“ಕನ್ನಡ ವಿಭಾಗ ಸಾಹಿತ್ಯ ಸೌಧವಿದ್ದಂತೆ”-ಮನೋಹರ ತೋನ್ಸೆ
ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಮುಂಬಯಿ ಭಾಗದ ಸಹೃದಯರಲ್ಲಿ ಓದು ಮತ್ತು ಬರವಣಿಗೆಯ ಅಭಿರುಚಿಯನ್ನು ಬೆಳೆಸಿದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ವಿಭಾಗದ ಕೊಡುಗೆ ದೊಡ್ಡದು. ಮುಂಬಯಿ ಬಂದಾಗಲೆಲ್ಲ ಕನ್ನಡ ವಿಭಾಗಕ್ಕೆ ಭೇಟಿ ನೀಡಲೇ ಬೇಕು ಎನ್ನುವ ಸೆಳೆತ ನನ್ನನ್ನು ಕಾಡುತ್ತಲೇ ಬಂದಿದೆ ವಿಭಾಗ ಸಾಹಿತ್ಯ ಸೌಧವಾಗಿ ಕಂಗೊಳಿಸುತ್ತದೆ ಎಂದು ಸಂಘಟಕ, ಲೇಖಕ ಮನೋಹರ ತೋನ್ಸೆ ಅಬುದಾಭಿ ಅವರು ಅಭಿಪ್ರಾಯ ಪಟ್ಟರು. ಅವರು ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಎಪ್ರಿಲ್ 23ರಂದು ಜಾಗತಿಕ ಪುಸ್ತಕ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಸಾಹಿತ್ಯ ಸೇವೆ ಮಾಡಲು ಒಂದು ಶಿಸ್ತನ್ನು ಕನ್ನಡ ವಿಭಾಗ ಕಲಿಸಿ ಕೊಟ್ಟಿದೆ. ಹೀಗಾಗಿ ನಿರಂತರ ಓದು ಬರೆಹದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಕನ್ನಡ ವಿಭಾಗದಲ್ಲಿ ಪ್ರತಿಭಾವಂತ ತಂಡವಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಪತ್ರಕರ್ತ ಅಕ್ಷಯ ಮಾಸಿಕದ ಸಂಪಾದಕ ಡಾ.ಈಶ್ವರ ಅಲೆವೂರು ಅವರು ಮಾತನಾಡುತ್ತಾ ವಿಭಾಗದಲ್ಲಿ ಉನ್ನತ ಅಧ್ಯಯನ ಕೈಗೊಂಡ ವಿದ್ಯಾರ್ಥಿಗಳು ನಿರಂತರವಾಗಿ ಕನ್ನಡ ಪರಿಚಾರಿಕೆಯನ್ನು ಮಾಡಬೇಕು. ಕನ್ನಡ ಭಾಷೆಗೆ ಹಿನ್ನಡೆಯಾಗದ ಹಾಗೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿ ಕನ್ನಡ ವಿಭಾಗ ನೂರು ಕೃತಿಗಳನ್ನು ಪ್ರಕಟಿಸಿ ಮಾಡಿರುವ ಕೆಲಸ ಬಹಳ ದೊಡ್ಡದು ಎಂದು ಅಭಿಮಾನ ವ್ಯಕ್ತ ಪಡಿಸಿದರು. ಕವಿ ಸಾಹಿತಿ ಗುರುಪಾದಪ್ಪ ಚೆನ್ನವೀರಪ್ಪ ಸಿಂಪಿ ಅವರು ತಾವು ಕವಿಯಾಗಿ ಬೆಳೆದು ಬಂದ ಬಗೆ, ಸಿಂಪಿ ಲಿಂಗಣ್ಣನವರ ಒಡನಾಟ, ಮರಾಠಿ ಮಣ್ಣಿನಲ್ಲಿ ಮುಂಬಯಿಯಲ್ಲಿ ಕನ್ನಡ ಸಾಹಿತ್ಯ ಬೆಳೆದಿರುವ ಬಗೆಯ ಕುರಿತು ಅಭಿಮಾನದಿಂದ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಾಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾದ್ಯ ಅವರು ಕನ್ನಡ ವಿಭಾಗ ಪ್ರಕಟಣ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಇದೀಗ ಕನ್ನಡ ವಿಭಾಗದ ಪ್ರಕಟಣೆಗಳ ಸಂಖ್ಯೆ ನೂರನ್ನು ತಲುಪುತ್ತಿದೆ. ಸಾಹಿತ್ಯವಲಯವಾಗಿ ಬೆಳಗಿದ ಮುಂಬಯಿಯ ಲೇಖಕರ ಸಾಧನೆಗಳನ್ನು ಲೋಕಮುಖಕ್ಕೆ ಪರಿಚಯಿಸಲು ವಿಭಾಗ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ವಿಭಾಗದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಲೇಖಕರಾಗಿ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಮನೋಹರ ತೋನ್ಸೆ, ಡಾ.ಈಶ್ವರ ಅಲೆವೂರು ವಿಭಾಗದ ಹೆಮ್ಮೆಯ ವಿದ್ಯಾರ್ಥಿಗಳೇ ಆಗಿದ್ದಾರೆ. ಗುರುಪಾದಪ್ಪ ಸಿಂಪಿ ಅವರು ದೂರದ ಚಡಚಣದಿಂದ ಕನ್ನಡ ವಿಭಾಗವನ್ನು ಹುಡುಕಿಕೊಂಡು ಬಂದಿದ್ದಾರೆ. ಕನ್ನಡಿಗರ ಪ್ರೀತಿ ವಿಶ್ವಾಸ ದೊಡ್ಡದು ಎಂದು ಈ ಸಂದರ್ಭದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮನೋಹರ ತೋನ್ಸೆ ಅವರ ಬಹುಮುಖಿ, ಡಾ.ಈಶ್ವರ ಅಲೆವೂರು ಅವರ ಒಲವು-ನಿಲುವು, ಗುರುಪಾದಪ್ಪ ಚನ್ನವೀರಪ್ಪ ಸಿಂಪಿ ಅವರ ಬಾಹತ್ತರ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕನ್ನಡ ವಿಭಾಗದ ಪ್ರಕಟಣೆಗಳ ಕುರಿತು ವಿಭಾಗದ ವಿದ್ಯಾರ್ಥಿಗಳಾದ ಕಲಾ ಭಾಗ್ವತ್, ಅನಿತಾ ಪೂಜಾರಿ, ತಾಕೋಡೆ, ಸುರೇಖಾ ದೇವಾಡಿಗ ಹಾಗೂ ವಿದ್ಯಾ ರಾಮಕೃಷ್ಣ ಅವರು ಮಾತನಾಡಿದರು. ಅತಿಥಿಗಳನ್ನು ಶಾಲು, ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.