ಇಪ್ಪತ್ತರ ಸಂಭ್ರಮದಲ್ಲಿ ‘ಅಭಿಜಿತ್ ಪ್ರಕಾಶನ, ಮುಂಬೈ’

ಹೊರನಾಡಿನಲ್ಲಿ ಅತಿ ಹೆಚ್ಚು ಕನ್ನಡ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ಮುಂಬೈನ ಅಭಿಜಿತ್ ಪ್ರಕಾಶನದ್ದಾಗಿದೆ.ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ನೋಂದಣಿ ಮಾಡಿಕೊಂಡು 2004ರಲ್ಲಿ ಪ್ರಕಟಣೆ ಆರಂಭಿಸಿದ ಅಭಿಜಿತ್ ಪ್ರಕಾಶನ ಈವರೆಗೆ ವೈವಿಧ್ಯಮಯವಾದ 130 ಕೃತಿಗಳನ್ನು ಪ್ರಕಟಿಸಿದೆ. ಅನೇಕ ಲೇಖಕರ ಚೊಚ್ಚಲ ಕೃತಿಗಳನ್ನು ಹೊರ ತಂದು ಅವರ ಪ್ರತಿಭೆಯನ್ನು ಲೋಕ ಮುಖಕ್ಕೆ ಪರಿಚಯಿಸಿದೆ.15 ಮಹತ್ವದ ಎಂ.ಫಿಲ್ ಶೋಧ ಸಂಪ್ರಬಂಧಗಳನ್ನು ಹೊರತಂದ ಹೆಗ್ಗಳಿಕೆ ಅಭಿಜಿತ್ ಪ್ರಕಾಶನದ್ದು. ಕನ್ನಡವಲ್ಲದೆ ತುಳು, ಇಂಗ್ಲಿಷ್, ಮರಾಠಿ ಭಾಷೆಗಳಲ್ಲೂ ಪುಸ್ತಕಗಳನ್ನು ಅದು ಪ್ರಕಟಿಸಿದೆ. ಅಭಿಜಿತ್ ಪ್ರಕಾಶನದ ಕೃತಿಗಳಿಗೆ ಕೆಲವು ಪ್ರಶಸ್ತಿ, ಪುರಸ್ಕಾರಗಳು ಸಹ ಲಭಿಸಿವೆ.ಉದಯ ಶೆಟ್ಟಿ ಪಂಜಿಮಾರು ಅವರು ಅಭಿಜಿತ್ ಪ್ರಕಾಶನದ ಕೃತಿಗಳನ್ನು ಅಧ್ಯಯನ ಮಾಡಿ ಶೋಧ ಸಂಪ್ರಬಂಧವನ್ನು ರಚಿಸಿದ್ದಾರೆ.ಈಗ ಅಭಿಜಿತ್ ಪ್ರಕಾಶನಕ್ಕೆ ಇಪ್ಪತ್ತರ ಸಂಭ್ರಮ. ಇದೇ ಮೇ 25 ಶನಿವಾರದಂದು ಈ ನಿಮಿತ್ತ ಚೆಂಬೂರಿನ ಬಾಲ ವಿಕಾಸ ಸಭಾಗೃಹದಲ್ಲಿ ವಿಶೇಷ ಕಾರ್ಯಕ್ರಮವಿದೆ. ತಮಗೆಲ್ಲರಿಗೂ ಆದರದ ಸ್ವಾಗತ.

ಪ್ರೊ. ಜಿ. ಎನ್. ಉಪಾಧ್ಯ
ಸಂಚಾಲಕರು, ಅಭಿಜಿತ್ ಪ್ರಕಾಶನ, ಮುಂಬೈ

(ಎರಡು ಕೃತಿಗಳ ಬಿಡುಗಡೆ: ಸಾಹಿತ್ಯ, ನೃತ್ಯ ಮೊದಲಾದ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆ ಮಾಡಿರುವ ವಿದ್ವಾನ್ ಸರೋಜಾ ಶ್ರೀನಾಥ್ ಅವರ 90ರ ಸಂಭ್ರಮ ಹಾಗೂ ಅವರೇ ರಚಿಸಿರುವ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ಇದೇ ಮೇ 25 ರಂದು ಶನಿವಾರ ಬೆಳಿಗ್ಗೆ 11.15ರಿಂದ ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ಕನಕ ಸಭಾ ಕಲಾ ಸಂಸ್ಥೆ ಹಾಗೂ ಅಭಿಜಿತ್ ಪ್ರಕಾಶನ, ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಚೆ0ಬೂರು (ಪ) ಬಾಲ ವಿಕಾಸ ಸಭಾಗೃಹದಲ್ಲಿ ನಡೆಯಲಿದೆ ಎಂಬುದಾಗಿ ಕನಕಸಭಾ ಸಂಸ್ಥೆಯ ಸಂಚಾಲಕರಾದ ಡಾ. ಸಿರಿ ರಾಮ ಹಾಗೂ ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಎನ್. ಉಪಾಧ್ಯ ಅವರ ಜಂಟಿ ಪ್ರಕಟಣೆ ತಿಳಿಸಿದೆ.)

ಅಭಿಜಿತ್ ಪ್ರಕಾಶನದ ಲೇಖಕರು:-

ಡಾ. ಮರಿಯಪ್ಪ ನಾಟೇಕರ್, ಶಿಮುಂಜೆ ಪರಾರಿ, ಸುಮನ್ ಚಿಪ್ಲೂಣ್ಕರ್, ಡಾ. ಮಮತಾ ರಾವ್, ಡಾ. ಮೇಧಾ ಕುಲಕರ್ಣಿ, ಕೃಷ್ಣಮೂರ್ತಿ ಕಲುಮಂಗಿ, ಬಾಲಕೃಷ್ಣ ನಿಡ್ವಣ್ಣಾಯ, ಡಾ. ಕರುಣಾಕರ ಶೆಟ್ಟಿ, ಡಾ. ಜಿ. ಡಿ. ಜೋಶಿ, ಬಿ. ಎಸ್. ಕುರ್ಕಾಲ್, ಶ್ರೀನಿವಾಸ ಜೋಕಟ್ಟೆ, ಡಾ. ದಿನೇಶ್ ಶೆಟ್ಟಿ, ಡಾ. ಮೋಹನ್. ಬಿ, ಡಾ.ಮೃದುಲಾ ಕಿರ್ಲೊಸ್ಕರ್, ವಸಂತ ಕಲಕೋಟಿ, ವಾಸುದೇವ ಕಾಣೆಮಾರ್, ರತ್ನಾಕರ ಶೆಟ್ಟಿ, ಡಾ. ಪೂರ್ಣಿಮಾ ಶೆಟ್ಟಿ, ಶಾರದಾ ಅಂಚನ್, ಡಾ. ಬಿ. ಆರ್. ಮಂಜುನಾಥ್, ಗಂಗಾಧರ್ ಪಣಿಯೂರು, ಡಾ. ಚಂದ್ರಾ ಜೋಶಿ, ಗೋಪಿಕಾಪ್ರಿಯ ಮಿತ್ರಪಟ್ಣ, ಡಾ. ಜಿ. ಪಿ. ಕುಸುಮಾ, ಓಂದಾಸ್ ಕಣ್ಣಂಗಾರ್, ಎಸ್. ಎಸ್. ಕೆಲವಡಿ, ಡಾ. ಸೋಮಶೇಖರ್ ಮಾಲಿಪಾಟೀಲ್, ಡಾ. ಜ್ಯೋತಿ ಸತೀಶ್, ಮೇರಿ ಪಿಂಟೋ, ಸರೋಜಾ ಶ್ರೀನಾಥ್, ಅರ್ಚನಾ ಪೂಜಾರಿ, ಬಿ. ಬಾಲಚಂದ್ರ ರಾವ್, ಡಾ. ರಾಜೇಶ್ವರಿ ಎಂ. ಆರ್, ಏಳಿಂಜೆ ನಾಗೇಶ್,ಎಂ ಎ ಎನ್ ಪ್ರಸಾದ್, ಅನಿತಾ ತಾಕೋಡೆ, ಅನಸೂಯಾ ಗಲಗಲಿ, ಸುಜ್ಞಾನಿ ಬಿರಾದಾರ್, ಅರವಿಂದ್ ಹೆಬ್ಬಾರ್, ಶೋಭಾ ಪ್ರಮೋದ್, ಡಾ. ವನಕುದ್ರಿ, ಎಸ್ಕೆ. ಹಳೆಯಂಗಡಿ, ಮಹೇಶ್ ಹೆಗ್ಡೆ ಪೊಳಲಿ, ಡಾ. ಗೋವಿಂದ ಭಟ್, ರತ್ನಾ ಶ್ರೀನಿವಾಸ, ಡಾ. ಶೈಲಜಾ ಹೆಗ್ಡೆ, ಶಿವರಾಜ್ ಎಂ. ಜಿ, ಡಾ. ದುರ್ಗಪ್ಪ ಕೋಟಿಯವರ, ವೀಣಾ ಶಾಸ್ತ್ರೀ, ಹೇಮಾ ಸದಾನಂದ ಅಮೀನ್, ಶಾರದಾ ಅಂಬೆಸಂಗೆ, ಪಾಂಗಾಳ ವಿಶ್ವನಾಥ್ ಶೆಟ್ಟಿ, ಡಾ. ಗೇಮಸಿಂಗ್ ರಾಠೋಡ್, ಡಾ. ವೈ. ವಿ. ಮಧುಸೂದನ ರಾವ್, ಡಾ. ಬಿ ಲೀಲಾ, ಡಾ. ದಾಕ್ಷಾಯಿಣಿ ಯಡಹಳ್ಳಿ,ಸುರೇಖಾ ಹರಿಪ್ರಸಾದ್ ಶೆಟ್ಟಿ, ದಿನಕರ ಚಂದನ್, ಅಶೋಕ ಸುವರ್ಣ, ಎಚ್. ಆರ್. ಛಲವಾದಿ, ಲಕ್ಷ್ಮೀಶ ಶೆಟ್ಟಿ, ಸುರೇಖಾ ದೇವಾಡಿಗ, ಡಾ. ಕರುಣಾಕರ ಬಂಗೇರ,, ಸೋಮಶೇಖರ್ ಮಸಳಿ, ಡಾ. ಎಲ್. ವಿ. ಶಾಂತಕುಮಾರಿ, ಕೆ. ವಿ. ಭಟ್, ಕುದಬೈಲ್.ಪ್ರೊ. ಜಿ. ಎನ್. ಉಪಾಧ್ಯ.


“ಮುಂಬಯಿಯಲ್ಲಿ ಕನ್ನಡದ ಹೆಚ್ಚಿನ ಹೊಸ ಲೇಖಕರು ತೊಂಭತ್ತರ ದಶಕದ ತನಕ ಪ್ರಕಾಶಕರ ಕೊರತೆಯ ಕಾರಣ ಪುಸ್ತಕ ಪ್ರಕಟಣೆಯ ಗೊಡವೆಗೇ ಹೋಗುತ್ತಿರಲಿಲ್ಲ. ಯಾವಾಗ 2004 ರಲ್ಲಿ ಡಾ.ಜಿ.ಎನ್ ಉಪಾಧ್ಯರ ಅಭಿಜಿತ್ ಪ್ರಕಾಶನ ಮುಂಬಯಿಯಲ್ಲಿ ಆರಂಭವಾಯ್ತೋ ಅಂದಿನಿಂದ ಪ್ರಕಾಶನ ಕ್ಷೇತ್ರದಲ್ಲಿ ಒಂದು ರೀತಿಯ ಕ್ರಾಂತಿಯಾಗತೊಡಗಿತು. ನೋಡು ನೋಡುತ್ತಿದ್ದಂತೆ ಪುಸ್ತಕ ಪ್ರಕಟಣೆಯ ಸಂಖ್ಯೆ ನೂರನ್ನು ದಾಟಿತು. ಈ ಪ್ರಕಾಶನದಲ್ಲಿ ನನ್ನ ಒಂದು ಪ್ರವಾಸ ಲೇಖನವೂ ಪ್ರಕಟವಾಗಿರುವುದು ಸಂತೋಷ. ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಇವುಗಳ ಆರ್ಥಿಕ ಪುರಸ್ಕಾರವೂ ದೊರೆತಿರುವುದು ಇಲ್ಲಿ ನೆನಪಿಸುವೆ. ಯಾವುದೇ ಲಾಭದ ದೃಷ್ಟಿಕೋನ‌ವಿಲ್ಲದೆ ಲೇಖಕರನ್ನು ಬೆಳೆಸಿ ಪ್ರೋತ್ಸಾಹಿಸೋದೇ ಈ ಪ್ರಕಾಶನದ ಉದ್ದೇಶ.ಇಂದು ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ಮುಂಬಯಿಯ ಅಭಿಜಿತ್ ಪ್ರಕಾಶನ ಮುಂಚೂಣಿಯ ಸಾಲಲ್ಲಿ ನಿಲ್ಲುವ ಅರ್ಹತೆ ಪಡೆದಿದೆ. ಇಪ್ಪತ್ತರ ಸಂಭ್ರಮಕ್ಕೆ ಅಭಿನಂದನೆಗಳು.”
ಶ್ರೀನಿವಾಸ ಜೋಕಟ್ಟೆ.
ಉಪಸಂಪಾದಕ : ಕರ್ನಾಟಕ ಮಲ್ಲ ದೈನಿಕ,
ಸಂಪಾದಕ ಗೋಕುಲವಾಣಿ

“ಹೊರ ನಾಡಿನ ಸಂದರ್ಭದಲ್ಲಿ ಇಷ್ಟು ಪುಸ್ತಕ ಪ್ರಕಟಿಸಿರುವುದು ದೊಡ್ಡ ಸಾಧನೆ. ಎಷ್ಟೊಂದು ಲೇಖಕರು, ಎಷ್ಟೊಂದು ಶೀರ್ಷಿಕೆಗಳು! ಇದು ಉತ್ಸಾಹ, ಬದ್ಧತೆ ಮತ್ತು ಕನ್ನಡ ಭಾಷೆ, ಸಾಹಿತ್ಯ ಕುರಿತ ಕಕುಲಾತಿಯಿಂದ ಮಾಡಿರುವ ಸಾಧನೆ. ನಮ್ಮ ಹೆಮ್ಮೆಯ ಗಣೇಶ್ ಉಪಾಧ್ಯ ಮತ್ತು ಈ ಕನ್ನಡ ಕಾಯಕದಲ್ಲಿ ಜತೆಗೆ ನಿಂತು ಪುಸ್ತಕ ರಥವನ್ನು ಎಳೆಯುತ್ತಿರುವ ಸಾಹಿತ್ಯದ ಅಭಿಮಾನಿಗಳಿಗೆ ಅಭಿನಂದನೆಗಳು. ಈ ತೇರು ಮುಂದೆ ಸಾಗತ್ತಿರಲೆಂದು ಹಾರೈಸುತ್ತೇವೆ.”

  • ನಾಡೋಜ .ಕಮಲಾ ಹಂಪನಾ

“ಮಹಾರಾಷ್ಟ್ರದ ನೆಲದಲ್ಲಿ ಕನ್ನಡದ ಒಂದು ಪ್ರಕಾಶನ 20 ವರ್ಷಗಳನ್ನು ಕಂಡಿದ್ದು ವಿಶೇಷ ಸಂಗತಿ. ಅದರ ಹಿಂದೆ ಸಂಚಾಲಕರಾದ ಡಾ. ಜಿ. ಎನ್ ಉಪಾಧ್ಯ ಅವರ ಶ್ರಮ, ಮುಂಬೈ ಕನ್ನಡ ಸಾಹಿತ್ಯಾಸಕ್ತರ ಪ್ರೋತ್ಸಾಹ ಎದ್ದು ಕಾಣುತ್ತದೆ. ದ್ವಿದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಭಿಜಿತ್ ಪ್ರಕಾಶನಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನೂ ಅದು ಎತ್ತರಕ್ಕೆ ಬೆಳೆಯಲಿ. ಬೆಳ್ಳಿ, ಸುವರ್ಣ, ವಜ್ರದ ದಿನಗಳನ್ನು ಕಾಣಲಿ ಎಂದು ಹಾರೈಸುತ್ತೇನೆ. ನಮಸ್ಕಾರಗಳು.”

  • ಪ್ರೊ. ಗುರುಲಿಂಗಪ್ಪ ಧಬಾಲೆ, ಅಕ್ಕಲಕೋಟೆ

“ಅಧ್ಯಯನ,ಅಧ್ಯಾಪನ , ಸಂಶೋಧನ ಮತ್ತು ಪ್ರಕಾಶನ ಹೀಗೆ ನಾಲ್ಕು ವಿಧಗಳಲ್ಲಿ ಸಾಹಿತ್ಯ ಪ್ರಸಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಡಾ.ಜಿ ಎನ್ ಉಪಾಧ್ಯ ಅವರದು.
ತಾವು ಚಲಿಸುವ ಹೆಜ್ಜೆಗಳಿಗಿಂತಲೂ ಚುರುಕಾದ ನಡಿಗೆಯನ್ನು ಶ್ರೀಯುತರು ಸಾಹಿತ್ಯ,ಸಂಶೋಧನೆ ಮತ್ತು ಪ್ರಕಟಣೆ ಕಾರ್ಯಗಳಲ್ಲಿ ಬಿಂಬಿಸಿದರು. ಯಾವುದೇ ಆಮಿಷಗಳಿಗೆ ಬಲಿಯಾಗದೆ, ಯಾವ ಕಪ್ಪು ಚುಕ್ಕೆಗೂ ಒಳಗಾಗದೆ,ದೂರದ ಮುಂಬೈ ಮಹಾನಗರದಲ್ಲಿ ಒಂಟಿ ಸಲಗನಂತೆ ಹೆಜ್ಜೆ ಹಾಕಿ, ಹಿಡಿದ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಪೂರೈಸಿದ ಧೀರೋದಾತ್ತ ವ್ಯಕ್ತಿತ್ವದ ವಿದ್ವಾಂಸರವರು. ಅದರಲ್ಲಿಯೂ ಧಾರವಾಡದ ಮನೋಹರ ಗ್ರಂಥ ಮಾಲಾದಂತೆ ಅತ್ಯುತ್ತಮ ಕೃತಿಗಳನ್ನು ತಮ್ಮ ಅಭಿಜಿತ್ ಪ್ರಕಾಶನದ ಮೂಲಕ ಪ್ರಕಟಿಸಿ ಹಲವಾರು ಹೊಸ ಪ್ರತಿಭೆಗಳನ್ನು ಸಾರಸ್ವತ ಪ್ರಪಂಚಕ್ಕೆ ಕರೆ ತಂದದ್ದಂತೂ ನಿಜಕ್ಕೂ ಹೊರನಾಡಿನಲ್ಲಿ ಅದೊಂದು ದಾಖಲೆಯೇ.

ಆಳವಾದ ಅಧ್ಯಯನ, ಪಾರದರ್ಶಕ ಆಡಳಿತ,ಆಪ್ತತೆ ಮತ್ತು ಆತ್ಮೀಯತೆಯ ಗುಣಗಳಿಂದ ಡಾ.ಉಪಾಧ್ಯ ಕನ್ನಡ ಸಾಹಿತ್ಯ ಲೋಕದ (ಹೊರನಾಡು ಮತ್ತು ಒಳನಾಡು)ಹಿರಿಯರಿಗೂ ಮತ್ತು ಕಿರಿಯರಿಗೂ ಅತ್ಯಂತ ಚಿರಪರಿಚಿತ ವ್ಯಕ್ತಿ. ಅವರ ಅಭಿಜಿತ್ ಪ್ರಕಾಶನಕ್ಕೆ ಇಪ್ಪತ್ತು ತುಂಬುತ್ತಿವೆ ಈ ತಿಂಗಳು ಎಂಬ ವಿಷಯ ತಿಳಿದು ಎಲ್ಲಾ ಕನ್ನಡಿಗರ ಕಿವಿಗಳು ತಂಪಾಗುವುದು ನಿಜಕ್ಕೂ ಅಭಿಮಾನದ ಸಂಗತಿ. ಡಾ.ಉಪಾಧ್ಯ ಅವರ ನೇತೃತ್ವದಲ್ಲಿ ಸಂಕ್ರಮಣದ ಹಾಗೆ ಐವತ್ತರ ಐಸಿರಿಯತ್ತ ಅಭಿಜಿತ್ ಪ್ರಕಾಶನ ದಾಪುಗಾಲು ಹಾಕಲಿ.ಕನ್ನಡದ ಮಹತ್ವದ ಪ್ರಕಾಶನಗಳಲ್ಲಿ ಅದೂ ಒಂದು ಎಂದಾಗಲಿ ಎಂದು ಹೃದಯ ತುಂಬಿ ಹಾರೈಸುತ್ತೇನೆ.”

  • ಡಾ.ಸಂಗಮನಾಥ ಲೋಕಾಪೂರ,ಧಾರವಾಡ.

“ಅಭಿಜಿತ್ ಪ್ರಕಾಶನವು ಇಪ್ಪತ್ತರ ಸಂಭ್ರಮದಲ್ಲಿರುವುದು ನನಗೆ ಖುಷಿ ನೀಡಿದೆ. ನನ್ನ ಸಾಹಿತ್ಯಯಾನಕ್ಕೆ ಮೊತ್ತ ಮೊದಲು ಬಾಗಿಲು ತೆರೆದು ಸ್ವಾಗತಿಸಿ ಮುನ್ನಡೆಯಲು ಅನುವು ಮಾಡಿ ಕೊಟ್ಟಿದ್ದು ಅಭಿಜಿತ್ ಪ್ರಕಾಶನ. ನನ್ನ ಮೂರು ಕವನ ಸಂಕಲನಗಳೂ ಈ ಪ್ರಕಾಶನದ ಮೂಲಕವೇ ಬೆಳಕು ಕಂಡಿದೆ. ಇನ್ನು ಮುಂದೆಯೂ ಬರಹಗಾರರಿಗೆ ಅಭಿಜಿತ್ ಪ್ರಕಾಶನ ಸ್ಫೂರ್ತಿದಾಯಕವಾಗಿ, ಕೃತಿಗಳ ಪ್ರಕಟಣೆಯ ಸಂಖ್ಯೆ ಸಾವಿರವಾಗಲಿ ಎಂದು ಮನಪೂರ್ವಕವಾಗಿ
ಹಾರೈಸುವೆನು.”

  • ಅನಿತಾ ಪಿ. ತಾಕೊಡೆ, ಮುಂಬೈ

“ಮುಂಬೈಯ ಮರಾಠಿ ನೆಲದಲ್ಲಿ ತುಳು ಕನ್ನಡಿಗರ ಆಶೋತ್ತರಗಳನ್ನು ಪೂರೈಸುವ ಪುಸ್ತಕಗಳ ಪ್ರಕಟಣ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ. ಹೊರನಾಡಾದ ಮುಂಬೈಯಲ್ಲಿ ಇಂದಿಗೂ ದೊಡ್ಡ ಪ್ರಮಾಣದಲ್ಲಿ ಪ್ರಕಟಣ ಕಾರ್ಯ ಸಾಗಿ ಬಂದಿರುವುದು ಅಭಿಮಾನದ ಸಂಗತಿ. ಅವುಗಳಲ್ಲಿ ಕನ್ನಡದ ಮೇಲಿನ ಪ್ರೀತಿಯಿಂದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಕನಸಿನ ಕೂಸು ಅಭಿಜಿತ್ ಪ್ರಕಾಶನವೂ ಒಂದು.
ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹಾಗೂ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಮುಂಬೈಯಲ್ಲಿ ಅಭಿಜಿತ್ ಪ್ರಕಾಶನವನ್ನು ಹುಟ್ಟು ಹಾಕಲಾಯಿತು. ಆಗಿನ್ನೂ ಹೊಸ ಪ್ರತಿಭೆ ತಮ್ಮ ವಿದ್ಯಾರ್ಥಿಯ ಚೊಚ್ಚಲ ಕೃತಿಯಿಂದ ಆರಂಭವಾದಂತಹ ಈ ಪ್ರಕಟಣೆಯ ಕೆಲಸ ಇಂದು ಹಿರಿಯ ಕಿರಿಯ ಮಾತ್ರವಲ್ಲ ನಾಮಾಂಕಿತ ಸಾಹಿತಿಗಳ ನೂರಾರು ಪುಸ್ತಕಗಳನ್ನು ಹೊರ ತಂದು ತನ್ನದೇ ಆದಂತಹ ಛಾಪನ್ನು ಬೀರಿದೆ. ಇದೀಗ ಇಪ್ಪತ್ತರ ಸಂಭ್ರಮದಲ್ಲಿರುವ ಅಭಿಜಿತ್ ಪ್ರಕಾಶನ ಅಲ್ಪ ಸಮಯದಲ್ಲಿ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಇದುವರೆಗೆ ಸುಮಾರು 130 ಪುಸ್ತಕಗಳಿಗೆ ಬೆಳಕು ತೋರಿದ ಹಿರಿಮೆ ಗರಿಮೆಗೆ ಪಾತ್ರವಾಗಿದೆ.
ಅಭಿಜಿತ್ ಪ್ರಕಾಶನದ ಕೃತಿಗಳು ಹಲವಾರು ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿರುವುದು ಉಲ್ಲೇಖನೀಯ ಸಂಗತಿ. ಮುಂಬಯಿ ಕನ್ನಡಿಗರು ಮಾತ್ರವಲ್ಲ ಹೊರನಾಡಿನಿಂದಲೂ ಅಭಿಜಿತ್ ಪ್ರಕಾಶನದ ಮೂಲಕ ಕೃತಿ ಪ್ರಕಟಣೆಗಾಗಿ ಬೇಡಿಕೆ ಬರುತ್ತಿರುವುದು ಈ ಪ್ರಕಾಶನದ ಹೆಗ್ಗಳಿಕೆಯೇ ಸರಿ.

ಇದಕ್ಕೆ ಮುಖ್ಯ ಕಾರಣ ಸಂಚಾಲಕರಾದ ಡಾ.ಜಿ.ಎನ್.ಉಪಾಧ್ಯ ಅವರ ಶಿಸ್ತು, ಅಚ್ಚುಕಟ್ಟುತನ, ಬದ್ಧತೆ ಹಾಗೂ ಲೇಖಕರು ಇಟ್ಟಿರುವ ಭರವಸೆ.
ಅಭಿಜಿತ್ ಪ್ರಕಾಶನದಲ್ಲಿ ಪ್ರಕಟವಾಗುವ ಕೃತಿಗಳನ್ನು ಓದಿ, ಅಗತ್ಯ ಬಿದ್ದಲ್ಲಿ ತಿದ್ದುಪಡಿ ಮಾಡಿ ಪ್ರಕಾಶಕೀಯ ನುಡಿಗಳನ್ನು ಬರೆಯುವುದು ಸಂಚಾಲಕರಾದ ಡಾ‌. ಜಿ.ಎನ್ ಉಪಾಧ್ಯ ಅವರು ಪಾಲಿಸಿಕೊಂಡು ಬಂದಿರುವ ನೀತಿ. ಯಾಕೆಂದರೆ ಪ್ರಕಾಶಕನಾದವನು ಪ್ರಕಟಣೆಯಾಗುವ ಕೃತಿಯ ಆಳ ಹರಹುಗಳ ಕುರಿತು ತಿಳಿದುಕೊಂಡಿರಬೇಕು ಎನ್ನುವ ನಿಲುವನ್ನು ಅವರು ಮೈಗೂಡಿಸಿಕೊಂಡಿರುವುದು. ಇದರಿಂದ ಲೇಖಕರೂ ಒಂದು ರೀತಿಯಲ್ಲಿ ನಿರಾಳವಾಗಿರುತ್ತಾರೆ. ತಮ್ಮ ಕೃತಿ ತಪ್ಪಿಲ್ಲದೆ, ಅಕ್ಷರದೋಷವಿಲ್ಲದೆ ಪ್ರಕಟವಾಗುತ್ತದೆ ಎನ್ನುವ ಭರವಸೆ ಅವರಿಗಿರುತ್ತದೆ. ಇಲ್ಲಿ ಪ್ರಕಟಗೊಂಡ ಕೃತಿಗಳ ಮೇಲೆ ಮಗುವಿನಂತಹ ಪ್ರೀತಿ ಹಾಗೂ ಲೇಖಕರ ಮೇಲೆ ಅಪಾರ ಗೌರವ ಸಂಚಾಲಕರ ದೊಡ್ಡ ಗುಣ. ಇದು ಅಭಿಜಿತ್ ಪ್ರಕಾಶನ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬರುತ್ತಿರುವುದಕ್ಕೆ ಪ್ರಮುಖ ಕಾರಣವೂ ಹೌದು. ಯಾವುದೇ ಆರ್ಥಿಕ ಲಾಭವಿಲ್ಲದೆ ಕೇವಲ ಪುಸ್ತಕ ಪ್ರೀತಿಯಿಂದ ವೈವಿಧ್ಯಮಯವಾದ ಕೃತಿಗಳನ್ನು ಪ್ರಕಟಿಸುತ್ತಿರುವುದು ಈ ಸಂಸ್ಥೆಯ ಹಿರಿಮೆ.
ಸುಂದರ ಹೂದೋಟದಲ್ಲಿ ಅರಳಿನಿಂತ ಬಣ್ಣ ಬಣ್ಣದ ಹೂಗಳಂತೆ ವೈವಿಧ್ಯಮಯ ವಿಷಯ, ಶೀರ್ಷಿಕೆಗಳಿಂದ ಆಕರ್ಷಕವಾಗಿ ಹೊರಬರುವ ಪುಸ್ತಕಗಳು ಸೊಬಗನ್ನು ಬೀರುತ್ತಿರುವುದೇ ಪುಸ್ತಕ ಪ್ರೇಮಿಗಳ ಕಣ್ಣಿಗೆ ಹಬ್ಬ. ಮತ್ತಷ್ಟು ಉತ್ತಮ ಕೃತಿಗಳು ಅಭಿಜಿತ್ ಪ್ರಕಾಶನದಿಂದ ಬೆಳಕು ಕಾಣಲೆಂಬ ಹಾರೈಕೆ ನಮ್ಮದು.”

  • ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಇಪ್ಪತ್ತರ ಸಂಭ್ರಮದಲ್ಲಿ ‘ಅಭಿಜಿತ್ ಪ್ರಕಾಶನ, ಮುಂಬೈ’”

  1. ಎಂ.ಎನ್.ರತ್ನ ಶ್ರೀನಿವಾಸ್.

    ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ಜಿ.ಎನ್ ಉಪಾಧ್ಯ ಸರ್ ಅವರು ಅಭಿಜಿತ್ ಪ್ರಕಾಶನದ ಮುಖೇನ ಹಲವಾರು ಬರಹಗಾರರಿಗೆ ಉತ್ತೇಜನ, ಸ್ಫೂರ್ತಿ ತುಂಬಿ ಅವರ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಲ್ಲಾ ಬರಹಗಾರರಿಗೂ ಸೂಕ್ತ ಮಾರ್ಗದರ್ಶನ ನೀಡಿ ಲವಲವಿಕೆಯಿಂದ ಕನ್ನಡದ ತೇರನ್ನು ಹೊರನಾಡಿನಲ್ಲಿ ಎಳೆಯುತ್ತಿರುವ ಡಾ. ಜಿ.ಎನ್.ಉಪಾಧ್ಯ ಸರ್ ಅವರ ಅಭಿಜಿತ್ ಪ್ರಕಾಶನ ಇಪ್ಪತ್ತರ ಸಂಭ್ರಮ ಆಚರಿಸಲು ಸಜ್ಜಾಗಿದೆ ಅದಕ್ಕೆ ನನ್ನ ಶುಭಾಶಯಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter