ಗೆದ್ದು ಸೋತವಳು

`ಸಾನಿಧ್ಯಾ, ದೂರ ಹೋಗಬೇಡ. ದೂರ ಸಹಿಸಲಾರೆ. ನೀನಿಲ್ಲದ ನಾನು...? ಒಂದರೆಕ್ಷಣವೂ ಊಹಿಸಲಾರೆ. ನಿನ್ನುಸಿರೇ ನನ್ನುಸಿರು...' `ದರ್ಶನ್, ಯಾಕೀ ಪ್ರಲಾಪ? ನನ್ನುಸಿರೇ ನಿನ್ನುಸಿರು. ನಿನ್ನುಸಿರೇ ನನ್ನುಸಿರು. ಅನುಮಾನವೇಕೆ...? ನಾನು ನಿನ್ನ ಜೊತೆಗೇ ಇರುವೆನಲ್ಲ...? ನಿನ್ನಿಂದ ದೂರ ಸರಿಯುವ ಮಾತೇ ಇಲ್ಲವಲ್ಲ...? ನಾನೀಗ ನಿನ್ನೆದೆಯ ಮೇಲೆ ಮುಖವಿರಿಸಿ ನಿನ್ನ ಮಾತುಗಳನ್ನು ಆಲಿಸುತ್ತಿರುವೆನಲ್ಲ...? ನನ್ನ ಪಿಸುಮಾತುಗಳು ನಿನಗೆ ಕೇಳಿಸುತ್ತಿಲ್ಲವೇ...?' ಏನೇನೋ ಕನವರಿಕೆಯ ಮಾತುಗಳು. ಸಾನಿಧ್ಯಾಳಿಗೆ ಥಟ್ಟಂತ ಎಚ್ಚರವಾಗಿತ್ತು. ಸುತ್ತಲೂ ಕಣ್ಣಾಡಿಸಿದಳು. ಮಕ್ಕಳು ಯಶಸ್ಸು ಮತ್ತು ಯಶಸ್ವಿನಿ ಅಷ್ಟೇ ಕಾಣುತ್ತಿದ್ದಾರೆ. ಹಾಸಿಗೆಯನ್ನು ತಡಕಾಡಿದಳು. ದರ್ಶನ್ ಎಲ್ಲೂ ಕಾಣುತ್ತಿಲ್ಲ. ಗೋಡೆ ಗಡಿಯಾರ ರಾತ್ರಿ ಒಂದು ಗಂಟೆಯಾಗಿದ್ದನ್ನು ತೋರಿಸುತ್ತಿತ್ತು. `ಅಂದರೆ ಇಷ್ಟೊತ್ತು ಕನವರಿಸಿದ್ದು ಕನಸಿನಲ್ಲಾ...? ತನ್ನೆದೆಯೊಳಗೆ ಬಚ್ಚಿಟ್ಟುಕೊಂಡು ಬೆಂದು ಬೇಯುತ್ತಿದ್ದ ವೇದನೆಯನ್ನು ಕನಸಿನ ಮೂಲಕ ದರ್ಶನ್ ಈ ಅವಿವೇಕಿಯ ಅರಿವಿಗೆ ತಂದನೇ? ಕಳೆದುಕೊಂಡ ಮೇಲೆ ವಸ್ತುವಿನ ಬೆಲೆ ಗೊತ್ತಾಗುವ ಹಾಗೆ ನನಗೀಗ ದರ್ಶನ್‍ನ ಬೆಲೆ ಗೊತ್ತಾಗುತ್ತಿದೆ. ದರ್ಶನ್ ದೂರ ಹೋಗಿಬಿಟ್ಟನಲ್ಲ? ಮತ್ತೆ ಮರಳಿಬಾರದ ಲೋಕದಲ್ಲಿ ಚಿರನಿದ್ರೆಯಲ್ಲಿ ಮುಳುಗಿ ತನ್ನೆಲ್ಲ ನೋವುಗಳಿಗೆ ಉತ್ತರ ಕಂಡುಕೊಂಡನಲ್ಲ? ಅವನ ಅಗಲಿಕೆಗೆ ನನ್ನ ಮೊಂಡುತನವೇ ಕಾರಣ. ನನ್ನಿಂದ ಅವನು ತನ್ನವರೆಲ್ಲರಿಂದ ದೂರವಾಗಿದ್ದ.' ಹೀಗೆ ಏನೇನೋ ಯೋಚನೆಗಳು ಸಾನಿಧ್ಯಾಳ ಮನಸ್ಸನ್ನು ಮುತ್ತಿಕ್ಕಿ ಹುರಿದು ತಿನ್ನಲಾರಂಭಿಸಿದವು. ಮ್ಲಾನವದನಳಾಗಿ ನೈಟ್ ಲ್ಯಾಂಪಿನ ಮಂದ ಬೆಳಕಿನಲ್ಲಿ ಸೂರನ್ನೇ ದಿಟ್ಟಿಸತೊಡಗಿದಳು. ಭಾವೋದ್ವೇಗಕ್ಕೆ ಒಳಗಾದಳು. ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಯಲು ಪ್ರಯತ್ನಿಸಿದಳು. ಅದು ನಿಂತೀತೇ...? ತುಂಬಿದ ಕೆರೆಗೆ ಕೋಡಿಬಿದ್ದು ನೀರು ಪ್ರವಹಿಸುವಂತೆ ದುಃಖ ಉಮ್ಮಳಿಸಿ ಬಂದಿತ್ತು. ಕಣ್ಣೀರ ಕಟ್ಟೆಗೆ ಕೋಡಿ ಬಿದ್ದಿತು. ಪ್ರವಹಿಸತೊಡಗಿತು. ಎದೆಯ ಮೇಲಿನ ವಸ್ತ್ರ ಒದ್ದೆಯಾಗತೊಡಗಿತು. ಮಕ್ಕಳಿಬ್ಬರನ್ನೂ ತಬ್ಬಿಕೊಂಡು ರೋಧಿಸತೊಡಗಿದಳು. `ಅಯ್ಯೋ ಶಿವನೇ, ಇದೇನು ಮಾಡುತ್ತಿರುವೆ? ಏನೂ ಅರಿಯದ ಅಮಾಯಕ ಮುದ್ದು ಕಂದಮ್ಮಗಳ ನಿದ್ದೆ ಕೆಡಿಸಲು ಮುಂದಾಗುತ್ತಿರುವೆನಲ್ಲ? ಛೇ ಛೇ! ನಿದ್ರಾಭಂಗವಾಗಿ ಮಕ್ಕಳು ರಚ್ಚೆ ಹಿಡಿದರೆ...? ಬೇಡ ಬೇಡ! ನನ್ನ ಗೋಳು ನನಗೇ ಇರಲಿ. ಮಕ್ಕಳು ನನ್ನ ದುಃಖದಲ್ಲಿ ಪಾಲುಗಾರರಾಗುವುದು ಬೇಡ' ಎಂಬ ವಿಚಾರ ಹೊಳೆದಾಗ ಸಾನಿಧ್ಯಾ ತಕ್ಷಣ ಮಕ್ಕಳನ್ನು ಹಿಡಿದ ಹಿಡಿತವನ್ನು ಸಡಿಲಿಸಿ ದೂರಾದಳು. ಮೆಲ್ಲಗೆದ್ದು ಮಂಚದ ಪಕ್ಕದ ಕುರ್ಚಿಯ ಮೇಲಿದ್ದ ನ್ಯಾಪ್‍ಕಿನ್ ತೆಗೆದುಕೊಂಡು ಕಣ್ಣೀರನ್ನು ಒರೆಸಿಕೊಂಡಳು. ಕಮ್ಮಾರನ ತಿದಿಯಂತಾಗಿದ್ದ ಎದೆಯನ್ನು ಒತ್ತಿ ಹಿಡಿದುಕೊಂಡಳು.    

`ದುಃಖವನ್ನು ಅನುಭವಿಸುವವನು ಮುಂದೊಂದಿನ ಸುಖಿಯಾಗಬಹುದು. ಆದರೆ ದುಃಖವನ್ನು ಕೊಡುವವನು ಎಂದಿಗೂ ಸುಖಿಯಾಗಲು ಸಾಧ್ಯವಿಲ್ಲವಂತೆ. ನನ್ನಂಥಹವರನ್ನು ಕಂಡೇ ಈ ಮಾತನ್ನು ಹೇಳಿರಬೇಕು ದಾರ್ಶನಿಕರು. ದರ್ಶನ್, ಪ್ರಾಣಕ್ಕಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸಿದ್ದಕ್ಕೆ ನಾನು ನಿನಗೆ ಕೊಟ್ಟ ಕಾಣಿಕೆ ಕಣ್ಣೀರು, ದುಃಖ ಅಷ್ಟೇ. ಎಲ್ಲ ಪಾಠಗಳನ್ನು ಪುಸ್ತಕಗಳಿಂದ ಕಲಿಯಲು ಆಗುವುದಿಲ್ಲ. ಕೆಲವು ಪಾಠಗಳನ್ನು ಜೀವನ ಕಲಿಸುತ್ತದೆಯಂತೆ. ಅದರಂತೆ ನನಗೀಗ ಜೀವನದ ಅನುಭವವಾಗುತ್ತಿದೆ. ಆದರೆ ನನ್ನ ಒಲವೇ ನನ್ನಿಂದ ಕಣ್ಮರೆಯಾಗಿ ಹೋಯಿತಲ್ಲ...? ನನ್ನ ಜೀವನದ ಪ್ರೀತಿಯ ಸೆಲೆಯೇ ಬತ್ತಿ ಹೋಯಿತಲ್ಲ? ಇದಕ್ಕೆಲ್ಲ ಕಾರಣ ಯಾರು...? ನಾನಲ್ಲದೇ ಮತ್ಯಾರು...? ನಾನೇ! ನಾನೇ! ನಾನೇ ಅಪರಾಧಿ. ಎಲ್ಲವೂ ನನ್ನ ಸ್ವಯಂಕೃತ ಅಪರಾಧರಿಂದ.' ಹೀಗೆ ಯೋಚನೆಗಳ ದ್ವಂದ್ವದಲ್ಲಿ ಹರಿದಾಡುತ್ತಿದ್ದ ಸಾನಿಧ್ಯಾಳ ಮನಸ್ಸು ನೆನಪಿನ ಉಗ್ರಾಣ ಹೊಕ್ಕು ಗತಿಸಿದ ಜೀವನವನ್ನು ಕೆದರಲು ಮುಂದಾಯಿತು.
                     ****

ಮಂಡ್ಯದ ಗೌಡರ ಮನೆತನದ ಕುಡಿ ಸಾನಿಧ್ಯಾ. ಬೆಂಗಳೂರಿನಲ್ಲಿ ಬಿಇ ಮುಗಿಸುತ್ತಿದ್ದಂತೆ ಹೆಸರಾಂತ ಸಾಫ್ಟ್‍ವೇರ್ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತು. ಆದರೆ ಮೊದಲ ಪೋಸ್ಟಿಂಗ್ ಹೈದರಾಬಾದ್‍ಗೆ ಇತ್ತು. ಎರಡು ವರ್ಷಗಳ ನಂತರ ಬೆಂಗಳೂರಿಗೆ ಬರುವುದಿತ್ತು. ಇವಳು ಹೈದರಾಬಾದ್‍ಗೆ ಹೋಗಲು ಹಿಂದೇಟು ಹಾಕಲು ತೊಡಗಿದಾಗ, `ಬರೀ ಎರಡು ವರ್ಷ ತಾನೇ? ಕಣ್ಣುಮುಚ್ಚಿ ಕಣ್ಣು ತೆರೆಯುವುದರೊಳಗೆ ದಿನಗಳು ಸರಿದು ಹೋಗುತ್ತವೆ. ಆರಾಮವಾಗಿ ಹೋಗಿ ಬಾ' ಎಂದು ಆತ್ಮೀಯ ಗೆಳತಿ ರಮ್ಯಾ ಪುಸಲಾಯಿಸಿ ಸಾನಿಧ್ಯಾಳನ್ನು ಹೈದರಾಬಾದ್‍ಗೆ ಕಳುಹಿಸಿದ್ದಳು.
ಐದು ಅಡಿ ಹತ್ತು ಅಂಗುಲ ಎತ್ತರದ ನಿಲುವಿನ, ಎಣ್ಣೆಗೆಂಪಿನ ಬಣ್ಣದ ಸದೃಢ ಮೈಕಟ್ಟಿನ ಚೆಲುವೆ ಸಾನಿಧ್ಯಾ. `ನಿನ್ನಂಥಹ ಲಂಬೂಗೇ ನಮ್ಮ ಕನ್ನಡ ನಾಡಿನಲ್ಲಿ ಹುಡುಗ ಸಿಗುವುದೇ ಕಷ್ಟ. ಆಂಧ್ರದ ಹುಡುಗರ ಹೈಟ್ ಜಾಸ್ತಿ. ಅಲ್ಲೇ ತೆಲುಗು ಹುಡುಗನನ್ನು ತಗುಲಾಕಿಕೊಂಡು ಬಂದುಬಿಡು ಕಣೇ' ಎಂದು ಕಣ್ಣು ಮಿಟುಕಿಸುತ್ತಾ ಬೀಳ್ಕೊಟ್ಟಿದ್ದಳು ರಮ್ಯಾ ಮೊದಲ ಸಾರೆ ಹೈದರಾಬಾದ್‍ಗೆ ಹೋಗುವಾಗ.           
ಇನ್ನೇನು ಹೈದರಾಬಾದ್‍ದ ಟರ್ಮ ಮುಗಿಯಲಿಕ್ಕೆ ಆರು ತಿಂಗಳು ಬಾಕಿ ಇತ್ತು. ಸಾನಿಧ್ಯಾಳಿಗೆ ಎರಡು ತಿಂಗಳ ಲಂಡನ್ ಟ್ರಿಪ್ ಬಂದಿತು. ವಿದೇಶದ ವ್ಯಾಮೋಹವೂ ಬಹಳವಲ್ಲವೇ ಈಗಿನ ಜನರೇಶನ್‍ಗೆ? ಸಾನಿಧ್ಯಾ ಖುಷಿಖುಷಿಯಿಂದ ಲಂಡನ್‍ಗೆ ಹೊರಟಳು. ದೇಶದ ನಾನಾ ಮೂಲೆಗಳಿಂದ ಅವಳ ಸಹೋದ್ಯೋಗಿಗಳು ಅಲ್ಲಿಗೆ ಬಂದಿದ್ದರು ಕಲಿಕೆಯ ವಿಶೇಷ ಶಿಬಿರದಲ್ಲಿ ಪಾಲ್ಗೊಳ್ಳಲು. ಬೆಂಗಳೂರಿನ ಕಚೇರಿಯಿಂದ ದರ್ಶನ್ ಹೋಗಿದ್ದ. ಬರೋಬ್ಬರಿ ಆರು ಅಡಿ ಎರಡು ಅಂಗುಲ ಎತ್ತರದ ಹುಡುಗ. ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯವನು. ಎಂಸಿಎ ಮಾಡಿಕೊಂಡಿದ್ದ. ಇವಳಿಗಿಂತ ಎರಡು ವರ್ಷ ಸೀನಿಯರ್. ತನ್ನ ಎತ್ತರದ ಪರ್ಸನಾಲಿಟಿಯಿಂದ ಯಾರ ಗಮನವನ್ನಾದರೂ ಸೆಳೆಯಬಲ್ಲವನಾಗಿದ್ದ ದರ್ಶನ್ ಸಾನಿಧ್ಯಾಳ ಗಮನ ಸೆಳೆದಿದ್ದ.
ಮೊದಲ ದಿನವೇ ಪರಸ್ಪರ ಪರಿಚಯವಾಗಿತ್ತು. ಮತ್ತೆರಡು ದಿನಗಳಲ್ಲಿ ತೀರಾ ಹತ್ತಿರವಾದರು. ತುಂಬಾ ಆತ್ಮೀಯರಾದರು. ಊರು-ಕೇರಿ, ಬಂಧು-ಬಳಗದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. `ಹಾಗಾದರೆ ನೀವು ಮಂಡ್ಯದ ಗೌಡತಿ ಅಂದ ಹಾಗಾಯಿತು' ಎಂದು ದರ್ಶನ್ ಸಾನಿಧ್ಯಾಳಿಗೆ ಮೆಚ್ಚುಗೆ ಸೂಚಿಸಿದರೆ, `ನೀವು ಶರಣರ ನಾಡಿನ ಕಲ್ಯಾಣ ಕರ್ನಾಟಕದವರು' ಎಂದು ಸಾನಿಧ್ಯಾ ಸಂತಸ ವ್ಯಕ್ತಪಡಿಸಿದ್ದಳು. ಇಬ್ಬರ ಸ್ನೇಹ ಆಲದ ಮರದಂತೆ ವಿಶಾಲವಾಗಿ ಬೆಳೆಯಿತು. ಎರಡು ತಿಂಗಳ ವಿಶೇಷ ಶಿಬಿರ ಮುಗಿಯುವಷ್ಟರಲ್ಲಿ ಪರಸ್ಪರ ಏಕ ವಚನದಲ್ಲಿ ಮಾತಾಡುವಷ್ಟು ಸಲಿಗೆ ಬೆಳೆಯಿತು. ರಜೆಯ ದಿನಗಳಲ್ಲಿ ಲಂಡನ್‍ನ ಸುಪ್ರಸಿದ್ಧ ಸೇತುವೆ, ಐತಿಹಾಸಿಕ ಸ್ಮಾರಕಗಳನ್ನು ಸುತ್ತಿದರು. ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಅವಳು ಇವನದು; ಇವಳು ಅವನದು; ಜೊತೆಗೆ ಮೆನಿ ಮೋರ್ ಸೆಲ್ಫೀಜ್ ಸಹ. ಸ್ವಂತದ ವಿಷಯಗಳ ಬಗ್ಗೆಯೂ ವಿಷಯ ವಿನಿಮಯ ಮಾಡಿಕೊಂಡರು. 
ಎರಡು ತಿಂಗಳ ವಿಶೇಷ ಶಿಬಿರ ಎರಡು ನಿಮಿಷಗಳಂತೆ ಕಳೆದು ಹೋಗಿತ್ತು. ಸಾನಿಧ್ಯಾ ಹೈದರಾಬಾದ್‍ಗೂ, ದರ್ಶನ್ ಬೆಂಗಳೂರಿಗೂ ಮರಳುವ ದಿನ ಬಂದೇ ಬಂದಿತು. ಅಗಲುವಿಕೆ ಅನಿವಾರ್ಯವಾಗಿದ್ದರೂ ಇಬ್ಬರಿಗೂ ತುಂಬಾ ಬೇಸರ ತಂದಿತ್ತು.  ಮೊದಲ ಬಾರಿಗೆ ಪರಸ್ಪರ ಹಗ್‍ಮಾಡಿ, ಬೆನ್ನು ನೇವರಿಸಿ ಸಾಂತ್ವನ ಪಡೆದುಕೊಂಡು ಬೀಳ್ಕೊಟ್ಟಿದ್ದರು ಭಾರವಾದ ಹೃದಯಗಳಿಂದ. ಭಾವನೆಗಳ ಪ್ರವಾಹದ ಸುಳಿಯಲ್ಲಿ ಸಿಲುಕಿಕೊಂಡಿದ್ದ ಸಾನಿಧ್ಯಾಳ ಕಣ್ಣುಗಳು ತೇವಗೊಂಡಿದ್ದವು ಅವಳಿಗರಿವಿಲ್ಲದಂತೆ. ಮುಂದಿನ ದಿನಗಳಲ್ಲಿ ಪರಸ್ಪರ ಮಾತುಗಳು ಅದೇನಿದ್ದರೂ ಫೋನಲ್ಲಿ ಅಷ್ಟೇ. ಲಂಡನ್‍ನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ತನಗಿಚ್ಛೆ ಬಂದಾಗ ನೋಡಿ ದರ್ಶನ್‍ನ ನಗುಮೊಗವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಸಂಭ್ರಮಿಸುವುದು ನಿತ್ಯದ ರೂಢಿಯಾಗಿಬಿಟ್ಟಿತು. ಅದರಲ್ಲಿ ತಾನೇ ಕ್ಲಿಕ್ಕಿಸಿದ್ದ ಶೆಲ್ಫಿಯೊಂದು ಅವಳ ಹೃದಯ ವೀಣೆಯನ್ನು ಮೀಟುತ್ತಿತ್ತು. ಪರಸ್ಪರ ಭುಜ ತಾಗಿಸಿಕೊಂಡು ನಿಂತಿದ್ದ ಆ ಫೋಟೋ ಅವಳ ಮನದಂಗಳದಲ್ಲಿ ತಂಪೆರೆಯುವ ತಂಗಾಳಿಯಂತೆ ಸುಳಿದಾಡುತ್ತಿತ್ತು. ಸ್ಲೀವ್‍ಲೆಸ್ ಟಾಪ್‍ನಲ್ಲಿ ಢಾಳಾಗಿ ಕಾಣುತ್ತಿದ್ದ ಅವಳ ಎಡಗೈಯ ನಳಿದೋಳು ಅವನ ಬಲಗೈಯ ಬಲಿಷ್ಠದೋಳನ್ನು ಒತ್ತಿಕೊಂಡಿದ್ದುದು ಅವಳ ಮೈಯಲ್ಲಿ ಕೋಲ್ಮಿಂಚನ್ನು ಹರಿಸುತ್ತಿತ್ತು. ನಗುಮೊಗದಲ್ಲಿ ಮಿಂಚುತ್ತಿದ್ದ ದರ್ಶನ್ ಅವಳೆದೆಯೊಳಗೆ ಪ್ರೇಮ ಕಾರಂಜಿಯನ್ನು ಸೃಷ್ಟಿಸುತ್ತಿದ್ದ. ದರ್ಶನ್‍ನ ಮಂದಹಾಸ ಸುಪ್ರಭಾತದ ಸಮಯದಲ್ಲಿ ಅವಳ ಜಿಂಕೆ ಕಣ್ಣುಗಳಲ್ಲಿ ಕಚಗುಳಿ ಇಡುತ್ತಿತ್ತು. `ಈ ಲೋಫರ್ ಒಂದು ಸಾರೇನೂ, `ಐ ಲವ್ ಯು ಸಾನಿಧ್ಯಾ' ಎಂದು ಉಲಿಯುತ್ತಿಲ್ಲವಲ್ಲ...? ಫೋನಲ್ಲಿ ಬರೀ ಅದೂ, ಇದೂ ಮಾತಾಗುತ್ತಿದೆಯೇ ವಿನಹ ಒಮ್ಮೆನೂ ಪ್ರೀತಿ, ಪ್ರೇಮದ ಬಗ್ಗೆ ಚಕಾರವೆತ್ತುತ್ತಿಲ್ಲವಲ್ಲ...? ನನ್ನೆದೆಯೊಳಗೆ ಇವನ ಬಗ್ಗೆ ಪ್ರೇಮದ ಕಾರಂಜಿ ಚಿಮ್ಮುತ್ತಿದೆಯಲ್ಲ...? ಹೇಗೆ ಹೇಳಲಿ ಎದೆಯೊಳಗಿನ ತುಮುಲ, ತುಡಿತ, ಹಂಬಲವನ್ನು...? ನಾನೇ ನಿನ್ನ ಮನದರಗಿಣಿ ಎಂದು ಬಿಚ್ಚಿಟ್ಟು ಬಿಡಲೇ ನನ್ನೆದೆಯೊಳಗಿನ ಅಭಿಲಾಷೆಯನ್ನು...? ಮೇಲಾಗಿ ಇವನಿಗೂ, ನನಗೂ ಅದ್ಭುತ ವರಸಾಮ್ಯವಾಗುತ್ತಿದೆಯಲ್ಲವೇ? ನನ್ನ ಉದ್ದನೆಯ ಆಕರ್ಷಕ ಚೆಲುವಿನ ಶರೀರಕ್ಕೆ ಇವನೇ ತಕ್ಕ ಜೋಡಿ ಎಂದು ಸ್ಪಷ್ಟವಾಗಿ ಅನಿಸುತ್ತಿಲ್ಲವೇ? ಬೆಂಗಳೂರಿಗೆ ಪೋಸ್ಟಿಂಗ್ ಸಿಕ್ಕ ಕೂಡಲೇ ತಿಳಿಸಿಬಿಡಬೇಕು.' ಹೀಗೆ ಹಲವಾರು ಯೋಚನೆ, ಕನಸುಗಳು ಸಾನಿಧ್ಯಾಳೆದೆಯಲ್ಲಿ ರಿಂಗಣಿಸುವುದು ಸಾಮಾನ್ಯವಾಗಿ ಬಿಟ್ಟಿತು.
                     **** 
ಸಾನಿಧ್ಯಾ ಆ ವರ್ಷ ದಸರಾ ಹಬ್ಬಕ್ಕೆಂದು ಊರಿಗೆ ಬಂದಿದ್ದಳು. ಅದಕ್ಕೆ ಒಂದುವಾರ ಮುಂಚೇನೇ ದರ್ಶನ್ ಮತ್ತು ಸಾನಿಧ್ಯಾರ ನಡುವೆ ತುಸು ಮಾತುಕತೆಗಳು ನಡೆದಿದ್ದವು ಫೋನಲ್ಲಿ. ಅವರು ಸಾಮಾನ್ಯವಾಗಿ ಮಾತಾಡುತ್ತಿದ್ದುದು ರಾತ್ರಿ ಊಟದ ನಂತರವೇ. ಮಾತುಗಳು ನಿದ್ದೆಗೆಡಿಸುತ್ತಿದ್ದರೂ ಇಬ್ಬರೂ ಖುಷಿಖುಷಿಯಿಂದ ಬೀಗುತ್ತಿದ್ದ ಗಳಿಗೆ ಅದೊಂದೇ.  
"ಗೌಡತಿ, ಪ್ರತಿ ವರ್ಷದಂತೆ ಈ ವರ್ಷವೂ ನಾನು ದಸರಾ ಹಬ್ಬಕ್ಕೆ ನನ್ನೂರಿಗೆ ಹೊರಡುತ್ತಿದ್ದೇನೆ. ನೀನೂ ಬಂದುಬಿಡು ನನ್ನ ಜೊತೆಗೆ...? ಖುಷಿಖುಷಿಯಿಂದ ಜೊತೆಜೊತೆಯಲ್ಲಿ ಹಬ್ಬವನ್ನು ಆಚರಿಸಿಕೊಂಡು ಬರೋಣ." 

"ನಾನಾ...? ರಾಜಾ, ನಿಂಜೊತೆಗೆ ನಿನ್ನೂರಿಗಾ...?" ಅವನು ಅವಳಿಗೆ, `ಗೌಡತಿ' ಎಂದು ಹೇಳಿ ಸಂತಸ ಅನುಭವಿಸುತ್ತಿದ್ದರೆ ಅವಳು ಅವನಿಗೆ, `ರಾಜಾ' ಎಂದು ಕರೆದು ಸಂಭ್ರಮಿಸುತ್ತಿದ್ದಳು ಯಾವಾಗಲೂ.
"ಹೌದು ಕಣೇ ನೀನೇ."
"ವ್ಹಾಟೀಜ್ ದಿ ಮೋಡ್ ಆಫ್ ಜರ್ನಿ...?"
"ಬಸ್ಸು ಕಣೇ. ಬಸ್ಸು ಬಿಟ್ಟರೆ ರೈಲು, ವಿಮಾನಗಳು ಹಾರಾಡುವುದಿಲ್ಲ ನನ್ನೂರಿಗೆ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಸರಿದಿದ್ದರೂ ನಮ್ಮೂರಿನ ನಾಗರೀಕರಿಗೆ ರೈಲು ಅನ್ನೋದು ಅಚ್ಚರಿಯ ವಿಷಯವೇ. ರೈಲು ಪಟ್ರಿ ನೋಡಬೇಕೆಂದರೆ ನಮ್ಮ ಜನರು ಎಪ್ಪತ್ತು ಕಿಮೀ ದೂರ ಹೋಗಬೇಕು. ಸುದೈವಕ್ಕೆ ಈಗ ಎರಡು ಸ್ಲೀಪರ್ ಕೋಚ್ ಬಸ್ಸುಗಳು ಓಡಾಡುತ್ತಿವೆ. ನೀನು ಬರುವುದಾದರೆ ಎರಡು ಸೀಟುಗಳನ್ನು ರಿಜರ್ವ ಮಾಡುವೆ. ತಡಮಾಡಿದರೆ ಹಬ್ಬದ ನಿಮಿತ್ಯ ಅಲ್ಲಿಯೂ ಸೀಟುಗಳು ಸಿಗುವುದಿಲ್ಲ."
"ಒಂದೇ ಸೀಟಲ್ಲಿ ಇಬ್ಬರೂ ಮಲಗಿಕೊಂಡು ಹೋಗುವುದಾ...?"
"ಹೂಂ! ಪ್ರಾಂಜಲ ಮನಸ್ಸಿನ ಹುಡುಗ, ಹುಡುಗಿ ಹೋಗಿ ಬರಲು ಸಾಧ್ಯವಿಲ್ಲವೇ...? ನಿನ್ನನ್ನು ಸೇಫಾಗಿ ಕರೆದುಕೊಂಡು ಹೋಗಿ ಸೇಫಾಗಿ ಕರೆದುಕೊಂಡು ಬರುವುದು ನನ್ನ ಜವಾಬ್ದಾರಿ. ನನ್ನ ನಡತೆಯ ಮೇಲೆ ನಿನಗೆ ನಂಬಿಕೆ ಇದೆ ತಾನೇ...?" `ನೀನು ನನ್ನೆದೆಯೊಳಗೆ ಭದ್ರವಾಗಿ ನೆಲೆಯೂರಿರುವಿ. ಸಪ್ತಪದಿ ತುಳಿದು ಹಸೆಮಣೆ ಏರುವ ದಿನ ದೂರವಿಲ್ಲ. ಹಾಗಿರುವಾಗ ಪ್ರೀತಿಸುವ ಹುಡುಗಿಯ ಜೊತೆಗೆ ಪ್ರಯಾಣಿಸುವುದರಲ್ಲಿ ತಪ್ಪೇನಿದೆ...?' ಎಂದು ಅವನು ಹೇಳಬಹುದೆಂದುಕೊಂಡಿದ್ದ ಅವಳ ಒಳಗುದಿ ಒಳಗುದಿಯಾಗೇ ಉಳಿದುಕೊಂಡಿತು. 
"ನಂಬಿಕೆ ಇದೆ. ಅದಿರಲಿ, ನಿನ್ನೂರಿನ ದಸರಾ ಅಂದರೆ ಅಷ್ಟು ವಿಶೇಷವೇ...?"
"ವಿಶೇಷವಿದ್ದುದಕ್ಕೇ ನಿನಗೆ ಆಮಂತ್ರಣ ಕೊಟ್ಟಿದ್ದು."
"ಹೌದಾ...? ಅದೇನು...?"
"ನನ್ನೂರಿನಲ್ಲಿ ವಿಜಯನಗರ ಅರಸರ ಕಾಲದ ಲಕ್ಷ್ಮೀವೆಂಕಟೇಶ್ವರ ದೇವಾಲಯವಿದೆ. ಕಪ್ಪು ಶಿಲೆಯಲ್ಲಿ ಮೈತಳೆದು ನಿಂತಿರುವ ಶ್ರೀನಿವಾಸ ಶ್ರೀದೇವಿ ಮತ್ತು ಭೂದೇವಿಯರೊಂದಿಗೆ ವಿಜೃಂಭಿಸುತ್ತಿದ್ದಾನೆ. ವಿಜಯ ದಶಮಿಯ ದಿನ ದೇವಸ್ಥಾನದ ಮುಂದೆ ಸುಮಾರು ಮೂವತ್ತು ಅಡಿ ಎತ್ತರದ ಹಾಲುಗಂಬವನ್ನು ನೆಡುತ್ತಾರೆ. ಅದಕ್ಕೆ ಸುರುಮ ಮತ್ತಿತರ ಜಾರುವಂಥಹ ಬಣ್ಣವನ್ನು ಬಳಿದಿರುತ್ತಾರೆ. ಸಂಜೆಗೆ ಹಾಲುಗಂಬವನ್ನು ಗೊಲ್ಲರು ಏರುತ್ತಾರೆ. ನಂತರ ಪಲ್ಲಕ್ಕಿಯಲ್ಲಿ ವೀರಭದ್ರದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಸಮೇತ ಬನ್ನಿ ಕಟ್ಟೆಗೆ ತರುತ್ತಾರೆ. ಬನ್ನಿ ಮಹಂಕಾಳಿಯ ಪೂಜೆಯ ನಂತರ ಮೆರವಣಿಗೆ ವೀರಭದ್ರದೇವರ ದೇವಾಲಯಕ್ಕೆ ತಲುಪುತ್ತದೆ. ನಂತರ ಪರಸ್ಪರ ಬನ್ನಿ ಮುಡಿಯುವುದು ಅಂದರೆ ಬನ್ನಿದಳವನ್ನು ವಿನಿಮಯ ಮಾಡುವುದು ಆರಂಭವಾಗುತ್ತದೆ. ಮೊದಲು ಮನೆಯಲ್ಲಿ ದೇವರಿಗೆ ಪವಿತ್ರ ಬನ್ನಿಯನ್ನು ಅರ್ಪಿಸಿದ ನಂತರ ಹೆತ್ತವರು ಮತ್ತು ಮನೆಯ ಇತರ ಹಿರಿಯರಿಗೆ ಬನ್ನಿಯನ್ನು ಕೊಟ್ಟು ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ರೂಡಿ. ಹಿರಿಯರು ಕಿರಿಯರ ತಲೆಗೂದಲಲ್ಲಿ ಬನ್ನಿ ದಳವನ್ನಿಟ್ಟು ಆಶೀರ್ವದಿಸುತ್ತಾರೆ. ನಂತರ ಓಣಿಯಲ್ಲಿನ ಜನರಿಗೆ, `ಬನ್ನಿ ಕೊಟ್ಟು, ಬನ್ನಿ ತೊಗೊಂಡು ಬಂಗಾರದಂಗಿರೋಣ' ಎಂದು ಹೇಳುತ್ತಾ ಬನ್ನಿ ದಳವನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಊರಿನ ಗುರು-ಹಿರಿಯರು, ಆತ್ಮೀಯರೊಂದಿಗೆ ಬನ್ನಿ ದಳವನ್ನು ವಿನಿಮಯ ಮಾಡಿಕೊಳ್ಳುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ದೂರದ ಊರುಗಳಲ್ಲಿರುವ ಬಹುತೇಕ ಗೆಳೆಯರು ಹಬ್ಬಕ್ಕೆ ಊರಿಗೆ ಬರುತ್ತಾರೆ. ಹಬ್ಬಗಳಲ್ಲೇ ಅತ್ಯಂತ ಖುಷಿಕೊಡುವ ಹಬ್ಬವಿದು ನನಗೆ. ಅದಕ್ಕಾಗಿ ಪ್ರತಿವರ್ಷ ದಸರಾ ಹಬ್ಬವನ್ನು ಊರಿನಲ್ಲೇ ಆಚರಿಸುತ್ತಾ ಬಂದಿದ್ದೇನೆ. ನಿನ್ನೂರಿನಲ್ಲಿ ಹಬ್ಬದ ಆಚರಣೆ ಹೇಗೆ...?" ವಿವರಿಸುತ್ತಾ ದರ್ಶನ್ ಪ್ರಶ್ನಿಸಿದ್ದ. 
"ಹೌದಾ...? ತುಂಬಾ ಖುಷಿಯಾಯಿತು ನಿನ್ನೂರಿನ ಹಬ್ಬದ ಬಗ್ಗೆ ತಿಳಿದುಕೊಂಡು. ನಮ್ಮಲ್ಲಿ ಬನ್ನಿ ದಳವನ್ನು ಬಹಳವೆಂದರೆ ಅಕ್ಕ-ಪಕ್ಕದ ಒಂದೆರಡು ಮನೆಯವರೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ ಅಷ್ಟೇ. ಕೆಲವರೊಂದಿಗೆ ಫೋನಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ. ಅಲ್ಲಿಗೆ ಮುಗಿಯಿತು ನಮ್ಮ ಬನ್ನಿ ಹಬ್ಬ. ಬಹಳ ವರ್ಷಗಳ ನಂತರ ನನ್ನ ಗೆಳತಿಯೊಬ್ಬಳು ಹಬ್ಬದ ದಿನದಂದೇ ಊರಿಗೆ ಬರುತ್ತಿದ್ದಾಳೆ. ಹೀಗಾಗಿ ಈ ಸಾರೆ ನಿನ್ನೂರಿಗೆ ಬರಲು ಆಗುವುದಿಲ್ಲ. ಮುಂದಿನ ವರ್ಷ ಖಂಡಿತವಾಗಿ ಬರುವೆ. ಬೇಸರಿಸಿಕೊಳ್ಳಬೇಡ ರಾಜಾ."
"ಹೌದಾ...? ಹೋಗಲಿ ಬಿಡು. ಆದರೆ ಬೆಂಗಳೂರಿನಿಂದ ಹಾದು ನಿನ್ನೂರಿಗೆ ಹೋಗುವಾಗ ನಿನ್ನ ಮುಖಾರವಿಂದದ ದರ್ಶನ ಮಾಡಿಸಿದರೆ ಈ ನಿನ್ನ ಗೆಳೆಯ ಖುಷಿ ಪಟ್ಟಾನು!" 
"ತಥಾಸ್ತು ರಾಜಾ." ಎಂದಿದ್ದಳು ಸಾನಿಧ್ಯಾ ಮನದಲ್ಲೇ ನಗುತ್ತಾ. ಅವಳೆದೆಯೊಳಗೂ ದರ್ಶನ್‍ನನ್ನು ಕಾಣುವ ತವಕ, ಕಾತುರ, ಹಂಬಲವಿತ್ತಲ್ಲವೇ...? ಅವಳ ಮುದ್ದು ಮುಖವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಆನಂದಿಸುವ ಹಂಬಲ ಅವನೆದೆಯಲ್ಲಿ ಕಾಡುತ್ತಿತ್ತಲ್ಲೇ? ಅವನ ಮನದಿಂಗಿತದಂತೆ ಸಕ್ಕರೆ ನಾಡಿನ ಬೆಡಗಿ ಸಾನಿಧ್ಯಾ ದರ್ಶನನಿಗೆ ದರ್ಶನ ಭಾಗ್ಯವ ಕರುಣಿಸಿ ಅವನೆದೆಯ ಹಂಬಲಕ್ಕೆ ತಂಪೆರೆದು ತನ್ನೆದೆಯ ಅಭೀಷ್ಟೆಗೆ ತಂಪುಣಿಸಿಕೊಂಡು ಮಂಡ್ಯ ಸೇರಿದ್ದಳು. ಅವಳ ಸವಿನೆನಪಲ್ಲೇ ದರ್ಶನ್ ದಸರಾ ಹಬ್ಬವನ್ನು ಆಚರಿಸಿದ್ದ.
ನಿಗದಿ ಪಡಿಸಿದಂತೆ ಸಾನಿಧ್ಯಾ ಹೈದರಾಬಾದ್‍ನಿಂದ ಬೆಂಗಳೂರಿಗೆ ಬಂದು ಕರ್ತವ್ಯಕ್ಕೆ ಹಾಜರಾದಾಗ ತವಕಿಸುತ್ತಿದ್ದ ಎರಡು ಹೃದಯಗಳಿಗೆ ಒಂದು ರೀತಿಯ ಸಾಂತ್ವನ ಸಿಕ್ಕಿತ್ತು. ಸಾನಿಧ್ಯಾ ದರ್ಶನ್‍ನ ಪಿಜಿಗೆ ಸಮೀಪದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದಳು. ಶುಕ್ರವಾರ ರಾತ್ರಿ ಮಂಡ್ಯಕ್ಕೆ ಹೋಗಿ ರವಿವಾರ ರಾತ್ರಿ ಬೆಂಗಳೂರಿನ ಪಿಜಿಗೆ ಸೇರಿಕೊಳ್ಳುವ ಪರಿಪಾಠವಿಟ್ಟುಕೊಂಡಳು. ಕೆಲವೊಂದು ವಾರ ಊರಿಗೆ ಹೋಗದೇ ವೀಕೆಂಡ್‍ನಲ್ಲಿ ದರ್ಶನ್ ಜೊತೆಗೆ ಬೇಜಾನ್ ಬೆಂಗಳೂರು ಸುತ್ತುವ, ಹರಟುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದಳು. ಹೀಗೇ ಒಂದು ಶನಿವಾರ ಸಂಜೆ ಲಾಲ್ ಬಾಗ್‍ನ ಮೂಲೆಯೊಂದರ ಮರದ ಕೆಳಗೆ ಕುಳಿತು ಮಾತಿಗೆ ಮುಂದಾಗಿದ್ದರು. ಸಂಜೆಯ ತಂಗಾಳಿ ಸಾನಿಧ್ಯಾಳ ಮೈಸವರಿ, ಗುಳಿಗೆನ್ನೆಗಳಿಗೆ ಮುತ್ತಿಕ್ಕಿ ಮುಂಗುರಳನ್ನು ಜೋಕಾಲಿಯಾಡಿಸುತ್ತಿದ್ದುದನ್ನೇ ದರ್ಶನ್ ರೆಪ್ಪೆ ಬಡಿಯದೇ ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಿದ್ದುದನ್ನು ಅವಳು ಗಮನಿಸುತ್ತ ಪುಳಕಿತಳಾಗಿದ್ದಳು. `ಇವತ್ತು ನನ್ನೆದೆಯೊಳಗಿನ ಪ್ರೀತಿಯನ್ನು ಬಯಲಿಗಿಡಬೇಕು' ಎಂಬ ತುಡಿತದ ಹೊಯ್ದಾಟ ಸಾನಿಧ್ಯಾಳೆದೆಯಲ್ಲಿ. `ಅವನೆದೆಯೊಳಗೆ ಏನಿದೆಯೋ ಏನೋ...? ಹೃದಯ ವೀಣೆ ಪ್ರೇಮರಾಗ ನುಡಿಸುತ್ತಿದೆಯೋ, ಇಲ್ಲವೋ ಒಂದೂ ಗೊತ್ತಾಗುತ್ತಿಲ್ಲ' ಎಂಬ ಆತಂಕದ ಕೋಲಾಹಲ, ಕುತೂಹಲಗಳೂ ಅವಳೆದೆಯಲ್ಲಿ ಗೂಡು ಕಟ್ಟಿದ್ದವು. 

"ರಾಜಾ, ನೀನು ಕಲ್ಲೆದೆಯವನು! ಕಟುಕರ ಜಾತಿಗೆ ಸೇರಿದವನು." ತುಂಬಾ ಕಠೋರವಾಗಿ ಮಾತಿಗಿಳಿದಿದ್ದಳು ಸಾನಿಧ್ಯಾ ತುಸು ಹೊತ್ತಿನ ನಂತರ.
"ಗೌಡತಿ, ನಿನ್ನ ಮಾತಿನ ಅರ್ಥವಾಗಲಿಲ್ಲ...?" ಅವಳ ಮಾತಿಗೆ ಕಕ್ಕಾವಿಕ್ಕಿಯಾಗಿದ್ದ ದರ್ಶನ್ ಕನಲಿದ್ದ.
"ನನ್ನ, ನಿನ್ನ ಪರಿಚಯವಾಗಿ ಒಂದು ವರ್ಷದ ಮೇಲಾಯಿತು. ಆತ್ಮೀಯವಾಗಿ ಸುಖ-ದುಃಖ ಹಂಚಿಕೊಂಡಿದ್ದೇವೆ. ಪರಸ್ಪರ ಅರ್ಥ ಮಾಡಿಕೊಂಡಿದ್ದೇವೆ. ಇನ್ನೂ ಬಿಡಿಸಿ ಹೇಳುವುದಕ್ಕೇನಿದೆ...?"
"ಅಂದರೆ...?"
"ಅಂದರೆ ಇಲ್ಲ, ಗಿಂದರೆ ಇಲ್ಲ. ಅಂದರೆ ಅದೇ ಎರಡು ಹೃದಯಗಳ ಪ್ರೀತಿಯ ಬಗ್ಗೆ ಕಣೋ... ನನಗಂತೂ ನಿನ್ನದೇ ಧ್ಯಾನ. ಆದರೆ ನೀನೊಂದು ಮುಗಿಯದ ಮೌನದಂತಿರುವಿ. ನನ್ನ ಹಣೆಯ ಮೇಲಿನ ಕುಂಕುಮಕ್ಕೆ ಒಡೆಯನಾಗಲು ನಿನಗಿಷ್ಟವಿಲ್ಲವೇ...?" ಭಾವೋದ್ವೇಗದಲ್ಲಿ ಬಡಬಡಿಸಿದ್ದಳು ಸಾನಿಧ್ಯಾ ಥಟ್ಟಂತ.
"ವೇಟ್, ವೇಟ್. ಪ್ರೀತಿ ಬಾಳಿಗೊಂದು ಅರ್ಥವನ್ನು ನೀಡುತ್ತದೆ ಎಂದು ನಾನು ಬಲ್ಲೆ. ಮಹಾತಾಯಿ ಕಾವೇರಿ ಜಲಾನಯನದ ಸಮೃದ್ಧ ಮಂಡ್ಯದ ಗೌಡತಿ ನೀನು. ನಾನೋ ಕಲ್ಯಾಣ ಕರ್ನಾಟಕದ ಬರಗಾಲ ಪೀಡಿತ ಪ್ರದೇಶದವನು."
"ಅದಕ್ಕೇನೀಗ...? ಮಂಡ್ಯದ ಹುಡುಗಿ ಉತ್ತರ ಕರ್ನಾಟಕದ ಹುಡುಗನನ್ನು ಪ್ರೀತಿಸಬಾರದೇ...? ನಿಜ ಹೇಳು. ನೀನು ನನ್ನನ್ನು ಪ್ರೀತಿಸುತ್ತಿಲ್ಲವೇ...? ನಿನ್ನೆದೆಯಲ್ಲಿ ಈ ಸಾನಿಧ್ಯಾ ನೆಲೆಯೂರಿಲ್ಲವೇ...?"
"ಪ್ರೀತಿಸುತ್ತಿಲ್ಲವೆಂದು ಹೇಳಿದರೆ ಅದು ಆತ್ಮ ವಂಚನೆಯಾಗುತ್ತದೆ."
"ಮತ್ತಿನ್ನೇನು...?"
"ನಮ್ಮ ಜಾತಿ, ಆಚಾರ-ವಿಚಾರಗಳು ಬೇರೆ ಬೇರೆಯಾಗುತ್ತವೆ. ಎರಡೂ ಕುಟುಂಬದಲ್ಲಿ ಹೊಂದಾಣಿಕೆ ಸಾಧ್ಯವೇ ಎಂಬ ಅನುಮಾನ ನನಗೆ..."
"ನಾವೂ ಮನುಷ್ಯರು, ನೀವೂ ಮನುಷ್ಯರು ತಾನೇ...? ಕಾಲ ಸರಿದಂತೆ ಎಲ್ಲವೂ ಸರಿ ಹೋಗುತ್ತವೆ ರಾಜಾ."
"ಆಹಾರ ಪದ್ಧತಿ, ಸಂಪ್ರದಾಯಗಳಲ್ಲಿ ನಮಗೆ ನಿಮಗೆ ವ್ಯತ್ಯಾಸವಿದೆ. ಬೇಸಿಕಲಿ ನೀವು ಮಾಂಸಾಹಾರಿಗಳು. ರಾಗಿಮುದ್ದೆ, ನಾಟಿ ಕೋಳಿ ಸಾರು ಅಂದರೆ ಬಾಯಿ ಬಾಯಿ ಬಿಡುತ್ತೀರಿ. ನಾವೋ ಶುದ್ಧ ಶಾಖಾಹಾರಿಗಳು. ಮನೆಯಲ್ಲಿ ಮಾಂಸದಡುಗೆ ಮಾಡುತ್ತೇನಂದರೆ ನನ್ನ ಹೆತ್ತವರು ಸುಮ್ಮನಿದ್ದಾರೆಯೇ...?"
"ರಾಜಾ, ಇಷ್ಟಕ್ಕೇ ಪ್ರೀತಿಯಿಂದ ವಂಚಿತರಾಗುವುದೇ...? ಹೊಂದಾಣಿಕೆ ಮಾಡಿಕೊಂಡರಾಯಿತು. ಹೊಂದಾಣಿಕೆ ಜೀವನದ ಪ್ರತಿಯೊಂದು ಘಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದವರೇ ಹೇಳಿದ್ದಾರಲ್ಲ...? ಈಗಿಂದೀಗಲೇ ಮಾಂಸಾಹಾರವನ್ನು ತ್ಯಜಿಸುವೆ. ನಿನ್ನ ಹೆತ್ತವರ ಮನದಿಚ್ಛೆಯಂತೆ ನಡೆದು ಅವರ ಮುದ್ದಿನ ಸೊಸೆಯಾಗಿರುವೆ. ನಿನ್ನಿಷ್ಟವೇ ನನ್ನಿಷ್ಟ ಎಂದುಕೊಳ್ಳುವೆ. ಈಗಲಾದರೂ ಜೊತೆ ಜೊತೆಯಲ್ಲಿ ಬಾಳಿನಬಂಡಿ ಏರೋಣವೇ...?"
"ಗೌಡತಿ, ಅವಸರದ ನಿರ್ಧಾರ ಬೇಡ. ನಾಂವಂದುಕೊಂಡಷ್ಟು ಜೀವನ ಸರಳವಲ್ಲ. ಶಾಂತಚಿತ್ತದಿಂದ ಯೋಚಿಸಿ ಒಂದು ದೃಢ ನಿರ್ಧಾರಕ್ಕೆ ಬಾ." 
"ಯೋಚಿಸುವುಕ್ಕೇನಿದೆ...? ನೀನೇ ನನ್ನ ಹೃದಯದರಸ ಅಷ್ಟೇ. ನಿನ್ನ ಹೆತ್ತವರನ್ನು ನನ್ನ ಹೆತ್ತವರಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು" ಎಂದೆನ್ನುತ್ತಾ ಸಾನಿಧ್ಯಾ ಥಟ್ಟಂತ ದರ್ಶನ್‍ನನ್ನು ಬಿಗಿದಪ್ಪಿಕೊಂಡು ಅವನಧರಗಳಿಗೆ ಪ್ರಥಮ ಪ್ರೇಮದುಂಗುರವನ್ನು ತೊಡಿಸಿದ್ದಳು. 
"ಸಾನಿಧ್ಯಾ, ಮಾತೆಂದರೆ ಮಾತು. ತಪ್ಪಬಾರದು. ನಂಬಿಕೆಯೇ ಜೀವನ. `ನಂಬಿ ಕೆಟ್ಟವರಿಲ್ಲವೋ ಮನುಜ' ಎಂಬ ದಾಸವರೇಣ್ಯರ ಮಾತುಗಳನ್ನು ನಂಬಿರುವವನು ನಾನು. ಪರಸ್ಪರ ನಿಷ್ಠೆ, ಪ್ರಾಮಾಣಿಕತೆ, ಪಾವಿತ್ರ್ಯತೆ ಬೇಕು ಪ್ರಾಂಜಲ ಪ್ರೀತಿಗೆ. ಹಾಗಾದಾಗ ಪ್ರೀತಿಯೇ ಜೀವನವಾಗುತ್ತದೆ."
"ಆಯಿತು ರಾಜಾ. ಕೊಟ್ಟ ಮಾತಿಗೆ ತಪ್ಪುವವಳಲ್ಲ ಈ ನಿನ್ನ ಗೌಡತಿ. ಪ್ರೀತಿಯೇ ಜೀವನ, ನೀನೇ ನನ್ನ ಜೀವನ. ಮತ್ತಿನ್ನೇನು ಬೇಕು ಪ್ರೀತಿಯ ಗೆಲುವಿಗೆ...?" 
ದರ್ಶನ್ ಸಾನಿಧ್ಯಾಳನ್ನು ತೀಕ್ಷಣವಾಗಿ ದಿಟ್ಟಿಸಿದ. ಚೆಲುವಿನ ಚಿತ್ತಾರದ ಬೆಡಗಿಯ ಆಕರ್ಷಕ ಸಪೂರ ನಳಿದೋಳುಗಳನ್ನು ದೀರ್ಘವಾಗಿ ಚುಂಬಿಸಿದ. ನಡುಬಳಸಿ ಬಿಗಿದಪ್ಪಿಕೊಂಡು ಸಂಭ್ರಮಿಸಿ ತನ್ನ ಒಪ್ಪಿಗೆ ಸೂಚಿಸಿದ್ದ. ದರ್ಶನ್ ಸಾನಿಧ್ಯಾಳ ಹಣೆಯ ಸಿಂಧೂರವಾಗಿಬಿಟ್ಟ. 
ಮಗು ಯಶಸ್ವಿನಿ ರಂಪಾಟ ಮಾಡಿದಾಗ ಸಾನಿಧ್ಯಾ ನೆನಪಿನ ಉಗ್ರಾಣಕ್ಕೆ ಬೀಗ ಜಡಿದು ಮಗಳತ್ತ ದೃಷ್ಟಿ ಹರಿಸಿದಳು. ಒದ್ದೆಯಾಗಿದ್ದ ಬಟ್ಟೆಯನ್ನು ಬದಲಿಸಿದಾಗ ಮಗು ಮತ್ತೆ ನಿದ್ರೆಗೆ ಜಾರಿತು.  
                     ****
ಸಾನಿಧ್ಯಾಳ ಮನದಲ್ಲಿ ಮತ್ತೆ ಯೋಚನೆಗಳು ಪ್ರವಹರಿಸತೊಡಗಿದವು. 
"ಆಶ್ವಾಸನೆಗಳನ್ನು ಕೊಟ್ಟು ದರ್ಶನ್‍ನನ್ನು ನನ್ನವನನ್ನಾಗಿ ಮಾಡಿಕೊಂಡೆನಾದರೂ ಮದುವೆಯ ನಂತರ ಕೊಟ್ಟ ಮಾತುಗಳೆಲ್ಲವನ್ನೂ ಗಾಳಿಗೆ ತೂರಿಬಿಟ್ಟೆನಲ್ಲ? ಈ ಎಂಟು ವರ್ಷಗಳ ವೈವಾಹಿಕ ಜೀವನದಲ್ಲಿ ನಾನು ಅವನೂರಿಗೆ ಹೋಗಿದ್ದು ಕೇವಲ ಬೆರಳೆಣಿಯಷ್ಟು ಸಲ ಅಷ್ಟೇ. ಅವನೂರಿನ ವೈಭವದ ದಸರಾ ಹಬ್ಬವನ್ನು ನಾನು ಕಣ್ಮನಗಳಲ್ಲಿ ತುಂಬಿಕೊಂಡು ಸಂಭ್ರಮಿಸಲೇ ಇಲ್ಲ. ಅವನ ಮನದಿಚ್ಛೆಯನ್ನು ತಣಿಸಲೇ ಇಲ್ಲ. ಅವನ ಜೊತೆಜೊತೆಯಲಿದ್ದು ಅವನಿಗೆ ಖುಷಿ ಹಂಚಲಿಲ್ಲ. ದರ್ಶನ್ ಪ್ರತಿ ವರ್ಷ ದಸರಾ ಹಬ್ಬಕ್ಕೆ ಒತ್ತಾಯಿಸುತ್ತಿದ್ದ. ನಾನವನ ಮಾತಿಗೆ ಸ್ಪಂದಿಸುತ್ತಿರಲಿಲ್ಲ. ಏನೇನೋ ಸಬೂಬು ಹೇಳುತ್ತಾ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ. ದಸರಾ ಹಬ್ಬವೆಂದರೆ ಸಣ್ಣ ಮಗುವಿನಂತೆ ಕುಣಿದು ಕುಪ್ಪಳಿ ಸಂಭ್ರಮಿಸುತ್ತಿದ್ದ ದರ್ಶನ್‍ನ ಆಸೆಗೆ ಮಣ್ಣೆರೆಚಿದ್ದೆ. ಅವನೊಟ್ಟಿಗೆ ಅವನೂರಿನಲ್ಲಿ ಹಬ್ಬವನ್ನು ಆಚರಿಸಿದ್ದರೆ ಅವನೆಷ್ಟು ಖುಷಿಪಡುತ್ತಿದ್ದನೋ ಏನೋ...? ಹಳ್ಳಿಯ ವಾತಾವರಣವೆಂದರೆ ನನಗೇಕೋ ಅಲರ್ಜಿಯಾಗಿತ್ತು. ಅವನೂರಿನಲ್ಲಿದ್ದ ಪುಟ್ಟ ಮನೆ, ಮನೆಯಲ್ಲಿನ ಟಾಯಿಲೆಟ್, ಬಾಥ್‍ರೂಮುಗಳು ಆ ಊರಿಗೆ ಹೋಗಲು ನನಗೆ ಹಿಂದೇಟು ಹಾಕುವಂತೆ ಮಾಡುತ್ತಿದ್ದವು. ಅವನೊಟ್ಟಿಗೆ ಅವನೂರಿಗೆ ಹೋಗದೇ ನನ್ನ ಹೆತ್ತವರ ಮನೆಗೆ ಹೋಗಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿಕೊಂಡು ಬರುವುದನ್ನು ರೂಢಿಸಿಕೊಂಡುಬಿಟ್ಟೆ.  
ಇನ್ನೂ ಅವನ ಹೆತ್ತವರನ್ನು ನನ್ನ ಹೆತ್ತವರಂತೆ ನೋಡಿಕೊಂಡೆನೇ...? ಉಹೂಂ, ಅದೂ ಇಲ್ಲ. ನನ್ನೊಟ್ಟಿಗೆ ಅವರು ಇದ್ದಿದ್ದು, ಅವರೊಟ್ಟಿಗೆ ನಾನು ಇದ್ದಿದ್ದು ತುಂಬಾ ಕಡಿಮೇನೇ. ಅವರು ಬೆಂಗಳೂರಿಗೆ ಬಂದಾಗ ಅವರನ್ನು ನಾನು ಸರಿಯಾಗಿ ನೋಡಿಕೊಳ್ಳದಿರುವುದೇ ಮುಖ್ಯ ಕಾರಣ. ಅವರಿಗೆ ನಮ್ಮ ಜೊತೆಯಲ್ಲಿ ಬೆಂಗಳೂರಿನಲ್ಲಿರಬೇಕೆಂಬ ಅಭಿಲಾಷೆ ತುಂಬಾ ಇದ್ದಂತಿತ್ತು. ಆದರೆ ಹಿರಿಯರೆಂದು ಅವರನ್ನು ನಾನು ಸರಿಯಾಗಿ ಆದರಿಸಲಿಲ್ಲ, ಗೌರವದಿಂದ ಕಾಣಲಿಲ್ಲ. ಅದೂ ಅಲ್ಲದೇ ಶುದ್ಧ ಶಾಖಾಹಾರಿಗಳಾಗಿದ್ದ ಅವರು ನಮ್ಮ ಜೊತೆಗಿದ್ದಾಗಲೂ ನಾನು ಮನೆಯಲ್ಲೇ ಬಾಡೂಟ ತಯಾರಿಸಿಕೊಂಡು ತಿಂದಾಗ ಅವರು ನಮ್ಮೊಂದಿಗೆ ನೆಮ್ಮದಿಯಿಂದ ಇರಲು ಸಾಧ್ಯವೇ...? ಮಾಂಸದೂಟ ಬಿಡುವುದಾಗಿ ದರ್ಶನ್‍ಗೆ ಹೇಳಿದ್ದು ಬರೀ ಹೇಳಿಕೆಯಲ್ಲೇ ಉಳಿಯಿತು. ಬಾಯಿ ಚಪಲ ಸಂಬಂಧವನ್ನು ಕೆಡಿಸಿತ್ತು. ಮಗನಲ್ಲಿ ಅದೆಷ್ಟೋ ಆಸೆಗಳನ್ನಿಟ್ಟುಕೊಂಡಿದ್ದ ಅವನ ತಂದೆ-ತಾಯಿಗಳಿಗೆ ಆಘಾತವಾಗಿತ್ತು. ನನ್ನ ವರ್ತನೆಯಿಂದ ಅವನು ಮಾನಸಿಕವಾಗಿ ನೋವನ್ನು ಅನುಭವಿಸಿದ್ದಂತೂ ನಿಜ. ಅಡಕತ್ತಿನಲ್ಲಿ ಅಡಕೆ ಸಿಕ್ಕಂತಾಗಿತ್ತು ಅವನ ಮನಃಸ್ಥಿತಿ. ಎಷ್ಟೋ ಸಾರೆ ಈ ವಿಷಯಗಳ ಬಗ್ಗೆ ಅವನು ನನ್ನ ಜೊತೆಗೆ ವಾದಿಸಿದ್ದು ಫಲಕಾರಿಯಾಗಲಿಲ್ಲ. ಅವನ ತಾಯಿ ಅಕಾಲಿಕವಾಗಿ ತೀರಿಕೊಂಡಾಗಲೂ ನಾನು ಅವನೂರಿಗೆ ಹೋಗಿ ಬಂದಿದ್ದು ಸುಮ್ಮನೇ ಶಿಷ್ಟಾಚಾರಕ್ಕಷ್ಟೇ.  
ನನಗೆ ನನ್ನ ಹೆತ್ತವರೆಂದರೇ ಅಚ್ಚು-ಮೆಚ್ಚು. ಹೀಗಾಗಿ ನನಗೆ ಬೆಂಗಳೂರು, ತವರೂರು ಸ್ವರ್ಗಕ್ಕೆ ಸಮಾನ. ಎರಡು ಬಸಿರು-ಬಾಣಂತನಗಳು ತವರಲ್ಲೇ ಮುಗಿದವು. ದರ್ಶನ್‍ನ ಊರಿನತ್ತ ಮುಖ ಹಾಕಲೂ ನಾನು ಇಚ್ಛಿಸಲಿಲ್ಲ. ನನ್ನ ಈ ವಿಚಿತ್ರ ನಡೆಯಿಂದ ದರ್ಶನ್ ಅಂತರ್ಮುಖಿಯಾಗತೊಡಗಿದ, ಮೌನಿಯಾಗತೊಡಗಿದ, ನಿರ್ಲಿಪ್ತನಾಗತೊಡಗಿದ. ಅದು ಮುಂದಿನ ದಿನಗಳಲ್ಲಿ ಅವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿತ್ತು. ಒಮ್ಮೆ ಲಘು ಹೃದಯಘಾತವೂ ಆಯಿತು. ಮಧುಮೇಹವೂ ಜೊತೆಯಾಯಿತು. ಆಗಲೂ ನಾನು ಎಚ್ಚೆತ್ತುಕೊಳ್ಳಲಿಲ್ಲ. ಅನಿವಾರ್ಯತೆಯಲ್ಲಿ ಜೀವನ ಸಾಗಿತ್ತು. ನಾನಾಯಿತು, ನನ್ನ ತವರಾಯಿತು, ನನ್ನ ಫ್ರೆಂಡ್ಸಾಯಿತು ಎಂಬಂತಿದ್ದೆ. ಪ್ರೀತಿಸಿ ಮದುವೆಯಾಗಿದ್ದ ನನಗೆ ಪ್ರೀತಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ತಾನಂದುಕೊಂಡಿದ್ದ ಪ್ರೀತಿ ತನಗೆ ದಕ್ಕದಿದ್ದಾಗ ದರ್ಶನ್ ಜೀವನದಲ್ಲಿ ಕುಗ್ಗತೊಡಗಿದ್ದ. ಮನಸ್ಸಿಗೆ ಅತಿಯಾಗಿ ಕಿರಿಕಿರಿಯಾದಾಗ ನನ್ನ ವರ್ತನೆಯನ್ನು ಖಂಡಿಸುತ್ತಿದ್ದ. ನಾನು ಮಾತು ಬೆಳೆಸುತ್ತಿದ್ದಿಲ್ಲ. ಮನೆಯಲ್ಲಿದ್ದಾಗ ನನಗಿಂತಲೂ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ. ಯೋಗ, ಧ್ಯಾನದಲ್ಲಿ ಮುಳುಗುತ್ತಿದ್ದ. ಎರಡು ತಿಂಗಳ ಹಿಂದೆ ಅದೊಂದು ದಿನ ಬೆಳ್ಳಂಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನನ್ನನ್ನು ತೊರೆದು ಕಾಣದ ಲೋಕಕ್ಕೆ ಹೊರಟೂಬಿಟ್ಟ ದರ್ಶನ್. ಪ್ರೀತಿಯನ್ನು ಗೆದ್ದವಳು ಬಾಳಹಾದಿಯ ಪಯಣದಲ್ಲಿ ಎಡವಿಬಿದ್ದು ಸೋತುಬಿಟ್ಟೆ." 
`ಹ್ಹ... ಹ್ಹ...' ವಿಕಟವಾಗಿ ನಗತೊಡಗಿದಳು ಸಾನಿಧ್ಯಾ.  


* ಶೇಖರಗೌಡ ವೀ ಸರನಾಡಗೌಡರ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

9 thoughts on “ಗೆದ್ದು ಸೋತವಳು”

  1. ಲಕ್ಷ್ಮೀದೇವಿ

    ಕಥೆ ಸೂಪರ್ ಸರ್ . ಅಂತ್ಯ ದಿಢೀರನೆ ಮುಗಿದಂತೆ ಆಯಿತು

    1. Raghavendra Mangalore

      ತುಂಬಾ ಸರಳ ಭಾಷೆಯಲ್ಲಿ ನಿರೂಪಣೆ ಮಾಡಿದ್ದೀರಿ. ಕಥೆ ಓದಿ ಖುಷಿಯಾಯಿತು

    2. ಶೇಖರಗೌಡ ವೀ ಸರನಾಡಗೌಡರ್

      ತಮ್ಮ ಮೆಚ್ಚುಗೆಯ ಪ್ರೋತ್ಸಾಹದ ಮಾತುಗಳಿಗೆ ಮನದುಂಬಿದ ಧನ್ಯವಾದಗಳು.

  2. ವಿದ್ಯಾ ಗಾಯತ್ರಿ ಜೋಶಿ

    ಇಂದಿನ ತಲೆಮಾರಿನ ಸತ್ಯ ಕಥೆಯೇ ಆಗಿರಬಹುದು ಸಾನಿಧ್ಯ ಮತ್ತು ದರ್ಶನ್ ರ ಕಥೆ!..

  3. Chintamani Sabhahit

    ಈ ಕಥೆಯಲ್ಲಿ, ರಂಜನೆಯ ಸ್ಪರ್ಶವಿದೆ; ಸಮಕಾಲೀನ ಸತ್ಯವಿದೆ; ಭಾವನೆಗಳ ತುಮುಲವಿದೆ; ಯುವ ಹೃದಯಗಳ ಸಹಜ ಆಕರ್ಷಣೆ, ತುಡಿತ, ಮಿಲನಗಳಿವೆ. ಸಂಬಂಧಗಳಲ್ಲಿ, ಸ್ವಾರ್ಥ – ತ್ಯಾಗಗಳ ಮೌನ ಸಂಘರ್ಷದಲ್ಲಿ, ಹೃದಯದಲ್ಲಿ ಮನ ನರ್ತಿಸುವ, ಮನದೊಳಗೇ ಹೃದಯ ನರಳಿ, ಬಳಲಿ ಸಾಯುವ ವಿದ್ರಾವಕತೆಯನ್ನು, ಲೇಖಕರು ತಮ್ಮ ಕಥನ ಶೈಲಿಯ ಎರಕದಲ್ಲಿ, ಸಮರ್ಥವಾಗಿ ಚಿತ್ರಿಸಿದ್ದಾರೆ! ಜತೆಗೇ, ಯುವ ವರ್ಷಗಳ ಕೆಲ ಕಾಲದ ಸನ್ನಿವೇಶಗಳ ಹಲವು ಮಜಲುಗಳನ್ನು, ಮೂರು ಭಾಗದ ಕೆಲವು ಕ್ಷಣಗಳಲ್ಲಿ, ಓದಿಗೆ ಒಪ್ಪಿಸುತ್ತಾರೆ.

    ಆದರೆ, ಇದು ಬರೇ ಓದಿ ಮುಗಿಸಿ, ಮರೆಯುವ ಚಿಕ್ಕ ಕಥೆಯಲ್ಲ. ಕತೆ ಹೇಳುತ್ತಲೇ, ಯುವ ಪ್ರೇಮಿಗಳು ಬಾಳಿನಲ್ಲಿ ಪ್ರೀತಿಯಿಂದ ಸೇರುವಾಗಿನ, ಸಮಕಾಲೀನ ಜ್ವಲಂತ ಸಮಸ್ಯೆಯನ್ನು, ಜೀವಂತವಾಗಿ ತೆರೆದಿಡುವಾಗ, ‘ಜವಾಬ್ದಾರಿಯಿಲ್ಲದ ಪ್ರೇಮ ಕುರುಡೇ?’ ಎಂಬ ಪ್ರಶ್ನೆಯನ್ನು, ಲೇಖಕರು ಪ್ರಶಂಸನೀಯವಾಗಿ ಉತ್ತರಿಸಿದ್ದಾರೆ.

  4. ಧರ್ಮಾನಂದ ಶಿರ್ವ

    ಪ್ರೀತಿ, ಪ್ರೇಮದ ಸುಳಿಯೊಳಗೆ ಸುತ್ತುತ್ತಾ ಸಾಗುವ ಕಥೆ ಕೊನೆಯಲ್ಲಿ ವಾಸ್ತವಕ್ಕೆ ಹತ್ತಿರವಾದಂತೆ ಮುಗಿದುಹೋದದ್ದು ಈಗಿನ ಯುವಪೀಳಿಗೆಯ ದಾಂಪತ್ಯದ ಹುಳುಕನ್ನು ಎತ್ತಿತೋರಿಸುವಂತಿದೆ.
    ಧನ್ಯವಾದಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter