆಗಳಿರುತ್ತವೆ. ದಾಂಪತ್ಯ ಬದುಕನ್ನು ಅನುಭವಿಸಲು, ಹೆರಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ನೂರರಲ್ಲಿ ಒಂದಂಶ ಸಾಧ್ಯತೆ ಇದ್ದರೂ ಇರಬಹುದು ಅಂತ ಡಾಕ್ಟರ್ ನಮ್ಮ ಸಮಾಧಾನಕ್ಕಾಗಿ ಹೇಳಿದ್ದಾಗಿರಬಹುದು. ಇದನ್ನೆಲ್ಲ ಯೋಚನೆ ಮಾಡಿದ್ರಿಂದಲೇ ನಾನು ಸುಮ್ಮನಾದೆನಲ್ಲದೆ ನೀವು ಅಯೋಗ್ಯರೆಂದು ಭಾವಿಸಿದ್ದರಿಂದಲ್ಲ. ಹಾಗೆ ತಿಳಿದುಕೊಂಡು ನೀವು ನೊಂದುಕೊಳ್ಳಬೇಡಿ ಅಂತ ಇಷ್ಟು ಹೇಳಿದೆ. ಇಡ್ತೇನೆ ಸರ್. ಹೆಚ್ಚು ಮಾತಾಡಿದ್ರೆ, ಕೆಲಸ ಮಾಡಿದ್ರೆ ವಿಪರೀತ ದಣಿವಾಗ್ತದೆ. ಹಾಗೆಲ್ಲಾದ್ರೂ ಆದ್ರೆ ಮತ್ತೂ ಕಷ್ಟ. ನನ್ನ ಮೇಲೆ ಸಿಟ್ಟು ಮಾಡಬೇಡಿ ಸರ್” ಎನ್ನುತ್ತಿದ್ದಂತೆ ಮಾತುಗಳು ನಿಂತವು. ಎದೆಯಾಳದಲ್ಲಿ ಸುಳಿಯುತ್ತಿದ್ದ ಮೃದು ಭಾವನೆಗಳನ್ನು ನಿರ್ದಾಕ್ಷಿಣ್ಯವಾಗಿ ತುಳಿದು ಕಲ್ಲು ವಿಗ್ರಹದಂತೆ ನಿಂತಿದ್ದ ನನ್ನ ಮನಸ್ಸಿನಲ್ಲಿ ನೋವು, ಯಾತನೆ, ಸಂತಸ ಮತ್ತು ಹೆಮ್ಮೆಯ ಭಾವನೆಗಳು ಜೊತೆಯಾಗಿ ಮೊರೆದು ಉಕ್ಕಿದವು. ನನಗಿಂತ ಎಂಟು ವಯಸ್ಸು ಚಿಕ್ಕವಳಾಗಿದ್ದ ಆಕೆಯ ಬಗ್ಗೆ ಗೌರವ ಮೂಡಿತು. “ಆಕೆಯ ಯೋಚನೆಯ ರೀತಿಯೂ ನಿಜವಲ್ಲವೇ ಮಗಾ? ತನ್ನ ಸಮಸ್ಯೆ, ತನ್ನ ತೀರ್ಮಾನ ಇನ್ನೊಂದು ಜೀವದ ಅಥವಾ ತನ್ನದೇ ಆದ ಕನಸು ಹೊತ್ತ ಕುಟುಂಬದ ಸಂತಸಕ್ಕೆ ಅಡ್ಡಿಯಾಗದಿರಲಿ ಎಂದು ಭಾವಿಸಿದ್ದಲ್ಲಿ ತಪ್ಪೇನಿದೆ? ಹೃದಯದ ಭಾಷೆಯಲ್ಲಿ ಯೋಚಿಸೋದಾದ್ರೆ ನೀನು ಹೇಳೋದು ಸರಿ. ಬದುಕು ಎಂದ ಮೇಲೆ ಬುದ್ಧಿಯ ನೆಲೆಯಲ್ಲೂ ಯೋಚಿಸಬೇಕಲ್ಲವಾ? ಹಿಂದೆ ಮುಂದೆ ನೋಡದೆ ಅವಳನ್ನು ಮದುವೆಯಾದ ಬಳಿಕ ಸಂತಾನ ಮುಂದುವರಿಯದಿದ್ರೆ, ಒಂದುವೇಳೆ ಮಗು ಹುಟ್ಟಿದ್ರೂ ರೋಗ ಪೀಡಿತವಾಗಿದ್ರೆ ನಿನ್ನ ಮೇಲೆ ಇಮ್ಮಡಿ ಒತ್ತಡ ಬಿದ್ದೀತು. ನಿನ್ನ ತಲೆಯಲ್ಲಿ ಸಾಹಿತ್ಯದ ಓದಿನಿಂದ ದೊರಕಿದ ಆದರ್ಶವಿದೆಯೇ ಹೊರತು ಅನುಭವದ ಜ್ಞಾನವಿಲ್ಲ. ಆದ್ದರಿಂದ ಹೀಗೆ ಹೇಳುತ್ತಿರುವೆ. ಆಮೇಲೆ ನಿನ್ನಿಷ್ಟ” ಎಂದರು ಅಪ್ಪ.
“ಬದಿಯಡ್ಕ ಬದಿಯಡ್ಕ” ಬಸ್ಸಿನ ಕಂಡೆಕ್ಟರ್ ಕಿರುಚಿದಾಗಲೇ ಎಚ್ಚರ.
ಕವಿದ ಕತ್ತಲೆಯಲ್ಲಿ ದೀಪ ದೊಡ್ಡದು ಮಾಡಲು ಮನಸ್ಸು ಬಾರದೆ ಕಣ್ಣು ಬಿಗಿದುಕೊಂಡೆ. ಏನು ಮಾಡಲಿ? ನನ್ನ ಒಂಟಿತನ ಹಾರಿಹೋದದ್ದು, ಬದುಕು ತುಂಬಬಹುದು ಎಂಬ ಭಾವನೆಯು ಚಿಗುರತೊಡಗಿದ್ದು ಮನೋರಮೆಗೆ ನನ್ನ ಮೇಲೆ ಮೆಚ್ಚುಗೆಯಿದೆ ಎಂದು ಅರಿತ ಬಳಿಕವೇ. ಆದರೆ ಅಪ್ಪನ ಮಾತೂ ನಿಜ ಅನಿಸುತ್ತಿದ್ದಂತೆ ನಾನು ಕಪಟಿ, ವೇಷಧಾರಿ, ಹುಳ ಕೊರೆದ ಮರ ಎಂಬ ಭಾವನೆ ನನ್ನನ್ನು ಕೊಚ್ಚುತ್ತಿದೆ. ಮನೋರಮೆಯನ್ನು ನನ್ನೆಲ್ಲ ಶಕ್ತಿಗಳಿಂದಲೂ ಪ್ರೀತಿಸುತ್ತೇನೆ ಎಂದು ಮನದಲ್ಲೇ ಗಟ್ಟಿ ಮಾಡಿಕೊಂಡರೂ ನಡುವೆ ಅಪ್ಪನ ಮಾತು ಬಂದಾಗ, ಅಮ್ಮನ ದನಿ ಕೇಳಿದಾಗ ಸಂಕಟವಾಗುತ್ತಿದೆ. ಇಳಿವಯಸ್ಸಿನವರಾದ ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವ, ಮೊಮ್ಮಗುವನ್ನು ಹೆತ್ತು ಕೊಡಬಲ್ಲ ಸೊಸೆಯನ್ನು ನಿರೀಕ್ಷಿಸುವ ಸಂದರ್ಭದಲ್ಲಿ ಆಕೆಯನ್ನೇ ಆರೈಕೆ ಮಾಡಬೇಕಾಗಿ ಬರುವ ಪರಿಸ್ಥಿತಿಯನ್ನು ಬರಮಾಡಿಕೊಳ್ಳಲು ಬಯಸುವರೇ? ಮನೋರಮೆಯನ್ನು ಬಿಟ್ಟು ಯಾವ ಹೆಣ್ಣೂ ಬೇಡ ಎಂದು ನಿರ್ಧರಿಸುವಷ್ಟರಲ್ಲಿ ಅಪ್ಪನ ಕಂದಿದ ಮುಖ ಕಣ್ಣೆದುರು. ನೊಂದ ತಾಯಿಯ ಮುಖ ಮನಸ್ಸಿನೆದುರು. ನಾನು ಮನೋರಮೆಯನ್ನು ಮದುವೆಯಾದರೆ ಇಲ್ಲಿ ಅವಳಿಗೆ ಯಾವ ಸ್ಥಾನ ಸಿಕ್ಕೀತು? ಅಕ್ಕರೆ-ನೆಮ್ಮದಿ ದೊರಕಬಹುದೇ? ಕೊನೆಗೆ ಇವಳ ಬಗ್ಗೆ ನಾನೇ ಬೇಸತ್ತು… ಇತರರಿಗೆ ಒಳಿತು ಬಯಸಿ ಮನೋರಮೆಯನ್ನು ಕಲಕಿದ ಮಡುವಿಗೆ ದೂಡಿ ಬಿಟ್ಟಂತಾದರೆ? ಅಂತೂ ದೇವರು ಅವಳ ಪಾಲಿಗೆ… ಅಲ್ಲ… ನಮ್ಮ ಪಾಲಿಗೆ ಕ್ರೂರಿಯಾಗಿಬಿಟ್ಟ.
ವಿರಾಜನ ಮಗುವಿನ ನಾಮಕರಣಕ್ಕೆ ಹೋದಾಗ ಪುರುಸೊತ್ತು ಮಾಡಿಕೊಂಡು ಮನೋರಮೆಯ ಮನೆಗೆ ಹೋದೆ. “ಇವತ್ತು ಶನಿವಾರವಾದ್ರೂ ಕಛೇರಿಯ ಸಿಬ್ಬಂದಿಗಳನ್ನು ಕಡ್ಡಾಯವಾಗಿ ಬರಹೇಳಿದ್ದರಿಂದ ಮಗಳು ಶಾಲೆಗೆ ಹೋಗಿದ್ದಾಳೆ” ಎಂದು ಆಕೆಯ ತಂದೆ ಶಂಭಟ್ಟರು ಹೇಳಿದರು. “ಮಗಳನ್ನು ಮೊನ್ನೆ ಒಬ್ಬರು ನೋಡ್ಕೊಂಡು ಹೋಗಿದ್ರು. ಯೂನಿವರ್ಸಿಟಿ ಪ್ರೊಫೆಸರ್ ಮೃತ್ಯುಂಜಯ.”
ನನಗೆ ಉಸಿರು ಕಟ್ಟಿದಂತಾಯಿತು. ಎದೆಯಲ್ಲಿ ನೋವೆದ್ದಿತು. ಕೈಗಳು ನಡುಗಿದವು.
ಪ್ರೀತಿಸಿ ಮದುವೆಯಾದ ಹೆಂಡತಿಯ ಕಣ್ಣು ತಪ್ಪಿಸಿ, ಹರೆಯದ ವಿದ್ಯಾರ್ಥಿನಿಯರೊಂದಿಗೆ ಚಕ್ಕಂದವಾಡುತ್ತಾ ಇದೀಗ ಹೆಂಡತಿಗೆ ಸೋಡಾಚೀಟಿ ಕೊಟ್ಟವನೊಂದಿಗೆ ಮನೋರಮೆಯ…
“ವೀಣಾ ತಂದ ಪ್ರಸ್ತಾಪವಿದು.”
ಎತ್ತಲೋ ನೋಡುತ್ತಾ ಕಣ್ಣೊರೆಸಿಕೊಂಡು ಹೇಳತೊಡಗಿದರು ಶಂಭಟ್ಟರು.
“ನಮ್ಮ ಜಾತಿಗೆ ಸೇರಿದ ಎಲ್ಲ ಹುಡುಗಿಯರು ಈಗೀಗ ಉನ್ನತ ವಿದ್ಯಾಭ್ಯಾಸ ಪಡೆದು ದೊಡ್ಡ ಮಟ್ಟದ ವ್ಯಕ್ತಿಗಳನ್ನು ಮದುವೆಯಾಗ್ತಾರೆ. ಆದರೆ ಇವಳನ್ನು ಕಟ್ಟಿಕೊಂಡವ ಏನು ಸುಖ ಕಂಡುಕೊಂಡಾನು? ಇಪ್ಪತ್ತೇಳು ಮೂವತ್ತರ ಹರೆಯದವರಿಗೆ ಹೆಣ್ಣಿನಿಂದ ದೊರಕುವ ಸುಖ ಬೇಕು. ಇವಳಿಂದ ಅದು ಸಾಧ್ಯವಿಲ್ಲ ಅಂತ ತಿಳಿದಾಗ ಅವರು ಆಕೆಯ ಜೊತೆ ಕೆಟ್ಟದಾಗಿ ವ್ಯವಹರಿಸುವ, ವಿಚ್ಛೇದನ ಕೊಡುವ ಸಾಧ್ಯತೆಯುಂಟು. ಆರೋಗ್ಯ ಸಮಸ್ಯೆಯ ಪರಿಣಾಮವಾಗಿ ಅವಳ ಮುಖ, ಶರೀರ ಒಂಥರಾ ಇರೋದ್ರಿಂದ, ಮಾತುಗಳಿಗೆ ಅಡೆತಡೆ ಉಂಟಾಗಿದ್ರಿಂದ ಶಾಲೆಯಲ್ಲೂ ಸಹಪಾಠಿಗಳು ದೂರವಾದ್ರು. ಆದ್ರಿಂದ ಅವರ ಪಾಲಿಗೆ ಎಲ್ಲವೂ ನಾನೇ. ಮಾತಿಗಾಗಿ ಸ್ನೇಹಕ್ಕಾಗಿ ಹಂಬಲಿಸುವ ಅವಳು ಈಗಲೂ ಚಿಕ್ಕ ಮಕ್ಕಳಂತೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದಾಗ ಮನಸ್ಸು ಶಾಂತವಾಗಿದ್ರೆ ಸಮಾಧಾನದಿಂದಲೇ ಉತ್ತರಿಸ್ತೇನೆ. ಆದ್ರೆ ಗಡಿಬಿಡಿಯಲ್ಲಿರುವಾಗಲೂ ಪಂಚಾಯ್ತಿಕೆ ಮಾಡ್ಲಿಕೆ ಸುರುಮಾಡಿದ್ರೆ ಬಹಳ ಕಷ್ಟದಿಂದ ಕೋಪವನ್ನು ನುಂಗಬೇಕಾಗ್ತದೆ. ಅವಳ ಮೇಲೆ ಯಾರಾದರೂ ಸ್ವಲ್ಪ ಕಣ್ಣು ದೊಡ್ಡ ಮಾಡಿದರೆ ಅಥವಾ ಮಾತಾಡದೆ ಕೂತರೆ ತುಂಬಾ ನೊಂದುಕೊಳ್ತಾಳೆ. ವಿಪರೀತ ತಲೆ ಕೆಡಿಸಿಕೊಳ್ತಾಳೆ. ಆಗ ಚಿಂತೆ ಹೆಚ್ಚಾಗಿ ಅವಳ ಆರೋಗ್ಯ ಕೆಡಬಹುದು. ಮದ್ದಿನ ಪ್ರಭಾವ ಹೆಚ್ಚು ಕಡಿಮೆಯಾದ್ರೆ ನಮ್ಮೊಟ್ಟಿಗೆ ಇರುವಾಗಲೂ ಅಂತರ್ಮುಖಿಯಾಗಿ, ಒಂಥರಾ ವರ್ತಿಸುವ ಇವಳ ಪರಿಸ್ಥಿತಿ ಗಂಡನ ಮನೆಯಲ್ಲಿ ಹೇಗಿರಬಹುದು? ಅವರು ಇವಳನ್ನು ಅರ್ಥ ಮಾಡಿಕೊಳ್ಳುವರೇ? ಮೃತ್ಯುಂಜಯನಾದರೆ ರಗಳೆಯಿಲ್ಲ. ಬದುಕಿನ ಎಲ್ಲ ಸುಖಗಳನ್ನು ಉಂಡವನು. ಆದ್ದರಿಂದ ಇವಳಿಂದ ಹೆಚ್ಚೇನನ್ನೂ ಅಪೇಕ್ಷಿಸಲಾರ. ಆ ನಿಟ್ಟಿನಲ್ಲಿ ಇವಳು ಸುರಕ್ಷಿತಳು. ಅವನ ಬಾಕಿ ವಿಚಾರಗಳ ಬಗ್ಗೆ ಏನೂ ತಿಳಿದಿಲ್ಲ ಎಂಬಂತೆ ಇದ್ದರಾಯಿತು. ನನ್ನ ಕಾಲ ಕಳೆದ ಬಳಿಕ ಅವಳಿಗೆ ಯಾರಿದ್ದಾರೆ? ಒಂದು ಲೆಕ್ಕದಲ್ಲಿ ವೀಣಾ ಹೇಳಿದ್ದು ನಿಜ. ‘ಮನೋರಮೆಗೆ ಅವಳ ಯೋಗ್ಯತೆಯನ್ನು ಮೀರಿದ ವರನೇ ಸಿಕ್ಕ. ಮೃತ್ಯುಂಜಯ ಸರ್ ನಂಥ ಪ್ರಸಿದ್ಧ ವ್ಯಕ್ತಿ ಅವಳಿಗೆಲ್ಲಿ ದೊರೆಯಬೇಕು? ಅವರು ವಿ. ಸಿ ಆಗುವುದಕ್ಕೂ ಯೋಗ್ಯರು. ಎಲ್ಲವೂ ಇವಳ ಪೂರ್ವಜನ್ಮದ ಪುಣ್ಯ. ಐವತ್ತರ ಹತ್ತಿರ ವಯಸ್ಸಾಗುತ್ತಿದ್ದರೂ ನಲುವತ್ತರ ಆಸುಪಾಸಿನಲ್ಲಿ ಇದ್ದವರಂತಿಲ್ವಾ? ಊಟ ಬಟ್ಟೆಗಳಿಗೆ ಕೊರತೆ ಇಲ್ಲ. ಮೈಮುರಿವ ದುಡಿಮೆಯೂ ಇಲ್ಲ. ಮನೆಯಲ್ಲಿ ಅತ್ತೆ ಮಾವಂದಿರ ಕಾಟವಿಲ್ಲ. ಮಗ ವಿನೀತ್ ದೊಡ್ಡವನಾಗಿರುವುದರಿಂದ ಅವನನ್ನು ನೋಡಿಕೊಳ್ಳಬೇಕಾಗಿಲ್ಲ. ಸುಖವಾಗಿರಲು ಯಾವುದೇ ಅಡ್ಡಿಯಲ್ಲ. ಆಕೆ ನಿಜಕ್ಕೂ ಭಾಗ್ಯವಂತೆ’ ಎಂದಳು. ಹೌದು ಮೇಷ್ಟ್ರೇ ಅದು ಅವಳ ಭಾಗ್ಯ.” ಎನ್ನುತ್ತಾ ಪಾಣಿಪಂಚೆಯಿಂದ ಮುಖವನ್ನು ಒತ್ತಿ ಒರೆಸಿಕೊಂಡು ನನ್ನನ್ನು ನೋಡಿ ಕ್ಷೀಣವಾಗಿ ನಕ್ಕರು. ಆಮೇಲೆ ಅಲ್ಲಿ ಸೂಜಿ ಬಿದ್ದರೂ ಕೇಳುವಂಥ ಮೌನ ವ್ಯಾಪಿಸಿಸಿತು. ಇನ್ನು ಯಾರು ಪ್ರಾರಂಭಿಸಬೇಕೆಂದು ಹೊಳೆಯದಂತೆ, ಹೇಗೆ ಶುರುಮಾಡಬೇಕೆಂದು ತಿಳಿಯದವರಂತೆ ಇಬ್ಬರೂ ಸುಮ್ಮನಾದೆವು. ಆಮೇಲೆ ನಾನು ಅವರಲ್ಲಿ ಕೇಳಿದ್ದು ಒಂದೇ ಮಾತು.
“ನಿಮ್ಮ ವಿರೋಧ ಇಲ್ಲದಿದ್ದರೆ ನಾನು ಮನೋರಮೆಯನ್ನು ಮದುವೆಯಾಗಬಹುದಾ?”
2 thoughts on “ಇಳಿದ ಬೇರುಗಳು”
ನಮಸ್ಕಾರ ಲೇಖಕರಿಗೆ.
ನಮ್ಮ ಸಮಾಜದಲ್ಲಿ ಬೇರೆಯವರ ಅಮಾಯಕತೆಯನ್ನು, ಅಸಹಾಯಕತೆಯನ್ನು ದುರುಪಯೋಗಪಡಿಸುವ ಜನರ ಪ್ರತಿನಿಧಿಯಾಗಿ ಈ ಕಥೆಯ ಕೆಲವು ಪಾತ್ರಗಳು ಕಂಡಿದೆ.
ಮನೋರಮಾ ಎನ್ನುವ ಪಾತ್ರದ ಪರಿಚಯ ಮಾಡುವಾಗ ಸಾಹಿತ್ಯ ಹಬ್ಬದ ಭಾಗವಾದ, ಬುದ್ಧಿಜೀವಿಗಳ ಸಾಲಿನಲ್ಲೇ ಗುರುತಿಸಲ್ಪಟ್ಟಿರುವ ಆ ಎರಡೂ ಪಾತ್ರಗಳೂ ಸ್ವಗತದಲ್ಲೇ ಆದ್ರೂ ಅವಳ ನ್ಯೂನತೆಗಳನ್ನು ಅಪಹಾಸ್ಯ ಮಾಡುವುದು ಆ ಪಾತ್ರಗಳ ಘನತೆಗೆ ತಕ್ಕುದಾಗಿರಲಿಲ್ಲ. ಒಂದರ ಮೇಲೊಂದರಂತೆ ಹಾಡು ಹಾಡಿಸಿದ್ದರ ಹಿಂದಿನ ಉದ್ದೇಶವೂ ವೀಣಾ ಎನ್ನುವ ಪಾತ್ರದ ಮೇಲಿನ ಕಿಚ್ಚಿಗೆ ಆಗಿತ್ತೇ ವಿನಃ ನಿಷ್ಕಲ್ಮಶ ಹುಡುಗಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಗಿರಲಿಲ್ಲ ಎನ್ನುವುದು ಸ್ಪಷ್ಟ. ಆ ಸನ್ನಿವೇಶವನ್ನು ವಿವರಿಸುವ ಮೂಲಕ ಲೇಖಕರು ದೊಡ್ಡ ವ್ಯಕ್ತಿಗಳು ಎನಿಸಿಕೊಂಡವರ ಸಣ್ಣತನವನ್ನು ತೆರೆದಿಟ್ಟಿದ್ದಾರೆ.
ಫ್ಲಾಶ್ ಬ್ಯಾಕ್ ನಲ್ಲಿ ವಧುವಿನ ಅನ್ವೇಷಣೆಯಲ್ಲಿ ತೊಡಗಿ ಬೇಸತ್ತ ಕಥಾನಾಯಕನ ನಿಜವಾದ ಉದ್ದೇಶ ವ್ಯಕ್ತವಾಗುತ್ತಾ ಹೋಗುತ್ತೆ. ಪಾರ್ಕಿನ್‍ಸನ್ ನಿಂದ ಉಂಟಾಗಬಹುದಾದ ಎಲ್ಲಾ ಸಮಸ್ಯೆಗಳ ಬಗ್ಗೆ ಕಥಾನಾಯಕನಿಗೆ ಪೂರ್ಣ ಮಾಹಿತಿಯಿದೆ. ಅದನ್ನು ಪಟ್ಟಿ ಮಾಡುವಾಗಲೂ ಆತನಿಗೆ ಮನೋರಮಾ ಮೇಲಿದ್ದ ಪ್ರೀತಿಯೇ ಮೇಲುಗೈ ಸಾಧಿಸಿತ್ತು ಎನ್ನುವುದಕ್ಕೆ ಆಧಾರ ಎಲ್ಲೂ ವ್ಯಕ್ತವಾಗಿಲ್ಲ. ವ್ಯಕ್ತವಾಗಿ ಹೇಳ್ಬೇಕು ಅಂದ್ರೆ ಅವಳೊಬ್ಬ ಹೆಣ್ಣಾಗಿ ಮಾತ್ರ ಅವನಿಗೆ ಕಾಣಿಸುತ್ತಿದ್ದಳು.
ಮುಂದಿನ ಭಾಗದಲ್ಲಿ ಮೃತ್ಯುಂಜಯನ ಪ್ರಪೋಸಲ್ ಬಗ್ಗೆ ಹೇಳುತ್ತಾ (ಕಥಾನಾಯಕನ ದೃಷ್ಟಿಯಲ್ಲಿ ನ್ಯೂನತೆಯಿಂದ ಕೂಡಿದ) ಒಬ್ಬ ಹೆಣ್ಣಿಗೆ ಆ ಸಂಬಂಧವೇ ಅವಳ ಯೋಗ್ಯತೆಗೂ ಮೀರಿದ್ದು ಎನ್ನುವಾಗ ಅವಳ ಗುಣ ನಡತೆ, ವಿದ್ಯೆ ಯಾವುದೂ ಅವಳ ಯೋಗ್ಯತೆಯನ್ನು ಹೆಚ್ಚಿಸಿರಲಿಲ್ಲವೆಂದು ಹೇಳಿದ ಹಾಗಾಯ್ತು. ತನ್ನ ಅನೈತಿಕ ವ್ಯವಹಾರಗಳಿಂದ ಹೆಂಡತಿಯನ್ನು ಕಳೆದುಕೊಂಡವನಿಗೆ ಮನೋರಮೆಯು ಒಂದು ಭೋಗದ ವಸ್ತುವಾಗಿ ಕಂಡಳು ಅಷ್ಟೇ. ವಾಸ್ತವದಲ್ಲಿ ಕಥಾನಾಯಕನಿಗೂ ಅವನಿಗೂ ವ್ಯತ್ಯಾಸವೇನೂ ಇಲ್ಲ. ಕೊನೆಯಲ್ಲಿ ಆತ ಪ್ರಪೋಸ್ ಮಾಡಿದ್ದನ್ನು ಓದುವಾಗ ಅಸಹ್ಯವೆನಿಸಿತು.
ನಮಸ್ಕಾರ. ನೀವು ಹೇಳಿದಂತೆ ಇಲ್ಲಿ ಕಥಾನಾಯಕನಿಲ್ಲ. ನಾಯಕಿ ಮಾತ್ರ ಮುಖ್ಯ. ಆಕೆಗೆ ಬರುವ ಮೃತ್ಯುಂಜಯನ ಪ್ರಸ್ತಾಪ ಆಕೆಯ ಯೋಗ್ಯತೆಗೂ ಮೀರಿದ್ದು ಎಂದು ಸಮಾಜ ಭಾವಿಸುವುದರ ಬಗೆಗಿನ ವಿಷಾದ ಆ ಕತೆಯಲ್ಲಿ ಇದೆ. ಕತೆಯ ನಾಯಕ ಎಂದು ನೀವು ಅಭಿಪ್ರಾಯ ಪಡುವ ಸೂರ್ಯನು ಆಕೆಯನ್ನು ಮದುವೆಯಾಗುವ ಇಂಗಿತವನ್ನು ವ್ಯಕ್ತ ಪಡಿಸಿದ್ದು ಆಕೆಯ ಗುಣನಡತೆ ಮತ್ತು ಉತ್ತಮ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರಿಂದಲೇ ಹೊರತು ಸೌಂದರ್ಯವನ್ನು ಮೋಹಿಸಿದ್ದರಿಂದ, ದಾಂಪತ್ಯ ಸುಖವನ್ನು ಬಯಸಿದ್ದರಿಂದ ಅಲ್ಲ. ಇದುವೇ ಸೂರ್ಯ ಮತ್ತು ಮೃತ್ಯುಂಜಯರ ನಡುವಿನ ಅಂತರ. ಹಾಗಾಗಿ ಬಾಹ್ಯ ವ್ಯಕ್ತಿತ್ವಕ್ಕಿಂತ ಅಂತರಂಗದ ಚೆಲುವು ಮುಖ್ಯ ಎಂಬುದನ್ನು ಧ್ವನಿಸುವಲ್ಲಿ ಕತೆಯು ಯಶಸ್ವಿಯಾಗಿದೆ ಎಂಬುದು ನನ್ನ ನಂಬಿಕೆ. ಹೆಣ್ಣನ್ನು ಭೋಗವಸ್ತುವಾಗಿ ಕಾಣಬಾರದು ನಿಜ. ಒಂದು ಹೆಣ್ಣಾಗಿಯೂ ಕಾಣಬಾರದು ಎಂದರೆ? ಹೆಣ್ಣು ಎಂದರೆ ಅಂತಃಸತ್ವದ ಪ್ರತೀಕ. ಅದನ್ನು ಸೂರ್ಯನು ಗುರುತಿಸಿದ್ದಾನೆ. ಇಲ್ಲಿ ಆಕೆ ಭೋಗವಸ್ತು ಎಂಬಂತೆ ಕಾಣುತ್ತಿಲ್ಲ. ಹಾಗಿದ್ದರೆ ಗೊತ್ತಿದ್ದೂ ಗೊತ್ತಿದ್ದೂ ಸೂರ್ಯನು ಆಕೆಯನ್ನು ಮದುವೆ ಆಗುವ ಇಚ್ಛೆ ವ್ಯಕ್ತ ಪಡಿಸುತ್ತಿರಲಿಲ್ಲ. ಇದು ಅಸಹ್ಯ ಎನಿಸುವ ವಿಚಾರ ಅಲ್ಲ.