ಹುಬ್ಬಳ್ಳಿಯ ಪಿ. ಬಿ. ರಸ್ತೆಯಲ್ಲಿರುವ ಇಂದ್ರ ಭವನಕ್ಕೆ ಮಿರ್ಚಿ ತಿಂದು, ಶುಂಠಿ ಚಹ ಕುಡಿಯಬೇಕೆಂದು ಹೊರಟಿದ್ದ ನನಗೆ, “ನಮಸ್ಕಾರ ಸರ್…” ಎಂಬ ಅಶರೀರವಾಣಿಯೊಂದು ಕೇಳಿತು. ನಾನು ನಮಸ್ಕಾರ ಮಾಡಿದ ಆಸಾಮಿಯನ್ನು ನೋಡಿ ಒಂದು ಕ್ಷಣ ಚಕಿತನಾದೆ. ಕೆದರಿದ ಕೂದಲು, ಒರಟು ದಾಡಿ, ಪಿಸುರುಗಟ್ಟಿದ ಕಣ್ಣುಗಳ ಯುವಕನೊಬ್ಬ ಮುಕ್ಕಾಲು ಪಾಲು ಹರಿದ ನೀಲಿ ಜೀನ್ಸ್ ಪ್ಯಾಂಟು, ಚೆ ಗುವಾರನ ಚಿತ್ರವಿದ್ದ ರಕ್ತಗೆಂಪು ವರ್ಣದ ದೊಗಳೆ ಟೀ ಶರ್ಟು ಮತ್ತು ಬಾತರೂಮ್ ಚಪ್ಪಲಿಯನ್ನು ಹಾಕಿಕೊಂಡು ಅಸಹಜವಾಗಿ ನಗುತ್ತ ನಿಂತಿದ್ದ. ಒಂದು ಕೋನದಲ್ಲಿ ಮಾನಸಿಕ ರೋಗಿಯಂತೆಯೂ ಮತ್ತೊಂದು ಕೋನದಲ್ಲಿ ಕಮ್ಯೂನಿಷ್ಟನಂತೆಯೂ ಕಾಣುತ್ತಿದ್ದ ಅವನನ್ನು ಮಾತನಾಡಿಸಲು ನನಗೆ ಹಿಂಜರಿಕೆಯುಂಟಾಯಿತು. ಆದರೆ ಆಸಾಮಿ ನನ್ನನ್ನು ಬಿಡಲೇ ಇಲ್ಲ. ನನ್ನನ್ನು ತುಂಬ ಗೌರವದಿಂದ ಕರೆದುಕೊಂಡು ಹೋಗಿ ಮಿರ್ಚಿ, ಮಂಡಕ್ಕಿಗೆ ಆರ್ಡರ್ ಮಾಡಿದ.
ನಾನಂದುಕೊಂಡಂತೆ ಅವನು ಮಾನಸಿಕ ರೋಗಿಯೂ ಅಲ್ಲ, ಕಮ್ಯೂನಿಷ್ಟನೂ ಅಲ್ಲ. ಅವನು ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ಜಗದ್ವಿಖ್ಯಾತ ಕನ್ನಡ ವಿಭಾಗದಲ್ಲಿ ಪಿ. ಎಚ್. ಡಿ. ಮಾಡುತ್ತಿದ್ದ ಸಂಶೋಧನಾ ವಿದ್ಯಾರ್ಥಿ! ನನಗೆ ಈ ಸಂಶೋಧನಾ ವಿದ್ಯಾರ್ಥಿಗಳೆಂದರೆ ಮೊದಲಿನಿಂದಲೂ ಅಷ್ಟಕ್ಕಷ್ಟೆ. ಸಂಶೋಧನೆಯೊಂದನ್ನು ಹೊರತು ಪಡಿಸಿ ಉಳಿದ ಉಪದ್ವ್ಯಾಪಗಳನ್ನೆಲ್ಲ ಮಾಡುತ್ತ, ವಿಶ್ವವಿದ್ಯಾಲಯದಲ್ಲಿ ಸುಖವಾಗಿ ಕಾಲಯಾಪನೆ ಮಾಡುವ ಸಂಶೋಧಾನಾರ್ಥಿಗಳ ಬಗ್ಗೆ ನನಗೆ ಸದಭಿಪ್ರಾಯವಿಲ್ಲ. ನಾನು ತುಂಬ ಸಲ ಅವರನ್ನು ಲೇವಡಿ ಮಾಡಿ ಬರೆದಿದ್ದೇನೆ. ಅದರ ಕುರಿತು ಚರ್ಚೆ ಮಾಡಲೆಂದೇ ಈ ಮರಿ ಬುದ್ಧಿಜೀವಿ ನನ್ನನ್ನು ಹುಬ್ಬಳ್ಳಿಯ ಪಿ. ಬಿ. ರಸ್ತೆಯಲ್ಲಿರುವ ಇಂದ್ರ ಭವನದ ಹತ್ತಿರ ತಡವಿಕೊಂಡ.
“ಸರ್, ನೀವು ಬಹಳ ಚೆನ್ನಾಗಿ ಬರೆಯುತ್ತೀರಿ. ಆದರೆ ಪಿ. ಎಚ್. ಡಿ. ಮಾಡುವ ಬಾಲಕ/ಬಾಲಿಕೆಯರ ಮೇಲೆ ನಿಮಗೆ ಯಾಕೆ ಅಷ್ಟು ಸಿಟ್ಟು? ನಾವು ನಿಮಗೆ ಏನು ಅಂತಹ ದ್ರೋಹ ಮಾಡಿದ್ದೇವೆ ಅಂತ ನಮ್ಮನ್ನು ಲೇವಡಿ ಮಾಡುತ್ತೀರಿ? ಅಕಸ್ಮಾತ್ ಎಲ್ಲೋ ಕೆಲವು ಪಿ. ಎಚ್. ಡಿ. ಬಾಲಿಕೆಯರು ನಿಮಗೆ ತೊಂದರೆ ಕೊಟ್ಟಿರಬಹುದು. ಅದನ್ನೇ ನೀವು ಅಷ್ಟು ದೊಡ್ಡದು ಮಾಡುವುದು ಏಕೆ?” ಎಂದು ತುಂಬ ತ್ರಸ್ತನಾಗಿ ಕೇಳಿದ.
ಪಿ. ಎಚ್. ಡಿ. ಮಾಡದ ನನಗೆ ಪಿ. ಎಚ್. ಡಿ. ಮಾಡಿದರೆ ಸಿಗುವ ಸೌಲಭ್ಯಗಳ ಕುರಿತು ವಿವರವಾಗಿ ತಿಳಿ ಹೇಳಿದ, “ಸರ್, ಪಿ. ಎಚ್. ಡಿ. ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅದಕ್ಕೂ ಅದೃಷ್ಟ ಬೇಕು. ವಾಸ್ತವವಾಗಿ ಪಿ. ಎಚ್. ಡಿ. ಮಾಡುವವರಷ್ಟು ಸುಖಜೀವಿಗಳು ಬೇರೆಲ್ಲೂ ಇಲ್ಲ. ಐ. ಎ. ಎಸ್., ಐ. ಪಿ. ಎಸ್. ಮಾಡಿದ ಜನ ಸಹ ನಮಗೆ ಸಮವಲ್ಲ! ನಮಗೆ ಸಂಶೋಧನೆ ಮಾಡಿದರೂ, ಮಾಡದಿದ್ದರೂ ಪ್ರೋತ್ಸಾಹ ಧನ ಸಿಗುತ್ತದೆ. ವಿಶ್ವವಿದ್ಯಾಲಯದಲ್ಲಿ ಉಚಿತ ಹಾಸ್ಟೆಲ್, ಊಟೋಪಚಾರ ಮತ್ತು ವೈ-ಫೈ ಕನೆಕ್ಷನ್ ಸಿಗುತ್ತದೆ. ಗೈಡುಗಳ ಜೊತೆ ಚೆನ್ನಾಗಿದ್ದರೆ ಸಾಕು. ಅದರಲ್ಲೂ ನಮ್ಮ ಜಾತಿಯವರಾದರಂತೂ ಮುಗಿಯಿತು, ನಮ್ಮನ್ನು ಕೇಳುವವರೇ ಇಲ್ಲ! ಇನ್ನು ಪ್ರತಿಭಾವಂತರಾದ ಮತ್ತು ಸುಂದರಿಯರಾದ ಪಿ. ಎಚ್. ಡಿ. ಹುಡುಗಿಯರ ಬಗ್ಗೆ ಬಹುಶಃ ನಿಮಗೆ ಗೊತ್ತಿಲ್ಲವೆನಿಸುತ್ತದೆ. ಇಂದ್ರನ ಆಸ್ಥಾನದಲ್ಲಿರುವ ದೇವಕನ್ಯೆಯರೇ ಕಲಿಯುಗದಲ್ಲಿ ಪಿ. ಎಚ್. ಡಿ. ಮಾಡುವ ಹುಡುಗಿಯರಾಗಿ ಹುಟ್ಟಿದ್ದಾರೆ! ಗರ್ಲ್ ಫ್ರೆಂಡ್ಸ್ ಇಲ್ಲದ, ಪಿ. ಎಚ್. ಡಿ. ಮಾಡದ ನಿಮಗೆ ಇದೆಲ್ಲ ಹೇಗೆ ಗೊತ್ತಾಗಬೇಕು ಹೇಳಿ…” ಎಂದ.
ಅವನು ಪಿ. ಎಚ್. ಡಿ. ಮಾಡುವವರ ಅದೃಷ್ಟದ ಬಗ್ಗೆ ಹೇಳುವುದನ್ನು ಕೇಳಿ ನಾನು ಕಂಗಾಲಾಗಿ ಹೋದೆ. ಅವನು ಕೊನೆಗೆ ಹೇಳಿದ, “ಇಂದ್ರನ ಆಸ್ಥಾನದಲ್ಲಿರುವ ದೇವಕನ್ಯೆಯರೇ ಕಲಿಯುಗದಲ್ಲಿ ಪಿ. ಎಚ್. ಡಿ. ಮಾಡುವ ಹುಡುಗಿಯರಾಗಿ ಹುಟ್ಟಿದ್ದಾರೆ!” ಎಂಬ ಮಾತು ನನ್ನನ್ನು ತುಂಬ ತೀವ್ರವಾಗಿ ಪ್ರಭಾವಿಸಿತು! ದೇವಕನ್ಯೆಯರ ಸಾಮೀಪ್ಯ ಮತ್ತು ಸಹವಾಸ ಅನುಭವಿಸಲಾದರೂ ನಾನು ಪಿ. ಎಚ್. ಡಿ. ಮಾಡಬೇಕಿತ್ತು ಎನಿಸಿತು! ಮರಿ ಬುದ್ಧಿಜೀವಿಯಂತಿದ್ದ ಆ ಸಣಕಲು ವ್ಯಕ್ತಿ ತನ್ನ ವಾಗ್ವೈಖರಿಯಿಂದ ಪಿ. ಎಚ್. ಡಿ. ಮಾಡುವ ಬಾಲಿಕೆಯರನ್ನು ದೇವಕನ್ಯೆಯರನ್ನಾಗಿ ಮಾಡಿ ನನ್ನಂತಹ ಸ್ವಾಮಿ ವಿವೇಕಾನಂದರ ಅನುಯಾಯಿಯನ್ನು ಸಹ ಬದಲಿಸಲು ಹೊರಟಿದ್ದ! ಆ ಮರಿ ಬುದ್ಧಿಜೀವಿಯ ಕೊರೆತ ನಿರಂತರವಾಗಿ ಸಾಗಿತ್ತು. ಕೊನೆಗೂ ವಿಶ್ವ ಪ್ರಯತ್ನ ಪಟ್ಟು ಅವನಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಯಿತು.
ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾದ ಬುದ್ಧಿಜೀವಿ ಇನ್ನೂ ವಿಚಿತ್ರ ಮನುಷ್ಯ. ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ಈ ಮಹಾಶಯ ಶಿಫಾರಸ್ಸು, ಹಣ ಮತ್ತು ಜಾತಿ ಬಲದಿಂದ ವಿಶ್ವವಿದ್ಯಾಲಯದಲ್ಲಿ ಕೆಲಸ ಗಿಟ್ಟಿಸಿಕೊಂಡ. ವಿಶ್ವವಿದ್ಯಾಲಯ ಸೇರಿದ ನಂತರ ಅವನು ನಿಧಾನವಾಗಿ ಬದಲಾಗುತ್ತ ಹೋದ. ಬರು ಬರುತ್ತಾ ಹೆಣ್ಣಿನ ಹುಚ್ಚು ಹೆಚ್ಚಾಗುತ್ತ ಹೋಯಿತು. ಇವನ ಬಳಿ ಪಿ. ಎಚ್. ಡಿ. ಮಾಡಲು ಬರುವ ವಿವಾಹಿತ ಹೆಂಗಸರು ಒಂದೇ ವರ್ಷದಲ್ಲಿ ಗಂಡನಿಗೆ ವಿಚ್ಛೇದನ ಕೊಡಲು ತಯಾರಾದರೆ, ಅವಿವಾಹಿತ ಹುಡುಗಿಯರು ಸತ್ತರೂ ಮದುವೆಯಾಗುವುದಿಲ್ಲವೆಂದು ಹಠ ಹಿಡಿಯುತ್ತಾರೆ!
ಈ ಮಹಾಶಯ, “ಮದುವೆ ಜೀವನದ ದೊಡ್ಡ ತೊಡಕು, ಸಾಧನೆ ಮಾಡಲು ಸಂಸಾರವೇ ಅಡ್ಡಿ, ಗಂಡ ಸ್ವಾತಂತ್ರ್ಯ ಹರಣ ಮಾಡುವ ಪ್ರಾಣಿ, ಹೆಣ್ಣು ಮಕ್ಕಳು ಸ್ವತಂತ್ರವಾಗಿರಬೇಕು. ಅದಕ್ಕೆ ಅಡ್ಡಿಯಾದ ಮದುವೆ ಎಂಬ ಬಂಧನ ಕಿತ್ತೊಗೆಯಬೇಕು…” ಎಂದು ನಿರಂತರ ಉಪದೇಶ ಕೊಡುತ್ತಾನೆ. ಯಾರಾದರೂ ಆಪಾದನೆಗೆ ಹೆದರಿದರೆ, “ಪ್ರತಿಭಾವಂತರು ಮತ್ತು ಸಾಧಕರಿಗೆ ಆಪಾದನೆಗಳು ಸಹಜ…” ಎಂದು ಸಮಾಧಾನ ಹೇಳುತ್ತಾನೆ!
ಈ ಬ್ರೈನ್ ವಾಶ್ ಸ್ಪೇಷಲಿಸ್ಟನ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ. ಮಾಡುವ ಹುಡುಗಿಯೊಬ್ಬಳು ತುಂಬ ಸೊಗಸಾಗಿ ಹಾಡುತ್ತಾಳೆ. ಇವನು ಮಗಳ ವಯಸ್ಸಿನ ಅವಳಿಗೂ ಗಾಳ ಹಾಕಿದ. ಆ ಹುಡುಗಿ ಗಾಳಕ್ಕೆ ಬಿದ್ದಿತು. ಸದ್ಯ ಆ ಹುಡುಗಿಯ ಪರಿಸ್ಥಿತಿ ತುಂಬ ಶೋಚನೀಯವಾಗಿದೆ. ಅತ್ತ ಪಿ. ಎಚ್. ಡಿ. ಯೂ ಇಲ್ಲ, ಇತ್ತ ಸಂಗೀತವೂ ಇಲ್ಲ! ಅತ್ತ ಉದ್ಯೋಗವೂ ಇಲ್ಲ, ಇತ್ತ ಮದುವೆಯೂ ಇಲ್ಲ! ಹೆಸರು ಕೆಟ್ಟಿರುವುದರಿಂದ ಎರಡು ಸಲ ಆ ಗಾಯಕಿಯ ಮದುವೆ ಮುರಿದು ಬಿದ್ದಿದೆ. ಆ ಹುಡುಗಿಯ ಪರಿಸ್ಥಿತಿ ನೆನೆದರೆ ವಿಷಾದವಾಗುತ್ತದೆ.
ಕಳೆದ ನಾಲ್ಕೂವರೆ ದಶಕಗಳಿಂದ ಕನ್ನಡ ಸಾಹಿತ್ಯಲೋಕದಲ್ಲಿರುವ ಬುದ್ಧಿಜೀವಿಯೊಬ್ಬ ಜಿಲ್ಲೆಯೊಂದಕ್ಕೆ ಮಾತ್ರ ಸೀಮಿತಗೊಂಡಿದ್ದಾನೆ. ಅವನನ್ನು ಕೇಳದೆ, ಅವನ ಒಪ್ಪಿಗೆ ಪಡೆಯದೆ ಯಾವ ಸಾಹಿತ್ಯಕ ಕಾರ್ಯಕ್ರಮಗಳೂ ಆ ಜಿಲ್ಲೆಯಲ್ಲಿ ನಡೆಯುವಂತಿಲ್ಲ. ಒಂದರ್ಥದಲ್ಲಿ ಅವನು ಆ ಜಿಲ್ಲೆಯ ಸಾಹಿತಿಗಳ ಪಾಲಿಗೆ ಸರ್ವಾಧಿಕಾರಿಯಿದ್ದಂತೆ. ಅತ್ಯಂತ ಕೀಳು ಅಭಿರುಚಿ ಹೊಂದಿರುವ ಈ ಬುದ್ಧಿಜೀವಿಗೆ ಒಳ್ಳೆಯ ಸಾಹಿತಿಗಳು ಮತ್ತು ಸಾಹಿತ್ಯವನ್ನು ಕಂಡರೆ ಸುತರಾಂ ಆಗುವುದಿಲ್ಲ. ದ್ವಿತೀಯ ದರ್ಜೆಯ ಲೇಖಕ/ಕಿಯರ ಕಳಪೆ ಪುಸ್ತಕಗಳಿಗೆ ಯದ್ವಾತದ್ವಾ ಹೊಗಳಿ ಮುನ್ನುಡಿ ಬರೆದು ಕೊಡುತ್ತಾನೆ. ಈ ಮಹಾಶಯ ಒಂದು ಕುಟುಂಬದ ಸ್ವತ್ತಾಗಿರುವ ರಾಜಕೀಯ ಪಕ್ಷವೊಂದಕ್ಕೆ ಕಳೆದ ನಾಲ್ಕೂವರೆ ದಶಕಗಳಿಂದ ತುಂಬ ನಿಷ್ಠೆ ತೋರುತ್ತ ಬಂದಿದ್ದಾನೆ. ಆ ನಿಷ್ಠೆ ಕೊನೆಗೂ ಫಲ ಕೊಟ್ಟಿತು. ಈ ಬುದ್ಧಿಜೀವಿಗೆ ಇತ್ತೀಚೆಗೆ ಬಹುದೊಡ್ಡ ಮೊತ್ತದ ರಾಜ್ಯ ಮಟ್ಟದ ಪ್ರಶಸ್ತಿಯೊಂದು ಬಂತು. ಆ ಸಂಭ್ರಮವನ್ನು ನೋಡಲು ಎರಡು ಕಣ್ಣು ಸಾಲದು!
ಕೆಲವು ಬುದ್ಧಿಜೀವಿಗಳು ಅಕಾಡೆಮಿ, ಪರಿಷತ್ತು, ಪ್ರಾಧಿಕಾರ ಮತ್ತು ಇತರೆ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಲ್ಲಿ ಹೇಗಾದರೂ ಸೇರಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯಲೂ ಸಿದ್ಧ! ಬೆಂಗಳೂರಿನ ಒಬ್ಬ ಬುದ್ಧಿಜೀವಿ ಖಾಯಮ್ಮಾಗಿ ಒಂದು ರಾಜಕೀಯ ಪಕ್ಷದ ಹಿಂಬಾಲಕನಾಗಿದ್ದಾನೆ. ಆ ಪಕ್ಷದ ಕೆಲವು ಶಾಸಕರು ಪಕ್ಷಾಂತರ ಮಾಡಿದರೂ, ಇವನು ಆ ರೀತಿ ಮಾಡಲಿಲ್ಲ. ಆ ಪಕ್ಷ ಮತ್ತು ಅದರ ನಾಯಕರ ಕುರಿತು ಇವನಿಗಿರುವ ನಿಷ್ಠೆ ಅಚಲವಾದುದು! ಇವನಿಗೆ ಎಂ. ಎಲ್. ಸಿ. ಯಾಗಬೇಕೆಂಬ ತೀವ್ರ ಹಂಬಲವಿತ್ತು. ಸ್ವತಃ ಮುಖ್ಯಮಂತ್ರಿಯೇ ಎಂ. ಎಲ್. ಸಿ. ಮಾಡುವುದಾಗಿ ಭರವಸೆ ನೀಡಿದ್ದ. ಆದರೆ ಕೊನೆಯ ಕ್ಷಣದಲ್ಲಿ ಹೈಕಮಾಂಡ್ ಆಜ್ಞೆಯಂತೆ ಬೇರೆಯವರನ್ನು ಎಂ. ಎಲ್. ಸಿ. ಮಾಡಬೇಕಾಯಿತು. ಕೊನೆಗೆ ಈ ನಿಷ್ಠಾವಂತ ಬುದ್ಧಿಜೀವಿಗೆ ಪ್ರಾಧಿಕಾರವೊಂದರ ಅಧ್ಯಕ್ಷಗಿರಿ ಕೊಟ್ಟು ಸಮಾಧಾನ ಮಾಡಲಾಯಿತು!
ಬೆಂಗಳೂರಿನ ಬುದ್ಧಿಜೀವಿಯೊಬ್ಬ ಪ್ರಾಮಾಣಿಕತೆಯ ಪ್ರತಿನಿಧಿಯಂತೆ ವರ್ತಿಸುತ್ತಾನೆ. ಇವನು ನೌಕರಿ ಪಡೆದದ್ದು ಹೆಂಡತಿಯ ಮನೆಯವರು ಕೊಟ್ಟ ವರದಕ್ಷಿಣೆ ಹಣವನ್ನು ಲಂಚವಾಗಿ ಕೊಟ್ಟು. ಆ ನೌಕರಿಯನ್ನು ಪಡೆದದ್ದಾಗಲೀ, ಅಲ್ಲಿಂದ ಒಂದೊಂದೇ ಮೆಟ್ಟಿಲೇರಿ ದೊಡ್ಡ ಹುದ್ದೆಗೆ ಹೋದದ್ದಾಗಲಿ ಅಡ್ಡ ದಾರಿ ಮತ್ತು ಹಿಂಬಾಗಿಲಿನ ಮೂಲಕವೇ ಹೊರತು ನೇರ ದಾರಿ ಮತ್ತು ಮುಂಬಾಗಿಲಿನ ಮೂಲಕವಲ್ಲ. ಅವನು ಮನೆಯಿಂದ ಆಫೀಸಿಗೆ ಹೋಗಿ ಬರುವುದು ಹಿಂಬಾಗಿಲಿನ ಮೂಲಕ! ಎಲ್ಲೇ ಹೋದರೂ, ಏನೇ ಮಾಡಿದರೂ ಅದು ಹಿಂಬಾಗಿಲಿನ ಮೂಲಕವೇ ಆಗಬೇಕು. ಒಮ್ಮೆ ತನ್ನ ಜಾತಿ ಬಾಂಧವರಾದ ಮಂತ್ರಿಯೊಬ್ಬರನ್ನು ಭೇಟಿಯಾಗಲು ಹೋದ ಈ ಮಹಾಶಯ ತನ್ನ ಎಂದಿನ ರೂಢಿಯಂತೆ ಹಿಂಬಾಗಿಲ ಮೂಲಕ ಪ್ರವೇಶಿಸಲು ಯತ್ನಿಸಿದ. ಸರಿ, ಮಂತ್ರಿಯ ಮೊಮ್ಮಕ್ಕಳು ಸಾಕಿದ್ದ ಧಡೂತಿ ನಾಯಿ ಇವನು ಯಾರೋ ಕಳ್ಳನಿರಬಹುದೆಂದು ತಿಳಿದು ಇವನ ತೊಡೆಗೆ ಬಾಯಿ ಹಾಕಿ ಕಚ್ಚಿತು! ಇಷ್ಟಾದರೂ ಇವನಿಗೆ ಬುದ್ಧಿ ಬರಲಿಲ್ಲ! ಸರ್ಕಾರಿ ಕೃಪಾಪೋಷಿತ ಸಂಸ್ಥೆಯೊಂದಕ್ಕೆ ಅಧ್ಯಕ್ಷನಾಗಿ ಮಾಡಿದಾಗ ಇವನಿಗೆ ತುಂಬ ತೊಂದರೆಗಿಟ್ಟುಕೊಂಡಿತು. ಏಕೆಂದರೆ ಆ ಸಂಸ್ಥೆಯ ಆಫೀಸಿರುವ ಕಟ್ಟಡಕ್ಕೆ ಹಿಂಬಾಗಿಲಿರಲಿಲ್ಲ! ಇವನು ತನ್ನ ಸ್ವಂತ ಹಣದಿಂದ ಹಿಂಬದಿಯ ಗೋಡೆಯನ್ನೊಡೆದು ಒಂದು ಬಾಗಿಲು ಮಾಡಿಸಿಕೊಂಡ ನಂತರವೇ ನೆಮ್ಮದಿಯಿಂದ ಓಡಾಡಲು ಸಾಧ್ಯವಾಯಿತು!
ಕರ್ನಾಟಕದ ಕೆಲವು ಬುದ್ಧಿಜೀವಿಗಳು ಜಾತಿ ಮೀಸಲಾತಿಯಡಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಾಧಿಕಾರದ ಅಧ್ಯಕ್ಷನಾದ ಬುದ್ಧಿಜೀವಿಯೊಬ್ಬ ಮಾಡಿದ ಮೊದಲ ಕೆಲಸವೆಂದರೆ ತನಗಾಗದ ಜಾತಿಯ ಎಲ್ಲ ನೌಕರರನ್ನು ಅಲ್ಲಿಂದ ವರ್ಗಾವಣೆ ಮಾಡಿಸಿದ್ದು. ನಂತರ ಬಹುತೇಕ ತನ್ನ ಜಾತಿಯ ಮತ್ತು ತನಗೆ ಬೇಕಾದವರ ಜಾತಿಯ ನೌಕರರನ್ನು ಪ್ರಾಧಿಕಾರಕ್ಕೆ ಬರುವಂತೆ ನೋಡಿಕೊಂಡ. ಅಲ್ಲಿ ಕೆಲಸ ಮಾಡುವವರಿಗೆ ಹಣವನ್ನು ಹೇಗೆಲ್ಲ ಹೊಡೆಯಬೇಕೆಂದು ಹೇಳಿ ಕೊಟ್ಟು ಅವರ ಪಾಲಿನ ಗುರುವಾದ! ಅಲ್ಲಿ ಕೆಲಸ ಮಾಡಿ ನಿವೃತ್ತರಾದ ಒಬ್ಬರ ಬಳಿ ನಾನು ಇದರ ಬಗ್ಗೆ ಕೇಳಿದಾಗ, “ಐದನೆ ಕ್ಲಾಸು, ಏಳನೇ ಕ್ಲಾಸು ಅಥವಾ ಬಹಳ ಮಾಡಿ ಎಸ್.ಎಸ್.ಎಲ್.ಸಿ. ಮಾಡಿರುವ ಯಕಶ್ಚಿತ್ ರಾಜಕಾರಣಿಗಳೆಲ್ಲಿ? ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿ, ಕನ್ನಡ ಪುಸ್ತಕಗಳನ್ನು ಬರೆದ ನಮ್ಮ ಗುರುಗಳೆಲ್ಲಿ? ದೊಡ್ಡವರದು ಯಾವಾಗಲೂ ದೊಡ್ಡದೆ ಕಣ್ರೀ… ದೆಹಲಿಯಿಂದ ಸಿ. ಬಿ. ಐ. ಬಂದರೂ ಕಂಡು ಹಿಡಿಯಲಿಕ್ಕೆ ಆಗಿರಬಾರದು ಹಾಗೆ ಹಣ ಹೊಡೆಯುತ್ತಿದ್ದರು. ಈ ಅಶಿಕ್ಷಿತ ರಾಜಕಾರಣಿಗಳು ಏನ್ರೀ… ಇವತ್ತು ತಿಂದು, ನಾಳೆಗೆ ಜೈಲಿಗೆ ಹೋದರೆ ಏನು ಬಂತು ಫಲ… ನಮ್ಮ ಗುರುಗಳು ಮುಖ್ಯಮಂತ್ರಿ ಆಗಿದ್ದರೆ ತಮಿಳುನಾಡನ್ನೇ ಖರೀದಿ ಮಾಡುತ್ತಿದ್ದರು!” ಎಂದ. ನಾನು ಸ್ತಂಭೀಭೂತನಾಗಿ ಅಲ್ಲಿಂದ ಜಾಗ ಖಾಲಿ ಮಾಡಿದೆ. ಇಷ್ಟೆಲ್ಲ ಅನಾಹುತ ಮಾಡಿದ ಆ ಬುದ್ಧಿಜೀವಿ ಜನರೆದುರು ತುಂಬ ಪ್ರಾಮಾಣಿಕನಂತೆ ನಟಿಸುತ್ತಿದ್ದ.
ಮತ್ತೊಬ್ಬ ಬುದ್ಧಿಜೀವಿ ಪ್ರೇಮ ವಿವಾಹವಾಗಿದ್ದ. ಕೆಳ ಜಾತಿಯಿಂದ ಬಂದ ತಾನು ಮೇಲ್ಜಾತಿಯ ಹುಡುಗಿಯನ್ನು ಮದುವೆಯಾಗಿದ್ದೇನೆಂಬ ಅಂಶ ಅವನಿಗೆ ವಿಚಿತ್ರ ತೃಪ್ತಿ ಕೊಟ್ಟಿತ್ತು! ದುರ್ದೈವವಶಾತ್ ಅವನ ಹೆಂಡತಿ ಸಹ ಎಲ್ಲ ಹೆಂಡತಿಯರಂತೆಯೇ ಇವನನ್ನು ಕಂಟ್ರೋಲಿನಲ್ಲಿಟ್ಟದ್ದಳು. ಹೊರಗೆಷ್ಟೇ ದೊಡ್ಡ ಗಂಟಲಿನಲ್ಲಿ ಅರಚಿದರೂ, ಮನೆಯಲ್ಲಿ ಸಾಕಿದ ನಾಯಿಯಂತೆ ತೆಪ್ಪಗಿರುತ್ತಿದ್ದ. ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾದ ಇವನು ತನ್ನ ವಿದ್ಯಾರ್ಥಿಗಳಿಗೆ ಪ್ರೇಮ ವಿವಾಹವಾಗಬೇಕೆಂದು ಪ್ರಚೋದಿಸುತ್ತಿದ್ದ. ಮ್ಯಾನೇಜಮೆಂಟಿನವರು ಮತ್ತು ಪ್ರಿನ್ಸಿಪಾಲರು ಹೀಗೆ ಮಾಡಬಾರದೆಂದು ಹೇಳಿದ್ದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆಯೆಂದು ಕೂಗಾಡಿ, ಅಂಗಿ ಹರಿದುಕೊಂಡ!
ಮುಂದೆ ಕೆಲವೇ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಡಿಗ್ರಿ ಓದುತ್ತಿದ್ದ ಈ ಬುದ್ಧಿಜೀವಿಯ ಮಗಳು, “ಮಮ್ಮಿ, ಡ್ಯಾಡಿ ಐಯಾಮ್ ಸೋ ಸಾರಿ… ನಾನು ಮೆಚ್ಚಿದ ಹುಡುಗನೊಂದಿಗೆ ಲವ್ ಮ್ಯಾರೇಜ್ ಆಗಲಿದ್ದೇನೆ. ಒಂದು ಕಾಲದಲ್ಲಿ ಲವ್ ಮ್ಯಾರೇಜ್ ಆದ ನೀವು ನನಗೆ ಸಪೋರ್ಟ್ ಮಾಡುತ್ತೀರಿ ಎಂಬ ನಂಬಿಕೆಯಿದೆ…” ಎಂದು ಒಂದು ಚಿಕ್ಕ ಪತ್ರ ಬರೆದಳು. ಆ ಪತ್ರವನ್ನೋದಿದ ಬುದ್ಧಿಜೀವಿ ತಕ್ಷಣ ಮೂರ್ಛೆ ಹೋದ!
ಕರ್ನಾಟಕದಲ್ಲಿ ಕೆಲವು ಮೂರ್ಖ ಬುದ್ಧಿಜೀವಿಗಳಿದ್ದಾರೆ. ತಮಗಾಗದ ಸರ್ಕಾರ ತಮ್ಮ ಮೇಲೆ ನಿಗಾ ಇಟ್ಟಿದೆ. ತಮ್ಮನ್ನು ಯಾರೋ ನಿರಂತರವಾಗಿ ಹಿಂಬಾಲಿಸುತ್ತಿದ್ದಾರೆ. ತಮ್ಮ ಪುಸ್ತಕಗಳನ್ನು ಓದಲಾರದಂತೆ ಓದುಗರನ್ನು ತಡೆಯಲಾಗುತ್ತಿದೆ. ತಮ್ಮ ಪುಸ್ತಕಗಳನ್ನು ಪ್ರಕಾಶಕರು ಪ್ರಕಟಿಸಲು ಹಿಂಜರಿಯುತ್ತಿದ್ದಾರೆ. ಒಟ್ಟಿನಲ್ಲಿ ತಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆಂಬ ಭ್ರಮೆಯಲ್ಲಿದ್ದಾರೆ. ಈ ಭ್ರಮೆ ಅವರಿಗೆ ಒಂದು ರೀತಿಯಲ್ಲಿ ಸಮಾಧಾನ ತರುತ್ತದೆ.
ವಾಸ್ತವದಲ್ಲಿ ದ್ವಿತೀಯ ದರ್ಜೆಯ ಲೇಖಕ/ಕಿಯರಾದ ಇವರ ರಾಜಕೀಯ ಅಜೆಂಡಾಗಳಿರುವ ಪುಸ್ತಕಗಳನ್ನು ಓದುಗರು ಹಿಂದೆಯೂ ಓದುತ್ತಿರಲಿಲ್ಲ, ಈಗಲೂ ಓದುತ್ತಿಲ್ಲ ಮತ್ತು ಮುಂದೆಯೂ ಓದುವುದಿಲ್ಲ! ಈಗಾಗಲೇ ಇವರ ಕಳಪೆ ಪುಸ್ತಕ ಪ್ರಕಟಿಸಿ ಆರ್ಥಿಕವಾಗಿ ಪಾಪರಾಗಿರುವ ಪ್ರಕಾಶಕರಾರೂ ಇವರ ಕಳಪೆ ಪುಸ್ತಕ ಪ್ರಕಟಿಸುವ ಧೈರ್ಯ ಮಾಡಲು ಸಾಧ್ಯವೇ ಇಲ್ಲ! ಇನ್ನು ಓದು-ಬರಹ ಬಿಟ್ಟು ರಾಜಕೀಯ ಮಾಡುತ್ತ ತಿರುಗುವ ಇವರನ್ನು ಸಾಮಾನ್ಯ ಜನರು ವಿದೂಷಕರಂತೆ ನೋಡುತ್ತಾರೆ! ಬಲಪಂಥೀಯ, ಎಡಪಂಥೀಯ, ಸಮ್ಮಿಶ್ರ ಯಾವ ಸರ್ಕಾರವಿದ್ದರೂ ಸರಿಯೇ, ಅವರಾರೂ ಈ ದ್ವಿತೀಯ ದರ್ಜೆಯ ಬುದ್ಧಿಜೀವಿಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ!
ಕೆಲವು ರಾಜಕೀಯ ಪಕ್ಷಗಳ ಮುಖಂಡರ ಹಿಂಬಾಲಕರಾಗಿ ಕೆಲವು ಸರ್ಕಾರಿ ಸವಲತ್ತು, ಅಕಾಡೆಮಿ, ಪ್ರಾಧಿಕಾರ ಮತ್ತು ಇತರೆ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಲ್ಲಿ ಅಧ್ಯಕ್ಷತೆ ಅಥವಾ ಸದಸ್ಯತ್ವ ಮತ್ತು ಕೆಲವು ಪ್ರಶಸ್ತಿ – ಪುರಸ್ಕಾರ ಪಡೆಯುವ ಇವರಿಂದ ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ! ಇವರು ಬರೆಯುವ ಕಳಪೆ ಪುಸ್ತಕಗಳು ರದ್ದಿಗೆ ಹಾಕಲು ಮಾತ್ರ ಯೋಗ್ಯ! ಹಾಗೆ ನೋಡಿದರೆ ಇವರು ಅರೆಕಾಲಿಕ ಸಾಹಿತಿಗಳು ಮತ್ತು ಪೂರ್ಣಕಾಲಿಕ ರಾಜಕಾರಣಿಗಳಾಗಿರುವುದರಿಂದ ಸಾಹಿತ್ಯವನ್ನು ತೊರೆದು ಪೂರ್ಣ ಪ್ರಮಾಣದ ರಾಜಕಾರಣಿಗಳಾಗುವುದು ಒಳಿತು. ಇನ್ನು ಇವರು ಬರೆಯುವುದನ್ನು ಮತ್ತು ಪುಸ್ತಕ ಪ್ರಕಟಿಸುವುದನ್ನು ನಿಲ್ಲಿಸಿದರೆ ಖಂಡಿತವಾಗಿಯೂ ಅದರಿಂದ ಕನ್ನಡ ಸಾಹಿತ್ಯಕ್ಕೆ ಒಳಿತಾಗಲಿದೆಯೇ ಪರಂತು ಕೆಡುಕಾಗಲು ಸಾಧ್ಯವೇ ಇಲ್ಲ!