ನಮ್ಮ ದೇಶದಲ್ಲಿ ಭ್ರಷ್ಟಾಚಾರ ಇರದ ಯಾವುದಾದರೂ ಕ್ಷೇತ್ರವಿದೆಯೇ? ಎಂಬ ಪ್ರಶ್ನೆಗೆ, ‘ಇಲ್ಲ’ ಎಂಬ ಉತ್ತರ ಒಂದು ಚಿಕ್ಕ ಮಗುವಿಗೂ ಕೂಡ ಗೊತ್ತು. ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಸಮಾಜ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ, ಚಿತ್ರಕಲೆ, ನಾಟಕ, ಸಿನಿಮಾ, ರಾಜಕೀಯ ಮತ್ತು ಧರ್ಮ ಸೇರಿದಂತೆ ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರ ಭಾರತೀಯ ಜನಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಇದನ್ನು ಒಂದು ಒಪ್ಪಿತ ವ್ಯವಸ್ಥೆಯಂಬಂತೆ ಎಲ್ಲರೂ ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಮಹಾತ್ಮ ಗಾಂಧೀಜಿಯವರ ಮೂರು ಮಂಗಗಳ ನೀತಿ ಕಥೆಯಂತೆ ಕೆಟ್ಟದ್ದನ್ನು ಕಂಡರೂ ಕಾಣದಂತೆ, ಕೆಟ್ಟದ್ದನ್ನು ಕೇಳಿದರೂ ಕೇಳದಂತೆ ಮತ್ತು ಕೆಟ್ಟದ್ದರ ಬಗ್ಗೆ ಗೊತ್ತಿದ್ದರೂ ಸಹ ಮಾತನಾಡದಂತೆ, ತಾವು ಮಾತ್ರ ಚೆನ್ನಾಗಿದ್ದರೆ ಸಾಕು ಎಂದು ಬದುಕುವ ಕಲೆ ಭಾರತೀಯರಿಗೆ ಸಿದ್ಧಿಸಿದೆ. ಇದರ ಬಗ್ಗೆ ಎಷ್ಟು ಬರೆದರೂ, ಎಷ್ಟು ಮಾತನಾಡಿದರೂ ಅಷ್ಟೇ, ಯಾವುದೇ ಪ್ರಯೋಜನವಿಲ್ಲ.
ಇರಲಿ, ಸದ್ಯ ನಮ್ಮ ರಾಜ್ಯದ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತಾಂಡವವಾಡುತ್ತಿರುವ ಬೌದ್ಧಿಕ ಭ್ರಷ್ಟಾಚಾರದ ಕುರಿತು ಮಾತ್ರ ತುಂಬ ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ಚರ್ಚಿಸಿದ್ದೇನೆ. ಸಾಮಾನ್ಯವಾಗಿ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿರುವವರನ್ನು ಸಾಮಾನ್ಯ ಜನರಿಗಿಂತ ಭಿನ್ನವಾಗಿ ಯೋಚಿಸುವವರು, ತುಂಬ ತಿಳಿದಂತಹ ಪ್ರಾಜ್ಞರು ಮತ್ತು ನಿಷ್ಪಕ್ಷಪಾತ ದೃಷ್ಟಿಕೋನದಿಂದ ಯೋಚಿಸುವವರು ಎಂದು ಸಾಮಾನ್ಯರು ನಂಬುವ ಕಾಲವೊಂದಿತ್ತು ಆದರೆ ಈಗ ಕಾಲ ಬದಲಾಗಿದೆ. ಪ್ರಾಜ್ಞರೆಂದು ಬೀಗುವ ಬುದ್ಧಿಜೀವಿಗಳ ಲಂಪಟತನ, ಭ್ರಷ್ಟಾಚಾರ, ಜಾತೀಯತೆ, ಸ್ವಜನ ಪಕ್ಷಪಾತ ಮತ್ತು ರಾಜಕೀಯ ಇತ್ತೀಚೆಗೆ ಎಲ್ಲರಿಗೂ ಗೊತ್ತಾಗುತ್ತಿದೆ. ಬುದ್ಧಿಜೀವಿಗಳ ಮುಖವಾಡ ಕಳಚಿ ಬಿದ್ದಿದ್ದು, ಅವರನ್ನು ಸಾಮಾನ್ಯ ಜನರು ಈಗ ವಿದೂಷಕರಂತೆ ನೋಡುತ್ತಿದ್ದಾರೆ. ಬುದ್ಧಿಜೀವಿಗಳು ಎಂಬ ಪದದ ಪರ್ಯಾಯ ಅರ್ಥ ವಿದೂಷಕ ಎಂದಾಗಿರುವುದರಿಂದ ಈಗ ಅವರೆಲ್ಲ ತಮ್ಮನ್ನು ತಾವು ಸಂಸ್ಕೃತಿ ಚಿಂತಕರು ಎಂದು ಕರೆದುಕೊಂಡು ಸಮಾಧಾನ ಪಡುತ್ತಿದ್ದಾರೆ!
ಶಿಕ್ಷಣ ಕ್ಷೇತ್ರದಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತು ಬಹುತೇಕ ಎಲ್ಲರಿಗೂ ತಿಳಿದೇ ಇದೆ. ಒಂದು ಕಾಲದಲ್ಲಿ ಸರಸ್ವತಿಯ ಆಲಯಗಳಾಗಿದ್ದ ಶಿಕ್ಷಣ ಸಂಸ್ಥೆಗಳು ಇಂದು ಲಕ್ಷ್ಮಿ ನಿವಾಸಗಳಾಗಿವೆ. ಜೂಜಿನ ಅಡ್ಡ, ಮಾಂಸದಂಗಡಿ, ಮದ್ಯದಂಗಡಿ, ಲಾರಿ ಬಿಜಿನೆಸ್ಸು ಮಾಡುತ್ತ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದ ವ್ಯಾಪಾರಿಗಳು ಇಂದು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಕೋಟ್ಯಂತರ ರೂಪಾಯಿ ಲೂಟಿ ಹೊಡೆಯತ್ತಿದ್ದಾರೆ. ಇಂತಹ ದೊಡ್ಡ ದೊಡ್ಡ ತಿಮಿಂಗಿಲುಗಳಿಗೆ ರಾಜಕಾರಣಿಗಳು ಬೆನ್ನೆಲುಬಾಗಿ ನಿಂತಿದ್ದಾರೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಗಾಗಿ ನಡೆಯುವ ವಿದ್ಯಾರ್ಥಿಗಳ ಆತ್ಮಹತ್ಯೆ ಇಂತಹವರಿಗೆ ದೊಡ್ಡ ವಿಷಯವೇ ಅಲ್ಲ. ಅವರಿಗೆ ಹಣ ಗಳಿಕೆ ಮಾತ್ರ ಮುಖ್ಯ, ಉಳಿದದ್ದೆಲ್ಲ ಗೌಣ. ಕೆಲ ವರ್ಷಗಳ ಹಿಂದೆ ಬಹುದೊಡ್ಡ ಸಂಸ್ಥೆಯಲ್ಲಿ ಶಿಕ್ಷಕನ ಲೈಂಗಿಕ ಕಿರುಕುಳ ತಡೆಯಲಾರದೆ ಕಿಶೋರಾವಸ್ಥೆಯಲ್ಲಿರುವ ಹುಡುಗಿಯೊಬ್ಬಳು ನೇಣಿಗೆ ಶರಣಾದಳು. ಆದರೆ ತನ್ನ ಸಂಸ್ಥೆಯ ಹೆಸರು ಹಾಳಾಗಬಾರದೆಂದು ಪಣ ತೊಟ್ಟಿದ್ದ ಆ ಸಂಸ್ಥೆಯ ಮುಖ್ಯಸ್ಥ ಹರಸಾಹಸ ಪಟ್ಟು ಆ ಪ್ರಕರಣವನ್ನು ಮುಚ್ಚಿ ಹಾಕಿದ. ಆ ಅಕ್ಷರ ವ್ಯಾಪಾರಿ ಸಮಾಜದ ಕಣ್ಣಿನಲ್ಲಿ ದೊಡ್ಡವನಾದರೂ ಸಹ ಅವನೊಬ್ಬ ಗೋಮುಖ ವ್ಯಾಘ್ರ!
ಇನ್ನು ವಿಶ್ವವಿದ್ಯಾಲಯಗಳ ಸ್ಥಿತಿ ದೇವರಿಗೇ ಪ್ರೀತಿ. ಮೊದಲು ಬೆರಳಿಕೆಯಷ್ಟಿದ್ದ ವಿಶ್ವವಿದ್ಯಾಲಯಗಳು ಈಗ ಜಿಲ್ಲೆಗೊಂದರಂತೆ ತಲೆಯೆತ್ತಿವೆ. ಇತ್ತೀಚೆಗೆ ವಿವಿಗಳಲ್ಲಿ ಯೋಗ್ಯರಿಗಿಂತ, ಅಯೋಗ್ಯರೇ ತುಂಬಿದ್ದಾರೆ. ಕನಿಷ್ಠ ಒಂದು ಪರಿಚಯಾತ್ಮಕ ಲೇಖನ ಬರೆಯಲು ಬಾರದ ಅಪ್ರಯೋಜಕರು ಪಿ. ಎಚ್. ಡಿ. ಮಾಡುತ್ತಿದ್ದಾರೆ. ಪರೀಕ್ಷೆ, ಮೌಲ್ಯ ಮಾಪನ, ಅಂಕಪಟ್ಟಿ ವಿತರಣೆ ಸೇರಿದಂತೆ ಯಾವ ಕೆಲಸಗಳೂ ಸಹ ಸುಗಮವಾಗಿ ನಡೆಯುವುದಿಲ್ಲ. ಪಠ್ಯ ಪುಸ್ತಕ ರಚಿಸುವುದರಲ್ಲಂತೂ ದೊಡ್ಡ ನಾಟಕವೇ ನಡೆಯುತ್ತದೆ. ಸಾಹಿತಿಗಳು ಮತ್ತು ಸಾಹಿತ್ಯದ ಗುಣಮಟ್ಟ ನೋಡದೆ, ಸ್ವಜನ ಪಕ್ಷಪಾತ, ಜಾತೀಯತೆ, ಲಂಪಟತನ ಮತ್ತು ಭ್ರಷ್ಟಾಚಾರಕ್ಕೆ ಬಲಿಯಾಗಿ ಅತ್ಯಂತ ಕಳಪೆ ಕವಿತೆ, ಕಥೆ ಮತ್ತು ಲೇಖನ ಹಾಕುತ್ತಾರೆ. ಇತ್ತೀಚೆಗೆ ಬರೆಯಲು ಆರಂಭಿಸಿದ ದ್ವಿತೀಯ ದರ್ಜೆಯ ಯಕಶ್ಚಿತ್ ಲೇಖಕ/ಕಿಯರ ಬರಹಗಳು ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿರುತ್ತವೆ!
ವಿಶ್ವವಿದ್ಯಾಲಯದ ಲಂಪಟರ ಕುರಿತು ಬರೀ ಲೇಖನ ಬರೆದರೆ ಸಾಲದು, ಪುಸ್ತಕಗಳನ್ನೇ ಬರೆಯಬೇಕು. ಅಷ್ಟೊಂದು ದೀರ್ಘ, ರಸವತ್ತಾದ ಕಾಮಕಾಂಡಗಳು ನಮ್ಮ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿವೆ. ನಿವೃತ್ತಿಯ ವಯಸ್ಸಿಗೆ ಸಮೀಪಿಸಿ, ಲೈಂಗಿಕವಾಗಿ ನಿಶ್ಶಕ್ತರಾದರೂ ಕೂಡ ತುಂಬ ಜನ ಮುದಿ ಪ್ರಾಧ್ಯಾಪಕರಲ್ಲಿ ವಿಷಯ ವಾಸನೆ ಕಡಿಮೆಯಾಗಿರುವುದಿಲ್ಲ. ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಬ್ಬರು ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು. ಅವರ ವಿರುದ್ಧ ದೂರು ದಾಖಲಿಸಿದ ಮಹಿಳೆಯನ್ನೇ ಬೆದರಿಸಲಾಯಿತು. ಕುಲಪತಿ, ಸಿಂಡಿಕೇಟ್ ಮತ್ತು ಇಡೀ ವಿಶ್ವವಿದ್ಯಾಲಯವೇ ಈ ಲಂಪಟರಿಗೆ ಬೆಂಬಲ ನೀಡಿತು. ಆ ಪ್ರಕರಣದ ಬಿಸಿ ಆರುವವರೆಗೆ ವಿಶ್ವವಿದ್ಯಾಲಯದ ಅಧಿಕೃತ ಕೆಲಸದ ಮೇಲೆ ಆ ಕಾಮುಕರನ್ನು ವಿದೇಶಕ್ಕೆ ಕಳುಹಿಸಲಾಯಿತು.
ಮಧ್ಯ ಕರ್ನಾಟಕ ಭಾಗದ ವಿವಿಯೊಂದರ ಕಾಮುಕ ಪ್ರಾಧ್ಯಾಪಕ ಲೈಂಗಿಕ ಕಿರುಕುಳದ ಸ್ಪೇಷಲಿಸ್ಟ್. ತನ್ನ ಬಳಿ ಪಿ. ಎಚ್. ಡಿ. ಮಾಡುತ್ತಿದ್ದ ವಿವಾಹಿತ ಮಹಿಳೆಗೆ ತುಂಬ ಕೆಟ್ಟದಾಗಿ ನಡೆಸಿಕೊಂಡು, ಲೈಂಗಿಕ ಕಿರುಕುಳ ನೀಡಿದ. ಡಿವೈಎಸ್ಪಿ, ಕುಲಪತಿ ಮತ್ತು ಇನ್ನೂ ಕೆಲವು ಪ್ರಭಾವಿ ಅಧಿಕಾರಿಗಳು ಅವನಿಗೆ ತಿಳಿ ಹೇಳಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆ ಲಂಪಟ ಪ್ರಾಧ್ಯಾಪಕ ದೂರು ನೀಡಿದ ಮಹಿಳೆಗೆ, “ನಿವೃತ್ತಿ ಅಥವಾ ಸಾವು ಮಾತ್ರ ನನ್ನನ್ನು ಈ ಹುದ್ದೆ ಮತ್ತು ವಿಶ್ವವಿದ್ಯಾಲಯದಿಂದ ಬೇರ್ಪಡಿಸಬಹುದೇ ಹೊರತು ಬೇರೆ ಯಾರೂ, ಏನೂ ಮಾಡಲು ಸಾಧ್ಯವಿಲ್ಲ…” ಎಂದು ಧಮಕಿ ಹಾಕಿದ. ಕೆಲವು ಕಾಮುಕ ಪ್ರಾಧ್ಯಾಪಕರು ಸಹೋದ್ಯೋಗಿಗಳಾದ ಮಹಿಳಾ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದ ಮಹಿಳೆಯರು, ಸಂಶೋಧನಾ ವಿದ್ಯಾರ್ಥಿನಿಯರು, ಪಿ. ಜಿ. ವಿದ್ಯಾರ್ಥಿನಿಯರು ಕೊನೆಗೆ ಕಸ ಗುಡಿಸುವ ಪಾಪದ ಹೆಂಗಸರನ್ನು ಸಹ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆಂದರೆ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂದು ಅರ್ಥ ಮಾಡಿಕೊಳ್ಳಬಹುದು.
ವಿಶ್ವವಿದ್ಯಾಲಯದಲ್ಲಿರುವ ಈ ಪ್ರಾಧ್ಯಾಪಕರು ಪಾಠ ಹೇಳುವುದು ಮತ್ತು ಸಂಶೋಧನೆ ಮಾಡುವುದು ಬಿಟ್ಟು ಉಳಿದ ಉಪದ್ವ್ಯಾಪಗಳನ್ನೆಲ್ಲ ತುಂಬ ಅಚ್ಚುಕಟ್ಟಾಗಿ ಮಾಡುತ್ತಾರೆ. ಲಂಪಟತನ, ಭ್ರಷ್ಟಾಚಾರ, ಜಾತೀಯತೆ ಮತ್ತು ಸ್ವಜನ ಪಕ್ಷಪಾತ ಮಾಡುತ್ತ, ತಮ್ಮ ಬಳಿ ಇರುವ ವಿದ್ಯಾರ್ಥಿಗಳಿಗೆ ಸಹ ಅದನ್ನು ಕಲಿಸುತ್ತಾರೆ. ಇಂತಹವರ ಸಹವಾಸದಿಂದಾಗಿ ಎಷ್ಟೋ ಜನ ಮುಗ್ಧರು ಪಿ. ಎಚ್. ಡಿ. ಮುಗಿಯುವುದರೊಳಗೆ ಲಂಪಟರು, ಭ್ರಷ್ಟರು ಮತ್ತು ಜಾತೀವಾದಿಗಳಾಗಿ ಬದಲಾಗುತ್ತಾರೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಪಿ. ಎಚ್. ಡಿ. ಮಾಡುವ ಬಹುತೇಕ ವಿದ್ಯಾರ್ಥಿಗಳನ್ನು ಮಾತನಾಡಿಸಿದರೆ, ಅವರ ದರಿದ್ರ ಮನಸ್ಥಿತಿ ತಿಳಿಯುತ್ತದೆ. ಮಂಗಳೂರು ವಿವಿಯ ಒಬ್ಬ ಪಿ. ಎಚ್. ಡಿ. ವಿದ್ಯಾರ್ಥಿನಿ, “ಮಂಗಳೂರು ವಿವಿ ಕರಾವಳಿಯವರದಲ್ಲವೋ? ಉತ್ತರ ಕರ್ನಾಟಕದ ಜನ ಎಂಥಕ್ಕೆ ಇಲ್ಲಿಗೆ ಬರುವುದು? ನಮ್ಮ ವಿವಿಗೆ ಇತ್ತೀಚೆಗೆ ಅವರೇ ಹೆಚ್ಚಾಗಿ ಬರುತ್ತಿದ್ದಾರೆ. ನಾವು ಎಂಥ ಮಾಡಬೇಕು ಹೇಳಿ…” ಎಂದಳು!
ಒಬ್ಬ ಕಟ್ಟಾ ಎಡಪಂಥೀಯ ಪ್ರಾಧ್ಯಾಪಕ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಬದಲು ಬರೀ ಜಾತೀಯತೆ ಮತ್ತು ರಾಜಕೀಯ ಮಾಡುತ್ತ ತಿರುಗುತ್ತಿದ್ದ. ಒಂದು ಗಂಟೆಯ ಉಪನ್ಯಾಸದಲ್ಲಿ ಪಠ್ಯದ ಬಗ್ಗೆ ಮಾತನಾಡುವುದು ಬಿಟ್ಟು ತನಗಾಗದ ಜಾತಿಯವರನ್ನು ನಿಂದಿಸುವುದರಲ್ಲೇ ಕಾಲ ಕಳೆಯುತ್ತಿದ್ದ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತೀಯತೆಯ ದುರ್ಬೀಜ ಬಿತ್ತಿ, ವಿದ್ಯಾರ್ಥಿಗಳಲ್ಲೇ ಹಲವು ಗುಂಪುಗಳಾಗುವಂತೆ ಮಾಡಿದ್ದ. ಸದ್ಯ ಇವನು ನಿವೃತ್ತನಾಗಿರುವುದರಿಂದ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.
ಸಾಹಿತ್ಯ ಲೋಕದ ಸ್ಥಿತಿ ಇದಕ್ಕಿಂತ ಘೋರವಾಗಿದೆ. ಅರೆಕಾಲಿಕ ಸಾಹಿತಿಗಳು ಮತ್ತು ಪೂರ್ಣಕಾಲಿಕ ರಾಜಕಾರಣಿಗಳಾದ ಬಹುದೊಡ್ಡ ಲೇಖಕ/ಕಿಯರ ದಂಡೇ ಕನ್ನಡದಲ್ಲಿದೆ. ರಾಜಕಾರಣಿಗಳೂ ಸಹ ನಾಚುವಂತೆ ರಾಜಕೀಯ ಮಾಡುವ ಇವರು ತಮ್ಮನ್ನು ತಾವು ಬಲಪಂಥೀಯರು ಮತ್ತು ಎಡಪಂಥೀಯರು ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುತ್ತಾರೆ. ಭಾಷೆ, ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿಯ ಕುರಿತು ಇವರಿಗೆ ಎಳ್ಳಷ್ಟೂ ಕಾಳಜಿಯಿಲ್ಲ. ಗೋಸುಂಬೆಗಳಂತೆ ಆಗಾಗ ಬಣ್ಣ ಬದಲಾಯಿಸುವ ಇವರು ಸಾಹಿತಿಗಳಲ್ಲ, ಸ್ವಾರ್ಥಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರೆ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಲ್ಲಿ ಅಧ್ಯಕ್ಷ, ಸದಸ್ಯರಾಗಲು ರಾಜಕಾರಣಿಗಳ ಮನೆಗೆ ಎಡತಾಕುತ್ತಾರೆ. ಭ್ರಷ್ಟರು, ಲಂಪಟರು ಮತ್ತು ಜಾತೀವಾದಿಗಳಾದ ಇವರು ಒಳ್ಳೆಯ ಸಂಸ್ಥೆಗಳ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಬಹುತೇಕ ಸರ್ಕಾರಿ ಸಂಸ್ಥೆಗಳಿಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆದ ಇಂತಹ ಅಯೋಗ್ಯರಿಂದ ಒಳ್ಳೆಯದೇನನ್ನು ತಾನೇ ನಿರೀಕ್ಷಿಸಲು ಸಾಧ್ಯ?
ಸರ್ಕಾರಗಳು ಬದಲಾದಾಗ ಈ ಅಯೋಗ್ಯರು ಸಹ ಬದಲಾಗುತ್ತಾರೆ. ಬಲಪಂಥೀಯ ಸರ್ಕಾರ ಬಂದರೆ ಬಲಪಂಥೀಯ ಅಯೋಗ್ಯರು ಮತ್ತು ಎಡಪಂಥೀಯ ಸರ್ಕಾರ ಬಂದಾಗ ಎಡಪಂಥೀಯ ಅಯೋಗ್ಯರು ಬಂದು ಆಯಕಟ್ಟಿನ ಜಾಗಗಳಲ್ಲಿ ಬಂದು ಕುಳಿತುಕೊಂಡು, ಯಥಾ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯವನ್ನು ಹಾಳು ಮಾಡಿ ಹೋಗುತ್ತಾರೆ. ಕರ್ನಾಟಕದ ಅನೇಕ ಸರ್ಕಾರಿ ಸಂಸ್ಥೆಗಳು ಹೊರರಾಜ್ಯದಲ್ಲಿ ನಡೆಯುವ ಕವಿಗೋಷ್ಠಿ, ವಿಚಾರ ಸಂಕಿರಣ ಮುಂತಾದ ಕಾರ್ಯಕ್ರಮಗಳಿಗೆ ಅಯೋಗ್ಯರಾದ, ದ್ವಿತೀಯ ದರ್ಜೆಯ ಲೇಖಕ/ಕಿಯರನ್ನು ಕಳಿಸುತ್ತಿವೆ. ಅವರು ಕನ್ನಡ ಮತ್ತು ಕರ್ನಾಟಕದ ಮರ್ಯಾದೆಯನ್ನು ಎಷ್ಟರ ಮಟ್ಟಿಗೆ ಕಳೆಯಲು ಸಾಧ್ಯವೋ ಅಷ್ಟರ ಮಟ್ಟಿಗೆ ಕಳೆದು ಬರುತ್ತಾರೆ.
ಫೇಸ್ ಬುಕ್ ನಲ್ಲಿ ಸಣ್ಣ ಪುಟ್ಟ ಲೇಖನ ಬರೆಯುವ ದ್ವಿತೀಯ ದರ್ಜೆಯ ಲೇಖಕಿಯೊಬ್ಬಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ ತೀರ್ಪುಗಾರಳಾಗಿ ಕಾರ್ಯ ನಿರ್ವಹಿಸುತ್ತಾಳೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನೊಬ್ಬ ಹೆಂಗರುಳಿನ ಮನುಷ್ಯ. ಅಕಾಡೆಮಿಯ ಪುಸ್ತಕ ಸಂಪಾದನೆಯಿರಲಿ, ಪ್ರವಾಸಾನುದಾನ ಯೋಜನೆಯಿರಲಿ, ಪ್ರಶಸ್ತಿಗೆ ತೀರ್ಪುಗಾರರಲಿ, ಪ್ರಶಸ್ತಿ ಕೊಡುವುದಿರಲಿ ಎಲ್ಲದಕ್ಕೂ ಹೆಂಗಸರೇ ಆಗಬೇಕು. ಇವನು ಅಕಾಡೆಮಿಯಲ್ಲಿರುವಾಗ ಶೇಕಡಾ ಎಪ್ಪತ್ತರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದ. ತುಂಬ ಜನ ಅತೃಪ್ತ ಲೇಖಕಿಯರು ಇದರ ಪ್ರಯೋಜನ ಪಡೆದರು. ಭ್ರಷ್ಟನಾದ ನಿವೃತ್ತ ಅಧಿಕಾರಿಯೊಬ್ಬ ಬಹು ದೊಡ್ಡ ಸಾಹಿತ್ಯ ಸಂಸ್ಥೆಯೊಂದಕ್ಕೆ ಸೇರಿ ಅದರ ಹೆಸರು ಹಾಳು ಮಾಡುತ್ತಿದ್ದಾನೆ. ಈ ಭ್ರಷ್ಟ ಬ್ಯೂರೋಕ್ರಾಟು ಇಂಗ್ಲಿಷ್ ಓದಲು ಮತ್ತು ಬರೆಯಲು ಬಾರದ, ಪಿಯುಸಿ ಡ್ರಾಪೌಟ್ ಆದ ಮಧ್ಯ ವಯಸ್ಕ ಲೇಖಕಿಯೊಬ್ಬಳಿಗೆ ಖ್ಯಾತ ಲೇಖಕ ಎ. ಕೆ. ರಾಮಾನುಜನ್ ಅವರ ಕುರಿತ ಮೊನೋಗ್ರಾಫ್ ಬರೆಯಲು ಕೊಟ್ಟಿದ್ದಾನೆ!
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯನೊಬ್ಬನಿಗೆ ಯುವ ಪುರಸ್ಕಾರ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ನಡುವಿರುವ ವ್ಯತ್ಯಾಸ ಗೊತ್ತಿರಲಿಲ್ಲ. ಮತ್ತೊಬ್ಬ ಸದಸ್ಯನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಒಬ್ಬ ಲೇಖಕ ಅಥವಾ ಲೇಖಕಿಗೆ ಒಂದು ಬಾರಿ ಮಾತ್ರ ಕೊಡುತ್ತಾರೆ ಎಂಬ ಕನಿಷ್ಠ ತಿಳುವಳಿಕೆಯೂ ಇರಲಿಲ್ಲ. ಏಕೈಕ ಕಾದಂಬರಿ ಬರೆದು ಜಗದ್ವಿಖ್ಯಾತ ಲೇಖಕಿಯೆಂದು ಬೀಗುವ ಮಹಿಳೆಯೊಬ್ಬಳು ತಾನು ಅಕಾಡೆಮಿ ಸದಸ್ಯೆಯಾಗಿದ್ದಾಗ ಹೇಗೆಲ್ಲ ಕೆಲವರಿಗೆ ಪ್ರಶಸ್ತಿ ಬರುವುದನ್ನು ತಪ್ಪಿಸಿದೆ ಎಂಬುದನ್ನು, ಅದೊಂದು ದೊಡ್ಡ ಸಾಧನೆಯೆಂಬಂತೆ ಹೇಳಿಕೊಳ್ಳುತ್ತಾಳೆ. ಒಂದೇ ಒಂದು ಪುಸ್ತಕ ಅನುವಾದ ಮಾಡಿದವನೊಬ್ಬ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ಪಡೆಯುತ್ತಾನೆ. ಕೃತಿ ಚೌರ್ಯ ಮಾಡಿದವನಿಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ಸಿಗುತ್ತದೆ. ಇದೆಲ್ಲ ಕನ್ನಡದಲ್ಲಿ ಮಾತ್ರ ಸಾಧ್ಯ!
ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ನಡೆಯುವ ಇಂತಹ ಭ್ರಷ್ಟಾಚಾರವನ್ನೇ ಬೌದ್ಧಿಕ ಭ್ರಷ್ಟಾಚಾರ ಎಂದು ಕರೆಯಲಾಗುತ್ತದೆ. ನಮ್ಮ ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬೌದ್ಧಿಕ ಭ್ರಷ್ಟಾಚಾರ ತುಂಬ ಅಧಿಕವಾಗಿದೆ. ಕನ್ನಡದಲ್ಲಿ ನಡೆಯುವಂತಹ ಬೌದ್ಧಿಕ ಭ್ರಷ್ಟಾಚಾರದ ಕುರಿತು ದೊಡ್ಡ ದೊಡ್ಡ ಹೊತ್ತಿಗೆಗಳನ್ನೇ ಬರೆಯಬಹುದು, ಅಷ್ಟೊಂದು ವರ್ಣರಂಜಿತ ಕಥೆಗಳಿವೆ. ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದತ್ತ ಹೆಮ್ಮೆಯಿಂದ ನೋಡುತ್ತಿದ್ದ ಶೇಷ ಭಾರತ ಇಂದು ಕುಹಕದಿಂದ ನೋಡುವಂತಾಗಿದೆ. ಇಂತಹ ದುಸ್ಥಿತಿ ಬರಲು ಕಾರಣರಾದ ಬೌದ್ಧಿಕ ಭ್ರಷ್ಟರೇ ಇದಕ್ಕೆ ಸಂಪೂರ್ಣ ಹೊಣೆಗಾರರು. ಇದು ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂಬುದೇ ಆತಂಕದ ಸಂಗತಿ.