ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರ ‘ಮುಂಬಯಿ ಕನ್ನಡ ಪತ್ರಿಕೋದ್ಯಮ’

ಡಾ. ದಿನೇಶ್ ಶೆಟ್ಟಿ ರೆಂಜಾಳ

ಪತ್ರಿಕೆಯೊಂದು ಸಮಾಜದ ಕನ್ನಡಿ.ಅದು ಧ್ವನಿ ಇಲ್ಲದವರ ಧ್ವನಿ. ಮುಂಬಯಿಯಲ್ಲಿಯೂ ಕನ್ನಡ ಪತ್ರಿಕೋದ್ಯಮಕ್ಕೆ  ತನ್ನದೇ ಒಂದು ವಿಶೇಷ ಸ್ಥಾನ, ಗೌರವ ಲಭಿಸಿದೆ. ಸುಮಾರು ನೂರೈವತ್ತು ವರ್ಷಗಳ ಇತಿಹಾಸ ಇಲ್ಲಿನ ಕನ್ನಡ ಪತ್ರಿಕಾರಂಗಕ್ಕಿದೆ. ಬ್ರಿಟೀಷ್ ಆಡಳಿತದ  ಮುಂಬೈ ಪ್ರಾಂತದಲ್ಲಿ ಬೆಳಗಾವಿ ,ವಿಜಾಪುರ, ಉತ್ತರ ಕನ್ನಡ, ಧಾರವಾಡ  ಜಿಲ್ಲೆಗಳೂ ಸೇರಿದ್ದರಿಂದ ಕನ್ನಡ ಉಸಿರಾಟ ಇಲ್ಲಿ ಸಹಜವಾಗಿಯೇ ಕಾಣುತ್ತೇವೆ. ಇಪ್ಪತ್ತನೇ ಶತಾಬ್ದಿಯ ನಲುವತ್ತು ಐವತ್ತರ ದಶಕದಲ್ಲಿ ಅರ್ಥಾತ್ ಸ್ವಾತಂತ್ರ್ಯ ದೊರೆತ ದಶಕದಲ್ಲಿ ಮುಂಬಯಿಗೆ ಪತ್ರಿಕಾರಂಗವನ್ನು ಸೇರಲೆಂದೇ ಕರಾವಳಿ ಭಾಗದಿಂದ ವಿದ್ಯಾವಂತರು ಬರುತ್ತಿದ್ದರು.ಆ ದಿನಗಳಲ್ಲಿ ಪತ್ರಿಕೋದ್ಯಮದ ಮೇಲೆ ನಿಷ್ಟೆ ಇದ್ದವರಷ್ಟೆ ಈ ಕ್ಷೇತ್ರಕ್ಕೆ ಸೇರಿಕೊಳ್ಳುತ್ತಿದ್ದರು. ಅದು ವೃತ್ತಿ ಎಂದು ಭಾವಿಸುತ್ತಿರಲಿಲ್ಲ. ಕನ್ನಡಿಗರು ಮುಂಬಯಿಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತೆ ಪತ್ರಿಕಾ ರಂಗದಲ್ಲೂ ಸಾಧನೆ ಮಾಡಿದ್ದಾರೆ. ಕರ್ನಾಟಕದಿಂದ ವಲಸೆ ಬಂದ ಆರಂಭದ ದಿನಗಳಲ್ಲಿ ಒಂದೊಂದೇ  ಸಂಘಸಂಸ್ಥೆಗಳನ್ನು ಇಲ್ಲಿ ಕಟ್ಟಿಕೊಂಡರು.ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿಕೊಂಡರು.ಶನಿಪೂಜಾ ಸಮಿತಿ,  ಭಜನಾಮಂಡಳಿ, ದೇವಿ ದೇವಸ್ಥಾನಗಳನ್ನು ನಿರ್ಮಿಸಿದರು. ಹೊಟೇಲುಗಳು, ವಾಣಿಜ್ಯಕ್ಷೇತ್ರಗಳಲ್ಲಿ ಛಾಪು ಬೀರಿದಂತೆ ವೈದ್ಯಕೀಯ ಕ್ಷೇತ್ರ, ಆಸ್ಪತ್ರೆಗಳನ್ನು ನಿರ್ಮಿಸಿ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡರು. ಕ್ರಮೇಣ ತಮ್ಮ ತಮ್ಮ ಸಂಘಗಳ ಮುಖವಾಣಿಯನ್ನೂ ಪ್ರಕಟಿಸಲು ಮುಂದಾದರು.

1843 ರಲ್ಲಿ ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆಯಾದರೆ ,ಮುಂಬಯಿಯಲ್ಲಿ ಮಂಗೇಶ ಶಾಂತಪ್ಪ ನಾಡಕರ್ಣಿ ಅವರ ಸಂಪಾದಕತ್ವದ ‘ಕನ್ನಡ ಸುವಾರ್ತೆ’ ಮತ್ತು ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಅವರ ‘ಹವ್ಯಕ ಸುಬೋಧ’ ಪತ್ರಿಕೆಗಳಿಂದ ನಾವು ಇಲ್ಲಿನ ಪತ್ರಿಕೋದ್ಯಮ ಇತಿಹಾಸವನ್ನು ಹೇಳಲು ಆರಂಭಿಸುತ್ತೇವೆ.ಇದು 1884-85 ರ ದಿನಗಳು. ಕನ್ನಡ ಸುವಾರ್ತೆಯ ಬಗ್ಗೆ ಹೆಚ್ಚಿನ ವಿವರ ದೊರೆಯದೆ ಇರುವ ಕಾರಣ ನಾವು ಮುಂಬಯಿಯ ಆದ್ಯ ಕನ್ನಡ ಪತ್ರಿಕೋದ್ಯಮಿ ಎನ್ನುವ ಖ್ಯಾತಿ ಕರ್ಕಿ ವೆಂಕಟರಮಣ ಶಾಸ್ತ್ರಿ ಅವರಿಗೆ ಸಲ್ಲಿಸುತ್ತಾ ಬಂದಿದ್ದೇವೆ. ಹತ್ತೊಂಭತ್ತನೇ ಶತಾಬ್ದಿಯಲ್ಲಿ ಉತ್ತರ ಕನ್ನಡದ ಜನರು ಇಲ್ಲಿ ಹೆಚ್ಚುಸಕ್ರಿಯರಿದ್ದರೆಂದೂ ಇದರಿಂದ ತಿಳಿಯ ಬಹುದು.ಸುಮಾರು ನೂರೈವತ್ತು ವರ್ಷಗಳ ಇತಿಹಾಸ ಹೊಂದಿರುವ ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.

ಉದಯವಾಣಿ ಮುಂಬಯಿ ಆವೃತ್ತಿಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಮಿತ್ರರಾದ ಡಾ.ದಿನೇಶ್ ಶೆಟ್ಟಿ ರೆಂಜಾಳ ಅವರು ಸುಮಾರು ಒಂದೂವರೆ ಶತಮಾನದ ಮುಂಬಯಿ ಕನ್ನಡ ಪತ್ರಿಕಾರಂಗದ ಒಳಹೊಕ್ಕು ಸಂಶೋಧನಾ ಪ್ರಬಂಧ ಸಿದ್ಧಪಡಿಸುವ ಮಹಾನ್ ಕೆಲಸ ಮಾಡಿದ್ದಾರೆ. ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ  ಸಿದ್ಧಪಡಿಸಿದ ಈ ಸಂಶೋಧನಾ ಗ್ರಂಥ ‘ಮುಂಬಯಿ ಕನ್ನಡ ಪತ್ರಿಕೋದ್ಯಮ’ (2022) ಇತ್ತೀಚಿನ ಒಂದು ಮಹತ್ವದ ಸಂಶೋಧನಾ ಗ್ರಂಥವಾಗಿ ಗಮನ ಸೆಳೆದಿದೆ.

ನಾವು ಮುಂಬಯಿಯ ಆರಂಭದ ದಿನಗಳ ಪತ್ರಿಕೆ ಕನ್ನಡ ಸುವಾರ್ತೆ , ಹವ್ಯಕ ಸುಬೋಧವನ್ನು ಗಮನಿಸಿದರೂ “ಕನ್ನಡ ನಾಡು ನುಡಿ ಸಂಸ್ಕೃತಿಗೆ ಧಕ್ಕೆಯಾದಾಗಲೆಲ್ಲ ಇಲ್ಲಿನ ಕನ್ನಡಿಗ ಪತ್ರಿಕೆಗಳು ಧ್ವನಿಯೆತ್ತುತ್ತಾ ಬಂದಿವೆ.” ಎನ್ನುವುದು ಅವುಗಳಲ್ಲಿ ಬರುತ್ತಿದ್ದ ಲೇಖನಗಳಿಂದ  ಮನದಟ್ಟಾಗುವುದು.

ಇಂದು ಮುಂಬಯಿಯಲ್ಲಿ ಕರ್ನಾಟಕ ಮಲ್ಲ ಮತ್ತು ಉದಯವಾಣಿ ಎರಡು ಕನ್ನಡ ದೈನಿಕಗಳು ಇಲ್ಲಿಂದಲೇ ಪ್ರಕಟವಾಗುತ್ತಿರುವುದು ಅನೇಕ ದಶಕಗಳ ಕನಸು ನನಸಾಗಿದೆ. ನಲುವತ್ತರ ದಶಕದ ನುಡಿ ಪತ್ರಿಕೆಯನ್ನು ಫ್ರೀಪ್ರೆಸ್ ನ ಸದಾನಂದ ಅವರಲ್ಲಿ ದಿನ ಪತ್ರಿಕೆಯಾಗಿ ಹೊರತರುವ ಮಾತುಕತೆ ವಿಫಲವಾದರೂ 1992 ರಲ್ಲಿ ಕರ್ನಾಟಕ ಮಲ್ಲ ದಿನಪತ್ರಿಕೆ ಮುಂಬಯಿಯಲ್ಲಿ ಜನ್ಮ ತಳೆದು ಇಂದಿಗೂ ನಿರಂತರ ಪ್ರಕಟವಾಗುತ್ತಿದೆ.2000 ದಿಂದ ಉದಯವಾಣಿಯೂ ಮುಂಬಯಿಯಿಂದ ಪ್ರಕಟವಾಗುತ್ತಾ ಬಂದಿದೆ. ಈ ಎರಡು ದೈನಿಕಗಳಲ್ಲದೆ ಮುಂಬಯಿಯಲ್ಲಿ ಕನಿಷ್ಟ ಎಂದರೂ ಸುಮಾರು ಎಂಟು- ಹತ್ತರಷ್ಟು ಇಂದು ವಿವಿಧ ಸಂಘ ಸಂಸ್ಥೆಗಳ  ಕನ್ನಡ ಮುಖವಾಣಿಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ದೊಡ್ಡ ಇತಿಹಾಸವೂ ಇದೆ.

ಮುಂಬಯಿಯಲ್ಲಿ ಹವ್ಯಕ ಸುಬೋಧದ ನಂತರ ನಾವು ಸಾಮಾನ್ಯವಾಗಿ ನುಡಿ, ಮೊಗವೀರ, ತಾಯಿನುಡಿ ,ಆದರ್ಶ, ಸಚೇತನ,..ಇತ್ಯಾದಿ ಪತ್ರಿಕೆಗಳ ಬಗ್ಗೆ  ಹೇಳುತ್ತೇವೆ. ಇಲ್ಲಿ 1948- 49 ರಿಂದ ಹಲವು ವರ್ಷ ಮುಂಬಯಿಯಲ್ಲಿ ಪ್ರಕಟವಾಗುತ್ತಿದ್ದ ವರದರಾಜ ಆದ್ಯರ ಸಂಪಾದಕತ್ವದ ‘ಕನ್ನಡಗುಡಿ’ ಮಾಸಪತ್ರಿಕೆಯನ್ನೂ ಪ್ರಮುಖವಾಗಿ ಉಲ್ಲೇಖಿಸಬೇಕು. ಭಾಷಾನ್ವಯ ಪ್ರಾಂತರಚನೆಯ ಚರ್ಚೆಗಳು ಅದರಲ್ಲಿ ಬಹಳಷ್ಟು ಪ್ರಕಟವಾಗಿದ್ದುವು.1951ರಲ್ಲಿ ಪ್ರಜಾರಾಜ್ಯ ವಿಶೇಷ ಸಂಚಿಕೆ ಹೊರತಂದಿದ್ದರು. ಇದು ಸಂಯುಕ್ತ ಕರ್ನಾಟಕ ಆಂದೋಲನಕ್ಕೆ ಬಹಳ ಕೊಡುಗೆ ನೀಡಿದ ಪತ್ರಿಕೆ ಎನಿಸಿದೆ.

ಮುಂಬಯಿಯಲ್ಲಿ ನಾವು ಪತ್ರಿಕಾರಂಗವನ್ನು ಮೂರು ವಿಭಾಗಗಳನ್ನಾಗಿ ಗುರುತಿಸಬಹುದು.

1)ಅರುವತ್ತರ ದಶಕದ ತನಕ ವಿಜ್ರಂಭಿಸಿದ್ದ ಸ್ವತಂತ್ರ (ಮೊಗವೀರ ಪತ್ರಿಕೆ ಹೊರತುಪಡಿಸಿ) ಪತ್ರಿಕೆಗಳು,

2)ಎಪ್ಪತ್ತರ ದಶಕದ ನಂತರದ ಕನ್ನಡ ಸಂಘ ಸಂಸ್ಥೆಗಳು, ಜಾತಿ ಸಂಸ್ಥೆಗಳು ಪ್ರಕಟಿಸುವ ಪತ್ರಿಕೆಗಳು. ಮತ್ತು

3)ತೊಂಭತ್ತರ ದಶಕದ ನಂತರದ ಕನ್ನಡ ದೈನಿಕಗಳ ಆರಂಭ. ( ಹಲವು ಕನ್ನಡ ದೈನಿಕಗಳು ಅನಂತರ  ಮುಂಬಯಿಯಲ್ಲಿ ಆರಂಭವಾದರೂ ಇಂದು ಉಳಿದಿರುವುದು ಕರ್ನಾಟಕ ಮಲ್ಲ ಮತ್ತು ಉದಯವಾಣಿ ಈ ಎರಡು ದೈನಿಕಗಳು ಮಾತ್ರ) ಇವೆಲ್ಲವನ್ನು  ಮುಂಬಯಿ ಕನ್ನಡ ಪತ್ರಿಕೋದ್ಯಮ ಗ್ರಂಥದಲ್ಲಿ ಬಹಳ ಅರ್ಥಪೂರ್ಣವಾಗಿ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರು  ವಿಶ್ಲೇಷಿಸಿದ್ದಾರೆ. 

ಈ ಗ್ರಂಥದಲ್ಲಿ ಒಳನೋಟ, ಕನ್ನಡ ಪತ್ರಿಕೋದ್ಯಮ ಮತ್ತು ಭಾರತೀಯ ಪತ್ರಿಕೋದ್ಯಮದ ಹಿನ್ನೆಲೆ, ಮುಂಬಯಿ ಕನ್ನಡ ಪತ್ರಿಕೋದ್ಯಮದ ಹಿನ್ನೆಲೆ,ಮುಂಬಯಿ ಕನ್ನಡ ಮುಖವಾಣಿಗಳು, ಮುಂಬಯಿಯ ಪ್ರಮುಖ ಕನ್ನಡ ದಿನಪತ್ರಿಕೆಗಳು, ಕನ್ನಡ ಸಾಹಿತ್ಯ ಬಲವರ್ಧನೆಗೆ ಮುಂಬಯಿ ಕನ್ನಡ ಪತ್ರಿಕೆಗಳ ಕೊಡುಗೆ, ಮುಂಬಯಿ ಕನ್ನಡ ಪತ್ರಿಕೋದ್ಯಮದ ಇಂದಿನ ಸ್ಥಿತಿಗತಿ ಮತ್ತು ಭವಿಷ್ಯ, ಮುಂಬಯಿ ಕನ್ನಡ ಪತ್ರಿಕೋದ್ಯಮದ ವರದಿಗಾರಿಕೆ ಮತ್ತು ಅದರ ಮುಂದಿರುವ ಸವಾಲುಗಳು…..ಹೀಗೆ ಇವರ ಅಧ್ಯಯನಗಳು ಸಾಗಿವೆ.

ಮುಂಬಯಿಯಲ್ಲಿ ನುಡಿ, ಆದ್ಯರ  ಕನ್ನಡ ಗುಡಿ, ತಾಯಿನುಡಿ,  ಆದರ್ಶ, ಸಚೇತನ, ಮೊಗವೀರ, ನೇಸರು, ಕರ್ನಾಟಕ ಮಲ್ಲ, ಉದಯವಾಣಿ ಸಹಿತ ಕಾಲಕಾಲಕ್ಕೆ ಪ್ರಕಟವಾಗುತ್ತಾ ಬಂದಿರುವ ಮುಂಬಯಿಯ ಕನ್ನಡ ಪತ್ರಿಕೆಗಳ ಬೆಳವಣಿಗೆಯನ್ನು ಇಲ್ಲಿ ವಿವಿಧ ಮಗ್ಗಲುಗಳಿಂದ ಗುರುತಿಸಿದ್ದಾರೆ.   

ಆರನೇ ಆಧ್ಯಾಯ ಇಲ್ಲಿ ಮುಖ್ಯ. ಕನ್ನಡ ಸಾಹಿತ್ಯ ಬಲವರ್ಧನೆಗೆ ಮುಂಬಯಿ ಕನ್ನಡ ಪತ್ರಿಕೆಗಳ  ಕೊಡುಗೆ. ಈ ಅಧ್ಯಾಯದಲ್ಲಿ ಕನ್ನಡ ಸಾಹಿತ್ಯ ಬಲವರ್ಧನೆಗೆ ಮುಂಬೈ ಕನ್ನಡ ಪತ್ರಿಕೆಗಳ ಕೊಡುಗೆ ಗಮನಿಸಬೇಕು. ಇದರಲ್ಲಿ ಮುಂಬೈಯ ಒಂದು ಸಾಹಿತ್ಯ ವಲಯದ ಹಾಗೂ ಪತ್ರಿಕೆಗಳಿಗೆ  ಬರೆಯುವ ಸಾಹಿತಿಗಳ ಪರಿಚಯ ಜೊತೆಯಲ್ಲೇ ಆಗುವುದು.

“ಪತ್ರಿಕೆಯಲ್ಲಿ ಪ್ರಕಟವಾಗುವ ಬಿಡಿ ಲೇಖನಗಳು ಇಲ್ಲಿಯ ಸಾಹಿತ್ಯವನ್ನು ಜೀವಂತವಾಗಿಟ್ಟಿವೆ ಎಂದು ಹೇಳಬಹುದು. ಸುಮಾರು 150 ವರ್ಷಕ್ಕೂ ಮಿಗಿಲಾದ ಮುಂಬೈಯ ಕನ್ನಡ ಸಾಹಿತ್ಯದ ಇತಿಹಾಸ ಒಳನಾಡಿನ ಸಾಹಿತ್ಯಕ್ಕೆ ಒಂದು ಒಳ್ಳೆಯ ಆಯಾಮವನ್ನು ಕೊಟ್ಟಿದೆ” ಎನ್ನುತ್ತಾರೆ.

ಸುಮಾರು 20– 25 ಲಕ್ಷಕ್ಕೂ ಮಿಕ್ಕಿದ ಕನ್ನಡಿಗರನ್ನು ಹೊಂದಿರುವ ಮುಂಬೈಯಲ್ಲಿ ಸಾಹಿತ್ಯ ನಾಟಕ ಕಲೆ ನೃತ್ಯ ಸಂಗೀತ ಇತ್ಯಾದಿಗಳ‌ನ್ನು ಅವ್ಯಾಹತವಾಗಿ ಪ್ರೋತ್ಸಾಹಿಸುತ್ತಾ ಬರುತ್ತಿರುವ ಇಲ್ಲಿನ ಪತ್ರಿಕೆಗಳ ಸಾಧನೆ ಅನುಪಮವಾದದ್ದು”.

ಮುಂಬೈ ಪತ್ರಿಕೋದ್ಯಮದ ಇಂದಿನ ಸ್ಥಿತಿಗತಿ ಮತ್ತು ಭವಿಷ್ಯದ ಅಧ್ಯಾಯದಲ್ಲಿ “ಪತ್ರಿಕೆ ಉದ್ಯಮವಾದಷ್ಟು ಸಾಹಿತ್ಯದ ಸಹವಾಸದಿಂದ ದೂರ ಸರಿದರೆ ಆಶ್ಚರ್ಯವಿಲ್ಲ ಎನ್ನುವುದಕ್ಕೆ ಇಲ್ಲಿನ ಪತ್ರಿಕೆಗಳು ಪೂರಕವಾಗಿವೆ. ಇಲ್ಲಿನ ಮುಖವಾಣಿ ಪತ್ರಿಕೆಗಳನ್ನು ಬಿಟ್ಟು ದಿನಪತ್ರಿಕೆಗಳು ಸಾಹಿತ್ಯಕವಾಗಿ ಬೆಳೆದಿಲ್ಲ ಎನ್ನುವ ಕೂಗು ಎಲ್ಲರಲ್ಲೂ ಕೇಳಿ ಬರುತ್ತಿದೆ…. ಎನ್ನುವ ಎಚ್ಚರದ ಮಾತನ್ನೂ ಇಲ್ಲಿ ಗಮನಿಸಬೇಕು

“ಕನ್ನಡ ಪತ್ರಿಕೋದ್ಯಮಕ್ಕೂ ಬುದ್ಧಿಜೀವಿ ವರ್ಗಕ್ಕೂ ಅಂತರ ಅಧಿಕವಾಗಿರುವುದರಿಂದ ಮುಂಬಯಿ ಪತ್ರಿಕೆಗಳಲ್ಲಿ ಸ್ವತಂತ್ರ ಕನ್ನಡ ವಿಚಾರಧಾರೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ನಮ್ಮಲ್ಲಿ ಬುದ್ದಿಜೀವಿಗಳಿಗೆ ಕನ್ನಡ ಪತ್ರಿಕೋದ್ಯಮದ ಬಗ್ಗೆ ಅದೇನೋ ಅನಾಸಕ್ತಿ, ಒಂದು ಬಗೆಯ ತಾತ್ಸರವೆಂದರೂ ತಪ್ಪಾಗಲಿಕ್ಕಿಲ್ಲ. ಇಂಗ್ಲೀಷ್‌ನಲ್ಲಿ ಓದಿ, ಬರೆದು ಅಭ್ಯಾಸವಾಗಿರುವುದರಿಂದಲೊ ಏನೋ ಕನ್ನಡ ಪತ್ರಿಕೆಗಳ ಸಂಪರ್ಕದಿಂದ ಅವರು ದೂರವೇ ಉಳಿದಿದ್ದಾರೆ.ಇದು ಸಾಮಾನ್ಯವಾಗಿ ಇಂದು ನಾವು ಕಾಣುತ್ತಿರುವ ಮುಂಬಯಿ ಪತ್ರಿಕೋದ್ಯಮ ಪರಿಸ್ಥಿತಿಯಾಗಿದೆ. ಆದರೆ ಪತ್ರಿಕೆ ಅವರ ವಿಚಾರಗಳ ಅಭಿವ್ಯಕ್ತಿಗೆ ಅತ್ಯಂತ ವ್ಯಾಪಕವಾದ ಮತ್ತು ಜನತೆಗೆ ಅತ್ಯಂತ ಸಮೀಪವಾದ ಸಾಧನೆ ಎಂಬುವುದನ್ನು ಗಮನಿಸಬೇಕು” ಎನ್ನುವ ವಾಸ್ತವ ಸಂಗತಿಯನ್ನು ಯಾವ ಸಂಕೋಚವೂ ಇಲ್ಲದೆ ತೆರೆದಿಟ್ಟಿದ್ದಾರೆ.

“ಇಂದಿನ ಮುಂಬೈ ಪತ್ರಿಕೆಗಳನ್ನು ಕಂಡಾಗ 60 ಪ್ರತಿಶತದಷ್ಟು ಸುದ್ದಿಗಳು ಕಾರ್ಯಕ್ರಮ  ಆಧಾರಿತ ಆಗಿರುತ್ತದೆ. ಅದಕ್ಕಿಂತ ಹೆಚ್ಚು ವೇದಿಕೆಯಲ್ಲಿರುವವರ ಪಟ್ಟಿ ಮತ್ತು ಭಾಷಣದ ಗಾತ್ರ ಇರುತ್ತದೆ. ಇದನ್ನು ಎಷ್ಟ ಜನ ಓದುತ್ತಾರೆ? ಎಂಬುದನ್ನು ಕಾರ್ಯಕ್ರಮ ಸಂಘಟಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಆಹ್ವಾನಿತರು ಅರ್ಥಮಾಡಿಕೊಳ್ಳಬೇಕು. ದೀರ್ಘಾವಧಿಯ ಭಾಷಣ ದಿಂದ ಹೇಗೆ ಕಾರ್ಯಕ್ರಮ ಅಂದಗೆಡುತ್ತದೋ ಅದೇ ರೀತಿ ದೀರ್ಘ ವರದಿಗಳಿಂದ ಪುಟ ಮತ್ತು ಪತ್ರಿಕೆ ಹಾಳಾಗುತ್ತದೆ. ಯುವ ಜನಾಂಗದಿಂದ ದೂರವಾಗುತ್ತದೆ. ಮುಂಬಯಿಯ ಮಿರರ್, ಮಿಡ್ಡೆಯಂತಹ ಪತ್ರಿಕೆಗಳು ಯಶಸ್ವಿಯಾಗುತ್ತಿರುವುದು ಈ ಕಾರಣಗಳಿಂದಾಗಿಯೇ. ನಿಯತಕಾಲಿಕೆಗಳಂತೆ ಭಾಸವಾಗುವ ಈ ಪತ್ರಿಕೆಗಳಲ್ಲಿ ದೀರ್ಘ ಲೇಖನಗಳು, ದೀರ್ಘ ಸುದ್ದಿಬರಹಗಳ ಬದಲಿಗೆ ಚಿಕ್ಕ-ಚೊಕ್ಕ ಸುದ್ದಿಗಳು, ಲೇಖನಗಳು ಮತ್ತು ಮಿನಿ ಅಂಕಣಗಳನ್ನು ಬಳಸಲಾಗುತ್ತಿದೆ. ಇದು ಓದುಗರಿಗೆ ಸುದ್ದಿಗಳ ಏಕತಾನತೆ ತಪ್ಪಿಸುತ್ತವೆ. ಇಂತಹ ಪ್ರಯೋಗಗಳನ್ನು ಮುಂಬಯಿಯ ಕನ್ನಡ ಪತ್ರಿಕೆಗಳು ಬಳಸಿದ್ದಲ್ಲಿ ಭವಿಷ್ಯದಲ್ಲಿ ಯುವಜನಾಂಗವನ್ನು ಹೆಚ್ಚಾಗಿ ಆಕರ್ಷಿಸಲು ಸಾಧ್ಯವಿದೆ.”( ಪುಟ-458) ಈ ಮಾತು ನಮ್ಮ ಸಂಘ ಸಂಸ್ಥೆಗಳ ವರದಿ ಮಾಡುವವರು ಖಂಡಿತವಾಗಿಯೂ ಗಮನಿಸಲೇ ಬೇಕಾದ ಮಾತು.

ಈ ಗ್ರಂಥದಲ್ಲಿ ಮುಂಬಯಿಯ ಪತ್ರಿಕಾರಂಗದ ಈತನಕದ ಒಂದು ಸಮಗ್ರ ಚಿತ್ರಣ ಕಣ್ಣ ಮುಂದೆ ತರುತ್ತಾರೆ ಮುಂಬಯಿಯಲ್ಲಿ ಎಷ್ಟು ಕನ್ನಡ ಪತ್ರಿಕೆಗಳು ಪ್ರಕಟವಾಗುತ್ತಿವೆ,  ಎಷ್ಟು ಉಳಿದಿವೆ…ಅವುಗಳು ಆರಂಭವಾದ ಹಿನ್ನೆಲೆ… ಇವೆಲ್ಲದರ ಚಿತ್ರಣ ಸಿಗುವುದು. ‘ಇಲ್ಲಿನ ಪತ್ರಿಕೆಗಳು ಕೇವಲ ಸಾಹಿತ್ಯ ಪತ್ರಿಕೆಯಾಗಿ ಉಳಿಯದೆ ಸಾಹಿತ್ಯವನ್ನು ಒಳಗೊಂಡು ಸಾಂಸ್ಕೃತಿಕ ಪತ್ರಿಕೆಯಾಗಿ ಬೆಳೆದಿವೆ. ವರ್ತಮಾನಗಳನ್ನು  ಹೆಚ್ಚು ಚರ್ಚಿಸಿದ್ದು ಮುಂಬಯಿಯ ಕನ್ನಡ ಪತ್ರಿಕೆಗಳೇ….ಮುಂಬಯಿಯ ಕನ್ನಡ ಪತ್ರಿಕೆಗಳು ಮರಾಠಿ ನೆಲದಲ್ಲಿ ಕನ್ನಡದ  ಕಂಪನ್ನು ಬೆಳಗಿಸಿವೆ,ಇಲ್ಲಿನ ಕನ್ನಡಿಗರ ಮನದಲ್ಲಿದ್ದ ಕೊಳೆಯನ್ನು ಗುಡಿಸಿ ಹಾಕಿವೆ” ಎಂದು ಪ್ರಶಂಸೆಯ ಅಭಿಪ್ರಾಯವೂ ಇದೆ. 

“ಬದಲಾವಣೆಯ ಕಾಲಘಟ್ಟದಲ್ಲೂ ಇಂದಿನ ಫೇಸ್ ಬುಕ್,ವೆಬ್ ಸೈಟ್, ವಾಟ್ಸಪ್ ಮುಂತಾದ ಡಿಜಿಟಲ್ ಕಾಲದಲ್ಲೂ ಮುಂಬಯಿಯಲ್ಲಿ ಕನ್ನಡ ಪತ್ರಿಕೆಗಳ ಮಹತ್ವವೇನೂ ಕುಸಿದಿಲ್ಲ….. ಮುಂಬಯಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಿದ ಪತ್ರಿಕಾರಂಗದ ಸಾಧನೆಗಳು ರೋಮಾಂಚನ ಗೊಳಿಸುತ್ತದೆ” ಎನ್ನುವ ಮಾತುಗಳು  ಕನ್ನಡ ಓದುಗರ ಕನ್ನಡ ಪ್ರೀತಿಯನ್ನು ಹೇಳುತ್ತವೆ. ಇಂತಹ ಒಂದು ಸಂಶೋಧನಾ ಗ್ರಂಥ ಪ್ರಕಟಿಸಿರುವ ಡಾ.ದಿನೇಶ್ ಶೆಟ್ಟಿ ರೆಂಜಾಳ ಅವರಿಗೆ ಅಭಿನಂದನೆಗಳು.

  • * ಶ್ರೀನಿವಾಸ ಜೋಕಟ್ಟೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರ ‘ಮುಂಬಯಿ ಕನ್ನಡ ಪತ್ರಿಕೋದ್ಯಮ’”

  1. Chintamani Sabhahit

    ಈ ಲೇಖನದ ಈ ಕೆಳಗಿನ ಸಾಲುಗಳ ಆಪ್ತತೆಗೆ, ಅಭಿನಂದನೆ ಸಲ್ಲಬೇಕಾದದ್ದು : ‘ಮುಂಬಯಿನಲ್ಲಿ ಕನ್ನಡ ಪತ್ರಿಕೋದ್ಯಮ’ದ ಇತಿಹಾಸದ ಸಂಶೋಧನೆ ಮಾಡಿದವರಾದ ಪತ್ರಕರ್ತ ಡಾ. ದಿನೇಶ್ ಶೆಟ್ಟಿ ರೆಂಜಾಳರ ಪ್ರಾಮಾಣಿಕ ಲಕ್ಶ್ಯಪೂರ್ಣತೆಗೆ, ಈ ಕಾಯಕದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಏನ್. ಉಪಾಧ್ಯಾಯರು ನೀಡಿದ ಸಕ್ರಿಯ, ಆವಶ್ಯಕ ನೆರವಿಗೆ ಹಾಗೂ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ ಸಕಾಲಿಕ ಕಳಕಳಿಗೆ!

    “ಪತ್ರಿಕೆಯೊಂದು ಸಮಾಜದ ಕನ್ನಡಿ. ಅದು, ಧ್ವನಿ ಇಲ್ಲದವರ ಧ್ವನಿ…. ಸುಮಾರು ನೂರೈವತ್ತು ವರ್ಷಗಳ ಇತಿಹಾಸ ಹೊಂದಿರುವ ‘ಮುಂಬಯಿ ಕನ್ನಡ ಪತ್ರಿಕೋದ್ಯಮ’ದ – ಈ ಸಂಶೋಧನಾ ಗ್ರಂಥ (2022) ಇತ್ತೀಚಿನ ಒಂದು ಮಹತ್ವದ ಸಂಶೋಧನಾ ಗ್ರಂಥವಾಗಿ ಗಮನ ಸೆಳೆದಿದೆ….
    ಮುಂಬಯಿಯ ಪ್ರಮುಖ ಕನ್ನಡ ದಿನಪತ್ರಿಕೆಗಳು, ಕನ್ನಡ ಸಾಹಿತ್ಯ ಬಲವರ್ಧನೆಗೆ ಮುಂಬಯಿ ಕನ್ನಡ ಪತ್ರಿಕೆಗಳ ಕೊಡುಗೆ…..ಇಲ್ಲಿನ ಮುಖವಾಣಿ ಪತ್ರಿಕೆಗಳನ್ನು ಬಿಟ್ಟು ದಿನಪತ್ರಿಕೆಗಳು ಸಾಹಿತ್ಯಕವಾಗಿ ಬೆಳೆದಿಲ್ಲ ಎನ್ನುವ ಕೂಗು ಎಲ್ಲರಲ್ಲೂ ಕೇಳಿ ಬರುತ್ತಿದೆ……ಎನ್ನುವ ಎಚ್ಚರದ ಮಾತನ್ನೂ ಇಲ್ಲಿ ಗಮನಿಸಬೇಕು……
    ಕನ್ನಡ ಪತ್ರಿಕೋದ್ಯಮಕ್ಕೂ ( = ಸಾಹಿತ್ಯಾಸಕ್ತ ) ವರ್ಗಕ್ಕೂ ಅಂತರ ಅಧಿಕವಾಗಿರುವುದರಿಂದ ಮುಂಬಯಿ ಪತ್ರಿಕೆಗಳಲ್ಲಿ ಸ್ವತಂತ್ರ ಕನ್ನಡ ವಿಚಾರಧಾರೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ನಮ್ಮಲ್ಲಿ ( = ಕೆಲವರಿಗೆ) ಕನ್ನಡ ಪತ್ರಿಕೋದ್ಯಮದ ಬಗ್ಗೆ ಅದೇನೋ ಅನಾಸಕ್ತಿ, ಒಂದು ಬಗೆಯ ತಾತ್ಸರವೆಂದರೂ ತಪ್ಪಾಗಲಿಕ್ಕಿಲ್ಲ. ಇಂಗ್ಲೀಷ್‌ನಲ್ಲಿ ಓದಿ, ಬರೆದು ಅಭ್ಯಾಸವಾಗಿರುವುದರಿಂದಲೊ ಏನೋ ಕನ್ನಡ ಪತ್ರಿಕೆಗಳ ಸಂಪರ್ಕದಿಂದ ಅವರು ದೂರವೇ ಉಳಿದಿದ್ದಾರೆ. ಇದು ಸಾಮಾನ್ಯವಾಗಿ ಇಂದು ನಾವು ಕಾಣುತ್ತಿರುವ ಮುಂಬಯಿ ಪತ್ರಿಕೋದ್ಯಮ ಪರಿಸ್ಥಿತಿಯಾಗಿದೆ…….
    ಮುಂಬಯಿಯ ಮಿರರ್, ಮಿಡ್ಡೆಯಂತಹ ಪತ್ರಿಕೆಗಳು ಯಶಸ್ವಿಯಾಗುತ್ತಿರುವುದು……ವರ್ತಮಾನಗಳನ್ನು ಹೆಚ್ಚು ಚರ್ಚಿಸಿದ್ದು ಮುಂಬಯಿಯ ಕನ್ನಡ ಪತ್ರಿಕೆಗಳೇ…..ಮುಂಬಯಿಯ ಕನ್ನಡ ಪತ್ರಿಕೆಗಳು ಮರಾಠಿ ನೆಲದಲ್ಲಿ ಕನ್ನಡದ ಕಂಪನ್ನು ಬೆಳಗಿಸಿವೆ,ಇಲ್ಲಿನ ಕನ್ನಡಿಗರ ಮನದಲ್ಲಿದ್ದ ಕೊಳೆಯನ್ನು ಗುಡಿಸಿ ಹಾಕಿವೆ!”……..

    ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ :

    ಮುಂಬಯಿ, ಮಾಯಾ ಶಹರ. ದೇಶದ ಕೋಣೆ ಕೋಣೆಗಳಿಂದ, ಬೇರೆ ಬೇರೆ ಭಾಷೆಯವರು, ಬದುಕು ಮಾಡಲು, ಕೆಲಸವನ್ನು ಹುಡುಕುತ್ತ, ನಿತ್ಯವೂ ಬರುತ್ತಿರುತ್ತಾರೆ – ಶತಮಾನದಿಂದ. ಬಂದ ನಂತರ ವಾಪಸ್ಸು ಹೋಗುವವರು ಕಡಿಮೆ. ಅನೇಕ ಭಾಷೆಯ ನದಿಗಳು ಬಂದು ಸೇರುವ ಸಮುದ್ರವೇ ಮುಂಬಯಿ, ಅಂತ ಹೇಳಿದರೂ ತಪ್ಪಾಗಲಾರದು.

    ಕನ್ನಡದ ಸಾಹಿತ್ಯ, ಪತ್ರಿಕೆ, ಓದು – ಒಂದು ಅವಶ್ಯಕತೆ, ಒಂದು ಆಸಕ್ತಿ, ಒಂದು ಛಲ, ಒಂದು ಪ್ರೇಮವಾದರೂ, ಬಹುತೇಕ ಕನ್ನಡದ ಜನರಿಗೆ, ಮುಂಬಯಿಗೆ ಬಂದ ಹತ್ತು, ಹದಿನೈದು ವರುಷ, ದಿನ ನಿತ್ಯ ಬದುಕುವದೇ ಹರಸಾಹಸ! ಇರುವ ಸ್ಥಳದಿಂದ ಕೆಲಸದ ಸ್ಥಳಕ್ಕೆ ಪ್ರತಿ ದಿನ ಹೋಗಿ ಬರುವ ಆಯಾಸ, ಪ್ರಯಾಸ, ಕಸರತ್ತಿನಲ್ಲಿ, ಸಿಗುವ ಸಮಯ, ವ್ಯವಧಾನದಲ್ಲಿ ಕನ್ನಡ ಪತ್ರಿಕೆಗೆ ಕಾಲಾವಕಾಶದ ತೆಕ್ಕೆಯಲ್ಲಿ, ದೊರೆಯಬಹುದಾದ ಕೊಂಚ ಆಧಾರವೇ, ಅದರ ಬೆಳವಣಿಗೆಗೆ ಸವಾಲಾಗುತ್ತದೆ. ಮುಂಬಯಿನಲ್ಲಿದ್ದ ಕನ್ನಡದ ಪ್ರತಿಯೊಬ್ಬರೂ ಆ ದೃಷ್ಟಿಯಲ್ಲಿ ಅದೃಷ್ಟವಂತರೇ?

    ”ಅಲೆಅಲೆಯಲಿ ಕಲೆ ರಂಗೇರುವ
    ಹೊಸ ಬದುಕಿಗೆ ನಾವಣಿಯಾಗುವೆವು
    ನಮ್ಮೀ ಒಳಗಿನ ಆಸೆಯ, ಭಾಷೆಯ
    ಕಾಲದ ರೈಲಲಿ ತಣಿಸುವೆವು”
    – ಇದನ್ನು ಬರೆದ ಕಿರಿಯ ಕವಿ, ಮುಂಬಯಿನಲ್ಲಿ ಎಂಭತ್ತರ ದಶಕದ ಆರಂಭದಲ್ಲಿ, ನನ್ನೆದುರಿಗೇ ಮಾಯವಾದದ್ದನ್ನು ನಾನು ನೋಡಿದ್ದೇನೆ.

    ಒಂದು ಪತ್ರಿಕೆ ಉದ್ಯಮವಾಗಿ ಉಳಿಯುವ ಸಾಧ್ಯತೆಯೇ, ಒಂದು ಬಲವಾದ ಸಮಸ್ಯೆ. ಇದನ್ನರಿತು ಬೆಂಬಲಿಸಿದ ಪತ್ರಿಕೆಗಳು ಮಾತ್ರ ಮುಂಬಯಿನಲ್ಲಿ ಉಳಿದುಕೊಂಡಿವೆ. ಮುಂಬಯಿಯ ವ್ಯಾಹಾರಿಕ ಪ್ರಾಥಮಿಕತೆಯಲ್ಲಿ, ಬರೇ ಇಂಗ್ಲಿಷ್, ಹಿಂದಿ ಹಾಗೂ ಮರಾಠಿ ಭಾಷೆಗಳ ಪ್ರಾಬಲ್ಯವಿರುವದರಿಂದ, ಸುದ್ದಿಗಾಗಿ ಆಯಾ ಪತ್ರಿಕೆಗಳು ಸರಾಗವಾಗಿ, ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವ ಸಾಧ್ಯತೆಯೂ, ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಸಾಕಷ್ಟು ಮಾರಕವಾಗಿ, ಧಕ್ಕೆಯನ್ನುಂಟುಮಾಡುತ್ತದೆ. ಸಮಯದ ತುರ್ತು, ಅಗತ್ಯತೆ, ಅಡಚಣೆಗಳ ನಡುವಿನ ಮುಂಬಯಿಯ ಹೋರಾಟದ, ಸಂಕೀರ್ಣ ಬದುಕಿನಲ್ಲಿ, ಆದ್ಯತೆಗಳ ಪ್ರಶ್ನೆಗಳಲ್ಲಿ, ಅನ್ಯ ವೃತ್ತಿ ಯಲ್ಲಿದ್ದವರಿಗೆ, ಸಾಹಿತ್ಯದ ಅಭಿರುಚಿ ಆವಿಯಾಗಿ ಹೋಗಬಹುದಾದರೂ, ಅದು ಗುಪ್ತಗಾಮಿನಿಯಾಗಿ ಹರಿಯುತ್ತಿದ್ದರೆ, ನಿವೃತ್ತಿಯ ನಂತರವೂ ಒಂದಿಲ್ಲೊಂದು ದಿನ ತನ್ನ ಪ್ರಭಾವವನ್ನು ಬೀರಬಹುದೇನೋ.

    ಮುಂಬಯಿನಲ್ಲಿ ಕನ್ನಡ ಪತ್ರಿಕೋದ್ಯಮದ ಇತಿಹಾಸದ ಸಂಶೋಧನೆ ಮಾಡಿದವರೂ ಮತ್ತು ಆ ಕುರಿತು ಸಂಕ್ಷಿಪ್ತ ಪರಿಚಯ ನೀಡಿದವರೂ ಸ್ವತಃ ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ನುರಿತವರು, ಪಳಗಿದವರು. ಮೂರನೆಯವರು, ಕನ್ನಡದ ಕಾಯಕದಲ್ಲೇ ಅಚಲ ನಿಷ್ಠೆಯುಳ್ಳವರು. ಈ ವಿಷಯ ಪ್ರಸ್ತುತಿಗೆ, ಈ ಕೃತಿಯ ಸಕ್ಷಮ ಕಾರ್ಯಶೀಲತೆಗೆ, ಆಂತರಿಕ ಗಾಂಭೀರ್ಯಕ್ಕೆ ಒಂದು ಪ್ರಶ್ನಾತೀತ ಮಾನ್ಯತೆಯನ್ನು ಒದಗಿಸಿ, ಕಾರಣೀಭೂತರಾದ, ಮೂವರೂ ನಿಶ್ಚಿತವಾಗಿಯೂ ಪ್ರಶಂಸಾರ್ಹರು!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter