ರೂಪ ರೂಪಗಳನು ದಾಟಿ

ರೇಲ್ವೆ ಟ್ರಾಕಿಗೆ ಹೊಂದಿಕೊಂಡಂತೆ ಬೆಳೆದ ಆ ಕೊಳಗೇರಿಯಲ್ಲಿ ಒಂದೆಡೆ ಸಾಲುಗೇರಿ ಮನೆಗಳು, ಎದುರಿಗೆ ಹರಿಯುತ್ತಿದ್ದ ಕೊಳಚೆ ನೀರಿನ ಗಬ್ಬು ವಾಸನೆಯನ್ನೂ ರೂಢಿಸಿಕೊಂಡ ಮೂಗಿನ ಹೆಂಗಸರು ಮನೆ ಎದುರಿನಲ್ಲೇ ಅರಬಿ ಒಗೆಯುತ್ತ, ಮುಸುರೆ ತಿಕ್ಕುತ್ತ ಉಸ್ಗರೆಯುತ್ತಿದ್ದರು. ‘ಕೆಲಸಕ್ಕ ಹೋಗಂಗಿಲ್ಲೇನು ಬೀಬಿಜಾನ್?’ ‘ಚಾ ರೀ?’ ‘ರೇಶನ್ ತಂದಿಯೇನು ಈ ತಿಂಗಳದ್ದು?’ ಎಂದು ಎದುರಿಗೆ ಕಂಡವರತ್ತ ಪ್ರಶ್ನೆಯ ಹಕ್ಕಿಯನ್ನು ಹಾರಿಸಿಬಿಡುತ್ತಿದ್ದರು. ಮನೆ ಮುಂಗಟ್ಟೆಯ ಮೇಲೆ ಚಾದಲ್ಲಿ ಬಿಸ್ಕೀಟನ್ನು ಅದ್ದಿ ತಿಂದು ‘ಇನ್ನೂ ಹೊಟ್ಟಿ ತುಂಬಿಲ್ಲಬೇ’ ಎಂದು ರಾಗ ತೆಗೆವ ಮಗಳತ್ತ ರಾಧಾಬಾಯಿ ಕೂರಂಬಿನಂತಹ ನೋಟ ಬೀರಿದಳು.
ತಿಕ್ಕುತ್ತಿದ್ದ ಚಹಾ ಭಾಂಡೆಯನ್ನು ನೆಲಕ್ಕಪ್ಪಳಿಸಿ ‘ಇನ್ನ ಮನ್ಯಾಗೇನಿಲ್ಲವ್ವಾ ತಿನ್ನಾಕ…. ಮಧ್ಯಾಹ್ನ ಸಾಲಿ ಒಳಗ ಬಿಸಿ ಊಟಾ ಹಾಕತಾರಲ್ಲವ್ವಾ ಚೆಂದಾಗಿ ಉಂಡ ಬಾ ಮತ್ತ ರಾತ್ರಿಗೆ ಊಟ ಇರ್ತತಿ ಅನ್ನಾಕನೂ ಬರೂದಿಲ್ಲ ಎಂದಳು.
ಮೂಲ್ಯಾಗ ಕುಂತ ಮುದಕಿ ಮಾಯೀರಿ ‘ಕೆಲಸದ ಮನಿಯವ್ರು ಕೊಟ್ಟ ಊಟಾ ಎಲ್ಲಾ ನುಂಗಿ ಕೂಡತದ ಈ ನನ ಮಗಳು ಅಂತ ಯಾಕೋ ಅಂದಿಲ್ಲ ಇಂದ ನಿಮ್ಮವ್ವ’ ಎಂದು ಗಹ ಗಹಿಸಿ ನಕ್ಕ ಅಬ್ಬರಕ್ಕೆ ರಸ್ತೆಯಂಚಿಗೆ ಮಲಗಿದ್ದ ಬಡಕಲು ನಾಯಿಯೂ ಬೆಚ್ಚಿ ಬಿದ್ದು ಬಾಲ ಮುದುರಿಕೊಂಡು ಓಡಿತು.
‘ಹಾಂಗ ಉಣ್ಣಕ ನೀನೂ ಇದ್ದಿಯಲ್ಲ ಮೊಮ್ಮಗಳ ಜೋಡಿ… ಸತ್ತರ ಸಾಯಂಗಿಲ್ಲ ನೀ ಸುಡುಗಾಡು ಮುದಿಕಿ. ನಿನ್ನ ಮಗಾ ಸಾಯೂ ಬದ್ಲಿ ನಿನರೆ ಸಾಯಬಾರದಿತ್ತಾ’ ಎಂದು ಸಾವಿರಾರು ಬಾರಿ ಹೇಳಿದ್ದನ್ನೇ ಪುನರುಚ್ಚರಿಸಿದಳು ರಾಧಾಬಾಯಿ.
ಸೊಸೆಯ ಮಾತಿನ ಕಹಿಗೆ ಮೂಗೇರಿಸುತ್ತಾ ಸೊರ ಸೊರ ಸಪ್ಪಳ ಮಾಡುತ್ತ ಅತ್ತಂತೆ ಮಾಡುತ್ತಾ “ಹಿರ್ಯಾರು ಅನ್ನೂದು ಇಲ್ಲೇ ಇಲ್ಲ’ ಎಂದು ಗೊಣಗಿದಳು ಮಾಯೀರಿ.
‘ಮುಂಜಾನಿ ಮುಂಜಾನಿ ನನ್ನ ತೆಲಿ ಕೆಡಿಸಬ್ಯಾಡ್ರೀ ನೀವಿಬ್ರೂ… ಆರು ಮನಿ ಭಾಂಡಿ ತಿಕ್ಕಿ ಅರಬಿ ತೊಳೆದು ಬರಬೇಕಾಗೆತಿ, ಏ ಸುಗ್ಗಿ ನೀ ಸಾಲಿಗೆ ನಡಿ’.. ಎಂದು ಮಗಳಿಗೆ ಹೇಳಿದವಳೇ ತಿಕ್ಕಿದ ಪಾತ್ರೆಗಳನ್ನು ಮನೆಯೊಳಗಿಟ್ಟು ಹವಾಯಿ ಚಪ್ಪಲಿ ಹಾಕಿಕೊಂಡು ಸರ ಸರನೇ ನಡೆದಳು ರಾಧಾಬಾಯಿ.
ಮೂಲೆಯಲ್ಲಿ ಮುದುರಿಸಿಟ್ಟ ಯುನಿಫಾರಂ ಧರಿಸಿ ಬಾಡಿದ ಮುಖದಿಂದಲೇ ಮನೆಯಿಂದ ಹೊರಗಡಿ ಇಟ್ಟಳು ಸುಗ್ಗಿ.
“ಮಗಾ ಬಾ ಇಲ್ಲಿ’ ಮುದುಕಿ ಮೊಮ್ಮಗಳತ್ತ ಕೈಸನ್ನೆ ಮಾಡಿತು. ಹತ್ತು ರೂಪಾಯಿ ನೋಟೊಂದನ್ನು ಸುಗ್ಗಿಯ ಕೈಲಿಟ್ಟು ‘ಪುಟ್ಯಾನ ಅಂಗಡಿಲಿ ಬನ್ನ ತಗೊಂಡಕ್ಯಾಸ ಪೂಲ್ ಕಟ್ಟಿ ಮ್ಯಾಲ ಕುಂತ ತಿಂದ ಬಾಟ್ಲ್ಯಾಗಿನ ನೀರ ಕುಡದ ಹೋಗ’.. ಎಂದು ತಲೆ ಸವರಿತು. ಸುಗ್ಗಿಯ ಮೊಗದಲ್ಲಿ ಹೂವರಳಿದಂತಹದ್ದೊಂದು ನಗು ಅರಳಿತು. ‘ಹೂಂ ಅಜ್ಜಿ ಹಾಂಗ ಮಾಡ್ತೇನಿ, ಆ ಮ್ಯಾಲ ನಾ ಸಾಲಿಗೆ ಹೊಕ್ಕೀನಿ’ ಎನ್ನುತ್ತ ಪುಟ್ಯಾನ ಅಂಗಡಿಯತ್ತ ಧಾವಿಸಿದಳು.
‘ಪುಟ್ಟಣ್ಣಾ ಒಂದ ಬನ್’ ಎನ್ನುತ್ತಾ ದುಡ್ಡನ್ನು ಮುಂದೆ ಚಾಚಿದಳು. ಪುಟ್ಯಾ ಒಂದು ಬನ್ನನ್ನು ಸುಗ್ಗಿಯ ಕೈಲಿಡುತ್ತ ‘ಯಾಕ ಸುಗ್ಗಿ ಮನ್ಯಾಗ ನಾಷ್ಟಾಕ್ಕ ಏನು ಮಾಡಿಲ್ಲೇನು ನಿಮ್ಮವ್ವಾ?’ ಎಂದು ಕೇಳಿದ. ಸುಮ್ಮನೇ ಗೋಣು ಅಲುಗಾಡಿಸಿ ಪುಟ್ಯಾ ಮತ್ತೇನಾದರೂ ಕೇಳುವ ಮೊದಲೇ ಅಂಗಡಿಯಿಂದ ಕಾಲ್ಕಿತ್ತಳು ಸುಗ್ಗಿ. ಅಲ್ಲಿಂದ ಹತ್ತಾರು ಮಾರು ದೂರವಿರುವ ಫೂಲ್‍ನ ಕಟ್ಟೆಯ ಮೇಲೆ ಕುಳಿತು ಗಬ ಗಬನೇ ಬನ್ ತಿನ್ನಲಾರಂಭಿಸಿದಳು. ಕಟ್ಟೆಯ ಅಂಚಿಗೆ ಮಲಗಿದ್ದ ಬಡಕಲು ನಾಯಿಯೊಂದು ಮೆಲ್ಲಗೆ ಮೈ ಕೊಡವಿ ಎದ್ದು ನಿಂತು ಸುಗ್ಗಿ ಬಾಯಿಗಿಡುತ್ತಿದ್ದ ಬನ್ನನ್ನು ನೋಡಿ ಆಸೆಯಿಂದ ಜೊಲ್ಲು ಸುರಿಸಲಾರಂಭಿಸಿತು.
‘ಪಾಪ ನಂದೂ ನಿಂದೂ ಒಂದೇ ಕಥೆ ತಿನಪ್ಪಿ ತಿನ್ನು’ ಎನ್ನುತ್ತ ಬನ್ನಿನ ಒಂದು ಚೂರು ಮುರಿದು ನಾಯಿಯತ್ತ ಎಸೆದಳು ನೀರು ಕುಡಿಯುವಷ್ಟರಲ್ಲಿ ಯಾರೋ ಹೆಗಲ ಮೇಲೆ ಮೈ ಇಟ್ಟಂತೆನಿಸಿ ಬೆಚ್ಚಿದಳು.
‘ಯಾಕ ಇವತ್ತ ನನ್ನ ಬಿಟ್ಟ ಸಾಲಿಗೆ ಹೊಂಟೀಯಲಾ ಸುಗ್ಗಿ’ ಎಂದಳು ಗೆಳತಿ ಪಮ್ಮಿ. ‘ಹೊಟ್ಟಿ ಭಾಳ ಹಸದಿತ್ತು ಪುಟ್ಯಾನ ಅಂಗಡಿಲಿ ಬನ್ ತಗೊಂಡ ತಿಂದೆವ್ವಾ, ಹಸಿವಾದಾಗ ನನಗ ಬ್ಯಾರೆ ಏನೇನೂ ತಲಿಗೆ ಹೋಗಂಗಿಲ್ಲ ನೋಡ’ ಎಂದಳು ಸುಗ್ಗಿ.
ಪಮ್ಮಿಯ ಕಣ್ಣಲ್ಲಿ ಕರುಣೆಯಿತ್ತು, ‘ನೀ ಬಾ ಅಂದ್ರ ಬರವಲ್ಲಿ ನಾಚತಿದೀ, ನಮ್ಮನಿಗೆ ಬಂದಿದ್ರೆ ಬಿಸಿ ಬಿಸಿ ಉಪ್ಪಿಟ್ಟು ಹಾಕಿ ಕೊಡತಿದ್ದೆ ನೋಡವ್ವಾ’….. ಹೀಗೆಲ್ಲ ಮಾತಾಡುತ್ತ ಶಾಲೆಯತ್ತ ಸಾಗಿದರು. ಅತಿ ಸಮೀಪದಲ್ಲೇ ಬಂದ ಸ್ಕೂಟಿಯ ಸವಾರ ‘ಕಭಿ ಕಭಿ ಮೇರೆ ದಿಲ್ ಮೇ ಖಯಾಲ್ ಆತಾ ಹೈ’ ಎಂದು ಹಾಡುತ್ತಾ ಹಲ್ಕಿರಿದಾಗ ಬೆಚ್ಚಿದವಳೇ ಗೆಳತಿಯತ್ತ ಸರಿದಳು ಸುಗ್ಗಿ. ‘ಕ್ಯಾ ಹುವಾ ಮೇರಿ ಜಾನ್’.. ಎಂದು ಪೆಕರು ಪೆಕರಾಗಿ ನಗುತ್ತಾ ಕೇಳಿದ ಹಳದಿ ಅಂಗಿ ಧರಿಸಿದ ಗಾಗಲ್ ಏರಿಸಿದ ಶೋಕಿಲಾಲ. ಗಾಬರಿಯಿಂದ ಗೆಳತಿಯ ಕೈಯನ್ನು ಬಿಗಿಯಾಗಿ ಹಿಡಿದು ಓಡಲಾರಂಭಿಸಿದಳು ಸುಗ್ಗಿ, ಅವಳ ಅವಸ್ಥೆ ನೋಡಲಾರದೇ ತಾನೂ ಹೆಜ್ಜೆಗೂಡಿಸಿದಳು ಪಮ್ಮಿ. ಅವ ವಿಕಾರವಾಗಿ ಕೇಕೆ ಹಾಕಿ ನಗುತ್ತ ಏನೇನೋ ಹಾಡು ಹೇಳುತ್ತ ಸ್ಕೂಟಿಯಲ್ಲಿ ಅವರಿಬ್ಬರ ಬೆನ್ನು ಹಿಂದೆಯೇ ಶಾಲೆಯ ಗೇಟಿನವರೆಗೂ ಬಂದ. ಗೇಟಿನ ಬಳಿ ಮ್ಯಾಥ್ಸ ಸರ್ ಮಾರುತಿ ಈ ಮೂವರನ್ನು ಗಮನಿಸಿದ. ಬೆದರಿದ ಹುಡುಗಿಯರ ಮುಖ ಸಮಸ್ಯೆಯೇನೆಂಬುದನ್ನು ಹೇಳುವಂತಿತ್ತು. ‘ಏ ಯಾವನ್ಲೇ ನೀ ನಮ್ಮ ಸಾಲಿ ಹುಡುಗ್ಯಾರ ಬೆನ್ನ ಹತ್ತೀದಿ’ ಎಂದು ಹುಡುಗನ ಕಾಲರ್ ಹಿಡಿದ ಮಾರುತಿ. ಹುಡುಗ ತಪ್ಪಿಸಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಪಟ್ಟು ಯಶಸ್ವಿಯಾದ, ಅಲ್ಲಿಂದ ಪರಾರಿಯಾದ.
‘ಯಾರ ಅಂವಾ ಗೊತ್ತದೇನು ನಿಮಗ?’ ಎಂದು ಮಾರುತಿಯವರು ಕೇಳಿದಾಗ ಕಂಬನಿದುಂಬಿದ ಸುಗ್ಗಿ ‘ಗೊತ್ತಿಲ್ಲ ಸರ್ ದಿನಾ ಹಿಂಗ ಕಾಡಸ್ತಾನ್ರೀ’ ಎಂದು ತಲೆ ತಗ್ಗಿಸಿಯೇ ಹೇಳಿದಳು.
‘ಎಂತೆಂಥಾ ಮಂದಿ ಇರ್ತಾರ ಹೇಳಾಕ ಬರೂದಿಲ್ಲ. ಸರಿ ಸರಿ ದಿನಾ ಸಾಲಿಗೆ ಇಬ್ರೂ ಜೋಡಿಯಾಗಿ ಬನ್ನಿ, ತಿಳಿತಿಲ್ಲೋ, ನಾಳೆ ಅಂವಾ ಬಂದನಂದ್ರ ಹಿಡಿದು ಬುದ್ದಿ ಹೇಳತೇವಿ, ಈಗ ಕ್ಲಾಸಿಗೆ ನಡ್ರಿ’ ಎಂದರು. ಡವಗುಟ್ಟುವ ಎದೆಯನ್ನು ತಹಬಂದಿಗೆ ತರುತ್ತಾ ಇಬ್ಬರೂ ಕ್ಲಾಸಿನೊಳಗೆ ನಡೆದರು. ಕ್ಲಾಸಿನಲ್ಲಿ ಪಾಠ ಕೇಳುತ್ತಿದ್ದರೂ ಯಾವುದೂ ತಲೆಗಿಳಿಯದ ಸುಗ್ಗಿ ಆ ದರಿದ್ರದವನು ಯಾರೋ ಏನೋ, ಯಾಕೆ ನನ್ನ ಬೆನ್ನು ಬಿದ್ದಿದ್ದಾನೋ ….ಸಾಯಲಿ ಎಂದು ಮನದಲ್ಲೇ ಶಪಿಸಿದಳು.
***
ಸುಗ್ಗಿ ಗಣಿತದ ಹೋಮ್ವರ್ಕ ಮುಗಿಸಿದಾಗ ರಾತ್ರಿ ಹನ್ನೊಂದೂವರೆ. ನೋಟ್ ಬುಕ್, ಬುಕ್ಕ ಎರಡನ್ನೂ ಬ್ಯಾಗಿನಲ್ಲಿ ತುಂಬುತ್ತಾ ತಾಯಿಯ ಕಡೆಗೆ ಒಮ್ಮೆ ದೃಷ್ಟಿ ಹಾಯಿಸಿದಳು. ಇಷ್ಟ ಝಳಾ ಅದ ಆದ್ರೂ ಕೌದಿ ಹೊದ್ದ ಮಕ್ಕೋಡಾಳಲಾ ನಮ್ಮವ್ವ. ಮಕ್ಕೊಂಡಾಗ ಮಾತ್ರ ಈಕಿ ಶಾಂತ ಕಾಣಿಸ್ತಾಳ. ಎಚ್ಚರಿದ್ದೋಟೂ ಹೊತ್ತೂ ಮಾತು ಮಾತು ಮಾತು… ಎಂದು ತುಟಿ ಮೆಲ್ಲಗೆ ಅಲುಗಿಸಿ ಗೊಣಗಿದಳು. ಮೆಲ್ಲನೆ ತಾಯಿಯ ಪಕ್ಕದಲ್ಲಿ ಮೈಚಾಚಿದಳು. ಮೂಲೆಯಲ್ಲ್ಲಿ ಮಲಗಿದ್ದ ಮಾಯಿರಿಯ ಗ್ರ.. ಬುರ್ ಗ್ರ.. ಬುರ್ ಎಂಬ ಗೊರಕೆಯ ಸದ್ದು ಕಿವಿಳೊಳಗೆ ಡ್ರಿಲ್ ಹೊಡೆಯುತ್ತದ್ದಂತೆನಿಸಿ ಮತ್ತೊಂದು ಪಕ್ಕ ತಿರುಗಿ ಹೊದ್ದ ಚಾದರದ ತುದಿಯನ್ನು ಕಿವಿಯೊಳಗೆ ತುರುಕಿಕೊಂಡಳು.
‘ನಿನ್ನಟ$ ಬೆಳದ ನಿಂತ ಮಗಳದಾಳ ಅನ್ನೋ ದ್ಯಾಸ ಇಲ್ಲ. ಮತ್ತ ಮದವಿ ಮಾಡ್ಕೋತಿನಿ ಅನ್ನತೀಯಲ್ಲಾ’ ಎಂದು ಅವ್ವನಿಗೆ ನಿನ್ನೆ ಅಜ್ಜಿ ಬೈದಿದ್ದು ನೆನಪಾಗಿ ಹೊಟ್ಟೆಯಲ್ಲಿ ತಳಮಳ ಶುರುವಾಯಿತು. ಸತ್ತ ಅಪ್ಪನ ನೆನಪು ಕಣ್ಣೀರಾಗಿ ಹರಿಯಿತು..
ಓಣ್ಯಾಗಿನ ಎಷ್ಟೋ ಮಂದಿ ಕುಡುಕರಾಗಿದ್ರೂ ಅಪ್ಪ ಅಂಥವರ ಸಹವಾಸಕ್ಕೆ ಬಿದ್ದಿರಲಿಲ್ಲ. ನಿತ್ಯ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ. ವಾರಕ್ಕೊಂದು ಸಲ ದುಡಿದ್ದಿದ್ದನ್ನು ತಂದವನೇ ತಾನೊಂದಿಷ್ಟು ಹಣ ಇಟ್ಟುಕೊಂಡು ಉಳಿದಿದ್ದನ್ನು ಅರ್ಧರ್ಧ ಮಾಡಿ ಹೆಂಡತಿಯ ಕೈಗೆ ತಾಯಿಯ ಕೈಗೆ ಹಾಕಿಬಿಡುತ್ತಿದ್ದ. ಸುಗ್ಗಿಯನ್ನು ಪ್ರತೀ ಶನಿವಾರ ಸೈಕಲ್ಲಿನ ಮೇಲೆ ಕೂಡಿಸಿಕೊಂಡು ನುಗ್ಗಿಕೆರಿ ಹನುಮಪ್ಪನ ಗುಡಿಗೆ ಕರೆದುಕೊಂಡು ಹೋಗುತ್ತಿದ್ದ. ಆಗ ಅವ್ವಿಯೂ ಅಷ್ಟೇ ಎರಡು ಮನೆಯಲ್ಲಿ ಭಾಂಡಿ ಅರಭಿ ತೊಳೆದು ಎರಡು ತಾಸಿನಲ್ಲಿ ಮನೆಗೆ ಹಿಂದಿರುಗಿ ಬಂದು ಬಿಡುತ್ತಿದ್ದಳು.
ಸುಗ್ಗಿಗೂ ಅವಳಪ್ಪನಿಗೂ ಇಷ್ಟವಾದ ಎಣ್ಣೆಗಾಯಿಪಲ್ಯ ಬಿಸಿ ರೊಟ್ಟಿ ಮಾಡಿ ಉಣ್ಣಾಕ ಹಾಕತಿದ್ಳು ರಾಧಾಬಾಯಿ. ಮಾಯೀರಿಯೂ ಹೂ ಮಾರಲಿಕ್ಕೆ ಹೋಗತಿದ್ದಳು. ಆಕೀನೂ ಕಾಯಿಪಲ್ಲೆ ಹಣ್ಣು ತರಕಾರಿ ಚುಮ್ಮುರಿ…. ಹೀಂಗ ಏನಾರ ತರತಿದ್ದಳು. ಆಗೀಗ ಅಜ್ಜಿ ಅವ್ವ ಅಪ್ಪಾ ಇಲ್ಲದಾಗ ಜಗಳಾಡೋದು ಬಿಟ್ರೆ ಮನೆ ಎಷ್ಟ ಶಾಂತ ಇರತಿತ್ತು. ಮನೆಯಲ್ಲಿ ಹೊಟ್ಟೆ ತುಂಬಾ ತಿನ್ನಲಿಕ್ಕೆ ಏನೆಲ್ಲ ಇರತಿದ್ವು.. ಧೀರ್ಘವಾಗಿ ಉಸಿರುಗರೆದು ಮತ್ತೊಂದು ಮಗ್ಗುಲಾಗಿ ನಿದ್ದೆಗಾಗಿ ಹಂಬಲಿಸಿದಳು, ಮಾಯದ ಗಾಯವು ಆಗಾಗ ನೋವು ಕೊಡುವಂತೆ ಸುಗ್ಗಿಗೆ ಮತ್ತೆ ನೆನಪಾಯ್ತು ಆ ದಿನ…
‘ಇಂದ ಯಾಕೋ ಮೈ ಎಲ್ಲಾ ಜಡಾ ಅನ್ನಿಸ್ತತಿ, ಕೆಲ್ಸಕ್ಕ ಹೋಗೂದು ಬ್ಯಾಡಾ ಅನ್ನೂ ಹಾಂಗಾಗೇತಿ’ ಅಂದಿದ್ದ ಅಪ್ಪನ ಮಾತು ಕೇಳಿ ಅವ್ವ ಅವನ ಹಣೆ ಮುಟ್ಟಿ ನೋಡಿ ಗಾಬರಿಯಾದಳು. ‘ಜ್ವರಾ ಬಂದತಲ್ರೀ ಇಂದ ಒಂದಿನಾ ಕೆಲ್ಸಾ ತಪ್ಪಿಸಿಬಿಡ್ರೆಲಾ’ ಎಂದಳು.
‘ಮೂರೇ ದಿನದಾಗ ಅಪಾರ್ಟಮೆಂಟ್ ಓಪನಿಂಗ್ ಐತಿ, ಹೊರಗಿನ ಪೇಂಟಿಂಗ್ ಮುಗಿಸಾಕ ಬೇಕು, ಯಾರಾರ ಕೆಲ್ಸಾ ತಪ್ಪಿಸಿದರ ಮತ್ತ ಕೆಲಸಾ ಕೊಡಂಗಿಲ್ಲ ಅಂತ ನಿನ್ನೆ ನಮ್ಮ ಮಿಸ್ತ್ರೀ ತಾಕೀತ್ ಮಾಡಿ ಕಳಿಸಿದಾನೇಳು. ಒಂದ ಕಪ್ಪು ಬಿಸಿ ಬಿಸಿ ಚಾ ಕೊಡು ಮೊದ್ಲೀಕ ಸೇರಿದಷ್ಟು ಉಪ್ಪಿಟ್ಟ ತಿಂದು ಒಂದ ಗುಳಗಿ ತಗೊಂಡು ಕೆಲ್ಸಕ್ಕ ಹೋಕ್ಕೀನಿ’ ಎಂದು ನಿಟ್ಟುಸಿರಿಟ್ಟು ಬ್ರಷ್ ಹಿಡಿದು ಬಚ್ಚಲಿನತ್ತ ನಡೆದಿದ್ದ ಅಪ್ಪ. ಅವ್ವನ ಕಣ್ಣಲ್ಲಿ ಅಸಹಾಯಕತೆ ಇತ್ತು.
ಚಹಾ ಕುಡಿದವನೇ ಉಪ್ಪಿಟ್ಟಿನ ತಟ್ಟೆ ಕೈಗೆತ್ತಿಕೊಂಡ. ಒಂದು ಚಮಚ ಬಾಯಿಗಿಟ್ಟವನೇ ‘ಯಾಕೋ ಇದು ಸೇರಾಕಹತ್ತಿಲ್ಲ. ಹೊಟ್ಟಿ ಹಸಿವಾದಾಗ ಕೆಲ್ಸಾ ಮಾಡೂ ಬಿಲ್ಡಿಂಗ ಮುಂದ ದರ್ಶಿನಿ ಐತಿ ಅಲ್ಲಿ ಇಡ್ಲಿ ತಿನ್ನತೇನಿ ಬೈಬ್ಯಾಡ ಇದನ್ನ ತಗೋ’ ಎಂದು ಉಪ್ಪಿಟ್ಟಿನ ತಟ್ಟೆಯನ್ನು ಅವ್ವನ ಕೈಗಿತ್ತಿದ್ದ. ಅದ್ಯಾವುದೋ ಚೀಟಿ ಹರಿದು ಒಂದು ಗುಳಿಗೆಯನ್ನು ನುಂಗಿ ಸುಗ್ಗಿಯತ್ತ ಕೈಬೀಸಿ ಹೊರಟ.
ಅಪ್ಪ ಭಲೇ ಧೈರ್ಯಸ್ಥ. ಅಂದು ಹಲಗೆಗೆ ಕಟ್ಟಿ ಅದರೊಳಗೆ ಅಪ್ಪನನ್ನು ಕೂಡಿಸಿ ಹನ್ನೊಂದನೇ ಅಂತಸ್ತಿನ ಕಟ್ಟಡದ ಹೊರಭಾಗಕ್ಕೆ ಬಣ್ಣ ಹಚ್ಚಿಸುತ್ತಿದ್ದರಂತೆ. ಜ್ವರ ಇದ್ದಿದ್ದರಿಂದಲೋ ಏನೋ ಒಂದು ತಾಸು ಬಣ್ಣ ಹೊಡೆದವನು ಇದ್ದಕ್ಕಿದ್ದಂತೆ ಆಯ ತಪ್ಪಿ ಕೆಳಗಡೆಗೆ ಹಾಕಿದ ಟೈಲ್ಸ ನೆಲಕ್ಕೆ ಬಿದ್ದು ತಲೆಯೊಡೆದು ತಕ್ಷಣ ಸತ್ತನಂತೆ . ಅಂಬ್ಯುಲೆನ್ಸಿನಲ್ಲಿ ಹೆಣ ಹಾಕಿಕೊಂಡು ಬಂದು ಮನೆಯ ಮುಂದೆ ಇಳಿಸಿದ ಮೇಸ್ತ್ರಿ ನಡೆದಿದ್ದನ್ನೆಲ್ಲ ಹೇಳಿದ್ದ.
ಅವ್ವ ಅಜ್ಜಿ ಇಬ್ಬರೂ ಬೋರ್ಯಾಡಿ ಅಳುತ್ತಿದ್ದರು. ಮೊದಲಬಾರಿಗೆ ಸಾವನ್ನು ನೋಡುತ್ತಿದ್ದ ಸುಗ್ಗಿಗೆ ಏನೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಒಂದೆಡೆ ಕಲ್ಲುಬಂಡೆಯಂತೆ ಕುಳಿತಿದ್ದವಳತ್ತ ಬಂದ ಪಕ್ಕದ ಮನೆಯ ಸಾವಂತ್ರಿ ‘ಅಪ್ಪ ಸತ್ತನಾ, ಇನ್ನು ಸಿಗೂದಿಲ್ಲ ಅಂತ ಗೊತ್ತಾಗವಲ್ದೇನ ಹುಚ್ಚಪ್ಯಾಲಿ, ಹೆತ್ತ ಮಕ್ಕಳು ನಾಲ್ಕ ಹನಿ ಕಣ್ಣೀರರೆ ಹಾಕಬೇಕು, ಅಂದಾಗಲೇ ಸತ್ತವ್ರಿಗೆ ಮುಕ್ತಿ ಎಂದಳು!
ಬೆಪ್ಪಾಗಿ ಕುಳಿತಿದ್ದ ಸುಗ್ಗಿ ಅಳಲಾರಂಭಿಸಿದಳು. ಒಮ್ಮೆ ಶುರುವಾದ ಅಳು ನಲ್ಲಿ ಕಿತ್ತು ಬಿದ್ದ ಪೈಪಿನ್ಯಾಗ ನೀರು ಹರಿದ ಹಂಗ ಹರಿಯಾಕ ಚಾಲೂ ಆತು. ಓಣಿಯ ಜನರು ಮೇಸ್ತ್ರಿಯನ್ನು ಮುತ್ತಿಕೊಂಡು ಗದ್ದಲ ಮಾಡಲಾರಂಭಿಸಿದರು. ಐದು ಲಕ್ಷನರ ದುಡ್ಡ ಕೊಡು ಅವನ ಹೆಂಡ್ತಿಗೆ ಮಗಳಿಗೆ, ಜೀಂವಾ ಹೋಗೂ ಹಂಗ ದುಡಿಸೀದಿ. ಇಂಥಾ ಅಡ್ನಾಡಿ ಕೆಲ್ಸಾ ಮಾಡಿಸಂವಾ ಜೀವದ ಮ್ಯಾಲ ಒಂದ ಎಲ್ಲೈಸಿ ಪಾಲೀಸಿನಾರ ಮಾಡಿಸಬೇಕೋ ಬ್ಯಾಡೊ,.. ಎನ್ನುತ್ತಾ ಜೋರು ಜೋರಾಗಿ ಕೂಗಾಡುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ… ಯಾಕೋ ಏನೋ ಅವ್ವನೂ ಅಳು ನಿಲ್ಲಿಸಿ ಗುಂಪಿನ ಜೊತೆ ಸೇರಿಸಿಕೊಂಡಳು.
‘ಎಂಥಾ ಚೊಲೋ ಕೆಲಸಗಾರ ಈ ಬಸಪ್ಪ, ಅವನ್ನೇನು ನಾನು ದುಗಿಸಿ ಕೊಂದೆನೇನು? ನನ್ನ ಕಡೆ ಪರಿಹಾರಕ್ಕ ಕೊಡಾಕ ಅಷ್ಟೊಂದ ರೊಕ್ಕ ಎಲ್ಲೈತಿ? ಅಷ್ಟೋ ಇಷ್ಟೋ ಕೊಡತೇನಿ, ನಾ ಬಡ ಮಿಸ್ತ್ರಿ ಅದೀನಿ, ನೀವ ನನ್ನ ಕಾಪಾಡಬೇಕು’ ಎಂದು ಮೇಸ್ತ್ರಿ ಇದ್ದಕ್ಕಿದ್ದಂತೆ ಅವ್ವನ ಕಾಲಿಗೆ ಬಿದ್ದು ಜೋರಾಗಿ ಅಳತೊಡಗಿದ. ತಾಸೊತ್ತಿನ ತನಕ ಜಗಳ ಮುಂದುವರಿಯಿತು. ಕಟ್ಟೆಯ ಮೇಲೆ ತಲೆ ಒಡೆಸಿಕೊಂಡ ಅಪ್ಪ ಶಾಂತವಾಗಿ ಮಲಗಿದ್ದ, ಅಜ್ಜಿ ನೆಲ ಬಡಿಯುತ್ತ ಅಳುತ್ತಿದ್ದಳು ಕೆಟ್ಟ ಶಬ್ದಗಳಲ್ಲಿ ಮೇಸ್ತ್ರಿಗೆ ಬೈಯುತ್ತಿದ್ದಳು.
ತಾಸೊತ್ತಿನ ಮೇಲೆ ಮೇಸ್ರ್ತಿ ‘ಈಗ ಒಂದು ಲಕ್ಷ ಕೊಡುತ್ತೇನೆ ಮಗಳ ಲಗ್ನದ ಸಮಯದಲ್ಲಿ ಒಂದು ಲಕ್ಷ ಕೊಡುತ್ತೇನೆ’ ಎಂದು ಒಪ್ಪಿಕೊಂಡ ನಂತರ ಅಪ್ಪನನ್ನು ಚಟ್ಟ ಕಟ್ಟಿ ಮಲಗಿಸಿದರು….ಮೇಸ್ತ್ರೀ ಹತ್ತು ಸಾವಿರ ರೂಪಾಯಿ ಕೊಟ್ಟ. ಅಪ್ಪನನ್ನು ಅಂತ್ಯ ಸಂಸ್ಕಾರಕ್ಕೆ ಓಣಿಯ ಜನರೆಲ್ಲ ನೆರವಾದರು.
ಅಪ್ಪ ಸತ್ತ ನಂತರ ಅದೆಷ್ಟೋ ದಿನಗಳವರೆಗೂ ಅವ್ವ ಮೇಸ್ತ್ರಿ ಬರಬಹುದು ಹಣ ಕೊಡಬಹುದು ಎಂದು ಕಾದಳು. ಮೇಸ್ತ್ರೀಯೂ ಬರಲಿಲ್ಲ ಹಣವೂ ಸಿಗಲಿಲ್ಲ. ಮೇಸ್ತ್ರಿ ನಾಪತ್ತೆಯಾದ ಸುದ್ದಿ ಸಿಕ್ಕಿತು ಅಷ್ಟೇ. ‘ನನ್ನ ಹಣೆಬಾರ ಇಷ್ಟೇ’ ಎನ್ನುತ್ತಾ ಮೇಸ್ತ್ರಿಯನ್ನು ಶಪಿಸುತ್ತ ಅವ್ವ ಮತ್ತೆ ಕೆಲಸಕ್ಕೆ ಹೊರಟಳು. ಹೆಚ್ಚುವರಿಯಾಗಿ ಮತ್ತೂ ನಾಲ್ಕು ಮನೆಯ ಕೆಲಸ ಹಿಡಿದುಕೊಂಡಳು. . ಅಷ್ಟರಲ್ಲಿ ಸುಗ್ಗಿಯ ನೆನಪಿಗೇ ಭಂಗ ಬಂತು.
ರಾತ್ರಿಯ ನೀರವ ಮೌನವನ್ನು ಮುರಿಯುವಂತೆ ಸೈಲೆನ್ಸರ್ ಇಲ್ಲದ ಬೈಕಿನ ಸಪ್ಪಳ ಯಾರೋ ಕೇಕೆ ಹಾಕುವ ಸದ್ದು ಕೇಳಿ ಅವಳ ಬೆನ್ನು ಹುರಿಯಲ್ಲಿ ಚಳಿ ಓಡಿದಂತಾಯ್ತು, ಭಯದಿಂದ ಕೌದಿಯನ್ನು ಮತ್ತಷ್ಟು ಬಿಗಿಯಾಗಿ ಮೈಗೆ ಸುತ್ತಿಕೊಂಡು ನಿದ್ದೆಗೆ ಜಾರಿದಳು.
*****
‘ರೆಡಿ ಆಗಿಯೇನು ಸುಗ್ಗಿ. ನಾ ಅಂತೂ ರೆಡಿ ಆಗಿ ಬಂದೇನಿ’ ಎನ್ನುತ್ತಾ ಪಮ್ಮಿ ಮನೆಯ ಮುಂಬಾಗಿನಿಂದ ಇಣುಕಿ ನೋಡಿದಳು.
‘ಬಂದೆ ತಡಿವ್ವಾ’ ಎನ್ನುತ್ತ ಹೊಸ್ತಿಲು ದಾಟಿದಳು ಸುಗ್ಗಿ.
‘ಎಲ್ಲಾ ಹೋಮವರ್ಕ ಮುಗಿಸೀಯೇನು’? ಕೇಳಿದಳು ಪಮ್ಮಿ
‘ಹೂನವ್ವಾ, ಒಂದ ದಿನ ಬಾಕಿ ಉಳಿಸಿಕೊಂಡರ ಮಾರನೇ ದಿನಾ ಜೀಂವಾ ಹೋದಂಗ ಆಗತೇತಿ, ಅಷ್ಟ ಬರ್ಯೂದ ಕೊಡತಾರ ನಮ್ಮ ಸಾಲಿ ಟೀಚರ್ಗೋಳು. ಪುಟ್ಯಾನ ಅಂಗಡಿ ದಾಟಿದ ಕೂಡಲೇ ಕೊಂಚ ಗಾಬರಿಯಿಂದ ಸುತ್ತಮುತ್ತೆಲ್ಲ ಕತ್ತು ತಿರುಗಿಸಿ ಸುಗ್ಗಿ ನೋಡುವಾಗ ಯಾಕ್ಲೆ ಏನಾತು? ಹಂಗ್ಯಾಕ ನೋಡಾಕ ಹತ್ತೀದಿ ನಿನ್ನ ಪಾಗಲ್ ಪ್ರೇಮಿ ಹುಡುಕಾಕ ಹತ್ತೀಯೇನು? ಎನ್ನುತ್ತಾ ಕೀಟಲೆ ದನಿ ತೆಗೆದಳು, ನನಗ ಪ್ರಾಣ ಸಂಕಟಾ, ನಿ ಏನಾರ ಅಂತಿ.. ಗಟ್ಟಿಯಾಗಿ ಕೇಳಿದಳು.
‘ಇಲ್ಲ ಬಿಡೂ ಸುಗಿ’್ಗ ಹಂಗ ತಮಾಷೆಗೆ ಅಂದೆವಾ. ಅಂದ ಮಾರುತಿ ಸರ್ ಹಿಡಿದು ಬೈಯ್ದಾರಲ್ಲ, ಅಂಜಿಕಿ ಆಗಿರ್ತತಿ. ಇನ್ನ ಬರಂಗಿಲ್ಲೇನೋ ನೋಡು ಹಿಂದಕ್ಕ ಎಲ್ಲೂ ಕಾಣಂಗಿಲ್ಲ. ಎಂದಳು ಪಮ್ಮಿ.
ನಿತ್ಯದ ತಲೆನೋವಾಗಿದ್ದವ ಇಂದು ಕಾಣಲಿಲ್ಲ ಎಂದು ಸಮಾಧಾನವಾಗಿ ಶಾಲೆಗೆ ಹೋದರು ಸುಗ್ಗಿ ಹಾಗೂ ಪಮ್ಮಿ. ಈ ವರ್ಷದ ಎಲ್ಲಾ ವಿಷಯಾ ಸರ್ಯಾಗಿ ಮನದಟ್ಟು ಮಾಡಿಕೋರಿ. ಹತ್ತನೇತ್ತಾಕ್ಕ ಹೋದ್ರಿ ಅಂದ್ರ ಹಿಂದಲ ಕ್ಲಾಸಿನ ವಿಷಯದ ಮ್ಯಾಲೂ ಪ್ರಶ್ನೆಗಳು ಬಂದಿರ್ತಾವ, ಎಂದು ಅವತ್ತಿನ ಸಂಜೆಯ ಕಾರ್ಯಕ್ರಮದ ಭಾಷಣದಲ್ಲಿ ಪ್ರಿನ್ಸಿಪಾಲರು ಹೇಳಿದ್ದರು.
ಮುಂದೆ ಅದೆಷ್ಟೋ ದಿನ ಹುಷ್ ಹುಷ್ ಸಪ್ಪಳ ಕೇಳದೇ ಸುಗ್ಗಿ ಆ ಪಾಗಲ್ ಪ್ರೇಮಿಯನ್ನು ಮರೆವಿನ ಕೂಪಕ್ಕೆ ನೂಕಿದಳು.
ಅದೊಂದು ದಿನ ಅವ್ವ ಅಜ್ಜಿಯ ಜಗಳ ಜೋರಾಗಿ ನಡೆದಿತ್ತು. ‘ಆ ಜಾತಿಯಂವನ್ನ ಮದ್ವಿ ಮಾಡಿಕೋತಿನಿ ಅಂತೀಯಲಾ ನಿನಗೇನರೆ ಬುದ್ದಿ ಗಿದ್ದಿ ಐತೇನು? ಅವಂಗ ಹೆಂಡ್ತಿ ಅದಾಳು ಮಕ್ಕಳೂ ಅದಾರು, ನೀ ಇಟ್ಗೊಂಡಾಕಿ ಅನ್ನಿಸಿಕೋತಿ ನಾಳೆ ಅಂವಾ ನಿನ್ನ ಮ್ಯಾಲ ಕಣ್ಣ ಹಾಕಿದಂಗ ನಿನ್ನ ಮಗಳ ಮ್ಯಾಲ ಕಣ್ಣು ಹಾಕಿದರೆ ಏನ ಮಾಡ್ತಿ?’ ಅಜ್ಜಿ ಕೇಳಿದರೆ ‘ಆದ್ರ ಆಗ್ಲಿ ,ಇಟಗೊಂಡಾಕಿ ಆದ್ರೂ ಆಗ್ಲಿ. ವರುಷಾ ಎರಡು ವರುಷದಾಗೆ ನೀನೂ ಸತ್ತು, ಸುಗ್ಗಿಗೂ ಮದ್ವಿ ಮಾಡಿದ ಮ್ಯಾಲ ನಾ ಒಬ್ಬಾಕಿ ಹೆಂಗಿರಲಿ?’ ಎಂದು ಮರು ಪ್ರಶ್ನೆ ಹಾಕಿದ್ದಳು ರಾಧಾಬಾಯಿ!
‘ಮನೆ ಹಾಳಿ… ನಾಚ್ಗಿ ಬರಂಗಿಲ್ಲೇನು ನಿನಗ’ ಎಂದು ಒದರಾಡಿದ ಅಜ್ಜಿ ಸತ್ತ ಮಗನ ಗುಣಗಾನ ಮಾಡಿದಳು. ಅಂಥಾವನ ಹೆಂಡ್ತಿಯಾಗಿ ಬಾಳಿದಕಿ ಹಿಂಗ ಮಾಡತೀದಿ ಈಗ ಎಂದೆಲ್ಲ ಬಡಬಡಿಸಿದಳು. ಮರುದಿನ ಬೆಳಿಗ್ಗೆ ಮೆತ್ತಗೆ ಸುಗ್ಗಿ ಮಲಗಿದಲ್ಲೇ ಬಂದು ಕೆನ್ನೆ ತಟ್ಟಿದಳು ಮಾಯೀರಿ. ‘ಯಾಕ ಅಜ್ಜಿ ಇನ್ನೂ ಬೆಳಗಾಗಿಲ್ಲ ಯಾಕ ಏಳಿಸೀದಿ?’ ಎಂದು ಸುಗ್ಗಿ ತುಸು ಮುನಿಸಿನಿಂದಲೇ ಕೇಳಿದಳು. ‘ಇದು ಇನ್ನ ಮ್ಯಾಲ ನಿನಗ’ ಎಂದು ಸದಾ ತಾನು ಹಾಕಿಕೊಳ್ಳುತ್ತಿದ್ದ ಹರಳಿನೋಲೆಯನ್ನು ಸುಗ್ಗಿಯ ಕೈಗಿತ್ತಳು ಮಾಯೀರಿ. ಅವ್ವ ಎಷ್ಟೊಂದು ಸಲ ‘ಒಂದು ದಿನಾನಾರೆ ಕೊಡು ನನಗ ನಿಮ್ಮ ಕಿವ್ಯಾಗಿದ್ದ ಓಲೆ’ ಎಂದರೂ ಒಂದು ದಿನವೂ ಅವುಗಳನ್ನು ಅವ್ವನಿಗೆ ಕೊಡದ ಅಜ್ಜಿ ತನಗೆ ಕೊಡುತ್ತಿದ್ದಾಳಲ್ಲ ಎಂದು ಹೆಮ್ಮೆಯಾಯ್ತು ಸುಗ್ಗಿಗೆ. ‘ನಾ ಹೊರಗ ಹೋಕ್ಕೇನಿ ಬಾಗ್ಲಾ ಹಾಕಿಕೋ’ ಎಂದಳು ಮಾಯೀರಿ. ‘ನಾನೂ ಬರಲೇನು ನಿನ್ನ ಜೋಡಿ ಅಜ್ಜಿ” ಎಂದು ಸುಗ್ಗಿ ಕೇಳಿದಾಗ ಬೆಚ್ಚಿ ಬಿದ್ದ ಮಾಯೀರಿ ‘ಬ್ಯಾಡೇಳು ನಾ ಒಬ್ಬಾಕಿನೇ ಬಂದೇನಿ ಒಬ್ಬಾಕಿನೇ ಹೋಗ್ತೇನಿ, ನಿನ್ನಪ್ಪ ಸಿಗತಾನ ನನಗ’ ಎಂದು ನಿಗೂಢವಾಗಿ ಹೇಳಿ ನೋವಿರುವ ತನ್ನ ಬಲಗಾಲನ್ನು ಸೊಟ್ಟ ಸೊಟ್ಟಗಿಡುತ್ತಾ ಹೊರ ನಡೆದಳು. ಬಾಗಿಲು ಹಾಕಿಕೊಂಡ ಸುಗ್ಗಿ ಮತ್ತೆ ಮಲಗಿದಳು. ಬೆಳಿಗ್ಗೆ ಎಂಟುಗಂಟೆಯ ಸುಮಾರಿಗೆ ಓಣಿಯ ಜನರು ರೈಲ್ವೆ ಹಳಿಯತ್ತ ಓಡಿ ಹೋಗುತ್ತಿದ್ದರು. ‘ಯಾಕ ಏನಾತು? ಹಿಂಗ್ಯಾಕ ಓಡತೀರಿ’ ಎಂದು ಕೇಳಿದಳು ರಾಧಾಬಾಯಿ. ನಿಮ್ಮತ್ತಿ ಮಾಯೀರಿ ಆರೂವರೆ ರೈಲ ಬರೂ ಹೊತ್ತಿನ್ಯಾಗ ಹಳಿ ಮ್ಯಾಲ ಮಕ್ಕೊಂಡಿದ್ದಳಂತ ರುಂಡ ಮುಂಡಾ ಬ್ಯಾರೆ ಆಗೇದಂತ. ಆಕಿನ್ಯಾಕ ಮನಿಯಿಂದ ಹೋಗಗೊಟ್ಟಿ ಈಗ ನಡಿ ಎಂದು ಗಡಬಡಿಸಿದಳು ಎಂದು ಸಾವಂತ್ರಿ. ಅವ್ವ ಗಾಬರಿಯಿಂದ ನಿಂತಲ್ಲೇ ಕುಸಿದಳು.
***
ಅಜ್ಜಿಯ ಭೀಕರ ಸಾವಿನಿಂದ ಸುಧಾರಿಸಿಕೊಳ್ಳಲು ಕಷ್ಟಪಡುತ್ತಿದ್ದಳು ಸುಗ್ಗಿ. ರಾತ್ರಿ ಆಗಾಗ ಬೆಚ್ಚಿ ಬೀಳುತ್ತಿದ್ದಳು. ಮೊದಲಿನಂತೆ ಮನವಿಟ್ಟು ಓದುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ ಅವಳಿಗೆ. ನಿನ್ನ ಆಶ್ರಮಕ್ಕೆ ಸೇರಿಸ್ತೀನಿ ಸುಗ್ಗಿ. ಅಲ್ಲಿ ಊಟಾ ವಸತಿ ಎಲ್ಲಾ ಕೊಟ್ಟು ಓದಿಸ್ತರಂತ ಅಪ್ಪಾ ಅಮ್ಮ ಇಲ್ಲದಾವ್ರು, ಒಂಟಿ ಪಾಲಕರ ಮಕ್ಳನ್ನ ಸೇರಿಸಿಕೊಳ್ತಾರಂತ. ನಾ ಕೆಲ್ಸಕ್ಕ ಹೋದಾಗ ನೀ ಒಬ್ಬಾಕಿನೇ ಆಗ್ತಿ, ಓಣ್ಯಾಗ ಮಂದಿ ಸರೀ ಇಲ್ಲ, ದೊಡ್ಡಾಕಿ ಬ್ಯಾರೆ ಆಗೀದಿ ಇಲ್ಲಿ ಕುಡುಕರ ಕಾಟ ಭಾಳ ಐತಿ ಅಂದಳು ರಾಧಾಬಾಯಿ.
‘ಓಣ್ಯಗಿನ ಮಂದಿ ಸರಿ ಇಲ್ಲೋ ನಿನಗ ಮದ್ವಿ ಮಾಡಿಕೋಬೇಕಾಗೇತೋ ಅವ್ವಾ?” ಎಂದು ಹರಿತವಾಗಿ ಕೇಳಬೇಕೆನಿಸಿದರೂ ಕೇಳಲಾಗದೆ ತಾಯಿಯನ್ನು ದುರುದುರುನೇ ನೋಡಿ ಸ್ಕೂಲ್ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಸರ ಸರನೇ ಹೊರ ನಡೆದಳು ಸುಗ್ಗಿ. ಪಮ್ಮಿಯನ್ನು ಕರೆಯಬೇಕೆಂಬುದೂ ಕೂಡಾ ಅವಳಿಗಂದು ಮರೆತು ಹೋಗಿತ್ತು.
ಅಪ್ಪಾ ಅಜ್ಜಿ ಇಬ್ರೂ ಸತ್ತು ಹೋದ್ರು. ಈಗ ಅವ್ವಗೂ ನಾ ಬ್ಯಾಡಾಗೀನೇನು?’ ಎಂದು ಕಣ್ಣೀರನ್ನೊರೆಸಿಕೊಳ್ಳುತ್ತಾ ಶಾಲೆಯತ್ತ ಹೆಜ್ಜೆ ಹಾಕಿದಳು.
‘ಏಯ್ ಹುಷ್ ಹುಷ್’ ಗಾಡಿ ಪಕ್ಕದಲ್ಲೇ ಬಂದಾಗ ಸುಗ್ಗಿ ಗಾಬರಿಯಾದಳು. ‘ಏಯ್ ಹತ್ತು ಗಾಡಿ ನಾ ನಿನ್ನ ಮದುವಿ ಮಾಡಿಕೋತಿನಿ, ನನ್ನ ಗೆಳ್ಯಾರ ಜೋಡಿ ನಿನ್ನ ಕರಕೊಂಡು ಬರತೀನಿ ಅಂದೇನಿ’ ಎಂದ ಅದೇ ಹಳದಿ ಅಂಗಿಯಂವಾ.
‘ನಾ ಒಲ್ಲೆ’ ಎಂದು ಸುಗ್ಗಿ ಗಾಬರಿಯಿಂದ ಭರ ಭರನೇ ನಡೆಯತೊಡಗಿದಳು. ಅವನು ಜೊತೆಯಲ್ಲೇ ಗಾಡಿ ಓಡಿಸುತ್ತ ಬಂದು ಅವಳ ಎಡಗೈಯನ್ನು ಬಿಗಿಯಾಗಿ ‘ಹತ್ತತೀ ಏನಿಲ್ಲೋ ನನಗ ನಿನ್ನ ಮ್ಯಾಲ ಭಾಳ ಮನಸ್ಸಾಗೇದ’ ಅಂದ. ಸುಗ್ಗಿಗೆ ಸಿಟ್ಟು ನೆತ್ತಿಗೇರಿತ್ತು. ಬಲಗೈಯಿಂದ ರಪ್ಪನೇ ಅವನ ಕೆನ್ನೆಗೆ ಬಾರಿಸಿದಳು.
‘ನೀ ನನಗ ಹೊಡೀತೀಯೇನ್ಲೇ ಬಿಕನಾಸಿ ನಾ ನಿನ್ನ ಬಿಡಾಂವಲ’್ಲ ಎಂದವನೇ ಕಿಸೆಯಿಂದ ಬಾಟಲಿಯೊಂದನ್ನು ತೆಗೆದು ಸುಗ್ಗಿಯ ಮುಖದತ್ತ ಎರಚಿದ. ‘ಅಯ್ಯೋ ಅವ್ವಾ ಉರಿ ಉರಿ’ ಎಂದು ತಾಳಲಾರದಂತಹ ನೋವಿನಿಂದ ಕಿರುಚುತ್ತಾ ಸುಗ್ಗಿ ಹಾದಿಯ ಮೇಲೆ ಬಿದ್ದಳು. ತುಟಿಯೂ ಸುಡುತ್ತಿದ್ದಂತೆ ಕೂಗಲೂ ಆಗದೇ ಒರಲಿದಳು. ಅವನು ವೇಗವಾಗಿ ಸ್ಕೂಟಿ ಓಡಿಸಿ ಪರಾರಿಯಾದ. ‘ಅಯ್ಯೋ ಪಾಪ ಇನ್ನೂ ಚಿಕ್ಕ ಹುಡ್ಗಿ ಐತಿ, ಆಸಿಡ್ ಸುರುವಿ ಹೋಗಿ ಬಿಟ್ಟಾನ, ನಡ್ರೀ ಆಸ್ಪತ್ರೆಗೆ ಸೇರಿಸೋಣ ಅಂತ ಯಾರೋ ಅಂದಿದ್ದು ಕೇಳುತ್ತಿತ್ತು, ಸುತ್ತೆಲ್ಲ ಜನರು ಕೂಡಿದಂತೆ ಏನೇನೋ ಹೇಳಿದಂತೆ… ಉರಿ ಚರ್ಮದ ಆಳಕ್ಕೆ ಆಳಕ್ಕೆ ಇಳಿಯುತ್ತಿದ್ದಂತೆ ಸುಗ್ಗಿಗೆ ಪ್ರಜ್ಞೆ ತಪ್ಪಿತ್ತು.
*
‘ಅವ್ವಾ ಉರಿ ನಾ ಒಲ್ಲೆವ್ವಾ” ಎಂದು ಪ್ರಜ್ಞೆ ಬಂದಾಗಲೂ ನರಳುತ್ತಿದ್ದ ಸುಗ್ಗಿಗೆ ‘ನಾ ಎಲ್ಲದಿನಿ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿತು. ಮೆಲ್ಲಗೆ ಕಣ್ಣು ತೆರೆದಳು. ಸುತ್ತ ನೋಡಿದಾಗ ತಾನಿರುವುದು ಆಸ್ಪತ್ರೆಯ ಬೆಡ್ಡಿನಲ್ಲಿ ಎನ್ನುವುದು ಅರಿವಾಯಿತು. ಮಂಚದ ಪಕ್ಕದ ಸ್ಟೂಲಿನ ಮೇಲೆ ಅವ್ವ ಕುಳಿತಿದ್ದಳು. ಕಾತರದಿಂದ ತನ್ನತ್ತಲೇ ನೋಡುತ್ತಿದ್ದ ಅವ್ವನನ್ನು ಕಂಡೊಡನೆ ದುಃಖದ ಕಟ್ಟೊಡೆದಂತೆ ಅಳಲಾರಂಭಿಸಿದಳು. ಸುಗ್ಗಿಯ ಕೈಗಳೆಡನ್ನೂ ಮಂಚಕ್ಕೆ ಸೇರಿಸಿ ಕಟ್ಟಿದ್ದರು. ಉರಿ ಆಗುತ್ತಿರುವುದು ಎಲ್ಲೆಲ್ಲಿ ಮುಟ್ಟಿ ನೋಡಬೇಕೆನಿಸಿತು. ಆದರೆ ಕೈ ಮುಖದತ್ತ ಹೋಗುವಂತಿರಲಿಲ್ಲ. ‘ಸುಮ್ಮಿರವ್ವಾ ಸದ್ಯ ಇಷ್ಟರಾಗ ಹೋತಲಾ ಜೀವ ಉಳದತಿ’ ಎಂದಳು ರಾಧಾಬಾಯಿ.
‘ನನಗೇನಾಗೇತಿ?’ ಎನ್ನುವ ಪ್ರಶ್ನೆ ಹುಳುವಿನಂತೆ ಸುಗ್ಗಿಯ ತಲೆಕೊರೆಯಲಾರಂಭಿಸಿತ್ತು. ಆ ಹುಡುಗ ನನ್ನ ಮೇಲೆ ಅದೇನನ್ನೋ ಎರಚಿ ರಸ್ತೆಯ ಮೇಲೆ ಬಿದ್ದು ಉರುಳಾಡುತ್ತಿದ್ದೆನಲ್ಲವೇ. ನನ್ನನ್ನು ಇಲ್ಲಿಗೆ ಯಾರು ತಂದು ಸೇರಿಸಿದರು? .. ಇಲ್ಲ ಮಾತಾಡುವುದು ಸುಲಭವಿರಲಿಲ್ಲ.
ಅಷ್ಟರಲ್ಲಿ ಟ್ರೇ ಮೇಲೆ ಒಂದಿಷ್ಟು ಔಷಧ ಹಿಡಿದುಕೊಂಡು ಬಂದ ಶುಭ್ರವಾದ ಬಿಳಿ ಬಟ್ಟೆ ತೊಟ್ಟ ನರ್ಸ ಹಾಗೂ ಡಾಕ್ಟರ್ ಬಂದರು. ‘ವೆರಿ ನೈಸ್ ಈ ಹುಡುಗಿಗೆ ಎಚ್ಚರವಾಗಿದೆ’ ಎಂದು ಮುಖದತ್ತ ಬಾಗಿ ಪರೀಕ್ಷಿಸಿದರು. ‘ತುಂಬಾ ಉರಿ ಆಗ್ತಾ ಇದೆಯಾ?’ ಎಂದು ಕೇಳಿದರು.
ಸುಗ್ಗಿ’ ಹೂಂ’ ಎಂದಳು ಕ್ಷೀಣವಾಗಿ. ‘ನಿನ್ನ ಅದೃಷ್ಟ ಚೆನ್ನಾಗಿದೆ. ಕಣ್ಣುಗಳು ಉಳಕೊಂಡಿವೆ’! ಎಂದರು ಡಾಕ್ಟರ್ ನಸುನಗುತ್ತಾ. ಯಾವುದೊ ಇಂಜೆಕ್ಷನ್ನನ್ನು ಚುಚ್ಚಿ, ಮುಖದ ಎಡಭಾಗಕ್ಕೆ ಡ್ರೆಸ್ಸಿಂಗ್ ಮಾಡಿ ಅವರಿಬ್ಬರೂ ಹೊರಗೆ ಹೋದ ಮೇಲೆ ರಾಧಾಬಾಯಿ ಮಾತಾಡತೊಡಗಿದಳು. ‘ನೀ ಅಂದ ಸಾಲಿಗೆ ಹೋದ ಎರಡ ಮಿನಿಟ್ನ್ಯಾಗ ಪಮ್ಮಿ ಬಂದಳು ನೀ ಸಾಲಿಗೆ ಹೋದಿ ಅಂದ ಕೂಡ್ಲೇ ಗಾಭರ್ಯಾಗಿ ಆಕಿನ್ನ ಒಬ್ಬಾಕಿನ್ನೇ ನೀವು ಕಳಿಸಬಾರದಿತ್ರಿ’ ಎಂದಳು ‘ಯಾಕ ಒಬ್ಬಾಕಿನೇ ಹೋಗಬಾರದಂಥಾದ್ದು ಏನಾಗೇತಿ’ ಅಂತ ನಾ ಕೇಳಿದೆ. ಅವಳೇನೂ ಹೇಳಲಿಲ್ಲ. ಸರಾ ಸರಾ ನೀ ಹೋದ ಹಾದ್ಯಾಗ ಹ್ವಾದ್ಲು. ನಿನಗ ಯಾರೋ ಆಸಿಡ್ ಹಾಕಿ ನೀ ಬಿದ್ದ ಹೊರಳಾಡಾಕ ಹತ್ತಿದ್ಯಂತ ಆಗ ಆಕೀನೆ ಮೊದಲ ನಿನ್ನ ನೋಡ್ಯಾಳ. ಓಡಿ ಹೋಗಿ ಪುಟ್ಯನ ಅಂಗಡಿಗೆ ಹೋಗಿ ಹಿಂಗಿಂಗೆ ಆಗೇತಿ ಸುಗ್ಗಿ ಅವ್ವನ ಕರ್ಕೊಂಡು ಅಂತ ಅಂದು ಹಾದ್ಯಾಗ ಹೋಗೂ ನಿಮ್ಮಸಾಲಿ ಹುಡುಗರ ಜೋಡಿ ನಿಮ್ಮ ಟೀಚರ್ಗೋಳಿಗೆ ಹೇಳಿ ಕಳಿಶ್ಯಾಳ. ನಾ ಅಲ್ಲಿಗೆ ಬರೋಟ್ಟೊತ್ತಿನ್ಯಾಗ ಅವ್ರೂ ಬಂದಿದ್ರು. ಪಾಪ ಅವ್ರೆ ಅಟಟ ರೊಕ್ಕ ವಂತಿಗೆ ಹಾಕಿ ನಿನ್ನ ಆಸ್ರತ್ರೆಗೂ ಸೇರಿಸಿದರು. ಅದ್ಯಾವುದೊ ಹುಡುಗ ನಿನಗ ಕಾಡತಿದ್ನಂತಲಾ ನನಗ ಹೇಳೇ ಇಲ್ಲ ನೀ’ ಎಂದು ಆಕ್ಷೇಪಣೆಯ ದನಿಯಲ್ಲಿ ಹೇಳಿದಳು.
‘ಮದ್ವಿ ಮಾಡಿಕೊಳ್ಳೂ ಮೂಡಿನ್ಯಾಗ ನೀ ಇದ್ದೀ ಅವ್ವಾ ನನ್ನ ಕಷ್ಟ ಕೇಳಾಕ ನಿನಗೆಲ್ಲಿ ಪುರುಸೊತ್ತಿತ್ತು’.. ಎಂದು ಹೇಳಬೇಕೆನಿಸಿದರು ಹೇಳದೇ ಸುಮ್ಮನಾದಳು ಸುಗ್ಗಿ.
ಮೃದುವಾಗಿ ಬಾಗಿಲಿನ ಮೇಲೆ ಕಟ ಕಟಾಯಿಸಿದಂತೆ ಸಪ್ಪಳ ಬಂತು. ಬಾಗಿಲು ತೆರೆದರೆ ನರ್ಸ ಜೊತೆಗೆ ಪೋಲೀಸರು ಒಳಗೆ ಬಂದರು. ಹೆದರಿಕೊಳ್ಳಬೇಡಾ, ನಾನು ಇನಿಸ್ಪೆಕ್ಟರ್ ಸೌಜನ್ಯ. ನಾಲ್ಕು ದಿನದಿಂದ ನಿನಗೆ ಸರಿಯಗಿ ಎಚ್ಚರ ಆಗಿರಲಿಲ್ಲ, ನೋವಿನಿಂದ ಮತ್ತೆ ಮತ್ತೆ ಪ್ರಜ್ಞೆ ತಪ್ಪುತ್ತಿತ್ತು ಇವತ್ತು ಎಚ್ಚರಾಗೇದ ಅಂತ ಡಾಕ್ಟರ್ ಹೇಳಿದ್ದರಿಂದ ಒಂದೆರಡು ವಿಷಯಾ ಕೇಳಾಕ ಬಂದೇವಿ. ರೈಟ್? ಸುಗ್ಗಿ ಕಣ್ಣಿನಲ್ಲೇ ‘ಆಯಿತು’ ಎಂದು ಒಪ್ಪಿದಳು. ನಿನಗೆ ಆಸಿಡ್ ಎರಚಿದವ ಫೋಟೋ ನೋಡಿದ್ರೆ ಗುರುತು ಹಿಡೀತೀಯಾ ?
‘ ಹೂಂರೀ’ ಎನ್ನುತ್ತ ಮುಖವನ್ನು ಮೆಲ್ಲಗೆ ಅಲುಗಾಡಿಸಲು ಹೋಗಿ ಉರಿ ಹೆಚ್ಚಾಗಿ ನರಳಿದಳು. ‘ಇವನೇ ನಿನಗೆ ನಿನಗೆ ಹಲವಾರು ದಿನಗಳಿಂದ ಕಾಡಿಸ್ತಿದ್ದ’ ಅಂತಾ ನಿನ್ನ ಗೆಳತಿ ಪರಿಮಳಾ ಅಂದ್ರೆ ಪಮ್ಮಿ ಹೇಳಿದಾಳ. ಇವನೇ ಹೌದೇನು ಕೈಗಳಿಗೆ ಕೊಳ ತೊಡಿಸಿದ ವ್ಯಕ್ತಿಯ ಫೋಟೋ ಒಂದನ್ನು ಎದುರಿಗೆ ಹಿಡಿದರು. ‘ಹೌದು ಇವನೆ ಇವನೇ .. ಸಿಟ್ಟು ಉಕ್ಕಿ ಹರಿದು ಗಟ್ಟಿಯಾಗಿ ಹೇಳಿದಳು.
‘ಇಂವಾ ಅಂದ್ರೆ ನಮ್ಮ ಕಡೆ ಸಿಕ್ಕಿ ಬಿದ್ದಾನ, ಪಮ್ಮಿ, ನಿಮ್ಮ ಮಾಸ್ತರ್ ಮಾರುತಿ ಇಬ್ರೂ ಇವನೇ ಇರಬೇಕು ಅಂತ ಹೇಳಿದ್ರು. ಗಾಡಿ ನಂಬರು ಹೇಳಿದ್ದರಿಂದ ಅವತ್ತೇ ಅರೆಸ್ಟ ಮಾಡಿ ಲಾಕಪ್ಪಿಗೆ ಹಾಕಿದ್ವಿ, ಆದ್ರೆ ಅಂವಾ ಒಪ್ಪಿಕೊಂಡಿರಲಿಲ್ಲ.. ನೀ ಇವನ್ನ ಗುರುತಿಸಿದ ಮೇಲೆ ವಿಚಾರಣೆ ಮಾಡಾಕ ಸುಲಭ ಆಕ್ಕೇತಿ. ನೀ ಇನ್ನ ರೆಸ್ಟ ತಗೋ.
‘ಸರ ಅಂವ ಯಾವೋನಾದ್ರೂ ಆಗ್ಲಿ ಅವನಿಗೆ ಶಿಕ್ಷೆಕೊಡ್ರಿ, ನನ್ನ ಮಗಳಿಗೆ ಇಂಥಾ ಪರಿಸ್ಥಿತಿ ತಂದಿಟ್ಟಾನ, ಟ್ರೀಟ್ಮೆಂಟಿಗೆ ಭಾಳ ರೊಕ್ಕಾ ಬೇಕಂತ್ರಿ …ರಾಧಾಬಾಯಿ ಹೇಳುತ್ತಳೇ ಇದ್ದ ಮಾತುಗಳನ್ನು ತುಂಡರಿಸಿ ಮೊದಲು ಎನ್ಕ್ವಯರಿ ಮಾಡಿ ಗುಟ್ಟು ಬಿಡಿಸ್ತೇವಿ ಆಮ್ಯಾಲ ಉಳಿದ ಮಾತು, ಮೊನ್ನೇನೇ ಪೇಪರಿಗೆ ಹಾಕಿ ಇವಂನ್ನ ಬಗ್ಗೆ ಸಂಶಯ ಐತಿ ಎಂದು ಪೇಪರಿನ್ಯಾಗ ಹಾಕಿಸಿದರೂ ಅವನ್ನ ಮನಿಯ ಒಬ್ರೂ ಅವನ್ನ ನೋಡಾಕಾಗ್ಲಿ ಬಿಡಿಸಿಕೊಳ್ಳಾಕ ಆಗ್ಲಿ ಬಂದಿಲ್ಲ.. ಎನ್ನುತ್ತಾ ಹೊರನಡೆದರು ಸೌಜನ್ಯಾ.
***……
ಅವ್ವಾ ಎಂದು ನರಳುತ್ತಾ ಮಲಗಿದ್ದ ಸುಗ್ಗಿಗೆ ಕನ್ನಡಿಯಲ್ಲೊಮ್ಮೆ ಮುಖ ನೋಡಿಕೊಳ್ಳಬೇಕು ಎನಿಸಿತ್ತು. ನಸು ಬೆಚ್ಚಗಿನ ಗಂಜಿಯನ್ನು ಸ್ಪೂನಿನಲ್ಲೆತ್ತಿ ಮಗಳ ಬಾಯಿಗಿಡುತ್ತಿದ್ದ ರಾಧಾಬಾಯಿ “ನಿನಗ ಇಷ್ಟ ಹೊತ್ತು ನಿದ್ದಿ ಬಂದಿತ್ತು ನೀ ಪಾರಾದಿ. ಆ ಪೇಪರಿನವ್ರು ಟಿ.ವಿಯವ್ರೂ ಬಂದು ನಿನ್ನ ಫೋಟೋ ತಗೊಂಡು ಹೋದ್ರು. ಯಾರು ಇದನ್ನು ಮಾಡ್ಯಾರ, ಯಾಕ ಮಾಡ್ಯಾರ ಇದನ್ನ ಮೊದಲು ನೋಡಿದವ್ರು ಯಾರು. ಟ್ರೀಟ್ಮೆಂಟಿಗೆ ಎಷ್ಟ ಖರ್ಚ ಬೇಕಂತೆ…… ಅಬಾಬಾಬಾ ಎಷ್ಟ ಪ್ರಶ್ನೆ ಕೇಳಿದರು ನನಗೂಡ. ಉತ್ರಾ ಕೊಟ್ಟ ಕೊಟ್ಟ ತೆಲಿ ಚಿಟ್ಟಹಿಡದ ಹೋತ. ನಮ್ಮ ಸಂಕ್ಟ ನಮಗ, ಇವ್ರದ್ದು ಒಂದ ದೊಡ್ಡ ಗೋಳು.” ಎಂದು ವಡವಡನೇ ಮಾತಾಡಿದಳು.
‘ನನಗ ಯಾವ್ದೂ ಗೊತ್ತಾಗಿಲ್ಲ, ಅವ್ವಾ ನನಗ ಒಂದ್ಸಲಾ ನಮ್ಮನಿಯಾಗಿನ ಸಣ್ಣ ಕನ್ನಡಿ ಐತಲ್ಲಾ ಅದನ್ನ ತಂದು ನನ್ನ ಮಾರಿಗೇನಾಗೇದ ಅಂತ ತೋರಿಸ್ತೀಯೇನು?’ ಎಂದು ಸುಗ್ಗಿ ಕೇಳಿದಳು. ಬೆಚ್ಚಿ ಬಿದ್ದ ರಾಧಾಬಾಯಿ
ಮೂರ ತಿಂಗಳು ಕನ್ನಡೀನಾ ನಿನಗೆ ತೋರಿಸಬಾರ್ದು ಅಂತಾ ಡಾಕ್ಟರ್ ಹೇಳಿದಾರ ಸುಗ್ಗಿ ಎಂದಳು. ‘ಹೌದೇನವ್ವಾ ಹಂಗಂದಾರಾ’ ಎನ್ನಬೇಕೆನ್ನುವುದರೊಳಗೇ ಮಾತ್ರೆಗಳ ಪ್ರಭಾವ ಕಡಿಮೆ ಆಗಿದ್ದರಿಂದೇನೋ ಉರಿ ಹೆಚ್ಚಾಗಿ ನರಳುತ್ತಾ ಮತ್ತೆ ಕಣ್ಮುಚ್ಚಿದಳು..
ಸುಗ್ಗಿಯ ಮನೆಯಲ್ಲಿದ್ದಿದ್ದು ಅಂಗೈ ಗಾತ್ರದ ಒಂದು ಕನ್ನಡಿಯಷ್ಟೇ ಅವ್ವ ಕೂದಲು ಬಾಚುವಾಗ ಅದನ್ನು ಕೈಯಲ್ಲಿ ಹಿಡಿದುಕೊಂಡು ಮುಖವನ್ನೊಮ್ಮೆ ನೋಡಿ ಹಲ್ಕಿರಿಯುವುದು, ನಾಲಿಗೆ ಸುಳಿದು ನೋಡುವುದು ಇಂತಹ ಮಂಗಚೇಷ್ಟೆ ಮಾಡುವುದೆಂದರೆ ತುಂಬಾ ಇಷ್ಟ ಸುಗ್ಗಿಗೆ.’ ನಿಮ್ಮ ಸುಗ್ಗಿ ಎಷ್ಟ ಚೆಂದ ಅದಾಳ ನಮ್ಮ ಓಣ್ಯಾಗ ಇನ್ಯಾವ ಹುಡುಗ್ಯಾರೂ ಅಷ್ಟ ಚೆಂದಿಲ್ಲ’ ಎನ್ನುತ್ತಿದ್ದಳು ಸಾವಂತ್ರಿ. ಶಾಲೆಯಲ್ಲೂ ಅಷ್ಟೇ ಹಾದು ಹೋಗುವವರೊಮ್ಮೆ ಹೊರಳಿ ಚೆಂದ. ಶಾಲೆಯಲ್ಲಿ ಎಲ್ಲರೂ ಅವಳನ್ನು ರಿಜಿಸ್ಟರಿನಲ್ಲಿದ್ದಂತೆ ಸುಗುಣಾ ಎಂದೇ ಕರೆಯುತ್ತಿದ್ದರು. ಆ ಸೌಂದರ್ಯದ ಕಾರಣದಿಂದಲೇ ಅವಳಿಗೆ ನಾಟಕ ಮಾಡಿದಾಗ ನಾಯಕಿಯ ರೋಲ್ ಕೊಡುತ್ತಿದ್ದರು. ಗೆಳತಿ ಪಮ್ಮಿಯ ಮನೆಯ ಕಬ್ಬಿಣ ಬೀರುವಿಗೆ ನಿಲುವುಗನ್ನಡಿಯೊಂದಿತು. ಅದರಲ್ಲಿ ತನ್ನ ಬಿಂಬವನ್ನು ಮನಸಾರೆ ನೋಡಬೇಕು ಎಂಬ ಹಂಬಲ ಉತ್ಕಟವಾಗಿ ಕಾಡಿದಾಗ ಏನಾದರೂ ನೆವ ತೆಗೆದು ಪಮ್ಮಿಯ ಮನೆಗೆ ಹೋಗುತ್ತಿದ್ದಳು ಸುಗ್ಗಿ. ಅವರು ಕೊಡುವ ತಿಂಡಿ ಚಹಾಕ್ಕಿಂತ ಅವರ ಮನೆಯ ಕನ್ನಡಿಯೆ ಸುಗ್ಗಿಗೆ ಹೆಚ್ಚು ಆಕರ್ಷಕ ಎನಿಸಿತ್ತು ‘ಅಪ್ಪಾ ನಮ್ಮನೇಲೂ ಒಂದು ನಿಲುವುಗನ್ನಡಿ ಬೇಕು’ ಎಂದು ಹಟ ಹಿಡಿದಿದ್ದಳು.
ಆದರೆ.. ನಮ್ಮನಿ ಏರಿಳಿವಿನ ಇಟ್ಟಂಗಿ ಗೋಡೆಗೆ ಕನ್ನಡಿ ಹೊಂದಗಿಲ್ಲ, ಬ್ಯಾಡ ಬಿಡವ್ವಾ ಅದು ‘ ಎಂದು ಮೃದುವಾಗಿಯೆ ಮಗಳ ಮನವಿಯನ್ನು ತಿರಸ್ಕರಿಸಿದ್ದ ಅವಳಪ್ಪ.
ನೆನಪಿನಲೆಯಲ್ಲಿ ತೇಲಿಹೋಗುತ್ತಿದ್ದ ಸುಗ್ಗಿ ಜೋರು ಜೋರಾದ ಮಾತು ಕೇಳಿ ಬೆಚ್ಚಿ ಬಿದ್ದಳು. ಈಕಿಗೆ ಯಾರು ಇಂಥಾ ದುಃಸ್ಥಿತಿಗೆ ತಂದಾರೋ ಅವ್ರಿಗೆ ಶಿಕ್ಷೆ ಆಗಾಕ ಬೇಕು. ಮಾರಿ ಎಂಥಾ ಪರಿ ಎಡಗೆನ್ನೆ ಸುಟ್ಟು ಕರಗೇದ ಎನ್ನುವ ಮಾತು ಕೇಳಿ ಕಂಗೆಟ್ಟ ಸುಗ್ಗಿ ಕಣ್ಣು ಬಿಟ್ಟಳು. ಢಾಳಾಗಿ ಬಣ್ಣ ಮೆತ್ತಿಕೊಂಡ ಹೆಂಗಸರಿಬ್ಬರು ತನ್ನವ್ವಿಯ ಪಕ್ಕದಲ್ಲಿ ನಿಂತಿದ್ದು ನೋಡಿದಳು. ‘ನನ್ನ ಹೆಸರು ರೂಪಾ, ನಾವು ಚೈತನ್ಯಾ ಎನ್ನುವ ಎನ್ ಜಿ ಓ ನಡಸ್ತೇವಿ, ಮಹಿಳೆಯರ ಮೇಲೆ ಮಕ್ಕಳ ಮೇಲೆ ದೌರ್ಜನ್ಯದ ವಿರುದ್ಧ ದನಿ ಎತ್ತತೇವಿ, ನಿನಗೆ ಆದ ಅನ್ಯಾಯಕ್ಕ ನಾವು ನ್ಯಾಯಾ ಕೊಡಸ್ತೇವಿ. ಆ ಹುಡುಗನ ಮನಿ ಎಲ್ಲೈತಿ ಹೇಳ್ರೀ, ಅವ್ರಮನಿ ಮುಂದ ಹರತಾಳ ಮಾಡಿ ರೊಕ್ಕಾ ಕೊಡಸ್ತೇವಿ ನಿಮಗ ಎಂದು ಬಡಬಡನೇ ಒಬ್ಬಳು ಮಾತಾಡಿದಳು. ಮತ್ತೊಬ್ಬಳು ಸುಗ್ಗಿಯ ಫೋಟೋ ತೆಗೆಯಲಾರಂಭಿಸಿದಳು.
ಅಷ್ಟರಲ್ಲಿ ಅಲ್ಲಿಗೆ ಡಾಕ್ಟರು ‘ಮ್ಯಾಡಮ್ ನೀವು ಈ ಹುಡುಗಿ ಕಂಡಿಷನ್ ಆರೋಗ್ಯ ಸೂಕ್ಷ್ಮ ಐತಿ, ನೀವ ಇಲ್ಲಿಂದ ಸ್ಟೇಷನ್ನಿಗೆ ಹೋಗಿ ಕೇಸ್ ಡಿಟೇಲ್ಸ ತಗೊಂಡು ಹೋರಾಟ ಮಾಡ್ರಿ’ ಎಂದರು ಕಟುವಾಗಿ.
**

ಸುಗ್ಗಿ ನಿದ್ರಿಸುತ್ತಿದ್ದಳು. ಬೆಡ್ ಪಕ್ಕದ ಖುರ್ಚಿಯಲ್ಲಿ ಕಣ್ಮುಚ್ಚಿ ಕುಳಿತ ರಾಧಾಬಾಯಿಗೆ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಮಗಳು ಅನುಭವಿಸುವ ನರಕಯಾತನೆಯನ್ನು ನೋಡಿದಾಗಲೆಲ್ಲ ಕರುಳಿನಲ್ಲಿ ಚೂರಿ ಆಡಿಸಿದಂತಾಗುತ್ತಿತ್ತು. ‘ಈಗ ಒಂದ ಆಪರೇಷನ್ ಆಗೇದ, ಇನ್ನೂ ಆಕಿ ಸ್ವಲ್ಪ ಸರಿ ಕಾಣಬೇಕಂದ್ರ ಹನ್ನೊಂದು ಆಪರೇಷನ್ ಆಗಬೇಕು’ ಎಂದಿದ್ದ ಡಾಕ್ಟರ್ ಮಾತು ತಾಯಿಯ ಕಸುವನ್ನೇ ಕಳೆದಿತ್ತು ನಿಮ್ಮ ಮಗಳ ಮ್ಯಾಲ ಆಸಿಡ್ ಹಾಕಿದ ಆರೋಪಿನ ಅರೆಸ್ಟ ಮಾಡೀವಿ ಎಂದು ಬೆಳಿಗ್ಗೆ ಪೋಲೀಸ್ ಸ್ಟೇಷನ್ನಿಗೆ ಇನಿಸ್ಪೆಕ್ಟರ್ ಸೌಜನ್ಯ ಕರೆದುಕೊಂಡು ಹೋಗಿದ್ದರು. ಆರೋಪಿ ಯಾರ್ರಿ? ಅಂವಾ ನನ್ನ ಮಗಳಮ್ಯಾಲ ಯಾಕ ಹಿಂಗ ಮಾಡಿದ್ನರೀ? ಎಂದು ಪ್ರಶ್ನೆ ಕೇಳುತ್ತಿದ್ದ ರಾಧಾಬಾಯಿಗೆ ಏನೂ ಉತ್ತರಿಸದೇ ‘ತಡೀರಿ ಸ್ಟೇಷನ್ನಿಗೆ ಹೋದ ಮ್ಯಾಲ ನಿಮಗೆ ಎಲ್ಲಾ ಗೊತ್ತಾಗತೇತಿ’ ಎಂದು ಸುಮ್ಮನಾಗಿಸಿದ್ದರು ಸೌಜನ್ಯಾ. ರಾಧಬಾಯಿಯನ್ನು ಒಂದು ಸೆಲ್ ಎದುರಿಗೆ ಕರೆದೊಯ್ದರು ಸೌಜನ್ಯಾ ಒಳಗಿದ್ದವನನ್ನು ನೋಡಿದೊಡನೆ ‘ಗಫೂರ್ ನೀವು’ ಎಂದು ಚೀರಿದಳು ರಾಧಾಬಾಯಿ. ಸಮಾಧಾನಿಸುವಂತೆ ಅವಳ ಹೆಗಲ ಮೇಲೆ ಕೈ ಇಟ್ಟ ಸೌಜನ್ಯಾ ವಿವರಿಸಲಾರಂಭಿಸಿದರು… ನಿಮ್ಮ ಮಗಳ ಇವತ್ತಿನ ಸ್ಥಿತಿಗೆ ಕಾರಣ ಆದಾಂವ ಇವನಲ್ಲ, ಇವನ ಮಗ ಸಲೀಮ್! ನೀವು ಗಫೂರನನ್ನ ನಿಖಾ ಮಾಡಿಕೊಂಡು ಎರಡನೇ ಹೆಂಡ್ತಿ ಆಗಲಿಕ್ಕೆ ಒಪ್ಪಿಕೊಂಡಿದ್ರ ಅದಕ್ಕ ಅವನ ಬೀವಿ ಸಿಟ್ಟಿಗೆದ್ದಾಳ. ‘ರಾಧಬಾಯಿ ಮಗಳನ್ನು ಗುರ್ತಾ ಮಾಡಿಕೊಂಡು ಮದುವಿ ಮಾಡಿಕೊಂಡಿ ಅಂದ್ರ ನಿಮ್ಮ ನಿನ್ನಪ್ಪ ರಾಧಾಬಾಯಿನ ಬಿಡತಾನ, ಸುಗ್ಗಿ ನಿಖಾಕ್ಕ ಒಪ್ಪಲಿಲ್ಲಾ ಅಂದ್ರ ಆಸಿಡ್ ಹಾಕು ಅಂತಾ ತನ್ನ ಮಗನಿಗೆ ಅಂದಿದ್ದಳ! ಮುಂದಿಂದು ನಿಮಗೆ ಗೊತ್ತಾತಲಾ… ನೋಡ್ರಿ ಮೂರೂ ಮಂದಿನ ತಂದು ಒಂದೇ ಸೆಲ್ಲಿನಾಗ ಇಟ್ಟೀವಿ. ‘ನಾ ಯಾಕಿಂಥಾ ಮರುಳಿಗೆ ಬಿದ್ನಿ ಶಿವನೇ, ನನ್ನ ಮ್ಯಾಲಿನ ಸಿಟ್ಟಿಗೆ ನನ್ನ ಮಗಳನ್ನು ಬಲಿ ಹಾಕಿದ್ರು ದರಿದ್ರದವ್ರು, ಎಂದು ಹ್ಯಾಪು ಮೋರೆ ಹಾಕಿ ನಿಂತ ಅಪರಾಧಿಗಳನ್ನು ನೋಡಿ ಬೈಗುಳಿನ ಸುರಿಮಳೆಗೈದಳು ರಾಧಾಬಾಯಿ. ಕೋರ್ಟು, ಶಿಕ್ಷೆ ಆಸ್ಪತ್ರೆ..’ ಎಂದು ತಲೆ ಚಚ್ಚಿಕೊಳ್ಳುತ್ತಾ ಬಡಬಡಿಸುತ್ತಾ ಕುಸಿದಿದ್ದ ರಾಧಾಬಾಯಿ ಅದೆಷ್ಟೋ ಸಮಯದ ನಂತರ ಆಸ್ಪತ್ರೆಗೆ ಹಿಂತಿರುಗಿದ್ದಳು. ಅವ್ವಾ ಎಂದು ನರಳಿದ ಸುಗ್ಗಿಗೆ ಎಚ್ಚರವಾಗಿತ್ತು. ‘ಇನ್ನೂ ಸುಡಲಿಕ್ಕ ಹತ್ತೇದ ಅನ್ನೋ ಹಂಗ ಮಾರಿ ಉರಿತದ. ಸ್ಟೇಷನ್ನಿಗೆ ಹೋಗಿದ್ಯಲ್ಲವಾ ಏನಾತು? ಅಪರಾಧಿ ಯಾರು ಅಂತ ಗೊತ್ತಾತೇನು? ನನ್ನ ಮ್ಯಾಲ ಅವನಿಗೇನು ಸಿಟ್ಟಿತ್ತು?’ ಒಡಲ ಸುಡುತ್ತಿರುವ ಸತ್ಯವನ್ನು ಮಗಳಿಗೆ ಹೇಳುವುದೆಂತು ತಿಳಿಯದೇ ರಾಧಾಬಾಯಿ ಮಗಳನ್ನೇ ದಿಟ್ಟಿಸುತ್ತಿದ್ದಳು. ಕಂಗಳಲ್ಲಿ ನೀರು ಧಾರೆಯಾಗಿ ಹರಿಯುತ್ತಿತ್ತು.

***
ಮೈಸೂರಿನ ‘ಪುನಃಶ್ಚೇತನ’ ಬೋರ್ಡಿನ ಹೋಟೆಲ್ ಕೌಂಟರಿನಲ್ಲಿ ಸುಗ್ಗಿ ಕುಳಿತಿದ್ದಳು. ಅವಳ ಪಕ್ಕದಲ್ಲೇ ಕುಳಿತ ಯೂಟ್ಯೂಬರ್ ಶೀಲಾ ಕೌತುಕದಿಂದ ಒಳಗಿನ ವ್ಯವಹಾರವನ್ನು ನೋಡುತ್ತಾ ಸುಗ್ಗಿಯ ಕಥೆಯನ್ನು ಕೇಳುತ್ತಿದ್ದಳು. ಅಡುಗೆ ಮಾಡುವವರಿಂದ ಸರ್ವ ಮಾಡುವವರೆಗಿನ ಎಲ್ಲ ಸ್ತ್ರೀಯರು ಆಸಿಡ್‍ನಿಂದ ಸಂತ್ರಸ್ತರಾದವರೇ. ಯಾರದೋ ದ್ವೇಷಕ್ಕೆ ನಲುಗಿದವರೇ. ಸುಗ್ಗಿ ಮಾತಾಡುತ್ತಿದ್ದಳು….
ರಾಧಿಕಾ ಎನ್ನುವ ಉದ್ಯಮಿ ಆರಂಭಿಸಿದ ಹೊಟೆಲ್ ರ್ರೀ ಇದು. ಅವರ ಮಗಳಿಗೆ ಯಾವನೋ ಎರಚಿದ ಆಸಿಡ್ನಿಂದ ಚೇತರಿಸಿಕೊಳ್ಳಲಾರ್ದೆ ಸತ್ತುಹೋಗ್ಯಾಳಂತ್ರಿ. ಆ ನೋವಿನಿಂದ ಪಾರ ಆಗಲಾಕ ಈ ಹೋಟೆಲ್ ತೆಗೆದು ನಮ್ಮಂಥಾವ್ರಿಗೆ ಉದ್ಯೋಗ ಕೊಟ್ಟಾರ್ರಿ. ನಮಗೆ ಕೋರ್ಟ ಕೇಸ್ ನಡೆಸಾಕೂ ಸಹಾಯ ಮಾಡತಾರ್ರೀ. ನಮಗೆಲ್ಲ ಬೇಕಾದ್ದು ಜನರ ತಿರಸ್ಕಾರ ಅಲ್ರೀ, ಕರುಣೆಯೂ ಬ್ಯಾಡ್ರಿ ಇಂತಹಾ ಬೆಂಬಲ ಬೇಕ್ರೀ….

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ರೂಪ ರೂಪಗಳನು ದಾಟಿ”

  1. ಶೇಖರಗೌಡ ವೀ ಸರನಾಡಗೌಡರ್

    ಹೃದಯ ವಿದ್ರಾವಕ ಕಥೆ. ಓದುಗರ ಮನಸ್ಸು ತುಂಬುತ್ತೆ.

  2. ಧರ್ಮಾನಂದ ಶಿರ್ವ

    ಕರುಣಾಜನಕ ಕಥೆ ಓದುಗರ ಕಣ್ಣು ತೇವಗೊಳಿಸುತ್ತಾ, ಎದೆಯೊಳಗೆ ಆರದ ನೋವಿನ ತೀವ್ರತೆಯನ್ನು ಹೆಚ್ಚಿಸುತ್ತಾ ಸಾಗುತ್ತದೆ. ಕಥೆಯ ಹಂದರ, ಕಥಾವಸ್ತು, ಶೈಲಿ ಎಲ್ಲವೂ ಕಥೆಯೊಂದು ಮನದಾಳಕ್ಕೆ ಇಳಿಯಲು ಸಹಕಾರಿಯಾಗಿವೆ.
    ‘ಮದ್ವಿ ಮಾಡಿಕೊಳ್ಳೂ ಮೂಡಿನ್ಯಾಗ ನೀ ಇದ್ದೀ ಅವ್ವಾ ನನ್ನ ಕಷ್ಟ ಕೇಳಾಕ ನಿನಗೆಲ್ಲಿ ಪುರುಸೊತ್ತಿತ್ತು’.

    ‘ನನಗ ಯಾವ್ದೂ ಗೊತ್ತಾಗಿಲ್ಲ, ಅವ್ವಾ ನನಗ ಒಂದ್ಸಲಾ ನಮ್ಮನಿಯಾಗಿನ ಸಣ್ಣ ಕನ್ನಡಿ ಐತಲ್ಲಾ ಅದನ್ನ ತಂದು ನನ್ನ ಮಾರಿಗೇನಾಗೇದ ಅಂತ ತೋರಿಸ್ತೀಯೇನು?’

    ಸುಗ್ಗಿಯ ಈ ಮಾತುಗಳು ಎಂತಹವನ ಮನಸ್ಸನ್ನು ಕಲಕುವಂತೆ ಮಾಡುತ್ತವೆ.
    ಅಭಿನಂದನೆಗಳು ಮೇಡಂ

    1. ಕಥೆಯನ್ನು ಓದಿ ಅದರ ಉತ್ತಮ ಅಂಶಗಳನ್ನು ಬರೆದಿರುವುದಕ್ಕಾಗಿ ಅನಂತ ಧನ್ಯವಾದಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter