ಆಸರೆ

“ಮನೂ… ಹೋಗುವ ಬಾ. ನಿನ್ನನ್ನು ಮನೆಯಲ್ಲಿ ಬಿಟ್ಟ ಮೇಲೆಯೇ ನಂಗೆ ಆಫೀಸಿಗೆ ಹೋಗ್ಬೇಕು”
ರಮೇಶನ ದನಿ ಕೇಳುತ್ತಿದ್ದಂತೆ “ತಡಿ ಅಪ್ಪಾ! ಬಂದೆ” ಎನ್ನುತ್ತಾ ಪುಟುಪುಟನೆ ಓಡಿಬಂದ ಮನು.
“ಏನು ಮಗಾ? ದೇವಾಲಯಕ್ಕೆ ಬಂದು ಕೈಮುಗಿಯೋದು ಬಿಟ್ಟು, ಗೋಡೆಗಳಲ್ಲಿ ಬರೆದ ದೇವರ ಚಿತ್ರಗಳನ್ನು ನೋಡ್ತಿದ್ದೆಯಾ?”
“ಅಲ್ಲಪ್ಪಾ! ಅಲ್ಲೊಬ್ರು ತಾತ ಭಿಕ್ಷೆ ಬೇಡ್ತಿದ್ದಾರಲ್ಲಾ ಅವರನ್ನು ನೋಡ್ತಿದ್ದೆ! ಪಾಪ ಅಲ್ವಾ? ಯಾಕಪ್ಪಾ ಅವರು ಭಿಕ್ಷೆ ಬೇಡ್ತಿದ್ದಾರೆ? ಅದೂ ಅಷ್ಟು ವಯಸ್ಸಾದ ತಾತ?”
ಎನ್ನುತ್ತಿದ್ದಂತೆ ರಮೇಶನ ನೋಟ ಅತ್ತ ಕಡೆ ಹೊರಳಿತು.
“ಅಮ್ಮಾ ತಾಯೀ… ಭಿಕ್ಷೆ ಹಾಕ್ರಮ್ಮಾ… ಎರಡು ದಿನ ಆಯ್ತು ಊಟ ಮಾಡದೇ… ಯಾರಾದ್ರೂ ಭಿಕ್ಷೆ ಹಾಕ್ರಪ್ಪಾ…”
ದೇವಾಲಯದ ಮುಂದೆ ಕುಳಿತು ಭಿಕ್ಷೆಯನ್ನು ಬೇಡುತ್ತಿದ್ದ ಮುದುಕನನ್ನು ಕಂಡು ನೀಳವಾದ ಉಸಿರು ಚೆಲ್ಲಿ ರಮೇಶ ಹೇಳಿದ.
“ಯಾರಿಗೊತ್ತು ಮಗೂ? ವಯಸ್ಸಾದ ಮೇಲೆ ಹೆತ್ತವರು ಮಕ್ಕಳಿಗೆ ಬೇಡವಾಗುತ್ತಾರೆ”
ಮನು ತನ್ನ ಅಪ್ಪನನ್ನೇ ದಿಟ್ಟಿಸಿ ನೋಡಿದ.
“ಅಪ್ಪಾ! ಹಣ ಕೊಡು. ತಾತನಿಗೆ ಕೊಟ್ಟು ಬರ್ತೇನೆ”
ಮುದುಕನ ತಟ್ಟೆಗೆ ಹಣ ಹಾಕುತ್ತಿದ್ದಂತೆ ಆತನು “ದೇವ್ರು ನಿನ್ನ ಚೆನ್ನಾಗಿಟ್ಟಿರ್ಲಿ. ಹೆತ್ತೋರ್ನ ಚೆನ್ನಾಗಿ ನೋಡ್ಕೋ” ಎಂದು ಮನುವನ್ನು ಹರಸಿದ.


“ರೀ ಯಾಕಿಷ್ಟು ಬೇಗ ಬಂದದ್ದು? ಪೂಜೆ ಎಲ್ಲಾ ಚೆನ್ನಾಗಾಯ್ತಾ?”
ಕೈಕಾಲುಗಳನ್ನು ತೊಳೆಯಲು ನೀರು ಕೊಡುತ್ತಾ ಜಾನಕಿ ಕೇಳಿದಳು.
“ಜಾನಕೀ, ನಿನ್ನಲ್ಲೊಂದು ವಿಷಯ ಕೇಳ್ಬೇಕಿತ್ತು”
“ಏನು ಹೇಳಿ”
“ನಿನ್ನಪ್ಪ ಅಮ್ಮ ಈಗ ಎಲ್ಲಿದ್ದಾರೆ ಅಂತೇನಾದ್ರೂ ಗೊತ್ತಾ?”
“ಇಲ್ಲಾ ರೀ. ಅವತ್ತು ಮನೆ ಬಿಟ್ಟು ಬಂದಾಗಿನಿಂದ ಅವ್ರುನ್ನ ಕಂಡಿದ್ದೇ ಇಲ್ಲ. ಅದು ನಿಮ್ಗೂ ಗೊತ್ತಲ್ವ?”
“ಹೌದು. ನಾನ್ಯಾಕೆ ಕೇಳಿದೆ ಅಂದ್ರೆ ಇವತ್ತು ನಿನ್ನ ತಂದೆ ಶಂಕ್ರಪ್ಪನ ತರನೇ ಇರೋ ಭಿಕ್ಷುಕನನ್ನು ದೇವಸ್ಥಾನದಲ್ಲಿ ನೋಡಿದೆ. ನಂಗೇನೋ ಅವರು ನಿನ್ನಪ್ಪನೇ ಅನಿಸ್ತು”
“ಹೌದೇನ್ರೀ?! ನನ್ನಪ್ಪ ಆಗಿರ್ಲಿಕಿಲ್ಲ. ನನ್ನಣ್ಣ ದಿನೇಶ ಅವ್ರನ್ನು ಚೆನ್ನಾಗಿ ನೋಡ್ಕೊಳ್ತಿರಬಹುದು. ಅವ್ರಿಗೆ ಆಸ್ತಿಪಾಸ್ತಿ ಎಲ್ಲಾನೂ ಇದೆ. ಮತ್ಯಾಕೆ ಭಿಕ್ಷೆ…”
“ಇಲ್ಲ ಕಣೇ. ನಂಗ್ಯಾಕೋ ಅವ್ರೇ ಅಂತ ಅನುಮಾನ. ಮೊದಲಿಗೆ ನಾನಷ್ಟು ಗಮನಿಸ್ಲಿಲ್ಲ. ಅಲ್ಲಿದ್ದವನ ಹತ್ರ ವಿಚಾರಿಸಿದಾಗ ‘ಯಾರಿಗೊತ್ತು ಸ್ವಾಮಿ ಅವರ ಹೆಸ್ರು? ಕೆಲವರು ಅಯ್ಯೋ ಪಾಪ ಅಂತ ಚಿಲ್ಲರೆ ನಾಣ್ಯಗಳನ್ನು ಹಾಕಿದರೆ ಇನ್ನೂ ಕೆಲವರು ಇವನಿಗೇನು ಬಂದಿರೋದು, ದುಡಿದು ತಿನ್ನೋದಕ್ಕಾಗೋದಿಲ್ವಾ? ಇದೊಳ್ಳೆ ಕಾಟ ಆಗೋಯ್ತಲ್ಲಾ ಎನ್ನುತ್ತಾ ನೋಡಿಯೂ ನೋಡದಂತೆ ಹೋಗ್ತಾರೆ. ಸಂಜೆವರೆಗೂ ಭಿಕ್ಷೆ ಬೇಡಿದ ಬಳಿಕ ತನಗೆ ಸಿಕ್ಕಿದ ಹಣವನ್ನು ಎಣಿಸುತ್ತಾ ಅವಸರವಸರವಾಗಿ ನಡೀತಾನೆ. ಕೆಲವೊಮ್ಮೆ ಬರಿಗೈಯಲ್ಲಿ ಹೋಗ್ತಾನೆ’ ಅಂದ. ಆಮೇಲೆ ನಾನೇ ಹತ್ತಿರ ಹೋಗಿ ನೋಡಿದೆ. ಎಷ್ಟೂಂತ ನೋಡೋದು? ಆಫೀಸಿಗೆ ಹೋಗಲು ತಡವಾಗ್ತದೆ ಅಂತ ನಂತರ ಮನುವನ್ನು ಕರ್ಕೊಂಡು ಇಲ್ಲಿಗೆ ಬಂದೆ” ಎನ್ನುತ್ತಾ ಮತ್ತೂ ಯೊಚಿಸಿ “ಹೌದು! ಅವರೇ ಕಣೇ. ನಾಳೆಯೂ ನಾವು ದೇವಸ್ಥಾನಕ್ಕೆ ಹೋಗುವ. ಯಾರೂಂತ ಗೊತ್ತಾಗ್ಬೇಕಲ್ಲ” ಎಂದ.
