ಮನುಷ್ಯ ಏನೆಲ್ಲ ಪ್ರಯತ್ನಪಟ್ಟು ಸುಖೀ ಜೀವನ ನಡೆಸುವ ಹಪಹಪಿಯಲ್ಲಿದ್ದಾನೆ. ಕಾರು ,ಬಂಗಲೆ, ಬ್ಯಾಂಕ್ ಬ್ಯಾಲನ್ಸ ಹೊಂದಿಯೂ ನೆಮ್ಮದಿಯನ್ನು ಮಾತ್ರ ಅರಸುವ ಹಾಗಾಗಿದೆ. ಇದಕ್ಕೆ ಕಾರಣವೇನೆಂದು ಚಿಂತಿಸುವ ಪರಿಸ್ಥಿತಿ ಬಂದೊದಗಿದೆ. ಮನಸ್ಸಿನ ನೆಮ್ಮದಿಗಿಂತ ಬೇರೊಂದು ಶ್ರೀಮಂತಿಕೆ ಇದೆಯೆ? ಹಾಗಾದರೆ ನೆಮ್ಮದಿ ಸಿಗುವುದಾದರೂ ಹೇಗೆ ? ಎಂಬ ಪ್ರಶ್ನೆ ಸಮಾಜವನ್ನು ಕಾಡುತ್ತಿದೆ.
ಮನುಷ್ಯ ಭೂಮಿಯ ಮೇಲೆ ತನ್ನ ದೈನಂದಿನ ಜೀವನದಲ್ಲಿ ಮಗ್ನನಾಗಿರುತ್ತಾನೆ. ಜೀವನ ಪ್ರವಾಹವು ಹರಿಯುತ್ತಲೇ ಇರುತ್ತದೆ . ಏರಿಳಿತದಲ್ಲಿ ಸಾಗಿಬಂದ ಜೀವನದಲ್ಲಿ ಜೀವನ ಮೌಲ್ಯಗಳನ್ನು ಉಳಿಸಿಕೊಂಡು ಹಣ ಸಂಪಾದಿಸಿದ್ದರೆ ಮಾತ್ರ ತುಸು ನೆಮ್ಮದಿಯನ್ನು ಪಡೆಯಲು ಸಾಧ್ಯ. ಇಲ್ಲವಾದರೆ ಜೀವನಕ್ಕೂ ಜೀವನ ಮೌಲ್ಯಗಳಿಗೂ ಅದ್ಯಾವ ಸಂಬಂಧ ಇಂದಿನ ದಿನಗಳಲ್ಲಿದೆ ! ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ . ಜೀವನ ಮೌಲ್ಯಗಳು ಅಂದರೆ ಪ್ರಾಮಾಣಿಕತೆ, ಕೌಟುಂಬಿಕ ಸಾಮರಸ್ಯ ಇತ್ಯಾದಿ …. ನಮ್ಮ ಸಮಾಜದಲ್ಲಿ ನಮ್ಮ ಸುತ್ತಮುತ್ತಲು ನಡೆಯುವ ಆಗುಹೋಗುಗಳನ್ನು ಗಮನಿಸಿದರೆ ಅದು ಸತ್ಯವೆಂದೇ ಅನಿಸುತ್ತದೆ .ಎಲ್ಲ ಕಡೆಗೂ ಹರಡಿದ ಭ್ರಷ್ಟಾಚಾರ ಪ್ರಮಾಣ ಅಪ್ರಾಮಾಣಿಕತೆ , ಅನೈತಿಕತೆ, ದುರಾಚಾರ ಎಲ್ಲವೂ ಹೆಚ್ಚಾಗುತ್ತಲಿದೆ .ಇಂಥ ಪರಿಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಕುಸಿಯುತ್ತಿರುವ ಜೀವನ ಮೌಲ್ಯಗಳು ಆಗಿವೆ !
ಕಾಲಚಕ್ರ ಉರುಳಿದಂತೆ ಜೀವನ ಬದಲಾಗುತ್ತಿದೆ. ಬದಲಾದ ಜೀವನ ಪದ್ಧತಿಯಲ್ಲಿ ಸಿಲುಕಿದ ಮನುಷ್ಯ, ಪರಿಸ್ಥಿತಿಗೆ ತಕ್ಕಂತೆ ವರ್ತಿಸಿ, ಸ್ವಾರ್ಥವನ್ನೇ ಮೆರೆಯುತ್ತಿದ್ದಾನೆ. ಉಚ್ಚ ಸ್ತರದಲ್ಲಿರುವ ಮೌಲ್ಯಗಳನ್ನು ಕೆಳಮಟ್ಟಕ್ಕೆ ಎಳೆಯುತ್ತಿದ್ದಾನೆ. ಯಾರಿಗೆ ಬೇಕಾಗಿದೆ ಈ ಉನ್ನತ ಆದರ್ಶಗಳು, ಮೌಲ್ಯಗಳು , ಏನೂ ಮಾಡಬಹುದು,! ಹೇಗೂ ಇರಬಹುದು! ಮನಸ್ಸಿಗೆ ಬಂದದ್ದನ್ನು ಮಾಡಬಹುದು! ಎಂಬ ಉಡಾಫೆಯ ಮನೋಭಾವ ಇಂದಿನ ಜನರಲ್ಲಿದೆ. ಇಂಥ ಸನ್ನಿವೇಶಗಳಲ್ಲಿ ಮನುಷ್ಯ ಏನು ಮಾಡಬೇಕು ಆದರ್ಶ ಜೀವನದ ಮೌಲ್ಯಗಳನ್ನು ಮರೆತುಬಿಡಬೇಕೆ? ಅಥವಾ ಅವುಗಳ ಅಗತ್ಯವಿದೆಯೇ? ಅಳವಡಿಸಿಕೊಳ್ಳುವುದಾದರೆ ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂಬುದರ ಬಗ್ಗೆ ಆಲೋಚನೆ ಮಾಡಬೇಕಿದೆ.
ಮನುಷ್ಯನ ಆತ್ಮಬಲ ಕುಸಿಯುತ್ತಿದೆ . ಆದ್ದರಿಂದ ಮನುಷ್ಯನ ಕ್ಷೀಣನಾಗುತ್ತಿದ್ದಾನೆ. ಪರಿಸ್ಥಿತಿಗೆ ಅನುಗುಣವಾಗಿ ಸರಳ ರೀತಿಯಲ್ಲಿ ಪ್ರತಿಕ್ರಿಸಲು ಹವಣಿಸುತ್ತಾನೆ. Comfort zone ನಲ್ಲಿ ಇರಲು ಇಷ್ಟ ಪಡುತ್ತಾನೆ. ತನ್ನದೇ ಆದ ಒಂದು ಸಣ್ಣ ವೃತ್ತದಲ್ಲಿರಲು ಆಸೆಪಡುವ ಮನೋಭಾವ ಬೆಳೆದಿದೆ. Easy going ರೀತಿಯಲ್ಲಿ ಬದುಕು ನಡೆಸಲು ಇಷ್ಟಪಡುತ್ತಾನೆ. ಸಮಾಜಮುಖಿಯಾಗುವುದಂತೂ ದೂರದ ಮಾತು ಕುಟುಂಬಮುಖಿಯಾಗಿಯೂ ಮನುಷ್ಯ ವರ್ತಿಸುತ್ತಿಲ್ಲ. ಆದರ್ಶ ಜೀವನ ಮೌಲ್ಯವೆಂದರೆ ಹಿಂದಿನ ಧಾರ್ಮಿಕ ಶಾಸ್ತ್ರ ಗ್ರಂಥಗಳಲ್ಲಿ ಅಥವಾ ಪರಂಪರಾನುಗತ ಆಚರಣೆಯಲ್ಲಿ ಇರುವಂತಹ ಮೌಲ್ಯಗಳಲ್ಲ . ಇಂದಿನ ಯುಗದಲ್ಲಿ ಪುರಾತನ ಶಾಸ್ತ್ರ ಗ್ರಂಥಗಳಲ್ಲಿ ಬರೆದಿದ್ದನ್ನೆಲ್ಲಾ ಅಕ್ಷರಶ: ಆಚರಿಸುವುದು ಸಾಧ್ಯವೂ ಇಲ್ಲ, ಅದರ ಅಗತ್ಯವೂ ಇಲ್ಲ. ವಿವೇಕಶಕ್ತಿ ಜಾಗೃತವಿದ್ದಲ್ಲಿ ಅವುಗಳಲ್ಲಿ ಸತ್ಯಾಂಶವನ್ನು ಅರಿತು ಅಳವಡಿಸಿಕೊಳ್ಳಬೇಕು.
ಮನುಷ್ಯನಲ್ಲಿ ಇದ್ದ ಇಚ್ಛಾ ಶಕ್ತಿಯು ಹಾಗೂ ಜಾಗೃತಪ್ರಜ್ಞೆಯು ಅವನನ್ನು ಪ್ರಾಣಿಗಳಿಗಿಂತ ಭಿನ್ನವಾಗಿರಿಸುತ್ತದೆ. ಇಂದು ಕುಸಿಯುತ್ತಿರುವ ಮೌಲ್ಯಗಳಿಗೆ ಕಾರಣ ಮನುಷ್ಯನ ಅತಿಯಾದ ಆಸೆ,ಅತಿಯಾದ ತಂತ್ರಜ್ಞಾನದ ಬಳಕೆ , ಸ್ವಾರ್ಥ ಮೊದಲಾದವು. ಇವೇ ಮನುಷ್ಯನ ದೌರ್ಬಲ್ಯಗಳು ಅವನನ್ನು ಆಳುತ್ತಿವೆ ಹಾಗೂ ಉನ್ನತ ಜೀವನ ಮೌಲ್ಯಗಳು ಅಪ್ರಸ್ತುತವೆನಿಸುತ್ತಿವೆ.
ಜೀವನ ಮೌಲ್ಯಗಳನ್ನು ಮೊದಲು ಮನೆಯಿಂದ, ನಂತರ ಪಾಠಶಾಲೆಗಳಲ್ಲಿ ಕಲಿಸಬೇಕಾಗಿದೆ. ಪಾಲಕರ ಹಾಗೂ ಗುರುಗಳ ಪಾತ್ರ ಪ್ರಮುಖವಾಗಿದೆ. ಪಠ್ಯ ಪುಸ್ತಕಗಳೂ ಹಾಗೂ ಸಮೂಹ ಮಾಧ್ಯಮಗಳೂ ಸಹ ಪರಿಸರ ನಿರ್ಮಾಣ ಮಾಡುವಲ್ಲಿ ಪಾತ್ರ ವಹಿಸುತ್ತವೆ.ಹಾಗಾಗಿ ಬಾಲ್ಯದಿಂದಲೇ ಪರಸ್ಪರ ಸಹಕಾರ, ಹಂಚಿ ತಿನ್ನುವುದು, ಸತ್ಯವನ್ನು ನುಡಿಯುವುದು, ಮೋಸ ಮಾಡದಿರುವುದು, ಇತ್ಯಾದಿಗಳನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.