“ಸರಿ. ಹೋಗಿ ನೋಡ್ಕೊಂಡು ಬರುವ” ಎಂದು ಜಾನಕಿ ಹೇಳಿದಳಾದರೂ ‘ದೇವರೇ! ಆ ವ್ಯಕ್ತಿ ನನ್ನ ಅಪ್ಪ ಆಗದಿರಲಿ!” ಎಂದು ಅವಳ ಹೃದಯ ಮೊರೆಯಿಡುತ್ತಿತ್ತು.
“ಏನು ಚಿಂತೆ ಮಾಡ್ತಿದ್ದಿ? ಹೊಟ್ಟೆ ಹಸೀತಿದೆ. ತಿಂಡಿಗೆ ರೆಡಿ ಮಾಡು” ಎಂದ ಗಂಡನ ಮಾತಿಗೆ ಜಾನಕಿ ಥಟ್ಟನೆ ಎಚ್ಚೆತ್ತರೂ ಅವಳ ಮನಸ್ಸು ಅಪ್ಪನನ್ನೇ ನೆನೆಯುತ್ತಿತ್ತು.


“ಸರೂ… ಏ ಸರೋಜಾ… ತಿಂಡಿ ತಗೊಂಡು ಬಾ. ಕೆಲಸಕ್ಕೆ ಹೋಗ್ಲಿಕೆ ತಡವಾಗ್ತಿದೆ.”
“ತಡೀರಿ ಬಂದೆ. ಇಗೊಳ್ಳಿ. ಮೆಲ್ಲಗೆ ತಿನ್ನಿ. ಬಿಸಿಯಿದೆ”
“ಜಾನೂ ಎದ್ಳೇನು? ಕಾಲೇಜಿಗೆ ಹೋಗಲಿಕ್ಕಿಲ್ವಾ ಅವ್ಳಿಗೆ?”
“ಆಗ್ಲೇ ಹೋಗಿಯಾಯ್ತು. ಸ್ಪೆಷಲ್ ಕ್ಲಾಸ್ ಉಂಟಂತೆ”
“ಓಹ್! ಹೌದಲ್ವಾ. ನಂಗೊತ್ತೇ ಆಗ್ಲಿಲ್ಲ ಈ ಗಡಿಬಿಡೀಲಿ. ಹ್ಞಾ. ಒಂದು ವಿಷಯ. ಜಾನಕಿಗೆ ಒಳ್ಳೆಯ ಸಂಬಂಧ ತಂದಿದ್ದಾನೆ ನಮ್ಮ ಮಗ ದಿನೇಶ. ಅದೊಮ್ಮೆ ಸರಿಯಾದ್ರೆ ಸಾಕಾಗಿತ್ತು”
“ಮಗಳು ಕಾಲೇಜು ಬಿಟ್ಟು ಬರ್ಲಿ. ನಾನೇ ಹೇಳ್ತೇನೆ ಅವ್ಳಿಗೆ”

ಮದುವೆಯ ವಿಚಾರ ತಿಳಿದಾಗ ಜಾನಕಿಯು ನಾಚಿ ನೀರಾಗುತ್ತಾಳೆ ಎಂದು ಭಾವಿಸಿದ್ದು ಸುಳ್ಳಾಯಿತು.

“ಈ ಸಂಬಂಧ ಬಿಟ್ಟುಬಿಡಿ. ಮದುವೆಯಾಗ್ಲಿಕಿರುವ ಹುಡುಗನನ್ನು ನಾನೇ ನೋಡಿಟ್ಟಿದ್ದೇನೆ. ಮದುವೆಯಾಗ್ತಿದ್ರೆ ಅವನನ್ನೇ. ನೀವು ಒಪ್ಪದಿದ್ರೆ ಈಗ್ಲೇ ಮನೆ ಬಿಟ್ಟು ಹೋಗ್ತೇನೆ.”
“ಏನಂದೆ?”
ದಿನೇಶನ ಬಲಗೈ ಅವಳ ಕೆನ್ನೆಯ ಮೇಲೆ ಅಪ್ಪಳಿಸಿತು. ಶಂಕರಪ್ಪ ಮತ್ತು ಸರೋಜ ಮೂಕರಾದರು. ಅದಾಗಲೇ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದ ಜಾನಕಿಯು ರಾತ್ರಿ ಹೊತ್ತಿನಲ್ಲಿ ಸದ್ದಿಲ್ಲದೆ ರಮೇಶನ ಬಳಿಗೆ ತೆರಳಿ ಮುಂಜಾನೆಯಾಗುತ್ತಲೇ ಆತನ ಹೆಂಡತಿಯಾಗಿ ಬಿಟ್ಟಳು.
ನೆನಪುಗಳು ಅಚ್ಚಳಿಯದೆ ಉಳಿದಿವೆಯಲ್ಲ. ನಿದ್ದೆಗೆಟ್ಟು ಹೊರಳಾಡುತ್ತಾ ಯೋಚಿಸಿದಳು ಜಾನಕಿ.


ಹರಕು ಬಟ್ಟೆ, ನರೆತು ಬೆಳ್ಳಗಾದ ಗಡ್ಡ ಮೀಸೆ ತಲೆಗೂದಲು, ಇಂಗಿದ ಕಣ್ಣುಗಳು, ಒಂದು ಕೈಯಲ್ಲಿ ತಲೆಯನ್ನು ಕೆರೆಯುತ್ತಾ ಭಿಕ್ಷೆಯನ್ನು ಬೇಡುತ್ತಿದ್ದ ತಾತನ ರೂಪ ಹೆಜ್ಜೆ ಹೆಜ್ಜೆಗೂ ಹತ್ತಿರವಾಗುತ್ತಿದ್ದಂತೆ ನಡಿಗೆಯ ಲಯಕ್ಕೆ ತಕ್ಕಂತೆ ಜಾನಕಿಯ ಎದೆಬಡಿತವೂ ಏರತೊಡಗಿತು. ದೇವರೇ! ಇದೇನನ್ನು ಕಾಣುತ್ತಿದ್ದೇನೆ ನಾನು?
“ಅಪ್ಪಾ”
ಅನಿರೀಕ್ಷಿತ ಕರೆಗೆ ಕಂಗಾಲಾದ ಮುದುಕ ಒಂದು ಕ್ಷಣ ಬೆಬ್ಬಳಿಸಿ “ಯಾರ್ ನೀನು…” ಎನ್ನುತ್ತಿದ್ದಂತೆ “ಅಪ್ಪಾ ನಾನು ನಿಮ್ಮ ಮಗಳು ಜಾನಕಿ. ಇದೇನಪ್ಪಾ ನಿನ್ನ ಪರಿಸ್ಥಿತಿ? ನನ್ನ ಗುರುತೇ ಸಿಗದಷ್ಟು ಮಟ್ಟಿಗೆ ಮರೆತು ಬಿಟ್ಟೆಯಾ?” ಎನ್ನುತ್ತಾ ಅಳತೊಡಗಿದವಳು ನಡುನಡುವೆ ಬಿಕ್ಕಳಿಸುತ್ತಾ ತನ್ನ ಗಂಡನತ್ತ ತಿರುಗಿ “ರೀ… ನಿಮ್ಮ ಮಾತು ನಿಜ. ಇವ್ರು ನನ್ನಪ್ಪನೇ” ಎಂದಾಗಲೇ ಮುದುಕನಿಗೆ ಅವಳ ಗುರುತು ಸಿಕ್ಕಿದ್ದು “ಜಾನಕಿಯಾ? ಈವಾಗ ನೆನಪಾಯ್ತಾ? ಅವತ್ತು ಈ ತಂದೆಯನ್ನು ಬಿಟ್ಟು ಹೋದವಳು ಇವತ್ತು ಬಂದಿಯಾ? ಬೇಡ ಬೇಡ ಅಂದ್ರೂ ಓಡಿಹೋಗಿ…” ಎನ್ನುತ್ತಿದ್ದಂತೆ ಶಂಕರಪ್ಪನ ಕೊರಳು ಒತ್ತಿದಂತಾದರೂ ಸಾವರಿಸಿಕೊಂಡು “ಒಂದು ಲೆಕ್ಕದಲ್ಲಿ ನಮ್ದೂ ತಪ್ಪಿದೆ. ನಿನ್ನ ಮತ್ತು ರಮೇಶನ ಪ್ರೀತಿಗೆ ಒಪ್ಪಿಗೆ ನೀಡ್ತಿದ್ರೆ ನಮ್ಗೆ ಈ ಗತಿ ಬರ್ತಿರ್ಲಿಲ್ಲ” ಎನ್ನುವಾಗ ಅವನ ಕಣ್ಣುಗಳಲ್ಲಿ ಕೂಡಿದ್ದ ನೀರು ಕೆನ್ನೆಗೆ ಇಳಿಯಿತು.
“ಅಮ್ಮ ಎಲ್ಲಿದ್ದಾಳಪ್ಪಾ?”
“ಇಲ್ಲೇ ಹತ್ರ ಗುಡಿಸಲು ಕಟ್ಟಿದ್ದೇನೆ. ಅಲ್ಲಿದ್ದಾಳೆ ಬನ್ನಿ. ಹ್ಞಾ… ಅವಳು ನಿನ್ನನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ. ಅಂಥಾ ಎದೆನೋವಿನಲ್ಲೂ ಅವಳು…”

ಜಾನಕಿಯನ್ನು ಕಂಡ ಸರೋಜಮ್ಮನ ಕಣ್ಣುಗಳು ತುಂಬಿ ಬಂದವು. ಜಾನಕಿಯನ್ನು ಬರಸೆಳೆದು ತಬ್ಬಿಕೊಂಡಳು. ಇಬ್ಬರ ಕಣ್ಣುಗಳಲ್ಲೂ ನೀರೇ ನೀರು. ಇವರಿಬ್ಬರ ಅಕ್ಕರೆಯನ್ನು ಕಂಡು ರಮೇಶನೂ ಕಣ್ತುಂಬಿಕೊಂಡ. “ಇದೇನಾಗಿ ಹೋಯ್ತಮ್ಮಾ? ಹೇಗಾಯ್ತು ಇದೆಲ್ಲ?”


“ನನ್ನ ಪಾಲಿಗೆ ಮಗಳು ಸತ್ತುಹೋದ್ಲು. ನೀನು ಅವಳನ್ನು ನೆನೆದು ಅಳೋದನ್ನು ಬಿಟ್ಬಿಡು ಸರೋಜಾ. ಸಾಯೋ ಕಾಲದವರೆಗೆ ದಿನೇಶ ನಮ್ಮ ಜೊತೆಗಿರ್ತಾನೆ”
ಎನ್ನುತ್ತಾ ರೋಷದಿಂದ ಒಂದು ಬಿಂದಿಗೆ ನೀರನ್ನು ತಲೆಗೆ ಸುರಿದುಕೊಂಡಿದ್ದ ಶಂಕರಪ್ಪ. ದಿನೇಶ ಕೈಲಾಗದವನಂತೆ ಸುಮ್ಮನಾಗಿದ್ದ. ಅವನ ಮದುವೆಯ ಸಂಭ್ರಮದಲ್ಲಿ ಜಾನಕಿಯ ನೆನಪು ಮಾಸಿ ಹೋಗಿತ್ತು.

ಸಂಜೆ ಹೊತ್ತಿನಲ್ಲಿ ದಿನೇಶ ಕೆಲಸ ಮುಗಿಸಿ ಮನೆಗೆ ಕಾಲಿಡುವಷ್ಟರಲ್ಲಿ ಯಾರದ್ದೋ ಅಳು ಕೇಳಿ ಬರುತ್ತಿತ್ತು. ದನಿ ಬಂದತ್ತ ದಿನೇಶ ಓಡಿ ಹೋಗಿ ನೋಡಿದ. ಒಳಗಡೆ ಅವನ ಹೆಂಡತಿ ಅಳುತ್ತಿದ್ದಳು.
“ಶಾರದಾ! ಏನಾಯ್ತೇ? ಯಾಕಿಷ್ಟು ಜೋರಾಗಿ ಅಳ್ತಿದ್ದೀಯಾ?”
“ಅದು… ಅದು… ಛಿ! ನಂಗೆ ನಾಚಿಕೆಯಾಗ್ತಿದೆ. ನಾನೇನು ಹೇಳಿದ್ರೂ ನೀವು ನಂಬಲ್ಲ”
“ಆಯ್ತು ಅಳ್ಬೇಡ. ಏನಾಯ್ತು ಹೇಳು. ಅಮ್ಮ ಬೈದ್ರಾ? ಅಮ್ಮಾ… ಅಮ್ಮಾ…”
ಹೊರಗೆ ಪಾತ್ರೆಗಳನ್ನು ತೊಳೆಯುತ್ತಿದ್ದ ಸರೋಜಮ್ಮನಿಗೆ ಮಗನ ಕೂಗು ಕೇಳಿಸಲಿಲ್ಲ.
“ಅಮ್ಮಾ… ಏ ಅಮ್ಮಾ… ಎಲ್ಲಿ ಸತ್ಹೋಗಿದ್ದೀಯಾ?”
ಗಂಟಲ ನರಗಳು ಹರಿಯುವಷ್ಟು ಗಟ್ಟಿಯಾಗಿ ದಿನೇಶ ಬೊಬ್ಬಿರಿದ. ಸರೋಜಮ್ಮ ಕೂಡಲೇ ಒಳಕ್ಕೆ ಧಾವಿಸಿದಳು. ಕನ್ನಡಕವನ್ನು ಒರೆಸಿಕೊಂಡು ಶಂಕರಪ್ಪನೂ ಬಂದ.
“ಅಮ್ಮಾ, ನಿಂಗೆ ಎಷ್ಟು ಸಲ ಹೇಳೋದು ಶಾರದೆ ಕೈಲಿ ಕೆಲ್ಸ ಮಾಡಿಸ್ಬೇಡ, ಅವ್ಳನ್ನು ಬೈಬೇಡ ಅಂತ? ನಿನ್ನ ಸೊಂಟಕ್ಕೇನಾಗಿದೆ? ಅಡುಗೆ ಮಾಡ್ಲಿಕ್ಕಾಗೋದಿಲ್ವಾ?”
ದಿನೇಶನು ಸರೋಜಳನ್ನು ಗದರಿದಾಗ “ರೀ ಅತ್ತೆ ಏನೂ ಮಾಡ್ಲಿಲ್ಲ. ನಿಮ್ಮ ಮಾವ ನನ್ನ ಮೇಲೆ ಕೈ ಹಾಕಕ್ ಬಂದ್ರು. ಬಲಾತ್ಕರಿಸಲು ಯತ್ನಿಸಿದ್ರು”
“ನಾಲ್ಗೆ ಮೇಲೆ ಹಿಡಿತ ಇಟ್ಕೋ. ನನ್ನಪ್ಪ ಅಂಥವರಲ್ಲ” ಎಂದು ದಿನೇಶ ಹೇಳಿದಾಗ ಶಾರದೆ ಮತ್ತಷ್ಟು ಅಳುತ್ತಾ “ಇಲ್ರೀ, ನಿಜ ಹೇಳ್ತಿದ್ದೇನೆ. ನೀವು ಬರೋದು ಕಂಡು ಹೊರಹೋದ್ರು. ಇಲ್ದಿದ್ರೆ ಈಗೇನಾಗ್ತಿತ್ತೋ” ಎಂದು ರೋದಿಸತೊಡಗಿದಳು. ಕೋಪ ನೆತ್ತಿಗೇರಿದ ದಿನೇಶನು ಶಾರದೆಯ ಮಾತನ್ನು ನಂಬಿ, ಹುಟ್ಟಿಸಿದ ತಂದೆ ಎಂದೂ ನೋಡದೆ ಶಂಕರಪ್ಪನನ್ನು ಹೊರದಬ್ಬಿದ. ಜೊತೆಗೆ ಸರೋಜಮ್ಮ ಕೂಡ ಹೋದಳು. ಬೀದಿ ಬೀದಿಗಳನ್ನು ಸುತ್ತಿ ಕಂಗೆಟ್ಟು ಎಲ್ಲೋ ಒಂದು ದೇವಾಲಯದ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡರು. ಕೈಕಾಲು ಗಟ್ಟಿ ಇರುವವರೆಗೆ ಶಂಕರಪ್ಪ ಕೂಲಿನಾಲಿ ಮಾಡಿದ. ವಯಸ್ಸು ಹೆಚ್ಚಾಗುತ್ತಿದ್ದಂತೆ ಕೆಲಸ ಸಿಗುವುದು ಕಡಿಮೆಯಾಯಿತು. ತಿರುಪೆ ಎತ್ತುವುದೊಂದೇ ದಾರಿಯಾಯಿತು.


“ಅಲ್ಲಪ್ಪಾ! ಶಾರದೆ ಯಾಕೆ ಹಾಗೆ ಮಾಡಿದ್ಲು? ನಿಜವಾಗಿ ನಡೆದದ್ದೇನು?”
ಜಾನಕಿ ಕೇಳಿದ ಪ್ರಶ್ನೆಗೆ ಸರೋಜಮ್ಮ ಕೆಮ್ಮುತ್ತಾ ಕೆಮ್ಮುತ್ತಾ “ನಮ್ಮ ಅಂತಸ್ತಿಗೆ ತಕ್ಕ ಸೊಸೆಯಾಗಿ ಬಂದ ಶಾರದೆಗೆ ರೂಪ ಲಾವಣ್ಯಗಳ ಜೊತೆ ನಯ ವಿನಯವೂ ಇತ್ತು. ದಿನ ಕಳೆದಂತೆ ಅವಳ ಗುಣಗಳು ಮರೆಯಾಗತೊಡಗಿದ್ವು. ನಂಜೊತೆ ಸುಮ್ಮ ಸುಮ್ಮನೆ ಜಗಳ ಮಾಡ್ತಿದ್ಲು. ಇವ್ರ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿ, ತಾನು ಮುಗ್ಧೆ ಎಂಬಂತೆ ನಾಟಕ ಮಾಡ್ತಿದ್ಲು. ದಿನೇಶ ಅವಳ ಮಾತನ್ನು ನಂಬ್ತಿದ್ದ. ನಂಬುವಂತೆ ಮಾಡ್ತಿದ್ಲು ಆ ಮಾಟಗಾತಿ. ಅವ್ಳಿಗೆ ದಿನೇಶನ ಮೇಲೆ ಚೂರೂ ಪ್ರೀತಿ ಇರ್ಲಿಲ್ಲ. ಮದುವೆಗೆ ಮುಂಚೆ ಯಾರ್ನೋ ಪ್ರೀತಿಸ್ತಿದ್ದೋಳು ಅವಳಪ್ಪನ ಮಾತಿಗೆ ಕಟ್ಟು ಬಿದ್ದು ದಿನೇಶನ್ನ ಮದುವೆಯಾಗಿದ್ಲು. ಸಂದರ್ಭ ನೋಡಿ ನಮ್ಮನ್ನು ಮನೆಯಿಂದ ಹೊರಗ್ಹಾಕಿ, ದಿನೇಶನ್ನು ಒದ್ದೋಡಿಸೋದು ಅವಳ ಉದ್ದೇಶವಾಗಿತ್ತು. ಅವತ್ತು ನಮ್ಮವ್ರು ಕನ್ನಡಕ ಹುಡುಕಿಕೊಂಡು ಅವಳ ಕೋಣೆಗೆ ಹೋಗಿದ್ದನ್ನೇ ನೆಪ ಮಾಡ್ಕೊಂಡು ಅಪವಾದ ಹೊರಿಸಿದ್ಲು. ಈಗ ದಿನೇಶನನ್ನು ಕೂಡ ಹೊರಗಟ್ಟಿದ್ದಾಳೆ” ಎನ್ನುತ್ತಾ ಎದೆಯನ್ನು ಅದುಮಿಕೊಂಡು ಕೆಮ್ಮನ್ನು ತಡೆಹಿಡಿದುಕೊಂಡಳು; ಜೊತೆಗೆ ದುಃಖವನ್ನೂ.
“ದಿನೇಶ ಈಗ ಎಲ್ಲಿದ್ದಾನೋ ಗೊತ್ತಿಲ್ಲ. ತನ್ನ ಪ್ರಿಯಕರನನ್ನು ಪಡೆದು, ಆಸ್ತಿಯನ್ನು ಅನುಭವಿಸುವುದಕ್ಕಾಗಿ ಅವಳೆಲ್ಲಾದ್ರೂ ದಿನೇಶನನ್ನು…”
ಎನ್ನುತ್ತಾ ಶಂಕರಪ್ಪ ಕಣ್ಣುಜ್ಜಿಕೊಂಡ. ಏನನ್ನೂ ಅರ್ಥಮಾಡಿಕೊಳ್ಳಲಾರದೆ ಮನು ಅವರೆಲ್ಲರನ್ನೂ ಮಿಕಿಮಿಕಿ ನೋಡುತ್ತಿದ್ದ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter